Daily Archives: July 9, 2012

ಪೇಜಾವರ ಸ್ವಾಮಿ ಉಪವಾಸ ನಾಟಕದಲ್ಲಿ ಉಪವಾಸ ಬಿದ್ದ ಕುಡುಬಿಗಳು

-ನವೀನ್ ಸೂರಿಂಜೆ

ಮಂಗಳೂರು ವಿಶೇಷ ಆರ್ಥಿಕ ವಲಯದ ಎರಡನೇ ಹಂತದ ಯೋಜನೆಗಾಗಿ ಸರ್ಕಾರ ಭೂಸ್ವಾಧೀನಗೊಳಿಸಲು ಮಾಡಿದ್ದ ಅಧಿಸೂಚನೆಯನ್ನು ರದ್ದುಗೊಳಿಸಿ ಜುಲೈ 13 ಕ್ಕೆ ಬರೋಬ್ಬರಿ ಒಂದು ವರ್ಷ ಸಂದುತ್ತದೆ. ಎರಡನೇ ಹಂತದ ಭೂಸ್ವಾಧೀನಕ್ಕಾಗಿ ಅಧಿಸೂಚನೆಗೊಳಿಸಿದ 2035 ಎಕರೆ ಪ್ರದೇಶವನ್ನು ಕೈಬಿಡಬೇಕು ಎಂದು ರೈತ ಹೋರಾಟದ ಭಾಗವಾಗಿ ಪೇಜಾವರ ವಿಶ್ವೇಶತೀರ್ಥ ಸ್ವಾಮಿಗಳು ಬೆಂಗಳೂರಿನಲ್ಲಿ 2011 ಜುಲೈ 12 ರಂದು ಪತ್ರಿಕಾಗೋಷ್ಠಿ ನಡೆಸಿ ಉಪವಾಸ ಘೋಷಣೆ ಮಾಡಿದ್ದರು. ಮರುದಿವಸವೇ ಸರ್ಕಾರ ಎರಡನೇ ಹಂತಕ್ಕಾಗಿನ ಭೂಸ್ವಾಧೀನವನ್ನು ಕೈಬಿಟ್ಟಿತ್ತು. ಪಕ್ಕಾ ರೈತರ ಹೋರಾಟವಾಗಿದ್ದ ಈ ಸೆಝ್ ವಿರುದ್ಧದ ಹೋರಾಟಕ್ಕೆ ಪೇಜಾವರ ಎಂಟ್ರಿ ನೀಡಿದ್ದು ಕುಡುಬಿಪದವಿನ ಭೂಸ್ವಾಧೀನ ಹಿನ್ನಲೆಯಲ್ಲಿ. ಬಡವರೂ ಅನಕ್ಷರಸ್ಥರೂ ಆಗಿರುವ ಮತ್ತು  ಪರಿಶಿಷ್ಠ ಪಂಗಡಕ್ಕೆ ಸೇರಬೇಕಿದ್ದ 9 ಕುಡುಬಿ ಕುಟುಂಬಗಳ ಬಲವಂತದ ಭೂಸ್ವಾಧೀನದ ವಿರುದ್ಧ ಇದ್ದ ಅಲೆಯನ್ನು ಬಳಕೆ ಮಾಡಿಕೊಂಡ ಪೇಜಾವರ ಸ್ವಾಮಿ, ಸೆಝ್ ವಿರುದ್ಧದ ಹೋರಾಟಕ್ಕೆ ದುಮುಕಿದರು. ಇದೀಗ ಪೇಜಾವರ ಉಪವಾಸ ಘೋಷಣೆ ಮತ್ತು ಅಧಿಸೂಚನೆ ರದ್ದಿಗೆ ಒಂದು ವರ್ಷ ಸಂದುತ್ತಾ ಬಂದರೂ ಕುಡುಬಿಗಳ ಭೂಮಿ ಮರಳಲೇ ಇಲ್ಲ. ಕುಡುಬಿಗಳ ಉಪವಾಸ ನಿಲ್ಲಲೇ ಇಲ್ಲ.

ಪೇಜಾವರರ ಉಪವಾಸ ನಾಟಕ

ಮಂಗಳೂರು ವಿಶೇಷ ಆರ್ಥಿಕ ವಲಯದ ಎರಡನೇ ಹಂತಕ್ಕಾಗಿ ಅಧಿಸೂಚನೆಗೊಳಿಸಿದ 2035 ಎಕರೆ ಪ್ರದೇಶವನ್ನು ಡಿನೋಟಿಫೈಗೊಳಿಸಬೇಕು ಮತ್ತು ನಾಗಾರ್ಜುನ ಉಷ್ಣ ವಿದ್ಯುತ್ ಸ್ಥಾವರದ ಸಾಧಕ ಬಾಧಕ ಅಧ್ಯಯನದ ತಂಡದಲ್ಲಿ ನಾಗರಿಕರ ಪರವಾಗಿ ಇಬ್ಬರನ್ನು ಸೇರಿಸಿಕೊಳ್ಳಬೇಕು ಎಂದು ಆಗ್ರಹಿಸಿ ಪೇಜಾವರ ವಿಶ್ವೇಶತೀರ್ಥ ಸ್ವಾಮಿಗಳು 2011 ಜುಲೈ 13 ರಂದು ಉಪವಾಸ ಕುಳಿತುಕೊಳ್ಳುವುದಾಗಿ ಜುಲೈ 12 ರಂದು ಅಂತಿಮ ನಿರ್ಧಾರ ಪ್ರಕಟಿಸಿದ್ದರು. ಪೇಜಾವರ ತನ್ನ ನಿಲುವನ್ನು ಪ್ರಕಟಿಸಿದ ಒಂದೆರಡು ತಾಸುಗಳಲ್ಲೇ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಮಾಧ್ಯಮ ಹೇಳಿಕೆಯನ್ನು ನೀಡಿ “ಪೇಜಾವರ ಶ್ರೀಗಳ ಬೇಡಿಕೆಗೆ ಸರ್ಕಾರ ಒಪ್ಪಿದೆ. 2035.31 ಎಕರೆಯಲ್ಲಿ 1998.03 ಎಕರೆ ಪ್ರದೇಶವನ್ನು ಡಿನೋಟಿಫೈ ಮಾಡಲಾಗುವುದು. ಉಳಿದ 37.27 ಎಕರೆ ಪ್ರದೇಶ ರಸ್ತೆ ಮತ್ತಿತರರ ಮೂಲಭೂತ ಸೌಕರ್ಯಗಳಿಗೆ ಬೇಕಾಗಿದೆ” ಎಂದಿದ್ದರು. ಆಶ್ಚರ್ಯವಾದರೂ ಸತ್ಯ ಏನೆಂದರೆ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಯವರು ಈ ಉತ್ತರವನ್ನು ಜೂನ್ 26 ರಂದೇ ಸಿದ್ಧಪಡಿಸಿದ್ದರು!

2011 ಜೂನ್ 26 ರಂದು ರವಿವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರ ಖಾಸಗಿ ನಿವಾಸದಲ್ಲಿ ಸಭೆಯೊಂದನ್ನು ನಿಗಧಿಗೊಳಿಸಲಾಗಿತ್ತು. ಮಂಗಳೂರು ವಿಶೇಷ ಆರ್ಥಿಕ ವಲಯದ ವಿವಾದದ ಕುರಿತಾಗಿಯೇ ಈ ಸಭೆಯನ್ನು ಕರೆಯಲಾಗಿತ್ತು. ಮುಖ್ಯಮಂತ್ರಿಯ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಅಂದಿನ ಪರಿಸರ ಸಚಿವ ಕೃಷ್ಣ ಜೆ.ಪಾಲೇಮಾರ್, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು, ಇಂಧನ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ, ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ಸಹಿತ ಮಂಗಳೂರು ಕೃಷಿ ಭೂಮಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಮಧುಕರ ಅಮೀನ್, ಆರ್‌ಎಸ್‌ಎಸ್‌ನ ಕಲ್ಲಡ್ಕ ಪ್ರಭಾಕರ ಭಟ್, ಜಯದೇವ್ ಭಾಗವಹಿಸಿದ್ದರು. ಸುಮಾರು 8 ಗಂಟೆಗೆ ಆರಂಭವಾದ ಸಭೆ 9.30ಕ್ಕೆ ಕೊನೆಗೊಂಡಿತ್ತು. ಮುಖ್ಯಮಂತ್ರಿ ನಿವಾಸದಲ್ಲಿ ಅಧಿಕೃತವಾಗಿಯೇ ನಡೆದ ಸಭೆಯಲ್ಲಿ 1998.03 ಎಕರೆ ಜಮೀನನ್ನು ಡಿನೋಟಿಪೈ ಮಾಡುವ ಕುರಿತು ನಿರ್ಧಾರ ಕೈಗೊಳ್ಳಲಾಗಿತ್ತು. ಎಸ್ಇಝಡ್ ವಿರುದ್ಧ ದಲಿತರಿಂದ ಆರಂಭವಾದ ರೈತ ಹೋರಾಟವನ್ನು ಪೇಜಾವರರ ಕೈಗೆ ಒಪ್ಪಿಸಿದವರಲ್ಲಿ ಒಬ್ಬರಾಗಿರುವ ಕೃಷಿ ಭೂಮಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಮಧುಕರ ಅಮೀನ್ ಈ ಸಭೆಯಲ್ಲಿದ್ದರು ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಮಧುಕರ ಅಮೀನ್ ಈ ಸಭೆಯ ನಿರ್ಣಯಗಳನ್ನು ಪೇಜಾವರ ಸ್ವಾಮಿಯ ಗಮನಕ್ಕೆ ತಂದಿಲ್ಲದಿರುವ ಸಾಧ್ಯತೆಗಳೇ ಇಲ್ಲ. ಇನ್ನೊಂದೆಡೆ ಆರ್‌ಎಸ್‌ಎಸ್‌ನ ಪ್ರಮುಖರಿದ್ದ ಸಭೆಯ ನಿರ್ಣಯಗಳು ಪೇಜಾವರ ಶ್ರೀಗಳಿಗೆ ತಿಳಿದಿರಲೇಬೇಕು. ಹಾಗಿದ್ದರೆ ಜೂನ್ 26 ರಂದು ಸರ್ಕಾರ 1998.03 ಎಕರೆಯನ್ನು ಡಿನೋಟಿಪೈಗೊಳಿಸಲು ನಿರ್ಧಾರ ಮಾಡಿತ್ತಾದರೂ ಜುಲೈ 12 ರಂದು ಪೇಜಾವರ ಪತ್ರಿಕಾಗೋಷ್ಠಿ ನಡೆಸಿ ನಿರಶನ ಕೈಗೊಳ್ಳುವ ಬಗ್ಗೆ ಪ್ರಕಟ ಮಾಡಿದ್ದೇಕೆ? ಜೂನ್ 26 ರಂದು ಮಾಡಿದ ನಿರ್ಣಯವನ್ನು ಪೇಜಾವರ ಉಪವಾಸ ಘೋಷಣೆಯ ನಂತರ ಸರ್ಕಾರ ಬಹಿರಂಗಗೊಳಿಸಿದ್ದೇಕೆ ಎಂಬ ಪ್ರಶ್ನೆಗಳಲ್ಲೇ ಉತ್ತರವಿದೆ.

2011 ಜೂನ್ 26 ರಂದು ಮುಖ್ಯಮಂತ್ರಿ ನಿವಾಸದಲ್ಲಿ ಸೆಝ್ ಕುರಿತಾದ ಸಭೆ ನಡೆದಿರುವ ಬಗ್ಗೆ ಯಾರೂ ಅಲ್ಲಗಳೆಯುವಂತಿಲ್ಲ. ರಾಜ್ಯದ ಪ್ರಮುಖ ದಿನಪತ್ರಿಕೆಗಳ ಬೆಂಗಳೂರು ಆವೃತ್ತಿಯಲ್ಲಿ ಈ ಬಗ್ಗೆ ವರದಿಯಾಗಿತ್ತು. ಜೂನ್ 27 ರಂದು ಧರ್ಮಸ್ಥಳಕ್ಕೆ ಬಂದಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದನ್ನು ಸ್ಪಷ್ಟಪಡಿಸಿದ್ದರೂ ಕೂಡಾ. ಆದರೆ ಮಾಧ್ಯಮಗಳಿಗೆ ಆ ಸುದ್ಧಿ ಬೇಕಾಗಿರಲಿಲ್ಲ. ಪತ್ರಕರ್ತರಿಗೆ (ನನಗೂ ಸೇರಿ) ಬೇಕಾಗಿದ್ದಿದ್ದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಮಧ್ಯೆ ನಡೆಯಬೇಕಿದ್ದ ಆಣೆ ಪ್ರಮಾಣದ ವಿಚಾರ ಮಾತ್ರ! ಮಾತ್ರವಲ್ಲದೆ ಜೂನ್ 26 ರಂದು ನಡೆದ ಈ ಸಭೆಯಲ್ಲಿ ಕೃಷಿಕರ ಪರವಾಗಿ ಕೃಷಿಭೂಮಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಮಧುಕರ ಅಮೀನ್ ಭಾಗವಹಿಸಿದ್ದು ಎಲ್ಲಾ ರೈತರಿಗೂ ಗೊತ್ತಿರುವ ಸಂಗತಿಯೇ. ಹಾಗಿದ್ದರೂ ಈ ಎಲ್ಲಾ ನಾಟಕೀಯ ಬೆಳವಣಿಗೆಗಳು ನಡೆದಿದ್ದು, ವ್ಯವಸ್ಥೆಯ ವಿರುದ್ಧದ ರೈತ ಬಂಡಾಯದ ಹೋರಾಟಗಳನ್ನು ಹತ್ತಿಕ್ಕುವ ಸಲುವಾಗಿ. ಸಾಧು ಸಂತರ ಕಡೆಯಿಂದ ಹೋರಾಟ ನಡೆದರೆ ತಕ್ಷಣ ನ್ಯಾಯ ಸಿಗುತ್ತದೆ ಎಂಬ ಬಗ್ಗೆ ಜನರಲ್ಲಿ ನಂಬಿಕೆಯನ್ನು ಹುಟ್ಟಿಸಿ ಜನರಲ್ಲಿನ ಹೋರಾಟದ ಕಿಚ್ಚನ್ನು ಕಡಿಮೆ ಮಾಡಬೇಕು ಎಂಬ ಉದ್ದೇಶದಿಂದಲೇ ಪೇಜಾವರ ವಿಶ್ವೇಶತೀರ್ಥರಿಂದ ಉಪವಾಸ ಘೋಷಣೆ ಮಾಡಿಸಿ ಸರ್ಕಾರ ತಕ್ಷಣ ಸ್ಪಂದನೆ ನೀಡೋ ನಾಟಕವಾಡಿದೆ.

ಸೆಝ್ ವಿರುದ್ಧ ಹೋರಾಟ ಆರಂಭಿಸಿದ್ದು ದಲಿತರು

ಮಂಗಳೂರು ವಿಶೇಷ ಆರ್ಥಿಕ ವಲಯದ ವಿರುದ್ಧ ನೇರವಾಗಿ ಹೋರಾಟ ಆರಂಭಿಸಿದ್ದು ದಲಿತರು ಎಂಬುದನ್ನು ಪೇಜಾವರರ ಮುಖ ಪ್ರಭಾವ ಅಳಿಸಿ ಹಾಕಿದ್ದರಿಂದ ಮತ್ತೊಮ್ಮೆ ನೆನಪಿಸಿಕೊಳ್ಳಬೇಕಿದೆ. ತಾಲೂಕಿನ ಪೆರ್ಮುದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೆರ್ಮುದೆ, ಕಳವಾರು ಗ್ರಾಮದಲ್ಲಿ ಎಂಎಸ್ಇಝೆಡ್‌ನ ಪ್ರಥಮ ಹಂತಕ್ಕಾಗಿ ಫಲವತ್ತಾದ 1800 ಎಕರೆ ಕೃಷಿ ಭೂಮಿ ಸ್ವಾಧೀನಗೊಂಡ ಬಳಿಕ 2007 ಮೇ 05 ರಲ್ಲಿ ದ್ವಿತೀಯ ಹಂತದ ಎಂಎಸ್ಇಝೆಡ್‌ಗಾಗಿ ಎಕ್ಕಾರು, ಪೆರ್ಮುದೆ, ದೇಲಂತಬೆಟ್ಟಿನ 2035 ಎಕರೆ ಭೂಮಿ ಅಧಿಸೂಚನೆಗೊಳಡಿಸಲಾಗಿತ್ತು. 1800 ಎಕರೆ ಭೂಮಿಯಲ್ಲಿನ ರೈತರು ಸೆಝ್ ವಿರುದ್ಧ ಹೋರಾಟ ನಡೆಸದ ಹಿನ್ನಲೆಯಲ್ಲಿ ಅವರ ಭೂಮಿಯನ್ನು ಸ್ವಾಧೀನಗೊಳಿಸುವುದು ಕಷ್ಟಕರವಾಗಿರಲಿಲ್ಲ. ಪೆರ್ಮುದೆ ಕಳವಾರು ಗ್ರಾಮದ ರೈತರಲ್ಲಿ ಕಾಂಚಣ ಕುಣಿದಾಡೋ ಸಂಧರ್ಭದಲ್ಲಿ ಪಕ್ಕದ ಎಕ್ಕಾರಿನ ಗ್ರಾಮಸ್ಥರಲ್ಲಿ ಸೆಝ್ ವಿರುದ್ಧ ಜನಜಾಗೃತಿ ಮೂಡಿಸುವುದು ಸುಲಭವಾಗಿರಲಿಲ್ಲ. ಈ ಸಂಧರ್ಭದಲ್ಲಿ ಸೆಝ್ ಭಾದಕಗಳ ಬಗ್ಗೆ ಆಳವಾಗಿ ಅಧ್ಯಯನ ನಡೆಸಿದ್ದ ಪರಿಸರವಾದಿಗಳಾದ ನಟೇಶ್ ಉಳ್ಳಾಲ್ ಮತ್ತು ವಿದ್ಯಾದಿನಕರ್‌ಗೆ ಸಿಕ್ಕಿದ್ದು ಎಕ್ಕಾರು ಗ್ರಾಮಸ್ಥರೇ ಆಗಿರುವ . “ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ” ಯ ಜಿಲ್ಲಾ ಪದಾಧಿಕಾರಿಗಳಾದ ಕೃಷ್ಣಪ್ಪ, ರಘು, ಕೃಷ್ಣ ಮತ್ತೊಂದಿಷ್ಟು ದಲಿತ ಮಹಿಳೆಯರು.

ಜನಪ್ರತಿನಿಧಿಗಳೂ ಸೇರಿದಂತೆ ಇಡೀ ಊರಿಗೆ ಊರೇ ಎಸ್ಇಝಡ್‌ನ ಪರಿಹಾರದ ದುಡ್ಡಿಗಾಗಿ ಹಲುಬುತ್ತಿದ್ದ ಸಂಧರ್ಭ ದಲಿತ ಸಂಘರ್ಷ ಸಮಿತಿ ಸದಸ್ಯರಾಗಿರೋ ಕೃಷ್ಣಪ್ಪ, ರಘು, ಕೃಷ್ಣ ಒಂದಷ್ಟು ಜನರನ್ನು ಕಟ್ಟಿಕೊಂಡು ಸೆಝ್ ವಿರುದ್ಧ ಸಂಘರ್ಷಕ್ಕಿಳಿದಿದ್ದರು. ಸಂಘರ್ಷವೆಂದರೆ ಕೇವಲ ಭಾಷಣದ ಸಂಘರ್ಷವಲ್ಲ. ದೈಹಿಕವಾಗಿಯೂ ಸೆಝ್ ಅಧಿಕಾರಿಗಳು, ಕೆಐಎಡಿಬಿ ಸಿಬ್ಬಂಧಿಗಳು, ಸೆಝ್ ಪರ ದಳ್ಳಾಲಿಗಳು, ಗೂಂಡಾಗಳ ವಿರುದ್ಧ ಹೋರಾಡಲಾಗಿತ್ತು. ಆಗ ಪ್ರತೀ ಪತ್ರಿಕೆಗಳಿಗೂ ಪುಟಗಟ್ಟಲೆ ಜಾಹೀರಾತು ಇದ್ದಿದ್ದರಿಂದ ಕೃಷ್ಣಪ್ಪನ ಗಲಾಟೆ ದೊಡ್ಡ ಸುದ್ಧಿಯಾಗಿರಲಿಲ್ಲ. ಕೃಷ್ಣಪ್ಪ, ರಘು, ಕೃಷ್ಣ, ಲಾರೆನ್ಸ್, ವಿಲಿಯಂ, ನಟೇಶ್ ಉಳ್ಳಾಲ್, ವಿದ್ಯಾ ದಿನಕರ್ ವಿರುದ್ಧ ಬಜಪೆ ಪೊಲೀಸ್ ಠಾಣೆಯಲ್ಲಿ 9 ದೂರುಗಳು ದಾಖಲಾಗಿರುವುದೇ ಅಂದಿನ ಸಂಘರ್ಷಕ್ಕೆ ಸಾಕ್ಷಿ. ಇಷ್ಟೆಲ್ಲಾ ಸಂಘರ್ಷದ ನಂತರ ಎಕ್ಕಾರು, ಪೆರ್ಮುದೆ, ದೇಲಂತಬೆಟ್ಟಿನ ಕೃಷಿಕರಲ್ಲಿ ಜಾಗೃತಿ ಮೂಡಿದ್ದು. ಇವರ ಹೋರಾಟದ ಮಧ್ಯೆಯೂ ಅಲ್ಲೊಬ್ಬರು ಇಲ್ಲೊಬ್ಬರು ಭೂಮಿ ನೀಡಲು ಮುಂದೆ ಬಂದು ಕೆಐಎಡಿಬಿಗೆ ಒಪ್ಪಿಗೆ ಪತ್ರ ನೀಡಿದ್ದರು. ಕೃಷಿಕರಿಂದ ಒಪ್ಪಿಗೆ ಪತ್ರ ಪಡೆದುಕೊಂಡ ಕೆಐಎಡಿಬಿ ಅಧಿಕಾರಿಗಳು ಜಾರ್ಜ್ ಎಂಬವರ ಮನೆಗೆ ಸರ್ವೆ ಮಾಡಲು ಬಂದಾಗ ಕೃಷ್ಣಪ್ಪ, ರಘು, ಲಾರೆನ್ಸ್ ಬಂದರು ಎಂಬ ಒಂದೇ ಕಾರಣಕ್ಕೆ ದಾಖಲೆಗಳನ್ನು ಬಿಟ್ಟು ಅಧಿಕಾರಿಗಳು ಪರಾರಿಯಾಗಿದ್ದರು. ನಂತರ ಬಜಪೆ ಠಾಣೆಗೆ ಬಂದು ಹೋರಾಟಗಾರರ ವಿರುದ್ಧ ಸುಳ್ಳು ನೀಡಿದ್ದರು ಎಂಬುದು ಬೇರೆ ಮಾತು. ಇಂತಹ ಹೋರಾಟದಿಂದಾಗಿಯೇ ಕೃಷಿ ಭೂಮಿ ಸಂರಕ್ಷಣಾ ಸಮಿತಿ ಬಲಗೊಂಡಿತ್ತೇ ಹೊರತು ಸಮಿತಿಯ ಪದಾಧಿಕಾರಿಗಳ ಪ್ರಭಾವದಿಂದಲ್ಲ.

ಜಮಾಅತೆ ಇಸ್ಲಾಮೀ ಹಿಂದ್ ಮತ್ತು ಪೇಜಾವರ

2007 ರಲ್ಲಿ ಎಕ್ಕಾರು, ಪೆರ್ಮುದೆ, ದೇಲಂತಬೆಟ್ಟಿನ ರೈತರು ಹೋರಾಟ ನಡೆಸುತ್ತಿದ್ದ ಸಂಧರ್ಭ ಯಾವೊಬ್ಬರೂ ಜನಪ್ರತಿನಿಧಿಗಳಾಗಲೀ, ಸಂಘಸಂಸ್ಥೆಗಳಾಗಲೀ ರೈತರಿಗೆ ಹೋರಾಟ ನೀಡುತ್ತಿರಲಿಲ್ಲ. ಒಂದೆರಡು ಪತ್ರಕರ್ತರು ಸಣ್ಣ ಡಿಜಿಟಲ್ ಕ್ಯಾಮರ ಹಿಡಿದುಕೊಂಡು ಸುತ್ತಾಡುವುದು ಬಿಟ್ಟರೆ ಪತ್ರಕರ್ತರೂ ಹೋರಾಟವನ್ನು ಕ್ಯಾರೇ ಮಾಡದ ದಿನಗಳವು. ಸೆಝ್‌ನ ದುಡ್ಡಿನ ಪ್ರಭಾವವೇ ಅಂತದ್ದು! ಇಂತಹ ಸಂದರ್ಭದಲ್ಲಿ ಪ್ರಚಾರ ಸಿಗುವುದಿಲ್ಲವೆಂದು ಗೊತ್ತಿದ್ದರೂ ಹೋರಾಟಕ್ಕೆ ಬಂದವರು ಜಮಾ ಅತೆ ಇಸ್ಲಾಮೀ ಹಿಂದ್‌ನ ಮಹಮ್ಮದ್ ಕುಂಜ್ಞ ಮತ್ತು ಒಂದಷ್ಟು ಹುಡುಗರು. ನಿರಂತರವಾಗಿ ನಡೆದ ಹೋರಾಟವನ್ನು ಧರ್ಮಾತೀತ ಮಾಡಬೇಕು ಎಂಬ ಒಂದೇ ಉದ್ದೇಶದಿಂದ ಮಹಮ್ಮದ್ ಕುಂಜ್ಞರವರು ಕೇಮಾರು ಸಾಂಧೀಪಿನಿ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮಿಯವರನ್ನು ಪ್ರತಿಭಟನಾ ಸ್ಥಳಕ್ಕೆ ಕರೆಸಿಕೊಂಡರು. ಅದು ಫಸ್ಟ್ ಟೈಮ್ ಒಬ್ಬ ಕೇಸರಿ ವಸ್ತ್ರಧಾರಿ ವ್ಯಕ್ತಿ ಸೆಝ್ ವಿರುದ್ಧ ಕುಡುಬಿಗಳ ಗದ್ದೆಯ ಬದುಗಳಲ್ಲಿ ನಡೆದಾಡಿದ್ದು. ನಂತರ ನಡೆದಿದ್ದೆಲ್ಲವೂ ಕರಾಳ ಇತಿಹಾಸ. ಧರ್ಮಾತೀತವಾಗಿರಲಿ ಎಂಬ ಉದ್ದೇಶದಿಂದ ಕೇಮಾರು ಸ್ವಾಮಿಯೊಬ್ಬರನ್ನು ಕರೆದರೆ ಕೇಮಾರು ಸ್ವಾಮಿ ಇಡೀ ಹೋರಾಟವನ್ನು ಹೈಜಾಕ್ ಮಾಡಿ ಬಿಟ್ಟಿದ್ದರು. ಮತ್ತೊಂದು ವಾರ ಬಿಟ್ಟು ನಡೆದ ಸಭೆಯಲ್ಲಿ ಗುರುಪುರ ವಜ್ರದೇಹಿ ಸ್ವಾಮಿ, ಕೊಲ್ಯ ರಮಾನಂದ ಸ್ವಾಮಿ, ಒಡಿಯೂರು ಗುರುದೇವಾನಂದ ಸ್ವಾಮಿಗಳಿದ್ದರು. ಸಾಲದೆಂಬಂತೆ ಪೇಜಾವರ ವಿಶ್ವೇಶತೀರ್ಥ ಶ್ರೀಗಳ ದಿವ್ಯ ಸಾನಿಧ್ಯವಿತ್ತು. ಯಾವಾಗ ಪೇಜಾವರ ಸ್ವಾಮಿ ಎಂಟ್ರಿಯಾದರೋ ಇಡೀ ಸಂಘಪರಿವಾರ ಕುಡುಬಿಗಳ ಗದ್ದೆಯಲ್ಲಿ ನಡೆದಾಡಿತು. ಹಚ್ಚ ಹಸುರಿನಿಂದ ಕಂಗೊಳಿಸುತ್ತಿದ್ದ ಗದ್ದೆಗಳು ಮಾಯವಾಗಿದ್ದು ಯಾರಿಗೂ ಗೊತ್ತಾದಂತೆ ಅನ್ನಿಸಲೇ ಇಲ್ಲ. 2007 ರಲ್ಲೇ ಉಪವಾಸದ ಅಸ್ತ್ರವನ್ನು ಪ್ರಯೋಗಿಸಿದ್ದ ಪೇಜಾವರ ಸ್ವಾಮಿಗಳು ಇಡೀ ಹೋರಾಟವನ್ನು ತನ್ನ ಕೈಗೆ ತೆಗೆದುಕೊಂಡರು. ಜನ ಕ್ರಾಂತಿಕಾರಿ ಹೋರಾಟವನ್ನು ಕೈಬಿಟ್ಟು ಬ್ಲ್ಯಾಕ್‌ಮೇಲ್ ಹೋರಾಟವನ್ನು ಆಯ್ಕೆ ಮಾಡಿಕೊಂಡರು. ಪೇಜಾವರರ ಸುತ್ತ ಇದ್ದ ಈ ಕೇಸರಿ ರೈತ ಹೋರಾಟಗಾರರ ರಶ್ ಮಧ್ಯೆ ಜಮಾ ಅತೆ ಇಸ್ಲಾಮೀ ಹಿಂದ್ ಪೆರ್ಮುದೆಯಿಂದ ಹಿಂದಕ್ಕೆ ನೂಕಲ್ಪಟ್ಟಿತ್ತು.

ಆಗಿನ್ನೂ ಕುಡುಬಿಗಳ 16.04 ಎಕರೆ ಭೂಮಿಯನ್ನು ಸರ್ಕಾರ ತನ್ನ ವಶಕ್ಕೆ ಪಡೆದುಕೊಂಡಿರಲಿಲ್ಲ. ಕುಡುಬಿಗಳಿಗೆ ನೋಟೀಸ್ ಮಾತ್ರ ಜಾರಿಗೊಳಿಸಲಾಗಿತ್ತು. ಈ ಸಂಧರ್ಭವೇ ಕುಡುಬಿಪದವಿಗೆ ಬಂದ ಪೇಜಾವರ ವಿಶ್ವೇಶತೀರ್ಥ ಸ್ವಾಮಿಗಳು ಕುಡುಬಿಗಳಿಗಿಂತ ಹತ್ತಡಿ ದೂರದಲ್ಲಿ ನಿಂತು ಭೂಮಿ ಉಳಿಸಿಕೊಡುವ ಭರವಸೆ ನೀಡಿದ್ದರು. ಭೂಸ್ವಾಧೀನಕ್ಕೆ ಬರೋ ಅಧಿಕಾರಿಗಳನ್ನು ಒದ್ದೋಡಿಸೋ ನಿರ್ಧಾರ ಮಾಡಿದ್ದ ಕೃಷಿಕರು ಪೇಜಾವರ ಸ್ವಾಮಿಗಳ ಭರವಸೆಯನ್ನು ನಂಬಿ ಕೈಕಟ್ಟಿ ಕುಳಿತುಬಿಟ್ಟರು. ಪೇಜಾವರ ಶ್ರೀಗಳು ಬಿಜೆಪಿಯಲ್ಲಿ ಪ್ರಭಾವಶಾಲಿಗಳು. ಅವರೇನಾದರೂ ನಮ್ಮ ಪರವಾಗಿ ಉಪವಾಸ ಕುಳಿತರೆ ಭೂಮಿ ಮುಟ್ಟೋ ಸಾಹಸವನ್ನು ಸರ್ಕಾರ ಮಾಡುವುದಿಲ್ಲ ಎಂದು ರೈತರು ನಂಬಿದ್ದರು. ಆದರೆ ನಡೆದದ್ದೇ ಬೇರೆ.  2007 ನವೆಂಬರ್ 16 ರಂದು ಪೇಜಾವರ ವಿಶ್ವೇಶತೀರ್ಥ ಸ್ವಾಮಿಗಳು ಪೆರ್ಮುದೆ ಸೋಮನಾಥೇಶ್ವರ ದೇವಸ್ಥಾನದಲ್ಲಿ ಒಂದು ದಿನದ ಉಪವಾಸ ವ್ರತ ಕೈಗೊಂಡರು. ಬೆಳಿಗ್ಗೆ 8 ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಹಾಲು ಬಿಟ್ಟು ಬೇರೇನೂ ಸೇವಿಸದೆ ಕೈಗೊಂಡ ಉಪವಾಸ ಸರ್ಕಾರದ ಮೇಲೆ ಪ್ರಭಾವ ಬೀರಲೇ ಇಲ್ಲ. ಸರ್ಕಾದ ವಿರುದ್ಧ ತೀವ್ರತರಹದ ಹೋರಾಟಗಳು ನಡೆಯಬಾರದು ಎನ್ನೋ ಕಾರಣಕ್ಕಾಗಿಯೇ ಆರ್‌ಎಸ್‌ಎಸ್‌ನ ಕುತಂತ್ರದ ಫಲವಾಗಿಯೇ ಪೇಜಾವರ ಸ್ವಾಮೀಜಿ ಎಸ್ಇಝಡ್ ವಿರುದ್ಧದ ಹೋರಾಟಕ್ಕೆ ದುಮುಕ್ಕಿದ್ದರು ಎಂಬುದು ಅಂದಿನ ದಿನಗಳಲ್ಲೇ ಸಂದೇಹಗಳು ವ್ಯಕ್ತವಾಗಿತ್ತು. 2011 ರ ಜುಲೈ 12 ರದ್ದೂ ಸೇರಿ ಒಟ್ಟು ಐದು ಬಾರಿ ಉಪವಾಸದ ಘೋಷಣೆಯನ್ನು ಪೇಜಾವರ ಸ್ವಾಮಿಗಳು ಮಾಡಿದ್ದಾರೆ. ಪೇಜಾವರ ಸ್ವಾಮಿಗಳು ಮನಸ್ಸು ಮಾಡಿದ್ದರೆ ಅಥವಾ ಮನಸ್ಸು ಮಾಡದೇ ಇದ್ದಿದ್ದರೆ ಅಂದೇ ಕುಡುಬಿಗಳ ಭೂಮಿಯನ್ನು ಉಳಿಸಬಹುದಿತ್ತು. ಪೇಜಾವರ ಸ್ವಾಮಿಗಳು ಹೋರಾಟದ ಮನಸ್ಸು ಮಾಡದೇ ಇದ್ದಿದ್ದರೆ ಕುಡುಬಿಗಳು ಖಂಡಿತವಾಗಿಯೂ ಸಂಘರ್ಷದ ಹಾದಿಯನ್ನು ಹಿಡಿಯುತ್ತಿದ್ದರು. ಆದರೆ ಪೇಜಾವರರನ್ನು ನಂಬಿದ ಮುಗ್ದ, ಅನಕ್ಷರಸ್ಥ ಕುಡುಬಿಗಳನ್ನು ಸರ್ಕಾರ ತನಗೆ ಬೇಕಾದಂತೆ ಬಳಸಿಕೊಂಡು ಕಾರ್ಯಸಾಧನೆ ಮಾಡಿದೆ. ಪೇಜಾವರರ ಬೇಡಿಕೆಯ 2035 ಎಕರೆಯಲ್ಲಿ 37 ಎಕರೆಯನ್ನು ಹೊರತುಪಡಿಸಿ 1998 ಎಕರೆಯನ್ನು ಡಿನೋಟಿಫೈಗೊಳಿಸಿದೆ. ಡಿನೋಟಿಫೈಗೊಳಿಸದ 37.28 ಎಕರೆಯಲ್ಲಿ ಬಹುತೇಕ ಭೂಮಿ ಕುಡುಬಿಗಳಿಗೆ ಸಂಬಂಧಪಟ್ಟಿದ್ದು. ಯಾವ ವ್ಯಕ್ತಿಗಳನ್ನು ಮುಂದಿಟ್ಟುಕೊಂಡು ಪೇಜಾವರ ಸೆಝ್ ವಿರುದ್ಧದ ಹೋರಾಟ ನಡೆಸಿದರೋ ಆ ಮಂದಿಗೆ ನ್ಯಾಯ ಕೊನೆಗೂ ಮರಿಚೀಕೆಯಾಯಿತು.