ಬೇತಾಳ ಹೇಳಿದ ಯಡ್ಡೀಜಿಯ ಹೋರಾಟದ ವರಸೆ


-ಚಿದಂಬರ ಬೈಕಂಪಾಡಿ


 

ತ್ರಿವಿಕ್ರಮ ಹೆಗಲ ಮೇಲೆ ಬೇತಾಳನನ್ನು ಹೊತ್ತು ವಿಧಾನ ಸೌಧವನ್ನು ಹಾದು ಮೆಜೆಸ್ಟಿಕ್ ಬಸ್ ನಿಲ್ದಾಣದ ಹಾದಿಯಲ್ಲಿ ನಡೆದು ಬರುತ್ತಿದ್ದ. ನೀರವ ರಾತ್ರಿಯಲ್ಲಿ ಗಹಗಹಿಸಿ ನಕ್ಕ ಬೇತಾಳ ಎಲೈ ತ್ರಿವಿಕ್ರಮ ನಿನ್ನ ಛಲವನ್ನು ಕೊಂಡಾಡುತ್ತೇನೆ. ಕಮಲ ನಾಯಕ, ಆರೂವರೆ ಕೋಟಿ ಕನ್ನಡಿಗರ ಮನದಾಳದಲ್ಲಿ ಮನೆಮಾಡಿರುವ ಛಲದಂಕ ಮಲ್ಲ ಹಠಯೋಗಿ ಯಡ್ಡೀಜಿಯವರೂ ನಿನ್ನನ್ನು ಅನುಕರಣೆ ಮಾಡುತ್ತಿದ್ದಾರೇನೋ ಅನ್ನಿಸುತ್ತಿದೆ, ಆದ್ದರಿಂದ ಅವರ ಕತೆಯನ್ನೇ ಹೇಳುತ್ತೇನೆ, ಸಾವಧಾನವಾಗಿ ಕೇಳು ನಿಧಾನವಾಗಿ ನಡೆಯುತ್ತಿರುವ ನಿನ್ನ ಆಯಾಸವೂ ನಿವಾರಣೆಯಾಗಬಹುದು.

ಹುಟ್ಟೂರು ಬೂಕನಕೆರೆ, ಬೆಳೆದು ದೊಡ್ಡವರಾಗಿ ರಾಜಕೀಯದ ಪಟ್ಟುಗಳನ್ನು ಕಲಿತದ್ದೂ ಶಿವಮೊಗ್ಗ ಎಂಬ ಸಮಾಜವಾದಿ ಮಣ್ಣಲ್ಲಿ ಎನ್ನುವುದು ನಿನಗೂ ಗೊತ್ತು. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಯಡ್ಡೀಜಿ ಶಿಕಾರಿಪುರದ ಸೋಲಿಲ್ಲದ ಸರದಾರನಾಗಿ ರಾಜಕೀಯಕ್ಕೆ ಎಂಟ್ರಿಕೊಟ್ಟದ್ದೇ ಹೋರಾಟದ ಮೂಲಕ ಎನ್ನುವುದು ಅವರು ಇಂದಿಗೂ ಮಾಡುತ್ತಿರುವ ಪಕ್ಷದ ಒಳಗೆ ಮತ್ತು ಹೊರಗಿನ ಹೋರಾಟವೇ ಸಾಕ್ಷಿ. ಇಂಥ ಹೋರಾಟವನ್ನು ಕಮಲ ಪಾಳೆಯದಲ್ಲಿ ಇಲ್ಲಿಯವರೆಗೆ ಯಾರೂ ಮಾಡಿಲ್ಲ, ಮುಂದೆ ಮಾಡುವವರು ಬಂದರೂ ಇವರೇ ಗುರುಗಳು ಎನ್ನುವುದರಲ್ಲಿ ಅನುಮಾನ ಬೇಡ.

ಕರ್ನಾಟಕದ ರಾಜಕೀಯ ಇತಿಹಾಸದ ಮೇಲೆ ಕಣ್ಣಾಡಿಸಿದರೆ 1980ರ ತನಕ ಕಮಲ ಅರಳಿರಲಿಲ್ಲ. ಆನಂತರ ಪುಟ್ಟ ಮಕ್ಕಳಿಗೆ ಒಂದೊಂದೇ ಹಲ್ಲು ಮೊಳಕೆಯೊಡೆಯುವಂತೆ ಮೊಳಕೆಯೊಡೆದವು ಕಮಲ ಕ್ಷೇತ್ರಗಳು. ಅವುಗಳ ಪೈಕಿ ಶಿಕಾರಿಪುರವೂ ಒಂದು ಯಡಿಯೂರಪ್ಪ ಅವರೂ ಒಬ್ಬರು. ದೊಡ್ಡ ಪ್ರಯಾಣದ ಆರಂಭ ಮೊದಲ ಹೆಜ್ಜೆ ಎನ್ನುವಂತೆ ಶುಭಾರಂಭವಾದ ಕಮಲಯಾನ ವಿಧಾನ ಸೌಧದ ಅಧಿಕಾರ ಸೂತ್ರ ಹಿಡಿಯುವುದರೊಂದಿಗೆ ದಕ್ಷಿಣ ಭಾರತದ ಮೊಟ್ಟಮೊದಲ ಕಮಲ ಸರ್ಕಾರದ ಜನ್ಮದಾತ ಯಡ್ಡೀಜಿ ಎನ್ನುವುದು ಹಳ್ಳಿಯಿಂದ ದಿಲ್ಲಿವರೆಗೂ ಗೊತ್ತು. ಮಣ್ಣಿನಮಗ ದೊಡ್ಡಗೌಡರ ಸುಪುತ್ರ ಕುಮಾರಣ್ಣ ಕಮಲವನ್ನು ಕಿವಿಮೇಲಿಟ್ಟುಕೊಂಡು ವಿಧಾನಸೌಧದ ಮೆಟ್ಟಿಲೇರಿದರು, ಹೂವಿನೊಂದಿಗೆ ದಾರವೂ ಸ್ವರ್ಗಸೇರಿತು ಎನ್ನುವ ಕಿಚ್ಚಾಯಿಸುವ ಟೀಕೆಗಳೂ ಇವೆ ಅದರ ಬಗ್ಗೆ ನೀನು ತಲೆಕೆಡಿಸಿಕೊಳ್ಳಬೇಡ.

ಅಧಿಕಾರ ಸೂತ್ರ ಹಿಡಿಯುವುದು ಅದೆಷ್ಟು ಕಷ್ಟವೆಂದು ಯಡ್ಡೀಜಿ ಅವರಷ್ಟು ಸೊಗಸಾಗಿ ಬೇರೆ ಯಾರೂ ಹೇಳಲಾರರು. ರೆಡ್ಡಿ ಬ್ರದಸರ್ ಹೆಗಲಿಗೆ ಕೈ ಹಾಕಿ ಬಳ್ಳಾರಿ ಜನರಿಗೆ ಕಮಲ ಮುಡಿಸಿ ಪಕ್ಷೇತರರ ಕಿವಿ ಮೇಲೂ ಕಮಲ ಇಟ್ಟು ಮುಖ್ಯಮಂತ್ರಿಯಾಗಲು ಘಟ್ಟಪ್ರಭಾ ನದಿಯಲ್ಲಿ ಹರಿದುಹೋದ ಮಳೆ ನೀರಿನಂತೆ ಧನಲಕ್ಷ್ಮಿ ಕರ್ನಾಟಕದಾದ್ಯಂತ ಹರಿದಳು ಎನ್ನುವುದನ್ನು ಲಕ್ಷ್ಮೀನಾರಾಯಣರು ಬಹಿರಂಗವಾಗಿ ಹೇಳಿದರೂ ಯಾರೂ ನಂಬಲಿಲ್ಲ. ಯಾಕೆಂದರೆ ಸತ್ಯವನ್ನು ಸತ್ಯವಂತರೇ ಹೇಳಬೇಕು ಜೈಲು ಸೇರಿದರೂ ಸುಳ್ಳಾಡಬಾರದು ಎನ್ನುವುದು ನಿಯಮ. ಜನ ಐದು ವರ್ಷ ರಾಜ್ಯಭಾರ ಮಾಡಲು ಯಡ್ಡೀಜಿಯವರ ಕಮಲಪಾಳೆಯಕ್ಕೆ ಆಶೀರ್ವಾದ ಮಾಡಿದರು, ಅವರ ಆಣತಿಯಂತೆ ಕಮಲ ಕಮಾಂಡು ಪಟ್ಟಕಟ್ಟಿತು. ಮೂರು ವರ್ಷ ಎಲ್ಲವೂ ಸರಿಯಾಗಿಯೇ ಇತ್ತು. ಲೋಕಾಯುಕ್ತರು ’ಸಂತೋಷ’ದಿಂದಲೇ ತನಿಖೆ ಮಾಡಿಕೊಟ್ಟ ಭೂಮಾತೆಯ ಮಾರಾಟ ದಂಧೆಯಿಂದ ಭೂಮಿತಾಯಿ ಮಕ್ಕಳ ಏಳಿಗೆಗಾಗಿಯೇ ನಾಲ್ಕು ದಶಕಗಳ ಕಾಲ ಹೋರಾಟ ಮಾಡಿಕೊಂಡು ಬಂದ ಯಡ್ಡೀಜಿ ಅವರನ್ನು ಅಧಿಕಾರದ ಕುರ್ಚಿಯಿಂದ ಬಲವಂತವಾಗಿ ಇಳಿಸಿದ್ದನ್ನು ಮರೆಯಲು ಸಾಧ್ಯವೇ?. ರಾಜ್ಯವನ್ನಾಳಿದ ಮುಖ್ಯಮಂತ್ರಿಯನ್ನು ಪರಪ್ಪನ ಅಗ್ರಹಾರದ ಕೈದಿಗಳ ಕೋಣೆಯಲ್ಲಿಟ್ಟರು ಮುಲಾಜಿಲ್ಲದೆ ಎನ್ನುವ ಕಾರಣಕ್ಕೆ ನ್ಯಾಯದಾನದಲ್ಲಿ ಜನರು ವಿಶ್ವಾಸವಿಡಬಹುದು ಅಂದುಕೊಂಡರೂ ಕಂಸನನ್ನು ವಧಿಸಲು ಶ್ರೀಕೃಷ್ಣ ಪರಮಾತ್ಮ ಜನ್ಮ ತಳೆದದ್ದೂ ಜೈಲಿನಲ್ಲೇ ಎನ್ನುವುದು ಸಮಾಧಾನ.

ಹಗಲೂ ರಾತ್ರಿಯೆನ್ನದೆ, ಮಳೆ, ಬಿಸಿಲು, ಬಿರುಗಾಳಿಯನ್ನದೆ ಕಣ್ಣಿಗೆ ಬಂದಷ್ಟು ನಿದ್ದೆ ಮಾಡಿಕೊಂಡು ಪಕ್ಷ ಬೆಳೆಸಿ, ಅಧಿಕಾರಕ್ಕೆ ತಂದ ಯಡ್ಡೀಜಿ ಸಾಮಾನ್ಯ ವ್ಯಕ್ತಿಯಲ್ಲ ದೊಡ್ಡ ಶಕ್ತಿ ಎನ್ನುವುದು ಜಗಜ್ಜಾಹೀರಾಗಿದೆ. ಸಿಎಂ ಕುರ್ಚಿಯಿಂದ ಇಳಿಯುವಾಗ ಸದಾನಂದ ಗೌಡರನ್ನು ಕೈಹಿಡಿದು ಕುಳ್ಳಿರಿಸಿದ ಯಡ್ಡೀಜಿಯನ್ನು ನಗುನಗುತ್ತಲೇ ಅನಾಮತ್ತಾಗಿ ಕೈಬಿಟ್ಟ ಕರುಣಾಜನಕ ಕತೆಯನ್ನು ಇಡೀ ದೇಶ ಮರೆತರೂ ಯಡ್ಡೀಜಿಯಂತೂ ಮರೆಯಲು ಸಾಧ್ಯವೇ ಇಲ್ಲ. ಯಡ್ಡೀಜಿ ಹಾಕಿದ ಗುಟರಿಗೆ ದಿಲ್ಲಿ ಕಮಲ ಕಮಾಂಡ್‌ನಲ್ಲಿ ಭೂಕಂಪವಾಯಿತು. ತನ್ನ ಮುಂದೆ ಹೈಕಮಾಂಡೇ ಕೈಕಟ್ಟಿ ಕುಳಿತುಕೊಳ್ಳುವಂತೆ ಮಾಡಿದ್ದು ಅವರ ಶಕ್ತಿಯ ಅನಾವರಣ.

ಸ್ವಂತಕ್ಕೆ ಸ್ವಲ್ಪ ಊರವರಿಗೆ ಸರ್ವಸ್ವ ಎನ್ನುವ ಮಾತನ್ನು ಪಾಲಿಸಿಕೊಂಡೇ ಬಂದವರು ತಾವು ಎಂದು ಯಡ್ಡೀಜಿ ಜೈಲಿನಲ್ಲಿ ಒಂಟಿಯಾಗಿದ್ದಾಗಲೂ ಹೇಳುತ್ತಲೇ ಬಂದರೂ ಯಾರೂ ಕೇಳುವ ಸ್ಥಿತಿಯಲ್ಲಿಲ್ಲ ಮತ್ತು ಇದನ್ನೆಲ್ಲಾ ಕೇಳಲೇಬೇಕೆಂಬ ಕಡ್ಡಾಯ ಕಮಲದ ಸಂವಿಧಾನದಲ್ಲೂ ಇಲ್ಲವೆನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಅಲ್ಲದೇ ಅಧಿಕಾರದಲ್ಲಿದ್ದಾಗ ಮಾಡದೇ ಅಧಿಕಾರ ಹೋದ ಮೇಲೆ ಯಾರಿಗಾದರೂ ಮಾಡಲು ಸಾಧ್ಯವೇ? ಯೋಚಿಸು. ತಂದೆ, ಮಕ್ಕಳು, ಅಳಿಯ, ಸಂಬಂಧಿಗಳೆಲ್ಲರೂ ಕರ್ನಾಟಕವನ್ನು ಕೊಳ್ಳೆಹೊಡೆದರೆಂದು ಯಡ್ಡೀಜಿಯವರ ಮೇಲೆ ಗುರುತರವಾದ ಆಪಾದನೆಯಿದೆ. ಅದಕ್ಕೆಲ್ಲಾ ಹೆದರುವ ಜಾಯಮಾನ ಯಡ್ಡೀಜಿಯವರದ್ದಲ್ಲವೆಂದು ನಿನಗೆ ಗೊತ್ತಿರಲಿ. ನಡೆಯುವ ಕಾಲುಗಳು ಎಡವುದು ಸಹಜ ಎಂದು ಒಪ್ಪಿಕೊಳ್ಳುವುದಾದರೆ ಯಡ್ಡೀಜಿ ಕುರ್ಚಿಯಲ್ಲಿದ್ದಾಗ ಆಸೆಪಟ್ಟುಕೊಂಡು ಒಂದಷ್ಟು ನಾಳೆಗಿರಲೆಂದು ಬಾಚಿಕೊಂಡಿರಬಹುದು ಅಥವಾ ಬಾಚಿಕೊಳ್ಳುವಾಗ ಆತುರ ಆಗಿರಬಹುದು. ಸನ್ಯಾಸಿಗಳಿಗೂ ವ್ಯಾಮೋಹ ಒಂದು ಮೂಲೆಯಲ್ಲಿರುತ್ತದಂತೆ ಅಂಥದ್ದರಲ್ಲಿ ಉಪ್ಪು, ಹುಳಿ, ಖಾರ ತಿನ್ನುವ ಮನುಷ್ಯನಿಗೆ ವ್ಯಾಮೋಹವಿಲ್ಲದಿದ್ದರೆ ಸನ್ಯಾಸಿಯಾಗಿಬಿಡುವ ಅಪಾಯವಿದೆ. ಅಂಥ ಅಪಾಯ ಯಡ್ಡೀಜಿಯವರನ್ನು ಕಾಡಿರಬಹುದಲ್ಲವೇ?.

ಸಿಬಿಐ ದಾಳ ಉರುಳಿಸಿ ಕಂಬಿ ಎಣಿಸುವಂತೆ ಮಾಡಲು ಸಂಚು ನಡೆದಿದೆ ಎಂದು ಯಡ್ಡಿಜಿಯವರ ಪರಮಾಪ್ತ ರೇಣುವಾಣಿಯಾಗಿದೆ.  ಅಧಿಕಾರಕ್ಕೇರಲು ಏಣಿಯಾದ ಯಡ್ಡೀಜಿಯವರನ್ನೇ ಅಪರಾಧಿ, ಇನ್ನೂ ಏಳೆಂಟು ಕೇಸುಗಳಿರುವುದಾಗಿ ಸದಾನಂದ ಗೌಡರು ಮರಾಠಿ ನೆಲದಲ್ಲಿ ಹೇಳಿದರೆ ಮೀಡಿಯಾಗಳು ಕನ್ನಡದಲ್ಲೂ ಡಂಗುರ ಸಾರಿ ಮಾನ ಹರಾಜು ಮಾಡುವ ಸಂಚು ಮಾಡಿದ್ದು ಬಿಗ್ ಡಿಬೇಟ್‌ಗೆ ಯೋಗ್ಯ ವಿಚಾರ. ಅಂದುಕೊಂಡದ್ದನ್ನು ಸಾಧಿಸಿ ತೋರಿಸುವ ಛಲಗಾರ ಯಡ್ಡೀಜಿ ಎನ್ನುವುದಕ್ಕೆ ಮರಳಿ ಮರಳಿ ಯತ್ನ ಮಾಡಿದರೂ ಸಿಎಂ ಆಗದೆ ಕಂಗಾಲಾಗಿದ್ದ ಶೆಟ್ಟರ್‌ಗೆ ಪಟ್ಟ ಕಟ್ಟಿದ್ದೇ ಸಾಕ್ಷಿ. ಅಧ್ಯಕ್ಷ ಹುದ್ದೆ ಕೊಟ್ಟರೆ ಸಿಎಂ ಕುರ್ಚಿ ಬಿಡ್ತೇನೆ ಎಂದು ಬಹಿರಂಗವಾಗಿ ಹೇಳದೇ ಒಕ್ಕಲಿಗರು ಬೀದಿಗಿಳಿವಂತೆ ಮಾಡಿದ್ದಾರೆನ್ನುವ ಆಪಾದನೆಗೆ ಗುರಿಯಾಗಿರುವ ಗೌಡರ ಗದ್ದಲದ ಸದ್ದಡಗಿಸಿದ ಯಡ್ಡೀಜಿ ತಾಕತ್ತೇನು? ಎನ್ನುವುದು ಮುಖ್ಯವಲ್ಲ. ಸ್ವತ: ತಾವೇ ಮುಖ್ಯಮಂತ್ರಿಯಾಗಿದ್ದಾಗಲೂ ಅನ್ನದಾತ ಅಂಗಲಾಚಿದರೂ ಬೆಂಡಾಗದಿದ್ದ ಯಡ್ಡೀಜಿ ವಿಧಾನ ಸಭೆಯೊಳೆಗೆ ಎಸಿ ಕೂಲಿಂಗ್ ಇದ್ದರೂ ತಮ್ಮದೇ ಸರ್ಕಾರದ ಮುಖ್ಯಮಂತ್ರಿ, ಶಾಸಕರು ಬೆವರುವಂತೆ ಭಾಷಣ ಮಾಡಿ ಬೆಂಡೆತ್ತಿ ರೈತರ ಬೆಳೆ ಸಾಲ ಮನ್ನಾ ಮಾಡಿಸಿದ ಕೀರ್ತಿ ಯಡ್ಡೀಜಿಗೆ ಸಲ್ಲಬೇಕು. ಯಡ್ಡೀಜಿ ಮೈನಸ್ ಕಮಲ ಅಂದರೆ ಉತ್ತರ ಕಮಲ ಅಲ್ಲ ಎನ್ನುವುದು ನಿನಗೆ ಗೊತ್ತಿಲ್ಲದಿರಬಹುದು ದಿಲ್ಲಿ ಕಮಲ ಕಲಿಗಳಿಗೆ ಗೊತ್ತಾಗಿದೆ. ಇದು ಆರಂಭ ಮಾತ್ರ ಅಂತ್ಯವಲ್ಲ ನೋಡುತ್ತಿರು. ಅಧಿವೇಶನ ಮುಗಿದು ಮಂತ್ರಿಗಳಿಗೆ ಖಾತೆ ಹಂಚಿಕೆಯಾಗಿ, ರಾಜ್ಯ ಅಧ್ಯಕ್ಷ ಪೀಠಕ್ಕೆ ಈಶ್ವರಪ್ಪನವರ ಉತ್ತರಾಧಿಕಾರಿ ಆಯ್ಕೆ ಆದ ಮೇಲೆ ಅಖಿಲ ಕರ್ನಾಟಕದ ಕಮಲ ಪಾಳೆಯದಲ್ಲಿ ಏಳುವ ಸುನಾಮಿಯ ರೋಚಕ ಕತೆಯನ್ನು ಮತ್ತೊಂದು ಕಂತಿನಲ್ಲಿ ಹೇಳುತ್ತೇನೆ.

ಇಷ್ಟು ಹೇಳಿದ ಮೇಲೆ ನಾನು ಕೇಳುವ ಒಂದೇ ಒಂದು ಪ್ರಶ್ನೆಗೆ ಉತ್ತರ ಹೇಳು. ಕರ್ನಾಟಕದಲ್ಲಿ ಮುಂದಿನ ಚುನಾವಣೆಯಲ್ಲಿ ಕಮಲ ಮತ್ತೆ  ಅಧಿಕಾರಕ್ಕೆ ಬರುವುದೋ? ಇಲ್ಲವೋ?. ಸರಿಯಾದ ಉತ್ತರ ಹೇಳದಿದ್ದರೆ ನಿನ್ನ ತಲೆ ಶೋಭಕ್ಕನ ಯಶವಂತಪುರ ಕ್ಷೇತ್ರದ ರೈಲು ಹಳಿಗಳ ಮೇಲೆ ಉರುಳಲಿದೆ ಎಂದು ಹೇಳಿ ಉತ್ತರಕ್ಕೂ ಕಾಯದೇ ಬೇತಾಳ ಹೆಗಲಮೇಲಿನಿಂದ ನೆಗೆದು ಮೆಜೆಸ್ಟಿಕ್ ಮೊಬೈಲ್ ಟವರ್ ಹಿಡಿದು ನೇತಾಡುತ್ತಿತ್ತು.

Leave a Reply

Your email address will not be published. Required fields are marked *