ಪ್ರಜಾವಾಣಿಗೆ ರಾಜೀನಾಮೆ ನೀಡಿದ ಪಿ. ಮಹಮ್ಮದ್

– ಶಿವರಾಮ್ ಕೆಳಗೋಟೆ

ಪ್ರಜಾವಾಣಿ ಓದುಗರಿಗೆ ಒಂದು ಬೇಸರದ ಸುದ್ದಿ. ಓದುಗರ ಮನಗೆದ್ದಿದ್ದ ಕಾರ್ಟೂನಿಸ್ಟ್ ಪಿ. ಮಹಮ್ಮದ್ ಪ್ರಜಾವಾಣಿಯ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ಸದ್ಯ ನೋಟಿಸ್ ಪೀರಿಯಡ್‌ನಲ್ಲಿದ್ದಾರೆ. ಕೆಲವೇ ದಿನಗಳ ನಂತರ ಅವರ ಪಾಕೆಟ್ ಕಾರ್ಟೂನ್‌ಗಳು ಪ್ರಜಾವಾಣಿಯಲ್ಲಿ ಪ್ರಕಟವಾಗುವುದಿಲ್ಲ. ಪ್ರತಿದಿನ ಪ್ರಜಾವಾಣಿಯಲ್ಲಿ ಮಹಮ್ಮದ್ ರೇಖೆಗಳಿಗೆ ತಡಕಾಡುತ್ತಿದ್ದವರಿಗೆ ಇದು ಬೇಸರದ ಸಂಗತಿ.

ಮಹಮ್ಮದ್ ದೇಶದ ಅಗ್ರ ಕಾರ್ಟೂನಿಸ್ಟ್ ರ ಸಾಲಿಗೆ ಸೇರಬಹುದಾದ ಒಂದು ಪ್ರತಿಭೆ. ಅವರ ಕಾರ್ಟೂನ್‌ಗಳಲ್ಲಿ ರಾಜಕೀಯ ವಿಶ್ಲೇಷಣೆ, ವಿಡಂಬನೆ, ಅಮಾಯಕ ಮತದಾರನ ಪ್ರಶ್ನೆ, ಟೀಕೆ, ಮೂದಲಿಕೆ.. ಹೀಗೆ ಎಲ್ಲವೂ ಇರುತ್ತವೆ. ಅವರ ಇಂದಿನ ಕಾರ್ಟೂನ್ (ದಿನಾಂಕ ಜೂನ್ 30, 2012) ಕೂಡಾ ಇದಕ್ಕೆ ತಕ್ಕ ಉದಾಹರಣೆ. ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗಲು ಪೈಪೋಟಿ ಏರ್ಪಟ್ಟಿರುವಾಗ ಮುಖ್ಯಮಂತ್ರಿ ಕಚೇರಿ ಜವಾನ, ಮುಖ್ಯಮಂತ್ರಿ ಯಾಕಾಗಬಾರದು ಎಂಬ ಪ್ರಶ್ನೆಗೆ ‘ನನಗೆ ಆಸಕ್ತಿ ಇಲ್ಲ’ ಎಂಬ ಮಾತು, ಮತ್ತು ಅವನ ಭಂಗಿ ಟೀಕೆ, ವಿಡಂಬನೆ ಸ್ಪಷ್ಟವಾಗಿ ಹೇಳುತ್ತವೆ.

ಪಿ.ಮಹಮ್ಮದ್ ಅವರ ಅನೇಕ ಕಾರ್ಟೂನ್ ಗಳು ಅಜರಾಮರ. ಯುಪಿಎ ಮೊದಲ ಬಾರಿಗೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಅಧಿಕಾರದ ಅಂಚಿಗೆ ಬಂದಿದ್ದಾಗ, ಚುನಾವಣೆಯಲ್ಲಿ ಅವರನ್ನು ಸೋಲಿಸಲಾಗದ ಬಿಜೆಪಿ ಪಕ್ಷ ‘ಸೋನಿಯಾ ವಿದೇಶಿ’ ಎಂದು ಕೂಗು ಎಬ್ಬಿಸಿತ್ತು. ಆಗ ಮಹಮ್ಮದ್ ಒಂದು ಕಾರ್ಟೂನ್ ಬರೆದರು – ಆನೆಯೊಂದು ಸೋನಿಯಾಗೆ ಹಾರ ಹಾಕುವ ಚಿತ್ರ, ಪಕ್ಕದಲ್ಲಿದ್ದ ನಾಯಿಯೊಂದು ‘ವಿದೇಶಿ’ ಎಂದು ಬೊಗಳುತ್ತಿತ್ತು.

ಜೆಡಿಎಸ್-ಬಿಜೆಪಿ ಯ 20-20 ಒಪ್ಪಂದದ ಆಡಳಿತದ ಅವಧಿಯಲ್ಲಿ ಮಹಮ್ಮದ್ ಕಾರ್ಟೂನ್ ಗಳು ವಿಶೇಷ ಖದರ್ ಹೊಂದಿದ್ದವು. ದೇವೇಗೌಡರಿಗೆ ತಮ್ಮ ಮಗನ ಬ್ಯಾಟಿಂಗ್ ನಂತರ ಪಿಚ್ ಅನ್ನು ಹಾಳುಮಾಡುವ ಐಡಿಯಾ ಇದೆ ಎಂದು ಮೊದಲು ಸ್ಪಷ್ಟವಾಗಿ ಹೇಳಿದವರು. (ಅದೇ ಸಂದರ್ಭದಲ್ಲಿ ಮುಂಬೈನಲ್ಲಿ ಶಿವಸೇನೆ ಪಡೆಯವರು ಕ್ರಿಕೆಟ್ ಪಿಚ್ ಅಗೆದು ಹಾಳು ಮಾಡಿದ್ದರು). ಮುಂದೆ ಮಹಮ್ಮದ್ ಅವರ ಮಾತು ನಿಜವಾಯಿತು.

ಮೊನ್ನೆಮೊನ್ನೆಯ ಇನ್ನೊಂದು ಕಾರ್ಟೂನ್ ‘ರೈತನಿಗೆ ಬೀಜ ಕೊಟ್ಟಿದ್ದೀವಿ, ಗೊಬ್ಬರ ಕೊಟ್ಟಿದೀವಿ, ಸಬ್ಸಿಡಿ ಕೊಟ್ಟಿದೀವಿ..ಇನ್ನು ಏನು ಮಾಡಬೇಕು,’ ಎಂದು ಮುಖ್ಯಮಂತ್ರಿ ಹೇಳಿದರೆ, ಅಮಾಯಕ ರೈತ ಹೇಳ್ತಾನೆ ‘ಸ್ವಾಮಿ ಭೂಮಿನೆ ಕಿತ್ತುಕೊಂಡ್ರಲ್ಲಾ?’. ಒಂದು ಸಂಪಾದಕೀಯ, ವಿಸ್ತೃತ ವರದಿ ಹೇಳಬೇಕಾದ್ದನ್ನ ಅಥವಾ ಹೇಳದೇ ಹೋದದ್ದನ್ನು ಇವರ ಒಂದು ಕಾರ್ಟೂನ್ ಹೇಳುತ್ತದೆ.

ಮಹಮ್ಮದ್ ಮುಂದೆ ಎಲ್ಲಿ ಕೆಲಸ ಮಾಡುತ್ತಾರೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಇನ್ನೊಂದು ದಿನಪತ್ರಿಕೆಯಿಂದ ಅವರಿಗೆ ಆಹ್ವಾನ ಬಂದಿದೆ ಎನ್ನುವ ಸುದ್ದಿ ಇದೆ. ಏನೇ ಆಗಲಿ, ಕನ್ನಡದ ಓದುಗರು ಅವರ ಕಾರ್ಟೂನ್ ಗಳನ್ನು ಮಿಸ್ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ.

(ವ್ಯಂಗ್ಯಚಿತ್ರ ಕೃಪೆ: ಪ್ರಜಾವಾಣಿ)

14 thoughts on “ಪ್ರಜಾವಾಣಿಗೆ ರಾಜೀನಾಮೆ ನೀಡಿದ ಪಿ. ಮಹಮ್ಮದ್

  1. Mahesh

    ಇದು ನಿಜಕ್ಕೂ ಅಫಾತದ ಸುದ್ದಿ,ಗಡಿಯಾರದ ಮುಳ್ಳು ಇದ್ದಕ್ಕಿದ್ದಂತೆ ನಿಂತುಹೋದಂತಹ ಶೂನ್ಯ ಭಾವ.ಹೊಸ್ತಿಲ ಮುಂದಿನ ರಂಗೋಲಿಯಂತೆ ಪ್ರಜಾವಾಣಿ ದಿನಪತ್ರಿಕೆಯಲ್ಲಿ ನಿತ್ಯವೂ ಅಕ್ಷರದ ಜೊತೆಗೊಂದು ಹರಿತವಾದ ಶಸ್ತ್ರ ಎಂಬಂತೆ ಹೊರಬರುತ್ತಿದ್ದ ವ್ಯಂಗ್ಯಚಿತ್ರಕ್ಕೆ ನಾಡಿನ ಜನ ಮಾರುಹೋಗಿದ್ದರು.ಮಹಮ್ಮದ್ ಜನ-ಸಾಮಾನ್ಯರ ಧ್ವನಿಯಾಗಿದ್ದರು.ಮಾತು ಮರೆತ ರಾಜಕಾರಣಿಗಳಿಗೆ ರೇಖೆಗಳ ಈಟಿಯಿಂದ ಚುಚ್ಚಿ ಜ್ಞಾಪಿಸುತ್ತಿದ್ದರು.ಇಂತಹ ಮಹಾನ್ ಪ್ರತಿಭೆ ಪ್ರಜಾವಾಣಿಯಿಂದ ಹೊರಬಂದಿರುವುದು ನಿಜಕ್ಕೂ ವಿಷಾದನೀಯ.

    Reply
  2. Bharath(dhwani)

    ಇಡೀ ಪತ್ರಿಕೆಗೆ ಮಹಮ್ಮದ್ ಅವರ ವ್ಯಂಗ್ಯ್ ಚಿತ್ರ ಶೋಭೆ ತರುತ್ತಿತ್ತು. ಅವರ ವಿದಾಯ ನಿಜಕ್ಕೂ ಬೇಸರ ತರಿಸಿದೆ. ಅರ್ಧ ಮುಕ್ಕಾಲು ಪುಟದ ಸುದ್ದಿಯನ್ನು ಒಂದು ಸಣ್ಣ್ ಕಾರ್ಟೂನ್ ಮೂಲಕ ವಿವರಿಸುವ ಅಧ್ಬುತ ಕಲಾಕಾರನ ಈ ನಿರ್ಧಾರ ಕನ್ನಡ ಪತ್ರಿಕೋದ್ಯಮಕ್ಕೆ ದೊಡ್ಡ್ ಹೊಡೆತ ಎಂದರೆ ತಪ್ಪಿಲ್ಲ್.

    Reply
  3. Basavaraja Halli

    P.Mahammed avarige avare sati. Orva janapara kalajiya Cartoonist elliye iddaru. Ellige hodaru janarige hattiravage geregalannu geechuttane. P.Mahammed sir good luck
    – Basavaraj Halli

    Reply
  4. Santosh

    Since last 15 year’s i am reading the prajavani news continuously with seeing his cartoon…good skills and a art can touches so many minds to be discussed under many matters…i hope and i wish he will come back to prajavani….

    Reply
  5. Ivan D'Silva

    ಮೊಹಮ್ಮದ್ ಇಲ್ಲದ ಪ್ರಜಾವಾಣಿ ಊಹಿಸಿಕೊಳ್ಳೋದು ಕಷ್ಟ !! ತಾನು ಕಳೆದುಕೊಳ್ತಾ ಇದ್ದ ಜಾತ್ಯತೀತತೆಯನ್ನು ಪ್ರಜಾವಾಣಿ ಮೊಹಮ್ಮದ್ ರವರಿಂದ ಭರ್ತಿ ಮಾಡಿಕೊಳ್ತಾ ಇತ್ತು. ಇನ್ನು ಪ್ರಜಾವಾಣಿಯಲ್ಲೇ ಬದಿಕಿದ್ದವರು ಒಂದಷ್ಟು ಮಂದಿ ಅತ್ತ್ಯಂತ ಕೆಟ್ಟ ಬೀಜೆಪಿ ಸರಕಾರದಲ್ಲಿ ಒಂದಿಷ್ಟು ದುಡ್ಡು ಸೈಟು ಗಿಂಜಿಕೊಂಡವರು ಇನ್ನಷ್ಟು ದುಂಡ ಗಾಗಲು ಇದು “ಸಕಾಲ”

    Reply
  6. prasad raxidi

    ಶಾಲಾದಿನಗಳಿಂದ (ಸುಮಾರು 40 ವರ್ಷಗಳು) ಪ್ರಜಾವಾಣಿ ನೋಡುತ್ತಿದ್ದೇನೆ, ನಡುವೆ ಕೆಲವು ದಿನಗಳ ಕಾಲ ಪ್ರಜಾವಾಣಿ ನಿಂತು ಹೋಗಿದ್ದಾಗ ಪ್ರತಿದಿನ ಏನೋ ಮಿಸ್ಸಿಂಗ್… ಇತ್ತೀಚೆಗೆ ಮಹಮದ್ ರನ್ನು ಭೇಟಿಯಾಗಿದ್ದೆ ಒಂದು ಸಾರಿ ಮಾತ್ರ, ಸೂಕ್ಷ್ಮ ಮನಸ್ಸಿನ ಕಲಾವಿದ ಅನ್ನಿಸಿತ್ತು, ಹಾಗಾದರೆ ಇನ್ನು ಕೆಲವೇದಿನಗಳಲ್ಲಿ ಪ್ರಜಾವಾಣಿಯಲ್ಲಿ ಮಹಮ್ಮದರ ಕಾರ್ಟೂನ್ ಇಲ್ಲ.. ಪ್ರಜಾವಾಣಿ ಅಸೂಕ್ಷ್ಮವಾಗಿರುವುದಕ್ಕೆ ಮತ್ತೊಂದು ಸಾಕ್ಷಿ…

    Reply
  7. Basavaraj Pujar

    ಪತ್ರಿಕೆ ಮಾತ್ರವಲ್ಲ…ಅಲ್ಲಿರುವವರೂ ಜಾತ್ಯಾತೀತವಾಗಿರಬೇಕು. ಮೆಟ್ರೋ ರೈಲಿನಂತೆ ವೇಗವಾಗಿ ಎತ್ತರಿಸುತ್ತಿರುವ ಭಷ್ಟಾಚಾರ ಮತ್ತು ದೇಶಸೇವೆಯ ಹೆಸರಿನಲ್ಲಿ ಧಮರ್ಾಂಧರಿಂದ ಕೊರೆಯಲ್ಪಡುತ್ತಿರುವ ನಮ್ಮ ಜಾತ್ಯಾತೀತ ಸಮಾಜಕ್ಕೆ ಪಿ.ಮಹ್ಮದ್ ಅವರ ಮೊನಚಾದ ಗೆರೆಗಳು ಅಣಕಿಸುತ್ತಿದ್ದವು. ಅವರ ಸಣ್ಣ ಗೆರೆಯೂ ‘ಪುಣ್ಯಾತ್ಮ’ರನ್ನು ಆರಿಸಿ ಕಳುಹಿಸಿ ಮರುಕ ವ್ಯಕ್ತಪಡಿಸುತ್ತಿರುವ ಬಡವರ ಸತುವಿಲ್ಲದ ಧ್ವನಿಗೆ ಚೂರು ತಾಕತ್ತು ತಂದುಕೊಡುತ್ತಿತ್ತು. ಅವರು ರಾಜೀನಾಮೆ ಕೊಟ್ಟಿರುವ ಸಂಗತಿ ತುಂಬಾ ನೋವು ತರಿಸುತ್ತಿದೆ.

    Reply
  8. ಪಂಡಿತಾರಾಧ್ಯ ಮೈಸೂರು

    ಪ್ರಜಾವಾಣಿಯಲ್ಲಿ ರಾಮಮೂರ್ತಿಯವರಿಂದ ತೆರವಾಗಿದ್ದ ಸ್ಥಾನವನ್ನು ಪಡುಬಿದ್ರಿ ಮುಹಮ್ಮದ್ ಅವರು ಸಮರ್ಥವಾಗಿ ತುಂಬಿ ಅದಕ್ಕೆ ಹೊಸ ಆಯಾಮಗಳನ್ನು ಮೂಡಿಸಿದ್ದರು. ಅವರಿಲ್ಲದ ಪ್ರಜಾವಾಣಿಯನ್ನು ಕನ್ನಡ ಪತ್ರಿಕಾ ಲೋಕವನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಇದು ಅಕ್ಷರಶಃ ನಷ್ಟವೆ.

    Reply
  9. H.R.Naveenkumar

    ಇದು ನಿಜಕ್ಕೂ ಬೇಸರ ತರುವ ವಿಷಯ, ಅತ್ಯಂತ ಸೂಕ್ಷ್ಮಸಂವೇದನೆ ಇಟ್ಟುಕೊಂಡು ತಮ್ಮ ರೇಖೆಗಳ ಮೂಲಕ ಹತ್ತಾರು ಪುಟಗಳು ಬರೆಯಬಹುದಾದಷ್ಟನ್ನು ಕೇವಲ ತಮ್ಮ ಒಂದು ವ್ಯಂಗ್ಯಚಿತ್ರದಲ್ಲಿ ಬಿಂಬಿಸುವ ಶಕ್ತಿ ಪಿ.ಮಹಮದ್ ರವರಿಗಿತ್ತು. ಹಿಂದೆ ಜನವಾಹಿನಿ ಪತ್ರಿಕೆ ಮೂಲಕ ಈಗ ಪ್ರಜಾವಾಣಿಯ ಮೂಲಕ ಕನ್ನಟದ ಓದುಗರ ಮನಸುಗಳನ್ನು ಎಚ್ಚರಿಸುತ್ತಿದ್ದ, ಕೆಣಕುವ ಮೂಲಕ ತಪ್ಪುಗಳನ್ನು ತೋರಿಸುತ್ತಿದ್ದ ವ್ಯಂಗ್ಯಚಿತ್ರಗಳನ್ನು ಪ್ರಜಾವಾಣಿಯಲ್ಲಿ ಇನ್ನು ಮುಂದೆ ನೋಡಲು ಸಾಧ್ಯವಿಲ್ಲವಲ್ಲಾ ಎಂಬ ಬೇಸರ ಕಾಡುತ್ತಿದೆ. ಅವರು ಪ್ರಜಾವಾಣಿಗೆ ರಾಜಿನಾಮೆ ಕೊಟ್ಟ ಕಾರಣ ತಿಳಿಯಲಿಲ್ಲ,

    Reply
  10. ram kumar

    In kannada journalism, some editors are spoiling thier own publications with/without the knowledge of its owner. this is one such case. It is time to wake up. both the owners ! READER & PUBLSIHER

    Reply
  11. Chandrashekhar Aijoor

    ಮಹಮ್ಮದ್ ಸರ್ ನಿಮ್ಮ ‘ವ್ಯಂಗ್ಯ’ ಚಿತ್ರವಿಲ್ಲದ ಮೊದಲ ಪುಟದ ಪ್ರಜಾವಾಣಿಯನ್ನು ಕಲ್ಪಿಸಿಕೊಳ್ಳಲು ಕಷ್ಟವಾಗುತ್ತಿದೆ. ವರ್ಷಾನುಗಟ್ಟಲೇ ಮನೆ ಎದುರಿಗಿದ್ದವರು ಮನೆ ಖಾಲಿಮಾಡಿ ಹೊರಡುವಾಗ ಕಾಡುತ್ತದಲ್ಲ… ಆ ಖಾಲಿತನ ನನ್ನನ್ನು ಕಾಡುತ್ತಿದೆ. ದೇವೇಗೌಡರಿಗೆ ಕೊಟ್ಟ ಮಾಸ್ಟರ್ ಪ್ಲಾನ್, ಸಡನ್ನಾಗಿ ಊದಿಕೊಂಡ ಸಿದ್ದರಾಮಯ್ಯನವರ ಅಹಿಂದ ಇಮೇಜ್, ಗಣಿಕಳ್ಳರ ಅನ್ಲೋಡಿಂಗ್, ಮಾಜಿಮುಖ್ಯಮಂತ್ರಿಯ ಚೂಪು ಮೀಸೆ, ಹೈಕಮಾಂಡ್ ಎದುರು ಮಂಡಿಯೂರಿ ಕೂತಿರುವ ಈಶ್ವರಪ್ಪ, ದೊಗಳೆ ಚೆಡ್ಡಿಗಳ ಚೆಡ್ಡಿಗಳನ್ನು ಗಂಜಿಯಾಕಿ ಗರಿಗರಿಯಾಗಿ ಕಂಗೊಳಿಸುವಂತೆ ಮಾಡಿದ್ದು ನಿಮ್ಮ ಪೆನ್ನಿಂದ ಹೊರಟ ಗೆರೆಗಳಲ್ಲವೇ… ಸರ್ ಎಲ್ಲೇ ಇರಿ ಹೇಗೆ ಇರಿ, ನಿಮ್ಮ ನೆಲೆ ಮಾತ್ರ ಶಾಶ್ವತ ವಿರೋಧ ಪಕ್ಷ ಅನ್ನುವುದು ಸದಾ ನಿಮ್ಮೊಂದಿಗಿರಲಿ. ಇದುವರೆವಿಗೂ ನೀವು ಉಣಬಡಿಸಿದ ವ್ಯಂಗ್ಯ ಚಿತ್ರಗಳಿಗೆ ಇದೋ ನನ್ನ ಸಲಾಮ್! Miss You in Prajavaani Sir…

    Reply
  12. nagraj.harapanahalli

    ಪಿ.ಮಹಮ್ಮದ್ ಅವರ ಕಾರ್ಟೂನ್ ಇಲ್ಲದ ಪ್ರಜಾವಾಣಿ ಊಹಿಸಲು ಕಷ್ಟ .

    Reply

Leave a Reply to Basavaraja Halli Cancel reply

Your email address will not be published. Required fields are marked *