ಸ್ಪಷ್ಟತೆಯಿಲ್ಲದ ಕಾಫಿರೈಟ್ಸ್ ಮಸೂದೆಯ ಅನುಮೋದನೆ

– ಪ್ರಶಾಂತ್ ಮಿರ್ಲೆ
ವಕೀಲರು

ಹೆಚ್ಚಿನ ವೈಜ್ಞಾನಿಕತೆಯಿಂದ ಅಭಿವೃದ್ಧಿಗೊಳ್ಳುತ್ತಿರುವ ನಮ್ಮ ಸಮಾಜದ ವಾಹಿನಿಗಳಲ್ಲಿ, ಸಾಮಾನ್ಯರು ತಮ್ಮ ದಿನನಿತ್ಯದ ಬದುಕಿನಲ್ಲಿ ತಮಗೆ ಅರಿವಿಲ್ಲದಂತೆ ಯಾವುದಾರೊಂದು ರೀತಿಯಲ್ಲಿ ಹಕ್ಕುಸ್ವಾಮ್ಯ ಕಾಯಿದೆಯನ್ನು ಉಲ್ಲಂಘಿಸುವ ಪರಿಸ್ಥಿತಿ ಎದುರಾಗುತ್ತಿದೆ. ಹಲವು ವರ್ಷಗಳ ದೀರ್ಘ ಪರಿಶ್ರಮದಿಂದ ಐತಿಹಾಸಿಕ ಹಕ್ಕುಸ್ವಾಮ್ಯ (ತಿದ್ದುಪಡಿ) ಮಸೂದೆ, 2012, ಸಂಸತ್ತಿನ ಎರಡು ಸದನದಲ್ಲಿ ಯಾವುದೇ ವಿರೋಧವಿಲ್ಲದೆ ಕಳೆದ ತಿಂಗಳು ಅನುಮೋದನೆಗೊಂಡಿದ್ದು ರಾಷ್ಟ್ರಪತಿಯವರ ಅಂಕಿತ ಪಡೆದು ಜಾರಿಯಾಗುವ ಹಂತದಲ್ಲಿರುತ್ತದೆ. ಆದರೆ, ಈ ಮಸೂದೆಯ ಮಂಡನೆ ಸಾಮಾಜಮುಖಿಯಾಗಿ ರೂಪಿಸಿರುವುದಾಗಿ ವಿಶ್ಲೇಷಿಸಿದರೂ ಕೆಲವು ವರ್ಗದ ಜನತೆಯಿಂದ ಅಷ್ಟೇ ವಿರೋಧ ವ್ಯಕ್ತವಾಗಿದೆ.

ಪ್ರಸ್ತುತ ತಿದ್ದುಪಡಿಯನ್ನು ಒಟ್ಟಾರೆ ಅವಲೋಕಿಸಿದಾಗ ಭಾರತದಲ್ಲಿನ ಹಾಲಿ ಹಕ್ಕುಸ್ವಾಮ್ಯ (ಕಾಫಿ ರೈಟ್ಸ್) ಕಾನೂನುಗಳಲ್ಲಿ ಹಲವು ಬದಲಾವಣೆಗೆ ಅವಕಾಶ ಮಾಡಿಕೊಟ್ಟಿದೆ ಮತ್ತು ಕೆಲವು ವರ್ಗದ ಜನರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುವಲ್ಲಿ ಸಫಲವಾಗಿರುವುದನ್ನು ಒಪ್ಪಿಕೊಳ್ಳಲೇ ಬೇಕಾಗಿರುತ್ತದೆ. ಅಂತೆಯೇ, ತಿದ್ದುಪಡಿಯ ಬಗೆಗೆ ನಮ್ಮ ಸಂಸತ್ತಿನಲ್ಲಿ ಪೂರ್ಣಪ್ರಮಾಣದ ಚರ್ಚೆಯಾಗದಿರುವುದು ವಿಷಾದಕರ ಸಂಗತಿ! ಇದಕ್ಕಾಗಿಯೇ ಈ ಲೇಖನದಲ್ಲಿ ಪ್ರಸ್ತುತ ತಿದ್ದುಪಡಿಯ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಲು ಪ್ರಯತ್ನಿಸಿದ್ದೇನೆ. ಅವುಗಳಲ್ಲಿ ಕೆಲವು ಇಂತಿವೆ.

ಅಂಗವಿಕಲರ ರಕ್ಷಣೆಗಾಗಿ ತೆಗೆದುಕೊಂಡ ಕ್ರಮಗಳು

ಪ್ರಸ್ತುತ ತಿದ್ದುಪಡಿ ಕರಡಿನಲ್ಲಿ ತೋರಿಸಿರುವಂತೆ ಅಂಧತ್ವ, ಕಿವುಡು ಅಥವಾ ಇತರ ಯಾವುದೇ ರೀತಿಯ ಅಂಗ ವೈಕಲ್ಯತೆಯನ್ನು ಹೊಂದಿರುವವರು, ಪ್ರಸ್ತುತ ತಿದ್ದುಪಡಿಯ ಕಲಮು ’51(1)(ಜಡ್ ಬಿ)’ ಮತ್ತು ’31ಬಿ’ ರ ಅಡಿಯಲ್ಲಿ ’ಯಾವುದೇ ಸಾಧನದ ಮೂಲಕ’ ಎಂಬ ವ್ಯಾಖ್ಯಾನವನ್ನು ಸೇರಿಸಲಾಗಿದೆ. ಇದರಿಂದ ಹಕ್ಕುಸ್ವಾಮ್ಯದ ಬಳಕೆಯು ಅಂಗವಿಕಲರಿಗೆ ಅನ್ವಯವಾಗುವ ಅಥವಾ ಅವರಿಗೆ ಅನುಭೋಗಿಸಲು ಅಥವಾ ಬಳಸಲು ಬೇಕಾದ ಸಾಧನಗಳ ಮೂಲಕ ಅವಕಾಶ ಕಲ್ಪಿಸಿಕೊಡುವುದರಿಂದ ಹಕ್ಕುಸ್ವಾಮ್ಯವುಳ್ಳವನು ಯಾವುದೇ ಲಾಭ ಹೊಂದುವಂತಿಲ್ಲ. ಉದಾ: ಅಂಧತ್ವವುಳ್ಳ ವ್ಯಕ್ತಿಗಳಿಗೆ ಮಾರುಕಟ್ಟೆಯಲ್ಲಿ ಬ್ರೈಲಿ ಲಿಪಿಯಲ್ಲಿ ಕಥೆ ಪುಸ್ತಕಗಳನ್ನು ಮಾರಾಟ ಮಾಡುವಾಗ ಬ್ರೈಲಿ ಲಿಪಿಯಲ್ಲಿ ಲಭ್ಯವಾಗುವಂತೆ ಮಾಡಿರುವುದಕ್ಕೆ ಯಾವುದೇ ವಿಶೇಷ ವೆಚ್ಚವನ್ನು ಪಡೆಯುವಂತಿಲ್ಲ. ಆದರೆ ಇಂತಹ ಸಾಧನಗಳ ಬಗೆಗಿನ ಪೂರೈಕೆಯನ್ನು ಕಲ್ಪಿಸುವುದು ಹಕ್ಕುಸ್ವಾಮ್ಯ ಹೊಂದಿರುವವನಷ್ಟೇ ಮಾಡಬೇಕಾಗಿರುವುದರಿಂದ ಅಂಗವಿಕಲರ ಬಳಕೆಗಾಗಿ ವಿಶೇಷ ಸಾಧನಗಳನ್ನು ಪೂರೈಸುವುದು ಹಾಸ್ಯಾಸ್ಪದವಾಗಿದೆ (ಇವುಗಳ ತಗಲುವ ವಿಶೇಷ ವೆಚ್ಚದ ಬಗೆಗೆ ಚರ್ಚೆ ಅನಗತ್ಯ ಎಂಬುವುದು ನನ್ನ ಭಾವನೆ).

ನ್ಯಾಯಸಮ್ಮತ ವ್ಯವಹಾರಗಳ ವ್ಯಾಪ್ತಿಯ ವಿಸ್ತಾರಗೊಳಿಸಿದ್ದು

ಹಳೆಯ ಕಾನೂನಿನಲ್ಲಿ ನ್ಯಾಯಸಮ್ಮತ ವ್ಯವಹಾರಗಳಲ್ಲಿ ’ಕಥೆ, ನಾಟಕ, ಸಂಗೀತ ಅಥವಾ ಕಲಾತ್ಮಕ ಕೆಲಸಗಳಿಗೆ’ ಸೀಮಿತವಾಗಿದ್ದು, ಪ್ರಸ್ತುತ ತಿದ್ದುಪಡಿಯಿಂದ ಸಾಫ್ಟ್‌ವೇರ್ ಹೊರತುಪಡಿಸಿದರು ಸೌಂಡ್ ರೆಕಾರ್ಡಿಂಗ್ ಅಥವಾ ವಿಡಿಯೋ ಚಿತ್ರೀಕರಣಕ್ಕೂ ಅನ್ವಯವಾಗುವಂತೆ ಎಲ್ಲಾ ರೀತಿಯ ಕೆಲಸಗಳಿಗೆ ವಿಸ್ತಾರವಾಗಿರುತ್ತದೆ ಇದರಿಂದ ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾಭ್ಯಾಸಕ್ಕೆ ಅಥವಾ ವಿಶೇಷ ಅಧ್ಯಯನಕ್ಕೆ ಮತ್ತು ಅನ್ವೇಷಣೆಗಳಿಗೆ ಹೆಚ್ಚಿನ ಭದ್ರತೆಯನ್ನು ಒದಗಿಸಿದಂತೆ ಆಗಿದೆ.

ಸರಳ ರೀತಿಯಲ್ಲಿ ಈಗ ಹಕ್ಕುಸ್ವಾಮ್ಯ ಪರವಾನಗಿಯ ವರ್ಗಾವಣೆ:

ಕಲಮು 21ರ ಮೇರೆಗೆ ಹಕ್ಕುಸ್ವಾಮ್ಯ ಹೊಂದಿರುವ ಯಾವುದೇ ವ್ಯಕ್ತಿಯು ತನ್ನ ಹಕ್ಕನ್ನು ಅದರ ಭಾಗಾಂಶವನ್ನು ವರ್ಗಾಯಿಸುವ ಅಥವಾ ಬಿಟ್ಟುಕೊಡಬೇಕಾದರೆ ನಿಗದಿತ ನಮೂನೆಯಲ್ಲಿ ಹಕ್ಕುಸ್ವಾಮ್ಯ ನೋಂದಾಣಾಧಿಕಾರಿಯಲ್ಲಿ ಸಲ್ಲಿಸಬೇಕಾಗಿತ್ತು. ಪ್ರಸ್ತುತ ತಿದ್ದುಪಡಿಯಿಂದ ಅಂತಹ ವರ್ಗಾವಣೆ ಬರೀ ಸಾರ್ವಜನಿಕ ಸೂಚನೆ ನೀಡುವುದರಿಂದ ಸಾಧ್ಯವಾಗಿದೆ. ಇಷ್ಟಲ್ಲದೇ, ಕಲಮು 30ರ ಮೇರೆಗೆ ಯಾವುದೇ ಹಕ್ಕುಸ್ವಾಮ್ಯ ಪರವಾನಗಿಯು ಲಿಖಿತ ರೂಪದಲ್ಲಿದ್ದು ಸಹಿಯನ್ನು ಹೊಂದಿರಬೇಕಾಗುತ್ತದೆ ಮತ್ತು ಪರವಾನಗಿಯು ಲಿಖಿತರೂಪದಲ್ಲಿ ಮಾತ್ರ ಲಭ್ಯ. ಇದರಿಂದ ಕಲಾತ್ಮಕ ಅನ್ವೇಷಣೆಗಳು, ಜಿ.ಎನ್.ಯು. ಪಬ್ಲಿಕ್ ಲೈಸನ್ಸ್ ಮತ್ತು ಮುಕ್ತವಾದ ವಿವಿಧ ಮಾದರಿಯ ಪರವಾನಗಿಗಳ ಬಳಕೆಗಳು ಭಾರತದಲ್ಲಿ ಕಾಲಿಡುವಂತಾಗಿದೆ.

WIPO ಹಕ್ಕುಸ್ವಾಮ್ಯ ಒಪ್ಪಂದದ ಮೇರೆಗೆ ಸಾರ್ವಜನಿಕ ವಾಚನಾಲಯಗಳಲ್ಲಿ ಎರವಲು ಪಡೆಯುವ ವಸ್ತುಗಳಿಗೆ ವಾಣಿಜ್ಯ ಉದ್ದೇಶಕ್ಕಾಗಿ ನೀಡುವ ಬಾಡಿಗೆ ಎಂಬ ಅರ್ಥವ್ಯಾಪ್ತಿಯಿಂದ ಹೊರತುಪಡಿಸಲಾಗಿದ್ದು ಇದರಿಂದ ಯಾವುದೇ ಲಾಭರಹಿತವಲ್ಲದ ಉದ್ದೇಶಕ್ಕೆ ಅಂದರೆ, ಲಾಭರಹಿತವಾಗಿ ನಡೆಸುವ ವಾಚನಾಲಯ ಅಥವಾ ಅಂತರ್ಜಾಲದಲ್ಲಿ ಲಭ್ಯವಿರುವ ಮುಕ್ತ ಮಾಹಿತಿಗಳ ಬಳಕೆ ಅಥವಾ ವಿದ್ಯಾಸಂಸ್ಥೆಗಳು ಕಂಫ್ಯೂಟರ್ ಪ್ರೋಗ್ರಾಮ್ ಅಥವಾ ಸೌಂಡ್ ರೆಕಾರ್ಡಿಂಗ್ ಅಥವಾ ಸಿನಿಮಾಆಟೋಗ್ರಾಫ್ ತುಣುಕುಗಳನ್ನು ಕಾನೂನು ಬದ್ದವಾಗಿ ಬಳಸಲು ಅನುಕೂಲ ಮಾಡಿಕೊಟ್ಟಂತಾಯಿತು.

ಬಳಕೆದಾರನಿಗೆ ಅಂತರ್ಜಾಲದಲ್ಲಿ ಮಧ್ಯವರ್ತಿಗಳಾಗಿ ವರ್ತಿಸುವ ಸರ್ವಿಸ್ ಪ್ರೊವೈಡರ್‌ಗಳಿಗೆ ತಾಂತ್ರಿಕ ಕಾರ್ಯ ನಿರ್ವಹಿಸುತ್ತವೆಂದು ಅವುಗಳ ಮೂಲಕ ಯಾರು ತಪ್ಪನ್ನು ಎಸಗುತ್ತಾರೋ ಅವರು ತಮ್ಮ ಕೃತ್ಯಕ್ಕೆ ಬಾಧ್ಯರಾಗುತ್ತಾರೆ ಹೊರತು ಸರ್ವಿಸ್ ಪ್ರೊವೈಡರ್‌ಗಳಲ್ಲ ಎನ್ನುವ ವ್ಯಾಖ್ಯಾನ ಅಂತರ್ಜಾಲ ಮಧ್ಯವರ್ತಿಗಳಿಗೆ ಸಮಾಧಾನ ಸಂಗತಿಯಾದರೂ ಅಂತರ್ಜಾಲದಲ್ಲಿ ಮಧ್ಯವರ್ತಿಗಳಾಗಿ ಕಾರ್ಯ ನಿರ್ವಹಿಸುವ ಇತರೇ ವ್ಯವಸ್ಥೆಯನ್ನು ಕಡೆಗಣಿಸಿದಂತಾಗಿದೆ. ಇದರಿಂದ ವ್ಯಾಪಕ ಚರ್ಚೆಯನ್ನು ನಿರೀಕ್ಷಿಸಬಹುದಾಗಿದೆ.

ಛಾಯಾಚಿತ್ರಗಳ ಮೇಲಿನ ಹಕ್ಕುಸ್ವಾಮ್ಯದ ಅವಧಿಯನ್ನು ಪ್ರಕಟಣೆಗೊಂಡ 60 ವರ್ಷದದಿಂದ ಹಕ್ಕುಸ್ವಾಮ್ಯದಾರನ ಮರಣದ ನಂತರದ 60 ವರ್ಷಗಳಿಗೆ ಏರಿಸಿರುವುದು ಹಲವು ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ. ಅಂತರರಾಷ್ಟ್ರೀಯ ಒಪ್ಪಂದಗಳಲ್ಲಿ ಬರೀ 25 ವರ್ಷಗಳ ಮಿತಿಗೆ ಶಿಫಾರಸ್ಸು ಮಾಡಿದೆ ಮತ್ತು ತಿದ್ದುಪಡಿ ಮಾಡುವ ಸಲುವಾಗಿ ನೇಮಕವಾದ ಸಮಿತಿಯಿಂದಲೂ ಈ ವಿಷಯ ಕುರಿತು ಯಾವುದೇ ಶಿಫಾರಸ್ಸು ಆಗಿರಲಿಲ್ಲ. ಇಷ್ಟಲ್ಲದೇ, ನಮ್ಮ ಸಮಾಜದಲ್ಲಿ ಫೋಟೋಗ್ರಫಿ ಸಂಬಂಧಪಟ್ಟ ಹಕ್ಕು ಉಲ್ಲಂಘನೆಗೆ ಮತ್ತು ಅವುಗಳ ರಕ್ಷಣೆಗೆ ವಹಿಸುವ ಕ್ರಮಗಳು ಸ್ಪಷ್ಟವಾಗಿ ಇಲ್ಲದಿರುವುದರಿಂದ ಈ ತಿದ್ದುಪಡಿಯ ಪ್ರಯತ್ನ ಪ್ರಶ್ನಾರ್ಥಕವಾಗಿ ಉಳಿಯುತ್ತದೆ ಅಷ್ಟೇ!

ಪ್ರಸ್ತುತ ತಿದ್ದುಪಡಿಯಿಂದ ಮರುಮುದ್ರಣದ ಅಥವಾ ಮೂಲ ರೂಪದ ಕೆಲಸವನ್ನು ಕೈಗೊಳ್ಳುವುದಕ್ಕೆ ತುಸು ಬಿಗಿಗೊಳಿಸಿರುವ ಕ್ರಮಗಳು ಗಮನಾರ್ಹವಾಗಿವೆ:

  • ಮೂಲ ಮುದ್ರಣವನ್ನು ಅಥವಾ ಕೆಲಸವನ್ನು ಬೇರೆ ರೂಪದಲ್ಲಿ ಬದಲಾವಣೆಗೆ ಇದ್ದ 2 ವರ್ಷದ ಕಾಲಾವಧಿಯನ್ನು 5 ವರ್ಷಕ್ಕೆ ಏರಿಸಲಾಗಿದೆ.
  • ಯಾವ ಕೆಲಸವು ಮುಖ್ಯವಾಹಿಗೆ ತರಲಾಗಿರುತ್ತದೆಯೋ, ಅದರ ಮೂಲರೂಪದಲ್ಲಿ ಯಾವುದೇ ಬದಲಾವಣೆಯನ್ನು ಮಾಡುವಂತಿಲ್ಲ. ಉದಾ: ಕ್ಯಾಸೆಟ್ ಮೂಲಕ ಹೊರತಂದ ಮುದ್ರಣವನ್ನು ಸಿಡಿ ಮೂಲಕ ಮತ್ತೆ ಹೊರತರುವಂತಿಲ್ಲ.
  • ಹಕ್ಕುಸ್ವಾಮ್ಯದಾರನಿಗೆ ಮುಂಗಡವಾಗಿ ಹಕ್ಕುಸ್ವಾಮ್ಯದಾರನ ಮೂಲ ಮುದ್ರಣದ 50000 ಸಂಖ್ಯೆಯ ಸಮನಾದ ಮೊತ್ತವನ್ನು ನೀಡಬೇಕು. ಆದರೆ ಮಾರುಕಟ್ಟೆಯ ಅಭಾವದಿಂದ ಕೆಲವು ಸಂದರ್ಭದಲ್ಲಿ ಹಕ್ಕುಸ್ವಾಮ್ಯ ಮಂಡಳಿಯ ಅನುಮತಿಯ ಮೇರೆಗೆ ಮುಂಗಡದಲ್ಲಿ ಮುಂಗಡವನ್ನು ಕಡಿಮೆ ಮಾಡಬಹುದಾಗಿದೆ.
  • ಯಾವುದೇ ಮುದ್ರಣದಲ್ಲಿ ಮೂಲ ಕರ್ತರಿಂದ ಅನುಮತಿ ಪಡೆದ ಬಗ್ಗೆ ಅಥವಾ ಮೂಲ ನಕಲು ಎಂಬ ವಿಷಯಗಳನ್ನು ಸೇರಿಸಿ ಗ್ರಾಹಕರಿಗೆ ತಪ್ಪು ಮಾಹಿತಿಯನ್ನು ಈಗಾಗಲೇ ನಿರ್ಬಂಧಿಸಲಾಗಿತ್ತು, ಈಗ ಸೌಂಡ್ ರೆಕಾರ್ಡಿಂಗ್ ಅಥವಾ ಚಲನ ಚಿತ್ರದ ಭಾಗಾಂಶವನ್ನಾಗಲಿ, ಎರವಲು ಪಡೆದ ಮಾಹಿತಿಯನ್ನು ಬಳಸಲು ನಿರ್ಬಂಧಿಸಲಾಗಿದೆ.
  • ಎಲ್ಲಾ ಮುದ್ರಿಕೆಗಳು ತಿರುಚುವ ಕೆಲಸ ಅವಶ್ಯವಿದ್ದಾಗ ಎಂಬ ಅಂಶವನ್ನು ತಗೆದುಹಾಕಿ ತಾಂತ್ರಿಕ ಕಾರಣಕ್ಕೆ ಎಂಬ ಬಳಸಿರುವುದು.

ಇವುಗಳನ್ನು ಗಮನಿಸಿದಾಗ ಕೊಲವರಿ ಹಾಡಿನ ಮೂಲ ಕರ್ತನ ಅನುಮತಿಯಿಲ್ಲದೆ ನಡೆದ ಹಾಡನ್ನು ತಿರುಚಿ ಹೆಚ್ಚಿನ ಪ್ರಚಾರಕ್ಕೂ ಅನುಕೂಲ ಮಾಡಿಕೊಟ್ಟ ಕ್ರಮಗಳು ಹಾಲಿ ಕಾನೂನಿನ ಪ್ರಕಾರ ಜೈಲಿಗೆ ಅಟ್ಟುವಷ್ಟು ದಂಡನಾರ್ಹ ಕೃತ್ಯವಾಗಿರುತ್ತದೆ. ಆದರೆ, ಇದರ ಬಗ್ಗೆ ಪ್ರಸ್ತುತ ಸಮಾಜ ಜಾಗರೂಕರಾಗಿರಬೇಕಾಗಿದೆ. ಹಕ್ಕುಸ್ವಾಮ್ಯ ಕಾಯಿದೆಯ ತಿದ್ದುಪಡಿಯಲ್ಲಿ ಗೀತ ರಚನೆಗಾರರ, ಸಂಗೀತ ಸಂಯೋಜಕರ ಮತ್ತು ಗಾಯಕರ ಹಕ್ಕುಗಳ ಕುರಿತು ಹೆಚ್ಚು ಚರ್ಚೆಗೆ ಒಳಪಟ್ಟ ವಿಷಯಗಳು ಮತ್ತು ಅವರ ಹಕ್ಕುಗಳನ್ನು ಎತ್ತಿಹಿಡಿಯಲು ಮಾಡಿರುವ ಪ್ರಯತ್ನದಿಂದ ನಿರ್ಮಾಪಕರು ಗಳಿಸುವ ರಾಜಧನದಲ್ಲಿ ಸಮಾನವಾಗಿ ಹೊಂದುವ ಅವಕಾಶ ಕಲ್ಪಿಸಿಕೊಟ್ಟಿದೆ.

ಆದರೆ, ರಾಜಧನವನ್ನು ಪಡೆಯುವ ಹಕ್ಕನ್ನು ಕುರಿತು ಯಾವುದೇ ವಿಶೇಷ ಹಕ್ಕಾಗಿ ಪರಿಗಣಿಸದಿರುವುದಿಲ್ಲ ಮತ್ತು ಎಲ್ಲೂ ಈ ಬಗ್ಗೆ ಸ್ಪಷ್ಟನೆ ನೀಡದಿರುವುದಿಲ್ಲ. ಸಂಸತ್ತಿನಲ್ಲಿ ಈ ಕುರಿತು ಅನುಮೋದನೆ ಪಡೆಯುವಾಗ ಯಾವುದೇ ವಿಸ್ತೃತ ಚರ್ಚೆಗೂ ಒಳಪಟ್ಟಿರುವುದಿಲ್ಲ. ಹಾಗಾದರೆ ಅನಿಶ್ಚಿತ ಘಟನೆಗಳಿಗೆ ಇದರ ಉದ್ದೇಶ ಅರ್ಥೈಸುವುದು ಕಠಿಣವಾಗಿದೆ. ಉದಾ: ಗೀತ ರಚನೆಗಾರ ಮತ್ತು ಅವನ ವಾರಸುದಾರರೋಡನೆ ನಿರ್ಮಾಪಕನು ಸಂಪೂರ್ಣ ಹಕ್ಕುಸ್ವಾಮ್ಯವನ್ನು ತನ್ನ ಹೆಸರಿಗೆ ನಿಯೋಜಿಸಿಕೊಂಡರೆ ಅಥವಾ ರಾಜಧನವನ್ನು ಮತ್ತು ಅದರ ಹಕ್ಕನ್ನು ತನ್ನ ಹೆಸರಿಗೆ ವರ್ಗಾಯಿಸುವಂತೆ ಬೇಡಿಕೆ ಇಟ್ಟರೆ? ಇದಕ್ಕಾಗಿಯೇ ಸಂಸತ್ತಿನಲ್ಲಿ ಆಗುವ ಚರ್ಚೆಯು ಅನುಕೂಲವಾಗುತಿತ್ತು. ಮುಖ್ಯವಾಗಿ ಹಕ್ಕು ಸ್ವಾಮ್ಯ ಸೇವೆಗಳ ಬಳಕೆದಾರರ ಕುರಿತು ಅಂಗವಿಕಲರ ಬಗ್ಗೆ ಮಾತ್ರ ಚರ್ಚೆಗೆ ಒಳಪಟ್ಟು ಇತರೆಯವರ ಕುರಿತು ಯಾವುದೇ ಚರ್ಚೆಯಾಗದಿರುವುದು ತಿದ್ದುಪಡಿಯ ಕಾಳಜಿ ಬಗ್ಗೆ ಸಂಶಯಪಡುವಂತಾಗಿದೆ..

ಹೆಚ್ಚಿನ ವೈಜ್ಞಾನಿಕತೆಯಿಂದ ಅಭಿವೃದ್ಧಿಗೊಳ್ಳುತ್ತಿರುವ ನಮ್ಮ ಸಮಾಜದ ವಾಹಿನಿಗಳಲ್ಲಿ, ಸಾಮಾನ್ಯರು ತಮ್ಮ ದಿನನಿತ್ಯದ ಬದುಕಿನಲ್ಲಿ ತಮಗೆ ಅರಿವಿಲ್ಲದಂತೆ ಯಾವುದಾರೊಂದು ರೀತಿಯಲ್ಲಿ ಹಕ್ಕುಸ್ವಾಮ್ಯ ಕಾಯಿದೆಯನ್ನು ಉಲ್ಲಂಘಿಸುವ ಪರಿಸ್ಥಿತಿ ಎದುರಾಗುತ್ತಿದೆ. ಇಂತಹ ವಾಸ್ತವದ ಸನ್ನಿವೇಶವನ್ನು ನಮ್ಮ ಸಂಸದರಿಗೆ ತಿಳಿಹೇಳಿ ಸೂಕ್ತ ಚರ್ಚೆಗೆ ಅವಕಾಶ ಕಲ್ಪಿಸಿಕೊಡಬೇಕಾಗಿದೆ. ಇಲ್ಲವಾದರೆ ಪ್ರಸ್ತುತ ತಿದ್ದುಪಡಿಯಿಂದ ಆಗುವ ಗೊಂದಲಗಳಿಗೆ ಅಥವಾ ವ್ಯಾಜ್ಯಗಳಿಗೆ ಯಾರನ್ನು ಬಾಧ್ಯರನ್ನಾಗಿಸಬೇಕು?

Leave a Reply

Your email address will not be published.