Daily Archives: July 21, 2012

ರಾಜಕೀಯದ ಹೊಸ ಲೆಕ್ಕಾಚಾರದಲ್ಲಿ ಕರ್ನಾಟಕ

– ನಾಗರಾಜ್ ಹರಪನಹಳ್ಳಿ

ಕರ್ನಾಟಕದ ರಾಜಕಾರಣ ಸಂಪೂರ್ಣವಾಗಿ ಜಾತಿ ಲೆಕ್ಕಾಚಾರದಲ್ಲಿ ಮುಳುಗಿದೆ. ಬರ ರಾಜ್ಯದ ರೈತರನ್ನು ಕಾಡುತ್ತಿದ್ದರೆ. ಅಧಿಕಾರದಲ್ಲಿರುವವರು ಮತ್ತೆ ಅಧಿಕಾರಕ್ಕೆ ಬರುವುದು ಹೇಗೆ ಎಂದು ಗುಣಾಕಾರ ಭಾಗಾಕಾರ ಮಾಡುತ್ತಿದ್ದಾರೆ. ಫ್ಯಾಸಿಸ್ಟ ಶಕ್ತಿಗಳು ಜಾತಿಯ ಹೆಗಲ ಮೇಲೆ ಕುಳಿತು ನರ್ತಿಸುತ್ತಿವೆ. ಅಪರೇಶನ್ ಕಮಲ ಮತ್ತು ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅಧಿಕಾರದ ದಾಹ ಬಿಜೆಪಿಯನ್ನು ಆವರಿಸಿಕೊಂಡಿದ್ದು, ಕಳೆದ 4 ವರ್ಷಗಳಲ್ಲಿ ಮಾಡಿರಬಹುದಾದ ಅಷ್ಟಿಷ್ಟು ಒಳ್ಳೆಯ ಕೆಲಸಗಳು ಸಹ ಮಾಸಿ ಹೋಗಿವೆ. ಬಿಜೆಪಿಯ ಅಧಿಕಾರಸ್ಥರನ್ನು ಆರ್.ಎಸ್.ಎಸ್. ಸೇರಿದಂತೆ ಅದರ ಅಂಗ ಸಂಸ್ಥೆಗಳು ಒಳಗೊಳಗೇ ಟೀಕಿಸುತ್ತಿವೆ. ಅಖಂಡ ಭಾರತದ ಕನಸುಗಾರರು, ಹಿಂದೂತ್ವ ಪ್ರತಿಪಾದಕರು ರಾಜ್ಯದ ಅಧಿಕಾರ ಹಿಡಿಯಬೇಕು ಎಂಬ ಒಳ ಆಸೆಯನ್ನು ಇನ್ನೂ ಜೀವಂತವಾಗಿರಿಸಿಕೊಂಡಿವೆ. ಅಣ್ಣಾ ಹಜಾರೆ ಹೋರಾಟದಲ್ಲಿ ತೊಡಗಿಕೊಂಡಿರುವ ಅನೇಕರಲ್ಲಿ ಹಿಂದುತ್ವ ಪ್ರತಿಪಾದಕರು ತೂರಿಕೊಂಡಿರುವುದು, ಕಪ್ಪು ಹಣದ ವಿರುದ್ಧದ ಹೋರಾಟಕ್ಕೆ ಮಾತ್ರ ಅಲ್ಲ; ರಾಜ್ಯದ ಅಧಿಕಾರ ನಡೆಸುವ ಕನಸನ್ನು ಸಹ ಹೊತ್ತವರೇ ಆಗಿದ್ದಾರೆ. ಆದರೆ ಈಚಿನ ದಿನಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಹೆಚ್ಚು ಜನಪರ ಆಗುವ ಬಯಕೆ ಹೊಂದಿವೆ. ಜನರ ಹತ್ತಿರ ತಲುಪಲು ಶತಪ್ರಯತ್ನ ಸಹ ಮಾಡುತ್ತಿವೆ.

ಮುಖ್ಯಮಂತ್ರಿ ಹುದ್ದೆಯ ಆಸೆ ಬಿಟ್ಟು ಜನಪರ ರಾಜಕಾರಣ ಮಾಡಿದರೆ ಪಶ್ಚಿಮ ಬಂಗಾಳದ  ಜ್ಯೋತಿ ಬಸ್ಸು, ಕೇರಳದಲ್ಲಿದ್ದ  ಕೆ. ಕರುಣಾಕರ್, ತಮಿಳುನಾಡಿನಲ್ಲಿದ್ದ  ಎಂಜಿಆರ್‌ರಂತೆ ಒಬ್ಬರನ್ನು ನಾಯಕನ್ನಾಗಿ ಒಪ್ಪಿಕೊಳ್ಳುವ ರಾಜಕೀಯ ಸಂದರ್ಭ ಕರ್ನಾಟಕದಲ್ಲಿ ಬಂದ್ರೆ ರಾಜ್ಯದ ಅಭಿವೃದ್ಧಿಯ ದಿಕ್ಕು ಬದಲಾಗಲಿದೆ. ಯಡಿಯೂರಪ್ಪ ಆ ಛಾನ್ಸ ಕಳೆದುಕೊಂಡರು. ಈ ಛಾನ್ಸ ಇರುವುದು ಜೆಡಿಎಸ್‌ನ ಕುಮಾರ ಸ್ವಾಮಿಗೆ ಮಾತ್ರ. ಜೆಡಿಎಸ್‌ನಲ್ಲಿ ಕುಮಾರಸ್ವಾಮಿ ಮಾತ್ರ ಮುಖ್ಯಮಂತ್ರಿ ಅಭ್ಯರ್ಥಿ. ಅವರ ನಾಯಕತ್ವವನ್ನು ಜೆಡಿಎಸ್‌ನಲ್ಲಿ ಇತರರು ಒಪ್ಪುತ್ತಾರೆ. ಅದು ಬಿಟ್ಟರೆ ಈ ಅವಕಾಶ ಇರುವುದು ಬಿಎಸ್ಆರ್ ಕಾಂಗ್ರೆಸ್‌ನ ಶ್ರೀರಾಮುಲು ಅವರಿಗೆ. ಆದರೆ ಅವರ ಪಕ್ಷ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯುವಷ್ಟು ಸ್ಥಾನಗಳನ್ನು ಗೆಲ್ಲಲಾರದು. ಶ್ರೀರಾಮುಲು ಬಿಜೆಪಿಯನ್ನು ಎಷ್ಟು ಕ್ಷೇತ್ರಗಳಲ್ಲಿ ಸೋಲಿಸಬಲ್ಲರು ಎಂಬ ಲೆಕ್ಕಾಚಾರ ಆರಂಭವಾಗಿದೆ. ಅವರು 10 ರಿಂದ 12 ಎಂಎಲ್ಎ ಗಳನ್ನು ಕರ್ನಾಟಕ ವಿಧಾನಸಭೆಗೆ ಕಳುಹಿಸಬಲ್ಲರು ಎನ್ನುವ ಊಹೆಗಳಿವೆ. ಜೆಡಿಎಸ್ ಶಾಸಕರ ಸಂಖ್ಯೆಯನ್ನು 40 ರಿಂದ 45 ಕ್ಕೆ ಏರಬಹುದು. ಉಳಿದ ಸ್ಥಾನಗಳನ್ನು ಕಾಂಗ್ರೆಸ್ ಮತ್ತು ಬಿಜೆಪಿ ಹಂಚಿಕೊಳ್ಳಬಹುದು. ಬಿಜೆಪಿ ಅಧಿಕಾರಕ್ಕೆ ಬರುವುದು ಅನುಮಾನ. 100 ರಿಂದ 110 ಸ್ಥಾನ ಕಾಂಗ್ರೆಸ್ ಗೆದ್ದರೆ, ಆಗ ಅವರಿಗೆ ರಾಮುಲು ಅಥವಾ ಕುಮಾರಸ್ವಾಮಿ ನೆರವು ಅನಿವಾರ್ಯ. ಹಾಗಾದಲ್ಲಿ ಮತ್ತೆ ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರದ ಆಡಳಿತ.

ಬಿಜೆಪಿ ಅಬ್ಬಾಬ್ಬಾ ಅಂದ್ರೆ 60 ರಿಂದ 70 ಶಾಸಕರನ್ನು ಹೊಂದಿ ವಿರೋಧಿ ಪಾಳಯದಲ್ಲಿ ಕುಳಿತುಕೊಳ್ಳಲು ಸಿದ್ಧತೆ ಮಾಡಿಕೊಳ್ಳಬಹುದು. ಕಾಂಗ್ರೆಸ್ ಪಕ್ಷ ಜೆಡಿಎಸ್ ಅಥವಾ ಬಿಎಸ್ಆರ್ ಕಾಂಗ್ರೆಸ್ ಬೆಂಬಲದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಬಹುದು. ಅಥವಾ ಜೆಡಿಎಸ್ ಮತ್ತು ಶ್ರೀರಾಮುಲು ಪಕ್ಷಗಳು ಚುನಾವಣಾ ಪೂರ್ವ ಒಪ್ಪಂದ ಮಾಡಿಕೊಂಡು ಅಧಿಕಾರ ಹಿಡಿಯಲು ಕಾಂಗ್ರೆಸ್ ಸಹಕಾರ ಕೋರಬಹುದು. ಈ ಸಮೀಕರಣಗಳೇ ಇನ್ನಾರು ತಿಂಗಳಲ್ಲಿ ನಡೆಯುವುದು ಖಚಿತ. ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಆರು ತಿಂಗಳು ಕಾಲ ಅಧಿಕಾರದಲ್ಲಿ ಇರಬಹುದು. ಮೂರು ಹೋಳಾಗಿರುವ ಬಿಜೆಪಿ ಭಿನ್ನಮತ ಚುನಾವಣೆಯ ವೇಳೆಗೆ ತಾರಕಕ್ಕೆ ಏರಲಿದೆ. ಯಡಿಯೂರಪ್ಪ ಜೊತೆ ಇರುವವರಲ್ಲಿ 35 ರಿಂದ 40 ಜನ  ಶಾಸಕರು ವಿಧಾನಸಭೆ ಪ್ರವೇಶಿಸಬಹುದು. ಅವರೇ ಹೊಸ ಸರ್ಕಾರಗಳ ಹಣೆಬರಹ ನಿರ್ಧರಿಸುವ ಸಾಧ್ಯತೆಗಳು ಇವೆ. ಹಾಲಿ ಸರ್ಕಾರದ ಪತನದ ನಂತರವೂ ಯಡಿಯೂರಪ್ಪ ಪ್ರಬಲ ನಾಯಕನಾಗಿ ಉಳಿಯ ಬಹುದು. ಆದರೆ ಅಧಿಕಾರ ಮಾತ್ರ ಬಿಜೆಪಿಯ ಕೈ ತಪ್ಪಲಿದೆ. ಆದರೆ ಕಾಂಗ್ರೆಸ್‌ನಲ್ಲಿನ ಸಮಸ್ಯೆಗಳು ಸದ್ಯಕ್ಕೆ ತಣ್ಣಗಾಗಿವೆ. ಆ ಪಕ್ಷ ಅಧಿಕಾರಕ್ಕೆ ಬರುವ ಹೊತ್ತಿನಲ್ಲೇ ನಾಯಕತ್ವದ ಸಮಸ್ಯೆ ಮತ್ತು ಮುಖ್ಯಮಂತ್ರಿ ಗಾದಿಗೆ ಕಿತ್ತಾಟ ನಡೆಯುವುದು ಗ್ಯಾರಂಟಿ.

ಶ್ರೀರಾಮುಲು ಶಕ್ತಿಯನ್ನು ಕಡೆಗಣಿಸುವಂತಿಲ್ಲ. ಬೀದರ್‌ನಿಂದ ಬೆಂಗಳೂರಿನವರೆಗೆ 54 ದಿನಗಳ ಕಾಲ 914 ಕಿಲೋ ಮೀಟರ್ ಪಾದಯಾತ್ರೆ ಮಾಡಿರುವ ರಾಮುಲು ಹಿಂದುಳಿದ ವರ್ಗಗಳನ್ನು ಸಂಘಟಿಸಿಕೊಂಡಿದ್ದು ಚುನಾವಣೆಗಾಗಿ ಕಾದಿದ್ದಾರೆ. ಹಿಂದುಳಿದವರು, ದಲಿತರು, ಮುಸ್ಲಿಮರು, ಕ್ರಿಶ್ಚಿಯನ್ನರು ಸೇರಿದರೆ ಕರ್ನಾಟಕದಲ್ಲಿ ಹೊಸ ರಾಜಕೀಯ ಶಕ್ತಿಯ ಸಮೀಕರಣವಾಗಬಹುದು ಎಂಬ ಲೆಕ್ಕಾಚಾರವೂ ಇದೆ. ಜೊತೆಗೆ ಕರಾವಳಿ, ಮಲೆನಾಡು, ಮೈಸೂರು ಭಾಗದಲ್ಲಿ ಸಂಕಲ್ಪ ಯಾತ್ರೆ ಸಹ ಹೊರಡುತ್ತಿದ್ದಾರೆ. ಜುಲೈ 29 ರಿಂದ ಅಗಸ್ಟ 5 ರವರೆಗೆ ನಡೆಯುವ ಸಂಕಲ್ಪ ಯಾತ್ರೆಯಲ್ಲಿ ಶ್ರೀರಾಮುಲು ಯಾರನ್ನು ಟಾರ್ಗೆಟ್ ಮಾಡಿ ಮಾತನಾಡುತ್ತಾರೆ ಎಂಬುದರ ಮೇಲೆ, ಅವರು ಯಾರ ಜೊತೆ ಸೇರಲಿದ್ದಾರೆ ಎಂದು ಸಹ ನಿರ್ಧರಿಸಬಹುದು. ಬಿಜೆಪಿ ಬಿಟ್ಟ ಹಾಲಾಡಿ ಸಹ ಶ್ರೀರಾಮುಲು ಪಕ್ಷ ಸೇರಿಕೊಂಡರೆ ಬಿಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಕರಾವಳಿಯಲ್ಲಿ ಒಂದು ಶಾಸಕ ಸ್ಥಾನದ ಗೆಲುವು ಗ್ಯಾರಂಟಿ. ಇನ್ನು ಜಾರಕಿಹೊಳಿ, ಅಸ್ನೋಟಿಕರ್ ಮತ್ತವರ ಬೆಂಬಲಿಗರು ಶ್ರೀರಾಮುಲು ಹಾಗೂ ಕುಮಾರಸ್ವಾಮಿ ಜೊತೆ ಸಮಾನ ಅಂತರ ಕಾದುಕೊಂಡವರು. ಅಧಿಕಾರ ಹೋಗುತ್ತಿದ್ದಂತೆ ಅಥವಾ ಸರ್ಕಾರ ಬೀಳುತ್ತಿದ್ದಂತೆ ಅವರು ಬಿಜೆಪಿ ಬಿಡುವುದು ಖಚಿತ.

ಕರ್ನಾಟಕದ ಜನ ಸದ್ಯಕ್ಕೆ ಜಾತಿಯ ಪ್ರವಾಹದಲ್ಲಿ ತೇಲಿ ಹೊದಂತೆ ಕಾಣುತ್ತಿದೆ. ಆದರೆ ಇಲ್ಲಿನ ಜನ ಬಹುತೇಕರು ಸೆಕ್ಯುಲರ್ ಮನೋಭಾವದವರು. ಆಡಳಿತ ವಿರೋಧಿ ಮತಗಳನ್ನು ಯಾರು ಹೆಚ್ಚು ಪಡೆಯುತ್ತಾರೆ ಎಂಬುದರ ಮೇಲೆ ಕರ್ನಾಟಕದ ರಾಜಕಾರಣದ ಭವಿಷ್ಯ ನಿಂತಿದೆ. ಸಿದ್ಧರಾಮಯ್ಯ, ಕುಮಾರಸ್ವಾಮಿ, ಅಥವಾ ಶ್ರೀರಾಮುಲು, ಈ ಮೂವರಲ್ಲಿ ಯಾರು ರಾಜ್ಯದ ಜನರನ್ನು ಹೆಚ್ಚು ಕನ್ವಿನ್ಸ ಮಾಡಲು ಯಶ ಕಾಣುತ್ತಾರೆ ಎಂಬುದರ ಮೇಲೆ ಚುನಾವಣೆಯಲ್ಲಿ ಆಡಳಿತ ವಿರೋಧಿ ಮತಗಳು ಅವರ ಪಕ್ಷಗಳಿಗೆ ಹರಿದು ಬರಲಿವೆ.

ಯುವ ಪಡೆ ಮತ್ತು ಸಿನಿಮಾದ ಜನ

ರಾಜಕೀಯ ಪಕ್ಷಗಳು ಯುವಪಡೆಯನ್ನು ಪಾರ್ಟಿಗೆ ಸೇರಿಸಿಕೊಳ್ಳುತ್ತಿವೆ. ಜೊತೆಗೆ ಸಿನಿಮಾ ಮಂದಿಯನ್ನು ರಾಜಕೀಯಕ್ಕೆ ಎಳೆದು ತಂದಿವೆ. ಜೆಡಿಎಸ್ ಪಕ್ಷ ಮಳೆ ಹುಡುಗಿ ಪೂಜಾ ಗಾಂಧಿ, ಕಿರುತೆರೆಯ ಖ್ಯಾತ ನಟಿ ಮಾಳವಿಕರನ್ನು ರಾಜಕೀಯಕ್ಕೆ ಕರೆ ತಂದಿದೆ. ಬಂಗಾರಪ್ಪ ಅವರ ಪುತ್ರ ಮಧು ಸಹ ರಾಜ್ಯದ ಎಲ್ಲೆಡೆ ಸುತ್ತಾಡಿ ಯುವಕರನ್ನು ಸಂಘಟಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ನಟಿ ರಮ್ಯ ಮತ್ತು ಭಾವನಾ ಇದ್ದಾರೆ. ಉಮಾಶ್ರೀ ಮೊದಲಿನಿಂದ ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿದ್ದಾರೆ. ಬಿಜೆಪಿಯಲ್ಲಿ ಶೃತಿ, ಶ್ರೀನಾಥ ಕ್ರಿಯಾಶೀಲರಾಗಿದ್ದಾರೆ. ಇನ್ನು  ಬಿಎಸ್ಆರ್ ಪಕ್ಷದ ಶ್ರೀರಾಮುಲು ನಟಿ ರಕ್ಷಿತಾರನ್ನು ರಾಜಕೀಯಕ್ಕೆ ಕರೆ ತಂದಿದ್ದಾರೆ. ಚುನಾವಣೆಯ ಹೊತ್ತಿಗೆ ಮತ್ತೊಂದಿಷ್ಟು ನಟನಟಿಯರ ರಾಜಕೀಯ ಪ್ರವೇಶ ಖಂಡಿತ. ಆದರೆ ಇವರು ರಾಜಕೀಯಕ್ಕೆ ಯಾಕೆ ಬರುತ್ತಾರೆ ಮತ್ತು ಅವರಿಂದ ಯಾರಿಗೆ ಲಾಭ ಎಂದು ಅಂದಾಜು ಮಾಡುವುದು ಕಷ್ಟ.

ಮಳೆ ಪೂಜೆ ಮತ್ತು ಸರ್ಕಾರ

ಮಳೆಗಾಗಿ ಪೂಜೆ ಮಾಡಿಸಲು ಹೊರಟ ಸರ್ಕಾರ ವೈಚಾರಿಕತೆಯಿಂದ ಬಹುದೂರ ಎಂಬುದರಲ್ಲಿ ಎರಡು ಮಾತಿಲ್ಲ. 34 ಸಾವಿರ ದೇವಸ್ಥಾನಗಳಲ್ಲಿ ಸರ್ಕಾರ ಪೂಜೆ ಮಾಡಿಸಲು ಹೊರಟಿದೆ. ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಗಳಲ್ಲಿ ಸರ್ಕಾರದ ವತಿಯಿಂದ ಜಲಾಭಿಷೇಕ ಮತ್ತು ಹೋಮ ಮಾಡಿಸಲು 17 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲು ಆದೇಶಿಸಿದೆ. ಜುಲೈ 27 ಮತ್ತು ಆಗಸ್ಟ 2 ರಂದು ಪೂಜೆ ನಡೆಯಲಿದೆ. ಮಳೆಗಾಗಿ ಮೋಡ ಬಿತ್ತನೆ ಮಾಡದೇ ದೇವಸ್ಥಾನಗಳಲ್ಲಿ ಪೂಜೆ ಮಾಡಿಸಹೊರಟಿರುವುದರ ಹಿಂದೆ ರಾಜಕೀಯ ಉದ್ದೇಶ ಇದೆ ಎಂಬುದರಲ್ಲಿ ಎರಡು ಮಾತಿಲ್ಲ. ಕಾಂಗ್ರೆಸ್, ಜೆಡಿಎಸ್ ಮಳೆಗಾಗಿ ಸರ್ಕಾರಿ ಪೂಜೆಯನ್ನು ಟೀಕಿಸಿವೆ. ಜನರ ಭಾವನೆಗಳನ್ನ ದೇವರ ಜೊತೆ ತಳುಕು ಹಾಕಿದ್ರೆ ಮಳೆ ಬರುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಬಿಜೆಪಿಗೆ ಸ್ವಲ್ಪ ಮತಗಳು ಬರಬಹುದು. ಅವೂ ಸಹ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ಕಷ್ಟವೇ.

ಹೊನ್ನಮ್ಮಜ್ಜಿಯ ಹಿತ್ತಲ [ಕಥೆ]

-ಶೀತಲ ನಾಯಕ

ಹೊನ್ನಮ್ಮಜ್ಜಿಯ ಕಣ್ಣೀರ ಧಾರೆ ಒಂದೇ ಸಮನೆ ಹರಿಯುತ್ತಿತ್ತು. ಬಾಯಿಗೂ ಪುರುಸೊತ್ತಿರಲಿಲ್ಲ. ಬೈಗುಳಗಳ ರಭಸ ಇನ್ನೂ ಜೋರಾಗಿತ್ತು. ಆಕೆಯ ನೋವಿನ ಕಟ್ಟೆ ಒಡೆದಾಗಿತ್ತು. ಯಾವತ್ತೂ ಯಾರ ಮನಸ್ಸನ್ನೂ ನೋಯಿಸದ ಹೊನ್ನಮ್ಮಜ್ಜಿ ಅಂದು ರಣಚಂಡಿಯಂತಾಗಿದ್ದಳು. ಸಿಟ್ಟಿಗೆ ಕಾರಣರಾದವರು ಎದುರಿಗೆ ಬಂದರೆ ಅವರನ್ನು ಚಚ್ಚಿ ಹಾಕಿ ಬಿಡುವಷ್ಟು ಕೋಪ ಅವಳಲ್ಲಿ ಮನೆಮಾಡಿತ್ತು.

‘ಆ ಬೋಳಿ ಮಕ್ಕಳ ಮನೆ ಹಾಳಾಗಾ, ಅವರ ವಂಶ ನಿರ್ವಂಶಾಗಾ, ನನ್ನ ಮಕ್ಕಳು ನಾಶವಾಗಿ ಹೊದಂಗೆ ಅವರ ಮಕ್ಕಳೂ ನಾಶವಾಗೋಗ್ಲಿ, ಬರ್‍ಯ್ರೋ ಬೋಳಿ ಮಕ್ಕಳಿಯಾ… ಬರ್ರಿ, ನಿಮ್ಮೂ ಇದನ್ನ ಹ್ಯಾಂಗೆ ಕಡದ ಹಾಕರಿ ಹಾಂಗೆ ನಿಮ್ಮೂ ಕಡದ ಹಾಕ್ತಿ ಬರ್ರಿ’ ಎಂದು ಜೋರ್ ಜೋರಾಗಿ ಬಾಯಿ ಮಾಡುತ್ತಿದ್ದಳು. ಇವಳ ಜೋರು ಬಾಯಿಗೆ ಎಚ್ಚರಗೊಂಡ ಶಂಕ್ರಣ್ಣ ನಮ್ಮವ್ವ ಇಂದಿಷ್ಟು ಜೋರಾಗಿ ಯಾರಿಗೆ ಬಾಯಿ ಮಾಡುತ್ತಿದ್ದಾಳೆ ಎಂದು ನೋಡಲು ಹಿತ್ತಲಕಡೆಗೆ ಬಂದ. ಅಲ್ಲಿ ಹೊನ್ನಮ್ಮಜ್ಜಿ ತಾನು, ತನ್ನ ಮಕ್ಕಳು ಸಾಕಿ ಬೆಳೆಸಿದ ಗಿಡಗಳನ್ನೆಲ್ಲಾ ಗುಡ್ಡೆ ಹಾಕಿ ನಡುವೆ ಕುಳಿತು ರೋಧಿಸುತ್ತಿದ್ದಳು. ಹಿತ್ತಲದಲ್ಲಿ ಮುಗಿಲ ಮುಟ್ಟಲೆಂಬಂತೆ ಎದೆಸೆಟೆಸಿ ನಿಂತಿದ್ದ ಅರ್ಧಕ್ಕರ್ಧ ಗಿಡ ಮರಗಳು ಅಂಗಾತ ನೆಲಕಚ್ಚಿದ್ದವು. ಮಗ ಶಂಕ್ರಣ್ಣನನ್ನು ನೋಡಿದ್ದೇ ಹೊನ್ನಮ್ಮಜ್ಜಿಯ ದು:ಖ ದುಪ್ಪಟ್ಟಾಯಿತು.  ‘ಶಂಕರಾ.. ನೋಡೋ ನನ್ನ ಮಕ್ಕಳನ್ನೆಲ್ಲಾ ಸಾಯಿಸಿಬಿಟ್ರೋ, ಹಾಳಾದೋರು ಇನ್ನೂ ತಮ್ಮ ಬುದ್ದಿನ ಬಿಟ್ಟಿಲ್ವಲ್ಲೋ, ಅವರು ಉದ್ದಾರಾಗುಲಾ, ಹುಳಾಬಿದ್ದೇ ಸಾಯ್ತರ, ನನ್ನ ಶಾಪ ತಟ್ಟದೇ ಬಿಡುದಿಲ್ಲಾ ನೋಡ ಬೇಕರೆ’ ಎನ್ನುತ್ತ ಸಣ್ಣ ಮಕ್ಕಳ ಹಾಗೆ ಎರಡೂ ಕೈಗಳಿಂದ ಕಣ್ಣೊರೆಸುತ್ತಿದ್ದಳು.

ಹಿತ್ತಲದಲ್ಲಿದ್ದ ಬಾಳೆ, ತೆಂಗು ಅಡಿಕೆ, ಬೇರಹಲಸಿನ ಮರ, ಮಾವಿನ ಗಿಡ, ನುಗ್ಗೆಕಾಯಿ, ಹೂವಿನಗಿಡಗಳು ನೆಲಕ್ಕೆ ತಲೆ ಉರುಳಿಸಿದ್ದವು. ಹಾಗೂ ಕುಂಬಳಕಾಯಿ, ಹಿರೇಕಾಯಿ ಬಳ್ಳಿಗಳೆಲ್ಲ ಬೇರು ಕಳಚಿ ಚಲ್ಲಾಪಿಲ್ಲಿಯಾಗಿದ್ದವು. ಆ ಅಜ್ಜಿಯ ಕೂಗಾಟಕ್ಕೆ ಅಕ್ಕ ಪಕ್ಕದವರೂ ಬಂದು ಸೇರಿದರು. ಇಟ್ಟ ಕಷ್ಟ ಪಟ್ಟೆ ಪ್ರೀತಿಯಿಂದ ಬೆಳೆಸದೆ ಅವನೆಲ್ಲ ಕುಂದ ಹಾಕಬಿಟ್ರಲ್ಲೇ ಸಾವಿತ್ರಿ ಎಂದು ಪಕ್ಕದಮನೆಯವರ ಹತ್ತಿರ ಅಜ್ಜಿ ತನ್ನ ಅಳಲನ್ನು ತೋಡಿಕೊಂಡಳು. ಎಲ್ಲರ ಕಣ್ಣುಗಳಲ್ಲೂ ಕತ್ತರಿಸಿ ಬಿದ್ದ ಗಿಡಮರಗಳ ಬಗ್ಗೆ ದಯಾಮಯ ನೋಟವೇ ತೋರುತ್ತಿತ್ತು. ಆ ಹಿತ್ತಲ ಅವಸ್ತೆ ನೋಡಿ ಕ್ಷಣ ಹೊತ್ತು ದಂಗಾದರು. ಹೊನ್ನಮ್ಮಜ್ಜಿ ಈ ಗಿಡಗಳನ್ನ ತನ್ನ ಮಕ್ಕಳಂತೇ ಬೆಳಸತ. ಇವುನೆಲ್ಲ ಹೆಂಗೆ ನಾಶಮಾಡರ ನೋಡ, ಇವರೇನು? ಮನುಷ್ಯರೋ, ರಾಕ್ಷಸರೋ, ಪಾಪ..! “ಹೊನ್ನಮ್ಮಜ್ಜಿ ಆ ಗಿಡಗಳನ್ನ ಬೆಳೆಸುಕೆ  ಆಗಿರೋ ಕಷ್ಟ ಅಟ್ಟಿಟ್ಟೆ ಅಲ್ಲ. ಅದರ ಕೆಲಸ ನೋಡಿದವರಿಗೇ ಗುತ್ತ, ಅವ್ರಿಗೇನ ಗುತ್ತ್ತ ಮುಂಡೆ ಮಕ್ಕಳಿಗೆ” ಅಂತ ನೆರೆದ ಜನ ಮಾತನಾಡುತ್ತಿದ್ದರು. ಹೊನ್ನಮ್ಮಜ್ಜಿಗೋ ಗಿಡಮರಗಳೆಂದರೆ ಪಂಚಪ್ರಾಣ. ತನ್ನ ಸೊಸೆಗೆ ಒಂದಿಷ್ಟು ಸಹಾಯ ಮಾಡಿ, ಉಳಿದ ಎಲ್ಲಾ ಸಮಯವನ್ನ ಈ ಗಿಡಮರಗಳ ನಡುವೆಯೇ ಕಳೆಯುತ್ತಿದ್ದಳು. ಅವುಗಳಿಗೆ ನೀರುಣಿಸುವುದು, ಬುಡ ಸರಿ ಮಾಡುವುದು, ಕೀಟಗಳನ್ನು ತೆಗೆದು ಹಾಕುವುದು, ಗೊಬ್ಬರ ಹಾಕುವುದು ಹೀಗೆ ಜೀವಕ್ಕಿಂತಲೂ ಹೆಚ್ಚು ಜೋಪಾನ ಮಾಡಿದ ಗಿಡ ಮರಗಳು ಅಂದು ನೆಲಕ್ಕುರುಳಿದ್ದವು. ಇದಕ್ಕೆಲ್ಲ ಕಾರಣ ಯಾರು ಎನ್ನುವುದು ಅಂಗೈ ಹುಣ್ಣಿಗೆ ಕನ್ನಡಿ ಹಿಡಿದಷ್ಟೇ ಸ್ಪಷ್ಟವಾಗಿತ್ತು. ಜೈಲಿನಿಂದ ಬಿಡುಗಡೆಯಾಗಿ ಇನ್ನೂ ಒಂದು ವಾರವೂ ಕಳೆದಿಲ್ಲ. ಆಗಲೇ ಇಂಥ ಅವಗಡಕ್ಕೆ ಅವರು ಮನಸ್ಸು ಮಾಡಿರುವುದು ಇಡೀ ಆ ಕೇರಿಯ ಜನರಲ್ಲಿ ಅಚ್ಚರಿಯನ್ನುಂಟು ಮಾಡಿತ್ತು.

*

ಆ ಊರ ಹೆಸರು ಹೊನ್ನೂರು. ಬೆಟ್ಟ ಗುಡ್ಡಗಳಿಂದ ಆವೃತವಾದ ಪುಟ್ಟ ಊರು. ಹೊರಗಿನ ಕೇರಿಯ ಮೂರು ಮನೆಗಳನ್ನು ಹಿಡಿದರೆ ಅಲ್ಲಿದ್ದದ್ದು ನೂರಿಪ್ಪತ್ತು ಮನೆಗಳು. ಈ ಹೊನ್ನುರಿನ ಹೊಟ್ಟೆಯ ಭಾಗದಲ್ಲಿರುವ ಮನೆಯ ಹೊನ್ನಮ್ಮಜ್ಜಿಯದು. ಒಂದು ಕಾಲದಲ್ಲಿ ಇಪ್ಪತ್ತರಷ್ಟು ಸದಸ್ಯರಿದ್ದ ಈ ಮನೆಯಲ್ಲಿ ಈಗ ಇದ್ದದ್ದು ಕೇವಲ ಅಜ್ಜಿಯನ್ನೊಳಗೊಂಡು ಐದೇ ಜನ. ಹೊನ್ನಮ್ಮಜ್ಜಿ, ಮಗ ಶಂಕರಣ್ಣ, ಸೊಸೆ ತಾರಾ, ಮೊಮ್ಮಗ ರಾಜು, ಮೊಮ್ಮಗಳು ರಾಗಿಣಿ ಇದಿಷ್ಟು ಈ ಕುಟುಂಬದ ಪರಿಚಯ. ಊರಿನ ಎಲ್ಲರೊಂದಿಗೂ ಬೆರೆಯುವ ಈ ಕುಟುಂಬ ಎಲ್ಲರೊಳಗೊಂದಾಗಿತ್ತು. ಊರಲ್ಲಿ ಯಾರಿಗಾದರೂ ಸಹಾಯಬೇಕಾದರೆ ಹೊನ್ನಮಜ್ಜಿಯನ್ನು ನೆನೆಸಿಕೊಳ್ಳದೇ ಇರುತ್ತಿರಲಿಲ್ಲ. ಬೇಡಿ ಬಂದವರಿಗೆ ಆ ಅಜ್ಜಿ ಬರಿಗೈಯಲ್ಲಿ ವಾಪಸ್ಸು ಕಳಿಸುತ್ತಿರಲಿಲ್ಲ. ಹಸಿದು ಬಂದವರಿಗಂತೂ ಊಟ, ಆಶ್ರಯ ಖಂಡಿತ ಸಿಗುತ್ತಿತ್ತು. ಇಂಥ ಹೊನ್ನಮ್ಮಜ್ಜಿಗೂ ಆ ಊರಿನಲ್ಲಿ ಶತ್ರುಗಳಿದ್ದರು ಎಂದರೆ ನಂಬಲೇಬೇಕು.

ಅಂದು ಶನಿವಾರ ಸಮಯ ಸರಿಸುಮಾರು ರಾತ್ರಿ ಎಂಟು ಗಂಟೆ. ಎಂದಿನಂತೆ ಅತ್ತೆ ಮತ್ತು ಮಕ್ಕಳಿಗೆ ಊಟಕ್ಕೆ ಬಡಿಸಿ ತಾರಾ ಗಂಡನಿಗಾಗಿ ಕಾಯುತ್ತಿದ್ದಳು. ಶಂಕರಣ್ಣ ಗದ್ದೆಯ ಕಳೆ ತೆಗೆಯಲು ಆಳಿಗೆ ಹೇಳಲು ಹೋದವನು ಬರುವುದು ತಡವಾಗಿತ್ತು. ತಾರಾ ಗಂಡ ಬರುವ ದಾರಿಗೆ ಕಣ್ಣು ಹಾಸಿ ಕುಳಿತಿದ್ದಳು. ಇಂದು ಗಂಡನೆದುರು ಹೇಳಲೇಬೇಕಾದ ವಿಷಯವೊಂದು ಅವಳಲ್ಲಿ ಒಂದು ಬಗೆಯ ಭಯವನ್ನು ಹೇಳುವ ಮುಂಚೆಯೆ ಹುಟ್ಟುಹಾಕಿತ್ತು.  ಅಷ್ಟಕ್ಕೂ ಆ ವಿಷಯವನ್ನು ಗಂಡನ ಮುಂದೆ ಹೇಳುವದಾದರೂ ಹೇಗೆ..? ಎಲ್ಲಿಂದ ಶುರು ಮಾಡುವುದು ಎಂದೆಲ್ಲ ಯೋಚಿಸುತ್ತಿರುವಂತೆಯೆ ಗಂಡ ಬಂದಾಗಿತ್ತು. ಕೂಡಲೇ ಊಟ ಬಡಿಸಿದಳು. ಆತನ ಊಟ ಮುಗಿಸಿ ಕೈ ತೊಳೆದುಕೊಳ್ಳುವಾಗ ಅಳುಕುತ್ತಲೇ ‘ಬಿಲಗದ ನೀರ ಕಟ್ಟಿ ಬರುಕೆ ಹೊಗದೆ ಆದರೆ ಪಾಗಾರಮನೆಯವರು ನಮ್ಮ ಬಿಲಗದ ನೀರ ಕಟ್ಟಿ ತಮ್ಮ ಗದ್ದಿಗೆ ನೀರ ಬಿಟ್ಟಕಂಡದ್ರ. ನಮ್ಮ ಗದ್ದೆಗೆ ನೀರೇ ತುಂಬಲಾಗತ’ ಎಂದಳು. ಶಂಕರಣ್ಣನಿಗೋ ಹೆಂಡತಿಯ ಮಾತು ಕೇಳಿ ಕೋಪ ನೆತ್ತಿಗೇರಿತ್ತು. ಎಲ್ಲರಿಗೂ ಕೇಳುವ ಹಾಗೆಯೇ ‘ಬೋಳಿ ಮಕ್ಕಳ, ಅವರಪ್ಪ ಮಾಡ್ಸಿಟ್ಟ ಬಿಲಗ ಅಂದಕಂಡರ..? ಯಾವಾಗ ಬೇಕ ಆವಾಗೆ ನೀರ ನಮ್ಮ ಬಿಲಗನಿಂದೆ ತಮ್ಮ ಗದ್ದಿಗೆ ಬಿಟ್ಕಣುಕೆ, ಇವರನ್ನ ಹಿಂಗೆ ಬಿಟ್ಟರೆ ಆಗುದಲ್ಲ. ಇವರಿಗೆ ಬ್ಯಾರೆ ಬಿಲಗ ಮಾಡ್ಸಕಣುಕೆ ಏನಾಗಿದ ಧಾಡಿ, ನಮ್ಮ ಗದ್ದಿಗೇ ಇನ್ನೂ ನೀರ ತುಂಬಲ ಅಂದ ಹೇಳತಿ, ನಮ್ಮ ನೀರ ತುಂಬದ ಮೇಲಾದರೂ ಬಿಟ್ಕಂಡರೆ ಬ್ಯಾರೆ ಆಗತ ಕಾಣಸ್ತಿ ಈ ಬೋಳಿ ಮಕ್ಕಳಿಗೆ,’ ಎನ್ನುತ್ತ ಜಗುಲಿಯತ್ತ ನಡೆದ. ಅಷ್ಟರಲ್ಲೇ ಅಲ್ಲೆಲ್ಲೋ ಅಡಗಿ ಕುಳಿತು ಶಂಕರಣ್ಣನ ಮಾತುಗಳನ್ನೇ ಆಲಿಸುತ್ತಿದ್ದ ಪಾಗಾರಮನೆ ಮಾದೇವ ಜಗಳ ಕಾಯಲೆಂದೆ ಬಂದವನಂತೆ ಏನು ನೀನು, ಆ ಮಕ್ಕಳೆ ಈ ಮಕ್ಕಳೆ ಅಂತಿ, ನಮ್ಮನ್ನ ಏನ್ ಅಂದ್ಕಬಿಟ್ಟಿ..? ನಿಂಗೂ ಕಾಣಸ್ತವ ನೋಡ್ತೆ ಇರ ಬಾಳ ದಿವಸ ಇಲ್ಲಾ ಹಾಗೆ ಹೀಗೆ ಅಂತ ಜಗಳಕ್ಕೇ ನಿಂತುಬಿಟ್ಟ. ಶಂಕರಣ್ಣನಿಗೂ ತಡೆಯಲಾಗಲಿಲ್ಲ. ಹೌದ ಹೇಳ್ದೆ. ನೀವು ಮತ್ತೆ ಕದ್ದ ನೀರ ಬಿಟ್ಕಂಡರೆ ಯಾರ ಹೇಳ್ದೇ ಇರ್ತರ? ನಮ್ಮ ಗದ್ದಿಗೆ ನೀರ ತುಂಬದ ಮೆಲಾದರೂ ನೀರ ಬಿಟ್ಕಂಡರೆ ಮಾತ ಬ್ಯಾರೆಯಾಗತ. ಒಬ್ಬರಿಗೊಬ್ಬರು ವಾದ ಪ್ರತಿವಾದದಲ್ಲೇ ತೊಡಗಿದ್ದರು. ಮಾದೇವನೋ ಇವನ ಯಾವ ಮಾತನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ತನ್ನದೇ ಸರಿ ಎಂಬಂತೆ ಜಗಳಕ್ಕೆ ನಿಂತಿದ್ದ.

ಇವರಿಬ್ಬರ ಜಗಳ ಕೇಳಿ ಊರಿಗೆ ಊರೇ ಎಚ್ಚರಗೊಂಡಿತ್ತು. ನೆರೆದ ಜನರ ನಡುವೆ ಹಿರಿಯನೊಬ್ಬ ‘ಶಂಕರ ಹೇಳುದ ಸರಿಯಾಗೇ ಇದ ಮತ್ತ್ಯಾಕೆ ನೀನು ಅವನ ಜೊತೆಗೆ ಜಗಳ ಮಾಡ್ತೆ ಇಂವೆ, ಅಂವಗೆ ಹೇಳದೇ ಹ್ಯಾಂಗೆ ಬಿಲಗದ ನೀರ ಬಿಟ್ಕಂಡರಿ’ ಎಂದು ಕೇಳುತ್ತಿದ್ದರೆ ‘ಹಾಂ.. ಹಾಂ.. ನಂಗೆ ಗುತ್ತ ನೀವೆಲ್ಲ ಉಂದೇ ಅಂದೆ. ಏನ್ ಮಾಡ್ತ್ತರಿ.. ಏನ್ ಮಾಡ್ತರಿ’ ಅಂತ ಮೈಮೆಲೆ ಏರಿ ಬಂದ. ಎರಡೂ ಕಡೆಯವರು ಕೈ ಕೈ ಮಿಲಾಯಿಸಿದರು. ಹೊನ್ನಮ್ಮಜ್ಜಿ ಇವೆಲ್ಲವನ್ನು ನೋಡುತ್ತ ಮೊಮ್ಮಕ್ಕಳನ್ನು ಹಿಡಿದು ಒಂದು ಮೂಲೆಯಲ್ಲಿ ನಿಂತಿದ್ದಳು. ಶಂಕರಣ್ಣನ ಹೆಂಡತಿ ಗಂಡನನ್ನು ಎಳೆದೆಳೆದು ಜಗಳ ಸಾಕು ಎಂದರೂ ಅವನು ಮತ್ತಷ್ಟು ಜೋರಾಗುತ್ತಿದ್ದ. ಮಾದೇವನ ಮಗ ಗಿರೀಶ ಅದೆಲ್ಲಿದ್ದನೋ ಹಿಂದಿನಿಂದ ಗೂಳಿಯಂತೆ ನುಗ್ಗಿ ಶಂಕರಣ್ಣನ ತಲೆಯ ಮೇಲೆ ಕಟ್ಟಿಗೆಯ ತುಂಡಿನಿಂದ ಜೋರಾಗಿ ಬಡಿದ. ಅವನ ಆ ಹೊಡೆತಕ್ಕೆ ಶಂಕರಣ್ಣ ಅಲ್ಲಿಯೇ ಪ್ರಜ್ಞೆತಪ್ಪಿ ನೆಲಕ್ಕೆ ಕುಸಿದ.  ಒಂದು ಕ್ಷಣ ಏನಾಯಿತೆಂಬುದು ಯಾರಿಗೂ ತಿಳೀಯಲೇ ಇಲ್ಲ. ಶಂಕ್ರಣ್ಣ ಹಾಗೆ ಕುಸಿದು ಬಿದ್ದದ್ದನ್ನು ನೋಡಿದ ಆತನ ಮಕ್ಕಳು ಜೋರಾಗಿ ಅಪ್ಪಾ ಎಂದು ಅಳಲಾಲಂಭಿಸಿದವು. ಶಂಕರಣ್ಣನ ಕಡೆಯವರು ಗಡಬಡಿಸಿ ಗಿರೀಶನನ್ನು ಹಿಡಿದು ಚೆನ್ನಾಗಿ ಥಳಿಸಿದರು. ಶಂಕರಣ್ಣನನ್ನು ಮನೆಯ ಒಳಗೆ ತಂದು ಮಲಗಿಸಿ ನೀರು ಸಿಂಪಡಿಸಿದರೂ ಪ್ರಜ್ಞೆ ಬರಲಿಲ್ಲ. ತಲೆಯಿಂದ ರಕ್ತ ಸುರಿಯುತ್ತಿತ್ತು. ಪಾಗಾರಮನೆಯವರೆಲ್ಲರೂ ಓಡಿ ಹೋಗಿ ತಮ್ಮ ಮನೆ ಸೇರಿಕೊಂಡರು. ಅಲ್ಲಿದ್ದವರೆಲ್ಲ ರಕ್ತ ನಿಲ್ಲಿಸಲು ತಮಗೆ ಗೊತ್ತಿರುವ ವಿದ್ಯೆಯನೆಲ್ಲ ಪ್ರಯೋಗ ಮಾಡಿದರು. ಆದರೆ ರಕ್ತ ನಿಲ್ಲಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ.

ಅಷ್ಟರಲ್ಲಿ ಅವರಿಗೆ ಕಮಲಾಕರಣ್ಣನ ನೆನಪಾಗಿ ಅವನನ್ನು ಕರೆದು ಬರಲು ನಾಗರಾಜನನ್ನು ಕಳಿಸಿದರು. ರಾತ್ರಿಸಮಯ ಅವರ ಮನೆ ಕಡೆ ಹೋಗುವುದು ಅಪಾಯವಾಗಿತ್ತು. ಆದರೆ ಅನಿವಾರ್ಯವಾಗಿತ್ತು. ಆ ಕತ್ತಲಲ್ಲೇ ಓಡಿ ಹೋಗಿ ಕಮಲಾಕರಣ್ಣನನ್ನು ಕರೆ ತಂದ. ಅವನೇನೋ ಒಂದು ಔಷಧಿ ಹಾಕಿ ಪಟ್ಟೆ ಕಟ್ಟಿ ರಕ್ತ ಬರುವುದನ್ನು ನಿಲ್ಲಿಸಿದ. ಸ್ವಲ್ಪ ಹೊತ್ತಿನಲ್ಲೇ ಶಂಕರಣ್ಣನಿಗೆ ಎಚ್ಚರ ಬಂತು. ಅದು ಅವನ ಅಪ್ಪನಿಂದ ಕಲಿತ ನಾಟಿ ಔಷಧಿಯಾಗಿತ್ತು. ಒಂದು ವೇಳೆ ಆತ ಇರದೇ ಹೋಗಿದ್ದರೆ ಏನಾಗುತ್ತಿತ್ತು ಎಂಬುದನ್ನು ಎಲ್ಲರೂ ಉಹಿಸಿದ್ದರು. ಶಂಕರಣ್ಣನ ದಾಯಾದಿಗಳು, ಸ್ನೇಹಿತರು ಎಲ್ಲರೂ ಸೇರಿ ಇವರನ್ನು ಹೀಗೇ ಬಿಟ್ಟರೆ ಸಾಧ್ಯವಿಲ್ಲ. ದಿನದಿಂದ ದಿನಕ್ಕೆ ಇವರ ಗಲಾಟೆ ಊರಿನಲ್ಲಿ ಹೆಚ್ಚುತ್ತಲೇ ಇದೆ.  ಪೋಲೀಸ್ ಕಂಪ್ಲೇಂಟ್ ಕೊಡುವುದೇ ಸೂಕ್ತ ಎಂದು ಒಂದು ನಿರ್ಧಾರಕ್ಕೆ ಬಂದರು. ನಾಳೆ ಶಂಕರನನ್ನು ಆಸ್ಪತ್ರೆಗೆ ಸೇರಿಸುವ ಮೊದಲು ಪೋಲೀಸ್ ಸ್ಟೇಷನ್‌ಗೆ ಹೋಗಿ ಇವನ ಸ್ಥಿತಿ ತೋರಿಸಿ ಕಂಪ್ಲೇಟ್ ಕೊಟ್ಟು ಆಮೇಲೆ ಆಸ್ಪತ್ರೆಗೆ ಹೋಗೋಣವೆಂದು ಕೆಲವರು ಹೇಳಿದರ, ಮತ್ತೆ ಕೆಲವರು ಶಂಕರನನ್ನು ಆಸ್ಪತ್ರೆಗೆ ಕರೆದುಕೊಂಡು ಚಿಕಿತ್ಸೆ ಕೊಡಿಸಿ ಆಮೇಲೆ ಸ್ಟೇಷನ್ನಿಗೆ ಹೋಗೋಣವೆಂದರು. ಮೊದಲು ಅವರೇನಾದರೂ ಹೋಗಿ ಕಂಪ್ಲೇಂಟ್ ಕೊಟ್ಟರೆ ನಾವೇ ಜೈಲು ಕಂಬಿ ಎಣಿಸುವವರು ಎಂದು ಕೆಲವರು ಹೇಳಿದರು. ಕೊನೆಗೆ ಎಲ್ಲರೂ ಸೇರಿ ಮೊದಲು ಸ್ಟೇಷನ್‌ಗೆ ಹೋಗಿ ನಂತರ ಆಸ್ಪತ್ರೆಗೆ ಹೋಗುವುದೆಂದು ತೀರ್ಮಾನಿಸಿದರು.

ಬೆಳಿಗ್ಗೆ ಎದ್ದದ್ದೇ ಒಂದಷ್ಟು ಸಂಬಂಧಿಗಳು, ಸ್ನೇಹಿತರು, ಶಂಕರ ಮತ್ತು ಆತನ ಹೆಂಡತಿ ಸೇರಿ ಹಿಂದಿನ ದಿನದ ಯೋಜನೆಯಂತೆ ಟಪಾಲ್ ಬಸ್ಸಿಗೆ ಹೋರಟರು. ಅದನ್ನು ಪಾಗಾರಮನೆಯವರು ನೋಡಿದರೂ ಆಸ್ಪತ್ರೆಗೆ ಹೋಗಿರಬೇಕೆಂದುಕೊಂಡರು. ಆದರೂ ಒಳಗೊಳಗೆ ಮಾತ್ರ ಭಯ ಇದ್ದೇ ಇತ್ತು. ತಾವು ಇವರಿಗಿಂತ ಮೋದಲೇ ಕಂಪ್ಲೇಂಟ್ ಕೊಡಬೇಕು ಎನ್ನುವ ಯೋಚನೆಯನ್ನು ಮಾಡದೇ ಇರಲಿಲ್ಲ. ಅಲ್ಲಿ ಅವರು ಕಂಪ್ಲೇಂಟ್ ಕೊಟ್ಟು ಇನ್‌ಸ್ಪೆಕ್ಟರ್ ಹತ್ತಿರ ಒಂದು ಪತ್ರ ಬರೆಸಿಕೊಂಡರು ಆಸ್ಪತ್ರೆಯಲ್ಲಿ ತೊಂದರೆಯಾಗಬಾರದೆಂಬ ಉದ್ದೇಶದಿಂದ. ಪೆಟ್ಟು ತುಂಬಾ ಬಿದ್ದಿದ್ದರಿಂದ ಶಂಕರಣ್ಣ ಒಂದೆರಡು ದಿನ ಆಸ್ಪತ್ರೆಯಲ್ಲೇ ಉಳಿಯಬೇಕಾಯಿತು. ಶಂಕರ ಮತ್ತು ಆತನ ಹೆಂಡತಿಯನ್ನು ಬಿಟ್ಟು ಉಳಿದವರು ಊರಿಗೆ ಮರಳಿದರು. ಮಾರನೇ ದಿನ ಪೋಲಿಸ್ ಜೀಪೊಂದು ಊರ ಹೊರಗಿನ ರಸ್ತೆಯ ಮೇಲೆ ಹೋದ ಸುದ್ದಿ ಹಬ್ಬಿತ್ತು. ಮುಂದಿನ ಊರವರೆಗೆ ಹೋದ ಪೋಲಿಸರು ಮತ್ತೆ ವಾಪಸ್ಸಾದರು. ಪೋಲಿಸರು ವಾಪಸ್ಸಾದುದನ್ನು ತಿಳಿದ ಪಾಗರಮನೆಯವುರು ಅವರು ತಮಗಾಗಿ ಬಂದವರಲ್ಲ ಎಂದುಕೊಂಡು ಮಾರನೇ ದಿನ ತಾವೇ ಖುದ್ದಾಗಿ ಪೋಲಿಸ್ ಕಂಪ್ಲೇಟ್ ಕೊಡಲು ಸ್ಟೇಷನ್ನಿಗೆ ಹೋದರು. ಪೋಲೀಸರ ಉದ್ದೇಶವೂ ಇದೇ ಆಗಿತ್ತು. ಅವರನ್ನು ಅಲ್ಲಿಯೇ ಹಿಡಿದು ಒಳಹಾಕಿ ಚೆನ್ನಾಗಿ ತಟ್ಟಿದರು. ಅವರ ಬಡಿತಕ್ಕೆ ಹೆದರಿ ಅವರು ಕೇಳುವ ಮೊದಲೇ ತಮ್ಮದೇ ತಪ್ಪೆಂದು ಒಪ್ಪಿಕೊಂಡರು. ಎರಡು ಮೂರು ದಿನಗಳ ಕಾಲ ಸ್ಟೇಷನಲ್ಲೇ ಆತಿಥ್ಯವಾಯಿತು. ಅವರ ಮನೆಯ ಹೆಣ್ಣು ಮಕ್ಕಳು, ಅವರ ಸಂಬಂಧಿಗಳು ಶಂಕರ ಮತ್ತು ಆತನ ದಾಯಾದಿಗಳ ಹತ್ತಿರ ಕಂಪ್ಲೇಂಟ್ ವಾಪಸ್ಸು ಪಡೆಯುವಂತೆ ಬೇಡಿಕೊಂಡರು. ನಂತರ ಊರಿನ ಮುಖಂಡರೆಲ್ಲರೂ ಸೇರಿ ಶಂಕರನ ಬಿಲಗದ ನೀರನ್ನು ಅವರು ಮುಟ್ಟಬಾರದು ಮತ್ತು ಊರಿನಲ್ಲಿ ಯಾರಿಗೂ ತೊಂದರೆ ಕೊಡಬಾರದು ಎಂಬ ಕರಾರಿನ ಮೇಲೆ ಕೇಸ್ ವಾಪಸ್ ಪಡೆಯುವುದೆಂದು ತೀರ್ಮಾನಿಸಲಾಯಿತು. ಅದರಂತೆಯೆ ಅವರ ಬಿಡುಗಡೆಯೂ ಆಯಿತು. ಅವರಿಗೆ ಈಗಾಗಲೇ ಬಹಳ ಅವಮಾನವಾಗಿದೆ ಇನ್ನು ಮುಂದೆ ಇವರಿಂದ ಯಾವ ತೊಂದರೆಯೂ ಇಲ್ಲವೆಂದು ಊರಿನವರೆಲ್ಲರೂ ನಿಟ್ಟುಸಿರುಬಿಟ್ಟರು. ಅದಕ್ಕೆ ತಕ್ಕಂತೆ ಅವರಲ್ಲಿ ಪರಿವರ್ತನೆಯೂ ಆಗಿತ್ತು. ಆದರೆ ಅವರಲ್ಲಿಯ ನಾಯಿಯ ಬಾಲದ ಕೆಲ ಗುಣಗಳು ಹಾಗೇ ಉಳಿದಿದ್ದವು. ಪೋಲಿಸ್ ಸ್ಟೇಷನ್‌ನಿಂದ ಬಂದ ಮೇಲೆ ಅವರ ಮನೆಗೆ ಅವರ ಸಂಬಂಧಿಕರು ಬರುವುದು ಹೋಗುವುದು ರಾತ್ರಿಯಿಡಿ ಕುಳಿತು ಮಾತನಾಡುವುದು ಕೇರಿಯ ಎಲ್ಲರ ಗಮನಕ್ಕೆ ಬಂದಿದ್ದರೂ ಸಂಬಂಧಿಕರು ಸುಖ ದು:ಖ ಕುರಿತು ಮಾತಾಡಿರಬಹುದು ಅಂದುಕೊಂಡಿದ್ದರು. ನಾಲ್ಕು ದಿನ ಜೈಲುವಾಸ ಮತ್ತು ಹಿಗ್ಗಾ ಮುಗ್ಗ ಬೆತ್ತದ ರುಚಿ ನೋಡಿದವರು ಮತ್ತೆ ಇಂಥ ಹಲ್ಕಾ ಕೆಲಸ ಮಾಡಲಾರರು ಎಂಬ ಊಹೆ ಸುಳ್ಳಾಗಲು ಹೊನ್ನಮ್ಮಜ್ಜಿ ಮಕ್ಕಳಂತೆ ಸಾಕಿ ಬೆಳಸಿದ ಗಿಡಮರಗಳು ನೆಲಕ್ಕುರುಳಿದ್ದೇ ಸಾಕ್ಷಿಯಾಗಿತ್ತು.

ಬಾವಿಯಲ್ಲಿ ನೀರು, ಬದುಕು ಕಣ್ಣೀರು

– ವೀರಣ್ಣ ಮಡಿವಾಳರ

ಈ ಬಾರಿಯ ಬರ ಬಹಳಷ್ಟು ಕಲಿಸಿದೆ. ಬಡವರ ಬದುಕಿನ ಬವಣೆಗಳಿಗೆ ಹೊಸ ಚಿತ್ರಗಳನ್ನು ಸೇರಿಸಿದೆ. ಪ್ರತಿ ಬಾರಿ ಚುನಾವಣೆಯಲ್ಲಿ ಹಣ ಹೆಂಡ ಬಟ್ಟೆಯ ಆಮಿಷ ತೋರಿಸಿ ವಂಚಿಸಿದ ಪರಂಪರೆಗೆ ಈಗ ಬರವೂ ಬಂಡವಾಳವಾದದ್ದು ಸೋಜಿಗವೇನು ಅಲ್ಲ. ಕೆಲವರಿಗೆ ನೀರು ಕೊಟ್ಟಂತೆ ಮಾಡಿ ಊರಿಗೆ ಕೊಟ್ಟೆವೆಂದು ಪತ್ರಿಕೆಗಳಲ್ಲಿ ನಗು ಮುಖ ಮೂಡಿಸಿಕೊಂಡವರು ತುಂಬ ಜನ. ಒಂದು ಕಾಲವಿತ್ತು ಮನೆಯಲ್ಲಿ ಹಿಟ್ಟಿಲ್ಲದಿದ್ದರೆ ಪಕ್ಕದ ಮನೆಯವರು ಕೇಳದೆಯೆ ಕೊಡುವಷ್ಟು ಉದಾರಿಯಾಗಿದ್ದರು. ಪಡೆದುಕೊಂಡವರು ಇದು ’ಕಡ’ ಮಾತ್ರ ಮರಳಿ ಪಡೆಯಬೇಕೆಂಬ ಶರತ್ತಿನೊಂದಿಗೆ ಪಡೆದು, ತಮ್ಮ ಕಾಲ ಬಂದಾಗ ಒಂದು ಹಿಡಿಯೂ ಕಡಿಮೆಯಿಲ್ಲದಂತೆ ಹಿಂತಿರುಗಿಸುವ ಪ್ರಾಮಾಣಿಕತೆ ಇತ್ತು. ಇಂದು ಹಾಗಲ್ಲ. ಕಿಲೋಮೀಟರ್ ಗಟ್ಟಲೆ ಕೊಡಪಾನ ನೀರಿಗೆ ಹಿಂಡು ಹಿಂಡು ಜನ ಉರಿಬಿಸಿಲಲ್ಲಿ ಬರಿಗಾಲಲ್ಲಿ ಅಲೆಯುತ್ತಿರುವುದ ಕಣ್ಣಾರೆ ಕಂಡೂ ಕಾಣದಂತೆ ಹೊರಟ ಪ್ರತಿನಿಧಿಗಳಿಗೆ, ಯಾರೋ ನೀರು ಕೊಟ್ಟು ಜನರನ್ನು ತನ್ನತ್ತ ಸೆಳೆಯುತ್ತಿರುವುದು ಗೊತ್ತಾದದ್ದೇ ತಡ ಮುಂದೆ ಚುನಾವಣೆ ಬರುತ್ತಿರುವುದು ನೆನಪಾಗಿ ಮತ್ತೆ ಜನರ ಮೇಲಿನ ಮಮಕಾರದ ವೇಷ, ಓಣಿಯಲ್ಲೊಂದು ನೀರಿನ ಟ್ಯಾಂಕರ್ ಪ್ರತ್ಯಕ್ಷ, ಇಂಥವರೇ ನೀರು ತಂದಿದ್ದಾರೆಂದು ಸಾರಲು ನಾಲ್ಕಾರು ಜನ ಕಾಲಾಳುಗಳು ತಯಾರು. ದುರಂತವೆಂದರೆ ಹೀಗೆ ಈ ಬರಪೀಡಿತ ಜನರ ಮೇಲಿನ ಪ್ರೀತಿ ಬಹಳಷ್ಟು ಜನಕ್ಕೆ ಒಮ್ಮೆಲೇ ಬಂದು ತಮ್ಮ ತಮ್ಮ ಬಂಡವಾಳ ಬಯಲು ಮಾಡಿಕೊಂಡರು. ಕೆಲವರು ನಗೆಪಾಟಲಿಗೆ ಈಡಾದರು. ಈಗ ಎಲ್ಲೆಲ್ಲೂ ನೀರೂ ಸಹ ರಾಜಕೀಯದ ದಾಳ.

ಬರದ ಬೆಂಕಿ ನಿಜವಾಗಿಯೂ ಸುಟ್ಟದ್ದು ರೈತರನ್ನು ಮತ್ತು ಶ್ರಮಿಕ ವರ್ಗವನ್ನು. ಶ್ರಮಸಂಸ್ಕೃತಿ ವ್ಯಾಖ್ಯಾನಿಸಿಕೊಳ್ಳುವ ನಮ್ಮ ಮಾದರಿಗಳು ಬದಲಾಗಬೇಕಿದೆ. ಹಾಗಂತ ಇಂದಿನ ಮಣ್ಣಿನ, ಬೆವರಿನ, ದುಡಿಮೆಯ ಸಂಗತಿಗಳು ಬಯಸುತ್ತಿವೆ. ಶ್ರಮವನ್ನು ಸಂಸ್ಕೃತಿಯಾಗಿಸಿ ಔದಾರ್ಯದಿಂದ, ಆದರದಿಂದ, ಗೌರವದಿಂದ ನೋಡುತ್ತಿರುವಾಗಲೇ ಅದರ ಆಳದ ದುರಂತಗಳನ್ನು, ಸಾವಿನ ವಾಸನೆಯನ್ನೂ ಅಷ್ಟೇ ಪ್ರಾಮಾಣಿಕತೆಯಿಂದ ನೋಡಲು ಒಳಗಣ್ಣುಗಳು ಬೇಕಿದೆ.

ನೀರು ಬರಿದಾಗಿ ಬೇಸತ್ತು, ಅದೆಷ್ಟೋ ಜನ ಕಂಗಾಲಾದರು. ಕಣ್ಣ ಮುಂದೆಯೇ ಉರಿಬಿಸಿಲಿನ ಝಳಕ್ಕೆ ಸುಟ್ಟು ಹೋಗುತ್ತಿರುವ ಬೆಳೆಯನ್ನು ಬದುಕಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡಿದರು. ಅದರಲ್ಲಿ ಬಹಳಷ್ಟು ಜನ ಸರಿಯೋ ತಪ್ಪೋ ಲೆಕ್ಕಕ್ಕೆ ಸಿಗದಷ್ಟು ಕೊಳವೆ ಬಾವಿಗಳನ್ನು ತೆಗೆಸಿದರು, ಬಾವಿಗಳನ್ನು ತೋಡಿಸಲು ಮುಂದಾದರು. ಬಹುಶಃ ಬಹಳಷ್ಟು ಕಡೆ ಹಿಂದೆ ಎಂದೂ ಈ ಪ್ರಮಾಣದಲ್ಲಿ ಕಂಡಿರದ ಕೊಳವೆ ಬಾವಿಯ ಕೊರೆಯುವಿಕೆ ಈ ಬಾರಿ ಭೂಮಿಯ ಒಡಲು ಬಗಿದವು. ಸಿಕ್ಕಿದ್ದು ಎರಡಿಂಚು ನೀರಿಗಿಂತ ಹೆಚ್ಚಿಲ್ಲ. ಅದಕ್ಕೂ ಕಡಿಮೆ ಬಂದವರು ಮತ್ತೊಂದು ಪಾಯಿಂಟ್ ತೋರಿಸಿ ಬೆಳೆಯ ಜೊತೆ ಕೈಯನ್ನೂ ಸುಟ್ಟುಕೊಂಡರು. ಹೀಗೆ ಇದು ನಡೆಯುತ್ತಿರುವಾಗಲೇ ಕೆಲವೇ ದಿನಗಳಲ್ಲಿ ನೀರು ಬಿದ್ದಿದ್ದ ಬೋರ್‌ವಲ್‌ಗಳು ಬತ್ತಿಹೋದವು, ಮುಚ್ಚಿಯೂ ಹೋದವು. ಇದನ್ನು ಗಮನಿಸಿದ ಕೆಲವರು ಬಾವಿಗಳನ್ನು ತೆಗೆಸಿದರೆ ಶಾಶ್ವತವಾಗಿ ನೀರಾಗುತ್ತದೆ, ಒಂದು ಬಾರಿ ಮಳೆಯಾದರೂ ಸಾಕು ಎಲ್ಲಿಂದಲಾದರೂ ನೀರು ಬಂದು ಸೇರಿಕೊಳ್ಳುತ್ತದೆ ಎಂದು ಯೋಚಿಸಲಾರಂಭಿಸಿ ಬಾವಿ ತೋಡಿಸಲು ಮುಂದಾದರು. ಒಂದು ಊರಿಗೆ ನೂರರ ಸಂಖ್ಯೆಗಳಲ್ಲಿ ಕೊಳವೆ ಬಾವಿಗಳ ಜೊತೆಜೊತೆಗೆ ಹತ್ತಾರು ಬಾವಿಗಳು ಪ್ರಾರಂಭವಾದವು. ಅನುಮತಿ ಪಡೆಯುವ ಕಾನೂನು ಮರೆಯಲ್ಪಟ್ಟವು. ರೈತರಿಂದ ಗೊತ್ತಿಲ್ಲದೆ, ಆಡಳಿತದಿಂದ ಗೊತ್ತಿದ್ದೂ.

ಕೂಲಿ ಕಾರ್ಮಿಕರ ಬದುಕಿನ ಚೈತನ್ಯ ಮತ್ತು ದುರಂತಗಳೆರಡೂ ಬೇರೆ ಎಲ್ಲ ಶ್ರಮಿಕರಿಗಿಂತ ಭಿನ್ನವಾದವು. ಹಾಗೆಯೇ ಬಾವಿ ತೋಡಲು ಬಂದಿರುವ ಇಲ್ಲಿನ ಕೆಲವು ಕುಟುಂಬಗಳ ಕಥೆಗಳಲ್ಲಿ ವ್ಯಥೆಗಳೇ ತುಂಬಿವೆ. ಸುಮಾರು ದಶಕಗಳಿಂದ ಬಾವಿ ತೋಡುವುದನ್ನೇ ಕಾಯಕ ಮಾಡಿಕೊಂಡಿರುವ ಒಂದು ಸಮುದಾಯವನ್ನು ಮಾತನಾಡಿಸಿದಾಗ ಹಲವು ಅಸಹನೀಯ ಸತ್ಯಗಳು ಗೊತ್ತಾದವು. ಬಾವಿ ತೋಡುವ ಕ್ರಿಯೆಯೇ ಅತ್ಯಂತ ಎಚ್ಚರದ ಶ್ರಮವನ್ನು ಬೇಡುವಂಥದ್ದು. ಹೀಗೆ ಬಾವಿ ತೋಡುವಾಗ ಯಾರದೋ ಜೀವ ಯಾವುದೋ ಕಲ್ಲಿನಲ್ಲೋ , ಕುಸಿದು ಬೀಳುವ ಗೋಡೆಯಲ್ಲೋ, ಅಥವಾ ನೀರನ್ನೆತ್ತುವ ಯಂತ್ರದ ಕೈಗೋ ಕೊಟ್ಟಿರುವಂಥ ಅಪಾಯದ ಸ್ಥಿತಿ.

ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕದರಾಪುರ ತಾಂಡಾ ಬಾವಿ ತೋಡುವ ಕಾಯಕವನ್ನೇ ಮಾಡುವ ಸಮುದಾಯಗಳ ಒಂದು ಊರು. ಇಲ್ಲಿನ ಕುಟುಂಬಗಳು ಹಲವಾರು ದಶಕಗಳಿಂದ ಬಾವಿ ತೋಡುತ್ತ ಬಂದಿವೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ಸಾವಿರಾರು ರೈತರು ಈ ದುಡಿಮೆಗಾರರ ಶ್ರಮದಿಂದ ಹೊಲದ ಬೆಳೆಗೆ ನೀರು ಕಂಡು ನೆಮ್ಮದಿಯಿಂದಿದ್ದಾರೆ. ಆದರೆ ಬಾವಿ ತೋಡಿದವರು ಮಾತ್ರ ಅಲ್ಲೇ ಇದ್ದಾರೆ.

ರಮೇಶ ರಾಮಚಂದ್ರ ಜಾಧವ ಎಂಬ ನಲವತ್ತೈದು ವರ್ಷದ ಈ ಕೂಲಿ ಕಾರ್ಮಿಕ ಬದುಕಿಗೆ ತೆರೆದುಕೊಂಡಿದ್ದೇ ಬಾವಿ ತೋಡುವುದರ ಮೂಲಕ. ಈತನ ಇಲ್ಲಿಯವರೆಗಿನ ಮೂರು ದಶಕಗಳು ಬಾವಿ ತೋಡುವುದನ್ನು ಮಾತ್ರವೇ ತುಂಬಿಕೊಂಡಿವೆ. ತನ್ನ ತಂದೆಯಿಂದ ಬಳುವಳಿಯಾಗಿ ಬಂದ ಈ ದಗದ ತನ್ನ ಮೂಲಕ ತನ್ನ ಮಕ್ಕಳನ್ನೂ ಒಳಗು ಮಾಡಿಕೊಂಡಿದೆ. ತನ್ನ ಕಾಯಕದ ಬಗ್ಗೆ ಆತನನ್ನು ಕೇಳಿದಾಗ ಹೀಗೆ ಹೇಳಿದ: “ನಾನು ಭಾಳ ಚಿಕ್ಕವನಿದ್ದಾಗಿನಿಂದ ಈ ಕೆಲಸ ಮಾಡಿಕೋತ ಬಂದಿನ್ರಿ, ನಮಗ ಗೊತ್ತಿರೋದು ಬಾವಿ ತೋಡೋದು ಒಂದರಿ. ಬಾವಿ ತೋಡಿಯೇ ನಾನು ನನ್ನ ಹೆಂಡ್ತಿ, ನನ್ನ ಮಕ್ಳು, ನನ್ನವ್ವ ಹೊಟ್ಟಿತುಂಬಿಕೋತೀವ್ರಿ. ವರ್ಷಕ್ಕೆ ಕಡಿಮೀ ಅಂದ್ರ ಎಂಟು ಬಾವಿ ತೋಡತೀವ್ರಿ, ಒಂದೊಂದು ಬಾವಿಗೆ ಹದಿನೈದು ಇಪ್ಪತ್ತು ದಿನ, ಒಂದೊಂದು ಬಾವಿ ಒಂದು ತಿಂಗಳೂ ಹಿಡೀತವ್ರಿ. ಮೂವತ್ತು ವರ್ಷದಾಗ ಕರ್ನಾಟಕ ಮಹಾರಾಷ್ಟ್ರದ ಹಲವಾರು ಕಡೆ ನಾವು ಕಡಿದ ಬಾವಿ ನೀರು ತುಂಬಿಕೊಂಡು ಎಲ್ಲರ ಬಾಳೆ ಹಸನು ಮಾಡೇವ್ರಿ, ಆದ್ರ ನಮ್ಮ ಬದುಕ ಮೂರಾಬಟ್ಟಿ ಆಗೇತ್ರಿ. ಇಷ್ಟು ವರ್ಷ ಬಾವಿ ಕಡದ್ರೂ ಎಲ್ಲೋ ಒಂದಿಷ್ಟು ಗಾಯ ಆಗಿದ್ದು , ಕೈಕಾಲು ಮುರಿಯೋದು ಆಗಿದ್ದು ಬಿಟ್ರ ಎಂದೂ ಜೀವ ಹಾನಿ ಆಗಿದ್ದಿಲ್ರಿ, ಆದ್ರ ಈಗ ಮೂರು ತಿಂಗಳದಾಗ ನಮ್ಮವ್ವ , ನಮ್ಮ ತಂಗಿ ಇಬ್ರು ಬಾವಿ ತೋಡದ್ರಗ ಸತ್ತು ಹೋದರರ್ರಿ. ನಿಪ್ಪಾಣಿ ತಾಲೂಕಿನ ಆಡಿಬೆನಾಡಿ ಊರಾಗ ಬಾವಿ ತೋಡೋ ಮುಂದ ನನ್ನ ತಂಗಿ ಜೀಮಾಬಾಯಿ ನೀರೆತ್ತುವ ಮೋಟಾರು ಚಾಲು ಮಾಡೋ ಮುಂದ ವೈರ್ ಕಾಲಿಗೆ ಸುತ್ತಿ ಶಾಕ್ ಹೊಡದು ಸತ್ತಳ್ರಿ, ಈಗ ಮೊನ್ನೆ ನಮ್ಮ ತಾಯಿ ಕಸ್ತೂರಬಾಯಿ ಬಾವಿಯಿಂದ ಕಲ್ಲು ತುಂಬಿದ ಕಬ್ಬಿಣ ಬುಟ್ಟಿ ಎತ್ತೋ ಮುಂದ ತಪ್ಪಿ ನಮ್ಮವ್ವನ ಮ್ಯಾಲೆ ಬಿದ್ದು ಆಕಿನು ಸತ್ತಳ್ರಿ. ಬಾವಿ ತೋಡದ ಇದ್ರ ಹೊಟ್ಟಿಗಿಲ್ಲದ ಸಾಯ್ತೀವ್ರಿ, ಬಾವಿ ತೋಡಾಕ ಬಂದ್ರ ಹಿಂಗ ದುರಂತದಾಗ ಸಾಯ್ತೀವ್ರಿ ಎಲ್ಲಾ ಕಡೆ ನಮಗ ಸಾವ ಐತ್ರಿ.” ಹೀಗೆ ಹೇಳುವಾಗ ಆತನಿಗೆ ಹುಟ್ಟಿನಿಂದ ಇಲ್ಲಿವರೆಗೆ ಅನುಭವಿಸಿದ ನೋವು ಒತ್ತರಿಸಿ ಬಂದಿತ್ತು.

ಈ ಗಡಿನಾಡು ಭಾಗ ಸುಮಾರು ಕಡೆ ಕಲ್ಲಿನ ಪದರುಗಳಿಂದ ನಿರ್ಮಿತವಾಗಿದೆ. ಈ ಜನ ಕಡಿಯುವ ಬಾವಿಯ ಉದ್ದ ಮತ್ತು ಅಗಲ 50×50 ಅಡಿ , ಆಳ 70 ರಿಂದ 80 ಅಡಿಯವರೆಗೆ ಇರುತ್ತದೆ. ಇಷ್ಟು ಅಳತೆಯ ಬಾವಿಯ ತುಂಬ ಬಹಳಷ್ಟು ಕಡೆ ಕಲ್ಲೇ ತುಂಬಿರುತ್ತವೆ. ಕಡಿಯುವಾಗ ಸರಿಯಾಗಿ ನಿಗಾವಹಿಸಿ ಕೆಲಸ ಮಾಡಲೇಬೇಕು. ಒಂದೊಂದು ಅಡಿ ಆಳಕ್ಕೆ ಹೋದಾಗಲೂ ಅಪಾಯಗಳ ಸಾಧ್ಯತೆ ಹೆಚ್ಚುತ್ತಾ ಹೋಗುತ್ತವೆ. ಆಳಕ್ಕೆ ಹೋದಂತೆ ಮೇಲಿನ ಕಲ್ಲಿನ ಪದರದ ಗೋಡೆಗಳು ಬಿಚ್ಚಿಕೊಂಡು ಮೇಲೆ ಬಿದ್ದು ಜೀವಂತ ಸಮಾಧಿಯಾಗುವ ಸಾಧ್ಯತೆಗಳಿರುತ್ತವೆ. ಈ ಕೂಲಿಕಾರರು ಎಲ್ಲ ಅಪಾಯಗಳನ್ನು ತಮ್ಮ ಬದುಕಿನ ದೈನಿಕದ ಸಂಗಾತಿಗಳೆಂದುಕೊಂಡು ಕೆಲಸ ಮಾಡುತ್ತಾರೆ. ಬಾವಿ ಆಳದಲ್ಲಿರುವುದರಿಂದ ಅದನ್ನು ಕಡಿಯುವ ಶ್ರಮ ನೋಡುಗರಿಗೆ ಅಷ್ಟು ಅನುಭವಕ್ಕೆ ಬರುವುದಿಲ್ಲ. ಆದರೆ ಈ ಜನ ಒಂದೊಂದು ಬಾವಿ ಕಡಿದಾಗಲೂ ಇವರ ದೇಹದಿಂದ ಹರಿದ ಬೆವರು, ರಕ್ತ ಅದೆಷ್ಟೋ. ಅದೆಷ್ಟೋ ಗುಡ್ಡಗಳನ್ನು ಕಡಿದು ಹಾಕಿದ ಶ್ರಮ ಇವರದ್ದು ಎನ್ನಿಸುತ್ತದೆ.

ಕದರಾಪೂರ ತಾಂಡಾದ ಈ ಜನ ಸಮುದಾಯ ಊರಿನಲ್ಲಿರುವ ಜಮೀನನ್ನು ಬಿತ್ತನೆಗೆ ಸಿದ್ದಮಾಡಿ ಹಿರಿಯರನ್ನು ಬಿಟ್ಟು, ಬಾವಿಕಡಿಯಲು ತಮ್ಮ ಸಂಸಾರದ ಗಂಟನ್ನು ಹೊತ್ತು ಊರೂರು ಅಲೆಯುತ್ತಾರೆ. ಹೀಗೆ ಇವರ ಅಲೆದಾಟ ಕರ್ನಾಟಕವನ್ನೂ ದಾಟಿ ಮಹಾರಾಷ್ಟ್ರದ ಹಲವು ಜಿಲ್ಲೆಗಳನ್ನೂ ವ್ಯಾಪಿಸಿದೆ. ಹೊಲಗಳಿದ್ದಲ್ಲೇ ಟೆಂಟು ಹಾಕಿಕೊಂಡು ಬಾವಿ ಪಕ್ಕವೇ ರಾತ್ರಿ ಹಗಲು ದೂಡುತ್ತಾರೆ. ಇವರೊಂದಿಗೆ ಹಸುಗೂಸುಗಳು, ಖಾಯಿಲೆ ಬಿದ್ದ ಸಂಬಂಧಿಕರು, ವಯಸ್ಸಾದವರು ಎಲ್ಲರಿಗೂ ಇದೇ ಸ್ಥಿತಿ. ಕತ್ತಲಾದರೆ ಬೆಳಕಿಲ್ಲ, ಹಗಲಾದರೆ ಅಡವಿಯೇ ಎಲ್ಲ. ಬೆಳಿಗ್ಗೆ ಎಂಟುಗಂಟೆಗೆ ಕೆಲಸಕ್ಕೆ ತೊಡಗಿದರೆಂದರೆ ಕತ್ತಲಾಗುವವರೆಗೆ ಕೆಲಸ ಮಾಡುತ್ತಲೇ ಇರುತ್ತಾರೆ. ಬಾವಿ ದಂಡೆಯಲ್ಲಿಯೇ ಊಟ, ದಣಿವಾದಾಗ ಬಾವಿದಂಡೆಯಲ್ಲಿ ಸ್ವಲ್ಪ ಹೊತ್ತು ವಿರಾಮ.

ಇಲ್ಲಿ ಇನ್ನೊಂದು ಮುಖ್ಯ ವಿಚಾರವೆಂದರೆ ಹೀಗೆ ಅಲೆಮಾರಿಗಳಾಗಿ ಬದುಕಿನ ನೊಗ ಹೊತ್ತ ಈ ದಲಿತ ಸಮುದಾಯ ಎಲ್ಲರೂ ಸಂಬಂಧಿಕರು, ಒಂದೇ ಊರಿನವರು. ಎಲ್ಲರೂ ಒಟ್ಟಾಗಿ ಊರು ಬಿಟ್ಟು ಬಾವಿ ಕಡಿಯುವ ವೇಳೆಗೆ ಏಳು ಎಂಟು ಜನರ ಗುಂಪಾಗಿ ಅಲ್ಲೊಂದು ಇಲ್ಲೊಂದು ಬಾವಿ ಕಡಿಯುವುದನ್ನು ಗುತ್ತಿಗೆ ತೆಗೆದುಕೊಳ್ಳುತ್ತಾರೆ. ಹೀಗೆ ಎರಡು ಜೀವ ಕಳೆದುಕೊಂಡದ್ದಕ್ಕೆ ಪರಿಹಾರದ ಕುರಿತು ಹೊಲದ ಮಾಲೀಕನನ್ನು ಪ್ರಶ್ನಿಸಿದರೆ ಅವ್ರಿಗೆ ಗುತ್ತಿಗಿ ಕೊಟ್ಟಿರತೀವ್ರಿ, ಏನ ಅಪಾಯ ಆದ್ರೂ ಅವ್ರ ಹೊಣಿರಿ ಎನ್ನುತ್ತಾನೆ. ಅಂದರೆ ಈ ಬಾವಿ ಕಡಿಯುವ ಜನ ತಮ್ಮ ಜೀವವನ್ನು ಪಣಕ್ಕಿಡುವುದರ ಜೊತೆಜೊತೆಗೇ ಅವರು ಕೊಡುವ ದುಡ್ಡಿಗಾಗಿ ಬಾವಿಕಡಿಯುವುದನ್ನು ಗುತ್ತಿಗೆ ಪಡೆದಿದ್ದಾರೆಂಬುದು ಹೊಲದ ಮಾಲೀಕನ ಅಭಿಪ್ರಾಯ.

ಈ ದುಡಿಯುವ ಜನರ ಬದುಕಿನ ಚೈತನ್ಯ ದುಡಿಯುವಿಕೆಯಲ್ಲಿಯೇ ಹಾಸುಹೊಕ್ಕಾಗಿಬಿಟ್ಟಿದೆ. ಇವರು ಕಡಿದ ಬಾವಿಯಿಂದ ತಲೆಮಾರುಗಳವರೆಗೆ ರೈತನ ಬದುಕು ಹಸಿರಾಗುತ್ತದೆ, ಆದರೆ ಹೀಗೆ ಬಾವಿ ಕಡಿದ ಜನ ಸಿಕ್ಕಷ್ಟು ತೆಗೆದುಕೊಂಡು ಮತ್ತೊಂದು ಬಾವಿ ಕಡಿಯಲು ಅಣಿಯಾಗುತ್ತಾರೆ. ರಮೇಶ ಜಾಧವರನ್ನು ಎಷ್ಟು ಬಾವಿ ಇದುವರೆಗೆ ಕಡಿದಿದ್ದೀರಿ ಎಂದು ಪ್ರಶ್ನಿಸಿದರೆ ಆತ ಹೀಗೆ ಹೇಳುತ್ತಾನೆ,  “ಎಷ್ಟು ಬಾವಿ ಕಡಿದೀನಿ ಅಂತ ಲೆಕ್ಕ ಇಟ್ಟಿಲ್ರಿ, ವರ್ಷಕ್ಕ ಕಡಿಮೀ ಅಂದ್ರ ಎಂಡು ಬಾವಿ ಕಡಿತೀವ್ರಿ, ಮೂವತ್ತು ಮೂವತ್ತೈದು ವರ್ಷದಿಂದ ಹೀಂಗ ಬಾವಿ ಕಡಕೋತ ಬಂದೀನ್ರಿ,” ಎನ್ನುತ್ತಾನೆ. ಅಂದರೆ ವರ್ಷಕ್ಕೆ ಐದು ಬಾವಿಯಂತೆ ತೆಗೆದುಕೊಂಡರು ಇಲ್ಲೀವರೆಗೆ ಆತ ಎರಡು ನೂರಕ್ಕೂ ಹೆಚ್ಚು ಬಾವಿಗಳನ್ನು ಕಡಿದಿದ್ದಾನೆ ಎಂದಾಯಿತು! ಇಷ್ಟು ವರ್ಷ ಬಾವಿ ಕಡಿದಿದ್ದರಿಂದ ನಿನಗ ಏನೇನು ಲಾಭವಾಗಿದೆ ಎಂದು ಕೇಳಿದರೆ ಲಾಭ ಅಂತ ಏನೂ ಇಲ್ರಿ ಎಲ್ಲಾರ ಹೊಟ್ಟಿ ತುಂಬೇತ್ರಿ ಎನ್ನುತ್ತಾನೆ.

ಈತನಿಗಿರುವ ಐದು ಮಕ್ಕಳಲ್ಲಿ ಈಗಾಗಲೇ ಮೂರು ಮಕ್ಕಳು ಕೆಲಸ ಮಾಡುವ ತಾಕತ್ತು ಬಂದ ಕೂಡಲೇ ಶಾಲೆ ಬಿಟ್ಟು ಈತನೊಂದಿಗೆ ಬಾವಿ ಕಡಿಯುತ್ತಿದ್ದಾರೆ. ಹೀಗೇಕೆ ಮಾಡುತ್ತೀರಿ ಎಂದರೆ ಅವರು ಸಾಲಿ ಕಲಿಯಾಕ ವಲ್ಲೆ ಅಂತಾರ್ರಿ ಎನ್ನುತ್ತಾನೆ. ಈ ಸಮುದಾಯವನ್ನು ಅಜ್ಞಾನ, ಮೂಢನಂಬಿಕೆ ಒಟ್ಟೊಟ್ಟಿಗೆ ಕಿತ್ತು ತಿನ್ನುತ್ತಿವೆ. ಇಷ್ಟು ವರ್ಷಗಳಾದರೂ ಇವರಿಗೆ ಅಕ್ಷರದ ಬಗ್ಗೆ ನಂಬಿಕೆಯೇ ಹುಟ್ಟಿಲ್ಲ. ತನ್ನ ಬದುಕಿನಲ್ಲಿ ಇತ್ತೀಚೆಗೆ ನಡೆದ ದುರಂತಗಳಿಗೆ ಆತ ಇಷ್ಟು ವರ್ಷ ಎಂದೂ ಹಿಂಗಾಗಿದ್ದಿಲ್ರಿ, ನಮ್ಮೂರಾಗ ನಮ್ಮ ತಮ್ಮನ ಮದುವ್ಯಾಗ ಎರಡೂ ನಿಂಬೆ ಹಣ್ಣು ಮಂತ್ರಿಸಿ ಹಂದರದಾಗ ಒಗದಾರ್ರಿ ನಮಗ ಕೇಡು ಮಾಡಾಕ, ಅದ್ಕ ಹಿಂಗಾಗೇತ್ರಿ ಎಂದು ತನ್ನ ಕಾರಣ ಹೇಳುತ್ತಾನೆ. ಹೀಗೆ ಹೇಳುವ ಈ ಮನಸ್ಥಿತಿ ಆತನಿಗೆ ಬಂದದ್ದಾದರೂ ಹೇಗೆ? ಮೇಲ್ವರ್ಗ, ಪುರುಹಿತಶಾಹಿ ವ್ಯವಸ್ಥೆಯ ಈ ಸಮಾಜ ಈ ರೀತಿಯ ಅಜ್ಞಾನದ ಬೀಜಗಳನ್ನು, ಮೂಢನಂಬಿಕೆಗಳನ್ನು ಅವರು ಅನುಭವಿಸುತ್ತಿರುವುದು ನೋವು ಎನ್ನುವುವದು ಅವರಿಗೆ ಗೊತ್ತಾಗದಂತೆ ಮಾಡಲು ಇವರ ಎದೆಗಳಲ್ಲಿ ಬಿತ್ತಿದೆಯೇನೋ ಎನ್ನಿಸುತ್ತದೆ. ಇವರ ಬಾವಿ ತೋಡುವ ಶ್ರಮ ಬೆಲೆಕಟ್ಟಲಾಗದ್ದು. ಆದರೆ ಇವರ ಬದುಕಿಗೇ ಯಾರೋ ಬಾವಿ ತೋಡಿ ಬಿಟ್ಟಿದ್ದಾರೆ, ಮೇಲೆತ್ತುವವರು ಎಲ್ಲೋ ಯಾವುದೋ ಯೋಚನೆಯಲ್ಲಿದ್ದಾರೆ! ಅದು ಎಲ್ಲರಿಗೂ ಗೊತ್ತಿರುವ ವಿಚಾರ ಅಲ್ಲವೆ?

ಬಾವಿಗಿಂತಲೂ ಜೀವ ಅಗ್ಗ

ಬಾವಿ ತೋಡುವ ಜನರಲ್ಲಿ ಆಯಾ ಊರುಗಳ ಜನರ ಪರಿಸ್ಥಿತಿಗಳು ಬೇರೆ. ತಮ್ಮ ತಮ್ಮಲ್ಲಿಯೇ ಕೆಲವು ಗುಂಪುಗಳನ್ನು ಮಾಡಿಕೊಂಡು ಬಾವಿ ಕಡಿಯುವುದನ್ನು ಗುತ್ತಿಗೆ ಹಿಡಿಯುತ್ತಾರೆ. ಹಾಗೆ ನೋಡಿದರೆ ಈ ರೀತಿ ಬಾವಿ ತೋಡಿ ದುಡಿಯುವುದು ಇವರೇ ಹೇಳುವಂತೆ ಇವರಿಗೆ ಸ್ವಲ್ಪ ಲಾಭದಾಯಕವಂತೆ. ನಾಲ್ಕು ದುಡ್ಡು ಹೆಚ್ಚಿಗೆ ಕೂಲಿ ಬಂದರೆ ನಮ್ಮ ಜನ ಅದೆಷ್ಟು ಸಹಜವಾಗಿ ತಮ್ಮ ಪ್ರಾಣವನ್ನು ಪಣಕ್ಕಿಡುತ್ತಾರೆ. ಇಲ್ಲಿ ಜೀವದ ಬೆಲೆ ತೋಡುವ ಬಾವಿಗಿಂತ ಅಗ್ಗವಾಗಿ ಹೋಗಿದೆಯಲ್ಲ, ಇದಕ್ಕಾರು ಹೊಣೆ?

ಇದೇ ಜುಲೈ ನಾಲ್ಕರ ಸಂಜೆ ಇನ್ನೇನು ಕತ್ತಲಾಗಬೇಕು, ಬಂಬಲವಾಡದ ಒಂದು ಬಾವಿ ಕಡಿಯುತ್ತಿದ್ದ ಜನರ ಬದುಕಿಗೆ ಕತ್ತಲಾವರಿಸಿಬಿಟ್ಟಿತು. ಬೆಳಿಗ್ಗೆಯಿಂದ ಎಡೆಬಿಡದೆ ಬಾವಿ ಕಡಿಯುತ್ತಿದ್ದವರು ಇನ್ನೇನು ಮುಗಿಸಿ ಮನೆಗೆ ಹೊರಡಬೇಕು ಅಷ್ಟರಲ್ಲಿ ನಡೆದ ಅನಾಹುತ ತಲ್ಲಣಿಸುವಂಥದ್ದು. ನಲವತ್ತು ಅಡಿಗಿಂತ ಹೆಚ್ಚು ಆಳ ಕಡಿದಿರುವ ಬಾವಿಯಿಂದ ಕೆಲಸ ಮುಗಿಯಿತು ಮೇಲೆ ಹೋಗೋಣ ಎಂದು ನಿರ್ಧರಿಸಿದ ಚುಕ್ಯಾ, ಪ್ರಕಾಶ, ಲಕ್ಷ್ಮಣ ಮೇಲೆ ಬರಲು ಕಲ್ಲು ಎತ್ತಿ ಹಾಕಲು ಇದ್ದ ಬುಟ್ಟಿಯನ್ನೇ ಬಳಸಲು ಬಯಸಿ, (ಪ್ರತಿಸಾರಿ ಅವರು ಮೇಲೆ ಬರಲು ಬಳಸುತ್ತಿದ್ದುದು ಅದೇ ಕಬ್ಬಿಣ ಬುಟ್ಟಿಯೇ. ಆದರೆ ಈ ಬಾರಿ ಪರಿಸ್ಥಿತಿ ಬೇರೆ ಇತ್ತು) ಯಾರಿ ಮಶಿನ್ ನಡೆಸಲು ಮೇಲೆ ಇದ್ದವನಿಗೆ ಹೇಳಿ, ತಾವು ಬಾವಿಯಲ್ಲಿದ್ದ ಕಬ್ಬಿಣ ಬುಟ್ಟಿಯಲ್ಲಿ ಮೂವರು ಕುಳಿತಿದ್ದಾರೆ. ವಿಷಾದದ ಸಂಗತಿಯೆಂದರೆ ಯಾರಿ ಯಂತ್ರವನ್ನು ನಡೆಸುತ್ತಿದ್ದವ ಬಹಿರ್ದೆಸೆಗೆ ಹೋಗಿದ್ದನಂತೆ, ಅಲ್ಲಿಯೇ ಬಾವಿಯ ಮೇಲಿದ್ದ ಮತ್ತೊಬ್ಬ ಮಶಿನ್ ನಡೆಸುವ ಮೂರ್ಖತನಕ್ಕಿಳಿದ. ಯಂತ್ರ ಮೂವರು ಕುಳಿತಿದ್ದ ಬುಟ್ಟಿ ಹೊತ್ತು ಮೇಲಕ್ಕೆ ಬರುತ್ತಿದ್ದಂತೆ ಅವಸರಿಸಿದ ಯಂತ್ರ ನಡೆಸುವವ ಜೋರಾಗಿ ಮಶಿನ್‌ನ್ನು ಈಚೆ ಎಳೆದದ್ದೇ ತಡ ಅನಾಹುತ ನಡೆದು ಹೋಯಿತು. ಇನ್ನೂ ಪೂರ್ತಿ ಮೇಲೆ ಬರದೇ ಇದ್ದ ಬುಟ್ಟಿ ಬಾವಿಯ ಗೋಡೆಗಳಿಗೆ ಜೋರಾಗಿ ಅಪ್ಪಳಿಸಿದೆ. ಅಪ್ಪಳಿಸಿದ ರಭಸಕ್ಕೆ ಮೂವರು ಕುಳಿತಿದ್ದ ಬುಟ್ಟಿ ಮುಗುಚಿದೆ. ಪ್ರಕಾಶ ಹೇಗೋ ಸಿಕ್ಕ ಆ ಯಂತ್ರದ ಕಬ್ಬಿಣದ ಚೈನಿಗೆ ಜೋತು ಬಿದ್ದ. ಆದರೆ ಚುಕ್ಯಾ, ಲಕ್ಮಣ ಇಬ್ಬರು ಅಷ್ಟು ಎತ್ತರದಿಂದ ಬಾವಿಯೊಳಕ್ಕೆ ಬಿದ್ದು ಜೀವ ಬಿಟ್ಟರೆಂದು ಅಲ್ಲಿದ್ದವರು ಹೇಳುತ್ತಾರೆ.

ಹೀಗೆ ಅನ್ಯಾಯವಾಗಿ ಜೀವ ಬಿಟ್ಟ ಲಕ್ಷ್ಮಣ ಎಮ್.ಎ. ಓದುತ್ತಿದ್ದ. ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡ ಅವನ ತಂದೆಯ ದುಃಖ ಹೇಳತೀರದ್ದು. ಬೇಡವೆಂದರೂ ಕೇಳದೆ ಮನೆಯಲ್ಲಿ ಕೆಲಸ ಮಾಡದೇ ಕಾಲಹರಣ ಮಾಡುವುದೇಕೆಂದು ಬಾವಿ ತೋಡಲು ಬಂದಿದ್ದ ಲಕ್ಷ್ಮಣನ ಜೀವ ಬಾವಿ ಪಾಲಾಗಿ ಹೋಯಿತು.

ಚಿತ್ರಗಳು: ಮಲ್ಲಿಕಾರ್ಜುನ ದಾನಣ್ಣವರ

(ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನದ ವಿಸ್ತೃತ ರೂಪ.)