Daily Archives: July 28, 2012

ಎಲ್ಲಾ ಓ.ಕೆ. ಆತ್ಮಹತ್ಯೆ ಯಾಕೆ?


-ಡಾ.ಎಸ್.ಬಿ. ಜೋಗುರ


ಶಕ್ತಿ ಮತ್ತು ಚೈತನ್ಯದ ಸಂಕೇತವಾಗಿರುವ ಯುವಜನತೆ ಈಗೀಗ ಒಂದು ಬಗೆಯ ಮಾನಸಿಕ ಒತ್ತಡಕ್ಕೆ ಸಿಲುಕಿರುವುದಿದೆ. ಎಳಕು ಬುದ್ಧಿಯ ಹುಡುಗಾಟದ ಪ್ರೀತಿ-ಪ್ರೇಮ, ಮದ್ಯ ಹಾಗೂ ಮಾದಕ ವ್ಯಸನದ ಸಹವಾಸ, ಸಾಮಾಜಿಕ ಮತ್ತು ಸಾಂಸ್ಕೃತಿಕ ಗೊಂದಲಗಳ ಸುಳಿಗೆ ಸಿಲುಕಿ ನೂರ್ಕಾಲ ಬದುಕಿ ಬಾಳುವ ಎಲ್ಲ ಸಾಧ್ಯತೆಗಳಿರುವಾಗಲೂ ಜೀವನಕ್ಕೆ ಪೂರ್ಣ ವಿರಾಮ ಇಡುವ ಪರಿಪಾಠಗಳು ಹೆಚ್ಚುತ್ತಿರುವುದು ನಾಗರಿಕ ಸಮಾಜದ ದುರಂತವೇ ಹೌದು. ಬೆಂಗಳೂರಿನಂಥಾ ಮಹಾನಗರಗಳು ದಿನವೊಂದಕ್ಕೆ ಇಬ್ಬರು ಯುವಕರ ಆತ್ಮಹತ್ಯೆಗೆ ಸಾಕ್ಷಿಯಾಗುತ್ತಿವೆ. ಆ ಹುಡುಗ ಇಂಜನಿಯರಿಂಗ್ ತಾನು ಇಷ್ಟ ಪಟ್ಟ ಯುವತಿ ತನಗೆ ಸಿಗಲಿಲ್ಲವೆಂದು ಮನನೊಂದು ವಿಷಸೇವಿಸಿದ ಅವನನ್ನು ಉಳಿಸಲು ಹರಸಾಹಸ ಮಾಡಿದ ಮೇಲೂ ಆತ ಕೊನೆಯುಸಿರೆಳೆದ.

ತೀರ ಇತ್ತೀಚಿಗೆ ಉತ್ತರಪ್ರದೇಶದಲ್ಲಿ ಒಬ್ಬ ಯುವಕ ಸಿನಿಮೀಯ ರೀತಿಯಲ್ಲಿ ಆತ್ಮಹತ್ಯೆಯನ್ನು ಮಾಡಿಕೊಂಡ. ತಾನು ಪ್ರೀತಿಸಿದ ಹುಡುಗಿಯೊಬ್ಬಳು ಶಾಪಿಂಗ್ ಮಾಲ್‌ನಲ್ಲಿ  ಇನ್ನೊಬ್ಬ ಯುವಕನೊಂದಿಗೆ ಸುತ್ತಾಡುವ. ಲಲ್ಲೆಹೊಡೆಯುವುದನ್ನು ಕಂಡು ಹೈರಾಣಾದ ಆ ಹುಡುಗ ತನ್ನ ಹುಡುಗಿಗೆ ದೂರವಾಣಿ ಕರೆ ಮಾಡಿ ವೆಬ್ ಕ್ಯಾಮರಾ ಆನ್ ಮಾಡಲು ಹೇಳಿ, ಆಕೆ ನೋಡ ನೋಡುತ್ತಿರುವಂತೆಯೆ ತನ್ನ ಮನೆಯಲ್ಲಿ ನೆಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ. ಆ ವಿದ್ಯಾರ್ಥಿ ಇಂಜನಿಯರಿಂಗ್ ಓದುತ್ತಿದ್ದ. ಇಂಥಾ ಅನೇಕ ಘಟನೆಗಳು ಪ್ರತಿನಿತ್ಯ ಇಡೀ ದೇಶದ ತುಂಬಾ ಜರುಗುವುದಿದೆ. ಯುವಕರನ್ನು 15-24 ವರ್ಷ ವಯೋಮಿತಿಯ ಒಳಗಿನವರೆಂದು ಗುರುತಿಸಲಾಗುತ್ತದೆ. ಈ ವಯೋಮಿತಿಯವರ ಪ್ರಮಾಣ ಬೇರೆ ರಾಷ್ಟ್ರಗಳಿಗಿಂತಲೂ ನಮ್ಮಲ್ಲಿ ಹೆಚ್ಚಿಗಿದೆ. ಅವರನ್ನು ಸರಿಯಾಗಿ ರೂಪಿಸಿದ್ದೇಯಾದರೆ ಈ ದೇಶದ ಆರ್ಥಿಕ ಸ್ಥಿತಿಗತಿಗಳ ವಿದ್ಯಮಾನವೇ ಬದಲಾಗಲಿದೆ.

ಅತಿ ಮುಖ್ಯವಾಗಿ ಯುವಕರು ತಪ್ಪುತ್ತಿರುವುದು ಪ್ರೀತಿ ಪ್ರೇಮದ ವಿಷಯದಲ್ಲಿ. ಅವರ ಮುಂದೆ ಸರಿಯಾದ ಮಾದರಿಗಳಾಗಲೀ. ಮಾರ್ಗದರ್ಶನವಾಗಲೀ ಇಲ್ಲ. ಪೀಳಿಗೆಯ ಅಂತರದ ಹಿನ್ನೆಲೆಯಲ್ಲಿ ಪಾಲಕರು ಕೂಡಾ ಅಷ್ಟಾಗಿ ತಮ್ಮ ಮಕ್ಕಳನ್ನು ಅರಿಯುವಲ್ಲಿ ಸಾಧ್ಯವಾಗುತ್ತಿಲ್ಲ. ಪರಿಣಾಮವಾಗಿ ಯಾವುದೊ ಒಂದು ಚಲನಚಿತ್ರದ ನಾಯಕನಟ ಇಲ್ಲವೇ ನಟಿ, ಕ್ರಿಕೆಟ್ ಆಟಗಾರ ಇಲ್ಲವೇ ರಿಯಾಲಿಟಿ ಶೋಗಳಲ್ಲಿ ಬರುವ ಪಾತ್ರ ಒಂದರ ಪ್ರಭಾವಕ್ಕೆ ಸಿಲುಕುವ ಯುವಕರ ಮುಂದೆ ಅನೇಕ ಬಗೆಯ ಮಾನಸಿಕ ತಲ್ಲಣಗಳಿವೆ. ಅವರ ಹೆಗಲ ಮೇಲೆ ಕೈಯಿಟ್ಟು ಆಪ್ತವಾಗಿ ಅವರನ್ನು ಸ್ಪಂದಿಸುವ ಜರೂರತ್ತೀಗ ತೀರಾ ಹೆಚ್ಚಿದೆ. ಅನೇಕ ಬಗೆಯ ಮಾನಸಿಕ ತುಮುಲಗಳಿಂದ ಬಳಲುವ ನಮ್ಮ ಯುವಕರು ಅದರಿಂದ ಹೊರ ಬರುವ ಮಾರ್ಗವನ್ನಾಗಿ ಆತ್ಮಹತ್ಯೆಯನ್ನು ಆಯ್ಕೆು ಮಾಡಿಕೊಳ್ಳುತ್ತಿರುವುದು ವಿಷಾದವೇ ಹೌದು.

ಇಡೀ ವಿಶ್ವದಾದ್ಯಂತ ಯುವಜನತೆ ಈ ಬಗೆಯ ತಲ್ಲಣಗಳಿಗೆ ಒಳಗಾದರೂ ಭಾರತದ ಸಂದರ್ಭ ಬೇರೆಯೆ ಆಗಿರುತ್ತದೆ. ಇಂದಿಗೂ ನಮ್ಮಲ್ಲಿ ಪ್ರೀತಿ, ಪ್ರೇಮ ಎನ್ನುವುದು ಒಂದು ಮೌಲ್ಯವಾಗಿಯೆ ಕೆಲಸಮಾಡುತ್ತದೆ. ಪ್ರೀತಿಸಿದ ನಂತರ ಒಬ್ಬಳಿ[ನಿ]ಗೆ ನಿಷ್ಟರಾಗಿರಬೇಕಾದ ಮನ:ಸಾಕ್ಷಿಗೆ ಬೆಲೆಯಿರುವುದು ನಮ್ಮ ನೆಲದಲ್ಲಿ ಮಾತ್ರ. ಚಲನಚಿತ್ರಗಳು, ದೂರದರ್ಶನಗಳು ಎಂಥದೇ ಮಸಾಲಾ ಚಿತ್ರವನ್ನು ನಿರ್ಮಿಸಿದರೂ ಈ ಸೂತ್ರದಿಂದ ವಿಚಲಿತವಾಗಿರುವುದಿಲ್ಲ. ಅತ್ಯಂತ ಚಂಚಲವಾಗಿರುವ ಯುವಕ, ಯುವತಿಯರಿಗೆ ಈ ಬಗೆಯ ಬದ್ಧತೆ ಎನ್ನುವುದು ಯಾವುದೋ ಕಾಲದ ಸರಕಾಗಿ ಕಾಣುವುದು. ಬದ್ಧತೆಯನ್ನೇ ಅವಲಂಬಿಸಿ ಪ್ರೀತಿಸಬೇಕೆನ್ನುವವನಿಗೆ ದಿನಕ್ಕೆ ಮೂರು ಬಾಯ್ ಫ್ರೆಂಡಗಳನ್ನು ಬದಲಾಯಿಸುವ ಹುಡುಗಿ ಸಿಕ್ಕರೆ ಮುಗಿಯಿತು. ಅಲ್ಲಿಗೆ ಅವನ ಮನೋತುಮುಲಗಳು ಇಮ್ಮಡಿಯಾಗಲಿಕ್ಕೆ ಆರಂಭವಾಗುತ್ತವೆ.

ಒಂದು ಅಧ್ಯಯನದಂತೆ ಬಡ ಕುಟುಂಬದಿಂದ ಬಂದ ಯುವಕ ಮತ್ತು ಯುವತಿಯರಿಗಿಂತಲೂ ಶ್ರೀಮಂತ ಕುಟುಂಬದ ಸಂತಾನವೇ ಹೆಚ್ಚೆಚ್ಚು ಈ ಬಗೆಯ ಆತ್ಮಹತ್ಯೆಗೆ ಮನಸು ಮಾಡುವ ರೀತಿಯನ್ನು ಅನೇಕ ಅಧ್ಯಯನಗಳು ತೋರಿಸಿಕೊಟ್ಟಿವೆ. ಫ್ರಾನ್ಸ್ ದೇಶದ ಚಿಂತಕ ಮತ್ತು ಸಮಾಜಶಾಸ್ತ್ರಜ್ಞ ಈ ವಿಷಯವನ್ನು ಮೊದಲೇ ಪ್ರತಿಪಾದನೆ ಮಾಡಿರುವುದಿದೆ. ಶ್ರೀಮಂತ ಕುಟುಂಬಗಳಲ್ಲಿ, ವಿಭಕ್ತ ಕುಟುಂಬಗಳಲ್ಲಿ, ಅವಿವಾಹಿತರಲ್ಲಿ ಈ ಬಗೆಯ ಆತ್ಮಹತ್ಯೆಯ ಪ್ರಮಾಣಗಳು ಹೆಚ್ಚು ಎನ್ನುವುದನ್ನು ಆತ ತನ್ನ ಆತ್ಮಹತ್ಯಾ ಸಿದ್ಧಾಂತದಲ್ಲಿ ಚರ್ಚಿಸಿರುವುದಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಪರಿಸರ ಅತ್ಯಂತ ಕಲುಷಿತವಾಗುತ್ತಿದೆ. ಪ್ರತಿಯೊಂದನ್ನು ವಕ್ರವಾಗಿಯೆ ನೋಡುವ, ವ್ಯಂಗ್ಯವಾಗಿಯೆ ಪ್ರತಿಕ್ರಿಯಿಸುವ ಸಮಷ್ಟಿಯ ಗುಣದ ನಡುವೆ ಮನಸುಗಳು ಅತೃಪ್ತಗೊಳ್ಳುವುದು ಸಹಜವೇ..

ಇನ್ನೊಂದೆಡೆ ಹಿಂದಿನಂತೆ ಇಂದು ಕೌಟುಂಬಿಕ ಪರಿಸರವೂ ಹಿತಕರವಾಗಿಲ್ಲ. ತೀರಾ ಸಣ್ಣ ಸಣ್ಣ ಕಾರಣಕ್ಕೆ ವಿಚ್ಚೇದನ ಬಯಸುವ ದಂಪತಿಗಳ ನಡುವೆ ಈ ಬಗೆಯ ಅಸಂತುಷ್ಟ ಮಕ್ಕಳಿಗೆ ಬದುಕಿನ ಭರವಸೆಯನ್ನು ನೀಡುವವರಾದರೂ ಯಾರು..? ಬೇರೆ ರಾಷ್ಟ್ರಗಳ ಜೊತೆಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಮನೋವೈದ್ಯರ ಪ್ರಮಾಣವೂ ತೀರಾ ಕಡಿಮೆ. ಒಟ್ಟು ಜನಸಂಖ್ಯೆಯನ್ನು ಇಟ್ಟುಕೊಂಡು ನೋಡಿದರೆ ಆ ವೈದ್ಯರ ಪ್ರಮಾನ 5 ಸಾವಿರವೂ ದಾಟುವುದಿಲ್ಲ. ಯುವಕರು ಹಿಂದೆಂದಿಗಿಂತಲೂ ಇಂದು ಹೆಚ್ಚು ಅತೃಪ್ತಗೊಂಡಿರುವುರು. ಅದಕ್ಕೆ ಮುಖ್ಯ ಕಾರಣ ಸಮಾಜದ ರೋಗಗ್ರಸ್ಥ ಸ್ಥಿತಿ, ಮದ್ಯಸೇವನೆ, ಮಾದಕ ವ್ಯಸನ, ಸಾಂಸ್ಕೃತಿಕ ಗೊಂದಲ ಇವೇ ಮುಂತಾದವುಗಳನ್ನು ಹೇಳಬಹುದಾದರೂ ಇವುಗಳಲ್ಲಿ ಅತಿ ಮುಖ್ಯವಾಗಿ ಮಾನಸಿಕ ತುಮುಲವೂ ಒಂದು ಕಾರಣ ಎಂದು ಹೇಳಬಹುದು. ಅತಿಯಾದ ವ್ಯಕ್ತಿ ಸ್ವಾತಂತ್ರ್ಯವೂ ಈ ದಿಶೆಯಲ್ಲಿ ಇನ್ನೊಂದು ಪ್ರಮುಖ ಕಾರಣವಾಗಬಹುದು. ಹೇಳುವವರು ಕೇಳುವವರು ಯಾರೂ ಇಲ್ಲವೆಂತಾದಾಗ ವ್ಯಕ್ತಿಗೆ ಬೇರು ಕಿತ್ತಿದ ಭಾವನೆ ಮೂಡತೊಡಗುತ್ತದೆ ಅದು ಬೆಳೆದು ಬಲಿತಾಗ ಆತ್ಮಹತ್ಯೆಯಂಥಾ ನಿರ್ಧಾರ ಸಾಧ್ಯವಾಗುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿವರ್ಷ ಒಂದು ಮಿಲಿಯನ್ ಜನ ವಿಶ್ವದಲ್ಲಿ ಆತ್ಮಹತ್ಯೆ ಮಾಡಿಕೊಂಡರೆ ದರಲ್ಲಿ ಚೀನಾ ದೇಶ ಒಂದರಲ್ಲಿಯೆ ಸುಮಾರು 2ಲಕ್ಷ ಜನ ಆತ್ಮಹತ್ಯೆ ಮಾಡಿಕೊಳ್ಳುವುದಿದೆ. ಭಾರತದಲ್ಲಿ ಆ ಪ್ರಮಾಣ 187000 ಸಾವಿರದಷ್ಟಿದೆ. ಜನಸಂಖ್ಯೆಯ ಹಾಗೆ ಆತ್ಮಹತ್ಯೆಯಲ್ಲಿಯೂ ಎರಡೂ ರಾಷ್ಟ್ರಗಳು ಮೊದಲ ಹಾಗೂ ಎರಡನೆಯ ಸ್ಥಾನದಲ್ಲಿವೆ. 2011 ರ ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗದ ಅಂಕಿ ಅಂಶಗಳ ಪ್ರಕಾರ ಇಡೀ ದೇಶದಲ್ಲಿ ಬೆಂಗಳೂರು ಆತ್ಮಹತ್ಯಾ ನಗರವಾಗಿ ಎರಡನೆಯ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಚೆನೈ [2348], ಎರಡನೆಯ ಸ್ಥಾನದಲ್ಲಿ ಬೆಂಗಳೂರು [1717], ಮೂರನೇಯ ಸ್ಥಾನದಲ್ಲಿ ದೆಹಲಿ [1385], ನಾಲ್ಕನೆಯ ಸ್ಥಾನದಲ್ಲಿ ಮುಂಬೈ  [1162] ಇದೆ.

ಈ ಬಗೆಯ ಆತ್ಮಹತ್ಯೆಗೆ ಹತ್ತಾರು ಕಾರಣಗಳಿದ್ದರೂ ಅತಿ ಮುಖ್ಯವಾದ ಕಾರಣ ಮಾನಸಿಕ ಸಂಗತಿಗಳ ಜೊತೆಗೆ ಎಳಸು ಬುದ್ಧಿಯ ಪ್ರೀತಿ ಪ್ರೇಮದ ಅಮಲು. ಪ್ರಾಯ ಅದೇ ತಾನೇ ಮೂಡುವ ವೇಳೆಯಲ್ಲಿ ತಾನು ಪ್ರೀತಿಯಲ್ಲಿ ಸೋತೆ ಎನ್ನುವುದನ್ನು ಜೀವನದಲ್ಲಿಯೇ ಸೋತೆ ಎಂದು ತಿಳಿದು ಆತ್ಮಹತ್ಯೆ ಮಾಡಿಕೊಳ್ಳುವುದು ಮೂರ್ಖತನ. ಪ್ರೀತಿಯ ಸುಖ ಪಡೆಯುವುದಕ್ಕಿಂತಲೂ ಕೊಡುವುದರಲ್ಲಿಯೆ ಹೆಚ್ಚು. ಒನ್ ವೇ ಪ್ರೀತಿ ಯಾವ ಕಾರಣಕ್ಕೂ ಸರಿಯಲ್ಲ. ಈ ದಿಶೆಯಲ್ಲಿ ಹೆಚ್ಚೆಚ್ಚು ಮನೋವೈದ್ಯರನ್ನು ಈ ಬಗೆಯ ಮನಸ್ಥಿತಿಯವರ ಸಲಹೆಗಾಗಿ ನೇಮಿಸಬೇಕು. ಪ್ರತಿ ಹೈಸ್ಕೂಲು ಮತ್ತು ಕಾಲೇಜುಗಳಲ್ಲಿ ಸಲಹಾಕೇಂದ್ರಗಳನ್ನು ಸ್ಥಾಪಿಸಬೇಕು. ಮಾನಸಿಕ ಕಿರಿಕಿರಿ ಮತ್ತು ಯಾತನೆಗೊಳಗಾದವರ ಮಾತುಗಳನ್ನು ಆಪ್ತವಾಗಿ ಎದೆಗೆ ಹಚ್ಚಿಕೊಂಡು ಕೇಳುವ, ಪರಿಹಾರ ಸೂಚಿಸುವ ಕೆಲಸ ಮನೆ, ಶಾಲೆ, ಕಾಲೇಜುಗಳಲ್ಲಿ ನಡೆಯಬೇಕಿದೆ. ಮುಖ್ಯವಾಗಿ ಕಾಲೇಜು ಹಂತದಲ್ಲಿ ಈ ಜೀವನ ಪ್ರೀತಿ ಬೆಳೆಸಬಹುದಾದ ಒಂದು ಪಠ್ಯಕ್ರಮವನ್ನು ಕಡ್ಡಾಯವಾಗಿ ಅಳವಡಿಸುವ ಮೂಲಕ ತಕ್ಕ ಮಟ್ಟಿಗೆ ಈ ಆತ್ಮಹತ್ಯೆಯನ್ನು ನಿಯಂತ್ರಿಸಬಹುದಾಗಿದೆ.