ಇಸ್ಲಾಂಪುರ, ಇತ್ತಾವರವೆಂಬ ಭಾರತವೂ ಹಾಗೂ ಇಲ್ಲಿನ ಸೂರಾಚಾರಿಗಳು


-ಬಿ. ಶ್ರೀಪಾದ್ ಭಟ್  


 

ಬಹಳಷ್ಟು ಜನ ನಿಜಕ್ಕೂ ಬೇರೇ ಜನ. ಅವರ ಚಿಂತನೆಗಳು ಬೇರೆಯವರ ಅಭಿಪ್ರಾಯಗಳಾಗಿರುತ್ತವೆ. ಅವರ ಜೀವನ ಮಿಮಿಕ್ರಿಯಾಗಿರುತ್ತದೆ. ಹೇಳಿಕೆಗಳು ಅವರ ಅನುಶಕ್ತಿಗಳಾಗಿರುತ್ತವೆ. – ಅಸ್ಕರ್ ವೈಲ್ಡ್

ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಪ್ರಖ್ಯಾತ ಕಥೆ “ಅವನತಿ” ಕನ್ನಡ ಸಾಹಿತ್ಯದಲ್ಲಿ ಮಾತ್ರವಲ್ಲ ಭಾರತೀಯ ಸಾಹಿತ್ಯದಲ್ಲೂ ಶ್ರೇಷ್ಠ ಕಥೆಗಳಲ್ಲೊಂದು ಎಂದು ನನ್ನ ಅನಿಸಿಕೆ. ಈ ಕಥೆಯು ಪ್ರಕಟವಾಗಿ ಹೆಚ್ಚೂಕಡಿಮೆ 40 ವರ್ಷಗಳ ನಂತರವೂ ಅದರ ತಾಜಾತನವನ್ನು, ಸಮಕಾಲೀನತೆಯನ್ನು ಇಂದಿಗೂ ಉಳಿಸಿಕೊಂಡಿದೆ. ಇಷ್ಟು ಮಾತ್ರ ಹೇಳಿದರೆ ಅವನತಿ ಕಥೆಯ ವೈಶಿಷ್ಟ್ಯತೆ ಮತ್ತು ಅನನ್ಯತೆಯನ್ನು ವಿವರಿಸಿದಂತಾಗುವುದಿಲ್ಲ.ಈ ಕಥೆಯನ್ನು ಕೇವಲ ಸಾಹಿತ್ಯಕವಾಗಿ ಮಾತ್ರ ನೋಡದೆ ಸಮಾಜ ಶಾಸ್ತ್ರದ ಹಿನ್ನೆಲೆಯಲ್ಲಿ ಕೂಡ ನೋಡಿದಾಗ ಇದು ಪ್ರಕಟವಾದ 70ರ ದಶಕದ ಕಾಲಘಟ್ಟದಲ್ಲೂ ಮತ್ತು ಇಂದಿನ 21ನೇ ಶತಮಾನದ ಎರಡನೇ ದಶಕದಲ್ಲೂ ’ಅವನತಿ’ಯ ಕಥೆಯ ಘಟನಾವಳಿಗಳಿಗೆ, ಇಂಚಿಂಚೂ ಪದಗಳಿಗೆ, ವ್ಯಕ್ತಿತ್ವಗಳಿಗೆ, ಗ್ರಹಿಕೆಗಳಿಗೆ ಭಾರತವು ಪ್ರತೀಕವಾಗಿಯೂ, ಜ್ವಲಂತ ಉದಾಹರಣೆಯಾಗಿಯೂ ಬೆತ್ತಲೆಯಾಗಿ ಬಯಲಾಗುತ್ತದೆ. ಇಂಡಿಯಾದಲ್ಲಿ 40 ವರ್ಷಗಳ ಹಿಂದೆಯೂ ಬಹುಪಾಲು ಜನ ಸೂರಾಚಾರಿಗಳೇ ಇಂದಿಗೂ ಇಂಡಿಯಾದ ಬಹುಪಾಲು ಜನ ಸೂರಾಚಾರಿಗಳು!!

ದೇಶವೊಂದರ ಸಾಂಸ್ಕೃತಿಕ ನೆಲೆಗಳು ಮತ್ತು ಸಾಮಾಜಿಕ ನೆಲೆಗಳ ಸಂರಚನೆಯು ಅದರ ಬುಡಕಟ್ಟುಗಳ, ವಿಭಿನ್ನ ಜಾತಿಗಳ, ಅವೈದಿಕ ನೆಲೆಗಳ ವೃತ್ತಿಕೌಶಲ್ಯದ ಮೇಲೆ ಪರಿಗಣಿತವಾಗುತ್ತದೆ. ಈ ವೃತ್ತಿಕೌಶಲ್ಯದ ಮಾದರಿಗಳೇ ಆ ದೇಶದ ನಿರಂತರ ಕ್ರಿಯಾಶೀಲ ಬದಲಾವಣೆಗಳಿಗೆ ಸಾಕ್ಷಿಯಾಗಿರುತ್ತವೆ. ಈ ವೃತ್ತಿಕೌಶಲ್ಯಗಳು ತನ್ನ ದಣಿವರಿಯದ, ನಳನಳಿಸುವ ಹೊಸತನದೊಂದಿಗೆ ಸದಾ ಚೇತೋಹಾರಿಯಾಗಿಯೂ, ದೇಶವೊಂದರ ಮಾನಸಿಕ ಸುಂದರತೆಗೂ ಕಾರಣವಾಗುತ್ತವೆ. ಸುಂದರ ವಿನ್ಯಾಸದ ಮಸ್ಲೀನ್ ಬಟ್ಟೆಗಳನ್ನು ನೇಯುವ ಕೈಗಳು ಅದಕ್ಕಾಗಿ ತನ್ನ ಉಗುರುಗಳನ್ನು ಬಳಸಿಕೊಳ್ಳುವ ಕೌಶಲ್ಯದ ಮಾದರಿಗೆ ಹೋಲಿಕೆಯೇ ಇಲ್ಲ. ತಮ್ಮಟೆಯ ಚರ್ಮದ ಹದಕ್ಕೆ ಹಾಗೂ ಅದರ ಸಾಂದ್ರತೆಯನ್ನು ಹೊಂದಿಸುವ ಕೌಶಲ್ಯ ಇಂದಿಗೂ ಅದ್ಭುತ. ಈ ರೀತಿಯ ತನ್ನ ವೃತ್ತಿಕೌಶಲ್ಯಗಳನ್ನು ಮರೆತ ಸಮಾಜ ನಿಧಾನವಾಗಿ ತನ್ನ ದೇಶವನ್ನು ಮಲದ ಗುಂಡಿಯನ್ನಾಗಿಸುತ್ತದೆ. ಇದರ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ಅಥವಾ ಸಮಾಜದ ಐಡೆಂಟಿಟಿಯನ್ನು ಗುರುತಿಸುವುದು ಆತನ ಅಥವಾ ಸಮಾಜದ ವೃತ್ತಿಕೌಶಲ್ಯದ, ಬದ್ಧತೆಯ ಮೂಲಕವೋ ಅಥವಾ ಆ ವ್ಯಕ್ತಿಯ ಅಥವಾ ಸಮಾಜದ ಆಯ್ಕೆಗಳ ಮೌಲಿಕತೆಯ ಮೂಲಕವೋ ಎಂದು ಅವನತಿಯ ಸೂರಾಚಾರಿಯ ಮೂಲಕ ಹಾಗೂ ಆತನ ಸುತ್ತಲೂ ನಡೆಯುವ ಘಟನಾವಳಿಗಳ ಮೂಲಕ ತೇಜಸ್ವಿಯವರು ಪ್ರಶ್ನಿಸುತ್ತಾರೆ. ಸೂರಾಚಾರಿಯ ಐಡೆಂಟಿಟಿ ಆತ ನಿಜಕ್ಕೂ ಪ್ರತಿಭಾವಂತ ಶಿಲ್ಪಿಯಾಗಿದ್ದ ಅಥವಾ ಸೂರಾಚಾರಿಯು ತನ್ನ ಏಕಾಗ್ರತೆಯನ್ನು ಕೇಂದ್ರೀಕರಿಸಿದರೆ ಭವಿಷ್ಯದಲ್ಲಿ ಬಲು ದೊಡ್ಡ ಶಿಲ್ಪಿಯಾಗುವ ಪ್ರತಿಭೆ ಅವನಲ್ಲಿತ್ತು. ಆದರೆ ಇದಾವುದೂ ಆಗದೆ ಅನೇಕ ವೈರುಧ್ಯಗಳಿಗೆ ಬಲಿಯಾಗಿ ಹಾಗೂ ವ್ಯವಸ್ಥೆಯ ವಿಚಿತ್ರ ರೀತಿಯ ಆಕ್ರಮಣಗಳಿಗೆ ಬಲಿಯಾಗಿ ಅನಿವಾರ್ಯವಾಗಿ ಸೂರಾಚಾರಿಯು ಆಯ್ಕೆ ಮಾಡಿಕೊಳ್ಳುವ ತನ್ನದಲ್ಲದ, ತನ್ನ ಕೌಶಲ್ಯಕ್ಕೊಪ್ಪದ ವಿವಿಧ ರೀತಿಯ ಅಸಂಬದ್ಧ ಕಾಯಕಗಳ ಮೂಲಕ ಆತನ ಐಡೆಂಟಿಟಿ ಗುರಿತಿಸಲ್ಪಡುವುದೇ ಇಡೀ ಕಥೆಯ ದುರಂತದ ಧ್ವನಿಯಾಗುತ್ತದೆ.

ಅದೇ ರೀತಿಯಾಗಿಯೇ ಇಂದು ಭಾರತದ ಐಡೆಂಟಿಟಿಯು ಅದರ ಸಹಜ ಹಾಗೂ ಮೂಲಭೂತ ವೃತ್ತಿಕೌಶಲ್ಯಗಳಾದ ದೈಹಿಕ ಪ್ರಧಾನವಾದ ವ್ಯವಸಾಯ ಮತ್ತು ಕೈಗಾರಿಕ ಉತ್ಪಾದನೆಯನ್ನು ಆಧರಿಸಿ ನಿರ್ಧರಿಸಬೇಕಾದ ಸಂದರ್ಭದಲ್ಲಿ ಅದಾವುದೂ ಆಗದೆ ಇಂದಿನ ಜಾಗತೀಕರಣದ ನವಕಲೋನಿಯಲ್‌ನ ಸಂದರ್ಭದಲ್ಲಿ ಅತ್ಯಂತ ತಪ್ಪಾಗಿ ಹಾಗೂ ಅನೇಕ ಗೊಂದಲಗಳ ಮೂಲಕ ಸೇವಾ ವಲಯವನ್ನು ಮತ್ತು ಬೌದ್ಧಿಕ ಜ್ಞಾನದ ಉನ್ನತ ತಂತ್ರಜ್ಞಾನವನ್ನು ತನ್ನ ಐಡೆಂಟಿಟಿಯನ್ನಾಗಿ ಆಯ್ಕೆ ಮಾಡಿಕೊಳ್ಳುವುದರ ಮೂಲಕ ಇಂದು ಇಂಡಿಯಾ ಸಂಪೂರ್ಣವಾಗಿ ದಿಕ್ಕುತಪ್ಪಿರುವುದು ಕಳೆದ 20 ವರ್ಷಗಳಲ್ಲಿನ ವಿದ್ಯಾಮಾನಗಳು ನಮ್ಮ ಕಣ್ಣೆದುರಿಗಿದೆ. ಅಂದರೆ ಚಿಂತಕ ’ಚೋಮೆಸ್ಕಿ’ಯ ಭಾಷೆಯಲ್ಲಿ ಹೇಳಬೇಕೆಂದರೆ 99% ವರ್ಸಸ್ 1% ರ ದುಸ್ಥಿಗೆ ಪ್ರಭುತ್ವವು ಇಂಡಿಯಾವನ್ನು ತಂದು ನಿಲ್ಲಿಸಿದೆ. ಈ ಕೆಟ್ಟದಾದ ಹಾಗೂ ಸಂಪೂರ್ಣವಾಗಿ ದಿಕ್ಕು ತಪ್ಪಿದ ಆಯ್ಕೆಯ ಐಡೆಂಟಿಟಿಯ ಫಲವಾಗಿ ಮಾವೋವಾದಿಗಳು ಹಿಂಸಾತ್ಮಕವಾದ ಹಾದಿ ತುಳಿಯುತ್ತಾರೆ. ಇಂದು ದಲಿತರು ತಮ್ಮ ಐಡೆಂಟಿಟಿಯನ್ನು ವಿಭಿನ್ನ ಕೌಶಲ್ಯಗಳನ್ನು ಇಂದಿನ ಆಧುನಿಕತೆಗೆ ತಕ್ಕಂತೆ ಕಲಿತು ಶ್ರೇಣೀಕೃತ ವ್ಯವಸ್ಥೆಯಲ್ಲಿ ಮೇಲ್ಮುಖವಾಗಿ ಚಲಿಸುವ ಮೂಲಕ ಗುರಿತಿಸಿಕೊಳ್ಳುವುದಿಲ್ಲ. ಬದಲಾಗಿ ಸ್ವತಃ ತೀವ್ರವಾದ ಅಂಬೇಡ್ಕರ್‌ವಾದಿಗಳಾಗುವ ಆಯ್ಕೆಯ ಮುಖಾಂತರ ತಮ್ಮ ಐಡೆಂಟಿಟಿಯನ್ನು ಗುರುತಿಸಿಕೊಳ್ಳುತ್ತಾರೆ. ಒಂದು ತಂಡವಾಗಿ ಶೈಕ್ಷಣಿಕವಾಗಿ ಉನ್ನತ ವಲಯಕ್ಕೆ ಮುನ್ನುಗ್ಗುವ ಐಡೆಂಟಿಟಿಯನ್ನು ಧಿಕ್ಕರಿಸಿ ಎಡಬಲ ಜಾತಿಗಳಾಗಿ ತಮ್ಮನ್ನು ತಾವು ಆಯ್ಕೆ ಮಾಡಿಕೊಳ್ಳುವುದರ ಮೂಲಕ ತಮ್ಮ ಐಡೆಂಟಿಟಿಗಳನ್ನು ಗುರುತಿಸಿಕೊಳ್ಳುತ್ತಾರೆ! ಇದಕ್ಕೆ ಕಾರಣವೂ ದಿಕ್ಕುತಪ್ಪಿದ ಸರ್ಕಾರಗಳ ಅರಾಜಕತೆ! ಇಂದು ಭಾರತದಲ್ಲಿ ಮುಸ್ಲಿಂರು ತಮ್ಮ ಐಡೆಂಟಿಟಿಯನ್ನು ಗುರುತಿಸಿಕೊಳ್ಳುವುದು ತಮ್ಮದಲ್ಲದ ಕಾರಣಗಳಿಗಾಗಿ ಇವರು ಮತ್ತೇ ಮತ್ತೇ ತಮ್ಮ Ghettoಗಳಾದ ಯಾರಬ್‌ನಗರ, ಗೌರೀಪಾಳ್ಯ, ಜುಹಾಪುರಗಳಿಗೆ ಮರಳುವ ಅನಿವಾರ್ಯವಾದ ಆಯ್ಕೆಯ ಮೂಲಕ ಹಾಗೂ ಅಲ್ಲಿನ ಕೊಳಕಿನ ಬದುಕಿನ ಮೂಲಕವೇ ಹೊರತಾಗಿ ತಮ್ಮ ಅದ್ಭುತ ವೃತ್ತಿಕೌಶಲ್ಯಗಳಾದ ಚರ್ಮ ಕೈಗಾರಿಕೆ, ರೇಷ್ಮೆ ನೇಯ್ಗೆಗಳ, ಕಲೆಗಾರಿಕೆಗಳ ಮೂಲಕವಲ್ಲ! ಇದಕ್ಕೆ ಕಾರಣವೂ ದಿಕ್ಕುತಪ್ಪಿದ ಸರ್ಕಾರಗಳ ಅರಾಜಕತೆ!

ಇಲ್ಲಿ ಚಿಂತಕ ’ಅಮಾರ್ತ್ಯ ಸೇನ್’ ಹೇಳಿದ ಇಟಲಿಯ ಹಳೆಯ ಪ್ರಸಂಗವೊಂದು ನೆನಪಾಗುತ್ತದೆ “20ರ ದಶಕದಲ್ಲಿ ’ಮುಸಲೋನಿ’ಯ ಫ್ಯಾಸಿಸ್ಟ್ ಪಕ್ಷಕ್ಕೆ ಇಟಲಿಯಾದ್ಯಾಂತ ಅಪಾರವಾದ ಬೆಂಬಲವು ವ್ಯಕ್ತವಾಗುತ್ತಿತ್ತು. ಈ ಸಂದರ್ಭದಲ್ಲಿ ಫ್ಯಾಸಿಸ್ಟ್ ಪಕ್ಷದ ರಾಜಕೀಯ ಕಾರ್ಯಕರ್ತನೊಬ್ಬ ಹಳ್ಳಿಗಾಡಿನ ಸೋಷಿಯಲಿಸ್ಟ್ ಒಬ್ಬನೊಂದಿಗೆ ಅವನನ್ನು ಫ್ಯಾಸಿಸ್ಟ್ ಪಕ್ಷಕ್ಕೆ ಸೇರಿಕೊಳ್ಳುವಂತೆ ಒತ್ತಾಯಿಸುತ್ತಿದ್ದ. ಆದರೆ ಆ ಹಳ್ಳಿಗಾಡಿನ ಸೋಷಿಯಲಿಸ್ಟ್ ಇದನ್ನು ವಿರೋಧಿಸಿ “ಅದು ಹೇಗೆ ನಾನು ನಿನ್ನ ಫ್ಯಾಸಿಸ್ಟ್ ಪಕ್ಕಕ್ಕೆ ಸೇರಿಕೊಳ್ಳಲಿ? ನನ್ನ ತಂದೆ ಸೋಷಿಯಲಿಸ್ಟ್ ಆಗಿದ್ದ, ನನ್ನ ತಾತನು ಸೋಷಿಯಲಿಸ್ಟ್ ಆಗಿದ್ದ, ನಾನು ಸಹ ಸೋಷಿಯಲಿಸ್ಟ್ ಆಗಿಯೇ ಉಳಿಯುತ್ತೇನೆ ಹೊರತಾಗಿ ಫ್ಯಾಸಿಸ್ಟ್ ಆಗಿ ಅಲ್ಲ” ಎಂದು ಹೇಳಿದ. ಆಗ ಫ್ಯಾಸಿಸ್ಟ ಪಕ್ಷದ ರಾಜಕೀಯ ಕಾರ್ಯಕರ್ತ “ಇದು ಯಾವ ರೀತಿಯ ವಾಗ್ವಾದ? ಮಸಲ ನಿನ್ನ ತಂದೆ ಕೊಲೆಗಾರರಾಗಿದ್ದರೆ, ನಿನ್ನ ತಾತ ಕೊಲೆಗಾರರಾಗಿದ್ದರೆ, ನೀನು ಏನು ಮಾಡುತ್ತಿದ್ದೆ?” ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಆ ಹಳ್ಳಿಗಾಡಿನ ಸೋಷಿಯಲಿಸ್ಟ್ ತಣ್ಣಗೆ ಉತ್ತರಿಸಿದ. “ಆಗ ಬಹುಶಃ ನಾನು ನಿನ್ನ ಫ್ಯಾಸಿಸ್ಟ್ ಪಕ್ಷಕ್ಕೆ ಸೇರುತ್ತಿದ್ದೆ””. ( ಅಮಾರ್ತ್ಯ ಸೇನ್‌ರ ’ಐಡೆಂಟಿಟಿ ಮತ್ತು ಹಿಂಸೆ’ ಪುಸ್ತಕದಿಂದ)

ಈ ಮೇಲಿನ ಪ್ರಸಂಗದಲ್ಲಿ ಅತ್ಯಂತ ನಿಚ್ಛಳವಾಗಿ ವ್ಯಕ್ತವಾಗುವುದು ಆ ಹಳ್ಳಿಗಾಡಿನ ಸೋಷಿಯಲಿಸ್ಟ್ ಯಾವುದೇ ಗೊಂದಲವಿಲ್ಲದೆಯೇ ತನ್ನ ಬದ್ಧತೆಯನ್ನು ನೆಚ್ಚಿ ತನ್ನ ಐಡೆಂಟಿಟಿಯನ್ನು ಗುರುತಿಸಿಕೊಳ್ಳತ್ತಾನೆ ಹೊರತಾಗಿ ಯಾವುದೇ ರೀತಿಯ ಆಯ್ಕೆಗಳ ಗೊಂದಲಗಳ ಮೂಲಕ ತನ್ನ ಐಡೆಂಟಿಟಿಯನ್ನು ಗುರುತಿಸಿಕೊಳ್ಳುವುದಿಲ್ಲ. ಆದರೆ ’ಅವನತಿ’ಯ ಸೂರಾಚಾರಿಗೆ ಈ ಅದೃಷ್ಟವಿಲ್ಲ!

ಇತ್ತೀಚೆಗೆ ತಮ್ಮ 84ನೇ ವಯಸ್ಸಿನಲ್ಲಿ ನಿಧನರಾದ ಸೋಷಿಯಲಿಸ್ಟ್ ಹೋರಾಟಗಾರ್ತಿ ಮೃಣಾಲ್ ಗೋರೆಯವರ ಜೀವನದ ಕಥೆಯೂ ಸಹ ಮೇಲಿನ ಹಳ್ಳಿಗಾಡಿನ ಸೋಷಿಯಲಿಸ್ಟ್‌ನ ರೀತಿಯ ಬದ್ಧತೆಯ ಮಾದರಿಯದ್ದು. 40ರ ದಶಕದಲ್ಲಿ ತಮ್ಮ ವೈದ್ಯಕೀಯ ಶಿಕ್ಷಣವನ್ನು ಅರ್ಧಕ್ಕೇ ಮೊಟಕುಗೊಳಿಸಿ ಸಮಾಜವಾದಿ ಚಳುವಳಿಗೆ ಧುಮುಕಿದ ಮೃಣಾಲ್ ಗೋರೆಯವರು 60/70/80 ರ ದಶಕಗಳಲ್ಲಿ ಬಾಂಬೆಯಲ್ಲಿ ಅತ್ಯಂತ ಪ್ರಖ್ಯಾತ ಸೋಷಿಯಲಿಸ್ಟ್ ಹೋರಾಟಗಾರ್ತಿಯಾಗಿದ್ದರು. ಆ ದಶಕದಳಲ್ಲಿ ಮಧ್ಯಮ ಹಾಗೂ ಸ್ಲಂ ವರ್ಗಗಳ ಮೂಲಭೂತ ಹಕ್ಕುಗಳಾದ ನೀರು, ರಸ್ತೆ, ಶೌಚಾಲಯ ಮತ್ತು ಒಳಚರಂಡಿ ಹಾಗೂ ನೈರ್ಮಲ್ಯೀಕರಣಗಳ ಅವಶ್ಯಕತೆಯ ಹಕ್ಕಿಗಾಗಿ ನಿರಂತರ ಹೋರಾಟ ನಡೆಸಿದವರು ಸೋಷಿಯಲಿಸ್ಟ್ ಮೃಣಾಲ್ ಗೋರೆಯವರು. ಆಗ ಇವರು ’ಪಾನೀವಾಲೀ ಬಾಯಿ’ ಎಂದು ಪ್ರಖ್ಯಾತರಾಗಿದ್ದರು. ಸೋಷಿಯಲಿಸ್ಟ್‌ರಾಗಿಯೇ ಜನತಾ ಪಕ್ಷದಿಂದ ಎರಡು ಬಾರಿ ಮಹಾರಾಷ್ಟ್ರದ ವಿಧಾನಸಭೆಗೆ ಆಯ್ಕೆಯಾಗಿದ್ದರು. 1977ರಲ್ಲಿ ದಕ್ಷಿಣ ಬಾಂಬೆಯಿಂದ ಸಂಸದೆಯಾಗಿ ಲೋಕಸಭೆಗೆ ಚುನಾಯಿತರಾಗಿದ್ದರು. ಕೇಂದ್ರದಲ್ಲಿ ಸಚಿವ ಹುದ್ದೆಯನ್ನು ನಿರಾಕರಿಸಿದರು. ಆಗಲೇ ಲೋಕಸಭೆಯ ಚುನಾವಣೆಯಲ್ಲಿ ಇಂದಿರಾ ಗಾಂಧಿಯವರು ಪರಾಭವಗೊಂಡಿದ್ದರು. ಆಗ ಅತ್ಯಂತ ಜನಪ್ರಿಯ ಸ್ಲೋಗನ್ ಹೀಗಿತ್ತು: “ಪಾನೀವಾಲೀ ಬಾಯೀ ದಿಲ್ಲೀಮೆ, ದಿಲ್ಲೀವಾಲೀ ಬಾಯಿ ಪಾನೀಮೆ”! ಮಧು ಲಿಮಯೆ, ಮಧು ದಂಡವತೆಯಂತಹ ಖ್ಯಾತ ಸಮಾಜವಾದಿಗಳಿಗೆ ನಿಕಟವರ್ತಿಗಳಾಗಿದ್ದರು. ತಮ್ಮ ಇಡೀ ರಾಜಕೀಯ ಹಾಗು ಸಾಮಾಜಿಕ ಹೋರಾಟಗಳ ಬದುಕಿನ ಉದ್ದಕ್ಕೂ ಮೃಣಾಲ್ ಗೋರೆ ತಮ್ಮ ಐಡೆಂಟಿಟಿಯನ್ನು ಗುರುತಿಸಿಕೊಂಡಿದ್ದು ಸೋಷಿಯಲಿಸ್ಟ್ ಹೋರಾಟಗಾರ್ತಿಯಾಗಿಯೇ ಹೊರತಾಗಿ ಇನ್ನಾವುದೇ ಅನಿವಾರ್ಯ ಆಯ್ಕೆಗಳ ಮೂಲಕವಲ್ಲ. ಆದರೆ ಮೃಣಾಲ್ ಗೋರೆಯವರ ಸೋಷಿಯಲಿಸ್ಟ್ ಗೆಳೆಯರಾಗಿದ್ದ ಜಾರ್ಜ್ ಫರ್ನಾಂಡೀಸ್‌ರವರು ಅವಕಾಶವಾದಿಗಳಾಗಿ, ಭ್ರಷ್ಟರಾಗಿ 90ರ ದಶಕದ ಅಂತ್ಯದ ವೇಳೆಗೆ ಮತೀಯವಾದಿಗಳಾದ ಸಂಘಪರಿವಾರದೊಂದಿಗೆ ಕೈಜೋಡಿಸಿಕೊಳ್ಳುವುದರ ಆತ್ಮಹತ್ಯಾತ್ಮಕ ಆಯ್ಕೆಯ ಮೂಲಕ ತಮ್ಮ ಐಡೆಂಟಿಯನ್ನು ಗುರುತಿಸಿಕೊಳ್ಳುವ ಅಧಃಪತನಕ್ಕೆ ಇಳಿದರು. ಇಂದಿಗೂ ಜಾರ್ಜ್ ಫರ್ನಾಂಡೀಸರ ಐಡೆಂಟಿಟಿ ಇರುವುದು ಇವರು ಪಲಾಯನವಾದಿಗಳಾಗಿ ಕೋಮುವಾದಿಗಳೊಂದಿಗೆ ಕೈ ಜೋಡಿಸಿಕೊಳ್ಳುವುದರ ಆಯ್ಕೆಯ ಮೂಲಕವೇ ಹೊರತಾಗಿ ಮಾಜಿ ಫೈರ್ ಬ್ರಾಂಡ್ ಸೋಷಿಯಲಿಸ್ಟ್‌ರಾಗಿಯಂತೂ ಖಂಡಿತ ಅಲ್ಲ.

ಇಂದಿನ ಕರ್ನಾಟಕ ರಾಜಕಾರಣದಲ್ಲಿ ಭ್ರಷ್ಟ ರಾಜಕಾರಣಿಯಾದ, ನಮ್ಮ ನಾಡಿನ ಖನಿಜ ಸಂಪತ್ತನ್ನು ಲೂಟಿ ಮಾಡಿದ ಶ್ರೀರಾಮುಲುರಂತಹ ದಿಕ್ಕುತಪ್ಪಿದ ರಾಜಕಾರಣಿಯೊಂದಿಗೆ ಕೈ ಜೋಡಿಸುವುದರ ಮೂಲಕ ನಮ್ಮ ಕೆಲವು ಹಿರಿಯ ಜಾತ್ಯಾತೀತ, ಪ್ರಗತಿಪರ ಗೆಳೆಯರು ತಮ್ಮ ಹಿಂದಿನ ಪ್ರಗತಿಪರ ಹೋರಾಟಗಾರರೆಂಬ ಐಡೆಂಟಿಟಿಯನ್ನು ಕಳೆದುಕೊಂಡಿದ್ದಾರೆ. ಇವರು ಸಹ ಜಾರ್ಜ್ ತರಹದ ಅನಿವಾರ್ಯದ ಹೆಸರಿನಲ್ಲಿ ಅತ್ಯಂತ ಕೆಟ್ಟ ಆಯ್ಕೆಯ ಮೂಲಕ ಸೂರಾಚಾರಿಯ ಹಾದಿಯನ್ನು ತುಳಿದಿದ್ದಾರೆ. ನಾವು ಯಾವ ಗರ್ಭದಿಂದ ನಮ್ಮ ಹೋರಾಟದ ಬದುಕನ್ನು ಕಟ್ಟಿಕೊಳ್ಳುತ್ತೇವೆಯೋ, ಯಾವ ಗರ್ಭವು ನಮ್ಮ ಈ ಚಿಂತನೆಗಳಿಗೆ ಹಾಗೂ ಹೋರಾಟಗಳಿಗೆ ತಾತ್ವಿಕವಾದ ಹಾಗೂ ಜನಪರವಾದ ನೆಲೆಗಳನ್ನು ಕೊಟ್ಟಿದೆಯೋ ಅದೇ ಗರ್ಭದಲ್ಲಿಯೇ ನಮ್ಮ ಕಳೆದುಹೋದ ಬದ್ಧತೆಗಳನ್ನು ಹುಡುಕಾಡಬೇಕು ಮತ್ತು ಆ ಗರ್ಭದಲ್ಲಿಯೇ ಮರು ಕಟ್ಟುವಿಕೆಯ ಪ್ರಕ್ರಿಯೆಯನ್ನು ನಡೆಸಬೇಕು ಎನ್ನುವ ಮಾನವೀಯ ಪಾಠವನ್ನು ನಮ್ಮ ಹಿರಿಯ ಪ್ರಗತಿಪರ ಗೆಳಯರು ಮರೆತಿರುವುದು ತುಂಬಾ ನೋವಿನ ಸಂಗತಿ.

ಮೊನ್ನೆ ಫ್ಯೂಡಲ್‌ನ ದೌರ್ಜನ್ಯಕ್ಕೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಂಡ ತಮಟೆ ಕಲಾವಿದ ದಸರೀಘಟ್ಟದ ರವಿಕುಮಾರ್ ಅವರ ಅತ್ಮಹತ್ಯೆಗೆ ಕಾರಣವಾದ ಮೇಲ್ಜಾತಿಗಳ ಊಳಿಗಮಾನ್ಯ ಸಂಸ್ಕೃತಿಯನ್ನು ವಿರೋಧಿಸಿ ಅರೆ, ತಮಟೆ, ಕಹಳೆ, ದೋಣು ಕಲಾವಿದರು ತಿಪಟೂರಿನಲ್ಲಿ ಪ್ರತಿಭಟನೆ ನಡೆಸಿದರು. ತಿಪಟೂರಿನ ಪ್ರಗತಿಪರ ಗೆಳೆಯರು ಈ ಪ್ರತಿಭಟನಾ ಕಾರ್ಯವನ್ನು ಸಂಘಟಿಸಿದ್ದರು. ನಾವೆಲ್ಲ ಈ ಐತಿಹಾಸಿಕ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೆವು. ಇಡೀ ಪ್ರತಿಭಟನೆಯುದ್ದಕ್ಕೂ ಕಹಳೆ, ತಮ್ಮಟೆಯನ್ನು ಬಾರಿಸಿದ ಈ ಕಲಾವಿದರು ದಸರೀಘಟ್ಟದ ರವಿಕುಮಾರ್‌ನ ಸಾವಿಗೆ ಕಾರಣರದವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು. ರವಿಕುಮಾರ್ ಕುಟುಂಬಕ್ಕೆ ಪರಿಹಾರ ಕೊಡಬೇಕೆಂದು ಆಗ್ರಹಿಸಿದರು. ತಮಗೂ ಅತ್ಯಂತ ಸಮಂಜಸವಾದ, ನ್ಯಾಯಯುತವಾದ ವೇತನಗಳನ್ನು ನಿಗದಪಡಿಸಬೇಕು ಹಾಗೂ ಮಾಸಾಶನವನ್ನು ನೀಡಬೇಕೆಂದು ಮನವರಿಕೆ ಮಾಡಿಕೊಂಡರು. ಮುಖ್ಯವಾಗಿ ತಮ್ಮನ್ನು ಅರೆ, ತಮಟೆ, ಮೌರಿ, ದೋಣು, ಕಹಳೆ ವಾದ್ಯಗಳ ಕಲಾವಿದರೆಂದು ಗುರುತಿಸಿ ಅಸ್ಪೃಶ್ಯತೆ ಹಾಗೂ ಅವಮಾನದಿಂದ ಪಾರುಮಾಡಬೇಕೆಂದು ಆಗ್ರಹಿಸಿದರು. ಇದು ನಮ್ಮ ನೆಲದ ಕಲಾವಿದರು ತಮ್ಮ ಐಡೆಂಟಿಟಿಯನ್ನು ತಮ್ಮ ವೃತ್ತಿಗಳಾದ ಮೇಲಿನ ಕಲೆಗಳೊಂದಿಗೆ ಗುರುತಿಸಲು ಬಯಸಿದರು. ಇವರಾರೂ ಪರಿಸ್ಥಿಯ ಅನಿವಾರ್ಯತೆಗೆ ಬಲಿಯಾಗಿ ಪರ್ಯಾಯ ಆಯ್ಕೆಗಳ ಹಳ್ಳಕ್ಕೆ ಜಾರಲಿಲ್ಲ. ಯಾವುದೇ ಸಂದರ್ಭದಲ್ಲಿಯೂ ತಾವು ಅರೆ, ತಮಟೆ ಕಲಾವಿದರಾಗಿಯೇ ಉಳಿಯಬಯಸಿದರು. ಇವರ ಐಡೆಂಟಿಟಿಯ ಈ ಬದ್ಧತೆ ಬುದ್ಧ, ಗಾಂಧೀ, ಅಂಬೇಡ್ಕರ್ ಮಾದರಿಯಾಗಿತ್ತು. ಈ ಕಲಾವಿದರ ಐಡೆಂಟಿಟಿಯು ನಮಗೆಲ್ಲ ಮಾದರಿಯಾಬೇಕಾಗಿದೆ.

ಇಲ್ಲಿ ಬಿಹಾರದ ಮುಖ್ಯಮಂತ್ರಿಗಳಾದ ನಿತೀಶ್‌ಕುಮಾರ ಅವರು ಇಂಡಿಯಾದ ಮುಂದಿನ ಪ್ರಧಾನಿಯು ಸೆಕ್ಯುಲರ್ ಆಗಿರಬೇಕೆಂಬ ಜನಪ್ರಿಯ ಹೇಳಿಕೆಯ ಹಿಂದಿನ ಬದ್ಧತೆಯು ನಮಗೆ ಮುಖ್ಯವಾಗಬೇಕು. ಈ ಹೇಳಿಕೆಯಲ್ಲಿ ಅವಕಾಶವಾದಿತನ ಇರಬಹುದು. ಆದರೆ ಇಂಡಿಯಾಕ್ಕೆ ಸೆಕ್ಯುಲರ್ ಪ್ರಧಾನಿಯೇ ಬೇಕು ಎನ್ನುವ ಐಡೆಂಟಿಟಿ ಎಲ್ಲ ಕಾಲಕ್ಕೂ ಸತ್ಯ. ಇಲ್ಲದಿದ್ದರೆ ಈ ಮತೀಯವಾದಿಗಳ ನೆಲದಲ್ಲಿ ಮುಸ್ಲಿಂರಿಗೆ ಹಾಗೂ ದಲಿತರಿಗೆ ಅವರ ಹುಟ್ಟಿನ ಐಡೆಂಟಿಟಿಯಿಂದಾಗಿ ವಾಸಿಸಲಿಕ್ಕೆ ಮನೆ ಸಿಗುವುದಿಲ್ಲ, ಬದುಕಲಿಕ್ಕೆ ರೋಟಿ, ಕಪಡ ಔರ್ ಮಕಾನ್ ಗಗನಕುಸುಮಗಳಾಗಿಬಿಡುತ್ತವೆ. ಮುಸ್ಲಿಂ ಎನ್ನುವ ಐಡೆಂಟಿಟಿಯಿಂದಾಗಿ ಇಂದಿನ ಭಾರತದ ಜನಸಂಖ್ಯೆಯಲ್ಲಿ ಶೇಕಡ 11 ರಷ್ಟಿರುವ ಮುಸ್ಲಿಂರಲ್ಲಿ ಬೇರೆ ಸಮುದಾಯಗಳಿಗಿಂತ ಹೆಚ್ಚಿನ ಶೇಕಡಾವಾರು ಸಂಖ್ಯೆಯಲ್ಲಿ ಮುಸ್ಲಿಂ ಯುವಕರು ಜೈಲಿನಲ್ಲಿ ಕೊಳೆಯುತ್ತಿದ್ದಾರೆ (ಕಾರಾಗೃಹವಾಸಿಗಳಲ್ಲಿ ಮುಸ್ಲಿಮರ ಸಂಖ್ಯೆ 36%). ಈ ಮಾನಸಿಕ Ghettoಗಳ ಬಿಡುಗಡೆ ಮಾಡಲಾಗದಿದ್ದರೂ ಅದಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸುವ ಸಲುವಾಗಿಯಾದರೂ ಇಂಡಿಯಾಕ್ಕೆ ಸೆಕ್ಯುಲರ್ ಪ್ರಧಾನಮಂತ್ರಿಯ ಐಡೆಂಟಿಟಿ ಅತ್ಯವಶ್ಯಕ. ಇಲ್ಲದೇ ಹೋದರೆ ಅಭಿವೃದ್ಧಿಯ ಹರಿಕಾರ ಎನ್ನುವ ಬೋಗಸ್ ಐಡೆಂಟಿಟಿಯನ್ನು ಹೊತ್ತುಕೊಂಡಿರುವ ಫ್ಯಾಸಿಸ್ಟ್ ಗುಣದ ಮತೀಯವಾದಿ ನರೇಂದ್ರ ಮೋದಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಬಿಡುತ್ತಾನೆ. ಆಗ ಈತನ ನಿಜದ ಐಡೆಂಟಿಟಿಗಳಾದ ಫ್ಯಾಸಿಸಂ ಮತ್ತು ಮತೀಯವಾದದಿಂದ ಉಂಟಾಗುವ ಕ್ರೌರ್ಯದ ಸಮಾಜದಿಂದ ಈ ಭಾರತವು ಹೊರ ಬರಲು ಶತಮಾನಗಳೇ ಬೇಕಾಗುತ್ತವೆ.

ಮನುಷ್ಯ ಬದುಕಿನಲ್ಲಿ, ವ್ಯವಸ್ಥೆಯಲ್ಲಿ ನಿರಂತರವಾಗಿ ತಲೆದೋರುವ ಸರಳವಾದ ವೈರುಧ್ಯಗಳು ಮತ್ತು ವಿರೋಧಾಬಾಸಗಳನ್ನು ಮಣಿಸುವ ಹುನ್ನಾರದಲ್ಲಿ ನಾವೆಲ್ಲ ಮತ್ತೊಂದು ಬಗೆಯ ಆಕ್ಟೋಪಸ್‌ನ ಹಿಡಿತಕ್ಕೆ ಸಿಕ್ಕಿಕೊಂಡುಬಿಡುತ್ತೇವೆ, ದೈತ್ಯ ಡೈನೋಸಾರಗಳು ನಮ್ಮನ್ನೆಲ್ಲ ಅನಿವಾರ್ಯ ಆಯ್ಕೆಗಳ ಹೆಸರಿನಲ್ಲಿ ಇಡೀ ಸಮಾಜವನ್ನೇ ಮತ್ತೊಂದು ಕಸದಗುಂಡಿಯನ್ನಾಗಿ ಮಾರ್ಪಡಿಸಿಬಿಡುವುದರ ಅಪಾಯದ ಕುರಿತಾಗಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ “ಅವನತಿ” ಕಥೆ ಅತ್ಯಂತ ಧ್ವನಿಪೂರ್ಣವಾಗಿ, ವಿಶಿಷ್ಟವಾಗಿ ಅನಾವರಣಗೊಳಿಸುತ್ತದೆ. ಇಲ್ಲಿ ಸಾಂಸ್ಕೃತಿಕ ದೇಸಿವಾದದ ಅನಿವಾರ್ಯತೆಯ ಅಗತ್ಯತೆಯನ್ನು ಕೂಡ ಎತ್ತಿಹಿಡಿಯಲಾಗುತ್ತದೆ. ತೇಜಸ್ವಿಯವರ “ಅವನತಿ” ಕಥೆಯೇ ನಮ್ಮ ಇಂದಿನ ಜಾಗತೀಕರಣಗೊಂಡ ನವಕಲೋನಿಯಲ್ ಭಾರತದ ಕಥೆ.

5 thoughts on “ಇಸ್ಲಾಂಪುರ, ಇತ್ತಾವರವೆಂಬ ಭಾರತವೂ ಹಾಗೂ ಇಲ್ಲಿನ ಸೂರಾಚಾರಿಗಳು

  1. ರಾಕೇಶ್ ಶೆಟ್ಟಿ

    “ಇಂದಿನ ಕರ್ನಾಟಕ ರಾಜಕಾರಣದಲ್ಲಿ ಭ್ರಷ್ಟ ರಾಜಕಾರಣಿಯಾದ, ನಮ್ಮ ನಾಡಿನ ಖನಿಜ ಸಂಪತ್ತನ್ನು ಲೂಟಿ ಮಾಡಿದ ಶ್ರೀರಾಮುಲುರಂತಹ ದಿಕ್ಕುತಪ್ಪಿದ ರಾಜಕಾರಣಿಯೊಂದಿಗೆ ಕೈ ಜೋಡಿಸುವುದರ ಮೂಲಕ ನಮ್ಮ ಕೆಲವು ಹಿರಿಯ ಜಾತ್ಯಾತೀತ, ಪ್ರಗತಿಪರ ಗೆಳೆಯರು ತಮ್ಮ ಹಿಂದಿನ ಪ್ರಗತಿಪರ ಹೋರಾಟಗಾರರೆಂಬ ಐಡೆಂಟಿಟಿಯನ್ನು ಕಳೆದುಕೊಂಡಿದ್ದಾರೆ. ”

    ಬಹಳ ಚೆನ್ನಾಗಿ ಹೇಳಿದ್ದಿರಿ. ಯಾರ ದುಡಿಮೆಯಿಂದ ಕೋಟಿ ಮಾಡಿಕೊಂಡರು ಅವರದೇ ಹೆಸರನ್ನ ಪಕ್ಷಕ್ಕಿಟ್ಟಿರುವುದೇ ಸೌಭಾಗ್ಯ

    ಆದರೆ,

    “ಅಭಿವೃದ್ಧಿಯ ಹರಿಕಾರ ಎನ್ನುವ ಬೋಗಸ್ ಐಡೆಂಟಿಟಿಯನ್ನು ಹೊತ್ತುಕೊಂಡಿರುವ ಫ್ಯಾಸಿಸ್ಟ್ ಗುಣದ ಮತೀಯವಾದಿ ನರೇಂದ್ರ ಮೋದಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಬಿಡುತ್ತಾನೆ. ಆಗ ಈತನ ನಿಜದ ಐಡೆಂಟಿಟಿಗಳಾದ ಫ್ಯಾಸಿಸಂ ಮತ್ತು ಮತೀಯವಾದದಿಂದ ಉಂಟಾಗುವ ಕ್ರೌರ್ಯದ ಸಮಾಜದಿಂದ ಈ ಭಾರತವು ಹೊರ ಬರಲು ಶತಮಾನಗಳೇ ಬೇಕಾಗುತ್ತವೆ.”

    ಈ ನ್ಯಾಯ ಕೇವಲ ಮೋದಿಗೆ ಮಾತ್ರ ಯಾಕೆ ಪದೇ ಪದೇ ಆಪ್ಲೈ ಆಗುತ್ತದೆ.ಸಿಖ್ ದಂಗೆಯಲ್ಲಿ, ಉ.ಪದ ಹಾಂಷಿ ಪುರದಲ್ಲಿ ರಾಜೀವ್ ,ಚಿದಂಬರಂ ಮತ್ತು ಕಾಂಗ್ರೆಸ್ಸ್ ಮಾಡಿದ್ದೇನು? ಅವರ ಬಗ್ಗೆ ಯಾಕೆ ಚಕಾರವಿಲ್ಲ.ಅಷ್ಟಕ್ಕೂ ಸೆಕ್ಯುಲರ್ಗಳು ಅಂದರೆ ಯಾರು? ಸಂಗ್ಮಾ ಕೋಮುವಾದಿಗಳ ಅಭ್ಯರ್ಥಿ ಅಂದ ಪವಾರ್ ಬಾಬರಿ ಮಸಿದಿ ಗಲಭೆ ಸಮಯ ಮುಂಬೈಯಲ್ಲಿ ಏನು ಮಾಡುತಿದ್ದರು?

    ‘ಸೆಕ್ಯುಲರ್,ಕೋಮುವಾದಿ” ಅನ್ನುವುದೇ ಹಳಸಲು ಪದ. ಯಾರನ್ನು ಅತಿಯಾಗಿ ತುಚ್ಚಿಕರಿಸದೆ,ತುಷ್ಟಿಕರಿಸದೆ ತಮ್ಮ ಪಾಡಿಗೆ ತಾವು ನಿಯತ್ತಾಗಿ ಕೆಲಸ ಮಾಡಿಕೊಂಡು ಹೋಗೋ ನಾಯಕರು ಸಿಕ್ರೆ ಸಾಕು.ಅವರ ಜಾತಿ ಜಾತಿ,ಬಣ್ಣ (ಕೇಸರಿ/ಹಸಿರು) ಕಟ್ಕೊಂಡು ನಮ್ಗೆನಾಗ್ಬೇಕು ಹೇಳಿ ?

    Reply
  2. B.Sripad Bhat

    ನಾವು ನರೇಂದ್ರ ಮೋದಿಯ ಬಗೆಗೆ ಮಾತನಾಡುವಾಗ ಕೇವಲ ಆತನ ಕೋಮುವಾದದ ಮುಖದ ಬಗೆಗೆ ಅಷ್ಟೇ ಅಲ್ಲ ಆತನ ಫ್ಯಾಸಿಸ್ಟ್ ವ್ಯಕ್ತಿತ್ವದ ಬಗೆಗೆ ಬಹಳ ಎಚ್ಚರಿಕೆಯಿಂದ ಇರಬೇಕು.ಇಲ್ಲಿ ಮುಸ್ಲಿಂರ ದಾರುಣ ಹತ್ಯೆ ಮಾತ್ರವಲ್ಲ,ಇಡೀ ಗುಜರಾತ್ ಇಂದು ಈ ಫ್ಯಾಸಿಸ್ಟ್ ಮೋದಿಯ ಅಡಿಯಾಳಾಗಿದೆ.ಅಲ್ಲಿ ಬಹಿರಂಗವಾಗಿ ಪಿಸುಗುಡುವುದಕ್ಕೂ ಆಗದಷ್ಟು ಉಸಿರುಗಟ್ಟುವ ವಾತಾವರಣವಿದೆ.ಇದು ಸೂಕ್ಷ್ಮ ಮನಸ್ಸಿನವರಿಗೆ ಗೋಚರವಾಗುತ್ತದೆ.ಇಲ್ಲವೇ ನೀವು ಎಲ್ಲವೂ ಸರಿ ಇದೆ ಅಂದುಕೊಂಡರೆ ಯಾರೇನು ಮಾಡಲಿಕ್ಕಿಲ್ಲ !! ಈ ಫ್ಯಾಸಿಸಂ ವರ್ತನೆ ದೇಶವನ್ನು ಜೀತದಾಳನ್ನಾಗಿ ಮಾರ್ಪಡಿಸುತ್ತದೆ. ಖ್ಯಾತ ಚಿಂತಕ “ಗ್ರಾಮ್ಷಿ” ಹೇಳಿದ ಹಾಗೆ “ಯಾವುದು ನಿಜವಾದ ಫ್ಯಾಸಿಸ್ಂ,ಯಾವುದು ನಿಜವಾದ ಕ್ರೌರ್ಯ ಎನ್ನುವ ಬಗೆಗೆ ಆಳವಾದ ಗ್ರಹಿಕೆ ಇಲ್ಲದಿದ್ದರೆ ನಮ್ಮ ಕಾಲ ಬುಡದ ನೆಲ ಕುಸಿಯುತ್ತಿರುವ ಅನುಭವವೂ ನಮಗೆ ಗೊತ್ತಾಗದಷ್ಟರ ಮಟ್ಟಿಗೆ ನಾವೆಲ್ಲ ಮೈಮರೆತಿರುತ್ತೇವೆ”.ಇಲ್ಲಿ ಸೆಕ್ಯುಲರ್ ಅಂದರೆ ಕಾಂಗ್ರೆಸ್,ಬಿಜೆಪಿ ಆ ತರ,ಈ ತರ ಎಂತಾದ್ದೂ ಇಲ್ಲ.ಒಟ್ಟಾರೆ ನಮ್ಮ ವರ್ತನೆಯೇ ಸೆಕ್ಯುಲರ್ ಅನ್ನು ನಿರ್ಧರಿಸುತ್ತದೆ. ಇಲ್ಲಿ ಇಂಡಿಯಾಕ್ಕೆ ಬೇಕಾಗಿರುವುದು ಇಂದು ಸೆಕ್ಯುಲರ್ ವರ್ತನೆಯ ನಾಯಕ ಅಷ್ಟೇ.ಆತನ ಸೆಕ್ಯುಲರ್ ಧರ್ಮ ರಾಜ್ಯ ಹತ್ತಿ ಉರಿಯುತ್ತಿದ್ದಾಗ ಕೇವಲ ರಾಜಧರ್ಮ ಭೋದಿಸುವುದರ ಮಟ್ಟಿಗೆ ನಿಲ್ಲಬಾರದು. ಇಲ್ಲಿ ಈ ಸೆಕ್ಯುಲರ್ ಪದಕ್ಕೆ ಅಷ್ಟೊಂದು ಸಿನಿಕತನದ ಅವಶ್ಯಕತೆ ಇಲ್ಲ.ಸಿನಿಕತನಕ್ಕೆ ಪ್ರಜಾಪ್ರಭುತ್ವದಲ್ಲಿ ಬೆಲೆ ಕೂಡ ಸಿಗಲಾರದು.

    Reply
    1. ರಾಕೇಶ್ ಶೆಟ್ಟಿ

      “ಸಿನಿಕತನಕ್ಕೆ ಪ್ರಜಾಪ್ರಭುತ್ವದಲ್ಲಿ ಬೆಲೆ ಕೂಡ ಸಿಗಲಾರದು”
      ಒಪ್ಪುವೆ.

      ಆದರೆ, ಆ “ಸೆಕ್ಯುಲರ್” ಪದ ಈಗ ೨ಜಿಯ ಬರ್ಕಾದತ್,ಗುಜರಾತ್ ಗಲಭೆಯ ಸಮಯ ಕೇಂದ್ರ ಮಂತ್ರಿಯಾಗಿ ತೆಪ್ಪಗಿದ್ದ ನಿತೀಶ್, ವೋಟ್ ಬ್ಯಾಂಕಿಗಾಗಿ ಅಸ್ಸಾಂ ಅನ್ನು ನರಕ ಮಾಡಿರುವ ಕಾಂಗ್ರೆಸ್ಸ್,ಸಿಮಿಯಂತಹ ಸಂಘಟನೆಯ ಮೇಲಿನ ನಿರ್ಬಂಧವನ್ನ ತೆಗೆಯಿರಿ ಅಂತ ಬಡಬಡಿಸುವ ಲಾಲು,ಮುಲಾಯಂ,ಪಾಸ್ವಾನ್ ಅಂತವರ ಬಾಯಿಗೆ ಸಿಕ್ಕಿ ಅದರ ಅರ್ಥವನ್ನೇ ಕಳೆದುಕೊಂಡು ಹಾಸ್ಯಾಸ್ಪದವಾಗಿದೆ.ಹಾಗಾಗಿ ನಾವು ಯಾವುದೇ ಒಳ್ಳೆ ಉದ್ದೇಶ ಇಟ್ಟುಕೊಂಡು ಆ ಪದ ಬಳಸಿದರು ಅದಕ್ಕೀಗ ಬೆಲೆ ಸಿಗದು.

      ಇನ್ನು ಮೋದಿಯ ಫ್ಯಾಸಿಸಂ ಬಗ್ಗೆ ಹೇಳಿದಿರಿ. ನಿಜ ಈ ಫ್ಯಾಸಿಸಂ ದೇಶವನ್ನ ಜೀತದಾಳನ್ನಗಿ ಮಾಡುತ್ತದೆ.ಅದರ ಜೊತೆಗೆ ಭಟ್ಟಂಗಿತನ ಕೂಡ ಅಷ್ಟೇ ಅಪಾಯಕಾರಿ ಒಂದು ವಂಶದಲ್ಲಿ ಹುಟ್ಟಿದ್ದೇ ಒಬ್ಬನಿಗೆ ಪ್ರಧಾನಿಯಾಗಲು ಅರ್ಹತೆ ನೀಡುತ್ತದೆ ಮತ್ತು ಅವನಿಗೆ ಸಮಾಜವಾದಿ ಹಿನ್ನೆಲಿಯಿಂದ ಬಂದವರು ಜೈ ಜೈ ಅನ್ನುವುದು,ಅಷ್ಟೇ ಯಾಕೆ ಹೆಸರಿನಲ್ಲಿ ‘ಸಮಾಜವಾದಿ’ ಅನ್ನುವ ಹೆಸರನ್ನಿಟ್ಟುಕೊಂಡ ಮುಲಾಯಂ ಅಧಿಕಾರಕ್ಕೆ ತಂದು ಕೂರಿಸಿದ್ದು ಅವನ ಮಗನನ್ನೇ ಅಲ್ಲವೇ? ಅದ್ಯಾವ ಮುಖ ಇಟ್ಟುಕೊಂಡು ಜೆಪಿ,ಸಮಾಜವಾದ,ಲೋಹಿಯಾ ಅಂತೆಲ್ಲ ಮಾತನಾಡುತ್ತಾರೆ ಇವರು?

      “ಇಡೀ ಗುಜರಾತ್ ಇಂದು ಈ ಫ್ಯಾಸಿಸ್ಟ್ ಮೋದಿಯ ಅಡಿಯಾಳಾಗಿದೆ.ಅಲ್ಲಿ ಬಹಿರಂಗವಾಗಿ ಪಿಸುಗುಡುವುದಕ್ಕೂ ಆಗದಷ್ಟು ಉಸಿರುಗಟ್ಟುವ ವಾತಾವರಣವಿದೆ.ಇದು ಸೂಕ್ಷ್ಮ ಮನಸ್ಸಿನವರಿಗೆ ಗೋಚರವಾಗುತ್ತದೆ.ಇಲ್ಲವೇ ನೀವು ಎಲ್ಲವೂ ಸರಿ ಇದೆ ಅಂದುಕೊಂಡರೆ ಯಾರೇನು ಮಾಡಲಿಕ್ಕಿಲ್ಲ !! ”

      ಆದರೆ ಮೋದಿಯ ವಿರುದ್ಧ ಕೆಂಡ ಕಾರುತ್ತಿರುವ ಯಾರಾದರೂ ಈ ಬಗ್ಗೆ ವಸ್ತು ನಿಷ್ಠ ಚರ್ಚೆಗಳನ್ನ ಹುಟ್ಟು ಹಾಕುತಿದ್ದರೆಯೇ? ಎಲ್ಲರೂ ಹೋಗಿ ನಿಲ್ಲುವುದು ಮತ್ತದೇ ಗೋಧ್ರಾ ಬಳಿಯೇ.ಮೋದಿಯ ವಿಷಯದಲ್ಲಿ ಅವನನ್ನು ವಿರೋಧಿಸುವುದಕ್ಕಿಂತ ದ್ವೇಷಿಸುತ್ತಿರುವುದೆಷ್ಟು ಸರಿ? ದ್ವೇಷ ಎದುರಾಳಿಯನ್ನು ಇನ್ನಷ್ಟು ಕ್ರೂರಿಯನ್ನಾಗಿಯಷ್ಟೇ ಮಾಡಬಲ್ಲದು.

      ಕಣ್ಣು ಮುಚ್ಚಿ ನಾನು ಯಾವುದನ್ನು ಒಪ್ಪಲಾರೆ.ಮೋದಿಯ ಕೆಲವೊಂದು ಧೋರಣೆಗಳನ್ನು ನಾನೂ ವಿರೋಧಿಸುತ್ತೇನೆ.

      ಇರಲಿ.ಈ ಬಾರಿ ಚುನಾವಣೆಯಲ್ಲಿ ಗುಜರಾತ್ ಜನತೆಯೇ ಉತ್ತರ ನೀಡಬಹುದು.ಕಾಯೋಣ

      Reply
      1. anand prasad

        ಗೋಧ್ರೋತ್ತರ ಗಲಭೆಗಳನ್ನು ಆಡಳಿತವು ಬಿಗಿ ಕ್ರಮಗಳನ್ನು ಕೈಗೊಳ್ಳುತ್ತಿದ್ದರೆ ನಿಯಂತ್ರಿಸಲು ಸಾಧ್ಯವಿತ್ತು. ಸರಕಾರವು ಗಲಭೆಗಳನ್ನು ನಿಯಂತ್ರಿಸಬೇಕಾಗಿದ್ದ ಪೊಲೀಸರಿಗೆ ಜನ ತಮ್ಮ ಅಕ್ರೋಶವನ್ನು ವ್ಯಕ್ತಪಡಿಸಲು ಅವಕಾಶ ಕೊಡುವಂತೆ ನಿರ್ದೇಶಿಸಿತ್ತು ಎಂದು ಪೋಲೀಸ್ ಅಧಿಕಾರಿಗಳೇ ಹೇಳಿದ್ದಾರೆ. ಗೋಧ್ರಾ ರೈಲು ಹತ್ಯಾಕಾಂಡ ಸಂಭವಿಸುವ ಮೊದಲೇ ಬಹುಶ: ಗುಜರಾತಿನಲ್ಲಿ ಧರ್ಮಗಳ ನಡುವೆ ಸ್ಪೋಟಕ ಸ್ಥಿತಿ ನಿರ್ಮಾಣವಾಗಿತ್ತು. ಇಂಥ ಸ್ಥಿತಿಗೆ ಕಾರಣ ಧಾರ್ಮಿಕ ಮೂಲಭೂತವಾದ. ಇದು ಒಂದು ಧರ್ಮಕ್ಕೆ ಸೀಮಿತವಾಗಿರಲಿಲ್ಲ. ಗಲಭೆಗಳಲ್ಲಿ ಭಾಗವಹಿಸಿದ ಎರಡೂ ಧರ್ಮದ ಜನತೆಯಲ್ಲಿ ಇಂಥ ಮೂಲಭೂತವಾದ ಬೆಳೆದು ಹೆಮ್ಮರವಾಗಿತ್ತು. ಧಾರ್ಮಿಕ ವಿಷಯಗಳನ್ನು ರಾಜಕೀಯ ಲಾಭಕ್ಕಾಗಿ ಬಳಸುವ ಬಿಜೆಪಿ ಹಾಗೂ ಸಂಘ ಪರಿವಾರದ ವಿಧಾನವೇ ಅನೈತಿಕವಾದುದು ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶ ಮಾಡುವ ವಿಧಾನವಾಗಿದೆ. ಒಂದು ದೇಶವನ್ನು ಕಟ್ಟಬೇಕಾದರೆ ಅದು ಹೆಚ್ಚು ಉದಾರವಾದಿಯಾಗಿರಬೇಕು. ಮೂಲಭೂತವಾದವನ್ನು ಅಪ್ಪಿಕೊಂಡ ದೇಶಗಳಲ್ಲಿ ಪ್ರಜಾಪ್ರಭುತ್ವ ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಮೋದಿಯವರನ್ನು ವಿರೋಧಿಸಬೇಕಾಗಿದೆ. ಮೋದಿಯವರನ್ನು ಬೆಳೆಸಿದ್ದು ಹಿಂದುತ್ವದ ಅಮಲು. ಈ ಅಮಲಿನಿಂದ ಹೊರಬರದಿದ್ದರೆ ಮೋದಿ ಪ್ರಧಾನಿಯಾಗುವುದು ಸಾಧ್ಯವಾಗಲಿಕ್ಕಿಲ್ಲ. ಹಿಂದುತ್ವದ ಮೂಲಭೂತವಾದ ಮೋದಿಯವರಲ್ಲಿ ಆಳವಾಗಿ ಬೇರೂರಿದೆ ಎಂಬುದನ್ನು ಅವರ ನಡವಳಿಕೆಗಳನ್ನು ನೋಡಿದರೆ ಗೊತ್ತಾಗುತ್ತದೆ. ಒಂದೊಮ್ಮೆ ಮೋದಿ ಪ್ರಧಾನಿ ಗದ್ದುಗೆ ಏರಿದರೆ ಮುಂದೆ ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಸಂಸತ್ತಿನಲ್ಲಿ ಮೂರನೇ ಎರಡು ಬಹುಮತ ಗಳಿಸಲು ಅವರು ದೇಶಾದ್ಯಂತ ಹಿಂದೂ ಮೂಲಭೂತವಾದವನ್ನು ಬೆಳೆಸಿ ಮತ್ತೆ ಹಿಂಸಾಕಾಂಡಕ್ಕೆಬೆಂಬಲ ನೀಡುವುದಿಲ್ಲ ಎಂಬುದಕ್ಕೆ ಏನು ಖಾತ್ರಿ ಇದೆ? ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಿಂದೂ ರಾಷ್ಟ್ರ ನಿರ್ಮಾಣ ಮಾಡಬೇಕಿದ್ದರೆ ಸಂವಿಧಾನದಲ್ಲಿ ಮೂಲಭೂತ ಬದಲಾವಣೆ ಮಾಡಬೇಕಾಗುತ್ತದೆ. ಇಂಥ ಬದಲಾವಣೆ ಮಾಡಬೇಕಾದರೆ ಸಂಸತ್ತಿನಲ್ಲಿ ಮೂರನೇ ಎರಡು ಬಹುಮತ ಗಳಿಸಬೇಕಾಗುವುದು ಅನಿವಾರ್ಯ. ಮೋದಿ ಆರಂಭದಲ್ಲಿ ಅಭಿವೃದ್ಧಿಯ ಮುಖವಾದ ಧರಿಸಿ ಅಧಿಕಾರಕ್ಕೆ ಬಂದು ನಂತರ ತನ್ನ ನಿಜಸ್ವರೂಪವಾದ ಹಿಂದುತ್ವದ ಅಜೆಂಡಾಕ್ಕೆ ಬದಲಾಗುವ ಎಲ್ಲ ಸಂಭಾವ್ಯತೆ ಮೋದಿಯವರು ಬೆಳೆದು ಬಂದ ಹಾದಿಯನ್ನು, ಅವರನ್ನು ರೂಪಿಸಿದ ಸಿದ್ಧಾಂತಗಳನ್ನು ನೋಡಿದರೆ ಗೊತ್ತಾಗುತ್ತದೆ. ಮೋದಿಯವರನ್ನು ವಿರೋಧಿಸಲು ಇದು ಪ್ರಮುಖ ಕಾರಣವಾಗಿದೆ. ಅಭಿವೃದ್ಧಿಯ ಧಾವಂತದಲ್ಲಿ ನಾವು ಫ್ಯಾಸಿಸ್ಟ್ ಆಡಳಿತಕ್ಕೆ ಒಳಗಾಗದಂತೆ ನಾವೇ ನೋಡಿಕೊಳ್ಳಬೇಕಾಗಿದೆ

        Reply
  3. ಜಿ.ಮಹಂತೇಶ್​

    ಖನಿಜ ಸಂಪತ್ತು ಬಳ್ಳಾರಿಯಲ್ಲಷ್ಟೇ ಲೂಟಿಯಾಗಿಲ್ಲ. ರಾಮನಗರ ಜಿಲ್ಲೆಯ ಕನಕಪುರ, ಸಾತನೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಭಾರೀ ಪ್ರಮಾಣದ ಖನಿಜ ಲೂಟಿಯಾಗಿದೆ. ಈ ಜಿಲ್ಲೆಗಳಲ್ಲಿ ಲೂಟಿಯಾಗುತ್ತಿರುವುದು 1980ರಿಂದ ಎಂಬುದು ಗಮನಾರ್ಹ. ಬಳ್ಳಾರಿ ಗಣಿಗಾರಿಕೆ ಕುರಿತು ಮಾತನಾಡುತ್ತಿರುವ ಪ್ರಗತಿಪರರು….ಬುದ್ಧಿಜೀವಿಗಳು ಚಕಾರ ಎತ್ತಿಲ್ಲ. ಚಾಮರಾಜನಗರ ಜಿಲ್ಲೆಯ ಜ್ಯೋತಿಗೌಡನಪುರ ವ್ಯಾಪ್ತಿಯ ಗೋಮಾಳ ಮತ್ತು ಅರಣ್ಯ ಜಮೀನಿನ ಎರಡೇ ಸರ್ವೆ ನಂಬರ್​ಗಳಲ್ಲಿ ಬೊಕ್ಕಸಕ್ಕೆ ವಂಚನೆಯಾಗಿರುವುದು 1683 ಕೋಟಿ. ಕನಕಪುರದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಿರುವ ಡಿ.ಕೆ.ಶಿವಕುಮಾರ್​ ಮತ್ತು ಅವರ ಕುಟುಂಬದ ವಿರುದ್ಧ ಫಾರೆಸ್ಟ್​ ಅಫೆನ್ಸ್​ ಕೇಸು ಇದ್ದ್ರೂ ಯಾಕೆ ಬಂಧಿಸಿಲ್ಲ. ಇದ್ರ ಬಗ್ಗೆನೂ ಪ್ರಸ್ತಾಪ ಮಾಡಿ……..

    Reply

Leave a Reply

Your email address will not be published. Required fields are marked *