Daily Archives: July 12, 2012

ನೂತನ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್ ಮುಂದಿನ ಸವಾಲುಗಳು


– ಡಾ.ಎನ್.ಜಗದೀಶ್ ಕೊಪ್ಪ


ಉತ್ತರ ಕರ್ನಾಟಕದ ಸಜ್ಜನ ರಾಜಕಾರಣಿ ಮತ್ತು ಸೋಲಿಲ್ಲದ ಸರದಾರ ಎಂದೇ ಪ್ರಸಿದ್ಧರಾದ ಹುಬ್ಬಳ್ಳಿಯ ಶಾಸಕ ಜಗದೀಶ್ ಶೆಟ್ಟರ್ ಕರ್ನಾಟಕದ 27ನೇ ಮುಖ್ಯಮಂತ್ರಿಯಾಗಿ ಹಾಗೂ ನಾಲ್ಕು ವರ್ಷಗಳ ಅವಧಿಯ ಬಿ.ಜೆ.ಪಿ. ಸರ್ಕಾರದ ಮೂರನೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿ, ಅಧಿಕಾರ ಸ್ವೀಕರಿಸಿದ್ದಾರೆ. ಉಳಿದ ಇನ್ನೊಂದು ವರ್ಷದ ಅವಧಿಯಲ್ಲಿ, ಸ್ವಚ್ಛ ಹಾಗೂ ಪಾರದರ್ಶಕ ಆಡಳಿತ ನೀಡುವುದಾಗಿ ಜನತೆಗೆ ಭರವಸೆ ನೀಡಿದ್ದಾರೆ. ಆದರೆ, ಸಧ್ಯದ ಬಿ.ಜೆ.ಪಿ. ಪಕ್ಷದ ಆಂತರೀಕ ಗೊಂದಲಗಳನ್ನು ಗಮನಿಸಿದರೆ, ಮುಖ್ಯಮಂತ್ರಿ ಗಾದಿ ಶೆಟ್ಟರ್ ಪಾಲಿಗೆ ಮುಳ್ಳಿನ ಹಾಸಿಗೆಯಾಗುವ ಲಕ್ಷಣಗಳು ಕಾಣತೊಡಗಿವೆ.

ಆರ್.ಎಸ್.ಎಸ್. ಸಂಘಟನೆಯ ನಿಷ್ಟಾವಂತ ಅನುಯಾಯಿಯಾಗಿ, ಬಿ.ಜೆ.ಪಿ. ಕಾರ್ಯಕರ್ತನಾಗಿ ಮೂರು ದಶಕಗಳ ಕಾಲ ದುಡಿದು, 1994ರಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಆರ್, ಬೊಮ್ಮಾಯಿ ಅವರನ್ನು ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದಲ್ಲಿ ಮಣಿಸಿ, ವಿಧಾನಸಭೆ ಪ್ರವೇಶಿಸಿದ ಜಗದೀಶ್ ಶೆಟ್ಟರ್, ಮೃದು ಹೃದಯದ ಹಾಗೂ ಮಿತವಾದ ಮಾತಿಗೆ ಹೆಸರಾದವರು. ಬಿ.ಜೆ.ಪಿ. ಪಕ್ಷದಲ್ಲಿ ಇರುವ ಹಲವು ಸಜ್ಜನ ರಾಜಕಾರಣಿಗಳಲ್ಲಿ ಇವರೂ ಒಬ್ಬರು.

ಜೆ.ಡಿ.ಎಸ್. ಮತ್ತು ಬಿ.ಜೆ.ಪಿ. ಮೈತ್ರಿ ಸರ್ಕಾರದಲ್ಲಿ ಕಂದಾಯ ಸಚಿವರಾಗಿ, ನಂತರ ತಮ್ಮದೇ ಪಕ್ಷ ಅಧಿಕಾರಕ್ಕೆ ಬಂದಾಗ, ವಿಧಾನಸಭೆಯ ಅದ್ಯಕ್ಷರಾಗಿ,ಆನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಗ್ರಾಮೀಣಾಭಿವೃದ್ಧಿಯ ಸಚಿವರಾಗಿ ಹಲವು ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ಶೆಟ್ಟರ್ ಈಗ ಮುಖ್ಯಮಂತ್ರಿಯಾಗದ್ದಾರೆ. ಆದರೆ, ಅವರ ಮುಂದಿನ ಹಾದಿ ಮಾತ್ರ ಅತ್ಯಂತ ಕಠಿಣವಾಗಿದೆ.

ಎಡ ಮತ್ತು ಬಲಕ್ಕೆ ಇಬ್ಬರು ಉಪ ಮುಖ್ಯಮಂತ್ರಿಗಳು. ಜೊತೆಗೆ ತಲೆಯ ಮೇಲೆ ಮುಖ್ಯಮಂತ್ರಿ ಮಾಡಿದ ಯಡಿಯೂರಪ್ಪನವರ ಭಯ ಮತ್ತು ಅತಂತ್ರತೆಯ ತೂಗುಕತ್ತಿ,  ಇವುಗಳ ನಡುವೆ ಕಳಸವಿಟ್ಟಂತೆ ಸಚಿವ ಸ್ಥಾನ ಸಿಗದ ಶಾಸಕರ ಅಸಹನೆ, ಅಸಹಕಾರ; ಇವುಗಳನ್ನು ಮಡಿಲಲ್ಲಿ ಕೆಂಡ ಕಟ್ಟಿಕೊಂಡಂತೆ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುವುದು ಜಗದೀಶ್ ಶೆಟ್ಟರ್ ಪಾಲಿಗೆ ಸುಲಭದ ಸಂಗತಿಯಲ್ಲ.

ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಬಿ.ಜೆ.ಪಿ. ಸರ್ಕಾರದ ಹಗರಣಗಳು, ಸಚಿವರ ನಡುವಳಿಕೆಗಳು, ಪಕ್ಷದ ನಾಯಕರ ಜಾತಿ ಸಂಘರ್ಷ ಇವುಗಳಿಂದ ಜನಸಾಮಾನ್ಯರಷ್ಟೇ ಅಲ್ಲ, ಸ್ವತಃ ಪಕ್ಷದ ನಿಷ್ಟಾವಂತ ಕಾರ್ಯಕರ್ತರೇ ರೋಸಿ ಹೋಗಿದ್ದಾರೆ. ಇಂತಹ ಶೋಚನೀಯ ಸ್ಥಿತಿಯಲ್ಲಿ ಬಿ.ಜೆ.ಪಿ. ಸರ್ಕಾರದಿಂದಾಗಲಿ, ಅಥವಾ ನೂತನ ಮುಖ್ಯಮಂತ್ರಿಯಿಂದಾಗಲಿ ಯಾವುದೇ ಪವಾಡಗಳನ್ನು ಯಾರೊಬ್ಬರು ನಿರಿಕ್ಷಿಸಿಲ್ಲ.

ಕಳೆದ ಎರಡು ವರ್ಷಗಳಿಂದ ಕಾಡುತ್ತಿರುವ ಬರಗಾಲದಿಂದ ಉತ್ತರ ಕರ್ನಾಟಕದ ಜನತೆ ತತ್ತರಿಸಿ ಹೋಗಿದ್ದಾರೆ. ಜಾನುವಾರುಗಳಿಗೆ ಕುಡಿಯುವ ನೀರು, ಮೇವು ಇಲ್ಲದೆ, ಅವುಗಳನ್ನ ಕಸಾಯಿಖಾನೆಗೆ ಅಟ್ಟಿ ಇಲ್ಲಿನ ಜನ ದೂರದ ನಗರಗಳಿಗೆ ವಲಸೆ ಹೋಗುತಿದ್ದಾರೆ. ಮೂರು ವರ್ಷದ ಹಿಂದೆ ಸಂಭವಿಸಿದ ಅತಿವೃಷ್ಟಿಯಲ್ಲಿ ಮನೆ ಮಠಗಳನ್ನು ಕಳೆದುಕೊಂಡ ಉತ್ತರ ಕರ್ನಾಟಕದ ಜನರಿಗೆ ಈವರೆಗೆ ಮನೆಗಳನ್ನು ನಿರ್ಮಿಸಿಕೊಡಲು ಈ ಸರ್ಕಾರದಿಂದ ಸಾಧ್ಯವಾಗಿಲ್ಲ. ಸರ್ಕಾರ ಗುರಿ ಹಾಕಿಕೊಂಡಿದ್ದ ಒಂದು ಲಕ್ಷ ಮನೆ ನಿರ್ಮಾಣ ಯೋಜನೆಗಳಲ್ಲಿ ಈವರೆಗೆ ಸಿದ್ಧವಾಗಿರುವ 33 ಸಾವಿರ ಮನೆಗಳು ಧಾನಿಗಳು ಕಟ್ಟಿಸಿಕೊಟ್ಟ ಮನೆಗಳು ಮಾತ್ರ.

ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಕರ್ನಾಟಕದ ಇತಿಹಾಸದಲ್ಲಿ ಕಂಡರಿಯದ ಭೂ ಹಗರಣ, ಸಚಿವರ ಮಿತಿ ಮೀರಿದ ಭ್ರಷ್ಟಾಚಾರ, ಲೈಂಗಿಕ ಹಗರಣ, ಗಣಿ ಹಗರಣ, ಇವುಗಳ ಫಲವಾಗಿ ಸಚಿವ ಸಂಪುಟ ಸದಸ್ಯರ ಸರತಿಯ ರಾಜಿನಾಮೆ ಇವೆಲ್ಲವೂ ಶಿಸ್ತಿಗೆ ಹೆಸರಾದ ಬಿ.ಜೆ.ಪಿ. ಪಕ್ಷದ ಮುಖಕ್ಕೆ ರಾಷ್ಟ್ರ ಮಟ್ಟದಲ್ಲಿ ಕಪ್ಪು ಮಸಿ ಬಳಿದಿವೆ. ಈಗ ಇವುಗಳ ಜೊತೆಗೆ ಜಾತಿ ರಾಜಕಾರಣ ಹೊಸದಾಗಿ ಸೇರ್ಪಡೆಯಾಗಿದ್ದು, ಇಂತಹ ಬೆಳವಣಿಗೆಗಳು ಪ್ರಜ್ಞಾವಂತರಲ್ಲಿ ಅಸಹ್ಯ ಮಾತ್ರವಲ್ಲ, ಜಿಗುಪ್ಸೆ ಮೂಡಿಸಿವೆ.

ಅತ್ಯಂತ ಸಜ್ಜನಿಕೆ ಸ್ವಭಾವದ ಜಗದೀಶ್‌ ಶೆಟ್ಟರಿಗೆ ಅವರ ಗುಣವೇ ಅವರ ಪಾಲಿಗೆ ಮಾರಕವಾಗುವ ಸಂಭವವಿದೆ. ಇಲ್ಲಿಯವರೆಗೆ, ಯಡಿಯೂರಪ್ಪನವರನ್ನು ಓಲೈಕೆ ಮಾಡಿಕೊಂಡು ಸಚಿವ ಸ್ಥಾನದಲ್ಲಿ ಮುಂದುವರಿದ, ಅಸಮರ್ಥ ಸಚಿವರುಗಳೆಲ್ಲಾ ಈಗಿನ ಶೆಟ್ಟರ್ ಮಂತ್ರಿ ಮಂಡಲದಲ್ಲಿ ಸ್ಥಾನ ಪಡೆದಿರುವುದು ನಿರಾಶೆಯ ಸಂಗತಿ.

ಈವರೆಗೆ ಹೆಚ್ಚುವರಿಯಾಗಿ ಒಂದು ಯೂನಿಟ್ ವಿದ್ಯುತ್ ಉತ್ಪಾದಿಸಲಾಗದ, ರಾಜ್ಯದ ರಸ್ತೆಗಳನ್ನು ದುರಸ್ತಿ ಮಾಡಲಾಗದ, ಗ್ರಾಮೀಣ ಜನತೆಗೆ ಕುಡಿಯುವ ನೀರು ಒದಗಿಸಲಾಗದ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗದ ಬಿ.ಜೆ.ಪಿ. ಸರ್ಕಾರದಿಂದ ಯಾವ ನಿರೀಕ್ಷೆ ಇಟ್ಟುಕೊಳ್ಳದ ಜನತೆ ಜಗದೀಶ್ ಶೆಟ್ಟರ್‌ರಿಂದ ಏನು ನಿರಿಕ್ಷಿಸಲು ಸಾಧ್ಯ?

ಉಳಿದ ಒಂದು ವರ್ಷದ ಅವಧಿಯಲ್ಲಿ ಸ್ವಚ್ಛ ಆಡಳಿತ ನೀಡುತ್ತೇನೆ ಎನ್ನುವ ಮಾತು ಕೇವಲ ಅವರ ಆವೇಶದ ಮಾತಾಗಬಹುದು. ಏಕೆಂದರೆ, ಹನ್ನೊಂದು ತಿಂಗಳ ಕಾಲ ಯಾವುದೇ ಹಗರಣಗಳಿಗೆ ಎಡೆ ಮಾಡಿಕೊಡದಂತೆ ಆಡಳಿತ ನಡೆಸಿದ ಸದಾನಂದ ಗೌಡರಿಗೆ ಪಕ್ಷ ನೀಡಿರುವ ಬಳುವಳಿ ಈಗ ದೇಶಾದ್ಯಂತ ಚರ್ಚೆಯಾಗುತ್ತಿದೆ.

ಆಡಳಿತ ಒಳಸುಳಿಗಳನ್ನು ಅರ್ಥ ಮಾಡಿಕೊಳ್ಳಲು ಒಂದು ವರ್ಷದ ಅವಧಿ ಅಗತ್ಯವಿರುವಾಗ, ಸಮರ್ಥ ಆಡಳಿತವನ್ನು ಜಗದೀಶ್ ಶೆಟ್ಟರ್ ಮತ್ತು ಅವರ ಮಂತ್ರ ಮಂಡಲದಿಂದ  ಬಯಸಲು ಸಾಧ್ಯವಿಲ್ಲ. ಯಡಿಯೂರಪ್ಪನಂತಹ ಮೋಹಿನಿ ಭಸ್ಮಾಸುರನ ಮನಸ್ಸಿರುವ ವ್ಯಕ್ತಿಯಿಂದ ಆಯ್ಕೆಯಾಗಿರುವ ಜಗದೀಶ್‌ ಶೆಟ್ಟರ್ ಈವರಗೆ ತಾವು ಕಾಪಾಡಿಕೊಂಡು ಬಂದಿದ್ದ ತಮ್ಮ ವರ್ಚಸ್ಸನು ಹಾಗೇ ಉಳಿಸಿಕೊಂಡರೆ ಸಾಕು ಅದು ಅವರ ಪಾಲಿಗೆ ದೊಡ್ಡ ಸಾಧನೆಯಾಗಬಲ್ಲದು. ಏಕೆಂದರೆ ಇಂಗ್ಲೀಷ್ ಭಾಷೆಯಲ್ಲಿ ಒಂದು ಗಾದೆ ಮಾತಿದೆ, ’ರೈಟ್ ಪರ್ಸನ್ ಇನ್ ದ ರಾಂಗ್ ಪ್ಲೇಸ್’ ಎಂದು. ಅದೇ ಸ್ಥಿತಿ ಈಗ ಶೆಟ್ಟರಿಗೆ ಎದುರಾಗಿದೆ.

ನರೇಂದ್ರ ಮೋದಿ ವರ್ಸಸ್ ನಿತೀಶ್ ಕುಮಾರ್ : ಯಾರು ಹಿತವರು?

– ಆನಂದ ಪ್ರಸಾದ್

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಮುಂದಿನ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನಾಗಿ ಸಂಘ ಪರಿವಾರ ಬಿಂಬಿಸಲು ಪ್ರಯತ್ನಿಸುತ್ತಿದ್ದು ಇದನ್ನು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರೋಧಿಸುತ್ತಿದ್ದಾರೆ. ಸಂಘ ಪರಿವಾರ ಮಾತ್ರವಲ್ಲದೆ ಸ್ವತಃ ನರೇಂದ್ರ ಮೋದಿಯೇ ತನ್ನನ್ನು ತಾನೇ ಮುಂದಿನ ಪ್ರಧಾನಮಂತ್ರಿ ಅಭ್ಯಥಿಯಾಗಿ ಬಿಂಬಿಸಿಕೊಳ್ಳಲು ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ. ಸಂಘದ ಬೆಂಬಲಕ್ಕಿರುವ ಮುಖ್ಯವಾಹಿನಿಯ ಕೆಲವು ಪತ್ರಿಕೆಗಳೂ ನರೇಂದ್ರ ಮೋದಿಯನ್ನು ಮುಂದಿನ ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸುತ್ತಿರುವುದನ್ನು ನಾವು ಕಾಣಬಹುದು. ಗುಜರಾತಿನಲ್ಲಿ ನರೇಂದ್ರ ಮೋದಿ ಅಪಾರ ಅಭಿವೃದ್ಧಿಯನ್ನು ಸಾಧಿಸಿದ್ದಾರೆ ಎಂದು ಸಂಘಮುಖೀ ಪತ್ರಿಕೆಗಳು ಭಾರೀ ಪ್ರಚಾರವನ್ನು ಕೈಗೊಳ್ಳುತ್ತಿವೆ. ನರೇಂದ್ರ ಮೋದಿ ಎಷ್ಟೇ ಅಭಿವೃದ್ಧಿ ಸಾಧಿಸಿದ್ದರೂ ಗೋಧ್ರಾ ಗಲಭೆಗಳ ನಂತರ ನಡೆದ ಕೋಮುಗಲಭೆಗಳನ್ನು ನಿಯಂತ್ರಿಸದೆ ಅದರ ರಾಜಕೀಯ ಲಾಭ ಪಡೆದ ಕಳಂಕ ಅವರನ್ನು ಎಂದಿಗೂ ಪ್ರಧಾನ ಮಂತ್ರಿ ಪಟ್ಟಕ್ಕೆ ಹೋಗಲು ಬಿಡಲಾರದು. ಮೋದಿಗೆ ಅಂಟಿರುವ ತೀವ್ರಗಾಮಿ ಹಿಂದುತ್ವವಾದಿ ಇಮೇಜ್ ಅವರನ್ನು ಪ್ರಧಾನಿಯಾಗುವುದನ್ನು ತಡೆಯುವುದು ಖಚಿತ. ಈ ಮೊದಲು ಇಂಥ ತೀವ್ರಗಾಮಿ ಹಿಂದುತ್ವವಾದಿ ಇಮೇಜ್ ಅಡ್ವಾಣಿಯವರಿಗೆ ಇತ್ತು. ಹೀಗಾಗಿ ಅವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಿದಾಗ ಬಿಜೆಪಿ ಹಿನ್ನಡೆ ಅನುಭವಿಸಿತು. ಹಿಂದಿನ 50 ವರ್ಷಗಳಲ್ಲಿ ಆಗದ ಪ್ರಗತಿ ಬಿಜೆಪಿ ಆಡಳಿತದ 5 ವರ್ಷಗಳ ಆಡಳಿತದಲ್ಲಿ ನಡೆದಿದೆ ಎಂದು ಮಾಧ್ಯಮಗಳಲ್ಲಿ ಭಾರೀ ಪ್ರಚಾರ ಮಾಡಿದರೂ ಅಡ್ವಾಣಿಯವರ ನೇತೃತ್ವದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಅಧಿಕಾರಕ್ಕೆ ಬರದೆ ಇರಲು ಅಡ್ವಾಣಿಯವರಿಗೆ ಇದ್ದ ಉಗ್ರ ಹಿಂದುತ್ವವಾದಿ ಇಮೇಜ್ ಕಾರಣ. ಹೀಗಾಗಿ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಮುಂದೊಡ್ಡಿ ಚುನಾವಣೆಗೆ ಹೋದರೆ ಎನ್. ಡಿ. ಎ. ಮೈತ್ರಿಕೂಟಕ್ಕೆ ಹಿನ್ನಡೆ ಆಗುವ ಸಂಭವ ಅಧಿಕ.

ಭಾರತವು ಒಂದು ಬಹುಸಂಸ್ಕೃತಿಗಳ ದೇಶವಾಗಿರುವುದರಿಂದ ಇಲ್ಲಿ ಉಗ್ರವಾದಿ ಹಿಂದುತ್ವ ಪ್ರತಿಪಾದಿಸುವ ಪಕ್ಷಗಳು ಬಹುಮತದಿಂದ ಅಧಿಕಾರಕ್ಕೆ ಬರುವ ಸಂಭವ ಇಲ್ಲ. ಇದನ್ನರಿತೇ ಉಗ್ರಹಿಂದುವಾದಿ ಪಕ್ಷವಾದ ಬಿಜೆಪಿ ತನ್ನ ಉಗ್ರ ಹಿಂದೂವಾದವನ್ನು ಪಕ್ಕಕ್ಕೆ ಇಟ್ಟು ಇತರ ಸಮಯಸಾಧಕ ಅಧಿಕಾರದಾಹೀ ಪಕ್ಷಗಳೊಂದಿಗೆ ಮೈತ್ರಿಕೂಟವನ್ನು ಏರ್ಪಡಿಸಿಕೊಂಡು ಅಧಿಕಾರಕ್ಕೆ ಏರಿತು. ಇಂಥ ಮೈತ್ರಿಕೂಟವನ್ನು ರಚಿಸಲು ಸೌಮ್ಯವಾದಿ ನಾಯಕ ಅಟಲ ಬಿಹಾರಿ ವಾಜಪೇಯಿಯವರ ಇಮೇಜ್ ಬಹಳಷ್ಟು ಸಹಾಯ ಮಾಡಿತು. ಸಂಘ ಪರಿವಾರದ ವ್ಯಕ್ತಿ ಎಂದು ಬಿಜೆಪಿ ಅಧ್ಯಕ್ಷಗಿರಿಗೆ ಗಡ್ಕರಿ ಬಂದ ನಂತರ ಬಿಜೆಪಿಯ ವಿಶ್ವಾಸಾರ್ಹತೆ ಕಡಿಮೆಯಾಯಿತು. ಸಂಘ ಪರಿವಾರಕ್ಕೆ ಉಗ್ರ ಹಿಂದುತ್ವವಾದಿ ಇಮೇಜ್ ಇರುವುದೇ ಇದಕ್ಕೆ ಕಾರಣ. ಗಡ್ಕರಿ ಬಿಜೆಪಿ ಅಧ್ಯಕ್ಷರಾದ ನಂತರ ಸಂಘವು ತನ್ನ ನಿಲುವುಗಳನ್ನು ಪಕ್ಷದ ಮೇಲೆ ಬಲಪಡಿಸುವ ಸಾಧ್ಯತೆ ಹೆಚ್ಚಿರುವುದರಿಂದ ಬಿಜೆಪಿ ವಿಶ್ವಾಸಾರ್ಹತೆ ಕಡಿಮೆಯಾಗುತ್ತಾ ಬಂದಿದೆ.

ಈ ಹಿನ್ನೆಲೆಯಲ್ಲಿಯೇ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿಯಾಗುವುದು ಸಮಂಜಸವಲ್ಲ ಎಂದು ಹೇಳಿರುವಂತೆ ಕಾಣುತ್ತದೆ. ಮೋದಿಯವರು ಗುಜರಾತಿನಲ್ಲಿ ಸಾಧಿಸಿದ ಅಭಿವೃದ್ಧಿಯನ್ನು ಹಾಗೂ ನಿತೀಶ್ ಬಿಹಾರದಲ್ಲಿ ಸಾಧಿಸಿದ ಅಭಿವೃದ್ಧಿಯನ್ನು ಹೋಲಿಸಿದಾಗ ನಿತೀಶ್ ಸಾಧಿಸಿದ ಅಭಿವೃದ್ಧಿ ಮಹತ್ತರವಾದುದು. ಗುಜರಾತ್ ಮೊದಲಿನಿಂದಲೇ ಉದ್ಯಮಶೀಲರ ನಾಡು. ಹೀಗಾಗಿ ಗುಜರಾತಿನಲ್ಲಿ ಅಭಿವೃದ್ಧಿ ಸಾಧಿಸುವುದು ಬಹಳ ದೊಡ್ಡ ವಿಷಯ ಅಲ್ಲ. ಆದರೆ ಬಿಹಾರ ಕಾನೂನು ಸುವ್ಯವಸ್ಥೆ ಹದಗೆಟ್ಟ ಒಂದು ಗೂಂಡಾರಾಜ್ ವ್ಯವಸ್ಥೆ ಹೊಂದಿತ್ತು. ಇದನ್ನು ತಹಬಂದಿಗೆ ತಂದು ಬಿಹಾರವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುತ್ತಿರುವುದು ಮಹತ್ವದ ಸಾಧನೆ ಎನ್ನಲು ಅಡ್ಡಿ ಇಲ್ಲ. ಗುಜರಾತಿನಲ್ಲಿ ಮೋದಿಗೆ ಕೋಮುಗಲಭೆಗಳ ಪರಿಣಾಮವಾಗಿ ಅನಾಯಾಸವಾಗಿ ಬಹುಮತ ಲಭಿಸಿತ್ತು. ಹೀಗಾಗಿ ಏಕಪಕ್ಷದ ಆಡಳಿತದಲ್ಲಿ ಅಭಿವೃದ್ಧಿ ಸಾಧಿಸಲು ಸಾಧ್ಯವಾಯಿತು. ಆದರೆ ಬಿಹಾರದಲ್ಲಿ ನಿತೀಶ್ ಅವರು ಸೈದ್ಧಾಂತಿಕವಾಗಿ ವಿರೋಧಿ ನಿಲುವಿನ ಬಿಜೆಪಿ ಪಕ್ಷದ ಜೊತೆ ಮೈತ್ರಿ ಸರ್ಕಾರದಲ್ಲಿ ಏಗುತ್ತಾ ಬಿಹಾರವನ್ನು ಅಭಿವೃದ್ಧಿ ಪಥದೆಡೆಗೆ ಮುನ್ನಡೆಸುತ್ತಿರುವುದು ಸಾಧನೆ ಎನ್ನಬೇಕಾಗುತ್ತದೆ. ಸಮಾಜವಾದಿ ಹಿನ್ನೆಲೆಯ ನಿತೀಶ್ ಅನಿವಾರ್ಯವಾಗಿ ಬಿಜೆಪಿಯಂಥ ಕೋಮುವಾದಿ ಪಕ್ಷದೊಂದಿಗೆ ಹೋಗಿರುವಂತೆ ಕಾಣುತ್ತದೆ. ಹೀಗಾಗಿಯೇ ನಿತೀಶ್ ಅವರು ಎನ್. ಡಿ. ಎ. ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಮೋದಿಯಂಥ ತೀವ್ರ ಹಿಂದುವಾದಿಯನ್ನು ವಿರೋಧಿಸುತ್ತಿರುವಂತೆ ಕಾಣುತ್ತದೆ.

ಮೋದಿಗೆ ಹೋಲಿಸಿದರೆ ನಿತೀಶ್ ಪ್ರಧಾನಿ ಅಭ್ಯರ್ಥಿಯಾಗಲು ಸಾವಿರ ಪಟ್ಟು ಉತ್ತಮ ರಾಜಕಾರಣಿ. ಏಕೆಂದರೆ ನಿತೀಶ್ ಮೇಲೆ ಮೋದಿಯವರ ಮೇಲೆ ಇರುವಂತೆ ಕಳಂಕ ಇಲ್ಲ. ಧರ್ಮದ ಹೆಸರಿನಲ್ಲಿ ಜನರನ್ನು ಎತ್ತಿಕಟ್ಟಿ ಚುನಾವಣೆಗಳಲ್ಲಿ ಗೆಲ್ಲುವ ಹಾದಿ ಮೋದಿ, ಅಡ್ವಾಣಿಯವರಂಥ ಸಂಘದ ಹಿನ್ನೆಲೆಯ ರಾಜಕಾರಣಿಗಳಿಗೆ ಸುಲಭವಾಗಿ ಲಭ್ಯವಾಗುವ ಹಾದಿ. ಈ ರೀತಿಯಾಗಿ ಗೆಲ್ಲುವುದು ಶ್ರೇಷ್ಠ ಹಾದಿಯೇನೂ ಅಲ್ಲ ಮತ್ತು ಈ ರೀತಿ ಗೆಲ್ಲಲು ಹೆಚ್ಚಿನ ಶ್ರಮವೂ ಬೇಕಾಗುವುದಿಲ್ಲ. ಆದರೆ ಇಂಥ ಹಾದಿ ಆರಿಸಿಕೊಂಡವರು ಇತಿಹಾಸದಲ್ಲಿ ಶಾಶ್ವತವಾಗಿ ಕಳಂಕವನ್ನು ಹೊತ್ತುಕೊಳ್ಳಬೇಕಾಗುತ್ತದೆ. ಹೀಗಾಗಿಯೇ ಅಡ್ವಾಣಿಯವರು ತನ್ನ ಇಮೇಜ್ ಅನ್ನು ಸೌಮ್ಯವಾದಿಯಾಗಿ ಬದಲಾಯಿಸಿದರೂ ಜನ ನಂಬದಂತೆ ಆಗಿದೆ ಹಾಗೂ ಅವರ ನೇತೃತ್ವದ ಚುನಾವಣೆಗಳಲ್ಲಿ ಹಿನ್ನಡೆ ಅನುಭವಿಸಲು ಕಾರಣವಾಗಿದೆ. ಇದು ಮೋದಿಯವರಿಗೂ ಅನ್ವಯಿಸುತ್ತದೆ. ಮೋದಿಯವರೂ ಈಗ ಅಭಿವೃದ್ಧಿಯ ಹರಿಕಾರ ಎಂಬ ಇಮೇಜ್ ಧರಿಸಿ ಹೋದರೂ ಜನ ಅವರ ಉಗ್ರ ಹಿಂದೂವಾದಿ ಇಮೇಜ್ ಅನ್ನು ಮರೆಯುವ ಸಾಧ್ಯತೆ ಇಲ್ಲವಾಗಿರುವುದರಿಂದ ಸದ್ಯ ಮುಂದಿನ ಚುನಾವಣೆಗಳಲ್ಲಿ ದೇಶಕ್ಕೆ ಉಗ್ರ ಕೋಮುವಾದದ ಅಪಾಯ ಎದುರಾಗಲಾರದು ಎಂದು ಕಾಣುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಪಕ್ಷದ ಮೇಲೆ ಸಂಘ ಪರಿವಾರ ಹೆಚ್ಚಿನ ಹಿಡಿತ ಸಾಧಿಸುತ್ತಿರುವ ಕಾರಣ ಜನ ಅದನ್ನು ನಂಬದಂತೆ ಆಗಿದೆ. ಹೀಗಾಗಿಯೇ ಭ್ರಷ್ಟಾಚಾರದ ಬಗ್ಗೆ ಬಿಜೆಪಿ ಬಹಳ ಬೊಬ್ಬೆ ಹಾಕಿದರೂ ಅದು ಜನರ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ. ಈ ಕಾರಣದಿಂದಾಗಿ ದೇಶಕ್ಕೆ ಪರ್ಯಾಯ ತೃತೀಯ ರಂಗವೊಂದರ ಅವಶ್ಯಕತೆ ಇದೆ. ಆದರೆ ದುರದೃಷ್ಟವಶಾತ್ ದೇಶದಲ್ಲಿ ತೃತೀಯ ರಂಗದ ನಾಯಕತ್ವ ವಹಿಸಿಕೊಳ್ಳಬಲ್ಲ ಉತ್ತಮ ಪಕ್ಷವೊಂದರ ಕೊರತೆ ಇದೆ. ಸಮಾಜವಾದಿ ಪಕ್ಷವು ಉತ್ತರ ಪ್ರದೇಶದಲ್ಲಿ ದೊಡ್ಡ ಪಕ್ಷವಾಗಿ ಅಧಿಕಾರಕ್ಕೆ ಬಂದರೂ ತನ್ನ ಹಳೆಯ ಚಾಳಿಯನ್ನು ಬಿಟ್ಟು ಅಭಿವೃದ್ಧಿ ರಾಜಕೀಯದೆಡೆಗೆ ಚಲಿಸುವ ದಿಟ್ಟ ನಿಲುವನ್ನು ತೆಗೆದುಕೊಂಡಂತೆ ಕಾಣುವುದಿಲ್ಲ. ಅಖಿಲೇಶ್ ಯಾದವರಂಥ ಯುವ ನಾಯಕ ಸಮಾಜವಾದಿ ಪಕ್ಷದಲ್ಲಿ ಇದ್ದರೂ ಈ ಕುರಿತು ಮಾರ್ಗದರ್ಶನ ಹಾಗೂ ದೂರದೃಷ್ಟಿ ಅವರಲ್ಲಿ ಇರುವಂತೆ ಕಾಣುವುದಿಲ್ಲ. ಎಡ ಪಕ್ಷಗಳು ತೃತೀಯ ರಂಗದ ಸಾಧ್ಯತೆಗಳ ಬಗ್ಗೆ ಸಂಭವನೀಯ ರಾಜಕೀಯ ಪಕ್ಷಗಳಿಗೆ ಮಾರ್ಗದರ್ಶನ ನೀಡಬೇಕಾದ ಅಗತ್ಯ ಇದೆ. ಉತ್ತಮ ಆಡಳಿತ ನೀಡುವಲ್ಲಿ ಸಮಾಜವಾದಿ ಪಕ್ಷ ಉತ್ತರ ಪ್ರದೇಶದಲ್ಲಿ ಯಶಸ್ವಿಯಾದರೆ ಇದು ತೃತೀಯ ರಂಗದ ರಚನೆಗೆ ನಾಯಕತ್ವ ವಹಿಸಿಕೊಳ್ಳಲು ಸಾಧ್ಯ.