“ಕ್ರಾಂತಿ ಚಿರಾಯುವಾಗಲಿ” ಘೋಷಣೆಯನ್ನು ಕುರಿತು – ಭಗತ್ ಸಿಂಗ್

ಇಂಗ್ಲಿಷ್‌ ಮೂಲ: ಸರ್ದಾರ್ ಭಗತ್ ಸಿಂಗ್
ಕನ್ನಡಕ್ಕೆ: ಸುಧಾ ಚಿದಾನಂದಗೌಡ

[ಇದು ರಮಾನಂದ ಚಟರ್ಜಿಯವರು ಮಾಡರ್ನ್ ರಿವ್ಯೂ (modern review)  ಪತ್ರಿಕೆಯಲ್ಲಿ ‘ಕ್ರಾಂತಿ ಚಿರಾಯುವಾಗಲಿ’ ಎಂಬ ಘೋಷಣೆಯನ್ನು ಮೂದಲಿಸಿ ಬರೆದ ಸಂಪಾದಕೀಯಕ್ಕೆ ಉತ್ತರವಾಗಿ ಬರೆದ ಲೇಖನ. ಇದರಲ್ಲಿ ಭಗತ್‌ಸಿಂಗ್ ಈ ಘೋಷಣೆಯ ಅರ್ಥ, ಗುರಿಗಳು ಮತ್ತು ಪ್ರಾಮುಖ್ಯತೆಯನ್ನು ಕುರಿತು ವಿವರಿಸಿದ್ದಾರೆ. ಈ ಪತ್ರವು ‘ದಿ ಟೆಲಿಗ್ರಾಫ್’ ಪತ್ರಿಕೆಯ ಡಿಸೆಂಬರ್ 24, 1929ರ ಸಂಚಿಕೆಯಲ್ಲಿ ಪ್ರಕಟವಾಯ್ತು.]

ಇವರಿಗೆ,

ಸಂಪಾದಕರು,
ಮಾಡರ್ನ್ ರಿವ್ಯೂವ್ (modern review)

ನಿಮ್ಮ ಪತ್ರಿಕೆಯ ಡಿಸೆಂಬರ್ (1929)ರ ಸಂಚಿಕೆಯಲ್ಲಿ “ಕ್ರಾಂತಿ ಚಿರಾಯುವಾಗಲಿ” ಎಂಬ ಶೀರ್ಷಿಕೆಯಡಿಯಲ್ಲಿ ಒಂದು ಟಿಪ್ಪಣಿ ಬರೆದಿದ್ದೀರಿ. ಅದರಲ್ಲಿ ಈ ಘೋಷಣೆ ಅರ್ಥಹೀನವೆಂದು ತಪ್ಪಾಗಿ ಗುರುತಿಸಿದ್ದೀರಿ. ಆಶ್ಚರ್ಯವಾಗ್ತಿದೆ. ಪ್ರತಿಯೊಬ್ಬ ಭಾರತೀಯನೂ ಮೆಚ್ಚುವ ಹಿರಿಯ, ಅನುಭವಿ, ಪ್ರಬುದ್ಧ ಪತ್ರಕರ್ತರು ನೀವು. ನಿಮ್ಮ ಈ ಬರಹಕ್ಕೆ ಉತ್ತರಿಸಬೇಕಾಗಿರುವುದು ದ್ವಂದ್ವವನ್ನು ಸೃಷ್ಟಿಸುವುದಕ್ಕಲ್ಲ. ಅನಿವಾರ್ಯಕ್ಕೆ.

ಈ ಘೋಷಣೆಯಿಂದ ನಾವು ಬಯಸುವುದೇನು, ನಿರೀಕ್ಷಿಸುವುದೇನು ಎಂಬುದನ್ನು ನಿವೇದಿಸುವುದು ನಮ್ಮ ಕರ್ತವ್ಯವೆಂದು ಭಾವಿಸುತ್ತೇವೆ. ವಿಪ್ಲವದ ಈ ಗಳಿಗೆಯಲ್ಲಿ ಈ ನಮ್ಮ ಕೂಗುಗಳು ನಮಗೆಷ್ಟು ಮುಖ್ಯವೋ ಇದಕ್ಕೊಂದು ಪ್ರಚಾರ ಒದಗಿಸುವುದು ಕೂಡಾ ಅಷ್ಟೇ ಮುಖ್ಯ.

ಈ ಕೂಗು ನಮ್ಮಿಂದ ಹುಟ್ಟಿಲ್ಲ. ಇದೇ “ಕೂಗು” ರಷ್ಯಾ ಕ್ರಾಂತಿಯ ದಿನಗಳಲ್ಲೂ ಬಳಸಲ್ಪಟ್ಟಿತ್ತು. ಎಲ್ಲರೂ ಬಲ್ಲಂತೆ ಸಮಾಜವಾದಿ ಲೇಖಕ ಆಪ್ಟನ್ ಸಿಂಕ್ಲೇರ್ ತಮ್ಮ ಇತ್ತೀಚಿನ ಕಾದಂಬರಿ “ಬೋಸ್ಟನ್ ಮತ್ತು ತೈಲ” (Boston & Oil) ದಲ್ಲಿ ಇದೇ ಘೋಷಣೆಯನ್ನು ಅನೇಕ ಆದರ್ಶವಾದಿ ಕ್ರಾಂತಿಕಾರಿ ಪಾತ್ರಗಳ ಮೂಲಕ ಹೇಳಿಸಿದ್ದಾನೆ. ಈ ವಾಕ್ಯವು ರಕ್ತಸಿಕ್ತ ಘರ್ಷಣೆಯು ಸದಾ ಮುಂದುವರಿದೇ ಇರಬೇಕೆಂದು ಎಲ್ಲೂ ಹೇಳಿಲ್ಲ. ಮತ್ತು ಚಲನಶೀಲವಲ್ಲದ ಯಾವುದೂ ಕೆಲಸಮಯದವರೆಗೆ ಕೂಡ ಅಸ್ತಿತ್ವದಲ್ಲಿರುವುದಿಲ್ಲ. ಈ ಘೋಷಣೆ ಕೂಡ ಇದಕ್ಕೆ ಹೊರತಾದುದಲ್ಲ.

ತುಂಬ ಧೀರ್ಘ ಸಮಯದವರೆಗೆ ಬಳಸಲ್ಪಡುವ ಈ ಘೋಷಣೆ ತುಂಬ ಗುರುತರವಾದುದನ್ನು ಸಾಧಿಸುತ್ತಿದೆ. ಅದು ವ್ಯಾಕರಣಬದ್ಧವಾಗಿ ಅಥವಾ ಶಬ್ಧ ಸಂಪತ್ತಿನ ದೃಷ್ಟಿಕೋನದಿಂದ ಸಮರ್ಥಿಸಿಕೊಳ್ಳುವಂಥದ್ದು ಅಲ್ಲದಿರಬಹುದು. ಆದಾಗ್ಯೂ ವಿಚಾರಗಳ ಗ್ರಹಿಕೆಯ ದೃಷ್ಟಿಯಿಂದ ಇದು ಪ್ರಮುಖವಾದದ್ದು. ಇಂಥ ಎಲ್ಲ ಘೋಷಣೆಗಳೂ ಒಂದು ನಿರ್ದಿಷ್ಟ ಪ್ರಜ್ಞೆಯನ್ನೇ ಒಳಗೊಂಡಿವೆ. ಅದು ಭಾಗಷಃ ಹೊಸದಾಗಿ ಒಳಗು ಮಾಡಿಕೊಂಡಿದ್ದೂ ಹೌದು ಮತ್ತು ಭಾಗಷಃ ಅನುವಂಶೀಯವಾಗಿ ಉಳಿಸಿಕೊಂಡಿದ್ದು ಹೌದು. ಪ್ರಜ್ಞೆ ಮತ್ತು ಆಶಯ ಇಲ್ಲಿ ಮುಖ್ಯ ಉದಾಹರಣೆ.

ನಾವು “ಜತಿನ್ ದಾಸ್ ಚಿರಾಯುವಾಗಲಿ” (Long live jatin das) ಎಂದು ಕೂಗಿದರೆ, ಅದರರ್ಥ ಜತಿನ್ ದಾಸ್ ಭೌತಿಕವಾಗಿ ಸದಾ ಕಾಲ ಜೀವಂತವಾಗಿರಲಿ ಎಂದಲ್ಲ. ಹಾಗಿರುವುದು ಸಾಧ್ಯವೂ ಇಲ್ಲ. ಅದು ಧ್ವನಿಸುವುದೇನೆಂದರೆ ಜತಿನ್ ದಾಸ್ ಎಂಬ ವ್ಯಕ್ತಿಯ ಉನ್ನತ ವಿಚಾರಗಳು ಮುಂದುವರಿಯಲಿ, ಎಂದೂ ಕುಂದದ ಸ್ಫೂರ್ತಿಯಾಗಿರಲಿ ಎಂದರ್ಥ. ಅದು ಅನೇಕ ಹುತಾತ್ಮರಿಗೆ, ಹೇಳಿಕೊಳ್ಳಲಾಗದ ಯಾತನೆಯನ್ನು ಅನುಭವಿಸಿದರೂ ಎದೆಗುಂದದೆ, ನಂಬಿದ ಸಿದ್ಧಾಂತಗಳಿಗೆ ಅರ್ಪಿಸಿಕೊಂಡವರಿಗೆ ಮಾರ್ಗದರ್ಶನವಾಗಲಿ ಎಂಬ ತಾತ್ಪರ್ಯ. ಈ ಘೋಷಣೆಯನ್ನು ಪದೇ ಪದೇ ಹೇಳಿಕೊಳ್ಳುವುದರ ಮೂಲಕ ನಮ್ಮ ಧೈರ್ಯ ಹೆಚ್ಚಿಸಿಕೊಂಡು, ವಿಚಾರಗಳನ್ನು ಉಳಿಸಿಕೊಳ್ಳುವುದು ಸಾಧ್ಯ. ಆ ಸ್ಫೂರ್ತಿಗಾಗಿಯೇ ನಾವೀ ಕೂಗನ್ನು ಇನ್ನೂ ಗಟ್ಟಿಯಾಗಿ ಕೂಗಬೇಕಿದೆ.

ಹಾಗೆಯೇ, ಕ್ರಾಂತಿ ಎಂಬ ಪದವನ್ನು ಅಕ್ಷರಷಃ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಬಾರದು. ವಿವಿಧ ಅರ್ಥಗಳು ಮತ್ತು ಪ್ರಾಮುಖ್ಯತೆಗಳು ಈ ಶಬ್ಧಕ್ಕೆ ಇವೆ. ಅದು ಉಪಯೋಗಿಸಿಕೊಳ್ಳುವವರು ಅಥವಾ ದುರುಪಯೋಗಪಡಿಸಿಕೊಳ್ಳುವವರ ಆಸಕ್ತಿಗಳ ಮೇಲೆ ಅವಲಂಬಿತ. ಶೋಷಣೆಯನ್ನೇ ಗುರಿಯಾಗಿಸಿಕೊಂಡಿರುವ ಸ್ಥಾಪಿತ ಬ್ಯುರಾಕ್ರಸಿಯ ಏಜೆಂಟರುಗಳ ಪಾಲಿಗೆ ಇದು ರಕ್ತದ ಕಲೆಯ ಭಯಾನಕ ಭಾವನೆಗಳನ್ನೇ ಉದ್ದೀಪಿಸಬಹುದು. ಆದರೆ ಕ್ರಾಂತಿಕಾರಿಗಳಿಗೆ ಅದು ಪವಿತ್ರ ವಾಕ್ಯ.

ಈ ಎಲ್ಲ ವಿಚಾರಗಳನ್ನು ಅಸೆಂಬ್ಲಿ ಬಾಂಬ್ ಕೇಸ್ ಸಂಬಂಧಿತ ಮೊಕದ್ದಮೆಗಳು ನಡೆಯುವಾಗ ವಿಚಾರಣೆಗಳ ನಡುವೆ ದೆಹಲಿಯ ಸೆಷನ್ ಜಡ್ಜ್‌ಗಳ ಎದುರು ಸ್ಪಷ್ಟಪಡಿಸಲು ಯತ್ನಿಸಿ ಹೇಳಿಕೆಯೊಂದನ್ನು ಕೊಟ್ಟಿದ್ದೆವು. ಅದರಲ್ಲಿ “ಕ್ರಾಂತಿ”ಯ ಅರ್ಥವನ್ನು ವಿವರಿಸಿದ್ದೆವು.

ಅಲ್ಲಿ “ಕ್ರಾಂತಿ”ಯು ರಕ್ತಸಿಕ್ತ ಸಂಘರ್ಷವನ್ನು ಒಳಗೊಳ್ಳಲೇಬೆಕಾದ ಅಗತ್ಯವೇನೂ ಇಲ್ಲ ಎಂದು ಹೇಳಿದ್ದೆವು. ಖಂಡಿತವಾಗಿಯೂ “ಕ್ರಾಂತಿ”ಯು ಬಾಂಬ್ ಅಥವಾ ಪಿಸ್ತೂಲ್‌ನ ಸಂಸ್ಕೃತಿಯಲ್ಲ. ಕೆಲಬಾರಿ ಅನಿವಾರ್ಯತೆಗೆ ಕಾರ್ಯಸಾಧನೆಗೆ ಮಾತ್ರ ಆ ದಾರಿ ಹಿಡಿಯಬಹುದು. ಮತ್ತು ಕೆಲವು ಆಂದೋಲನಗಳಲ್ಲಿ ಬಾಂಬ್ ಹಾಗೂ ಪಿಸ್ತೂಲುಗಳು ಪ್ರಮುಖ ಪಾತ್ರ ವಹಿಸುವದರಲ್ಲಿ ಸಂಶಯವೇನೂ ಇಲ್ಲ. ಆದರೆ, ಈ ಕಾರಣಕ್ಕಾಗಿಯೇ ಅದು ಎಲ್ಲ ಸಂದರ್ಭಗಳಲ್ಲಿ ಕಡ್ಡಾಯವೆಂದೂ, ಪ್ರತಿಬಾರಿ ಪ್ರತಿ ಆಂದೋಲನ ರಕ್ತಸಿಕ್ತ ಘರ್ಷಣೆಯೇ ಆಗಬೇಕೆಂದೇನೂ ಇಲ್ಲ. ದಂಗೆಯೇಳುವುದು ಕ್ರಾಂತಿಯಲ್ಲ. ಆದರೆ ದಂಗೆಯೇಳುವುದರ ಮೂಲಕ ಅಂತಿಮವಾಗಿ “ಕ್ರಾಂತಿ”ಯನ್ನು ತಲುಪಬಹುದು ಎನ್ನಬಹುದು. ಈ ಅರಿವಿನಲ್ಲಿ, ಈ ಪ್ರಜ್ಞೆಯಲ್ಲಿ ಕ್ರಾಂತಿ ಎಂದರೆ ಸ್ಫೂರ್ತಿ.

’ಕ್ರಾಂತಿ’ ಎಂದರೆ ಬದಲಾವಣೆ-ಅದು ಈಗಿರುವುದಕ್ಕಿಂತ ಉತ್ತಮವಾದ ದಿಕ್ಕಿನಲ್ಲಿ ನಡೆಯಬೇಕಾದ ಬದಲಾವಣೆ. ಆ ಬದಲಾವಣೆಗಾಗಿ ಹಾತೊರೆಯುವ ಕ್ರಿಯೆಯೇ ಕ್ರಾಂತಿ. ಸಾಮಾನ್ಯವಾಗಿ ಜನಸಮುದಾಯವು ಸ್ಥಾಪಿತಗೊಂಡ ಸ್ಥಿತಿಗಳಿಗೆ ಇದುವರೆಗೂ ಹೀಗೇ ಇತ್ತು ಹೀಗೇ ಇರುತ್ತೆ ಎಂಬ ಭಾವನೆಗೆ ಜೋತುಬಿದ್ದು, ಅದನ್ನೇ ಅಭ್ಯಾಸ ಮಾಡಿಕೊಂಡಿರುವುದು ಸಹಜ. ಮತ್ತು ಬದಲಾವಣೆ ಎಂಬ ಪದವೇ ಅವರು ನಡುಗುವಂತೆ ಮಾಡುತ್ತದೆ. ಆ ವಿಚಾರ ಬಂದೊಡನೆ ಜನ ಕಂಪಿಸುತ್ತಾರೆ. ಇಂಥ ಅಪಾಯಕಾರಿ ಸ್ಥಿತಿಯು ಕ್ರಾಂತಿಯಿಂದ ಸ್ಫೂರ್ತಿ ಹೊಂದಿ ಬದಲಾವಣೆಗೆ ಸ್ಥಳಾಂತರಗೊಳ್ಳುವ ಅವಶ್ಯಕತೆಯಿದೆ. ಇಲ್ಲವಾದಲ್ಲಿ ಅಧಮತನವೇ, ನೀಚ ನಡಾವಳಿಕೆಗಳೇ ಮೇಲುಗೈ ಸಾಧಿಸಿ, ಇಡೀ ಮನುಕುಲವು ಪ್ರತಿಕೂಲ ಬಲಗಳಿಗೆ ಸಿಕ್ಕಿ, ಹಾದಿ ತಪ್ಪಿ ನಡೆಯಲೂಬಹುದು. ಇಂಥ ಸಂದರ್ಭಗಳು ಯಾವ ಸುಧಾರಣೆಯೂ ಇಲ್ಲದ ಸ್ಥಬ್ದತೆಯನ್ನು ತಲುಪುತ್ತದೆ ಮತ್ತು ಮನುಷ್ಯನ ಪ್ರಗತಿಗೆ ಲಕ್ವಾ ಹೊಡೆಯುತ್ತದೆ.

ಕ್ರಾಂತಿಯ ಸ್ಫೂರ್ತಿಯು ಮನುಷ್ಯನ ಆತ್ಮವನ್ನು ಪುನರುಜ್ಜೀವನಗೊಳಿಸಬಲ್ಲುದು. ಆ ಮೂಲಕ ಪ್ರತಿಕೂಲ ಬಲಗಳು ತಮ್ಮ ಶಕ್ತಿಯನ್ನು ಪರಿಚಯಿಸಿಕೊಂಡು ಮತ್ತೆ ಶಾಶ್ವತವಾಗಿ ಮುಂದುವರಿಯಲು ತಡೆಯೊಡ್ಡಬಹುದು. ಪುರಾತನವಾದ ಅಭ್ಯಾಸಗಳು ಬದಲಾಗಬೇಕು. ಸದಾ ಕಾಲ, ನಿರಂತರವಾಗಿ ಬದಲಾವಣೆ ಜರುಗಬೇಕು. ಅದು ಹೊಸದಕ್ಕೆ ದಾರಿ ಮಾಡಿಕೊಡಬೇಕು. ಆಗ ಒಳ್ಳೆಯದು ಎಂಬ ಭ್ರಮೆ ಹುಟ್ಟಿಸುವ ಯಾವ ಅಭ್ಯಾಸವೂ ಲೋಕವನ್ನು ಹಾಳುಗೆಡವಲಾರದು. ಈ ಅರ್ಥದಲ್ಲಿ ನಾವು ಸದಾ ಈ ಘೋಷಣೆಯ ಕೂಗನ್ನು ಎತ್ತುತ್ತೇವೆ.

ಕ್ರಾಂತಿ ಚಿರಾಯುವಾಗಲಿ.

One thought on ““ಕ್ರಾಂತಿ ಚಿರಾಯುವಾಗಲಿ” ಘೋಷಣೆಯನ್ನು ಕುರಿತು – ಭಗತ್ ಸಿಂಗ್

Leave a Reply

Your email address will not be published. Required fields are marked *