ಮಧ್ಯಂತರ ಚುನಾವಣೆ ಪರಿಹಾರವೇ?

– ಆನಂದ ಪ್ರಸಾದ್

ರಾಜ್ಯದ ಆಡಳಿತ ಪಕ್ಷವಾದ ಬಿಜೆಪಿಯಲ್ಲಿ ನಾಯಕತ್ವಕ್ಕಾಗಿ ನಿರಂತರವಾಗಿ ನಡೆಯುತ್ತಿರುವ ಕಿತ್ತಾಟ ನೋಡಿ ಬೇಸತ್ತಿರುವ ಜನ ಇದಕ್ಕೆ ಮಧ್ಯಂತರ ಚುನಾವಣೆಯೇ ಪರಿಹಾರ ಎಂಬ ಅಭಿಪ್ರಾಯವನ್ನು ಬಹಳ ಹಿಂದಿನಿಂದಲೇ ಹೇಳುತ್ತಾ ಬಂದಿದ್ದಾರೆ. ಆದರೆ ಇಂದಿನ ಕರ್ನಾಟಕದ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಕಂಡುಬರುತ್ತಿರುವ ಗುಂಪುಗಾರಿಕೆಯನ್ನುನೋಡಿದರೆ ಮಧ್ಯಂತರ ಚುನಾವಣೆಯೂ ಪರಿಹಾರ ನೀಡುವ ಸಂಭವ ಇದೆ ಎನಿಸುವುದಿಲ್ಲ. ಈಗ ಚುನಾವಣೆ ನಡೆದರೂ ಯಾವುದಾದರೂ ಒಂದು ಪಕ್ಷಕ್ಕೆ ಬಹುಮತ ಬರುತ್ತದೆ ಎಂಬ ನಂಬಿಕೆ ಯಾರಲ್ಲಿಯೂ ಉಳಿದಿಲ್ಲ. ಒಂದು ವೇಳೆ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬರುತ್ತದೆ ಎಂದು ಇಟ್ಟುಕೊಂಡರೂ ಏನಾದರೂ ಪರಿಸ್ಥಿತಿ ಬದಲಾವಣೆ ಆಗುತ್ತದೆ ಎಂಬ ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ. ಕಾರಣ ಕಾಂಗ್ರೆಸ್ ಪಕ್ಷದಲ್ಲಿಯೂ ಇರುವ ಬಣ ರಾಜಕೀಯ. ಕಾಂಗ್ರೆಸ್ ಪಕ್ಷದಲ್ಲಿ ಎಸ್. ಎಂ. ಕೃಷ್ಣ ಗುಂಪಿನ ಬಣ, ಮೊಯಿಲಿ ಬಣ, ಸಿದ್ಧರಾಮಯ್ಯ ಬಣ, ಖರ್ಗೆ ಬಣ ಇತ್ಯಾದಿ ಬಣಗಳ ಮೇಲಾಟದಲ್ಲಿ ಪರಿಸ್ಥಿತಿ ಈಗಿರುವ ಬಿಜೆಪಿಗಿಂತ ಉತ್ತಮವಾಗಿದ್ದೀತು ಎಂದು ನಿರೀಕ್ಷಿಸುವುದು ಹೇಗೆ? ಭ್ರಷ್ಟಾಚಾರದ ವಿಷಯಕ್ಕೆ ಬಂದರೂ ಅಷ್ಟೇ. ಕಾಂಗ್ರೆಸ್ ಪಕ್ಷದಲ್ಲಿಯೂ ಘಟಾನುಘಟಿ ಭ್ರಷ್ಟ ನಾಯಕರಿದ್ದಾರೆ. ಇಂಥ ಭ್ರಷ್ಟ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವ ಇಚ್ಛಾಶಕ್ತಿ ಕಾಂಗ್ರೆಸ್ ಹೈಕಮಾಂಡಿಗೆ ಇಲ್ಲ. ಅಲ್ಲದೆ ಕೆಲವು ಕಾಂಗ್ರೆಸ್ಸಿಗರು ಇನ್ನೂ ಕೆಲವು ಮಹಾಭ್ರಷ್ಟರನ್ನು ಇತರ ಪಕ್ಷಗಳಿಂದ ಜಾತಿಯ ಆಧಾರದಲ್ಲಿ ತಮ್ಮ ಪಕ್ಷಕ್ಕೆ ತರಬೇಕೆಂಬ ಚಿಂತನೆಯಲ್ಲಿಯೂ ಇದ್ದಾರೆ. ಹೀಗಿರುವಾಗ ಬಿಜೆಪಿ ಹೋಗಿ ಕಾಂಗ್ರೆಸ್ ಬಂದರೂ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆದೀತು ಎಂದು ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ.

ಮೂರನೇ ಅತಿ ದೊಡ್ಡ ಪಕ್ಷವಾದ ಜೆಡಿಎಸ್ ಪಕ್ಷ ತನ್ನ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರುವ ಶಕ್ತಿಯನ್ನು ಸಿದ್ಧರಾಮಯ್ಯ ಹಾಗೂ ಇನ್ನಿತರ ನಾಯಕರು ಆ ಪಕ್ಷವನ್ನು ತ್ಯಜಿಸಿದಾಗಲೇ ಕಳೆದುಕೊಂಡಿದೆ. ಹೀಗಾಗಿ ಅದು ತನ್ನ ಸ್ವಂತ ಬಲದಿಂದ ಅಧಿಕಾರಕ್ಕೆ ಬರುವುದು ಕನಸಿನ ಮಾತು. ಅಲ್ಲದೆ ಜೆಡಿಸ್ ನಾಯಕ ಕುಮಾರಸ್ವಾಮಿಯ ಮೇಲೂ ಭ್ರಷ್ಟಾಚಾರದ ಆಪಾದನೆಗಳಿವೆ ಹಾಗೂ ಆದಾಯಕ್ಕಿಂತ ಹೆಚ್ಚಿನ ಅಕ್ರಮ ಬೇನಾಮಿ ಆಸ್ತಿ ಗಳಿಸಿರುವ ಗುಸುಗುಸು ರಾಜ್ಯಾದ್ಯಂತ ಕೇಳಿಬರುತ್ತಿದೆ. ಅಲ್ಲದೆ ಜೆಡಿಎಸ್ ಪಕ್ಷವು ತಂದೆ ಮಕ್ಕಳ ಪಕ್ಷ ಎಂಬ ಬಿರುದನ್ನೂ ಪಡೆದುಕೊಂಡಿದೆ. ಹೀಗಾಗಿ ಈ ಪಕ್ಷವು ಮುಂದೆಯೂ ರಾಜ್ಯದಲ್ಲಿ ಬೆಳೆಯುವ ಸಾಧ್ಯತೆ ಇಲ್ಲ. ಅಕ್ರಮ ಗಣಿಗಾರಿಕೆಯ ದೇಶದ್ರೋಹದ ದುಡ್ಡಿನಿಂದ ಜನ್ಮ ತಾಳಿದ ಶ್ರೀರಾಮುಲು ನೇತೃತ್ವದ ಪಕ್ಷವೂ ಚುನಾವಣೆಗಳಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ಸಾಧ್ಯತೆ ಇಲ್ಲ. ಅಕ್ರಮ ಗಣಿ ದುಡ್ಡನ್ನು ಚೆಲ್ಲಿದರೂ ಹತ್ತಿಪ್ಪತ್ತು ಸ್ಥಾನಗಳಿಗಿಂಥ ಹೆಚ್ಚು ಸ್ಥಾನ ಗೆಲ್ಲುವ ಸಾಧ್ಯತೆ ಇಲ್ಲ. ಶ್ರೀರಾಮುಲು ಪಕ್ಷವು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದ್ದರೂ ಇವೆರಡೇ ಪಕ್ಷಗಳು ಅಧಿಕಾರಕ್ಕೆ ಬರುವಷ್ಟು ಸ್ಥಾನ ಪಡೆಯುವ ಸಾಧ್ಯತೆ ಇಲ್ಲ. ಇನ್ನೊಂದು ಸಾಧ್ಯತೆ ಎಂದರೆ ಶ್ರೀರಾಮುಲು ನೇತೃತ್ವದ ಬಿಎಸ್ಆರ್ ಕಾಂಗ್ರೆಸ್ ಪಕ್ಷವು ಚುನಾವಣೋತ್ತರ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲೂಬಹುದು. ಇದರಿಂದ ಕರ್ನಾಟಕದ ರಾಜಕೀಯ ಅಕ್ರಮ ಗಣಿಗಾರಿಕೆಯ ದುಡ್ಡಿನಿಂದ ಮತ್ತೆ ಕುಲಗೆಡುವ ಪರಿಸ್ಥಿತಿ ಬರಬಹುದು. ಚುನಾವಣೋತ್ತರ ಪರಿಸ್ಥಿತಿಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮತ್ತೆ ಕೈಜೋಡಿಸಿ ಸಮಯ ಸಾಧಕ ರಾಜಕಾರಣ ತೋರಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಬಿಜೆಪಿ ಒಂದು ಪಕ್ಷವಾಗಿ ಅಧಿಕಾರ ಹಿಡಿದಿರುವಾಗಲೆ ಅಧಿಕಾರಕ್ಕಾಗಿ ಭೀಕರ ಕಚ್ಚಾಟ ನಡೆಯುತ್ತಿರುವಾಗ ಎರಡು ಸಮಯಸಾಧಕ, ತಾತ್ವಿಕವಾಗಿ ವಿರೋಧಿ ನಿಲುವಿನ ಪಕ್ಷಗಳು ಜೊತೆ ಸೇರಿದರೆ ಅಧಿಕಾರಕ್ಕಾಗಿ ಇನ್ನೆಂಥ ಕಚ್ಚಾಟ ನಡೆಯಬಹುದು ಎಂಬುದನ್ನು ಊಹಿಸುವುದು ಕಷ್ಟವಲ್ಲ. ಇಂಥ ನಿರ್ವಾತದ ಪರಿಸ್ಥಿತಿಯಲ್ಲಿ ಕರ್ನಾಟಕದಲ್ಲಿ ರಾಜಕೀಯ ಬದಲಾವಣೆ ಉಂಟಾಗುವ ಸಾಧ್ಯತೆ ಕಂಡುಬರುತ್ತಿಲ್ಲ. ಹೀಗಿರುವಾಗ ಮಧ್ಯಂತರ ಚುನಾವಣೆಯಿಂದ ಪರಿಹಾರ ದೊರೆತೀತು ಎಂಬುದು ಕನಸಿನ ಮಾತಾಗುತ್ತದೆ.

ಶೇಕಡಾ 75 ಅಕ್ಷರಸ್ಥರನ್ನು ಹೊಂದಿರುವ ಕರ್ನಾಟಕದಲ್ಲಿ ಆರೋಗ್ಯಕರ ರಾಜಕೀಯವನ್ನು ಕಟ್ಟಲು ಸಾಧ್ಯವಾಗದ ಪರಿಸ್ಥಿತಿ ಇರುವುದು ನಾಚಿಕೆಗೇಡಿನ ವಿಚಾರವಾಗಿದೆ. ಕರ್ನಾಟಕದ ಮಾಧ್ಯಮಗಳಲ್ಲಿ ಆರೋಗ್ಯಕರ ಪರ್ಯಾಯ ರಾಜಕೀಯವನ್ನು ಕಟ್ಟಬೇಕಾಗಿರುವುದರ ಅವಶ್ಯಕತೆಯನ್ನು ಕುರಿತು ಯಾವುದೇ ಚರ್ಚೆ ನಡೆಯುತ್ತಾ ಇಲ್ಲ. ಎಲ್ಲ ಮಾಧ್ಯಮಗಳೂ ಸೇರಿ ಇಂಥ ಒಂದು ಚರ್ಚೆಯನ್ನು ನಿರಂತರವಾಗಿ ನಡೆಸುತ್ತ ಬಂದರೆ ಈ ಕುರಿತು ರಾಜ್ಯದಲ್ಲಿ ಇಂಥ ಒಂದು ಜಾಗೃತಿ ಆಗಿಯೇ ಆಗುತ್ತದೆ. ಆದರೆ ಯಾವ ಮಾಧ್ಯಮಗಳಿಗೂ ಇದು ಮುಖ್ಯ ಎನಿಸುತ್ತಿಲ್ಲ. ಒಂದು ಕನ್ನಡ ವಾಹಿನಿಗೆ ನಿತ್ಯಾನಂದನ ವಿಷಯವೇ ರಾಜ್ಯವನ್ನು ಪ್ರಮುಖವಾಗಿ ಕಾಡುತ್ತಿರುವ ಸಮಸ್ಯೆಯಾಗಿರುವಂತೆ ಕಂಡುಬರುತ್ತದೆ. ಯಾವುದೇ ಮುಖ್ಯ ವಾಹಿನಿಯ ಮಾಧ್ಯಮಗಳಿಗೂ ಕರ್ನಾಟಕದ ಪ್ರಸಕ್ತ ನಿರ್ವಾತ ರಾಜಕೀಯ ಪರಿಸ್ಥಿತಿಯನ್ನು ಬದಲಾಯಿಸಲು ತಾವು ಕೊಡುಗೆ ಕೊಡಬಹುದು ಎಂಬ ಒಂದು ಚಿಂತನೆಯೇ ಇರುವಂತೆ ಕಾಣುತ್ತಿಲ್ಲ. ಹೀಗಾಗಿ ನಮ್ಮಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಎಂಬುದು ಒಂದು ಪ್ರಹಸನ ಮಾತ್ರ ಆಗಿ ಉಳಿದಿದೆ. ವ್ಯವಸ್ಥೆಯನ್ನು ಬದಲಾಯಿಸಬಹುದು, ಅದಕ್ಕಾಗಿಯೇ ಪ್ರಜಾಪ್ರಭುತ್ವ ವ್ಯವಸ್ಥೆ ಇರುವುದು ಎಂಬ ಪ್ರಜ್ಞೆ ನಮ್ಮ ಜನರಲ್ಲಿ ಇರುವಂತೆ ಕಾಣುವುದಿಲ್ಲ. ಇಂಥ ಪ್ರಜ್ಞೆಯನ್ನು ಜನರಲ್ಲಿ ತರಬೇಕಾಗಿರುವ ಮಹತ್ತರ ಜವಾಬ್ದಾರಿ ಇರುವ ಮಾಧ್ಯಮಗಳು ಇದು ತಮಗೆ ಸಂಬಂಧಿಸಿದ್ದು ಅಲ್ಲವೇ ಅಲ್ಲ ಎಂಬಂತೆ ನಡೆದುಕೊಳ್ಳುತ್ತಿವೆ. ಹೀಗಾಗಿಯೇ ನಮ್ಮ ಯೋಗ್ಯತೆಗೆ ಅನುಗುಣವಾದ ಭ್ರಷ್ಟ ರಾಜಕೀಯ ವ್ಯವಸ್ಥೆ ರೂಪುಗೊಂಡಿದೆ. ಇದನ್ನು ಬದಲಾಯಿಸಬಹುದು, ಬದಲಾಯಿಸಬೇಕು ಎಂಬ ಅಶಾವಾದವೇ ನಮ್ಮಲ್ಲಿ ಕಂಡುಬರುತ್ತಿಲ್ಲ. ಎಲ್ಲೆಲ್ಲೂ ನಿರಾಶಾವಾದ ಕಂಡುಬರುತ್ತಿದೆ. ನಮ್ಮ ಪ್ರಖ್ಯಾತ ಸಾಹಿತಿಗಳು, ಕಲಾವಿದರು, ಸಿನಿಮಾ ನಟರು, ವಿಜ್ಞಾನಿಗಳು, ಚಿಂತಕರು, ವಿವಿಧ ಕ್ಷೇತ್ರಗಳ ಸಾಧಕರು, ಪ್ರಮುಖ ಸಂಘಟನೆಗಳು ಪರ್ಯಾಯ ರಾಜಕೀಯದ ಅವಶ್ಯಕತೆಯ ಬಗ್ಗೆ ಧ್ವನಿ ಎತ್ತುತ್ತಾ ಇಲ್ಲ. ಎಲ್ಲರೂ ಸೇರಿ ದನಿ ಎತ್ತಿದರೆ ಈ ಬಗ್ಗೆ ನಿಧಾನವಾಗಿಯಾದರೂ ಏನಾದರೂ ಬೆಳವಣಿಗೆ ಆದೀತು. ಆದರೆ ನಮ್ಮ ಜನರಿಗೆ ಕವಿದ ನಿರಾಶವಾದ ಯಾವುದೇ ಧನಾತ್ಮಕ ಚಿಂತನೆಯೇ ಮಾಡದಂತೆ ತಡೆದಿರುವಂತೆ ಕಾಣುತ್ತದೆ. ಇಂಥ ಸ್ಥಿತಿಯಲ್ಲಿ ಬೆಳಕನ್ನು ತೋರುವವರು ಯಾರು?

4 thoughts on “ಮಧ್ಯಂತರ ಚುನಾವಣೆ ಪರಿಹಾರವೇ?

    1. Ananda Prasad

      ಪ್ರಜಾ ಪ್ರಗತಿ ರಂಗದ ಬಗ್ಗೆ ನಮ್ಮ ಮುಖ್ಯ ವಾಹಿನಿಯ ಪತ್ರಿಕೆಗಳಲ್ಲಿ ಅಥವಾ ಟಿವಿ ವಾಹಿನಿಗಳಲ್ಲಿ ಯಾವುದೇ ಮಾಹಿತಿ ಬರುತ್ತಾ ಇಲ್ಲ. ಹೀಗಾಗಿ ಈ ಪರ್ಯಾಯ ರಾಜಕೀಯ ರಂಗದ ಹೆಸರು ನೆನಪಿನಲ್ಲಿ ಉಳಿದಿಲ್ಲ. ಚುನಾವಣೆಗಳಲ್ಲಿ ಪ್ರಜಾ ಪ್ರಗತಿ ರಂಗ ಸ್ಥಾನಗಳನ್ನು ಗೆಲ್ಲಬಹುದೋ, ಎಷ್ಟು ಸ್ಥಾನಗಳನ್ನು ಗೆಲ್ಲಬಹುದು ಎಂಬ ಬಗ್ಗೆ ಸದ್ಯ ಯಾವುದೇ ಮಾಹಿತಿ ಇಲ್ಲ. ಪ್ರಜಾ ಪ್ರಗತಿ ರಂಗಕ್ಕೆ ಎಲ್ಲ ಪಕ್ಷಗಳಲ್ಲಿ ಇರುವ ಪ್ರಾಮಾಣಿಕ ಹಾಗೂ ಜನಪರ ನಿಲುವಿನ ರಾಜಕಾರಣಿಗಳು ಅಧಿಕಾರದ ಆಸೆಯನ್ನು ಬಿಟ್ಟು ಬಂದು ಸೇರಿದರೆ ಕೆಲವು ಸ್ಥಾನಗಳನ್ನು ಗೆಲ್ಲಲು ಸಾಧ್ಯವಿದೆ. ಒಂದು ಚುನಾವಣೆಯಲ್ಲಿ ಸ್ಪರ್ಧಿಸಿ ಪ್ರಯೋಜನ ಆಗಲಿಲ್ಲವೆಂದು ಅಲ್ಲಿಗೆ ಪರ್ಯಾಯ ರಾಜಕೀಯದ ಪ್ರಯತ್ನವನ್ನು ಬಿಡಬಾರದು. ಇದನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗಬೇಕಾದ ಅಗತ್ಯ ಇದೆ. ಹಾಗೆ ಮುಂದುವರಿಸಿಕೊಂಡು ಹೋದಲ್ಲಿ ಅದು ನಿಧಾನವಾಗಿ ಯಶ ಗಳಿಸಲು ಸಾಧ್ಯ. ಮುಖ್ಯ ವಾಹಿನಿಯ ಮಾಧ್ಯಮಗಳಲ್ಲಿ ಪರ್ಯಾಯ ರಾಜಕೀಯ ರಂಗದ ಅವಶ್ಯಕತೆಯ ಬಗ್ಗೆ ನಿರಂತರ ಚರ್ಚೆ, ಸಂವಾದ ನಡೆಯುತ್ತಾ ಇರಬೇಕಾದ ಅಗತ್ಯ ಇದೆ. ಹಾಗಾದಾಗ ಇದು ಜನರ ಮೇಲೆ ಪ್ರಭಾವ ಬೀರುತ್ತದೆ. ಸದ್ಯದ ದೇಶದ ಹಾಗೂ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳ ಸ್ಥಿತಿಯನ್ನು ನೋಡುವಾಗ ಅವು ಪ್ರಜಾಪ್ರಭುತ್ವದ ಮೂಲಭೂತ ಆಶಯಗಳನ್ನು ಸ್ವಲ್ಪವೂ ಪಾಲಿಸುತ್ತಿಲ್ಲ. ಹೀಗಾಗಿ ದೇಶಕ್ಕೆ ಹಾಗೂ ರಾಜ್ಯಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಭೂತ ಆಶಯಗಳನ್ನು ಪಾಲಿಸುವ ಪರ್ಯಾಯ ರಾಜಕೀಯ ವ್ಯವಸ್ಥೆಯ ಅವಶ್ಯಕತೆ ತುಂಬಾ ಅನಿವಾರ್ಯವಾಗಿದೆ.

      Reply

Leave a Reply to sandeep Cancel reply

Your email address will not be published. Required fields are marked *