Daily Archives: July 7, 2012

ಅಪ್ರಾಮಾಣಿಕ ಮಧ್ಯಮವರ್ಗ ಮತ್ತು ಹಾದಿತಪ್ಪಿದ ನಾಗರಿಕ ಸಮಾಜ


-ಬಿ. ಶ್ರೀಪಾದ್ ಭಟ್  


 

ಇಂದು ಭಾರತದ ಮಧ್ಯಮವರ್ಗ ಕಳವಳಕ್ಕೆ ಈಡಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇಂಡಿಯಾದಲ್ಲಿ ಏರುತ್ತಿರುವ ಸಾಮಾನ್ಯ ವಸ್ತುಗಳ ಬೆಲೆಗಳು ಮತ್ತು ಹಣದುಬ್ಬರ ಹೆಚ್ಚುತ್ತಿರುವುದರ ಪರಿಣಾಮವಾಗಿ ಅನುಭವಿಸುತ್ತಿರುವ ತೊಂದರೆಗಳು, ಸುಖದ ಜೀವನವನ್ನು ದಿನವೂ ಸರಿದೂಗಿಸಲು ಇರುವ ಅನೇಕ ತೊಡರುಗಳು, ಕೈಜಾರುತ್ತಲಿರುವ ಐಷಾರಾಮಿ ಜೀವನ ಇಲ್ಲಿನ ಮಧ್ಯಮವರ್ಗಕ್ಕೆ ಒಂದು ಕಂಟಕವಾಗಿದೆ. ಇದಕ್ಕೆ ಮೂಲಭೂತ ಕಾರಣವಾಗಿ ಈ ಮಧ್ಯಮವರ್ಗ ದೂಷಿಸುತ್ತಿರುವುದು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಯುಪಿಎ ಸರ್ಕಾರ ಮತ್ತು ಇವರ ತೀವ್ರ ಆಕ್ರೋಶವಿರುವುದು ಇವರ ಒಂದು ಕಾಲದ ಡಾರ್ಲಿಂಗ್ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ವಿರುದ್ಧ.

ಎಲ್ಲಾ ಮಧ್ಯಮವರ್ಗದ ಕುಟುಂಬದವರ ದೂರು, ಅಳಲು ಹಾಗೂ ಕಳವಳ ಒಂದೇ ತೆರನಾಗಿರುತ್ತದೆ. ಏರುತ್ತಿರುವ ದಿನನಿತ್ಯದ ವಸ್ತುಗಳ ಬೆಲೆಗಳು, ದಿನ ದಿನಕ್ಕೂ ದುಬಾರಿಯಾಗುತ್ತಿರುವ ಜೀವನ ಮಟ್ಟ ಅದರಲ್ಲೂ ಪ್ರಮುಖವಾಗಿ ದುರ್ಭರವಾಗುತ್ತಿರುವ ನಗರ ಜೀವನ, ಇದರಿಂದಾಗಿ ತಮಗೆ ಹಣವನ್ನು ಉಳಿತಾಯ ಮಾಡಲಾಗುತ್ತಿಲ್ಲ, ಭವಿಷ್ಯದ ಕನಸುಗಳು ನನಸಾಗಲಾರವೇನೋ ಎನ್ನುವ ಆತಂಕ. ಇದು ನಿಜಕ್ಕೂ ವಾಸ್ತವವೇ. ಇವರ ಈ ಕಳಕಳಿ ಪ್ರಾಮಾಣಿಕವಾದದ್ದೆ. ಇಂದು ದೇಶದ ಜನಸಂಖ್ಯೆಯಲ್ಲಿ ಸುಮಾರು 15 ಕೋಟಿಯಷ್ಟಿರುವ ಭಾರತೀಯ ಮಧ್ಯಮವರ್ಗಗಳ ವಾರ್ಷಿಕ ಆದಾಯ ರೂಪಾಯಿ 4 ಲಕ್ಷದಿಂದ -ರೂಪಾಯಿ 17 ಲಕ್ಷ. ಈ ಈ ಗುಂಪಿನ ಏರಿಕೆ ವರ್ಷಕ್ಕೆ ಶೇಕಡ 13ರ ಮಟ್ಟದಲ್ಲಿದೆ. ಈ ಮಧ್ಯಮವರ್ಗ ಹಾಗೂ ಮೇಲ್ಮಧ್ಯಮವರ್ಗದ ಗುಂಪಿನ ಜನಸಂಖ್ಯೆ 2030ರ ವೇಳೆಗೆ 60 ಕೋಟಿ ದಾಟಬಹುದೆಂದು ಅಂದಾಜಿಸಲಾಗಿದೆ.

ಈ ಗುಂಪಿನಲ್ಲಿ ಶೇಕಡ 89 ರಷ್ಟು ಜನಸಂಖ್ಯೆಯ ಭಾರತೀಯರು ಆದಾಯ ತೆರಿಗೆಯನ್ನು ಪಾವತಿಸುತ್ತಾರೆ. ಮಧ್ಯಮವರ್ಗ ಹಾಗೂ ಮೇಲ್ಮಧ್ಯಮವರ್ಗದವರಿಗೆ ಮುಂಗಡಪತ್ರದಲ್ಲಿ ಸುಮಾರಾಗಿ 50,000 ಕೋಟಿಯಷ್ಟು ವಿವಿಧ ರೀತಿಯ ಪ್ಯಾಕೇಜ್‌ಗಳು, ಸೌಲಭ್ಯಗಳು ಮತ್ತು ತೆರಿಗೆ ವಿನಾಯಿತಿಗಳು ದೊರೆತರೆ, ಬಂಡವಾಳ ಶಾಹಿಗಳಾದ ಮೇಲ್ವರ್ಗಗಳಿಗೆ ಸಿಗುತ್ತಿರುವ ವಿವಿಧ ರೀತಿಯ ಪ್ಯಾಕೇಜ್‌ಗಳು, ಅನುದಾನಗಳು, ಸೌಲಭ್ಯಗಳು ಮತ್ತು ತೆರಿಗೆ ವಿನಾಯಿತಿಗಳ ಮೊತ್ತ ಸುಮಾರು 500,000 ಕೋಟಿಗಳು. ಆದರೆ ಸ್ವತಹ ತಮಗೆ ಸರ್ಕಾರದಿಂದ ಇಷ್ಟೆಲ್ಲ ಅನುಕೂಲಗಳು ಇದ್ದರೂ ಜನಸಂಖ್ಯೆಯಲ್ಲಿ ಶೇಕಡ 75ರಷ್ಟಿರುವ ಸಮಾಜದ ಕೆಳವರ್ಗಗಳಿಗೆ ಸರ್ಕಾರದಿಂದ ವಿವಿಧ ರೀತಿಯ ಸಬ್ಸಿಡಿ ರೂಪದಲ್ಲಿ ಸಿಗುತ್ತಿರುವ ಅನುದಾನಗಳ ವಿರುದ್ಧ ಈ ಎರಡೂ ಶ್ರೀಮಂತ ಎಲೈಟ್ ಗುಂಪುಗಳು ಬಲು ದೊಡ್ಡದಾಗಿ ಆಕ್ರೋಶವನ್ನು ವ್ಯಕ್ತಪಡಿಸುತ್ತಾರೆ.

ತಮ್ಮ ಪಾಲಿನ ಆದಾಯವನ್ನು ಕೆಳವರ್ಗಗಳು ನುಂಗುತ್ತಾರೆ ಎಂದು ಕಿಡಿಕಾರುತ್ತಾರೆ. ಅಷ್ಟರಮಟ್ಟಿಗೆ ನೈತಿಕವಾಗಿ ಅಧಃಪತನಕ್ಕೆ ಕುಸಿದಿದೆ ಈ ಮಧ್ಯಮವರ್ಗಗಳ ಮನೋಧರ್ಮ. ಆದರೆ ಇಲ್ಲಿನ ದುರಂತವೆಂದರೆ ಮೇಲಿನ ಎರಡೂ ಶ್ರೀಮಂತ ಎಲೈಟ್ ಗುಂಪುಗಳಿಗೆ ಮೇಲ್ಕಾಣಿಸಿದ ಎಲ್ಲ ಸಂಬಂಧಪಟ್ಟ ಸೌಲಭ್ಯಗಳು ಸರ್ಕಾರದಿಂದ ಎಲ್ಲಿಯೂ ವಂಚನೆಯಾಗದೆ ಶೇಕಡಾ 100ರಷ್ಟು ಲೆಕ್ಕದಲ್ಲಿ ಸರಿಯಾದ ಕಾಲಕ್ಕೆ ದೊರೆಯುತ್ತದೆ. ಇಲ್ಲಿ ಕಾನೂನುಬದ್ಧವಾಗಿಯೇ ಈ ಪ್ರಕ್ರಿಯೆ ನಡೆಯುತ್ತದೆ. ಆದರೆ ಸರ್ಕಾರದ ಅನುದಾನಗಳು, ಸಬ್ಸಿಡಿ ನೀತಿಗಳು, ವಿವಿಧ ಯೋಜನೆಗಳು ಸಂಬಂಧಪಟ್ಟ ಕೆಳವರ್ಗಗಳ ಬಡವರಿಗೆ ತಲಪುವ ಸಾಧ್ಯತೆ ಶೇಕಡಾ 15 ರಷ್ಟಿರುತ್ತದೆ. ಮಿಕ್ಕ ಶೇಕಡಾ 85 ರಷ್ಟು ಅನುದಾನಗಳು, ಸಬ್ಸಿಡಿಗಳು ಭ್ರಷ್ಟ ವ್ಯವಸ್ಥೆಯಲ್ಲಿ ಸಂಪೂರ್ಣ ಸೋರಿಹೋಗಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಕವಡೆಕಾಸೂ ದೊರೆಯುವುದಿಲ್ಲ. ಇದರ ಬಗೆಗೆ ಇವರ್ಯಾರೂ ಚಕಾರವೆತ್ತುವುದಿಲ್ಲ. ಬದಲಾಗಿ ತಮ್ಮನ್ನು ಕಡೆಗಣಿಸಲಾಗುತ್ತಿದೆ. ಯಾವುದೇ ರಾಜಕೀಯ ಪಕ್ಷಗಳು ತಮ್ಮನ್ನು ಓಲೈಸುತ್ತಿಲ್ಲ. ಪ್ರತಿಯೊಂದು ರಾಜಕೀಯ ಪಕ್ಷವೂ ಹಾಗೂ ಸರ್ಕಾರವೂ ತಮ್ಮನ್ನು ಒಂದು ಶಕ್ತಿಯಾಗಿ ಎಂದೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಬಹುಪಾಲು ಮಧ್ಯಮವರ್ಗಗಳು ಆರೋಪಿಸುತ್ತವೆ.

ಇದು ಅರ್ಧಸತ್ಯ ಮಾತ್ರ. ಪೂರ್ಣಸತ್ಯವೇನೆಂದರೆ ಯಾವುದೇ ರಾಜಕೀಯ ವ್ಯವಸ್ಥೆಯನ್ನಾಗಲೀ, ರಾಜಕೀಯ ಪಕ್ಷಗಳನ್ನಾಗಲೀ, ರಾಜಕಾರಣಿಗಳನ್ನಾಗಲೀ, ಪ್ರಜಾಪ್ರಭುತ್ವದ ಬಲು ದೊಡ್ಡ ಶಕ್ತಿಯಾದ ಚುನಾವಣಾ ಪ್ರಕ್ರಿಯೆಯನ್ನಾಗಲೀ, ಈ ಪ್ರಜಾಪ್ರಭುತ್ವದ ಉಳಿವಿಗಾಗಿ ನಿರಂತರವಾಗಿ ನಡೆಯುತ್ತಿರುವ ಸಾಮಾಜಿಕ ಹೋರಾಟಗಳನ್ನಾಗಲೀ ಸ್ವತಃ ಈ ಮಧ್ಯಮವರ್ಗಗಳೇ ಎಂದೂ ಗಂಭೀರವಾಗಿ ಪರಿಗಣಿಸಿಲ್ಲ ಹಾಗೂ ಕಳೆದ 20 ವರ್ಷಗಳಿಂದ ಬಹಿರಂಗವಾಗಿ ಬೆಂಬಲಿಸಿಲ್ಲ. ಇವರ ಆತ್ಮವಂಚನೆಯ ಮಟ್ಟ ಯಾವ ತರನಾಗಿರುತ್ತದೆಯೆಂದರೆ  ಈ ಎರಡೂ ಶ್ರೀಮಂತ ಎಲೈಟ್ ಗುಂಪುಗಳು ಚುನಾವಣೆಯ ಸಂದರ್ಭದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದಿಲ್ಲ. ಬದಲಾಗಿ ಈ ಚುನಾವಣೆಯ ಬಗೆಗೆ ಅಪಾರ ಮಟ್ಟದ ಸಿನಿಕತನ, ಮತ್ತು ಕ್ಷಮೆಯಿಲ್ಲದ ನಿರ್ಲಕ್ಷ್ಯವನ್ನು ಪ್ರದರ್ಶಿಸುತ್ತವೆ.

ಈ ಗುಂಪಿನ ಶೇಕಡ 60ರಷ್ಟು ಜನಸಂಖ್ಯೆ ಚುನಾವಣೆಗಳಲ್ಲಿ ಭಾಗವಹಿಸುವುದೂ ಇಲ್ಲ, ಮತದಾನ ಮಾಡುವುದೂ ಇಲ್ಲ. ಆದರೆ ಇವರು ಚುನಾವಣೆಯಲ್ಲಿ ಗೆದ್ದು ಅಧಿಕಾರ ವಹಿಸಿಕೊಳ್ಳುವ ಸರ್ಕಾರದಿಂದ ಮಾತ್ರ ಅಪಾರ ನಿರೀಕ್ಷೆಗಳನ್ನು, ಎಣೆಯಿಲ್ಲದ ಸೌಲಭ್ಯಗಳನ್ನು ನಿರೀಕ್ಷಿಸುತ್ತಾರೆ. ಸರ್ಕಾರ ಇರುವುದೇ ತಮಗಾಗಿ ಎನ್ನುವಂತೆ ವರ್ತಿಸುತ್ತಾರೆ. ಈ ಸರ್ಕಾರಗಳ ನೀತಿಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಅಭ್ಯಾಸ ಮಾಡುತ್ತಾರೆ. ವಿಮರ್ಶಿಸುತ್ತಾರೆ.

ಆದರೆ ಚುನಾವಣೆಯ ಸಂದರ್ಭದಲ್ಲಿ ಹೆಂಡ ಹಾಗೂ ಮೂರು ಕಾಸಿಗಾಗಿ ಯಾವುದೇ ಗುರಿಯಿಲ್ಲದೆ ವರ್ತಿಸುತ್ತ ವೋಟು ಮಾಡುತ್ತಾರೆ ಎಂದು ಈ ಮಧ್ಯಮವರ್ಗಗಳಿಂದ ನಿರಂತರವಾಗಿ ಟೀಕೆಗೆ, ಅಸಹನೆಗೆ ಗುರಿಯಾಗುತ್ತಿರುವುದು ಸಮಾಜದ ಬಡ ಕೆಳವರ್ಗಗಳು. ಆದರೆ ಈ ಕೆಳವರ್ಗಗಳೇ ಯಾವುದೇ ದೂರಗಾಮಿ ಆಶಯಗಳು, ಪ್ರತಿಫಲಾಪೇಕ್ಷೆ ಇಲ್ಲದೆ ಪ್ರಜಾಪ್ರಭುತ್ವವನ್ನು ಕಾಪಾಡುತ್ತಿರುವುದು. ದನಿಯಿಲ್ಲದ ಈ ಬಡಜನರೇ ತಮ್ಮ ಈ ಮುಗ್ಧತೆಯ ಮೂಲಕ ಕೇವಲ ಸೀಮಿತ ಲಾಭಕ್ಕಾಗಿ, ಕಳಂಕವನ್ನು ಹೊತ್ತುಕೊಂಡು ಚುನಾವಣೆಯಲ್ಲಿ ಪಾಲ್ಗೊಂಡು ಸರ್ಕಾರವನ್ನು ಚುನಾಯಿಸುತ್ತಾರೆ. ಈ ಚುನಾಯಿತ ಸರ್ಕಾರದ ಯೋಜನೆಗಳು, ಮುಂಗಡಪತ್ರಗಳ ಆಶಯಗಳು ಹೆಚ್ಚೂ ಕಡಿಮೆ ಕರಾರುವಕ್ಕಾಗಿ ತಲುಪುವುದು ಈ ಪ್ರಜಾಪ್ರಭುತ್ವದ ಪ್ರಕ್ರಿಯೆಯನ್ನು ಅನುಮಾನಿಸಿದ ಮತ್ತು ನಿರ್ಲಕ್ಷಿಸಿದ ಮಧ್ಯಮವರ್ಗ ಹಾಗೂ ಮೇಲ್ವರ್ಗಗಳಿಗೆ ಮಾತ್ರ. ಇದು ಯಾವ ರೀತಿಯ ಅನಾಚಾರ? ಇದರ ಬಗೆಗೆ ಸ್ವಲ್ಪವೂ ಕೀಳರಿಮೆಯನ್ನು ಬೆಳಸಿಕೊಳ್ಳದಷ್ಟು ನಮ್ಮ ಮಧ್ಯಮವರ್ಗ ಜಡಗೊಂಡಿದೆ ಮತ್ತು ಹಿಂದೆಂದೂ ಇಲ್ಲದಂತೆ ಸ್ವಾರ್ಥಮಯವಾಗಿದೆ. ಜಾಗತೀಕರಣ ಹಾಗೂ ಮುಕ್ತ ಆರ್ಥಿಕ ನೀತಿಗೆ ಇಂಡಿಯಾ ದೇಶ ತನ್ನನ್ನು ತಾನು ಒಡ್ಡಿಕೊಂಡು ಇಂದು 20 ವರ್ಷ ತುಂಬುತ್ತವೆ. ಈ ಜಾಗತೀಕರಣ ಕಲ್ಪಿಸಿಕೊಟ್ಟ ಉಪಭೋಗಗಳನ್ನು ಹೆಚ್ಚೂ ಕಡಿಮೆ ತಮ್ಮ ಜೀವನದಿಯ ತೆಕ್ಕೆಗೆ ಹೊರಳಿಸಿಕೊಂಡಿದ್ದು ಇಂಡಿಯಾದ ಮಧ್ಯಮವರ್ಗ.

90 ವರ್ಷಗಳ ಹಿಂದೆ ಗಾಂಧೀಜಿಯವರು ಇದೇ ಜಾಗತೀಕರಣವನ್ನು ಬಂಡವಾಳಶಾಹಿಯ ಜೊತೆಗಾರನೆಂದೂ ಇವೆರೆಡೂ ಜೊತೆಗೂಡಿದರೆ ಒಂದು ರಾಕ್ಷಸ ಶಕ್ತಿಯನ್ನು ಹುಟ್ಟು ಹಾಕುತ್ತದೆಂದೂ ಎಚ್ಚರಿಸಿದ್ದರು. ಅದು ಇಂದು ಸಂಪೂರ್ಣವಾಗಿ ನಿಜವಾಗಿದೆ. ಜಾಗತೀಕರಣ ಪಶ್ಚಿಮದ ಆಧುನಿಕತೆಯನ್ನು ತಂದುಕೊಡುತ್ತದೆ ಎನ್ನುವುದು ಎಷ್ಟು ನಿಜವೋ ಅಷ್ಟೇ ನಿಜ ಅದು ಮೋಡಿ ಮಾಡಿ ತನ್ನೊಳಗೆ ಸೆಳೆದುಕೊಳ್ಳುವ ಪಶ್ಚಿಮದ ಅತಿಯಾದ ಲೌಕಿಕತೆ ಮತ್ತು ಲೋಭತನ. ಕಳೆದ 20 ವರ್ಷಗಳ ಜಾಗತೀಕರಣದ ಸಂದರ್ಭದಲ್ಲಿ ಈ ಮಧ್ಯಮವರ್ಗಗಳ ಆದಾಯ ನಿರಂತರವಾಗಿ ಮೇಲೇರುತ್ತಾ ಸಾಗಿದೆಯೆ ಹೊರತು ಎಲ್ಲಿಯೂ ನಿಂತಿಲ್ಲ ಹಾಗೂ ಕೆಳಗೆ ಜಾರಿಲ್ಲ. ಈ ಕಾಲಘಟ್ಟದಲ್ಲಿ ಈ ಮಧ್ಯಮವರ್ಗಗಳ ಸರಾಸರಿ ಜೀವನಮಟ್ಟ ಅದ್ಭುತವೆನ್ನುವಷ್ಟರ ಮಟ್ಟಿಗೆ ಸುಧಾರಿಸಿದೆ. ಹಾಗು ಇಂದಿಗೂ ಮೇಲ್ಮುಖವಾಗಿದೆ. ಇವರ ಕೊಳ್ಳುಬಾಕುತನ ಕಳೆದ 20 ವರ್ಷಗಳಲ್ಲಿ ಶೇಕಡ 80ರಷ್ಟು ಏರಿಕೆಯಾಗಿದೆ. ಮುಕ್ತ ಆರ್ಥಿಕತೆಯ ಫಲವಾಗಿ ಹಣದ ವಹಿವಾಟು ಹತ್ತುಪಟ್ಟು ಹೆಚ್ಚಾಗಿ ಇದರ ಸಂಪೂರ್ಣ ಲಾಭ ದೊರೆತಿರುವುದು ಈ ಮಧ್ಯಮ ವರ್ಗ ಮತ್ತು ಮೇಲ್ವರ್ಗಗಳಿಗೆ.

ಇತ್ತೀಚಿನ ಸರ್ವೆ ಪ್ರಕಾರ ಇದೇ ರೀತಿಯ ಸೋ ಕಾಲ್ಡ್ ಆರ್ಥಿಕ ಮುನ್ನಡೆಯನ್ನು ಕಾಯ್ದುಕೊಂಡರೆ ಮುಂದಿನ 20 ವರ್ಷಗಳಲ್ಲಿ ಈ ಮಧ್ಯವರ್ಗಗಳ ಆದಾಯದಲ್ಲಿ ಐದುಪಟ್ಟು ಹೆಚ್ಚಳವಾಗಲಿದೆ. ಇದೇ ಕಾರಣಕ್ಕೆ ಎಲ್ಲಿಯಾದರೂ ಈ ಆರ್ಥಿಕ ಬೆಳವಣಿಗೆಯಲ್ಲಿ ಕೊಂಚವೂ ಏರುಪೇರಾದರೂ ಈ ಮಧ್ಯಮವರ್ಗ ಮತ್ತು ಮೇಲ್ವರ್ಗಗಳು ಇನ್ನಿಲ್ಲದ ಆತಂಕ ವ್ಯಕ್ತಪಡಿಸುತ್ತವೆ. ಅದಕ್ಕೆ ಕಾರಣವಾದ ಕೇಂದ್ರ ಸರ್ಕಾರವನ್ನು ಇನ್ನಿಲ್ಲದಂತೆ ನಿರಂತರವಾಗಿ ಟೀಕಿಸುತ್ತವೆ. ಆದರೆ ಇದೇ ಗೊತ್ತು ಗುರಿಯಿಲ್ಲದ, ಅಮಾನವೀಯ ಆರ್ಥಿಕ ಬೆಳವಣಿಗೆಯ ಕಾರಣಕ್ಕಾಗಿಯೇ ಶೇಕಡ 75ರಷ್ಟು ಜನಸಂಖ್ಯೆಯ ಕೆಳವರ್ಗಗಗಳ ಬಡವರ ದೈನಂದಿನ ಜೀವನ ನಿರಂತರವಾಗಿ ಕೆಳಮುಖವಾಗಿ ಜಾರುತ್ತಿದೆ. ಇವರಿಗೆ ಭವಿಷ್ಯವಿರಲಿ ವರ್ತಮಾನವೇ ದುರ್ಭರವಾಗಿದೆ. ಮಧ್ಯಮವರ್ಗ ಮತ್ತು ಕೆಳವರ್ಗಗಳ ನಡುವಿನ ಕಂದಕ ದಿನದಿನಕ್ಕೆ ಬೆಳೆಯುತ್ತಿದೆ. ಇವರಿಗೆ ಭವಿಷ್ಯವಿರಲಿ ವರ್ತಮಾನವೇ ಭಯ ಹುಟ್ಟಿಸುತ್ತದೆ ಎಂದು ಈ ಮಧ್ಯಮವರ್ಗಕ್ಕೆ ಗೊತ್ತಿದೆ.

ಆದರೂ ಸಹ ಈ ಮಧ್ಯಮವರ್ಗ ಒಳಗೊಳ್ಳುವಿಕೆಯ ಸಾಮಾಜಿಕ ನ್ಯಾಯದ ನೀತಿಯನ್ನು ಸಂಪೂರ್ಣವಾಗಿ ತ್ಯಜಿಸಿದ್ದಾರೆ. ಇವರ ಜಾಣ ಮೌನ ಮತ್ತು ಮರೆಮೋಸದ ಆತ್ಮವಂಚನೆಗೆ ಕಡಿವಾಣವೇ ಇಲ್ಲ. ಉದಾಹರಣೆಗೆ ಇತ್ತೀಚೆಗೆ ಸುಪ್ರೀಂಕೋರ್ಟ ನೀಡಿದ ತೀರ್ಪಿನ ಅನ್ವಯ ದೇಶದ ಎಲ್ಲಾ ಸರ್ಕಾರಿ, ಖಾಸಗಿ ಅನುದಾನ ಮತ್ತು ಅನುದಾನರಹಿತ ಶಾಲೆಗಳು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಶೇಕಡ 25ರಷ್ಟು ಸೀಟುಗಳನ್ನು ಮೀಸಲಿಡಬೇಕು ಎಂದು ಐತಿಹಾಸಿಕ ತೀರ್ಪು ನೀಡಿದೆ. ಇದಕ್ಕೆ ನಮ್ಮ ಮಧ್ಯಮವರ್ಗ ಪ್ರತಿಕ್ಯಿರ್ಸಿದ ರೀತಿ ನಿರಾಸೆಯನ್ನು ಹುಟ್ಟಿಸುತ್ತದೆ. ಇಲ್ಲಿಯೂ ಇವರ ಆತಂಕವೇನೆಂದರೆ ಎಲ್ಲಿ ಈ ತೀರ್ಪು ತಮ್ಮ ಪಾಲಿನ ಸೌಲಭ್ಯಗಳನ್ನು ಕಸಿದುಕೊಳ್ಳುತ್ತದೆಯೇ ಎನ್ನುವುದರ ಕುರಿತಾಗಿ. ಮೀಸಲಾತಿಯ ಕುರಿತಾಗಿ ಈ ವರ್ಗ ವ್ಯಕ್ತಪಡಿಸುವ ಮಡಿವಂತಿಕೆ, ಆಕ್ರೋಶದ ಉಗ್ರತೆ ಪ್ರಜ್ಞಾವಂತರಲ್ಲಿ ಇವರ ಕುರಿತಾಗಿ ತಿರಸ್ಕಾರ ಮೂಡಿಸುತ್ತದೆ. ಬೇರೆ ಯಾವುದೇ ದೌರ್ಜನ್ಯಗಳಿಗೆ ವಿರೋಧವಾಗಿ ಬೀದಿಗಿಳಿದು ಹೋರಾಟ ನಡೆಸದ ಈ ಮಧ್ಯಮವರ್ಗ ಮೀಸಲಾತಿ ವಿರೋಧಿ ಚಳವಳಿ ಎಂದಾಕ್ಷಣ ತೋರಿಸುವ ಅತ್ಯುತ್ಸಾಹ ಮತ್ತು ಕೊಡುವ ಬೆಂಬಲ, ಸಂದರ್ಭ ದೊರೆತರೆ ಆಕ್ಟಿವಿಸ್ಟ್‌ಗಳು ಸಹ ಅಗುವ ಇವರ ಇಂದಿನ ಈ ಅಮಾನವೀಯ ನೆಲೆಗಳನ್ನು, ಭ್ರಷ್ಟ ಮನಸ್ಥಿತಿಯನ್ನು ಕುರಿತಾಗಿ ಹೇಳಲು ಪದಗಳೇ ಸಾಲದು. ಇದನ್ನು ಚರ್ಚಿಸಲು ಮತ್ತೊಂದು ವೇದಿಕೆಯೇ ಬೇಕಾಗುತ್ತದೆ.

ಲಕ್ಷಾಂತರ ಆದಿವಾಸಿಗಳು ಮತ್ತು ರೈತರ ಅತಂತ್ರ ಬದುಕನ್ನು ಹಸನುಗೊಳಿಸಲು ಹೋರಾಡುತ್ತಿದ್ದ ನರ್ಮದ  ಬಚಾವ್ ಆಂದೋಲನ ಇವರ ಕಣ್ಣಲ್ಲಿ ತಂಟೆಕೋರರ, ಅಭಿವೃದ್ಧಿವಿರೋಧಿ ಚಳವಳಿಗಳಾಗಿ ಕಾಣಿಸುತ್ತದೆ. ಸಮಾನತೆಗಾಗಿ, ಹಿಂಸೆಯನ್ನು ವಿರೋಧಿಸಿ ಅಹಿಂಸಾತ್ಮಕ ಹೋರಾಟ ನಡೆಸುತ್ತಿರುವ ದಲಿತ, ರೈತ ಚಳವಳಿಗಳು ಮಧ್ಯಮವರ್ಗಗಳ ಪ್ರಕಾರ ತಮ್ಮ ಹಕ್ಕನ್ನು ಕಸಿದುಕೊಳ್ಳುವ  ಹುನ್ನಾರವಾಗಿಬಿಡುತ್ತದೆ. ಬೀದಿ ಬದಿಯಲ್ಲಿ ಸಣ್ಣ ಪುಟ್ಟ ವ್ಯಾಪಾರ ಮಾಡಿ ತಮ್ಮ ದಿನನಿತ್ಯದ ಪುಡಿಗಾಸನ್ನು ಗಳಿಸುವ ಬಡವರು ಇವರ ಪ್ರಕಾರ ಕಾನೂನನ್ನು ಉಲ್ಲಂಘಿಸುತ್ತಿರುವ ಅಪರಾಧಿಗಳು. ಇದರ ಫಲವೇನೆಂದರೆ ಒಂದು ಕಾಲದಲ್ಲಿ ಎಲ್ಲರಿಗೂ ಉದಾಹರಣೆಯಾಗಿ ಬದುಕಿ ಮಾದರಿಯಾಗಿ ಆದಷ್ಟೂ ಸರಳವಾಗಿ ಜೀವಿಸುವದರ ಮೂಲಧರ್ಮವಾಗಿದ್ದ ಈ ಮಧ್ಯಮವರ್ಗಗಳು ಇಂದು ಸಂಪೂರ್ಣವಾಗಿ ರೂಪಾಂತರಗೊಂಡು ಜೀವನವನ್ನು, ಅದರ ಎಲ್ಲ ಸುಖವನ್ನು ತಳಮಟ್ಟವನ್ನು ಬಿಡದಂತೆ ಅದರ ಕಟ್ಟಕಡೆಯ ತುದಿಯವರೆಗೂ ಅನುಭವಿಸಿ ಬದುಕಬೇಕು ಅದೂ ತಾನು ಮಾತ್ರ ಎನ್ನುವ ಘಟ್ಟಕ್ಕೆ ಬಂದು ತಲುಪಿದೆ.

ಒಂದು ಕಾಲಕ್ಕೆ ಆದರ್ಶ ಸಾಮಾಜಿಕ ಜೀವನದ ಮಾನವೀಯ, ಜೀವಪರ, ಸಾಮಾಜಿಕ ಜವಾಬ್ದಾರಿಯ ಮೌಲ್ಯಗಳನ್ನೇ ತಮ್ಮ ಮೌಲ್ಯಗಳನ್ನಾಗಿಸಿಕೊಂಡಿದ್ದ ಮಧ್ಯಮವರ್ಗದ ಚಿಂತನೆಗಳು ಮತ್ತು ಬದುಕು ಇಂದು ಸಂಪೂರ್ಣವಾಗಿ ಬದಲಾಗಿದೆ. ಇಲ್ಲಿ ಸಮುದಾಯದ ವೈವಿಧ್ಯತೆಯ ಬದಲಾಗಿ ಏಕವ್ಯಕ್ತಿಯ ಸ್ವರೂಪ, ಬಹುರೂಪಿ ಸಂಸ್ಕೃತಿಯ ಬದಲಾಗಿ ಏಕರೂಪಿ ಸಂಸ್ಕೃತಿ, ಸರ್ವಧರ್ಮಗಳನ್ನು ಗೌರವಿಸುವ ಚಿಂತನೆಗಳ ಬದಲಾಗಿ ಕೋಮುವಾದದ ವಿವಿಧ ಸ್ವರೂಪಗಳು, ಸಮಾನತೆಯ ಬದಲಾಗಿ ಶ್ರೇಣೀಕೃತ ವ್ಯವಸ್ಥೆ, ಸಹಬಾಳ್ವೆಯ ಬದುಕಿನ ಬದಲಾಗಿ ಸ್ಪರ್ಧಾತ್ಮಕ ಬದುಕು, ಸರ್ವರಿಗೂ ಸಮಾನ ಶಿಕ್ಷಣದ ಬದಲಾಗಿ ಅರ್ಹತೆಯನ್ನಾಧಾರಿಸಿದ ಶಿಕ್ಷಣ ಇವೆಲ್ಲವೂ ಮಧ್ಯವರ್ಗಗಳ ಇಂದಿನ ಮೌಲ್ಯಗಳು. ಒಂದು ಕಾಲಕ್ಕೆ “ಮದರ್ ಇಂಡಿಯಾ”, “ದೋ ಆಂಖೇ ಬಾರಹ್ ಹಾತ್”, “ಬಂಗಾರದ ಮನುಷ್ಯ”, “ಭೂತಯ್ಯನ ಮಗ ಅಯ್ಯು” ಮಾದರಿಯ ಸಾಮಾಜಿಕ ಕಳಕಳಿ ಮತ್ತು ಸರ್ವರಿಗೂ ಸಮಪಾಲು ನೀತಿಯನ್ನು ಎತ್ತಿ ಹಿಡಿಯುವ, ಯಾವುದೇ ವಾಂಛಲ್ಯಕ್ಕೆ ಬಲಿಯಾಗದೆ ಆತ್ಮಸಾಕ್ಷಿಯನ್ನು ನೆಚ್ಚಿಕೊಂಡ ಜೀವಪರ, ಮಾನವೀಯ ಚಿಂತನೆಗಳು ಮಧ್ಯಮವರ್ಗಕ್ಕೆ ಆದರ್ಶವಾಗಿದ್ದವು. ಇಂದು ಆದು ಸ್ಥಾನಪಲ್ಲಟಗೊಂಡು “ದಿಲ್ವಾಲೇ ದುಲ್ಹನಿಯಾ ಲೇಜಾಯೆಂಗೇ”, “ಕಭೀ ಕುಷಿ ಕಭೀ ಗಂ”, “ಸೂಪರ್” ತರಹದ ಮೌಲ್ಯಗಳು ಇಂದಿನ ಮಧ್ಯಮವರ್ಗಗಳನ್ನು ಕಬ್ಜಾ ಮಾಡಿಕೊಂಡಿವೆ. ಸಮಾಜದ ಎಲ್ಲ ಸ್ತರದ ವ್ಯಕ್ತಿಗಳು ನನ್ನ ಮಕ್ಕಳು ಎನ್ನುವ ಆದರ್ಶ, ಕುಟುಂಬವೆಂದರೆ ಕೇವಲ ವೈಯುಕ್ತಿಕ ಸಂಸಾರ ಮಾತ್ರವಲ್ಲದೆ ಇಡೀ ಹಳ್ಳಿಯೇ ನನ್ನ ಕುಟುಂಬ ಎನ್ನುವ ತೀವ್ರವಾದ ಮಾತೃಪ್ರೇಮ, ಹಣಕ್ಕಿಂತ ಮಾನವತಾವಾದಕ್ಕೆ ಪ್ರಮುಖ ಆದ್ಯತೆಯನ್ನು ಹೊಂದಿದಂತಹ ಚಂದವಳ್ಳಿಯ ತೋಟದ ಎಲ್ಲ ನೈತಿಕ ಮೌಲ್ಯಗಳು ಕರಗಿಹೋಗಿ ಅದರ ಸ್ಥಾನವನ್ನು ಹಮ್ ಆಪ್ಕೆ ಹೈ ಕೌನ್ ತರಹದ ಕುಟುಂಬದ ವೈಯುಕ್ತಿಕ ಹಳಹಳಿಕೆಗಳು, ನಾನು ಮತ್ತು ನನ್ನ ಸಂಸಾರದ ಒಂದು ಚಲನಹೀನ ಸ್ಥಿತಿ ಇದು ಮಧ್ಯಮವರ್ಗವನ್ನು ಆಕ್ರಮಿಸಿಕೊಂಡಿವೆ.

ಆಧುನಿಕತೆಯ ಹೆಸರಿನಲ್ಲಿ ಒಳಗೊಳ್ಳುವಿಕೆಯನ್ನು ಧಿಕ್ಕರಿಸಿ ಪ್ರತ್ಯೇಕತೆಯನ್ನು ಅಪ್ಪಿಕೊಂಡಿರುವ ನಮ್ಮ ಮಧ್ಯಮವರ್ಗ ಆಧುನಿಕ ಉನ್ನತ ಶಿಕ್ಷಣವನ್ನು ತಮ್ಮದಾಗಿಸಿಕೊಂಡರೂ ಇವರು ಮರಳಿ ಮೌಢ್ಯವನ್ನು, ಪರಂಪರೆಯನ್ನು ಹುಡುಕಿಕೊಂಡು ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಇನ್ನಿಲ್ಲದೆ ಹೆಣಗುತ್ತಿದ್ದಾರೆ. ಭಾರತೀಯ ಸಂಸ್ಕೃತಿಯನ್ನು ಸಂಘಪರಿವಾರದ ನೆಲೆಗಳಲ್ಲಿ ಅರ್ಥೈಸಿಕೊಂಡಿರುವ ಇಂದಿನ ಮಧ್ಯಮವರ್ಗದ ಬೌದ್ಧಿಕತೆ ಸಲೀಸಾಗಿ ಕೋಮುವಾದಿಗಳ ಕೈಗೆ ಜಾರಿರುವುದು ಪ್ರಜ್ಞಾವಂತರಲ್ಲಿ ಆತಂಕ ಹುಟ್ಟಿಸಿದೆ. ಇದೇ ಸಂಘ ಪರಿವಾರ ಹಿಂದುತ್ವದ ಅನನ್ಯತೆಯ ಮುಖವಾಡದಲ್ಲಿ ಹಿಂದೂ ಮತೀಯವಾದ ಮೂಲಕ ಇಡೀ ಭಾರತವನ್ನು ಆಪೋಶನ ತೆಗೆದುಕೊಳ್ಳಲು ದಾಪುಗಾಲು ಇಟ್ಟಾಗ ಮೈಯೆಲ್ಲ ಬಾಯಿಯಾಗಿರುವ ಈ ಉರಿವ ಬೆಂಕಿಯ ದಹನಕ್ಕೆ ವಾಹಕವಾಗಿ ಸುಲುಭವಾಗಿ ಬಳಕೆಯಾದದ್ದು ಇಂಡಿಯಾದ ಮಧ್ಯಮವರ್ಗ. ಹಿಂದೂ ಮತಾಂಧನೊಬ್ಬ ಗಾಂಧೀಜಿಯನ್ನು ಹತ್ಯೆಗೈದಾಗ ಸುಮಾರು ಮೂರು ದಶಕಗಳ ಕಾಲ ವಿಷಾದ, ಪಶ್ಚತ್ತಾಪದಲ್ಲಿ ಬೇಯುತ್ತಿದ್ದ ಮಧ್ಯಮವರ್ಗಕ್ಕೆ 21ನೇ ಶತಮಾನದ ಹೊತ್ತಿಗೆ ನಾಥುರಾಮ ಗೋಡ್ಸೆ, ಸಾವರ್ಕರ್‌ಗಳು ಅಧ್ಯಯನದ ವ್ಯಕ್ತಿತ್ವಗಳಾಗಿ ರೂಪಿತಗೊಂಡಿದ್ದು ಮಧ್ಯಮವರ್ಗಗಳ ಬಲು ದೊಡ್ಡ ಸೋಲು. ಇವರಿಗೆ ಧರ್ಮನಿರಪೇಕ್ಷತೆಯ ಆದರ್ಶವು ಮಸ್ಲಿಂರ ಓಲೈಕೆಯಾಗಿ ಗೋಚರಿಸುತ್ತದೆ. ಸಂಘ ಪರಿವಾರವು ಹಿಂದುತ್ವವನ್ನು ಹಕ್ಕಿನ ಪ್ರಶ್ನೆಯಾಗಿ ಮಾರ್ಪಡಿಸಿ ಆಕ್ರಮಣ ಶೀಲತೆಯನ್ನು, ದಮನನೀತಿಯನ್ನು ಪ್ರದರ್ಶಿಸಿದಾಗ ಮಧ್ಯಮವರ್ಗ ಜಾಣ ಮೌನಕ್ಕೆ ಶರಣಾಗುತ್ತಾರೆ.

90ರ ದಶಕದಲ್ಲಿ ‘ಏಕ್ ಧಕ್ಕ ಔರ್ ದೋ’ ಸ್ಲೋಗನ್ ಇವರಲ್ಲಿ ರೋಮಾಂಚನ ಹುಟ್ಟಿಸುತ್ತದೆ. ಸ್ಯೂಡೋ ಸೆಕ್ಯುಲರ್ಸ್ ಎಂದು ಪ್ರಗತಿಪರ ಚಿಂತಕರನ್ನು ಹೀಯಾಳಿಸಿದ ಸಂಘಪರಿವಾರದ ನಾಯಕ  ಎಲ್.ಕೆ. ಅಧ್ವಾನಿ ಇವರಿಗೆ ಬಹಳ ಹತ್ತಿರವಾಗುತ್ತಾರೆ. ಆದರೆ ಇದೇ ಎಲ್.ಕೆ. ಅಧ್ವಾನಿ ದಿಲ್ಲಿಯ ಗದ್ದುಗೆಯನ್ನು ಆಕ್ರಮಿಸಲು 1990ರಲ್ಲಿ ನಡೆಸಿದ ರಥಯಾತ್ರೆಯ ಗುಪ್ತ ಅಜೆಂಡಗಳು, ಹಿಂದುತ್ವವಾದದ ಉಗ್ರತೆ, ಕೋಮುವಾದದ ಆಶಯಗಳು ಮಧ್ಯಮವರ್ಗಗಳ ಪ್ರಜ್ಞೆಗೆ ದಕ್ಕದೇ ಹೋಯಿತು. ಕೋಮುವಾದದ ಕರಾಳತೆ ಮಧ್ಯಮವರ್ಗಗಳ ಹೃದಯಕ್ಕೆ ನಾಟಲಿಲ್ಲ. ಕಣ್ಣು ತೆರಸಲಿಲ್ಲ. ಬದಲಾಗಿ ಸಂಘಪರಿವಾರದ ಅಲ್ಪಸಂಖ್ಯಾತ ದ್ವೇಷದ ಸಿಂದ್ಧಾಂತಗಳನ್ನು ಪ್ರಜ್ಞಾಪೂರ್ವಕವಾಗಿಯೇ ಅನುಮೋದಿಸಿದರು. ಮುಸ್ಲಿಂರ ಹತ್ಯೆನಡೆಸಿ ಈ ಮಾರಣಹೋಮದ ಕಳಂಕ ಹೊತ್ತಿರುವ ನರೇಂದ್ರ ಮೋದಿ ಹಾಗೂ ಈ ನರೇಂದ್ರ ಮೋದಿಯ ಫ್ಯಾಸಿಸ್ಟ್ ಮಾದರಿಯ ಅಡಳಿತ ಸಿದ್ಧಾಂತಗಳು ನಮ್ಮ ಮಧ್ಯಮವರ್ಗಕ್ಕೆ ಅಪ್ಯಾಯಮಾನವಾಗಿಯೂ ಈ ಸರ್ವಾಧಿಕಾರಿ ಮೋದಿಯು ಉತ್ತಮ ಆಡಳಿತಗಾರನಾಗಿಯೂ, ಒಬ್ಬ ಮಾದರಿ ನಾಯಕನಾಗಿಯೂ ರೂಪಿತಗೊಂಡಿರುವುದು ನಮ್ಮ ಮಧ್ಯಮವರ್ಗಗಳ ನೈತಿಕ ಅಧಪತನಕ್ಕೆ, ಬೌದ್ಧಿಕ ದಿವಾಳಿತನಕ್ಕೆ ಜ್ವಲಂತ ಸಾಕ್ಷಿ.

ಕರ್ನಾಟಕದಲ್ಲಿ ಆಡಳಿತರೂಢ ಬಿಜೆಪಿ ಪಕ್ಷದ ಭ್ರಷ್ಟಚಾರದ ಹಗರಣಗಳು ದಿನನಿತ್ಯದ ವ್ಯವಹಾರದಂತೆ ಬಯಲಾಗುತ್ತಿದ್ದರೂ, ಈ ಭ್ರಷ್ಟ ಸರ್ಕಾರದ ಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು ಆರೋಪಿತರಾಗಿ ಜೈಲುವಾಸ ಅನುಭವಿಸುತ್ತಿದ್ದರೂ ಮೊನ್ನೆ ನಡೆದ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದಿಂದ ನಡೆದ ವಿಧಾನಪರಿಷತ್ ಚುನಾವಣೆಗಳಲ್ಲಿ ಬಿಜೆಪಿಗೆ ಮತ ನೀಡಿ ಈ ಪಕ್ಷಕ್ಕೆ 5 ಸ್ಥಾನಗಳನ್ನು ಗೆಲ್ಲಿಸಿಕೊಡುವುದರ ಮೂಲಕ ತಮ್ಮೊಳಗಿನ ಹಿಪೋಕ್ರಸಿಯನ್ನು ಬಹಿರಂಗಗೊಳಿಸುತ್ತಾರೆ. ಭ್ರಷ್ಟಾಚಾರದ ಆರೋಪದ ಮೇಲೆ ಮಂತ್ರಿ ಪದವಿ ಕಳೆದುಕೊಂಡ ರಾಮಚಂದ್ರೇಗೌಡ ಅವರು ಬೆಂಗಳೂರಿನ ಪಧವೀದರರ ಕ್ಷೇತ್ರದಿಂದ ಪುನರಾಯ್ಕೆಗೊಳ್ಳುತ್ತಾರೆ. ಬೆಂಗಳೂರು ಮಹಾನಗರ ಪಾಲಿಕೆಗೆ ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ಸರ್ವಾನುಮತದಿಂದ ಚುನಾಯಿತಗೊಳ್ಳುತ್ತದೆ.

ಇದು ಇವರ ಆಚಾರ ಹೇಳೋದಕ್ಕೆ ಬದನೇಕಾಯಿ ತಿನ್ನೋದಕ್ಕೆ ನೀತಿಗೆ ಒಂದು ಸ್ಯಾಂಪಲ್. ಇದು ಇವರ ಭ್ರಷ್ಟಾಚಾರ ವಿರೋಧದ ಲೊಳಲೊಟ್ಟೆ ಶೈಲಿ. ಇಲ್ಲಿ ಜಾತೀಯತೆ ಮತ್ತು ಭ್ರಷ್ಟಾಚಾರ ಎರಡೂ ಒಂದೇ ನಾಣ್ಯದ ಎರಡು ಮುಖಗಳು ಹಾಗು ಒಂದು ಇನ್ನೊಂದನ್ನು ಬಳಸಿಕೊಂಡೇ ಮೇಲ್ಮುಖವಾಗಿ ಚಲಿಸುತ್ತದೆ. ಕಡೆಗೆ ಅಸ್ಪೃಶ್ಯತೆಯೂ ಸಹ ಒಂದು ಭ್ರಷ್ಟಚಾರ ಎನ್ನುವ ಸರಳ ಸತ್ಯವನ್ನು ಅರಿಯುವಲ್ಲಿ ಇಂಡಿಯಾದ ಅಕ್ಷರಸ್ತರು ಸೋತಿದ್ದಾರೆ. ಇಂಡಿಯಾದಲ್ಲಿ ಭ್ರಷ್ಟಾಚಾರವನ್ನು ಕೇವಲ ಆಡಳಿತಾತ್ಮಕವಾಗಿ ನೋಡದೆ ಜೊತೆಜೊತೆಗೆ ಇದು ಸಾಂಸ್ಕೃತಿಕ ಬಿಕ್ಕಟ್ಟು ಮತ್ತು ಸಾಮಾಜಿಕ ನೀಚತನವನ್ನಾಗಿ ಅರ್ಥೈಸಿಕೊಳ್ಳಲು ಇರುವ ಅಪಾರವಾದ ಸಾಧ್ಯತೆಗಳನ್ನು ತಳ್ಳಿ ಹಾಕಿ ತೀರ ಸರಳವಾಗಿ ಅಣ್ಣಾ ಹಜಾರೆಯವರ ಘೋಷಣೆಯಾದ ರಾಜಕಾರಣಿಗಳು ಮಾತ್ರ ಭ್ರಷ್ಟರು ಎನ್ನುವ ಆತಂಕಕಾರಿ ರೋಚಕತೆಗೆ ಮಾರು ಹೋಗುತ್ತಾರೆ ಇಲ್ಲಿನ ವಿದ್ಯಾವಂತರು.

ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಪ್ರಾಮಾಣಿಕ ಆಂದೋಲನ ಹಾದಿ ತಪ್ಪಿದ ಹಳಿಯಲ್ಲಿ ನಿಂತು ದೇಶಾಭಿಮಾನದ ಪ್ರಶ್ನೆಗಳನ್ನು ಎತ್ತುತ್ತಿರುವುದು ನಮಗೆಲ್ಲ ಅರಿವಾದಂತಿಲ್ಲ. ಈ ಬೇಜವಾಬ್ದಾರಿ ಮಾದರಿ ಕಡೆಗೆ ಪ್ರಜಾಪ್ರಭುತ್ವವನ್ನೇ ಧಿಕ್ಕರಿಸುತ್ತದೆ. ಈ ಮೂಲಕ ಸಾಮಾಜಿಕ ಅಸಹನೆ ಹಾಗೂ ಅರಾಜಕತೆಯ ನಡುವಿನ ತೆಳುವಾದ ಗೆರೆಯನ್ನು ಯಶಸ್ವಿಯಾಗಿ ಅಳಿಸಿ ಹಾಕುತ್ತದೆ ಈ ಅಣ್ಣಾ ಹಜಾರೆ ಮಾದರಿ. ಈ ಅಪಾಯಕಾರಿ ಮಾದರಿಗೆ ಈ ಗುಂಪು ಬಳಸಿಕೊಳ್ಳುತ್ತಿರುವುದು ಗಾಂಧಿಗಿರಿಯನ್ನು. ಆದರೆ ಇಲ್ಲಿ ಗಾಂಧೀಜಿಯನ್ನು ತಮ್ಮ ಮೂಗಿನ ನೇರಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದ್ದಾರೆ. ಬಾಪು ಗಾಂಧಿಯನ್ನು ಒಂದು ಪ್ಯಾಕೇಜ್ ಪ್ರಾಡಕ್ಟ್ ಆಗಿ ಪರಿವರ್ತಿಸಿ ಜೊತೆಜೊತೆಗೆ ಈ ಪ್ಯಾಕೇಜ್‌ಗೆ ಸ್ವಃತಹ ತಾವೇ ರೂಪದರ್ಶಿಯಾಗುವ ದ್ವಿಪಾತ್ರ ಅಭಿನಯವನ್ನು ಮಿ.ಗಾಂಧಿಗೆ ವಹಿಸಿಕೊಟ್ಟಿದೆ ಈ 21ನೇ ಶತಮಾನದ ನಾಗರಿಕ ಸಮಾಜ. ಶಿಥಿಲಗೊಂಡು ಕುಸಿಯುತ್ತಿರುವ ಚಾವಣಿಯಡಿಯಲ್ಲಿ ತಮ್ಮ ಭ್ರಷ್ಟಾಚಾರ ವಿರೋಧಿ ಚಳವಳಿಯನ್ನು ಎರಡನೇ ಸ್ವಾತಂತ್ರ ಹೋರಾಟವೆಂದು ಕೂಗುತ್ತ ಆತ್ಮವಂಚನೆಯಲ್ಲಿ ಮುಳುಗಿದೆ ಈ ನಮ್ಮ ಸೋ ಕಾಲ್ಡ್ ನಾಗರಿಕ ಸಮಾಜ. ಈ ಅಣ್ಣಾ ಹಜಾರೆಯವರ ಚಳವಳಿಯನ್ನು ಕೋಮುವಾದಿ ಆರೆಸ್ಸೆಸ್ ಮತ್ತು ಅದರ ಅಂಗ ಸಂಸ್ಥೆಗಳು ಸಕ್ರಿಯವಾಗಿ ಬೆಂಬಲಿಸಿ ಹೈಜಾಕ್ ಮಾಡಲು ಯತ್ನಿಸಿದಾಗ ಇವುಗಳ ಗುಪ್ತ ಕಾರ್ಯಸೂಚಿಗಳ ಅರಿವಿದ್ದೂ ತಳಮಳಗೊಳ್ಳಲಿಲ್ಲ ಈ ನಾಗರಿಕ ಸಮಾಜ. ಅಣ್ಣಾ ಚಳವಳಿಯಡಿಯಲ್ಲಿ ಮಂಡಿತವಾಗುತ್ತಿರುವ ಸಾರ್ವಜನಿಕ ಹಕ್ಕೊತ್ತಾಯಗಳು ಕೇವಲ ಮಧ್ಯಮವರ್ಗವರ್ಗಗಳ ಹಿತಾಸಕ್ತಿಗಳನ್ನು ಪ್ರತಿನಿಧಿಸುತ್ತದೆಯೇ ಹೊರತಾಗಿ ನಿರಂತರ ಹಿಂಸೆಗೆ ತುತ್ತಾಗುತ್ತಿರುವ ತಳ ಸಮುದಾಯಗಳ ಆತಂಕಗಳಲ್ಲ. ಸರ್ಕಾರಿ ವ್ಯವಸ್ಥೆಯ ಭ್ರಷ್ಟಾಚಾರದಿಂದ ಈ ನಾಗರಿಕ ಸಮಾಜ ತೊಂದರೆಗೊಳಗಾಗಿದೆ ಎನ್ನುವುದು ಎಷ್ಟು ನಿಜವೋ ಈ ಭ್ರಷ್ಟ ವ್ಯವಸ್ಥೆಗೆ ಸ್ವತಃ ಈ ನಾಗರಿಕ ಸಮಾಜ ಸಹ ಅಷ್ಟೇ ಕಾರಣವೆಂಬುದನ್ನು ಚಾಪೆಯ ಕೆಳಗೆ ಮುಚ್ಚಿಟ್ಟಿದ್ದು ಇಡೀ ಚಳವಳಿಯ ಬಲು ದೊಡ್ಡ ಸೋಲು. ಇಂತಹ ವಿಷಮ ಸಂದರ್ಭದಲ್ಲಿ ಬಾಪೂಜಿ ಗಾಂಧಿಯ ಆದರ್ಶಗಳಾದ ಸರಳ ಜೀವನ, ಸತ್ಯವಂತಿಕೆ, ಜಾತ್ಯಾತೀತ ಮನೋಧರ್ಮ, ಅಹಿಂಸಾವಾದ ಮುಂತಾದವುಗಳನ್ನು ಬಳಸಿಕೊಂಡು ಮುಂದಿನ ತಲೆಮಾರಿಗೆ ಮಾದರಿಯಾಗಬಹುದಾಗಿದ್ದ ನಮ್ಮ ಈ ನಾಗರಿಕ ಸಮಾಜ ತಮಗೆ ದೊರೆತ ಅಪೂರ್ವ ಅವಕಾಶವನ್ನು ಸಹ ಹಾಳುಗೆಡವಿದೆ.

ಭಾರತೀಯರಾದ ನಮಗೆ ಅದೃಷ್ಟವಶಾತ್ ಗಾಂಧಿಯಂತಹ ಮಹಾತ್ಮ ದೊರಕಿದ್ದಾನೆ. ಇಂದಿನ ಜಾಗತೀಕರಣದ ದುಷ್ಟತೆಯ ಸಂದರ್ಭದಲ್ಲಿ ಗಾಂಧಿಯ ಮಾದರಿಗಳು ಬಹಳ ಉಪಯುಕ್ತವಾಗುತ್ತವೆ. ಆದರೆ ಈ ದಿಕ್ಕಿನಲ್ಲಿ ಪಯಣಿಸಲು ಮಾತ್ರ ನಾಗರಿಕ ಸಮಾಜ ಪದೇ ಪದೇ ನಿರಾಕರಿಸುತ್ತಿದೆ.

(ಚಿತ್ರಕೃಪೆ: ವಿವಿಧ ಮೂಲಗಳಿಂದ)