ಹೊನ್ನಮ್ಮಜ್ಜಿಯ ಹಿತ್ತಲ [ಕಥೆ]

-ಶೀತಲ ನಾಯಕ

ಹೊನ್ನಮ್ಮಜ್ಜಿಯ ಕಣ್ಣೀರ ಧಾರೆ ಒಂದೇ ಸಮನೆ ಹರಿಯುತ್ತಿತ್ತು. ಬಾಯಿಗೂ ಪುರುಸೊತ್ತಿರಲಿಲ್ಲ. ಬೈಗುಳಗಳ ರಭಸ ಇನ್ನೂ ಜೋರಾಗಿತ್ತು. ಆಕೆಯ ನೋವಿನ ಕಟ್ಟೆ ಒಡೆದಾಗಿತ್ತು. ಯಾವತ್ತೂ ಯಾರ ಮನಸ್ಸನ್ನೂ ನೋಯಿಸದ ಹೊನ್ನಮ್ಮಜ್ಜಿ ಅಂದು ರಣಚಂಡಿಯಂತಾಗಿದ್ದಳು. ಸಿಟ್ಟಿಗೆ ಕಾರಣರಾದವರು ಎದುರಿಗೆ ಬಂದರೆ ಅವರನ್ನು ಚಚ್ಚಿ ಹಾಕಿ ಬಿಡುವಷ್ಟು ಕೋಪ ಅವಳಲ್ಲಿ ಮನೆಮಾಡಿತ್ತು.

‘ಆ ಬೋಳಿ ಮಕ್ಕಳ ಮನೆ ಹಾಳಾಗಾ, ಅವರ ವಂಶ ನಿರ್ವಂಶಾಗಾ, ನನ್ನ ಮಕ್ಕಳು ನಾಶವಾಗಿ ಹೊದಂಗೆ ಅವರ ಮಕ್ಕಳೂ ನಾಶವಾಗೋಗ್ಲಿ, ಬರ್‍ಯ್ರೋ ಬೋಳಿ ಮಕ್ಕಳಿಯಾ… ಬರ್ರಿ, ನಿಮ್ಮೂ ಇದನ್ನ ಹ್ಯಾಂಗೆ ಕಡದ ಹಾಕರಿ ಹಾಂಗೆ ನಿಮ್ಮೂ ಕಡದ ಹಾಕ್ತಿ ಬರ್ರಿ’ ಎಂದು ಜೋರ್ ಜೋರಾಗಿ ಬಾಯಿ ಮಾಡುತ್ತಿದ್ದಳು. ಇವಳ ಜೋರು ಬಾಯಿಗೆ ಎಚ್ಚರಗೊಂಡ ಶಂಕ್ರಣ್ಣ ನಮ್ಮವ್ವ ಇಂದಿಷ್ಟು ಜೋರಾಗಿ ಯಾರಿಗೆ ಬಾಯಿ ಮಾಡುತ್ತಿದ್ದಾಳೆ ಎಂದು ನೋಡಲು ಹಿತ್ತಲಕಡೆಗೆ ಬಂದ. ಅಲ್ಲಿ ಹೊನ್ನಮ್ಮಜ್ಜಿ ತಾನು, ತನ್ನ ಮಕ್ಕಳು ಸಾಕಿ ಬೆಳೆಸಿದ ಗಿಡಗಳನ್ನೆಲ್ಲಾ ಗುಡ್ಡೆ ಹಾಕಿ ನಡುವೆ ಕುಳಿತು ರೋಧಿಸುತ್ತಿದ್ದಳು. ಹಿತ್ತಲದಲ್ಲಿ ಮುಗಿಲ ಮುಟ್ಟಲೆಂಬಂತೆ ಎದೆಸೆಟೆಸಿ ನಿಂತಿದ್ದ ಅರ್ಧಕ್ಕರ್ಧ ಗಿಡ ಮರಗಳು ಅಂಗಾತ ನೆಲಕಚ್ಚಿದ್ದವು. ಮಗ ಶಂಕ್ರಣ್ಣನನ್ನು ನೋಡಿದ್ದೇ ಹೊನ್ನಮ್ಮಜ್ಜಿಯ ದು:ಖ ದುಪ್ಪಟ್ಟಾಯಿತು.  ‘ಶಂಕರಾ.. ನೋಡೋ ನನ್ನ ಮಕ್ಕಳನ್ನೆಲ್ಲಾ ಸಾಯಿಸಿಬಿಟ್ರೋ, ಹಾಳಾದೋರು ಇನ್ನೂ ತಮ್ಮ ಬುದ್ದಿನ ಬಿಟ್ಟಿಲ್ವಲ್ಲೋ, ಅವರು ಉದ್ದಾರಾಗುಲಾ, ಹುಳಾಬಿದ್ದೇ ಸಾಯ್ತರ, ನನ್ನ ಶಾಪ ತಟ್ಟದೇ ಬಿಡುದಿಲ್ಲಾ ನೋಡ ಬೇಕರೆ’ ಎನ್ನುತ್ತ ಸಣ್ಣ ಮಕ್ಕಳ ಹಾಗೆ ಎರಡೂ ಕೈಗಳಿಂದ ಕಣ್ಣೊರೆಸುತ್ತಿದ್ದಳು.

ಹಿತ್ತಲದಲ್ಲಿದ್ದ ಬಾಳೆ, ತೆಂಗು ಅಡಿಕೆ, ಬೇರಹಲಸಿನ ಮರ, ಮಾವಿನ ಗಿಡ, ನುಗ್ಗೆಕಾಯಿ, ಹೂವಿನಗಿಡಗಳು ನೆಲಕ್ಕೆ ತಲೆ ಉರುಳಿಸಿದ್ದವು. ಹಾಗೂ ಕುಂಬಳಕಾಯಿ, ಹಿರೇಕಾಯಿ ಬಳ್ಳಿಗಳೆಲ್ಲ ಬೇರು ಕಳಚಿ ಚಲ್ಲಾಪಿಲ್ಲಿಯಾಗಿದ್ದವು. ಆ ಅಜ್ಜಿಯ ಕೂಗಾಟಕ್ಕೆ ಅಕ್ಕ ಪಕ್ಕದವರೂ ಬಂದು ಸೇರಿದರು. ಇಟ್ಟ ಕಷ್ಟ ಪಟ್ಟೆ ಪ್ರೀತಿಯಿಂದ ಬೆಳೆಸದೆ ಅವನೆಲ್ಲ ಕುಂದ ಹಾಕಬಿಟ್ರಲ್ಲೇ ಸಾವಿತ್ರಿ ಎಂದು ಪಕ್ಕದಮನೆಯವರ ಹತ್ತಿರ ಅಜ್ಜಿ ತನ್ನ ಅಳಲನ್ನು ತೋಡಿಕೊಂಡಳು. ಎಲ್ಲರ ಕಣ್ಣುಗಳಲ್ಲೂ ಕತ್ತರಿಸಿ ಬಿದ್ದ ಗಿಡಮರಗಳ ಬಗ್ಗೆ ದಯಾಮಯ ನೋಟವೇ ತೋರುತ್ತಿತ್ತು. ಆ ಹಿತ್ತಲ ಅವಸ್ತೆ ನೋಡಿ ಕ್ಷಣ ಹೊತ್ತು ದಂಗಾದರು. ಹೊನ್ನಮ್ಮಜ್ಜಿ ಈ ಗಿಡಗಳನ್ನ ತನ್ನ ಮಕ್ಕಳಂತೇ ಬೆಳಸತ. ಇವುನೆಲ್ಲ ಹೆಂಗೆ ನಾಶಮಾಡರ ನೋಡ, ಇವರೇನು? ಮನುಷ್ಯರೋ, ರಾಕ್ಷಸರೋ, ಪಾಪ..! “ಹೊನ್ನಮ್ಮಜ್ಜಿ ಆ ಗಿಡಗಳನ್ನ ಬೆಳೆಸುಕೆ  ಆಗಿರೋ ಕಷ್ಟ ಅಟ್ಟಿಟ್ಟೆ ಅಲ್ಲ. ಅದರ ಕೆಲಸ ನೋಡಿದವರಿಗೇ ಗುತ್ತ, ಅವ್ರಿಗೇನ ಗುತ್ತ್ತ ಮುಂಡೆ ಮಕ್ಕಳಿಗೆ” ಅಂತ ನೆರೆದ ಜನ ಮಾತನಾಡುತ್ತಿದ್ದರು. ಹೊನ್ನಮ್ಮಜ್ಜಿಗೋ ಗಿಡಮರಗಳೆಂದರೆ ಪಂಚಪ್ರಾಣ. ತನ್ನ ಸೊಸೆಗೆ ಒಂದಿಷ್ಟು ಸಹಾಯ ಮಾಡಿ, ಉಳಿದ ಎಲ್ಲಾ ಸಮಯವನ್ನ ಈ ಗಿಡಮರಗಳ ನಡುವೆಯೇ ಕಳೆಯುತ್ತಿದ್ದಳು. ಅವುಗಳಿಗೆ ನೀರುಣಿಸುವುದು, ಬುಡ ಸರಿ ಮಾಡುವುದು, ಕೀಟಗಳನ್ನು ತೆಗೆದು ಹಾಕುವುದು, ಗೊಬ್ಬರ ಹಾಕುವುದು ಹೀಗೆ ಜೀವಕ್ಕಿಂತಲೂ ಹೆಚ್ಚು ಜೋಪಾನ ಮಾಡಿದ ಗಿಡ ಮರಗಳು ಅಂದು ನೆಲಕ್ಕುರುಳಿದ್ದವು. ಇದಕ್ಕೆಲ್ಲ ಕಾರಣ ಯಾರು ಎನ್ನುವುದು ಅಂಗೈ ಹುಣ್ಣಿಗೆ ಕನ್ನಡಿ ಹಿಡಿದಷ್ಟೇ ಸ್ಪಷ್ಟವಾಗಿತ್ತು. ಜೈಲಿನಿಂದ ಬಿಡುಗಡೆಯಾಗಿ ಇನ್ನೂ ಒಂದು ವಾರವೂ ಕಳೆದಿಲ್ಲ. ಆಗಲೇ ಇಂಥ ಅವಗಡಕ್ಕೆ ಅವರು ಮನಸ್ಸು ಮಾಡಿರುವುದು ಇಡೀ ಆ ಕೇರಿಯ ಜನರಲ್ಲಿ ಅಚ್ಚರಿಯನ್ನುಂಟು ಮಾಡಿತ್ತು.

*

ಆ ಊರ ಹೆಸರು ಹೊನ್ನೂರು. ಬೆಟ್ಟ ಗುಡ್ಡಗಳಿಂದ ಆವೃತವಾದ ಪುಟ್ಟ ಊರು. ಹೊರಗಿನ ಕೇರಿಯ ಮೂರು ಮನೆಗಳನ್ನು ಹಿಡಿದರೆ ಅಲ್ಲಿದ್ದದ್ದು ನೂರಿಪ್ಪತ್ತು ಮನೆಗಳು. ಈ ಹೊನ್ನುರಿನ ಹೊಟ್ಟೆಯ ಭಾಗದಲ್ಲಿರುವ ಮನೆಯ ಹೊನ್ನಮ್ಮಜ್ಜಿಯದು. ಒಂದು ಕಾಲದಲ್ಲಿ ಇಪ್ಪತ್ತರಷ್ಟು ಸದಸ್ಯರಿದ್ದ ಈ ಮನೆಯಲ್ಲಿ ಈಗ ಇದ್ದದ್ದು ಕೇವಲ ಅಜ್ಜಿಯನ್ನೊಳಗೊಂಡು ಐದೇ ಜನ. ಹೊನ್ನಮ್ಮಜ್ಜಿ, ಮಗ ಶಂಕರಣ್ಣ, ಸೊಸೆ ತಾರಾ, ಮೊಮ್ಮಗ ರಾಜು, ಮೊಮ್ಮಗಳು ರಾಗಿಣಿ ಇದಿಷ್ಟು ಈ ಕುಟುಂಬದ ಪರಿಚಯ. ಊರಿನ ಎಲ್ಲರೊಂದಿಗೂ ಬೆರೆಯುವ ಈ ಕುಟುಂಬ ಎಲ್ಲರೊಳಗೊಂದಾಗಿತ್ತು. ಊರಲ್ಲಿ ಯಾರಿಗಾದರೂ ಸಹಾಯಬೇಕಾದರೆ ಹೊನ್ನಮಜ್ಜಿಯನ್ನು ನೆನೆಸಿಕೊಳ್ಳದೇ ಇರುತ್ತಿರಲಿಲ್ಲ. ಬೇಡಿ ಬಂದವರಿಗೆ ಆ ಅಜ್ಜಿ ಬರಿಗೈಯಲ್ಲಿ ವಾಪಸ್ಸು ಕಳಿಸುತ್ತಿರಲಿಲ್ಲ. ಹಸಿದು ಬಂದವರಿಗಂತೂ ಊಟ, ಆಶ್ರಯ ಖಂಡಿತ ಸಿಗುತ್ತಿತ್ತು. ಇಂಥ ಹೊನ್ನಮ್ಮಜ್ಜಿಗೂ ಆ ಊರಿನಲ್ಲಿ ಶತ್ರುಗಳಿದ್ದರು ಎಂದರೆ ನಂಬಲೇಬೇಕು.

ಅಂದು ಶನಿವಾರ ಸಮಯ ಸರಿಸುಮಾರು ರಾತ್ರಿ ಎಂಟು ಗಂಟೆ. ಎಂದಿನಂತೆ ಅತ್ತೆ ಮತ್ತು ಮಕ್ಕಳಿಗೆ ಊಟಕ್ಕೆ ಬಡಿಸಿ ತಾರಾ ಗಂಡನಿಗಾಗಿ ಕಾಯುತ್ತಿದ್ದಳು. ಶಂಕರಣ್ಣ ಗದ್ದೆಯ ಕಳೆ ತೆಗೆಯಲು ಆಳಿಗೆ ಹೇಳಲು ಹೋದವನು ಬರುವುದು ತಡವಾಗಿತ್ತು. ತಾರಾ ಗಂಡ ಬರುವ ದಾರಿಗೆ ಕಣ್ಣು ಹಾಸಿ ಕುಳಿತಿದ್ದಳು. ಇಂದು ಗಂಡನೆದುರು ಹೇಳಲೇಬೇಕಾದ ವಿಷಯವೊಂದು ಅವಳಲ್ಲಿ ಒಂದು ಬಗೆಯ ಭಯವನ್ನು ಹೇಳುವ ಮುಂಚೆಯೆ ಹುಟ್ಟುಹಾಕಿತ್ತು.  ಅಷ್ಟಕ್ಕೂ ಆ ವಿಷಯವನ್ನು ಗಂಡನ ಮುಂದೆ ಹೇಳುವದಾದರೂ ಹೇಗೆ..? ಎಲ್ಲಿಂದ ಶುರು ಮಾಡುವುದು ಎಂದೆಲ್ಲ ಯೋಚಿಸುತ್ತಿರುವಂತೆಯೆ ಗಂಡ ಬಂದಾಗಿತ್ತು. ಕೂಡಲೇ ಊಟ ಬಡಿಸಿದಳು. ಆತನ ಊಟ ಮುಗಿಸಿ ಕೈ ತೊಳೆದುಕೊಳ್ಳುವಾಗ ಅಳುಕುತ್ತಲೇ ‘ಬಿಲಗದ ನೀರ ಕಟ್ಟಿ ಬರುಕೆ ಹೊಗದೆ ಆದರೆ ಪಾಗಾರಮನೆಯವರು ನಮ್ಮ ಬಿಲಗದ ನೀರ ಕಟ್ಟಿ ತಮ್ಮ ಗದ್ದಿಗೆ ನೀರ ಬಿಟ್ಟಕಂಡದ್ರ. ನಮ್ಮ ಗದ್ದೆಗೆ ನೀರೇ ತುಂಬಲಾಗತ’ ಎಂದಳು. ಶಂಕರಣ್ಣನಿಗೋ ಹೆಂಡತಿಯ ಮಾತು ಕೇಳಿ ಕೋಪ ನೆತ್ತಿಗೇರಿತ್ತು. ಎಲ್ಲರಿಗೂ ಕೇಳುವ ಹಾಗೆಯೇ ‘ಬೋಳಿ ಮಕ್ಕಳ, ಅವರಪ್ಪ ಮಾಡ್ಸಿಟ್ಟ ಬಿಲಗ ಅಂದಕಂಡರ..? ಯಾವಾಗ ಬೇಕ ಆವಾಗೆ ನೀರ ನಮ್ಮ ಬಿಲಗನಿಂದೆ ತಮ್ಮ ಗದ್ದಿಗೆ ಬಿಟ್ಕಣುಕೆ, ಇವರನ್ನ ಹಿಂಗೆ ಬಿಟ್ಟರೆ ಆಗುದಲ್ಲ. ಇವರಿಗೆ ಬ್ಯಾರೆ ಬಿಲಗ ಮಾಡ್ಸಕಣುಕೆ ಏನಾಗಿದ ಧಾಡಿ, ನಮ್ಮ ಗದ್ದಿಗೇ ಇನ್ನೂ ನೀರ ತುಂಬಲ ಅಂದ ಹೇಳತಿ, ನಮ್ಮ ನೀರ ತುಂಬದ ಮೇಲಾದರೂ ಬಿಟ್ಕಂಡರೆ ಬ್ಯಾರೆ ಆಗತ ಕಾಣಸ್ತಿ ಈ ಬೋಳಿ ಮಕ್ಕಳಿಗೆ,’ ಎನ್ನುತ್ತ ಜಗುಲಿಯತ್ತ ನಡೆದ. ಅಷ್ಟರಲ್ಲೇ ಅಲ್ಲೆಲ್ಲೋ ಅಡಗಿ ಕುಳಿತು ಶಂಕರಣ್ಣನ ಮಾತುಗಳನ್ನೇ ಆಲಿಸುತ್ತಿದ್ದ ಪಾಗಾರಮನೆ ಮಾದೇವ ಜಗಳ ಕಾಯಲೆಂದೆ ಬಂದವನಂತೆ ಏನು ನೀನು, ಆ ಮಕ್ಕಳೆ ಈ ಮಕ್ಕಳೆ ಅಂತಿ, ನಮ್ಮನ್ನ ಏನ್ ಅಂದ್ಕಬಿಟ್ಟಿ..? ನಿಂಗೂ ಕಾಣಸ್ತವ ನೋಡ್ತೆ ಇರ ಬಾಳ ದಿವಸ ಇಲ್ಲಾ ಹಾಗೆ ಹೀಗೆ ಅಂತ ಜಗಳಕ್ಕೇ ನಿಂತುಬಿಟ್ಟ. ಶಂಕರಣ್ಣನಿಗೂ ತಡೆಯಲಾಗಲಿಲ್ಲ. ಹೌದ ಹೇಳ್ದೆ. ನೀವು ಮತ್ತೆ ಕದ್ದ ನೀರ ಬಿಟ್ಕಂಡರೆ ಯಾರ ಹೇಳ್ದೇ ಇರ್ತರ? ನಮ್ಮ ಗದ್ದಿಗೆ ನೀರ ತುಂಬದ ಮೆಲಾದರೂ ನೀರ ಬಿಟ್ಕಂಡರೆ ಮಾತ ಬ್ಯಾರೆಯಾಗತ. ಒಬ್ಬರಿಗೊಬ್ಬರು ವಾದ ಪ್ರತಿವಾದದಲ್ಲೇ ತೊಡಗಿದ್ದರು. ಮಾದೇವನೋ ಇವನ ಯಾವ ಮಾತನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ತನ್ನದೇ ಸರಿ ಎಂಬಂತೆ ಜಗಳಕ್ಕೆ ನಿಂತಿದ್ದ.

ಇವರಿಬ್ಬರ ಜಗಳ ಕೇಳಿ ಊರಿಗೆ ಊರೇ ಎಚ್ಚರಗೊಂಡಿತ್ತು. ನೆರೆದ ಜನರ ನಡುವೆ ಹಿರಿಯನೊಬ್ಬ ‘ಶಂಕರ ಹೇಳುದ ಸರಿಯಾಗೇ ಇದ ಮತ್ತ್ಯಾಕೆ ನೀನು ಅವನ ಜೊತೆಗೆ ಜಗಳ ಮಾಡ್ತೆ ಇಂವೆ, ಅಂವಗೆ ಹೇಳದೇ ಹ್ಯಾಂಗೆ ಬಿಲಗದ ನೀರ ಬಿಟ್ಕಂಡರಿ’ ಎಂದು ಕೇಳುತ್ತಿದ್ದರೆ ‘ಹಾಂ.. ಹಾಂ.. ನಂಗೆ ಗುತ್ತ ನೀವೆಲ್ಲ ಉಂದೇ ಅಂದೆ. ಏನ್ ಮಾಡ್ತ್ತರಿ.. ಏನ್ ಮಾಡ್ತರಿ’ ಅಂತ ಮೈಮೆಲೆ ಏರಿ ಬಂದ. ಎರಡೂ ಕಡೆಯವರು ಕೈ ಕೈ ಮಿಲಾಯಿಸಿದರು. ಹೊನ್ನಮ್ಮಜ್ಜಿ ಇವೆಲ್ಲವನ್ನು ನೋಡುತ್ತ ಮೊಮ್ಮಕ್ಕಳನ್ನು ಹಿಡಿದು ಒಂದು ಮೂಲೆಯಲ್ಲಿ ನಿಂತಿದ್ದಳು. ಶಂಕರಣ್ಣನ ಹೆಂಡತಿ ಗಂಡನನ್ನು ಎಳೆದೆಳೆದು ಜಗಳ ಸಾಕು ಎಂದರೂ ಅವನು ಮತ್ತಷ್ಟು ಜೋರಾಗುತ್ತಿದ್ದ. ಮಾದೇವನ ಮಗ ಗಿರೀಶ ಅದೆಲ್ಲಿದ್ದನೋ ಹಿಂದಿನಿಂದ ಗೂಳಿಯಂತೆ ನುಗ್ಗಿ ಶಂಕರಣ್ಣನ ತಲೆಯ ಮೇಲೆ ಕಟ್ಟಿಗೆಯ ತುಂಡಿನಿಂದ ಜೋರಾಗಿ ಬಡಿದ. ಅವನ ಆ ಹೊಡೆತಕ್ಕೆ ಶಂಕರಣ್ಣ ಅಲ್ಲಿಯೇ ಪ್ರಜ್ಞೆತಪ್ಪಿ ನೆಲಕ್ಕೆ ಕುಸಿದ.  ಒಂದು ಕ್ಷಣ ಏನಾಯಿತೆಂಬುದು ಯಾರಿಗೂ ತಿಳೀಯಲೇ ಇಲ್ಲ. ಶಂಕ್ರಣ್ಣ ಹಾಗೆ ಕುಸಿದು ಬಿದ್ದದ್ದನ್ನು ನೋಡಿದ ಆತನ ಮಕ್ಕಳು ಜೋರಾಗಿ ಅಪ್ಪಾ ಎಂದು ಅಳಲಾಲಂಭಿಸಿದವು. ಶಂಕರಣ್ಣನ ಕಡೆಯವರು ಗಡಬಡಿಸಿ ಗಿರೀಶನನ್ನು ಹಿಡಿದು ಚೆನ್ನಾಗಿ ಥಳಿಸಿದರು. ಶಂಕರಣ್ಣನನ್ನು ಮನೆಯ ಒಳಗೆ ತಂದು ಮಲಗಿಸಿ ನೀರು ಸಿಂಪಡಿಸಿದರೂ ಪ್ರಜ್ಞೆ ಬರಲಿಲ್ಲ. ತಲೆಯಿಂದ ರಕ್ತ ಸುರಿಯುತ್ತಿತ್ತು. ಪಾಗಾರಮನೆಯವರೆಲ್ಲರೂ ಓಡಿ ಹೋಗಿ ತಮ್ಮ ಮನೆ ಸೇರಿಕೊಂಡರು. ಅಲ್ಲಿದ್ದವರೆಲ್ಲ ರಕ್ತ ನಿಲ್ಲಿಸಲು ತಮಗೆ ಗೊತ್ತಿರುವ ವಿದ್ಯೆಯನೆಲ್ಲ ಪ್ರಯೋಗ ಮಾಡಿದರು. ಆದರೆ ರಕ್ತ ನಿಲ್ಲಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ.

ಅಷ್ಟರಲ್ಲಿ ಅವರಿಗೆ ಕಮಲಾಕರಣ್ಣನ ನೆನಪಾಗಿ ಅವನನ್ನು ಕರೆದು ಬರಲು ನಾಗರಾಜನನ್ನು ಕಳಿಸಿದರು. ರಾತ್ರಿಸಮಯ ಅವರ ಮನೆ ಕಡೆ ಹೋಗುವುದು ಅಪಾಯವಾಗಿತ್ತು. ಆದರೆ ಅನಿವಾರ್ಯವಾಗಿತ್ತು. ಆ ಕತ್ತಲಲ್ಲೇ ಓಡಿ ಹೋಗಿ ಕಮಲಾಕರಣ್ಣನನ್ನು ಕರೆ ತಂದ. ಅವನೇನೋ ಒಂದು ಔಷಧಿ ಹಾಕಿ ಪಟ್ಟೆ ಕಟ್ಟಿ ರಕ್ತ ಬರುವುದನ್ನು ನಿಲ್ಲಿಸಿದ. ಸ್ವಲ್ಪ ಹೊತ್ತಿನಲ್ಲೇ ಶಂಕರಣ್ಣನಿಗೆ ಎಚ್ಚರ ಬಂತು. ಅದು ಅವನ ಅಪ್ಪನಿಂದ ಕಲಿತ ನಾಟಿ ಔಷಧಿಯಾಗಿತ್ತು. ಒಂದು ವೇಳೆ ಆತ ಇರದೇ ಹೋಗಿದ್ದರೆ ಏನಾಗುತ್ತಿತ್ತು ಎಂಬುದನ್ನು ಎಲ್ಲರೂ ಉಹಿಸಿದ್ದರು. ಶಂಕರಣ್ಣನ ದಾಯಾದಿಗಳು, ಸ್ನೇಹಿತರು ಎಲ್ಲರೂ ಸೇರಿ ಇವರನ್ನು ಹೀಗೇ ಬಿಟ್ಟರೆ ಸಾಧ್ಯವಿಲ್ಲ. ದಿನದಿಂದ ದಿನಕ್ಕೆ ಇವರ ಗಲಾಟೆ ಊರಿನಲ್ಲಿ ಹೆಚ್ಚುತ್ತಲೇ ಇದೆ.  ಪೋಲೀಸ್ ಕಂಪ್ಲೇಂಟ್ ಕೊಡುವುದೇ ಸೂಕ್ತ ಎಂದು ಒಂದು ನಿರ್ಧಾರಕ್ಕೆ ಬಂದರು. ನಾಳೆ ಶಂಕರನನ್ನು ಆಸ್ಪತ್ರೆಗೆ ಸೇರಿಸುವ ಮೊದಲು ಪೋಲೀಸ್ ಸ್ಟೇಷನ್‌ಗೆ ಹೋಗಿ ಇವನ ಸ್ಥಿತಿ ತೋರಿಸಿ ಕಂಪ್ಲೇಟ್ ಕೊಟ್ಟು ಆಮೇಲೆ ಆಸ್ಪತ್ರೆಗೆ ಹೋಗೋಣವೆಂದು ಕೆಲವರು ಹೇಳಿದರ, ಮತ್ತೆ ಕೆಲವರು ಶಂಕರನನ್ನು ಆಸ್ಪತ್ರೆಗೆ ಕರೆದುಕೊಂಡು ಚಿಕಿತ್ಸೆ ಕೊಡಿಸಿ ಆಮೇಲೆ ಸ್ಟೇಷನ್ನಿಗೆ ಹೋಗೋಣವೆಂದರು. ಮೊದಲು ಅವರೇನಾದರೂ ಹೋಗಿ ಕಂಪ್ಲೇಂಟ್ ಕೊಟ್ಟರೆ ನಾವೇ ಜೈಲು ಕಂಬಿ ಎಣಿಸುವವರು ಎಂದು ಕೆಲವರು ಹೇಳಿದರು. ಕೊನೆಗೆ ಎಲ್ಲರೂ ಸೇರಿ ಮೊದಲು ಸ್ಟೇಷನ್‌ಗೆ ಹೋಗಿ ನಂತರ ಆಸ್ಪತ್ರೆಗೆ ಹೋಗುವುದೆಂದು ತೀರ್ಮಾನಿಸಿದರು.

ಬೆಳಿಗ್ಗೆ ಎದ್ದದ್ದೇ ಒಂದಷ್ಟು ಸಂಬಂಧಿಗಳು, ಸ್ನೇಹಿತರು, ಶಂಕರ ಮತ್ತು ಆತನ ಹೆಂಡತಿ ಸೇರಿ ಹಿಂದಿನ ದಿನದ ಯೋಜನೆಯಂತೆ ಟಪಾಲ್ ಬಸ್ಸಿಗೆ ಹೋರಟರು. ಅದನ್ನು ಪಾಗಾರಮನೆಯವರು ನೋಡಿದರೂ ಆಸ್ಪತ್ರೆಗೆ ಹೋಗಿರಬೇಕೆಂದುಕೊಂಡರು. ಆದರೂ ಒಳಗೊಳಗೆ ಮಾತ್ರ ಭಯ ಇದ್ದೇ ಇತ್ತು. ತಾವು ಇವರಿಗಿಂತ ಮೋದಲೇ ಕಂಪ್ಲೇಂಟ್ ಕೊಡಬೇಕು ಎನ್ನುವ ಯೋಚನೆಯನ್ನು ಮಾಡದೇ ಇರಲಿಲ್ಲ. ಅಲ್ಲಿ ಅವರು ಕಂಪ್ಲೇಂಟ್ ಕೊಟ್ಟು ಇನ್‌ಸ್ಪೆಕ್ಟರ್ ಹತ್ತಿರ ಒಂದು ಪತ್ರ ಬರೆಸಿಕೊಂಡರು ಆಸ್ಪತ್ರೆಯಲ್ಲಿ ತೊಂದರೆಯಾಗಬಾರದೆಂಬ ಉದ್ದೇಶದಿಂದ. ಪೆಟ್ಟು ತುಂಬಾ ಬಿದ್ದಿದ್ದರಿಂದ ಶಂಕರಣ್ಣ ಒಂದೆರಡು ದಿನ ಆಸ್ಪತ್ರೆಯಲ್ಲೇ ಉಳಿಯಬೇಕಾಯಿತು. ಶಂಕರ ಮತ್ತು ಆತನ ಹೆಂಡತಿಯನ್ನು ಬಿಟ್ಟು ಉಳಿದವರು ಊರಿಗೆ ಮರಳಿದರು. ಮಾರನೇ ದಿನ ಪೋಲಿಸ್ ಜೀಪೊಂದು ಊರ ಹೊರಗಿನ ರಸ್ತೆಯ ಮೇಲೆ ಹೋದ ಸುದ್ದಿ ಹಬ್ಬಿತ್ತು. ಮುಂದಿನ ಊರವರೆಗೆ ಹೋದ ಪೋಲಿಸರು ಮತ್ತೆ ವಾಪಸ್ಸಾದರು. ಪೋಲಿಸರು ವಾಪಸ್ಸಾದುದನ್ನು ತಿಳಿದ ಪಾಗರಮನೆಯವುರು ಅವರು ತಮಗಾಗಿ ಬಂದವರಲ್ಲ ಎಂದುಕೊಂಡು ಮಾರನೇ ದಿನ ತಾವೇ ಖುದ್ದಾಗಿ ಪೋಲಿಸ್ ಕಂಪ್ಲೇಟ್ ಕೊಡಲು ಸ್ಟೇಷನ್ನಿಗೆ ಹೋದರು. ಪೋಲೀಸರ ಉದ್ದೇಶವೂ ಇದೇ ಆಗಿತ್ತು. ಅವರನ್ನು ಅಲ್ಲಿಯೇ ಹಿಡಿದು ಒಳಹಾಕಿ ಚೆನ್ನಾಗಿ ತಟ್ಟಿದರು. ಅವರ ಬಡಿತಕ್ಕೆ ಹೆದರಿ ಅವರು ಕೇಳುವ ಮೊದಲೇ ತಮ್ಮದೇ ತಪ್ಪೆಂದು ಒಪ್ಪಿಕೊಂಡರು. ಎರಡು ಮೂರು ದಿನಗಳ ಕಾಲ ಸ್ಟೇಷನಲ್ಲೇ ಆತಿಥ್ಯವಾಯಿತು. ಅವರ ಮನೆಯ ಹೆಣ್ಣು ಮಕ್ಕಳು, ಅವರ ಸಂಬಂಧಿಗಳು ಶಂಕರ ಮತ್ತು ಆತನ ದಾಯಾದಿಗಳ ಹತ್ತಿರ ಕಂಪ್ಲೇಂಟ್ ವಾಪಸ್ಸು ಪಡೆಯುವಂತೆ ಬೇಡಿಕೊಂಡರು. ನಂತರ ಊರಿನ ಮುಖಂಡರೆಲ್ಲರೂ ಸೇರಿ ಶಂಕರನ ಬಿಲಗದ ನೀರನ್ನು ಅವರು ಮುಟ್ಟಬಾರದು ಮತ್ತು ಊರಿನಲ್ಲಿ ಯಾರಿಗೂ ತೊಂದರೆ ಕೊಡಬಾರದು ಎಂಬ ಕರಾರಿನ ಮೇಲೆ ಕೇಸ್ ವಾಪಸ್ ಪಡೆಯುವುದೆಂದು ತೀರ್ಮಾನಿಸಲಾಯಿತು. ಅದರಂತೆಯೆ ಅವರ ಬಿಡುಗಡೆಯೂ ಆಯಿತು. ಅವರಿಗೆ ಈಗಾಗಲೇ ಬಹಳ ಅವಮಾನವಾಗಿದೆ ಇನ್ನು ಮುಂದೆ ಇವರಿಂದ ಯಾವ ತೊಂದರೆಯೂ ಇಲ್ಲವೆಂದು ಊರಿನವರೆಲ್ಲರೂ ನಿಟ್ಟುಸಿರುಬಿಟ್ಟರು. ಅದಕ್ಕೆ ತಕ್ಕಂತೆ ಅವರಲ್ಲಿ ಪರಿವರ್ತನೆಯೂ ಆಗಿತ್ತು. ಆದರೆ ಅವರಲ್ಲಿಯ ನಾಯಿಯ ಬಾಲದ ಕೆಲ ಗುಣಗಳು ಹಾಗೇ ಉಳಿದಿದ್ದವು. ಪೋಲಿಸ್ ಸ್ಟೇಷನ್‌ನಿಂದ ಬಂದ ಮೇಲೆ ಅವರ ಮನೆಗೆ ಅವರ ಸಂಬಂಧಿಕರು ಬರುವುದು ಹೋಗುವುದು ರಾತ್ರಿಯಿಡಿ ಕುಳಿತು ಮಾತನಾಡುವುದು ಕೇರಿಯ ಎಲ್ಲರ ಗಮನಕ್ಕೆ ಬಂದಿದ್ದರೂ ಸಂಬಂಧಿಕರು ಸುಖ ದು:ಖ ಕುರಿತು ಮಾತಾಡಿರಬಹುದು ಅಂದುಕೊಂಡಿದ್ದರು. ನಾಲ್ಕು ದಿನ ಜೈಲುವಾಸ ಮತ್ತು ಹಿಗ್ಗಾ ಮುಗ್ಗ ಬೆತ್ತದ ರುಚಿ ನೋಡಿದವರು ಮತ್ತೆ ಇಂಥ ಹಲ್ಕಾ ಕೆಲಸ ಮಾಡಲಾರರು ಎಂಬ ಊಹೆ ಸುಳ್ಳಾಗಲು ಹೊನ್ನಮ್ಮಜ್ಜಿ ಮಕ್ಕಳಂತೆ ಸಾಕಿ ಬೆಳಸಿದ ಗಿಡಮರಗಳು ನೆಲಕ್ಕುರುಳಿದ್ದೇ ಸಾಕ್ಷಿಯಾಗಿತ್ತು.

Leave a Reply

Your email address will not be published.