Daily Archives: July 27, 2012

‘ಸತ್ಯಮೇವ ಜಯತೆ’ಯ ಸತ್ಯಗಳೂ, ಮೌನಗಳೂ

ವಸಂತ

ಹನ್ನೆರಡು ಕಂತುಗಳನ್ನು ಮುಗಿಸಿದ ಅಮೀರ್ ಖಾನರ ‘ಸತ್ಯಮೇವ ಜಯತೆ’ ಭಾರೀ ಸುದ್ದಿಯಲ್ಲಿದೆ. ರಾಮಾಯಣ, ಮಹಾಭಾರತದ ನಂತರ ಭಾನುವಾರ ಬೆಳಗ್ಗೆ ಒಂದುವರೆ ಗಂಟೆ ಕಾಲ ಅತ್ಯಂತ ಹೆಚ್ಚು ಜನರನ್ನು ಮುಟ್ಟಿದ ತಟ್ಟಿದ ಮೆಚ್ಚುಗೆ ಪಡೆದ ಹೆಗ್ಗಳಿಕೆ ಅದರದು ಎನ್ನಲಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮತ್ತು ಇತರ ಸಾರ್ವಜನಿಕ-ಖಾಸಗಿ ಸಂಸ್ಥೆಗಳನ್ನು ಎಬ್ಬಿಸಿ ಕೆಲವು ಕ್ರಮಗಳನ್ನು ಕೈಗೊಳ್ಳುವಂತೆ ಮಾಡಿದೆ ಎಂದೂ ಹೇಳಲಾಗಿದೆ. ಜತೆಗೆ ಹಲವು ಗಂಭೀರ ಟೀಕೆಗಳೂ ಬಂದಿವೆ. ಅಂತಹ ಟೀಕೆಗಳ ಸ್ಯಾಂಪಲ್ ಒಂದು ಇಲ್ಲಿದೆ.

ಜಾತಿ ಮತ್ತು ಅಸ್ಪೃಶ್ಯತೆಯ ಪ್ರಶ್ನೆಗಳ ಸುತ್ತ ‘ಸತ್ಯಮೇವ ಜಯತೆ’ಯ 10ನೇ ಕಂತಿನ ಕಾರ್ಯಕ್ರಮದ ಬಗ್ಗೆ ಈ ಟೀಕೆ ಬಂದಿದೆ. ‘ಔಟ್ ಲುಕ್’ ಇಂಗ್ಲಿಷ್ ವಾರಪತ್ರಿಕೆಯಲ್ಲಿ ಎಸ್.ಆನಂದ ಅವರು ಬರೆದಿದ್ದಾರೆ. ವಿವರಗಳಿಗೆ ‘ಔಟ್‌ಲುಕ್‌’ ನ ಈ ಕೊಂಡಿ ನೋಡಿ. (http://outlookindia.com/article.aspx?281646#.UAFhZHQYgiA.facebook )

ಅದಕ್ಕೆ ಎಸ್.ಆನಂದ ‘ಮೌನ ಏವ ಜಯತೆ’ ಎಂದು ತಲೆಬರಹ ಕೊಟ್ಟಿದ್ದಾರೆ. ಎಸ್. ಆನಂದ ‘ನವಯಾನ’ ಎಂಬ ದಲಿತ ಮತ್ತು ಜಾತಿ ಪ್ರಶ್ನೆಗೆ ಮೀಸಲಾಗಿರುವ ಪುಸ್ತಕ ಪ್ರಕಾಶನದ ಸ್ಥಾಪಕರಲ್ಲೊಬ್ಬರು. ಅವರು ಮುಖ್ಯವಾಗಿ ಆ ಕಂತಿನಲ್ಲಿ ಮಾಡಲಾದ ‘ಕಟ್’ಗಳ ಬಗ್ಗೆ (ಭಾಗವಹಿಸಿದವರಿಂದಲೇ ಸಂಗ್ರಹಿಸಲಾದ) ಮಾಹಿತಿ ಕೊಡುತ್ತಾರೆ. ಕೆಲವು ‘ಸತ್ಯ’ಗಳನ್ನು ಪ್ರಶ್ನಿಸುತ್ತಾರೆ. ಕೆಲವು ‘ಸತ್ಯದ ಬಗ್ಗೆ ಮೌನ’ಗಳನ್ನು ಗುರುತಿಸುತ್ತಾರೆ. ಅಂತಹ ಕೆಲವು ‘ಸತ್ಯ’ಗಳು, ‘ಕಟ್’ಗಳು ಮತ್ತು ಮೌನಗಳ ಸಾರಾಂಶ :

 • ಐಎಎಸ್ ಸೇರಿದ ಮೊದಲ ದಲಿತ ಎಂದು ಹೆಸರಾದ ಬಲವಂತ್ ಸಿಂಗ್ ಅವರ ಸಂದರ್ಶನದಲ್ಲಿ, ತಾನು ಸ್ವತಂತ್ರ ಭಾರತದಲ್ಲಿ ಐಎಎಸ್ ಹುದ್ದೆಯಿಂದ ತಹಶಿಲ್ದಾರನಾಗಿ ಹಿಂಬಡ್ತಿ ಹೊಂದಿದ ಏಕಮಾತ್ರ ವ್ಯಕ್ತಿ ಎಂದು ಹೇಳಿದ್ದು ಕಟ್
 • ‘ಒಣ ಪಾಯಿಖಾನೆ’ ಮತ್ತು ಭಂಗಿಗಳು ಅದನ್ನು ಸ್ವಚ್ಛಗೊಳಿಸುವ ವ್ಯವಸ್ಥೆ ನಿಷೇಧ ಮಾಡುವ ಕಾನೂನು ಸುಪ್ರೀಂ ಕೋರ್ಟು ಮತ್ತು ಪಾರ್ಲಿಮೆಂಟಿನಲ್ಲಿ ನೆನೆಗುದಿಗೆ ಬಿದ್ದಿರುವ ಬಗ್ಗೆ ಸಫಾಯಿ ಕರ್ಮಚಾರಿ ಆಂದೋಲನ್ ನಡೆಸುತ್ತಿರುವ ಬೆಜವಾಡ ವಿಲ್ಸನ್ ಅವರ ತೀವ್ರ ಟೀಕೆ ಕಟ್
 • ‘ಒಣ ಪಾಯಿಖಾನೆ’ ಮತ್ತು ಭಂಗಿ ಪದ್ಧತಿ ವಿರುದ್ಧ ಗಾಂಧೀಜಿಯವರ ‘ಕಲ್ಪಿತ’ (ಗಾಂಧೀಜಿ ಎಲ್ಲರೂ ಪಾಯಿಖಾನೆ ಶುದ್ಧ ಮಾಡಬೇಕು ಎಂದು ಹೇಳಿದರೇ ವಿನಃ ‘ಒಣ ಪಾಯಿಖಾನೆ’ ಮತ್ತು ಭಂಗಿ ವ್ಯವಸ್ಥೆ ನಿಷೇಧಕ್ಕೆ ಹೋರಾಡಲಿಲ್ಲ) ಹೋರಾಟದ ಬಗ್ಗೆ ಮಾಜಿ ನ್ಯಾಯಾಧೀಶ ಧರ್ಮಾಧಿಕಾರಿ ಮತ್ತು ಅಮೀರ್ ಖಾನ್ ಆಶ್ಚರ್ಯಕಾರಿ ಹೇಳಿಕೆಗಳು
 • ಭಂಗಿ ಪದ್ಧತಿ ವಿರುದ್ಧ ನಿಜವಾಗಿಯೂ ತೀವ್ರ ದನಿ ಎತ್ತಿದ ಗಾಂಧೀಜಿಯವರ ಜತೆ ಆ ಬಗ್ಗೆ ವಾಗ್ವಾದ ಮಾಡಿದ ಅಂಬೇಡ್ಕರ್ ಬಗ್ಗೆ ಮೌನ
 • ದಲಿತರ ಮೇಲೆ ದೌರ್ಜನ್ಯಗಳ ಬೆಚ್ಚಿ ಬೀಳಿಸುವ (ಇತರ ಕಂತುಗಳಲ್ಲಿ ಸಾಮಾನ್ಯವಾಗಿ ಇದ್ದ) ಮತ್ತು ಮೀಸಲಾತಿಯ ಜಾರಿಯ ವೈಫಲ್ಯಗಳ ಅಂಕೆ ಸಂಖ್ಯೆಗಳ ಬಗ್ಗೆ ದಿವ್ಯ ಮೌನ
 • ಇರಲೇಬೇಕಾಗಿದ್ದ ಆದರೆ ಇಲ್ಲದ, ಕುಖ್ಯಾತ ಖೈರ್ಲಾಂಜಿ ದೌರ್ಜನ್ಯದ ಬಗ್ಗೆ ಪ್ರಸ್ತಾಪ ಮತ್ತು ಅದರಲ್ಲಿ ಬದುಕುಳಿದ ಏಕಮಾತ್ರ ವ್ಯಕ್ತಿ ಭೈಯ್ಯಾಲಾಲ್ ಭೂತಮಾಂಗೆ ಸಂದರ್ಶನ
 • ಅಂಬೇಡ್ಕರ್ ಮತ್ತು ಮೀಸಲಾತಿ ಬಗ್ಗೆ ಬೆಜವಾಡ ವಿಲ್ಸನ್ ಹೇಳಿಕೆಗಳ ಕಟ್
 • ಅಂಬೇಡ್ಕರ್ ಮತ್ತು ಮೀಸಲಾತಿ ಬಗ್ಗೆ ಇಡೀ ಕಾರ್ಯಕ್ರಮದಲ್ಲಿ ದಿವ್ಯ ಮೌನ
 • ದಲಿತರ ಮೇಲೆ ದೌರ್ಜನ್ಯಗಳ ಬೆಚ್ಚಿ ಬೀಳಿಸುವ (ಇತರ ಕಂತುಗಳಲ್ಲಿ ಸಾಮಾನ್ಯವಾಗಿ ಇದ್ದ) ಅಂಕೆ ಸಂಖ್ಯೆಗಳ ಬಗ್ಗೆ ದಿವ್ಯ ಮೌನ
 • ಇರಲೇಬೇಕಾಗಿದ್ದ ಖೈರ್ಲಾಂಜಿ ದೌರ್ಜನ್ಯದಲ್ಲಿ ಬದುಕುಳಿದ ಏಕಮಾತ್ರ ವ್ಯಕ್ತಿ ಭೈಯ್ಯಾಲಾಲ್ ಭೂತಮಾಂಗೆ ಸಂದರ್ಶನ
 • ಅಗತ್ಯವಿಲ್ಲದ ಗಾಂಧೀವಾದಿ ಮಾಜಿ ನ್ಯಾಯಾಧೀಶ ಧರ್ಮಾಧಿಕಾರಿಯ ಸಂದರ್ಶನ
 • ದಲಿತ ಛೇಂಬರ್ ಆಫ್ ಕಾಮರ್ಸ್ ಮಿಲಿಂದ್ ಕಾಂಬ್ಳೆ ಮತ್ತು ಅಶೋಕ ಖಡೆ ಜತೆ ಸಂದರ್ಶನ ಇಡಿಯಾಗಿ ಕಟ್
 • ಅಸ್ಪೃಶ್ಯತೆ ಮತ್ತು ಜಾತಿ ಭೇದ ಮುಂದುವರೆಯುತ್ತಿರುವ ಬಗೆಗಿನ 3 ಗಂಟೆಗಳ ಸ್ಟಾಲಿನ್ ಪದ್ಮ ಅವರ ಡಾಕ್ಯುಮೆಂಟರಿ ‘ ‘ಇಂಡಿಯಾ ಅನ್ಟಚ್ಡ್’ ನಲ್ಲಿ ಇರುವ ದಲಿತರ ಮೇಲಿನ ದೌರ್ಜನ್ಯ ಮತ್ತು ಮೀಸಲಾತಿ ಬಗೆಗಿನ ಪರಿಣಾಮಕಾರಿ ಕ್ಲಿಪ್ ಆಯ್ಕೆ ಮಾಡದೆ ಇರುವುದು
 • ಹರ್ಯಾಣಾದ ಹಳ್ಳಿಯಿಂದ ದಿಲ್ಲಿಯ ಜೆ.ಎನ್.ಯು.ವರೆಗೆ ಎಲ್ಲಾ ಕಡೆ ಅಸ್ಪೃಶ್ಯತೆ ಅನುಭವಿಸಿದ ಕೌಶಲ್ ಪನ್ವರ್ ಸಂದರ್ಶನ ಒಂಟಿಯಾಗಿ ನಡೆಸಿದ್ದರೂ, ಸ್ಟುಡಿಯೊ ಪ್ರೇಕ್ಷಕರ ‘ಪ್ರತಿಕ್ರಿಯೆ’ ಕೃತಕವಾಗಿ ತೋರಿಸಿದ್ದು
 • ಕಾರ್ಯಕ್ರಮದ ಸಂದರ್ಶನಗಳಲ್ಲಿ ಭಾಗವಹಿಸಿದ ಎಲ್ಲರಿಂದ ತಾವು ಮಾಡಿದ ಹೇಳಿಕೆಗಳ ಬಗ್ಗೆ ಯಾವ ಮಾಧ್ಯಮಗಳಲ್ಲೂ ಬಹಿರಂಗ ಪಡಿಸುವುದಿಲ್ಲ ಎಂಬ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡದ್ದು.

ಸತ್ಯಾಸತ್ಯತೆಗಳು ಮತ್ತು ಮೌನಗಳು

ಎಸ್. ಆನಂದ ಅವರು ಜಾತಿ ಮತ್ತು ಅಸ್ಪೃಶ್ಯತೆಯ ಪ್ರಶ್ನೆಗಳ ಸುತ್ತ ‘ಸತ್ಯಮೇವ ಜಯತೆ’ಯ ಕಂತಿನ ಬಗ್ಗೆ ನಿರ್ದಿಷ್ಟವಾಗಿ ವ್ಯಕ್ತಪಡಿಸಿದ ಟೀಕೆಗಳು ಬಹುತೇಕ ಎಲ್ಲಾ ಕಂತುಗಳ ಬಗ್ಗೆ ಸಹ ನಿಜ. ನಮ್ಮ ದೇಶವನ್ನು ಸುಡುತ್ತಿರುವ ಪ್ರಮುಖ ಸಮಸ್ಯೆಗಳನ್ನು ಎತ್ತಿಕೊಂಡು ಅದರ ಭೀಕರ ಸ್ವರೂಪ, ಅದರ ಮೂಲ ಕಾರಣಗಳು ಮತ್ತು ಅವುಗಳಿಗೆ ತಕ್ಷಣದ ಮತ್ತುದೂರಗಾಮಿ ಪರಿಹಾರಗಳ ಬಗ್ಗೆ ಹೇಳುವಾಗ ಸಮಗ್ರತೆ ಮತ್ತು ಆಳದ ಕೊರತೆ ಹಾಗೂ ತೀವ್ರ ಮಿತಿಗಳು ಕಂಡು ಬಂದಿವೆ. ಸಮಸ್ಯೆಯ ಸ್ವರೂಪದ ಭೀಕರತೆ ಅಥವಾ ಹಲವು ಮುಖಗಳನ್ನು ಪ್ರಸ್ತುತ ಪಡಿಸುವಾಗ ‘ಮಧ್ಯಮ ವರ್ಗ’ದ ಪ್ರೇಕ್ಷಕರು, ಜಾಹೀರಾತುದಾರು ಕಂಪನಿಗಳು ಮತ್ತು ನಮ್ಮ ಆಳುವ ವ್ಯವಸ್ಥೆ ಸಹಿಸಿಕೊಳ್ಳಲು ಅಸಾಧ್ಯವಾದ ಅಥವಾ ಅವರಿಗೆ ಇಷ್ಟವಾಗದೆ ಹೋಗಬಹುದಾದ ಅಂಶಗಳನ್ನು ಸ್ವಯಂ-ಸೆನ್ಸಾರ್ ಮಾಡಿದ್ದು ಅಥವಾ ಮೌನ ತಾಳಿದ್ದು ಕಂಡು ಬರುತ್ತದೆ. ಮೇಲೆ ಹೇಳಿದ ಜಾತಿ ಮತ್ತು ಅಸ್ಪೃಶ್ಯತೆಯ ಕಂತು ಇದಕ್ಕೆ ಒಳ್ಳೆಯ ಉದಾಹರಣೆ. ಹೆಣ್ಣು ಭ್ರೂಣ ಹತ್ಯೆ ಸಮಸ್ಯೆಯ ಬಗ್ಗೆ ಮಾತಮಾಡುವಾಗ ಯಾವುದೇ ಕಾರಣಕ್ಕಾಗಿ ಗರ್ಭಪಾತವೇ ತಪ್ಪು ಎಂಬ ಧ್ವನಿ ಹೊರಟಂತಹ ಹಲವು ಸರಳೀಕರಣಗಳೂ ಇವೆ.

ಸಮಸ್ಯೆಯ ಮೂಲ ಕಾರಣ ಹುಡುಕುವಾಗ ಸಮಸ್ಯೆಗೆ ಕಾರಣವಾಗಿರುವ ನಮ್ಮ ಆಳುವ ವ್ಯವಸ್ಥೆಯನ್ನೇ ಅಥವಾ ಅದರ ಪ್ರಮುಖ ನೀತಿಗಳ ವರೆಗೆ ಹೋಗಿದ್ದು ಇಲ್ಲವೇ ಇಲ್ಲ ಎನ್ನುವಷ್ಟು ಅಪರೂಪ. ಆರೋಗ್ಯ ಮತ್ತು ಔಷಧಿಗಳ ಕಂತಿನಲ್ಲಿ ಔಷಧಿ ಬೆಲೆ ಏರಿಕೆಗೆ ಕಾರಣವಾದ 1970 ಪೇಟೆಂಟ್ ಕಾನೂನಿನಲ್ಲಿ ಬದಲಾವಣೆಯಾಗಲಿ, ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಕಳಚಿ ಹಾಕಿ ವ್ಯಾಪಕ ಖಾಸಗೀಕರಣ ಮತ್ತು ವಾಣಿಜ್ಯೀಕರಣಕ್ಕೆ ಕಾರಣವಾದ ನೀತಿಗಳ ಬಗೆಗಾಗಲಿ ಚಕಾರವೆತ್ತಲಿಲ್ಲ. ಅದೇ ರೀತಿ ಪರಿಹಾರ ಹೇಳುವಾಗ ಪಿಪಿಪಿ (ಪಬ್ಲಿಕ್ ಪ್ರೈವೇಟ್ ಪಾರ್ಟನರ್ ಶಿಪ್) ವ್ಯವಸ್ಥೆಗೆ ಒತ್ತು ಕೊಡಲಾಯಿತು. ಆಂಧ್ರಪ್ರದೇಶದ ಈ ಥರದ ಪಿಪಿಪಿ ಕಾರ್ಯಕ್ರಮ ಒಂದರ ದುರ್ಬಳಕೆ ಮಾಡಿಯೇ, ಅದೇ ಕಂತಿನಲ್ಲೇ ತೋರಿಸಲಾದ ಅನಗತ್ಯವಾಗಿ ದೊಡ್ಡ ಪ್ರಮಾಣದಲ್ಲಿ ಮಹಿಳೆಯರನ್ನು ಗರ್ಭಕೋಶ ಕತ್ತರಿಸುವ ಆಪರೇಶನಿಗೆ ಗುರಿ ಮಾಡಿದ್ದು ಎಂಬ ಸತ್ಯವನ್ನು ಮರೆ ಮಾಚಲಾಯಿತು. ಹೆಚ್ಚಿನ ಈ ಗಂಭೀರ ಸಮಸ್ಯೆಗಳಿಗೆ ಕಾರಣವಾದ ಪಾಳೆಯಗಾರಿ, ನವ-ಉದಾರವಾದಿ ಬಂಡವಾಳಶಾಹಿ ವ್ಯವಸ್ಥೆಯ ಪ್ರಸ್ತಾಪ ಮಾಡುವುದಂತೂ ದೂರವೇ ಉಳಿಯಿತು.

ಸಮಸ್ಯೆಯ ಪರಿಹಾರ ಕೊಡುವಾಗಂತೂ ಸಮಗ್ರತೆ ಮತ್ತು ಆಳದ ಕೊರತೆ ತೀವ್ರವಾಗಿ ಕಂಡು ಬಂತು. ನೀರಿನ ಸಮಸ್ಯೆಗೆ ‘ಮಳೆ ನೀರಿನ ಕೊಯ್ಲು’ ಒಂದೇ ಪರಿಹಾರ ಕೊಡಬಲ್ಲುದು. ಚೆನ್ನೈನಲ್ಲಿ ‘ಮಳೆ ನೀರಿನ ಕೊಯ್ಲು’ ಜಾರಿಯಿಂದ ನೀರಿನ ಸಮಸ್ಯೆ ಪರಿಹಾರವಾಗಿದೆ ಎಂಬಂತೆ ಬಿಂಬಿಸಲಾಯಿತು ನೀರಾವರಿ, ಕುಡಿಯುವ ನೀರು ಸರಬರಾಜು ವ್ಯವಸ್ಥೆ ಯೋಜನೆಗಳ ಅಗತ್ಯವೇ ಇಲ್ಲವೆಂಬಂತೆ ತೋರಿಸಲಾಯಿತು.

ಸಮಸ್ಯೆಯ ತೀವ್ರತೆ ತೋರಿಸಿದ ಮೇಲೆ ಕೆಲವಾದರೂ ‘ಆಶಾಕಿರಣ’ಗಳನ್ನು ತೋರಿಸದಿದ್ದರೆ ಇನ್ನಷ್ಟು ಸಿನಿಕತೆಗೆ ಕಾರಣವಾಗುತ್ತದೆ ಎಂಬ ಆತಂಕದಿಂದಲೋ ಎಂಬಂತೆ, ಕೆಲವು ಸಣ್ಣ ಸ್ಥಳೀಯ ಪ್ರಯತ್ನಗಳನ್ನು ಹಿಗ್ಗಿಸಿ ಹೇಳಲಾಯಿತು. ಅಂತಹ ಪ್ರಯತ್ನಗಳನ್ನು ದೇಶವ್ಯಾಪಿಯಾಗಿಸಲು ಇರುವ ಸ್ಥಾಪಿತ ವ್ಯವಸ್ಥೆಯ ತೊಡಕುಗಳ ಮತ್ತು ಪ್ರತಿರೋಧಗಳ ಬಗ್ಗೆ ಮೌನ ವಹಿಸಲಾಯಿತು. ನೀತಿಯ ಮೂಲಭೂತ ಬದಲಾವಣೆಯ ಅಗತ್ಯಗಳಿಗೆ (ವಿಕಲಚೇತನರ ಬಗ್ಗೆ ಕಾನೂನು ಇತ್ಯಾದಿ ಕೆಲವೇ ಅಪವಾದಗಳನ್ನು ಬಿಟ್ಟರೆ) ಒತ್ತು ಕೊಡುವ ಪ್ರಶ್ನೆಯೇ ಇಲ್ಲ.

ಸಮಸ್ಯೆಯ ಸ್ವರೂಪ, ಮೂಲ ಕಾರಣದ ಅಧ್ಯಯನ ಹುಡುಕುವಿಕೆ, ಪರಿಹಾರ – ಇವೆಲ್ಲಾ ಹೆಚ್ಚಾಗಿ ಒಂದು ಅಥವಾ ಎರಡು ಈಗಾಗಲೇ ವಿದೇಶಿ-ಸ್ವದೇಶಿ ನಿಧಿ ಪಡೆಯುತ್ತಿರುವ (ಬಹುಶಃ ಕೆಲವು ಪಾರ್ಟ್‌ನರ್) ಎನ್.ಜಿ.ಒ.ಗಳತ್ತವೇ ಒಯ್ಯುತ್ತಿತ್ತು. ಇಂತಹುದೇ ಕೆಲಸದಲ್ಲಿ ಇನ್ನೂ ವ್ಯಾಪಕವಾಗಿ ಜನಜಾಗೃತಿ, ಕಾರ್ಯಾಚರಣೆಯಲ್ಲಿ ತೊಡಗಿರುವ ಸಾಮೂಹಿಕ ಸಂಘಟನೆಗಳ ಪ್ರಸ್ತಾಪ ಸಹ ಬರದ್ದು ಆಕಸ್ಮಿಕವೇನಲ್ಲ. ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ತೀವ್ರ ಪ್ರಚಾರ-ಪ್ರಕ್ಷೋಭೆಯಲ್ಲಿ ತೊಡಗಿರುವ ಜನವಾದಿ ಮಹಿಳಾ ಸಮಿತಿಯ ಪ್ರಸ್ತಾಪ ಸಹ ಬರಲಿಲ್ಲ. ಅದೇ ರೀತಿ ಔಷಧಿ ಬಗ್ಗೆ ಕಂತಿನಲ್ಲಿ ‘ಎಲ್ಲರಿಗೂ ಆರೋಗ್ಯ’ಕ್ಕೆ ವ್ಯಾಪಕವಾಗಿ ಕೆಲಸ ಮಾಡುತ್ತಿರುವ ‘ಜನ ಸ್ವಾಸ್ಥ್ಯ ಅಭಿಯಾನ್’ ಸದಸ್ಯ ಸಂಘಟನೆಗಳ (ಉದಾ: ಡ್ರಗ್ ಆಕ್ಶನ್ ನೆಟ್‌ವರ್ಕ್, ಭಾರತ ಜನ ವಿಜ್ಞಾನ ಸಮಿತಿ) ಬಗೆಗೂ ಸುದ್ದಿಯಿರಲಿಲ್ಲ.

ನಮ್ಮ ಸುಡುತ್ತಿರುವ ಸಮಸ್ಯೆಗಳ ಬಗ್ಗೆ ಟಿವಿ ಮಾಧ್ಯಮದಲ್ಲಿ ಅತ್ಯಂತ ಆಸಕ್ತಿಕಾರಕವಾಗಿ ಪ್ರಸ್ತುತ ಪಡಿಸಿದ್ದು, ಗಂಭೀರ ಕಾರ್ಯಕ್ರಮಗಳಿಗೂ ಟಿ.ಆರ್.ಪಿ. ಇದೆ ಎಂದು ತೋರಿಸಿದ್ದು, ಅದು ವ್ಯಾಪಕವಾಗಿ ತಲುಪುವಂತೆ ತಟ್ಟುವಂತೆ ತೀವ್ರ ಮಾರ್ಕೆಟಿಂಗ್ ಮಾಡಿದ್ದು – ‘ಸತ್ಯಮೇವ ಜಯತೆ’ಯ ಸಕಾರಾತ್ಮಕ ಅಂಶ ಎಂಬುದುಕ್ಕೆ ಯಾವುದೇ ಸಂಶಯವಿಲ್ಲ. ಹಲವು ಕಡೆ ಅಧಿಕಾರಿಗಳು, ಸರ್ಕಾರಗಳು ಕಾರ್ಯಪ್ರವೃತ್ತರಾಗುವಂತೆ ಮಾಡಿದ್ದು ಇದೆ. ‘ಸತ್ಯಮೇವ ಜಯತೆ’ಯ ವೆಬ್ ಸೈಟಿನ ಅಂಕಿ ಅಂಶಗಳ ಪ್ರಕಾರ 1.3 ಕೊಟಿ ಪ್ರತಿಕ್ರಿಯೆ, 3.6 ಕೋಟಿ ವಂತಿಗೆ ಸಂಗ್ರಹವಾಗಿದೆ. 84 ಲಕ್ಷ ಜನ ಸೈಟಿನ ಸದಸ್ಯರಾಗಿ, 11 ಕೋಟಿ ಸಂಪರ್ಕಗಳನ್ನು ಮಾಡಿದ್ದಾರೆ. ಇದರಲ್ಲಿ ಉತ್ಪ್ರೇಕ್ಷೆ ಇರಬಹುದಾದರೂ, ಅದು ಹಿಂದೆಂದಿಗಿಂತಲೂ ವ್ಯಾಪಕವಾಗಿ ತಲುಪಿದೆ. ಸಮಾಜದ ಒಂದು ಹೊಸ ವಿಭಾಗದ ಅದರಲ್ಲೂ ಯುವಜನರಲ್ಲಿ ಸಿನಿಕತೆ ಸಾಮಾಜಿಕ ನಿರ್ಲಕ್ಷ ಕಡಿಮೆ ಮಾಡಿ, ಸಾಮಾಜಿಕ ಪ್ರಜ್ಞೆ ಹೆಚ್ಚಿಸಿದೆ ಎಂಬುದು ನಿಜ.

ಆದರೆ ‘ಸತ್ಯಮೇವ ಜಯತೆ’ಯ ಒಟ್ಟಾರೆ ಧ್ವನಿ ಬಹಳ ಜನ ಅಂದುಕೊಂಡಂತೆ ಜನಜಾಗೃತಿ ಮೂಡಿಸುವ, ವ್ಯವಸ್ಥೆ ಪ್ರಶ್ನಿಸುವ, ಬದಲಾವಣೆಗೆ ಕಾರ್ಯ ಪ್ರವೃತ್ತರಾಗಲು ಸಜ್ಜು ಮಾಡುವಂತಹುದಲ್ಲ. ಸಮಸ್ಯೆಯ ಬಗ್ಗೆ ಜನ ಭಾವನಾತ್ಮಕವಾಗಿ ಸ್ಪಂದಿಸುವಂತೆ (ಅಳುವಂತೆ ಮರುಕ ಪಡುವಂತೆ) ಮಾಡಿ, ಅದಕ್ಕೆ ಭಾಗಶಃ ಅಥವಾ ಹುಸಿ ಪರಿಹಾರ ಕೊಡುವಂತಹುದು. ವ್ಯವಸ್ಥೆ ಪ್ರಶ್ನೆ ಮಾಡದೆ ಅದರ ಒಳಗೆ ತೇಪೆ ಹಾಕಿದರೆ ಸಾಕು ಎನ್ನುವಂತಹುದು. ಹೆಚ್ಚೆಂದರೆ ಹಿಂದಿನಿಂದಲೂ ಬಂದ ‘ದಾನ-ಧರ್ಮ ಮಾಡಿ. ಪಾಪಪ್ರಜ್ಞೆ ಕಳೆದುಕೊಳ್ಳಿ’ ಎಂದು ಹೇಳುವಂತಹುದು. ‘ಜನಕಲ್ಯಾಣ ಪಾರ್ಟನರ್’ ರಿಲಾಯನ್ಸ್ ಫೌಂಡೇಶನು ತನ್ನ ಲಾಭಕೋರತನ ಮುಚ್ಚಿಕೊಳ್ಳಲು ಸಹಾಯ ಮಾಡುವಂತಹುದು. ಮಾತ್ರವಲ್ಲ ಏರ್‌ಟೆಲ್ ಮುಂತಾದ ಹಲವು ಕಂಪನಿಗಳಿಗೆ -ಅಮೀರ್ ಖಾನ್ ಕಂಪನಿ ಸೇರಿದಂತೆ-ಇನ್ನಷ್ಟು ಹಣ ಪ್ರತಿಷ್ಟೆ ಬ್ರಾಂಡ್ ಮೌಲ್ಯ ಗಳಿಸಿಕೊಡುವಂತಹುದು. ಎನ್.ಜಿ.ಒ.ಗಳೇ ಎಲ್ಲಕ್ಕೂ ಪರಿಹಾರ ಒದಗಿಸಬಲ್ಲವು ಎಂದು ನಂಬಿಸುವಂತಹುದು.