Daily Archives: July 20, 2012

ಮಹಿಳಾ ಪ್ರಾತಿನಿಧ್ಯವೆಂಬ ಪ್ರಹಸನ

– ಡಾ. ಎಚ್.ಎಸ್.ಅನುಪಮಾ

ಆರೂವರೆ ಕೋಟಿ ಜನಸಂಖ್ಯೆಯ ಕರ್ನಾಟಕ, ಕಳೆದ ನಾಲ್ಕು ವರ್ಷಗಳಲ್ಲಿ ಮೂರನೆಯ ಬಾರಿಗೆ ಹೊಸ ಸರ್ಕಾರ ಕಂಡು ಸುಭದ್ರವಾಗಿದೆ. “ಸಹಕಾರ” ತತ್ವದಲ್ಲಿ ಬಲವಾದ ನಂಬಿಕೆಯಿಟ್ಟಂತೆ ತೋರುವ ಸರ್ಕಾರವು ಅಧಿಕಾರವನ್ನು ಕೈಯಿಂದ ಕೈಗೆ ಬದಲಿಸಿಕೊಳ್ಳುತ್ತ, ಸರ್ವರನ್ನೂ ತೃಪ್ತಿಪಡಿಸುವುದರಲ್ಲೇ ತೊಡಗಿದೆ. ಜನಪರ ಕಾಳಜಿ, ಸಾಮಾಜಿಕ ಬದ್ಧತೆ, ಕನಿಷ್ಠ ಜವಾಬ್ದಾರಿಯಿಲ್ಲದ ಆಡಳಿತವನ್ನೇ ಈ ದಶಕದುದ್ದಕ್ಕೂ ಕಾಣುತ್ತ ಬಂದಿದ್ದೇವೆ.

ಈ ಬರಹದ ಉದ್ದೇಶ ತಾತ್ವಿಕತೆಯ ತಲೆಬುಡವಿಲ್ಲದ ಆಡಳಿತದ ವಿಮರ್ಶೆಯಲ್ಲ. ಈ ಸಲದ ಸರ್ಕಾರ ರಚನೆಯ ನಂತರ ಎದ್ದು ಕಾಣುವ ಒಂದಂಶದ ಕುರಿತು ಚರ್ಚಿಸಲೇಬೇಕೆನಿಸಿ ಅದನ್ನಿಲ್ಲಿ ಮಂಡಿಸಲಾಗಿದೆ. ಮೂರೂವರೆ ಕೋಟಿ ಮಹಿಳೆಯರಿರುವ ಕರ್ನಾಟಕದಲ್ಲಿ ಮಂತ್ರಿ ಸ್ಥಾನಕ್ಕೆ ಏರಲು ಕೇವಲ ಒಬ್ಬ ಮಹಿಳೆಗೆ ಅವಕಾಶ ದೊರೆಯಿತೆ? ಪ್ರಸ್ತುತ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದಂದಿನಿಂದ ಅದರ ಕಣ್ಣಿಗೆ ಸಮರ್ಥ ಮಹಿಳಾ ನಾಯಕಿಯರೇ ಕಾಣಿಸುತ್ತಿಲ್ಲವೇ? ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಮುಂದುವರೆದ ರಾಜ್ಯ, ಸಿಲಿಕಾನ್ ವ್ಯಾಲಿ, ಪಿಂಚಣಿದಾರರ ಸ್ವರ್ಗ, ಅತಿ ಸುರಕ್ಷಿತ ಸಂಪನ್ಮೂಲಭರಿತ ರಾಜ್ಯ ವಗೈರೆ ವಗೈರೆ ಬಿರುದಾಂಕಿತ ಕರ್ನಾಟಕ ರಾಜ್ಯದ ಮಂತ್ರಿಮಂಡಲದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮೂರನೆಯ ಒಂದು ಭಾಗ ಮಂತ್ರಿಗಳಿರುವುದು ಹೋಗಲಿ, ಆರನೆಯ ಒಂದು ಭಾಗ ಮಹಿಳೆಯರೂ ಕಾಣದಾಗಿದ್ದಾರೆ. ಇದು ಆಧುನಿಕಗೊಳ್ಳುತ್ತಿರುವ ಕರ್ನಾಟಕಕ್ಕೆ, ಇಲ್ಲಿನ ರಾಜಕಾರಣಕ್ಕೆ ಅವಮಾನಕರ ಸಂಗತಿಯಾಗಿದೆ.

ಮಹಿಳಾ ಮೀಸಲಾತಿ ಜಾರಿಗೆ ಬಂದ ಮೇಲೆ ಪ್ರತಿ ಹಳ್ಳಿ, ತಾಲೂಕು, ಜಿಲ್ಲೆಯಲ್ಲಿ ಮಹಿಳಾ ರಾಜಕಾರಣಿಗಳಿದ್ದಾರೆ. ನಮ್ಮ ಜಿಲ್ಲೆ ಉತ್ತರಕನ್ನಡವಂತೂ ಮಹಿಳಾಮಯವಾಗಿದೆ. ರಾಜಕಾರಣಿಗಳಷ್ಟೇ ಅಲ್ಲ, ಆಯಕಟ್ಟಿನ ಜಾಗಗಳಲ್ಲಿರುವ ಅನೇಕ ಅಧಿಕಾರಿಗಳು ಮಹಿಳೆಯರೇ ಆಗಿದ್ದಾರೆ. ಇದು ನಿಜಕ್ಕೂ ಹೆಮ್ಮೆಯ ಸಂಗತಿ. ಆದರೆ ಇಂಥ ಜಿಲ್ಲೆಯಿಂದಲಾಗಲೀ ಅಥವಾ ಇಂಥ ಇತರ ಜಿಲ್ಲೆಗಳಿಂದಾಗಲೀ, ವಿಧಾನಸಭೆ ಮತ್ತು ವಿಧಾನ ಪರಿಷತ್‌ಗೆ ಏಕೆ ಮಹಿಳೆಯರು ಚುನಾಯಿತರಾಗುವಷ್ಟು ಬೆಳೆಯುತ್ತಿಲ್ಲ? ರಾಷ್ಟರೀಯ ಮತ್ತು ಪ್ರಾದೇಶಿಕ ಪಕ್ಷಗಳೆಂಬ ಭೇದಭಾವವಿಲ್ಲದೇ ಎಲ್ಲ ಪಕ್ಷಗಳೂ ಮಹಿಳಾ ರಾಜಕಾರಣಿಗಳನ್ನು ಬೆಳೆಸಲು ಯಾವ ಕಾರ್ಯಕ್ರಮ ಹಾಕಿಕೊಂಡಿವೆ? ಸ್ವಂತಿಕೆಯ ಮಾತನಾಡುವ, ಹೋರಾಟದ ಛಲವಿರುವ ಮಹಿಳಾ ಪ್ರತಿನಿಧಿಗಳನ್ನು ಮೂಲೆಗುಂಪು ಮಾಡಿ ‘ಹೌದಪ್ಪ’ಗಳಿಗೇ ಏಕೆ ಮಣೆ ಹಾಕಲಾಗಿದೆ? ಈ ಕಹಿಪ್ರಶ್ನೆಗಳ ಉತ್ತರಗಳು ಗುಟ್ಟಾಗೇನೂ ಉಳಿದಿಲ್ಲ. ಈ ತನಕ ನಡೆದು ಬಂದ ದಾರಿಯ ಹೆಜ್ಜೆಗುರುತುಗಳನ್ನೊಮ್ಮೆ ಅವಲೋಕಿಸಿದರೆ ತಾನೇ ಅರಿವಾಗುತ್ತದೆ.

***

ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ ನೊಬೆಲ್ ಶಾಂತಿಪ್ರಶಸ್ತಿ ವಿಜೇತ ದಕ್ಷಿಣ ಆಫ್ರಿಕಾದ ಆರ್ಚ್‌ಬಿಷಪ್ ಡೆಸ್ಮಂಡ್ ಟುಟು ‘ಭಾರತೀಯ ಮಹಿಳೆ ಆಧುನಿಕ ಭಾರತವನ್ನು ಮುನ್ನಡೆಸಿ ಆಳುವವಳಾಗಬೇಕು. 33% ಮೀಸಲಾತಿ ಕೊಡಹೊರಟಿರುವ ಭಾರತ ಜಗತ್ತಿಗೇ ದಾರಿದೀಪವಾಗಬೇಕು’ ಎಂದು ಹೇಳಿದರು. ದಮನಿತ ಸಮುದಾಯಗಳಿಗೆ, ಮಹಿಳೆಯರಿಗೆ ಅಧಿಕಾರದಲ್ಲಿ ಪಾಲು ಕೊಡುವ ಮೀಸಲಾತಿ ವ್ಯವಸ್ಥೆ ವಿಶ್ವಕ್ಕೇ ಮೇಲ್ಪಂಕ್ತಿಯೆಂಬ ಮೆಚ್ಚುಗೆಯ ಮಾತು ಎಲ್ಲೆಡೆಯಿಂದ ಕೇಳಿಬಂದಿತ್ತು. ನಿಜ. ಅದು ಭಾರತೀಯ ಮಹಿಳೆಯ ಕನಸೂ ಹೌದು. ಏಕೆಂದರೆ ಇಂದು ನಿನ್ನೆಯ ಮಾತಲ್ಲ, ಸಾವಿರಾರು ವರ್ಷಗಳಿಂದ ಅವಳು ಆಳಿಸಿಕೊಳ್ಳುವ ವರ್ಗಕ್ಕೆ ತಳ್ಳಲ್ಪಟ್ಟಿದ್ದಾಳೆಯೇ ಹೊರತು ಆಳುವ ಮಹಿಳೆಯಾಗಿ ದೇಶ ಮುನ್ನಡೆಸಲಿಲ್ಲ. ರಾಣಿಯರೆಂದರೆ ನಮ್ಮ ನೆನಪು ಝಾನ್ಸಿ ರಾಣಿ, ಕಿತ್ತೂರು ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ರಜಿಯಾ ಸುಲ್ತಾನಾ, ಚೆನ್ನಭೈರಾದೇವಿ ತನಕ ಹೋಗಿ ಹಾಗೇ ನಿಲ್ಲುತ್ತದೆ. ಸಹಸ್ರಮಾನ ಹಿಂದೆ ಹೋದರೆ ಅದು ಬರೀ ರಾಜರ ಕಥೆ. ಮಹಿಳಾ ಸಂಕಥನ ದಮನಿತರ ಕಥನ.

ಹೀಗಿರುವಾಗ ಸ್ವಾತಂತ್ರ್ಯ ಬಂದು 65 ವರ್ಷಗಳ ತರುವಾಯ ಮಹಿಳೆಯರಿಗೆ ಶಾಸನ ಸಭೆಗಳಲ್ಲಿ 33% ಮೀಸಲಾತಿ ಕೊಡುವುದರ ಸಾಧಕ-ಬಾಧಕಗಳ ವಿಷಯ ಬಿಸಿ ಚರ್ಚೆಗೆ ಗ್ರಾಸವಾಯಿತು. ಮಹಿಳಾ ಮೀಸಲಾತಿ ಬೇರೆಬೇರೆ ನೆವಗಳ ಅಡೆತಡೆಗಳನ್ನೆದುರಿಸುತ್ತಿದೆ. ಇದೇನೂ ಹೊಸದಲ್ಲ. ಪಂಚಾಯತ್ ರಾಜ್ ಮತ್ತಿತರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಪ್ರಾತಿನಿಧ್ಯದ ಅವಶ್ಯಕತೆ ಎತ್ತಿ ಹಿಡಿದು ಬಲವಂತರಾಯ್ ಮೆಹ್ತಾ ಸಮಿತಿ 1957ರಲ್ಲಿ ನೀಡಿದ ವರದಿಯಂದ ಹಿಡಿದು, 1992ರ ಸಂವಿಧಾನದ 73ನೇ ತಿದ್ದುಪಡಿಯು ಪಂಚಾಯತ್‌ರಾಜ್‌ನಲ್ಲಿ ಮಹಿಳೆಯರಿಗೆ 33% ಮೀಸಲಾತಿ ಕಲ್ಪಿಸಿಕೊಡುವವರೆಗೆ ಮಹಿಳಾ ಮೀಸಲಾತಿ ಹಲವು ಮಜಲುಗಳನ್ನು ದಾಟಿ ಬಂದಿದೆ.

ಮಹಿಳೆಯ ಬದುಕನ್ನು ಸಹನೀಯಗೊಳಿಸುವ ಕ್ರಮಗಳು ಸಂಘರ್ಷವಿಲ್ಲದೆ ಸಮಾಜದ ಒಪ್ಪಿಗೆ ಪಡೆಯುತ್ತವೆ. ಎಲ್ಲಿ ಆಕೆಯನ್ನು ಬರೀ ಜೈವಿಕ ಮಹಿಳೆಯನ್ನಾಗಿ ನೋಡಲಾಗಿದೆಯೋ, ಎಲ್ಲಿ ಆಕೆ ಫಲಾನುಭವಿ ಮಾತ್ರವೋ (ಉದಾ: ಜನನಿ ಸುರಕ್ಷಾ, ತಾಯಿ ಕಾರ್ಡ್, ಭಾಗ್ಯಲಕ್ಷ್ಮಿ, ಹೆಣ್ಣುಮಕ್ಕಳಿಗೆ ಸೈಕಲ್ ಯೋಜನೆಗಳು) ಅಂಥ ಕ್ರಮಗಳು ಸ್ವಾಗತಿಸಲ್ಪಡುತ್ತವೆ. ಆದರೆ ಅವಳನ್ನು ನಾಗರಿಕ ವ್ಯಕ್ತಿಯಾಗಿ ಪರಿಗಣಿಸಿ ಅಧಿಕಾರ ಮರು ಹಂಚಿಕೆಯಾಗಬೇಕಾದಾಗ ವಿವಾದ ಶುರುವಾಗುತ್ತದೆ. ಮೊದಲು ಅಂಬೇಡ್ಕರ್ ಉದ್ದೇಶಿಸಿದ್ದ ಹಿಂದೂ ಕೋಡ್ ಬಿಲ್ ಆಸ್ತಿ ಹಕ್ಕು ಕೊಡುವಂತೆ ಹೇಳಿದಾಗ ಸಾಂಪ್ರದಾಯಿಕ ಹಿಂದೂಸಮಾಜದಲ್ಲಿ ವಿವಾದ ಭುಗಿಲೆದ್ದಿತ್ತು. ಈಗಲೂ ಅಧಿಕಾರ-ಆಸ್ತಿ ಹಂಚಿಕೆಯ ವಿಷಯ ಬಂದರೆ ಆ ಮಸೂದೆ ಸ್ಥಗಿತಗೊಳ್ಳುತ್ತದೆ. ಮಹಿಳಾ ಮೀಸಲಾತಿ ಮಸೂದೆಗೆ ಕಳೆದ 15 ವರ್ಷಗಳಿಂದ ಇದೇ ಆಗುತ್ತಿರುವುದು. ಜೊತೆಗೆ ಆಡಳಿತ ವ್ಯವಸ್ಥೆ ಯಥಾಸ್ಥಿತಿಯನ್ನು ಕಾಯ್ದುಕೊಂಡು ಹೋಗಲು ಬಯಸುತ್ತದೆಯೇ ಹೊರತು ಬದಲಾಯಿಸಲು ಅಲ್ಲ. ಸಂಘರ್ಷವಿಲ್ಲದೆ ಜನರನ್ನು ನಿಯಂತ್ರಿಸುವುದೇ ಅದರ ಮುಖ್ಯ ಗುರಿಯಾಗಿ ಎಂದಿಗೂ ಸುಧಾರಣಾ ನೆಲೆಯಲ್ಲಿಯೇ ಯೋಚಿಸುತ್ತದೆ. ಈಗ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಮಹಿಳೆಯರ ಪ್ರಾತಿನಿಧ್ಯಕ್ಕೆ ಧಕ್ಕೆ ಬರುವುದೆಂದು ಮಹಿಳಾ ಮೀಸಲಾತಿ ಮಸೂದೆ ನೆನೆಗುದಿಗೆ ಬಿದ್ದಿರುವಾಗ ಈ ಒಳಸುಳಿಗಳನ್ನು ಅರ್ಥ ಮಾಡಿಕೊಳ್ಳಬೇಕಿದೆ.

ಮಹಿಳೆಯ ಆದ್ಯತೆಗಳು ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಿ ಅವು ಮಾದರಿ ಗ್ರಾಮಗಳಾಗುವ ಸಾಧ್ಯತೆ ಹೆಚ್ಚಿರುವುದನ್ನು ಅಂಕಿಅಂಶಗಳ ಸಮೇತ ತೋರಿಸಿದರೂ ಪುರುಷ ಮೇಲುಗೈಯ ರಾಜಕೀಯ ವ್ಯವಸ್ಥೆ ಹೆಣ್ಣಿನ ಅಧಿಕಾರ ನಿಭಾಯಿಸುವ ಶಕ್ತಿಯನ್ನು ಅನುಮಾನಿಸುತ್ತಲೇ ಬಂದಿದೆ. ಮೊದಲ ಬಾರಿ ಅಧಿಕಾರ ಸಿಕ್ಕಿದಾಗ ಅದನ್ನು ಬಳಸಿಕೊಳ್ಳುವಲ್ಲಿ ಗೊಂದಲಗೊಳ್ಳಬಹುದು. ಮೊದಲ ಅವಧಿಯಲ್ಲಿ ತನಗೆ ಅರಿವಾಗದ ವಿಷಯಗಳ ಬಗೆಗೆ ಪುರುಷ ಬಂಧುಗಳ ಸಹಾಯ ಪಡೆಯಬಹುದು. ಆದರೆ ನಿಶ್ಚಿತ ಅಧಿಕಾರ ಸಿಕ್ಕರೆ ಏನು ಮಾಡಬೇಕೆಂದು ಮಹಿಳಾ ಪ್ರತಿನಿಧಿಗಳು ಸಿದ್ಧರಾಗಿಯೇ ಆಗುತ್ತಾರೆ. ಮಹಿಳಾ ಪ್ರತಿನಿಧಿಗಳಲ್ಲಿ ಯಶಸ್ವೀ ಸದಸ್ಯರು, ರಬ್ಬರ್ ಸ್ಟಾಂಪ್‌ಗಳು, ಭ್ರಷ್ಟರು, ಜವಾಬ್ದಾರಿಯ ಅರಿವೇ ಆಗದವರು ಎಲ್ಲರೂ ನಮ್ಮೆದುರಿಗಿದ್ದಾರೆ. ಪ್ರಮೀಳಾ ರಾಜ್ಯ ರಾಮರಾಜ್ಯವಾದೀತೆಂದೇನೂ ಅಲ್ಲ. ಅವರ ನಡುವೆಯೇ ಅನಕ್ಷರಸ್ಥೆಯಾದರೂ ಗ್ರಾಮಕ್ಕೆ ಬೇಕಾದ ಸೌಲಭ್ಯಗಳನ್ನು ಪಟ್ಟು ಹಿಡಿದು ಕಲ್ಪಿಸಿಕೊಂಡವರಿದ್ದಾರೆ. ವಾದ ಮಾಡಿ ಜಯಿಸಿ ಹೊರಬಂದವರಿದ್ದಾರೆ. ಕುರ್ಚಿ ಮೇಲೆ ಕುಳಿತು ಗೊತ್ತೇ ಇಲ್ಲದಿದ್ದರೂ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆದ್ದು, ನಾಲ್ಕಾರು ಊರು ತಿರುಗಾಡಿ, ಪುಳಕಿತರಾದವರು; ರಾತ್ರಿಶಾಲೆಗೆ ಹೋಗಿ ಸಹಿ ಮಾಡಲು ಕಲಿತಿರುವವರು; ಅಡುಗೆ-ಮನೆಯ ಪರಿಧಿಯಾಚೆಯೂ ತನ್ನ ಪ್ರಾಮುಖ್ಯತೆಯಿದೆ ಎಂದು ಮೊದಲ ಬಾರಿ ಅನುಭವಕ್ಕೆ ಬಂದವರು; ಮುಟ್ಟಿಸಿಕೊಳ್ಳಲಾರದ ಅನರ್ಹತೆಯೇ ಈಗ ಅಧ್ಯಕ್ಷಗಿರಿಗೆ ಅರ್ಹತೆಯಾಗಿ ಒದಗಿಬಂದಿದ್ದಕ್ಕೆ ಅಚ್ಚರಿಪಟ್ಟವರು – ಇಂಥ ನೂರಾರು ವಿಭಿನ್ನ ವಿನೂತನ ಅನುಭವಗಳು ಮಹಿಳೆಯ ಪಾಲಿಗೆ ದೊರಕಿವೆ. ಸಬಲೀಕರಣದ ದಾರಿಯ ಮೊದಲ ಹೆಜ್ಜೆಯಲ್ಲಿ ಇವೆಲ್ಲ ಪ್ರಮುಖ ವಿಚಾರಗಳೇ. ಇಂಥ ಹೊಸ ಅನುಭವ ಕಥನಗಳು ಮಹಿಳಾ ಭಾವಕೋಶದಲ್ಲಿ ಸೇರಿಹೋಗುತ್ತಿರುವುದು ಖಂಡಿತವಾಗಿಯೂ ಹೊಸ ಬೆಳವಣಿಗೆಯೇ.

ಸ್ವಸಹಾಯ ಸಂಘಗಳು ಹಾಗೂ ಮಹಿಳಾ ಮೀಸಲಾತಿ ಪ್ರಣೀತ ರಾಜಕೀಯ ಪ್ರವೇಶ ಈ ಎರಡರಿಂದಲೂ ಹಿಂದೆಂದೂ ಕನಸದಿದ್ದ ಜಗತ್ತನ್ನು ಮಹಿಳೆ ಕಾಣತೊಡಗಿದ್ದಾಳೆ. ಅದರಲ್ಲೂ ಗ್ರಾಮೀಣ ಪ್ರದೇಶದ, ಅಷ್ಟೇನೂ ಪರಿಣತ ಕಲಿಕೆಯಿಲ್ಲದವರೂ ಧೈರ್ಯವಾಗಿ ನಿಲ್ಲಬಲ್ಲಷ್ಟು ಆಶಾಭಾವನೆ ಬೆಳೆಸಿಕೊಂಡಿದ್ದಾರೆ. ಬೇಲಿಬದಿಯ ಉಳಿದೆಲ್ಲ ಮಾತುಕತೆಗಳ ಜೊತೆಗೆ ರಾಜಕೀಯದ, ಜಾತಿಯ ಗಹನ ಲೆಕ್ಕಾಚಾರಗಳು ಹಳ್ಳಿಯ ಹೆಣ್ಣುಮಕ್ಕಳ ತಲೆಯೇರಿ ಕುಳಿತಿವೆ. ದರಕು ಗುಡಿಸುತ್ತ, ಕಟ್ಟಿಗೆ ಕಡಿಯುತ್ತ, ಹೊಲಗದ್ದೆ-ಮನೆಗೆಲಸ ಮಾಡುತ್ತ, ನೀರು ಹೊರುತ್ತ, ನಾಲ್ಕು ಕಾಸು ದುಡಿದು ಗಂಡ ಮಕ್ಕಳ ಬಳಿ ಪಿರಿಪಿರಿಗೈದು ಹೇಗೋ ಸಂಸಾರ ತೂಗಿಸಿಕೊಂಡು ಹೋಗುತ್ತಿದ್ದ ಮುಗುದೆಯರು ತಮ್ಮ ಸಹಿ, ಅದಕ್ಕಿರುವ ಪ್ರಾಮುಖ್ಯತೆ, ದುಡ್ಡು ಗಳಿಸಲಿರುವ ಎಷ್ಟೆಷ್ಟೋ ಹಾದಿಗಳು ಇವೆಲ್ಲವುಗಳಿಗೆ ಬೆರಗಿನಿಂದ ತೆರೆದುಕೊಳ್ಳತೊಡಗಿದ್ದಾರೆ. ನಮ್ಮೂರ ಪಂಚಾಯ್ತಿ ಅಧ್ಯಕ್ಷೆಯಾದ ಕೃಷಿ ಕಾರ್ಮಿಕಳಾಗಿದ್ದ ಮಾಸ್ತಿ ಹೇಳಿದಂತೆ, ‘ನಾ ಅಲ್ಲೀವರ್ಗೂ ಕುರ್ಚಿ ಮ್ಯಾಲೆ ಕುಂತೇ ಇರ್ಲಿಲ್ಲ. ಕಲ್ಲಾದ್ರೂ ಇರ್ಲಿ, ಕೆಸರಾದ್ರೂ ಇರ್ಲಿ, ನಮ್ದು ಯಾವತ್ತೂ ನೆಲನೇ. ಈಗ ಎಲ್ಲ ಬದಲಾಗದೆ. ಎಲ್ರ ಜತೆ ಕುರ್ಚಿ ಮ್ಯಾಲೆ ಕುಂತಾಯ್ತು. ಹುಬ್ಳಿ, ಕಾರವಾರ, ಬೆಂಗಳೂರು ಅಂತ ಊರೂರು ತಿರ್‍ಗಿ ಸೋನ್ಯಾ ಗಾಂಧಿನೂ ನೋಡಾಯ್ತು. ನಿಜಕೂ ಎಲ್ಲ ಸಪ್ನ ಅನುಸ್‌ಬಿಟ್ಟಿದೆ.’ ಹೌದು. ಗ್ರಾಮೀಣ ಮಹಿಳೆಯರಿಗೆ ಸಿಕ್ಕ ಅಧಿಕಾರ ಅವರು ಕನಸಿನಲ್ಲೂ ಊಹಿಸಲಾಗದ ಸವಲತ್ತು. ಅದೊಂದು ಪವಾಡವೇ. ಆದರೆ ಏನೇನು ತಮಗಾಗಿ ಲಭ್ಯವಿದೆ ಎಂಬುದು ತಿಳಿಯತೊಡಗಿದಷ್ಟೇ ಸಲೀಸಾಗಿ ಏನು ಮಾಡಬೇಕಿದೆ ಎನ್ನುವ ಕರ್ತವ್ಯಪ್ರಜ್ಞೆಯೂ ಅವರಲ್ಲಿ ಬಂದಿದೆಯೆ? ಯಾವುದು ಮೊದಲು? ಅಧಿಕಾರ ಅಥವಾ ಅಧಿಕಾರದ ಅರಿವು? ಹಕ್ಕುಪ್ರಜ್ಞೆ ಅಥವಾ ಕರ್ತವ್ಯದ ಅರಿವು?

ಈಗ ಅವಶ್ಯವಿರುವುದು ಗುಣಮಟ್ಟದ ಹಾಗೂ ಜವಾಬ್ದಾರಿಯುತ ಮಹಿಳಾ ನಾಯಕತ್ವ. ಮೀಸಲಾತಿಯೆಂಬ ಉಪಕರಣ ಬಳಸಿಕೊಂಡು ಮಹಿಳಾ ನಾಯಕತ್ವ ಬೆಳೆಸುವುದು ಇಂದಿನ ತುರ್ತು ಅಗತ್ಯವಾಗಿದೆ. ಅದನ್ನು ಬೆಳೆಸುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು, ಸಂಘಟನೆಗಳು ಒಟ್ಟೊಟ್ಟಿಗೆ ಕೈ ಜೋಡಿಸಬೇಕಾಗಿದೆ. ಇಲ್ಲದಿದ್ದರೆ 33% ಮಹಿಳಾ ಮೀಸಲಾತಿ ಕೇವಲ ರಬ್ಬರ್ ಸ್ಟಾಂಪ್‌ಗಳನ್ನಷ್ಟೇ ಉತ್ಪಾದಿಸಿ, ರಾಜಕೀಯ ಹಿನ್ನೆಲೆ-ಪ್ರಭಾವವಿರುವವರ ಹೊರತು ಮತ್ಯಾವ ಮಹಿಳೆಯೂ ಮಂತ್ರಿ ಸ್ಥಾನಕ್ಕೆ ಅರ್ಹಳಾಗಿ ಕಾಣದೇ ಮಹಿಳಾ ಪ್ರಾತಿನಿಧ್ಯ ಎನ್ನುವುದೊಂದು ಪ್ರಹಸನವಾದೀತು.

ಕೊರತೆ.. ಹಸಿವು.. ಬಡಕಲು ಶರೀರದ ಮಕ್ಕಳು


-ಡಾ.ಎಸ್.ಬಿ. ಜೋಗುರ


 

ಅರಳುವ ಹೂಗಳಂತೆ ವಿಕಸಿತವಾಗಬೇಕಾದ ಮಕ್ಕಳು ಮೊಗ್ಗಿರುವ ಹಂತದಲ್ಲಿಯೇ ಕಮರುವ, ಉದುರುವ ಸ್ಥಿತಿ ನಮ್ಮ ದೇಶದ ಗ್ರಾಮೀಣ ಭಾಗಗಳಲ್ಲಿ  ವ್ಯಾಪಕವಾಗ ತೊಡಗಿದೆ. ಮಕ್ಕಳು ಆಯಾ ದೇಶದ ಭವಿಷ್ಯ. ಮುಂಬರುವ ನಾಗರಿಕತೆಯ ರೂವಾರಿಗಳು. ದುರಂತವೆಂದರೆ ನಮ್ಮ ದೇಶದ ಗ್ರಾಮೀಣ ಭಾಗಗಳಲ್ಲಿ ನಗರ ಪ್ರದೇಶದ ಮಕ್ಕಳಿಗಿಂತಲೂ ನಿಕೃಷ್ಟವಾದ ಬದುಕನ್ನು ಸಾಗಿಸುವ ಪರಿಸ್ಥಿತಿಯಿದೆ. ಸರಿಯಾದ ವೈದ್ಯಕೀಯ ಸೌಲಭ್ಯಗಳು ಇಲ್ಲದಿರುವಿಕೆ, ಪೌಷ್ಟಿಕ ಆಹಾರದ ಕೊರತೆಯ ಪರಿಣಾಮವಾಗಿ ದೇಶದಲ್ಲಿ ಸುಮಾರು 42.5 ಪ್ರತಿಶತದಷ್ಟು ಮಕ್ಕಳು ಕೃಶ ಇಲ್ಲವೇ ಬಡಕಲು ಶರೀರ ಮತ್ತು ಕಡಿಮೆ ತೂಕದವರಾಗಿದ್ದಾರೆ ಎನ್ನುವುದನ್ನು ಕೆಳಗಿನ ಅಂಕಿ ಅಂಶಗಳು ತೋರಿಸಿಕೊಡುತ್ತವೆ. ಪೌಷ್ಟಿಕ ಆಹಾರ ಸೇವನೆ ಆಯಾ ದೇಶದ ಪ್ರತಿಯೊಂದು ಮಗುವಿನ ಹಕ್ಕಾದರೂ ಹಸಿವಿನ ಸೂಚ್ಯಾಂಕದಲ್ಲಿ ಕರ್ನಾಟಕ 11 ನೇ ಸ್ಥಾನದಲ್ಲಿದೆ. 5 ವರ್ಷ ವಯೋಮಿತಿಯ ಒಳಗಿನ ಮಕ್ಕಳು ಆರೋಗ್ಯವಂತ ಮಗುವಿನ ತೂಕ ಹೊಂದಿರದೇ ಕೃಶವಾದ ಬೆಳವಣಿಗೆಯನ್ನು ಹೊಂದಲು ಪೌಷ್ಟಿಕ ಆಹಾರದ ಕೊರತೆ ಹಾಗೂ ಸರಿಯಾದ ವೈದ್ಯಕೀಯ ಸೌಲಭ್ಯಗಳು ಇಲ್ಲದಿರುವುದೇ ಆಗಿದೆ.

ದೇಶದ ಬೇರೆ ಬೇರೆ ರಾಜ್ಯಗಳಲ್ಲಿ 5 ವರ್ಷ ವಯೋಮಿತಿಯೊಳಗಿನ ಕಡಿಮೆ ತೂಕದ ಮಕ್ಕಳ ಪ್ರಮಾಣವನ್ನು ಭಾರತ ಮಾನವ ಅಭಿವೃದ್ಧಿ ಸೂಚ್ಯಾಂಕವು ಗುರುತಿಸಿರುವುದಿದೆ. ಪಂಜಾಬ್‌ನಲ್ಲಿ 24.6 ಪ್ರತಿಶತ, ಕೇರಳದಲ್ಲಿ 22.7 ಪ್ರತಿಶತ, ಆಂಧ್ರಪ್ರದೇಶದಲ್ಲಿ 32.7 ಪ್ರತಿಶತ, ಅಸ್ಸಾಮ್‌ನಲ್ಲಿ 36.4 ಪ್ರತಿಶತ, ಹರಿಯಾಣಾದಲ್ಲಿ 39.7 ಪ್ರತಿಶತ, ತಮಿಳುನಾಡಿನಲ್ಲಿ 30 ಪ್ರತಿಶತ, ರಾಜಸ್ಥಾನದಲ್ಲಿ 40.4 ಪ್ರತಿಶತ, ಪಶ್ಚಿಮಬಂಗಾಲದಲ್ಲಿ 38.5 ಪ್ರತಿಶತ, ಉತ್ತರಪ್ರದೇಶದಲ್ಲಿ 42.3 ಪ್ರತಿಶತ, ಮಹಾರಾಷ್ಟ್ರದಲ್ಲಿ 36.7 ಪ್ರತಿಶತ, ಕರ್ನಾಟಕ 37.6 ಪ್ರತಿಶತ, ಓರಿಸ್ಸಾ 40.9 ಪ್ರತಿಶತ, ಗುಜರಾತ 44.9 ಪ್ರತಿಶತ, ಛತ್ತೀಸಘಡ್  47.6 ಪ್ರತಿಶತ, ಬಿಹಾರ 51.1 ಪ್ರತಿಶತ, ಜಾರ್ಖಂಡ್ 57.1 ಪ್ರತಿಶತ, ಮಧ್ಯಪ್ರದೇಶ 59.8 ಪ್ರತಿಶತ.

ಕರ್ನಾಟಕ ತನ್ನ ನೆರೆಯ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳಿಂತಲೂ ಹೆಚ್ಚಿನ ಪ್ರಮಾಣದ ಕಡಿಮೆ ತೂಕದ ಮಕ್ಕಳನ್ನು ಹೊಂದಿರುವ ರಾಜ್ಯವಾಗಿದೆ. ದೇಶದಲ್ಲಿ ಅತೀ ಹೆಚ್ಚು ಕೃಶ ಶರೀರವನ್ನು ಹೊಂದಿರುವ ಮಕ್ಕಳನ್ನು ಮಧ್ಯಪ್ರದೇಶ [59.8] ಹೊಂದಿದ್ದರೆ ಅತೀ ಕಡಿಮೆ ಪ್ರಮಾಣದಲ್ಲಿ ಕೇರಳ [22.7] ಹೊಂದಿರುವುದಿದೆ. ಗ್ರಾಮೀಣ ಭಾಗದಲ್ಲಿ ಮಕ್ಕಳ ಮರಣ ಪ್ರಮಾಣ ನಗರಪ್ರದೇಶಗಳಿಗಿಂತಲೂ ಹೆಚ್ಚಿಗಿದೆ. ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ 47 ಮಕ್ಕಳು ಮರಣಹೊಂದಿದರೆ, ನಗರ ಪ್ರದೇಶದಲ್ಲಿ ಆ ಪ್ರಮಾಣ 31 ರಷ್ಟಿದೆ. ಒಟ್ಟಾರೆಯಾಗಿ ಲಭ್ಯವಿರುವ ಕಡಿಮೆ ಪ್ರಮಾಣದ ವೈದ್ಯಕೀಯ ಸೌಲಭ್ಯಗಳು ಮತ್ತು ಪೌಷ್ಠಿಕ ಆಹಾರ ಸೇವನೆಯ ಕೊರತೆಗಳೇ ಈ ಬಗೆಯ ಕಡಿಮೆ ತೂಕದ ಮಕ್ಕಳ ಪ್ರಮಾಣಕ್ಕೆ, ಅವರ ಸಾವುನೋವುಗಳಿಗೆ ಕಾರಣ.

ದೇಶ ಸ್ವಾಯತ್ತವಾಗಿ ಆರು ದಶಕಗಳು ಕಳೆದರೂ ನಮ್ಮಲ್ಲಿ ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಸೌಲಭ್ಯಗಳು ನಿರೀಕ್ಷಿತ ಪ್ರಮಾಣದಲ್ಲಿಲ್ಲ. ಭಾರತೀಯ ಮೆಡಿಕಲ್ ಕೌನ್ಸಿಲ್ ವರದಿ 2008 ರ ಪ್ರಕಾರ 31 ಮಾರ್ಚ್ 2008 ರವರೆಗೆ ನೊಂದಾಯಿತ ವೈದ್ಯರ ಸಂಖ್ಯೆ 695254. ಇದನ್ನು ಇಲ್ಲಿಯ ಜನಸಂಖ್ಯೆಯನ್ನು ಆಧರಿಸಿ ವಿಭಜಸಿದರೆ 1600 ಜನರಿಗೆ ಒಬ್ಬ ವೈದ್ಯ ಎನ್ನುವ ಹಾಗಾಗುತ್ತದೆ. ಭಾರತದಲ್ಲಿ 10 ಸಾವಿರ ಜನರಿಗೆ 6 ವೈದ್ಯರಿದ್ದರೆ ಚೈನಾದಂತಹ ರಾಷ್ಟ್ರಗಳಲ್ಲಿ ಅದೇ ಜನಸಂಖ್ಯೆಗೆ 14 ಜನ ವೈದ್ಯರಿದ್ದಾರೆ. ದೆಹಲಿ ಗುಜರಾತ ಮತ್ತು ಓರಿಸ್ಸಾ ಹೊರತು ಪಡಿಸಿದರೆ ಮಿಕ್ಕ ಬಹುತೇಕ ರಾಜ್ಯಗಳು ಸಮರ್ಪಕವಾದ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿಲ್ಲ. ಮಧ್ಯಪ್ರದೇಶದ 1155 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ ಸುಮಾರು 196 ಪ್ರಾಥಮಿಕ ಆರೋಗ್ಯ ಕೇಂದ್ರಗಳು ವೈದ್ಯರಿಲ್ಲದೇ ಕಾರ್ಯನಿರತವಾಗಿವೆ. ಕೇವಲ ವೈದ್ಯರ ಪ್ರಮಾಣ ಮಾತ್ರವಲ್ಲದೇ ನಮ್ಮಲ್ಲಿ ನರ್ಸಗಳ ಸಂಖ್ಯೆಯೂ ಕಡಿಮೆಯೇ.

ಯುರೋಪನಂತಹ ರಾಷ್ಟ್ರಗಳಲ್ಲಿ 100 ಇಲ್ಲವೇ 150 ಜನ ರೋಗಿಗಳಿಗೆ ಓರ್ವಳು ನರ್ಸ್ ಇದ್ದರೆ ನಮ್ಮಲ್ಲಿ 1205 ಜನರಿಗೆ ಓರ್ವಳು ನರ್ಸ್ ಇರುವಂಥಹ ಸ್ಥಿತಿ ಇದೆ. ಕೇವಲ ಒಬ್ಬರೋ ಇಬ್ಬರೋ ಇರುವ ದಾದಿಗಳ ನೆರವಿನಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಡೆಸಬೇಕಿದೆ. ಬಿಹಾರ, ಛತ್ತೀಸಘಡ್, ಜಾರ್ಖಂಡ್‌ದಂತಹ ರಾಜ್ಯಗಳ ಗ್ರಾಮೀಣ ಪ್ರದೇಶಗಳಲ್ಲಿ ಈ ಬಗೆಯ ಕೊರತೆ ಇನ್ನಷ್ಟು ಹೆಚ್ಚಿಗಿದೆ. ಪುರುಷ ಆರೋಗ್ಯ ಸೇವಕರ ಕೊರತೆಯಂತೂ ಇಲ್ಲಿಯ ಗ್ರಾಮೀಣ ಭಾಗಗಳಲ್ಲಿ ತೀರಾ ಬಾಧಕವಾಗಿದೆ. ಮತ್ತೆ ಕೆಲವೆಡೆ ನರ್ಸಗಳಿದ್ದಾರೆ, ವೈದ್ಯರೂ ಇದ್ದಾರೆ ಆದರೆ ಅವರಿಗೆ ಅಲ್ಲಿಯ ಸ್ಥಿತಿಗೆ ಪೂರಕವಾಗಿ ಲಭ್ಯವಿರಬೇಕಾದ ಸಂಪನ್ಮೂಲಗಳ ಕೊರತೆ ಕಾಡುತ್ತದೆ. ಹೀಗೆ ಅನೇಕ ಬಗೆಯ ನೆಟ್ಟಗಿರದ ವ್ಯವಸ್ಥೆಯ ನಡುವೆ ಒಂದು ದೇಶದ ಮಾನವ ಸಂಪನ್ಮೂಲ ರೂಪುಗೊಳ್ಳಬೇಕಿರುವುದು ವಿಷಾದನೀಯವೇ ಹೌದು.

ವಿಶ್ವ ಆರೋಗ್ಯ ಸಂಸ್ಥೆಯ ವರದಿಯಂತೆ ಭಾರತ ಆಫ್ರಿಕಾದಂತಹ ದೇಶಗಳಿಗಿಂತಲೂ ಕಡಿಮೆ ಪ್ರಮಾಣದಲ್ಲಿ ಆರೋಗ್ಯಕ್ಕಾಗಿ ಹಣವನ್ನು ವ್ಯಯಿಸುವುದಿದೆ. ಆಫ್ರಿಕಾ ಆರೋಗ್ಯಕ್ಕಾಗಿ 6.2 ಪ್ರತಿಶತದಷ್ಟು ಮೊತ್ತವನ್ನು ವಿನಿಯೋಗಿಸಿದರೆ, ಭಾರತ ಕೇವಲ 4.1 ಪ್ರತಿಶತ ಮಾತ್ರ ಆ ದಿಶೆಯಲ್ಲಿ ವ್ಯಯಿಸುತ್ತದೆ ಎನ್ನುವುದನ್ನು ವರದಿ ಮಾಡಿದೆ. ಬಾಂಗ್ಲಾದೇಶ ಮತ್ತು ಪಾಕಿಸ್ಥಾನವನ್ನು ಹೊರತುಪಡಿಸಿದರೆ ವಿಶ್ವದ ಬಹುತೇಕ ರಾಷ್ಟ್ರಗಳು ತನ್ನ ದೇಶದ ಪ್ರಜೆಗಳ ಆರೋಗ್ಯಕ್ಕಾಗಿ ಹೆಚ್ಚೆಚ್ಚು ಹಣವನ್ನು ವ್ಯಯಿಸುತ್ತವೆ. ಭಾರತ ಆ ದಿಶೆಯಲ್ಲಿ ಆಫ್ರಿಕಾದಂತಹ ರಾಷ್ಟ್ರಗಳನ್ನು ಮೀರಿ ತೋರಿಸಬೇಕಿದೆ.

ಗ್ರಾಮ ಸ್ವರಾಜ್ಯದ ಕನಸು ಕಂಡ ಬಾಪೂಜಿಯ ಗ್ರಾಮಗಳಲ್ಲಿ ಇಂದು ವಾಸಕ್ಕೆ ಯೋಗ್ಯವಿಲ್ಲದ ಮನೆಗಳಿವೆ, ಪೌಷ್ಠಿಕ ಆಹಾರದ ಕೊರತೆಯಿದೆ, ವೈದ್ಯಕೀಯ ಸೌಲಭ್ಯಗಳು ಸರಿಯಾಗಿಲ್ಲ, ಕುಡಿಯಲು ಶುದ್ಧವಾದ ನೀರಿಲ್ಲ, ಶೌಚಾಲಯ ವ್ಯವಸ್ಥೆಯಿಲ್ಲ, ವಿದ್ಯುತ್ ಇಲ್ಲ, ಸರಿಯಾದ ರಸ್ತೆಗಳಿಲ್ಲ. ಇಂಥಾ ಹತ್ತಾರು ಇಲ್ಲಗಳ ನಡುವೆಯೇ ಈ ದೇಶದ ಮಕ್ಕಳು ಭವ್ಯ ನಾಗರಿಕರಾಗಿ ರೂಪುಗೊಳ್ಳಬೇಕಿದೆ. ಹಸಿವು ಮತ್ತು ಬಡತನಗಳು ಗ್ರಾಮೀಣ ಭಾರತವನ್ನು ಕಿತ್ತು ತಿನ್ನುತ್ತಿವೆ. ಆಹಾರ ಧಾನ್ಯಗಳನ್ನು ಬೆಳೆಯುವ ಗ್ರಾಮೀಣ ಪ್ರದೇಶಗಳಲ್ಲಿಯೇ ಇಂದು ಹಸಿವು, ಬಡತನ ಮತ್ತು ಪೌಷ್ಠಿಕಾಂಶಗಳ ಕೊರತೆಯನ್ನು ಎದುರಿಸಬೇಕಾಗಿ ಬಂದುದು ಒಂದು ದೊಡ್ದ ವಿಪರ್ಯಾಸವೇ ಹೌದು.