Daily Archives: July 19, 2012

ಈ ಅನೈತಿಕ ಕಾರ್ಯಕ್ರಮವನ್ನು ಪ್ರಾಯೋಜಿಸಿದವರು, ಮಾಧ್ಯಮ-ವೃಂದ!

– ಡಾ. ಅಶೋಕ್. ಕೆ.ಆರ್.

ಅದು 1993ರ ಇಸವಿ. ಧೀರ್ಘಕಾಲೀನ ಬರ ಮತ್ತು ಅಂತರ್ಯುದ್ಧದಿಂದ ಸೂಡಾನ್ ದೇಶ ಬಸವಳಿದಿತ್ತು. ಯುಎನ್ ನ ವತಿಯಿಂದ ಕೆವಿನ್ ಕಾರ್ಟರ್ ಎಂಬ ಛಾಯಾವರದಿಗಾರ ಸೂಡಾನ್ ದೇಶದಲ್ಲಿ ಸಂಚರಿಸುತ್ತಿದ್ದ. ಅಲ್ಲಿ ಆತ ತೆಗೆದ ಒಂದು ಚಿತ್ರಕ್ಕೆ 1994ರಲ್ಲಿ ಪ್ರತಿಷ್ಠಿತ ಪುಲಿಟ್ಜಿರ್ ಪ್ರಶಸ್ತಿ ಲಭಿಸಿತು. ಬರಪೀಡಿತ ಪ್ರದೇಶದ ಅಪೌಷ್ಟಿಕ ಮಗುವೊಂದು ಆಯಾಸದಿಂದ ತಲೆತಗ್ಗಿಸಿ ಕುಳಿತಿದೆ, ಹಿನ್ನೆಲೆಯಲ್ಲಿ ಆ ಮಗುವಿನ ಸಾವಿಗೆ ಕಾದಿರುವಂತೆ ರಣಹದ್ದೊಂದು ಕುಳಿತಿರುವ ಚಿತ್ರವದು. ಚಿತ್ರ ತೆಗೆದ ಕೆವಿನ್ ಕಾರ್ಟರ್ ಆ ರಣಹದ್ದನ್ನು ಓಡಿಸಿ ಮಗುವಿನ ಬಗ್ಗೆ ಇನ್ನೇನೂ ಗಮನವೀಯದೆ ಆ ಸ್ಥಳದಿಂದ ತೆರಳಿಬಿಡುತ್ತಾನೆ. ಆ ದೇಶದ ಬಹಳಷ್ಟು ಮಕ್ಕಳು ನಾನಾ ಖಾಯಿಲೆಗಳಿಂದ ಬಳಲುತ್ತಿರುವ ಕಾರಣ ಯಾರನ್ನೂ ಮುಟ್ಟಿಸಿಕೊಳ್ಳಬಾರದೆಂದು ಯು.ಎನ್. ಸಲಹೆ ಕೊಟ್ಟಿರುತ್ತದೆ. ಕಾರಣವೇನೇ ಇರಲಿ ಕೆವಿನ್ ಕಾರ್ಟರನ ವರ್ತನೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೊಳಪಡುತ್ತದೆ. ಸೂಡಾನ್ ದೇಶದ ದುಃಸ್ಥಿತಿಯನ್ನು ಪ್ರಪಂಚಕ್ಕೆ ಪರಿಚಯಿಸಿದ್ದಕ್ಕೆ ಹೊಗಳಿಕೆ ಸಲ್ಲುವುದರ ಜೊತೆಗೆ ಚಿತ್ರ ತೆಗೆದು ಹೊರಟುಹೋದವನ ಅಮಾನವೀಯತೆಯನ್ನು ಕಟುವಾಗಿ ಖಂಡಿಸಲಾಗುತ್ತದೆ. ಸೂಡಾನಿನ ಬರ ಪರಿಸ್ಥಿತಿ, ಬಡತನ, ತೆಗೆದ ಚಿತ್ರದ ಪ್ರಭಾವ, ವೈಯಕ್ತಿಕ ಜೀವನದ ಸಂಘರ್ಷಗಳು ಎಲ್ಲವೂ ಕೆವಿನ್ ಕಾರ್ಟರನನ್ನು ಮಾನಸಿಕವಾಗಿ ಘಾಸಿಗೊಳಿಸಿ ಪುಲಿಟ್ಜಿರ್ ಪ್ರಶಸ್ತಿ ಪಡೆದ ಕೆಲವೇ ದಿನಗಳಲ್ಲಿ ಆತ್ಮಹತ್ಯೆಗೆ ಶರಣಾಗುವಂತೆ ಮಾಡುತ್ತದೆ.

ಇಸವಿ 2012. ಅಸ್ಸಾಮಿನ ಗುವಾಹಟಿ ನಗರದಲ್ಲಿ 20ರ ಹರೆಯದ ಯುವತಿಯೊಬ್ಬಳ ಮೇಲೆ ಇಪ್ಪತ್ತಕ್ಕೂ ಹೆಚ್ಚು ಯುವಕರು ಸಾರ್ವಜನಿಕ ಪ್ರದೇಶದಲ್ಲಿ ಮಾನಭಂಗಕ್ಕೆ ಯತ್ನಿಸುತ್ತಾರೆ. ಅದೇ ಸಮಯಕ್ಕೆ ಆ ಜಾಗಕ್ಕೆ ಬಂದ ನ್ಯೂಸ್ ಲೈವ್ ವಾಹಿನಿಯ ವರದಿಗಾರ ಗೌರವ್ ಜ್ಯೋತಿ ನಿಯೋಗ್ ತನ್ನ ಮೊಬೈಲಿನಲ್ಲಿ ಆ ದೃಶ್ಯವನ್ನು ಸೆರೆಹಿಡಿಯುತ್ತಾನೆ. ಆ ವಿಡಿಯೋ ವಾಹಿನಿಗಳಲ್ಲಿ ದಿನವಹೀ ಪ್ರಸಾರವಾಗುತ್ತದೆ, ಯುಟ್ಯೂಬಿಗೂ ಅಪ್ ಲೋಡ್ ಮಾಡಲಾಗುತ್ತದೆ. ಯುವತಿಯ ಮುಖವನ್ನು ಮರೆಮಾಚಬೇಕೆಂಬ ನೈತಿಕ ಪ್ರಜ್ಞೆಯೂ ವಾಹಿನಿಗಳಿಗಿರಲಿಲ್ಲ. ಇದಿಷ್ಟೇ ಆಗಿದ್ದರೆ ಈ ಲೇಖನ ಬರೆಯುವ ಅಗತ್ಯವಿರಲಿಲ್ಲವೇನೋ. ನಂತರದ ಬೆಳವಣಿಗೆಯಲ್ಲಿ ಮಾನಭಂಗಕ್ಕೆ ಪ್ರಯತ್ನಿಸಿದ ಯುವಕರಲ್ಲಿ ಕೆಲವರು ವರದಿಗಾರನ ಸ್ನೇಹಿತರೆಂದು, ಆ ವರದಿಗಾರನ ಕುಮ್ಮಕ್ಕಿನಿಂದಲೇ ಈ ಪ್ರಕರಣ ನಡೆಯಿತೆಂದು ದೂಷಿಸಲಾಗಿದೆ. ವರದಿಗಾರ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದಾನೆ. ನ್ಯೂಸ್ ಲೈವ್ ವಾಹಿನಿಯ ಪ್ರಧಾನ ಸಂಪಾದಕ ಅತನು ಭೂಯಾನ್ ಕೂಡ ರಾಜೀನಾಮೆ ಕೊಟ್ಟಿದ್ದಾನೆ. ರಾಜಕೀಯದಿಂದ ಈ ಪ್ರಕರಣವೂ ಮುಕ್ತವಾಗಿಲ್ಲ. ಅಸ್ಸಾಂನ ಮುಖ್ಯಮಂತ್ರಿ ತರುಣ್ ಗೊಗೊಯ್ ನ ಅಪಮಾನಕ್ಕೀಡು ಮಾಡಲೆಂದೇ ನ್ಯೂಸ್ ಲೈವ್ ವಾಹಿನಿಯವರು ಈ ವಿಡಿಯೋವನ್ನು ಸೃಷ್ಟಿಸಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ. ಈ ಆರೋಪ ಮಾಡುವವರ ಮುಖ್ಯ ವಾದವೆಂದರೆ ನ್ಯೂಸ್ ಲೈವ್ ವಾಹಿನಿಯ ಒಡತಿ ರಿಂಕಿ ಭೂಯಾನ್ ಶರ್ಮ ಅಸ್ಸಾಂ ರಾಜ್ಯದ ಆರೋಗ್ಯ ಮಂತ್ರಿ ಹಿಮಂತ ಬಿಸ್ವಾ ಶರ್ಮರ ಪತ್ನಿ! ಆರೋಗ್ಯ ಮಂತ್ರಿ ಮತ್ತು ಮುಖ್ಯಮಂತ್ರಿಯ ನಡುವೆ ಶೀತಲ ಸಮರ ಜಾರಿಯಲ್ಲಿದೆ!!

ಗುವಾಹಟಿಯಲ್ಲಿ ನಡೆದ ಈ ದುಷ್ಕೃತ್ಯದ ಹಿಂದಿರಬಹುದಾದ ಈ ಒಳಸಂಚುಗಳಲ್ಲಿ ಯಾವುದೊಂದು ನಿಜವಾದರೂ ಮಸಿ ಬಳಿಸಿಕೊಂಡಿದ್ದು ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಭವಾದ ಪತ್ರಿಕೋದ್ಯಮ; ಅದರಲ್ಲೂ ದೃಶ್ಯವಾಹಿನಿಗಳು. ಟಿ.ಆರ್.ಪಿ. ಹೆಚ್ಚಿಸಿಕೊಳ್ಳುವ ಭರದಲ್ಲಿ ಸುದ್ದಿಯನ್ನು ತಿರುಚುವುದಕ್ಕಷ್ಟೇ ಇವರ ಅನೈತಿಕತೆ ಸೀಮಿತವಾಗದೆ ಸುದ್ದಿಯನ್ನು ಸೃಷ್ಟಿಸಲೂ ಪ್ರಾರಂಭಿಸಿದ್ದಾರೆ. ಇನ್ನು ರಾಜಕೀಯ ಪಕ್ಷಗಳ, ಉದ್ದಿಮೆದಾರರ ಕೈಗೊಂಬೆಯಾಗಿ ಅವರ ಅನುಕೂಲಕ್ಕೆ ತಕ್ಕಂತೆ ಸುದ್ದಿ ಬಿತ್ತರಿಸುತ್ತ ‘ನ್ಯೂಸ್’ ಎಂಬ ಪದದ ಅರ್ಥವನ್ನೇ ‘ಬ್ರೇಕ್’ ಮಾಡಲಾರಂಭಿಸಿದ್ದಾರೆ. ಮಾಧ್ಯಮ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಬೇಕೆಂಬ ಕ್ಷೀಣ ಧ್ವನಿ ಮಾಧ್ಯಮದವರದೇ ತಪ್ಪುಗಳಿಂದ ಬಲಗೊಂಡರೆ ಅಚ್ಚರಿಯಿಲ್ಲ.

ಪತ್ರಕರ್ತ ಅಥವಾ ವರದಿಗಾರ ತಾನು ನೋಡುವ, ವರದಿ ಮಾಡುವ ಪ್ರತಿಯೊಂದು ಘಟನೆಯ ಬಗ್ಗೆಯೂ ಸ್ಪಂದಿಸುವುದು ಸಾಧ್ಯವೂ ಇಲ್ಲ, ವೃತ್ತಿಧರ್ಮವೂ ಅಲ್ಲ. ಪ್ರವಾಹ ಪೀಡಿತ ಪ್ರದೇಶದ ವರದಿಗೆ ತೆರಳಿದ ಪತ್ರಕರ್ತ ಫೋಟೋ ತೆಗೆದು ವರದಿ ಮಾಡುವುದರ ಜೊತೆಗೆ ಪ್ರತಿ ಮನೆಗೂ ವೈಯಕ್ತಿಕ ಸಹಾಯವನ್ನೂ ಮಾಡಬೇಕೆಂದು ಅಪೇಕ್ಷಿಸುವುದು ಉತ್ಪ್ರೇಕ್ಷೆಯ ಮಾತಾದೀತು. ಅಂಥ ಸನ್ನಿವೇಶಗಳಲ್ಲಿ ಪತ್ರಕರ್ತನ ಆದ್ಯ ಕರ್ತವ್ಯ ಅಲ್ಲಿನ ಪರಿಸ್ಥಿತಿಯನ್ನು ಜನಸಮುದಾಯದ ಮನಕ್ಕೆ ತಲುಪುವಂತೆ ಮಾಡುವುದು. ನೊಂದ ಜನರಿಗೆ ಜನಸಮುದಾಯದ ಸಹಾಯಹಸ್ತ ದೊರಕುವಂತೆ ಮಾಡುವುದು. ಒಂದು ಹುಡುಗಿಯ ಮೇಲೆ ಇಪ್ಪತ್ತು ಮೂವತ್ತು ಜನರಿಂದ ಮಾನಭಂಗ ಯತ್ನವಾಗುತ್ತಿದ್ದಾಗ ಅವರನ್ನು ತಡೆಯಲು ಹೋಗಿ ತನ್ನ ಪ್ರಾಣಕ್ಕೇ ಸಂಚಕಾರ ತೆಗೆದುಕೊಳ್ಳುವುದು ಪತ್ರಕರ್ತನ ಕರ್ತವ್ಯವಾಗಲಾರದು. ಹೆಚ್ಚೆಂದರೆ ಪೋಲೀಸರಿಗೆ ತಿಳಿಸಿ ಅಪರಾಧಿಗಳನ್ನು ಗುರುತಿಸಲು ಸಾಧ್ಯವಾಗುವಂತೆ ವಿಡಿಯೋ ಮಾಡಬಹುದಷ್ಟೇ. ಆದರೆ ಘಟನೆಗೆ ಪತ್ರಕರ್ತನೇ ಕುಮ್ಮಕ್ಕು ನೀಡಿ ಕಾರಣಕರ್ತನಾಗಿಬಿಟ್ಟರೆ? ಪತ್ರಿಕಾ ಧರ್ಮದ ಗತಿ?

ಇದು ಎಲ್ಲೋ ದೂರದ ಗುವಾಹಟಿಯಲ್ಲಾದ ಘಟನೆ ಎಂದು ನಾವು ಉದಾಸೀನ ಮನೋಭಾವ ತಾಳುವಂತಿಲ್ಲ. ನಮ್ಮ ಕನ್ನಡ ವಾಹಿನಿಗಳನ್ನು ವೀಕ್ಷಿಸಿದಾಗಲೂ ಇಂಥ ‘ಸುದ್ದಿ ನಿರ್ಮಾಣ’ ಮಾಡುವವರ ದೊಡ್ಡ ಪಡೆಯನ್ನೇ ಕಾಣಬಹುದು. ‘ಅಯೋಗ್ಯ ಗಂಡನಿಗೆ ಗೂಸಾ’, ‘ಒದೆ ತಿಂದ ಆಂಟಿ’, ‘ಕಳ್ಳನಿಗೆ ಧರ್ಮದೇಟು’, ‘ಕೈಕೊಟ್ಟ ಪ್ರಿಯಕರನಿಗೆ ಸಖತ್ತಾಗಿ ಬಿತ್ತು’, ’ಆಂಟಿ ಬಲು ತುಂಟಿ’ – ಈ ರೀತಿಯ ಎಷ್ಟೋ ವರದಿಗಳನ್ನು ನೋಡಿದಾಗ ಆ ವರದಿಗಾರ ಮತ್ತವರ ವಾಹಿನಿಯ ನೈತಿಕತೆಯ ಬಗ್ಗೆ ಪ್ರಶ್ನೆ ಮೂಡದೇ ಇರದು. ವಾಹಿನಿಗಳವರು ಬರುವವರೆಗೂ ಕಾಯುತ್ತ ಕುಳಿತು ನಂತರ ಹೊಡೆದು ಬಡಿಯುವ ನಟನೆ ಮಾಡುವಂತೆ ಕಾಣುವ ಇಂಥ ವರದಿಗಳಲ್ಲಿ ಪತ್ರಕರ್ತರ ಪಾಲೆಷ್ಟು? ಜನರ ಪಾಲೆಷ್ಟು? ವಾಹಿನಿಯ ಪಾತ್ರವೆಷ್ಟು? ನೈಜ ಸುದ್ದಿಯ ಪಾಲೆಷ್ಟು? ಈಗ ಮತ್ತೊಮ್ಮೆ ಈ ಲೇಖನದ ಮೊದಲಲ್ಲಿ ಬರೆದ ಕೆವಿನ್ ಕಾರ್ಟರನ ಬಗ್ಗೆ ಓದಿ. ಅಂದಿನ ಪತ್ರಿಕೋದ್ಯಮಕ್ಕೂ ಇಂದಿನದಕ್ಕೂ ವ್ಯತ್ಯಾಸಗಳು ಗೋಚರಿಸುತ್ತದೆಯಲ್ಲವೇ? ಸುದ್ದಿಯ ಸೃಷ್ಟಿಕರ್ತರು ಅಂದೂ ಇದ್ದರು, ಇಂದೂ ಇದ್ದಾರೆ, ಮುಂದೆಯೂ ಇರುತ್ತಾರೆ. ಅಂಥ ಸೃಷ್ಟಿಕರ್ತರ ಸಂಖ್ಯೆ ಕಡಿಮೆಯಾಗದೆ ಹೆಚ್ಚಾಗುತ್ತಿರುವುದು ಇಂದಿನ ಪತ್ರಿಕೋದ್ಯಮದ ದುರಂತ.