ಉಚಿತ ಕಡ್ಡಾಯ ಶಿಕ್ಷಣಕ್ಕೆ ಎಳ್ಳುನೀರು?

– ರೂಪ ಹಾಸನ

ಅಳೆದುಸುರಿದು ಲೆಕ್ಕ ಹಾಕಿ ಅಂತೂ ಇಂತೂ ಈ ವರ್ಷ ಕರ್ನಾಟಕ ಸರ್ಕಾರ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡುವ ಭರವಸೆಯಲ್ಲಿ ಶಿಕ್ಷಣ ಹಕ್ಕು ಕಾಯ್ದೆಯನ್ನು ಅನುಷ್ಠಾನಗೊಳಿಸಿದೆ. ಇನ್ನೊಂದೆಡೆ ಕಡಿಮೆ ಮಕ್ಕಳಿರುವ ಮೂರು ಸಾವಿರಕ್ಕೂ ಹೆಚ್ಚಿನ ಸರ್ಕಾರಿ ಶಾಲೆಗಳನ್ನೂ ಭರದಿಂದ ಮುಚ್ಚಲು ಪ್ರಾರಂಭಿಸಿದೆ. ಆದರೆ ಈ ಪ್ರಕ್ರಿಯೆಯಿಂದ ಗ್ರಾಮೀಣ ಮಕ್ಕಳಿಗೆ ಆಗುತ್ತಿರುವ ಅನಾನುಕೂಲದ ಬಗೆ, ತಾನು ಗೊತ್ತಿದ್ದೂ ಮಾಡುತ್ತಿರುವ ನ್ಯಾಯಾಂಗ ನಿಂದನೆಯ ಕುರಿತು ಜಾಣ ಕುರುಡು ನಟಿಸುತ್ತಿದೆ. ಶಿಕ್ಷಣ ಹಕ್ಕು ಕಾಯ್ದೆಯನ್ವಯ ಪ್ರತಿ ಒಂದು ಕಿ.ಮಿ.ಗೆ ಕನಿಷ್ಠ ಒಂದು ಕಿರಿಯ ಪ್ರಾಥಮಿಕ ಶಾಲೆಯನ್ನು ಹಾಗೂ ಪ್ರತಿ ಮೂರು ಕಿ.ಮಿ.ಗೆ ಒಂದು ಹಿರಿಯ ಪ್ರಾಥಮಿಕ ಶಾಲೆಯನ್ನು ಉಳಿಸಿಕೊಳ್ಳುವುದಾಗಿ, ಹಾಗೂ ಅದಕ್ಕಿಂತಾ ದೂರವಾದಲ್ಲಿ ಮಕ್ಕಳಿಗೆ ಉಚಿತ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸುವುದಾಗಿ ಸರ್ಕಾರ ಹೈಕೋರ್ಟ್‌ಗೆ ವಾಗ್ದಾನ ನೀಡಿದೆ. ಆದರೆ ಹಾಗೆ ನಡೆದು ಕೊಳ್ಳುತ್ತಿಲ್ಲವೆಂಬುದು ವಾಸ್ತವ ಸತ್ಯ.

ಮುಚ್ಚಿದ ಶಾಲೆಯ ಮಕ್ಕಳನ್ನು ಹತ್ತಿರದ ಇನ್ನೊಂದು ಸರ್ಕಾರಿ ಶಾಲೆಗೆ ವಿಲೀನ ಮಾಡಲು ಈಗಾಗಲೇ ಆದೇಶ ನೀಡಲಾಗಿದೆ. ಆದರೆ ಹಳ್ಳಿಗಾಡಿನ ಪ್ರದೇಶಗಳಲ್ಲಿ ಶಾಲೆ ಮೊದಲೇ ಮಗುವಿನ ವಾಸಸ್ಥಾನದಿಂದ ದೂರವಿದ್ದು, ಅನೇಕ ಕಡೆಗಳಲ್ಲಿ ಸಾರಿಗೆ ವ್ಯವಸ್ಥೆಯೇ ಇಲ್ಲ. ಒಂದೋ, ಎರಡೋ ಬಸ್ ವ್ಯವಸ್ಥೆ ಇದ್ದರೂ ಶಾಲೆಯ ಸಮಯಕ್ಕೆ ಬರುವುದಿಲ್ಲ. ಅಲ್ಲಿ ಸರಕಾರ ಕೊಡಲು ಬಯಸುವ ಬಸ್ ಪಾಸ್ ಯಾವ ಉಪಯೋಗಕ್ಕೆ? ಖಾಸಗಿ ಬಾಡಿಗೆ ವಾಹನಗಳಲ್ಲಿಯಾದರೂ ಮಕ್ಕಳನ್ನು ಶಾಲೆಗೆ ಕಳಿಸಲು ಪೋಷಕರು ತಯಾರಿದ್ದರೂ ಆ ವ್ಯವಸ್ಥೆಯೂ ಹೆಚ್ಚಿನ ಕಡೆಗಳಲ್ಲಿ ಇಲ್ಲ. ಸರ್ಕಾರ ಆಶ್ವಾಸನೆ ನೀಡಿದ್ದ ಸಾರಿಗೆ ಭತ್ಯೆಯಂತೂ ಇನ್ನೂ ಮಕ್ಕಳನ್ನು ತಲುಪಿಯೇ ಇಲ್ಲ.

ಹಾಸನ ತಾಲ್ಲೂಕಿನದೇ ಕೆಲವು ಉದಾಹರಣೆಯನ್ನು ನೋಡುವುದಾದರೆ ಈ ಶೈಕ್ಷಣಿಕ ವರ್ಷ ಪ್ರಾರಂಭವಾದ ನಂತರ ತಾಲ್ಲೂಕಿನಲ್ಲಿ 29 ಪ್ರಾಥಮಿಕ ಶಾಲೆಗಳನ್ನು ಮುಚ್ಚಲಾಗಿದೆ. ಸಾಣೆಹಳ್ಳಿ ಕ್ಲಸ್ಟರ್‌ನ ಹಿರಿಯ ಪ್ರಥಮಿಕ ಶಾಲೆಯಲ್ಲಿ 6 ಮಕ್ಕಳಿರುವ ಕಾರಣಕ್ಕೆ ಶಾಲೆಯನ್ನು ನಾಲ್ಕು ಕಿ.ಮಿ ವ್ಯಾಪ್ತಿಯ ಕುಪ್ಪಳ್ಳಿ ಶಾಲೆಗೆ ವಿಲೀನ ಮಾಡಲಾಗಿದೆ. ಆದರೆ ಈ ಮಕ್ಕಳಿಗೆ ಪರ್ಯಾಯ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಅನಿವಾರ್ಯವಾಗಿ ಅವರು ಒಂದೂವರೆ ಕಿ.ಮಿ ದೂರದಲ್ಲಿರುವ ದೇವೇಗೌಡನಹಳ್ಳಿ[ಉಗನೆ]ಯಲ್ಲಿರುವ ಖಾಸಗಿ ಶಾಲೆಗೆ ದಾಖಲಾಗಿದ್ದಾರೆ. ಈಗ ಬಡ ಪೋಷಕರಿಗೆ ಜೀವನ ನಿರ್ವಹಣೆಯ ಜೊತೆಗೆ ಮಕ್ಕಳ ಶಿಕ್ಷಣದ ಜವಾಬ್ದಾರಿಯೂ ಹೆಗಲಿಗೇರಿ ಕಂಗಾಲಾಗಿದ್ದಾರೆ. ಹಾಗೇ ಗೇಕರವಳ್ಳಿಯ ಕಿರಿಯ ಪ್ರಾಥಮಿಕ ಶಾಲೆಯನ್ನು ಮುಚ್ಚಿ 2 ಕಿ.ಮಿ ದೂರದ ಕೆಂಚಟ್ಟಹಳ್ಳಿಗೆ ವಿಲೀನ ಮಾಡಲಾಗಿದೆ. ನಂಜೇದೇವರ ಕಾವಲಿನ ಹಿರಿಯ ಪ್ರಾಥಮಿಕ ಶಾಲೆಯನ್ನು ಮುಚ್ಚಿ 4 ಕಿ.ಮಿ ದೂರದ ಕಂದಲಿ ಶಾಲೆಗೆ ವಿಲೀನಗೊಳಿಸಲಾಗಿದೆ. ಇಲ್ಲಿನ ಮಕ್ಕಳು ತಮ್ಮದೇ ವೆಚ್ಚದಲ್ಲಿ ಶಾಲೆಗೆ ಬಸ್‌ನಲ್ಲಿ ಓಡಾಡುತ್ತಿದ್ದಾರೆ. ಶಿಕ್ಷಣ ಹಕ್ಕು ಕಾಯ್ದೆಯ ನಿಯಮವನ್ನು ಗಾಳಿಗೆ ತೂರಲಾಗಿದೆ.

2011ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ 1,11,000 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ! ಸ್ವಯಂಸೇವಾ ಸಂಸ್ಥೆ ’ನೆಲೆ’ ನಡೆಸಿದ ಸಮೀಕ್ಷೆಯ ಪ್ರಕಾರ ಬೆಂಗಳೂರೊಂದರಲ್ಲೇ ಬೀದಿ ಮಕ್ಕಳ ಸಂಖ್ಯೆ 40 ಸಾವಿರ ದಾಟಿದೆ! ಇದರಲ್ಲಿ ಹೆಚ್ಚಿನವರು ಹತ್ತು ವರ್ಷದ ಒಳಗಿನವರಾಗಿದ್ದು ಬಹುತೇಕರು ಚಿಂದಿ ಆಯುವುದರಲ್ಲಿ ಹಾಗೂ ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ. ಈ ಮಕ್ಕಳನ್ನೆಲ್ಲಾ ಕಡ್ಡಾಯವಾಗಿ ಶಾಲೆಗೆ ದಾಖಲಿಸುವ ಪ್ರಾಮಾಣಿಕ ಪ್ರಯತ್ನವನ್ನೇನಾದರೂ ಸರಕಾರ ಮಾಡಿದರೆ ಈಗ ಇರುವ ಶಾಲೆಗಳು ಸಾಲದೇ ಸಾವಿರಾರು ಹೊಸ ಶಾಲೆಗಳನ್ನು ತಾನೇ ತೆರೆಯಬೇಕಾಗುತ್ತದೆ!

ಶಾಲೆಯಿಂದ ಹೊರಗುಳಿದ ಮಕ್ಕಳ ಕುರಿತು ವಿಶೇಷ ಅಧ್ಯಯನ ನಡೆಸಿರುವ ’ಕೇಂದ್ರ ಸಂಪನ್ಮೂಲ ಸಚಿವಾಲಯ’ದ ಅಧಿಕಾರಿಗಳನ್ನು ಒಳಗೊಂಡ ಕಾರ್ಯತಂಡ ನೂರಕ್ಕೆ ನೂರರಷ್ಟು ಶಾಲಾ ದಾಖಲಾತಿ ಸಾಧ್ಯವಾಗಬೇಕಾದರೆ ದೇಶಾದ್ಯಂತ ಇನ್ನೂ ಸುಮಾರು 20 ಸಾವಿರ ಶಾಲೆಗಳನ್ನು, ಅದರಲ್ಲೂ ಕರ್ನಾಟಕದಲ್ಲೇ ಮುಂದಿನ ಐದು ವರ್ಷಗಳಲ್ಲಿ ಇನ್ನೂ 1241 ಸರ್ಕಾರಿ ಶಾಲೆಗಳನ್ನು ತೆರೆಯುವುದು ಅತ್ಯಂತ ಅವಶ್ಯಕವೆಂದು ಈ ವರ್ಷದ ಆರಂಭದಲ್ಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ನೀಡಿದೆ. ಹೀಗಿದ್ದೂ ರಾಜ್ಯ ಸರ್ಕಾರ ಈ ಶಿಪಾರಸ್ಸಿಗೆ ಕವಡೆ ಕಿಮ್ಮತ್ತನ್ನೂ ಕೊಟ್ಟಿಲ್ಲ. ಬದಲಾಗಿ ಇರುವ ಸಾವಿರಾರು ಶಾಲೆಗಳನ್ನು ಮುಚ್ಚಲು ಹೊರಟಿದೆ.

ಸರಕಾರಿ ಶಾಲೆಗಳನ್ನು ಹೀಗೆ ಮುಚ್ಚುತ್ತಾ ಹೋದರೆ ವಿಲೀನಗೊಂಡ ದೂರದ ಶಾಲೆಗಳಿಗೆ ಕಳಿಸಲಾಗದ, ಕಳಿಸಲು ಇಷ್ಟವಿಲ್ಲದ, ಕಳಿಸಲು ಸಮಸ್ಯೆಗಳಿರುವ ಪೋಷಕರು ಅನಿವಾರ್ಯವಾಗಿ ಹತ್ತಿರದ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳಿಸುತ್ತಾರೆ ಅಥವಾ ಮಕ್ಕಳನ್ನು ಮನೆಯಲ್ಲೇ ಉಳಿಸಿಕೊಳ್ಳುತ್ತಾರೆ ಅಥವಾ ಇಂದು ಹಳ್ಳಿ ಹಳ್ಳಿಗಳಲ್ಲಿ ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ಅಧಿಕೃತವೋ ಅಥವಾ ಅನಧಿಕೃತವೋ ಒಟ್ಟಿನಲ್ಲಿ ಖಾಸಗಿ ಶಾಲೆಗಳಿಗೆ ಸೇರುವ ಅಸಹಾಯಕ ಪರಿಸ್ಥಿತಿ ಉಂಟಾಗುತ್ತದೆ. ಈಗಾಗಲೇ ಸರ್ಕಾರಿ ಶಾಲೆ ಹಾಗೂ ಅಲ್ಲಿ ಓದುತ್ತಿರುವ ಮಕ್ಕಳ ಪ್ರಮಾಣ ವರ್ಷದಿಂದ ವರ್ಷಕ್ಕೆ ಸಾವಿರದ ಲೆಕ್ಕದಲ್ಲಿ ಕಡಿಮೆಯಾಗುತ್ತಿರುವುದು ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಿಂದಲೇ ದೃಢಪಡುತ್ತದೆ. ಸರ್ಕಾರಿ ವ್ಯವಸ್ಥೆಯನ್ನು ದುರ್ಬಲಗೊಳಿಸಿ ಖಾಸಗಿ ವಲಯವನ್ನು ಕದ್ದು ಮುಚ್ಚಿ ಬಲಗೊಳಿಸುತ್ತಾ ಬಂದಿರುವ ಸರ್ಕಾರದ ನೀತಿಯಿಂದಾಗಿ ಪ್ರಸ್ತುತ 46400 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 43.92 ಲಕ್ಷ ಮಕ್ಕಳು ಓದುತ್ತಿದ್ದರೆ, ಕೇವಲ 12,909ರಷ್ಟಿರುವ ಖಾಸಗಿ ಶಾಲೆಗಳಲ್ಲಿ 29.31 ಲಕ್ಷ ಮಕ್ಕಳು ಓದುತ್ತಿದ್ದಾರೆ! ಕಳೆದ ಎರಡು ವರ್ಷಗಳಲ್ಲಿ 3.37 ಲಕ್ಷ ಮಕ್ಕಳು ಸರಕಾರಿ ಶಾಲೆ ತೊರೆದಿದ್ದಾರೆ ಎಂದು ’ಇಂಡಿಯಾ ಗವರ್ನನ್ಸ ಇನ್ಸ್‌ಟಿಟ್ಯೂಟ್’ ಸರಕಾರಿ ಶಾಲೆಗಳಲ್ಲಿ ನಡೆಸಿದ ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ.

ದುರಂತವೆಂದರೆ ರಾಜ್ಯಾದ್ಯಂತ ಈಗಾಗಲೇ 3000 ಕ್ಕೂ ಅಧಿಕವಾಗಿರುವ ಅನಧಿಕೃತ ಶಾಲೆಗಳು ಹಾಗೂ ಅಲ್ಲಿ ಕಲಿಯುತ್ತಿರುವ ಮಕ್ಕಳ ಸಂಖ್ಯೆ ಕುರಿತು ಶಿಕ್ಷಣ ಇಲಾಖೆಯಲ್ಲಿ ಯಾವ ಮಾಹಿತಿಯೂ ಲಭ್ಯವಿಲ್ಲ. ಏಕೆಂದರೆ ಅವುಗಳ ಮೇಲೆ ಇಲಾಖೆಗೆ ಯಾವ ನಿಯಂತ್ರಣವೂ ಇಲ್ಲ! ಪ್ರತಿ ಶೈಕ್ಷಣಿಕ ವಷದ ಆರಂಭದಲ್ಲಿ “ಈ ಶಾಲೆಗಳೆಲ್ಲ ಅನಧಿಕೃತ….. ಇಲ್ಲಿಗೆ ಮಕ್ಕಳನ್ನು ಸೇರಿಸಬೇಡಿ…….” ಎಂದು ಅನಧಿಕೃತ ಶಾಲೆಗಳ ಪಟ್ಟಿಯನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡುವುದಷ್ಟೇ ಇಲಾಖೆಯ ಜವಾಬ್ದಾರಿ! ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸರ್ಕಾರಕ್ಕೆ ಇಚ್ಚೆಯಿಲ್ಲ. ಬದಲಾಗಿ ಸರ್ಕಾರವೇ ಕುಮ್ಮಕ್ಕು ಕೊಟ್ಟಂತೆ ಕಾಣಿಸುತ್ತಿದೆ.

ಏಕೆಂದರೆ ಪ್ರತಿವರ್ಷ ಇಂತಹ ಅನಧಿಕೃತ ಖಾಸಗಿ ಶಾಲೆಗಳಿಂದ ಇಂತಿಷ್ಟು ಎಂದು ಎಂಜಲು ನೈವೇದ್ಯ ತಿಂದು ವರ್ಷಗಟ್ಟಲೆ ಇಂದ ಭ್ರಷ್ಟಗೊಂಡಿರುವ ಶೈಕ್ಷಣಿಕ ಆಡಳಿತಶಾಹಿ, ಜಾಣ ಮೌನ ವಹಿಸಿ ಕೊಬ್ಬಿಸುತ್ತಿದೆ. ಎಲ್ಲೆಂದರಲ್ಲಿ ಸರ್ಕಾರದ ಪರವಾನಗಿ ಪಡೆಯದೆ ತಲೆ ಎತ್ತುತ್ತಿರುವ ಈ ಅನಧಿಕೃತ ಖಾಸಗಿ ಶಾಲೆಗಳು ಮನಬಂದಂತೆ ವಂತಿಗೆ, ಶುಲ್ಕದ ಹೆಸರಿನಲ್ಲಿ ಹಣ ಹಿರಿದು, ಕಳಪೆ ಶಿಕ್ಷಣವನ್ನು ನೀಡುತ್ತ ಇಡೀ ಶಿಕ್ಷಣ ವ್ಯವಸ್ಥೆಗೇ ಗೆದ್ದಲು ಹಿಡಿಸಿದೆ. ಇಂತಹ ಅನಧಿಕೃತ ಶಾಲೆಗಳಿಗೆ ಯಾವುದೇ ಸರ್ಕಾರಿ ಶೈಕ್ಷಣಿಕ ನಿಯಮಗಳಿಲ್ಲದೇ, ಶಿಕ್ಷಣ ಹಕ್ಕು ಕಾಯ್ದೆ-ಮೀಸಲಾತಿಯ ಗೊಡವೆಯೂ ಇಲ್ಲದೇ, ಭಾಷಾ ನೀತಿಯ ತಲೆಬಿಸಿಯೂ ಇಲ್ಲದೇ ಶಿಕ್ಷಣವನ್ನು ಲಾಭದ ದಂಧೆಯನ್ನಾಗಿ ಮಾಡಿಕೊಂಡಿವೆ. ಇವುಗಳಿಗೆ ಮೂಗುದಾರ ಹಾಕಲಾಗದ ಸರ್ಕಾರ, ಈಗ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳನ್ನು ಮುಚ್ಚಿ ಅನಧಿಕೃತ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಬಲಿ ನೀಡುತ್ತಿದೆ. ಯಾರ ಯಾವ ನಿಯಂತ್ರಣವೂ ಇಲ್ಲದೇ ನಿರ್ಭಿಡೆಯಿಂದ ಬೆಳೆಯಲು ಅವಕಾಶಗಳಿರುವುದರಿಂದಲೇ ಇನ್ನು ಮುಂದೆ ಹಳ್ಳಿಗಳಲ್ಲಿ ಅನಧಿಕೃತ ಖಾಸಗಿ ಶಾಲೆಗಳು ಇನ್ನಷ್ಟು ಹೆಚ್ಚುವ ಆತಂಕವಿದೆ. ಸರ್ಕಾರಿ ಶಾಲೆಯ ಮಕ್ಕಳನ್ನು ಅನಿವಾರ್ಯವಾಗಿ ’ಉಚಿತ’ ಶಿಕ್ಷಣದಿಂದ ವಂಚಿಸಿ ಸರ್ಕಾರ ಅನಧಿಕೃತ ಖಾಸಗಿ ಶಾಲೆಗಳ ಬಾಯಿಗೆ ಆಹಾರವಾಗಿಸಿದೆ.

3000 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಂಡು “ಈ ಅನಧಿಕೃತ ಖಾಸಗಿ ಶಾಲೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ” ಎಂದು ವಿಶ್ವೇಶ್ವರ ಹೆಗಡೆ ಕಾಗೇರಿಯವರು ತಮ್ಮ ಅಸಹಾಯಕತೆ ಪ್ರದರ್ಶಿಸುತ್ತಾರೆ! “ಕಡಿಮೆ ಮಕ್ಕಳಿರುವ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಬಯಸುವವರಿಗೆ ದತ್ತು ನೀಡಲು ಸಿದ್ಧ” ಎಂದು ಆಹ್ವಾನ ನೀಡುತ್ತಾರೆ! ಇವರು ನಮ್ಮ ಶಿಕ್ಷಣ ಸಚಿವರು! ಇದು ಖಾಸಗಿಗೆ ತನ್ನನ್ನು ಬಿಕರಿಗಿಟ್ಟುಕೊಂಡು ಆತ್ಮಸಾಕ್ಷಿ ಇಲ್ಲದೇ ಸರ್ಕಾರ ನಡೆಸುವ ಪರಿ!

ನಿಜಕ್ಕೂ ಶಿಕ್ಷಣ ಕಾಯ್ದೆಯನ್ವಯ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡುವ ಮನಸು ಸರ್ಕಾರಕ್ಕಿದ್ದರೆ ತಕ್ಷಣವೇ ಕಳಪೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಅನಧಿಕೃತ ಖಾಸಗಿ ಶಾಲೆಗಳನ್ನು ಮುಟ್ಟುಗೋಲು ಹಾಕಿಕೊಂಡು, ಮುಂದೆ ಇಂತಹ ಶಾಲೆಗಳು ತಲೆ ಎತ್ತದಂತೆ ಪ್ರಬಲ ಶೈಕ್ಷಣಿಕ ಕಾಯ್ದೆಯೊಂದನ್ನು ರೂಪಿಸಬೇಕು. ಶಿಕ್ಷಣವನ್ನು ಖಾಸಗಿಯಾಗಿ ಹಣಕೊಟ್ಟು ಕೊಳ್ಳುವಂತಹ ಪರಿಸ್ಥಿತಿ ಯಾವುದೇ ಬಡ ಗ್ರಾಮೀಣ ಪೋಷಕರಿಗೆ ಬಂದೊದಗದಂತೆ ತಕ್ಷಣವೇ ಮುಚ್ಚಲ್ಪಟ್ಟ ಶಾಲೆಯ ಮಕ್ಕಳಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಗ್ರಾಮೀಣ ಭಾರತ ಅದರಲ್ಲೂ ಹೆಣ್ಣುಮಕ್ಕಳು ಶಾಶ್ವತವಾಗಿ ಶಿಕ್ಷಣದಿಂದ ವಂಚಿತರಾಗದಂತೆ ಎಚ್ಚರ ವಹಿಸಬೇಕು. ಅದಕ್ಕಾಗಿ ಹಳ್ಳಿ ಹಳ್ಳಿಗಳಲ್ಲೂ ಲಂಗುಲಗಾಮಿಲ್ಲದೇ ಹುಟ್ಟಿಕೊಂಡಿರುವ-ಹುಟ್ಟಿ ಕೊಳ್ಳುತ್ತಿರುವ, ಅನಧಿಕೃತ ಖಾಸಗಿ ಶಾಲೆಗಳಿಗೆ ದಾಖಲಾಗದಂತೆ ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕು. ಶಿಕ್ಷಣ ಹಕ್ಕು ಕಾಯ್ದೆ ನಿಜವಾಗಿಯೂ ಜಾರಿಯಾಗಬೇಕೆಂದರೆ, ಶಾಲೆಯಿಂದ ಹೊರಗುಳಿದಿರುವ ಸಾವಿರಾರು ಮಕ್ಕಳನ್ನು ಶಾಲೆಗೆ ದಾಖಲಿಸಲು ಪರಿಣಾಮಕಾರಿ ಯೋಜನೆಗಳನ್ನು ರೂಪಿಸಬೇಕು. ಇದಾಗದಿದ್ದರೆ ’ಉಚಿತ’ ಮತ್ತು ’ಕಡ್ಡಾಯ’ ಶಿಕ್ಷಣ ಎಂಬ ಕಾಯ್ದೆಗೇ ಎಳ್ಳು ನೀರು ಬಿಟ್ಟಂತಾಗುತ್ತದೆ. ಹಾಗಾಗದಿರಲೆಂಬುದು ನಮ್ಮ ಹಾರೈಕೆ.

2 thoughts on “ಉಚಿತ ಕಡ್ಡಾಯ ಶಿಕ್ಷಣಕ್ಕೆ ಎಳ್ಳುನೀರು?

  1. anand prasad

    ಖಾಸಗೀಕರಣದ ನೀತಿಯ ಮುಂದುವರಿದ ಭಾಗವಾಗಿ ಸರ್ಕಾರ ಪ್ರಾಥಮಿಕ ಶಿಕ್ಷಣವನ್ನು ಖಾಸಗಿ ರಂಗಕ್ಕೆ ಬಿಟ್ಟುಕೊಟ್ಟು ತಾನು ಜವಾಬ್ದಾರಿಯಿಂದ ಹಿಂದೆ ಸರಿಯುತ್ತಿರುವಂತೆ ಕಾಣುತ್ತದೆ. ಮೊದಮೊದಲು ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣವನ್ನು ಕ್ಯಾಪಿಟೇಶನ್ ಕುಳಗಳು ಮಾರಾಟದ ಸರಕಾಗಿಸಿದರು. ಇಂದು ಅಂಥ ಕುಳಗಳು ಸರಕಾರವನ್ನು ನಿಯಂತ್ರಿಸುವ ಲಾಬಿಯಾಗಿ ಬೆಳೆದಿವೆ. ಇದೇ ರೀತಿ ಈಗ ಪ್ರಾಥಮಿಕ ಶಿಕ್ಷಣವನ್ನೂ ಖಾಸಗಿ ಕುಳಗಳು ಮಾರಾಟದ ಸರಕಾಗಿಸುತ್ತಿದ್ದು ಮುಂದೆ ಇವರದ್ದೂ ಒಂದು ಲಾಬಿಯಾಗಿ ಬೆಳೆಯಬಹುದು. ಸರ್ಕಾರ ಯಾವುದನ್ನೂ ಸರಿಯಾಗಿ ನಡೆಸುತ್ತಿಲ್ಲ, ಇದಕ್ಕೆ ಖಾಸಗೀಕರಣವೇ ಮದ್ದು ಎಂಬ ಕೂಗು ಉದ್ಯಮ ಇತ್ಯಾದಿ ರಂಗಗಳಲ್ಲಿ ಎದ್ದಂತೆ ಮುಂದೆ ಪ್ರಾಥಮಿಕ ಶಿಕ್ಷಣವನ್ನೂ ಸಂಪೂರ್ಣ ಖಾಸಗೀ ರಂಗಕ್ಕೆ ಬಿಟ್ಟುಕೊಡಬೇಕು ಎಂಬ ಕೂಗು ಎದ್ದರೂ ಏಳಬಹುದು.

    Reply
  2. ರಾಕೇಶ್ ಶೆಟ್ಟಿ

    ಖಾಸಗಿ ಶಾಲೆ ನಡೆಸುವ ಕುಳಗಳೇ ಸರ್ಕಾರ/ಅಧಿಕಾರಿ ಗಳಾಗಿರುವ ರಾಜ್ಯ/ದೇಶದೊಳಗೆ ಇದಕ್ಕಿಂತ ಇನ್ನೇನು ನಿರೀಕ್ಷಿಸಲು ಸಾಧ್ಯ? ಆಂಗ್ಲ ಮಾಧ್ಯಮದ ವಿರುದ್ಧ ಎದ್ದು ನಿಂತಿರುವ ಕ.ಸಾ.ಪ ನೇತೃತ್ವದಲ್ಲಿ ಅದರ ಜೊತೆಗೆ ಅನಧಿಕೃತ ಖಾಸಗಿ ಶಾಲೆಗಳ ವಿರುದ್ಧ ಹಾಗೆ ‘ಏಕ ರೂಪ ಶಿಕ್ಷಣ’ದ ಜೊತೆಗೆ ಶಿಕ್ಷಣದ ರಾಷ್ಟ್ರೀಕರಣಕ್ಕೆ ಆಗ್ರಹಿಸುವ ಜನಪರ ಚಳುವಳಿ ಇಂದಿನ ಅಗತ್ಯವಾಗಿದೆ.

    ಸರ್ಕಾರ ಹೇಗೆ ಜನರಿಗೆ ಮೋಸ ಮಾಡುತ್ತಿದೆ ಅನ್ನುವುದನ್ನು ಎಳೆ ಎಳೆಯಾಗಿ ಜನರಿಗೆ ಅರ್ಥವಾಗುವ ರೀತಿಯಲ್ಲಿ ತಲುಪಿಸುವುದು ನಮ್ಮ ಮೊದಲ ಕೆಲಸವಾಗಬೇಕು

    Reply

Leave a Reply

Your email address will not be published. Required fields are marked *