ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ-27)


– ಡಾ.ಎನ್.ಜಗದೀಶ್ ಕೊಪ್ಪ


1939 ರಲ್ಲಿ ಭಾರತಕ್ಕೆ ವೈಸ್‌ರಾಯ್ ಹುದ್ದೆಗೆ ನೇಮಕವಾಗಿ ದೆಹಲಿಗೆ ಬಂದ ಲಿನ್‌ಲಿಥ್‌ಗೌ, ಜಿಮ್ ಕಾರ್ಬೆಟ್‌ನ ಲೇಖನಗಳನ್ನು ಓದಿ ಅವುಗಳಿಂದ ಪ್ರಭಾವಿತನಾಗಿ, ಕಾರ್ಬೆಟ್‌ನನ್ನು ದೆಹಲಿಗೆ ಕರೆಸಿ ಅವನನ್ನು ಪರಿಚಯಿಸಿಕೊಂಡು ತನ್ನ ಕುಟುಂಬ ಆತ್ಮೀಯ ಗೆಳೆಯನನ್ನಾಗಿ ಮಾಡಿಕೊಂಡ. ಲಿನ್‌ಲಿಥ್‌ಗೌ ವೃತ್ತಿಯಲ್ಲಿ ಅಧಿಕಾರಿಯಾಗಿದ್ದರೂ, ಪ್ರವೃತ್ತಿಯಲ್ಲಿ ನಿರ್ಜನ ಅರಣ್ಯ ಪ್ರದೇಶದಲ್ಲಿ ಅಲೆಯುವುದು, ರಾತ್ರಿ ಟೆಂಟ್ ಹಾಕಿ ಅಲ್ಲಿಯೇ ತಂಗುವುದು, ಮೀನು ಶಿಕಾರಿ ಮಾಡುವುದನ್ನು ಹವ್ಯಾಸ ಮಾಡಿಕೊಂಡಿದ್ದ. ಹಾಗಾಗಿಯೇ ಲಿನ್‌ಲಿಥ್‌ಗೌ‌ಗೆ ಕಾರ್ಬೆಟ್‌ನ ಅಭಿರುಚಿಗಳು ಇಷ್ಟವಾದವು. ಆನಂತರ ಇಬ್ಬರೂ ಸಮಾನ ಮನಸ್ಕ ಗೆಳೆಯರಾಗಿ ಉತ್ತರ ಭಾರತದ ಕಾಡುಗಳಲ್ಲಿ ವಾರಾಂತ್ಯ ಕಳೆಯುತ್ತಿದ್ದರು.

ಬೇಸಿಗೆಯಲ್ಲಿ ಮತ್ತು ಚಳಿಗಾಲದಲ್ಲಿ ತಪ್ಪದೇ ನೈನಿತಾಲ್ ಹಾಗೂ ಕಲದೊಂಗಿ ಮತ್ತು ಚೋಟಿಹಲ್ದಾನಿ ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದ ವೈಸ್‌ರಾಯ್ ಕುಟುಂಬ ಜಿಮ್ ಕಾರ್ಬೆಟ್ ಮತ್ತು ಅವನ ಸಹೋದರಿ ಮ್ಯಾಗಿ ಜೊತೆ ವಾರಗಟ್ಟಲೆ ಕಾಲ ಕಳೆಯುತ್ತಿತ್ತು. ಕಲದೊಂಗಿಯಲ್ಲಿದ್ದ ಮನೆಗೆ ವೈಸ್‌ರಾಯ್ ಬಂದಾಗ ಕಾರ್ಬೆಟ್ ಕಲದೊಂಗಿ ಮತ್ತು ಚೋಟಿ ಹಲ್ದಾನಿಯ ರೈತರು, ಕಾರ್ಮಿಕರು ಎಂಬ ಬೇಧ ಭಾವವಿಲ್ಲದೆ ಎಲ್ಲರನ್ನೂ ತನ್ನ ಮನೆಗೆ ಕರೆಸಿ ದೇಶದ ಪ್ರಥಮ ಪ್ರಜೆಯಂತಿದ್ದ ವೈಸ್‌ರಾಯ್ ಲಿನ್‌ಲಿಥ್‌ಗೌಗೆ ಪರಿಚಯ ಮಾಡಿಕೊಡುತ್ತಿದ್ದ. ಮನೆಯಲ್ಲಿ ಚಹಾ ಕೂಟ ಏರ್ಪಡಿಸಿ ಭಾರತದ ಬಡತನ ಮತ್ತು ಇಲ್ಲಿನ ಜನರ ಮುಗ್ಧತೆ, ಅಜ್ಙಾನ, ಇವುಗಳನ್ನು ವಿವರಿಸುತ್ತಾ, ಬಡತನದ ನಡುವೆಯೂ ಬಹು ಸಂಸ್ಕೃತಿ, ಭಾಷೆ ಮತ್ತು ಧರ್ಮ ಇವುಗಳ ನಡುವೆ ಇರುವ ಸಾಮರಸ್ಯವನ್ನು, ಇಲ್ಲಿನ ಜನರ ಪ್ರಾಮಾಣಿಕತೆಯನ್ನು ಬಲು ಅರ್ಥಗರ್ಭಿತವಾಗಿ ವೈಸ್‌ರಾಯ್ ಕುಟುಂಬಕ್ಕೆ ಮತ್ತು ಅವನ ಜೊತೆ ಬರುತ್ತಿದ್ದ ಅಧಿಕಾರಿಗಳಿಗೆ ಕಾರ್ಬೆಟ್ ಮನವರಿಕೆ ಮಾಡಿಕೊಡುತ್ತಿದ್ದ.

ದೆಹಲಿಯ ಔತಣಕೂಟವೊಂದರಲ್ಲಿ ಅನುಭವಗಳನ್ನು ಕೃತಿಗೆ ಇಳಿಸುವಂತೆ ಒತ್ತಾಯಿಸಿದ್ದ ಅಧಿಕಾರಿಯ ಪತ್ನಿ ಲೇಡಿ ವೈಲೆಟ್‌ಹೇಗ್ ಮಾತಿನಿಂದ ಉತ್ತೇಜಿತನಾಗಿ ಪತ್ರಿಕೆಗಳಲ್ಲಿ ಲೇಖನ ಬರೆಯಲು ಆರಂಭಿಸಿದ ಕಾರ್ಬೆಟ್ ಇವುಗಳನ್ನು ಪುಸ್ತಕದ ರೂಪದಲ್ಲಿ ತರುವ ಬಗ್ಗೆ ವೈಸರಾಯ್ ಲಿನ್‌ಲಿಥ್‌ಗೌನ ಸಲಹೆ ಕೇಳಿದ. ಜಿಮ್ ಕಾರ್ಬೆಟ್‌ನ ನರಭಕ್ಷಕ ಹುಲಿ ಮತ್ತು ಚಿರತೆಗಳ ಅನುಭವಗಳನ್ನು ಸ್ವತಃ ಕೇಳಿ, ಲೇಖನಗಳ ಮೂಲಕ ಓದಿ ಪುಳಕಿತನಾಗಿದ್ದ ವೈಸ್‌ರಾಯ್ ಲಿನ್‌ಲಿಥ್‌ಗೌ ಪುಸ್ತಕ ಪ್ರಕಟನೆಗೆ ಉತ್ತೇಜನ ನೀಡಿದ.

ಕಾರ್ಬೆಟ್ ಅದುವರೆಗೆ ಇಂಡಿಯನ್ ವೈಲ್ಡ್ ‌ಲೈಪ್ ಪತ್ರಿಕೆಗೆ ಬರೆದಿದ್ದ ’ದ ಲಾಸ್ಟ್ ಪ್ಯಾರಡೈಸ್’ ಮತ್ತು “ವೈಲ್ಡ್ ಲೈಪ್ ಇನ್ ದ ವಿಲೇಜ್”, “ದ ಟೆರರ್ ದಟ್ ವಾಕ್ಸ್ ಇನ್ ದ ನೈಟ್”,  “ದ ಫಿಶ್ ಆಪ್ ಮೈ ಡ್ರೀಮ್ಸ್” ಹಾಗೂ “ಪೂರ್ಣಗಿರಿ ಅಂಡ್ ಇಟ್ಸ್ ಮಿಸ್ಟೀರಿಯಸ್ ಲೈಟ್ಸ್”, ಈ ಲೇಖನಗಳ ಸಂಗ್ರಹವನ್ನು ಜಂಗಲ್ ಸ್ಟೋರಿಸ್ ಎಂಬ ಹೆಸರಿನಲ್ಲಿ  104 ಪುಟಗಳ ಮೊದಲ ಕೃತಿಯನ್ನಾಗಿ ಹೊರತಂದ. ಪುಸ್ತಕ ನೈನಿತಾಲ್ ಪಟ್ಟಣದಲ್ಲಿದ್ದ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಮುದ್ರಣವಾಯಿತು. ನೂರು ಪ್ರತಿಗಳನ್ನು ಮಾತ್ರ ಮುದ್ರಣ ಮಾಡಲಾಗಿತ್ತು. ಅದರ ಕರಡಚ್ಚು ತಿದ್ದುವುದರಿಂದ ಹಿಡಿದು, ಪ್ರಸ್ತಾವನೆ ಬರೆಯುವ ಹೊಣೆಯನ್ನು ವೈಸ್‌ರಾಯ್ ಲಿನ್‌ಲಿಥ್‌ಗೌ ಹೊತ್ತಿದ್ದು ವಿಶೇಷವಾಗಿತ್ತು.

ಪುಸ್ತಕ ಪ್ರಕಟಣೆ ಮೂಲಕ ಲೇಖಕನೂ ಆದ ಕಾರ್ಬೆಟ್‌ನ ಜೀವನ ನೈನಿತಾಲ್ ಗಿರಿಧಾಮದಲ್ಲಿ ಒಂದು ರೀತಿ ಆರಾಮದಾಯಕ ನಿವೃತ್ತಿ ಜೀವನವಾಗಿತ್ತು. ಬೆಳಿಗ್ಗೆ ಸಂಜೆ ಸಹೋದರಿ ಮ್ಯಾಗಿ ಜೊತೆ ಪರ್ವತದ ಕಿರುದಾರಿಗಳಲ್ಲಿ ವಾಕ್ ಮಾಡುತ್ತಿದ್ದ. ಹಗಲಿನಲ್ಲಿ ತನ್ನ ಮೆಚ್ಚಿನ ನಾಯಿಯ ಜೊತೆ ನೈನಿ ಮತ್ತು ಬೀಮ್ ಸರೋವರಕ್ಕಿಂತ ಚಿಕ್ಕದಾಗಿದ್ದ, ಊರಾಚೆಗಿನ ಅರಣ್ಯದ ನಡುವೆ ಇದ್ದ ಸರೋವರದಲ್ಲಿ ಮೀನು ಶಿಕಾರಿ ಮಾಡುವುದು ಅವನ ಹವ್ಯಾಸವಾಗಿತ್ತು. ಮೀನಿಗೆ ಗಾಳ ಹಾಕಿ ಧ್ಯಾನಸ್ತ ಮನುಷ್ಯನಂತೆ ಕುಳಿತಿರುತ್ತಿದ್ದ ಕಾರ್ಬೆಟ್‌ನ ಹೃದಯದೊಳಗೆ ಆ ಕ್ಷಣಗಳಲ್ಲಿ ಭವಿಷ್ಯದ ಬದುಕಿನ ಬಗ್ಗೆ ಜಿಜ್ಞಾಸೆಗಳು ಮೂಡುತ್ತಿದ್ದವು. ಅವನ ಎದೆಯೊಳಗೆ ಮುಂದಿನ ದಿನಗಳಲ್ಲಿ ಭಾರತದಲ್ಲಿ ವಾಸಿಸಬೇಕೆ? ಬೇಡವೆ? ಎಂಬ ಪ್ರಶ್ನೆಗಳ ಬಿರುಗಾಳಿ ಏಳುತ್ತಿತ್ತು.

1930 ರಲ್ಲಿ ಭಾರತದಾದ್ಯಂತ ಗಾಂಧೀಜಿ ನಡೆಸಿದ ಉಪ್ಪಿನ ಸತ್ಯಾಗ್ರಹದಿಂದ ಸ್ವಾತಂತ್ರ್ಯ ಹೋರಾಟ ತೀವ್ರ ಸ್ವರೂಪವನ್ನು ಪಡೆದುಕೊಂಡಿತ್ತು. ತೀರಾ ಹತ್ತಿರದಿಂದ ಭಾರತದ ಸ್ವಾತಂತ್ರ್ಯ ಹೋರಾಟಗಾರರನ್ನು, ಬ್ರಿಟಿಷರ ಕುರಿತಾದ ಅವರ ಅಸಹನೆಯನ್ನು ಕಂಡಿದ್ದ ಕಾರ್ಬೆಟ್‌ಗೆ ಮುಂದಿನ ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಇಂಗ್ಲೆಂಡ್ ಮೂಲದ ಪ್ರಜೆಯಾಗಿ ಇಲ್ಲಿ ಬದುಕುವುದು ದುಸ್ತರ ಎಂಬ ಅಭದ್ರತೆಯ ಭಾವನೆ ಮೂಡತೊಡಗಿತು. ಭಾರತದಲ್ಲಿ ಹುಟ್ಟಿ, ಅಪ್ಪಟ ಭಾರತೀಯನಂತೆ ಬದುಕಿದ ಜಿಮ್ ಕಾರ್ಬೆಟ್ ತನ್ನ ಕೊನೆಯ ದಿನಗಳಲ್ಲಿ ಏಕೆ ಭಾರತವನ್ನು ತೊರೆದು ಹೋಗಿ, ಕೀನ್ಯಾದಲ್ಲಿ ಅನಾಮಿಕನಂತೆ ಅಸುನೀಗಿದ ಎಂಬ ಪ್ರಶ್ನೆಗಳನ್ನು ಇಟ್ಟುಕೊಂಡು ಮೂಲವನ್ನು ಹುಡುಕಿದರೆ, ಇದಕ್ಕೆ ಮೂಲ ಕಾರಣ ಅವನ ತಾಯಿ ಮೇರಿ ಕಾರ್ಬೆಟ್ ಎಂದು ಯಾವುದೇ ಸಂಶಯವಿಲ್ಲದೆ ಹೇಳಬಹುದು. ಆಕೆ 1857ರ ಸಿಪಾಯಿ ದಂಗೆಯ ಸಮಯದಲ್ಲಿ ಭಾರತದ ಸೈನಿಕರು ಉತ್ತರ ಭಾರತದ ನಗರಗಳಲ್ಲಿ ಆಂಗ್ಲರನ್ನು ಹೆಂಗಸರು, ಮಕ್ಕಳೆನ್ನದೆ ನಡುಬೀದಿಯಲ್ಲಿ ತರಿದು ಹಾಕಿದ್ದನ್ನು ಕಣ್ಣಾರೆ ಕಂಡವಳು. ಜೊತೆಗೆ ತನ್ನ ಮೊದಲ ಪತಿ ಭಾರತೀಯರ ದಾಳಿಗೆ ತುತ್ತಾದಾಗ ಅದಕ್ಕೆ ಸಾಕ್ಷಿಯಾದವಳು. ಈ ಎಲ್ಲಾ ಕಥೆಗಳನ್ನ ಚಿಕ್ಕಿಂದಿನಲ್ಲೇ ಕಾರ್ಬೆಟ್‌ಗೆ ವಿವರಿಸುತ್ತಾ, ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಬ್ರಿಟಿಷರಿಗೆ, ಅವರ ಆಸ್ತಿ ಪಾಸ್ತಿಗಳಿಗೆ ಉಳಿಗಾಲವಿಲ್ಲ ಎಂಬ ಭಯದ ಬೀಜವನ್ನು ಬಿತ್ತಿದ್ದಳು. ಅದು ಮುಂದಿನ ದಿನಗಳಲ್ಲಿ, ಅಂದರೆ ಕಾರ್ಬೆಟ್‌ನ ಕೊನೆಯ ದಿನಗಳಲ್ಲಿ ಅವನ ಎದೆಯೊಳಗೆ ಹೆಮ್ಮರವಾಗಿ ಬೆಳೆದು ನಿಂತಿತು.

ಭಾರತ ತೊರೆಯುವ ನಿರ್ಧಾರವನ್ನು ಬಹಿರಂಗವಾಗಿ ಎಲ್ಲಿಯೂ ಪ್ರಕಟಿಸದೆ ತನ್ನ ಸಹೋದರಿ ಮ್ಯಾಗಿ ಜೊತೆ ಸುದೀರ್ಘವಾಗಿ ಚರ್ಚಿಸಿ ನಂತರ ಭಾರತ ತೊರೆಯಲು ನಿರ್ಧರಿಸಿದ ಕಾರ್ಬೆಟ್ ನೈನಿತಾಲ್ ಗಿರಿಧಾಮದಲ್ಲಿದ್ದ ಅವನ ಕುಟುಂಬದ ಎಲ್ಲಾ ಮನೆಗಳು (ಎಂಟು ಅತಿಥಿ ನಿವಾಸಗಳು) ಮತ್ತು ನಿವೇಶನಗಳು, ಹಾಗೂ ಅಂತಿಮವಾಗಿ ತಾವು ವಾಸಿಸುತ್ತಿದ್ದ ಗಾರ್ನಿಹೌಸ್ ಎಂಬ ಬೃಹತ್‌ಬಂಗಲೆಯನ್ನು ಮಾರಾಟ ಮಾಡಿದನು. ಈ ಬಂಗಲೆಯನ್ನು ಖರೀದಿಸಿದ ಸಕ್ಕರೆ ವ್ಯಾಪಾರಿ, ಶರ್ಮ ಎಂಬಾತ ಸ್ವರ್ಗದ ಮೇಲೆ ಭೂಮಿಯ ತುಣುಕೊಂದನ್ನು ಖರೀದಿಸಿದ್ದೀನಿ ಎಂದು ತನ್ನ ಬಂಧು ಮಿತ್ರರ ಜೊತೆ ತನ್ನ ಸಂತಸ ಹಂಚಿಕೊಂಡ. ಆಸ್ತಿ ಮಾರಾಟ ಮತ್ತು ಅಂಗಡಿ (ಮ್ಯಾಥ್ಯು ಅಂಡ್ ಕೊ) ಮಾರಾಟದಿಂದ ಬಂದ ಹಣದಲ್ಲಿ ಅರ್ಧ ಭಾಗವನ್ನು ತನ್ನ ಮತ್ತು ಸಹೋದರಿ ಹೆಸರಿನಲ್ಲಿ ಇನ್ಸೂರೆನ್ಸ್ ಕಂಪನಿಯಲ್ಲಿ ತೊಡಗಿಸಿದ. ಉಳಿದರ್ಧ ಹಣವನ್ನು ಜೊತೆಯಲ್ಲಿ ಇಟ್ಟಕೊಂಡು, ನಂಬಿಕಸ್ಥರಿಗೆ ಸಾಲವಾಗಿ ನೀಡತೊಡಗಿದ.

ಕಾರ್ಬೆಟ್ ಬಳಿ ಜೈಪುರದ ಮಹಾರಾಜ ಕೂಡ ವಾರ್ಷಿಕ ಬಡ್ಡಿಗೆ ಹಣವನ್ನು ಸಾಲವಾಗಿ ಪಡೆಯುತ್ತಿದ್ದ. ನೈನಿತಾಲ್‌ನ ಎಲ್ಲಾ ಆಸ್ತಿ ಮಾರಿದ ಜಿಮ್ ಕಾರ್ಬೆಟ್ ತನ್ನ ಬಳಿ ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ನಂಬಿಕಸ್ತ ಸೇವಕರನ್ನ ಕಾರ್ಬೆಟ್ ಮರೆಯಲಿಲ್ಲ. ಅವರಿಗೆ ಮನೆ ಕಟ್ಟಿಸಿಕೊಟ್ಟು, ತನ್ನ ಮನೆಗಳಲ್ಲಿ ಇದ್ದ  ಮಂಚ, ಮೇಜು, ಕುರ್ಚಿ ಮುಂತಾದ ಸಾಮಾನುಗಳನ್ನು ಉಚಿತವಾಗಿ ಹಂಚಿದ. ಅವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬ್ಯಾಂಕಿನಲ್ಲಿ ಹಣವನ್ನು ಠೇವಣಿ ಇರಿಸಿದ. ಅವನ ಶಿಕಾರಿ ಸಾಹಸಗಳಿಂದ ಹಿಡಿದು, ಮೊಕಮೆಘಾಟ್ ರೈಲ್ವೆ ನಿಲ್ದಾಣ ಮತ್ತು ನೈನಿತಾಲ್‌ನ ನಿವೃತ್ತಿಯ ಬದುಕಿನ ವರೆಗೂ ಸೇವೆ ಸಲ್ಲಿಸಿದ ಮಾದೂಸಿಂಗ್ ಮೋತಿಸಿಂಗ್, ಅವನ ಮಗ ಬಲ್ವ, ಹಾಗೂ ರಾಮ್ ಸಿಂಗ್ ಬಲಸಿಂಗ್ ಇವರೆಲ್ಲರೂ ಶಾಶ್ವತವಾಗಿ ನೆಮ್ಮದಿಯ ಬದುಕು ಕಂಡುಕೊಳ್ಳುವಂತೆ ಮಾಡಿದ. ಇವರ ಜೊತೆಗೆ ಚಳಿಗಾಲದ ತನ್ನ ಹಳ್ಳಿಯಾದ ಚೊಟಿಹಲ್ದಾನಿಯ ಮುಸ್ಲಿಮ್ ಗೆಳೆಯ ಬಹುದ್ದೂರ್ ಖಾನ್ ಮತ್ತು ಬಾಲ್ಯದಲ್ಲಿ ಶಿಕಾರಿ ಕಲಿಸಿದ ಕುನ್ವರ್ ಸಿಂಗ್ ಇವರಿಗೂ ಕೂಡ ಆರ್ಥಿಕ ನೆರವು ನೀಡಿದ. ಆದರೆ, ನಾನು ಭಾರತ ತೊರೆಯುತ್ತಿದ್ದೇನೆ ಎಂಬ ಸುಳಿವನ್ನು ಎಲ್ಲಿಯೂ ಕಲದೊಂಗಿ ಮತ್ತು ಚೋಟಿ ಹಲ್ದಾನಿ ಹಳ್ಳಿಗಳ ಜನರಿಗೆ ಕಾಬೆಟ್ ಬಿಟ್ಟುಕೊಡಲಿಲ್ಲ. ಅವರ ಮನಸನ್ನು ನೋಯಿಸಲು ಇಚ್ಚಿಸದೇ ಕಲದೊಂಗಿಯಲ್ಲಿದ್ದ ಅವನ ಬಂಗಲೆಯನ್ನು ಮಾರಾಟ ಮಾಡದೇ ಹಾಗೆಯೇ ಉಳಿಸಿಕೊಂಡ.

ಜಿಮ್ ಕಾರ್ಬೆಟ್‌ನ ಈ ನೋವಿನ ವಿದಾಯದ ಸಂದರ್ಭವನ್ನು ವಿವೇಚಿಸಿದರೆ, ಇದು ಆ ಕಾಲಘಟ್ಟದಲ್ಲಿ  ಕಾರ್ಬೆಟ್ ಒಬ್ಬ ಮಾತ್ರ ಅನುಭವಿಸಿದ ಸಂಕಟ ಮತ್ತು ತಳಮಳಗಲ್ಲ. ಭಾರತದಲ್ಲಿದ್ದ ಎಲ್ಲಾ ಬ್ರಿಟಿಷರ ತಲ್ಲಣ ಮತ್ತು ತಳಮಳವೂ ಹೌದು ಎನಿಸುತ್ತದೆ. ಭಾರತದಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾಗಿ, ಇಲ್ಲಿನ ಚಿಕ್ಕಮಗಳೂರು, ನೀಲಗಿರಿ, ಕೇರಳ, ಡಾರ್ಜಲಿಂಗ್ ಅಸ್ಸಾಂ ಮುಂತಾದ ಕಡೆ ಕಾಫಿ ಮತ್ತು ಚಹಾ ತೋಟಗಳನ್ನು ಮಾಡಿಕೊಂಡಿದ್ದ ಬ್ರಿಟಿಷ್ ಅಧಿಕಾರಿಗಳು 1947ರಲ್ಲಿ ಭಾರತಕ್ಕೆ ಸ್ವತಂತ್ರ್ಯ ಬಂದಾಗ ತಮ್ಮ ಆಸ್ತಿಗಳನ್ನು ಮಾರಿ, ಜೀವ ಭಯದಿಂದ ತಾಯ್ನಾಡಿಗೆ ಮರಳಿದರು. ಆದರೆ, ಆರೋಗ್ಯ, ಮತ್ತು ಶಿಕ್ಷಣದ ಸೇವೆಯ ಉದ್ದೇಶಕ್ಕಾಗಿ ಭಾರತಕ್ಕೆ ಬಂದಿದ್ದ ಮಿಷನರಿ ಸಂಸ್ಥೆಗಳು, ಅದರ ಕಾರ್ಯಕರ್ತರು ಮಾತ್ರ ಧೈರ್ಯದಿಂದ ಇಲ್ಲೆ ಉಳಿದು ನೆಲೆ ಕಂಡುಕೊಂಡರು.

ಜಿಮ್ ಕಾರ್ಬೆಟ್ ಭಾರತ ತೊರೆಯಲು ಸಿದ್ಧತೆ ನಡೆಸುತ್ತಿದ್ದ ಸಮಯದಲ್ಲೇ ಎರಡನೇ ಮಹಾಯುದ್ಧ ಆರಂಭಗೊಂಡಿತು. ಬ್ರಿಟಿಷರ ಪರ ಭಾರತೀಯ ಸೇನೆ ಹೋರಾಟ ನಡಸಬೇಕೆ ಬೇಡವೇ ಎಂಬುದರ ಬಗ್ಗೆ ಗಾಂಧೀಜಿ ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಜಿಜ್ಙಾಸೆ ಉಂಟಾಯಿತು. ಯುದ್ಧ ಮುಗಿದ ನಂತರ ಭಾರತಕ್ಕೆ ಸ್ವಾತಂತ್ರ್ಯ ನೀಡಲಾಗುವುದು ಎಂಬ ನಿರ್ಣಯವನ್ನು ಇಂಗ್ಲೆಂಡಿನ ಸಂಸತ್ತಿನಲ್ಲಿ ಅಂಗೀಕರಿಸಿದ ಮೇಲೆ ಇಲ್ಲಿನ ನಾಯಕರು ಭಾರತೀಯ ಸೈನಿಕರು ಬ್ರಿಟಿಷ್ ಸೇನೆಯ ಪರವಾಗಿ ಯುದ್ಧದಲ್ಲಿ ಪಾಲ್ಗೊಳ್ಳಲು ಒಪ್ಪಿಗೆ ಸೂಚಿಸಿದರು.

ಆ ವೇಳೆಗಾಗಲೇ ಮಿತ್ರ ರಾಷ್ಟ್ರಗಳ ಮೇಲೆ ಮಿಂಚಿನ ದಾಳಿ ನಡೆಸುತ್ತಾ ಮುನ್ನುಗ್ಗುತ್ತಿದ್ದ ಜಪಾನ್ ಸೇನೆ ಭಾರತದ ನೆರೆಯ ರಾಷ್ಟ್ರ ಬರ್ಮಾದವರೆಗೆ ಬಂದು ನಿಂತಿತ್ತು. ಭಾರತದಲ್ಲಿದ್ದ ಬ್ರಿಟಿಷ್ ಸೇನೆಯ ಜೊತೆಗೆ ಭಾರತೀಯ ಸೇನೆಯನ್ನು ಬರ್ಮಾ ಗಡಿಭಾಗಕ್ಕೆ ಕಳಿಸಿಕೊಡಲು ಬ್ರಿಟಿಷ್ ಸರ್ಕಾರ ನಿರ್ಧರಿಸಿತು. ಆದರೆ, ಬರ್ಮಾದ ಮಳೆಕಾಡುಗಳಲ್ಲಿ, ಮತ್ತು ಅಲ್ಲಿನ ಶೀತ ಪ್ರದೇಶದಲ್ಲಿ ಅನುಭವವಿರದ ನಮ್ಮ ಸೈನಿಕರು ಹೋರಾಟ ಮಾಡುವುದು ಸಾಮಾನ್ಯ ಸಂಗತಿಯಾಗಿರಲಿಲ್ಲ. ಹಾಗಾಗಿ ಸರ್ಕಾರ ಜಿಮ್ ಕಾರ್ಬೆಟ್‌ನ ಮೊರೆ ಹೋಗಿ, ಅರಣ್ಯದಲ್ಲಿ ಸೈನಿಕರು ಯುದ್ಧ ಪರಿಸ್ಥಿತಿಯನ್ನು ನಿಭಾಯಿಸುವ ಬಗ್ಗೆ ತರಬೇತಿ ನೀಡುವಂತೆ ಕೇಳಿಕೊಂಡಿತು. ಇದಕ್ಕಾಗಿ  ಭಾರತದ ಬ್ರಿಟಿಷ್ ಸರ್ಕಾರ 1944ರ ಫೆಬ್ರವರಿಯಲ್ಲಿ ಮಧ್ಯ ಪ್ರದೇಶದ ದಂಡಕಾರಣ್ಯದಲ್ಲಿ ಅಲ್ಪಾವಧಿಯ ತರಬೇತಿ ಶಿಬಿರಗಳನ್ನು, ಕಾರ್ಬೆಟ್ ನೃತೃತ್ವದಲ್ಲಿ ಆಯೋಜಿಸಿತು.

ವಿಶ್ವದ ಮೊದಲ ಮಹಾಯುದ್ಧದಲ್ಲಿ ಇಂಗ್ಲೆಂಡ್ ಪರ ಫ್ರಾನ್ಸ್ ರಣಭೂಮಿಯಲ್ಲಿ ಹೋರಾಟ ನಡೆಸಿ ಅನುಭವ ಹೊಂದಿದ್ದ, ಕಾರ್ಬೆಟ್, ಸೈನಿಕರಿಗೆ, ಅರಣ್ಯ, ಅಲ್ಲಿನ ಜೀವಜಾಲ, ಅವುಗಳ ವೈಶಿಷ್ಟ್ಯತೆ ಮತ್ತು ವರ್ತನೆ ಇವುಗಳೆಲ್ಲವನ್ನು ಪರಿಚಯ ಮಾಡಿಕೊಟ್ಟ. ಅಪಾಯಕಾರಿ ಪ್ರಾಣಿಗಳು ಹತ್ತಿರ ಸುಳಿಯುವ ಸಂದರ್ಭದಲ್ಲಿ ಯಾವ ಪಕ್ಷಿ ಮತ್ತು ಪ್ರಾಣಿಗಳು ಹೇಗೆ ಸೂಚನೆ ನೀಡುತ್ತವೆ, ಅವುಗಳ ಧ್ವನಿ ಹೇಗಿರುತ್ತದೆ ಎಂಬುದನ್ನ ಅನುಕರಣೆ ಮಾಡಿ ತೋರಿಸಿಕೊಟ್ಟ. ಕಾಡಿನಲ್ಲಿ ದಿಕ್ಕು ತಪ್ಪಿದಾಗ ಅನುಸರಿಸಬೇಕಾದ ಕ್ರಮ, ಸೊಳ್ಳೆ, ಜೇನು ನೊಣ ಮುಂತಾದ ಕ್ರಿಮಿ ಕೀಟಗಳ ಕಡಿತದಿಂದ ತಪ್ಪಿಸಿಕೊಳ್ಳಲು ಯಾವ ಗಿಡದ ಸೊಪ್ಪಿನ ರಸವನ್ನು ಶರೀರಕ್ಕೆ ಲೇಪಿಸಬೇಕೆಂಬುದನ್ನು ಸಹ ಕಾರ್ಬೆಟ್ ಸೈನಿಕರಿಗೆ ಮನವರಿಕೆ ಮಾಡಿಕೊಟ್ಟ. ಹಸಿವು, ನೀರಡಿಕೆ ಇವುಗಳನ್ನು ನೀಗಿಸುವ ಸಹಕಾರಿಯಾಗುವ ಕಾಡಿನಲ್ಲಿ ದೊರೆಯಬಹುದಾದ ಹಣ್ಣು ಹಂಪಲಗಳ ಬಗ್ಗೆ ಮಾಹಿತಿ ನೀಡಿದ. ಮಳೆಕಾಡುಗಳಲ್ಲಿ  ಮನುಷ್ಯರಿಗೆ ಎದುರಾಗುವ ಅತಿದೊಡ್ಡ ಸಮಸ್ಯೆಯೆಂದರೆ, ಜಿಗಣೆಗಳ ಕಾಟ. ಇವುಗಳ ನಿವಾರಣೆಗೆ ಪ್ರತಿಯೊಬ್ಬ ಸೈನಿಕ ತನ್ನ ಬಳಿ ತಂಬಾಕು ಮತ್ತು ಸುಣ್ಣವನ್ನು  ಇಟ್ಟುಕೊಳ್ಳುವಂತೆ ಸೂಚಿಸಿದ.

ಜೊತೆಗೆ ಸರ್ಕಾರದ ಮನವೊಲಿಸಿ ಪ್ರತಿಯೊಬ್ಬ ಸೈನಿಕನು ತನ್ನ ಕಾಲುಗಳ ಮಂಡಿಯವರೆಗೂ ಸುತ್ತಿಕೊಳ್ಳಲು ನುಣುಪಾದ ರೇಷ್ಮೆಯ ಬಟ್ಟೆಯನ್ನು ಒದಗಿಸಿಕೊಟ್ಟ. ಜಿಗಣೆಗಳಿಗೆ ಹಿಡಿತ ಸಿಗಲಾರದೆ ಕಾಲಿಗೆ ಹತ್ತಿಕೊಳ್ಳಲಾರವು ಎಂಬುದು ಕಾರ್ಬೆಟ್ ತನ್ನ ಅನುಭವದಲ್ಲಿ ಕಂಡುಕೊಂಡ ಸತ್ಯವಾಗಿತ್ತು. ಹೀಗೆ ಬ್ರಿಟಿಷ್ ಮತ್ತು ಭಾರತೀಯ ಸೈನಿಕರನ್ನು ಸಜ್ಜುಗೊಳಿಸಿ, ಬರ್ಮಾದ ಯುದ್ದ ಭೂಮಿಗೆ ಕಳಿಸಿಕೊಟ್ಟ ಜಿಮ್ ಕಾರ್ಬೆಟ್, ಆ ಬೇಸಿಗೆಯ ದಿನಗಳಲ್ಲಿ ತನ್ನ ವೃದ್ಧಾಪ್ಯವನ್ನು ಲೆಕ್ಕಿಸದೆ ಬರ್ಮಾಕ್ಕೆ ತೆರಳಿ ಸೈನಿಕರ ಆಹಾರ ಸರಬರಾಜು ವ್ಯವಸ್ಥೆಯ ಉಸ್ತುವಾರಿಗೆ ನಿಂತ. ಆ ವೇಳೆಗೆ ಅವನ ವಯಸ್ಸು ಎಪ್ಪತ್ತು ವರುಷಗಳು. 1945ರಲ್ಲಿ ಜಪಾನ್ ಮತ್ತು ಜರ್ಮನಿ ರಾಷ್ಟ್ರಗಳ ಸೋಲಿನಿಂದ ಎರಡನೇ ಮಹಾಯುದ್ಧ ಕೊನೆಗೊಂಡಾಗ, ಭಾರತದ ಬ್ರಿಟಿಷ್ ಸರ್ಕಾರ ಜಿಮ್ ಕಾರ್ಬೆಟ್‌ನ ಸೇವೆಯನ್ನು ಮನ್ನಿಸಿ ಆತನಿಗೆ ’ಕಂಪಾನಿಯನ್ ಆಫ್ ದ ಇಂಡಿಯನ್ ಎಂಪೈರ್’ ಎಂಬ ಭಾರತದ ಅತ್ಯನ್ನುತ ಮಿಲಿಟರಿ ಗೌರವ ನೀಡಿ ಸನ್ಮಾನಿಸಿತು.

                                                                                       (ಮುಂದುವರಿಯುವುದು)

Leave a Reply

Your email address will not be published.