Daily Archives: July 16, 2012

ಪಶ್ಚಿಮ ಘಟ್ಟಗಳಿಗೆ ಯುನೆಸ್ಕೊ ನೀಡಿದ ಸ್ಥಾನಮಾನಕ್ಕೆ ಸಂಬಂಧಿಸಿದಂತೆ

– ಕಲ್ಕುಳಿ ವಿಠ್ಠಲ ಹೆಗಡೆ

ಪಶ್ಚಿಮ ಘಟ್ಟದ 39 ತಾಣಗಳನ್ನು ಯುನೆಸ್ಕೊ ವಿಶ್ವ ಪಾರಂಪರಿಕ ನೈಸರ್ಗಿಕ ತಾಣಗಳ ಪಟ್ಟಿಗೆ ಸೇರಿಸಿರುವ ಬಗ್ಗೆ ಈಗ ಎಲ್ಲ ಕಡೆ ಚರ್ಚೆ ನಡೆಯುತ್ತಿದೆ. ನಮ್ಮ ಕಡೆ ಒಂದು ಗಾದೆ ಇದೆ, “ಅತ್ತೆನ ಮಾವಂಗೇ ದಾನ ಮಾಡಿದಂಗೆ” ಅಂತ. ಹಂಗೆ ಮಾಧ್ಯಮಗಳಲ್ಲಿ ಇವತ್ತು ವಿದೇಶದ ದುಡ್ಡಿನ ಆಸೆಗೆ ಪರಿಸರ ಬಗ್ಗೆ ಮಾತನಾಡುವವರು, ಸರ್ಕಾರದ ಪ್ರತಿನಿಧಿಗಳು ಎಲ್ಲ ತಮ್ಮಷ್ಟಕ್ಕೆ ತಾವೇ ಇದು ಸರಿಯೋ, ತಪ್ಪೋ ಅಂತ ಚರ್ಚೆ ಮಾಡ್ತಾ ಇದ್ದಾರೆ. ಯಾರೂ ಸ್ಥಳೀಯರು ಏನೆನ್ನುತ್ತಾರೆ, ಅವರ ಅಭಿಪ್ರಾಯ ಏನು ಅಂತ ಕೇಳ್ತಾನೇ ಇಲ್ಲ.

ರಾಜ್ಯದ ಹತ್ತು ತಾಣಗಳನ್ನು ಯುನೆಸ್ಕೊ ಪಟ್ಟಿಗೆ ಸೇರಿಸಿದ್ದು ಇದ್ದಕ್ಕಿದ್ದ ಹಾಗೆ ನಡೆದ ಪ್ರಕ್ರಿಯೆಯೇನೂ ಅಲ್ಲ. ಹೋದವರ್ಷವೇ ಈ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಸ್ಥಳೀಯರು ವಿರೋಧಿಸಿದ್ದು ಆಗಿತ್ತು. ಆದರೆ ಅವತ್ತು ನಾವು ಎತ್ತಿದ ಯಾವ ಪ್ರಶ್ನೆಗೂ ಉತ್ತರ ಕೊಡದೇ ಕೇಂದ್ರ ಸರ್ಕಾರ ಮತ್ತೊಮ್ಮೆ ಈ ಬಗ್ಗೆ ಪ್ರಸ್ತಾಪನ್ನು ಕಳಿಸಿ, ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಿದೆ. ಹೋಗಲಿ ಈಗಲಾದರೂ ಸ್ಪಷ್ಟವಾಗಿ ಎಲ್ಲ ವಿಷಯಗಳನ್ನು ಪಾರದರ್ಶಕವಾಗಿ ಜನರ ಮುಂದಿಡುತ್ತಿದೆಯೇ ನೋಡಿದ್ರೆ ಅದೂ ಇಲ್ಲ. (ಮಾಧವ್ ಗಾಡ್ಗೀಳ್ ನೇತೃತ್ವದ ತಂಡ ಪಶ್ಚಿಮ ಘಟ್ಟದ ಬಗ್ಗೆ ನೀಡಿರುವ ವರದಿಯನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆಯಲು ಎಷ್ಟೆಲ್ಲಾ ಹೋರಾಟ ಮಾಡಬೇಕಾಗಿ ಬಂದಿತು ಎಂಬುದು ಎಲ್ಲರಿಗೂ ಗೊತ್ತಿದೆ ಅಂದುಕೊಳ್ಳುತ್ತೇನೆ.)

ತುಂಬಿದ ಕುಟುಂಬದಲ್ಲಿ ಏನಾದ್ರೂ ವಿಶೇಷವಾದ ಕೆಲ್ಸವನ್ನು ಹೇಳಿದಾಗ ಕಿರಿಮಗ ಕೊಸರಾಡುತ್ತಾನಲ್ಲ, “ಅದು ನಂಗಾಗಲ್ಲ, ಇದನ್ನು ಕೊಟ್ರೆ ಅದನ್ನ ಮಾಡ್ತೀನಿ, ನಾನಂತೂ ಮಾಡೋಲ್ಲ,” ಅಂತ. ಹಂಗೆ ನಮ್ಮ ರಾಜ್ಯಸರ್ಕಾರ ಈಗ ವಿರೋಧವೇನೋ ಮಾಡ್ತಾ ಇದೆ. ಯಜಮಾನ ಗದರಿಸುವವರೆಗೂ ಈ ಕೊಸರಾಟ ನಡೀಬಹುದು. ಹಾಗಾಗಿ ಸರ್ಕಾರದ ಈ ವಿರೋಧ ಎಲ್ಲಿಯವರೆಗೆ, ಎಷ್ಟುದಿನ ನೆಡೆಯುತ್ತೆ ಅಂತ ಹೇಳೋಕ್ಕಾಗಲ್ಲ. ಅಲ್ದೆ ಈಗ ವಿರೋಧ ಮಾಡ್ತಾ ಇರೋ ರಾಜ್ಯ ಸರ್ಕಾರವೇ ನಮ್ಮಲ್ಲಿ (ಕುದುರೆಮುಖ ಅಭಯರಣ್ಯದಲ್ಲಿ) ತಲೆ-ಬುಡವಿಲ್ಲದ ಹುಲಿ ಯೋಜನೆ ಜಾರಿಗೆ ತಂದಿದೆ. ಹೀಗಾಗಿ ಕೊನೆಗೆ ಎಲ್ಲದಕ್ಕೂ ತಲೆಕೊಡಬೇಕಾದವರು ನಾವೇ…ಅಂದ್ರೆ ಸ್ಥಳೀಯರೇ.

ಯುನೆಸ್ಕೊ ನೀಡಿರುವ ಈ ಮಾನ್ಯತೆಯನ್ನು ಮುಂದಿಟ್ಟುಕೊಂಡು ವಿದೇಶಿ ಹಣದಲ್ಲಿ ನಡೆಯುವ ಎನ್‌ಜಿಒಗಳವರು ಮಾತ್ರ ಜನತೆಯನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಲೇ ಇದ್ದಾರೆ. ಯಾವ ಪತ್ರಿಕೆ ನೋಡಿದರೂ ಅವರದ್ದೇ ಅಭಿಪ್ರಾಯ. ಸ್ಥಳೀಯರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಇಂಗ್ಲಿಷ್ ಪತ್ರಿಕೆಗಳು ಪರಿಸರದ ಬಗ್ಗೆ ಏನಾದರೂ ಚರ್ಚೆ ನಡೆಯುವಾಗ ಎನ್‌ಜಿಒಗಳ ಅಭಿಪ್ರಾಯವನ್ನಷ್ಟೇ ಪ್ರಕಟಿಸುತ್ತವೆ. ಈ ರೋಗ ಈಗ ಕನ್ನಡದ ರಾಜ್ಯಮಟ್ಟದ ಪತ್ರಿಕೆಗಳಿಗೂ ಬಂದಂತಿದೆ.

ಯುನೆಸ್ಕೊ ಈ ರೀತಿಯ ಮಾನ್ಯತೆ ನೀಡುತ್ತಿರುವುದು ಹೊಸದೇನೂ ಅಲ್ಲ. ನಮ್ಮ ಹಂಪೆಗೇ ಈ ಮಾನ್ಯತೆ ದೊರಕಿದೆ. ಈಗಾಗಲೇ ನಮ್ಮ ದೇಶದಲ್ಲಿ ಐದು ನೈಸರ್ಗಿಕ ತಾಣಗಳೂ ಈ ಮಾನ್ಯತೆ ಪಡೆದಿವೆ. ಹೀಗಿರುವಾಗ ಇದರಿಂದ ಏನಾಗುತ್ತದೆ, ಒಳ್ಳೆಯದೋ, ಕೆಟ್ಟದೋ ಎಂಬುದನ್ನು ತಿಳಿಯಲು ಕಷ್ಟಪಡಬೇಕಾಗಿಲ್ಲ. ಹಾಗೆಯೇ ಈ ವಿದೇಶಿ ಏಜೆಂಟರು ಹೇಳುವ ಮಾತನ್ನು ಸಂಪೂರ್ಣವಾಗಿ ನಂಬಬೇಕಾಗಿಯೂ ಇಲ್ಲ. ಅಲ್ಲವೇ?

ಹಂಪೆಯ ಕತೆ ನೋಡೋಣ, 1986ರಲ್ಲಿಯೇ ಇದನ್ನು ಪಾರಂಪರಿಕ ಪಟ್ಟಿಗೆ ಸೇರಿಸಲಾಗಿತ್ತು. 1999ರಲ್ಲಿ ಸ್ಥಳೀಯ ಜನರು ಓಡಾಡಲೆಂದು ಆನೆಗುಂದಿ ಸೇರಿದಂತೆ ಎರಡು ಸೇತುವೆಗಳನ್ನು ನಿರ್ಮಿಸಲು ನಮ್ಮ ರಾಜ್ಯ ಸರ್ಕಾರ ನಿರ್ಧರಿಸುತ್ತಿದ್ದಂತೆಯೇ ಯುನೆಸ್ಕೊ ಏನು ಮಾಡಿತು? ಹಂಪೆಯನ್ನು ಡೇಂಜರ್ ಲೀಸ್ಟ್‌ಗೆ ಸೇರಿಸಿತು. ಆಮೇಲೆ ಸರ್ಕಾರ ಹಂಪೆಯನ್ನು ಈ ಪಟ್ಟಿಯಿಂದ ಹೊರಗಿಡುವಂತೆ ಮಾಡಲು ಏನೆಲ್ಲಾ ಸರ್ಕಸ್ ಮಾಡಿತ್ತು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಆನೆಗುಂದಿ ಸೇತುವೆ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ಏಕೆ ನಡೆಯಿತು? ಅದು ಬಿದ್ದಿದ್ದೇಕೆ? ಎಲ್ಲ ಈ ನಾಟಕ ನೋಡಿದವರಿಗೆ ಅರ್ಥವಾಗುವಂತದ್ದೇ. 2006ರಲ್ಲಿ ಹಂಪೆಯನ್ನು ಡೇಂಜರ್ ಪಟ್ಟಿಯಿಂದ ಹೊರಗಿಡಲಾಯಿತು. 2009ರಲ್ಲಿ ಆನೆಗುಂದಿ ಸೇತುವೆಯೂ ಬಿದ್ದು ಹೋಯಿತು. ಆಮೇಲೆ ನಿರಂತರವಾಗಿ ಈ ಸೇತುವೆಯ ಅವಶೇಷಗಳನ್ನು ತೆಗೆದು ಹಾಕುವಂತೆ ಯುನೆಸ್ಕೊ ಸೂಚಿಸುತ್ತಲೇ ಬಂದಿದೆ. ಈ ಬಗ್ಗೆ ಅನುಮಾನವಿದ್ದವರು ಯುನೆಸ್ಕೊದ ವೆಬ್‌ಸೈಟ್‌ನಲ್ಲಿರುವ 2010 ಮತ್ತು 2011 ರ ಡಿಶಿಷನ್‌ಗಳನ್ನು ನೋಡಬಹುದು.

ಇಷ್ಟೇ ಅಲ್ಲ, ಹಂಪೆಯಲ್ಲಿನ ವಸತಿ ಹೀನರಿಗೆ ಮನೆ ನಿರ್ಮಿಸಿಕೊಡುವ ಯೋಜನೆಗಳನ್ನು ಜಾರಿಗೆ ತರಲು ನಮ್ಮ ಸರ್ಕಾರ ಹೊರಟಿದ್ದರೆ ಅದನ್ನು ಯುನೆಸ್ಕೊ ಕಾನೂನು ಬಾಹಿರ (ಇಲ್ಲೀಗಲ್) ಕ್ರಮಗಳು ಎಂದು ಅದನ್ನು ಜಾರಿಗೆ ತರದಂತೆ ಸೂಚನೆ ನೀಡಿದೆ. (ನೋಡಿ: Stop illegal constructions within the property and the buffer zone area (namely in Hampi Village and Virupapura Gada Island), and control and manage other planned developments, such as social housing projects, to ensure that they do not have a negative impact on the integrity of the landscape;- Decision – 34COM 7B.67 – Group of Monuments at Hampi (India) (C 241) ) ಸಾಮಾಜಿಕ ವಸತಿ ಯೋಜನೆಗಳನ್ನು ಜಾರಿಗೆ ತರಬೇಡಿ ಎಂದರೆ ಅಲ್ಲಿರುವವರ ಗತಿ ಏನು? ಈ ಸೂಚನೆ ಪಾಲಿಸದೇ ಇದ್ದಲ್ಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮರ್ಯಾದೆ ಹೋಗುತ್ತದೆಯೆಂದೂ ಒತ್ತಡ ಬಾರದೇ ಇರುತ್ತದೆಯೇ? ಹಂಪೆಯ ಅವಶೇಷಗಳು ಉಳಿಯ ಬೇಕು ನಿಜ, ಆದೇ ರೀತಿಯಾಗಿ ಅಲ್ಲಿಯೇ ತಲತಲಾಂತರಗಳಿಂದ ಅವುಗಳೊಂದಿಗೇ ಬಾಳಿ ಬದುಕಿದವರಿಗೆ ಬದುಕುವ ಹಕ್ಕೂ ಕೂಡ ಇರಬೇಕು ತಾನೆ?

ಹಂಪೆಯಂತೆ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನವೂ ಪಾರಂಪರಿಕ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಅದರ ದಕ್ಷಿಣ ತುದಿಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 37ನ್ನು ಅಪ್‌ಗ್ರೇಡ್ ಮಾಡುವುದು ಸ್ಥಳೀಯರ ಹಿತ ದೃಷ್ಟಿಯಿಂದ ಅನಿವಾರ್ಯವಾಗಿತ್ತು. ಅದಕ್ಕೂ ಯುನೆಸ್ಕೊ ಕಲ್ಲು ಹಾಕಿದೆ. ಕೊನೆಗೆ ಅಸ್ಸಾಂ ಸರ್ಕಾರ ಈ ಒತ್ತಡಕ್ಕೆ ಮಣಿದು ರಾಷ್ಟ್ರೀಯ ಹೆದ್ದಾರಿಯನ್ನು ಅಭಿವೃದ್ಧಿಪಡಿಸಲು ಹಾಕಿಕೊಂಡ ಯೋಜನೆಗಳನ್ನೆಲ್ಲಾ ಕೈಬಿಟ್ಟಿತು. ಈಗ ಈ ಉದ್ಯಾನವನದ ಸಮೀಪವಿರುವ ಕರ್ಬಿ ಪರ್ವತಶ್ರೇಣಿಯನ್ನು ಹೇಗೆ ಕಾಪಾಡಬೇಕು, ಸುತ್ತಮುತ್ತಾ ಏನೆಲ್ಲಾ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸೂಚಿಸುತ್ತಿದೆ.

ಈ ಉದ್ಯಾನವನಕ್ಕೆ ಯುನೆಸ್ಕೊ ಪಟ್ಟಿಗೆ ಸೇರಿಸಿದ್ದರಿಂದ ಪ್ರವಾಸೋದ್ಯಮ ಮಾತ್ರ ಜೋರಾಗಿ ಬೆಳೆಯುತ್ತಿದೆ. 2004-05 ನೇ ಸಾಲಿನಲ್ಲಿ 74 ಸಾವಿರ ಪ್ರವಾಸಿಗರು ಇಲ್ಲಿಗೆ ಬಂದಿದ್ದರು. 2009-10 ನೇ ಸಾಲಿನಲ್ಲಿ ಈ ಸಂಖ್ಯೆ 1.15 ಲಕ್ಷಕ್ಕೆ ಏರಿದೆ. ಇವರ ಅನುಕೂಲಕ್ಕಾಗಿ 32 ಹೊಟೇಲ್‌ಗಳಾಗಿವೆ. ಸ್ಥಳೀಯರು ಅವರ ಸೇವೆಯನ್ನೇ ಉದ್ಯೋಗವಾಗಿ ಮಾಡಿಕೊಂಡಿದ್ದಾರೆ. ಒಟ್ಟಾರೆ ಥೈಲೆಂಡ್‌ನ ಸ್ಥಿತಿ ಅಲ್ಲಿ ನಿರ್ಮಾಣವಾಗುತ್ತಿದೆ.

1974 ರಲ್ಲಿ ನಡೆದ ಚಿಪ್ಕೋ (ಅಪ್ಪಿಕೋ) ಚಳವಳಿ ಬಗ್ಗೆ ನಿಮಗೆ ಗೊತ್ತೇ ಇದೆ. ಉತ್ತರಾಂಚಲದ ರೇನಿ ಮತ್ತು ಲಾಟಾ ಹಳ್ಳಿಗಳ ಜನರು ಅರಣ್ಯ ಕಡಿಯಲು ಬಂದ ಸರ್ಕಾರವನ್ನು ಹಿಮ್ಮೆಟ್ಟಿಸಿದ್ದರು. ಗೌರಿದೇವಿ ಎಂಬಾಕೆಯ ನೇತೃತ್ವದಲ್ಲಿ ನಡೆದ ಈ ಚಳವಳಿಯಲ್ಲಿ ಸ್ಥಳೀಯರು ಮರವನ್ನು ಬಿಗಿಯಾಗಿ ಅಪ್ಪಿಕೊಂಡು ಕಡಿಯಲು ಬಂದ ಸರ್ಕಾರಿ ಪಡೆಯನ್ನು ಓಡಿಸಿದ್ದರು. ಈ ಪ್ರದೇಶ ನಂದಾದೇವಿ ರಾಷ್ಟ್ರೀಯ ಉದ್ಯಾನವನಕ್ಕೆ ಸೇರುತ್ತದೆ. ಇದೂ ಕೂಡ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿದೆ. ಇದರಿಂದಾಗಿ ಅಲ್ಲಿ ಅಂದು ಯಾರು ಕಾಡನ್ನು ಉಳಿಸಿದ್ದರೋ ಅವರೇ ಕಾಡಿಗೆ ಹೋಗುವಂತಿಲ್ಲ ಎಂಬ ಕಾನೂನನ್ನು ನಮ್ಮ ಸರ್ಕಾರ ಜಾರಿಗೆ ತಂದಿತ್ತು. ಕೊನೆಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿ ಅವರ ಕಾಡಿನ ಮೇಲಿನ ಹಕ್ಕನ್ನು ಎತ್ತಿಹಿಡಿಯಬೇಕಾಯಿತು. ಈಗ ಅಲ್ಲಿಗೆ ಪ್ರವಾಸಿಗರ ದಂಡೇ ಬರುತ್ತಿದೆ. ಅಂದು ಕಾಡು ಉಳಿಸಿದವರು ಇಂದು ಪ್ರವಾಸಿಗರಿಗೆ ಕಾಡು ತೋರಿಸುವ ಕೆಲಸ ಮಾಡಿ ಜೀವನ ಸಾಗಿಸಬೇಕಾದ ಪರಿಸ್ಥಿತಿ ಇದೆ. ಇದನ್ನು ಯುನೆಸ್ಕೊ ಉತ್ತೇಜಿಸುತ್ತಿದ್ದು, ಸ್ಥಳೀಯರಿಗೆ ಇಕೋ ಟೂರಿಸಂ ಬಗ್ಗೆ, ರಾಕ್ ಕ್ಲೈಂಬಿಂಗ್ ಬಗ್ಗೆ ಮಾಹಿತಿ ಕೊಡಿ ಅಂತ ಉತ್ತರಾಂಚಲ ಸರ್ಕಾರಕ್ಕೆ ಸಲಹೆ ಸೂಚನೆ ನೀಡುತ್ತಿದೆ!

ಇವನ್ನೆಲ್ಲಾ ಇಲ್ಲಿ ಏಕೆ ಪ್ರಸ್ತಾಪ ಮಾಡಿದ್ದೇನೆ ಎಂದರೆ ಯುನೆಸ್ಕೊ ಪಟ್ಟಿಗೆ ಸೇರ್ಪಡೆಯಾದರೆ ಅನುಕೂಲವೂ ಇಲ್ಲ, ಅನಾನೂಕೂಲವೂ ಇಲ್ಲ. ಇದು ಬರೀ ಮಾನ್ಯತೆ ಮಾತ್ರ ಎಂದು ಎನ್‌ಜಿಒಗಳವರು ವಾದಿಸುತ್ತಿರುವುದು ಹಸಿ ಹಸಿ ಸುಳ್ಳು ಎಂಬುದನ್ನು ಎತ್ತಿ ತೋರಿಸಲು.

ಯುನೆಸ್ಕೊ ಎಂದರೆ ಹಣಕೊಡುವ, ಆಡಳಿತ ನಡೆಸುವ ಸಂಸ್ಥೆ ಅಲ್ಲ ಎಂಬುದು ನಮಗೂ ಗೊತ್ತಿದೆ. ಆದರೆ ಪಾರಂಪರಿಕ ಪಟ್ಟಿಯಲ್ಲಿರುವ ಸ್ಥಳಗಳ ರಕ್ಷಣೆಗೆ ಅದು ದೇಣಿಗೆ ನೀಡುತ್ತದೆ. ನಮ್ಮ ಹಂಪೆಗೇ ಇದುವರೆಗೆ ಒಟ್ಟು 1,09,740 ಅಮೆರಿಕನ್ ಡಾಲರ್ ನೀಡಿದೆ. ಇದು ಹೇಗೆ, ಯಾವುದಕ್ಕೆ ಬಳಕೆಯಾಗಿದೆಯೋ ವಿರೂಪಾಕ್ಷಗೇ ಗೊತ್ತು.

ವಿದೇಶಿ ದುಡ್ಡಿನಾಸೆಗಾಗಿ ಪರಿಸರದ ಮೇಲೆ ಪ್ರೀತಿ ಬೆಳೆಸಿಕೊಂಡಿರುವ ಎನ್‌ಜಿಒಗಳು ಇದರ ಪರ ವಕಾಲತ್ತು ಮಾಡುತ್ತಿರುವುದಕ್ಕೆ ಕಾರಣವೂ ಇದೆ. ಇದರಿಂದ ನೇರವಾಗಿ ದುಡ್ಡು ಬಾರದೇ ಇರಬಹುದು. ಆದರೆ ಯುನೆಸ್ಕೊ, ಪರಿಸರ ರಕ್ಷಣೆಗೆ ಹಣ ಕೊಡುವ ದೊಡ್ಡ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಪರಿಸರ ರಕ್ಷಣೆಯ ನಾಟಕವಾಡುವ ಈ ಎನ್‌ಜಿಒಗಳ ನಡುವಿನ ದಳ್ಳಾಳಿಯಂತೆ ಕೆಲಸ ಮಾಡುತ್ತದೆ.

ಉದಾಹರಣೆಗೆ 2008 ರಲ್ಲಿ ಯುನೆಸ್ಕೊ “ವರ್ಲ್ಡ್ ಹೆರಿಟೇಜ್ ಬಯೋಡೈವರ್ಸಿಟಿ ಪ್ರೋಗ್ರಾಮ್ ಫಾರ್ ಇಂಡಿಯಾ” (WHBPI) ಎಂಬ ಯೋಜನೆ ಜಾರಿಗೆ ತಂದಿತ್ತು. ಇದರಡಿ ಅಸ್ಸಾಂನ ಮಾನಸ ಮತ್ತು ಕಾಜಿರಂಗ ರಾಷ್ಟ್ರೀಯ ಉದ್ಯಾನವನ್ನು ಬಹುಕಾಲ ನಿರ್ವಹಿಸುವ ಹಾಗೂ ರಕ್ಷಿಸುವ ತಂತ್ರಗಾರಿಕೆ ರೂಪಿಸಲು ಬೆಂಗಳೂರಿನ ಏಟ್ರಿ ಎಂಬ ಎನ್‌ಜಿಒಗೆ 6,42,180 ಅಮೆರಿಕನ್ ಡಾಲರ್ ನೀಡಿದೆ. ಈ ಹಣ ಎಲ್ಲಿಂದ ಬಂತು ಗೊತ್ತೇ, ಫೋರ್ಡ್ ಪೌಂಡೇಷನ್ ಮತ್ತು ಎಸ್.ಎಂ.ಸೆಹಗಲ್ ನೀಡಿದ್ದು! ಎಲ್ಲಿಂದ ಎಲ್ಲಿಗೆ ಸಂಬಂಧ ನೋಡಿ.

ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕುವ ಕಾಜಿರಂಗ ನ್ಯಾಷನಲ್ ಪಾರ್ಕ್ ರಕ್ಷಿಸಲು ಬೆಂಗಳೂರಿನ ಎನ್‌ಜಿಒಗೆ ಜವಾಬ್ದಾರಿ ವಹಿಸಲಾಗುತ್ತದೆ. ಸ್ಥಳೀಯರಿಗೆ ಇಲ್ಲದ ತಿಳುವಳಿಕೆ ಈ ಎನ್‌ಜಿಒನ ತಜ್ಞರಿಗೆ ಅದೇನಿದೆಯೋ… ಈ ವರ್ಷವೂ ಅಲ್ಲಿ ಪ್ರವಾಹಕ್ಕೆ ಸಿಲುಕಿ 560 ಪ್ರಾಣಿಗಳು ಸತ್ತಿವೆ. ಇದಕ್ಕೆ ಫೋರ್ಡ್ ಫೌಂಡೇಷನ್ ದುಡ್ಡು ನೀಡುತ್ತದೆ, ಈ ಯೋಜನೆ ಜಾರಿಗೆ ಬರುವುದು ಯುನೆಸ್ಕೊದಿಂದ!

ಇದೇ ಏಟ್ರಿ ಸಂಸ್ಥೆ ನೀಡಿರುವ ವರದಿಯನ್ನು ಆಧರಿಸಿಯೇ ಈಗ ನಮ್ಮ ಪಶ್ಚಿಮ ಘಟ್ಟಕ್ಕೂ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ದೊರಕಿರುವುದು. ಬಹುಶಃ ಅವರಿಗೇ ಹೆಚ್ಚಿನ ಪ್ರಾಜೆಕ್ಟ್‌ಗಳು ದೊರೆಯುವಂತೆ ಕಾಣುತ್ತಿದೆ. ಇದಕ್ಕೇ ಮಾನ್ಯ ಸಂಜಯ್ ಗುಬ್ಬಿ ಯವರು ಪ್ರಜಾವಾಣಿಯಲ್ಲಿ ಪ್ರಕಟವಾದ ತಮ್ಮ ಲೇಖನದಲ್ಲಿ ಈ ಎನ್‌ಜಿಒ ವಿರುದ್ಧ ಕೆಂಡಕಾರಿಕೊಂಡಿರುವುದು!

ಕುದುರೆಮುಖ ರಾಷ್ಟ್ರೀಯ ಉದ್ಯನವನ್ನು ವಿರೋಧಿಸುವ ಸಂದರ್ಭದಲ್ಲಿ ಇದರ ಹಿಂದಿರುವ ಸಾಮ್ರಾಜ್ಯಶಾಹಿಗಳ ಕುತಂತ್ರವನ್ನು ಹೇಳಿಕೊಂಡೇ ಬಂದಿದ್ದೇವೆ. ಆದರೂ ಉದ್ಯಾನವನ ಆಯಿತು. ಈಗ ಅದರ ಮುಂದುವರೆದ ಭಾಗವಾಗಿ ಈ ವಿಶ್ವಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ.

ಗಿರಿಜನರನ್ನು ಎತ್ತಂಗಡಿ ಮಾಡಲಾಗುತ್ತದೆ, ಜೀವ ವೈವಿಧ್ಯತೆಯ ಲೂಟಿಯಾಗುತ್ತದೆ, ಪ್ರವಾಸೋದ್ಯಮಕ್ಕೆ ಆದ್ಯತೆ ದೊರೆಯುತ್ತದೆ, ಔಷಧಿ ಸಸ್ಯಗಳ ಮತ್ತು ಅರಣ್ಯ ಉತ್ಪನ್ನಗಳ ಮೇಲಿನ ಹಕ್ಕನ್ನು ಸ್ಥಳೀಯರು ಕಳೆದುಕೊಳ್ಳಬೇಕಾಗುತ್ತದೆ, ಎಂಬ ನಾಲ್ಕು ಕಾರಣಗಳಿಂದ ನಾವು ಮುಖ್ಯವಾಗಿ ರಾಷ್ಟ್ರೀಯ ಉದ್ಯಾನವನವನ್ನು ವಿರೋಧಿಸಿದ್ದೆವು. ಅವೇ ಕಾರಣಗಳನ್ನು ಮುಂದಿಟ್ಟುಕಂಡು ಈಗಲೂ ಈ ಮಾನ್ಯತೆಯನ್ನು ಪ್ರಶ್ನಿಸುತ್ತಿದ್ದೇವೆ.

ಪರಿಸರವಾದಿ ಶ್ರೀಯುತ ಪಾಂಡುರಂಗ ಹೆಗಡೆಯವರು ತಮ್ಮ ಲೇಖನವೊಂದರಲ್ಲಿ ಈ ಮಾನ್ಯತೆಯನ್ನು ಭಾರತ ರತ್ನಕ್ಕೆ ಹೋಲಿಸಿದ್ದಾರೆ. ಭಾರತ ರತ್ನ ಕೊಡಲಿ ಸಂತೋಷ. ಆದರೆ ನಿಮಗೆ ಈ ಪ್ರಶಸ್ತಿ ದೊರೆತಿರುವುದರಿಂದ ನೀವು ಹೀಗೇ ಮಾತಾಡಬೇಕು, ಇಷ್ಟೇ ತಿನ್ನಬೇಕು, ನಾವು ಹೇಳಿದ ಕಾರ್ಯಕ್ರಮಗಳಿಗೆ ಮಾತ್ರ ಹೋಗಬೇಕು, ಅಲ್ಲಿ ಹೀಗೆಯೇ ವರ್ತಿಸಬೇಕು ಎಂದೆಲ್ಲಾ ಕಟ್ಟು-ಪಾಡು ವಿಧಿಸುವುದು ಎಷ್ಟು ಸರಿ ಎಂಬುದು ನಮ್ಮ ಪ್ರಶ್ನೆ.

ರಾಜ್ಯದ ಹತ್ತು ತಾಣಗಳು ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾಗಿರುವುದರಿಂದ ಯಾವುದಕ್ಕೆಲ್ಲಾ ಅಡ್ಡಿಯಾಗುತ್ತದೆ, ಸ್ಥಳೀಯರು ಯಾವ ರೀತಿ ಕಷ್ಟ ಅನುಭವಿಸಬೇಕಾಗುತ್ತದೆ ಎಂದು ವಿವರಿಸುತ್ತಾ ಹೋದರೆ ಅದೇ ದೊಡ್ಡ ಲೇಖನವಾದೀತು. ಸರಳವಾಗಿ ಒಂದೇ ಉದಾಹಣೆ ನೀಡುತ್ತೇನೆ. ಕರಾವಳಿಗೂ ಕರ್ನಾಟಕದ ಇತರ ಭಾಗಕ್ಕೂ ಸಂಪರ್ಕ ಕಲ್ಪಿಸಲು ಘಾಟಿಗಳಿವೆ. ಇಲ್ಲಿಯ ರಸ್ತೆಗಳೆಲ್ಲಾ ಅಂಕು-ಡೊಂಕಾಗಿದೆ. ಇದರಿಂದ ಅಪಘಾತ ಸರ್ವೇ ಸಾಮಾನ್ಯ. ಮುಂದೊಮ್ಮೆ ವೈಜ್ಞಾನಿಕವಾಗಿ ಈ ರಸ್ತೆಯನ್ನು ನೇರವಾಗಿ ಮಾಡಲು ಸಾಧ್ಯವಾದರೂ ಆ ಯೋಜನೆಯನ್ನು ಜಾರಿಗೆ ತರಲು ಸಾಧ್ಯವಾಗುವುದಿಲ್ಲ. ಘಾಟಿ ರಸ್ತೆಗಳೆಲ್ಲಾ ಹಾಗೇ ಇರಬೇಕು! ಹಾಗೆಯೇ ಈ ತಾಣಗಳ ವ್ಯಾಪ್ತಿಯಲ್ಲಿ ಬರುವ ಮನೆಗಳು, ರಸ್ತೆಗಳು ಎಲ್ಲ… ಯಥಾಸ್ಥಿತಿ ಕಾಪಾಡುವುದು ಎಂದರೆ ಇದೇ.

ಯುನೆಸ್ಕೊ ಪಟ್ಟಿಗೆ ಸೇರಿರುವ ಪಶ್ಚಿಮಘಟ್ಟವನ್ನು ಜೋಪಾನವಾಗಿ ಕಾಪಾಡಲು ಅಂತರಾಷ್ಟ್ರೀಯ ಮಟ್ಟದ ಉಸ್ತುವಾರಿ ಅಗತ್ಯ ಎಂದು ಅಂತರರಾಷ್ಟ್ರೀಯ ಪರಿಸರ ಸಂರಕ್ಷಣಾ ಸಂಸ್ಥೆ (ಐಯುಸಿಎನ್) ಸಲಹೆ ನೀಡಿದೆ. ಈ ಸಲಹೆ ಜಾರಿಗೆ ಬಂದಲ್ಲಿ ರಾಜ್ಯ ಸರ್ಕಾರ ಅದರ ಕೈಗೊಂಬೆಯಾಗಬೇಕಾಗುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ.

ಹಿಂದೆ ಬ್ರಿಟೀಷರು ಕಾಫಿ, ಏಲಕ್ಕಿ ಎಸ್ಟೇಟ್ ಮಾಡಿದ ಹಾಗೆ ಕುದುರೆಮುಖ ರಾಷ್ಟ್ರೀಯ ಉದ್ಯಾನ ಪ್ರದೇಶದಲ್ಲಿ ಶ್ರೀಗಂಧದ ಎಸ್ಟೇಟ್ ಮಾಡಲು ಹೊರಟಿದ್ದರು. ಸ್ಥಳೀಯ ಗಿರಿಜನರಿಗೆ ಶ್ರೀಗಂಧದ ಬೀಜ ನೀಡಿ ಬಿತ್ತುವಂತೆ ಸೂಚಿಸಿದ್ದರು. ಬೀಜ ಬಿತ್ತದಿದ್ದರೆ ದೊರೆಗಳ ಆಜ್ಞೆ ಉಲ್ಲಂಘಿಸಿದಂತಾಗುತ್ತದೆ, ಬಿತ್ತಿದರೆ ಕಾಡು ನಮ್ಮದಾಗಿ ಉಳಿಯುವುದಿಲ್ಲ ಎಂದು ಲೆಕ್ಕಹಾಕಿದ ಗಿರಿಜನರು ಕೊನೆಗೆ ಉಪಾಯ ಮಾಡಿ ಬ್ರಿಟಿಷ್ ಅಧಿಕಾರಿಗಳು ನೀಡಿದ ಗಂಧದ ಬೀಜವನ್ನು ರಾತ್ರೋರಾತ್ರಿ ಹುರಿದು, ಹಗಲಿನಲ್ಲಿ ಬ್ರಿಟೀಷ್ ಅಧಿಕಾರಿಗಳ ಎದುರಿಗೇ ಬಿತ್ತಿ ಅವು ಹುಟ್ಟದಂತೆ ನೋಡಿಕೊಂಡಿದ್ದರು, ಜೀವ ವೈವಿಧ್ಯತೆಯ ಆಗರವನ್ನು ಉಳಿಸಿಕೊಂಡಿದ್ದರು.

ನಾವು ಹೇಳುತ್ತಿರುವುದು ಗಿರಿಜನರ ಈ ಪರಂಪರೆಯನ್ನು ಉಳಿಸೋಣ ಎಂದು. ಯುನೆಸ್ಕೊ ಪರಂಪರೆಯ ಪಟ್ಟಿಗೆ ಸೇರಿಸಿ ನೀಡುವ ಮಾನ್ಯತೆಗಿಂತ ಈ ಪರಂಪರೆ ದೊಡ್ಡದು. ಪಶ್ಚಿಮ ಘಟ್ಟ ಎಷ್ಟು ಸೂಕ್ಷ್ಮ ಪ್ರದೇಶ ಮತ್ತು ಇದನ್ನು ಕಾಪಾಡುವುದು ಎಷ್ಟು ಅಗತ್ಯ ಎಂಬುದು ನಮಗೆ ಗೊತ್ತಿದೆ. ಯುನೆಸ್ಕೊ “ಔಟ್‌ಸ್ಟ್ಯಾಂಡಿಂಗ್ ಯುನಿವರ್ಸಲ್ ವ್ಯಾಲ್ಯೂ” ಎಂದು ದೊಡ್ಡ ದೊಡ್ಡ ಶಬ್ದಗಳಲ್ಲಿ ವರ್ಣಿಸಿದ ಮಾತ್ರಕ್ಕೆ ಇದರ ಪ್ರಾಮುಖ್ಯತೆಯೇನೂ ಹೆಚ್ಚುವುದಿಲ್ಲ. ಪರಿಸರ ಎಂದರೆ ಪ್ರತಿಯೊಬ್ಬರಿಗೂ ಸೇರಿದ್ದು, ಎಲ್ಲರೂ ಕೂಡಿ ಉಳಿಸಬೇಕು, ಪರಿಸರ ಸಹ್ಯ ಜೀವನ ಶೈಲಿ ರೂಢಿಸಿಕೊಳ್ಳಬೇಕೇ ಹೊರತು, ಶೋಕೇಸ್‌ನಲ್ಲಿ ಇಡುವ ಅಲಂಕಾರಿಕ ವಸ್ತುವಂತೆ ಎಲ್ಲೋ ಒಂದಿಷ್ಟು ಜಾಗವನ್ನು ಉಳಿಸುತ್ತೇವೆ ಎಂದರೆ ಭೂಲೋಕ ಉಳಿಯದು.

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ-28)


– ಡಾ.ಎನ್.ಜಗದೀಶ್ ಕೊಪ್ಪ


ಜಿಮ್ ಕಾರ್ಬೆಟ್ ಭಾರತ ತೊರೆಯುವ ಮುನ್ನ ಕೊನೆಯ ದಿನಗಳಲ್ಲಿ ಬರೆದ ಎರಡು ಕೃತಿಗಳಿಂದ ವಿಶ್ವ ಪ್ರಸಿದ್ಧನಾದ. ಆತನ ಮೊದಲ ಕೃತಿಯನ್ನು (ಜಂಗಲ್ ಸ್ಟೊರೀಸ್) ಇಂಗ್ಲೆಂಡ್ ಮೂಲದ ‘ಆಕ್ಸ್‌ಫರ್ಡ್ ಯೂನಿರ್ವಸಿಟಿ ಪ್ರೆಸ್’ ಪ್ರಕಟಿಸಲು ಮುಂದೆ ಬಂದಿತು. ಭಾರತದ ಓದುಗರಿಗಾಗಿ ಮದ್ರಾಸ್ ಶಾಖೆಯ ಮುಖಾಂತರ ಪುಸ್ತಕವನ್ನು ಪ್ರಕಟಿಸಿದ ಸಂಸ್ಥೆ ನಂತರ ಅದನ್ನು ಕ್ರಮವಾಗಿ ಇಂಗ್ಲೆಂಡ್ ಮತ್ತು ಅಮೇರಿಕಾದಲ್ಲಿ ಪ್ರಕಟಿಸಿತು. ಜಿಮ್ ಕಾರ್ಬೆಟ್‌ನ “ಜಂಗಲ್ ಸ್ಟೊರೀಸ್” ಕೃತಿ ನಿರೀಕ್ಷೆಗೂ ಮೀರಿ ಆತನಿಗೆ ಮತ್ತು ಪ್ರಕಟಿಸಿದ “ಆಕ್ಸ್‌ಫರ್ಡ್ ಯೂನಿರ್ವಸಿಟಿ ಪ್ರೆಸ್” ಸಂಸ್ಥೆಗೆ ಯಶಸ್ಸನ್ನು ತಂದುಕೊಟ್ಟಿತು. ಕೇವಲ ಒಂದು ವರ್ಷದಲ್ಲಿ ಐದು ಲಕ್ಷ ಪ್ರತಿಗಳು ಮಾರಾಟವಾದವು. ಇಂಗ್ಲೆಂಡಿನಲ್ಲಿ ಪರಿಸರ ಕ್ಲಬ್ ರಚಿಸಿಕೊಂಡಿದ್ದ ಕೆಲವರು, ಈ ಕೃತಿಯನ್ನು ಕೊಂಡು ಸದಸ್ಯರಿಗೆ ಉಚಿತವಾಗಿ ಹಂಚಿದರು.

ಮತ್ತೇ ಆಕ್ಸ್‌ಫರ್ಡ್ ಪ್ರಕಾಶನ ಸಂಸ್ಥೆ, ಶಿಕಾರಿಯ ಅನುಭವನ್ನು ಬರೆದುಕೊಡುವಂತೆ  ಜಿಮ್ ಕಾರ್ಬೆಟ್‌ಗೆ ಮನವಿ ಮಾಡಿತು. ಇದರ ಫಲವಾಗಿ  ಕಾರ್ಬೆಟ್‌ನಿಂದ “ಮ್ಯಾನ್ ಈಟರ್ ಆಪ್ ಕುಮಾವನ್” ಎಂಬ ಕೃತಿ ಹೊರಬಂದಿತು. ಅವನ ಮೊದಲ ಕೃತಿ “ಜಂಗಲ್ ಸ್ಟೊರೀಸ್”, ಕಾಡಿನ ಅನುಭವಗಳ ಲೇಖನಗಳ ಸಂಕಲನವಾಗಿದ್ದರೆ, ಎರಡನೇ ಕೃತಿ ತಾನು ಬೇಟೆಯಾಡಿದ ನರಭಕ್ಷಕ ಚಿರತೆಯ ಒಂದು ಸುಧೀರ್ಘ ರೋಚಕ ಕಥನವಾಗಿತ್ತು. ಒಂದು ರೊಮಾಂಚಕಾರಿ ಪತ್ತೆದಾರಿ ಮಾದರಿಯಲ್ಲಿ ತಾನು ಬೇಟೆಯಾಡಿದ ನರಭಕ್ಷಕ ಹುಲಿಯ ಬಗ್ಗೆ ಪ್ರತಿ ಪುಟದಲ್ಲೂ ಓದುಗರಿಗೆ ಕುತೂಹಲವಿರುವಂತೆ ರೋಚಕತೆಯ ಅಂಶವನ್ನು ಕಾಪಾಡಿಕೊಂಡು ಬರೆದದ್ದು ಕಾರ್ಬೆಟ್‌ನ ವಿಶೇಷವಾಗಿತ್ತು.

ಈ ಕೃತಿ ಕೂಡ ಅಭೂತ ಪೂರ್ವ ಯಶಸ್ಸನ್ನು ಕಂಡಿತು. ಇದರಿಂದ ಪ್ರೇರಿತನಾದ ಕಾರ್ಬೆಟ್ ಮುಂದೆ ರುದ್ರ ಪ್ರಯಾಗದ ನರಭಕ್ಷಕ ಚಿರತೆಯನ್ನು ಬೇಟೆಯಾಡಿದ ಅನುಭವವನ್ನು  “ದ ಮ್ಯಾನ್ ಈಟಿಂಗ್ ಲೆಪರ್ಡ್ ಆಫ್ ರುದ್ರಪ್ರಯಾಗ್” ಎಂಬ ಹೆಸರಿನಲ್ಲಿ ಪ್ರಕಟಿಸಿದ. ಈ ಕೃತಿ ಇಂದಿಗೂ ಕೂಡ ಜಗತ್ತಿನ ಅತಿ ಹೆಚ್ಚು ಮಾರಾಟವಾದ ಪುಸ್ತಕಗಳ ಪಟ್ಟಿಗೆ ಸೇರಿದೆ. ಎರಡು ಸಾವಿರದ ಇಸವಿಯ ಅಂತ್ಯದ ವೇಳೆಗೆ ಈ ಕೃತಿ  ಜಗತ್ತಿನಾದ್ಯಂತ 56 ಲಕ್ಷ ಪ್ರತಿ ಮಾರಾಟವಾಗಿದೆ. ಅಲ್ಲದೆ, ಲೆಕ್ಕಕ್ಕೆ ಸಿಗದ ಹಾಗೆ ಸ್ಥಳಿಯ ಭಾಷೆಗಳಲ್ಲಿ ಪ್ರಕಟವಾಗಿದೆ, (ಕನ್ನಡದಲ್ಲಿ ತೇಜಸ್ವಿ ಅನುವಾದ ಮಾಡಿರುವ ಈ ಕೃತಿ ಹದಿನಾಲ್ಕಕ್ಕೂ ಹೆಚ್ಚು ಮುದ್ರಣವನ್ನು ಕಂಡಿದೆ)

1946ರ ಮಾರ್ಚ್‌ನಲ್ಲಿ ಅಮೇರಿಕಾದ “ಯೂನಿವರ್ಸಲ್ ಪಿಕ್ಚರ್ಸ್ ಸಂಸ್ಥೆ” ಜಿಮ್ ಕಾರ್ಬೆಟ್‌ನಿಂದ ಹಕ್ಕು ಪಡೆದು, “ಮ್ಯಾನ್ ಈಟರ್ ಆಪ್ ಕುಮಾವನ್” ಚಿತ್ರವನ್ನು ನಿರ್ಮಿಸಿತು. ಭಾರತದ ಮೂಲದ ನಟ ಸಾಬು ನಾಯಕನಾಗಿದ್ದ ಈ ಚಿತ್ರಕ್ಕೆ ಭಾರತ ಸರ್ಕಾರ ಭಾರತದ ಅರಣ್ಯದಲ್ಲಿ ಚಿತ್ರೀಕರಣ ಮಾಡಲು ಅನುಮತಿ ನೀಡಲಿಲ್ಲ. ಹಾಗಾಗಿ ಹಾಲಿವುಡ್‌ನಲ್ಲಿ  ಸೆಟ್ ನಿರ್ಮಿಸಿ ಈ ಚಿತ್ರವನ್ನು ತಯಾರಿಸಲಾಯಿತು. ಹೀಗೆ ಭಾರತ ತೊರೆಯುವ ಮುನ್ನ ಅಪ್ಪಟ ಪರಿಸರ ಪ್ರೇಮಿಯಾಗಿದ್ದ ಕಾರ್ಬೆಟ್‌ಗೆ ಸಂಧಿಗ್ದ ಸ್ಥಿತಿಯೊಂದು ಎದುರಾಯಿತು. ತನ್ನ ಶಿಕಾರಿಯ ಅನುಭವಗಳನ್ನು ದಾಖಲಿಸುತ್ತಾ ಜಗತ್ ಪ್ರಸಿದ್ಧ ಲೇಖಕನಾಗಿ ಹೊರಹೊಮ್ಮಿದ ಕಾರ್ಬೆಟ್ ಅನಿರೀಕ್ಷಿತವಾಗಿ ಮಲೇರಿಯಾ ರೋಗಕ್ಕೆ ತುತ್ತಾಗಿ ತಿಂಗಳು ಗಟ್ಟಲೆ ಹಾಸಿಗೆ ಹಿಡಿದ. ಅದೃಷ್ಟವಶಾತ್ ಆ ವೇಳೆಗೆ ಅವಿಷ್ಕಾರಗೊಂಡಿದ್ದ ಪೆನ್ಸಿಲಿನ್ ಔಷಧದಿಂದಾಗಿ ಚೇತರಿಸಿಕೊಂಡ. ಆದರೆ, ಅವನಿಗೆ ಗಂಟಲು ಬೇನೆ ಕಾರ್ಬೆಟ್‌ಗೆ ಕಾಣಿಸತೊಡಗಿತು. ತಮ್ಮನ ಅನಾರೋಗ್ಯವನ್ನು ನೋಡಿ, ಹೆದರಿದ ಅಕ್ಕ ಮ್ಯಾಗಿ ಭಾರತ ತೊರೆಯುವ ನಿರ್ಧಾರವನ್ನು ಕೈಬಿಡುವಂತೆ ಕೇಳಿಕೊಂಡಳು. ಸ್ವಾತಂತ್ರ್ಯ ನಂತರ ಭಾರತದಲ್ಲಿ ನಮ್ಮ ಆಸ್ತಿಗಳನ್ನು ಭಾರತ ಮುಟ್ಟುಗೋಲು ಹಾಕಿಕೊಂಡರೆ, ಏನು ಮಾಡುವುದು ಎಂಬ ಅವನ ಪ್ರಶ್ನೆಗೆ ಮ್ಯಾಗಿ ಬಳಿ ಉತ್ತರವಿರಲಿಲ್ಲ. ಆಕೆಗಂತೂ ನೈನಿತಾಲ್ ತೊರೆದು ಹೋಗುವುದು ಸಂಕಟದ ವಿಷಯವಾಗಿತ್ತು.

ಗಾರ್ನಿ ಹೌಸ್ ಬಂಗಲೆಯನ್ನು ಮಾರಿದ ನಂತರ ಒಂದು ವಾರ ಆ ಮನೆಯಲ್ಲಿದ್ದು. ಮನೆ ತೊರೆದು ಬರುವಾಗ, ಸೇವಕರು ಮತ್ತು ಅವರ ಕುಟುಂಬದ ಸದಸ್ಯರು ಕೈಮುಗಿಯುತ್ತಾ ಗೇಟಿನ ಮುಂದೆ ತಲೆತಗ್ಗಿಸಿ ನಿಂತಿದ್ದರು. ಅವರ ಕೆನ್ನೆಗಳು ಕಣ್ಣೀರಿನಿಂದ ತೊಯ್ದು ಹೋಗಿದ್ದವು. ಕಾರ್ಬೆಟ್ ಮತ್ತು ಮ್ಯಾಗಿ ಅವರನ್ನು ಸಂತೈಸುವ ಶಕ್ತಿ ಕಳೆದುಕೊಂಡು, ಕಣ್ಣೀರು ಹಾಕುತ್ತಾ ನೈನಿತಾಲ್ ಪರ್ವತವನ್ನು ಇಳಿದು, ಕಲದೊಂಗಿಯ ಮನೆ ಸೇರಿಕೊಂಡಿದ್ದರು. ಬರುವಾಗ ಆ ಎರಡು ವೃದ್ಧ ಜೀವಗಳು ಪರಸ್ಪರ ಕೈ ಹಿಡಿದುಕೊಂಡು ಹಸ್ತವನ್ನು ಅದುಮುವುದರ ಮೂಲಕ ಒಬ್ಬರಿಗೊಬ್ಬರು ಸಂತೈಸಿಕೊಳ್ಳತ್ತಿದ್ದರು. ನೈನಿತಾಲ್, ಮ್ಯಾಗಿ ಮತ್ತು ಕಾರ್ಬೆಟ್‌ಗೆ ಕೇವಲ ಗಿರಿಧಾಮ ಮಾತ್ರವಲ್ಲ, ತಾಯಿ ನೆಲವಾಗಿತ್ತು. ಅಲ್ಲಿಯೇ ಹುಟ್ಟಿ, ಆ ನೆಲದ ಜೊತೆ ಸುಧೀರ್ಘ ಒಡನಾಡಿದ ಆ ಹಿರಿಯ ಜೀವಗಳ ಬಾಲ್ಯದ ನೆನಪುಗಳು ಅಲ್ಲಿನ ಕಲ್ಲು, ಮಣ್ಣು, ಗಿಡ, ಮರ, ಪಕ್ಷಿ, ನೀರು, ಗಾಳಿ ಎಲ್ಲವುಗಳ ಜೊತೆ ತಳಕು ಹಾಕಿಕೊಂಡಿದ್ದವು. ಇನ್ನೆಂದೂ ತಿರುಗಿ ಈ ನೆಲಕ್ಕೆ ನಾವು ಬಾರೆವು ಎಂಬ ಸಂಕಟ ಅವರನ್ನು ತೀವ್ರವಾಗಿ ಬಾಧಿಸಿತು. ಕೀನ್ಯಾಕ್ಕೆ ತೆರಳುವ ಮುನ್ನ ಕಾರ್ಬೆಟ್ ತನ್ನ ಆರೋಗ್ಯವನ್ನು ಸುಧಾರಿಸಿಕೊಳ್ಳುವ ಸಲುವಾಗಿ, ಅಕ್ಕ ಮ್ಯಾಗಿಯ ಜೊತೆ ಸಿಷೆಲ್ಸ್ ದ್ವೀಪಕ್ಕೆ ಹೋಗಿ ಮೂರು ತಿಂಗಳು ವಿಶ್ರಾಂತಿ ಪಡೆದು ಮರಳಿ ಭಾರತಕ್ಕೆ ಬಂದ.

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ನೀಡುವ ನಿಟ್ಟಿನಲ್ಲಿ ಲಾರ್ಡ್‌ ಮೌಂಟ್‌ಬ್ಯಾಟನ್‌ನನ್ನು ವೈಸ್‌ರಾಯ್ ಆಗಿ ನೇಮಕ ಮಾಡಿತು. ಆಗಸ್ಟ್ 15 ಕ್ಕೆ ಮುಂಚಿತವಾಗಿ ಬ್ರಿಟಿಷ್ ಸರ್ಕಾರ ಭಾರತದ ಸರ್ಕಾರದ ಮುಂದೆ ಹಲವಾರು ನಿಬಂಧನೆಗಳನ್ನು ವಿಧಿಸಿತ್ತು. ಅವುಗಳಲ್ಲಿ ಭಾರತದಲ್ಲಿರುವ ಬ್ರಿಟಿಷರ ಆಸ್ತಿ ಮತ್ತು ಅವರ ಜೀವಗಳಿಗೆ ಧಕ್ಕೆಯಾಗಬಾರದು ಎಂಬುದು ಒಂದಾಗಿತ್ತು. ಈ ಕಾರಣಕ್ಕಾಗಿ ಸ್ವಾತಂತ್ರ್ಯಾ ನಂತರವೂ ಬ್ರಿಟಿಷ್ ಸೇನೆ ಭಾರತದಲ್ಲಿ ಇರುತ್ತದೆ ಎಂಬ ಷರತ್ತನ್ನು ವಿಧಿಸಲಾಗಿತ್ತು. ಸ್ವಾತಂತ್ರ್ಯದ ದಿನಗಳು ಹತ್ತಿರವಾದಂತೆ ದೇಶಾದ್ಯಂತ ನೆಲೆಸಿದ್ದ ಬ್ರಿಟಿಷರ ಸುರಕ್ಷತೆಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇವೆಲ್ಲವನ್ನು ಕುತೂಹಲದಿಂದ ಎದುರು ನೋಡುತ್ತಿದ್ದ ಕಾರ್ಬೆಟ್ ಮತ್ತು ಮ್ಯಾಗಿಗೆ, ಭಾರತದ ವಿಭಜನೆಯ ಸಂದರ್ಭದಲ್ಲಿ ಉತ್ತರಭಾರತದಲ್ಲಿ, ವಿಶೇಷವಾಗಿ ಪಂಜಾಬ್ ಲಾಹೋರ್ ನಗರಗಳಲ್ಲಿ ಸಂಭವಿಸಿದ ಗಲಭೆಯಿಂದ ಆತಂಕಕ್ಕೆ ಒಳಗಾದರು. ಹಿಂಸೆಯಿಂದ ಭಯಭೀತರಾದ ಇಬ್ಬರೂ ಕೂಡಲೇ ಭಾರತ ತೊರೆಯಲು ನಿರ್ಧರಿಸಿದರು.

ಕೀನ್ಯಾದಲ್ಲಿ ಕಾರ್ಬೆಟ್‌ನ ಹಿರಿಯ ಸಹೋದರ ಟಾಮ್ ಕಾರ್ಬೆಟ್ ಮತ್ತು ಸಹೋದರಿಯ ಮಗ ನೆಸ್ಟರ್ ಇದ್ದುದರಿಂದ ಇವರಿಬ್ಬರ ವಾಸಕ್ಕೆ ಅಲ್ಲಿ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿತ್ತು. ಆ ವೇಳೆಗೆ ತಾಂಜೇನಿಯಾದಲ್ಲಿದ್ದ ಕೃಷಿತೋಟವನ್ನು, ಪಾಲುದಾರ ಮತ್ತು ಕುಮಾವನ್ ಪ್ರಾಂತ್ಯದ ಮಾಜಿ ಜಿಲ್ಲಾಧಿಕಾರಿ ವಿಂದಮ್ ವಾಪಸ್ ಇಂಗ್ಲೆಂಡಿಗೆ ತೆರಳಿದ ಕಾರಣ ಮಾರಾಟ ಮಾಡಲಾಗಿತ್ತು. ಕಾರ್ಬೆಟ್ ತನ್ನ ಪಾಲಿನ ಹಣವನ್ನು ಅಕ್ಕನ ಮಗ ನೆಸ್ಟರ್‌ಗೆ ನೀಡಿ ಕೀನ್ಯಾದಲ್ಲಿ ತೋಟ ಮತ್ತು ಮನೆ ಸಿದ್ಧಪಡಿಸಲು ಕೇಳಿಕೊಂಡಿದ್ದನು. ತಾವು ಭಾರತ ತೊರೆಯುತ್ತಿರುವ ವಿಷಯವನ್ನು ಚೋಟಿ ಹಲ್ದಾನಿ ಹಳ್ಳಿಯ ಜನಕ್ಕೆ ತಿಳಿಸಲಾಗದೆ, ಅಣ್ಣನ ಮನೆಗೆ ಹೋಗಿ ಬರುತ್ತೀವಿ ಎಂದು ತಿಳಿಸಿ, ಅವರಿಗೆ ನಂಬಿಕೆ ಬರುವ ಹಾಗೆ ಮನೆಯ ಬೀಗದ ಕೀಲಿಯನ್ನು ಅವರಿಗೆ ಒಪ್ಪಿಸಿ, ಲಕ್ನೊ ಮಾರ್ಗವಾಗಿ ಬಾಂಬೆಗೆ ರೈಲಿನಲ್ಲಿ ತೆರಳಿದರು.

ಕಾರ್ಬೆಟ್ ಮತ್ತು ಮ್ಯಾಗಿ ಭಾರತ ತೊರೆಯುತ್ತಿರುವುದು ಅವರ ಆಪ್ತ ಸೇವಕ ರಾಮ್‌ಸಿಂಗ್‌ಗೆ ಮಾತ್ರ ತಿಳಿದಿತ್ತು ಅವನಿಗೆ ಚೋಟಿ ಹಲ್ದಾನಿ ಹಳ್ಳಿಯಲ್ಲಿ ಮನೆ ನಿರ್ಮಿಸಿಕೊಟ್ಟು, ಪ್ರತಿ ತಿಂಗಳು ತಿಂಗಳಿಗೆ 10 ರೂ. ಮಾಸಾಶನ ಸಿಗುವಂತೆ ಕಾರ್ಬೆಟ್ ವ್ಯವಸ್ಥೆ ಮಾಡಿದ್ದ. ಲಕ್ನೊ ರೈಲು ನಿಲ್ದಾಣದಲ್ಲಿ ಅವರನ್ನು ಬೀಳ್ಕೊಡಲು ಬಂದಿದ್ದ ರಾಮ್‌ಸಿಂಗ್‌ ರೈಲು ಹೊರಡುತ್ತಿದ್ದಂತೆ ಪ್ಲಾಟ್ ಫಾರಂ ಮೇಲೆ ಕುಕ್ಕರುಗಾಲಿನಲ್ಲಿ ಬಿಕ್ಕಳಿಸಿ ಅತ್ತುಬಿಟ್ಟ. ಅವನಿಗೆ ವಿದಾಯ ಹೇಳಲು ಬೋಗಿಯ ಬಾಗಿಲಲ್ಲಿ ನಿಂತಿದ್ದ ಕಾರ್ಬೆಟ್ ಮತ್ತು ಮ್ಯಾಗಿಯ ಕಣ್ಣುಗಳು ತೇವವಾದವು.

ಬಾಂಬೆ ತಲುಪಿದ ಕಾರ್ಬೆಟ್ ಮತ್ತು ಅವನ ಸಹೋದರಿ, 1947ರ ಡಿಸಂಬರ್ 15ರಂದು ಹಡಗಿನ ಮೂಲಕ ಮೊಂಬಸ ಪಟ್ಟಣ ತಲುಪಿದರು. ಅಲ್ಲಿಂದ ರೈಲಿನಲ್ಲಿ ರಾಜಧಾನಿ ನೈರೋಬಿ ನಗರಕ್ಕೆ ಬಂದಿಳಿದರು. ಆ ವೇಳೆಗಾಗಲೇ  ಜಿಮ್ ಕಾರ್ಬೆಟ್‌ನ ಜೀವದ ಗೆಳೆಯ ಹಾಗೂ ರುದ್ರ ಪ್ರಯಾಗದ ಜಿಲ್ಲಾಧಿಕಾರಿಯಾಗಿದ್ದ ಇಬ್ಬೊಟ್ ಸನ್ ಸೇವೆಯಿಂದ ನಿವೃತ್ತನಾಗಿ ಬ್ರಿಟಿಷ್ ಸರ್ಕಾರದಿಂದ ಸರ್ ಪದವಿ ಪಡೆದು ತನ್ನ ಪತ್ನಿ ಜೀನ್ ಜೊತೆ ನೈರೋಬಿಯಲ್ಲಿ ವಾಸವಾಗಿದ್ದ. ಒಂದು ವಾರ ಅಕ್ಕ ತಮ್ಮ ಇಬ್ಬರೂ ಇಬ್ಬೊಟ್ ಸನ್ ಮನೆಯಲ್ಲಿ ತಂಗಿ ವಿಶ್ರಾಂತಿ ಪಡೆದರು. ಇಬ್ಬೊಟ್ ಸನ್ ಮತ್ತು ಕಾರ್ಬೆಟ್ ಇಬ್ಬರೂ ಕುಳಿತು ಭಾರತದಲ್ಲಿದ್ದ ಸಂದರ್ಭದಲ್ಲಿ ರುದ್ರ ಪ್ರಯಾಗದ ನರಭಕ್ಷಕ ಚಿರತೆಯನ್ನು ಕೊಲ್ಲಲು ತಾವುಗಳು  ಅನುಭವಿಸಿದ ಬವಣೆಗಳನ್ನು ಮೆಲುಕು ಹಾಕಿದರು.

ಇತ್ತ ಕಾಬೆಟ್‌ನ ಅಕ್ಕನ ಮಗ ನೆಸ್ಟರ್ ತನ್ನ ಸೋದರ ಮಾವ ಕಾರ್ಬೆಟ್ ಮತ್ತು ಚಿಕ್ಕಮ್ಮ ಮ್ಯಾಗಿ ಇವರುಗಳ ವಿಶ್ರಾಂತಿ ಜೀವನಕ್ಕಾಗಿ ಕೀನ್ಯಾದ ಕಿಪ್ ಕರೆನ್ ಎಂಬಲ್ಲಿ 650 ಎಕರೆ ಕಾಫಿ ತೋಟ ಖರೀದಿಸಿ, ಅವರಿಗಾಗಿ ಒಂದು ಸುಂದರ ಹಾಗೂ ಚಿಕ್ಕದಾದ ಕಾಟೇಜ್ ನಿರ್ಮಾಣ ಮಾಡಿದ್ದ. ಈ ಪ್ರದೇಶ ಮತ್ತು ಪರಿಸರ ಕಾರ್ಬೆಟ್‌ಗೆ ಇಷ್ಟವಾದರೂ ಅಕ್ಕ ಮ್ಯಾಗಿಗೆ ಇಷ್ಟವಾಗಲಿಲ್ಲ. ನಗರ ಮತ್ತು ಪಟ್ಟಣಗಳಿಂದ ಬಹು ದೂರದಲ್ಲಿದ್ದ ಈ ತೋಟದಲ್ಲಿ ಇರುವುದು ಕಷ್ಟ ಎಂಬ ಭಾವನೆ ಮ್ಯಾಗಿಗೆ ಕಾಡತೊಡಗಿತು. ಇಬ್ಬರೂ ಎಪ್ಪತ್ತು ದಾಟಿದ್ದ ವಯೋವೃದ್ಧರಾದ್ದರಿಂದ ಅನಾರೋಗ್ಯಕ್ಕೆ ತುತ್ತಾದರೆ, ವೈದ್ಯರಾಗಲಿ, ಆಸ್ಪತ್ರೆಗಳಾಗಲಿ ಹತ್ತಿರದಲ್ಲಿ ಇರದಿರುವುದು ಮ್ಯಾಗಿಯ ಬೇಸರಕ್ಕೆ ಕಾರಣವಾಗಿತ್ತು. ಸಹೋದರಿಯ ಮಾತಿಗೆ ಎದುರಾಡದ ಕಾರ್ಬೆಟ್ ಗೊಂದಲಕ್ಕೆ ಸಿಲುಕಿದ. ನಂತರ ಅವಳ ಇಚ್ಛೆಯಂತೆ ಆ ಮನೆ ಮತ್ತು ಕಾಫಿ ತೋಟವನ್ನು ತೊರೆದು ಅವನ ಹಿರಿಯಣ್ಣ ಟಾಮ್ ಕಾರ್ಬೆಟ್‌ನ ಎಸ್ಟೇಟ್‌ಗೆ ತನ್ನ ವಾಸ್ತವ್ಯವನ್ನು ಬದಲಿಸಿದ.

ಭಾರತವನ್ನು, ವಿಶೇಷವಾಗಿ ನೈನಿತಾಲ್ ತೊರೆದು ಬಂದಿರುವುದು ಮ್ಯಾಗಿಯ ಮಾನಸಿಕ ಕ್ಲೇಶಕ್ಕೆ ಕಾರಣವಾಗಿದೆ ಎಂದು ಊಹಿಸಿದ ಕಾರ್ಬೆಟ್ ಹಿರಿಯಣ್ಣನ ಸನೀಹದಲ್ಲಿ ನೈನಿತಾಲ್ ಗಿರಿಧಾಮದ ಬಾಲ್ಯದ ನೆನಪುಗಳ ಜೊತೆ ಅಕ್ಕ ಮ್ಯಾಗಿ ನೆಮ್ಮದಿಯಿಂದ ಇರುತ್ತಾಳೆ ಎಂದು ನಂಬಿದ್ದ. ಆದರೆ, ಇಲ್ಲಿಯೂ ಬಹಳ ಕಾಲ ಇರಲು ಮ್ಯಾಗಿ ತಕರಾರು ತೆಗೆದಳು. ನೈನಿತಾಲ್‌ನ ವಿಶಾಲವಾದ ಬಂಗಲೆಯಲ್ಲಿ ತಣ್ಣನೆಯ ವಾತಾವರಣ, ಸ್ವಚ್ಛಂಧ ಪರಿಸರದ ಬದುಕಿನಲ್ಲಿ ಹುಟ್ಟಿ ಬೆಳೆದು, ಜೀವನ ಬಹುತೇಕ ಭಾಗವನ್ನು ಕಳೆದಿದ್ದ ಮ್ಯಾಗಿಗೆ ಕೀನ್ಯಾದ ಗ್ರಾಮಾಂತರ ಪ್ರದೇಶ, ಮತ್ತು ಪುಟ್ಟ ಮನೆಯ ವಾಸಕ್ಕೆ ಹೊಂದಿಕೊಳ್ಳುವುದು ಕಷ್ಟವಾಯಿತು. ಅಂತಿಮವಾಗಿ ಕೀನ್ಯಾದ ಹಿಮ ಪರ್ವತದ ತಪ್ಪಲಿನಲ್ಲಿ ಇದ್ದ ಹೊಟೇಲ್ ಒಂದರಲ್ಲಿ ವಿಶಾಲವಾದ ಕಾಟೇಜ್ ಅನ್ನು ಬಾಡಿಗೆ ಪಡೆದು ಕಾರ್ಬೆಟ್ ಮ್ಯಾಗಿ ಇಬ್ಬರೂ ವಾಸಿಸತೊಡಗಿದರು. ಪರ್ವತದ ಇಳಿಜಾರಿನಲ್ಲಿ ಇದ್ದ ಹೊಟೇಲ್‌ನ ಕೊಠಡಿಯಿಂದ ಕಾಣುತ್ತಿದ್ದ ಹಿಮ ಪರ್ವತ ಅರಣ್ಯ ಇವೆಲ್ಲವೂ ಮ್ಯಾಗಿಯ ಪಾಲಿಗೆ ನೈನಿತಾಲ್ ಗಿರಿಧಾಮದ ವಾತಾವರಣದಂತೆ ಕಂಡು ಬಂದವು. ಹೊಟೇಲ್‌ನಲ್ಲಿ ಶಾಶ್ವತವಾಗಿ ಇರಲು ಬಯಸಿ, ತಂಗಿದ್ದ ಕೊಠಡಿಯನ್ನು ದೀರ್ಘಾವಧಿಗೆ ಒಪ್ಪಂದದ ಆಧಾರದ ಮೇಲೆ ಪಡೆದುಕೊಂಡರು.

(ಮುಂದುವರಿಯುವುದು)