ಕೊರತೆ.. ಹಸಿವು.. ಬಡಕಲು ಶರೀರದ ಮಕ್ಕಳು


-ಡಾ.ಎಸ್.ಬಿ. ಜೋಗುರ


 

ಅರಳುವ ಹೂಗಳಂತೆ ವಿಕಸಿತವಾಗಬೇಕಾದ ಮಕ್ಕಳು ಮೊಗ್ಗಿರುವ ಹಂತದಲ್ಲಿಯೇ ಕಮರುವ, ಉದುರುವ ಸ್ಥಿತಿ ನಮ್ಮ ದೇಶದ ಗ್ರಾಮೀಣ ಭಾಗಗಳಲ್ಲಿ  ವ್ಯಾಪಕವಾಗ ತೊಡಗಿದೆ. ಮಕ್ಕಳು ಆಯಾ ದೇಶದ ಭವಿಷ್ಯ. ಮುಂಬರುವ ನಾಗರಿಕತೆಯ ರೂವಾರಿಗಳು. ದುರಂತವೆಂದರೆ ನಮ್ಮ ದೇಶದ ಗ್ರಾಮೀಣ ಭಾಗಗಳಲ್ಲಿ ನಗರ ಪ್ರದೇಶದ ಮಕ್ಕಳಿಗಿಂತಲೂ ನಿಕೃಷ್ಟವಾದ ಬದುಕನ್ನು ಸಾಗಿಸುವ ಪರಿಸ್ಥಿತಿಯಿದೆ. ಸರಿಯಾದ ವೈದ್ಯಕೀಯ ಸೌಲಭ್ಯಗಳು ಇಲ್ಲದಿರುವಿಕೆ, ಪೌಷ್ಟಿಕ ಆಹಾರದ ಕೊರತೆಯ ಪರಿಣಾಮವಾಗಿ ದೇಶದಲ್ಲಿ ಸುಮಾರು 42.5 ಪ್ರತಿಶತದಷ್ಟು ಮಕ್ಕಳು ಕೃಶ ಇಲ್ಲವೇ ಬಡಕಲು ಶರೀರ ಮತ್ತು ಕಡಿಮೆ ತೂಕದವರಾಗಿದ್ದಾರೆ ಎನ್ನುವುದನ್ನು ಕೆಳಗಿನ ಅಂಕಿ ಅಂಶಗಳು ತೋರಿಸಿಕೊಡುತ್ತವೆ. ಪೌಷ್ಟಿಕ ಆಹಾರ ಸೇವನೆ ಆಯಾ ದೇಶದ ಪ್ರತಿಯೊಂದು ಮಗುವಿನ ಹಕ್ಕಾದರೂ ಹಸಿವಿನ ಸೂಚ್ಯಾಂಕದಲ್ಲಿ ಕರ್ನಾಟಕ 11 ನೇ ಸ್ಥಾನದಲ್ಲಿದೆ. 5 ವರ್ಷ ವಯೋಮಿತಿಯ ಒಳಗಿನ ಮಕ್ಕಳು ಆರೋಗ್ಯವಂತ ಮಗುವಿನ ತೂಕ ಹೊಂದಿರದೇ ಕೃಶವಾದ ಬೆಳವಣಿಗೆಯನ್ನು ಹೊಂದಲು ಪೌಷ್ಟಿಕ ಆಹಾರದ ಕೊರತೆ ಹಾಗೂ ಸರಿಯಾದ ವೈದ್ಯಕೀಯ ಸೌಲಭ್ಯಗಳು ಇಲ್ಲದಿರುವುದೇ ಆಗಿದೆ.

ದೇಶದ ಬೇರೆ ಬೇರೆ ರಾಜ್ಯಗಳಲ್ಲಿ 5 ವರ್ಷ ವಯೋಮಿತಿಯೊಳಗಿನ ಕಡಿಮೆ ತೂಕದ ಮಕ್ಕಳ ಪ್ರಮಾಣವನ್ನು ಭಾರತ ಮಾನವ ಅಭಿವೃದ್ಧಿ ಸೂಚ್ಯಾಂಕವು ಗುರುತಿಸಿರುವುದಿದೆ. ಪಂಜಾಬ್‌ನಲ್ಲಿ 24.6 ಪ್ರತಿಶತ, ಕೇರಳದಲ್ಲಿ 22.7 ಪ್ರತಿಶತ, ಆಂಧ್ರಪ್ರದೇಶದಲ್ಲಿ 32.7 ಪ್ರತಿಶತ, ಅಸ್ಸಾಮ್‌ನಲ್ಲಿ 36.4 ಪ್ರತಿಶತ, ಹರಿಯಾಣಾದಲ್ಲಿ 39.7 ಪ್ರತಿಶತ, ತಮಿಳುನಾಡಿನಲ್ಲಿ 30 ಪ್ರತಿಶತ, ರಾಜಸ್ಥಾನದಲ್ಲಿ 40.4 ಪ್ರತಿಶತ, ಪಶ್ಚಿಮಬಂಗಾಲದಲ್ಲಿ 38.5 ಪ್ರತಿಶತ, ಉತ್ತರಪ್ರದೇಶದಲ್ಲಿ 42.3 ಪ್ರತಿಶತ, ಮಹಾರಾಷ್ಟ್ರದಲ್ಲಿ 36.7 ಪ್ರತಿಶತ, ಕರ್ನಾಟಕ 37.6 ಪ್ರತಿಶತ, ಓರಿಸ್ಸಾ 40.9 ಪ್ರತಿಶತ, ಗುಜರಾತ 44.9 ಪ್ರತಿಶತ, ಛತ್ತೀಸಘಡ್  47.6 ಪ್ರತಿಶತ, ಬಿಹಾರ 51.1 ಪ್ರತಿಶತ, ಜಾರ್ಖಂಡ್ 57.1 ಪ್ರತಿಶತ, ಮಧ್ಯಪ್ರದೇಶ 59.8 ಪ್ರತಿಶತ.

ಕರ್ನಾಟಕ ತನ್ನ ನೆರೆಯ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳಿಂತಲೂ ಹೆಚ್ಚಿನ ಪ್ರಮಾಣದ ಕಡಿಮೆ ತೂಕದ ಮಕ್ಕಳನ್ನು ಹೊಂದಿರುವ ರಾಜ್ಯವಾಗಿದೆ. ದೇಶದಲ್ಲಿ ಅತೀ ಹೆಚ್ಚು ಕೃಶ ಶರೀರವನ್ನು ಹೊಂದಿರುವ ಮಕ್ಕಳನ್ನು ಮಧ್ಯಪ್ರದೇಶ [59.8] ಹೊಂದಿದ್ದರೆ ಅತೀ ಕಡಿಮೆ ಪ್ರಮಾಣದಲ್ಲಿ ಕೇರಳ [22.7] ಹೊಂದಿರುವುದಿದೆ. ಗ್ರಾಮೀಣ ಭಾಗದಲ್ಲಿ ಮಕ್ಕಳ ಮರಣ ಪ್ರಮಾಣ ನಗರಪ್ರದೇಶಗಳಿಗಿಂತಲೂ ಹೆಚ್ಚಿಗಿದೆ. ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ 47 ಮಕ್ಕಳು ಮರಣಹೊಂದಿದರೆ, ನಗರ ಪ್ರದೇಶದಲ್ಲಿ ಆ ಪ್ರಮಾಣ 31 ರಷ್ಟಿದೆ. ಒಟ್ಟಾರೆಯಾಗಿ ಲಭ್ಯವಿರುವ ಕಡಿಮೆ ಪ್ರಮಾಣದ ವೈದ್ಯಕೀಯ ಸೌಲಭ್ಯಗಳು ಮತ್ತು ಪೌಷ್ಠಿಕ ಆಹಾರ ಸೇವನೆಯ ಕೊರತೆಗಳೇ ಈ ಬಗೆಯ ಕಡಿಮೆ ತೂಕದ ಮಕ್ಕಳ ಪ್ರಮಾಣಕ್ಕೆ, ಅವರ ಸಾವುನೋವುಗಳಿಗೆ ಕಾರಣ.

ದೇಶ ಸ್ವಾಯತ್ತವಾಗಿ ಆರು ದಶಕಗಳು ಕಳೆದರೂ ನಮ್ಮಲ್ಲಿ ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಸೌಲಭ್ಯಗಳು ನಿರೀಕ್ಷಿತ ಪ್ರಮಾಣದಲ್ಲಿಲ್ಲ. ಭಾರತೀಯ ಮೆಡಿಕಲ್ ಕೌನ್ಸಿಲ್ ವರದಿ 2008 ರ ಪ್ರಕಾರ 31 ಮಾರ್ಚ್ 2008 ರವರೆಗೆ ನೊಂದಾಯಿತ ವೈದ್ಯರ ಸಂಖ್ಯೆ 695254. ಇದನ್ನು ಇಲ್ಲಿಯ ಜನಸಂಖ್ಯೆಯನ್ನು ಆಧರಿಸಿ ವಿಭಜಸಿದರೆ 1600 ಜನರಿಗೆ ಒಬ್ಬ ವೈದ್ಯ ಎನ್ನುವ ಹಾಗಾಗುತ್ತದೆ. ಭಾರತದಲ್ಲಿ 10 ಸಾವಿರ ಜನರಿಗೆ 6 ವೈದ್ಯರಿದ್ದರೆ ಚೈನಾದಂತಹ ರಾಷ್ಟ್ರಗಳಲ್ಲಿ ಅದೇ ಜನಸಂಖ್ಯೆಗೆ 14 ಜನ ವೈದ್ಯರಿದ್ದಾರೆ. ದೆಹಲಿ ಗುಜರಾತ ಮತ್ತು ಓರಿಸ್ಸಾ ಹೊರತು ಪಡಿಸಿದರೆ ಮಿಕ್ಕ ಬಹುತೇಕ ರಾಜ್ಯಗಳು ಸಮರ್ಪಕವಾದ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿಲ್ಲ. ಮಧ್ಯಪ್ರದೇಶದ 1155 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ ಸುಮಾರು 196 ಪ್ರಾಥಮಿಕ ಆರೋಗ್ಯ ಕೇಂದ್ರಗಳು ವೈದ್ಯರಿಲ್ಲದೇ ಕಾರ್ಯನಿರತವಾಗಿವೆ. ಕೇವಲ ವೈದ್ಯರ ಪ್ರಮಾಣ ಮಾತ್ರವಲ್ಲದೇ ನಮ್ಮಲ್ಲಿ ನರ್ಸಗಳ ಸಂಖ್ಯೆಯೂ ಕಡಿಮೆಯೇ.

ಯುರೋಪನಂತಹ ರಾಷ್ಟ್ರಗಳಲ್ಲಿ 100 ಇಲ್ಲವೇ 150 ಜನ ರೋಗಿಗಳಿಗೆ ಓರ್ವಳು ನರ್ಸ್ ಇದ್ದರೆ ನಮ್ಮಲ್ಲಿ 1205 ಜನರಿಗೆ ಓರ್ವಳು ನರ್ಸ್ ಇರುವಂಥಹ ಸ್ಥಿತಿ ಇದೆ. ಕೇವಲ ಒಬ್ಬರೋ ಇಬ್ಬರೋ ಇರುವ ದಾದಿಗಳ ನೆರವಿನಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಡೆಸಬೇಕಿದೆ. ಬಿಹಾರ, ಛತ್ತೀಸಘಡ್, ಜಾರ್ಖಂಡ್‌ದಂತಹ ರಾಜ್ಯಗಳ ಗ್ರಾಮೀಣ ಪ್ರದೇಶಗಳಲ್ಲಿ ಈ ಬಗೆಯ ಕೊರತೆ ಇನ್ನಷ್ಟು ಹೆಚ್ಚಿಗಿದೆ. ಪುರುಷ ಆರೋಗ್ಯ ಸೇವಕರ ಕೊರತೆಯಂತೂ ಇಲ್ಲಿಯ ಗ್ರಾಮೀಣ ಭಾಗಗಳಲ್ಲಿ ತೀರಾ ಬಾಧಕವಾಗಿದೆ. ಮತ್ತೆ ಕೆಲವೆಡೆ ನರ್ಸಗಳಿದ್ದಾರೆ, ವೈದ್ಯರೂ ಇದ್ದಾರೆ ಆದರೆ ಅವರಿಗೆ ಅಲ್ಲಿಯ ಸ್ಥಿತಿಗೆ ಪೂರಕವಾಗಿ ಲಭ್ಯವಿರಬೇಕಾದ ಸಂಪನ್ಮೂಲಗಳ ಕೊರತೆ ಕಾಡುತ್ತದೆ. ಹೀಗೆ ಅನೇಕ ಬಗೆಯ ನೆಟ್ಟಗಿರದ ವ್ಯವಸ್ಥೆಯ ನಡುವೆ ಒಂದು ದೇಶದ ಮಾನವ ಸಂಪನ್ಮೂಲ ರೂಪುಗೊಳ್ಳಬೇಕಿರುವುದು ವಿಷಾದನೀಯವೇ ಹೌದು.

ವಿಶ್ವ ಆರೋಗ್ಯ ಸಂಸ್ಥೆಯ ವರದಿಯಂತೆ ಭಾರತ ಆಫ್ರಿಕಾದಂತಹ ದೇಶಗಳಿಗಿಂತಲೂ ಕಡಿಮೆ ಪ್ರಮಾಣದಲ್ಲಿ ಆರೋಗ್ಯಕ್ಕಾಗಿ ಹಣವನ್ನು ವ್ಯಯಿಸುವುದಿದೆ. ಆಫ್ರಿಕಾ ಆರೋಗ್ಯಕ್ಕಾಗಿ 6.2 ಪ್ರತಿಶತದಷ್ಟು ಮೊತ್ತವನ್ನು ವಿನಿಯೋಗಿಸಿದರೆ, ಭಾರತ ಕೇವಲ 4.1 ಪ್ರತಿಶತ ಮಾತ್ರ ಆ ದಿಶೆಯಲ್ಲಿ ವ್ಯಯಿಸುತ್ತದೆ ಎನ್ನುವುದನ್ನು ವರದಿ ಮಾಡಿದೆ. ಬಾಂಗ್ಲಾದೇಶ ಮತ್ತು ಪಾಕಿಸ್ಥಾನವನ್ನು ಹೊರತುಪಡಿಸಿದರೆ ವಿಶ್ವದ ಬಹುತೇಕ ರಾಷ್ಟ್ರಗಳು ತನ್ನ ದೇಶದ ಪ್ರಜೆಗಳ ಆರೋಗ್ಯಕ್ಕಾಗಿ ಹೆಚ್ಚೆಚ್ಚು ಹಣವನ್ನು ವ್ಯಯಿಸುತ್ತವೆ. ಭಾರತ ಆ ದಿಶೆಯಲ್ಲಿ ಆಫ್ರಿಕಾದಂತಹ ರಾಷ್ಟ್ರಗಳನ್ನು ಮೀರಿ ತೋರಿಸಬೇಕಿದೆ.

ಗ್ರಾಮ ಸ್ವರಾಜ್ಯದ ಕನಸು ಕಂಡ ಬಾಪೂಜಿಯ ಗ್ರಾಮಗಳಲ್ಲಿ ಇಂದು ವಾಸಕ್ಕೆ ಯೋಗ್ಯವಿಲ್ಲದ ಮನೆಗಳಿವೆ, ಪೌಷ್ಠಿಕ ಆಹಾರದ ಕೊರತೆಯಿದೆ, ವೈದ್ಯಕೀಯ ಸೌಲಭ್ಯಗಳು ಸರಿಯಾಗಿಲ್ಲ, ಕುಡಿಯಲು ಶುದ್ಧವಾದ ನೀರಿಲ್ಲ, ಶೌಚಾಲಯ ವ್ಯವಸ್ಥೆಯಿಲ್ಲ, ವಿದ್ಯುತ್ ಇಲ್ಲ, ಸರಿಯಾದ ರಸ್ತೆಗಳಿಲ್ಲ. ಇಂಥಾ ಹತ್ತಾರು ಇಲ್ಲಗಳ ನಡುವೆಯೇ ಈ ದೇಶದ ಮಕ್ಕಳು ಭವ್ಯ ನಾಗರಿಕರಾಗಿ ರೂಪುಗೊಳ್ಳಬೇಕಿದೆ. ಹಸಿವು ಮತ್ತು ಬಡತನಗಳು ಗ್ರಾಮೀಣ ಭಾರತವನ್ನು ಕಿತ್ತು ತಿನ್ನುತ್ತಿವೆ. ಆಹಾರ ಧಾನ್ಯಗಳನ್ನು ಬೆಳೆಯುವ ಗ್ರಾಮೀಣ ಪ್ರದೇಶಗಳಲ್ಲಿಯೇ ಇಂದು ಹಸಿವು, ಬಡತನ ಮತ್ತು ಪೌಷ್ಠಿಕಾಂಶಗಳ ಕೊರತೆಯನ್ನು ಎದುರಿಸಬೇಕಾಗಿ ಬಂದುದು ಒಂದು ದೊಡ್ದ ವಿಪರ್ಯಾಸವೇ ಹೌದು.

Leave a Reply

Your email address will not be published. Required fields are marked *