ಬಾವಿಯಲ್ಲಿ ನೀರು, ಬದುಕು ಕಣ್ಣೀರು

– ವೀರಣ್ಣ ಮಡಿವಾಳರ

ಈ ಬಾರಿಯ ಬರ ಬಹಳಷ್ಟು ಕಲಿಸಿದೆ. ಬಡವರ ಬದುಕಿನ ಬವಣೆಗಳಿಗೆ ಹೊಸ ಚಿತ್ರಗಳನ್ನು ಸೇರಿಸಿದೆ. ಪ್ರತಿ ಬಾರಿ ಚುನಾವಣೆಯಲ್ಲಿ ಹಣ ಹೆಂಡ ಬಟ್ಟೆಯ ಆಮಿಷ ತೋರಿಸಿ ವಂಚಿಸಿದ ಪರಂಪರೆಗೆ ಈಗ ಬರವೂ ಬಂಡವಾಳವಾದದ್ದು ಸೋಜಿಗವೇನು ಅಲ್ಲ. ಕೆಲವರಿಗೆ ನೀರು ಕೊಟ್ಟಂತೆ ಮಾಡಿ ಊರಿಗೆ ಕೊಟ್ಟೆವೆಂದು ಪತ್ರಿಕೆಗಳಲ್ಲಿ ನಗು ಮುಖ ಮೂಡಿಸಿಕೊಂಡವರು ತುಂಬ ಜನ. ಒಂದು ಕಾಲವಿತ್ತು ಮನೆಯಲ್ಲಿ ಹಿಟ್ಟಿಲ್ಲದಿದ್ದರೆ ಪಕ್ಕದ ಮನೆಯವರು ಕೇಳದೆಯೆ ಕೊಡುವಷ್ಟು ಉದಾರಿಯಾಗಿದ್ದರು. ಪಡೆದುಕೊಂಡವರು ಇದು ’ಕಡ’ ಮಾತ್ರ ಮರಳಿ ಪಡೆಯಬೇಕೆಂಬ ಶರತ್ತಿನೊಂದಿಗೆ ಪಡೆದು, ತಮ್ಮ ಕಾಲ ಬಂದಾಗ ಒಂದು ಹಿಡಿಯೂ ಕಡಿಮೆಯಿಲ್ಲದಂತೆ ಹಿಂತಿರುಗಿಸುವ ಪ್ರಾಮಾಣಿಕತೆ ಇತ್ತು. ಇಂದು ಹಾಗಲ್ಲ. ಕಿಲೋಮೀಟರ್ ಗಟ್ಟಲೆ ಕೊಡಪಾನ ನೀರಿಗೆ ಹಿಂಡು ಹಿಂಡು ಜನ ಉರಿಬಿಸಿಲಲ್ಲಿ ಬರಿಗಾಲಲ್ಲಿ ಅಲೆಯುತ್ತಿರುವುದ ಕಣ್ಣಾರೆ ಕಂಡೂ ಕಾಣದಂತೆ ಹೊರಟ ಪ್ರತಿನಿಧಿಗಳಿಗೆ, ಯಾರೋ ನೀರು ಕೊಟ್ಟು ಜನರನ್ನು ತನ್ನತ್ತ ಸೆಳೆಯುತ್ತಿರುವುದು ಗೊತ್ತಾದದ್ದೇ ತಡ ಮುಂದೆ ಚುನಾವಣೆ ಬರುತ್ತಿರುವುದು ನೆನಪಾಗಿ ಮತ್ತೆ ಜನರ ಮೇಲಿನ ಮಮಕಾರದ ವೇಷ, ಓಣಿಯಲ್ಲೊಂದು ನೀರಿನ ಟ್ಯಾಂಕರ್ ಪ್ರತ್ಯಕ್ಷ, ಇಂಥವರೇ ನೀರು ತಂದಿದ್ದಾರೆಂದು ಸಾರಲು ನಾಲ್ಕಾರು ಜನ ಕಾಲಾಳುಗಳು ತಯಾರು. ದುರಂತವೆಂದರೆ ಹೀಗೆ ಈ ಬರಪೀಡಿತ ಜನರ ಮೇಲಿನ ಪ್ರೀತಿ ಬಹಳಷ್ಟು ಜನಕ್ಕೆ ಒಮ್ಮೆಲೇ ಬಂದು ತಮ್ಮ ತಮ್ಮ ಬಂಡವಾಳ ಬಯಲು ಮಾಡಿಕೊಂಡರು. ಕೆಲವರು ನಗೆಪಾಟಲಿಗೆ ಈಡಾದರು. ಈಗ ಎಲ್ಲೆಲ್ಲೂ ನೀರೂ ಸಹ ರಾಜಕೀಯದ ದಾಳ.

ಬರದ ಬೆಂಕಿ ನಿಜವಾಗಿಯೂ ಸುಟ್ಟದ್ದು ರೈತರನ್ನು ಮತ್ತು ಶ್ರಮಿಕ ವರ್ಗವನ್ನು. ಶ್ರಮಸಂಸ್ಕೃತಿ ವ್ಯಾಖ್ಯಾನಿಸಿಕೊಳ್ಳುವ ನಮ್ಮ ಮಾದರಿಗಳು ಬದಲಾಗಬೇಕಿದೆ. ಹಾಗಂತ ಇಂದಿನ ಮಣ್ಣಿನ, ಬೆವರಿನ, ದುಡಿಮೆಯ ಸಂಗತಿಗಳು ಬಯಸುತ್ತಿವೆ. ಶ್ರಮವನ್ನು ಸಂಸ್ಕೃತಿಯಾಗಿಸಿ ಔದಾರ್ಯದಿಂದ, ಆದರದಿಂದ, ಗೌರವದಿಂದ ನೋಡುತ್ತಿರುವಾಗಲೇ ಅದರ ಆಳದ ದುರಂತಗಳನ್ನು, ಸಾವಿನ ವಾಸನೆಯನ್ನೂ ಅಷ್ಟೇ ಪ್ರಾಮಾಣಿಕತೆಯಿಂದ ನೋಡಲು ಒಳಗಣ್ಣುಗಳು ಬೇಕಿದೆ.

ನೀರು ಬರಿದಾಗಿ ಬೇಸತ್ತು, ಅದೆಷ್ಟೋ ಜನ ಕಂಗಾಲಾದರು. ಕಣ್ಣ ಮುಂದೆಯೇ ಉರಿಬಿಸಿಲಿನ ಝಳಕ್ಕೆ ಸುಟ್ಟು ಹೋಗುತ್ತಿರುವ ಬೆಳೆಯನ್ನು ಬದುಕಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡಿದರು. ಅದರಲ್ಲಿ ಬಹಳಷ್ಟು ಜನ ಸರಿಯೋ ತಪ್ಪೋ ಲೆಕ್ಕಕ್ಕೆ ಸಿಗದಷ್ಟು ಕೊಳವೆ ಬಾವಿಗಳನ್ನು ತೆಗೆಸಿದರು, ಬಾವಿಗಳನ್ನು ತೋಡಿಸಲು ಮುಂದಾದರು. ಬಹುಶಃ ಬಹಳಷ್ಟು ಕಡೆ ಹಿಂದೆ ಎಂದೂ ಈ ಪ್ರಮಾಣದಲ್ಲಿ ಕಂಡಿರದ ಕೊಳವೆ ಬಾವಿಯ ಕೊರೆಯುವಿಕೆ ಈ ಬಾರಿ ಭೂಮಿಯ ಒಡಲು ಬಗಿದವು. ಸಿಕ್ಕಿದ್ದು ಎರಡಿಂಚು ನೀರಿಗಿಂತ ಹೆಚ್ಚಿಲ್ಲ. ಅದಕ್ಕೂ ಕಡಿಮೆ ಬಂದವರು ಮತ್ತೊಂದು ಪಾಯಿಂಟ್ ತೋರಿಸಿ ಬೆಳೆಯ ಜೊತೆ ಕೈಯನ್ನೂ ಸುಟ್ಟುಕೊಂಡರು. ಹೀಗೆ ಇದು ನಡೆಯುತ್ತಿರುವಾಗಲೇ ಕೆಲವೇ ದಿನಗಳಲ್ಲಿ ನೀರು ಬಿದ್ದಿದ್ದ ಬೋರ್‌ವಲ್‌ಗಳು ಬತ್ತಿಹೋದವು, ಮುಚ್ಚಿಯೂ ಹೋದವು. ಇದನ್ನು ಗಮನಿಸಿದ ಕೆಲವರು ಬಾವಿಗಳನ್ನು ತೆಗೆಸಿದರೆ ಶಾಶ್ವತವಾಗಿ ನೀರಾಗುತ್ತದೆ, ಒಂದು ಬಾರಿ ಮಳೆಯಾದರೂ ಸಾಕು ಎಲ್ಲಿಂದಲಾದರೂ ನೀರು ಬಂದು ಸೇರಿಕೊಳ್ಳುತ್ತದೆ ಎಂದು ಯೋಚಿಸಲಾರಂಭಿಸಿ ಬಾವಿ ತೋಡಿಸಲು ಮುಂದಾದರು. ಒಂದು ಊರಿಗೆ ನೂರರ ಸಂಖ್ಯೆಗಳಲ್ಲಿ ಕೊಳವೆ ಬಾವಿಗಳ ಜೊತೆಜೊತೆಗೆ ಹತ್ತಾರು ಬಾವಿಗಳು ಪ್ರಾರಂಭವಾದವು. ಅನುಮತಿ ಪಡೆಯುವ ಕಾನೂನು ಮರೆಯಲ್ಪಟ್ಟವು. ರೈತರಿಂದ ಗೊತ್ತಿಲ್ಲದೆ, ಆಡಳಿತದಿಂದ ಗೊತ್ತಿದ್ದೂ.

ಕೂಲಿ ಕಾರ್ಮಿಕರ ಬದುಕಿನ ಚೈತನ್ಯ ಮತ್ತು ದುರಂತಗಳೆರಡೂ ಬೇರೆ ಎಲ್ಲ ಶ್ರಮಿಕರಿಗಿಂತ ಭಿನ್ನವಾದವು. ಹಾಗೆಯೇ ಬಾವಿ ತೋಡಲು ಬಂದಿರುವ ಇಲ್ಲಿನ ಕೆಲವು ಕುಟುಂಬಗಳ ಕಥೆಗಳಲ್ಲಿ ವ್ಯಥೆಗಳೇ ತುಂಬಿವೆ. ಸುಮಾರು ದಶಕಗಳಿಂದ ಬಾವಿ ತೋಡುವುದನ್ನೇ ಕಾಯಕ ಮಾಡಿಕೊಂಡಿರುವ ಒಂದು ಸಮುದಾಯವನ್ನು ಮಾತನಾಡಿಸಿದಾಗ ಹಲವು ಅಸಹನೀಯ ಸತ್ಯಗಳು ಗೊತ್ತಾದವು. ಬಾವಿ ತೋಡುವ ಕ್ರಿಯೆಯೇ ಅತ್ಯಂತ ಎಚ್ಚರದ ಶ್ರಮವನ್ನು ಬೇಡುವಂಥದ್ದು. ಹೀಗೆ ಬಾವಿ ತೋಡುವಾಗ ಯಾರದೋ ಜೀವ ಯಾವುದೋ ಕಲ್ಲಿನಲ್ಲೋ , ಕುಸಿದು ಬೀಳುವ ಗೋಡೆಯಲ್ಲೋ, ಅಥವಾ ನೀರನ್ನೆತ್ತುವ ಯಂತ್ರದ ಕೈಗೋ ಕೊಟ್ಟಿರುವಂಥ ಅಪಾಯದ ಸ್ಥಿತಿ.

ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕದರಾಪುರ ತಾಂಡಾ ಬಾವಿ ತೋಡುವ ಕಾಯಕವನ್ನೇ ಮಾಡುವ ಸಮುದಾಯಗಳ ಒಂದು ಊರು. ಇಲ್ಲಿನ ಕುಟುಂಬಗಳು ಹಲವಾರು ದಶಕಗಳಿಂದ ಬಾವಿ ತೋಡುತ್ತ ಬಂದಿವೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ಸಾವಿರಾರು ರೈತರು ಈ ದುಡಿಮೆಗಾರರ ಶ್ರಮದಿಂದ ಹೊಲದ ಬೆಳೆಗೆ ನೀರು ಕಂಡು ನೆಮ್ಮದಿಯಿಂದಿದ್ದಾರೆ. ಆದರೆ ಬಾವಿ ತೋಡಿದವರು ಮಾತ್ರ ಅಲ್ಲೇ ಇದ್ದಾರೆ.

ರಮೇಶ ರಾಮಚಂದ್ರ ಜಾಧವ ಎಂಬ ನಲವತ್ತೈದು ವರ್ಷದ ಈ ಕೂಲಿ ಕಾರ್ಮಿಕ ಬದುಕಿಗೆ ತೆರೆದುಕೊಂಡಿದ್ದೇ ಬಾವಿ ತೋಡುವುದರ ಮೂಲಕ. ಈತನ ಇಲ್ಲಿಯವರೆಗಿನ ಮೂರು ದಶಕಗಳು ಬಾವಿ ತೋಡುವುದನ್ನು ಮಾತ್ರವೇ ತುಂಬಿಕೊಂಡಿವೆ. ತನ್ನ ತಂದೆಯಿಂದ ಬಳುವಳಿಯಾಗಿ ಬಂದ ಈ ದಗದ ತನ್ನ ಮೂಲಕ ತನ್ನ ಮಕ್ಕಳನ್ನೂ ಒಳಗು ಮಾಡಿಕೊಂಡಿದೆ. ತನ್ನ ಕಾಯಕದ ಬಗ್ಗೆ ಆತನನ್ನು ಕೇಳಿದಾಗ ಹೀಗೆ ಹೇಳಿದ: “ನಾನು ಭಾಳ ಚಿಕ್ಕವನಿದ್ದಾಗಿನಿಂದ ಈ ಕೆಲಸ ಮಾಡಿಕೋತ ಬಂದಿನ್ರಿ, ನಮಗ ಗೊತ್ತಿರೋದು ಬಾವಿ ತೋಡೋದು ಒಂದರಿ. ಬಾವಿ ತೋಡಿಯೇ ನಾನು ನನ್ನ ಹೆಂಡ್ತಿ, ನನ್ನ ಮಕ್ಳು, ನನ್ನವ್ವ ಹೊಟ್ಟಿತುಂಬಿಕೋತೀವ್ರಿ. ವರ್ಷಕ್ಕೆ ಕಡಿಮೀ ಅಂದ್ರ ಎಂಟು ಬಾವಿ ತೋಡತೀವ್ರಿ, ಒಂದೊಂದು ಬಾವಿಗೆ ಹದಿನೈದು ಇಪ್ಪತ್ತು ದಿನ, ಒಂದೊಂದು ಬಾವಿ ಒಂದು ತಿಂಗಳೂ ಹಿಡೀತವ್ರಿ. ಮೂವತ್ತು ವರ್ಷದಾಗ ಕರ್ನಾಟಕ ಮಹಾರಾಷ್ಟ್ರದ ಹಲವಾರು ಕಡೆ ನಾವು ಕಡಿದ ಬಾವಿ ನೀರು ತುಂಬಿಕೊಂಡು ಎಲ್ಲರ ಬಾಳೆ ಹಸನು ಮಾಡೇವ್ರಿ, ಆದ್ರ ನಮ್ಮ ಬದುಕ ಮೂರಾಬಟ್ಟಿ ಆಗೇತ್ರಿ. ಇಷ್ಟು ವರ್ಷ ಬಾವಿ ಕಡದ್ರೂ ಎಲ್ಲೋ ಒಂದಿಷ್ಟು ಗಾಯ ಆಗಿದ್ದು , ಕೈಕಾಲು ಮುರಿಯೋದು ಆಗಿದ್ದು ಬಿಟ್ರ ಎಂದೂ ಜೀವ ಹಾನಿ ಆಗಿದ್ದಿಲ್ರಿ, ಆದ್ರ ಈಗ ಮೂರು ತಿಂಗಳದಾಗ ನಮ್ಮವ್ವ , ನಮ್ಮ ತಂಗಿ ಇಬ್ರು ಬಾವಿ ತೋಡದ್ರಗ ಸತ್ತು ಹೋದರರ್ರಿ. ನಿಪ್ಪಾಣಿ ತಾಲೂಕಿನ ಆಡಿಬೆನಾಡಿ ಊರಾಗ ಬಾವಿ ತೋಡೋ ಮುಂದ ನನ್ನ ತಂಗಿ ಜೀಮಾಬಾಯಿ ನೀರೆತ್ತುವ ಮೋಟಾರು ಚಾಲು ಮಾಡೋ ಮುಂದ ವೈರ್ ಕಾಲಿಗೆ ಸುತ್ತಿ ಶಾಕ್ ಹೊಡದು ಸತ್ತಳ್ರಿ, ಈಗ ಮೊನ್ನೆ ನಮ್ಮ ತಾಯಿ ಕಸ್ತೂರಬಾಯಿ ಬಾವಿಯಿಂದ ಕಲ್ಲು ತುಂಬಿದ ಕಬ್ಬಿಣ ಬುಟ್ಟಿ ಎತ್ತೋ ಮುಂದ ತಪ್ಪಿ ನಮ್ಮವ್ವನ ಮ್ಯಾಲೆ ಬಿದ್ದು ಆಕಿನು ಸತ್ತಳ್ರಿ. ಬಾವಿ ತೋಡದ ಇದ್ರ ಹೊಟ್ಟಿಗಿಲ್ಲದ ಸಾಯ್ತೀವ್ರಿ, ಬಾವಿ ತೋಡಾಕ ಬಂದ್ರ ಹಿಂಗ ದುರಂತದಾಗ ಸಾಯ್ತೀವ್ರಿ ಎಲ್ಲಾ ಕಡೆ ನಮಗ ಸಾವ ಐತ್ರಿ.” ಹೀಗೆ ಹೇಳುವಾಗ ಆತನಿಗೆ ಹುಟ್ಟಿನಿಂದ ಇಲ್ಲಿವರೆಗೆ ಅನುಭವಿಸಿದ ನೋವು ಒತ್ತರಿಸಿ ಬಂದಿತ್ತು.

ಈ ಗಡಿನಾಡು ಭಾಗ ಸುಮಾರು ಕಡೆ ಕಲ್ಲಿನ ಪದರುಗಳಿಂದ ನಿರ್ಮಿತವಾಗಿದೆ. ಈ ಜನ ಕಡಿಯುವ ಬಾವಿಯ ಉದ್ದ ಮತ್ತು ಅಗಲ 50×50 ಅಡಿ , ಆಳ 70 ರಿಂದ 80 ಅಡಿಯವರೆಗೆ ಇರುತ್ತದೆ. ಇಷ್ಟು ಅಳತೆಯ ಬಾವಿಯ ತುಂಬ ಬಹಳಷ್ಟು ಕಡೆ ಕಲ್ಲೇ ತುಂಬಿರುತ್ತವೆ. ಕಡಿಯುವಾಗ ಸರಿಯಾಗಿ ನಿಗಾವಹಿಸಿ ಕೆಲಸ ಮಾಡಲೇಬೇಕು. ಒಂದೊಂದು ಅಡಿ ಆಳಕ್ಕೆ ಹೋದಾಗಲೂ ಅಪಾಯಗಳ ಸಾಧ್ಯತೆ ಹೆಚ್ಚುತ್ತಾ ಹೋಗುತ್ತವೆ. ಆಳಕ್ಕೆ ಹೋದಂತೆ ಮೇಲಿನ ಕಲ್ಲಿನ ಪದರದ ಗೋಡೆಗಳು ಬಿಚ್ಚಿಕೊಂಡು ಮೇಲೆ ಬಿದ್ದು ಜೀವಂತ ಸಮಾಧಿಯಾಗುವ ಸಾಧ್ಯತೆಗಳಿರುತ್ತವೆ. ಈ ಕೂಲಿಕಾರರು ಎಲ್ಲ ಅಪಾಯಗಳನ್ನು ತಮ್ಮ ಬದುಕಿನ ದೈನಿಕದ ಸಂಗಾತಿಗಳೆಂದುಕೊಂಡು ಕೆಲಸ ಮಾಡುತ್ತಾರೆ. ಬಾವಿ ಆಳದಲ್ಲಿರುವುದರಿಂದ ಅದನ್ನು ಕಡಿಯುವ ಶ್ರಮ ನೋಡುಗರಿಗೆ ಅಷ್ಟು ಅನುಭವಕ್ಕೆ ಬರುವುದಿಲ್ಲ. ಆದರೆ ಈ ಜನ ಒಂದೊಂದು ಬಾವಿ ಕಡಿದಾಗಲೂ ಇವರ ದೇಹದಿಂದ ಹರಿದ ಬೆವರು, ರಕ್ತ ಅದೆಷ್ಟೋ. ಅದೆಷ್ಟೋ ಗುಡ್ಡಗಳನ್ನು ಕಡಿದು ಹಾಕಿದ ಶ್ರಮ ಇವರದ್ದು ಎನ್ನಿಸುತ್ತದೆ.

ಕದರಾಪೂರ ತಾಂಡಾದ ಈ ಜನ ಸಮುದಾಯ ಊರಿನಲ್ಲಿರುವ ಜಮೀನನ್ನು ಬಿತ್ತನೆಗೆ ಸಿದ್ದಮಾಡಿ ಹಿರಿಯರನ್ನು ಬಿಟ್ಟು, ಬಾವಿಕಡಿಯಲು ತಮ್ಮ ಸಂಸಾರದ ಗಂಟನ್ನು ಹೊತ್ತು ಊರೂರು ಅಲೆಯುತ್ತಾರೆ. ಹೀಗೆ ಇವರ ಅಲೆದಾಟ ಕರ್ನಾಟಕವನ್ನೂ ದಾಟಿ ಮಹಾರಾಷ್ಟ್ರದ ಹಲವು ಜಿಲ್ಲೆಗಳನ್ನೂ ವ್ಯಾಪಿಸಿದೆ. ಹೊಲಗಳಿದ್ದಲ್ಲೇ ಟೆಂಟು ಹಾಕಿಕೊಂಡು ಬಾವಿ ಪಕ್ಕವೇ ರಾತ್ರಿ ಹಗಲು ದೂಡುತ್ತಾರೆ. ಇವರೊಂದಿಗೆ ಹಸುಗೂಸುಗಳು, ಖಾಯಿಲೆ ಬಿದ್ದ ಸಂಬಂಧಿಕರು, ವಯಸ್ಸಾದವರು ಎಲ್ಲರಿಗೂ ಇದೇ ಸ್ಥಿತಿ. ಕತ್ತಲಾದರೆ ಬೆಳಕಿಲ್ಲ, ಹಗಲಾದರೆ ಅಡವಿಯೇ ಎಲ್ಲ. ಬೆಳಿಗ್ಗೆ ಎಂಟುಗಂಟೆಗೆ ಕೆಲಸಕ್ಕೆ ತೊಡಗಿದರೆಂದರೆ ಕತ್ತಲಾಗುವವರೆಗೆ ಕೆಲಸ ಮಾಡುತ್ತಲೇ ಇರುತ್ತಾರೆ. ಬಾವಿ ದಂಡೆಯಲ್ಲಿಯೇ ಊಟ, ದಣಿವಾದಾಗ ಬಾವಿದಂಡೆಯಲ್ಲಿ ಸ್ವಲ್ಪ ಹೊತ್ತು ವಿರಾಮ.

ಇಲ್ಲಿ ಇನ್ನೊಂದು ಮುಖ್ಯ ವಿಚಾರವೆಂದರೆ ಹೀಗೆ ಅಲೆಮಾರಿಗಳಾಗಿ ಬದುಕಿನ ನೊಗ ಹೊತ್ತ ಈ ದಲಿತ ಸಮುದಾಯ ಎಲ್ಲರೂ ಸಂಬಂಧಿಕರು, ಒಂದೇ ಊರಿನವರು. ಎಲ್ಲರೂ ಒಟ್ಟಾಗಿ ಊರು ಬಿಟ್ಟು ಬಾವಿ ಕಡಿಯುವ ವೇಳೆಗೆ ಏಳು ಎಂಟು ಜನರ ಗುಂಪಾಗಿ ಅಲ್ಲೊಂದು ಇಲ್ಲೊಂದು ಬಾವಿ ಕಡಿಯುವುದನ್ನು ಗುತ್ತಿಗೆ ತೆಗೆದುಕೊಳ್ಳುತ್ತಾರೆ. ಹೀಗೆ ಎರಡು ಜೀವ ಕಳೆದುಕೊಂಡದ್ದಕ್ಕೆ ಪರಿಹಾರದ ಕುರಿತು ಹೊಲದ ಮಾಲೀಕನನ್ನು ಪ್ರಶ್ನಿಸಿದರೆ ಅವ್ರಿಗೆ ಗುತ್ತಿಗಿ ಕೊಟ್ಟಿರತೀವ್ರಿ, ಏನ ಅಪಾಯ ಆದ್ರೂ ಅವ್ರ ಹೊಣಿರಿ ಎನ್ನುತ್ತಾನೆ. ಅಂದರೆ ಈ ಬಾವಿ ಕಡಿಯುವ ಜನ ತಮ್ಮ ಜೀವವನ್ನು ಪಣಕ್ಕಿಡುವುದರ ಜೊತೆಜೊತೆಗೇ ಅವರು ಕೊಡುವ ದುಡ್ಡಿಗಾಗಿ ಬಾವಿಕಡಿಯುವುದನ್ನು ಗುತ್ತಿಗೆ ಪಡೆದಿದ್ದಾರೆಂಬುದು ಹೊಲದ ಮಾಲೀಕನ ಅಭಿಪ್ರಾಯ.

ಈ ದುಡಿಯುವ ಜನರ ಬದುಕಿನ ಚೈತನ್ಯ ದುಡಿಯುವಿಕೆಯಲ್ಲಿಯೇ ಹಾಸುಹೊಕ್ಕಾಗಿಬಿಟ್ಟಿದೆ. ಇವರು ಕಡಿದ ಬಾವಿಯಿಂದ ತಲೆಮಾರುಗಳವರೆಗೆ ರೈತನ ಬದುಕು ಹಸಿರಾಗುತ್ತದೆ, ಆದರೆ ಹೀಗೆ ಬಾವಿ ಕಡಿದ ಜನ ಸಿಕ್ಕಷ್ಟು ತೆಗೆದುಕೊಂಡು ಮತ್ತೊಂದು ಬಾವಿ ಕಡಿಯಲು ಅಣಿಯಾಗುತ್ತಾರೆ. ರಮೇಶ ಜಾಧವರನ್ನು ಎಷ್ಟು ಬಾವಿ ಇದುವರೆಗೆ ಕಡಿದಿದ್ದೀರಿ ಎಂದು ಪ್ರಶ್ನಿಸಿದರೆ ಆತ ಹೀಗೆ ಹೇಳುತ್ತಾನೆ,  “ಎಷ್ಟು ಬಾವಿ ಕಡಿದೀನಿ ಅಂತ ಲೆಕ್ಕ ಇಟ್ಟಿಲ್ರಿ, ವರ್ಷಕ್ಕ ಕಡಿಮೀ ಅಂದ್ರ ಎಂಡು ಬಾವಿ ಕಡಿತೀವ್ರಿ, ಮೂವತ್ತು ಮೂವತ್ತೈದು ವರ್ಷದಿಂದ ಹೀಂಗ ಬಾವಿ ಕಡಕೋತ ಬಂದೀನ್ರಿ,” ಎನ್ನುತ್ತಾನೆ. ಅಂದರೆ ವರ್ಷಕ್ಕೆ ಐದು ಬಾವಿಯಂತೆ ತೆಗೆದುಕೊಂಡರು ಇಲ್ಲೀವರೆಗೆ ಆತ ಎರಡು ನೂರಕ್ಕೂ ಹೆಚ್ಚು ಬಾವಿಗಳನ್ನು ಕಡಿದಿದ್ದಾನೆ ಎಂದಾಯಿತು! ಇಷ್ಟು ವರ್ಷ ಬಾವಿ ಕಡಿದಿದ್ದರಿಂದ ನಿನಗ ಏನೇನು ಲಾಭವಾಗಿದೆ ಎಂದು ಕೇಳಿದರೆ ಲಾಭ ಅಂತ ಏನೂ ಇಲ್ರಿ ಎಲ್ಲಾರ ಹೊಟ್ಟಿ ತುಂಬೇತ್ರಿ ಎನ್ನುತ್ತಾನೆ.

ಈತನಿಗಿರುವ ಐದು ಮಕ್ಕಳಲ್ಲಿ ಈಗಾಗಲೇ ಮೂರು ಮಕ್ಕಳು ಕೆಲಸ ಮಾಡುವ ತಾಕತ್ತು ಬಂದ ಕೂಡಲೇ ಶಾಲೆ ಬಿಟ್ಟು ಈತನೊಂದಿಗೆ ಬಾವಿ ಕಡಿಯುತ್ತಿದ್ದಾರೆ. ಹೀಗೇಕೆ ಮಾಡುತ್ತೀರಿ ಎಂದರೆ ಅವರು ಸಾಲಿ ಕಲಿಯಾಕ ವಲ್ಲೆ ಅಂತಾರ್ರಿ ಎನ್ನುತ್ತಾನೆ. ಈ ಸಮುದಾಯವನ್ನು ಅಜ್ಞಾನ, ಮೂಢನಂಬಿಕೆ ಒಟ್ಟೊಟ್ಟಿಗೆ ಕಿತ್ತು ತಿನ್ನುತ್ತಿವೆ. ಇಷ್ಟು ವರ್ಷಗಳಾದರೂ ಇವರಿಗೆ ಅಕ್ಷರದ ಬಗ್ಗೆ ನಂಬಿಕೆಯೇ ಹುಟ್ಟಿಲ್ಲ. ತನ್ನ ಬದುಕಿನಲ್ಲಿ ಇತ್ತೀಚೆಗೆ ನಡೆದ ದುರಂತಗಳಿಗೆ ಆತ ಇಷ್ಟು ವರ್ಷ ಎಂದೂ ಹಿಂಗಾಗಿದ್ದಿಲ್ರಿ, ನಮ್ಮೂರಾಗ ನಮ್ಮ ತಮ್ಮನ ಮದುವ್ಯಾಗ ಎರಡೂ ನಿಂಬೆ ಹಣ್ಣು ಮಂತ್ರಿಸಿ ಹಂದರದಾಗ ಒಗದಾರ್ರಿ ನಮಗ ಕೇಡು ಮಾಡಾಕ, ಅದ್ಕ ಹಿಂಗಾಗೇತ್ರಿ ಎಂದು ತನ್ನ ಕಾರಣ ಹೇಳುತ್ತಾನೆ. ಹೀಗೆ ಹೇಳುವ ಈ ಮನಸ್ಥಿತಿ ಆತನಿಗೆ ಬಂದದ್ದಾದರೂ ಹೇಗೆ? ಮೇಲ್ವರ್ಗ, ಪುರುಹಿತಶಾಹಿ ವ್ಯವಸ್ಥೆಯ ಈ ಸಮಾಜ ಈ ರೀತಿಯ ಅಜ್ಞಾನದ ಬೀಜಗಳನ್ನು, ಮೂಢನಂಬಿಕೆಗಳನ್ನು ಅವರು ಅನುಭವಿಸುತ್ತಿರುವುದು ನೋವು ಎನ್ನುವುವದು ಅವರಿಗೆ ಗೊತ್ತಾಗದಂತೆ ಮಾಡಲು ಇವರ ಎದೆಗಳಲ್ಲಿ ಬಿತ್ತಿದೆಯೇನೋ ಎನ್ನಿಸುತ್ತದೆ. ಇವರ ಬಾವಿ ತೋಡುವ ಶ್ರಮ ಬೆಲೆಕಟ್ಟಲಾಗದ್ದು. ಆದರೆ ಇವರ ಬದುಕಿಗೇ ಯಾರೋ ಬಾವಿ ತೋಡಿ ಬಿಟ್ಟಿದ್ದಾರೆ, ಮೇಲೆತ್ತುವವರು ಎಲ್ಲೋ ಯಾವುದೋ ಯೋಚನೆಯಲ್ಲಿದ್ದಾರೆ! ಅದು ಎಲ್ಲರಿಗೂ ಗೊತ್ತಿರುವ ವಿಚಾರ ಅಲ್ಲವೆ?

ಬಾವಿಗಿಂತಲೂ ಜೀವ ಅಗ್ಗ

ಬಾವಿ ತೋಡುವ ಜನರಲ್ಲಿ ಆಯಾ ಊರುಗಳ ಜನರ ಪರಿಸ್ಥಿತಿಗಳು ಬೇರೆ. ತಮ್ಮ ತಮ್ಮಲ್ಲಿಯೇ ಕೆಲವು ಗುಂಪುಗಳನ್ನು ಮಾಡಿಕೊಂಡು ಬಾವಿ ಕಡಿಯುವುದನ್ನು ಗುತ್ತಿಗೆ ಹಿಡಿಯುತ್ತಾರೆ. ಹಾಗೆ ನೋಡಿದರೆ ಈ ರೀತಿ ಬಾವಿ ತೋಡಿ ದುಡಿಯುವುದು ಇವರೇ ಹೇಳುವಂತೆ ಇವರಿಗೆ ಸ್ವಲ್ಪ ಲಾಭದಾಯಕವಂತೆ. ನಾಲ್ಕು ದುಡ್ಡು ಹೆಚ್ಚಿಗೆ ಕೂಲಿ ಬಂದರೆ ನಮ್ಮ ಜನ ಅದೆಷ್ಟು ಸಹಜವಾಗಿ ತಮ್ಮ ಪ್ರಾಣವನ್ನು ಪಣಕ್ಕಿಡುತ್ತಾರೆ. ಇಲ್ಲಿ ಜೀವದ ಬೆಲೆ ತೋಡುವ ಬಾವಿಗಿಂತ ಅಗ್ಗವಾಗಿ ಹೋಗಿದೆಯಲ್ಲ, ಇದಕ್ಕಾರು ಹೊಣೆ?

ಇದೇ ಜುಲೈ ನಾಲ್ಕರ ಸಂಜೆ ಇನ್ನೇನು ಕತ್ತಲಾಗಬೇಕು, ಬಂಬಲವಾಡದ ಒಂದು ಬಾವಿ ಕಡಿಯುತ್ತಿದ್ದ ಜನರ ಬದುಕಿಗೆ ಕತ್ತಲಾವರಿಸಿಬಿಟ್ಟಿತು. ಬೆಳಿಗ್ಗೆಯಿಂದ ಎಡೆಬಿಡದೆ ಬಾವಿ ಕಡಿಯುತ್ತಿದ್ದವರು ಇನ್ನೇನು ಮುಗಿಸಿ ಮನೆಗೆ ಹೊರಡಬೇಕು ಅಷ್ಟರಲ್ಲಿ ನಡೆದ ಅನಾಹುತ ತಲ್ಲಣಿಸುವಂಥದ್ದು. ನಲವತ್ತು ಅಡಿಗಿಂತ ಹೆಚ್ಚು ಆಳ ಕಡಿದಿರುವ ಬಾವಿಯಿಂದ ಕೆಲಸ ಮುಗಿಯಿತು ಮೇಲೆ ಹೋಗೋಣ ಎಂದು ನಿರ್ಧರಿಸಿದ ಚುಕ್ಯಾ, ಪ್ರಕಾಶ, ಲಕ್ಷ್ಮಣ ಮೇಲೆ ಬರಲು ಕಲ್ಲು ಎತ್ತಿ ಹಾಕಲು ಇದ್ದ ಬುಟ್ಟಿಯನ್ನೇ ಬಳಸಲು ಬಯಸಿ, (ಪ್ರತಿಸಾರಿ ಅವರು ಮೇಲೆ ಬರಲು ಬಳಸುತ್ತಿದ್ದುದು ಅದೇ ಕಬ್ಬಿಣ ಬುಟ್ಟಿಯೇ. ಆದರೆ ಈ ಬಾರಿ ಪರಿಸ್ಥಿತಿ ಬೇರೆ ಇತ್ತು) ಯಾರಿ ಮಶಿನ್ ನಡೆಸಲು ಮೇಲೆ ಇದ್ದವನಿಗೆ ಹೇಳಿ, ತಾವು ಬಾವಿಯಲ್ಲಿದ್ದ ಕಬ್ಬಿಣ ಬುಟ್ಟಿಯಲ್ಲಿ ಮೂವರು ಕುಳಿತಿದ್ದಾರೆ. ವಿಷಾದದ ಸಂಗತಿಯೆಂದರೆ ಯಾರಿ ಯಂತ್ರವನ್ನು ನಡೆಸುತ್ತಿದ್ದವ ಬಹಿರ್ದೆಸೆಗೆ ಹೋಗಿದ್ದನಂತೆ, ಅಲ್ಲಿಯೇ ಬಾವಿಯ ಮೇಲಿದ್ದ ಮತ್ತೊಬ್ಬ ಮಶಿನ್ ನಡೆಸುವ ಮೂರ್ಖತನಕ್ಕಿಳಿದ. ಯಂತ್ರ ಮೂವರು ಕುಳಿತಿದ್ದ ಬುಟ್ಟಿ ಹೊತ್ತು ಮೇಲಕ್ಕೆ ಬರುತ್ತಿದ್ದಂತೆ ಅವಸರಿಸಿದ ಯಂತ್ರ ನಡೆಸುವವ ಜೋರಾಗಿ ಮಶಿನ್‌ನ್ನು ಈಚೆ ಎಳೆದದ್ದೇ ತಡ ಅನಾಹುತ ನಡೆದು ಹೋಯಿತು. ಇನ್ನೂ ಪೂರ್ತಿ ಮೇಲೆ ಬರದೇ ಇದ್ದ ಬುಟ್ಟಿ ಬಾವಿಯ ಗೋಡೆಗಳಿಗೆ ಜೋರಾಗಿ ಅಪ್ಪಳಿಸಿದೆ. ಅಪ್ಪಳಿಸಿದ ರಭಸಕ್ಕೆ ಮೂವರು ಕುಳಿತಿದ್ದ ಬುಟ್ಟಿ ಮುಗುಚಿದೆ. ಪ್ರಕಾಶ ಹೇಗೋ ಸಿಕ್ಕ ಆ ಯಂತ್ರದ ಕಬ್ಬಿಣದ ಚೈನಿಗೆ ಜೋತು ಬಿದ್ದ. ಆದರೆ ಚುಕ್ಯಾ, ಲಕ್ಮಣ ಇಬ್ಬರು ಅಷ್ಟು ಎತ್ತರದಿಂದ ಬಾವಿಯೊಳಕ್ಕೆ ಬಿದ್ದು ಜೀವ ಬಿಟ್ಟರೆಂದು ಅಲ್ಲಿದ್ದವರು ಹೇಳುತ್ತಾರೆ.

ಹೀಗೆ ಅನ್ಯಾಯವಾಗಿ ಜೀವ ಬಿಟ್ಟ ಲಕ್ಷ್ಮಣ ಎಮ್.ಎ. ಓದುತ್ತಿದ್ದ. ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡ ಅವನ ತಂದೆಯ ದುಃಖ ಹೇಳತೀರದ್ದು. ಬೇಡವೆಂದರೂ ಕೇಳದೆ ಮನೆಯಲ್ಲಿ ಕೆಲಸ ಮಾಡದೇ ಕಾಲಹರಣ ಮಾಡುವುದೇಕೆಂದು ಬಾವಿ ತೋಡಲು ಬಂದಿದ್ದ ಲಕ್ಷ್ಮಣನ ಜೀವ ಬಾವಿ ಪಾಲಾಗಿ ಹೋಯಿತು.

ಚಿತ್ರಗಳು: ಮಲ್ಲಿಕಾರ್ಜುನ ದಾನಣ್ಣವರ

(ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನದ ವಿಸ್ತೃತ ರೂಪ.)

One comment

  1. ಭೀಕರ ಬರದ ಈ ಸಂದರ್ಭದಲ್ಲಿ ಸರ್ಕಾರ ಮಳೆಗಾಗಿ ರಾಜ್ಯದ ೩೪೦೦೦ ದೇವಾಲಯಗಳಲ್ಲಿ ೧೭ ಕೋಟಿ ರೂಪಾಯಿಗಳನ್ನು ವ್ಯಯಿಸಿ ಪ್ರಾರ್ಥನೆ ನಡೆಸಲು ಆದೇಶ ಹೊರಡಿಸಿದೆ. ಪೂಜೆ, ಪುನಸ್ಕಾರ, ಪ್ರಾರ್ಥನೆಗಳಿಂದ ಮಳೆ ಬರಿಸುವಂತಿದ್ದರೆ ಬೇರೆ ಉದ್ಧೇಶಗಳಿಗೂ ಇದೇ ಕ್ರಮವನ್ನು ಅನುಸರಿಸಬಹುದು. ದೇಶದಲ್ಲಿ ಪೆಟ್ರೋಲಿಯಂ ಸಾಕಷ್ಟು ಲಭ್ಯವಿಲ್ಲ. ನಮ್ಮ ದೇಶದಲ್ಲೇ ಪೆಟ್ರೋಲಿಯಂ ನಮಗೆ ಸಾಕಾಗುವಷ್ಟು ಲಭ್ಯ ಮಾಡುವಂತೆ ದೇವರಿಗೆ ದೇಶದ ಎಲ್ಲ ದೇವಾಲಯಗಳಲ್ಲೂ ವಿಶೇಷ ಪೂಜೆ ಮಾಡಿಸಿದರೆ ಹೇಗೆ? ಅದೇ ರೀತಿ ಮಳೆ ಹೆಚ್ಚಾಗಿ ಪ್ರವಾಹ ಬಂದಾಗಲೂ ಇನ್ನು ಮುಂದೆ ಮಳೆ ಕಡಿಮೆ ಮಾಡುವಂತೆ ದೇಶದ ಎಲ್ಲ ದೇವಾಲಯಗಳಲ್ಲೂ ವಿಶೇಷ ಪೂಜೆ, ಪ್ರಾರ್ಥನೆಗಳನ್ನು ಏರ್ಪಡಿಸಬಹುದೆಂದು ಕಾಣುತ್ತದೆ. ವಿದೇಶಗಳಲ್ಲಿ ಇರುವ ಕಪ್ಪು ಹಣ ವಾಪಾಸ್ ತರಲೂ ಇದೇ ರೀತಿ ದೇಶಾದ್ಯಂತ ವಿಶೇಷ ಪೂಜೆಗಳನ್ನು ಏರ್ಪಡಿಸಿದರೆ ದೇವರೇ ಈ ಕುರಿತು ವ್ಯವಸ್ಥೆ ಮಾಡಬಹುದೆಂದು ಕಾಣುತ್ತದೆ. ಲೋಕಪಾಲ್ ಮಸೂದೆ ಬಗ್ಗೆ, ವಿದೇಶಗಳಲ್ಲಿ ಇರುವ ಕಪ್ಪು ಹಣ ವಾಪಾಸ್ ತರಬೇಕೆಂದು ಹೋರಾಟ ಮಾಡಬೇಕಾದ ಅಗತ್ಯ ಇಲ್ಲ ಅಲ್ಲವೇ? ಈ ಕುರಿತು ದೇಶದ ಎಲ್ಲ ದೇವಾಲಯಗಳಲ್ಲೂ ವಿಶೇಷ ಪೂಜೆ ಮಾಡಿಸಿದರೆ ಸಾಕಲ್ಲವೇ? ಇನ್ನು ಮುಂದೆ ದೇಶದ ಹಾಗೂ ರಾಜ್ಯದ ಬಜೆಟ್ಟಿನಲ್ಲಿಯೇ ಈ ರೀತಿಯ ವಿಶೇಷ ಪೂಜೆ ಮಾಡಿಸಲು ಸಾವಿರ ಕೋಟಿ ಮೀಸಲಿಟ್ಟರೆ ಹೇಗೆ?

Leave a Reply

Your email address will not be published.