ಬರಗಾಲದಲ್ಲಿ ಮುಖ್ಯಮಂತ್ರಿಯಾಗುತ್ತಿರುವ ಸೌಜನ್ಯದ ರಾಜಕಾರಣಿ

– ಚಿದಂಬರ ಬೈಕಂಪಾಡಿ

ಬಹುಕಾಲದ ಕನಸು ನನಸು ಮಾಡಿಕೊಂಡಿದ್ದಾರೆ ಜಗದೀಶ್ ಶೆಟ್ಟರ್. ಈಗ ಅವರ ಮನೆ ತುಂಬಾ ಜನ, ಮುಖದ ತುಂಬೆಲ್ಲ ನಗು. ಅವರತ್ತ ಸುಳಿಯದಿದ್ದವರು ಕೈಮುಗಿದುಕೊಂಡು ಬರುತ್ತಿದ್ದಾರೆ. ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣವಚನ ಸ್ವೀಕರಿಸಲಿರುವ ಜಗದೀಶ್ ಶೆಟ್ಟರ್‌ಗೆ ಅಭಿನಂದನೆಗಳ ಸುರಿಮಳೆ, ಹೊಗಳಿಕೆಗಳ ಮಹಾಪೂರ. ಒಬ್ಬ ಮುಖ್ಯಮಂತ್ರಿಯಾದರೆ ಜನ ಇಷ್ಟೆಲ್ಲಾ ಸಂಭ್ರಮಿಸುತ್ತಿರುವುದನ್ನು ಕಂಡರೆ ಯಾರಿಗೆ ತಾನೇ ಜೀವಮಾನದಲ್ಲಿ ತಾನೂ ಮುಖ್ಯಮಂತ್ರಿಯಾಗುವ ಭಾಗ್ಯ ಸಿಕ್ಕಿದರೆ ಸಾಕು ಅಂದುಕೊಳ್ಳದಿರಲು ಸಾಧ್ಯ?

ಅಂತೂ ಅಧಿಕಾರವಿದ್ದಲ್ಲಿ ಜನ ಇರುತ್ತಾರೆ, ಸಕ್ಕರೆ ಇದ್ದಲಿ ಇರುವೆ, ನೊಣಗಳು ಹಿಂಡು ಹಿಂಡಾಗಿ ಬರುತ್ತವೆ ಎನ್ನುವ ಮಾತಿದೆ. ಹಾಗೆ ಜಗದೀಶ್ ಶೆಟ್ಟರ್ ಬಳಿಗೆ ಬರುತ್ತಿರುವವರಲ್ಲಿ ಅವರ ಅಭಿಮಾನಿಗಳು, ರಾಜಕಾರಣಿಗಳು, ಮಂತ್ರಿಯಾಗುವ ಆಸೆ ತುಂಬಿಕೊಂಡವರು, ಸಾಮಾಜಿಕ ಸೇವೆಗಳ ಹೆಸರಲ್ಲಿ ಹೊಟ್ಟೆ ತುಂಬಿಸಿಕೊಳ್ಳುತ್ತಿರುವವರು, ಉದ್ಯಮಿಗಳು, ಸಂಪಾದನೆಗಾಗಿ ವಿವಿಧ ಮಾರ್ಗ ಹಿಡಿದಿರುವ ವೃತ್ತಿಪರರು ಹೀಗೆ ಸಮಾಜದ ಎಲ್ಲಾ ಸ್ತರಗಳ ಜನರೂ ಬರುತ್ತಿದ್ದಾರೆ. ಯಾಕೆಂದರೆ ಜಗದೀಶ್ ಶೆಟ್ಟರ್ ಈ ನಾಡಿನ ಆರೂವರೆ ಕೋಟಿ ಜನರ ಸರ್ಕಾರದ ಮುಖ್ಯಸ್ಥ.

ಈ ಹುದ್ದೆ ಅಲಂಕರಿಸಲು ಸಜ್ಜನ, ಹಿರಿಯತನವಿರುವ ಜಗದೀಶ್ ಶೆಟ್ಟರ್ ಮನಸ್ಸು ಮಾಡಿ ದಶಕವೇ ಕಳೆದಿವೆ. ಸಂಘಪರಿವಾರದ ಹಿನ್ನೆಲೆ ಮತ್ತು ರಾಜಕಾರಣದ ಹಿನ್ನೆಲೆಯಿಂದಲೇ ರಾಜಕೀಯಕ್ಕಿಳಿದ ಜಗದೀಶ್ ಶೆಟ್ಟರ್ ಬಿಜೆಪಿಯಲ್ಲಿ ಈಗಲೂ ಕೈ, ಬಾಯಿ ಶುದ್ಧವಾಗಿಟ್ಟುಕೊಂಡಿರುವ ಕೆಲವರಲ್ಲಿ ಒಬ್ಬರು. ಗಟ್ಟಿಯಾಗಿ ಮಾತನಾಡಲು ಭಯ, ದೊಡ್ಡ ಹೆಜ್ಜೆ ಇಡಲು ಅಂಜಿಕೆ, ಅತಿಯಾಗಿ ನಕ್ಕರೆ ಎದುರಿದ್ದವರು ಅದೇನಂದುಕೊಂಡಾರೋ ಎನ್ನುವ ಮುಜುಗರ, ವಾಚಾಳಿತನವಲ್ಲದ, ದೂರ್ವಾಸ ಪ್ರವೃತ್ತಿಯೂ ಅಲ್ಲದ ಸುಲಭವಾಗಿ ಇತರರನ್ನು ನಂಬಿಬಿಡುವ, ಬಲು ಬೇಗ ಮೋಸಹೋಗಬಲ್ಲ ವ್ಯಕ್ತಿ ಜಗದೀಶ್ ಶೆಟ್ಟರ್. ಒಂದೊಂದು ಸಲ ಇಂಥವರು ಈಗಿನ ರಾಜಕೀಯದಲ್ಲಿ ಸಕ್ಸಸ್ ಆಗಬಲ್ಲರೇ ಎನ್ನುವ ಅನುಮಾನಗಳು ಕಾಡುತ್ತವೆ.

ಸದಾನಂದ ಗೌಡರು ಮುಖ್ಯಮಂತ್ರಿಯಾದಾಗಲೂ ಕಾಡಿದ್ದ ಇಂಥ ಅನುಮಾನಗಳು ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗುತ್ತಿರುವ ಈ ಸಂದರ್ಭದಲ್ಲೂ ಕಾಡತೊಡಗಿವೆ. ಸದಾನಂದ ಗೌಡರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ತಂದವರೇ ಜಗದೀಶ್ ಶೆಟ್ಟರ್ ಅವರನ್ನು ಈ ಹುದ್ದೆಗೇರಿಸುವಲ್ಲಿ ಸೂತ್ರಧಾರಿಗಳು. ರಾಜಕೀಯದಲ್ಲಿ ಮಿತ್ರತ್ವ ಸುಲಭವಾಗಿ ಆಗಿಬಿಡುತ್ತದೆ, ಅಷ್ಟೆ ವೇಗವಾಗಿ ಸಂಬಂಧ ಕೆಡುತ್ತದೆ ಕೂಡಾ. ಸದಾನಂದ ಗೌಡರ ಪ್ರಕರಣದಲ್ಲಿ ಇದನ್ನು ಚೆನ್ನಾಗಿಯೇ ಗುರುತಿಸಬಹುದು.

ಸದಾನಂದ ಗೌಡರು ಖಡಕ್ಕ್ ಸ್ವಭಾವದವರು. ಆ ಕಾರಣಕ್ಕಾಗಿಯೇ ಬಲುಬೇಗ ಅಧಿಕಾರ ಕಳೆದುಕೊಂಡರು ಅನ್ನಿಸುತ್ತದೆ. ಈಗಿನ ರಾಜಕೀಯದಲ್ಲಿ ನಯವಂಚಕತನ, ಸುಳ್ಳನ್ನು ಸತ್ಯದಷ್ಟೇ ನಾಜೂಕಾಗಿ ಹೇಳುವ ಕಲೆ, ಜಗತ್ತಿನಲ್ಲಿರುವ ಮಾಫಿಯಾಗಳ ಜೊತೆ ಲಿಂಕ್ ಬೇಕಾದಾಗ ಲಿಂಕ್, ಬೇಡವಾದಾಗ ಡಿಸ್ಕನೆಕ್ಟ್ ಆಗುವಂಥ ಸಂಬಂಧ, ಹಣ ಮಾಡುವುದು ಯಾರಿಗೂ ಗೊತಾಗದಂಥ ಕಲೆ, ಆದರೆ ತಲೆಮಾರಿಗೆ ಸಾಕಾಗುವಷ್ಟು ಅರ್ಥಾತ್ ಕುಳಿತು ತಿಂದರೂ ಕರಗದಷ್ಟು ಸಂಪಾದಿಸಿಕೊಳ್ಳುವ ಮಹತ್ವಾಕಾಂಕ್ಷೆ, ತಾನೂ ತಿಂದು, ಇತರರೂ ತಿಂದು ತೇಗುವುದಕ್ಕೆ ಅವಕಾಶ ಮಾಡಿಕೊಡುವ ಮನಸ್ಸು ಸಕ್ಸಸ್‌ಫುಲ್ ರಾಜಕಾರಣಿಯಾಗಲು ಇರಲೇ ಬೇಕಾದ ಮಾನದಂಡಗಳು. ಇವುಗಳಲ್ಲಿ ಒಂದೂ ಇಲ್ಲದ ಜಗದೀಶ್ ಶೆಟ್ಟರ್ ಎಲ್ಲದರಲ್ಲೂ ಪಳಗಿದವರನ್ನು ಮಗ್ಗುಲಲ್ಲಿಟ್ಟುಕೊಂಡು ಹೇಗೆ ಅಧಿಕಾರ ನಡೆಸುತ್ತಾರೆ ಎನ್ನುವುದು ನಿಜಕ್ಕೂ ಕುತೂಹಲ.

ಬಿಜೆಪಿ ಹೈಕಮಾಂಡ್‌ಗೆ ಜಗದೀಶ್ ಶೆಟ್ಟರ್ ಪುಣ್ಯಕೋಟಿಯಂಥವರು ಎನ್ನುವುದು ಚೆನ್ನಾಗಿ ಗೊತ್ತು. ಲಕ್ಷ್ಮಣರೇಖೆಯನ್ನು ಮೀರದವರೂ ಎಂಬ ಅರಿವು ಇದ್ದೇ ಇಂಥ ಸಂಕಷ್ಟದಲ್ಲಿ ಮುಂದಾಳತ್ವಕ್ಕೆ ಒಪ್ಪಿದ್ದಾರೆ. ವಾಸ್ತವ ಸಂಗತಿಯೆಂದರೆ ಜಗದೀಶ್ ಶೆಟ್ಟರ್ ಅನುಭವಿ. ಪಕ್ಷದ ರಾಜ್ಯ ಅಧ್ಯಕ್ಷರಾಗಿ, ಕಂದಾಯ ಸಚಿವರಾಗಿ, ಸ್ಪೀಕರ್ ಆಗಿ, ಗ್ರಾಮೀಣ ಅಭಿವೃದ್ಧಿ ಸಚಿವರಾಗಿ ಕೆಲಸ ಮಾಡಿದವರು. ಅಧಿಕಾರಿಗಳಿಗೂ ಸಂತಸವಿದೆ. ಯಾಕೆಂದರೆ ಶೆಟ್ಟರ್ ದೂರ್ವಾಸರಲ್ಲ ಎನ್ನುವುದಕ್ಕೆ. ಎದುರಿನವರು ಕೊಡುವ ಗೌರವಕ್ಕಿಂತಲೂ ಹೆಚ್ಚು ಗೌರವ ಕೊಡುವ ಸೌಜನ್ಯ ಶೆಟ್ಟರ್ ಅವರದು.

ಉತ್ತರ ಕರ್ನಾಟಕದ ಜನರೂ ಕೂಡಾ ತಮ್ಮ ಭಾಗದವರು ಮುಖ್ಯಮಂತ್ರಿಯಾಗಬೇಕು ಎನ್ನುವ ಕನಸು ಕಾಣುತ್ತಿದ್ದರು. ಜಗದೀಶ್ ಶೆಟ್ಟರ್ ಮೂಲಕ ಅವರ ಕನಸೂ ಸಾಕಾರಗೊಂಡಿದೆ.

ಆದರೆ ಶೆಟ್ಟರ್ ಅಧಿಕಾರ ಪದಗ್ರಹಣ ಮಾಡುತ್ತಿರುವ ಕಾಲ ನೋಡಿ. ಕಳೆದ ವರ್ಷದ ಬರಗಾಲದ ಬೇಗೆಯೇ ಆರಿಲ್ಲ, ಈ ವರ್ಷ ಮತ್ತೆ ಬರಗಾಲ ಆವರಿಸಿಕೊಂಡಿದೆ. ಜನರು ಕೆಲಸವಿಲ್ಲದೇ ಗುಳೇ ಹೋಗುವಂಥ ಪರಿಸ್ಥಿತಿ. ಕಳೆದ ಎರಡು ವರ್ಷಗಳಿಂದ ರಾಜ್ಯದ ಅಭಿವೃದ್ಧಿಯ ರಥದ ಚಕ್ರಗಳು ನಿಧಾನವಾಗಿ ಚಲಿಸುತ್ತಿವೆ. ಭ್ರಷ್ಟಾಚಾರ, ಗಣಿ ಹಗರಣಗಳಲ್ಲಿ ಆಡಳಿತ ಪಕ್ಷದವರೇ ಜೈಲಿಗೆ ಹೋಗಲು ಸಾಲುಗಟ್ಟಿ ನಿಂತಿದ್ದಾರೆ. ಸದಾನಂದ ಗೌಡರನ್ನು ಬಂಡಾಯದ ನೆಪದಲ್ಲಿ ಕುರ್ಚಿಯಿಂದ ಇಳಿಸಿರುವ ಕಾರಣ ಕೆಲವು ಒಕ್ಕಲಿಗರು ಕೆರಳಿದ್ದಾರೆ. ಬಣ ರಾಜಕೀಯ ಹಾವಿನಂತೆ ಹೆಡೆ ಎತ್ತಿ ಭುಸುಗುಡುತ್ತಿದೆ. ಹೈಕಮಾಂಡ್ ನಂಬಿ ಏನೂ ಮಾಡುವಂತಿಲ್ಲ ಎನ್ನುವುದಕ್ಕೆ ಸದಾನಂದ ಗೌಡರನ್ನೇ ಗಮನಿಸಿ.

ಈ ಎಲ್ಲಾ ಸಮಸ್ಯೆಗಳ ಮಧ್ಯೆ ಮುಖ್ಯಮಂತ್ರಿ ಕುರ್ಚಿಗೇರುತ್ತಿರುವ ಜಗದೀಶ್ ಶೆಟ್ಟರ್ ಮುಂದಿನ ಚುನಾವಣೆಯಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲೇ ಬೇಕು. ನಿಜಕ್ಕೂ ಉತ್ತರ ಕರ್ನಾಟಕ ಭಾಗದ ಸಜ್ಜನ ರಾಜಕಾರಣಿಯಾದ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಹುದ್ದೆಗೆ ಅರ್ಹರು. ಆದರೆ ಅವರಿಗೆ ಈ ಭಾಗ್ಯ ಬಂದಿರುವ ಕಾಲ ಮಾತ್ರ ಸರಿಯಲ್ಲ. ಒಳ್ಳೆಯ ಕಾಲದವರೇಗೂ ಕಾಯಬಹುದಿತ್ತು ನಿಜ, ಆದರೆ ಆ ಕಾಲ ಬರುವಷ್ಟರಲ್ಲಿ ಮತ್ತೊಂದು ಸನ್ನಿವೇಶ ನಿರ್ಮಾಣವಾಗುವುದನ್ನು ಅಲ್ಲಗಳೆಯುವಂತಿಲ್ಲ. ಈಗಿನ ರಾಜಕೀಯದ ದುಸ್ಥಿತಿಯಲ್ಲೂ ನಾಡಿನ ಜನ ಮೆಚ್ಚುವ ಕೆಲಸ ಮಾಡಲು ಜಗದೀಶ್ ಶೆಟ್ಟರ್‌ಗೆ ಸಾಧ್ಯವಾದರೆ ಅದು ನಿಜಕ್ಕೂ ನಾಡಿನ ಭಾಗ್ಯ.

2 thoughts on “ಬರಗಾಲದಲ್ಲಿ ಮುಖ್ಯಮಂತ್ರಿಯಾಗುತ್ತಿರುವ ಸೌಜನ್ಯದ ರಾಜಕಾರಣಿ

  1. ಮಹಾದೇವ ಹಡಪದ

    ಟ್ಯಾಗೋರ ಅವರದ್ದೊಂದು ಪುಟ್ಟ ನಾಟಕ ಇದೆ-ಕಾಲಯಾತ್ರೆ ಅಂತ ಅದರ ಹೆಸರು. ಆ ನಾಟಕದಲ್ಲಿ ನಿಂತು ಹೋದ ರಥವನ್ನ ಎಳೆಯಬೇಕಾಗಿರತದೆ… ಅಲ್ಲೂ ಒಬ್ಬ ಶೆಟ್ಟಿ ಬರ್ತಾನೆ. ಈ ಶೆಟ್ಟರ ಎಲ್ಲಾ ಗುಣಗಳೂ ಆ ಪಾತ್ರದಲ್ಲಿವೆ. ರಥ ಎಳೆಯೋದು ಅಷ್ಟು ಸುಲಭ ಇಲ್ಲ.

    Reply
  2. sushrutha

    Baikampadi yavara samatholana baraha. Varthamana da one sided article nda vibhinna Chidambara baraha. heege baraha barali

    Reply

Leave a Reply

Your email address will not be published. Required fields are marked *