ಮತ್ತೆ ವಿರೋಧಪಕ್ಷದ ನಾಯಕರಾಗಿ ಯಡಿಯೂರಪ್ಪ

– ಮಹೇಂದ್ರ ಕುಮಾರ್

ಯಡಿಯೂರಪ್ಪ ಬಾಯಿ ತೆರೆದರೆಂದರೆ ವಿರೋಧ ಪಕ್ಷಗಳಿಗೆಲ್ಲ ಹಿಗ್ಗು. ಬಿಜೆಪಿಯೊಳಗೆ ಸಣ್ಣಗೆ ನಡುಕ. ಇದೀಗ ಸುಮಾರು 15 ದಿನಗಳ ಬಳಿಕ, ಯಡಿಯೂರಪ್ಪ ಬಾಯಿ ತೆರೆದಿದ್ದಾರೆ. ಬಿಜೆಪಿ ಸರಕಾರ ಮುಖ ಮುಚ್ಚಿಕೊಂಡಿದೆ. ತನ್ನದೇ ಸರಕಾರದ ವಿರುದ್ಧ ಅವರು ಕೆಂಡ ಕಾರಿದ್ದಾರೆ. ತನ್ನ ಸರಕಾರದ ವಿರುದ್ಧ ಅವರು ಆಕ್ರೋಶವ್ಯಕ್ತಪಡಿಸುತ್ತಿರುವುದು ಇದೇನೂ ಮೊದಲಲ್ಲ. ಯಾವಾಗ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರೋ ಅಲ್ಲಿಂದ ಪದೇ ಪದೇ ಬಿಜೆಪಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಆದರೆ ಸದನದಲ್ಲಿ ಕುಳಿತು ತನ್ನದೇ ಸರಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಆಕ್ರೋಶ ವ್ಯಕ್ತಪಡಿಸಿರುವುದು ಮಾತ್ರ, ರಾಜ್ಯದ ಇತಿಹಾಸದಲ್ಲಿ ಒಂದು ದಾಖಲೆಯೇ ಸರಿ. ಯಡಿಯೂರಪ್ಪ ರಾಜ್ಯ ಸರಕಾರದ ವೈಫಲ್ಯದ ಕುರಿತಂತೆ ಹರಿಹಾಯ್ದರೆ ಅದನ್ನು ವಿರೋಧ ಪಕ್ಷಗಳು ಚಪ್ಪಾಳೆ ತಟ್ಟಿ ಸ್ವಾಗತಿಸಿದರು.ಸರಕಾರವನ್ನು ಪಕ್ಷಾತೀತವಾಗಿ ವಿಮರ್ಶಿಸುವುದು, ಟೀಕಿಸುವುದು ರಾಜ್ಯದ ಹಿತದೃಷ್ಟಿಯಿಂದ ಸರಿಯಾದ ಕ್ರಮವೇ ಆಗಿದೆ. ಕೆಟ್ಟ ಹಾದಿಯನ್ನು ಹಿಡಿದರೆ ತನ್ನದೇ ಸರಕಾರವನ್ನೂ ಬಿಡದೆ ಟೀಕಿಸುವಾತ ನಿಜವಾದ ನಾಯಕ.

ಈ ನಿಟ್ಟಿನಲ್ಲಿ ಯಡಿಯೂರಪ್ಪ ಅಭಿನಂದನಾರ್ಹರು ನಿಜ. ಆದರೆ ಒಂದು ಸತ್ಯವಿದೆ. ಬರ ತಾಂಡವವಾಡುತ್ತಿರುವಾಗ ಸರಕಾರ ನಿಷ್ಕ್ರಿಯವಾಗಲು ಸದಾನಂದ ಗೌಡರ ಬಳಗ ಎಷ್ಟರಮಟ್ಟಿಗೆ ಕಾರಣವೋ, ಯಡಿಯೂರಪ್ಪ ಬಣವೂ ಅಷ್ಟೇ ಮಟ್ಟಿಗೆ ಕಾರಣ. ಬಿಜೆಪಿ ಅಧಿಕಾರಕ್ಕೆ ಬಂದ ಮೊದಲ 3 ವರ್ಷದ ಅವಧಿಯನ್ನು ಆಳಿದ್ದು ಯಡಿಯೂರಪ್ಪ.

ಆದರೆ ಈ ಅವಧಿಯಲ್ಲೂ ಅವರಿಗೆ ಆಳುವುದಕ್ಕೆ ಅವಕಾಶ ನೀಡುವ ಬದಲು ಅಳುವುದಕ್ಕೇ ಹೆಚ್ಚು ಅವಕಾಶ ಸಿಕ್ಕಿತು. ಒಂದು ದಿನವೂ ಅವರನ್ನು ನೆಮ್ಮದಿಯಿಂದ ಆಳಲು ಗಣಿ ರೆಡ್ಡಿಗಳು ಮತ್ತು ಕೇಂದ್ರದ ವರಿಷ್ಠರು ಅವಕಾಶ ನೀಡಲಿಲ್ಲ. ತಾನು ಅಧಿಕಾರದಿಂದ ಕೆಳಗಿಳಿದದ್ದೇ, ಅವರೂ ಅದೇ ತಂತ್ರವನ್ನು ಅನುಸರಿಸತೊಡಗಿದರು. ಉಳಿದವರನ್ನೂ ಆಳುವುದಕ್ಕೆ ಬಿಡೆ ಎಂದು ಯಡಿಯೂರಪ್ಪ ಹಟ ತೊಟ್ಟರು. ಪರಿಣಾಮವಾಗಿ ಒಂದು ವರ್ಷದ ಒಳಗೆ ಸದಾನಂದ ಗೌಡರು ಅಧಿಕಾರದಿಂದ ಕೆಳಗಿಳಿಯಬೇಕಾಯಿತು.

ಈ ನಾಲ್ಕು ವರ್ಷಗಳ ಅವಧಿಯಲ್ಲಿ ಬಿಜೆಪಿ ಸರಕಾರ ಕನಿಷ್ಠ ಒಂದು ವಾರ ಸರಿಯಾಗಿ ಆಡಳಿತ ನಡೆಸಿದರೆ ಅದೇ ಹೆಚ್ಚು. ಇಂತಹ ಪರಿಸ್ಥಿತಿಯಲ್ಲಿ ಬರ, ರೈತರ ಸಮಸ್ಯೆ ಇತ್ಯರ್ಥವಾಗುವುದಾದರೂ ಹೇಗೆ? ಒಂದು ರೀತಿಯಲ್ಲಿ ಕನ್ನಡಿಯನ್ನು ನೋಡಿ ಉಗುಳಿದಂತಾಗಿದೆ ಯಡಿಯೂರಪ್ಪರು ಸದನದಲ್ಲಿ ತೋರಿಸಿದ ಆಕ್ರೋಶ. ಉಗಿದದ್ದು ಈಶ್ವರಪ್ಪ ಬಳಗಕ್ಕಾದರೂ, ಅದರ ಹನಿಗಳು ಯಡಿಯೂರಪ್ಪರ ಮುಖವನ್ನೂ ಅಪ್ಪಳಿಸಿದೆ. ನಿಜಕ್ಕೂ ಯಡಿಯೂರಪ್ಪ ಬರದ ಕುರಿತಂತೆ, ರೈತರ ಕುರಿತಂತೆ ಕಾಳಜಿಯನ್ನು ಹೊಂದಿದ್ದರೆ ತನ್ನ ಬಣ ರಾಜಕೀಯವನ್ನು ಪಕ್ಕಕ್ಕಿಟ್ಟು ಬರಗಾಲ ಪ್ರದೇಶದಲ್ಲಿ ತಿರುಗಾಡುತ್ತಿದ್ದರು. ಸದಾನಂದ ಗೌಡರಿಗೆ ಆಳ್ವಿಕೆ ನಡೆಸಲು ಅವಕಾಶವನ್ನು ನೀಡುತ್ತಿದ್ದರು.

ಸರಕಾರ ಇಂದು ವಿಫಲವಾಗಿ ನಿಂತಿದ್ದರೆ ಅದಕ್ಕೆ ಬಿಜೆಪಿಯ ಎಲ್ಲ ನಾಯಕರೂ ಕಾರಣರು. ಯಡಿಯೂರಪ್ಪರ ವೈಫಲ್ಯಕ್ಕೆ ಈಶ್ವರಪ್ಪ ಗುಂಪು ಹೇಗೆ ಕಾರಣವೋ, ಹಾಗೆಯೇ ಇಂದು ಸದಾನಂದಗೌಡರ ವೈಫಲ್ಯಕ್ಕೆ ಯಡಿಯೂರಪ್ಪ ಗುಂಪು ಕಾರಣ. ಆದುದರಿಂದ ಯಡಿಯೂರಪ್ಪರು ಆಕ್ರೋಶದಿಂದ ಆಡಿದ ಮಾತುಗಳಲ್ಲಿ ಸತ್ಯವಿದೆ. ಅವರು ತೆರೆದಿಟ್ಟ ನಾಡಿನ ಸ್ಥಿತಿಗೆ ಅವರೂ ಕೂಡ ಕಾರಣರು ಎನ್ನುವುದು ಇನ್ನೊಂದು ಸತ್ಯ.

ಯಡಿಯೂರಪ್ಪ ಅವರು ಸದನದಲ್ಲಿ ಘರ್ಜಿಸಿರುವ ರೀತಿ ನೋಡಿದರೆ ಇನ್ನೂ ಅವರ ಆಕ್ರೋಶ ತಣಿದಿಲ್ಲ. ಶೆಟ್ಟರ್ ಕುರಿತಂತೆಯೂ ಅವರು ಅಸಹನೆಯನ್ನು ಹೊಂದಿದ್ದಾರೆ ಎನ್ನುವ ಅಂಶ ಎದ್ದು ಕಾಣುತ್ತದೆ. ಸರಕಾರವನ್ನು ಅದೆಷ್ಟು ಹೀನಾಯವಾಗಿ ನಿಂದಿಸಿದ್ದಾರೆಂದರೆ, ವಿರೋಧ ಪಕ್ಷವೂ ಇಷ್ಟು ಆಕ್ರೋಶವನ್ನು ಈವರೆಗೆ ವ್ಯಕ್ತಪಡಿಸಿಲ್ಲ. ಯಡಿಯೂರಪ್ಪ ಈ ಪರಿ ವ್ಯಗ್ರರಾಗುವುದಕ್ಕೆ ರೈತರ ಮೇಲೆ ಹುಟ್ಟಿದ ಅನಿರೀಕ್ಷಿತ ಪ್ರೀತಿ ಎನ್ನುವುದನ್ನು ನಂಬುವಷ್ಟು ಮುಗ್ಧರಲ್ಲ ನಾಡಿನ ಜನತೆ. ವರಿಷ್ಠರ ವಿರುದ್ಧ ಮತ್ತೊಂದು ಯುದ್ಧ ಹೂಡುವುದಕ್ಕೆ ಯಡಿಯೂರಪ್ಪ ಸಿದ್ಧರಾಗುತ್ತಿರುವ ಸೂಚನೆಯಿದು.

ಈಗಾಗಲೇ ಯಡಿಯೂರಪ್ಪರ ಟೀಕೆಯನ್ನು ಸದಾನಂದ ಗೌಡ ಖಂಡಿಸಿದ್ದಾರೆ ಮಾತ್ರವಲ್ಲ, ಬಿಜೆಪಿಯಲ್ಲಿ ಮತ್ತೆ ಗೊಂದಲ ಹುಟ್ಟಿಸುವ ಪ್ರಯತ್ನದಲ್ಲಿದ್ದಾರೆ ಎಂದೂ ಆರೋಪಿಸಿದ್ದಾರೆ. ಇದರಲ್ಲಿ ಒಂದಿಷ್ಟು ಸತ್ಯವಿದೆ. ನಾಳೆ ಜಗದೀಶ್ ಶೆಟ್ಟರ್ ವರಿಷ್ಠರ ಪರವಾಗಿ ನಿಂತು ಬಿಟ್ಟರೆ ಯಡಿಯೂರಪ್ಪ ಮತ್ತೆ ದಂಗೆಯೇಳುವ ಸಾಧ್ಯತೆಯಿದೆ. ಪಕ್ಷಾಧ್ಯಕ್ಷ ಸ್ಥಾನ ಯಾರಿಗೆ ಸೇರಬೇಕು ಎನ್ನುವುದು ಎಲ್ಲಿಯವರೆಗೆ ಇತ್ಯರ್ಥವಾಗುವುದಿಲ್ಲವೋ, ಅಲ್ಲಿಯವರೆಗೆ ಬಿಜೆಪಿ ಸರಕಾರ ಕೆಂಡದ ಮೇಲೆ ನಿಂತಿರಬೇಕಾಗುತ್ತದೆ. ಅದೇನೇ ಇರಲಿ.

ಬರ ಮತ್ತು ರೈತರ ಕುರಿತಂತೆ ಸರಕಾರ ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಸುವ ಅಗತ್ಯವಂತೂ ಇದೆ. ಕಾರಣ ಏನೇ ಇರಲಿ, ಯಡಿಯೂರಪ್ಪರ ಆಕ್ರೋಶದಿಂದ ಸರಕಾರದ ಮೇಲೆ ಭಾರೀ ಒತ್ತಡ ಬಿದ್ದಂತಾಗಿದೆ. ವಿರೋಧ ಪಕ್ಷಕ್ಕೂ ಆನೆ ಬಲಬಂದಿದೆ. ಈ ಹಿನ್ನೆಲೆಯಲ್ಲಾದರೂ ರಾಜ್ಯ ಸರಕಾರ ಮುಂದಿನ ದಿನಗಳನ್ನು ನಾಡಿಗಾಗಿ ಮೀಸಲಿಟ್ಟರೆ ಅದು ನಾಡಿನ ಜನತೆಯ ಅದೃಷ್ಟ.

(ಚಿತ್ರಕೃಪೆ: ದ ಹಿಂದು ಮತ್ತು ಇತರೆ ಅಂತರ್ಜಾಲ ತಾಣಗಳು)

Leave a Reply

Your email address will not be published. Required fields are marked *