‘ಪ್ಲಾಂಟರ್ಸ್’ ಗಾಳಕ್ಕೆ ಸಿಕ್ಕಿ ಬೀಳುವ “ಪತ್ರಕರ್ತ” ಮೀನುಗಳು!

– ಶಿವರಾಮ್ ಕೆಳಗೋಟೆ

ಹಲವರಿಗೆ ನೆನಪಿರಬಹುದು, ಈಗ್ಗೆ ನಾಲ್ಕು ವರ್ಷಗಳ ಹಿಂದೆ ಜರ್ಮನ್ ನಾಜಿ ಯುದ್ಧ ಆರೋಪಿ ಜೊಹಾನ್ ಬಾಷ್ (88) ಎಂಬಾತ ಗೋವಾ – ಕರ್ನಾಟಕ ಗಡಿ ಪ್ರದೇಶ (ಖಾನಾಪುರ ಕಾಡುಗಳಲ್ಲಿ) ಪೊಲೀಸರಿಗೆ ಸಿಕ್ಕುಬಿದ್ದಿದ್ದಾನೆ ಎಂಬ ಸುದ್ದಿ ಹಬ್ಬಿತ್ತು. ನಾಡಿನ ಬಹುತೇಕ ಪತ್ರಿಕೆಗಳು ಆ ಸುದ್ದಿಯನ್ನು ಮುಖಪುಟದಲ್ಲಿ ಅಚ್ಚುಹಾಕಿದವು. ಸುದ್ದಿಗೆ ಪೂರಕವಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ಅಭಿಪ್ರಯಾಗಳನ್ನು ಪತ್ರಕರ್ತರು ಪಡೆದಿದ್ದರು. ಅಂತಹದೊಂದು ಸುದ್ದಿಯನ್ನು ಈ-ಮೇಲ್ ಮೂಲಕ ಪತ್ರಿಕಾಲಯಗಳಿಗೆ ತಲುಪಿಸಿದ್ದು ಪೆರುಸ್ ನಾರ್ಪ್ (Perus Narkp) ಎಂಬ ಹೆಸರಿನ ತಂಡ. ಆ ಸುದ್ದಿಯನ್ನು ಕಳುಹಿಸಿ, ಮಾರನೆಯ ದಿನ ಪತ್ರಿಕೆಯಲ್ಲಿ ಪ್ರಕಟವಾದದ್ದನ್ನು ನೋಡಿ ಮೊದಲು ಎಂಜಾಯ್ ಮಾಡಿದ್ದು ಅವರೇ. ಹೀಗೊಂದು ಕೀಟಲೆ ಮಾಡಲೆಂದೇ ಆ ಗ್ರೂಪ್ ರೂಪ ಪಡೆದಿತ್ತು. ಅವರ ಹೆಸರಿನಲ್ಲಿಯೇ ಅವರ ಉದ್ದೇಶ ಸ್ಪಷ್ಟವಿತ್ತು – Super Prank (ಸಕ್ಕತ್ ಕೀಟಲೆ). ಡೆಕ್ಕನ್ ಹೆರಾಲ್ಡ್, ಟೆಲಿಗ್ರಾಫ್ ಸೇರಿದಂತೆ ಅನೇಕ ಪತ್ರಿಕೆಗಳು ಮುಖಪುಟದಲ್ಲಿ ಸುದ್ದಿ ಪ್ರಕಟಿಸಿದ್ದವು. ಕನ್ನಡ ಪತ್ರಿಕೆಗಳೂ ಸುದ್ದಿಯನ್ನು ‘ಮಿಸ್’ ಮಾಡಲಿಲ್ಲ.

ಸುದ್ದಿ ಪ್ರಕಟವಾದ ನಂತರ ಪೆರುಸ್ ನಾರ್ಪ್ ತಂಡ ತಮ್ಮ ‘ಕೀಟಲೆ’ ಯಶಸ್ವಿಯಾದುದರ ಬಗ್ಗೆ ಮತ್ತೊಂದು ಮೇಲ್ ಕಳುಹಿಸಿ ಎಲ್ಲಾ ಸಂಪಾದಕರ, ವರದಿಗಾರರರನ್ನು ಗೇಲಿ ಮಾಡಿತು. ಸುದ್ದಿ ಬಂದಾಕ್ಷಣ ಕ್ರಾಸ್ ಚೆಕ್ ಮಾಡದೆ ಪ್ರಕಟಿಸುವ ಪತ್ರಿಕೆಗಳ ಧೋರಣೆಯನ್ನು ಅವರು ಟೀಕಿಸಿದ್ದರು. ಈ ಪ್ರಕರಣ ಆದದ್ದು 2008 ರ ಜೂನ್ 30 ಮತ್ತು ಜುಲೈ 1 ರ ಹೊತ್ತಿಗೆ.

ಜುಲೈ 1 ಕನ್ನಡಿಗರ ಪಾಲಿಗೆ ‘ಪತ್ರಿಕಾ ದಿನ’. ಪೆರುಸ್ ನಾರ್ಪ್ ಕನ್ನಡ ಪತ್ರಿಕೆಗಳ ಮಟ್ಟಿಗೆ ಒಳ್ಳೆಯ ಪತ್ರಿಕಾ ದಿನಕ್ಕಾಗಿ ಒಳ್ಳೆಯ ‘ಉಡುಗೊರೆ’ಯನ್ನೇ ಕೊಟ್ಟಿತ್ತು. ಕನ್ನಡದ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ’ ಹೊರಬಂದ ನೆನಪಿಗೆ ಆ ದಿನವನ್ನು ಪತ್ರಿಕಾ ದಿನವಾಗಿ ಆಚರಿಸುತ್ತೇವೆ. (ಜಿಲ್ಲೆಗಳಲ್ಲಿರುವ ಅನೇಕ ವೃತ್ತಿನಿರತ ಸಂಘಗಳು ಪತ್ರಿಕಾ ದಿನವನ್ನು ಈ ತಿಂಗಳಲ್ಲಿ ಯಾವಾಗಲಾದರೊಮ್ಮೆ ಆಚರಿಸುತ್ತಾರೆ. ಆ ಕಾರಣಕ್ಕಾಗಿ ವಿವಿಧ ಜನಪ್ರತಿನಿಧಿಗಳಿಂದ, ಸಂಘ ಸಂಸ್ಥೆಗಳಿಂದ ಹಾಗೂ ಅಧಿಕಾರಿಗಳಿಂದ ಚಂದಾ ಎತ್ತುವ ‘ಸಂಸ್ಕೃತಿ’ ಯೂ ಇದೆ.)

ಪೆರುಸ್ ನಾರ್ಪ್ ಪರವಾಗಿಲ್ಲ. ಏಕೆಂದರೆ ತಾವು ಕೊಟ್ಟ ಸುದ್ದಿ ಸಂಪೂರ್ಣ ಕಟ್ಟುಕತೆ ಅಂತ ಮಾರನೆಯ ದಿನವೇ ಹೇಳಿಬಟ್ಟರು. ಆದರೆ ಪ್ರತಿದಿನ ಹೀಗೊಂದು ಕತೆಕಟ್ಟಿ ಬಿತ್ತರಿಸುವ ಅನೇಕರಿದ್ದಾರೆ. ಅದೇ ಕತೆಗೆ ಮಾಧ್ಯಮದವರು ಬಣ್ಣ ತುಂಬಿ, ಬಿತ್ತರಿಸಿದ ನಂತರವೂ, ಅದು ‘ಕಟ್ಟುಕತೆ’ ಎಂದು ಸ್ಪಷ್ಟನೆ ನೀಡುವವರು ಯಾರೂ ಇಲ್ಲ. ಕ್ರಾಸ್ ಚೆಕ್ ಮಾಡದೆ ಸುದ್ದಿ ಬಿತ್ತರಿಸಿದ ನಂತರ, ತಾವು ಬರೆದಿದ್ದೇ ಅಥವಾ ತೋರಿಸಿದ್ದೇ ಸತ್ಯ ಎಂದು ಬೀಗುವ ಮಾಧ್ಯಮ ಮಂದಿಯೇ ನಮ್ಮ ಮಧ್ಯೆ ಹೆಚ್ಚು. ಉದಾಹರಣೆಗೆ ಬೆಂಗಳೂರಿನ ಎಷ್ಟೋ ಆಸ್ಪತ್ರೆಗಳಲ್ಲಿ ಆಗಾಗ ‘ವಿಶ್ವದಲ್ಲಿಯೇ ಮೊದಲ ಬಾರಿಗೆ’ ಅಥವಾ ‘ಏಶಿಯಾದಲ್ಲಿಯೇ ಮೊದಲ ಬಾರಿಗೆ’, ಅಥವಾ ‘ಭಾರತದಲ್ಲಿಯೇ ಮೊದಲ ಬಾರಿಗೆ’ ಎಂಬ ವಿಶೇಷಣ ಹೊತ್ತ ಸರ್ಜರಿಗಳು ನಡೆದ ಬಗ್ಗೆ ವರದಿಗಳು ಆಗಾಗ ಪತ್ರಿಕೆ, ಟಿವಿಗಳಲ್ಲಿ ಕಾಣುತ್ತೇವೆ. ಅನೇಕ ಬಾರಿ ಈ ವಿಶೇಷಣಗಳು ಆಸ್ಪತ್ರೆ ಪಿ.ಆರ್.ಒ.ಗಳ (ಮಾಧ್ಯಮ ಸಂಪರ್ಕಾಧಿಕಾರಿ) ಸೃಷ್ಟಿ.

ಆಧಾರ ರಹಿತ ಸುದ್ದಿಗಳನ್ನು ಬಿತ್ತರಿಸುವವರು ಹೇರಳವಾಗಿ ಇರುವಾಗ, ಅಂಥದೇ ಸುದ್ದಿಯನ್ನು ಮಾಧ್ಯಮ ಸಂಸ್ಥೆಗಳಿಗೆ ಮುಟ್ಟಿಸಿ ತಮ್ಮ ಬೇಳೆ, ತರಕಾರಿಗಳನ್ನು ಬೇಯಿಸಿಕೊಳ್ಳುವವರೂ ಬೇಕಾದಷ್ಟು ಮಂದಿ ಇದ್ದೇ ಇರ್ತಾರೆ. ರಾಜಕೀಯ ಚಟುವಟಿಕೆಗಳ ಕಾಲದಲ್ಲಂತೂ ಈ ಬೇಳೆ-ತರಕಾರಿ-ಚಿಕನ್ ಬೇಯಿಸುವ ಪ್ರಕ್ರಿಯೆ ಭಾರಿ ಜೋರಾಗಿ ನಡೆಯುತ್ತಿರುತ್ತೆ. ಎದುರುಬಣದ ಪ್ರತಿಕ್ರಿಯೆ ಏನಿರಬಹುದು ಎಂದು ಪರೀಕ್ಷಿಸಲು ಎಲ್ಲಾ ಬಣಗಳಲ್ಲಿ ಸುದ್ದಿ ಪ್ಲಾಂಟ್ ಮಾಡುವ ಮಾಧ್ಯಮ ಸ್ನೇಹಿ ‘ಪ್ಲಾಂಟರ್ಸ್’ ಇರುತ್ತಾರೆ. ಆಯಕಟ್ಟಿನ ಸ್ಥಾನದಲ್ಲಿರುವ ಪತ್ರಕರ್ತರನ್ನು ಸಂಪರ್ಕಿಸಿ ತಮಗೆ ಬೇಕಾದ ಸುದ್ದಿಯನ್ನು ‘ಪ್ಲಾಂಟ್’ ಮಾಡಿಸುತ್ತಾರೆ. 2009ರಲ್ಲಿ ಜೆಡಿಎಸ್ ‘ಒಪ್ಪಂದ’ದ ಪ್ರಕಾರ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡಲಿಲ್ಲ. ಹೆಚ್.ಡಿ. ಕುಮಾರಸ್ವಾಮಿ ತಂದೆ ದೇವೇಗೌಡರ ಮಾತು ಕೇಳಿ ‘ವಚನದ್ರೋಹ’ ಮಾಡಿದರು ಎಂಬ ಮಾತು ಆಗ ಪ್ರಚಲಿತದಲ್ಲಿತ್ತು.  ಆಗ ಒಂದು ಸುದ್ದಿ ‘ಪ್ಲಾಂಟ್’ ಆಯಿತು – ಕುಮಾರಸ್ವಾಮಿ ಜೆಡಿಎಸ್ ನಿಂದ ಹೊರ ಬಂದು ಒಂದು ಪ್ರಾದೇಶಿಕ ಪಕ್ಷ ಸ್ಥಾಪಿಸುತ್ತಾರೆ. ಅತ್ಯಂತ ವಿಶ್ವಾಸಾರ್ಹ ಪತ್ರಿಕೆಯಲ್ಲಿ ಈ ಸುದ್ದಿ ಮುಖಪುಟದ ಲೀಡ್ ಆಗಿ ಪ್ರಕಟವಾಯಿತು. ಆ ನಂತರ ಆ ಸುದ್ದಿ ಸತ್ತು ಹೋಯಿತು.

ಇತ್ತೀಚೆಗೆ ಮಾಧ್ಯಮಗಳಲ್ಲಿ ಬಂದ ಸುದ್ದಿಗಳೆಲ್ಲಾ ನಿಜವೇ ಆಗಿದ್ದರೆ, ಈ ಹೊತ್ತಿಗೆ ಡಿ.ವಿ ಸದಾನಂದಗೌಡರ ಸರಕಾರ ಬಿದ್ದು ಎಷ್ಟೋ ದಿನಗಳಾಗಬೇಕಿತ್ತು. ಮುಖ್ಯಮಂತ್ರಿ ವಿರೋಧಿ ಪಾಳೆಯ ಘೋಷಿಸಿದ ಹಲವು ‘ಡೆಡ್ ಲೈನ್’ಗಳು ಆಗಿ ಹೋದವು. ಕೋರ್ಟ್ ಆವರಣದಲ್ಲಿ ನಡೆದ ಗಲಭೆಯಲ್ಲಿ ಒಂದು ಚಾನೆಲ್ ‘ಮೂರು ಮಂದಿ ಪೊಲೀಸರು’ ಹತರಾದರು ಎಂದು ಸುದ್ದಿ ಮಾಡಿತು. ಅದು ‘ಪ್ಲಾಂಟರ್ಸ್’ ಹಾವಳಿ ಪರಿಣಾಮ. ಕೋರ್ಟ್ ಆವರಣಕ್ಕೆ ಕರ್ತವ್ಯದ ಮೇಲೆ ಹೋಗಿದ್ದ ಪೊಲೀಸರ ಕುಟುಂಬದ ಪರಿಸ್ಥಿತಿ ಹೇಗಾಗಿರಬೇಡ.

ಅಷ್ಟೇ ಅಲ್ಲ, ಮಾಧ್ಯಮಗಳು ತಮ್ಮ ವಿವೇಚನೆ ಕಳೆದುಕೊಂಡಾಗ ಅಮಾಯಕರು ಆರೋಪಿಗಳಾಗುತ್ತಾರೆ, ಅಪರಾಧಿಗಳಾಗುತ್ತಾರೆ. ಜಾಗತಿಕ ಮಟ್ಟದಲ್ಲಿ ಬೆಂಗಳೂರಿನ ಹನೀಫ್ ಹೀಗೆ ‘ಭಯೋತ್ಪಾದಕ’ ಪಟ್ಟ ಅನುಭವಿಸಬೇಕಾಯಿತು. ಲಂಡನ್ ನ ಗ್ಲಾಸ್ಗೋ ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿಯಲ್ಲಿ ಆರೋಪಿಯಾಗಿದ್ದ ಕಫೀಲ್, ಆಸ್ಟ್ರೇಲಿಯಾ ನ್ಯಾಯಾಂಗ ಹನೀಫ್ ನನ್ನು ‘ನಿರಪರಾಧಿ’ ಎಂದು ಘೋಷಿಸುವವರೆಗೂ ನಮ್ಮ ಮಾಧ್ಯಮದ ಕಣ್ಣಲ್ಲಿ ಹನೀಫ್ ಭಯೋತ್ಪಾದಕನಾಗಿಯೇ ಉಳಿದುಹೋದರು. ಅವರ ಕುಟುಂಬ ಅನುಭವಿಸಿದ ಯಾತನೆಗೆ ಯಾರೂ ಸಮಾಧಾನ ಹೇಳಲು ಸಾಧ್ಯವಿಲ್ಲ. ಎರಡು ವರ್ಷಗಳ ಹಿಂದೆ ಮೋಟರ್ ಬೈಕ್ ಕದ್ದು ಸಿಕ್ಕಿಬಿದ್ದಿದ್ದ ಇಬ್ಬರು ದಾವಣಗೆರೆ ಪೊಲೀಸರ ವಶದಲ್ಲಿದ್ದರು. ಆ ಸುದ್ದಿ ದಿನೇ ದಿನೇ ನಾನಾ ರೂಪ ಪಡೆಯಿತು. ಬೆಂಗಳೂರಿನಿಂದ ದಾವಣಗೆರೆಗೆ ಧಾವಿಸಿದ ವಿಶೇಷ ವರದಿಗಾರರೊಬ್ಬರು ‘ಬಂಧಿತರು ಉಗ್ರರು, ಅವರು ಅಮೆರಿಕಾ ಮೇಲೆ ದಾಳಿ ಮಾಡಲು ಸಂಚು ಹೂಡಿದ್ದರು’ ಎಂದು ಬರೆದರು. ಮೊಟಾರ್ ಬೈಕ್ ಕಳ್ಳರು ಅಂತಹದೊಂದು ‘ಕನಸು’ ಕಂಡಿರಬಹುದು, ಆದರೆ ‘ಸಂಚು’ ಹೂಡಿದ್ದರು ಎಂದರೆ?

ಇಂಟರ್ನೆಟ್ ಪ್ರವಾಹದ ಈ ಕಾಲದಲ್ಲಿ ಸುದ್ದಿ ಎಲ್ಲಿಂದ ಬೇಕಾದರೂ ಬರಬಹುದು. ಕೆಲವೊಮ್ಮೆ ಬ್ಲಾಗ್, ಫೇಸ್‌ಬುಕ್, ಟ್ವಿಟರ್‌ಗಳು ಸುದ್ದಿ ಕೊಡಬಹುದು. ವಿಶ್ವಾಸಾರ್ಹತೆ ಕಾಪಾಡಿಕೊಳ್ಳುವುದು ಮುಖ್ಯ. ‘ಪ್ಲಾಂಟರ್ಸ್’ ಗಳ ಗಾಳಕ್ಕೆ ಸಿಕ್ಕಿಬೀಳಬಾರದು ಎಂದು ನೇರವಾಗಿ ಹೇಳಿಬಿಡಬಹುದು. ಆದರೆ ಪ್ಲಾಂಟರ್ಸ್‌ಗಳ  ಉದ್ದೇಶದಲ್ಲಿ ತಮ್ಮ ಹಿತಾಸಕ್ತಿಯನ್ನೂ ನೋಡಿಕೊಳ್ಳುವ ಪತ್ರಕರ್ತರೂ ಇದ್ದಾರಲ್ಲ!

Leave a Reply

Your email address will not be published. Required fields are marked *