ಪಿ. ಮಹಮ್ಮದ್ ಹಾಗೂ ಕನ್ನಡದ ಟ್ಯಾಬ್ಲಾಯ್ಡ್ ದಿನಪತ್ರಿಕೆಗಳು

ಇದನ್ನು ಬರೆದದ್ದು “ವಿಕ್ರಾಂತ ಕರ್ನಾಟಕ” ವಾರಪತ್ರಿಕೆಯ ನನ್ನ “ಅಮೆರಿಕದಿಂದ ರವಿ” ಅಂಕಣಕ್ಕಾಗಿ; ಜೂನ್ 29, 2007 ರ ಸಂಚಿಕೆಯಲ್ಲಿ . ಸರಿಯಾಗಿ ಐದು ವರ್ಷದ ಹಿಂದೆ. ಅಲ್ಲಿಂದೀಚೆಗೆ ಸಾಕಷ್ಟು ಬದಲಾವಣೆ ಆಗಿದೆ. ಪ್ರಮುಖವಾಗಿ ಬದಲಾವಣೆ ಆಗದ್ದು ಏನೆಂದರೆ ಪಿ. ಮಹಮ್ಮದ್ ಮತ್ತು ಕನ್ನಡದ ಟ್ಯಾಬ್ಲಾಯ್ಡ್ ದಿನಪತ್ರಿಕೆಗಳ ಬಗೆಗಿನ ನನ್ನ ಅಭಿಪ್ರಾಯ. ಆಗ ನನ್ನ ಮನಸ್ಸಿನಲ್ಲಿದ್ದ ಹಲವು ಟ್ಯಾಬ್ಲಾಯ್ಡ್ ದಿನಪತ್ರಿಕೆಗಳಲ್ಲಿ ಒಂದು ದಿನಪತ್ರಿಕೆ ಕಳೆದ ಒಂದು ವರ್ಷದಲ್ಲಿ ಸಾಕಷ್ಟು ಸುಧಾರಿಸಿದೆ. ನಮಗೀಗ ಪ್ರಜಾವಾಣಿಯೂ ಬೇಕು, ಮತ್ತು ಪ್ರಜಾವಾಣಿಗೆ ಅದರದೇ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಪೈಪೋಟಿ ಕೊಡುವ ಇನ್ನೊಂದು ಜನಪರ ಪತ್ರಿಕೆಯೂ ಬೇಕು. ಆ ಪೈಪೋಟಿ ಖಂಡಿತವಾಗಿ ಆ ಪತ್ರಿಕೆಗಳು ಸಾಕಷ್ಟು ಜನಪರ ವಿಚಾರಗಳನ್ನು ಮತು ಅಧಿಕಾರಸ್ಥರ ಭ್ರಷ್ಟಾಚಾರವನ್ನು ಜನರ ಮುಂದೆ ಇಡಲು ಸಹಕಾರಿಯಾಗುತ್ತದೆ ಮತ್ತು ಆ ಮೂಲಕ ಅವೂ ಸಹ ಸಧೃಢವಾಗುತ್ತವೆ ಎನ್ನುವ ವಿಶ್ವಾಸ ನನ್ನದು. ಅಂತಹುದೊಂದು ಆರೋಗ್ಯಕರ ಪೈಪೋಟಿ ಈಗ ಕನ್ನಡದಲ್ಲಿ ಆರಂಭವಾಗಿದೆ ಎನ್ನಿಸುತ್ತದೆ. ಮುಖ್ಯವಾಗಿ ಈ ಪತ್ರಿಕೆಗಳ ಸಂಪಾದರು ಮತ್ತು ಸಂಪಾದಕೀಯ ಮಂಡಳಿಗಳು ನೇರವಾಗಿ, ಧೈರ್ಯದಿಂದ, ರಾಜಿಯಾಗದ ಪ್ರಾಮಾಣಿಕತೆಯಿಂದ, ಮತ್ತು ಸ್ವತಂತ್ರ ವೃತ್ತಿಧರ್ಮದ ಸ್ಪಿರಿಟ್‌ನಿಂದ ಮುಂದುವರೆದರೆ ಅದು ಸಾಧ್ಯವಾಗಲಿದೆ. ಸದ್ಯದ ವರ್ತಮಾನವಂತೂ ಅಂತಹ ಪ್ರಾಮಾಣಿಕ ಪ್ರಯತ್ನಗಳಿಗೆ ಕಾಯುತ್ತಿದೆ ಮತ್ತು ಪ್ರಶಸ್ತವಾಗಿದೆ. ಕಾದು ನೋಡೋಣ.

ಮಹಮ್ಮದ್‌ರು ಪ್ರಜಾವಾಣಿಯಿಂದ ಹೊರನಡೆಯುತ್ತಿರುವ ಈ ಸಂದರ್ಭದಲ್ಲಿ ಅವರಿಗೆ, ಇಷ್ಟು ದಿನಗಳ ಕಾಲ ಅವರಿಗೆ ವೇದಿಕೆ ಕೊಟ್ಟ ಪ್ರಜಾವಾಣಿಗೆ, ಮತ್ತು ಮಹಮ್ಮದ್‌ರ ಮುಂದಿನ ನಿಲ್ದಾಣದ ಪತ್ರಿಕೆಗೂ, ಒಳ್ಳೆಯದನ್ನು ಆಶಿಸುತ್ತೇನೆ. ಇವರ ಯಶಸ್ಸಿನಲ್ಲಿ ನಮ್ಮ ಸಮಾಜದ ಸ್ವಾಸ್ಥ್ಯವೂ ಇದೆ.

– ರವಿ ಕೃಷ್ಣಾರೆಡ್ಡಿ


ಸ್ವಾಮಿ ಮತ್ತು ಮಹಮ್ಮದ್ ಹಾಗೂ ಟ್ಯಾಬ್ಲಾಯ್ಡ್ ದಿನಪತ್ರಿಕೆಗಳು

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಜೂನ್ 29, 2007 ರ ಸಂಚಿಕೆಯಲ್ಲಿನ  “ಅಮೆರಿಕದಿಂದ ರವಿ” ಅಂಕಣದ ಲೇಖನ)

ಕಳೆದ ಮೂರು ವರ್ಷಗಳಿಂದ ಆತ್ಮೀಯ ಸ್ನೇಹಿತರಲ್ಲೊಬ್ಬರಾಗಿದ್ದ, ಕನ್ನಡ, ಕರ್ನಾಟಕದ ಸ್ಥಿತಿಗತಿಗಳ ಬಗ್ಗೆ ಗಂಟೆಗಟ್ಟಲೆ ಮಾತನಾಡುತ್ತಿದ್ದ, ತಂತ್ರಜ್ಞಾನ ಕ್ಷೇತ್ರದಲ್ಲಿ ಪೇಟೆಂಟ್‌ಗಳನ್ನೂ ಗಳಿಸಿ ನಮ್ಮ ನಡುವೆಯ ಮೇಧಾವಿ ಎನಿಸಿದ್ದ ಆಪ್ತ ಸ್ನೇಹಿತ ಸ್ವಾಮಿ ಇದೇ ತಿಂಗಳು ಭಾರತಕ್ಕೆ ಹಿಂದಿರುಗುತ್ತಿದ್ದಾರೆ.

ಜನಾರ್ಧನ ಸ್ವಾಮಿ ನನ್ನ ಹಾಗೆಯೆ ಹಳ್ಳಿಯಿಂದ ಬಂದವರು. ದಾವಣಗೆರೆಯ ಹತ್ತಿರದ ಹಳ್ಳಿ ಅವರದು. ಹತ್ತನೆ ತರಗತಿಯ ತನಕ ಓದಿದ್ದೆಲ್ಲ ಹಳ್ಳಿಯಲ್ಲಿಯೆ. ದಾವಣಗೆರೆಯ BDT ಯಲ್ಲಿ B.E. ಮಾಡಿ, ಬೆಂಗಳೂರಿನ IISc ಯಲ್ಲಿ MTech ಮಾಡಿ, ಸುಮಾರು ಹತ್ತು ವರ್ಷಗಳ ಹಿಂದೆ ಅಮೇರಿಕಕ್ಕೆ ಬಂದು Sun Microsystems ನಲ್ಲಿ cutting-edge technology ಯ ಮೇಲೆ ಇಲ್ಲಿಯ ತನಕ ಕೆಲಸ ಮಾಡುತ್ತಿದ್ದವರು. ನಾಲ್ಕೈದು ವರ್ಷಗಳ ಹಿಂದೆ ಚಿಪ್ ಡಿಸೈನ್‌ನಲ್ಲಿ ಪೇಟೆಂಟ್ ಸಹ ಪಡೆದಿದ್ದಾರೆ. ಇಂತಹ ಸ್ವಾಮಿ ಕನ್ನಡ ಮೀಡಿಯಮ್ SSLC ಯಲ್ಲಿ ಪಾಸಾಗಿದ್ದು ಮಾತ್ರ ಸೆಕೆಂಡ್ ಕ್ಲಾಸ್‌ನಲ್ಲಿ ಎಂದರೆ ಯಾರಿಗೇ ಆಗಲಿ ಆಶ್ಚರ್ಯವಾಗದೇ ಇರದು! ಇನ್ನೂ ಆಶ್ಚರ್ಯವೆಂದರೆ, ಆ ಹಳ್ಳಿಯ ಶಾಲೆಯಲ್ಲಿ ಸೆಕೆಂಡ್ ಕ್ಲಾಸ್‌ನಲ್ಲಿ ಪಾಸಾದ ಇವರೇ ಟಾಪ್ ಸ್ಕೋರರ್!

ಇಲ್ಲಿನ ಸಿಲಿಕಾನ್ ಕಾಣಿವೆಯಲ್ಲಿ ಸ್ವಾಮಿಯವರ ತರಹವೆ ತಂತ್ರಜ್ಞಾನ ಕ್ಷೇತ್ರದಲ್ಲಿ ಮೇಧಾವಿಗಳಾಗಿರುವ ಅನೇಕ ಭಾರತೀಯರಿದ್ದಾರೆ. ಅದೇನೂ ಅಂತಹ ದೊಡ್ಡ ವಿಷಯವಲ್ಲ. ಆದರೆ ಸ್ವಾಮಿಯಂತಹ ಒಬ್ಬ  ಉತ್ತಮ ವ್ಯಂಗಚಿತ್ರಕಾರ, ಅಷ್ಟೇ ಉತ್ತಮ ಕಂಪ್ಯೂಟರ್ ಗ್ರಾಫ಼ಿಕ್ಸ್ ಡಿಸೈನರ್, ರೈತರಿಗೆ ಯಾವ ಯಾವ ಸಾಧನ-ಸಲಕರಣೆ ಮಾಡಿದರೆ ಅವರ ದೈನಂದಿನ ಜೀವನ ಉತ್ತಮಗೊಳ್ಳುತ್ತದೆ, ಅವರ ಪ್ರೊಡಕ್ಟಿವಿಟಿ ಹೆಚ್ಚುತ್ತದೆ ಎಂದು ಆಲೋಚಿಸುವ ಕನ್ನಡ ಇಂಜಿನಿಯರ್ ವಿರಳಾತಿ ವಿರಳ. ದಾವಣಗೆರೆಯಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾಗಲೆ ಅಲ್ಲಿನ ಸ್ಥಳೀಯ ಕನ್ನಡ ಪತ್ರಿಕೆಗಳಿಗೆ ಸ್ವಾಮಿ ಕಾರ್ಟೂನ್ ಬರೆಯುತ್ತಿದ್ದರು. ಅದೇ ಸಮಯದಲ್ಲಿ “Electronics For You” ಯಂತಹ ಟೆಕ್ನಾಲಜಿ ಸಂಬಂಧಿತ ಮ್ಯಾಗಜ಼ೈನ್‌ಗಳಿಗೂ ಇಂಗ್ಲಿಷ್‌ನಲ್ಲಿ ಕಾರ್ಟೂನ್ ಬರೆಯುತ್ತಿದ್ದರು. ಅವರೇ ಹೇಳುವ ಪ್ರಕಾರ, ಒಮ್ಮೊಮ್ಮೆ ಅವರ ಇಂಜಿನಿಯರಿಂಗ್ ಕಾಲೇಜಿನ ಲೆಕ್ಚರರ್‌ಗಳು ಗಳಿಸುತ್ತಿದ್ದಕ್ಕಿಂತ ಹೆಚ್ಚಿನ ದುಡ್ಡು ಈ ಕಾರ್ಟೂನ್ ಬರೆಯುವುದರಿಂದಲೆ ಇವರಿಗೆ ಬರುತ್ತಿತ್ತಂತೆ. ಈ ಮಧ್ಯೆ ಅವರ ವ್ಯಂಗ್ಯಚಿತ್ರ ಬರವಣಿಗೆ ಕಮ್ಮಿಯಾಗಿದೆಯಾದರೂ, ಪೂರ್ಣವಾಗಿ ನಿಂತಿಲ್ಲ. ಅವರ ವೆಬ್‌ಸೈಟ್ www.jswamy.com ನಲ್ಲಿ ಅವರ ನೂರಾರು ಕನ್ನಡ ಮತ್ತು ಇಂಗ್ಲಿಷ್ ಕಾರ್ಟೂನ್‌ಗಳಿವೆ.

ಈ ಸ್ವಾಮಿಯ ಜೊತೆಗೂಡಿ ಒಂದು ವರ್ಷಪೂರ್ತಿ ಕೆಲಸ ಮಾಡಿದ ಹೆಮ್ಮೆ ನನ್ನದು. ಅಮೇರಿಕಾದಲ್ಲಿಯ ದೊಡ್ಡ ಕನ್ನಡ ಕೂಟಗಳಲ್ಲಿ ಒಂದಾದ ಉತ್ತರ ಕ್ಯಾಲಿಫ಼ೋರ್ನಿಯ ಕನ್ನಡ ಕೂಟಕ್ಕೆ 2005 ರಲ್ಲಿ ನಾನು ಅಧ್ಯಕ್ಷನಾಗಿದ್ದೆ. ಸ್ವಾಮಿ ಉಪಾಧ್ಯಕ್ಷರಾಗಿದ್ದರು. ಅದರ ಜೊತೆಗೆ ಸಂಘದ ಆ ವರ್ಷದ ಸಾಹಿತ್ಯಕ ಸಂಚಿಕೆಯ ಮುಖ್ಯಸಂಪಾದಕರೂ ಅವರೆ. ಅವರ ಸಂಪಾದಕತ್ವದ ಸಮಿತಿಯಲ್ಲಿ ನಾನು ಉಪಸಂಪಾದಕ. ಆ ಸಮಯದಲ್ಲಿ ನಾನು ಅವರಿಂದ ಕಲಿತದ್ದು ಅಪಾರ. ಇಲ್ಲಿಯ ಕನ್ನಡದ ಕೆಲಸಕ್ಕೆ ಅನೇಕ ಹಗಲು-ರಾತ್ರಿಗಳನ್ನು ಅವರು ಕಂಪ್ಯೂಟರ್ ಮುಂದೆ ಕಳೆದಿದ್ದಾರೆ. ಅದೇ ರೀತಿ, ಅಕ್ಕ ವಿಶ್ವಕನ್ನಡ ಸಮ್ಮೇಳನದ ಬಹುಪಾಲು ಸ್ಮರಣ ಸಂಚಿಕೆಗಳ ಮುಖಪುಟ ವಿನ್ಯಾಸವೂ ಸ್ವಾಮಿಯವರದೆ.

ಎಮ್ಮೆ ಮೇಯಿಸುತ್ತ ಹಳ್ಳಿಯಲ್ಲಿ ಬೆಳೆದ ಸ್ವಾಮಿಯವರು ಕಳೆದ ವರ್ಷ ಬೆಂಗಳೂರಿಗೆ ಬಂದಿದ್ದಾಗ ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಹೇಗೆ ಎಂಬ ವಿಷಯಕ್ಕೆ ಯಡಿಯೂರಪ್ಪನವರ ಜೊತೆಯೆಲ್ಲ ಮಾತನಾಡಿದರು. ಆದರೆ ಶಕ್ತಿರಾಜಕಾರಣದಲ್ಲಿ ಮುಳುಗಿ ಹೋದ ನಮ್ಮ ಸ್ವಾರ್ಥಿ ರಾಜಕಾರಣಿಗಳಿಗೆ ಇವರ ಭಾಷೆ ಅರ್ಥವಾಗುತ್ತದೆಯೆ ಎನ್ನುವ ಸಂಶಯ ನನ್ನದು. ಊರಿನಿಂದ ಇಷ್ಟು ದಿನ ದೂರವಿದ್ದ ಸ್ವಾಮಿ ಅಲ್ಲಿ ಏನೇನು ಮಾಡಬಹುದು ಎನ್ನುವ ಥಿಯರಿ ಪ್ರಪಂಚದಲ್ಲಿ ಮುಳುಗಿ ಬಿಟ್ಟಿದ್ದರು. ಈಗ ಅವರ ಥಿಯರಿಗಳನ್ನೆಲ್ಲ ಪ್ರಾಕ್ಟಿಕಲ್ಸ್‌ಗೆ ಪರಿವರ್ತಿಸುವ ಸಮಯ ಬಂದಿದೆ. ಅವರ ಪ್ರಾಕ್ಟಿಕಲ್ಸ್ ಯಶಸ್ವಿಯಾಗಲಿ ಎಂದು ಹಾರೈಸೋಣ. ಯಾಕೆಂದರೆ, ಅವರ ಸಾಧನೆಯಲ್ಲಿ ಸಮಾಜದ ಹಿತವೂ ಇರುತ್ತದೆ ಎನ್ನುವ ನಂಬಿಕೆ ನನ್ನದು.

ಭಾರತದ ಕಾರ್ಟೂನಿಸ್ಟ್‌ಗಳಲ್ಲಿ ಸ್ವಾಮಿಯವರಿಗೆ ಅತಿ ಹೆಚ್ಚು ಇಷ್ಟವಾದವರು ಆರ್.ಕೆ. ಲಕ್ಷಣ್ ಎಂದು ಹೇಳಲು ಅಷ್ಟೇನೂ ಊಹಿಸಬೇಕಿಲ್ಲ. ಕನ್ನಡದ ಕಾರ್ಟೂನಿಸ್ಟ್‌ಗಳಲ್ಲಿ ಅವರಿಗೆ ಹೆಚ್ಚು ಇಷ್ಟವಾದವರು ಪ್ರಜಾವಾಣಿಯ ಪಿ. ಮಹಮ್ಮದ್. ಸ್ವಾಮಿಯವರಿಗೇ ಏನು, ಬಹುಶಃ ಇವತ್ತು ಕರ್ನಾಟಕದ ಪ್ರಜ್ಞಾವಂತರ ಮೆಚ್ಚಿನ ಕಾರ್ಟೂನಿಸ್ಟ್ ಪಿ.ಮಹಮ್ಮದ್ದೆ. ಪತ್ರಿಕೆಯ ಕೆಲಸದಲ್ಲಿ ತೊಡಗಿಕೊಂಡಾಗಿನಿಂದ ‘ಮಹಮ್ಮದ್‌ರ ಇವತ್ತಿನ ಕಾರ್ಟೂನ್ ನೋಡಿದಿರ?’ ಎಂದು ಅನೇಕರು ಅನೇಕ ಸಲ ನನಗೆ ಕೇಳಿದ್ದಾರೆ, ಅನೇಕ ಸಲ ನಾನೆ ಇತರರನ್ನು ಕೇಳಿದ್ದೇನೆ. ಪ್ರಸ್ತುತ ವಿಷಯಗಳ ಬಗ್ಗೆ ಅಷ್ಟು ಪರಿಣಾಮಕಾರಿಯಾಗಿ, ಕಲಾತ್ಮಕತೆಯಿಂದ, ಜನಪರವಾಗಿ ಬರೆಯುವ ಮತ್ತೊಬ್ಬ ವ್ಯಂಗ್ಯಚಿತ್ರಕಾರ ಇವತ್ತು ಕರ್ನಾಟಕದಲ್ಲಿಲ್ಲ. ಆ ವಿಷಯಕ್ಕೆ ಬಂದರೆ, ಸ್ಟಾರ್ ವ್ಯಾಲ್ಯೂ ಇರುವ ಮೊದಲ ಕನ್ನಡ ವ್ಯಂಗ್ಯಚಿತ್ರಕಾರ ಪಿ. ಮಹಮ್ಮದ್.

ಪಿ. ಮಹಮ್ಮದ್ ಪ್ರಜಾವಾಣಿ ಬಿಟ್ಟು ಕನ್ನಡದ ಇನ್ಯಾವ ಪತ್ರಿಕೆಗೆ ಬರೆದಿದ್ದರೂ ನನಗೆ ಅವರ ಬಗ್ಗೆ ಇಷ್ಟು ಹೆಮ್ಮೆ ಅನ್ನಿಸುತ್ತಿರಲಿಲ್ಲ ಎನ್ನಿಸುತ್ತದೆ. ಬೇರೆ ಇನ್ಯಾವ ಪತ್ರಿಕೆಗೆ ಅವರು ಬರೆದರೂ ಆ ಪತ್ರಿಕೆಗಳ ಧ್ಯೇಯಧೋರಣೆಗಳೆ ಬೇರೆ ಇರುವುದರಿಂದ ಅವರು ಇಷ್ಟು ಮುಕ್ತವಾಗಿ, ಪರಿಣಾಮಕಾರಿಯಾಗಿ ಬರೆಯಲೂ ಸಾಧ್ಯವಿಲ್ಲ ಎನ್ನಿಸುತ್ತದೆ. ಇವತ್ತಿನ ಕನ್ನಡ ದಿನಪತ್ರಿಕೆಗಳಲ್ಲಿ ಬಹುಜನರ ಹಿತ ಬಯಸುವ ಪತ್ರಿಕೆ ಅಂದರೆ ಅದು ಪ್ರಜಾವಾಣಿಯೆ. ಯಾವುದೆ ಒಂದು ವಿಷಯದ ಬಗ್ಗೆ ಎರಡೂ ಕಡೆಯವರಿಗೂ ತಮ್ಮ ವಾದ ಮಂಡಿಸಲು ವೇದಿಕೆ ನಿಡುತ್ತಿರುವ ಪತ್ರಿಕೆಯೂ ಅದೆ. ಮಿಕ್ಕವು ಟ್ಯಾಬ್ಲಾಯ್ಡ್ ಹೆಡ್ಡಿಂಗುಗಳ, ಹಿಂಸಾವಿನೋದಿ, ಪಿತೂರಿಕೋರ, ಸೀಮಿತವರ್ಗವನ್ನು ಓಲೈಸುತ್ತ, ಅವರ ಅಹಂ ಅನ್ನು ತಣಿಸುತ್ತಿರುವ ಪತ್ರಿಕೆಗಳು.

ಇದೇ ಸಂಚಿಕೆಯಲ್ಲಿನ ತಮ್ಮ ಅಂಕಣದಲ್ಲಿ (ಪುಟ 21) ಅರವಿಂದ ಚೊಕ್ಕಾಡಿಯವರು ಹೀಗೆ ಬರೆಯುತ್ತಾರೆ:

“ನಮ್ಮ ಪತ್ರಿಕಾರಂಗ ಮೂರು ಅತಿರೇಕಗಳಲ್ಲಿದೆ. ಒಂದು ವರ್ಗ ಮತಾಂಧತೆಯನ್ನು ಪ್ರಚಾರ ಮಾಡುವುದನ್ನೇ ಪತ್ರಿಕೆಗಳ ಪವಿತ್ರ ಕರ್ತವ್ಯವನ್ನಾಗಿ ಮಾಡಿಕೊಂಡಿದೆ. ಇನ್ನೊಂದು ವರ್ಗ ಇನ್ಫೋಸಿಸ್ ನಾರಾಯಣ ಮೂರ್ತಿ, ಬಯೋಕಾನ್ ಕಿರಣ್ ಮಜುಮ್‌ದಾರ್‌ಗಳನ್ನು ರಾಮದಾಸ್‌ರಂತವರ ಸ್ಥಾನಕ್ಕೆ ತಂದು ಕೂರಿಸುವ ಪವಿತ್ರ ಕಾರ್ಯದಲ್ಲಿ ನಿರತವಾಗಿದೆ. ಮತ್ತೊಂದು ವರ್ಗಕ್ಕೆ ಸೆಕ್ಸ್-ಕ್ರೈಂ ವಿಜೃಂಭಣೆ ಮತ್ತು ಗಂಭೀರವಾದದ್ದನ್ನೆಲ್ಲ ಲಘುವಾಗಿ ಮಾಡುವುದೇ ಪತ್ರಕರ್ತನ ಕಾರ್ಯವಾಗಿದೆ. ಒಂದು ಪತ್ರಿಕೆ ಒಬ್ಬ ಸಾಹಿತಿಯ ತೇಜೋವಧೆ ಮಾಡುವ ಏಕೈಕ ಉದ್ದೇಶದಿಂದ ಕಾರ್ಯಪ್ರವೃತ್ತವಾಗುವ ನೀಚತನವನ್ನು ಪ್ರದರ್ಶಿಸುವ ಸಂದರ್ಭದಲ್ಲೇ…”

ಇಂತಹ ಸಂದರ್ಭದಲ್ಲಿ ದಿನಪತ್ರಿಕೆಗಳ ವಲಯದಲ್ಲಿ ಉಳಿದಿರುವ ಏಕೈಕ ಆಶಾಕಿರಣ ಎಂದರೆ ಅದು ಪ್ರಜಾವಾಣಿಯೆ.

ನಮ್ಮ ಪತ್ರಿಕೆ ಪ್ರಾರಂಭವಾಗುವುದಕ್ಕಿಂತ ಮುಂಚೆ ನಮ್ಮ ಪ್ರಕಾಶನದಿಂದ ಬೆಂಗಳೂರಿನಲ್ಲಿ ಒಂದು ಸಂವಾದ ಏರ್ಪಡಿಸಿದ್ದೆವು. ಅಂದಿನ ಸಂವಾದದಲ್ಲಿ ಕನ್ನಡಪ್ರಭದ ಸತ್ಯನಾರಾಯಣ, ಉದಯವಾಣಿಯ ಆರ್. ಪೂರ್ಣಿಮ, ಉಷಾಕಿರಣದ ವೆಂಕಟನಾರಾಯಣ, ಪ್ರಜಾವಾಣಿಯ ಪದ್ಮರಾಜ ದಂಡಾವತಿಯವರು “ಸಮಕಾಲೀನ ರಾಜಕೀಯ ಮತ್ತು ಕನ್ನಡ ಪತ್ರಿಕೋದ್ಯಮದ” ಬಗ್ಗೆ ಮಾತನಾಡಿದ್ದರು. ಆ ಸಂವಾದಕ್ಕೆ ಪ್ರಜಾವಾಣಿಯ ಅಂದಿನ ಸಂಪಾದಕರಾದ ಕೆ.ಎನ್. ಶಾಂತಕುಮಾರ್‌ರವರನ್ನು ಆಹ್ವಾನಿಸಲು ಹಿರಿಯ ಪತ್ರಕರ್ತ ಜಯರಾಮ ಅಡಿಗರೊಂದಿಗೆ ಹೋಗಿದ್ದೆ. ಕರ್ನಾಟಕದ ಪ್ರಜೆಯಾಗಿ, ಒಬ್ಬ ಓದುಗನಾಗಿ ಅವರನ್ನು ಅಂದು ನಾನು ಕೇಳಿಕೊಂಡದ್ದು ಇಷ್ಟೆ: “ಸಾರ್, ದಯವಿಟ್ಟು ಯಾವುದೇ ಕಾರಣಕ್ಕೂ ಪ್ರಜಾವಾಣಿಯ ಪ್ರಭಾವ ಕ್ಷೀಣಿಸದಂತೆ ನೋಡಿಕೊಳ್ಳಿ. ಇವತ್ತಿನ ದಿನ ಕರ್ನಾಟಕದ ಸಾಮಾಜಿಕ ಸಾಮರಸ್ಯಕ್ಕೆ, ಬಹುಜನರ ಹಿತಕ್ಕೆ ಪ್ರಜಾವಾಣಿ ಎಲ್ಲರಿಗಿಂತಲೂ ಮೇಲಿರಬೇಕು; ಅದು ಎಂದಿಗೂ ಸೋಲಬಾರದು.” ಬಹುಶಃ ಅದು ನನ್ನೊಬ್ಬನದೆ ಆಗ್ರಹವಲ್ಲ, ಕನ್ನಡದ ಬಹುಪಾಲು ಪ್ರಜ್ಞಾವಂತರದೂ ಹೌದು.

ಕಳೆದ ಐದಾರು ತಿಂಗಳುಗಳಿಂದ ಎಸ್.ಎಲ್. ಭೈರಪ್ಪನವರ “ಆವರಣ” ಕಾದಂಬರಿಯ ಪರವಾಗಿ ಕೆಲವು ಕನ್ನಡ ಪತ್ರಿಕೆಗಳು ಮಾಡುತ್ತಿರುವ ಪ್ರಚೋದನೆಗಳು, ಪಿತೂರಿಗಳು, ಬಡಿದೆಬ್ಬಿಸುತ್ತಿರುವ ಭೂತಗಳು ಸುಸ್ಪಷ್ಟವಾಗಿದೆ. ಆವರಣ ಬಿಡುಗಡೆಯಾದ ತಕ್ಷಣ ಬ್ಯಾನ್ ಮಾಡಿಬಿಡುತ್ತಾರೆ, ಎಂಬಂತಹ ಸುದ್ದಿಗಳಿಂದ ಆರಂಭಿಸಿ, ಮೊದಲಿನಿಂದಲೂ ಬಹಳ ಪ್ರಜ್ಞಾಪೂರ್ವಕವಾಗಿ, ವ್ಯವಸ್ಥಿತವಾಗಿ, ಲೆಕ್ಕಾಚಾರವಾಗಿ ಮಾಡುತ್ತ ಬಂದಿದ್ದಾರೆ. ಉದಾರವಾದಿ, ಜನತಾಂತ್ರಿಕ ಮೌಲ್ಯಗಳನ್ನು ಗೌರವಿಸುವ, ಆಧುನಿಕ ಮನೋಭಾವದ ಕನ್ನಡಿಗರೇ ಇಲ್ಲ, ಎಲ್ಲರೂ ತಮ್ಮಂತೆಯೆ ಕೋಮುವಾದಿಗಳು ಎನ್ನುವಂತೆ ಬಿಂಬಿಸುತ್ತಿದ್ದಾರೆ. ಕಾಲಕ್ರಮೇಣ ತಮ್ಮೆಲ್ಲ ಭವಿಷ್ಯ, ಜ್ಯೋತಿಷ್ಯಗಳು ಸುಳ್ಳಾಗುತ್ತಿದ್ದಂತೆ ಹುತಾತ್ಮರಾಗಬೇಕೆಂದು ಬಯಸಿದ್ದ ಈ ಜನರು ಹತಾಶರಾಗಿ ಓಡಾಡುತ್ತಿದ್ದಾಗ ಕೆಲವು ಹಿರಿಯರು ವ್ಯವಸ್ಥಿತ ಪಿತೂರಿಗೆ ಬಲಿಯಾಗಿಬಿಟ್ಟು, ಇತ್ತೀಚೆಗೆ ತಾನೆ ಆ ಪುಣ್ಯಾತ್ಮರಿಗೆ ಒಂದಷ್ಟು ಗಂಗಾಜಲ ಕರುಣಿಸಿಬಿಟ್ಟರು.

ಅಂದ ಹಾಗೆ, ಈ ಸ್ವಘೋಷಿತ ಸತ್ಯ ಮತ್ತು ಸೌಂದರ್ಯೋಪಾಸಕರು ಭಾರತದ ಇತಿಹಾಸ ಪುಸ್ತಕಗಳು ಸುಳ್ಳು ಹೇಳುತ್ತವೆ ಎಂದು ಘೋಷಿಸುತ್ತಿದ್ದಾರಲ್ಲ, ಹೌದೆ? ನಾನು ಏಳನೆ ತರಗತಿಯ ತನಕ ಓದಿದ್ದು ನನ್ನ ಹಳ್ಳಿಯ ಸರ್ಕಾರಿ ಶಾಲೆಯ ಕನ್ನಡ ಮೀಡಿಯಮ್‌ನಲ್ಲಿ. ಹೈಸ್ಕೂಲ್‌ನಲ್ಲಿ ಓದಿದ್ದೂ ಕರ್ನಾಟಕ ಸರ್ಕಾರ ಸಿದ್ದಪಡಿಸಿದ್ದ ಸಿಲಬಸ್ ಅನ್ನೆ. ನಾನು ಓದಿದ ಯಾವುದೆ ಸಮಾಜ ಶಾಸ್ತ್ರದ ಪುಸ್ತಕದಲ್ಲಿ ಔರಂಗಜೇಬ ಪರಮತ ಸಹಿಷ್ಣು ಎಂದು ಇರಲಿಲ್ಲ. ಒಳ್ಳೆಯ ರಾಜ ಎಂದೂ ಇರಲಿಲ್ಲ. ಅವನ ಆಳ್ವಿಕೆಯಲ್ಲಿ ಹಿಂದೂಗಳಿಗೆ ಜೆಸ್ಸಿಯಾ ಅಂದರೆ ತಲೆಗಂದಾಯ ಇರಲಿಲ್ಲ ಎಂದೂ ಇರಲಿಲ್ಲ. ಖಿಲ್ಜಿಯ ದಂಡಯಾತ್ರೆಗಳ ಬಗ್ಗೆಯಾಗಲಿ, ವಿಗ್ರಹಾರಾಧನೆ ಕೂಡದೆಂದು ಮಲ್ಲಿಕ್ ಕಾಫರ್ ಮತ್ತು ಇತರ ಕೆಲವು ಮುಸ್ಲಿಮ್ ರಾಜರು ದೇವಾಲಯಗಳಲ್ಲಿ ವಿಗ್ರಹಗಳನ್ನು ಭಗ್ನಗೊಳಿಸಿದ ಬಗ್ಗೆಯಾಗಲಿ, ತುಘಲಕ್‌ನ ತಿಕ್ಕಲುತನಗಳಾಗಲಿ, ಮುಸ್ಲಿಮ್ ಅರಸರ ಆಟಾಟೋಪಕ್ಕೆ ವಿರುದ್ಧವಾಗಿಯೆ ಮೇಲೆದ್ದ ವಿಜಯನಗರ ಸಾಮ್ರಾಜ್ಯ, ಮರಾಠರ ಶಿವಾಜಿಯ ಬಗ್ಗೆಯಾಗಲಿ ಎಲ್ಲೂ ಮುಚ್ಚಿಟ್ಟಿರಲಿಲ್ಲ. ಇವನ್ನೆಲ್ಲ ಮುಚ್ಚಿಟ್ಟಿದ್ದಾರೆ ಎಂದು ಈ ನವಸತ್ಯಾಗ್ರಹಿಗಳು ಹುಯಿಲಿಡುತ್ತಿದ್ದಾರಲ್ಲ, ಯಾವ ದೇಶದ ಪಠ್ಯಪುಸ್ತಕದಲ್ಲಿ, ಸ್ವಾಮಿ?

ನನ್ನ ಮತವೇ ಶ್ರೇಷ್ಠ, ಎಲ್ಲಾ ಪರಮತಗಳೂ ಕೆಟ್ಟವು ಎನ್ನುವ ಮತಾಂಧರು ಜಾತಿವಾದಿಗಳೂ ಆಗಿರುತ್ತಾರೆ ಎನ್ನಲು ಈಗ ಚಲಾವಣೆಯಲ್ಲಿರುವ ಕೆಲವು ಸಾಹಿತಿಗಳೆ ಉದಾಹರಣೆ. ಮೂರು ತಿಂಗಳ ಹಿಂದೆ ಮೈಸೂರಿನಲ್ಲಿದ್ದಾಗ ಅಲ್ಲಿನ ಪರಿಚಿತರೊಬ್ಬರು ಒಂದು ವಿಷಯ ಹೇಳಿದರು. “ಹಿಂದೂಗಳೆಲ್ಲ ತಮ್ಮ ತಪ್ಪುಗಳನ್ನು ತಿದ್ದಿಕೊಂಡುಬಿಟ್ಟಿದ್ದಾರೆ, ಮುಸ್ಲಿಮರು ತಿದ್ದಿಕೊಳ್ಳುತ್ತಿಲ್ಲ, ಅವರನ್ನು ತಿದ್ದಬೇಕು,” ಎಂದು ಹೇಳುತ್ತಿರುವ ಸಾಹಿತಿಯೊಬ್ಬರು ಅವರ ಜಾತಿಯ ಸಂಘದಲ್ಲಿ ಬಹಳ ಸಕ್ರಿಯವಾಗಿ ಇದ್ದಾರಂತೆ. ಕ್ಷಮಿಸಿ, ಜಾತಿಯದೂ ಅಲ್ಲ, ಜಾತಿಯಲ್ಲಿನ ಒಳಪಂಗಡದ ಸಂಸ್ಥೆ ಅದು. ಕರ್ನಾಟಕದ ಜಾತಿ ವ್ಯವಸ್ಥೆ ಗೊತ್ತಿರುವವರಿಗೆ ಜಾತಿಗಳಲ್ಲಿನ ಒಳಪಂಗಡಗಳ ಬಗ್ಗೆಯೂ ಗೊತ್ತಿರುತ್ತದೆ. ಲಿಂಗಾಯತರಲ್ಲಿ ಸಾದರ, ಬಣಜಿಗ, ಪಂಚಮಸಾಲಿ ಎಂದು ಇತ್ಯಾದಿ ಒಳಪಂಗಡಗಳಿದ್ದರೆ, ಕರ್ನಾಟಕದ ಬ್ರಾಹ್ಮಣರಲ್ಲಿ ಸ್ಮಾರ್ಥ, ಮಾಧ್ವ, ಶ್ರೀವೈಷ್ಣವ ಪಂಗಡಗಳಿವೆ. ಹಾಗೆಯೆ ಒಕ್ಕಲಿಗರಲ್ಲಿ ಕುಂಚಟಿಗ, ನಾಮಧಾರಿ, ದಾಸ, ಮರಸು, ಇತ್ಯಾದಿ. ಎಷ್ಟೋ ಸಲ ಈ ಒಳಪಂಗಡಗಳಲ್ಲಿ ಒಳಪಂಗಡಗಳಿವೆ. ಉದಾಹರಣೆಗೆ ಕರ್ನಾಟಕದ ಸ್ಮಾರ್ಥರಲ್ಲಿ ಹವ್ಯಕ, ಹೊಯ್ಸಳ ಕರ್ನಾಟಕ, ಬಬ್ಬೂರು ಕಮ್ಮೆ, ಸಂಕೇತಿ, ಕೋಟ, ಇತ್ಯಾದಿಯಾಗಿ ಮತ್ತೊಂದಷ್ಟಿವೆ. ಇಂತಹ ಒಳಪಂಗಡದಲ್ಲೊಂದು ಒಳಪಂಗಡದ ಜಾತಿ ಸಂಘದಲ್ಲಿ ಈ ಮಾನ್ಯರು ಕ್ರಿಯಾಶೀಲರಾಗಿದ್ದಾರಂತೆ. ಹಿಂದೂ ಒಂದು ಎಂದು ದೇಶಕ್ಕೆಲ್ಲ ಉಪದೇಶ ಬೋಧಿಸುವ ಇಂತಹವರು ಸಮಾಜವಿಭೇದದ ಮೂಲರೂಪವಾದ ಜಾತಿ ಸಂಘಗಳಲ್ಲಿ ಅದು ಹೇಗೆ ಕ್ರಿಯಾಶೀಲರಾಗಿರುತ್ತಾರೆ, ಅವರಿಗೆ ಕನಿಷ್ಠ ಸಂಕೋಚವೂ ಇಲ್ಲವೆ ಎನ್ನುವುದು ಇಲ್ಲಿಯ ಪ್ರಶ್ನೆ.

ಈ ಧರೆಗೆ ದೊಡ್ಡವರ ಮಕ್ಕಳು ತಮ್ಮ ಕಾಲೇಜು ದಿನಗಳಲ್ಲಿ “ರೌಡಿ” ಗಳಂತಿದ್ದರು ಎಂದು ಅವರ ಕಟ್ಟರ್ ಅಭಿಮಾನಿಯೊಬ್ಬರು ಗುಪ್ತನಾಮವೊಂದರಲ್ಲಿ ಗುಪ್ತಗುಪ್ತವಾಗಿ ಇತ್ತೀಚೆಗೆ ಬ್ಲಾಗೊಂದರಲ್ಲಿ ಬರೆದಿದ್ದಾರೆ. ಆ ಅಭಿಮಾನಿ ಹಾಗೆ ಬರೆಯಲು ನಮಗೆ ಮೈಸೂರಿನ ಪರಿಚಿತರು ಹೇಳಿದ ಘಟನೆಯೆ ಮೂಲಕಾರಣ ಎಂದು ನನ್ನ ಅಂದಾಜು. ಅದೇನೆಂದರೆ, ಈ ಸಾಹಿತಿಗಳ ಮಗ ತಮ್ಮ ಒಳಪಂಗಡದ ಸಂಸ್ಥೆಯ ಬೆಲೆಬಾಳುವ ಕಟ್ಟಡವನ್ನು ತನ್ನ ಹೆಸರಿಗೆ ಗುತ್ತಿಗೆ ಪಡೆಯಲೊ, ತನ್ನ ಕೈವಶ ಮಾಡಿಕೊಳ್ಳಲೊ ಅಪ್ಪನ ಮುಖಾಂತರ ಸಂಘದ ಮೇಲೆ ಒತ್ತಡ ಹಾಕುತ್ತಿದ್ದಾರಂತೆ. ಅದನ್ನು ಸಂಘದ ಹಿರಿಯರು ವಿರೋಧಿಸಿದ್ದಾರೆ. ಅದಕ್ಕೆ ಆ ಮಗ ವಿದೇಶದಿಂದಲೆ ಆ ಹಿರಿಯರಿಗೆಲ್ಲ ಧಮಕಿ ಹಾಕುತ್ತಿದ್ದಾನಂತೆ. ಇದು ದೇಶಕ್ಕೆಲ್ಲ ಬುದ್ಧಿ ಹೇಳಲು, ಇತಿಹಾಸ ಸರಿಪಡಿಸಲು ಓಡಾಡುತ್ತಿರುವವರ ವರ್ತಮಾನ! ಹಿಂದೂ ಸಮಾಜದಲ್ಲಿನ ಅಸಮಾನತೆಯನ್ನು, ಅಮಾನವೀಯತೆಯನ್ನು ತೊಡೆದು ಹಾಕಬೇಕು, ಎಲ್ಲರೂ ಒಂದೆ, ಹಿಂದೂ ಒಂದು ಎನ್ನುವ ಜನ ತಾವು ಬೆಂಬಲಿಸುತ್ತಿರುವುದು ಜಾತಿವಾದಿಗಳನ್ನು ಎನ್ನುವುದನ್ನು ಮೊದಲು ಗಮನಿಸಬೇಕು. ಅವರ ಮಾತು ಕೇಳಿದರೆ ಹಿಂದೂ ಸಮಾಜ ಸುಧಾರಣೆಯಾಗುವುದಿಲ್ಲ ಎನ್ನುವುದನ್ನು ಈ ಉಗ್ರ ದೇಶಪ್ರೇಮಿಗಳು ಬೇಗ ಗಮನಿಸಿದಷ್ಟೂ ದೇಶಕ್ಕೆ ಒಳ್ಳೆಯದು.

ಈ ಮತಾಂಧ, ಜಾತಿವಾದಿ ಜಾತ್ಯಂಧರು ಹೇಳುತ್ತಿರುವುದು ಇತಿಹಾಸದಲ್ಲಿನ ಸತ್ಯವನ್ನು ಹೇಳುತ್ತಿದ್ದೇವೆ ಎಂದು. ಕರ್ನಾಟಕದ ಅತಿ ಪ್ರಸಿದ್ಧ ಲೇಖಕನ ಅತಿ ಪ್ರಸಿದ್ಧ ಅಭಿಮಾನಿ ಬಾಲಲೇಖಕರೊಬ್ಬರು ಒಬ್ಬ ಸಾಹಿತಿಯ ಬಗ್ಗೆ ಮಾತನಾಡುತ್ತ ಅವರೇನು ಗಾಂಧಿಯ ಚಡ್ಡಿದೋಸ್ತಾ, ಗಾಂಧಿ ಹೀಗೆ ಹೇಳುತ್ತಿದ್ದರು ಎಂದು ಹೇಳುತ್ತಾರೆ, ಎಂದು ಸಾರ್ವಜನಿಕವಾಗಿ ಪ್ರಶ್ನಿಸಿದ್ದರು. ನಿಜವಾದ ಮಾತು. ಇತಿಹಾಸ ನಾನು ಹೇಳುವ ಹಾಗೆಯೆ ಇದೆ ಎನ್ನುತ್ತಿರುವವರು ಈ ಯುವ ಲೇಖಕರ ಮಾತನ್ನು ಗಂಭೀರವಾಗಿ ತೆಗೆದುಕೊಂಡು ತಮಗೇ ಅನ್ವಯಿಸಿಕೊಳ್ಳಬೇಕು. ತಾವು ನೋಡುವ ಇತಿಹಾಸವೂ ತಮ್ಮದೆ ಪೂರ್ವಾಗ್ರಹಗಳಿಂದ ಕೂಡಿದ್ದು, ತಾವು ಪ್ರತ್ಯಕ್ಷವಾಗಿ ನೋಡಿಲ್ಲದ, ಕೇವಲ ಇತಿಹಾಸ ಗ್ರಂಥಗಳ ಆಧಾರದ ಮೇಲೆ ಬರೆಯುವ ತಮ್ಮದೂ ಒಂದು ಕಟ್ಟು ಕತೆ ಯಾಕಾಗಿರಬಾರದು ಎನ್ನುವ ವಿನಯ ಬೆಳೆಸಿಕೊಳ್ಳಬೇಕು.

ಅಷ್ಟೇ ಅಲ್ಲ, ಇತಿಹಾಸವನ್ನು ಪ್ರತೀಕಾರದ ಮೂಲಕ ಸರಿಪಡಿಸಿಕೊಳ್ಳಬೇಕು ಎನ್ನುವ ರೀತಿಯಲ್ಲಿ ಹೇಳುವವರು ಸಮಾಜ ದ್ರೋಹಿಗಳೂ ಆಗುತ್ತಾರೆ. ಯಾಕೆಂದರೆ, ಅವರ ಕತೆಗಳನ್ನು ಓದಿ, ಮಂದಿರಮಸೀದಿಗಳನ್ನು ಉರುಳಿಸಲು ರಾತ್ರೋರಾತ್ರಿ ಯಾರೂ ಎದ್ದು ಓಡದಿದ್ದರೂ, ಮನಸ್ಸನ್ನು ವಿಷ ಮಾಡಲು, ಅಸಹಿಷ್ಣುತೆ ಬೆಳೆಸಲು ಆ ಓದು ಕಾರಣವಾಗುತ್ತದೆ. ಮುಂದಿನ ಬೆಂಕಿಗೆ ಈಗಿನ ಕಾವು ಅದು. ಜರ್ಮನ್ನರು ಹೋಲೊಕಾಸ್ಟ್ ನ ಅಪಚಾರವನ್ನು ಒಪ್ಪಿಕೊಂಡು ಅದನ್ನು ನಿರಾಕರಿಸಿದಂತೆ ಮೌಲ್ಯವಂತ ಭಾರತೀಯ ಸಮಾಜ ಇಂತಹ ಬರವಣಿಗೆಯನ್ನು ಸುಮ್ಮನೆ ನಿರಾಕರಿಸುತ್ತ ಹೋಗಬೇಕು. ಯಾರು ಎಷ್ಟೇ ಪ್ರಚೋದಿಸಿದರೂ ಪ್ರಚೋದನೆಗೊಳಗಾಗದ ಮೂಲಕವಷ್ಟೆ ಇಂತಹ ದುಷ್ಟತನವನ್ನು ನಾವು ಸೋಲಿಸಬೇಕಾಗಿರುವುದು.

ಇವತ್ತಿನ ಭಾರತ ಯುವ ಭಾರತ. ಶೇ. 35 ಭಾರತೀಯರು 15 ವರ್ಷಕ್ಕಿಂತ ಚಿಕ್ಕವರು ಎನ್ನುತ್ತದೆ ಒಂದು ವರದಿ. 54% ರಷ್ಟು ಭಾರತೀಯರು 25 ವರ್ಷಕ್ಕಿಂತ ಚಿಕ್ಕ ವಯಸ್ಸಿನವರು ಎನ್ನುತ್ತದೆ ಇನ್ನೊಂದು ವರದಿ. ಸಾಮರಸ್ಯದ, ಜೀವಪರ ಭಾರತದ ಭವಿಷ್ಯ ನಿಂತಿರುವುದೆ ಇವರ ಮೇಲೆ. ಇವರು ಹೇಗೆ ರೂಪುಗೊಳ್ಳುತ್ತಾರೆ ಎನ್ನುವುದರ ಮೇಲೆ ಇಡೀ ಭಾರತದ ಭವಿಷ್ಯ ನಿಂತಿದೆ. ಇನ್ನೊಬ್ಬರಿಂದ ಅತಿ ಎನ್ನುವಷ್ಟು ಪ್ರಭಾವಿತಗೊಳ್ಳುವ ವಯಸ್ಸು ಹದಿವಯಸ್ಸು. ರೋಲ್‌ಮಾಡೆಲ್‌ಗಳನ್ನು, ಅದರಲ್ಲೂ ಗೆಲ್ಲುವ ರೋಲ್‌ಮಾಡೆಲ್‌ಗಳನ್ನು ಬಯಸುವ ವಯಸ್ಸಿದು. ಹಾಗಾಗಿ, ಸಮಾಜದ ಹಿತಬಯಸುವ, ಮೌಢ್ಯಕ್ಕೆ, ದ್ವೇಷಕ್ಕೆ ತಳ್ಳದ, ಸ್ವಾರ್ಥಿಗಳಲ್ಲದ ಜನರ ಗೆಲುವು ಹಿಂದೆಂದಿಗಿಂತಲೂ ಇಂದು ಅಗತ್ಯ. ಈ ಯುವ ಭಾರತೀಯ ಮನಸ್ಸುಗಳು ಫ್ಯಾಸಿಸ್ಟ್‌ಗಳಾಗದಂತೆ ನೋಡಿಕೊಳ್ಳುವ ಜರೂರು ಇವತ್ತಿನ ಪ್ರಜ್ಞಾವಂತ ಹಿರಿಯರ ಮೇಲಿದೆ. ತಮ್ಮೆಲ್ಲ ವೈಯಕ್ತಿಕ ಸ್ವಾರ್ಥಗಳನ್ನು, ಸಣ್ಣತನಗಳನ್ನು ಬಿಟ್ಟು ಸಮಷ್ಠಿಯ ಹಿತವನ್ನಷ್ಟೆ ಬಯಸಬೇಕಾದ ಸಮಯ ಇದು. ಆದರೆ ಇದು ಎಷ್ಟೋ ಜನರಿಗೆ ಅರ್ಥವಾಗುತ್ತಿಲ್ಲ ಎನ್ನುವುದು ಮಾತ್ರ ಸದ್ಯಕ್ಕೆ ಕೂರ ವಾಸ್ತವದಂತೆ ಕಾಣಿಸುತ್ತಿದೆ.

4 thoughts on “ಪಿ. ಮಹಮ್ಮದ್ ಹಾಗೂ ಕನ್ನಡದ ಟ್ಯಾಬ್ಲಾಯ್ಡ್ ದಿನಪತ್ರಿಕೆಗಳು

  1. Prakash K

    ಹೌದು ರವಿ, ನೀವು ಹೇಳಿರುವುದು ನಿಜವೇ. ಸ್ಪಷ್ಟ ಪರ್ಯಾಯದ ಹುಡುಕಾಟದ ಕೊರತೆಯೂ ಮತ್ತು ಸ್ಪಷ್ಟ ಪರಿಹಾರದಿಂದ ವಿಮುಖವಾಗಿಸುವ ಪ್ರಯತ್ನವೂ ನಮ್ಮ ಸಂದರ್ಭದ ಕ್ರೂರ ವ್ಯಂಗ್ಯಗಳಲ್ಲೊಂದು. ಜನಾರ್ಧನಸ್ವಾಮಿಯವರ ಬಗ್ಗೆ ನೆನಪಿಸಿಕೊಂಡಿದ್ದೀರಿ. ಅವರ ವೈಯುಕ್ತಿಕ ಸಾಮರ್ಥ್ಯ ಕಾಳಜಿಗಳಿಗೆ ನಮ್ಮ ಬೆಂಬಲವಿರಲಿ. ಆದರೆ ಅದಕ್ಕೊಂದು ಮಿತಿಯಿದೆ. ಸಹ್ರುದಯತೆಯಷ್ಟೇ ಸಮಸ್ಯೆಯನ್ನು ಪರಿಹರಿಸದು. ಅವರ ರಾಜಕೀಯ ಆಯ್ಕೆ ಎಂತಹುದು. ಜನಾರ್ಧನಸ್ವಾಮಿ ಬಿಜೆಪಿಯ ಸಂಸದರು. ಒಂದು ರಾಜಕೀಯ, ಸಾಮಾಜಿಕ, ಆರ್ಥಿಕ ವ್ಯವಸ್ಥೆಯ ಕಾರ್ಯಾಚರಣೆಯನ್ನು ಸಮಗ್ರವಾಗಿ ಗ್ರಹಿಸದ ಬದಲಾವಣೆಯ ಕಣ್ಣೋಟಕ್ಕೆ ಅತ್ಯಂತ ಸೀಮಿತತೆಯಿದೆ. ಇದೂ ಕೂಡಾ ಯುವಜನತೆಯ ಮುಂದಿರುವ ದೊಡ್ಡ ಸವಾಲೇ ಆಗಿದೆ.
    ಪ್ರಕಾಶ್ ಕೆ.

    Reply
  2. Prakash Rao

    Swami may be a good person but I’ve lost all my respect to him after noticing couple of items.

    1. First thing after becoming MP, Swami applied for a “G” category site and received it from Yeddy – even when Swami and his wife already had sites in Bangalore. What a hypocrite!

    2. Now we see him all the time with Yeddy’s sons who are facing corruption charges. Why he is so buddy buddy with corrupt persons? Why is he hanging around dissidents instead of getting work done in his MP constituency??

    NRI’s like Swami who want best of both worlds need to be watched carefully. Even after minting millions in US he comes back to India giving a pose of Mahatma and first thing he does is apply for a BDA site. Shame on him!

    Reply
    1. rakesh

      good comment by prakash. Mr Janardanaswamy thinks he can hide everything behind his ice cream face. But people are not fools. Bringing developmental works to chitradurga is one thing and becoming corrupt at the same time is another thing. He says: Why you are criticising me when I have brought so much of projects? It is as good as saying that he can eat anything, for he has fed several people!! Shame on his shady character…
      More over, he is not ready to believe that there is no difference between eating one gram of shit or one kilo of shit. Who is ready to smell his mouth?

      Reply
  3. Dr.Poornananda.M.P.

    aatmiyare, e hottina aashadhabhutiya samajadalli niswaartha,baddhate,praamaanikate,tyaagagalige jaaga & bele ediye? ede endu neevu nambuvudadare nimma cell no needi, nimma biduvina veleyalli maatanaaduttene. vinayadinda-Dr:Poornananda-9448754996

    Reply

Leave a Reply to rakesh Cancel reply

Your email address will not be published. Required fields are marked *