‘ಇದು ಮುಂಗಾರು’ – ‘ಮುಂಗಾರು’ ಅಂದ್ರೆ ಇಷ್ಠೇನಾ?

– ಶಿವರಾಮ್ ಕೆಳಗೋಟೆ

ಈ ಹೊತ್ತಿನಲ್ಲಿ ಪತ್ರಿಕೋದ್ಯಮಕ್ಕೆ ಪ್ರವೇಶ ಪಡೆದವರಿಗೆ ವಡ್ಡರ್ಸೆ ರಘುರಾಮ ಶೆಟ್ಟರ ‘ಮುಂಗಾರು’ ಕೇವಲ ಹಿರಿಯರಿಂದ ಕೇಳಿ ಗೊತ್ತು. ಅದರ ಒಂದು ಪ್ರತಿಯನ್ನೂ ಓದದವರಿಗೆ ಆ ಪತ್ರಿಕೆ ಬಗ್ಗೆ ಹಲವು ಕುತೂಹಲಗಳಿವೆ. ಅದು ಜನರ ಒಡೆತನದ ಪತ್ರಿಕೆ, ‘ಚಿಂತನೆಯ ಮಳೆ ಸುರಿಸಿ, ಜನಶಕ್ತಿಯ ಬೆಳೆ ತೆಗೆವ’ ಉದ್ದೇಶದೊಂದಿಗೆ ಹೊರಬಂದ ಪತ್ರಿಕೆ… ಹೀಗೇ ಅಲ್ಲಲ್ಲಿ ಕೇಳಿ ಬರುತ್ತಿದ್ದ ಮಾತುಗಳು ಅಂತಹದೊಂದು ಪ್ರಯೋಗದ ಬಗ್ಗೆ ನವ ಪತ್ರಕರ್ತರಲ್ಲಿ ಕುತೂಹಲ ಹುಟ್ಟಿಸಲು ಕಾರಣವಾಗಿದ್ದವು.

ಈ ಕುತೂಹಲದಿಂದಾಗಿಯೇ “ಕೆಂಡಸಂಪಿಗೆ”ಯಲ್ಲಿ ಪ್ರಕಟವಾದ ಚಿದಂಬರ ಬೈಕಂಪಾಡಿ ಬರೆದ ಸರಣಿ ಅನೇಕರನ್ನು ಆಕರ್ಷಿಸಿತ್ತು .ಜಿ.ಎನ್ ಮೋಹನ್ ಇದೇ ಸರಣಿಯನ್ನು ಅಂಕಿತ ಪ್ರಕಾಶನದ ‘ಮೀಡಿಯಾ ಮಾಲಿಕೆ’ ಯ ಮೊದಲ ಪುಸ್ತಕವಾಗಿ ಪ್ರಕಟಿಸಿದರು. ಆ ಮೂಲಕ ಮುಂಗಾರು, ಅದರ ಸಂಪಾದಕ ವಡ್ಡರ್ಸೆಯವರು ಮತ್ತು ಚಿದಂಬರ ಬೈಕಂಪಾಡಿಯವರ ವೃತ್ತಿ ಜೀವನ, ವಿಶಾಲ ಓದುಗರಿಗೆ ಪರಿಚಯವಾಗಲು ಸಾಧ್ಯವಾಯಿತು. ಪುಸ್ತಕದ ಹೆಸರು ಹೇಳುವಂತೆ ಇದು ಮುಂಗಾರಿನ ಕತೆ ಅಥವಾ ಚರಿತ್ರೆ.

ಪುಸ್ತಕ ಓದಿದ ನಂತರ ಮನಸ್ಸಿನಲ್ಲಿ ಉಳಿಯುವ ಚಿತ್ರಗಳನ್ನು ಪಟ್ಟಿ ಮಾಡುತ್ತಾ ಹೋದರೆ, ಪ್ರಮುಖವಾಗಿ ಕಾಣುವುದು –ಒಂದು ಆದರ್ಶಕ್ಕಾಗಿ ಪತ್ರಿಕೆ ಹುಟ್ಟು ಹಾಕಿದ ವಡ್ಡರ್ಸೆ, ಅವರೊಂದಿಗೆ ಪ್ರಜಾವಾಣಿಯಂತಹ ಸಂಸ್ಥೆಯನ್ನು ಬಿಟ್ಟು ಬಂದ ಗಟ್ಟಿ ಪತ್ರಕರ್ತರ ತಂಡ, ಅವರೊಟ್ಟಿಗೆ ಸೇರಿಕೊಂಡು ನಂತರ ಅತ್ಯುತ್ತಮ ಪತ್ರಕರ್ತರಾಗಿ ರೂಪುಗೊಂಡ ತರುಣರು, ಚಿದಂಬರ ಬೈಕಂಪಾಡಿಗೆ ಕಡಿಮೆ ಸಂಬಳ ಫಿಕ್ಸ್ ಆಗಿದ್ದು, ನಂತರ ಸಂಪಾದಕರು ಅದನ್ನು ಸರಿಮಾಡಿದ್ದು, ಅವರು ವರದಿಗಾರರಾಗಿ ಬೀದರ್, ಕಾರವಾರಕ್ಕೆ ಭೇಟಿ ನೀಡಿದ್ದು, ಪತ್ರಿಕೆ ಉಳಿವಿಗಾಗಿ ಸಾಲ ಮಾಡಿದ್ದು, ವಡ್ಡರ್ಸೆಯವರ ಕಾರನ್ನು ಹೂಡಿಕೆದಾರರೊಬ್ಬರು ಹಿಂದಕ್ಕೆ ತೆಗೆದುಕೊಂಡದ್ದು.. ಕೊನೆಗೆ ವಡ್ಡರ್ಸೆ ಪತ್ರಿಕೆಗೆ ವಿದಾಯ ಹೇಳಿದ್ದು.

ಹಾಗಾದರೆ ಕನ್ನಡ ಪತ್ರಿಕೋದ್ಯಮದ ವಿಶಿಷ್ಟ ಪ್ರಯತ್ನ ‘ಮುಂಗಾರು’ ಅಂದ್ರೆ ಇಷ್ಟೇನಾ?

ಪತ್ರಕರ್ತ ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿಯಾಗಿ ತೀವ್ರವಾಗಿ ಆಸಕ್ತಿ ಕೆರಳಿಸುವ ಸಂಗತಿ – ಮುಂಗಾರು ‘ಓದುಗರ ಒಡೆತನದ ಪತ್ರಿಕೆ’ ಎಂಬ ಮಾತು. ಈ ಪುಸ್ತಕ ಈ ಅಂಶವನ್ನು ವಿವರವಾಗಿ ಹೇಳುವುದೇ ಇಲ್ಲ. ಅದ್ಹೇಗೆ ಓದುಗರ ಒಡೆತನದ ಪತ್ರಿಕೆಯಾಗಿತ್ತು? ‘ಸಾರ್ವಜನಿಕರಿಂದ ಶೇರು ಸಂಗ್ರಹಿಸುತ್ತಿದ್ದರು’ (ಪುಟ 21) ಎಂಬ ಮಾತಿದೆ. ಹಾಗಾದರೆ ಸಾರ್ವಜನಿಕರು ಅನ್ನುವುದನ್ನು ‘ಓದುಗರು’ ಎಂದು ಗ್ರಹಿಸಬೇಕೆ? ಶೇರು ಸಂಗ್ರಹಿಸಿದ್ದವರೆಲ್ಲ ಓದುಗರಾಗಿದ್ದರೆ? ಹಾಗಾದರೆ, ಓದುಗರ ಹೂಡಿಕೆ ಕಂಪನಿಯಲ್ಲಿ ಎಷ್ಟಿತ್ತು? ಓದುಗರ ಒಡೆತನ ಎಂದ ಮೇಲೆ, ಪತ್ರಿಕೆಯ ಸಂಪಾದಕೀಯ ಹೂರಣದಲ್ಲಿ ಓದುಗರ ಪಾತ್ರ ಏನಿತ್ತು, ಎಷ್ಟಿತ್ತು?

ಕೆಲ ಹಿರಿಯರಿಂದ ಕೇಳಿರುವ ಹಾಗೆ, ವಡ್ಡರ್ಸೆಯವರು ವಾರಕ್ಕೊಮ್ಮೆ ಓದುಗರ ಪ್ರಶ್ನೆಗಳಿಗೆ ಉತ್ತರಿಸುವ ಅಂಕಣವೊಂದು ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು. ಓದುಗರು, ಪತ್ರಿಕೆ, ಅದರ ಸಂಪಾದಕೀಯ ನಿಲುವುಗಳು ಹೀಗೆ ಅನೇಕ ಸಂಗತಿಗಳ ಬಗ್ಗೆ ಪ್ರಶ್ನೆ ಕೇಳುತ್ತಿದ್ದರು. ಸಂಪಾದಕರು ಓದುಗರೊಂದಿಗೆ ಅವರು ಎತ್ತಿದ ವಿಚಾರಗಳ ಬಗ್ಗೆ ಮುಕ್ತವಾಗಿ ಚರ್ಚೆ ನಡೆಸುತ್ತಿದ್ದರು. ಬೈಕಂಪಾಡಿಯವರ ‘ಇದು ಮುಂಗಾರು’ ಪುಸ್ತಕದಲ್ಲಿ ಈ ಬಗ್ಗೆ ಉಲ್ಲೇಖ ಕಾಣಲಿಲ್ಲ. ಒಬ್ಬ ಸಂಪಾದಕ ಓದುಗರೊಂದಿಗೆ ಸಂವಾದ ನಡೆಸುವ ಪ್ರಯೋಗವೇ ವಿಶಿಷ್ಟ. ಈ ಬಗ್ಗೆ ಲೇಖಕರು ವಿವರವಾಗಿ ದಾಖಲಿಸಿದ್ದರೆ ಉಪಯೋಗವಾಗುತ್ತಿತ್ತು.

“ಆದರ್ಶ, ಸೇವೆ ಇವೆಲ್ಲವೂ ಶೆಟ್ರ ಭಾಷೆಯಲ್ಲೇ ಹೇಳುವುದಾದರೆ ಮಣ್ಣಂಗಟ್ಟಿ. ಆದ್ದರಿಂದಲೇ ‘ಮುಂಗಾರು’ಮುನ್ನಡೆಯಲಿಲ್ಲ. ರಘುರಾಮ ಶೆಟ್ರು ‘ಮುಂಗಾರು’ ಹುಟ್ಟುಹಾಕಿದ್ದು ಸರಿ, ಅವರ ಧ್ಯೇಯೋದ್ದೇಶಗಳೂ ಸರಿಯಾದವೇ. ಆದರೆ ಅವರ ಸಂಸ್ಥೆ ಇರಬೇಕಿದ್ದ ಸ್ಥಳ ಕರಾವಳಿ ಅಲ್ಲವೇ ಅಲ್ಲ” – ಎಂದು ಲೇಖಕರು ತಮ್ಮ ಆರಂಭಿಕ ಮಾತುಗಳಲ್ಲಿ (ಪುಟ 12) ಹೇಳುತ್ತಾರೆ. ಪತ್ರಿಕೆ ಉದ್ದೇಶಿತ ಗುರಿ ಮತ್ತು ವಿಸ್ತಾರ ತಲುಪದೇ ಇದ್ದಾಗ ವಡ್ಡರ್ಸೆಯವರು ಆಡಿರಬಹುದಾದ ಮಾತನ್ನು ಇಟ್ಟುಕೊಂಡು ಲೇಖಕರು ತಮ್ಮ ಅಭಿಪ್ರಾಯವನ್ನು ಈ ವಾಕ್ಯದಲ್ಲಿ ಹೇಳಿದ್ದಾರೆ.

ಕರಾವಳಿ ಈ ಪ್ರಯೋಗಕ್ಕೆ ಸೂಕ್ತ ಅಲ್ಲ ಎನ್ನುವ ಲೇಖಕರು, ತಮ್ಮ ಪ್ರಕಾರ ‘ಸೂಕ್ತ ಸ್ಥಳ’ ಯಾವುದು ಎಂಬುದನ್ನು ಹೇಳಲಿಲ್ಲ. ಆದರೆ, ಕರಾವಳಿ ಪ್ರದೇಶವನ್ನು ತಮ್ಮ ಕಾರ್ಯಸ್ಥಾನವಾಗಿ ಆಯ್ಕೆ ಮಾಡಿಕೊಳ್ಳುವಲ್ಲಿಯೇ ವಡ್ಡರ್ಸೆಯವರ ಧ್ಯೇಯೋದ್ದೇಶಗಳು ಸ್ಟಷ್ಟವಾಗಿದ್ದವು. ಸಣ್ಣ–ಪುಟ್ಟ ಪ್ರಚೋದನೆಗಳಿಗೆ ಕೋಮು ಭಾವನೆಗಳನ್ನು ಕೆರಳಿಸಿಕೊಂಡು ಶಾಂತಿ ಹಾಳು ಮಾಡಿಕೊಳ್ಳುವ ಪರಿಸರದಲ್ಲಿ ‘ಚಿಂತನೆಯ ಮಳೆ’ ಅಗತ್ಯವಾಗಿತ್ತು ಎನಿಸುವುದಿಲ್ಲವೆ?.

ಈ ಕೃತಿಯಿಂದ ನಿರೀಕ್ಷಿಸಬಹುದಾದ ಪ್ರಮುಖ ಅಂಶ – ‘ಮುಂಗಾರು’ ತನ್ನ ಕಡಿಮೆ ಜೀವಿತಾವಧಿಯಲ್ಲಿ ಓದುಗ ವಲಯದಲ್ಲಿ ಉಂಟುಮಾಡಿದ ಸಂಚಲನೆ ಎಂಥದ್ದು? ಲೇಖಕರು ಅಲ್ಲಲ್ಲಿ ಸಂಪಾದಕರ ‘ಧ್ಯೇಯ, ಸಿದ್ಧಾಂತ,ಕಾಳಜಿ’ಗಳನ್ನು ಕೊಂಡಾಡುತ್ತಾರೆ. ಆದರೆ 2012 ರಲ್ಲಿ ಈಗಷ್ಟೆ ಪತ್ರಿಕೋದ್ಯಮಕ್ಕೆ ಕಣ್ಣು ಬಿಟ್ಟ ಓದುಗ ಮುಂಗಾರು ಬಗ್ಗೆ ಬಂದಿರುವ ಈ ಪುಸ್ತಕ ಹಿಡಿದು ಕೂತಾಗ, ಏಳುವ ಪ್ರಶ್ನೆ – ವಡ್ಡರ್ಸೆಯವರು ಪ್ರತಿನಿಧಿಸಿದ ಧ್ಯೇಯ, ಸಿದ್ಧಾಂತ, ಕಾಳಜಿಗಳು ಯಾವುವು? ಅವರು ಲೋಹಿಯಾರಿಂದ ಪ್ರಭಾವಿತರಾಗಿದ್ದರು. ಶೂದ್ರ ಅಥವಾ ದಲಿತ ನೇತಾರರ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿದ್ದರು. ಶೂದ್ರ ನಾಯಕರು ತಪ್ಪು ಮಾಡಿದಾಗ ಅಂತಹ ಪ್ರಕರಣಗಳನ್ನು ಮೃದುವಾಗಿಯೇ ಹ್ಯಾಂಡಲ್ ಮಾಡಬೇಕು –ಎಂಬರ್ಥದ ಮಾತುಗಳನ್ನು ವಡ್ಡರ್ಸೆ ಆಗಾಗ ಆಡುತ್ತಿದ್ದರು ಎಂದು ಲೇಖಕರು ಉಲ್ಲೇಖಿಸುತ್ತಾರೆ. ಆದರೆ ಒಟ್ಟಾರೆ, ಪ್ರಚಲಿತ ರಾಜಕೀಯ ಬೆಳವಣಿಗೆಗಳ ಬಗ್ಗೆ, ಮುಂದುವರೆದ ಸಾಮಾಜಿಕ ಅಸಮಾನತೆ ಬಗ್ಗೆ ಒಂದು ವಿಶಿಷ್ಟ ಪತ್ರಿಕೆಯ ಸಂಪಾದಕರಾಗಿ ವಡ್ಡರ್ಸೆ ತಾಳಿದ್ದ ನಿಲುವುಗಳು ಮತ್ತು ಆ ನಿಲುವುಗಳನ್ನು ತಮ್ಮ ಪತ್ರಿಕೆಯಲ್ಲಿ ವ್ಯಕ್ತಪಡಿಸಿದ ಬಗ್ಗೆ ವಿವರಗಳು ಈ ಕೃತಿಯಲ್ಲಿ ವಿರಳ.

ಚಿದಂಬರ ಬೈಕಂಪಾಡಿ

ಈ ಎಲ್ಲಾ ವಿವರಗಳು ಈ ಕೃತಿಯಲ್ಲಿ ಇರಬೇಕಿತ್ತು ಎಂದು ಬಯಸುವುದಕ್ಕೆ ಕಾರಣ ಈ ಕೃತಿಯ ಶೀರ್ಷಿಕೆ. ಮೀಡಿಯಾ ಮಾಲಿಕೆ ಸಂಪಾದಕರು ಮತ್ತು ಲೇಖಕರು ಕೃತಿಗೆ ಕೊಟ್ಟ ಹೆಸರು – ‘ಇದು ಮುಂಗಾರು’. ದೃಢವಾಗಿ ಮುಂಗಾರು ಎನ್ನುವ ಪತ್ರಿಕೆ ಹೀಗೇ ಇತ್ತು ಎನ್ನುವ ಧೋರಣೆ ಈ ಶೀರ್ಷಿಕೆಯಲ್ಲಿದೆ. ಕೆಲ ಹಿರಿಯ ವರದಿಗಾರರು ಕಿರಿಯರ ಕಾಪಿ ತಿದ್ದುವಾಗ ‘ಇದು ಸುದ್ದಿ’ ಎಂದು ಯಾವ ಅಂಶವನ್ನು ಹೈಲೈಟ್ ಮಾಡಬೇಕಿತ್ತೋ ಅದನ್ನು ತೋರಿಸಿ ಹೇಳುತ್ತಾರೆ. ಅದರರ್ಥ ಕಿರಿಯ ವರದಿಗಾರ ಲೀಡ್ ಆಗಿ ತೆಗೆದುಕೊಂಡ ಅಂಶ ಅಷ್ಟು ಮುಖ್ಯ ಅಲ್ಲ ಎಂಬುದನ್ನು ಸ್ಪಷ್ಟಪಡಿಸುವುದು. ಅಂತೆಯೇ ‘ಇದು ಮುಂಗಾರು’ ಎನ್ನುವಾಗ ಈ ಕೃತಿಗೆ ಮಹತ್ವವನ್ನೂ, ಗಾಂಭೀರ್ಯವನ್ನೂ ಜೊತೆಗೆ ಅಧಿಕೃತತೆಯನ್ನು ದಯಪಾಲಿಸುವ ಉದ್ದೇಶವಿದೆ.

‘ಮುಂಗಾರು’ಗೆ ದುಡಿದ ಅನೇಕ ಪ್ರತಿಭೆಗಳು ಇಂದಿಗೂ ನಮ್ಮ ಮಧ್ಯೆ ಇದ್ದಾರೆ. (ಅವರಲ್ಲಿ ಕೆಲವರು ಒಂದು ಕಾಲದಲ್ಲಿ ವಡ್ಡರ್ಸೆಯವರ ಪತ್ರಿಕೆಯಲ್ಲಿದ್ದರು ಎಂಬ ವಾಸ್ತವವನ್ನು ಸಂಶಯಿಸುವ ಮಟ್ಟಿಗೆ ಬದಲಾಗಿದ್ದಾರೆ ಅಥವಾ ನಿಜ ರೂಪ ಪ್ರದರ್ಶಿಸಿದ್ದಾರೆ!). ಪತ್ರಿಕೆ ಕಟ್ಟುವಾಗ ವಡ್ಡರ್ಸೆಯವರ ಜೊತೆ ಇದ್ದ ಇಂದೂಧರ ಹೊನ್ನಾಪುರ, ಕೆ. ಪುಟ್ಟಸ್ವಾಮಿ, ಈ ಪತ್ರಿಕೆ ಮೂಲಕ ವೃತ್ತಿ ಪ್ರವೇಶಿಸಿದ ದಿನೇಶ್ ಅಮಿನ್ ಮಟ್ಟು ಮತ್ತಿತರರು ಈ ಮೇಲೆ ಎತ್ತಿರುವ ಪ್ರಶ್ನೆಗಳಿಗೆ ಸೂಕ್ತ ವಿವರ ಕೊಡಬಲ್ಲರೇನೋ. ಅವರು ತಮ್ಮ ಅನುಭವ ದಾಖಲಿಸಿದ್ದರೆ ಚೆನ್ನಾಗಿರುತ್ತಿತ್ತು. ಮುಂದೆಯಾದರೂ ಅಂತಹ ಪ್ರಯತ್ನ ಮಾಡಿದರೆ ತರುಣ ಪತ್ರಕರ್ತರಿಗೆ ಅನುಕೂಲವಾಗುತ್ತದೆ.

ಇಲ್ಲವಾದರೆ -ವಡ್ಡರ್ಸೆ ಎಂದರೆ ಹಿರಿಯ ಪೊಲೀಸ್ ಅಧಿಕಾರಿಗಳು ಗೌರವ ಕೊಡುತ್ತಿದ್ದರು, ವಿಧಾನಸೌಧದ ದ್ವಾರದಲ್ಲಿರುವ ಪೊಲೀಸ್ ಪೇದೆ ಅವರ ಬಳಿ ಗುರುತಿನ ಪತ್ರ ಕೇಳದೆ ಸೆಲ್ಯೂಟ್ ಹೊಡೆದು ಒಳಗೆ ಬಿಡುತ್ತಿದ್ದ, ಮಂತ್ರಿಗಳು, ರಾಜಕಾರಣಿಗಳು ಅವರೊಂದಿಗೆ ಚರ್ಚೆ ನಡೆಸಲು ಅವರ ಕಚೇರಿಗೆ ಬರುತ್ತಿದ್ದರು ಅಥವಾ ಗೆಸ್ಟ್ ಹೌಸ್ ಗೆ ಆಹ್ವಾನಿಸುತ್ತಿದ್ದರು, ಬೀದರ್ ನಲ್ಲಿ ಅವರ ಪತ್ರಿಕೆ ವರದಿಗಾರರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲು ರಾಜ್ಯ ಸಭೆ ಸದಸ್ಯರು ಮುತುವರ್ಜಿ ವಹಿಸುತ್ತಿದ್ದರು – ಎಂಬಂತಹ ಸಂಗತಿಗಳೇ ಮುಂಗಾರುವಿನ ಚರಿತ್ರೆಯಾಗಿ ಉಳಿದುಬಿಡುವ ಅಪಾಯವಿದೆ.

ಅಂಕಿತ ಪುಸ್ತಕದ ಮೀಡಿಯಾ ಮಾಲಿಕೆ ಉದ್ದೇಶ ಸ್ತುತ್ಯಾರ್ಹ. ಮಾಧ್ಯಮ ಸಂಗತಿಗಳ ಬಗ್ಗೆ ಜನಸಾಮಾನ್ಯರಲ್ಲಿ ಕುತೂಹಲ ಹೆಚ್ಚಾಗುತ್ತಿರುವ ಈ ಹೊತ್ತಲ್ಲಿ ಇಂತಹದೊಂದು ಪ್ರಯತ್ನ ಅಗತ್ಯವಿತ್ತು. ಅಷ್ಟೇ ಅಲ್ಲ ಕನ್ನಡ ಪತ್ರಿಕೋದ್ಯಮದ ವಿವಿಧ ಆಸಕ್ತಿಕರ ಆಯಾಮಗಳನ್ನು, ಮಜಲುಗಳನ್ನು ದಾಖಲಿಸುವ ಮೌಲಿಕ ಕೃತಿಗಳು ಹೆಚ್ಚೆಚ್ಚು ಬರಲಿ.

“ಇದು ಮುಂಗಾರು”
ಲೇಖಕ: ಚಿದಂಬರ ಬೈಕಂಪಾಡಿ
ಪ್ರಕಾಶಕರು: ಅಂಕಿತ ಪುಸ್ತಕ
53, ಶಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ,
ಬಸವನಗುಡಿ, ಬೆಂಗಳೂರು – 04
ಬೆಲೆ: ₹ 70

4 thoughts on “‘ಇದು ಮುಂಗಾರು’ – ‘ಮುಂಗಾರು’ ಅಂದ್ರೆ ಇಷ್ಠೇನಾ?

 1. g.mahanthesh.

  ಮುಂಗಾರು ಮತ್ತು ವಡ್ಡರ್ಸೆ ರಘುರಾಮ ಶೆಟ್ಟರ ಬಗ್ಗೆ ಹೇಳುವುದಕ್ಕೆ ಕೆ.ಪುಟ್ಟಸ್ವಾಮಿ, ಇಂದೂಧರ ಹೊನ್ನಾಪುರ, ಅಮೀನುಮಟ್ಟು ಅಷ್ಟೇ ಅಲ್ಲ..ಎನ್​.ಎಸ್​.ಶಂಕರ್​, ಟಿ.ಕೆ.ತ್ಯಾಗರಾಜ್​ ಕೂಡ ಇದ್ದಾರೆ. ಇತ್ತೀಚೆಗೆಷ್ಟೇ ಅಸ್ತಿತ್ವಕ್ಕೆ ಬಂದಿರುವ ವಡ್ಡರ್ಸೆ ಪ್ರತಿಷ್ಠಾನದಲ್ಲೂ ಎನ್​.ಎಸ್​.ಶಂಕರ್​ ಮತ್ತು ಟಿ.ಕೆ.ತ್ಯಾಗರಾಜ್​ ಅವರಿಲ್ಲ. ಮುಂಗಾರು ಮುಚ್ಚುವ ಕಡೆ ಗಳಿಗೆಯವರೆಗೂ ಟಿ.ಕೆ.ತ್ಯಾಗರಾಜ್​ ಶೆಟ್ಟರ ಜತೆಯಲ್ಲೇ ಇದ್ದರು. ಹೀಗಾಗಿ ಮುಂಗಾರು ಬಗ್ಗೆ ಹೇಳುವುದಕ್ಕೆ ನೈತಿಕತೆ ಇರುವುದು ಶಂಕರ್​ ಸರ್​ ಮತ್ತು ಟಿ.ಕೆ.ತ್ಯಾಗರಾಜ್​ ಅವರಿಗೆ ಮಾತ್ರ ಇದೆ.
  ಜಿ.ಮಹಂತೇಶ್

  Reply
 2. anand prasad

  ಮುಂಗಾರುವಿನಂಥ ಪ್ರಗತಿಶೀಲ ಧೋರಣೆಯ ಪತ್ರಿಕೆಯನ್ನು ಕರಾವಳಿಯ ಮಂಗಳೂರಿನಂಥ ಪ್ರತಿಗಾಮಿ ವಾತಾವರಣದಲ್ಲಿ ಆರಂಭಿಸಿದುದು ಅದನ್ನು ಹೆಚ್ಚು ಸಮಯ ನಡೆಸಿಕೊಂಡು ಹೋಗಲು ಅಸಾಧ್ಯವಾಯಿತು ಎನಿಸುತ್ತದೆ. ಕರ್ನಾಟಕದ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯು ಒಂದು ರೀತಿಯ ಊಳಿಗಮಾನ್ಯ ವ್ಯವಸ್ಥೆಯನ್ನು ಹೊಂದಿದ ಸಮಾಜವನ್ನು ಹೊಂದಿದೆ. ಹೀಗಾಗಿ ಇಲ್ಲಿ ಸಾಕ್ಷರತೆ ಬಹಳ ಮುಂದೆ ಹೋಗಿದ್ದರೂ ಪ್ರಗತಿಶೀಲ ಧೋರಣೆಗಳಿಗೆ ಹೆಚ್ಚಿನ ಪ್ರೋತ್ಸಾಹ ಇಲ್ಲ. ಇಲ್ಲಿ ಬಹಳ ಕಡಿಮೆ ಸಂಖ್ಯೆಯ ಪ್ರಗತಿಶೀಲ ಮನೋಭಾವದ ವ್ಯಕ್ತಿಗಳು ಇದ್ದಾರೆ. ಹೀಗಾಗಿ ಇಂಥ ಒಂದು ಮುಚ್ಚಿದ ಬಾಗಿಲಿನ ಮಾನಸಿಕತೆ ಇರುವ ಪ್ರದೇಶದಲ್ಲಿ ಪ್ರಗತಿಶೀಲ ಪತ್ರಿಕೆಯನ್ನು ನಡೆಸುವುದು ಬಹಳ ಕಷ್ಟವೇ. ಮುಂಗಾರು ಅನ್ನು ಇಲ್ಲಿ ಆರಂಭಿಸುವುದರ ಬದಲು ಬೆಂಗಳೂರು ಅಥವಾ ಮೈಸೂರಿನಲ್ಲಿ ಆರಂಭಿಸಿದ್ದರೆ ಬಹುಶ: ಇಂದೂ ಮುಂಗಾರು ಬದುಕಿ ಇರುತ್ತಿತ್ತು. ಬೆಂಗಳೂರು ಹಾಗೂ ಮೈಸೂರು ಪ್ರದೇಶದಲ್ಲಿ ಪ್ರಗತಿಶೀಲ ಮನೋಭಾವದ ವ್ಯಕ್ತಿಗಳು, ಸಂಘಟನೆಗಳು ಸಾಕಷ್ಟು ಇರುವ ಕಾರಣ ಅಲ್ಲಿ ಪ್ರಗತಿಶೀಲ ಮನೋಭಾವದ ಪತ್ರಿಕೆಯು ಬೆಳೆಯುವ ಸಂಭವ ಅಧಿಕ. ಮುಂಗಾರು ಆರಂಭವಾದ ೧೯೮೪ರ ಪರಿಸ್ಥಿತಿಗೆ ಹೋಲಿಸಿದರೆ ಇಂದು ದಕ್ಷಿಣ ಕನ್ನಡ ಜಿಲ್ಲೆಯು ಮತ್ತಷ್ಟು ಪ್ರತಿಗಾಮಿಯಾಗಿದೆ. ವೈಚಾರಿಕತೆ ಇಲ್ಲಿ ಬಹಳ ಕಡಿಮೆ. ಇದಕ್ಕೆ ಕಾರಣ ಇಲ್ಲಿ ಸಂಘ ಪರಿವಾರದ ಸಂಘಟನೆಗಳು ಹುಲುಸಾಗಿ ಬೆಳೆದಿರುವುದು. ಇಲ್ಲಿ ಪ್ರಗತಿಶೀಲ ಮನೋಭಾವದ ಸಂಘಟನೆಗಳು ಇಲ್ಲವೇ ಇಲ್ಲವೆಂದರೂ ಸರಿಯೇ.

  Reply
  1. SHK

   ಇತ್ತೀಚಿಗೆ ಕೆಲವೊಂದು ಉದಯಿಸಿದೆ.. ಕೋಮು ಸೌಹಾರ್ಧ ವೇದಿಕೆ, ಪಾಪ್ಯುಲರ್ ಫ್ರಂಟ್ ಇದರಲ್ಲಿ ಕೆಲವು….

   Reply
 3. Pingback: “ಮುಂಗಾರು” ಅಂದ್ರೆ ಇಷ್ಟೇ ಅಲ್ಲ… ಬೈಕಂಪಾಡಿಯವರ ಪ್ರತಿಕ್ರಿಯೆ

Leave a Reply

Your email address will not be published.