Daily Archives: July 17, 2012

ಸ್ಕಾರ್ಫ್ ನಿಷೇಧ – ಕೋಮುವಾದಿ ಕಾಲೇಜುಗಳ ಸಮಾನತೆಯ ನಿಯಮ

– ನವೀನ್ ಸೂರಿಂಜೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಸ್ಕಾರ್ಫ್ ವಿವಾದ ಬುಗಿಲೆದ್ದಿದೆ. ಪುತ್ತೂರಿನ ರಾಮಕುಂಜೇಶ್ವರ ಕಾಲೇಜಿನಲ್ಲಿ ಸ್ಕಾರ್ಫ್ ಹಾಕಿರೋ ವಿದ್ಯಾರ್ಥಿಗಳನ್ನು ತರಗತಿಯಿಂದ ಹೊರ ಹಾಕಿದ್ದು 45 ವಿದ್ಯಾರ್ಥಿಗಳು ಕಳೆದೊಂದು ವಾರದಿಂದ ತರಗತಿಗೆ ಗೈರು ಹಾಜರಾಗಿದ್ದಾರೆ. ಹಿಂದುತ್ವ ಪ್ರಚೋದಿಸುವ ಕೋಮುವಾದಿಗಳು ಶಾಲಾ ಕಾಲೇಜುಗಳಲ್ಲಿ ಸಮಾನತೆಯ ನೆಪದಲ್ಲಿ ಮುಸ್ಲಿಂ ವಿರೋಧಿಯಾಗಿ ಸ್ಕಾರ್ಫ್ ನಿಷೇಧಕ್ಕೆ ಬೆಂಬಲ ಸೂಚಿಸಿದರೆ, ಕಮ್ಯೂನಿಸ್ಟರು ಮತ್ತು ಪ್ರಗತಿಪರರು “ಸ್ಕಾರ್ಫ್ ತೊಡಲೇ ಬೇಕು ಎನ್ನುವುದು ಮೂಲಭೂತವಾದಿಗಳ ಹುನ್ನಾರವಾಗಿರುವುದರಿಂದ ವಿದ್ಯಾರ್ಥಿನಿಯರು ಸ್ಕಾರ್ಫ್ ತೊರೆಯಬೇಕು” ಎನ್ನುತ್ತಾರೆ. ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಜಮಾ ಅತೆ ಇಸ್ಲಾಮೀ ಹಿಂದ್ ನಂತಹ ಮುಸ್ಲಿಂ ಸಂಘಟನೆಗಳು ಕಾಲೇಜಿಗೆ ತೆರಳೋ ವಿದ್ಯಾರ್ಥಿನಿಯರಿಗೆ ಸ್ಕಾರ್ಫ್ ಕಡ್ಡಾಯ ಎಂಬ ನಿಲುವಿಗೆ ಬದ್ಧವಾಗಿದೆ. ಒಟ್ಟಾರೆ ಇಷ್ಟೊಂದು ವಿಷಯಗಳ ಜಂಜಾಟದ ಮಧ್ಯೆ ಅಡಕತ್ತರಿಯಲ್ಲಿ ಸಿಲುಕಿರುವವರು ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು. ಪ್ರಗತಿಪರವಾದ ವೈಚಾರಿಕವಾದ ಶಿಕ್ಷಣ ವ್ಯವಸ್ಥೆಯನ್ನು ಪ್ರಾಥಮಿಕ ಶಿಕ್ಷಣದ ಹಂತದಲ್ಲೇ ಅಳವಡಿಸಿಕೊಳ್ಳುವ ಮೂಲಕ ಮಕ್ಕಳಲ್ಲಿ ಧರ್ಮಾತೀತ ಮತ್ತು ಜಾತ್ಯಾತೀತ ಮನೋಭಾವನೆ ಬೆಳೆಯುವ ರೀತಿಯಲ್ಲಿ ಶಿಕ್ಷಣ ನೀಡದೆ ಏಕಾಏಕಿ ಸ್ಕಾರ್ಫ್ ನಿಷೇಧಿಸುವುದು ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಕಲ್ಲು ಹಾಕಿದಂತಾಗುತ್ತದೆ.

“ಶಿಕ್ಷಣದಲ್ಲಿ ಧರ್ಮ ಬೆರೆಸಲು ಸಾಧ್ಯವಿಲ್ಲ. ಸ್ಕಾರ್ಫ್ ಹಾಕಿರೋ ವಿದ್ಯಾರ್ಥಿನಿಯರು ಪ್ರತ್ಯೇಕರಾಗಿ ಕಾಣುವುದರಿಂದ ವಿದ್ಯಾರ್ಥಿಗಳಲ್ಲಿ ಅಸಮಾನ ಭಾವನೆ ಬರುತ್ತದೆ. ಸ್ಕಾರ್ಫ್ ಬೇಕು ಎನ್ನುವ ವಿದ್ಯಾರ್ಥಿನಿಯರಿಗೆ ಮುಸ್ಲಿಂ ಮೂಲಭೂತವಾದಿ ಸಂಘಟನೆಗಳ ಬೆಂಬಲವಿದೆ” ಎಂದು ಮಾಮೂಲಾಗಿ ಹೇಳಿಕೆ ನೀಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಕಾರ್ಫ್ ನಿಷೇಧ ಮಾಡಲಾಗಿದೆ. ಸ್ಕಾರ್ಫ್ ನಿಷೇಧ ಮಾಡಿರೋ ಕಾಲೇಜುಗಳು ಯಾವುದು ಮತ್ತು ಅಲ್ಲಿರುವ ಶಿಕ್ಷಣ ವ್ಯವಸ್ಥೆ ಯಾವ ತರಹದ್ದು ಎಂಬುದನ್ನು ಅವಲೋಕಿಸಿದರೆ ಸ್ಕಾರ್ಫ್‌ನ್ನು ಏಕಾಏಕಿ ನಿಷೇಧಿಸುವುದು ಸರಿಯೇ ಎಂಬುದರ ಬಗ್ಗೆ ಸರಳವಾಗಿ ನಿರ್ಣಯಕ್ಕೆ ಬರಬಹುದು.

ತರಗತಿಯಲ್ಲಿ ಮೊದಲ ಬಾರಿಗೆ ಸ್ಕಾರ್ಫ್ ನಿಷೇಧ ಮಾಡಿದ್ದು ಬಂಟ್ವಾಳದ ಎಸ್ವಿಎಸ್ ಕಾಲೇಜು. ಅಂದರೆ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜು. ಹೆಸರೇ ಹೇಳುವಂತೆ ಇದೊಂದು ಸಮುದಾಯ ಮತ್ತು ಧರ್ಮಕ್ಕೆ ಸೇರಿದ ಕಾಲೇಜು. ಇಲ್ಲಿನ ಎಲ್ಲಾ ತರಗತಿ ಕೊಠಡಿಗಳಲ್ಲಿ ಹಿಂದೂ ದೇವರ ಫೋಟೋ ಇದೆ. ಸಾಲದ್ದಕ್ಕೆ ಅಖಂಡ ಹಿಂದೂ ರಾಷ್ಟ್ರ ಸ್ಥಾಪನೆಯ ಕನಸು ಕಂಡವರ ಫೋಟೋಗಳೂ ಇವೆ. ಅದಕ್ಕಿಂತಲೂ ಮುಖ್ಯವಾಗಿ ಆರೆಸ್ಸೆಸ್ ಮತ್ತು ಹಿಂದೂ ಸಂಘಟನೆಗಳಲ್ಲಿ ಮುಖ್ಯಸ್ಥರಾಗಿರುವವರೇ ಇಲ್ಲಿನ ಆಡಳಿತ ಮಂಡಳಿ ಸದಸ್ಯರು. ಇವರ್ಯಾಕೆ ಸ್ಕಾರ್ಫನ್ನು ಏಕಾಏಕಿ ನಿಷೇಧ ಮಾಡಿದರು ಎಂಬುದನ್ನು ಊಹಿಸಲು ಕಷ್ಟಸಾಧ್ಯವೇನಲ್ಲ. ಅದಕ್ಕಿಂತಲೂ ಮುಖ್ಯವಾಗಿ ಎಸ್ವಿಎಸ್ ಕಾಲೇಜಿನ ಪ್ರತೀ ತರಗತಿಯಲ್ಲಿ ಹಿಂದೂ ದೇವರ ಫೋಟೋ ಇಟ್ಟು, ವೈಚಾರಿಕ, ಸಂವಿಧಾನಿಕ ಬದ್ಧತೆಯ ಪಾಠ ನಿರೀಕ್ಷೆಯೇ ಸಾಧ್ಯವಿಲ್ಲ.

ಎಸ್ವಿಎಸ್ ನಂತರ ಸುದ್ಧಿಯಾಗಿದ್ದು ಮೂಡಬಿದ್ರೆಯ ಜೈನ್ ಕಾಲೇಜು. ಇದೂ ಕೂಡಾ ಖಾಸಾಗಿ ಕಾಲೇಜಾಗಿದ್ದು ಒಂದು ಧರ್ಮಕ್ಕೆ ಸೇರಿದ ಕಾಲೇಜು. ಇಲ್ಲಿ ಜೈನ ಸಂಪ್ರದಾಯಗಳನ್ನು ನಾಜೂಕಾಗಿ ವಿದ್ಯಾರ್ಥಿಗಳ ಮೇಲೆ ಹೇರುವ ಎಲ್ಲಾ ಯತ್ನಗಳನ್ನು ಕಾಲೇಜು ಮಾಡುತ್ತದೆ. ಇಲ್ಲಿನ ಪ್ರಾರ್ಥನೆಯಿಂದ ಹಿಡಿದು ಕಾಲೇಜಿನ ಕಾರ್ಯಕ್ರಮಗಳ ಮೂಲಕ ಜೈನ ಜೀವನ ಪದ್ಧತಿಯನ್ನು ಅನುಷ್ಠಾನ ಮಾಡುವ ಯತ್ನ ನಡೆಸಲಾಗುತ್ತದೆ. ಇಲ್ಲಿನ ತರಗತಿಯ ಕೊಠಡಿಯಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರ ಫೋಟೋ ಇದೆ.

ನಂತರ ಸ್ಕಾರ್ಫ್ ವಿವಾದ ತಲೆದೋರಿದ್ದು ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ. ಇದೊಂದು ಕ್ರಿಶ್ಚಿಯನ್ ಧರ್ಮಪ್ರಾಂತ್ಯದ ಅಡಿಯಲ್ಲಿ ಬರೋ ಶಿಕ್ಷಣ ಸಂಸ್ಥೆ. ಇಲ್ಲಿನ ಪ್ರತೀ ಕೊಠಡಿ ಮಾತ್ರವಲ್ಲ ಒಂದು ಸೆಂಟಿ ಮೀಟರ್ ಜಾಗ ಇದ್ದರೂ ಅಲ್ಲೆಲ್ಲಾ ಶಿಲುಬೆಗಳನ್ನು ನೇತಾಡಿಸಿದ್ದಾರೆ. ಎಲ್ಲೆಲ್ಲಿ ಗೋಡೆ ಖಾಲಿ ಇದೆಯೋ ಅಲ್ಲಲ್ಲಿ “ಏ ಪರಲೋಕದಲ್ಲಿರುವ ಪ್ರಭುವೇ……” ಎಂಬ ಉದ್ಘಾರಗಳನ್ನು ಹಾಕಿದ್ದಾರೆ. ಅದಕ್ಕಿಂತಲೂ ಮುಖ್ಯವಾಗಿ ಸ್ಕಾರ್ಫ್ ಹಾಕಿಕೊಂಡು ತರಗತಿಗೆ ಬರಬಾರದು ಎಂದು ಹೇಳುವ ಇಲ್ಲಿನ ಪ್ರಾಂಶುಪಾಲರು ಒರ್ವ ಪಾದ್ರಿ. ಅವರು ಪಾದ್ರಿಗಳು ತೊಡುವ ಬಿಳಿ ನಿಲುವಂಗಿ ತೊಟ್ಟೇ ಬರುತ್ತಾರೆ. ಇಲ್ಲಿನ ಶಿಕ್ಷಕಿಯರಲ್ಲಿ ಅನೇಕರು ನನ್‌ಗಳಾಗಿದ್ದು ಅವರ ಧಾರ್ಮಿಕ ತೊಡುಗೆ ಹಾಕಿಕೊಂಡೇ ಪಾಠ ಮಾಡುತ್ತಾರೆ.

ಇದೀಗ ಸ್ಕಾರ್ಫ್ ವಿವಾದ ಏರ್ಪಟ್ಟಿದ್ದು ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿಗಳು ಮಾರ್ಗದರ್ಶಕರಾಗಿರೋ ಪುತ್ತೂರು ರಾಮಕುಂಜೇಶ್ವರ ಕಾಲೇಜಿನಲ್ಲಿ. ಹೇಳಿಕೇಳಿ ಇಲ್ಲಿನ ಹೋರ್ಡಿಂಗ್‌ನಿಂದ ಹಿಡಿದು ಎಲ್ಲಾ ತರಗತಿ ಕೊಠಡಿಗಳಲ್ಲಿ ಪೇಜಾವರ ಶ್ರೀಗಳ ಫೋಟೋ ಅಳವಡಿಸಲಾಗಿದೆ. ಪ್ರತಿಯೊಬ್ಬ ಶಿಕ್ಷಕರ ಕೈಯ್ಯಲ್ಲಿ ಕೇಸರಿ ದಾರ ಇದೆ. ಇಲ್ಲಿನ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಹಿಂದೂ ಸಂಘಟನೆಗಳಿಗೆ ಸೇರಿದವರು. ಈ ಎಲ್ಲಾ ಕಾಲೇಜು ಆಡಳಿತ ಮಂಡಳಿಯವರು ಯಾವ ರೀತಿ ಸಮಾನತೆಯ ಹರಿಕಾರರು ಎಂಬುದನ್ನು ಊಹಿಸಬಹುದು.

ಮೇಲೆ ಹೇಳಿರುವ ಕಾಲೇಜುಗಳನ್ನು ಹೊರತು ಪಡಿಸಿ ಬೇರಾವುದೇ ಕಾಲೇಜುಗಳಲ್ಲಿ ಸ್ಕಾರ್ಫ್ ಅಥವಾ ಶಿರವಸ್ತ್ರ ನಿಷೇಧ ಮಾಡಿಲ್ಲ. ಈ ಕಾಲೇಜುಗಳು ಸ್ಕಾರ್ಫ್ ನಿಷೇಧಿಸುವ ಯಾವುದೇ ನೈತಿಕತೆಯನ್ನು ಹೊಂದಿಲ್ಲ. ಕಾಲೇಜನ್ನು ಒಂದು ಕೋಮು ಅಥವಾ ಧರ್ಮದ ಪ್ರಚಾರಕ ಸಂಸ್ಥೆಯಂತೆ ಬಳಸುವುದೇ ಅಲ್ಲದೆ ಮತ್ತೊಂದು ಧರ್ಮದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡ್ಡಿಯಾಗುವುದು ಅಸಂವಿಧಾನಿಕವಾಗುತ್ತದೆ.

ತರಗತಿಯಲ್ಲಿ ಸ್ಕಾರ್ಫ್ ಏಕಾಏಕಿ ನಿಷೇದಿಸಿದರೆ ಮೂಲಭೂತವಾದಿಗಳಿಗೆ ಪೆಟ್ಟು ನೀಡಿದಂತಾಗುತ್ತದೆ ಎಂದು ಭಾವಿಸಿದರೆ ಅದು ಮೂರ್ಖತನದ ಪರಮಾವಧಿಯಾಗುತ್ತದೆ. ಸ್ಕಾರ್ಫ್ ನಿಷೇಧ ಮೂಲಭೂತವಾದಿಗಳಿಗೆ ಲಾಭವೇ ಹೊರತು ನಷ್ಠವಲ್ಲ. ಹರೆಯಕ್ಕೆ ಬಂದ ಮುಸ್ಲಿಂ ಹುಡುಗಿ ಮನೆ ಹೊಸ್ತಿಲು ದಾಟುವುದೇ ಮೂಲಭೂತವಾದಿಗಳ ಕಣ್ಣು ಕೆಂಪಾಗಿಸೋ ವಿಷಯ. ಅಂತದ್ದರಲ್ಲಿ ಸ್ಕಾರ್ಫ್ ಹಾಕದೆ ದೂರದ ಕಾಲೇಜಿಗೆ ಹುಡುಗಿ ಬೆಳಿಗ್ಗೆ ಹೋಗಿ ಸಂಜೆ ಬರುತ್ತಾಳೆ ಎಂದರೆ ಒಪ್ಪಲು ಸಾದ್ಯವೇ ಇಲ್ಲ. ಪರಿಣಾಮ ಮುಸ್ಲಿಂ ಹುಡುಗಿಯರ ಕಾಲೇಜು ಶಿಕ್ಷಣ ಕಟ್. ಮೂಲಭೂತವಾದಿಗಳ ಅಜೆಂಡಾ ಪೂರೈಸಿದಂತಾಗುತ್ತದೆ. ಇನ್ನು ಸ್ಕಾರ್ಫ್ ನಿಷೇಧಕ್ಕೊಳಗಾಗಿರುವ ಕಾಲೇಜು ಹೊರತು ಪಡಿಸಿ ಬೇರೆ ಆಯ್ಕೆ ಇರುವುದು ಮುಸ್ಲಿಂ ಕಾಲೇಜುಗಳು. ತೊಕ್ಕೊಟ್ಟಿನ ಹಿರಾ ದಂತಹ ಮುಸ್ಲಿಂ ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರನ್ನು ಹೊರತುಪಡಿಸಿ ಬೇರೆ ಸಮುದಾಯದ ವಿದ್ಯಾರ್ಥಿನಿಯರಿಗೆ ಪ್ರವೇಶ ಇಲ್ಲ. ಇಂತಹ ಕಾಲೇಜಿನಲ್ಲಿ ಬುರ್ಕಾ ಕಡ್ಡಾಯ. ಇಲ್ಲಿ ಯುವಕರಿಗೆ ಪ್ರವೇಶ ಇಲ್ಲ. ಇಲ್ಲಿ ಕಲಿತ ವಿದ್ಯಾರ್ಥಿನಿಯರು ಅದೆಷ್ಟು ಸಂಕುಚಿತವಾಗಿ ಶಿಕ್ಷಣ ಪಡೆಯಬೇಕಾಗುತ್ತದೆ ಎಂಬುದೇ ದುರಂತ. ಇದು ಸಮಾಜದಲ್ಲಿ ಇನ್ನಷ್ಟು ಅಸಮಾನತೆಯನ್ನು ಮತ್ತು ಅಂತರವನ್ನು ಹೆಚ್ಚಿಸುತ್ತದೆಯೇ ಹೊರತು ಇನ್ನೇನಲ್ಲ. ಹಲವಾರು ಜಾತಿ, ಧರ್ಮ, ಸಮುದಾಯದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಒಟ್ಟಾಗಿ ವಿದ್ಯಾಬ್ಯಾಸ ಮಾಡುವುದೇ ಪರಸ್ಪರರನ್ನು ಅರಿತು ಸಮಾನತೆ ಸಾಧಿಸಲು ಇರುವ ಅತೀ ದೊಡ್ಡ ಮಾರ್ಗ.

ವಿದ್ಯಾರ್ಥಿನಿಯರಿಗೆ ಶಿರವಸ್ತ್ರ ಅಥವಾ ಸ್ಕಾರ್ಫ್ ಬೇಕೇ ಬೇಡವೇ ಎಂಬ ಒಂದೇ ಪ್ರಶ್ನೆ ಕೇಳುವುದಾದರೆ ವಿದ್ಯಾರ್ಥಿನಿಯರಿಗೆ ಮಾತ್ರ ಅಲ್ಲ ಯಾವುದೇ ವ್ಯಕ್ತಿಯ ಬಟ್ಟೆಯನ್ನು ಯಾವುದೋ ಒಂದು ಧರ್ಮ ಅಥವಾ ವ್ಯಕ್ತಿ ನಿರ್ಧಾರ ಮಾಡುವುದೇ ಅಸಂವಿಧಾನಿಕ. ವಿದ್ಯಾರ್ಥಿನಿಯರಲ್ಲಿ ಸ್ಕಾರ್ಫ್ ಹಾಕಲೇ ಬೇಕು ಎಂಬ ಹಠದ ಹಿಂದೆ ಮುಸ್ಲಿಂ ಮೂಲಭೂತವಾದಿಗಳ ಕೈವಾಡ ಇದೆ ಎಂಬ ವಾದ ಸತ್ಯವಾದರೂ ಅಂತಹ ಮೂಲಭೂತವಾದಿತನವನ್ನು ಹೋಗಲಾಡಿಸುವ ಬಗ್ಗೆ ಶಿಕ್ಷಣ ಸಂಸ್ಥೆಗಳು ಕೆಲಸ ಮಾಡಬೇಕು. ಸಮಾನತೆ ಎಂದರೆ ಯೂನಿಫಾರಂ ಹಾಕುವುದಲ್ಲ. ಒಟ್ಟಿಗೆ ಕುಳಿತು ಊಟ ಮಾಡುವುದೂ ಅಲ್ಲ. ಅದೊಂದು ಮನಸ್ಥಿತಿ. ವಿದ್ಯಾರ್ಥಿಗಳಲ್ಲಿ ಅಂತಹ ಸಮಾನತೆಯ ಮನಸ್ಥಿತಿಯನ್ನು ಬೆಳೆಸಲು ಸ್ಕಾರ್ಫ್ ನಿಷೇಧಿಸಿರುವ ಈ ಕಾಲೇಜುಗಳು ಏನು ಕೆಲಸ ಮಾಡಿವೆ?

ಕಾಲೇಜುಗಳಿಗೆ ವಿದ್ಯಾರ್ಥಿಗಳಲ್ಲಿ ಸಮಾನತೆಯನ್ನು ಕಾಯ್ದುಕೊಳ್ಳಬೇಕು ಎಂಬ ಪ್ರಾಮಾಣಿಕ ಇಚ್ಚಾಶಕ್ತಿ ಇದ್ದರೆ ಕಾಲೇಜು ತರಗತಿ ಕೊಠಡಿಯಲ್ಲಿರುವ ಸ್ವಾಮೀಜಿಗಳ, ಧರ್ಮಾಧಿಕಾರಿಗಳ ಫೋಟೋ, ಶಿಲುಬೆಗಳನ್ನು ಕಿತ್ತು ತೆಗೆಯಲಿ. ಶಿಕ್ಷಕರು ಶಿಕ್ಷಕರಂತೆಯೇ ತರಗತಿಗೆ ಬಂದು ಪಾಠ ಮಾಡಲಿ. ವೈಚಾರಿಕವಾದ, ಸಂವಿಧಾನದ ಆಶಯಗಳನ್ನು ಸಾರುವ ವಿಚಾರಗಳನ್ನು ವಿದ್ಯಾರ್ಥಿಗಳ ತಲೆಗೆ ನಾಜೂಕಾಗಿ ತುಂಬುವಂತಹ ಬೋಧನೆಗಳನ್ನು ಮಾಡಲಿ. ಇಂತಹ ಪ್ರಗತಿಪರ ಮನಸ್ಸುಗಳುಳ್ಳ ವಿದ್ಯಾರ್ಥಿಗಳನ್ನು ಬೆಳೆಸಿದ ನಂತರ ಸ್ಕಾರ್ಫ್ ಹಾಕಿಕೊಂಡು ತರಗತಿಗೆ ಬರಬೇಡಿ ಎಂದು ಹೇಳುವುದರ ಹಿಂದೆ ಒಂದು ಅರ್ಥ ಇದೆ ಎನ್ನಬಹುದು.

ಕೃಷಿಕರ ಸರ್ಕಾರ ಬರಬೇಕು

-ಆನಂದ ಪ್ರಸಾದ್

ನಮ್ಮ ದೇಶ ಹಾಗೂ ರಾಜ್ಯದಲ್ಲಿ ಅತ್ಯಂತ ದೊಡ್ಡ ಸಮುದಾಯ ಇಂದಿಗೂ ಕೃಷಿಕ ಸಮುದಾಯವೇ ಆಗಿದೆ. ಕೃಷಿಕರ ಹಾಗೂ ಕೃಷಿ ಕಾರ್ಮಿಕರೆಲ್ಲರ ಸಂಖ್ಯೆ ದೇಶದ ಜನಸಂಖ್ಯೆಯ ಶೇಕಡಾ 60ರ ಆಸುಪಾಸು ಇಂದಿಗೂ ಇದೆ. ಪರಿಸ್ಥಿತಿ ಹೀಗಿರುವಾಗ ಕೃಷಿಕ ಹಾಗೂ ಕೃಷಿ ಕಾರ್ಮಿಕರೆಲ್ಲರೂ ಒಂದು ಸಮುದಾಯವಾಗಿ ತಮ್ಮದೇ ಆದ ಒಂದು ಪಕ್ಷಕ್ಕೆ ವೋಟು ಹಾಕಿದರೆ ಕೃಷಿಕರ ಸರ್ಕಾರವೊಂದನ್ನು ತರಲು ಸಾಧ್ಯವಾಗಬೇಕಲ್ಲವೆ? ಇಂಥ ಸರ್ಕಾರವೊಂದು ಅಸ್ತಿತ್ವಕ್ಕೆ ಬಂದರೆ ದೇಶದಲ್ಲಿ ಜನಪರವಾದ ಕ್ರಾಂತಿಕಾರಕ ಬದಲಾವಣೆಗಳನ್ನು ತರಲು ಸಾಧ್ಯವಿದೆಯಲ್ಲವೇ? ಜನ ಜಾತಿ ಆಧಾರಿತವಾಗಿ ಓಟು ಹಾಕುವ ಬದಲು ಉದ್ಯೋಗಾಧಾರಿತವಾಗಿ ಓಟು ಹಾಕಿದರೆ ಕೃಷಿಕರ ಸರ್ಕಾರ ಅಸ್ತಿತ್ವಕ್ಕೆ ಬಂದು ಕೃಷಿಕರಿಗೆ ಬೇಕಾದ ಕ್ರಾಂತಿಕಾರಕ ನೀತಿಗಳನ್ನು ಜಾರಿಗೆ ತರಬಹುದು. ಇಂಥ ಪರಿಕಲ್ಪನೆ ಏಕೆ ದೇಶದಲ್ಲಿ ಅಥವಾ ರಾಜ್ಯದಲ್ಲಿ ಮೂಡುವುದಿಲ್ಲ?

ದೇಶವು ಸ್ವಾತಂತ್ರ್ಯ ಪಡೆದು 65 ವರ್ಷಗಳು ಕಳೆದರೂ ಪ್ರತಿಯೊಬ್ಬ ವಯಸ್ಕ ಪ್ರಜೆಗೂ ಮತದಾನದ ಹಕ್ಕಿರುವಾಗ ದೇಶದ ಅತ್ಯಂತ ದೊಡ್ಡ ಸಮುದಾಯವಾದ ಕೃಷಿಕರ ಸರ್ಕಾರ ಒಮ್ಮೆಯೂ ಬರಲಿಲ್ಲ. ಒಮ್ಮೆ ಇಂಥ ಸರ್ಕಾರ ಬಂದಿದ್ದರೂ ದೇಶದಲ್ಲಿ ಮಹತ್ತರ ನೀತಿಗಳ ಮಾರ್ಪಾಡು ತರಲು ಸಾಧ್ಯವಾಗುತ್ತಿತ್ತು. ಭಾರತವು ನಿಜವಾದ ಪ್ರಜಾಪ್ರಭುತ್ವ ದೇಶ ಎಂದೆನಿಕೊಳ್ಳಬೇಕಾದರೆ ಕೃಷಿಕರ ಸರ್ಕಾರ ಅಸ್ತಿತ್ವಕ್ಕೆ ಬರಬೇಕು. ಕೃಷಿಕನೇ ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿ ಆಗಬೇಕು. ಹೀಗಾಗಬೇಕಾದರೆ ಕೃಷಿಕರು ಎಚ್ಚೆತ್ತುಕೊಳ್ಳಬೇಕು, ತಮ್ಮ ಮತಾಧಿಕಾರವನ್ನು ಒಂದು ಸಮುದಾಯವಾಗಿ ಒಟ್ಟಿಗೆ ತಮ್ಮದೇ ಆದ ಒಂದು ಪಕ್ಷಕ್ಕೆ ಚಲಾಯಿಸುವ ಅಗತ್ಯವನ್ನು ಮನಗಾಣಬೇಕು. ಇದಕ್ಕಾಗಿ ದೇಶಾದ್ಯಂತ ಒಂದೇ ರೈತ ಸಂಘಟನೆ ಹಾಗೂ ಒಂದೇ ರೈತ ಪಕ್ಷ ಇರಬೇಕು. ಕೃಷಿಕರ ನಡುವೆ ಜಾತಿ, ಮೇಲು ಕೀಳು, ಬಡವ ಬಲ್ಲಿದ ಮೊದಲಾದ ಭೇದಭಾವ ಬರದಂತೆ ಎಚ್ಚರ ಮೂಡಬೇಕು.

ಕೃಷಿಕ ಹಾಗೂ ಕೃಷಿ ಕಾರ್ಮಿಕರು ಒಗ್ಗಟ್ಟಿನ ಸಂಘಟನೆ ರೂಪಿಸಿದರೆ ನಿಜವಾದ ಅರ್ಥದಲ್ಲಿ ಕೃಷಿಕರ ಸರ್ಕಾರ ಅಸ್ತಿತ್ವಕ್ಕೆ ಬಂದು ಪ್ರಜಾಪ್ರಭುತ್ವ ಯಶಸ್ವಿಯಾಗಬಹುದು. ಈಗ ಕೃಷಿಕರು ಒಂದು ಸಮುದಾಯವಾಗಿ ಓಟು ಹಾಕುವುದನ್ನು ಕಲಿತಿಲ್ಲ. ಕೃಷಿಕರು ಬೇರೆ ಬೇರೆ ರಾಜಕೀಯ ಪಕ್ಷಗಳಲ್ಲಿ ಹಾಗೂ ಬೇರೆ ಬೇರೆ ರಾಜಕೀಯ ಪಕ್ಷಗಳ ರೈತ ಘಟಕಗಳಲ್ಲಿ ಹರಿದು ಹಂಚಿ ಹೋಗಿದ್ದಾರೆ. ಹೀಗಾಗಿ ಕೃಷಿಕರು ದೇಶದ ಅತ್ಯಂತ ದೊಡ್ಡ ಸಮುದಾಯವಾದರೂ ಅವರ ಮಾತಿಗೆ, ಅವರ ಬೇಡಿಕೆಗಳಿಗೆ, ಅವರ ಹಿತಾಸಕ್ತಿ ಪೂರೈಕೆಗೆ ಸರ್ಕಾರದ ಮಟ್ಟದಲ್ಲಿ ಮೂರು ಕಾಸಿನ ಬೆಲೆಯೂ ಇಲ್ಲವಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಬಹಳ ದೊಡ್ಡ ವ್ಯಂಗ್ಯ ಹಾಗೂ ನಮ್ಮ ನಾಗರೀಕತೆಗೆ ನಾಚಿಕೆಗೇಡಿನ ವಿಚಾರವಾಗಿದೆ. ಸರ್ಕಾರದ ನೀತಿ ನಿರ್ಧಾರಗಳು ಬೃಹತ್ ಬಂಡವಾಳಗಾರರ ಲಾಭ ಹೆಚ್ಚಿಸುವ ರೀತಿ ರೂಪುಗೊಳ್ಳುತ್ತವೆಯೇ ಹೊರತು ಕೃಷಿಕರ ಉತ್ಪನ್ನಗಳಿಗೆ ಅವರ ಶ್ರಮಕ್ಕೆ ತಕ್ಕ ದರ ದೊರಕಿಸುವಂತೆ ರೂಪುಗೊಳ್ಳುವುದಿಲ್ಲ.

ಕೃಷಿಕರ ಬಳಿ ತಮ್ಮದೇ ಆದ ಮಾಧ್ಯಮಗಳಿಲ್ಲ, ತಮ್ಮದೇ ಆದ ಟಿವಿ ಚಾನೆಲ್ ಇಲ್ಲ. ಹೀಗಾಗಿ ಕೃಷಿಕರ ನಡುವೆ ಎಚ್ಚರ, ಜಾಗೃತಿ ತಿಳುವಳಿಕೆ ಮೂಡುತ್ತಿಲ್ಲ. ಇರುವ ಮಾಧ್ಯಮಗಳು, ಟಿವಿ ವಾಹಿನಿಗಳು ಕೃಷಿಕರು ದೇಶದ ಅತ್ಯಂತ ದೊಡ್ಡ ಸಮುದಾಯವಾಗಿದ್ದರೂ ಕೃಷಿಕರಿಗೆ ಮೂರು ಕಾಸಿನ ಆದ್ಯತೆಯನ್ನೂ ನೀಡುತ್ತಿಲ್ಲ. ಇದನ್ನು ತಪ್ಪಿಸಬೇಕಾದರೆ ಕೃಷಿಕರು ದೇಶಾದ್ಯಂತ ಒಂದು ಘಟಕವಾಗಿ ಒಗ್ಗಟ್ಟಾಗಬೇಕು. ತಮ್ಮದೇ ಆದ ಒಂದು ಸಣ್ಣ ಕರಪತ್ರದಂಥ ಹೆಚ್ಚು ವೆಚ್ಚವಿಲ್ಲದ ಪತ್ರಿಕೆಯನ್ನು ತರಬೇಕು. ಅದನ್ನು ದೇಶದ ಎಲ್ಲ ಭಾಷೆಗಳಲ್ಲೂ ಪ್ರಕಟವಾಗುವಂತೆ ಮಾಡಿ ದೇಶದ ಪ್ರತಿ ಕೃಷಿಕನಿಗೂ ಅದು ತಲುಪುವಂತೆ ಮಾಡಬೇಕು. ದೇಶದ ಪ್ರತಿಯೊಬ್ಬ ಕೃಷಿಕನೂ ಅದಕ್ಕೆ ಚಂದಾದಾರನಾಗುವಂತೆ ಮಾಡಬೇಕು. ಹೀಗೆ ಮಾಡುವುದರಿಂದ ಕೃಷಿಕರ ನಡುವೆ ಒಗ್ಗಟ್ಟು, ಅರಿವು ಬೆಳೆದು ಅವರದೇ ಆದ ಒಂದು ಸರ್ಕಾರ ತರಲು ಸಾಧ್ಯವಿದೆ. ಹೀಗಾದರೆ ದೊಡ್ಡ ಬಂಡವಾಳಶಾಹಿ ಪತ್ರಿಕೆಗಳು, ಟಿವಿ ವಾಹಿನಿಗಳ ಹಾಗೂ ಜಾಹೀರಾತುಗಾರರ ಹಂಗಿಲ್ಲದೆ ಜಾಗೃತಿ ಮೂಡಿಸಲು ಸಾಧ್ಯ.

ಹೀಗಾಗಬೇಕಾದರೆ ದೇಶದ ಪ್ರತಿ ಕೃಷಿಕನೂ ಸದಸ್ಯನಾಗಿರುವ ಒಂದೇ ರೈತ ಸಂಘಟನೆ ರೂಪುಗೊಳ್ಳಬೇಕು. ಸಂಘಟನೆಯ ಮೂಲಕ ಸಂದೇಶಗಳು ದೊಡ್ಡ ಪತ್ರಿಕೆಗಳು, ಟಿವಿ ವಾಹಿನಿಗಳ ಹಂಗಿಲ್ಲದೆ ಒಬ್ಬರಿಂದೊಬ್ಬರಿಗೆ ರವಾನೆಯಾಗಬೇಕು. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ದೊಡ್ಡ ಪತ್ರಿಕೆಗಳು, ಟಿವಿ ವಾಹಿನಿಗಳು ಇಲ್ಲದೆ ಇದ್ದ ಕಾಲದಲ್ಲಿ ನಾಯಕರ ಸಂದೇಶಗಳು ಹೀಗೆ ರವಾನೆಯಾಗುತ್ತಾ ಇದ್ದವು ಹಾಗೂ ಇಡೀ ದೇಶದಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದವು. ಗಾಂಧೀಜಿಯವರ ‘ಹರಿಜನ’, ‘ಯಂಗ್ ಇಂಡಿಯಾ’ದಂಥ ಸಣ್ಣ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಸಂದೇಶಗಳು ಇಡೀ ದೇಶದಲ್ಲಿ ಜನರಿಂದ ಜನರಿಗೆ ದಾಟಿ ದೇಶವ್ಯಾಪಿಯಾಗಿ ಪ್ರಸಾರವಾಗುತ್ತಿದ್ದವು. ಇಂದಿನ ದೊಡ್ಡ ಬಂಡವಾಳಶಾಹಿ ಪತ್ರಿಕೆಗಳು ಹಾಗೂ ಟಿವಿ ವಾಹಿನಿಗಳ ಅಟ್ಟಹಾಸವನ್ನು ಮಟ್ಟಹಾಕಬೇಕಾದರೆ ಹಿಂದೆ ಯಶಸ್ವಿಯಾದ ಇಂಥದೇ ಸೂತ್ರಗಳನ್ನು ರೈತ ಸಂಘಟನೆಗಳು ದೇಶಾದ್ಯಂತ ರೂಪಿಸಿಕೊಳ್ಳಬೇಕಾದ ಅಗತ್ಯ ಇದೆ.

ಕೃಷಿಕರ ಸರ್ಕಾರವೊಂದು ಅಸ್ತಿತ್ವಕ್ಕೆ ಬಂದರೆ ಜನಸ್ನೇಹಿಯಾದ ಗಣಿಗಾರಿಕೆ ನೀತಿ ತಂದು ದೇಶದ ನೈಸರ್ಗಿಕ ಸಂಪತ್ತಿನ ಲೂಟಿ ತಡೆದು ಅದರ ಪ್ರಯೋಜನ ಎಲ್ಲರಿಗೂ ಲಭ್ಯವಾಗುವಂತೆ ನೀತಿ ರೂಪಿಸಬಹುದು. ಕೃಷಿಕರ ಬೆಳೆಗಳಿಗೆ ನ್ಯಾಯೋಚಿತ ಬೆಲೆ ನಿಗದಿ ನೀತಿ ಜಾರಿಗೆ ತರಬಹುದು. ಬಂಡವಾಳಶಾಹಿ ಲಾಭಕೋರ ನೀತಿಯನ್ನು ಹತ್ತಿಕ್ಕಿ ಜನಪರ ನೀತಿಯನ್ನು ಜಾರಿಗೆ ತರಬಹುದು. ಉದಾಹರಣೆಗೆ ಇಂದು ಔಷಧ ಕಂಪನಿಗಳು ಕೆಲವು ಔಷಧಿಗಳನ್ನು ಅವುಗಳ ಉತ್ಪಾದನಾ ವೆಚ್ಚಕ್ಕಿಂತ ಇಪ್ಪತ್ತು ಪಟ್ಟು ಹೆಚ್ಚಿನ ಬೆಲೆಗೆ ಮಾರುವ ನೀತಿ ಅನುಸರಿಸುತ್ತಿವೆ. ಕೃಷಿಕರ ಸರ್ಕಾರವೊಂದು ಬಂದರೆ ಇಂಥ ಅನ್ಯಾಯ ಹಾಗೂ ಅಧರ್ಮಗಳನ್ನು ತಡೆಯಲು ಸಾಧ್ಯವಿದೆ. ಇಂಥ ಬಂಡವಾಳಶಾಹಿ ಲಾಭಕೋರತನ, ಅಧರ್ಮ ಹಾಗೂ ಅನ್ಯಾಯಗಳು ಸರ್ಕಾರದ ಅಸಮರ್ಪಕ ನೀತಿಗಳ ಫಲವಾಗಿಯೇ ರೂಪುಗೊಂಡು ಬೆಳೆದಿವೆ. ಕೃಷಿಕರ ಸರ್ಕಾರ ಬಂದರೆ ವಿಷಕಾರಿ ಕೀಟನಾಶಕಗಳ ನಿಯಂತ್ರಣಕ್ಕೆ ಸೂಕ್ತ ನೀತಿ ರೂಪಿಸಲು ಸಾಧ್ಯ. ಬಂಡವಾಳಗಾರರ ಹಿತ ಕಾಯುವ ಇಂದಿನ ಸರ್ಕಾರಗಳಿಂದ ಇಂಥ ದಿಟ್ಟ ನಿರ್ಧಾರ ರೂಪುಗೊಳ್ಳಲು ಸಾಧ್ಯವಿಲ್ಲ.

ದೇಶದಲ್ಲಿ ಹಲವಾರು ಜನಸ್ನೇಹಿ ಸುಧಾರಣೆಗಳು, ಕಾನೂನುಗಳು ಬರಬೇಕಾದ ಅಗತ್ಯವಿದ್ದು ಅವನ್ನು ಇಂದು ಅಧಿಕಾರದಲ್ಲಿರುವ ಅಥವಾ ಮುಂದೆ ಬರುವ ಬಂಡವಾಳಗಾರರ ಬೆಂಬಲದ ಯಾವುದೇ ಸರ್ಕಾರಗಳೂ ತರುವ ಸಂಭವ ಇಲ್ಲ. ಇಂಥವುಗಳನ್ನು ತರಬೇಕಾದರೆ ಕೃಷಿಕರ ಸರ್ಕಾರ ದೇಶದಲ್ಲಿ ರೂಪುಗೊಳ್ಳಬೇಕಾಗಿರುವುದು ಅಗತ್ಯ. ಇದೇ ರೀತಿ ವಿದೇಶಗಳಲ್ಲಿ ನಮ್ಮ ದೇಶದ್ರೋಹಿ ಭ್ರಷ್ಟ ರಾಜಕಾರಣಿಗಳು ಹಾಗೂ ಬಂಡವಾಳಶಾಹಿಗಳು ಇಟ್ಟಿರುವ ಕಪ್ಪು ಹಣ ವಾಪಸು ತರುವ ಬಗ್ಗೆ ಹಾಗೂ ವಿದೇಶಗಳಿಗೆ ಕಪ್ಪು ಹಣದ ಹರಿವನ್ನು ನಿಯಂತ್ರಿಸುವ ಸೂಕ್ತ ಕಾನೂನು ತರುವುದು, ಚುನಾವಣಾ ಸುಧಾರಣೆಗಳನ್ನು ತರುವುದು, ನ್ಯಾಯಾಂಗಕ್ಕೆ ಸೂಕ್ತ ಸುಧಾರಣೆಗಳನ್ನು ತರುವುದು, ಭ್ರಷ್ಟಾಚಾರ ನಿಯಂತ್ರಣಕ್ಕೆ ಸೂಕ್ತ ಸ್ವತಂತ್ರ ಲೋಕಪಾಲ್ ವ್ಯವಸ್ಥೆ ತರುವುದು, ನಿಷ್ಪಕ್ಷಪಾತ ತನಿಖೆ ನಡೆಸಲು ಸ್ವತಂತ್ರ ರಾಷ್ಟ್ರೀಯ ತನಿಖಾ ಸಂಸ್ಥೆಯ ಸ್ಥಾಪನೆ ಮೊದಲಾದ ಮಹತ್ವದ ಕೆಲಸಗಳನ್ನು ಮಾಡಲು ಜನಪರವಾದ ಕೃಷಿಕರ ಸರ್ಕಾರವೊಂದು ಅಸ್ತಿತ್ವಕ್ಕೆ ಬರಬೇಕಾದ ಅಗತ್ಯ ಇದೆ. ಈಗ ಅಸ್ತಿತ್ವದಲ್ಲಿರುವ ಭ್ರಷ್ಟ ರಾಜಕಾರಣಿಗಳ ಹಾಗೂ ಬಂಡವಾಳಗಾರರ, ಲೂಟಿಕೋರರ ಸರ್ಕಾರದಿಂದಾಗಲಿ ಅಥವಾ ಇನ್ನು ಮುಂದೆ ಬರುವ ಇಂಥದೇ ಇನ್ನೊಂದು ಪಕ್ಷದ ಸರ್ಕಾರದಿಂದಾಗಲೀ ಯಾವುದೇ ಸುಧಾರಣೆಗಳು ಸಾಧ್ಯವಾಗುವ ಸಂಭವ ಕಾಣುವುದಿಲ್ಲ.