ಅಂಗಡಿಗಳು, ಮ್ಯಾನೇಜರ್‌ಗಳು, ಪಾಕೆಟ್ ಕಾರ್ಟೂನ್‌ಗಳು…

– ರಮೇಶ ಕುಣಿಗಲ್

ಕಾರ್ಟೂನಿಸ್ಟ್ ಪಿ. ಮಹಮ್ಮದ್ ಫೇಸ್‌ಬುಕ್ ನಲ್ಲಿ ‘ಪ್ರಜಾವಾಣಿ’ ಪತ್ರಿಕೆಯಿಂದ ಹೊರನೆಡೆಯಲು ಕಾರಣವಾದ ಸಂಗತಿಗಳನ್ನು ಪಟ್ಟಿ ಮಾಡಿದ್ದಾರೆ. ಅವರ ಚೂಪು ಮೀಸೆಯ ರಾಜಕಾರಣಿಯನ್ನು ಟೀಕೆ ಮಾಡುವ ಚಿತ್ರಗಳಿಗೆ ಕಚೇರಿಯಲ್ಲಿ ಬಂದ ಪ್ರತಿಕ್ರಿಯೆಗಳು ಮಹಮ್ಮದ್ ಅವರು ಹೊರ ನಡೆಯಲು ಮಾನಸಿಕವಾಗಿ ಸಿದ್ಧರಾಗಲು ಮೊದಲ ಕಾರಣ. ಪತ್ರಿಕೆ ಉಸ್ತುವಾರಿ ಹೊತ್ತ ‘ದಂಡಾಧಿಪತಿ’ – ಇವರ ಕಾರ್ಟೂನ್ ಗಳನ್ನು ‘ಡೆರಾಗೆಟರಿ’, ‘ಇನ್ಸಲ್ಟಿಂಗ್’ ಎಂದು ಟೀಕಿಸಿದ್ದಲ್ಲದೆ, ಬೇರೆ ಯಾವುದರ ಬಗ್ಗೆ (“ಚಿನ್ನಿದಾಂಡು, ಕುಂಟಾಬಿಲ್ಲೆ ಇತ್ಯಾದಿ ಮಹತ್ವದ ವಿಷಯಗಳ ಬಗ್ಗೆ”) ಕಾರ್ಟೂನ್ ಬರೆದು ಸಮಯ ಕಳೆಯಬಹುದು ಎಂದೂ ಸಲಹೆ ಕೊಟ್ಟಿದ್ದಾರೆ.

ಚೂಪು ಮೀಸೆಯ ಆಸಾಮಿ ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದರು ಎಂದು ಎಲ್ಲರಿಗೂ ಗೊತ್ತು. ಅವರ ಬಗ್ಗೆ ಟೀಕಿಸಿ ಬರೆದ ಚಿತ್ರಗಳು ಪತ್ರಿಕೆ ಉಸ್ತುವಾರಿ ಹೊತ್ತವರಿಗೆ ಏಕೆ ಕಸಿವಿಸಿ ಉಂಟುಮಾಡಬೇಕು? ಕಾರ್ಟೂನ್ ಕೇವಲ ಕಾರ್ಟೂನ್. ಅದು ಲೇಖನ ಅಲ್ಲ, ಸಂಪಾದಕೀಯ ಅಲ್ಲ, ವರದಿನೂ ಅಲ್ಲ. ಪ್ರಸ್ತುತ ಬೆಳವಣಿಗೆಗಳಿಗೆ ತಕ್ಷಣದ ಪ್ರತಿಕ್ರಿಯೆ. ಕಾರ್ಟೂನಿಸ್ಟ್ ಕಲೆ, ನೈಪುಣ್ಯದ ಕಾರಣ ಒಂದು ಪಾಕೆಟ್ ಕಾರ್ಟೂನ್‌ಗೆ ಈ ಮೇಲಿನ ಹೇಳಿರುವ ಬೇರೆಲ್ಲಾ ಬರಹದ ರೂಪಗಳಿಗಿಂತ ಹೆಚ್ಚಿನ ಮಹತ್ವ ದೊರಕಬಹುದು. ಆದರೆ ಪಿ.ಮಹಮ್ಮದ್ ತಮ್ಮ ಹಿಂದಿನ ಪೋಸ್ಟ್ ನಲ್ಲಿ ಹೇಳಿರುವ ಹಾಗೆ ಕಾರ್ಟೂನ್ ನ್ನು ಗ್ರಹಿಸುವುದರಲ್ಲಿಯೇ ದೋಷವಿದೆ (ಕೆಲವರಲ್ಲಿ). ಆ ಕಾರಣ ಇಂತಹ ಪ್ರತಿಕ್ರಿಯೆಗಳು ಬರಲು ಸಾಧ್ಯ.

ಚೂಪು ಮೀಸೆಯ ಮುಖ್ಯಮಂತ್ರಿಗೆ ಅಂತಹದೊಂದು ದೋಷ ಇರಲಿಕ್ಕೂ ಸಾಕು. ಅದನ್ನು ಪತ್ರಿಕೆ ಸಂಪಾದಕರು, ಉಸ್ತುವಾರಿ ಹೊತ್ತವರ ಜೊತೆ ಅವರು ಆಪ್ತವಾಗಿ ಹೇಳಿರಬಹುದು. ಅಧಿಕಾರದಲ್ಲಿರುವ ರಾಜಕಾರಣಿಗೆ ಪಾಕೆಟ್ ಕಾರ್ಟೂನ್‌ಗಳು ಕಸಿವಿಸಿ ಉಂಟು ಮಾಡುತ್ತವೆ ಎಂದರೆ, ಅದು ಕಾರ್ಟೂನಿಸ್ಟ್‌ರ ಯಶಸ್ಸ್ಸು ಮತ್ತು ಪತ್ರಿಕೆಯ ಹೆಮ್ಮೆ. ಆದರೆ ಪ್ರಜಾವಾಣಿ ಸಂಸ್ಥೆಗೆ ಆ ಹೆಮ್ಮೆಯನ್ನು ಅನುಭವಿಸಲಾಗದಷ್ಟು ದಾರಿದ್ರ್ಯ ಬಂತಲ್ಲ, ಅದು ವಿಪರ್ಯಾಸ.

ಚೂಪು ಮೀಸೆ ರಾಜಕಾರಣಿ ಬಗ್ಗೆ ಪ್ರಜಾವಾಣಿ ಪತ್ರಿಕೆಗೆ ವಿಶೇಷ ಪ್ರೀತಿ ಏಕೆ ಎಂದು ಈಗ ಎಲ್ಲರಿಗೂ ಗೊತ್ತು. ಸಂಸ್ಥೆಯ ಮಾಲೀಕರ ಒಡೆತನದಲ್ಲಿದ್ದ ಜಮೀನನ್ನು ಸರಕಾರಿ ಯೋಜನೆಯಿಂದ ಡಿನೋಟಿಫೈ ಮಾಡಿಸಬೇಕಿತ್ತು. ಈ ಕುರಿತು ವಿಸ್ತೃತ ವರದಿ ಹಿಂದೆ ವರ್ತಮಾನದಲ್ಲಿ ಪ್ರಕಟವಾಗಿದೆ. ಪತ್ರಿಕೆಯ ಮಾಲೀಕರಿಗೆ ಕೋಟಿಗಟ್ಟಲೆ ಬೆಲೆಬಾಳುವ ಜಮೀನನ್ನು ಉಳಿಸಿಕೊಳ್ಳುವಾಗ ‘ಪಾಕೆಟ್ ಕಾರ್ಟೂನ್‌ನ್ನು’ ಬಲಿ ಕೊಟ್ಟರೆ ಏನು ಮಹಾ ಎನ್ನಿಸಿರಬಹುದು.

ದಂಡಾಧಿಪತಿ ಜೊತೆಗೆ ಅವರ ಮೇಲಿನ ಸಂಪಾದಕರು ಈ ಎಲ್ಲಾ ಬೆಳವಣಿಗೆಗಳಿಗೆ ಕಾರಣಕರ್ತರು. ಮ್ಯಾನೇಜರ್ ಹುದ್ದೆಯಲ್ಲಿ ಇರಬೇಕಾದವರನ್ನು ಆಯ್ಕೆ ಮಾಡುವುದು ಸಂಪಾದಕರು (ಪ್ರಜಾವಾಣಿ ವಿಷಯದಲ್ಲಿ ಅವರು ಮಾಲೀಕರೂ ಹೌದು). ಮಾಲೀಕರು ತಮ್ಮ ನಿರ್ಧಾರಗಳನ್ನು ತನ್ನ ಕೆಳಗಿನ ಮ್ಯಾನೇಜರ್ ಮೂಲಕ ಜಾರಿಗೆ ತರುತ್ತಾರೆ. ಮೇಲ್ನೋಟಕ್ಕೆ ಅದು ಮ್ಯಾನೇಜರ್ ವರ್ತನೆ ಎನ್ನಿಸಿದರೂ, ಅದು ಕಂಪನಿ ಮಾಲೀಕರ ಅಣತಿಯಂತೆಯೇ ಆಗಿರುತ್ತದೆ. ಈ ಹಿಂದೆ ಯಡಿಯೂರಪ್ಪನವರ ವಿರುದ್ಧ ಡಿನೋಟಿಫಿಕೇಶನ್ ಪ್ರಕರಣಗಳು ಒಂದಾದ ಮೇಲೆ ಒಂದರಂತೆ ಹೊರಬಂದಾಗ, ಈ ಪತ್ರಿಕೆ ಕಣ್ಣು ಮುಚ್ಚಿ ಕುಳಿತಿತ್ತು. ಆಗ ಡಿನೋಟಿಫಿಕೇಶನ್ ಕುರಿತ ವರದಿಗಳಿಗೆ ನಿರ್ಬಂಧ ಹಾಕಿದರು. ಇದೀಗ ಗೊತ್ತಾಗಿರುವಂತೆ, ಅವರ ನಿರ್ಬಂಧ ವರದಿಗಳಿಗಷ್ಟೇ ಸೀಮಿತವಾಗಿರಲಿಲ್ಲ, ಕಾರ್ಟೂನ್‌ಗಳಿಗೂ ವ್ಯಾಪಿಸಿತ್ತು. ಅಂತ ಅದೆಷ್ಟು ಅಮೂಲ್ಯ ಕಾರ್ಟೂನ್‌ಗಳು ಪ್ರಜಾವಾಣಿಯ ಕಸದ ಬುಟ್ಟಿ ಸೇರಿ ಹಾಳಾದವೋ? ಓದುಗರಿಗೆ ನಷ್ಟ.

ಮಹಮ್ಮದ್ ಅವರ ವರ್ತನೆ ಕೆಲವರಿಗೆ ಅವಸರದ್ದು ಎನ್ನಿಸಬಹುದು. ಮತ್ತೆ ಕೆಲವರಿಗೆ ಬೇರೊಂದು ಪತ್ರಿಕೆಗೆ ಹೋಗುವುದಾದರೆ, ಸುಮ್ಮನೆ ಹೋಗಬೇಕಿತ್ತು, ಹೀಗೆ ಕೆಲಸ ಕೊಟ್ಟ ಪತ್ರಿಕೆ ಬಗ್ಗೆ ಹೀಗೇಕೆ ಮಾತನಾಡಬೇಕಿತ್ತು ಎಂದೂ ಕೆಲವರಿಗೆ ಕಾಡಬಹುದು. ಆದರೆ ಪತ್ರಿಕೋದ್ಯಮ ಇತಿಹಾಸದಲ್ಲಿ ಇಂತಹ ಸಂಗತಿಗಳು ದಾಖಲಾಗುವುದು ಅವಶ್ಯಕ. ಅತ್ಯಂತ ವಿಶ್ವಾಸಾರ್ಹ ಎನಿಸಿಕೊಳ್ಳುವ ಪತ್ರಿಕೆ ತನ್ನ ಪ್ರತಿಭಾವಂತ ಕಾರ್ಟೂನಿಸ್ಟ್‌ರ ವಿಶ್ವಾಸವನ್ನೇ ಉಳಿಸಿಕೊಳ್ಳಲು ಸಾಧ್ಯವಾಗದೇ ಹೋದರೆ, ಜನರ ವಿಶ್ವಾಸದ ಮಾತೆಲ್ಲಿ?

ಪ್ರಜಾವಾಣಿ ಅವಕಾಶ ಕೊಟ್ಟ ಕಾರಣ ಮಹಮ್ಮದ್ ಹೆಚ್ಚಿನ ಮನ್ನಣೆ, ಜನಪ್ರಿಯತೆ ಗಳಿಸಿದ್ದಾರೆ ಎನ್ನುವುದು ಎಷ್ಟು ನಿಜವೋ, ಅಷ್ಟೇ ನಿಜ ಮಹಮ್ಮದ್ ಕಾರಣ ಪ್ರಜಾವಾಣಿಗೂ ಹೆಚ್ಚಿನ ಮನ್ನಣೆ ಸಿಕ್ಕಿದೆ. ಅವರ ಸ್ಥಾನಕ್ಕೆ ಸೂಕ್ತ ಕಲಾವಿದನನ್ನು ಹುಡುಕುವುದು ತುಂಬಾ ಕಷ್ಟದ ಕೆಲಸ ಎನ್ನುವುದು ಗೊತ್ತಿರುವ ಸಂಗತಿಯೆ. ಮುಖ್ಯವಾಗಿ ಪ್ರಜಾವಾಣಿ ಮಾಲೀಕರು ಮತ್ತು ಉಸ್ತುವಾರಿ ಹೊತ್ತವರು ಒಬ್ಬ ಕಲಾವಿದನನ್ನೂ ಟ್ರೈನಿ ಸಬ್ ಎಡಿಟರ್ ಅಥವಾ ವರದಿಗಾರನಂತೆಯೇ ಕಾಣುತ್ತಾರೆ. ಅವರ ಪಾಲಿಗೆ ಕಾರ್ಟೂನ್ ಕೂಡ ಒಂದು ಅಸೈನ್‌ಮೆಂಟ್. ಅದರಾಚೆಗೆ ಯೋಚನೆ ಮಾಡುವ ಪ್ರಜ್ಞೆ ಕಳೆದುಕೊಂಡ ಕಾರಣವೇ ಅವರ ಕಾರ್ಟೂನ್‌ಗಳನ್ನು ಡೆರಾಗೆಟರಿ ಎಂದು ಟೀಕಿಸಿದ್ದು.

ಮಹಮ್ಮದ್ ಎದುರಿಸಿರುವ ಪರಿಸ್ಥಿತಿ ಪತ್ರಿಕೆಯಲ್ಲಿರುವ ಇತರೆ ಅನೇಕರು ಕೂಡ ಅನುಭಿಸಿರಬಹುದು. ಮಧ್ಯಮ ವರ್ಗ ಕುಟಂಬದಿಂದ ಬಂದ ಅನೇಕರಿಗೆ ಬೇರೆ ಆದಾಯದ ಮೂಲಗಳಿರುವುದಿಲ್ಲ. ಅತ್ತ ಭ್ರಷ್ಟರಾಗುವ ಆಸಕ್ತಿಯೂ ಇರುವುದಿಲ್ಲ. ಅಂತಹವರು ಸುಮ್ಮನೆ ತಮ್ಮ ಇತಿ-ಮಿತಿಗಳನ್ನು ಮೊದಲೇ ಅರ್ಥಮಾಡಿಕೊಂಡು ಆ ಚೌಕಟ್ಟಿನ ಒಳಗೇ ಇದ್ದು ಕೆಲಸ ನಿರ್ವಹಿಸುತ್ತಾರೆ. ಆಗ ಸಮಸ್ಯೆಗಳು ಎದುರಾಗುವುದಿಲ್ಲ. ಒಂದು ಪಕ್ಷ ಧಿಕ್ಕರಿಸಿ ಹೊರ ನಡೆದರೆ, ಬೇರೆ ಪತ್ರಿಕಾಲಯಗಳಲ್ಲಿ ಪರಿಸ್ಥಿತಿ ಬೇರೆಯಾಗಿರುತ್ತೆ ಎನ್ನುವ ಖಾತ್ರಿಯೇನಿಲ್ಲವಲ್ಲ.

ಮಹಮ್ಮದ್ ಅವರಿಗೂ ಈ ಸಂದಿಗ್ಧ ಗೊತ್ತಿದೆ. ಆದರೂ ಅವರಿಗೆ ನಂಬರ್ 1 ಅಂಗಡಿಯಲ್ಲಿ ಸ್ವತಂತ್ರವಾಗಿ ಕೆಲಸ ಮಾಡುವ ವಾತಾವರಣ ಇರಲಿ. ಸಂಬಳ ಗಾಳಿಮಾತುಗಳು ಹೇಳುವಂತೆ ಒಂದು ಲಕ್ಷ ಅಲ್ಲದಿದ್ದರೂ, ಅವರ ಅಗತ್ಯಗಳನ್ನು ಪೂರೈಸುವಷ್ಟಿರಲಿ. ಕಾರ್ಟೂನಿಸ್ಟ್ ಯಾವುದೋ ಅಂಗಡಿಯಲ್ಲಿ ಕಳೆದು ಹೋಗಲಿಲ್ಲ ಎನ್ನುವುದಷ್ಟೇ ಸಮಾಧಾನ.

10 thoughts on “ಅಂಗಡಿಗಳು, ಮ್ಯಾನೇಜರ್‌ಗಳು, ಪಾಕೆಟ್ ಕಾರ್ಟೂನ್‌ಗಳು…

 1. bharathraj(ಧ್ವನಿ)

  ಈ ಪತ್ರಿಕೋದ್ಯಮವೇ ಹಾಗೇ. ಇಲ್ಲಿ ಒಬ್ಬ್ ಸಿದ್ದಾಂತವಾದಿಗೆ ಜಾಗ, ಬೆಲೆ ಎರಡೂ ಇಲ್ಲ. ಮಾಲೀಕನ ಆಶಯದಂತೆ ಸಂಪಾದಕನ ನಿರ್ಣಯ. ಹೀಗಿರುವಾಗ ಮಹಮ್ಮದ್ರಂಥ ಉತ್ತಮ ಚಿಂತಕನಿಗೆ ಜಾಗ ಎಲ್ಲಿ ಸಿಗುತ್ತೆ?

  Reply
 2. anand prasad

  ವ್ಯಂಗ್ಯ ಚಿತ್ರ ಎನ್ನುವುದು ಒಂದು ಕಲೆ. ಇದಕ್ಕೆ ಪ್ರತಿಭೆ ಇರಬೇಕು. ಈ ನಿಟ್ಟಿನಲ್ಲಿ ನೋಡಿದರೆ ಪ್ರತಿಯೊಂದು ವ್ಯಂಗ್ಯ ಚಿತ್ರವೂ ಒಂದು ಕಲಾಕೃತಿಯೂ ಹೌದು. ಓರ್ವ ಕಲಾವಿದನಿಗೆ ನೀನು ಹೀಗೇ ಚಿತ್ರ ಬರೆಯಬೇಕು ಎಂದು ನಿರ್ಬಂಧ ವಿಧಿಸುವುದು ಸಮಂಜಸವಲ್ಲ. ಆದರೆ ಪತ್ರಿಕೆಗಳು ಇಂದು ಸ್ವತಂತ್ರ ಅಭಿವ್ಯಕ್ತಿಗೆ ಅವಕಾಶ ನೀಡುವ ಸಂಭವ ಕಡಿಮೆ. ಪ್ರತಿಯೊಂದು ದೊಡ್ಡ ಪತ್ರಿಕೆಗೂ ಒಂದೊಂದು ರಾಜಕೀಯ ನಿಲುವುಗಳು ಇರುತ್ತವೆ. ತಮ್ಮ ರಾಜಕೀಯ ನಿಲುವುಗಳಿಗೆ ವಿರುದ್ಧವಾದ ಚಿತ್ರಣಗಳು ಬಂದಾಗ ಅವುಗಳನ್ನು ಕಸದ ಬುಟ್ಟಿಗೆ ಹಾಕುವುದು ಎಲ್ಲ ಪತ್ರಿಕೆಗಳ ಹಣೆಬರಹವೇ ಆಗಿದೆ. ಹೀಗಾಗಿ ಇಂದು ಪತ್ರಿಕೆಗಳಲ್ಲಿ ಸ್ವತಂತ್ರ ಅಭಿವ್ಯಕ್ತಿಗೆ ಅವಕಾಶವೇ ಇಲ್ಲ. ಇಂಥ ಅವಕಾಶ ಕೆಲವು ಸಣ್ಣ ಪತ್ರಿಕೆಗಳಲ್ಲಿ ಮಾತ್ರ ಇರಬಹುದು. ದೊಡ್ಡ ಪತ್ರಿಕೆಗಳಲ್ಲಿ ಇರುವ ಸಂವೇದನಾಶೀಲ ಪತ್ರಕರ್ತರು ತಾವು ಅನುಭವಿಸುವ ಕಿರುಕುಳ, ಉಸಿರು ಕಟ್ಟುವ ವಾತಾವರಣ ಇವುಗಳ ಬಗ್ಗೆ ವರ್ತಮಾನದಂಥ ಇಂಟರ್ನೆಟ್ ಪತ್ರಿಕೆಗಳಲ್ಲಿ ಬರೆದುಕೊಳ್ಳಬಹುದು. ಪತ್ರಿಕೆಗಳಿಂದ ನಿವೃತ್ತರಾದವರು ದೊಡ್ಡ ಪತ್ರಿಕೆಗಳಲ್ಲಿ ಅನುಭವಿಸಿದ ಯಾತನೆಗಳನ್ನು, ಆತ್ಮಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡಬೇಕಾಗಿ ಬಂದ ಸನ್ನಿವೇಶಗಳನ್ನು ಇಂಟರ್ನೆಟ್ ಪತ್ರಿಕೆಗಳಲ್ಲಿ ಬರೆದು ದೊಡ್ಡ ಪತ್ರಿಕೆಗಳ ಕೊಳಕುತನವನ್ನು ಬಯಲಿಗೆ ಎಳೆಯಬಹುದು.

  Reply
 3. nagraj.harapanahalli

  ಮಹಮದ್ ಅವ್ರು ಪ್ರಜಾವಾಣಿ ಬಿಡಲು ಕಾರಣವಾದ ಒಂದು ಸಂಗತಿ ಹೊರ ಜಗತ್ತಿಗೆ ತಿಳಿಯಿತು .

  Reply
 4. prasad raxidi

  ಮಹಮ್ಮದ್ ಅವರು ಪ್ರಜಾವಾಣಿ ಬಿಟ್ಟನಂತರ ನಡೆಯುತ್ತಿರುವ ಚರ್ಚೆ- ಅದರಲ್ಲೂ ಹಿರಿಯ ಪತ್ರಕರ್ತರೊಬ್ಬರು ಮಹಮ್ಮದರ ಪತ್ರದ ಮೂಲ ಉದ್ದೇಶ ಅರ್ಥವಾಗದವರಂತೆ, ವಿಷಯಾಂತರಮಾಡಿ ಪರೋಕ್ಷವಾಗಿ ನಂದಿಮಾರ್ಕನ್ನು ಸಮರ್ಥಿಸುತ್ತಿರುವ ರೀತಿ, ಯಾಕೋ ವಿಷಾದದಲ್ಲಿ ಮುಳುಗುವಂತೆ ಮಾಡಿದೆ.

  Reply
 5. Basavaraj Halli

  ನಾನು ಉತ್ತರ ಕನರ್ಾಟಕದ ಭಾಗದವ. ಲಿಂಗಸುಗೂರು ತಾಲ್ಲೂಕಿನಲ್ಲಿ ಬರುವ ಪಟ್ಟಣವೊಂದರಲ್ಲಿ ಖಾಲಿ ಇದ್ದ ಪ್ರಜಾವಾಣಿ ವರದಿಗಾರಿಕೆಗೆ ಅಜರ್ಿ ಗುಜರಾಯಿಸಿದ್ದೆ, ಗುಲ್ಬರ್ಗಕ್ಕೆ ಹೋಗಿ ಅಲ್ಲಿನ ಪ್ರಜಾವಾಣಿ ಸ್ಥಾನಿಕ ಕಾಯರ್ಾಲಯದಲ್ಲಿ ಪರೀಕ್ಷೆಯನ್ನು ಬರೆದು ಬಂದೆ. ನಾಲ್ಕಾರು ತಿಂಗಳು ಕಳೆದರೂ ಅತ್ತಲಿಂದ ಯಾವ ಸುದ್ದಿಯೂ ಬರಲಿಲ್ಲ. ಆ ನಂತರ ಇನ್ನೊಮ್ಮೆ ವಾಂಟೆಡ್ ಕರೆದು ಪರೀಕ್ಷೆಯನ್ನು ನಡೆಸಿದರು. ಆಗ ನಾನು ಅಜರ್ಿ ಹಾಕಲಿಲ್ಲ. ನನ್ನ ಸಹಪಾಠಿಯೊಬ್ಬರು ಎರಡನೇ ಬಾರಿಯೂ ಪರೀಕ್ಷೆ ಬರೆದು ಬಂದರು. ಅವರು ಆಯ್ಕೆಯಾಗಲಿಲ್ಲ. ನಾನು ಪರೇಶಾನ್ ಆಗಿ ಹೋದೆ. ದಂಡಾಧಿಪತಿಯೊಬ್ಬರು ರಾಯಚೂರು ಜಿಲ್ಲಾ ಬಿಜೆಪಿ ಪಕ್ಷದ ಮಾಜಿ ಕಾರ್ಯದಶರ್ಿಯೊಬ್ಬರನ್ನು ಆ ಪಟ್ಟಣದ ವರದಿಗಾರಿಕೆಗೆ ಸೇರ್ಪಡೆಗೊಳಿಸಿಕೊಂಡಿದ್ದರು. ಈಗ ಆ ಆಸಾಮಿ ಬಿಜೆಪಿ ಪಕ್ಷದ ಋಣವನ್ನು ಚೆನ್ನಾಗಿಯೇ ತೀರಿಸುತ್ತಿದ್ದಾರೆ. ಬಿಜೆಪಿಯ ರಾಜಕಾರಣಿಗಳ ಎಷ್ಟೆಷ್ಟೋ ಆಯಾಮಗಳನ್ನು ಹುಡುಕಿ ಬರೆಯುವ ಮಂದಿ, ಈಗ ಯಾವ ನೈತಿಕತೆಯಿಂದ ಡೊಂಕಣ ಬರೆಯುತ್ತಾರೋ ಇದೆಲ್ಲವೇ ವಿಪಯರ್ಾಸ.
  – ಬಸವ ಕೊಳ್ಳಿ

  Reply
 6. Basavaraj Halli

  ಪಿ.ಮಹ್ಮದ್ ಸರ್ ಅವರಂತಹ ಕಾಟರ್ೂನಿಷ್ಟಗಳು ಅನುಭವಿಸುತ್ತಿರುವ ಆಥರ್ಿಕ ಸಂಕಷ್ಟಗಳು ಕೇಳಿದರೆ ನೈಜ ಪತ್ರಕರ್ತರ ಆತಂಕಗಳು ಗೊತ್ತಾಗುತ್ತವೆ.
  ಪತ್ರಿಕೆಯ ಆಯಕಟ್ಟಿನ ಸ್ಥಳಗಳಲ್ಲಿರುವ ಕೆಲ ಶಕ್ತಿಗಳು ಹೊಟ್ಟೆ ಹುಬ್ಬುವಷ್ಟು ತಿಂದು ಮೂರು ತಲೆಮಾರಿಗೂ ಕರಗದಂತಹ ಆಸ್ತಿ ಮಾಡಿಕೊಳ್ಳುತ್ತಿರುವಾಗ
  ಮಹ್ಮದ್ ಸರ್ ಅವರಂತಹ ಪತ್ರಕರ್ತರಿಗೆ ಬದುಕು ನಡೆಯುವಷ್ಟು ಸಂಬಳ ದೊರೆಯದಿರುವುದು ದುರಂತವಲ್ಲದೆ ಮತ್ತೇನು ? ಕಳೆದ ಏಳು ವರ್ಷಗಳಿಂದ ನಾನು ಪತ್ರಿಕೋದ್ಯಮದಲ್ಲಿದ್ದೇನೆ. ನನಗಿಂತಲೂ ಈಚೆಗೆ ಬಂದ ಕೆಲವರ ಜೀವನದ ಗ್ರಾಫ್ ಏರಿದ ರೀತಿಗೆ ಪರೇಶಾನ್ ಆಗುತ್ತದೆ. ಕೇವಲ 4ಸಾವಿರಕ್ಕೆ ದುಡಿಯುತ್ತಿರುವ ನಾನು ಯಾರಾದರೂ ಮಾತಿಗೆ ಸಿಕ್ಕರೆ ಪತ್ರಕರ್ತ ಅಂತ ಪರಿಚಯಿಸಿಕೊಳ್ಳುವುದಿಲ್ಲ. ಕಂಪ್ಯೂಟರ್ ಆಪರೇಟರ್ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ.

  Reply
 7. Basavaraj Halli

  ಪತ್ರಿಕೆಗಳು ಯಾಕೆ ಹದಗೆಡುತ್ತಿವೆ. ನೈಜ ಪತ್ರಕರ್ತರ ಗತಿಯೇನು ? ಪತ್ರಕರ್ತರು ಪತ್ರಿಕೆಯ ಮಾಲೀಕರ ಗುಲಾಮರಾಗಿರಬೇಕು. ಹಾಗಾದರೆ ಸ್ವಾತಂತ್ರ್ಯ ಎಂದರೆ ಹಾಗಿರಬೇಕು, ಈಗಿರಬೇಕು ಎಂದು ಬರೆಯುವ ಪತ್ರಕರ್ತರು ಸ್ವಾತಂತ್ರ್ಯ ಪಡೆದುಕೊಂಡಿದ್ದಾರಾ ? ಪತ್ರಕರ್ತರ ಹೆಸರಿನಲ್ಲಿ ನುಸಿಗಳು ಒಳಹೊಕ್ಕು ನಡೆಸುತ್ತಿರುವ ಆವಾಂತರಗಳು ಒಂದು ಒಳ್ಳೆಯ ಸಮಾಜವನ್ನು ಕಟ್ಟಲು ಬಯಸಿಯಾವೆ ? ಇಂತವ ಸಾವಿರ, ಲಕ್ಷ ಪ್ರಶ್ನೆಗಳು ಪುದು ಪುದು ಏಳುತ್ತಿವೆ.

  Reply

Leave a Reply

Your email address will not be published.