ಮಾಧ್ಯಮಗಳು ಮತ್ತು ಅವತಾರಗಳು


– ಡಾ.ಎನ್.ಜಗದೀಶ್ ಕೊಪ್ಪ


[ಕಳೆದ ನವಂಬರ್ ನಲ್ಲಿ ಮಂಡ್ಯ ನಗರದಲ್ಲಿ ಹಾಸ್ಯ ಸಾಹಿತಿ, ಲಂಕೇಶರ ಒಡನಾಡಿ, ಪ್ರಗತಿಪರ ಚಿಂತಕ ಪ್ರೊ. ಹೆಚ್.ಎಲ್.ಕೆ. ಯವರ 73ನೇ ವರ್ಷದ ಹುಟ್ಟು ಹಬ್ಬದ ಆಚರಣೆಯ ಅಂಗವಾಗಿ ಎರಡು ದಿನಗಳ ಕಾಲ ನಡೆದ “ಕರ್ನಾಟಕ ಮುನ್ನಡೆ” ವಿಚಾರ ಸಂಕಿರಣದಲ್ಲಿ ಮಾಡಿದ ಮಾಧ್ಯಮ ಗೋಷ್ಟಿಯ ಅಧ್ಯಕ್ಷ ಭಾಷಣದ ಲಿಖಿತ ರೂಪ.]

ಎಲ್ಲರಿಗೂ ನಮಸ್ಕಾರ. ಗೆಳೆಯರೇ ನಾನು ಇಲ್ಲಿಗೆ ಮಾತನಾಡಲು ಬಂದಿರಲಿಲ್ಲ, ಪ್ರೊ. ಹೆಚ್.ಎಲ್.ಕೆ. ಅವರ ಮೇಲಿನ ಗೌರವದಿಂದ ದೂರದ ಧಾರವಾಡದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಾತ್ರ ಬಂದಿದ್ದೆ. ನನ್ನ ಬರೆವಣಿಗೆ ಮತ್ತು ಚಿಂತನೆಯ ಹಿಂದೆ ಈ ಮಂಡ್ಯ ಜಿಲ್ಲೆಯ ಎರಡು ದೈತ್ಯ ಪ್ರತಿಭೆಗಳ ಪ್ರಭಾವವಿದೆ. ಅವರಿಂದ ಪ್ರೇರಿತನಾಗಿ, ಅವರ ಜೊತೆ ಒಡನಾಡಿ ಬೆಳೆದವನು ನಾನು. ಅಷ್ಟೇ ಅಲ್ಲ, ನನ್ನನ್ನು ಅಕ್ಷರ ಲೋಕಕ್ಕೆ ಕೈಹಿಡಿದು ಕರೆತಂದು ಇಲ್ಲಿಯವರೆಗೆ ಬೆಳೆಸಿದ ಕೀರ್ತಿ ಈ ನೆಲದ ಡಾ. ಬೆಸಗರಹಳ್ಳಿ ರಾಮಣ್ಣ ಮತ್ತು ಪ್ರೊ. ಹೆಚ್.ಎಲ್. ಕೇಶವಮೂರ್ತಿಯವರಿಗೆ ಸಲ್ಲಬೇಕು. ಹಾಗಾಗಿ ಈ ಇಬ್ಬರೂ ಮಹನೀಯರು ನನ್ನ ಪಾಲಿಗೆ ಗುರುಗಳು, ಮಾರ್ಗದರ್ಶಿಗಳು, ಗೆಳೆಯರೂ ಎಲ್ಲರೂ ಆಗಿದ್ದಾರೆ. ಜೊತೆಗೆ, ಈಗಲೂ ನನ್ನ ಆತ್ಮ ಸಾಕ್ಷಿಯ ಪ್ರಜ್ಙೆಯಂತೆ ಇದ್ದಾರೆ.

ಈ ಮಾಧ್ಯಮ ಗೋಷ್ಠಿಗೆ ನಾನು ಸಿದ್ಧನಾಗಿ ಬಂದವನಲ್ಲ, ಹೆಚ್.ಎಲ್.ಕೆ.ಯವರ ಮಾತಿಗೆ ಮಣಿದು ಈ ಗೋಷ್ಠಿಯ ಅಧ್ಯಕ್ಷ ಸ್ಥಾನದಲ್ಲಿ ಕುಳಿತು ಈಗ ನಿಮ್ಮೆದುರು ನನ್ನ ಪತ್ರಕರ್ತ ಜೀವನದ ಕೆಲವು ಅನುಭವಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. ನನ್ನ ಮಾತು ಕಠಿಣವಾಗಿದ್ದರೆ, ಕ್ಷಮೆಯಿರಲಿ. ಬದುಕಿನುದ್ದಕ್ಕೂ ಬೆಂಕಿಯ ಕೆಂಡ ನುಂಗಿದವನಂತೆ ಮಾತನಾಡವುದು, ಬರೆಯುವುದು, ನನ್ನ ಶೈಲಿ ಮತ್ತು ದೌರ್ಬಲ್ಯ. ತುಟಿಗೆ ತುಪ್ಪ ಹಚ್ಚಿಕೊಂಡು ಮಾತನಾಡುವುದು ನನ್ನ ಜಾಯಮಾನವಲ್ಲ. ಕೆಲವು ನನ್ನ ಕೆಲವು ಇತ್ತೀಚೆಗಿನ ಅನುಭವಗಳೊಂದಿಗೆ ಮಾತನ್ನು ಆರಂಭಿಸುತ್ತೇನೆ.

ಎರಡು ವರ್ಷದ ಹಿಂದೆ ಮೈಸೂರಿನ ಜೆ.ಎಸ್.ಎಸ್. ಮಠದ ಕೆಲವು ಪದಾಧಿಕಾರಿಗಳು ಹುಬ್ಬಳ್ಳಿ ನಗರಕ್ಕೆ ಬಂದು, ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಪ್ರಸ್ತಾಪ ಮಾಡಿದರು. ಆ ವೇಳೆ, ನಾನು ಮತ್ತು ನನ್ನ ಮಿತ್ರರಾದ ಹಿಂದೂ ಪತ್ರಿಕೆಯ ಸ್ಥಾನಿಕ ಸಂಪಾದಕ ಗಿರೀಶ್ ಪಟ್ಟಣಶೆಟ್ಟಿ, ಉದಯವಾಣಿಯ ಸ್ಥಾನಿಕ ಸಂಪಾದಕ ಸುರೇಶ್ ಕೆಲವು ಸಲಹೆಗಳನ್ನು ಅವರ ಮುಂದಿಟ್ಟೆವು. ಉತ್ತರ ಕರ್ನಾಟಕಕ್ಕೆ ನಿಮ್ಮ ಮಠದ ವತಿಯಿಂದ ಮೈಸೂರಿನಲ್ಲಿರುವಂತೆ ಇಂಜಿನೀಯರಿಂಗ್, ವೈದ್ಯಕೀಯ ಅಥವಾ ದಂತ ವಿಜ್ಙಾನ ಶಿಕ್ಷಣ ಸಂಸ್ಥೆಗಳು ಅವಶ್ಯಕತೆಯಿಲ್ಲ. ಬದಲಾಗಿ ಈ ಪ್ರದೇಶದಲ್ಲಿ ಎಸ್.ಎಸ್,ಎಲ್.ಸಿ. ಮತ್ತು ಪಿ.ಯು.ಸಿ. ನಂತರ ಶಿಕ್ಷಣಕ್ಕೆ ತಿಲಾಂಜಲಿ ಇತ್ತ ಯುವಕರು ಬಹಳ ಮಂದಿ ಇದ್ದಾರೆ. ಅವರ ಉದ್ಯೋಗಕ್ಕೆ ನೆರವಾಗುವ ದೃಷ್ಟಿಯಲ್ಲಿ ವೃತ್ತಿ ನಿರತ ಕೋರ್ಸ್‌ಗಳನ್ನು ಪ್ರಾರಂಭಿಸಿ, ಎಂಬುದು ನಮ್ಮ ಸಲಹೆಯಾಗಿತ್ತು. ಉದಾಹರಣೆಗೆ, ನೀರು ಎತ್ತುವ ವಿದ್ಯುತ್‌ಮೋಟಾರ್, ಮೊಬೈಲ್, ಮಿಕ್ಸಿ, ಗ್ರೈಂಡರ್‌ಗಳ ದುರಸ್ತಿ, ಮರಗೆಲಸ, ಹೊಸಮನೆಗಳಿಗೆ ವಿದ್ಯುತ್ ವೈರಿಂಗ್ ಮಾಡಲು ಬೇಕಾದ ಕುಶಲತೆ, ಕಟ್ಟಡ ನಿರ್ಮಾಣ, ಮೋಟಾರ್ ವಾಹನ, ದ್ವಿಚಕ್ರ ವಾಹನ ದುರಸ್ತಿ ಇತ್ಯಾದಿ ಅದೇ ರೀತಿ ಮಹಿಳೆಯರಿಗೆ ಟೈಲರಿಂಗ್ ಕಸೂತಿ ಮುಂತಾದ ಜೀವನಕ್ಕೆ ಆಧಾರವಾಗಬಲ್ಲ ತರಬೇತಿ ನೀಡುವ ತರಬೇತಿ ನೀಡುವ ಸಂಸ್ಥೆಗಳನ್ನು ತೆರೆಯುವಂತೆ ಸೂಚನೆ ನೀಡಿದೆವು. ನಮ್ಮ ಸಲಹೆ ಅವರಿಗೂ ಇಷ್ಟವಾಯಿತು.

ಮುಂದಿನ ತಿಂಗಳು ಮಠಾಧೀಶರು ಧಾರವಾಡಕ್ಕೆ ಬರುತಿದ್ದು ನಿಮ್ಮ ಸಲಹೆಗಳನ್ನು ಅವರ ಮುಂದೆ ಇಡಬೇಕೆಂದು ಜೆ.ಎಸ್.ಎಸ್. ಮಠದ ಪದಾಧಿಕಾರಿಗಳು ನಮ್ಮಲ್ಲಿ ವಿನಂತಿಸಿಕೊಂಡಾಗ ನಾವೂ ಸಹ ಒಪ್ಪಿಗೆ ಸೂಚಿಸಿದೆವು. ಅದರಂತೆ ಮುಂದಿನ ಒಂದು ತಿಂಗಳಲ್ಲಿ ಜೆ.ಎಸ್.ಎಸ್. ಸಂಸ್ಥೆಯ ಸ್ವಾಮೀಜಿ ತಮ್ಮ ಸಂಸ್ಥೆಯ ಸಲಹೆಗಾರರ ಜೊತೆ ಧಾರವಾಡಕ್ಕೆ ಬಂದರು. ನಾನು ಮತ್ತು ನನ್ನ ಇಬ್ಬರು ಗೆಳೆಯರನ್ನು ಧಾರವಾಡದ ತಮ್ಮ ಕಛೇರಿಗೆ ಕರೆಸಿಕೊಂಡು ನಮ್ಮ ಸಲಹೆ ಕೇಳತೊಡಗಿದರು. ಅದಕ್ಕೂ ಮುನ್ನ ಅವರ ಸಂಸ್ಥೆಯ ಪದಾಧಿಕಾರಿಗಳನ್ನು ನಮಗೆ ಪರಿಚಯಿಸಿದರು. ಅವರೆಲ್ಲಾ ಕರ್ನಾಟಕ ಸರ್ಕಾರದ ಉನ್ನತ ಹುದ್ದೆಯಲ್ಲಿದ್ದ ಹಿರಿಯ ಐ.ಎ.ಎಸ್. ಅಧಿಕಾರಿಗಳು. ನಿವೃತ್ತ ಮುಖ್ಯ ಇಂಜಿನಿಯರ್‌ಗಳು ಮತ್ತು ವಿ.ವಿ. ಗಳ ನಿವೃತ್ತ ಉಪಕುಲಪತಿಗಳಾಗಿದ್ದರು. ನಾವು ಕೂಡ ಪರಿಚಯ ಮಾಡಿಕೊಂಡೆವು. ಅದೇ ವೇಳೆ ನನ್ನನ್ನ್ನು ಸ್ವಾಮೀಜಿಗೆ ವಿಶೇಷವಾಗಿ ಪರಿಚಯಿಸಿದ ಮೈಸೂರು ನಗರದ ಗೆಳೆಯ ಜಂಬುಕೇಶ್ವರ, ಇವರು ಮಂಡ್ಯ ಜಿಲ್ಲೆಯವರು, ಜಾಗತೀಕರಣ ಕುರಿತಂತೆ ಡಾಕ್ಟರೇಟ್ ಮಾಡಿದ್ದಾರೆ ಎಂದು ತಿಳಿಸಿದ. ಇದರಿಂದ ಕುತೂಹಲಗೊಂಡ ಸ್ವಾಮೀಜಿ, ಜಾಗತೀಕರಣ ಕುರಿತು ನಿಮ್ಮ ಅಭಿಪ್ರಾಯವೇನು? ಎಂದು ನನ್ನನ್ನು ಪ್ರಶ್ನಿಸಿದರು.

ಜಾಗತೀಕರಣದ ಕಡು ವಿರೋಧಿಗಳಲ್ಲಿ ನಾನೂ ಒಬ್ಬ ಎಂದು ತಿಳಿಸಿ, ಅದರ ವಂಚನೆಯ ನಾನಾ ಮುಖಗಳನ್ನು ಸ್ವಾಮೀಜಿಗೆ ಸಂಕ್ಷಿಪ್ತವಾಗಿ ವಿವರಿಸಿದೆ. ನನ್ನ ವಿವರಣೆಯಲ್ಲಿ ರೈತರಿಗೆ ಆಗುತ್ತಿರುವ ವಂಚನೆಗಳು, ಬಹು ರಾಷ್ಟ್ರೀಯ ಕಂಪನಿಗಳ ಎಂಜಲು ಕಾಸಿಗೆ ಕೈಯೊಡ್ಡಿರುವ ಈ ದೇಶದ ಕೃಷಿ ವಿ.ವಿ.ಗಳು ಮತ್ತು ಅಲ್ಲಿನ ವಿಜ್ಙಾನಿಗಳು ಸೃಷ್ಟಿಸುತ್ತಿರುವ ಅವಾಂತರಗಳು ಈ ಬಗ್ಗೆ ಕೆಲವು ಅಂಕಿ ಅಂಶಗಳ ಮೂಲಕ ಅವರಿಗೆ ಮನವರಿಕೆ ಮಾಡಿಕೊಟ್ಟೆ.

ನನ್ನ ಈ ಮಾತುಗಳಿಂದ ಅಪಮಾನಿತರಾದಂತೆ ಕಂಡುಬಂದ ಸ್ವಾಮೀಜಿ ಪಕ್ಕದಲ್ಲಿ ಕುಳಿತಿದ್ದ ಧಾರವಾಡ ಕೃಷಿ ವಿ.ವಿ.ಯ ಮಾಜಿ ಉಪಕುಲಪತಿ, ಭತ್ತದ ತಳಿ ವಿಜ್ಙಾನಿ ಹಾಗೂ ಪದ್ಮಶ್ರಿ ಪ್ರಶಸ್ತಿ ವಿಜೇತ ಡಾ. ಮಹಾದೇವಪ್ಪ ನನ್ನ ಜೊತೆ ವಾದಕ್ಕೆ ಇಳಿದರು. ಅವರ ವಾದಕ್ಕೆ ಉತ್ತರವೆಂಬಂತೆ ಧಾರವಾಡದ ಕೃಷಿ ವಿಶ್ವ ವಿದ್ಯಾಲಯ 2002 ರ ರಾಷ್ಟ್ರೀಯ ಜೀವ ವೈವಿಧ್ಯ ಹಾಗೂ ಕರ್ನಾಟಕದ 2006 ರ ಜೀವ ವೈವಿಧ್ಯ ಕಾಯ್ದೆಯನ್ನು ಉಲ್ಲಂಘಿಸಿ ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟುಗುಳ್ಳ ಎಂಬ ದೇಶಿ ಬದನೆ ಸೇರಿದಂತೆ ಕರ್ನಾಟಕದ ಆರು ದೇಶಿ ಬದನೆತಳಿಗಳನ್ನು ಕುಲಾಂತರಿ ಪ್ರಯೋಗಕ್ಕೆ ಒಡ್ಡಿರುವುದನ್ನು ವಿವರಿಸಿದೆ. ಜೊತೆಗೆ ಈ ಪ್ರಯೋಗಕ್ಕೆ ಅಮೇರಿಕಾ ಮೂಲದ ಮಾನ್ಸೆಂಟೊ ಕಂಪನಿ ತನ್ನ ಭಾರತದ ಸಹಭಾಗಿತ್ವದ ಕಂಪನಿಯಾದ ಮಹಿಕೊ ಸಂಸ್ಥೆ ಮೂಲಕ ಕೃಷಿ ವಿ.ವಿ.ಗೆ ಮತ್ತು ಅಲ್ಲಿನ ವಿಜ್ಙಾನಿಗಳಿಗೆ ಅಪಾರ ಪ್ರಮಾಣದ ಹಣ ಪಡೆದಿರುವುದನ್ನು ಸಹ ನಾನು ಪ್ರಸ್ತಾಪಿಸಿದೆ. ಸೋಜಿಗದ ಸಂಗತಿಯೆಂದರೆ, ಧಾರವಾಡದ ಕೃಷಿ ವಿ.ವಿ. ಸೇರಿದಂತೆ ತಮಿಳು ನಾಡು ಮತ್ತು ಚಂಡಿಘರ್ ಕೃಷಿ ವಿ.ವಿ.ಗಳು ಬದನೆ, ಭತ್ತ, ಗೋಧಿ ಹಾಗು ಇತರೆ ಬೆಳೆಗಳ ಪ್ರಯೋಗಕ್ಕೆ ಕೇಂದ್ರ ಸರ್ಕಾರದ ಅಥವಾ ವಿ.ವಿ. ಹಣಕಾಸು ಆಯೋಗದಿಂದ (ಅಪಾಯಕಾರಿ ಪ್ರಯೋಗಳಿಗೆ) ಅನುಮತಿ ಪಡೆದಿರಲಿಲ್ಲ. ಈ ಎಲ್ಲಾ ಅಂಶಗಳನ್ನು ಸವಿವರವಾಗಿ ನಾನು ಅವರ ಮುಂದಿಟ್ಟಾಗ, ಡಾ. ಮಹಾದೇವಪ್ಪನವರ ಬಳಿ ಉತ್ತರವಿರಲಿಲ್ಲ. ಕ್ಷಣ ಹೊತ್ತು ಮೌನ ವಹಿಸಿದ ಅವರು, ಇದ್ದಕ್ಕಿದ್ದಂತೆ ನನ್ನ ವೃತ್ತಿಯ ಮೇಲೆ ಧಾಳಿ ಮಾಡಿದರು. “ಜಗದೀಶ್ ವಿಜ್ಙಾನಿಗಳ ಬಗ್ಗೆ ಇಷ್ಟೆಲ್ಲಾ ಮಾತನಾಡುವ ನೀವು, ಅಂದರೆ ಪತ್ರಕರ್ತರು, ಸಾಚಾಗಳಾ?” ಎಂದು ಕೇಳಿದರು. ನಾನು ಸಾವಧಾನದಿಂದ ನಿಮ್ಮ ವಿಜ್ಙಾನಿಗಳ ಸಮುದಾಯದಂತೆ ನಮ್ಮ ಪತ್ರಕರ್ತ ಸಮುದಾಯ ಕೂಡ ಕೆಟ್ಟು ಕೆರಹಿಡಿದಿದೆ. ಅದರಲ್ಲಿ ಎರಡು ಮಾತಿಲ್ಲ ಎಂದೆ. ಜೊತೆಗೆ ಇವತ್ತಿನ ಪತ್ರಿಕೋದ್ಯಮದ ವೃತ್ತಿ ಹೆಂಗಸರನ್ನು ಅಡ್ಡದಾರಿಗೆ ನೂಕುವ ತಲೆಹಿಡುಕುತನದ ವೃತ್ತಿಗೆ ಸಮೀಪವಾಗಿದೆ. ಈ ವೃತ್ತಿಯ ಬಗ್ಗೆ ನನಗೆ ಬೇಸರವಿದ್ದರೂ, ಈವರೆಗೆ ಆತ್ಮಸಾಕ್ಷಿಗೆ ಧಕ್ಕೆಯಾಗದಂತೆ, ಘನತೆಯಿಂದ ಈ ವೃತ್ತಿಯನ್ನು ನಿರ್ವಹಿಸಿದ್ದೇನೆ ಎಂದು ಶಾಂತವಾಗಿ ಆದರೆ, ಕಟುವಾಗಿ ಉತ್ತರಿಸಿದೆ. ನನ್ನ ಮಾತುಗಳಿಂದ ಶಾಕ್‌ಗೆ ಒಳಗಾದವರಂತೆ ಕಂಡು ಬಂದ ಸ್ವಾಮೀಜಿ ಚರ್ಚೆಯನ್ನು ಅಲ್ಲಿಗೆ ನಿಲ್ಲಿಸಿ ವೃತ್ತಿ ತರಬೇತಿ ಸಂಸ್ಥೆ ಆರಂಭಿಸುವ ಬಗ್ಗೆ ನಮ್ಮಗಳ ಸಲಹೆ ಕೇಳತೊಡಗಿದರು.

ನಂತರ ಊಟದ ಸಮಯದಲ್ಲಿ ನನ್ನ ಬಳಿ ಬಂದ ಡಾ. ಮಹಾದೇವಪ್ಪ, “ಕ್ಷಮಿಸಿ ಜಗದೀಶ್, ಆವೇಶದಲ್ಲಿ ಕೆಲವು ಮಾತನಾಡಿದೆ. ನೀವು ಎತ್ತಿದ ಕೆಲವು ವಿಷಯಗಳಲ್ಲಿ ಸತ್ಯಾಂಶ ಇದೆ. ಕೆಲವು ವಿಜ್ಙಾನಿಗಳು ಹಣದ ಹಿಂದೆ ಬಿದ್ದು ರೈತರ ಹಿತಾಸಕ್ತಿಗೆ ಮಾರಕವಾಗಿದ್ದಾರೆ,” ಎಂದು ಒಪ್ಪಿಕೊಂಡರು. ಅವರನ್ನು ಸಮಾಧಾನಿಸಿ, “ನೀವು ಕ್ಷಮೆ ಕೇಳುವ ಅಗತ್ಯವಿಲ್ಲ ಸಾರ್. ಪತ್ರಕರ್ತರು ನಿಮ್ಮ ಊಹೆಗಿಂತ ದುಪ್ಪಟು ಭ್ರಷ್ಟರಾಗಿದ್ದಾರೆ,” ಎಂದೆ.

ಮಿತ್ರರೇ, ಯಾಕೆ ಇಷ್ಟೊಂದು ವಿವರವಾಗಿ ಈ ಸಂಗತಿಯನ್ನು ಚರ್ಚಿಸಿದೆ ಎಂದರೆ, ಇವತ್ತಿನ ನಮ್ಮ ಕಣ್ಣೆದುರಿನ ಮಾಧ್ಯಮ ಮತ್ತು ಅದರ ಅಂಗವಾಗಿರುವ ನಮ್ಮಗಳ ಬಗ್ಗೆ ಮಾತನಾಡುವುದೇ ನಾಚಿಕೆಗೇಡಿನ ಸಂಗತಿಯಾಗಿದೆ. ಜನಸಾಮಾನ್ಯರಲ್ಲಿ ಕೇವಲ ಅಧಿಕಾರಿಶಾಹಿ ಮತ್ತು ಆಡಳಿತಶಾಹಿ ಮಾತ್ರ ಭ್ರಷ್ಟಾಚಾರದಲ್ಲಿ ಮುಳುಗಿವೆ ಎಂಬ ಸಾಮಾನ್ಯ ನಂಬಿಕೆಯಿದೆ. ಆದರೆ, ಇತ್ತೀಚೆಗಿನ ದಿನಗಳಲ್ಲಿ ಇವುಗಳ ಜೊತೆ ಕೈ ಜೋಡಿಸಿರುವ ಪತ್ರಿಕೋದ್ಯಮ ಸತ್ಯ ಮತ್ತು ಪ್ರಾಮಾಣಿಕತೆಯ ಮುಖವಾಡದಲ್ಲಿ ಅಕ್ಷರದ ಹಾದರತನಕ್ಕೆ ಇಳಿದಿದೆ. ಈ ಮಾತನ್ನು ಅತ್ಯಂತ ಕಠಿಣವಾದ ಶಬ್ದಗಳಲ್ಲಿ ಹೇಳುತ್ತಿರುವುದಕ್ಕೆ ನಿಮ್ಮ ಕ್ಷಮೆ ಇರಲಿ.

Deccan Herald - Mining Payments

Deccan Herald – Mining Payments

ಅದೊಂದು ಕಾಲವಿತ್ತು, ಪತ್ರಿಕೋದ್ಯಮ ಮತ್ತು ಪತ್ರಕರ್ತರೆಂದರೆ, ಗೌರವದಿಂದ ನೋಡುವ, ಮಾತನಾಡಿಸುವ, ಪ್ರೀತಿಸುತಿದ್ದ ಆದಿನಗಳು ಈಗ ಕೇವಲ ನೆನಪುಗಳು ಮಾತ್ರ. ಪತ್ರಕರ್ತರೆಂದರೆ ಪವರ್ ಬ್ರೋಕರ್ ಎಂದು ಕರೆಯುವ ಕಾಲ ಇದಾಗಿದೆ. ಭ್ರಷ್ಟ ರಾಜಕಾರಣಿಗಳ ಮತ್ತು ಅಧಿಕಾರಿಗಳ ಅಕ್ರಮ ಸಂಪತ್ತಿನ ಬಗ್ಗೆ ಪುಟಗಟ್ಟಲೆ ಮುದ್ರಿಸುವ, ಗಂಟೆಗಟ್ಟಲೆ ಭಿತ್ತರಿಸುವ ನಮ್ಮ ಸುದ್ಧಿ ಮಾಧ್ಯಮಗಳು, ಕಳೆದ ಒಂದು ದಶಕದಿಂದೀಚೆಗೆ ಪತ್ರಕರ್ತರ ಆಸ್ತಿ ಯಾವ ಮಟ್ಟದಲ್ಲಿ ಬೆಳೆದಿದೆ ಎಂದು ಎಂದಾದರೂ ಆತ್ಮಾವಲೋಕನ ಮಾಡಿಕೊಂಡ ಸಂಗತಿಯನ್ನು ನೀವ್ಯಾರಾದರೂ ಬಲ್ಲಿರಾ? ಇವತ್ತು ಪತ್ರಕರ್ತರು ಓಡಾಡುವ ಕಾರು, ಅವರು ಕಟ್ಟಿಕೊಂಡಿರುವ ಮನೆ, ನಗರದ ಹೊರವಲಯದಲ್ಲಿ ನಿರ್ಮಿಸಿಕೊಂಡಿರುವ ಕೃಷಿತೋಟಗಳು, ಇವುಗಳೆಲ್ಲಾ ಅವರ ಸಂಬಳದಿಂದ ಸಾಧ್ಯವೆ? ಎಂಬುದನ್ನು ಪ್ರಜ್ಞಾವಂತ ನಾಗರೀಕರು ಒಮ್ಮೆ ಯೋಚಿಸಬೇಕು. ತಾವೇ ಬೌದ್ಧಿಕವಾಗಿ, ನೈತಿಕವಾಗಿ ದಿವಾಳಿಯೆದ್ದು ಹೋಗಿರುವಾಗ ಇಂತಹ ಸಮುದಾಯದಿಂದ ಏನನ್ನು ನಿರಿಕ್ಷಿಸಲು ಸಾಧ್ಯ ಹೇಳಿ?

ತಮ್ಮ ಕಣ್ಣ ಮುಂದೆ ನಡೆಯುವ ಕೊಲೆ, ಅತ್ಯಾಚಾರಗಳ, ಹಿಂಸೆಗಳನ್ನು ಮಸಾಲೆ ಹಾಕಿ ಅರೆದು ರುಬ್ಬಿ ವೀಕ್ಷರಿಗೆ ಉಣ ಬಡಿಸುವ ಸುದ್ದಿಚಾನಲ್ ಗಳು ಒಂದು ಕಡೆಯಾದರೆ, ಕೆಟ್ಟ ಮತ್ತು ಅನೈತಿಕ ರಾಜಕಾರಣದ ಸುತ್ತಾ ಗಿರಕಿ ಹೊಡೆಯುತ್ತಾ, ಚಮತ್ಕಾರದ ತಲೆ ಬರೆಹ ನೀಡುತ್ತಾ ನಿಂತಲ್ಲೆ ನಿಂತಿರುವ ಪತ್ರಿಕೋದ್ಯಮ ಇನ್ನೊಂದು ಕಡೆ ನಮ್ಮ ಮುಂದಿದೆ. ಈ ಸ್ಥಿತಿಯಲ್ಲಿ ಕೆಟ್ಟು ಕೆರವಾಗಿರುವ ಈ ಮಾಧ್ಯಮಗಳೇ ನಮ್ಮಗಳ ಅನಿವಾರ್ಯ ಆಯ್ಕೆ ಎಂಬಂತಾಗಿದೆ.

ನಾನು ಉತ್ತರ ಕರ್ನಾಟಕಕ್ಕೆ ಹೋಗಿ 11 ವರ್ಷ ಕಳೆದು, 12ನೇ ವರ್ಷಕ್ಕೆ ಕಾಲಿಟ್ಟಿದೆ. ಅಲ್ಲಿನ ಬಡತನ, ಬದುಕು, ನನಗೆ ಮೂರು ಜನ್ಮಕ್ಕೆ ಆಗುವಷ್ಟು ಪತ್ರಿಕೋದ್ಯಮದ ಪಾಠವನ್ನು ಕಲಿಸಿದೆ. ಕಳೆದ ವರ್ಷ ಇಡೀ ಉತ್ತರ ಕರ್ನಾಟಕ ಬರದ ಬವಣೆಯಲ್ಲಿ ತತ್ತರಿಸಿ ಹೋಯಿತು, ಅದರಾಚೆಗಿನ ವರ್ಷ ಅತೀವೃಷ್ಟಿಯಲ್ಲಿ ಮುಳುಗಿ ನಲುಗಿಹೋಯಿತು. ಬಿಜಾಪುರ ಜಿಲ್ಲೆಯಲ್ಲಿ ಕಳೆದ ವರ್ಷ ಕೇವಲ 37 ನಿಮಿಷಗಳ ಕಾಲ ಮಳೆಬಿದ್ದಿದೆ ಎಂದರೆ ನೀವು ನಂಬುತ್ತೀರಾ? ನಂಬುವುದಿಲ್ಲ, ಏಕೆಂದರೆ, ಯಾವುದೇ ಸುದ್ದಿಮಾಧ್ಯದಲ್ಲಿ ಈ ಬಗ್ಗೆ ಚರ್ಚೆಯಾಗಿಲ್ಲ ಅಥವಾ ಸುದ್ಧಿಯಾಗಿಲ್ಲ. ಇಂತಹ ಬಡತನದ ನಡುವೆ ಅಲ್ಲಿನ ಜನಕ್ಕೆ ಬದುಕುವ ಕಲೆಗೊತ್ತಿದೆ. ರಾತ್ರೋರಾತ್ರಿ ರೈಲುಗಳನ್ನ ಹತ್ತಿ ಗೋವಾ, ಮುಂಬೈ ನಗರಗಳನ್ನು ತಲುಪಿ, ಕಟ್ಟಡ ಕಾರ್ಮಿಕರಾಗಿ ದುಡಿಯಲು ಅಲ್ಲಿನ ಕೊಳೇಗೇರಿಗಳಲ್ಲಿ ಜಮೆಯಾಗುತ್ತಾರೆ. ಆದರೆ, ಅವರು ಬಿಟ್ಟುಹೋದ ಅಮಾಯಕ ಮೂಕಪ್ರಾಣಿಗಳ ನೋವು ಮಾತ್ರ ಹೇಳತೀರಲಾಗದು.

ಕಳೆದ ತಿಂಗಳು ಬಿಜಾಪುರ ನಗರದಿಂದ 70 ಕಿ.ಮಿ. ದೂರದ ಗಡಿಭಾಗದ ಊರಾದ ಚಡಚಣದ ನನ್ನ ಆತ್ಮೀಯ ಮಿತ್ರನೊಬ್ಬನ ತಾಯಿಯ ಅಂತ್ಯಸಂಸ್ಕಾರಕ್ಕೆ ಹೋಗಿದ್ದೆ. ರಾತ್ರಿ ಬಿಜಾಪುರದಲ್ಲಿ ಊಟ ಮಾಡಿ, ಜಮಖಂಡಿ, ರಾಮದುರ್ಗ ಮಾರ್ಗವಾಗಿ ಕಾರಿನಲ್ಲಿ ಗೆಳೆಯರ ಜೊತೆ ವಾಪಾಸ್ ಬರುತ್ತಿರಬೇಕಾದರೆ ಬೆಳಗಿನ ಜಾವ ಮೂರು ಗಂಟೆ ಸಮಯದಲ್ಲಿ ರಾಮದುರ್ಗ-ಸವದತ್ತಿ ನಡುವೆ ಬರುವ ಮುಳ್ಳಳ್ಳಿ ಘಾಟ್ ರಸ್ತೆಯಲ್ಲಿ ರೈತನೊಬ್ಬ ಧಾರವಾಡದ ಕಸಾಯಿಖಾನೆಗೆ ದನಗಳನ್ನು ಹಿಡಿದುಕೊಂಡು ಸಾಗುತ್ತಿದ್ದ. ಅವನನ್ನು ತಡೆದು ನಿಲ್ಲಿಸಿ ಕೇಳಿದೆ. (ಇತ್ತೀಚೆಗೆ ಹಿಂದು ಸಂಘಟನೆಗಳ ಪ್ರತಿಭಟನೆಗೆ ಹೆದರಿ ರಾತ್ರಿ ವೇಳೆ ದನಗಳನ್ನು ಸಾಗಿಸುವ ಪದ್ಧತಿಯಿದೆ.) ನನ್ನನ್ನು ನೋಡಿ ಪೊಲೀಸ್ ಅಧಿಕಾರಿ ಇರಬೇಕೆಂದು ಊಹಿಸಿ, ಬೆಚ್ಚಿದ ಆತ ದನಗಳ ಹಗ್ಗ ಹಿಡಿದ ತನ್ನ ಎರಡು ಕೈಗಳನ್ನು ಜೋಡಿಸಿ ಮುಗಿಯುತ್ತಾ “ಸಾಹೇಬ್ರ, ದಿನಕ್ಕೆ ಒಂದು ಎತ್ತಿಗೆ ಎರಡು ಕೊಡಪಾನ ನೀರು ಬೇಕು, ಎಮ್ಮಿಗೆ ಮೂರು ಕೊಡಪಾನ ನೀರು ಬೇಕಾಗೈತಿ ನಮಗ ಕುಡಿಲಿಕ್ಕೆ ನೀರಿಲ್ಲ, ಇವುಗಳಿಗೆ ನೀರು ಎಲ್ಲಿಂದ ತರಲಿ ನೀವೆ ಹೇಳ್ರಲಾ? ಇವಕ್ಕೆ ನೀರು ಮೇವು ಕೊಡ್ರಲಾ ಸಾಕು, ರೊಕ್ಕ ಬೇಡಾ ತಗೋರಿ ಇವುಗಳನ್ನ,” ಎನ್ನುತ್ತಾ ಅವುಗಳ ಹಗ್ಗವನ್ನು ನನಗೆ ನೀಡಲು ಬಂದಾಗ ಅವನಿಗೆ ಏನು ಉತ್ತರಿಸಬೇಕು ಎಂಬುದೇ ನನಗೆ ತೋಚಲಿಲ್ಲ. ನಾನು ಒಬ್ಬ ರೈತನ ಮಗನಾಗಿ ಹುಟ್ಟಿ, ದನ ಕರುಗಳ ಜೊತೆ ಒಡನಾಡಿ ಬೆಳೆದವನಾಗಿದ್ದರೂ, ಒಂದು ಎತ್ತು, ಅಥವಾ ಎಮ್ಮೆ ಎಷ್ಟು ಪ್ರಮಾಣದ ನೀರು ಕುಡಿಯುತ್ತವೆ ಎಂಬ ಜ್ಙಾನವಿರಲಿಲ್ಲ. ನೀರಿನ ಮಹತ್ವ ಗೊತ್ತಿರುವ ಆ ಮಂದಿಗೆ ಇದು ಗೊತ್ತಿದೆ. ಇಂತಹ ನಾವು ಕಾಣಲಾಗದ, ಕೇಳಲಾಗದ ರೈತರ ಬವಣೆಗಳು ಸುದ್ದಿಮಾಧ್ಯಗಳಿಗೆ ಆದ್ಯತೆಯ ವಿಷಯಗಳೇ ಅಲ್ಲ.

ನಿಮಗೆಲ್ಲಾ ಗೊತ್ತಿರುವಂತೆ ಕರ್ನಾಟಕದಲ್ಲಿ ಗಣಿ ಉದ್ಯಮ ಉಚ್ಛ್ರಾಯ ಸ್ಥಿತಿಯಲ್ಲಿ ಇದ್ದಾಗ ಪ್ರತಿದಿನ ಬಳ್ಳಾರಿಯಿಂದ ಹೊಸಪೇಟೆ, ಕೊಪ್ಪಳ, ಗದಗ, ಹುಬ್ಬಳ್ಳಿ ಮಾರ್ಗವಾಗಿ ಕಾರವಾರ ಬಂದರಿಗೆ ಆರು ಸಾವಿರ ಲಾರಿಗಳು ಸಂಚರಿಸುತಿದ್ದವು. ಎಷ್ಟೋ ಹಳ್ಳಿಗಳಲ್ಲಿ ಮಾನಸಿಕ ಅಸ್ವಸ್ತರಾದ ವ್ಯಕ್ತಿಗಳನ್ನು ಸಾಕಲಾರದ ಕುಟುಂಬಗಳು, ಲಾರಿಯ ಚಾಲಕನಿಗೆ ನೂರು ರೂಪಾಯಿ ನೀಡಿ ಎಲ್ಲಿಯಾದರೂ ಇಳಿಸಿಬಿಡು ಎಂದು ನತದೃಷ್ಟರನ್ನು ಸಾಗಹಾಕುತಿದ್ದರು. ಅದರ ಪರಿಣಾಮವಾಗಿ ಇವತ್ತಿಗೂ ಹುಬ್ಬಳ್ಳಿ-ಕಾರವಾರ ರಸ್ತೆಯ ಹೆದ್ದಾರಿಯಲ್ಲಿ ಕಲಘಟಗಿ ಪಟ್ಟಣದ ನಂತರ ಬರುವ ಕಿರುವತ್ತಿ ಎಂಬ ಊರನ್ನು ದಾಟಿದ ಮೇಲೆ ಸಿಗುವ ಕಾಡಿನ ನಡುವೆ ಕಾರವಾರದ ವರೆಗೆ ಹೆದ್ದಾರಿಯಲ್ಲಿ ಬೆತ್ತಲೆಯಾಗಿ ಓಡಾಡುವ ಇವರನ್ನು ಕಾಣಬಹುದು. ಅಲ್ಲಿನ ಮಳೆ, ಚಳಿ, ಗಾಳಿ ಎನ್ನದೆ ರಸ್ತೆ ಬದಿ ನತದೃಷ್ಟರು ಕುಳಿತಿರುವುದನ್ನು ನೋಡಿದರೆ, ಕರಳು ಕಿವುಚಿದಂತಾಗುತ್ತದೆ.

ಎರಡು ವರ್ಷದ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಸಮೀಪದ ಹಳ್ಳಿಯೊಂದರ ಐವತ್ತು ವರ್ಷದ ವಿಧವೆ ಹೆಣ್ಣು ಮಗಳೊಬ್ಬಳು ತನ್ನ 18 ವರ್ಷದ ಮಾನಸಿಕ ಅಸ್ವಸ್ಥ ಮಗನೊಂದಿಗೆ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಳು. ಹೆತ್ತ ತಾಯಿಯ ಎದುರು ಮಗ ಅರಿವಿಲ್ಲದೆ ಬೆತ್ತಲೆಯಾಗಿ ನಿಲ್ಲುವುದನ್ನು ನೋಡಲಾಗದ ಆ ತಾಯಿ ಬಾವಿಯಲ್ಲಿ ನೀರು ಸೇದುವ ಹಗ್ಗದಲ್ಲಿ ತನ್ನ ದೇಹದ ಜೊತೆ ಮಗನ ದೇಹವನ್ನು ಬಂಧಿಸಿ, ಬಿಗಿಯಾಗಿ ಕಟ್ಟಿಕೊಂಡು ಸಮುದ್ರಕ್ಕೆ ಹಾರಿದ ಆ ಹೃದಯ ವಿದ್ರಾವಕ ಘಟನೆಗೆ ಆ ದಿನ ಕುಮಟಾ ಪ್ರವಾಸಿ ಮಂದಿರದಲ್ಲಿದ್ದ ನಾನು ಸಾಕ್ಷಿಯಾಗಿದ್ದೆ. ಬಡತನಕ್ಕೆ ಎಷ್ಟೊಂದು ಕರಾಳ ಮುಖಗಳಿವೆ ಎಂಬುದಕ್ಕೆ ಉದಾಃಹರಣೆಯಾಗಿ ಇವುಗಳನ್ನು ನಿಮಗೆ ನಾನು ಹೇಳಬೇಕಾಯಿತು. ಆರು ಕೋಟಿ ಜನಸಂಖ್ಯೆ ದಾಟಿರುವ ಕರ್ನಾಟಕದಲ್ಲಿ ಇಂದು ಲಕ್ಷಾಂತರ ಮಂದಿ ಮಾನಸಿಕ ಅಸ್ವಸ್ಥರಿದ್ದಾರೆ. ಆದರೆ, ಇರುವುದು ಎರಡೇ ಆಸ್ಪತ್ರೆಗಳು, ಒಂದು ಬೆಂಗಳೂರು, ಮತ್ತೊಂದು ಧಾರವಾಡದಲ್ಲಿ. ಇವುಗಳ ಸ್ಥಿತಿ ಕೂಡ ನರಕ ಸದೃಶ್ಯ ಎಂದರೆ ತಪ್ಪಾಗಲಾರದು. ಇಂತಹ ಮನಕಲಕುವ ಸುದ್ದಿಗಳು ಯಾಕೆ ಸಾರ್ವಜಿನಿಕರ, ಅಥವಾ ಸಮಾಜದ ಗಮನ ಸೆಳೆಯುವಲ್ಲಿ ವಿಫಲವಾಗಿವೆ ಎಂಬುದರ ಬಗ್ಗೆ ಪತ್ರಕರ್ತರಾದ ನಾವು ಒಮ್ಮೆ ನಮ್ಮ ಆತ್ಮ ಸಾಕ್ಷಿಗೆ ಪ್ರಶ್ನೆ ಹಾಕಿಕೊಳ್ಳುವುದು ಒಳಿತು.

ಕಳೆದ ಸೆಪ್ಟಂಬರ್ ತಿಂಗಳಿನಲ್ಲಿ ಒಂದುವಾರ ಕೇರಳ ಮತ್ತು ತಮಿಳುನಾಡು ಪ್ರವಾಸದಲ್ಲಿದ್ದೆ. ತಿರುವನಂತಪುರದಲ್ಲಿದ್ದಾಗ ಹಿಂದೂ ಪತ್ರಿಕೆಯಲ್ಲಿ ಕರ್ನಾಟಕದ ಅಘಾತಕಾರಿ ಸುದ್ಧಿಯೊಂದು ರಾಷ್ಟ್ರೀಯ ಸುದ್ಧಿಯಾಗಿ ಪ್ರಕಟವಾಗಿತ್ತು. ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ 10 ವರ್ಷಗಳ ಅನುಭವ ಇರುವ ವಕೀಲರಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಏರ್ಪಡಿಸಲಾಗಿತ್ತು. 528 ವಕೀಲರು ಪರೀಕ್ಷೆ ತೆಗೆದುಕೊಂಡು ಕೇವಲ ಒಬ್ಬ ಅಭ್ಯರ್ಥಿ ಮಾತ್ರ ಪಾಸಾಗಿದ್ದ. ಮಾರನೇ ದಿನ ನಾನು ಮಧುರೈ ನಗರಕ್ಕೆ ಬಂದಾಗ ಅಲ್ಲಿನ ಇಂಡಿಯನ್‌ ಎಕ್ಸ್‌ಪ್ರೆಸ್ ದಿನಪತ್ರಿಕೆ ಈ ಕುರಿತು ಸಂಪಾದಕೀಯ ಬರೆದು ಬೆಂಗಳೂರಿನಲ್ಲಿ ರಾಷ್ಟ್ರೀಯ ಕಾನೂನು ಶಾಲೆ ಇದ್ದೂ ಕೂಡ ವಕೀಲರ ಬುಧ್ಧಿಮತ್ತೆ ಕುರಿತು ತೀವ್ರ ವಿಷಾದ ವ್ಯಕ್ತಪಡಿಸಿ, ಇದೊಂದು ಅಘಾತಕಾರಿ ಬೆಳವಣಿಗೆ ಎಂದು ಲೇಖನ ಬರೆದಿತ್ತು. ಪ್ರವಾಸ ಮುಗಿಸಿ ಬಂದ ನಾನು, ಕನ್ನಡದ ಅಷ್ಟೂ ಪತ್ರಿಕೆಗಳನ್ನು ತೆಗೆದು ಹುಡುಕಿದರೆ ಈ ಸುದ್ದಿ ಎಲ್ಲಿಯೂ ಪ್ರಕಟವಾಗಿರಲಿಲ್ಲ. ನಂತರ ನಾನೇ “ನಿಂತ ನೀರಾಗಿ ಕೊಳೆತವರು” ಎಂಬ ತಲೆ ಬರಹದ ಅಡಿ ಒಂದು ಲೇಖನವನ್ನು ಬರೆದು ಅಂತರ್ಜಾಲ ಪತ್ರಿಕೆ ವರ್ತಮಾನದಲ್ಲಿ ಪ್ರಕಟಿಸಿದೆ. ಈ ಲೇಖನ ತೀವ್ರ ಚರ್ಚೆಗೆ ಗ್ರಾಸವಾಯಿತು. ನಂತರ ಇದೇ ಲೇಖನವನ್ನು ಪ್ರಜಾವಾಣಿಯ ಸಂಪಾದಕೀಯ ಪುಟದಲ್ಲಿ ಬರುವ ಸಂಗತ ವಿಭಾಗಕ್ಕೆ ಕಳಿಸಿಕೊಟ್ಟೆ. ಆದರೆ, ಪತ್ರಿಕೆ ನನ್ನ ಲೇಖನವನ್ನು ಪ್ರಕಟಿಸಲಿಲ್ಲ. ಬದಲಾಗಿ ಅದನ್ನು ಆಧಾರವಾಗಿಟ್ಟುಕೊಂಡು ವಕೀಲರ ಸಂಘದ ಅಧ್ಯಕ್ಷ ಮತ್ತು ಹಿರಿಯ ವಕೀಲರ ಅಭಿಪ್ರಾಯದೊಂದಿಗೆ ಒಂದು ವಾರದ ನಂತರ ಮುಖಪುಟ ಸುದ್ದಿಯಾಗಿ ಪ್ರಕಟಿಸಿತು.

ಇತ್ತೀಚೆಗೆ ನಮ್ಮ ಮಾಧ್ಯಮಗಳ ಆದ್ಯತೆಗಳು ಹೇಗೆ ಬದಲಾಗುತ್ತಿವೆ ಎಂಬುದನ್ನು ತಿಳಿಸಲು ಇದನ್ನು ಪ್ರಸ್ತಾಪಿಸಿದೆ.

ಇನ್ನೊಂದು ಇಂಗ್ಲೀಷ್ ದಿನ ಪತ್ರಿಕೆಯ ಹೀನ ಇತಿಹಾಸವನ್ನು ನಾನು ನಿಮ್ಮೆದುರು ಪ್ರಸ್ತಾಪಿಸಲೇಬೇಕು. ಬಿರ್ಲಾ ಒಡೆತನಕ್ಕೆ ಸೇರಿದ ದೆಹಲಿ ಮೂಲದ ಹಿಂದೂಸ್ತಾನ್ ಟೈಮ್ಸ್ ಎಂಬ ಇಂಗ್ಲೀಷ್ ದಿನಪತ್ರಿಕೆಯೊಂದಿದೆ. ಅದು ಮುಂಬೈ ಆವೃತ್ತಿಯನ್ನು ಇತ್ತೀಚೆಗೆ ಪ್ರಾರಂಭಿಸಿತು. ತನ್ನ ಪ್ರಸಾರವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಒಂದು ಸ್ಕೂಪ್ ವರದಿಯೊಂದಿಗೆ ತನ್ನ ಮುಂಬೈ ಆವೃತ್ತಿಯನ್ನು ಆರಂಭಿಸಿತು. ಈಗ ದೇಶದ ಬಹು ದೊಡ್ಡ ಹಗರಣಗಳಲ್ಲಿ ಒಂದಾಗಿರುವ, ಮಹಾರಾಷ್ಟ್ರದ ಮುಖ್ಯಮಂತ್ರಿ ಅಶೋಕ್ ಚವಾಣ್ ರಾಜಿನಾಮೆಗೆ ಕಾರಣವಾದ ಆದರ್ಶ ಹೌಸಿಂಗ್ ಸೊಸೈಟಿ ಹಗರಣವನ್ನು ಈ ಪತ್ರಿಕೆ ಬಯಲಿಗೆ ತರುವ ಮೂಲಕ ಮಹಾರಾಷ್ಟ್ರದಲ್ಲಿ ಸಂಚಲನವನ್ನು ಉಂಟುಮಾಡಿತು.

ಇಂತಹದ್ದೇ ಸ್ಕೂಪ್ ಸುದ್ಧಿಯ ಮೂಲಕ ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಆವೃತ್ತಿ ತರಲು ಹೋದೀ ಪತ್ರಿಕೆ ತೀವ್ರ ಮುಖಭಂಗ ಅನುಭವಿಸಿತು. ಇಂದೂರ್ ಆಸ್ಪತ್ರೆಯಲ್ಲಿ ಜನಿಸುವ ಮಕ್ಕಳಿಗೆ ಲಿಂಗ ಪರಿವರ್ತನೆ ಮಾಡಲಾಗುತ್ತಿದೆ ಎಂಬ ಅವೈಜ್ಙಾನಿಕ ವರದಿಯೊಂದನ್ನು ಪ್ರಕಟಿಸಿದ ಹಿಂದೂಸ್ಥಾನ್ ಟೈಮ್ಸ್, ಕೇಂದ್ರ ಮತ್ತು ಮಧ್ಯಪ್ರದೇಶದ ರಾಜ್ಯ ಸರ್ಕಾರಗಳಿಗೆ ಮುಜುಗರವನ್ನುಂಟು ಮಾಡಿತು. ಎರಡು ಸರ್ಕಾರಗಳು ತನಿಖೆಗೆ ಕೂಡ ಆದೇಶಿಸಿದ್ದವು. ಆದರೆ, ಹಿಂದೂ ಇಂಗ್ಲೀಷ್ ದಿನ ಪತ್ರಿಕೆ ಈ ಕುರಿತು ವಿಶ್ವದ ನಾನಾ ದೇಶಗಳಲ್ಲಿರುವ ಮಕ್ಕಳ ತಜ್ಙರನ್ನು ಸಂಪರ್ಕಿಸಿ, ಅವರ ಸಂದರ್ಶನವನ್ನು ಪ್ರಕಟಿಸಿ, ಎಳೆಯ ಮಕ್ಕಳ ಲಿಂಗ ಪರಿವರ್ತನೆ ಅಸಾಧ್ಯ ಎಂಬುದನ್ನ ಸಾಬೀತು ಪಡಿಸಿತು. ಇದಕ್ಕಾಗಿ ಭಾರತವೂ ಸೇರಿದಂತೆ ನೂರೈವತ್ತುಕ್ಕೂ ಹೆಚ್ಚು ತಜ್ಙರನ್ನು ಅದು ಸಂಪರ್ಕಿಸಿತ್ತು. ಈ ಕುರಿತು ಲೇಖನ ಬರೆದು, ಸಂದರ್ಶನಗಳ ಜೊತೆ ಪ್ರಕಟಿಸಿತು. ಅಲ್ಲದೆ, ನಮ್ಮ ಪ್ರತಿಸ್ಪರ್ಧಿ ಪತ್ರಿಕೆಯೊಂದು ಜನತೆಯನ್ನು ತಪ್ಪು ಹಾದಿಯಲ್ಲಿ ಕೊಂಡೊಯ್ಯುವಾಗ ಓದುಗರಿಗೆ ವಾಸ್ತವ ಸತ್ಯ ತಿಳಿಸುವುದು ನಮ್ಮ ಕರ್ತವ್ಯ ಎಂದು ಒಂದು ಅಡಿ ಟಿಪ್ಪಣಿಯನ್ನು ಸಹ ಬರೆಯಲಾಗಿತ್ತು. ಇದರ ಪರಿಣಾಮವಾಗಿ ವರದಿ ಮಾಡಿದ್ದ ಓರ್ವ ವರದಿಗಾರ್ತಿ ಮತ್ತು ಸ್ಥಳೀಯ ಸ್ಥಾನಿಕ ಸಂಪಾದಕ ಇಬ್ಬರೂ ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆಯ ಇಂದೋರ್ ಆವೃತ್ತಿ ಪ್ರಾರಂಭವಾದ ಮಾರನೇ ದಿನ ಕೆಲಸ ಕಳೆದುಕೊಂಡರು. ಇದನ್ನೆಲ್ಲಾ ನೋಡುತಿದ್ದರೆ, ನನ್ನ ಗುರು ಸಮಾನರಾದ ವಡ್ಡರ್ಸೆ ರಘುರಾಮ ಶೆಟ್ಟರು ಸುದ್ಧಿ ಕುರಿತಂತೆ ಪದೇ ಪದೇ ಹೇಳುತಿದ್ದ ಒಂದು ಮಾತು ನೆನಪಿಗೆ ಬರುತ್ತದೆ. “ಆಳವಾಗಿ ಯೋಚಿಸಿ. ಸುದ್ಧಿಯ ಸತ್ಯಾಂಶವನ್ನು ವಿವಿದ ಮೂಲಗಳಿಂದ ಖಚಿತಪಡಿಸಿಕೊಂಡು ಬರೆಯ ಬೇಕು. ಇದು ಹೇಗಿರಬೇಕೆಂದರೆ, ಒಟ್ಟಿಗೆ ಎಲ್ಲವನ್ನು ವಾಂತಿ ಮಾಡಿದಂತಿರಬೇಕು, ಆದರೆ, ಮಾಡಿದ ವಾಂತಿಯನ್ನು ಮಾತ್ರ ಮತ್ತೇ ತಿನ್ನುವಂತಾಗಬಾರದು.” ಇದು ಶೆಟ್ಟರ ಅನುಭವದ ಮಾತು.

ಇತ್ತೀಚೆಗೆ ತಮ್ಮ ಪ್ರಸಾರ ಹೆಚ್ಚಿಸಿಕೊಳ್ಳಲು ಪತ್ರಿಕೆಗಳು ಮತ್ತು ವೀಕ್ಷಕರನ್ನು ಹೆಚ್ಚಿಸಿಕೊಳ್ಳಲು ಸುದ್ಧಿವಾಹಿನಿಗಳು ಎಂತಹದ್ದೇ ಅಡ್ಡ ಹಾದಿ ಹಿಡಿಯಲು ಸಿದ್ಧವಾಗಿವೆ. ನೀವೇ ಗಮನಿಸಿದ್ದೀರಿ ಎಂದು ಭಾವಿಸಿದ್ದೇನೆ. ಕನ್ನಡದ ದಿನ ಪತ್ರಿಕೆಯೊಂದು ಯಡಿಯೂರಪ್ಪ ಜೈಲಿಗೆ ಹೋದಾದ ಇಡೀ ಮುಖಪುಟದ ತುಂಬ ಸರಳುಗಳ ಹಿಂದೆ ಯಡಿಯೂರಪ್ಪ ಕುಳಿತಿರುವ ಚಿತ್ರವನ್ನು ಪ್ರಕಟಿಸಿತು. ಅದೇ ಪತ್ರಿಕೆ ಆತ ಜೈಲಿನಿಂದ ಬಿಡುಗಡೆಯಾದಾಗ ಆತ್ಮಾವಲೋಕನ ಎಂಬ ತಲೆಬರಹದ ಅಡಿ ಆತನ ಸಂದರ್ಶನವನ್ನು ಪ್ರಕಟಿಸಿ, ಅನುಕಂಪದ ಲೇಖನವನ್ನು ಬರೆಯಿತು. ನೀವೇ ಹೇಳಿ ಇದನ್ನು ಹೇಗೇ ಅರ್ಥೈಸಿಕೊಳ್ಳಬೇಕು? ರಾಜಕಾರಣಿ ಹಾಗೂ ಬೆಳಗಾವಿ ಮೂಲದ ಕೆ.ಎಲ್.ಇ. ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಪ್ರಭಾಕರ ಕೋರೆ ಎಂಬ ವ್ಯಕ್ತಿ ಅದೇ ಪತ್ರಿಕೆಯಲ್ಲಿ ತನ್ನ ಶಿಕ್ಷಣ ಸಂಸ್ಥೆಯ ಬಗ್ಗೆ ಅಂಕಣ ಬರೆಯುತಿದ್ದಾರೆ. ಎದೆ ಸೀಳಿದರೂ ನಾಲ್ಕು ಕನ್ನಡ ಅಕ್ಷರ ಬರೆಯಲು ಬಾರದ ಕೋರೆ ಇಂದು ಅಂಕಣಕಾರ. ನಿಮಗೊಂದು ಸತ್ಯ ಹೇಳುತ್ತೇನೆ. ಒಂಬತ್ತು ವರ್ಷದ ಹಿಂದೆ ಕೆ.ಎಲ್.ಇ. ಶಿಕ್ಷಣ ಸಂಸ್ಥೆಯ ಬಗ್ಗೆ ಉದಯ ಟಿ.ವಿ. ಗಾಗಿ ನಾನು 10 ನಿಮಿಷಗಳ ಅವಧಿಯ ಸಾಕ್ಷ್ಯಚಿತ್ರ ನಿರ್ಮಾಣ ಮಾಡಿದ್ದೆ. ಆ ಸಂದರ್ಭದಲ್ಲಿ ಬೆಳಗಾವಿ ನಗರದಲ್ಲಿ ಸಂಸ್ಥೆಯ ಅತಿಥಿ ಗೃಹದಲ್ಲಿ ಮೂರು ದಿನ ತಂಗಿ ಎಲ್ಲರನ್ನೂ ಸಂದರ್ಶನ ಮಾಡಿದ್ದೆ. ಸಂಸ್ಥೆಯ ಒಂಬತ್ತು ನಿರ್ದೆಶಕರಲ್ಲಿ ಐದು ಮಂದಿಗೆ ಕನ್ನಡವೇ ಗೊತ್ತಿರಲಿಲ್ಲ. ಪ್ರಭಾಕರ ಕೋರೆ ಮರಾಠಿ ಛಾಯೆಯ ಕನ್ನಡ ಮಾತನಾಡಬಲ್ಲರೇ ಹೊರತು ಬರೆಯುವ ವ್ಯಕ್ತಿ ಅಲ್ಲ. ಇದೇ ಪತ್ರಿಕೆಯಲ್ಲಿ ಶ್ರೀಮಂತ ರಾಜಕಾರಣಿಗಳು ( ಆರ್.ವಿ. ದೇಶಪಾಂಡೆ, ಮುರುಗೇಶ್ ನಿರಾಣಿ ಮುಂತಾದವರು) ಕೂಡ ತಮ್ಮ ಪೋಟೊ ಛಾಪಿಸಿಕೊಂಡು ಅಂಕಣ ಬರೆಯುತಿದ್ದಾರೆ. ಇವರುಗಳು ತಾವು ಪ್ರತಿನಿಧಿಸುವ ತಮ್ಮ ಕ್ಷೇತ್ರಗಳ ಸಮಸ್ಯೆಯ ಬಗ್ಗೆ ನನ್ನೆದುರು ಒಂದು ಪುಟದ ಲೇಖನ ಬರೆದು ಕೊಟ್ಟರೆ, ಆ ಕ್ಷಣಕ್ಕೆ ನಾನು ಪತ್ರಿಕೋದ್ಯಮಕ್ಕೆ ವಿದಾಯ ಹೇಳಲು ಸಿದ್ಧನಿದ್ದೇನೆ.

ನಾವು ಪತ್ರಕರ್ತರು ಎಷ್ಟರ ಮಟ್ಟಿಗೆ ಕುಲಗೆಟ್ಟುಹೋಗಿದ್ದೇವೆ ಎಂದರೆ, ನಮಗೆ ಕುಡಿಯಲು ವಿಸ್ಕಿ, ಊಟ ಮತ್ತು ಹೋಟೇಲ್ ಕೊಠಡಿ ಕೊಡುವ ಮಾಲಿಕರು, ಕುಡಿತಕ್ಕೆ ನೆಂಚಿಕೊಳ್ಳಲು ಎಂ.ಟಿ.ಆರ್. ಬ್ರಾಂಡ್ ನಂತಹ ಕುರುಕಲು ತಿಂಡಿಗಳಾದ ಚಕ್ಕುಲಿ, ಕೋಡುಬಳೆ, ಗೋಡಂಬಿ ಸರಬರಾಜು ಮಾಡುವ ಗಿರಾಕಿಗಳು, ಇಲ್ಲವೇ ನಮ್ಮಗಳ ವಿಮಾನ ಪ್ರಯಾಣಕ್ಕೆ ಟಿಕೇಟ್ ತೆಗೆಸಿಕೊಡುವ ಭ್ರಷ್ಟರಾಜಕಾರಣಿಗಳು ಇವರುಗಳನ್ನು ನಾವು ಪತ್ರಿಕೆಗಳ ಮುಖಾಂತರ ದಿನ ಬೆಳಗಾಗುವದರೊಳಗೆ ಅಂಕಣಕಾರರನ್ನಾಗಿ ಮಾಡಬಲ್ಲೆವು. ಇವರು ಅಂಕಣಕಾರರೋ? ಅಥವಾ ಅಂಕಣಕೋರರೋ? ಎಂಬುದನ್ನ ಮುಂದಿನ ದಿನಗಳಲ್ಲಿ ಇತಿಹಾಸ ನಿರ್ಧರಿಸುತ್ತದೆ. ಆದರೆ, ನನ್ನ ಪ್ರಶ್ನೆ ಇಷ್ಟೇ ನಮ್ಮ ಪತ್ರಿಕೆಗಳ ಆದರ್ಶ, ನೈತಿಕತೆ, ಮೌಲ್ಯ, ಬದ್ಧತೆಗಳು ಎಲ್ಲಿ ಮರೆಯಾಗಿ ಹೋದವು?

ಕೇವಲ ಒಂದು ದಶಕದ ಹಿಂದೆ ಯಾವ ಕಾರಣಕ್ಕೂ ಪತ್ರಿಕೆಗಳ ಮುಖಪುಟದಲ್ಲಿ ಕಾಲುಪುಟಕ್ಕಿಂತ ಹೆಚ್ಚು ಜಾಹಿರಾತು ಬಳಸಬಾರದು ಎಂಬ ಅಲಿಖಿತ ನಿಯಮವೊಂದು ಜಾರಿಯಲ್ಲಿತ್ತು. ಇದು ಯಾರೋ ಹಾಕಿದ ನಿಬಂಧನೆಯಾಗಿರಲಿಲ್ಲ. ತಾವಾಗಿಯೇ ಮಾಲಿಕರು ಹಾಕಿಕೊಂಡಿದ್ದ ಲಕ್ಷ್ಮಣ ರೇಖೆಯಾಗಿತ್ತು. ಇಂದು ಇಡೀ ಪುಟವೇಕೆ? ಅಷ್ಟೂ ಪತ್ರಿಕೆಯ ಪುಟಗಳನ್ನು ಜಾಹಿರಾತಿಗೆ ಒತ್ತೆ ಇಡಲು ತಯಾರಿದ್ದಾರೆ. ಮಾಧ್ಯಮಗಳು ಇತ್ತೀಚೆಗೆ ಭ್ರ್ರಷ್ಟ ಮತ್ತು ಶ್ರೀಮಂತ ರಾಜಕಾರಣಿಗಳ ಹಾಗೂ ಕಾರ್ಪೊರೇಟ್ ಸಂಸ್ಥೆಗಳ ಪಾಲಾಗುತ್ತಿರುವ ಪರಿಣಾಮವಿದು. ಉತ್ಪನ್ನ ವೆಚ್ಚ ಅಧಿಕವಾದ ಕಾರಣ ಜಾಹಿರಾತು ಅನಿವಾರ್ಯ ಎಂಬ ವಾದವನ್ನು ಇವರು ನಮ್ಮ ಮುಂದೆ ಮಂಡಿಸುತಿದ್ದಾರೆ. ಅವರ ಮಾತನ್ನೂ ನಾವು ಗೌರವಿಸೊಣ, ಆದರೆ, ಜಾಹಿರಾತುಗಳನ್ನ ಪ್ರಕಟಿಸುವಾಗ ಸಾಮಾಜಿಕ ಜವಾಬ್ದಾರಿ ಬೇಡವೆ? ಇತ್ತೀಚೆಗೆ ಪತ್ರಿಕೆಗಳಲ್ಲಿ ಮೂರನೇ ದರ್ಜೆ ಸಂಸ್ಕೃತಿಯ ಜಾಹಿರಾತುಗಳು ಪ್ರಕಟವಾಗುತ್ತಿರುವುದನ್ನು ಗಮನಿಸಿದಾಗ ಭಾರತದ ಪುರುಷರೆಲ್ಲಾ ನಪುಂಷಕರು ಇಲ್ಲವೇ ಷಂಡರೆನೋ ಎಂಬ ಸಂಶಯ ಕಾಡುತ್ತದೆ. ಇವಿಷ್ಟೆಯಲ್ಲ, ಹೆಂಗಸರಿಗೆ ಸ್ತನ ದೊಡ್ಡದು ಮಾಡುವುದಕ್ಕೆ, ಗಂಡಸರ ಬೋಳುತಲೆಯಲ್ಲಿ ಕೂದಲು ಬೆಳೆಯುವುದಕ್ಕೆ, ಸಣ್ಣಗಿರುವವರು ದಪ್ಪವಾಗುವುದಕ್ಕೆ, ದಪ್ಪಗಿದ್ದವರು ಸಣ್ಣಗಾಗುವುದಕ್ಕೆ ಎಲ್ಲಾ ಬಗೆಯ ಜಾಹಿರಾತಿಗೂ ಇಲ್ಲಿ ಅವಕಾಶಗಳಿವೆ. ಕ್ಯಾನ್ಸರ್ ರೋಗ ವಾಸಿ ಮಾಡುವ ಕಡ್ಡಿಪುಡಿ ವೈದ್ಯರು ಪತ್ರಿಕೆಗಳಲ್ಲಿ ರಾರಾಜಿಸತೊಡಗಿದ್ದಾರೆ. ಇದೇ ಕರ್ನಾಟಕದಲ್ಲಿ ಲಂಕೇಶ್‌ರವರು ಜಾಹಿರಾತು ನಿರಾಕರಿಸಿ ಪತ್ರಿಕೆಯನ್ನು ಹುಟು ಹಾಕಿ ಆ ಮೂಲಕ ರಾಜ್ಯದ ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ ಬದುಕನ್ನು ಬದಲಾಯಿಸಿದ ಇತಿಹಾಸವಿದೆ. ಅದನ್ನು ನಾವೀಗ ಮರೆತಿದ್ದೆವೆ. ಎಲ್ಲರೂ ಇಂದಿನ ಮಾಲಿಕರ ರೀತಿಯಲ್ಲಿ ಯೋಚಿಸಿದ್ದರೆ, ಕರ್ನಾಟಕದಲ್ಲಿ ಪ್ರಜಾವಾಣಿ ದಿನಪತ್ರಿಕೆ ಹುಟ್ಟುತ್ತಿರಲಿಲ್ಲ. ಮದ್ರಾಸ್ ನಗರದಲ್ಲಿ ಹಿಂದೂ ಎಂಬ ಇಂಗ್ಲೀಷ್ ದಿನಪತ್ರಿಕೆ ಹುಟ್ಟುತ್ತಿರಲಿಲ್ಲ. ಮುಂಬಯನಗರದಲ್ಲಿ ಇಂಡಿಯನ್ ಎಕ್ಸ್ ಪ್ರಸ್ ಪತ್ರಿಕೆ ಹುಟ್ಟುತ್ತಿರಲಿಲ್ಲ.

ಪ್ರಜಾವಾಣಿಯ ಸಂಸ್ಥಾಪಕ ಕೆ.ಎನ್. ಗುರುಸ್ವಾಮಿ ಅವರ ಮಾತೃಬಾಷೆ ತೆಲುಗು. ಅವರು ಮೂಲತಃ ಆಂಧ್ರ್ರದ ಆಧೋನಿ ಪಟ್ಟಣದವರು. ಈಡಿಗ ಸಮುದಾಯಕ್ಕೆ ಸೇರಿದ ಅವರ ಕುಟುಂಬದ ವೃತ್ತಿ ಹೆಂಡ, ಸಾರಾಯಿ ಮಾರುವದಾಗಿತ್ತು.ಅವರು ಅದನ್ನು ಬಿಟ್ಟು 1948 ರಲ್ಲಿ ಬೆಂಗಳೂರಿನಲ್ಲಿ ಪ್ರಥಮವಾಗಿ ಡೆಕ್ಕನ್ ಹೆರಾಲ್ಡ್ ಇಂಗ್ಲೀಷ್ ದಿನಪತ್ರಿಕೆ ತೆಗೆದರು, ಮರುವರ್ಷ ಪ್ರಜಾವಾಣಿ ಪತ್ರಿಕೆ ಪ್ರಾರಂಭಿಸಿದರು. ಶತಮಾನದ ಹಿಂದೆ ಅಂದಿನ ಮದ್ರಾಸ್ ನಗರದಲ್ಲಿ ನಾಲ್ವರು ಬ್ರಾಹಣ ವಕೀಲರು ಸೇರಿ ಆರಂಭಿಸಿದ ಹಿಂದು ಇಂಗ್ಲೀಷ್ ದಿನಪತ್ರಿಕೆಗೆ ಇಡೀ ಭಾರತದಲ್ಲಿ ಒಂದು ವಿಶಿಷ್ಟ ಸ್ಥಾನವಿದೆ. ವೃತ್ತಿಯಲ್ಲಿ ಮಾರವಾಡಿ ಕುಟುಂಬದಿಂದ ಬಂದ ರಾಮನಾಥ ಗೋಯಂಕಾ, ಮುಂಬೈನಲ್ಲಿ ಆರಂಭಿಸಿದ ಇಂಡಿಯನ್ ಎಕ್ಸ್‌ಪ್ರೆಸ್ ಇಂಗ್ಲೀಷ್ ಪತ್ರಿಕೆಗೂ ಒಂದು ದೊಡ್ಡ ಇತಿಹಾಸವಿದೆ. 1975ರ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾಗಾಂಧಿ ವಿರುದ್ಧ ಸಮರವನ್ನೆ ಸಾರಿದ್ದ ಈ ಪತ್ರಿಕೆಯ ಅಂದಿನ ವರದಿಗಳು ಭಾರತದ ಪತ್ರಿಕೋದ್ಯದಲ್ಲಿ ಮೈಲಿಗಲ್ಲು. ಇವರುಗಳು ಲಾಭವನ್ನೇ ಪ್ರಧಾನ ಗುರಿಯಾಗಿಸಿಕೊಡವರಲ್ಲ. ವ್ಯವಹಾರದ ಜೊತೆಜೊತೆಗೆ ಆದರ್ಶವನ್ನು ಮೈಗೂಡಿಸಿಕೊಂಡವರು.

ನನ್ನ ಪ್ರಶ್ನೆ ಇಷ್ಟೆ; ವ್ಯವಹಾರದ ಜೊತೆ ಜೊತೆಗೆ ನೈತಿಕತೆ ಇಲ್ಲದಿದ್ದರೆ ಹೇಗೆ? ನಿಮಗೆ ಲಾಭ ಮಾಡುವ ದೃಷ್ಟಿಕೋನವಿದ್ದರೆ, ಈ ವಲಯಕ್ಕೆ ಏಕೆ ಬರುತ್ತೀರಿ? ಬೇರೆ ವ್ಯಾಪಾರ ಮಾಡಿ.

ಈ ಸಂದರ್ಭದಲ್ಲಿ ಒಂದು ಘಟನೆ ನೆನಪಿಗೆ ಬರುತ್ತಿದೆ: ದಶಕದ ಹಿಂದೆ ವಿಜಯ ಸಂಕೇಶ್ವರರು ‘ವಿಜಯ ಕರ್ನಾಟಕ’ ಪತ್ರಿಕೆ ಹುಟ್ಟು ಹಾಕಿದಾಗ, ಜೊತೆಯಲ್ಲಿ ‘ನೂತನ’ ಎಂಬ ವಾರಪತ್ರಿಕೆ ಹಾಗೂ ‘ಭಾವನಾ’ ಎಂಬ ಮಾಸಪತ್ರಿಕೆಯನ್ನು ಪ್ರಾರಂಭಿಸಿದರು. ತರಂಗ ಪತ್ರಿಕೆಯ ಸಂಪಾದಕರಾಗಿದ್ದ ಸಂತೂಷ್ ಕುಮಾರ ಗುಲ್ವಾಡಿ ಸಂಪಾದಕರಾಗಿದ್ದ ವಾರಪತ್ರಿಕೆಯನ್ನ ಕೇವಲ 12 ವಾರಗಳಲ್ಲಿ ಮುಚ್ಚಿಹಾಕಲಾಯಿತು. ಮಿತ್ರರಾದ ಜಯಂತ್ ಕಾಯ್ಕಿಣಿ ಇವರ ಸಂಪಾದಕತ್ವದಲ್ಲಿ ಭಾವನಾ ಮಾಸಪತ್ರಿಕೆ ಹತ್ತು ತಿಂಗಳು ಕಾಲ ನಡೆದು ಕನ್ನಡದ ಮಾಸಪತ್ರಿಕೆಗಳಲ್ಲಿ ಹೊಸ ಶಕೆಯನ್ನು ಆರಂಭಿಸಿತ್ತು. ಒಂದು ದಿನ ಕಾಯ್ಕಿಣಿ ಕಚೇರಿಗೆ ಹೋದಾಗ ಅಲ್ಲಿನ ಸಿಬ್ಬಂದಿಯೊಬ್ಬ ‘ಸಾರ್. ಮುಂದಿನ ತಿಂಗಳಿನಿಂದ ಭಾವನಾ ಪತ್ರಿಕೆ ಬರೋದಿಲ್ಲ, ನೀವು ವಿಜಯ ಕರ್ನಾಟಕದ ಸಾಪ್ತಾಹಿಕದಲ್ಲಿ ಕೆಲಸ ಮಾಡಬೇಕೆಂತೆ,’ ಎಂದು ಹೇಳಿದಾಗ, ಏಕಂತೆ ಎಂದು ಕಾಯ್ಕಿಣಿ ಪ್ರಶ್ನಿಸಿದರು. ಪತ್ರಿಕೆ ಲಾಭ ತರುತ್ತಿಲ್ಲ ಎಂದು ಅವನು ಉತ್ತರಿಸಿದಾಗ, ಕುಪಿತಗೊಂಡ ಕಾಯ್ಕಿಣಿ, ‘ನಿಮ್ಮ ಮಾಲಿಕನಿಗೆ ಲಾಭ ಬೇಕಿದ್ದರೆ, ಬೆಂಗಳೂರು ನಗರದಲ್ಲಿ ವೈನ್ ಶಾಪ್ ತೆರಯಲಿಕ್ಕೆ ಹೇಳು,’ ಎನ್ನುತ್ತಾ ಆದಿನ ಕುರ್ಚಿಯಿಂದ ಎದ್ದು ಬಂದರು.

ವರ್ತಮಾನದ ಪತ್ರಿಕೋದ್ಯಮ ಯಾವ ಹಂತ ತಲುಪಿದೆ ಎಂಬುವುದರ ಬಗ್ಗೆ ನಿಮಗೆ ಆಸಕ್ತಿ ಇದ್ದರೆ, ಒಮ್ಮೆ ನೀವು ಬೆಂಗಳೂರಿನ ಮಹಾನಗರ ಪಾಲಿಕೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಕಚೇರಿಗೆ ಬೇಟಿ ಕೊಡುವುದು ಒಳಿತು. ಬೆಂಗಳೂರು ನಗರವೊಂದರಲ್ಲೇ ಇನ್ನೂರಕ್ಕೂ ಹೆಚ್ಚು ವಾರಪತ್ರಿಕೆಗಳಿವೆ. ಪ್ರತಿ ಕೌನ್ಸಿಲರ್‌ಗೆ ಬಕೆಟ್ ಹಿಡಿಯಲು ಎರಡೆರಡು ಪತ್ರಿಕೆಗಳಿವೆ. ನನ್ನ ಮಿತ್ರ ಡಾ. ಕೆ. ಪುಟ್ಟಸ್ವಾಮಿ ಅಲ್ಲಿ ಅಧಿಕಾರಿಯಾಗಿದ್ದಾಗ‍ ಬೇಟಿ ಮಾಡಲು ಹೋಗಿದ್ದ ನನಗೆ ಈ ಸಂಗತಿ ತಿಳಿಯಿತು. ಸಂಪಾದಕರು ಎನಿಸಿಕೊಂಡ ಆ ಮಹಾಶಯರ ಗತ್ತು, ದೌಲತ್ತು ಇವುಗಳನ್ನ ನೋಡುವುದೇ ಚೆಂದ. ಇನ್ನು ನಾಲ್ಕು ವರ್ಷ ನನ್ನ ಮಿತ್ರ ಅಲ್ಲೇ ಇದ್ದಿದ್ದರೆ, ಆತ ಸಂತನಾಗುವ ಅವಕಾಶವಿತ್ತು. ಏಕೆಂದರೆ, ಆ ರೋಲ್ ಕಾಲ್ ಗಿರಾಕಿಗಳಿಗೆ ಪುಟ್ಟಸ್ವಾಮಿ ತಾಳ್ಮೆಯಿಂದ ಉತ್ತರಿಸುತಿದ್ದ ರೀತಿ ನೋಡಿ ನಾನೇ ಬೆರಗಾಗಿದ್ದೀನಿ. ನಾನು ಮಿತ್ರನ ಆ ಸ್ಥಾನದಲ್ಲಿದ್ದಿದ್ದರೆ ಕಚೇರಿಯಲ್ಲಿ ನಾಲ್ಕು ಹೆಣ ಬಿದ್ದು, ಇಷ್ಟರಲ್ಲಿ ನಾನು ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯಬೇಕಿತ್ತು.

ಇದು ಕೇವಲ ಮುದ್ರಣ ಮಾದ್ಯಮದ ಅವತಾರವಷ್ಟೇ ಅಲ್ಲ, ಇವರನ್ನೂ ಮೀರಿಸುವ ಹಲಾಲುಕೋರರು ನಮ್ಮ ದೃಶ್ಯ ಮಾಧ್ಯದಲ್ಲೂ ಕೂಡ ಇದ್ದಾರೆ. ಕಳೆದ ವರ್ಷ ಬೆಳಗಾವಿ ನಗರದಲ್ಲಿ 45 ವರ್ಷದ ಮಕ್ಕಳಿಲ್ಲದ ವಿಧವೆಯೊಬ್ಬಳು ನೆರೆ ಮನೆಯ ಹನ್ನೊಂದು ವರ್ಷದ ಗಂಡು ಮಗುವನ್ನು ಮುದ್ದಿಸಿದ ಏಕೈಕ ಕಾರಣಕ್ಕಾಗಿ, “ಆಂಟಿ ಬಲು ತುಂಟಿ” ಎಂಬ ಹೆಸರಿನಲ್ಲಿ ಸುದ್ದಿ ಚಾನಲ್ ಒಂದು ವಿಧವೆಯೊಬ್ಬಳು ಲೈಂಗಿಕ ತೃಷೆಗಾಗಿ ಬಾಲಕನೊಬ್ಬನನ್ನು ಬಳಸಿಕೊಂಡಳು ಎಂಬಂತೆ ಇಡೀ ದಿನ ಸುದ್ದಿ ಪ್ರಸಾರ ಮಾಡಿತು. ಹನ್ನೊಂದು ವರ್ಷದ ಮಗುವಿಗೆ ಲೈಂಗಿಕ ವಿಷಯಗಳ ಬಗ್ಗೆ ಅರಿವು ಇರುವುದಿಲ್ಲ ಎಂಬ ಕನಿಷ್ಟ ತಿಳುವಳಿಕೆ ಈ ಅಯೋಗ್ಯರಿಗೆ ಬೇಡವೇ? ಆ ಹೆಣ್ಣು ಮಗಳ ಖಾಸಗಿ ಬದುಕು ಏನಾಗಿರಬೇಡ, ನೀವೆ ಯೋಚಿಸಿ?

ಮಾಧ್ಯಮದ ಮೇಲೆ, ಇದರ ಭಾಗವಾಗಿರುವ ನಮ್ಮಗಳ ಮೇಲೆ ಯಾವುದೇ ಹಿಡಿತವಿಲ್ಲದೇ ಇರುವುದು ಇಂತಹ ದುರಂತಗಳಿಗೆ ಕಾರಣವಾಗಿದೆ. ನೈತಿಕತೆಯನ್ನ, ಪ್ರಾಮಾಣಿಕತೆಯನ್ನ ಸಮಾಜಕ್ಕೆ ಬೋಧಿಸುವ ಮೊದಲು ನಾವು ಇವುಗಳನ್ನು ಅಳವಡಿಸಿಕೊಳ್ಳಬೇಕಿದೆ. ಮಿತ್ರರೆ, ಮೂರು ದಶಕಗಳಿಂದ ಈ ವೃತ್ತಿಯಲ್ಲಿರುವ ನಾನು ಮಾಧ್ಯಮದ ಸಹದ್ಯೋಗಿಗಳ ಬಗ್ಗೆ ಪ್ರೀತಿಯನ್ನಾಗಲಿ, ದ್ವೇಷವನ್ನಾಗಲಿ ಇಟ್ಟುಕೊಂಡವನಲ್ಲ. ಅಂದ ಮಾತ್ರಕ್ಕೆ ಕಣ್ಣೆದುರುಗಿನ ವಂಚನೆಗಳನ್ನು ಮುಚ್ಚಿಟ್ಟುಕೊಂಡವನೂ ಅಲ್ಲ. ಇದ್ದದನ್ನು ಇದ್ದ ಹಾಗೆ, ಎದೆಗೆ ಒದ್ದ ಹಾಗೆ ಹೇಳುವುದು ನನ್ನ ಮಂಡ್ಯದ ಮಣ್ಣಿನ ಗುಣ. ಅದರ ಭಾಗವಾಗಿರುವ ನಾನು ನನಗೆ ಅನಿಸದ್ದನ್ನು ಇಲ್ಲಿ ನಿಮ್ಮೆದುರು ಹಂಚಿಕೊಂಡಿದ್ದೇನೆ. ಯಾರಿಗಾದರೂ ನೋವಾಗಿದ್ದರೆ, ಕ್ಷಮೆ ಇರಲಿ.

8 thoughts on “ಮಾಧ್ಯಮಗಳು ಮತ್ತು ಅವತಾರಗಳು

  1. anand prasad

    ಮಾಧ್ಯಮ ಕ್ಷೇತ್ರದ ಅಧಃ ಪತನ ಜಾಗತೀಕರಣ ಹಾಗೂ ಖಾಸಗೀಕರಣದ ನಂತರ ತೀವ್ರವಾಗಿದೆ. ಬಂಡವಾಳಶಾಹಿಗಳು ಹಾಗೂ ಕೋಮುವಾದಿಗಳು ಸೇರಿಕೊಂಡು ತಮಗೆ ಬೇಕಾದ ಸರಕಾರವನ್ನು ತರಲು ನಗರಗಳ ಬೂರ್ಜ್ವಾ ಮಧ್ಯಮ ವರ್ಗದ ಅಭಿಪ್ರಾಯವನ್ನೇ ಇಡೀ ದೇಶದ ಜನರ ಅಭಿಪ್ರಾಯ ಎಂಬ ಹೆಸರಿನಲ್ಲಿ ಪ್ರಕಟಿಸಿ ಜನರ ದಾರಿ ತಪ್ಪಿಸಲು ಪ್ರಯತ್ನಿಸುವುದು ಹೆಚ್ಚಾಗುತ್ತಿದೆ. ಇದರ ಪರಿಣಾಮವಾಗಿ ಕೋಮು ಹಿಂಸಾಚಾರಗಳಿಗೆ ಕುಮ್ಮಕ್ಕು ಕೊಟ್ಟು ರಕ್ತ ಮೈಗೆ ಅಂಟಿಸಿಕೊಂಡ ರಾಜಕಾರಣಿಗಳು ದೇಶದ ಪ್ರಧಾನಿ ಹುದ್ಧೆಗೆ ಅರ್ಹ ಎಂಬ ಸಮೀಕ್ಷೆಗಳು ಹೊರಬೀಳುತ್ತವೆ. ಆದರೆ ಇಂಥ ಬೂರ್ಜ್ವಾ ಸಮೀಕ್ಷೆಗಳು ಯಶಸ್ವಿಯಾಗುತ್ತವೆ ಎಂದು ಹೇಳಲಾಗದು. ಹಿಂದೆ ದೇಶದ ನಂಬರ್ ಒಂದು ಮುಖ್ಯಮಂತ್ರಿ ಎಂದು ಎಸ್. ಎಂ. ಕೃಷ್ಣರನ್ನು ಇಂಥ ಹುಸಿ ಸಮೀಕ್ಷೆಗಳು ಎತ್ತಿ ಹಿಡಿದರೂ ಚುನಾವಣೆಗಳಲ್ಲಿ ಅದು ಯಶಸ್ವಿಯಾಗಲಿಲ್ಲ. ಬಂಡವಾಳಶಾಹಿಗಳಿಗೆ ತಮ್ಮ ಅಜೆಂಡಾವನ್ನು ತೀವ್ರತರವಾಗಿ ಜಾರಿಗೆ ತರುವ ಜನ ಬೇಕಾಗಿದ್ದಾರೆ, ಅವರು ಕೋಮುವಾದದ ವಿಷ ಕಾರುವವರಾದರೂ ಅಡ್ಡಿ ಇಲ್ಲ. ಟಿವಿ ವಾಹಿನಿಗಳು ಎಂದೂ ಮುಗಿಯದ ಅಸಂಬದ್ಧ ಧಾರಾವಾಹಿಗಳನ್ನು ಪ್ರಸಾರ ಮಾಡುವುದನ್ನೇ ಪ್ರಧಾನ ಕಾಯಕವನ್ನಾಗಿ ಮಾಡಿಕೊಂಡಿವೆ. ಮಾಧ್ಯಮಗಳು ಜನಜಾಗೃತಿಗೆ ಇಂದು ಬಳಕೆಯಾಗುವುದು ಬಹಳ ಕಡಿಮೆ. ಮನರಂಜನೆ ಮಾತ್ರ ಟಿವಿ ವಾಹಿನಿಗಳ ಪ್ರಧಾನ ಗುರಿಯಾಗಿದೆ. ಜಾಗತೀಕರಣ ಹಾಗೂ ಖಾಸಗೀಕರಣದ ನಂತರ ಮಾಧ್ಯಮಗಳು ಹೆಚ್ಚು ಹೆಚ್ಚು ಪ್ರತಿಗಾಮಿಯಾಗಿ ಬದಲಾಗಿವೆ. ಇದನ್ನೆಲ್ಲಾ ಕಂಡಾಗ ಓರ್ವ ನಿಜವಾದ ಪತ್ರಕರ್ತನಿಗೆ ಸಿಟ್ಟು, ಅಸಹಾಯಕತೆ, ಆಕ್ರೋಶ ಉಂಟಾಗದಿದ್ದರೆ ಆತ ಪತ್ರಕರ್ತ ಎಂದು ಹೇಳಲು ಯೋಗ್ಯನಲ್ಲ.

    Reply
  2. kariyappa

    Super. I wish this straight forward write-up brings the light of change at least in hearts of a few journalists.

    Reply
  3. ಅನಾಮಿಕ

    ಲೇಖನ ತುಂಬಾ ಸೊಗಸಾಗಿದೆ. ಕನಾ೵ಟಕದ ಸಮೂಹ ಮಾಧ್ಯಮದಲ್ಲಿ(ಪತ್ರಿಕೆಗಳು ಮತ್ತು ವಿದ್ಯುನ್ಮಾನ ಮಾಧ್ಯಮ) ದುಡಿಯುತ್ತಿರುವ ಪತ್ರಕತ೵ರದಲ್ಲಿ ಶೇ. 90ರಷ್ಟು ಪತ್ರಕತ೵ರು ಕಡುಭ್ರಷ್ಟರು ಎಂಬುವುದರಲ್ಲಿ ಅನುಮಾನವಿಲ್ಲ. ಉಳಿದ ಶೇ. 10ರಷ್ಟು ಮಂದಿ ಪ್ರಾಮಾಣಿಕರಾಗಿ ದುಡಿಯುತ್ತಿದ್ದಾರೆ. ಆದರೆ, ಭ್ರಷ್ಟತೆಯ ಕಬಂಧಬಾಹುವಿಗೆ ಪ್ರಾಮಾಣಿಕರು ಸಿಲುವುದರಲ್ಲಿ ಅನುಮಾನವಿಲ್ಲ. ದುರಂತವೆಂದರೆ ಕಚೇರಿಗಳಲ್ಲಿ ಪ್ರಾಮಾಣಿಕ ಪತ್ರಕತ೵ರಿಗೆ ಬೆಲೆಯೂ ಇಲ್ಲ ಕಣ್ರೀ… ಪತ್ರಕತ೵ರು ಅಕ್ಷರ ಹಾದರಬಿಟ್ಟು ಪ್ರಾಮಾಣಿಕವಾದ ವೃತ್ತಿಪರತೆ ಮೆರೆಯುವ ಗುಣ ಬೆಳೆಸಿಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಲೇಖನದ ಆಶಯ ಈಡೇರಲಿ.

    Reply
  4. ರಾಕೇಶ್ ಶೆಟ್ಟಿ

    ಖಂಡಿತವಾದಿ ಲೋಕ ವಿರೋಧಿ ಅನ್ನೋ ಮಾತಿದೆ ನೋಡಿ.ಹಾಗಾಗಿ ಸತ್ಯ ಹೇಳುವವರಿಗೆ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಜಾಗ ಸಿಗಲಾರದು.ಹಾಗಂತ ನಾವು ಹತಾಶರಾಗದೆ ವರ್ತಮಾನ,ನಿಲುಮೆ ಹಾಗು ಇನ್ನು ಅನೇಕ ಸಮೂಹ ಬ್ಲಾಗುಗಳ ಮೂಲಕ ಈ ದನಿಯನ್ನು ನಿರಂತರವಾಗಿಸೋಣ.

    ಲೇಖನ ಓದುತ್ತ ಸಿಟ್ಟು,ಹತಾಶೆ,ನೋವು ಎಲ್ಲವನ್ನು ಅನುಭವಿಸಿದೆ.ನಿಮ್ಮಂತ ಪತ್ರಕರ್ತರು ಈಗಲೂ ಉಳಿದಿರುವುದೇ ನಮ್ಮಂತವರಿಗೊಂದು Ray of Hopeನಂತೆ. ನಿಮ್ಮ ಬರವಣಿಗೆ ನಿರಂತರವಾಗಲಿ.

    Reply
  5. prasad raxidi

    ಜಗದೀಶ್ ಒಳ್ಳೆಯ ಲೇಖನ ನನ್ನದು ಸಂಪೂರ್ಣ ಸಹಮತ, ಜೊತೆಗೆ ಒಂದು ಸಣ್ಣ ತಿದ್ದುಪಡಿ -ಅಥವಾ ಅಭಿಪ್ರಾಯ ಅಂದುಕೊಳ್ಳಿ,ನಿಮ್ಮ ಈ ಮಾತುಗಳನ್ನು ಎಲ್ಲ ವಲಯಕ್ಕೂ ಅನ್ವಯಿಸ ಬೇಕು– ( “ನನ್ನ ಪ್ರಶ್ನೆ ಇಷ್ಟೆ; ವ್ಯವಹಾರದ ಜೊತೆ ಜೊತೆಗೆ ನೈತಿಕತೆ ಇಲ್ಲದಿದ್ದರೆ ಹೇಗೆ? ನಿಮಗೆ ಲಾಭ ಮಾಡುವ ದೃಷ್ಟಿಕೋನವಿದ್ದರೆ, ಈ ವಲಯಕ್ಕೆ ಏಕೆ ಬರುತ್ತೀರಿ? ಬೇರೆ ವ್ಯಾಪಾರ ಮಾಡಿ.”)
    ಯಾಕೆಂದರೆ ನೈತಿಕತೆಯಲ್ಲದ ಲಾಭಕೋರತನದಿಂದಲೇ ನಮ್ಮ ಎಲ್ಲ ವಲಯಗಳು ಕೆಡುತ್ತಾ ಹೋಗಿರುವುದು,ಅದರ ೊಂದು ಭಾಗವಾಗಿಯೇ ಮಾದ್ಯಮಗಳು ಕೆಟ್ಟಿವೆ. ಮಾಧ್ಯಮಗಳು ಕೆಟ್ಟು ಹೋಗಿರುವದರ ಪರಿಣಾಮ ನಮಗೆ ಬೇಗ ತಟ್ಟುತ್ತದೆ. ಮತ್ತು ನಮ್ಮ ವಿರೋಧದ ನೆಲೆ ಮತ್ತು ಮಾರ್ಗಗಳು ಕೂಡಾ ಗೊಂದಲಮಯವಾಗುತ್ತದೆ. ಅದಕ್ಕಾಗಿಯೇ ಗಾಂಧಿ ಮತ್ತೆ ಮತ್ತೆ ನಮ್ಮನ್ನು ಕಾಡುವುದು.. ಗುರಿ ಮತ್ತು ಮಾರ್ಗ ಎರಡೂ ಶುದ್ಧವಾಗಿರಬೇಕೆಂದು, ಮೊಟ್ಟಮೊದಲನೆಯದಾಗಿ ಹಣಗಳಿಕೆಯ ಮಾರ್ಗ ನೈತಿಕವಾಗದಿದ್ದರೆ ಬೇರೆಲ್ಲ ವಲಯಗಳೂ ನೈತಿಕವಾಗಲಾರವು. -ಧನ್ಯವಾದಗಳು -ಪ್ರಸಾದ್

    Reply
    1. jagadishkoppa

      ಪ್ರಿಯ ಪ್ರಸಾದ್ ಮತ್ತು ರಾಕೇಶ್ ಶೆಟ್ಟಿಯವರಿಗೆ ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಭಾರತದ ನೆಲದಲ್ಲಿ ಗಾಂಧಿ ಮತ್ತು ಕುವೆಂಪು ಅವರ ವಿಚಾರಧಾರೆಗಳಿಂದ ಪ್ರಭಾವಿತನಾಗಿ ನಾನು ಬೆಳೆದವನು. ನನ್ನ ಬದುಕಿನ ಪ್ರತಿಯೊಂದು ಹಂತಗಳಲ್ಲಿ ಇವು ನನ್ನ ಕೈ ಹಿಡಿದು ನಡೆಸಿವೆ. ನಿಮ್ಮಂತಹ ಸಮಾನ ಮನಸ್ಕರ ಧ್ವನಿ ನನ್ನಂತವರ ಈ ವೃತ್ತಿಯನ್ನು ಶುದ್ಧಗೊಳಿಸಬಹುದೆಂದು ನಾನು ನಂಬಿದ್ದೀನಿ.

      Reply

Leave a Reply

Your email address will not be published. Required fields are marked *