Daily Archives: July 10, 2012

ಡಿನೋಟಿಫೈ ಮಾಡಿದ ಶೆಟ್ಟರ್ ಪ್ರಾಮಾಣಿಕರೇ?

– ಸೂರ್ಯ ಮುಕುಂದರಾಜ್

ಯಡಿಯೂರಪ್ಪನವರ ಬೆಂಬಲ ಪಡೆದು ಮುಖ್ಯಮಂತ್ರಿ ಗಾದಿಗೇರುತ್ತಿರುವ ಜಗದೀಶ್ ಶೆಟ್ಟರ್ ಮಾಡಿರುವ ಈ ಡಿನೋಟಿಫಿಕೇಷನ್ ಪ್ರಕರಣ ಅವರನ್ನು ಯಡಿಯೂರಪ್ಪನವರ ಸಾಲಿಗೆ ಸೇರಿಸುವುದಷ್ಟೇ ಅಲ್ಲದೆ, ಎಕರೆಗಳ ಲೆಕ್ಕದಲ್ಲಿ ತೆಗೆದುಕೊಂಡರೆ ಯಡಿಯೂರಪ್ಪನವರು ಮಾಡಿದ್ದನ್ನೂ ಮೀರಿಸುತ್ತದೆ. ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರದಲ್ಲಿ ರೈತರಿಗೆ ಮಾರುಕಟ್ಟೆ ಮಾಡಿಕೊಡುವ ಒಂದು ಉತ್ತಮ ಯೋಜನೆಯನ್ನು ಮಣ್ಣು ಪಾಲು ಮಾಡಿದ ಶೆಟ್ಟರ್ ಅವರ ಮಹತ್ಕಾರ್ಯವನ್ನು ಇಲ್ಲಿ ವಿವರವಾಗಿ ದಾಖಲೆಗಳ ಸಮೇತ ಮುಂದಿಡಲಾಗಿದೆ. ಈ ದಾಖಲೆಗಳನ್ನು ಕಳೆದ 8 ತಿಂಗಳಿಂದ ಶೋಧಿಸುತ್ತಿದ್ದು ಇನ್ನೂ ಅನೇಕ ದಾಖಲೆಗಳು ಸಿಗಬೇಕಿದೆ. ಆದರೆ ಇನ್ನು ಒಂದೆರಡು ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಯಾಗುತ್ತಿರುವ ಮತ್ತು ಸ್ವಚ್ಛ ವ್ಯಕ್ತಿತ್ವದ  ಪ್ರಾಮಾಣಿಕ ಎಂದು ಮಾಧ್ಯಮಗಳಲ್ಲಿ ಹೊಗಳಿಸಿಕೊಳ್ಳುತ್ತಿರುವ  ಶೆಟ್ಟರ ಇನ್ನೊಂದು ಮುಖವನ್ನು ಜನತೆಯ ಮುಂದೆ ಬಹಿರಂಗ ಮಾಡುವ ಆರಂಭಿಕ ಪ್ರಯತ್ನ ಇದು.

ರಾಜ್ಯದ ರೈತರಿಗೆ ಅನುಕೂಲವಾಗಲು 1998-99ನೇ ವರ್ಷದಲ್ಲಿ ಬೃಹತ್ ಕೃಷಿ ಮಾರುಕಟ್ಟೆಯೊಂದನ್ನು ಒಂದೇ ಜಾಗದಲ್ಲಿ ತೆರೆಯಲು ರಾಜ್ಯ ಸರ್ಕಾರ ಮುಂದಾಗಿತ್ತು. ಇಲ್ಲಿ ಗೋಡೌನ್‌ಗಳು, ಹರಾಜುಕಟ್ಟೆ, ರೈತರು-ವ್ಯಾಪಾರಿಗಳಿಗೆ ಸಾಂದರ್ಭಿಕ ವಸತಿ ಅನುಕೂಲ, ಸೂಕ್ತ ರಸ್ತೆ ಮಾರ್ಗ ಇತ್ಯಾದಿ ಆಧುನಿಕ ಸೌಲಭ್ಯಗಳಿಂದ ಕೂಡಿದ ಏಕಸೂರಿನ ಅಡಿಯ , ಮುಂದುವರೆದ ದೇಶಗಳಲ್ಲಿ ಇರುವಂತಹ ರೀತಿಯ ಮೇಗಾ ಮಾರುಕಟ್ಟೆ ಇರಬೇಕೆಂಬ ಇರಾದೆ ಕೃಷಿ ಉತ್ಪನ್ನಗಳ ಮಾರಾಟ ಇಲಾಖೆಗೆ (ಎ.ಪಿ.ಎಂ.ಸಿ.) ಇತ್ತು. ಇಲ್ಲಿ ಆಲುಗಡ್ಡೆ, ಈರುಳ್ಳಿ, ದಿನಸಿ, ತರಕಾರಿ… ಹೀಗೆ ಎಲ್ಲ ಬಗೆಯ ಕೃಷಿ ಉತ್ಪನ್ನಗಳ ಮಾರುಕಟ್ಟೆ ಇದಾಗಬೇಕು ಎಂಬ ಪ್ರಸ್ತಾವನೆ ಅದಾಗಿತ್ತು.

ಇದಕ್ಕಾಗಿ ಕರ್ನಾಟಕ ಸರ್ಕಾರ ದಾಸನಪುರ ಹೋಬಳಿ, ಬೆಂಗಳೂರು ಉತ್ತರ ತಾಲ್ಲೂಕಿನ (ಯಶವಂತಪುರಕ್ಕೆ ಹೊಂದಿಕೆಯಂತೆ ಇರುವ) ಹೊನ್ನಸಂದ್ರ, ಪಿಳ್ಳದಳ್ಳಿ, ವಡೇರಹಳ್ಳಿ, ಮತ್ತಹಳ್ಳಿ, ಶೇಷಗಿರಿಪಾಳ್ಯದಲ್ಲಿ ಒಟ್ಟು 356.36 1/2ಎಕರೆ ಜಮೀನನ್ನು ಭೂಸ್ವಾಧೀನ ಪಡಿಸಿಕೊಳ್ಳಲು ದಿನಾಂಕ 20.03.2001ರಲ್ಲಿ 4(1) ಹಾಗು 6(1) ಕಲಂನ ಅಡಿಯಲ್ಲಿ ಅಧಿಸೂಚನೆ ಹೊರಡಿಸಿತ್ತು. ಇದನ್ನು ಬೆಂಗಳೂರು ನಗರ ಭೂಸ್ವಾಧೀನ ಅಧಿಕಾರಿಗಳಿಂದ ವಿಶೇಷ ಜಿಲ್ಲಾಧಿಕಾರಿಗಳು ಮಾಡಿದ್ದರು. ಭೂಸ್ವಾಧೀನ ಕಾಯ್ದೆಯ ಅಡಿಯಲ್ಲಿ 356.36 1/2 ಎಕರೆಗೆ ನೋಟಿಫಿಕೇಷನ್ ಹೊರಬಿದ್ದ ನಂತರ ರಾಜ್ಯ ಕೃಷಿ ಮಾರುಕಟ್ಟೆ ಇಲಾಖೆ ತಕ್ಷಣವೇ ವಶಪಡಿಸಿಕೊಂಡ ಜಮೀನಿಗೆ ಪರಿಹಾರವಾಗಿ 13,01,47,091 ರೂಗಳನ್ನು ವಿಶೇಷ ಭೂಸ್ವಾಧೀನ ಅಧಿಕಾರಿಗಳ ಬಳಿ ಠೇವಣಿ ಹಣವಾಗಿ ಪಾವತಿಸಿತ್ತು. ಕೃಷಿ ಮಾರುಕಟ್ಟೆಗಾಗಿ ಸ್ವಾಧೀನ ಮಾಡಿಕೊಂಡಿದ್ದ ಒಟ್ಟು  356.36 ಎಕರೆ ಸದರಿ ಜಮೀನಿನಲ್ಲಿ 168.27 ಎಕರೆ ಸರ್ಕಾರಿ ಭೂಮಿಯಾಗಿತ್ತು. ಉಳಿಕೆ 188.9 1/2  ಎಕರೆ ಭೂಮಿ ಖಾಸಗಿಯವರದ್ದಾಗಿತ್ತು. ಈ ಖಾಸಗಿ ಭೂಮಿಗೆ ಪರಿಹಾರ ಕೊಡಲು ಸುಮಾರು 13 ಕೋಟಿಗಳ ಹಣವನ್ನು ಎ.ಪಿ.ಎಂ.ಸಿ. ಇಲಾಖೆ ಜಿಲ್ಲಾ ವಿಶೇಷ ಭೂಸ್ವಾಧೀನ ಅಧಿಕಾರಿಗಳ ಬಳಿ ಠೇವಣಿ ಇಟ್ಟಿದ್ದು, ಕೊನೆಗೆ ಕಂದಾಯ ಇಲಾಖೆ ದಿನಾಂಕ 04.03.2006ರಲ್ಲಿ ಇಡೀ ಖಾಸಗಿಯವರ ಭೂಮಿಯನ್ನು ಸ್ವಾಧೀನ ಅಸಿಂಧು ಎಂಬ ನೆಪದ ಅಡಿ ಭೂಸ್ವಾಧೀನದಿಂದ ಬಿಡುಗಡೆ ( ಡಿನೋಟಿಫಿಕೇಷನ್) ಮಾಡಿದೆ. ಇದಾದ ನಂತರ ಅದೇ ಕಂದಾಯ ಇಲಾಖೆಯ ಅಧಿಕಾರಿಗಳು ಸದರಿ ಮೊತ್ತದಲ್ಲಿ 4(1) ಹಾಗು 6(1) ಅಧಿಸೂಚನಾ ಪ್ರಕಟಣೆ ಹಾಗೂ ಪ್ರಚಾರದ ವೆಚ್ಚವಾಗಿ 1,64,772 ರೂಗಳನ್ನು ಮುರಿದುಕೊಂಡು ಉಳಿಕೆ ಹಣವನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಹಿಂದಿರುಗಿಸಲು ಪತ್ರ ಬರೆದಿದೆ.

ಈ ಅಸಿಂಧು ಪ್ರಕ್ರಿಯೆ 2004ರಲ್ಲೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ನಡೆಸಲು ಅಂದಿನ ಎಸ್.ಎಂ. ಕೃಷ್ಣ ಸರ್ಕಾರದ ಕೆಲವು ಮಂತ್ರಿಗಳು ಪ್ರಯತ್ನಿಸಿದ್ದರು. ಕೆಲವು ರಿಯಲ್ ಎಸ್ಟೇಟ್ ಡೆವಲಪರ್‌ಗಳು ಖಾಸಗಿ ಜಮೀನನ್ನು 4(1), 6(1) ನಿಂದ ಬಿಡಿಸಿ ತಮ್ಮ ಬಡಾವಣೆಗಳನ್ನು ನಿರ್ಮಿಸಲು ಇದರ ಹಿಂದೆ ಬಿದ್ದಿದ್ದರು. ಕಂದಾಯ ಇಲಾಖೆಯ ಅಧಿಕಾರಿಗಳು ಆಳುವ ಮಂತ್ರಿಗಳ ಹಾಗು ರಿಯಲ್ ಎಸ್ಟೇಟ್ ಕುಳಗಳ ಪ್ರಭಾವಕ್ಕೆ ಮಣಿದು ಕೃಷಿ ಮೇಗಾ ಮಾರುಕಟ್ಟೆಗೆ ವಶಪಡಿಸಿಕೊಂಡಿದ್ದ  356.36 1/2 ಎಕರೆ ಭೂಮಿಯಲ್ಲಿ ಖಾಸಗಿಯವರ 188.9 1/2 ಗುಂಟೆಯನ್ನು ಭೂಸ್ವಾಧೀನ ಅಸಿಂಧು ಮಾಡಲು ‘ವಿಳಂಬ ಕಾಲ’ ಎಂಬ ಗ್ರೌಂಡನ್ನು ಸೃಷ್ಠಿ ಮಾಡಿದ್ದರು. ಆದರೆ ಅವರ ಆಸೆ ಆಗ ಇಡೇರಲಿಲ್ಲ. ಇದಕ್ಕೆ ಕಾರಣ ಒಮ್ಮೆ ಭೂಸ್ವಾಧೀನ ಪ್ರಕ್ರಿಯೆಗೆ ಒಳಪಟ್ಟು 4(1) ಹಾಗು 6(1) ಆದರೆ ಅಸಿಂಧು ಹೆಸರಿನ ಡಿನೋಟಿಫಿಕೇಷನ್ ಆಗಲಿ, ಇತರ ಯಾವುದೇ ಬಗೆಯ ಡಿನೋಟಿಫಿಕೇಷನನ್ನಾಗಲಿ ಅಂದಿನ ಸಚಿವ ಸಂಪುಟಕ್ಕೆ ಮಾತ್ರ ಕೈಬಿಡಲು ಅಧಿಕಾರವಿದೆ. ಅಂದು ಈ ನಿರ್ಣಯ ಸಚಿವ ಸಂಪುಟದ ಮುಂದೆ ಬಂದಾಗ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅಸಿಂಧು ಪರಿಣಾಮ ಉಂಟುಮಾಡಿದ ಕಂದಾಯ ಅಧಿಕಾರಿಗಳಿಗೆ ಛೀಮಾರಿ ಹಾಕಿ ಭೂಸ್ವಾಧೀನದ ಮರು ಪ್ರಕ್ರಿಯೆ ನಡೆಸುವಂತೆ ಸೂಚಿಸಿ ಸ್ವಾಧೀನ ಕೈಬಿಡುವುದನ್ನು ತಿರಸ್ಕರಿಸಿದ್ದರು. ಸಚಿವ ಸಂಪುಟದ ಮುಂದೆ ಈ ಸಂಗತಿ ಬಂದಾಗ ತಿರಸ್ಕೃತಗೊಳ್ಳುವಂತೆ ಮಾಡಿದ್ದರಲ್ಲಿ ಕೃಷಿ ಮಾರುಕಟ್ಟೆ ಸಮಿತಿಯ ಅಧಿಕಾರಿಗಳ ಶ್ರಮವೂ ಇತ್ತು. ಅಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯಾದರ್ಶಿಗಳಾಗಿದ್ದ ಜಿ. ಶರತ್‌ಚಂದ್ರ  ರಾನಡೆ, ಆಡಳಿತಾಧಿಕಾರಿ ಜಿ.ವಿ.ಕೊಂಗವಾಡರು ನಿರ್ದೇಶಕರಿಗೆ (ಕೃಷಿ ಮಾರಾಟ ಇಲಾಖೆ) ಪತ್ರ ಬರೆದು ತಮ್ಮ ಇಲಾಖೆ ಯೋಜಿಸುತ್ತಿರುವ ಮೆಗಾ ಮಾರುಕಟ್ಟೆ ಕಟ್ಟಲು ಈ ಇಡೀ ಭೂಮಿ ಬೇಕೆಂದು ಪತ್ರ ಬರೆದಿದ್ದರು. ಈ ಪತ್ರದ ಪ್ರತಿಗಳನ್ನು ಸಿಎಂ, ಸ್ವಾಧೀನಾಧಿಕಾರಿ, ಕಂದಾಯ ಕಾರ್ಯದರ್ಶಿ ಎಲ್ಲರಿಗೂ ರವಾನಿಸಿದ್ದರು.

“ಭೂಸ್ವಾಧೀನದ ಮರು ಪ್ರಕ್ರಿಯೆಯಾದರೂ ಸರಿ, ಈಗಾಗಲೇ ನಡೆದಿರುವ ಪ್ರಕ್ರಿಯೆಯನ್ನು ಸರಿ ಮಾಡಿದರಾದರೂ ಸರಿ ಉದ್ದೇಶಿತ ಯೋಜನೆಗೆ ಭೂಮಿ ನೀಡಿ” ಎಂದು 18.06.2004ರಲ್ಲಿ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಯಿತು.

ದುರಂತವೆಂದರೆ. ಸ್ವಾಧೀನವಾದ ಈ ಭೂಮಿ ಹೈಪವರ್ ಕಮಿಟಿಯ ವರದಿಯನ್ನು ಗಾಳಿಗೆ ತೂರಿ ದಿನಾಂಕ 04.03.2006ರಲ್ಲಿ (ಕುಮಾರಸ್ವಾಮಿ-ಯಡಿಯೂರಪ್ಪನವರ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ) ಡಿನೋಟಿಫಿಕೇಷನ್ ಆಯ್ತು. ಇನ್ನೂ ವಿಚಿತ್ರವೆಂದರೆ ಭೂಸ್ವಾಧೀನ ಕಾಯ್ದೆ ಕಲಂ 4(1) ಹಾಗು 6(1) ರ ಪ್ರಕಾರ ಸ್ವಾಧೀನಗೊಂಡ ಭೂಮಿಯ ನಿರ್ಧಾರವನ್ನು ಸಚಿವ ಸಂಪುಟ ಮಾತ್ರ ಮಾಡಬೇಕು ಎಂದಿದ್ದರೂ ಕೇವಲ ಕಿಲ್ಲಾ ಕಂದಾಯ ಅಧಿಕಾರಿಗಳು, ವಿಶೇಷ ಭೂಸ್ವಾಧೀನ ಅಧಿಕಾರಿಗಳ ಕೈಯಲ್ಲೇ ಇದನ್ನು ಮಾಡಿಸಲಾಯ್ತು.

ರಾಜ್ಯದಲ್ಲಿ ಮೆಗಾ ಮಾರುಕಟ್ಟೆಗಳ ಅಭಿವೃದ್ದಿ ಕಾರ್ಯಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಹೈಪವರ್ ಕಮಿಟಿ (ಉನ್ನತ ಮಟ್ಟದ ಸಮಿತಿ)ಯನ್ನು ಮಾಡಿತ್ತು. ಇದರ ಸಭೆಯಲ್ಲಿ ವಿಷಯ ಮೂರು ಆಗಿ ಚರ್ಚೆಗೊಂಡು, “ಸರ್ಕಾರಿ ಜಮೀನನ್ನು ಮಾತ್ರ ಸಂಪೂರ್ಣವಾಗಿ ವಶಪಡಿಸಿಕೊಳ್ಳಲು ಕ್ರಮ ಜರುಗಿಸಿ, ಖಾಸಗಿ ಜಮೀನಿನಲ್ಲಿ ಸರ್ಕಾರಿ ಜಮೀನಿಗೆ ಹೊಂದಿಕೊಂಡಿದ್ದನ್ನು ಮಾತ್ರ ವಶಪಡಿಸಿಕೊಳ್ಳುವುದು ಸೂಕ್ತ” ಎಂಬ ಸಚಿವರ ಅಭಿಪ್ರಾಯ ನಡಾವಳಿ ಪತ್ರದಲ್ಲಿ ದಾಖಲಾಗಿದೆ. ಇದನ್ನೆ ಅಂಗೀಕರಿಸಿ ಖಾಸಗಿಯವರ ಕೇವಲ ಎರಡು ಎಕರೆಗಳನ್ನು ಮಾತ್ರ ಭೂಸ್ವಾಧೀನ ಮಾಡಿಕೊಂಡು ಉಳಿಕೆ 186.9 1/2 ಎಕರೆಗಳನ್ನು ಸನ್ಮಾನ್ಯ ಸಚಿವರು ಅಧಿಸೂಚನೆ ಅಸಿಂಧುವೆಂದು ಮತ್ತು ಕೇವಲ ಸರ್ಕಾರಿ ಭೂಮಿಯನ್ನು ಸಂಪೂರ್ಣ ವಶಪಡಿಸಿಕೊಳ್ಳಲು ಸಚಿವ ಸಂಪುಟದ ಸಭೆ ಮುಂದೆ ತಂದು ಒಪ್ಪಿಗೆ ಪಡೆಯಲು ಕಂದಾಯ ಇಲಾಖೆಯ ಭೂಮಾಪನಾ ಉಪ ಕಾರ್ಯದರ್ಶಿಗೆ ಸೂಚಿಸುತ್ತಾರೆ.

ಆದರೆ ಖಾಸಗಿಯವರ 186.9 1/2 ಎಕರೆಗಳನ್ನು ಕೈಬಿಡುವ ವಿಚಾರವನ್ನು ಸಂಪುಟದ ಮುಂದೆ ತರುವುದಿಲ್ಲ. ಅಸಿಂಧು ಕಾರಣವೇ ಪ್ರಧಾನ ಎಂದಾಗಿದ್ದರೆ ಖಾಸಗಿಯವರ 188.9 1/2 ಎಕರೆಯಲ್ಲಿ 186.9 1/2 ಯನ್ನು ಕೈಬಿಟ್ಟು ಕೇವಲ ಎರಡು ಎಕರೆಗಳನ್ನು ಸ್ವಾಧೀನ ಮಾಡಿಕೊಳ್ಳುವುದು ಕೂಡಾ ಕಾನೂನಿನ ತೊಡಕೇ ಆಗಿತ್ತಲ್ಲವೆ?. ರೈತರ, ಜನರ, ಇಲಾಖೆಯ ಕೆಲಸವೇ ಮುಖ್ಯವಾಗಿದ್ದರೆ ಆ ಎರಡು ಎಕರೆಗೆ ಕಾಯ್ದೆಯ (ಅಧಿಸೂಚನೆ ಅಸಿಂಧು) ತೊಡಕು ಬಗೆಹರಿಸಿದಂತೆ ಉಳಿಕೆ 186.9 1/2 ಎಕರೆ ಖಾಸಗಿ ಜಾಗಕ್ಕೂ ಬಗೆಹರಿಸಿ ಉನ್ನತ ಮಟ್ಟದ ಮೆಗಾ ಮಾರುಕಟ್ಟೆ ತಲೆ ಎತ್ತುವಂತೆ

ವಿಪರ್ಯಾಸವೆಂದರೆ ಇದೆಲ್ಲದರ ಹಿಂದೆ ಇರುವವರು ಈಗಿನ ನಮ್ಮ ಭಾವಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌ರವರು; ಜೆಡಿ(ಎಸ್)-ಬಿಜೆಪಿ ಸರ್ಕಾರದಲ್ಲಿ ಕಂದಾಯ ಮಂತ್ರಿಯಾಗಿದ್ದವರು. ಇವರ ಸೂಚನೆ ಮೇರೆಗೆ ಕಂದಾಯ ಅಧಿಕಾರಿಗಳು ಸ್ವಾಧೀನ ಭೂಮಿಯನ್ನು ಕೈಬಿಡುವ ನಿರ್ಣಯ ತೆಗೆದುಕೊಂಡಿದ್ದು. ಇದಾದ ನಂತರ ದಿನಾಂಕ: 04.03.2006ರಂದು ಸಚಿವ ಸಂಪುಟದ ಗಮನಕ್ಕೆ ತರದೆ ಕೈ ಬಿಟ್ಟಿದ್ದು. ಈಗ ಆ ಜಾಗದಲ್ಲಿ ಭವ್ಯವಾದ, ಐಷಾರಾಮಿ ಖಾಸಗಿ ಲೇಔಟ್‌ಗಳು ತಲೆ ಎತ್ತಿವೆ!

ಅರ್ಧ ಎಕರೆ, ಒಂದು ಎಕರೆ ಜಾಗದ ಡಿನೋಟಿಫಿಕೇಷನ್ ವಿಚಾರಗಳಲ್ಲೆಲ್ಲಾ ಮಂತ್ರಿ, ಮುಖ್ಯಮಂತ್ರಿಗಳು ಜೈಲಿಗೆ ಹೋಗುವ ಪರಿಸ್ಥಿತಿ ನ್ಯಾಯಾಂಗದ ಕೃಪೆಯಿಂದ ಇಂದು ಇದೆ. ಇದು ನಡೆಯುತ್ತಿರುವ ವಾಸ್ತವ. ಆದರೆ 186.9 1/2 ಎಕರೆಯನ್ನು ಕನಿಷ್ಠ ಸಚಿವ ಸಂಪುಟದ ಗಮನಕ್ಕೂ ತರದೆ, ಕೇವಲ ತಮ್ಮ ಕಂದಾಯ ಇಲಾಖೆಯ ಅಧಿಕಾರಿಗಳ ಹಂತದಲ್ಲೆ ಕೈಬಿಟ್ಟಿರುವುದು ಅಕ್ರಮ ಎನ್ನದಿರಲು ಸಾಧ್ಯವೇ? ಎಸ್.ಎಂ. ಕೃಷ್ಣರ ಸರ್ಕಾರ ಮಾಡಲು ಹಿಂಜರಿದ ಡಿನೋಟಿಫಿಕೇಷನ್ ಶೆಟ್ಟರ್ ಕಂದಾಯ ಮಂತ್ರಿಯಾದಾಗ ಮಾಡಲು ಇದ್ದ ಒತ್ತಡಗಳಾದರೂ ಏನು? ಭ್ರಷ್ಟಾಚಾರದ ಕಾರಣ ಇಲ್ಲದೆ ಬೇರೆ ಇರಲು ಸಾಧ್ಯವೇ? ಪ್ರಾಮಾಣಿಕ ಮತ್ತು ಕೈಶುದ್ಧ ಎನ್ನಿಸಿಕೊಳ್ಳುತ್ತಿರುವ ಜಗದೀಶ್ ಶೆಟ್ಟರ್ ಈ ವಿಚಾರದಲ್ಲಿ ಜನರ ಮುಂದೆ ಸ್ವಚ್ಚವಾಗಿ ಬರುವ ಸಮಯ ಇದಾಗಿದೆ.

ಬರಗಾಲದಲ್ಲಿ ಮುಖ್ಯಮಂತ್ರಿಯಾಗುತ್ತಿರುವ ಸೌಜನ್ಯದ ರಾಜಕಾರಣಿ

– ಚಿದಂಬರ ಬೈಕಂಪಾಡಿ

ಬಹುಕಾಲದ ಕನಸು ನನಸು ಮಾಡಿಕೊಂಡಿದ್ದಾರೆ ಜಗದೀಶ್ ಶೆಟ್ಟರ್. ಈಗ ಅವರ ಮನೆ ತುಂಬಾ ಜನ, ಮುಖದ ತುಂಬೆಲ್ಲ ನಗು. ಅವರತ್ತ ಸುಳಿಯದಿದ್ದವರು ಕೈಮುಗಿದುಕೊಂಡು ಬರುತ್ತಿದ್ದಾರೆ. ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣವಚನ ಸ್ವೀಕರಿಸಲಿರುವ ಜಗದೀಶ್ ಶೆಟ್ಟರ್‌ಗೆ ಅಭಿನಂದನೆಗಳ ಸುರಿಮಳೆ, ಹೊಗಳಿಕೆಗಳ ಮಹಾಪೂರ. ಒಬ್ಬ ಮುಖ್ಯಮಂತ್ರಿಯಾದರೆ ಜನ ಇಷ್ಟೆಲ್ಲಾ ಸಂಭ್ರಮಿಸುತ್ತಿರುವುದನ್ನು ಕಂಡರೆ ಯಾರಿಗೆ ತಾನೇ ಜೀವಮಾನದಲ್ಲಿ ತಾನೂ ಮುಖ್ಯಮಂತ್ರಿಯಾಗುವ ಭಾಗ್ಯ ಸಿಕ್ಕಿದರೆ ಸಾಕು ಅಂದುಕೊಳ್ಳದಿರಲು ಸಾಧ್ಯ?

ಅಂತೂ ಅಧಿಕಾರವಿದ್ದಲ್ಲಿ ಜನ ಇರುತ್ತಾರೆ, ಸಕ್ಕರೆ ಇದ್ದಲಿ ಇರುವೆ, ನೊಣಗಳು ಹಿಂಡು ಹಿಂಡಾಗಿ ಬರುತ್ತವೆ ಎನ್ನುವ ಮಾತಿದೆ. ಹಾಗೆ ಜಗದೀಶ್ ಶೆಟ್ಟರ್ ಬಳಿಗೆ ಬರುತ್ತಿರುವವರಲ್ಲಿ ಅವರ ಅಭಿಮಾನಿಗಳು, ರಾಜಕಾರಣಿಗಳು, ಮಂತ್ರಿಯಾಗುವ ಆಸೆ ತುಂಬಿಕೊಂಡವರು, ಸಾಮಾಜಿಕ ಸೇವೆಗಳ ಹೆಸರಲ್ಲಿ ಹೊಟ್ಟೆ ತುಂಬಿಸಿಕೊಳ್ಳುತ್ತಿರುವವರು, ಉದ್ಯಮಿಗಳು, ಸಂಪಾದನೆಗಾಗಿ ವಿವಿಧ ಮಾರ್ಗ ಹಿಡಿದಿರುವ ವೃತ್ತಿಪರರು ಹೀಗೆ ಸಮಾಜದ ಎಲ್ಲಾ ಸ್ತರಗಳ ಜನರೂ ಬರುತ್ತಿದ್ದಾರೆ. ಯಾಕೆಂದರೆ ಜಗದೀಶ್ ಶೆಟ್ಟರ್ ಈ ನಾಡಿನ ಆರೂವರೆ ಕೋಟಿ ಜನರ ಸರ್ಕಾರದ ಮುಖ್ಯಸ್ಥ.

ಈ ಹುದ್ದೆ ಅಲಂಕರಿಸಲು ಸಜ್ಜನ, ಹಿರಿಯತನವಿರುವ ಜಗದೀಶ್ ಶೆಟ್ಟರ್ ಮನಸ್ಸು ಮಾಡಿ ದಶಕವೇ ಕಳೆದಿವೆ. ಸಂಘಪರಿವಾರದ ಹಿನ್ನೆಲೆ ಮತ್ತು ರಾಜಕಾರಣದ ಹಿನ್ನೆಲೆಯಿಂದಲೇ ರಾಜಕೀಯಕ್ಕಿಳಿದ ಜಗದೀಶ್ ಶೆಟ್ಟರ್ ಬಿಜೆಪಿಯಲ್ಲಿ ಈಗಲೂ ಕೈ, ಬಾಯಿ ಶುದ್ಧವಾಗಿಟ್ಟುಕೊಂಡಿರುವ ಕೆಲವರಲ್ಲಿ ಒಬ್ಬರು. ಗಟ್ಟಿಯಾಗಿ ಮಾತನಾಡಲು ಭಯ, ದೊಡ್ಡ ಹೆಜ್ಜೆ ಇಡಲು ಅಂಜಿಕೆ, ಅತಿಯಾಗಿ ನಕ್ಕರೆ ಎದುರಿದ್ದವರು ಅದೇನಂದುಕೊಂಡಾರೋ ಎನ್ನುವ ಮುಜುಗರ, ವಾಚಾಳಿತನವಲ್ಲದ, ದೂರ್ವಾಸ ಪ್ರವೃತ್ತಿಯೂ ಅಲ್ಲದ ಸುಲಭವಾಗಿ ಇತರರನ್ನು ನಂಬಿಬಿಡುವ, ಬಲು ಬೇಗ ಮೋಸಹೋಗಬಲ್ಲ ವ್ಯಕ್ತಿ ಜಗದೀಶ್ ಶೆಟ್ಟರ್. ಒಂದೊಂದು ಸಲ ಇಂಥವರು ಈಗಿನ ರಾಜಕೀಯದಲ್ಲಿ ಸಕ್ಸಸ್ ಆಗಬಲ್ಲರೇ ಎನ್ನುವ ಅನುಮಾನಗಳು ಕಾಡುತ್ತವೆ.

ಸದಾನಂದ ಗೌಡರು ಮುಖ್ಯಮಂತ್ರಿಯಾದಾಗಲೂ ಕಾಡಿದ್ದ ಇಂಥ ಅನುಮಾನಗಳು ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗುತ್ತಿರುವ ಈ ಸಂದರ್ಭದಲ್ಲೂ ಕಾಡತೊಡಗಿವೆ. ಸದಾನಂದ ಗೌಡರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ತಂದವರೇ ಜಗದೀಶ್ ಶೆಟ್ಟರ್ ಅವರನ್ನು ಈ ಹುದ್ದೆಗೇರಿಸುವಲ್ಲಿ ಸೂತ್ರಧಾರಿಗಳು. ರಾಜಕೀಯದಲ್ಲಿ ಮಿತ್ರತ್ವ ಸುಲಭವಾಗಿ ಆಗಿಬಿಡುತ್ತದೆ, ಅಷ್ಟೆ ವೇಗವಾಗಿ ಸಂಬಂಧ ಕೆಡುತ್ತದೆ ಕೂಡಾ. ಸದಾನಂದ ಗೌಡರ ಪ್ರಕರಣದಲ್ಲಿ ಇದನ್ನು ಚೆನ್ನಾಗಿಯೇ ಗುರುತಿಸಬಹುದು.

ಸದಾನಂದ ಗೌಡರು ಖಡಕ್ಕ್ ಸ್ವಭಾವದವರು. ಆ ಕಾರಣಕ್ಕಾಗಿಯೇ ಬಲುಬೇಗ ಅಧಿಕಾರ ಕಳೆದುಕೊಂಡರು ಅನ್ನಿಸುತ್ತದೆ. ಈಗಿನ ರಾಜಕೀಯದಲ್ಲಿ ನಯವಂಚಕತನ, ಸುಳ್ಳನ್ನು ಸತ್ಯದಷ್ಟೇ ನಾಜೂಕಾಗಿ ಹೇಳುವ ಕಲೆ, ಜಗತ್ತಿನಲ್ಲಿರುವ ಮಾಫಿಯಾಗಳ ಜೊತೆ ಲಿಂಕ್ ಬೇಕಾದಾಗ ಲಿಂಕ್, ಬೇಡವಾದಾಗ ಡಿಸ್ಕನೆಕ್ಟ್ ಆಗುವಂಥ ಸಂಬಂಧ, ಹಣ ಮಾಡುವುದು ಯಾರಿಗೂ ಗೊತಾಗದಂಥ ಕಲೆ, ಆದರೆ ತಲೆಮಾರಿಗೆ ಸಾಕಾಗುವಷ್ಟು ಅರ್ಥಾತ್ ಕುಳಿತು ತಿಂದರೂ ಕರಗದಷ್ಟು ಸಂಪಾದಿಸಿಕೊಳ್ಳುವ ಮಹತ್ವಾಕಾಂಕ್ಷೆ, ತಾನೂ ತಿಂದು, ಇತರರೂ ತಿಂದು ತೇಗುವುದಕ್ಕೆ ಅವಕಾಶ ಮಾಡಿಕೊಡುವ ಮನಸ್ಸು ಸಕ್ಸಸ್‌ಫುಲ್ ರಾಜಕಾರಣಿಯಾಗಲು ಇರಲೇ ಬೇಕಾದ ಮಾನದಂಡಗಳು. ಇವುಗಳಲ್ಲಿ ಒಂದೂ ಇಲ್ಲದ ಜಗದೀಶ್ ಶೆಟ್ಟರ್ ಎಲ್ಲದರಲ್ಲೂ ಪಳಗಿದವರನ್ನು ಮಗ್ಗುಲಲ್ಲಿಟ್ಟುಕೊಂಡು ಹೇಗೆ ಅಧಿಕಾರ ನಡೆಸುತ್ತಾರೆ ಎನ್ನುವುದು ನಿಜಕ್ಕೂ ಕುತೂಹಲ.

ಬಿಜೆಪಿ ಹೈಕಮಾಂಡ್‌ಗೆ ಜಗದೀಶ್ ಶೆಟ್ಟರ್ ಪುಣ್ಯಕೋಟಿಯಂಥವರು ಎನ್ನುವುದು ಚೆನ್ನಾಗಿ ಗೊತ್ತು. ಲಕ್ಷ್ಮಣರೇಖೆಯನ್ನು ಮೀರದವರೂ ಎಂಬ ಅರಿವು ಇದ್ದೇ ಇಂಥ ಸಂಕಷ್ಟದಲ್ಲಿ ಮುಂದಾಳತ್ವಕ್ಕೆ ಒಪ್ಪಿದ್ದಾರೆ. ವಾಸ್ತವ ಸಂಗತಿಯೆಂದರೆ ಜಗದೀಶ್ ಶೆಟ್ಟರ್ ಅನುಭವಿ. ಪಕ್ಷದ ರಾಜ್ಯ ಅಧ್ಯಕ್ಷರಾಗಿ, ಕಂದಾಯ ಸಚಿವರಾಗಿ, ಸ್ಪೀಕರ್ ಆಗಿ, ಗ್ರಾಮೀಣ ಅಭಿವೃದ್ಧಿ ಸಚಿವರಾಗಿ ಕೆಲಸ ಮಾಡಿದವರು. ಅಧಿಕಾರಿಗಳಿಗೂ ಸಂತಸವಿದೆ. ಯಾಕೆಂದರೆ ಶೆಟ್ಟರ್ ದೂರ್ವಾಸರಲ್ಲ ಎನ್ನುವುದಕ್ಕೆ. ಎದುರಿನವರು ಕೊಡುವ ಗೌರವಕ್ಕಿಂತಲೂ ಹೆಚ್ಚು ಗೌರವ ಕೊಡುವ ಸೌಜನ್ಯ ಶೆಟ್ಟರ್ ಅವರದು.

ಉತ್ತರ ಕರ್ನಾಟಕದ ಜನರೂ ಕೂಡಾ ತಮ್ಮ ಭಾಗದವರು ಮುಖ್ಯಮಂತ್ರಿಯಾಗಬೇಕು ಎನ್ನುವ ಕನಸು ಕಾಣುತ್ತಿದ್ದರು. ಜಗದೀಶ್ ಶೆಟ್ಟರ್ ಮೂಲಕ ಅವರ ಕನಸೂ ಸಾಕಾರಗೊಂಡಿದೆ.

ಆದರೆ ಶೆಟ್ಟರ್ ಅಧಿಕಾರ ಪದಗ್ರಹಣ ಮಾಡುತ್ತಿರುವ ಕಾಲ ನೋಡಿ. ಕಳೆದ ವರ್ಷದ ಬರಗಾಲದ ಬೇಗೆಯೇ ಆರಿಲ್ಲ, ಈ ವರ್ಷ ಮತ್ತೆ ಬರಗಾಲ ಆವರಿಸಿಕೊಂಡಿದೆ. ಜನರು ಕೆಲಸವಿಲ್ಲದೇ ಗುಳೇ ಹೋಗುವಂಥ ಪರಿಸ್ಥಿತಿ. ಕಳೆದ ಎರಡು ವರ್ಷಗಳಿಂದ ರಾಜ್ಯದ ಅಭಿವೃದ್ಧಿಯ ರಥದ ಚಕ್ರಗಳು ನಿಧಾನವಾಗಿ ಚಲಿಸುತ್ತಿವೆ. ಭ್ರಷ್ಟಾಚಾರ, ಗಣಿ ಹಗರಣಗಳಲ್ಲಿ ಆಡಳಿತ ಪಕ್ಷದವರೇ ಜೈಲಿಗೆ ಹೋಗಲು ಸಾಲುಗಟ್ಟಿ ನಿಂತಿದ್ದಾರೆ. ಸದಾನಂದ ಗೌಡರನ್ನು ಬಂಡಾಯದ ನೆಪದಲ್ಲಿ ಕುರ್ಚಿಯಿಂದ ಇಳಿಸಿರುವ ಕಾರಣ ಕೆಲವು ಒಕ್ಕಲಿಗರು ಕೆರಳಿದ್ದಾರೆ. ಬಣ ರಾಜಕೀಯ ಹಾವಿನಂತೆ ಹೆಡೆ ಎತ್ತಿ ಭುಸುಗುಡುತ್ತಿದೆ. ಹೈಕಮಾಂಡ್ ನಂಬಿ ಏನೂ ಮಾಡುವಂತಿಲ್ಲ ಎನ್ನುವುದಕ್ಕೆ ಸದಾನಂದ ಗೌಡರನ್ನೇ ಗಮನಿಸಿ.

ಈ ಎಲ್ಲಾ ಸಮಸ್ಯೆಗಳ ಮಧ್ಯೆ ಮುಖ್ಯಮಂತ್ರಿ ಕುರ್ಚಿಗೇರುತ್ತಿರುವ ಜಗದೀಶ್ ಶೆಟ್ಟರ್ ಮುಂದಿನ ಚುನಾವಣೆಯಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲೇ ಬೇಕು. ನಿಜಕ್ಕೂ ಉತ್ತರ ಕರ್ನಾಟಕ ಭಾಗದ ಸಜ್ಜನ ರಾಜಕಾರಣಿಯಾದ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಹುದ್ದೆಗೆ ಅರ್ಹರು. ಆದರೆ ಅವರಿಗೆ ಈ ಭಾಗ್ಯ ಬಂದಿರುವ ಕಾಲ ಮಾತ್ರ ಸರಿಯಲ್ಲ. ಒಳ್ಳೆಯ ಕಾಲದವರೇಗೂ ಕಾಯಬಹುದಿತ್ತು ನಿಜ, ಆದರೆ ಆ ಕಾಲ ಬರುವಷ್ಟರಲ್ಲಿ ಮತ್ತೊಂದು ಸನ್ನಿವೇಶ ನಿರ್ಮಾಣವಾಗುವುದನ್ನು ಅಲ್ಲಗಳೆಯುವಂತಿಲ್ಲ. ಈಗಿನ ರಾಜಕೀಯದ ದುಸ್ಥಿತಿಯಲ್ಲೂ ನಾಡಿನ ಜನ ಮೆಚ್ಚುವ ಕೆಲಸ ಮಾಡಲು ಜಗದೀಶ್ ಶೆಟ್ಟರ್‌ಗೆ ಸಾಧ್ಯವಾದರೆ ಅದು ನಿಜಕ್ಕೂ ನಾಡಿನ ಭಾಗ್ಯ.

Yeddyurappa is neither Sonia, nor Shettar a Manmohan Singh!

– Bhumi Banu

Yeddyurappa has neither become Sonia Gandhi, nor Jagadish Shettar is going to be Manmohan Singh. It seems our senior journalist, TJS George, went wrong in speculating how developments might turn in the days to come. The moment Shettar stepped inside residence of BJP’s national general secretary Ananth Kumar in Bangalore on Monday he sent shockers to Yeddyurappa camp.

Probably Yeddyurappa is alone sulking in a corner of his residence in Dollar’s Colony. With his experience in politics of maneuverings, he understands what would be his fate better than MLAs in his camp. When a close confidant in Sadananda Gowda turned his back on him, Yeddyurappa is not political-fool to believe that his long-time foe and short-time friend Shettar will ever be loyal to him.

And, as Dinesh Ameen Mattu in his weekly column in Prajavani wrote, if at all Shettar decides, he has many reasons, to defy Yeddyurappa. Being a younger to Yeddyurappa, a BJP leader from north Karnataka and holding comparatively better image than Yeddyurappa, Shettar has every chance to succeed in his efforts.

If the incumbent government completes its full term, the next assembly elections are due in 11 months. Yeddyurappa has no chance to come out clean in all corruption cases he is fighting in courts, within this short time. The BJP, given its vote base in Lingayat belt in north Karnataka, finds better a chief minister candidate in Shettar than Yeddyurappa in the next elections.

ಸದಾನಂದ ಗೌಡರಿಗೆ ವಿದಾಯ

– ಚಿದಂಬರ ಬೈಕಂಪಾಡಿ

ಇಂಥ ಸ್ಥಿತಿ ಶತ್ರುಗೂ ಬರಬಾರದು ಎನ್ನುವ ಮಾತಿದೆ. ಎಂಥ ಸ್ಥಿತಿ ಅಂದರೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಅನುಭವಿಸುತ್ತಿರುವಂಥದ್ದು. ಹೌದು ಮುಖ್ಯಮಂತ್ರಿಯಂಥ ಪ್ರತಿಷ್ಠಿತ ಹುದ್ದೆ ಅಲಂಕರಿಸಿದ್ದರೂ ದಕ್ಷಿಣ ಕನ್ನಡ ಜಿಲ್ಲೆಯ ಪುಟ್ಟ ಪೇಟೆಯಲ್ಲಿ ನಡೆದುಕೊಂಡು ಹೋಗುವಾಗ ಅಪರಿಚಿತರು, ಪರಿಚಿತರು ನಮಸ್ಕರಿಸುತ್ತಿದ್ದಾಗ ಆಗುತ್ತಿದ್ದ ಹೆಮ್ಮೆ ಸಾಲುಗಟ್ಟಿ ಕಾರುಗಳು ಮೆರವಣಿಗೆಯಲ್ಲಿ ಕರೆದೊಯ್ಯುತ್ತಿದ್ದರೂ ಆಗುತ್ತಿಲ್ಲ. ಕಾರಿನಲ್ಲಿ ಪ್ರಯಾಣಿಸುವಾಗ ಆಗುತ್ತಿದ್ದ ಸಂತಸ ಈಗ ವಿಮಾನ, ಹೆಲಿಕಾಫ್ಟರ್‌ನಲ್ಲಿ ಬಾನಂಗಳದಲ್ಲಿ ಹಾರಿಕೊಂಡು ಹೋಗುತ್ತಿದ್ದರೂ ಆದಿನಗಳೇ ಹಿತಕರ.

ಮೊದಲ ಬಾರಿಗೆ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದಾಗ ರೈತರು, ಕೂಲಿಕಾರ್ಮಿಕರ ಬಗ್ಗೆ ಧ್ವನಿ ಎತ್ತಿ ಪಾದರಸದಂತೆ ಓಡಾಡಿಕೊಂಡಿದ್ದಾಗ, ಸಂಸದರಾಗಿ ಲೋಕಸಭೆ ಮೆಟ್ಟಿಲೇರಿ ಅಡಿಕೆ, ರಬ್ಬರ್ ಬೆಳೆಗಾರರ ಹಿತಕಾಯಲು ಸದನದ ಗಮನ ಸೆಳೆದಾಗಿನ ಹಿತಾನುಭವ ಈಗಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಜೆಡಿಎಸ್ ಜೊತೆ ಸೇರಿ ದಕ್ಷಿಣ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರ ಬಾಗಿಲಿಗೆ ತಂದು ನಿಲ್ಲಿಸಿದಾಗಿನ ಖುಷಿ ಈಗ ಇರಲಾರದು.

ಕರ್ನಾಟಕ ಹಾಲು ಒಕ್ಕೂಟದ ಅಧ್ಯಕ್ಷರ ಹುದ್ದೆಯೂ ಸಿಗದೆ ಬೇಸರಗೊಂಡಿದ್ದರೂ ಮುಖ್ಯಮಂತ್ರಿ ಹುದ್ದೆ ಅಲಂಕರಿಸುವ ಅವಕಾಶ ಸಿಕ್ಕಾಗಲೂ ಸಂತಸವಿಲ್ಲ ಅಂತಾದರೆ ಏನಿದರ ಮರ್ಮ.? ಅವರೇ ಹೇಳಿಕೊಳ್ಳುತ್ತಿದ್ದ ಮಾತು ’ನಾನು ಕಠಿಣ ಸವಾಲುಗಳನ್ನು ಎದುರಿಸುತ್ತಿದ್ದೇನೆ. ನನಗೀಗ ಸವಾಲಿನ ದಿನಗಳು’. ಹೌದು, ಅವರು ಸವಾಲುಗಳನ್ನು ಎದುರಿಸುತ್ತಿದ್ದರು. ಹೊರಗಿನ ಸವಾಲುಗಳನ್ನು ಎದುರಿಸುವ ಕಲೆಗಾರಿಕೆ ಸದಾನಂದ ಗೌಡರಿಗೆ ಕರಗತವಾಗಿತ್ತು. ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಪಕ್ಷದೊಳಗಿನ ಆಂತರಿಕ ಸವಾಲುಗಳನ್ನು ನಿಭಾಯಿಸಿದ ಅನುಭವ ಇತ್ತು. ಆದ್ದರಿಂದಲೇ ಸದಾನಂದ ಗೌಡರು ಹೇಳಿದ್ದು ’ಈ ಸವಾಲುಗಳನ್ನು ಎದುರಿಸುತ್ತೇನ’ ಎಂದು.

ಮುಖ್ಯಮಂತ್ರಿಯಾಗಿ ಸದಾನಂದ ಗೌಡರು ಕುಳಿತಿದ್ದುದು ಮುಳ್ಳಿನ ಕುರ್ಚಿ, ಮಲಗುತ್ತಿದ್ದುದು ಮುಳ್ಳಿನ ಹಾಸಿಗೆ ಮೇಲೆ. ನಡೆದಾಡಿದ್ದು ಕಲ್ಲುಮುಳ್ಳುಗಳಿರುವ ದಾರಿಯಲ್ಲಿ. ಇದ್ದರೆ ಇರಬೇಕು ಸದಾನಂದ ಗೌಡರ ಹಾಗೆ ಎನ್ನುತ್ತಿದ್ದವರು ಇಂದು ಇರಬಾರದಪ್ಪಾ ಸದಾನಂದ ಗೌಡರಂಥವರು ಎನ್ನುತ್ತಿದ್ದಾರೆ. ಅಂದು ಕಿವಿಗೆ ಕಿವಿಕೊಟ್ಟು ಗುಟ್ಟು ಮಾತನಾಡುತ್ತಿದ್ದವರು ಈಗ ಮುಖಕ್ಕೆ ಮುಖಕೊಟ್ಟು ನಿಲ್ಲಲೂ ಹಿಂಜರಿಯುತ್ತಿದ್ದಾರೆ. ಇಷ್ಟಾದರೂ ಬೇಕಿತ್ತಾ ಈ ಕುರ್ಚಿ, ಅಧಿಕಾರ ಎಂದು ತಮ್ಮನ್ನು ತಾವೇ ಕೇಳಿಕೊಳ್ಳುತ್ತಿರುವ ಸದಾನಂದ ಗೌಡರು ನೋವುನುಂಗಿಕೊಂಡು ನಗುತ್ತಿದ್ದ ಮುಖ್ಯಮಂತ್ರಿ.

ಸದಾನಂದ ಗೌಡರು ವಾಚಾಳಿಯಲ್ಲ ಜಗಳ ಕಾಯಲು. ಮುತ್ಸದ್ದಿಯಲ್ಲ ಮೌನಿಯಾಗಿರಲು. ದಡ್ಡರಲ್ಲ ಬೈದರೂ ಕೇಳಿಕೊಂಡು ಸುಮ್ಮನಿರಲು. ಹಿತ್ತಾಳೆ ಕಿವಿಯಿಲ್ಲ ಚಾಡಿ ಹೇಳಲು-ಕೇಳಲು. ರಾಜಕಾರಣಿಯಾದವರಿಗೆ ಮಹತ್ವಾಕಾಂಕ್ಷೆ ಇರುತ್ತದೆ, ಇರಬೇಕು ಕೂಡಾ. ಸದಾನಂದ ಗೌಡರಿಗೂ ಪುಟ್ಟ ಪೇಟೆಯ ರಿಕ್ಷಾ ಯೂನಿಯನ್ ಅಧ್ಯಕ್ಷರಾಗಿದ್ದಾಗಲೇ ಮಹತ್ವಾಕಾಂಕ್ಷೆ ಇತ್ತು. ಸಮಸ್ಯೆ ಹೊತ್ತು ತನ್ನಲ್ಲಿಗೆ ಬರುವವರಿಗೆ ಪರಿಹಾರ ದೊರಕಿಸಿಕೊಡಬೇಕು ಎನ್ನುವ ಹಂಬಲ, ತುಡಿತವಿತ್ತು. ಅದೇ ಅವರನ್ನು ಈ ಹುದ್ದೆಗೆ ತಂದು ನಿಲ್ಲಿಸಿತ್ತು. ಆದರೆ ಹುದ್ದೆಯುಲ್ಲಿ ಕುಳಿತು ಸಂಕಟ ಪಡಬೇಕೆನ್ನುವ ಹಂಬಲ ಯಾರಿಗೂ ಇರಲು ಸಾಧ್ಯವಿಲ್ಲ, ಹಾಗೆಯೇ ಸದಾನಂದ ಗೌಡರಿಗೂ.

ಬಿ.ಎಸ್.ಯಡಿಯೂರಪ್ಪ ಅವರು ಗಣಿ ಪ್ರಕರಣದ ಲೋಕಾಯುಕ್ತ ವರದಿಯಲ್ಲಿ ಕಾಣಿಸಿಕೊಂಡಾಗ ಹೈಕಮಾಂಡ್ ಸಂಸತ್ತಿನಲ್ಲಿ ಆಡಳಿತ ಯುಪಿಎ ಪಕ್ಷಗಳ ಮುಜುಗರದಿಂದ ಪಾರಾಗಲು ಯಡಿಯೂರಪ್ಪ ಅವರನ್ನು ಒಲ್ಲದ ಮನಸ್ಸಿನಿಂದಲೇ ಕೆಳಗಿಳಿಸಿತು. 2ಜಿ ಸ್ಪೆಕ್ಟ್ರಮ್ ಬಲೆಯಲ್ಲಿ ಸಿಲುಕಿದ್ದ ಯುಪಿಎಯನ್ನು ಹಿಗ್ಗಾಮುಗ್ಗ ಎಳೆದಾಡುತ್ತಿದ್ದ ಬಿಜೆಪಿ ಗಣಿಹಗರಣದಲ್ಲಿ ಯಡಿಯೂರಪ್ಪ ಅವರ ಹೆಸರು ಕಾಣಿಸಿಕೊಂಡಾಗ ಇಂಥ ಕ್ರಮ ಅನಿರ್ವಾಯವಾಗಿತ್ತು ನಿಜ. ಆಗ ಯಡಿಯೂರಪ್ಪ ಅವರ ಉತ್ತರಾಧಿಕಾರಿಯಾಗಲು ತುದಿಗಾಲಲ್ಲಿ ನಿಂತಿದ್ದವರು ಅನೇಕರು. ಆದರೆ ಅವರನ್ನು ಸರಸಗಟಾಗಿ ಯಡಿಯೂರಪ್ಪ ಒಪ್ಪುವ ಸ್ಥಿತಿಯಲ್ಲಿರಲಿಲ್ಲ. ಯಾಕೆಂದರೆ ಹೈಕಮಾಂಡ್ ಗಣಿ ಕುಣಿಕೆಯಿಂದ ಪಾರಾದ ಕೂಡಲೇ ಮತ್ತೆ ಪಟ್ಟಾಭಿಷೇಕ ಮಾಡುವ ಭರವಸೆ ನೀಡಿತ್ತು. ವಾಸ್ತವಿಕ ನೆಲೆಗಟ್ಟಿನಲ್ಲಿ ನೋಡುವುದಾದರೆ ಅಧಿಕಾರಕ್ಕೇರಿದ ಮೇಲೆ ಸುಲಭವಾಗಿ ಅಧಿಕಾರ ಕಳೆದುಕೊಳ್ಳಲು ಯಾರೂ ಸಿದ್ಧರಿರುವುದಿಲ್ಲ, ಅಧಿಕಾರದ ಗುಣಧರ್ಮವೇ ಹಾಗೆ. ಇದಕ್ಕೆ ಸದಾನಂದ ಗೌಡರು ಹೊರತಾಗುತ್ತಾರೆ ಎನ್ನುವ ಏಕೈಕ ಆಶಾವಾದ ಯಡಿಯೂರಪ್ಪ ಅವರನ್ನು ಸದಾನಂದ ಗೌಡರಿಗೇ ಉತ್ತರಾಧಿಕಾರ ಪಟ್ಟಕಟ್ಟಬೇಕೆಂದು ರಚ್ಚೆಹಿಡಿಯಲು ಕಾರಣ.

ಯಡಿಯೂರಪ್ಪ ಅವರು ಅಂದುಕೊಂಡಂತೆಯೆ ಸದಾನಂದ ಗೌಡರಿಗೆ ಹೈಕಮಾಂಡ್ ಪಟ್ಟಕಟ್ಟಿತು. ಬಯಸದೇ ಬಂದ ಭಾಗ್ಯವನ್ನು ಅತ್ಯಂತ ವಿನೀತವಾಗಿಯೇ ಗೌಡರು ಸ್ವೀಕರಿಸಿದರು. ಸ್ವಭಾವತ: ಸದಾನಂದ ಗೌಡರು ಕೈ, ಬಾಯಿ ಶುದ್ಧವಾಗಿಟ್ಟುಕೊಂಡ ವ್ಯಕ್ತಿ. ರಾಜಕಾರಣದಲ್ಲಿ ಇಂಥ ಮಡಿವಂತಿಕೆ ನಡೆಯುವುದಿಲ್ಲ. ಒಂದಲ್ಲಾ ಒಂದು ಹಂತದಲ್ಲಿ ಹೊಂದಾಣಿಕೆ ಅನಿರ್ವಾಯ. ಆದರೆ ಇದು ಗೌಡರಿಗೆ ಗೊತ್ತಿಲ್ಲದ ವಿಚಾರವೇನಲ್ಲ. ದಕ್ಷಿಣ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಅಧಿಕಾರದ ಗದ್ದುಗೆ ಏರಿದ ಬಿಜೆಪಿ ಅಷ್ಟುಬೇಗ ಹಗರಣಗಳಲ್ಲಿ ಭಾಗಿಯಾಗುತ್ತದೆಂದು ಯಾರೂ ಊಹಿಸಿರಲಿಲ್ಲ. ಪಕ್ಷದ ಇಮೇಜ್ ಇಳಿಮುಖವಾಗಿ ಹೈಕಮಾಂಡ್ ದೆಹಲಿಯಲ್ಲಿ ಧ್ವನಿಎತ್ತದ ಸ್ಥಿತಿ ನಿರ್ಮಾಣವಾಗಿದ್ದ ಕಾಲಘಟ್ಟದಲ್ಲಿ ಮುಖ್ಯಮಂತ್ರಿಯಾದ ಸದಾನಂದ ಗೌಡರು ಆಡಳಿತದಲ್ಲಿ ಬಿಗಿತರುವ ದಿಕ್ಕಿಗೆ ಹೆಜ್ಜೆ ಹಾಕಿದರು. ಇದು ಹೈಕಮಾಂಡ್‌ಗೆ ಹಿತವೆನಿಸಿದರೂ ವೃತ್ತಿನಿರತರಿಗೆ ಸದಾ ನಗುವ ಸದಾನಂದ ಗೌಡರು ಹೊಂದಾಣಿಕೆಯಾಗುವವರಲ್ಲ ಅನ್ನಿಸಿದ್ದರಲ್ಲಿ ತಪ್ಪಿಲ್ಲ. ಈ ಕಾರಣಕ್ಕಾಗಿಯೇ ಒಳಗಿಂದೊಳಗೇ ಕತ್ತಿಮಸೆಯಲು ತಯಾರಿ ನಡೆದವು. ದಿನಕಳೆದಂತೆ ಯಡಿಯೂರಪ್ಪ ಮತ್ತು ಸದಾನಂದ ಗೌಡರ ನಡುವೆ ಸಂಬಂಧ ಹಳಸಿತು.

ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಸರ್ಕಾರ ಮಾಡಿದ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷರಾಗಿದ್ದ ಸದಾನಂದ ಗೌಡರು ಉಪಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಗಳಸ್ಯಕಂಠಸ್ಯ. ಮೈತ್ರಿ ಸರ್ಕಾರ ಯಶಸ್ವಿಯಾಗಿ ನಡೆದಿದ್ದರೆ ಅದರ ಪಾಲು ಸದಾನಂದ ಗೌಡರಿಗೂ ಇದೆ. ಗಣಿಕುಣಿಕೆಯಿಂದ ಹೈಕೋರ್ಟ್ ವಿಭಾಗೀಯ ಪೀಠ ಯಡಿಯೂರಪ್ಪ ಅವರನ್ನು ಬಿಡಿಸಿದ ಮೇಲೆ ಹೈಕಮಾಂಡ್ ಮಾತ್ರ ಅದನ್ನು ಸಲೀಸಾಗಿ ಒಪ್ಪಿಕೊಂಡು ಮತ್ತೆ ಪಟ್ಟ ಕಟ್ಟುವ ಔದಾರ್ಯ ತೋರಲಿಲ್ಲ. ಆದರೆ ಕಾಯುವ ತಾಳ್ಮೆಯೂ ಯಡಿಯೂರಪ್ಪ ಅವರಿಗೆ ಇಲ್ಲವಾಯಿತು. ಹೈಕಮಾಂಡ್ ಜೊತೆ ಕದನಕ್ಕಿಳಿದ ಯಡಿಯೂರಪ್ಪ ಹುಬ್ಬಳ್ಳಿ ಸಮಾವೇಶದ ತನಕವೂ ನಡೆದುಕೊಂಡ ರೀತಿ, ಅವರು ಯಡಿಯೂರಪ್ಪ ಬಗ್ಗೆ ತಳೆದ ಧೋರಣೆ ರಾಜಕೀಯ ದುರಂತ. ಆನಂತರವೂ ಅದೇ ಮುಂದುರಿಯಿತು.

ಸದಾನಂದ ಗೌಡರು ಸವಾಲುಗಳನ್ನು ಎದುರಿಸುತ್ತಾ ಪಕ್ವಗೊಂಡಿದ್ದರು. ಪ್ರತಿಪಕ್ಷಗಳಿಗಿಂತಲೂ ಸ್ವಪಕ್ಷೀಯರಿಂದಲೇ ಸವಾಲು ಎದುರಿಸಬೇಕಾಗಿರುವುದು ನಿಜಕ್ಕೂ ಬೇಕಿತ್ತಾ ಈ ಕುರ್ಚಿ ಅನ್ನದಿರಲು ಸಾಧ್ಯವೇ? ಹೈಕಮಾಂಡ್ ಮತ್ತು ಯಡಿಯೂರಪ್ಪ ಅವರ ನಡುವಿನ ಪಗಡೆಯಾಟಕ್ಕೆ ಸದಾನಂದ ಗೌಡರು ದಾಳವಾದರು ಅಷ್ಟೇ. ಸದಾನಂದ ಗೌಡರ ಮುಖ್ಯಮಂತ್ರಿ ಹುದ್ದೆಯ ಕೊನೆಯ ಕ್ಷಣಗಳು ಇಷ್ಟು ಬೇಗ ಬರುತ್ತವೆ ಎಂದು ಯಾರೂ ಊಹಿಸಿರಲಿಲ್ಲ. ಗೌಡರ ಪದಚ್ಯುತಿಗೆ ಟೊಂಕಕಟ್ಟಿ ನಿಂತಿದ್ದ ಯಡಿಯೂರಪ್ಪ ಅವರೂ ಇಷ್ಟು ಸಲೀಸಾಗಿ ನಾಯಕತ್ವ ಬದಲಾಗುತ್ತದೆ ಎನ್ನುವ ಕಲ್ಪನೆ ಇರಲಾರದು. ಯಾಕೆಂದರೆ ಗೌಡರ ಬೆನ್ನ ಹಿಂದೆ ನಿಂತಿದ್ದವರು ಉಕ್ಕಿನ ಮನುಷ್ಯ ಅಡ್ವಾಣಿ. ಜೊತೆಗೆ ಅನಂತ್ ಕುಮಾರ್, ಸುಷ್ಮಾ ಸ್ವರಾಜ್. ಆದರೂ ನಾಯಕತ್ವ ಬದಲಾವಣೆಗೆ ಸಮ್ಮತಿ ಸಿಕ್ಕಿತು.

ಈಗಲೂ ಅರ್ಥವಾಗದ ಕಾರಣ, ಯಾಕೆ ಸದಾನಂದ ಗೌಡರ ತಲೆದಂಡವಾಯಿತು? ಅಡ್ವಾಣಿ ಹೈಕಮಾಂಡ್‌ನಲ್ಲಿ ಧ್ವನಿಯಿಲ್ಲದವರಾಗುತ್ತಿದ್ದಾರೆಯೇ? ಯಾಕೆಂದರೆ ನರೇಂದ್ರ ಮೋದಿಯನ್ನು ಚುನಾವಣೆಗೂ ಮುನ್ನವೇ ಪ್ರಧಾನ ಮಂತ್ರಿ ಅಭ್ಯರ್ಥಿಯೆಂದು ಅಡ್ವಾಣಿಯ ವಿರೋಧವಿದ್ದರೂ ಬಿಂಬಿಸಿದರು. ನಿತಿನ್ ಗಡ್ಕರಿಯನ್ನು ಅಧ್ಯಕ್ಷ ಪಟ್ಟದಲ್ಲಿ ಮುಂದುವರಿಸಲು ಅಡ್ವಾಣಿಯ ಆಕ್ಷೇಪವಿದ್ದರೂ ಪಕ್ಷದ ನಿಯಮಾವಳಿಗೆ ತಿದ್ದುಪಡಿ ತಂದರು. ಸದಾನಂದ ಗೌಡರ ನಾಯಕತ್ವ ಬದಲಾಯಿಸಬಾರದೆಂದು ಬಹಿರಂಗವಾಗಿ ಹೇಳಿದ ಮೇಲೂ ಗಡ್ಕರಿ ಮತ್ತು ಜೈಟ್ಲಿ ತಾವು ಅಂದುಕೊಂಡಂತೆಯೇ ಸಾಧನೆ ಮಾಡಿರುವುದರಿಂದ ಅಡ್ವಾಣಿಯವರ ರಾಜಕೀಯ ಭವಿಷ್ಯ ಜೊತೆಗೆ ಅವರ ಮಾತುಗಳು ಮೌಲ್ಯ ಕಳೆದುಕೊಳ್ಳುತ್ತಿವೆಯೇ ಅನ್ನಿಸುವುದಿಲ್ಲವೇ?