ಒಂದು ಪ್ರಶಸ್ತಿ ಹಾಗೂ ಒಂದು ಆಶಾವಾದ

– ಹರ್ಷಕುಮಾರ್ ಕುಗ್ವೆ

ದೇಶದ ಪ್ರಖ್ಯಾತ ಪತ್ರಕರ್ತ ಪಿ. ಸಾಯಿನಾಥ್ ಸ್ಥಾಪಿಸಿದ ಕೌಂಟರ್ ಮೀಡಿಯಾ ಪ್ರಶಸ್ತಿಯು ಗೆಳೆಯ ಟಿ.ಕೆ. ದಯಾನಂದ ಮತ್ತು ವಿ. ಗಾಯತ್ರಿಯವರಿಗೆ ಸಿಕ್ಕಿದೆ. ಅಭಿವೃದ್ಧಿ ಪತ್ರಿಕೋದ್ಯಮದ ಪ್ರೋತ್ಸಾಹಕ್ಕಾಗಿ ಪಿ. ಸಾಯಿನಾಥ್ ಅವರು ತಮ್ಮ “ಬರಗಾಲ ಅಂದರೆ ಎಲ್ಲರಿಗೂ ಇಷ್ಟ” ಎಂಬ ಕೃತಿಗೆ ಬಂದ ಸಂಭಾವನೆ ಹಣದಿಂದ ಈ ಪ್ರಶಸ್ತಿಯನ್ನು ನೀಡುತ್ತಿದ್ದಾರೆ. ಪತ್ರಿಕೋದ್ಯಮವನ್ನು ಸಮಾಜದ ಪ್ರಗತಿ, ಉನ್ನತಿಗಾಗಿ ಇರುವ ಒಂದು ಸಾಧನ ಎಂದು ಯೋಚಿಸುವವರ ಪಾಲಿಗೆ ಇದೊಂದು ಸಂತೋಷದ ವಿಷಯ.

ಇಂದು ದೇಶದ ಉದ್ದಗಲಕ್ಕೂ ಪಿ. ಸಾಯಿನಾಥ್ ಅವರು ಚಿರಪರಿಚಿತ. ‘ದೇಶದ ಎಲ್ಲ ಇಂಗ್ಲಿಷ್ ಪತ್ರಿಕೆಗಳೂ ಸಮಾಜದ ಮೇಲ್ದರ್ಜೆಯ ಶೇಕಡ 5 ಜನರಿಗಾಗಿ ಲೇಖನಗಳನ್ನು ಬರೆಯುತ್ತವೆ. ನಾನು ತೀರ ಕೆಳದರ್ಜೆಯ ಶೇಕಡ 5 ಜನರಿಗಾಗಿ ಬರೆಯುತ್ತೇನೆ,’ ಎಂಬ ಧ್ಯೇಯವನ್ನಿಟ್ಟುಕೊಂಡೇ ಪತ್ರಿಕಾರಂಗದಲ್ಲಿ ಕೃಷಿ ಮಾಡಿರುವವರು ಸಾಯಿನಾಥ್. ಮೊದಲಿಗೆ ಬ್ಲಿಟ್ಝ್, ನಂತರ ಟೈಮ್ಸ್ ಆಫ್ ಇಂಡಿಯಾಗಳಲ್ಲಿ ವರದಿಗಾರರಗಿ ಕೆಲಸ ಮಾಡಿ ಈಗ ದಿ ಹಿಂದೂ ಪತ್ರಿಕೆಯಲ್ಲಿ ಗ್ರಾಮೀಣ ವಿಭಾಗದ ಸಂಪಾದಕರಾಗಿರುವ ಪಿ. ಸಾಯಿನಾಥ್ ತಮ್ಮ ಬರಹಗಳ ಮೂಲಕ ಪ್ರಕಾಶಿಸುತ್ತಿರುವ ಭಾರತದ ಗ್ರಾಮೀಣ ಬದುಕಿನ ದುಸ್ಥಿತಿಗಳನ್ನು ಒಂದೊಂದಾಗಿ ತೆರೆದಿಟ್ಟು ಎಲ್ಲರನ್ನೂ ದಂಗುಬಡಿಸಿದವರು. ದೇಶದ ನೂರಾರು ಹಳ್ಳಿಗಳನ್ನು ಸುತ್ತಾಡುತ್ತಾ ಕಳೆದ ಒಂದೆರಡು ದಶಕಗಳಲ್ಲಿ ಒಂದೂವರೆ ಲಕ್ಷ ನೇಗಿಯೋಗಿಗಳು ಪ್ರಾಣ ಕಳೆದುಕೊಳ್ಳಲು ಇರುವ ಕಾರಣಗಳನ್ನು ಅಧ್ಯಯನ ನಡೆಸಿದವರು. ಶ್ರೀಸಾಮಾನ್ಯನ ಪರವಾದ ಘೋಷಣೆ ಕೂಗುತ್ತಲೇ ಗದ್ದುಗೆಗೇರುವ ಸರ್ಕಾರಗಳು ಅಧಿಕಾರದಲ್ಲಿ ಅದೇ ಶ್ರೀಸಾಮಾನ್ಯನ ಬದುಕನ್ನೇ ಕಿತ್ತುಕೊಳ್ಳುವಂತೆ ಮಾಡುವ ನೀತಿ ರೀತಿಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟವರು. ಜನಸಾಮಾನ್ಯರಿಗೆ ತೆರಿಗೆಯ ಹೊರೆಯನ್ನು ವಿಪರೀತ ಹೊರಿಸುತ್ತಲೇ ಕಾರ್ಪೊರೇಟ್ ವಲಯಗಳಿಗೆ ಸಾವಿರಾರು ಕೋಟಿ ರೂಪಾಯಿಗಳ ವಿನಾಯತಿ ನೀಡುತ್ತಾ ಬರುವ ಆಳುವವರ ಇಬ್ಬಂದಿತನವನ್ನು ಅಂಕಿ ಅಂಶಗಳ ಸಮೇತ ಬಿಚ್ಚಿಡುತ್ತಿರುವವರು.

ದೇಶದ ಹಳ್ಳಿಗಳು ಎದುರಿಸುವ ಬರಗಾಲ ಮತ್ತು ರೈತರ ಸಂಕಷ್ಟಗಳ ಕುರಿತು ಅಷ್ಟೊಂದು ಆಳವಾಗಿ ಅಧ್ಯಯನ ಮಾಡಿ ಬರೆದ ಮತ್ತೊಬ್ಬ ಲೇಖಕನಿಲ್ಲ. ಉನ್ನತ ಕೌಟುಂಬಿಕ ಹಿನ್ನೆಲೆಯಿಂದ ಬಂದೂ ಸಮಾಜದ ದುರ್ಬಲ ಜನರಿಗಾಗುತ್ತಿರುವ ಅನ್ಯಾಯದ ಬಗ್ಗೆ ಬರೆದು ಸಮಾಜವನ್ನೂ ಎಚ್ಚರ ಸ್ಥಿತಿಯಲ್ಲಿಡಲು ಶ್ರಮಿಸುತ್ತಿರುವ ಪಿ. ಸಾಯಿನಾಥ್ ಇಂದು ದೇಶದ ಉದ್ದಗಲಕ್ಕೂ ಸಾವಿರಾರು ಬರೆಹಗಾರರ, ಪತ್ರಕರ್ತರ ಪಾಲಿನ ಮಾರ್ಗದರ್ಶಿ.

ಪಿ. ಸಾಯಿನಾಥ್ ಅವರ “ಬರಗಾಲ ಅಂದರೆ ಎಲ್ಲರಿಗೂ ಇಷ್ಟ” ಕೃತಿಯನ್ನೋದಿದ್ದೇ ತಾನೂ ಸಾಯಿನಾಥ್ ಇಟ್ಟ ಹೆಜ್ಜೆಯ ಜಾಡಿನಲ್ಲೇ ಸಾಗಬೇಕು ಎಂದು ಮನಸ್ಸಿನಲ್ಲಿಯೇ ನಿರ್ಧರಿಸಿಕೊಂಡು ಕಾರ್ಯತತ್ಪರನಾಗಿದ್ದು ಟಿ.ಕೆ. ದಯಾನಂದ್. ತುಮಕೂರಿನ  ಸ್ಲಂ ಒಂದರಲ್ಲಿ ಹುಟ್ಟಿ ಬಡತನ, ಜಾತಿಬೇಧಗಳ ಎಲ್ಲಾ ಮಜಲುಗಳನ್ನೂ ಅನುಭವಿಸಿ ಅದರ ನಡುವೆಯೇ  ಕಾಲೇಜು ಶಿಕ್ಷಣವನ್ನೂ ಪಡೆದು ಸಾಮಾಜಿಕ ಕ್ರಿಯೆ ಮತ್ತು ಪತ್ರಿಕೋದ್ಯಮಕ್ಕೆ ಧುಮುಕಿದ್ದ ದಯಾನಂದ್ ಕಳೆದ ಒಂದೂವರೆ ವರ್ಷದಿಂದ ಎಡೆಬಿಡದೆ ಮಾಡಿದ ಕೆಲಸ ನಿಜಕ್ಕೂ ಶ್ಲಾಘನೀಯವಾದದ್ದು. ವರ್ಷದ ಹಿಂದೆ ಹಾವೇರಿ ಜಿಲ್ಲೆಯ ಸವಣೂರಿನ ಭಂಗಿ ಸಮುದಾಯವು ಮಲಸ್ನಾನ ಮಾಡಿದ್ದನ್ನು ಮಾಧ್ಯಮಗಳಲ್ಲಿ ನೋಡಿ ಇಡೀ ರಾಜ್ಯವೇ ಬೆಚ್ಚಿಬಿದ್ದಿತ್ತು. ಈ ಘಟನೆಯ ಬೆನ್ನುಬಿದ್ದು ಹೊರಟ ದಯಾನಂದ, ಚಂದ್ರಶೇಕರ್, ಪುರು, ಪತ್ರು ಪಿಯುಸಿಎಲ್ ನ ರಾಜೇಂದ್ರ ಅವರು ರಾಜ್ಯದ ಮುಂದೆ ಆಘಾತಕಾರಿ ಅಂಶಗಳನ್ನು ಅನಾವರಣಗೊಳಿಸಿದರು. ಪ್ರತಿ ಜಿಲ್ಲೆಯ ನಗರ ಹಳ್ಳಿಗಳಲ್ಲಿ ಕ್ಯಾಮೆರಾಗಳನ್ನು ಹಿಡಿದುಕೊಂಡು ಹೋಗಿ ಕಾನೂನಿನಲ್ಲಿ ದಶಕದ ಕೆಳಗೇ ನಿಷೇಧವಾಗಿರುವ ಈ ಕ್ಷಣದಲ್ಲೂ ಎಷ್ಟು ಅವ್ಯಾಹತವಾಗಿದೆ ಎಂಬುದನ್ನು ಬಯಲುಗೊಳಿಸಿದರು. ರಾಜ್ಯದಲ್ಲಿ ಮಲಹೊರುವ ಕೆಲಸದಲ್ಲಿ ತೊಡಗಿರುವ ಲಕ್ಷಾಂತರ ಜನರಿದ್ದಾರೆ ಮತ್ತು ಅವರಿಗೆ ಅದೆಷ್ಟು ಅನಿವಾರ್ಯ ಕೆಲಸವಾಗಿ ನಮ್ಮ ವ್ಯವಸ್ಥೆ ಮಾಡಿದೆ ಎಂಬುದನ್ನು ಸಾಕ್ಷಿ ಪುರಾವೆಗಳ ಸಮೇತ ಬಹಿರಂಗಪಡಿಸದರು. ಮಾತ್ರವಲ್ಲ ಮಲಹೊರುತ್ತಿರುವವರು ಹುಳುಗಳಂತೆ ಸಾಯುತ್ತಿದ್ದರೂ ನಾಗರೀಕ ಸಮಾಜ ಮತ್ತು ಮುಖ್ಯವಾಹಿನಿ ಮಾದ್ಯಮಗಳು ಕುರುಡಾಗಿರುವುದು ಇವರ ಪರಿಶೋಧನೆಗಳಿಂದ ತಿಳಿದುಬಂದಿತು.  ಮೊದಲಿಗೆ ಕೆಂಡಸಂಪಿಗೆ, ಸಂಪಾದಕೀಯ, ವರ್ತಮಾನ ದಂತಹ ಅಂತರ್ಜಾಲ ತಾಣಗಳಲ್ಲಿ ಈ ವಿಷಯ ಪ್ರಕಟಗೊಂಡು ನಂತರ ಇತರೆ ಮುಖ್ಯವಾಹಿನಿ ಮಾಧ್ಯಮಗಳೂ ಆ ಕಡೆ ಗಮನ ಹರಿಸುವಂತಾಯಿತು.  ಕೆಂಡಸಂಪಿಗೆಯಲ್ಲಿ “ರಸ್ತೆ ನಕ್ಷತ್ರ” ಎಂಬ ಲೇಖನ ಸರಣಿಯೊಂದು ಹಲವು ವಾರಗಳ ಕಾಲ ಸದ್ದಿಲ್ಲದೆ ಪ್ರಕಟವಾಯಿತು. ನಾಗರೀಕ ಸಮಾಜದ ಕಣ್ಣೆದುರಿಗೇ ದಿನನಿತ್ಯ ಅತ್ಯಂತ ದುರ್ಭರ ಬದುಕು ಸಾಗಿಸುವ ಅನೇಕರ ಬದುಕುಗಳ ಅನಾವರಣಗೊಳಿಸುವ ಸಂದರ್ಶನದ ಸರಣಿ ಅದು. ದಯಾನಂದ್ ಅದ್ಭುತವಾಗಿ ಬರಹ ರೂಪಕ್ಕೆ ಇಳಿಸುತ್ತಿದ್ದ ಆ ಬರೆಹಗಳು ನಮ್ಮ ಬಗ್ಗೆ ನಮಗೇ ನಾಚಿಕೆಯುಂಟು ಮಾಡಬಲ್ಲಂತವು, ಹೃದಯವನ್ನೇ ಕಲಕಿಸಿಬಿಡುವಂತವು. ಕಣ್ಣೀರು ಉಕ್ಕಿಸಬಲ್ಲಂತವು. ಪತ್ರಿಕೋದ್ಯಮ ಮತ್ತು ಆಕ್ಟಿವಿಸಂ ಎರಡರ ಪರಿಚಯವಿರುವ ದಯಾನಂದರ ಬರಹಗಳು ಹೊಸ ಬಗೆಯ ಅನುಭವವವನ್ನೇ ನೀಡುತ್ತವೆ. ಸಮಾಜಮುಖಿ ಚಿಂತನೆಗೆ ಬರೆಹ  ಮತ್ತು ಪತ್ರಿಕೋದ್ಯಮ ಒದಗಿಸಬಹುದಾದ ಶಕ್ತಿಯ ಸಾಧ್ಯತೆಗಳನ್ನು ದಯಾನಂದ್ ತೋರಿಸಿದ್ದಾರೆ.

ಪತ್ರಕರ್ತೆ ವಿ. ಗಾಯತ್ರಿಯವರು ರಾಜ್ಯದಲ್ಲಿ ಅವ್ಯಾಹತವಾಗಿ ನಡೆದಿರುವ ರೈತರ ಆತ್ಮಹತ್ಯೆಗಳ ಬೆನ್ನುಬಿದ್ದು ತಳಮಟ್ಟದ ವರದಿ ವಿಶ್ಲೇಷಣೆ ನಡೆಸಿದವರು.

ಇಂದು ನಮ್ಮ ಮಾದ್ಯಮಗಳು ಬಿತ್ತರಗೊಳಿಸುವ ಒಂದೊಂದೂ ಸುದ್ದಿಯೂ ಒಂದೊಂದು ಮನರಂಜನೆಯಾಗಿದೆ. ಅಲ್ಲಿ ರೋಚಕತೆ, ಅತಿರಂಜನೆ ಇವೆಲ್ಲಾ ಇರದಿದ್ದರೆ ಅದು ಪತ್ರಿಕೋದ್ಯಮವೇ ಅಲ್ಲ ಎಂಬ ಮನೋಭಾವನೆ ಇಂದು ಬಂದುಬಿಟ್ಟಿದೆ. ಹಳ್ಳಿಗಳಲ್ಲಿ ಕ್ರೈಂ ವರದಿಗಳು ಬಿಟ್ಟರೆ ಇನ್ಯಾವುದೂ ನಮ್ಮ ಮಾಧ್ಯಮಗಳಿಗೆ ಸುದ್ದಿಯಾಗಿ ಉಳಿದಿಲ್ಲ. ಒಂದೊಮ್ಮೆ ಗಂಭೀರ ವಿಷಯಗಳನ್ನು ಅಪರೂಪಕ್ಕೆ ವರದಿ ಮಾಡಿದರೂ ಅವುಗಳ ಫಾಲೋ ಅಪ್ ಎಂಬುದೇ ಇರುವುದಿಲ್ಲ. ಎಲ್ಲೋ ಒಂದಷ್ಟು ನಗರವಾಸಿ ಮಧ್ಯಮ ವರ್ಗದ ಮನೆಗಳ ಜನರು ನೋಡುವ ಕಾರ್ಯಕ್ರಮಗಳನ್ನೇ ಮಾನದಂಟವಾಗಿಟ್ಟುಕೊಂಡ ಅವೈಜ್ಞಾನಿಕ ಟಿ.ಆರ್.ಪಿ ಎಂಬುದು ದೃಶ್ಯ ಮಾಧ್ಯಮಗಳ ಕಾರ್ಯಕ್ರಮಗಳನ್ನು ನಿರ್ಧರಿಸುತ್ತಿದೆ. ಕಾಸಿಗಾಗಿ ಬರುವ ಸುದ್ದಿಗಳು ಮುಖಪುಟಗಳಲ್ಲಿ ರಾರಾಜಿಸುತ್ತವೆ. ಇಂತಹ ಸಂದರ್ಭದಲ್ಲಿ ಪತ್ರಿಕೋದ್ಯಮದ ಘನತೆ ಹೆಚ್ಚಿಸುವ ಕೆಲಸವನ್ನು ಒಂದಷ್ಟು ಜನರಾದರೂ ಮಾಡುತ್ತಿದ್ದರೆ ಅದೇ ಬಹುದೊಡ್ಡ ಆಶಾವಾದ. ಈ ಯಾದಿಯಲ್ಲಿ ಮುನ್ನಡೆದಿರುವ ದಯಾನಂದ ಟಿ.ಕೆ .ಮತ್ತು ವಿ. ಗಾಯತ್ರಿಯವರಿಗೆ ಕೌಂಟರ್ ಮಿಡಿಯಾ ಪ್ರಶಸ್ತಿ ಲಭಿಸಿರುವುದಕ್ಕೆ ನಾವೆಲ್ಲರೂ ಸಂಭ್ರಮಿಸಲು ಸಾಕಷ್ಟು ಕಾರಣವಿದೆ.

7 thoughts on “ಒಂದು ಪ್ರಶಸ್ತಿ ಹಾಗೂ ಒಂದು ಆಶಾವಾದ

  1. ನಟರಾಜು ಎಸ್ ಎಂ

    ಒಳ್ಳೆಯ ಲೇಖನ ಹರ್ಷಜೀ.. ಶುಭವಾಗಲಿ..

    Reply
  2. Naveen

    Hats off to Countrr media. We need to thank them. They really done great research in selecting right journalists for the award. Else who will thro light on guys writing in small blogs, dist level papers.

    Reply
  3. Basavaraja Halli

    Vyasteya kavige murututtiruva Jeevagal bagge kalaji vahisi varadi maduva moolaka avar badukige spandisiruv niaja patrakartarige abhinandane
    – Basavaraj Halli

    Reply
  4. Prakash K

    ಜನಸಾಮಾನ್ಯರ ಬಗ್ಗೆ ಕಾಳಜಿಯ ಇಬ್ಬರು ಪತ್ರಕರ್ತರಿಗೆ ಪ್ರಶಸ್ತಿ ಸಹಜವಾಗೇ ಸಂತೋಷವಾಗುವಂತಹುದು. ಪ್ರಶಸ್ತಿಗಳು ಜೊತೆಗೆ ಜವಾಬ್ದಾರಿಯನ್ನೂ ಹೆಚ್ಚಿಸುವಂತಹುದು.ಇನ್ನೂ ಹೆಚ್ಚು ಕೆಲಸ ಮಾಡಲಿ.ಶುಭಾಷಯಗಳು.
    ಪ್ರಕಾಶ್ ಕೆ.

    Reply
  5. ಹನಮಂತ ಹಾಲಿಗೇರಿ

    ನನ್ನಂಥವರು ಒಂದು ಪತ್ರಿಕೆಯಲ್ಲಿದ್ದುಕೊಂಡು, ಪತ್ರಿಕೆಯ ಮರ್ಜಿಗಾಗಿ ಇಷ್ಟವಿದ್ದೋ, ಇಲ್ಲದೆಯೋ ದಿನವೊಂದಕ್ಕೆ ಮೂರ್ನಾಲ್ಕು ಅಸೈನಮೆಂಟಗಳಲ್ಲಿ ಕಳೆದುಕೊಂಡು ಒದ್ದಾಡುತ್ತಿರುವಾಗ ದಯಾನಂದ ಎಂಬ ‘ಸ್ಲಂ ನಕ್ಷತ್ರ’ವೊಂದು ಸದ್ದಿಲ್ಲದೆ ಸುದ್ದಿಯಾಗದ ವಿಷಯದ ಬೆನ್ನುಹತ್ತಿ ರಾಜ್ಯಕ್ಕೆಲ್ಲದ ಸುದ್ದಿ ಮಾಡಿದ್ದು ನಮ್ಮಂಥವರಿಗೆ ಏಕಕಾಲಕ್ಕೆ ಹೊಟ್ಟೆಕಿಚ್ಚು ಮತ್ತು ನಾಚಿಕೆಯನ್ನು ತರಿಸುತ್ತೆ. ಪ್ರಶಸ್ತಿ ಸ್ಥಾಪಕ,ನನ್ನಂಥವರ ಆದರ್ಶ ಪಿ.ಸಾಯಿನಾಥ ಮತ್ತು ಪ್ರಶಸ್ತಿ ವಿಜೇತರನ್ನು ಹರ್ಷ ಚನ್ನಾಗಿ ಪರಿಚಯಿಸಿದ್ದಾರೆ.

    Reply

Leave a Reply

Your email address will not be published. Required fields are marked *