ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ -26)


– ಡಾ.ಎನ್.ಜಗದೀಶ್ ಕೊಪ್ಪ 


 

ಉತ್ತರ ಭಾರತದ ಅರಣ್ಯ ಮತ್ತು ಅದರೊಳಗಿನ ಜೀವಸಂಕುಲಗಳ ರಕ್ಷಣೆಗಾಗಿ ಜಿಮ್ ಕಾರ್ಬೆಟ್ ಕೈಗೊಂಡ ಅಭಿಯಾನ ಅವನಿಗೆ ನಿರೀಕ್ಷೆಗೂ ಮೀರಿ ಯಶಸ್ಸನ್ನು ತಂದು ಕೊಟ್ಟಿತು. ಭಾರತದ ಬ್ರಿಟಿಷ್ ಸರ್ಕಾರ, ಅರಣ್ಯ ಕುರಿತಂತೆ ಅರಣ್ಯಾಧಿಕಾರಿಗಳಿಗೆ ತರಬೇತಿ ಮತ್ತು ಮಾಹಿತಿ ನೀಡಲು ಕಾರ್ಬೆಟ್‌ನನ್ನು ನಿಯೋಜಿಸಿತು. 1930ರ ದಶಕದಲ್ಲಿ ಭಾರತದಲ್ಲಿ ಸಾಮಾನ್ಯ ಹುದ್ದೆಗಳನ್ನು ಹೊರತು ಪಡಿಸಿದರೆ, ಮುಖ್ಯವಾದ ಹುದ್ದೆಗಳು ಬ್ರಿಟಿಷರ ಅಧೀನದಲ್ಲಿದ್ದವು. ಇಲ್ಲಿ ಅರಣ್ಯಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಬಹುತೇಕ ಬ್ರಿಟಿಷ್ ಅಧಿಕಾರಿಗಳು ಭಾರತದ ಅರಣ್ಯವೆಂದರೆ, ಬೆಚ್ಚಿಬೀಳುತ್ತಿದ್ದರು. ಶೀತಪ್ರದೇಶವಾದ ಇಂಗ್ಲೆಂಡ್‌ನಿಂದ ಬಂದ ಅವರು, ಭಾರತದ ಉಷ್ಣವಲಯದ ಕಾಡುಗಳ ಸಸ್ಯ ವೈವಿಧ್ಯ, ತರಾವರಿ ಹಾವುಗಳು, ವಿಷಜಂತುಗಳು, ಅಪಾಯಕಾರಿ ಪ್ರಾಣಿಗಳು ಇವುಗಳಿಂದ ಭಯ ಭೀತರಾಗುತ್ತಿದ್ದರು.

ಹೀಗೆ ಅರಣ್ಯ ಮತ್ತು ತನ್ನ ಸುತ್ತಮುತ್ತಲಿನ ಪರಿಸರದ ಸಂರಕ್ಷಣೆಗೆ ಪಣತೊಟ್ಟು ದುಡಿಯುತ್ತಿದ್ದಂತೆ ಕಾರ್ಬೆಟ್ ಅರವತ್ತನೇ ವರ್ಷಕ್ಕೆ ಕಾಲಿಟ್ಟ. ಇದೇ ವೇಳೆಗೆ 85 ವರ್ಷ ದಾಟಿದ ಅವನ ಹಿರಿಯ ಮಲಸಹೋದರಿ ಡೊಯಲ್ ವೃದ್ಧಾಪ್ಯದ ಕಾರಣದಿಂದ ಮಾನಸಿಕ ಸಮತೋಲನ ಕಳೆದುಕೊಂಡಳು. ಅವಳನ್ನು ನಿಯಂತ್ರಿಸುವುದು ಕಾರ್ಬೆಟ್ ಮತ್ತು ಅವನ ಅಕ್ಕ ಮ್ಯಾಗಿಗೆ ಕಷ್ಟವಾಯಿತು. ಡೊಯಲ್ ಕೆಲವೊಮ್ಮೆ ತೊಟ್ಟಿದ್ದ ಬಟ್ಟೆಯನ್ನು ಕಳಚಿ ಮನೆಯ ಗೇಟ್ ದಾಟಿಬಿಡುತ್ತಿದ್ದಳು. ಇದು ಕಾರ್ಬೆಟ್‌ಗೆ ತೀರಾ ಮುಜುಗರವನ್ನುಂಟು ಮಾಡುತ್ತಿತ್ತು. ಅವಳನ್ನು ನಿಯಂತ್ರಿಸಲು. ಭಾರತೀಯ ಮೂಲದ ನಾಲ್ಕು ಸೇವಕಿಯರನ್ನು ನೇಮಕಮಾಡಿಕೊಂಡಿದ್ದ.  ಡೊಯಲ್ ಒಂದು ವರ್ಷ ಕಾಯಿಲೆಯಿಂದ ಬಳಲಿ ನಂತರ ಅಸುನೀಗಿದಾಗ, ಅಕ್ಕ ತಮ್ಮ ಇಬ್ಬರೂ, ಅವಳ ಸಾವಿನ ಸಂಕಟದ ನಡುವೆಯೂ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಡೊಯಲ್ ಸಾವಿನೊಂದಿಗೆ 1857ರ ಸಿಪಾಯಿ ದಂಗೆಗೆ ಸಾಕ್ಷಿಯಾಗಿದ್ದ ಕಡೆಯ ಜೀವವೊಂದು ಕಳಚಿಬಿದ್ದಂತಾಯಿತು. ಕಾರ್ಬೆಟ್‌ನ ತಾಯಿ ಮೇರಿ ಮೊದಲ ಪತಿಯಿಂದ ಪಡೆದಿದ್ದ ಮೂವರು ಮಕ್ಕಳಲ್ಲಿ ಡೊಯಲ್ ಕೂಡ ಒಬ್ಬಳಾಗಿದ್ದಳು. ಮೇರಿಯ ಮೊದಲ ಪತಿ ಬ್ರಿಟಿಷ್ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಆಗ್ರಾದಲ್ಲಿ ನಡೆದ 1857ರ ಸಿಪಾಯಿ ದಂಗೆ  ಹೋರಾಟದಲ್ಲಿ ಭಾರತೀಯ ಸಿಪಾಯಿಗಳ ಕೈಯಲ್ಲಿ ಹತ್ಯೆಯಾದಾಗ, ಬಾಲಕಿಯಾಗಿದ್ದ ಡೊಯಲ್ ತಾಯಿಯ ಜೊತೆ ನೈನಿತಾಲ್ ಗಿರಿಧಾಮ ಸೇರಿಕೊಂಡಿದ್ದಳು. ಕಾರ್ಬೆಟ್‌ನ ಪಾಲಿಗೆ ಹಿರಿಯಕ್ಕನಂತೆ ಇದ್ದ ಈಕೆ ಜೀವನ ಪೂರ್ತಿ ಅವಿವಾಹಿತಳಾಗಿ ಉಳಿದಳು.

ಡೊಯಲ್‌ನ ಸಾವಿನ ನಂತರ ಕಾರ್ಬೆಟ್ ಕುಟುಂಬದಲ್ಲಿ ಮ್ಯಾಗಿ ಮತ್ತು ಕಾರ್ಬೆಟ್ ಮಾತ್ರ ಉಳಿದುಕೊಂಡರು. ಉಳಿದ ಸಹೋದರ ಸಹೋದರಿಯರು ಉದ್ಯೋಗ ನಿಮಿತ್ತ ಇಂಗ್ಲೆಂಡ್, ಆಫ್ರಿಕಾ, ಕೀನ್ಯಾ ಮುಂತಾದ ಕಡೆ ವಲಸೆ ಹೊರಟು ಅಂತಿಮವಾಗಿ ಅಲ್ಲಿಯೇ ನೆಲೆ ನಿಂತರು. ಕಾರ್ಬೆಟ್‌ನಂತೆ ಮ್ಯಾಗಿ ಕೂಡ ಸರಳ ಜೀವನ ಮೈಗೂಡಿಸಿಕೊಂಡಿದ್ದಳು. ಸರಳವಾದ ಉಡುಪುಗಳನ್ನು ಧರಿಸುತ್ತಿದ್ದಳು. ವಿಶೇಷ ಕಾರ್ಯಕ್ರಮಗಳು ಇಲ್ಲವೇ ಔತಣಕೂಟಗಳಿಗೆ ಮಾತ್ರ ಒಳ್ಳೆಯ ಉಡುಪು ಧರಿಸುತ್ತಿದ್ದಳು. ಮನೆಯಲ್ಲಿ ಸೇವಕ, ಸೇವಕಿಯರು ಇದ್ದ ಕಾರಣ ಆಕೆಗೆ ಮನೆಗೆಲಸದ ಒತ್ತಡಗಳು ಇರಲಿಲ್ಲ. ಮ್ಯಾಗಿ ಕೂಡ ಕಾರ್ಬೆಟ್ ನಂತೆ ಹಿಂದಿ ಸೇರಿದಂತೆ ಸ್ಥಳಿಯ ಭಾಷೆಗಳನ್ನು ಅಸ್ಖಲಿತವಾಗಿ ಮಾತನಾಡುವುದನ್ನ ಕಲಿತಿದ್ದಳು. ಇದು ಆಕೆಗೆ ಸ್ಥಳೀಯ ಸೇವಕರೊಂದಿಗೆ ನಿಕಟ ಸಂಬಂಧ ಹೊಂದಲು ಸಾಧ್ಯವಾಯಿತು. ಮ್ಯಾಗಿಯ ಬದುಕು ತಮ್ಮನ ಹಾಗೆ ಸರಳತೆಯಿಂದ ಕೂಡಿದ್ದರೂ, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಳು. ಮತ್ತು ಶುದ್ಧವಾದ ಗಾಳಿ ಬೆಳಕು ಸದಾ ಮನೆಯೊಳಗೆ ಇರುವಂತೆ ನೋಡಿಕೊಳ್ಳುತ್ತಿದ್ದಳು. ಅದರಂತೆ ಮನೆಯನ್ನು ಆಕೆ ಸದಾ ಸುಸ್ಥಿತಿಯಲ್ಲಿ ಇಟ್ಟಿದ್ದ ಕಾರಣ. ಅವಳು ಮತ್ತು ಕಾರ್ಬೆಟ್ ವಾಸಿಸುತ್ತಿದ್ದ ಗಾರ್ನಿಹೌಸ್ ಬಂಗಲೆ ನೈನಿತಾಲ್ ಪಟ್ಟಣದಲ್ಲಿ ಹೆಸರುವಾಸಿಯಾಗಿತ್ತು.

ಆ ವೇಳೆಗಾಗಲೇ ನೈನಿತಾಲ್ ಪಟ್ಟಣಕ್ಕೆ ವಿದ್ಯುತ್ ಬಂದಿದ್ದರೂ ಕೂಡ ಯಾವುದೇ ಆಡಂಬರದ ಬದುಕು ಅವರದಾಗಿರಲಿಲ್ಲ. ಮನೆಯಲ್ಲಿ ಸಾಕಿಕೊಂಡಿದ್ದ, ಆನೆ, ಕುದುರೆ, ನಾಯಿ, ಬಗೆಬಗೆಯ ಪಕ್ಷಿಗಳು ಇವುಗಳ ಮೇಲ್ವಿಚಾರಣೆಗೆ ಸೇವಕರು, ಅವರ ಕುಟುಂಬಗಳು. ಎಲ್ಲರೂ ಸೇರಿ ಕಾರ್ಬೆಟ್ ಕುಟುಂಬ ಒಂದು ಮಿನಿ ಭಾರತವಿದ್ದಂತೆ ಇತ್ತು. ಸೇವಕರ ಮಕ್ಕಳ ಶಾಲಾ ಶುಲ್ಕ, ಅವರ ಬಟ್ಟೆ, ಪುಸ್ತಕ ಇವುಗಳ ಖರ್ಚನ್ನು ಸ್ವತಃ ಕಾರ್ಬೆಟ್ ಭರಿಸುತ್ತಿದ್ದ. ಮಳೆಗಾಲ ಮತ್ತು ಚಳಿಗಾಲದಲ್ಲಿ ಯಾರಾದರೂ ಕಾಯಿಲೆ ಬಿದ್ದರೆ, ಮನೆಯಲ್ಲಿ ಇರುತ್ತಿದ್ದ ಔಷಧಿಗಳ ಜೊತೆ, ರೋಗಿಗಳನ್ನು ತಾಯಿಯಂತೆ ಉಪಚರಿಸುವ ಗುಣವನ್ನು ಸಹೋದರಿ ಮ್ಯಾಗಿ ಮೈಗೂಡಿಸಿಕೊಂಡಿದ್ದಳು.

ಕಾರ್ಬೆಟ್ ರೂಢಿಸಿಕೊಂಡಿದ್ದ ಪರಿಸರ ರಕ್ಷಣೆಯ ಗುಣದಿಂದಾಗಿ ಅವನಿಗೆ ದೂರದ ದೆಹಲಿಯ ವೈಸ್‌ರಾಯ್ ಕುಟುಂಬವೂ ಸೇರಿದಂತೆ, ಹಲವು ಉನ್ನತ ಅಧಿಕಾರಿಗಳ ಕುಟುಂಬದಿಂದ ಔತಣ ಕೂಟಕ್ಕೆ ಆಹ್ವಾನ ಬರುತ್ತಿತ್ತು. ಅಂತಹ ಸಂದರ್ಭದಲ್ಲಿ ತನ್ನ ಅಕ್ಕ ಮ್ಯಾಗಿಯನ್ನು ಕಾರ್ಬೆಟ್ ಜೊತೆಯಲ್ಲಿ ದೆಹಲಿಗೆ ಕರೆದೊಯ್ಯುತ್ತಿದ್ದ. ಔತಣಕೂಟ ತಡರಾತ್ರಿವರೆಗೂ ನಡೆಯುತ್ತಿತ್ತು. ಜಿಮ್ ಕಾರ್ಬೆಟ್ ಅಲ್ಲಿ ಶಿಕಾರಿ ಕಥೆಗಳನ್ನು, ಹಾಗೂ ಅವನು ಬೇಟೆಯಾಡಿದ ನರಹಂತಕ ಚಿರತೆಗಳ ಕಥೆಯನ್ನು ರೋಮಾಂಚಕಾರಿಯಾಗಿ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಿದ್ದ. ಅವನ ಸಾಹಸದ ಕಥೆಗಳನ್ನು ಇಡೀ ಶರೀರವನ್ನು ಕಿವಿಯಾಗಿಸಿಕೊಂಡು ಅಧಿಕಾರಿಗಳ ಕುಟುಂಬದ ಸದಸ್ಯರು ಆಲಿಸುತ್ತಿದ್ದರು. ಇಂತಹ ಅದ್ಬುತ ರೋಮಾಂಚಕಾರಿ ಕಥನಗಳನ್ನು ನೀವು ಏಕೆ ಬರೆದು ದಾಖಲಿಸಬಾರದು? ಎಂಬ ಪ್ರಶ್ನೆ ಅಧಿಕಾರಿಯೋರ್ವನ ಪತ್ನಿಯಿಂದ ಬಂದಾಗ, ಆಕ್ಷಣಕ್ಕೆ  ಕಾರ್ಬೆಟ್‌ಗೆ ಹೌದೆನಿಸಿತು. ಹೌದು ಬರೆಯಲೇ ಬೇಕು. ಬರೆಯುತ್ತೀನಿ ಎಂದು ಆಕೆ ಆಶ್ವಾಸನೆ ನೀಡಿದ. ಹಾಗಾಗಿ ಕಾರ್ಬೆಟ್ ಒಂದು ಅನಿರೀಕ್ಷಿತ ಸಂದರ್ಭದಲ್ಲಿ ಅನುಭವಗಳನ್ನು ದಾಖಲಿಸಲು ನಿರ್ಧರಿಸಿದ.

1931ರ “ದ ಹಂಟರ್ ಆನ್ಯುಯಲ್” ಎಂಬ ಪತ್ರಿಕೆಯಲ್ಲಿ ಕಾರ್ಬೆಟ್ ’ಪಿಪಾಲ್ ಪಾನಿ ಟೈಗರ್’ ಎಂಬ ಹುಲಿಯೊಂದನ್ನು ಬೇಟೆಯಾಡಿದ ಪ್ರಸಂಗವನ್ನು ಪ್ರಥಮವಾಗಿ ಬರೆದು ಪ್ರಕಟಿಸಿದ. ಈ ರೋಚಕ ಅನುಭವಕ್ಕೆ ಪೂರಕವಾಗಿ ಪತ್ರಿಕೆಯ ಸಂಪಾದಕ ಶಿಕಾರಿ ಕುರಿತಂತೆ ಅರ್ಥಪೂರ್ಣ ಲೇಖನವೊಂದನ್ನು ಸಹ ಬರೆದಿದ್ದ. ಇದರಿಂದಾಗಿ ಕಾರ್ಬೆಟ್‌ನ ಮೊದಲ ಬರಹಕ್ಕೆ ಓದುಗರಿಂದ ಉತ್ತಮ ಪ್ರತಿಕ್ರಿಯೆ ದೊರೆಯಿತು. ಜೊತೆಗೆ ಅವನಿಗ ಬರವಣಿಗೆ ಕುರಿತಾಗಿ ಆತ್ಮವಿಶ್ವಾಸ ಹೆಚ್ಚಿಸಿತು. ನಂತರ ನೈನಿತಾಲ್ ಗಿರಿಧಾಮದಲ್ಲಿ ಪ್ರಕಟವಾಗುತ್ತಿದ್ದ “ನೈನಿತಾಲ್ ರಿವ್ಯೂ ಆಪ್ ದ ವೀಕ್ಲಿ” ಪತ್ರಿಕೆಗೆ ಪರಿಸರ ರಕ್ಷಣೆ ಮತ್ತು ಕುಮಾವನ್ ಪ್ರಾಂತ್ಯದ ಅರಣ್ಯ ಮತ್ತು ವನ್ಯ ಜೀವಿಗಳ ರಕ್ಷಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನಿರಂತರವಾಗಿ ಲೇಖನಗಳನ್ನು ಬರೆಯಲು ಆರಂಭಿಸಿದ. ಈ ಪತ್ರಿಕೆ ನೈನಿತಾಲ್ ಗಿರಿಧಾಮದ ಆಂಗ್ಲ ಸಮುದಾಯದಲ್ಲಿ ಜನಪ್ರಯತೆ ಪಡೆದಿತ್ತು. ಅಲ್ಲದೆ, ಬೇಸಿಗೆಯಲ್ಲಿ ನೈನಿತಾಲ್‌ಗೆ ಬರುತ್ತಿದ್ದ ದೆಹಲಿಯ ಬ್ರಿಟಿಷ್ ಅಧಿಕಾರಿಗಳು ಈ ಪತ್ರಿಕಗೆ ಚಂದದಾರರಾಗಿದ್ದರು. ಕಾರ್ಬೆಟ್ ಪತ್ರಿಕೆಯಲ್ಲಿ ಏನೇ ಬರೆದರೂ ಅದು ದೂರದ ದೆಹಲಿಗೆ ತಲುಪುತಿತ್ತು.

ಈ ವೇಳೆಯಲ್ಲಿ ಭಾರತ ಉಪಖಂಡದ ಗೌರ್ನರ್ ಆಗಿದ್ದ ಸರ್ ಮಾಲ್ಕಮ್‌ ಹೈಲಿ ಎಂಬಾತ ಭಾರತದ ಅರಣ್ಯಗಳನ್ನು ಸಂರಕ್ಷಿಸುವ ಕುರಿತಂತೆ ಗಂಭೀರವಾಗಿ ಆಲೋಚನೆ ಮಾಡಿ, ಜಿಮ್ ಕಾರ್ಬೆಟ್ ಮತ್ತು ಆರ್ಕ್ಷ್‌ಪರ್ಡ್ ವಿ.ವಿ.ಯ ಕಾನೂನು ಪದವೀಧರ ಹಸನ್ ಅಬಿದ್ ಜಪ್ರಿ ಇವರನ್ನು ಭಾರತೀಯ ವನ್ಯ ಮೃಗ ರಕ್ಷಣೆ ಕುರಿತ ಇಲಾಖೆಗೆ ಗೌರವ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಿದ. ಅಬಿದ್ ಜಪ್ರಿ ಕಾನೂನು ಪದವೀಧರನಾಗಿದ್ದ. ಕಾರ್ಬೆಟ್ ಅರಣ್ಯ ಮತ್ತು ವನ್ಯ ಜೀವಿಗಳ ತಜ್ಞನಾದುದರ ಫಲವಾಗಿ ಈ ಇಬ್ಬರೂ ತಜ್ಞರು ವನ್ಯ ಮೃಗ ರಕ್ಷಣೆಗೆ  ಕಾನೂನು ಸೇರಿದಂತೆ ಹಲವಾರು ಅರ್ಥಪೂರ್ಣ ಕಾರ್ಯಕ್ರಮ ರೂಪಿಸಿದರು.

‘ಇಂಡಿಯನ್ ವೈಲ್ಡ್ ಲೈಪ್’ ಹೆಸರಿನ ಪತ್ರಿಕೆಯೊಂದನ್ನು ರೂಪಿಸಿ, ಅಬಿದ್ ಜಪ್ರಿ ಸಂಪಾದಕತ್ವದಲ್ಲಿ ಪ್ರಕಟಿಸಲು ಆರಂಭಿಸಿದರು. ಈ ಪತ್ರಿಕೆಯಲ್ಲಿ ಭಾರತದ ಉಷ್ಣವಲಯದ ಅರಣ್ಯ ಮತ್ತು ಅವುಗಳ ವೈಶಿಷ್ಟ್ಯ, ಅಲ್ಲಿ ವಾಸಿಸುವ ಪ್ರಾಣಿಗಳ ವೈವಿಧ್ಯತೆ ಮತ್ತು ಅವುಗಳ ಜೀವನ ಚಕ್ರ ಹೀಗೆ ಎಲ್ಲಾ ಮಾಹಿತಿಗಳು ಇರುತ್ತಿದ್ದವು. ಇದು ಅರಣ್ಯ ಇಲಾಖೆಯ ಅಧಿಕಾರಿಗಳ ಪಾಲಿಗೆ ಮಾರ್ಗದರ್ಶಿಯಂತಿತ್ತು.
ಗೌರ್ನರ್ ಸರ್ ಮಾಲ್ಕಮ್ ಹೈಲಿ ಕೂಡ ಪರಿಸರದ ಬಗ್ಗೆ ಅಪಾರ ಕಾಳಜಿಯುಳ್ಳವನಾಗಿದ್ದ. ಇದರ ಸದುಪಯೋಗ ಪಡಿಸಿಕೊಂಡ ಕಾರ್ಬೆಟ್, ಕಲದೊಂಗಿ ಮತ್ತು ಚೋಟಿ ಹಲ್ದಾನಿಗೆ ಸನೀಹದಲ್ಲಿ ಇದ್ದ ಸಾವಿರಾರು ಎಕರೆ ಅರಣ್ಯ ಪ್ರದೇಶವನ್ನು ಅಭಯಾರಣ್ಯವಾಗಿ ಮಾರ್ಪಡಿಸುವ ಪ್ರಸ್ತಾಪವನ್ನು ಗೌರ್ನರ್ ಮುಂದಿಟ್ಟ. ಭಾರತದಂತಹ ಸೀಮಿತ ಅರಣ್ಯ ಪ್ರದೇಶಗಳಲ್ಲಿ ನಿರಂತರವಾಗಿ ಪ್ರಾಣಿಗಳನ್ನು ಬೇಟೆಯಾಡುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಕಾರ್ಬೆಟ್ ಇಂತಹ ಕೃತ್ಯಗಳಿಂದ ಅರಣ್ಯದಲ್ಲಿ ವನ್ಯಮೃಗಗಳ ಸಮತೋಲನ ಕಾಯ್ದುಕೊಳ್ಳುವುದು ಕಷ್ಟ ಎಂಬ ವಿಷಯವನ್ನು ಮಾಲ್ಕಮ್ ಹೈಲಿ ಮನವರಿಕೆ ಮಾಡಿಕೊಟ್ಟ. ಉತ್ತರ ಭಾರತದ ಅರಣ್ಯಗಳಲ್ಲಿ ಮೋಜಿಗಾಗಿ ಹಲವಾರು ಸಂಸ್ಥಾನಗಳ ಮಹಾರಾಜರು ಮತ್ತು ಬ್ರಿಟಿಷ್ ಅಧಿಕಾರಿಗಳು ಬೇಟೆಯಾಡುತ್ತಿರುವುದನ್ನು ಕಂಡು ಸ್ವತಃ ಅರಣ್ಯಾಧಿಕಾರಿಗಳ ಜಗಳವಾಡಿ ಮನಸ್ತಾಪ ಕಟ್ಟಿಕೊಂಡಿದ್ದ ಜಿಮ್ ಕಾರ್ಬೆಟ್‌ಗೆ, ಭಾರತದಲ್ಲಿ ಆಯ್ದ ಕೆಲವು ಅರಣ್ಯ ಪ್ರದೇಶಗಳನ್ನು ಕನಿಷ್ಟ ಐದು ವರ್ಷಗಳ “ಕಾಲ ಅಭಯಾರಣ್ಯೆ” ಎಂದು ಘೋಷಿಸಿ ಪ್ರಾಣಿಗಳ ಬೇಟೆಯನ್ನು ನಿಷೇಧಿಸಬೇಕು ಎಂಬುದು ಅವನ  ಮಹದಾಸೆಯಿತ್ತು.

ಆಫ್ರಿಕಾದ ಅರಣ್ಯಗಳಲ್ಲಿ ಬೇಟೆಯಾಡಿ ಅನುಭವವಿದ್ದ ಕಾರ್ಬೆಟ್‌ಗೆ ಅಲ್ಲಿನ ಲಕ್ಷಾಂತರ ಹೆಕ್ಟೇರ್ ಪ್ರದೇಶದ ವಿಸ್ತೀರ್ಣದ ಬಗ್ಗೆ ಮತ್ತು ಭಾರತದ ಸೀಮಿತ ಅರಣ್ಯ ಪ್ರದೇಶದ ವೈವಿಧ್ಯಮಯ ಸಸ್ಯ ಸಂಪತ್ತು, ವನ್ಯ ಜೀವಿಗಳ ಕುರಿತು ಮಾಹಿತಿ ಇತ್ತು. ಇದನ್ನು ಗೌರ್ನರ್‌ಗೆ ಮನವರಿಕೆ ಮಾಡಿಕೊಟ್ಟ. ಇದರ ಫಲವಾಗಿ ಕಲದೊಂಗಿ ಸಮೀಪದ ಮುನ್ನೂರು ಚದುರ ಕಿಲೋಮೀಟರ್ ಅರಣ್ಯ ಪ್ರದೇಶವನ್ನು ಭಾರತ ಸರ್ಕಾರ 1934ರಲ್ಲಿ ಅಭಯಾರಣ್ಯ ಎಂದು ಅಧಿಕೃತವಾಗಿ ಘೋಷಿಸಿತು. ಈ ಅರಣ್ಯದ ನಡುವೆ ರಾಮಗಂಗಾ ನದಿ ಹರಿಯುತ್ತಿದ್ದು, ಅರಣ್ಯಕ್ಕೆ ಹೊಂದಿಕೊಂಡಂತೆ ಇರುವ ಊರಿಗೆ ರಾಮ್‌ನಗರ್ ಎಂಬ ಹೆಸರು ಬಂದಿದೆ. ಈಗ ಪಟ್ಟಣವಾಗಿ ಬೆಳೆದಿರುವ ರಾಮ್‌ನಗರ್‌ನಲ್ಲಿ ಅಭಯಾರಣ್ಯದ ಉಸ್ತುವಾರಿ ನೋಡಿಕೊಳ್ಳಲು ಅರಣ್ಯ ಕಚೇರಿಯನ್ನು ತೆರೆಯಲಾಗಿದೆ.

1974ರಲ್ಲಿ ರಾಮಗಂಗಾ ನದಿಗೆ ಅಣೆಕಟ್ಟು ನಿರ್ಮಿಸಿದರ ಫಲವಾಗಿ 54 ಹೆಕ್ಟೇರ್ ಅರಣ್ಯ ಪ್ರದೇಶ ಹಿನ್ನಿರಿನಲ್ಲಿ ಮುಳುಗಡೆಯಾಯಿತು. ಈ ನಷ್ಟವನ್ನು ಸರಿದೂಗಿಸಲು ಭಾರತ ಸರ್ಕಾರ ಮತ್ತೇ ಇನ್ನೂರು ಹೆಕ್ಟೇರ್ ಅರಣ್ಯ ಪ್ರದೇಶವನ್ನು ಅಭಯಾರಣ್ಯಕ್ಕೆ ಸೇರ್ಪಡೆ ಮಾಡಿತು. 1955ರಲ್ಲಿ ಜಿಮ್ ಕಾರ್ಬೆಟ್ ನಿಧನ ಹೊಂದಿದ ನಂತರ 1957ರಲ್ಲಿ ಹುಲಿಗಳ ರಕ್ಷಿತ ತಾಣವಾಗಿದ್ದ ಈ ಪ್ರದೇಶವನ್ನು ಜಿಮ್ ಕಾರ್ಬೆಟ್ ಅಭಯಾರಣ್ಯ ಎಂದು ಭಾರತ ಸರ್ಕಾರ ನಾಮಕರಣ ಮಾಡಿದೆ. ವಾಸ್ತವವಾಗಿ ಜಿಮ್ ಕಾರ್ಬೆಟ್‌ಗಿಂತ ಮೊದಲು ಈ ಪ್ರಾಂತ್ಯದಲ್ಲಿ ಅರಣ್ಯಾಧಿಕಾರಿಗಳಾಗಿದ್ದ ಇ.ಆರ್.ಸ್ಟೀವನ್ ಮತ್ತು ಇ.ಎ.ಸ್ಮಿತೀಸ್ ಎಂಬುವರು ಈ ಅರಣ್ಯ ಪ್ರದೇಶವನ್ನು ಆಭಯಾರಣ್ಯ ಎಂದು ಘೋಷಿಸಲು ಸರ್ಕಾರಕ್ಕೆ 1924 ಮತ್ತು 1927ರಲ್ಲಿ ಶಿಫಾರಸ್ಸು ಮಾಡಿದ್ದರು. ಆದರೆ, ಕಾರ್ಬೆಟ್‌ನ ಆತ್ಮೀಯ ಗೆಳೆಯ ಹಾಗೂ ತಾಂಜೇನಿಯಾದ ಕೃಷಿ ತೋಟದ ಪಾಲುದಾರ, ವಿಂದಮ್ ಕುಮಾವನ್ ಪ್ರಾಂತ್ಯದ ಜಿಲ್ಲಾಧಿಕಾರಿಯಾಗಿದ್ದ ವೇಳೆ ಇವರ ಶಿಫಾರಸ್ಸುಗಳನ್ನ ತಿರಸ್ಕರಿಸಿದ್ದನು. ಏಕೆಂದರೆ, ಸ್ವತಃ ಬೇಟೆಗಾರನಾಗಿದ್ದ ವಿಂದಮ್‌ಗೆ ವನ್ಯಮೃಗಗಳ ಶಿಕಾರಿ ಎಂಬುದು ಹವ್ಯಾಸವಾಗಿರದೆ ವ್ಯಸನವಾಗಿತ್ತು. ಅಂತಿಮವಾಗಿ ಆ ಇಬ್ಬರು ಅಧಿಕಾರಿಗಳ ಕನಸು ಕಾರ್ಬೆಟ್ ಮೂಲಕ ನೆನಸಾಯಿತು.

ಈಗ ಉತ್ತರಾಂಚಲ ರಾಜ್ಯಕ್ಕೆ ಸೇರಿರುವ ಜಿಮ್ ಕಾರ್ಬೆಟ್ ಅಭಯಾರಣ್ಯಕ್ಕೆ ಪ್ರತಿದಿನ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ರಾಮ್‌ನಗರ್ ಪಟ್ಟಣದಲ್ಲಿರುವ ಅರಣ್ಯ ಕಚೇರಿಯಲ್ಲಿ ಅನುಮತಿ ಪಡೆದು ಇಲಾಖೆ ನೀಡುವ ವಾಹನವನ್ನು ಬಾಡಿಗೆ ಪಡೆದು ಅರಣ್ಯವನ್ನು ವೀಕ್ಷಣೆ ಮಾಡಬಹುದು. ಅರಣ್ಯ ಸಫಾರಿಗೆ ನಮ್ಮ ಜೊತೆಯಲ್ಲಿ ಒಬ್ಬ ಅರಣ್ಯ ರಕ್ಷಕನನ್ನು ಕಡ್ಡಾಯವಾಗಿ ಕರೆದುಕೊಂಡು ಹೋಗಬೇಕು. ಐದು ಜನರ ವಾಹನ ಶುಲ್ಕ 1,200 ರೂಪಾಯಿ, ಅರಣ್ಯ ರಕ್ಷಕನ ಶುಲ್ಕ 300 ರೂ. ಮತ್ತು ಅರಣ್ಯ ಭೇಟಿ ಶುಲ್ಕ 250 ರೂ.ಗಳನ್ನು ಪ್ರವಾಸಿಗರಿಂದ ವಸೂಲಿ ಮಾಡಲಾಗುತ್ತಿದೆ. ಯಾವುದೇ ಆಹಾರ, ಬೆಂಕಿಪೊಟ್ಟಣ, ಸಿಗರೇಟ್  ಮುಂತಾದವುಗಳಿಗೆ ನಿಷೇಧ ಹೇರಲಾಗಿದೆ. ಅಲ್ಲಿನ ಅರಣ್ಯ ಇಲಾಖೆ ಪ್ರವಾಸಿಗರಿಂದ ಅಪಾರ ಪ್ರಮಾಣದಲ್ಲಿ ಹಣ ವಸೂಲಿ ಮಾಡುತ್ತಿದ್ದರೂ ಕೂಡ, ಅಭಯಾರಣ್ಯ ಪ್ರದೇಶವನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡುವಲ್ಲಿ ಸೋತಿದೆ. ಅಲ್ಲಿನ ಅಧಿಕಾರಿಗಳು, ಸಫಾರಿಗೆ ಬಳಸುವ ಖಾಸಾಗಿ ವಾಹನಗಳ ಮಾಲೀಕರ ಜೊತೆ ಕೈ ಜೋಡಿಸಿ, ಪ್ರವಾಸಿಗರಿಂದ ಹಣ ಸುಲಿಯುವುದರಲ್ಲಿ ಮಾತ್ರ ನಿಸ್ಸೀಮರಾಗಿದ್ದಾರೆ. ಇದು ಜಿಮ್ ಕಾರ್ಬೆಟ್‌ನಂತಹ ಅಪ್ರತಿಮ ವ್ಯಕ್ತಿಗೆ ಅಲ್ಲಿನ ಸರ್ಕಾರ ಮಾಡುತ್ತಿರುವ ಅಪಮಾನವಲ್ಲದೆ, ಬೇರೇನೂ ಅಲ್ಲ.

                                                                              (ಮುಂದುವರಿಯುವುದು)

Leave a Reply

Your email address will not be published. Required fields are marked *