ರಾಜಕೀಯದ ಹೊಸ ಲೆಕ್ಕಾಚಾರದಲ್ಲಿ ಕರ್ನಾಟಕ

– ನಾಗರಾಜ್ ಹರಪನಹಳ್ಳಿ

ಕರ್ನಾಟಕದ ರಾಜಕಾರಣ ಸಂಪೂರ್ಣವಾಗಿ ಜಾತಿ ಲೆಕ್ಕಾಚಾರದಲ್ಲಿ ಮುಳುಗಿದೆ. ಬರ ರಾಜ್ಯದ ರೈತರನ್ನು ಕಾಡುತ್ತಿದ್ದರೆ. ಅಧಿಕಾರದಲ್ಲಿರುವವರು ಮತ್ತೆ ಅಧಿಕಾರಕ್ಕೆ ಬರುವುದು ಹೇಗೆ ಎಂದು ಗುಣಾಕಾರ ಭಾಗಾಕಾರ ಮಾಡುತ್ತಿದ್ದಾರೆ. ಫ್ಯಾಸಿಸ್ಟ ಶಕ್ತಿಗಳು ಜಾತಿಯ ಹೆಗಲ ಮೇಲೆ ಕುಳಿತು ನರ್ತಿಸುತ್ತಿವೆ. ಅಪರೇಶನ್ ಕಮಲ ಮತ್ತು ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅಧಿಕಾರದ ದಾಹ ಬಿಜೆಪಿಯನ್ನು ಆವರಿಸಿಕೊಂಡಿದ್ದು, ಕಳೆದ 4 ವರ್ಷಗಳಲ್ಲಿ ಮಾಡಿರಬಹುದಾದ ಅಷ್ಟಿಷ್ಟು ಒಳ್ಳೆಯ ಕೆಲಸಗಳು ಸಹ ಮಾಸಿ ಹೋಗಿವೆ. ಬಿಜೆಪಿಯ ಅಧಿಕಾರಸ್ಥರನ್ನು ಆರ್.ಎಸ್.ಎಸ್. ಸೇರಿದಂತೆ ಅದರ ಅಂಗ ಸಂಸ್ಥೆಗಳು ಒಳಗೊಳಗೇ ಟೀಕಿಸುತ್ತಿವೆ. ಅಖಂಡ ಭಾರತದ ಕನಸುಗಾರರು, ಹಿಂದೂತ್ವ ಪ್ರತಿಪಾದಕರು ರಾಜ್ಯದ ಅಧಿಕಾರ ಹಿಡಿಯಬೇಕು ಎಂಬ ಒಳ ಆಸೆಯನ್ನು ಇನ್ನೂ ಜೀವಂತವಾಗಿರಿಸಿಕೊಂಡಿವೆ. ಅಣ್ಣಾ ಹಜಾರೆ ಹೋರಾಟದಲ್ಲಿ ತೊಡಗಿಕೊಂಡಿರುವ ಅನೇಕರಲ್ಲಿ ಹಿಂದುತ್ವ ಪ್ರತಿಪಾದಕರು ತೂರಿಕೊಂಡಿರುವುದು, ಕಪ್ಪು ಹಣದ ವಿರುದ್ಧದ ಹೋರಾಟಕ್ಕೆ ಮಾತ್ರ ಅಲ್ಲ; ರಾಜ್ಯದ ಅಧಿಕಾರ ನಡೆಸುವ ಕನಸನ್ನು ಸಹ ಹೊತ್ತವರೇ ಆಗಿದ್ದಾರೆ. ಆದರೆ ಈಚಿನ ದಿನಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಹೆಚ್ಚು ಜನಪರ ಆಗುವ ಬಯಕೆ ಹೊಂದಿವೆ. ಜನರ ಹತ್ತಿರ ತಲುಪಲು ಶತಪ್ರಯತ್ನ ಸಹ ಮಾಡುತ್ತಿವೆ.

ಮುಖ್ಯಮಂತ್ರಿ ಹುದ್ದೆಯ ಆಸೆ ಬಿಟ್ಟು ಜನಪರ ರಾಜಕಾರಣ ಮಾಡಿದರೆ ಪಶ್ಚಿಮ ಬಂಗಾಳದ  ಜ್ಯೋತಿ ಬಸ್ಸು, ಕೇರಳದಲ್ಲಿದ್ದ  ಕೆ. ಕರುಣಾಕರ್, ತಮಿಳುನಾಡಿನಲ್ಲಿದ್ದ  ಎಂಜಿಆರ್‌ರಂತೆ ಒಬ್ಬರನ್ನು ನಾಯಕನ್ನಾಗಿ ಒಪ್ಪಿಕೊಳ್ಳುವ ರಾಜಕೀಯ ಸಂದರ್ಭ ಕರ್ನಾಟಕದಲ್ಲಿ ಬಂದ್ರೆ ರಾಜ್ಯದ ಅಭಿವೃದ್ಧಿಯ ದಿಕ್ಕು ಬದಲಾಗಲಿದೆ. ಯಡಿಯೂರಪ್ಪ ಆ ಛಾನ್ಸ ಕಳೆದುಕೊಂಡರು. ಈ ಛಾನ್ಸ ಇರುವುದು ಜೆಡಿಎಸ್‌ನ ಕುಮಾರ ಸ್ವಾಮಿಗೆ ಮಾತ್ರ. ಜೆಡಿಎಸ್‌ನಲ್ಲಿ ಕುಮಾರಸ್ವಾಮಿ ಮಾತ್ರ ಮುಖ್ಯಮಂತ್ರಿ ಅಭ್ಯರ್ಥಿ. ಅವರ ನಾಯಕತ್ವವನ್ನು ಜೆಡಿಎಸ್‌ನಲ್ಲಿ ಇತರರು ಒಪ್ಪುತ್ತಾರೆ. ಅದು ಬಿಟ್ಟರೆ ಈ ಅವಕಾಶ ಇರುವುದು ಬಿಎಸ್ಆರ್ ಕಾಂಗ್ರೆಸ್‌ನ ಶ್ರೀರಾಮುಲು ಅವರಿಗೆ. ಆದರೆ ಅವರ ಪಕ್ಷ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯುವಷ್ಟು ಸ್ಥಾನಗಳನ್ನು ಗೆಲ್ಲಲಾರದು. ಶ್ರೀರಾಮುಲು ಬಿಜೆಪಿಯನ್ನು ಎಷ್ಟು ಕ್ಷೇತ್ರಗಳಲ್ಲಿ ಸೋಲಿಸಬಲ್ಲರು ಎಂಬ ಲೆಕ್ಕಾಚಾರ ಆರಂಭವಾಗಿದೆ. ಅವರು 10 ರಿಂದ 12 ಎಂಎಲ್ಎ ಗಳನ್ನು ಕರ್ನಾಟಕ ವಿಧಾನಸಭೆಗೆ ಕಳುಹಿಸಬಲ್ಲರು ಎನ್ನುವ ಊಹೆಗಳಿವೆ. ಜೆಡಿಎಸ್ ಶಾಸಕರ ಸಂಖ್ಯೆಯನ್ನು 40 ರಿಂದ 45 ಕ್ಕೆ ಏರಬಹುದು. ಉಳಿದ ಸ್ಥಾನಗಳನ್ನು ಕಾಂಗ್ರೆಸ್ ಮತ್ತು ಬಿಜೆಪಿ ಹಂಚಿಕೊಳ್ಳಬಹುದು. ಬಿಜೆಪಿ ಅಧಿಕಾರಕ್ಕೆ ಬರುವುದು ಅನುಮಾನ. 100 ರಿಂದ 110 ಸ್ಥಾನ ಕಾಂಗ್ರೆಸ್ ಗೆದ್ದರೆ, ಆಗ ಅವರಿಗೆ ರಾಮುಲು ಅಥವಾ ಕುಮಾರಸ್ವಾಮಿ ನೆರವು ಅನಿವಾರ್ಯ. ಹಾಗಾದಲ್ಲಿ ಮತ್ತೆ ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರದ ಆಡಳಿತ.

ಬಿಜೆಪಿ ಅಬ್ಬಾಬ್ಬಾ ಅಂದ್ರೆ 60 ರಿಂದ 70 ಶಾಸಕರನ್ನು ಹೊಂದಿ ವಿರೋಧಿ ಪಾಳಯದಲ್ಲಿ ಕುಳಿತುಕೊಳ್ಳಲು ಸಿದ್ಧತೆ ಮಾಡಿಕೊಳ್ಳಬಹುದು. ಕಾಂಗ್ರೆಸ್ ಪಕ್ಷ ಜೆಡಿಎಸ್ ಅಥವಾ ಬಿಎಸ್ಆರ್ ಕಾಂಗ್ರೆಸ್ ಬೆಂಬಲದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಬಹುದು. ಅಥವಾ ಜೆಡಿಎಸ್ ಮತ್ತು ಶ್ರೀರಾಮುಲು ಪಕ್ಷಗಳು ಚುನಾವಣಾ ಪೂರ್ವ ಒಪ್ಪಂದ ಮಾಡಿಕೊಂಡು ಅಧಿಕಾರ ಹಿಡಿಯಲು ಕಾಂಗ್ರೆಸ್ ಸಹಕಾರ ಕೋರಬಹುದು. ಈ ಸಮೀಕರಣಗಳೇ ಇನ್ನಾರು ತಿಂಗಳಲ್ಲಿ ನಡೆಯುವುದು ಖಚಿತ. ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಆರು ತಿಂಗಳು ಕಾಲ ಅಧಿಕಾರದಲ್ಲಿ ಇರಬಹುದು. ಮೂರು ಹೋಳಾಗಿರುವ ಬಿಜೆಪಿ ಭಿನ್ನಮತ ಚುನಾವಣೆಯ ವೇಳೆಗೆ ತಾರಕಕ್ಕೆ ಏರಲಿದೆ. ಯಡಿಯೂರಪ್ಪ ಜೊತೆ ಇರುವವರಲ್ಲಿ 35 ರಿಂದ 40 ಜನ  ಶಾಸಕರು ವಿಧಾನಸಭೆ ಪ್ರವೇಶಿಸಬಹುದು. ಅವರೇ ಹೊಸ ಸರ್ಕಾರಗಳ ಹಣೆಬರಹ ನಿರ್ಧರಿಸುವ ಸಾಧ್ಯತೆಗಳು ಇವೆ. ಹಾಲಿ ಸರ್ಕಾರದ ಪತನದ ನಂತರವೂ ಯಡಿಯೂರಪ್ಪ ಪ್ರಬಲ ನಾಯಕನಾಗಿ ಉಳಿಯ ಬಹುದು. ಆದರೆ ಅಧಿಕಾರ ಮಾತ್ರ ಬಿಜೆಪಿಯ ಕೈ ತಪ್ಪಲಿದೆ. ಆದರೆ ಕಾಂಗ್ರೆಸ್‌ನಲ್ಲಿನ ಸಮಸ್ಯೆಗಳು ಸದ್ಯಕ್ಕೆ ತಣ್ಣಗಾಗಿವೆ. ಆ ಪಕ್ಷ ಅಧಿಕಾರಕ್ಕೆ ಬರುವ ಹೊತ್ತಿನಲ್ಲೇ ನಾಯಕತ್ವದ ಸಮಸ್ಯೆ ಮತ್ತು ಮುಖ್ಯಮಂತ್ರಿ ಗಾದಿಗೆ ಕಿತ್ತಾಟ ನಡೆಯುವುದು ಗ್ಯಾರಂಟಿ.

ಶ್ರೀರಾಮುಲು ಶಕ್ತಿಯನ್ನು ಕಡೆಗಣಿಸುವಂತಿಲ್ಲ. ಬೀದರ್‌ನಿಂದ ಬೆಂಗಳೂರಿನವರೆಗೆ 54 ದಿನಗಳ ಕಾಲ 914 ಕಿಲೋ ಮೀಟರ್ ಪಾದಯಾತ್ರೆ ಮಾಡಿರುವ ರಾಮುಲು ಹಿಂದುಳಿದ ವರ್ಗಗಳನ್ನು ಸಂಘಟಿಸಿಕೊಂಡಿದ್ದು ಚುನಾವಣೆಗಾಗಿ ಕಾದಿದ್ದಾರೆ. ಹಿಂದುಳಿದವರು, ದಲಿತರು, ಮುಸ್ಲಿಮರು, ಕ್ರಿಶ್ಚಿಯನ್ನರು ಸೇರಿದರೆ ಕರ್ನಾಟಕದಲ್ಲಿ ಹೊಸ ರಾಜಕೀಯ ಶಕ್ತಿಯ ಸಮೀಕರಣವಾಗಬಹುದು ಎಂಬ ಲೆಕ್ಕಾಚಾರವೂ ಇದೆ. ಜೊತೆಗೆ ಕರಾವಳಿ, ಮಲೆನಾಡು, ಮೈಸೂರು ಭಾಗದಲ್ಲಿ ಸಂಕಲ್ಪ ಯಾತ್ರೆ ಸಹ ಹೊರಡುತ್ತಿದ್ದಾರೆ. ಜುಲೈ 29 ರಿಂದ ಅಗಸ್ಟ 5 ರವರೆಗೆ ನಡೆಯುವ ಸಂಕಲ್ಪ ಯಾತ್ರೆಯಲ್ಲಿ ಶ್ರೀರಾಮುಲು ಯಾರನ್ನು ಟಾರ್ಗೆಟ್ ಮಾಡಿ ಮಾತನಾಡುತ್ತಾರೆ ಎಂಬುದರ ಮೇಲೆ, ಅವರು ಯಾರ ಜೊತೆ ಸೇರಲಿದ್ದಾರೆ ಎಂದು ಸಹ ನಿರ್ಧರಿಸಬಹುದು. ಬಿಜೆಪಿ ಬಿಟ್ಟ ಹಾಲಾಡಿ ಸಹ ಶ್ರೀರಾಮುಲು ಪಕ್ಷ ಸೇರಿಕೊಂಡರೆ ಬಿಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಕರಾವಳಿಯಲ್ಲಿ ಒಂದು ಶಾಸಕ ಸ್ಥಾನದ ಗೆಲುವು ಗ್ಯಾರಂಟಿ. ಇನ್ನು ಜಾರಕಿಹೊಳಿ, ಅಸ್ನೋಟಿಕರ್ ಮತ್ತವರ ಬೆಂಬಲಿಗರು ಶ್ರೀರಾಮುಲು ಹಾಗೂ ಕುಮಾರಸ್ವಾಮಿ ಜೊತೆ ಸಮಾನ ಅಂತರ ಕಾದುಕೊಂಡವರು. ಅಧಿಕಾರ ಹೋಗುತ್ತಿದ್ದಂತೆ ಅಥವಾ ಸರ್ಕಾರ ಬೀಳುತ್ತಿದ್ದಂತೆ ಅವರು ಬಿಜೆಪಿ ಬಿಡುವುದು ಖಚಿತ.

ಕರ್ನಾಟಕದ ಜನ ಸದ್ಯಕ್ಕೆ ಜಾತಿಯ ಪ್ರವಾಹದಲ್ಲಿ ತೇಲಿ ಹೊದಂತೆ ಕಾಣುತ್ತಿದೆ. ಆದರೆ ಇಲ್ಲಿನ ಜನ ಬಹುತೇಕರು ಸೆಕ್ಯುಲರ್ ಮನೋಭಾವದವರು. ಆಡಳಿತ ವಿರೋಧಿ ಮತಗಳನ್ನು ಯಾರು ಹೆಚ್ಚು ಪಡೆಯುತ್ತಾರೆ ಎಂಬುದರ ಮೇಲೆ ಕರ್ನಾಟಕದ ರಾಜಕಾರಣದ ಭವಿಷ್ಯ ನಿಂತಿದೆ. ಸಿದ್ಧರಾಮಯ್ಯ, ಕುಮಾರಸ್ವಾಮಿ, ಅಥವಾ ಶ್ರೀರಾಮುಲು, ಈ ಮೂವರಲ್ಲಿ ಯಾರು ರಾಜ್ಯದ ಜನರನ್ನು ಹೆಚ್ಚು ಕನ್ವಿನ್ಸ ಮಾಡಲು ಯಶ ಕಾಣುತ್ತಾರೆ ಎಂಬುದರ ಮೇಲೆ ಚುನಾವಣೆಯಲ್ಲಿ ಆಡಳಿತ ವಿರೋಧಿ ಮತಗಳು ಅವರ ಪಕ್ಷಗಳಿಗೆ ಹರಿದು ಬರಲಿವೆ.

ಯುವ ಪಡೆ ಮತ್ತು ಸಿನಿಮಾದ ಜನ

ರಾಜಕೀಯ ಪಕ್ಷಗಳು ಯುವಪಡೆಯನ್ನು ಪಾರ್ಟಿಗೆ ಸೇರಿಸಿಕೊಳ್ಳುತ್ತಿವೆ. ಜೊತೆಗೆ ಸಿನಿಮಾ ಮಂದಿಯನ್ನು ರಾಜಕೀಯಕ್ಕೆ ಎಳೆದು ತಂದಿವೆ. ಜೆಡಿಎಸ್ ಪಕ್ಷ ಮಳೆ ಹುಡುಗಿ ಪೂಜಾ ಗಾಂಧಿ, ಕಿರುತೆರೆಯ ಖ್ಯಾತ ನಟಿ ಮಾಳವಿಕರನ್ನು ರಾಜಕೀಯಕ್ಕೆ ಕರೆ ತಂದಿದೆ. ಬಂಗಾರಪ್ಪ ಅವರ ಪುತ್ರ ಮಧು ಸಹ ರಾಜ್ಯದ ಎಲ್ಲೆಡೆ ಸುತ್ತಾಡಿ ಯುವಕರನ್ನು ಸಂಘಟಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ನಟಿ ರಮ್ಯ ಮತ್ತು ಭಾವನಾ ಇದ್ದಾರೆ. ಉಮಾಶ್ರೀ ಮೊದಲಿನಿಂದ ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿದ್ದಾರೆ. ಬಿಜೆಪಿಯಲ್ಲಿ ಶೃತಿ, ಶ್ರೀನಾಥ ಕ್ರಿಯಾಶೀಲರಾಗಿದ್ದಾರೆ. ಇನ್ನು  ಬಿಎಸ್ಆರ್ ಪಕ್ಷದ ಶ್ರೀರಾಮುಲು ನಟಿ ರಕ್ಷಿತಾರನ್ನು ರಾಜಕೀಯಕ್ಕೆ ಕರೆ ತಂದಿದ್ದಾರೆ. ಚುನಾವಣೆಯ ಹೊತ್ತಿಗೆ ಮತ್ತೊಂದಿಷ್ಟು ನಟನಟಿಯರ ರಾಜಕೀಯ ಪ್ರವೇಶ ಖಂಡಿತ. ಆದರೆ ಇವರು ರಾಜಕೀಯಕ್ಕೆ ಯಾಕೆ ಬರುತ್ತಾರೆ ಮತ್ತು ಅವರಿಂದ ಯಾರಿಗೆ ಲಾಭ ಎಂದು ಅಂದಾಜು ಮಾಡುವುದು ಕಷ್ಟ.

ಮಳೆ ಪೂಜೆ ಮತ್ತು ಸರ್ಕಾರ

ಮಳೆಗಾಗಿ ಪೂಜೆ ಮಾಡಿಸಲು ಹೊರಟ ಸರ್ಕಾರ ವೈಚಾರಿಕತೆಯಿಂದ ಬಹುದೂರ ಎಂಬುದರಲ್ಲಿ ಎರಡು ಮಾತಿಲ್ಲ. 34 ಸಾವಿರ ದೇವಸ್ಥಾನಗಳಲ್ಲಿ ಸರ್ಕಾರ ಪೂಜೆ ಮಾಡಿಸಲು ಹೊರಟಿದೆ. ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಗಳಲ್ಲಿ ಸರ್ಕಾರದ ವತಿಯಿಂದ ಜಲಾಭಿಷೇಕ ಮತ್ತು ಹೋಮ ಮಾಡಿಸಲು 17 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲು ಆದೇಶಿಸಿದೆ. ಜುಲೈ 27 ಮತ್ತು ಆಗಸ್ಟ 2 ರಂದು ಪೂಜೆ ನಡೆಯಲಿದೆ. ಮಳೆಗಾಗಿ ಮೋಡ ಬಿತ್ತನೆ ಮಾಡದೇ ದೇವಸ್ಥಾನಗಳಲ್ಲಿ ಪೂಜೆ ಮಾಡಿಸಹೊರಟಿರುವುದರ ಹಿಂದೆ ರಾಜಕೀಯ ಉದ್ದೇಶ ಇದೆ ಎಂಬುದರಲ್ಲಿ ಎರಡು ಮಾತಿಲ್ಲ. ಕಾಂಗ್ರೆಸ್, ಜೆಡಿಎಸ್ ಮಳೆಗಾಗಿ ಸರ್ಕಾರಿ ಪೂಜೆಯನ್ನು ಟೀಕಿಸಿವೆ. ಜನರ ಭಾವನೆಗಳನ್ನ ದೇವರ ಜೊತೆ ತಳುಕು ಹಾಕಿದ್ರೆ ಮಳೆ ಬರುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಬಿಜೆಪಿಗೆ ಸ್ವಲ್ಪ ಮತಗಳು ಬರಬಹುದು. ಅವೂ ಸಹ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ಕಷ್ಟವೇ.

10 thoughts on “ರಾಜಕೀಯದ ಹೊಸ ಲೆಕ್ಕಾಚಾರದಲ್ಲಿ ಕರ್ನಾಟಕ

  1. ವಸಂತ

    ಬಿಎಸ್ಆರ್ ಕಾಂಗ್ರೆಸ್ ನ ಶ್ರೀರಾಮುಲು ಅಂತವರನ್ನು ಕನಾ೵ಟಕದ ಜನ ಜನನಾಯಕ ಎಂದು ಒಪ್ಪಿಕೊಂಡರೆ ಅದು ನಮ್ಮ ರಾಜ್ಯದ ದೇಶದ ದುರಂತ. ನ್ಯಾಯಧೀಶರನ್ನೇ ಖರೀದಿ ಮಾಡಲು ಹೊರಟ ಈ ಜನರಿಂದ ನಿರೀಕ್ಷಿಸುವುದು ಏನು ಉಳಿದಿಲ್ಲ. ಎಲ್ಲ ಅಕ್ರಮ ಗಣಿ ದುಡ್ಡಿನ ಮಹಿಮೆ.

    Reply
    1. nagraj.harapanahalli

      ಶ್ರೀರಾಮುಲು ಜನನಾಯಕ ಹೌದೋ ಅಲ್ಲವೋ ಎಂಬುದು ಬರಲಿರುವ ಚುನಾವಣೆಯಲ್ಲಿ ತಿಳಿಯಲಿದೆ ಬಿಡಿ. ಬಿಜೆಪಿ ಗೆ ಪೆಟ್ಟು ಕೊಡುವ ತಾಕತ್ತು ಜನ ಬಲ ಶ್ರೀರಾಮುಲು ಬಳಿ ಇದೆ. ಬಿಜೆಪಿ ಜೊತೆ ರೆಡ್ಡಿ , ರಾಮುಲು ಇದ್ದಾಗ ಜನ ದಂಗೆ ಎದ್ದಿರಲಿಲ್ಲ. ಸಂಘ ಪರಿವಾರ ಸಹ ಮೌನ ವಾಗಿತ್ತು . ಬಿಜೆಪಿ ಉಪ ಚುನಾವಣೆಯಲ್ಲಿ ಗೆದ್ದದ್ದು , ಅಪರೇಷನ್ ಕಮಲ ನಡೆಸಿದ್ದು ಯಾವ ಹಣ ದಿಂದ ?

      Reply
      1. ರಾಕೇಶ್ ಶೆಟ್ಟಿ

        ನಿಮ್ಮ ದೃಷ್ಟಿಯಲ್ಲಿ ‘ಜನನಾಯಕ’ರೆಂದರೆ ಯಾರು? ಗಾಂಧೀಜಿ,ನೇತಾಜಿ ಅಂತವರು ಜನ ನಾಯಕರೇ ಹೊರತು ಅಪ್ಪನ ಹೆಸರು ಹೇಳಿ ನಾಯಕಾರಗಿರೋ ಕುಮಾರಸ್ವಾಮಿ,ರಾಹುಲ್ ಗಾಂಧಿಗೋ ಇಲ್ಲ ಗಣಿ ದುಡ್ಡಿನಿಂದ ನಿಲ್ಲೋ ರೆಡ್ಡಿ,ರಾಮುಲು ಅಥವಾ ಡಿನೋಟಿಫಿಕೇಶನ್ ಖ್ಯಾತಿಯ ಯಡ್ಯೂರಪ್ಪ ಅಲ್ಲ. ಇವರೆಲ್ಲ ‘ಜನ ಸೇವಕ’ರು. ಜನ ಪ್ರೀತಿಸುವವರಷ್ಟೇ ಜನನಾಯಕರಾಗಳು ಸಾಧ್ಯ.ಅಂತವರು ರಾಜ್ಯ ರಾಜಕೀಯಕ್ಕೆ ಇನ್ನು ಬರಬೇಕಿದೆ

        Reply
        1. nagraj.harapanahalli

          ಕುಮಾರಸ್ವಾಮಿ , ರಾಹುಲ್ ಗಾಂಧಿ, ಮುಲಾಯಂ ಮಗ ಅಖಿಲೇಶ್ ಯಾದವರನ್ನ ಜನ ನಾಯಕರು ಅಂತ ಬಿನ್ನಮತದ ನಡುವೆಯೂ ಒಪ್ಪಿಕೊಳ್ಳಲೇ ಬೇಕು. ಇಲ್ಲದಿದ್ದರೆ ಸಿನಿಕತನ ವಾಗುತ್ತದೆ. ಬಾಬರಿ ಮಸೀದಿ ಕೆಡವಿದವರನ್ನೇ ನಾಯಕರೆಂದು ನಾವು ಒಪ್ಪಿಕೊಂಡಿಲ್ಲವೇ.ನಮ್ಮ ಚಿಂತನೆ ಪ್ರಕಾರ ರಾಜಕೀಯ ಮಾಡುವದಾದ್ರೆ ಚುನಾವಣ ವೆಚ್ಚ ವನ್ನ ಚುನಾವಣ ಆಯೋಗ ಭರಿಸಬೇಕು.

          Reply
          1. ರಾಕೇಶ್ ಶೆಟ್ಟಿ

            ಕುಮಾರ್,ರಾಹುಲ್,ಅಖಿಲೇಶ್ ಮೂವರು ಮುಂದೆ ನಿಂತಿದ್ದು ಅವರ ಅಪ್ಪನ ಹೆಸರಿನಿಂದಲೇ.ಇವರೆಲ್ಲ ಆಯಾ ಪಕ್ಷದ ಪ್ರಶ್ನಾತೀತ ನಾಯಕರಷ್ಟೇ ಜನ ನಾಯಕರಲ್ಲ.ಬಾಬರಿ ಮಸಿದಿ ಕೆಡವಿದವರು ಕೊಮುವಾದಿಗಳಾಗಿದ್ದರೆ,ಕೆಡವಿಸಿದವರು ಇಂದಿಗೂ ಸೆಕ್ಯುಲರ್ಗಳಾಗಿದ್ದಾರೆ ಮತ್ತು ಅಂತ ಸೆಕ್ಯುಲರ್ ನಾಯಕನ ಮಗನಿಗೆ ಇಂದು ಪ್ರಧಾನಿ ಪಟ್ಟ ಕಟ್ಟಲು ತುದಿಗಾಲಲ್ಲಿ ವಂಧಿ ಮಾಗಧರು ನಿಂತಿದ್ದರೆ ಬಿಡಿ ಅದು ಪಕ್ಕಕ್ಕಿರಲಿ.

            ಮಂತ್ರಿ ಸ್ಥಾನ ಸಿಗದಿದ್ದ ಮೇಲೆ ತಾನೇ ತಕ್ಷಣಕ್ಕೆ ಸ್ವಾಭಿಮಾನ ಜಾಗೃತವಾಗಿ,ಅಷ್ಟೂ ದಿನ ಅವರ ಸ್ನೇಹಿತನ ಗಣಿಯ ಧೂಳಿನಲ್ಲಿ ಒದ್ದಾಡುತಿದ್ದ ಬಡವರ,ಶ್ರಮಿಕರ ನೆನಪಾಗಿದ್ದು? ಇವರನ್ನೆಲ್ಲ ಜನ ನಾಯಕರು ಅನ್ನಬೇಕೆ?

            ಚುನಾವಣ ವೆಚ್ಚವನ್ನ ಚುನಾವಣ ಆಯೋಗ ಬರಿಸುವುದು ಬೇಡ.ಆದರೆ,ಆಯೋಗ ಸೂಚಿಸಿರುವ ಇತಿ ಮಿತಿಯೊಳಗೆ ಚುನಾವಣಾ ಗೆದ್ದು ಬರಬೇಕು.ಅಂತವರು ನಮಗೆ ಬೇಕು.ಅದು ಬಿಟ್ಟು ಚುನಾವಣೆಯಲ್ಲಿ ಹಣದ ಹೊಳೆ ಹರಿಸಿ ಗೆದ್ದು ಬಂದವರು ಕೊಳ್ಳೆ ಹೊಡೆಯದೆ ಇನ್ನೇನು ಮಾಡುತ್ತಾರೆ ಹೇಳಿ?

  2. sandy

    ಪ್ರಜಾ ಪ್ರಗತಿ ರಂಗದ ಬಗ್ಗೆ ಉಲ್ಲೇಖ ಮಾಡಿಲ್ಲ
    ತಳ ಮಟ್ಟದ ಕಾರ್ಯಕರ್ತರನ್ನು ಹೊಂದಿರುವ ಇದು ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಇದೆಯೇ ?!

    Reply
    1. nagraj.harapanahalli

      ನಿಜ . ನಾನು ಪ್ರಸ್ತಾಪಿಸಬೇಕಿತ್ತು. ಪ್ರಗತಿರಂಗದ ಕನಸು ಪಿ.ಲಂಕೇಶರದ್ದು . ಈಗ ದೇವನೂರು ಮಹದೇವ್ ಸರ್ ಪ್ರಜಾ ಪ್ರಗತಿರಂಗವನ್ನು ರಾಜ್ಯದ ರಾಜಕೀಯ ಶಕ್ತಿ ಯಾಗಿ ಬೆಳೆಸಲು ರೈತ ಸಂಘ ಗಳನ್ನೂ , ದಲಿತ ಸಂಘಟನೆ ಗಳನ್ನೂ ಒಗ್ಗೂಡಿಸಲು ಯತ್ನಿಸಿದ್ದು ನೆನಪಿದೆ. ಅದು ಇದೆ ಬರಲಿರುವ ಚುನಾವಣೆಯಲ್ಲಿ ರಾಜಕೀಯ ಶಕ್ತಿ ಆದರೆ ನಾನು ಸಹ ಸಂತೋಷ ಪಡುವೆ.

      Reply
  3. ರಾಕೇಶ್ ಶೆಟ್ಟಿ

    ಇರೋ ಮೂರು ಮತ್ತೊಂದು ಪಕ್ಷಗಳಲ್ಲಿ ಯಾವುದು ಜನಪರವಿಲ್ಲ ಅನ್ನುವದು ಬಹುಷಃ ನಿಮಗೆ ಗೊತ್ತಿಲ್ಲ ಅನ್ನಿಸುತ್ತೆ.ಹಾಗಾಗಿಯೇ ಜೆಡಿಎಸ್ ,ಕಾಂಗ್ರೆಸ್ಸ್ ಬಗ್ಗೆ ವಿಶೇಷ ಮಮಕಾರ ತೋರಿದ್ದಿರಿ.ಇನ್ನು ಶ್ರೀರಾಮುಲು ಹೆಸರು ಬೇಲ್- ಡೀಲ್ ನಲ್ಲಿ ಕೇಳಿ ಬಂದಿರುವುದು ತಮಗೆ ಗೊತ್ತಿಲ್ಲ ಅನ್ನಿಸುತ್ತೆ.ಸೆಕ್ಯುಲರ್-ಕೋಮುವಾದ ಅಲ್ಲ ರಾಜಕೀಯ ಟರ್ಮಿನಾಲಜಿಗಳು.ನಮಗಿಂದು ಬೇಕಾಗಿರೋದು ನಿಯತ್ತಾಗಿ ಜನ ಸೇವೆ ಮಾಡೋ ಪಕ್ಷಗಳು.ಆದರೆ,ಅಂತ ಒಂದೇ ಒಂದು ಪಕ್ಷವು ಈ ರಾಜ್ಯದಲ್ಲಿಲ್ಲ

    Reply
  4. anand prasad

    ಕಚ್ಚಾಡುವುದು ಭಾರತೀಯರ ಹುಟ್ಟುಗುಣವಾಗಿರುವಂತೆ ಕಾಣುತ್ತದೆ. ರೈತ ಸಂಘ, ದಲಿತ ಸಂಘಟನೆಗಳು ಮೊದಲಾದ ಸಂಘಟನೆಗಳು ಒಟ್ಟುಗೂಡಿ ಹೋರಾಡಿ ಚುನಾವಣೆಗಳಲ್ಲಿ ಹತ್ತೋ ಇಪ್ಪತ್ತೋ ಸ್ಥಾನಗಳನ್ನು ಗೆದ್ದರೂ ಇಂದಿನ ರಾಜಕೀಯ ಅನಿಶ್ಚಿತತೆಯಲ್ಲಿ “ಕಿಂಗ್ ಮೇಕರ್” ಆಗುವ ಸಾಧ್ಯತೆ ಇದೆ. ಇಂಥ ಅವಕಾಶ ಇದ್ದರೂ ರೈತ ಸಂಘಟನೆಗಳು ಕಚ್ಚಾಡುವುದು ಯಾವ ಪುರುಷಾರ್ಥ ಸಾಧನೆಗಾಗಿ? ಪುಟ್ಟಣ್ಣಯ್ಯ ಮತ್ತು ಕೋಡಿಹಳ್ಳಿ ಚಂದ್ರಶೇಖರ್ ಕಚ್ಚಾಡುತ್ತಿರುವುದು ಯಾಕಾಗಿ? ಇಂಥ ಅವಿವೇಕಿಗಳಿಂದ ರಾಜ್ಯದಲ್ಲಿ ರೈತ ಸಂಘಟನೆಗಳು ವಿಫಲವಾಗಿವೆ. ಒಗ್ಗಟ್ಟು ಇಲ್ಲದೆ ಪ್ರಜಾಪ್ರಗತಿ ರಂಗ ಏನನ್ನು ಸಾಧಿಸಲು ಸಾಧ್ಯ?

    Reply

Leave a Reply to nagraj.harapanahalli Cancel reply

Your email address will not be published. Required fields are marked *