ಉಪವಾಸ ಸತ್ಯಾಗ್ರಹ – ಭ್ರಮನಿರಸನಗೊಂಡ ಜನತೆ

– ಆನಂದ ಪ್ರಸಾದ್

ಅಣ್ಣಾ ಹಜಾರೆ ತಂಡದ ಉಪವಾಸ ಸತ್ಯಾಗ್ರಹಕ್ಕೆ ದೇಶದ ಜನರಿಂದ ಈ ಬಾರಿ ಹೆಚ್ಚಿನ ಬೆಂಬಲ ವ್ಯಕ್ತವಾಗಿರುವಂತೆ ಕಂಡು ಬರುತ್ತಿಲ್ಲ.  ಟಿವಿ ವಾಹಿನಿಗಳಲ್ಲಿ ಹಾಗೂ ಪತ್ರಿಕೆಗಳಲ್ಲಿಯೂ ಈ ಬಾರಿ ಹೆಚ್ಚಿನ ಪ್ರಚಾರ ಕಂಡುಬರುತ್ತಿಲ್ಲ.  ಹೆಚ್ಚಿನ ಜನಬೆಂಬಲ ವ್ಯಕ್ತವಾಗದ ಕಾರಣ ಮಾಧ್ಯಮಗಳೂ ಇದಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಲು ಹೋಗುತ್ತಿಲ್ಲ.  ಅಣ್ಣಾ ತಂಡವು ಹಿಂದಿನ ಬಾರಿ ಒಂದು ಪಕ್ಷದ ವಿರುದ್ಧ ಚುನಾವಣೆಗಳಲ್ಲಿ ಪ್ರಚಾರ ಮಾಡಲು ಹೋಗಿ ತಮ್ಮ ಜನಪ್ರಿಯತೆಯನ್ನು ಇನ್ನೊಂದು ಪಕ್ಷಕ್ಕೆ ರಾಜಕೀಯ ಲಾಭ ಮಾಡಿಕೊಡಲು ಬಳಸಿದುದು ಇದಕ್ಕೆ ಪ್ರಧಾನ ಕಾರಣ.  ಅವರು ಪರೋಕ್ಷವಾಗಿ ರಾಜಕೀಯ ಲಾಭ ಮಾಡಿಕೊಡಲು ಪ್ರಯತ್ನಿಸಿದ ಪಕ್ಷವೂ ಭ್ರಷ್ಟಾಚಾರ, ಕೋಮುವಾದಗಳಲ್ಲೇ ಮುಳುಗಿರುವುದರಿಂದ ಅಣ್ಣಾ ಅವರ ಮೇಲೆ ಜನರ ವಿಶ್ವಾಸ ಕಡಿಮೆಯಾಗಿದೆ.  ಒಮ್ಮೆ ಜನತೆಯ ವಿಶ್ವಾಸ ಕಳೆದುಕೊಂಡರೆ ಅದನ್ನು ಮತ್ತೆ ಗಳಿಸುವುದು ಬಹಳ ಕಷ್ಟ. ಹೀಗಾಗಿಯೇ ಇಡುವ ಪ್ರತಿಯೊಂದು ಹೆಜ್ಜೆಯನ್ನೂ ಗಂಭೀರ ಚಿಂತನೆ ಮಾಡಿಯೇ ಇಡಬೇಕು.

ಅಣ್ಣಾ ಅವರಿಗೆ ಸ್ಪಷ್ಟವಾದ ಸೈದ್ಧಾಂತಿಕ ನಿಲುವು ಇರುವಂತೆ ಕಾಣುವುದಿಲ್ಲ.  ಸ್ಪಷ್ಟವಾದ ಪ್ರಗತಿಪರ ನಿಲುವು ಅಣ್ಣಾ ಅವರಲ್ಲಿ ಕಾಣುವುದಿಲ್ಲ.  ಓರ್ವ ರಾಷ್ಟ್ರ ನಾಯಕನಿಗೆ ಸ್ಪಷ್ಟವಾದ ಪ್ರಗತಿಪರ ನಿಲುವು ಇರಬೇಕು.  ತನ್ನ ನಿಲುವನ್ನು ಆಗಾಗ ಬದಲಿಸುತ್ತಾ ಹೋದರೆ ಜನರ ವಿಶ್ವಾಸ ಉಳಿಯಲಾರದು.  ಹೀಗಾಗಿ ಬಹುತೇಕ ಪ್ರಗತಿಶೀಲ ಜನರ ವಿಶ್ವಾಸವನ್ನು ಗೆಲ್ಲಲು ಅಣ್ಣಾ ಅವರಿಗೆ ಸಾಧ್ಯವಾಗಲಿಲ್ಲ.  ಬಂಡವಾಳಶಾಹಿಯ ಅಭಿವೃದ್ಧಿಯೇ ದೇಶದ ಅಭಿವೃದ್ಧಿಯಲ್ಲ.  ಕಾರ್ಪೋರೆಟ್ ಭ್ರಷ್ಟಾಚಾರದ ಬಗ್ಗೆ ಅಣ್ಣಾ ತಂಡ ಯಾವುದೇ ನಿಲುವನ್ನು ತೆಗೆದುಕೊಳ್ಳಲಿಲ್ಲ.  ಬಹಳ ದೊಡ್ಡ ಭ್ರಷ್ಟಾಚಾರ ನಡೆಯುತ್ತಿರುವುದು ಕಾರ್ಪೋರೆಟ್ ವಲಯದಲ್ಲೇ ಆದುದರಿಂದ ಇದನ್ನು ನಿಯಂತ್ರಿಸಲು ಲೋಕಪಾಲ್ ಮಸೂದೆಯಲ್ಲಿ ಪ್ರಧಾನ ಆದ್ಯತೆ ಕೊಡಬೇಕಾಗಿತ್ತು.  ಅದನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ ಅಣ್ಣಾ ತಂಡ.  ಅಣ್ಣಾ ಅವರ ಹೋರಾಟವನ್ನು ಪ್ರಾಯೋಜಿಸಿರುವುದು ಕಾರ್ಪೋರೆಟ್ ವಲಯವೇ ಆದುದರಿಂದ ಈ ಬಗ್ಗೆ ಧ್ವನಿ ಎತ್ತುವ ಸಾಹಸವನ್ನು ಅಣ್ಣಾ ತಂಡ ಮಾಡಲಿಲ್ಲ.   ಒಮ್ಮೆ ತೀವ್ರವಾದ ಜನ ಬೆಂಬಲವನ್ನು ಮುರಿಯಲು ಸರ್ಕಾರ ಏನೋ ಆಶ್ವಾಸನೆ ಕೊಟ್ಟು ನಂತರ ನುಣುಚಿಕೊಂಡಿತು.  ಪದೇ ಪದೇ ತಮ್ಮ ದೈನಂದಿನ ಕೆಲಸ ಬಿಟ್ಟು ಹೋರಾಟಕ್ಕೆ ಹೋಗುವುದು ಜನತೆಗೂ ಸಾಧ್ಯವಾಗುವುದಿಲ್ಲವಾದ ಕಾರಣ ಹೋರಾಟ ತನ್ನ ತೀವ್ರತೆಯನ್ನು ಕಳೆದುಕೊಂಡಿದೆ.   ಮೂರ್ನಾಲ್ಕು ದಶಕಗಳ ಹಿಂದಿನ ಸ್ಥಿತಿಗೆ ಹೋಲಿಸಿದರೆ ಇಂದು ದೇಶದ ಜನರ ಜೀವನ ಮಟ್ಟ ಸುಧಾರಣೆಯಾಗಿದೆ.  ಹೀಗಾಗಿ ಜನರಿಗೆ ಜೀವಿಸಲು ಅಸಾಧ್ಯ ಎಂಬ ಸ್ಥಿತಿ ದೇಶದಲ್ಲಿ ಇಲ್ಲ.  ಹೇಗೋ ಲಂಚವೋ ಮತ್ತೊಂದೋ ಕೊಟ್ಟು ಜೀವನ ಸಾಗಿಸುವ ಸ್ಥಿತಿ ದೇಶದಲ್ಲಿ ಇದೆ.  ಹೀಗಾಗಿ ಹೋರಾಟಕ್ಕೆ ಹೋಗುವ ಮನೋಸ್ಥಿತಿ ಜನರಲ್ಲಿಯೂ ಕಂಡುಬರುವುದಿಲ್ಲ.  ಸ್ವಾತಂತ್ರ್ಯ ಪೂರ್ವದಲ್ಲಾದರೆ ಪರಕೀಯರು ನಮ್ಮನ್ನು ಆಳುತ್ತಿದ್ದಾರೆ, ನಮ್ಮನ್ನು ನಾವೇ ಆಳಿಕೊಳ್ಳಬೇಕು ಎಂಬ ತುಡಿತ ಜನರನ್ನು ಹೋರಾಟಕ್ಕೆ ಧುಮುಕುವಂತೆ ಮಾಡಿತ್ತು.  ಇಂದು ನಾವೇ ಆರಿಸಿದ ಸರಕಾರ ಇದೆ.  ಹೀಗಾಗಿ ಹೋರಾಟಕ್ಕೆ ಹೋಗುವ ತೀವ್ರ ತುಡಿತ ಜನಮಾನಸದಲ್ಲಿ ಕಂಡುಬರುತ್ತಿಲ್ಲ.

ಇಂದು ಎಲ್ಲ ರಾಜಕೀಯ ಪಕ್ಷಗಳೂ ಭ್ರಷ್ಟವೂ, ಸ್ವಜನಪಕ್ಷಪಾತಿಗಳೂ ಆಗಿರುವಾಗ ಉತ್ತಮ ಲೋಕಪಾಲ್ ಮಸೂದೆ ಲೋಕಸಭೆಯಲ್ಲಿ ಪಾಸಾಗಿ ಬರುವ ಸಂಭವ ಇಲ್ಲ.  ಏನೋ ಒಂದು ಕಣ್ಣೊರೆಸುವ ಮಸೂದೆ ಬಂದರೂ ಬರಬಹುದು.  ಅದರಿಂದ ಹೆಚ್ಚಿನ ಪ್ರಯೋಜನ ಆಗಲಾರದು.  ದೇಶದಲ್ಲಿ ತೀವ್ರ ಜನಬೆಂಬಲ ಇಲ್ಲದಿದ್ದರೆ ಉಪವಾಸ ಸತ್ಯಾಗ್ರಹವನ್ನು ಸರ್ಕಾರ ಬಲಾತ್ಕಾರವಾಗಿ ನಿಲ್ಲಿಸುವ ಸಂಭವವಿದೆ ಅಥವಾ ತತ್ಕಾಲಕ್ಕೆ ಏನೋ ಒಂದು ಕಣ್ಣೊರೆಸುವ ಆಶ್ವಾಸನೆ ನೀಡಿ ಉಪವಾಸ ಸತ್ಯಾಗ್ರಹ ನಿಲ್ಲಿಸುವಂತೆ ಮಾಡಬಹುದು.  ಉತ್ತಮವಾದ ಲೋಕಪಾಲ ಮಸೂದೆ ಬರಬೇಕಾದರೆ ದೇಶದಲ್ಲಿ ಹೊಸ ರಾಜಕೀಯವ್ಯವಸ್ಥೆ ಬರದೆ ಸಾಧ್ಯವಿಲ್ಲ.  ಅಂಥ ವ್ಯವಸ್ಥೆ ರೂಪಿಸಬೇಕಾದರೆ ಹೊಸ ರಾಜಕೀಯ ಪಕ್ಷ ಸ್ಥಾಪಿಸಿ ಅದು ಚುನಾವಣೆಗಳಲ್ಲಿ ಗೆದ್ದು ಮಸೂದೆ ಪಾಸು ಮಾಡುವ ಬಹುಮತ ಪಡೆದರೆ ಮಾತ್ರ ಸಾಧ್ಯ.  ಅಂಥ ಹೊಸ ರಾಜಕೀಯ ವ್ಯವಸ್ಥೆ ಸ್ಥಾಪಿಸುವ ಯಾವುದೇ ಆಲೋಚನೆ ಅಣ್ಣಾ ತಂಡಕ್ಕೆ ಇದೆ ಎನಿಸುವುದಿಲ್ಲ.  ಅಂಥ ವ್ಯವಸ್ಥೆ ಸ್ಥಾಪಿಸಿ ಬೆಳೆಸಬೇಕಾದರೆ ಸ್ಪಷ್ಟವಾದ ಸೈದ್ಧಾಂತಿಕ ನಿಲುವು ಇರಬೇಕಾಗುತ್ತದೆ ಹಾಗೂ ದೇಶಕ್ಕಾಗಿ ದುಡಿಯುವ ನಿಸ್ವಾರ್ಥಿ ಜನರ ಪಡೆಯನ್ನೇ ಬೆಳೆಸಬೇಕಾಗುತ್ತದೆ.  ಇದು ಬಹಳ ವರ್ಷಗಳನ್ನು ತೆಗೆದುಕೊಳ್ಳುವ ಕ್ರಿಯೆ.  ನಿಸ್ವಾರ್ಥಿ ಜನರ ಪಡೆಯನ್ನು ದೇಶದಲ್ಲಿ ಮೊದಲು ಬೆಳೆಸಿ ನಂತರ ಅದು ರಾಜಕೀಯ ಪಕ್ಷವಾಗಿ ಮಾರ್ಪಾಡುಗೊಂಡು ಚುನಾವಣೆಗಳಲ್ಲಿ ಸ್ಪರ್ಧಿಸಿ ಹಂತ ಹಂತವಾಗಿ ಗೆಲುವನ್ನು ಸಾಧಿಸಿ ಬದಲಾವಣೆಗಳನ್ನು ತರಬೇಕಾಗುತ್ತದೆ.  ಇಂಥ ಚಿಂತನೆಯಾಗಲಿ, ಮುನ್ನೋಟವಾಗಲೀ ಅಣ್ಣಾ ಅವರ ತಂಡದಲ್ಲಿ ಕಾಣುವುದಿಲ್ಲವಾದ ಕಾರಣ ಉಪವಾಸ ಸತ್ಯಾಗ್ರಹಗಳಿಂದ ಹೆಚ್ಚಿನ ಪ್ರಯೋಜನ ಆಗುವ ಸಂಭವ ಕಾಣುವುದಿಲ್ಲ.  ಅಣ್ಣಾ ತಂಡದ ಪರೋಕ್ಷ ರಾಜಕೀಯ ನಿಲುವು ಕೂಡ ಮುಂಬರುವ ಲೋಕಸಭಾ ಚುನಾವಣೆಗಳಲ್ಲಿ ಒಂದು ಪ್ರತಿಗಾಮಿ, ಕೋಮುವಾದಿ ಪಕ್ಷವನ್ನು ಅಧಿಕಾರಕ್ಕೆ ತರುವ ಅಜೆಂಡಾ ಹೊಂದಿದೆಯೇನೋ ಎಂಬ ರೀತಿಯಲ್ಲಿ ಅವರ ನಡವಳಿಕೆಗಳು ಕಾಣುತ್ತವೆ.  ಹೀಗೆ ಮಾಡಿದರೆ ಜನಬೆಂಬಲ ಸಿಗುವುದಾದರೂ ಹೇಗೆ?  ಬಾಬಾ ರಾಮದೇವ ಎಂಬ ಯೋಗ ಗುರುವಿನ ಉದ್ಧೇಶವೂ ಇದೇ ಆಗಿರುವಂತೆ ಕಾಣುತ್ತದೆ.  ವಿದೇಶಗಳಲ್ಲಿ ಇರುವ ಕಪ್ಪು ಹಣ, ಭ್ರಷ್ಟಾಚಾರದ ವಿರುದ್ಧ ಹೋರಾಟ ರಾಮಮಂದಿರದಂತೆ ಪ್ರತಿಗಾಮಿಗಳನ್ನು  ಅಧಿಕಾರಕ್ಕೆ ಏರಿಸಲು ಬಳಸಿ ನಂತರ ಬಿಸಾಡುವ ಏಣಿಯಂತೆ ಕಾಣುತ್ತದೆ.   ಇಂಥ ನಿಲುವುಗಳಿಂದ ಉಪವಾಸ ಸತ್ಯಾಗ್ರಹ ತನ್ನ ಅರ್ಥವನ್ನು ಕಳೆದುಕೊಂಡು ಜನರನ್ನು ಸಿನಿಕರಾಗುವಂತೆ ಮಾಡುತ್ತದೆ.  ಪರ್ಯಾಯ ರಾಜಕೀಯ ವ್ಯವಸ್ಥೆಗಳನ್ನು ರೂಪಿಸುವ ದೀರ್ಘಕಾಲೀನ ಹೋರಾಟ ರೂಪಿಸದೆ ದೇಶದಲ್ಲಿ ಧನಾತ್ಮಕ ಬದಲಾವಣೆ ಸಾಧ್ಯವಾಗುವ ಸಂಭವ ಕಾಣಿಸುವುದಿಲ್ಲ.

One thought on “ಉಪವಾಸ ಸತ್ಯಾಗ್ರಹ – ಭ್ರಮನಿರಸನಗೊಂಡ ಜನತೆ

Leave a Reply

Your email address will not be published. Required fields are marked *