ವರ್ಷ ತುಂಬಿದ ಸಂದರ್ಭದಲ್ಲಿ ವರ್ತಮಾನದ ಪ್ರಸ್ತುತತೆ….


ಸ್ನೇಹಿತರೆ,

ಕಳೆದ ವರ್ಷದ ಆಗಸ್ಟ್ 10 ರಂದು ಪೀಠಿಕೆ ಲೇಖನದ ಮೂಲಕ ವರ್ತಮಾನ.ಕಾಮ್ ಆರಂಭಗೊಂಡಿದ್ದು ನಿಮ್ಮಲ್ಲಿ ಹಲವರಿಗೆ ನೆನಪಿರಬಹುದು. ಇತ್ತೀಚಿನ ದಿನಗಳಲ್ಲಿ ವರ್ತಮಾನ.ಕಾಮ್ ಪರಿಚಯವಾಗಿರುವ ಮತ್ತು ಆ ಲೇಖನ ಓದಿಲ್ಲದ ಓದುಗರು ದಯವಿಟ್ಟು ಆ ಲೇಖನವನ್ನು ಒಮ್ಮೆ ಓದಲು ವಿನಂತಿಸುತ್ತೇನೆ. ವರ್ತಮಾನ ಆರಂಭಿಸಲು ನಮಗಿದ್ದ ಪ್ರೇರಣೆ ಮತ್ತು ಆಶಯ ನಿಮಗೆ ಗೊತ್ತಾಗಬಹುದು ಎಂದು ಭಾವಿಸುತ್ತೇನೆ.

ಈಗ ಒಂದು ವರ್ಷ ಪೂರ್ತಿಯಾಗಿದೆ. ಹಿಂದಿರುಗಿ ನೋಡಿದರೆ, ವೈಯಕ್ತಿಕವಾಗಿ ಒಂದಷ್ಟು ಸಂತಸ ಮತ್ತು ಒಂದಷ್ಟು ಭ್ರಮನಿರಸನ ಆಗುತ್ತಿದೆ. ಸಂತಸದ ವಿಚಾರಕ್ಕೆ ನಂತರ ಬರುತ್ತೇನೆ. ಇನ್ನೂ ಪರಿಣಾಮಕಾರಿಯಾಗಿ ಮಾಡಬಹುದಿತ್ತೇನೊ ಎನ್ನುವ ವಿಚಾರಕ್ಕೆ ಅಸಂತೃಪ್ತಿ ಇದೆ. ಜೊತೆಗಿರುತ್ತೇವೆ ಎಂದ ಹಲವರು ಯಾಕೆ ಸಕ್ರಿಯವಾಗಿ ತೊಡಗಿಸಿಕೊಳ್ಳಲಿಲ್ಲ ಎಂಬ ಪ್ರಶ್ನೆ ಕಾಡುತ್ತದೆ. ಮಾಡಬಹುದಾಗಿದ್ದ ಅನೇಕವನ್ನು ನನ್ನ ನಿರುತ್ಸಾಹ ಅಥವ ಅಸ್ಪಷ್ಟತೆಯ ಕಾರಣ ಮಾಡಲಾಗದೆ ಹೋಯಿತೇನೊ ಎಂದೂ ಅನ್ನಿಸುತ್ತದೆ. ಜೊತೆಗೆ ಸಮಾನಮನಸ್ಕರನ್ನು ಒಳಗೊಳ್ಳುವಂತೆ ಮಾಡುವ ಪ್ರಯತ್ನವನ್ನು ಇನ್ನೂ ಹೆಚ್ಚು ಮಾಡಲಾಗದೆ ಹೋದದ್ದಕ್ಕೆ ಖೇದವಿದೆ. ಕನ್ನಡದಂತೆಯೇ ಕರ್ನಾಟಕದ ಇಂಗ್ಲಿಷ್ ಬರಹಗಾರರನ್ನೂ ಒಳಗೊಳ್ಳಲಾಗದೇ ಹೋದದ್ದಕ್ಕೆ ವಿಷಾದವಿದೆ. ಒಟ್ಟಿನಲ್ಲಿ ಅಸಂತೃಪ್ತಿಯ ಪಾಲೇ ಹೆಚ್ಚು.

ಆದರೆ, ವೈಯಕ್ತಿಕ ನೆಲೆಯಿಂದ ಹೊರಗೆ ನಿಂತು ನೋಡಿದಾಗ, ವರ್ತಮಾನ.ಕಾಮ್ ಕಳೆದ ಒಂದು ವರ್ಷದಲ್ಲಿ ಪ್ರಸ್ತುತವಾದ ಬಗೆಯನ್ನು ನೋಡಿ ಖುಷಿಯಾಗುತ್ತದೆ. ಕರ್ನಾಟಕದ ಯಾವೊಂದು ಮಾಧ್ಯಮ ಸಂಸ್ಥೆಯೂ ಎತ್ತದೇ ಹೋದಂತಹ ಹಲವು ಗಂಭೀರ ವಿಚಾರಗಳನ್ನು ವರ್ತಮಾನ ಮಾತ್ರ ಎತ್ತಿದೆ (ನ್ಯಾಯಾಧೀಶ ಬನ್ನೂರಮಠರ ಕುರಿತ ಲೇಖನ, ಕೋರ್ಟ್ ಆವರಣದಲ್ಲಿ ನಡೆದ ಗಲಭೆಯ ಬಹುಮುಖಗಳನ್ನು ಲೇಖನಗಳ ಮೂಲಕ ಅನಾವರಣಗೊಳಿಸಿದ್ದು. ಪ್ರಜಾವಾಣಿಯ ಮಾಲೀಕರಿಗೆ ಸಂಬಂಧಿಸಿದ ಡಿನೋಟಿಫಿಕೇಶನ್ ಲೇಖನ, ಇತ್ಯಾದಿ). ತನ್ಮೂಲಕ ಅದು ರಾಜ್ಯದ ಹಲವು ಕಡೆಗಳಲ್ಲಿ ಪ್ರಸ್ತುತವಾಗುವಂತೆ ಮಾಡಿದೆ. ಇಂಟರ್‌ನೆಟ್‌ಗೆ ತೆರೆದುಕೊಂಡಿರುವ ಕನ್ನಡ ಪತ್ರಕರ್ತರ ಮತ್ತು ಬರಹಗಾರರ ವಲಯದಲ್ಲಿ ವರ್ತಮಾನ್.ಕಾಮ್ ಸಾಕಷ್ಟು ಪ್ರಸ್ತುತತೆ ಪಡೆದುಕೊಂಡಿದೆ. ಮಾಧ್ಯಮಗಳ ವಿಚಾರಕ್ಕಂತೂ, ಅದರ ಬಗೆಗಿನ ವಿಮರ್ಶೆ ಮತ್ತು ಭ್ರಷ್ಟತೆಯ ಬಗ್ಗೆ ವರ್ತಮಾನ.ಕಾಮ್ ಹಲವು ಸಲ ಸಾಕ್ಷ್ಯಾಧಾರಗಳ ಸಮೇತ ಮಾತನಾಡಿದೆ. ನಮ್ಮ ಹಲವು ಲೇಖಕರು ನಿರ್ದಾಕ್ಷಿಣ್ಯವಾಗಿ ತಮ್ಮದೇ ವೃತ್ತಿಯ ಕೊಳಕುಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ ಮತ್ತು ಅದು ಸರಿಹೋಗಬೇಕಾದ ತುರ್ತಿನ ಬಗ್ಗೆ ದ್ವನಿಯೆತ್ತಿದ್ದಾರೆ. ರಾಜಕೀಯ ಮತ್ತು ಸಾಮಾಜಿಕ ವಿಷಯಗಳ ಬಗ್ಗೆ ತುಂಬ ಸ್ಪಷ್ಟವಾಗಿ ಈ ವೇದಿಕೆಯಲ್ಲಿ ವಿಚಾರಗಳು ಮಂಡನೆಯಾಗಿವೆ. ಭ್ರಷ್ಟಾಚಾರದ ವಿರುದ್ಧ ನಿರಂತರವಾಗಿ ನಾವು ಮಾತನಾಡುತ್ತ ಬಂದಿದ್ದೇವೆ. ದಾಖಲೆಗಳ ಸಮೇತ ಬರೆದಿದ್ದೇವೆ. ಇದೆಲ್ಲದರ ಜೊತೆಗೆ ಸಾಮಾಜಿಕ ಬದ್ಧತೆಯ ಹಿನ್ನೆಲೆಯಲ್ಲಿ ಕೆಲವು ಸಮಾನಮನಸ್ಕರ ಪ್ರೇರಣೆಯಿಂದ ಕೆಜಿಎಫ್‍ನ ಮಲಹೊರುವವರ ಕುಟುಂಬಗಳಿಗೆ ವರ್ತಮಾನ ವೇದಿಕೆಯ ಮೂಲಕ ಸಾಧ್ಯವಾದಷ್ಟು ಹಣಸಂಗ್ರಹಿಸಿ ತಲುಪಿಸುವಂತಹ ಕಾರ್ಯವೂ ಆಗಿದೆ.

ಈ ಸದರ್ಭದಲ್ಲಿ ನಮ್ಮ ಜೊತೆ ನಿಂತ ಹಲವರನ್ನು ನೆನೆಯಲೇಬೇಕು. ಹಿರಿಯ ಪತ್ರಕರ್ತ ಜಗದೀಶ್ ಕೊಪ್ಪರವರು ನಮಗೆ ದೊಡ್ಡ ರೀತಿಯ ಬೆಂಬಲ ಕೊಡುತ್ತಿದ್ದಾರೆ. ಅವರು ಬರೆದ ಮೂರೂ ಸರಣಿ ಲೇಖನಗಳು ವರ್ತಮಾನ.ಕಾಮ್ continuity ಕಾಪಾಡಿಕೊಳ್ಳಲು ಸಹಾಯ ಮಾಡಿದವು. ಘಟನೆಯೊಂದಕ್ಕೆ ತತ್‌ಕ್ಷಣ ಸ್ಪಂದಿಸಿ ಅವರು ಬರೆದ ಹಲವು ಲೇಖನಗಳು ವರ್ತಮಾನದ ವಲಯವನ್ನು ವಿಸ್ತರಿಸಿದವು. ಮಂಗಳೂರಿನ ಚಿದಂಬರ ಬೈಕಂಪಾಡಿಯವರೂ ಅದೇ ರೀತಿಯ ಬೆಂಬಲ ಕೊಡುತ್ತ ಬಂದಿದ್ದಾರೆ. ಹೊಸಪೇಟೇಯ ಪರಶುರಾಮ್ ಕಲಾಲ್‌ರು ಸಾಧ್ಯವಾದಾಗಲೆಲ್ಲ ಬರೆದು ಬೆಂಬಲಿಸಿದ್ದಾರೆ. ಮಂಗಳೂರಿನ ಯುವ ಪತ್ರಕರ್ತ ನವೀನ್ ಸೂರಿಂಜೆ, ದಕ್ಷಿಣ ಕನ್ನಡದ ವಾಸ್ತವವನ್ನು ನಮಗೆಲ್ಲ ಪರಿಚಯಿಸುತ್ತಿದ್ದಾರೆ. ಬೆಂಗಳೂರಿನ ಶ್ರೀಪಾದ್ ಭಟ್ ಲೇಖನಗಳನ್ನು ಬರೆಯುವುದಷ್ಟೇ ಅಲ್ಲದೆ ಬೇರೆಬೇರೆ ಕಡೆಯಲ್ಲೂ ವರ್ತಮಾನ.ಕಾಮ್ ಅನ್ನು ಪರಿಚಯಿಸುತ್ತಿದ್ದಾರೆ. ಇನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬೆಂಬಲಿಸುತ್ತಿರುವವರ ಹಿಂಡೇ ಇದೆ. ಹಲವು ಕಾರಣಗಳಿಂದಾಗಿ ಅವರ ಹೆಸರು ತೆಗೆದುಕೊಳ್ಳಲಾಗದ ಅನಿವಾರ್ಯತೆ ಇದೆ. ಈ ಎಲ್ಲರಿಗೂ ಧನ್ಯವಾದ ಮತ್ತು ಕೃತಜ್ಞತೆಗಳು.

ಈ ಹಿನ್ನೆಲೆಯಲ್ಲಿ ನಾವು ಈ ವೆಬ್‌ಸೈಟ್ ನಿರ್ವಹಣೆಗೆ ವ್ಯಯಿಸಿರುವ ಹಣಕ್ಕೆ ಹೋಲಿಸಿದರೆ ಅದು ಗಳಿಸಿರುವ credibility ಹೆಚ್ಚು ಎನ್ನಿಸುತ್ತದೆ. ಅದಕ್ಕೆ ಮೂಲಕಾರಣ, ಬೆಂಬಲಿಸುತ್ತಿರುವ ಜನರ ಪ್ರೀತಿ, ಬದ್ಧತೆ, ಮತ್ತು ಸ್ಪಷ್ಟತೆ; ಮತ್ತು ಒಟ್ಟಾರೆಯಾಗಿ ನಾವೆಲ್ಲ ವ್ಯಯಿಸಿರುವ ನಮ್ಮ ಒಟ್ಟು ಶ್ರಮ. ಅದು ಬರೆಯುವುದಕ್ಕಾಗಿರಬಹುದು, ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡುವಂತಹ ಹಿನ್ನೆಲೆ ಕಾರ್ಯ ಆಗಿರಬಹುದು, ಮತ್ತು ಅದನ್ನು ಸಾಮಾಜಿಕ ತಾಣಗಳಲ್ಲಿ ಮತ್ತು ಇಮೇಲ್‌ಗಳಲ್ಲಿ ಹಂಚಿಕೊಂಡಿರುವ ಸಮಯ ಮತ್ತು ಶ್ರಮದ್ದಾಗಿರಬಹುದು. ಕಣ್ಣಿಗೆ ಕಾಣದ, ಆದರೆ ಪರಿಣಾಮಕಾರಿಯಾದ ಸಹಸ್ರಾರು ಗಂಟೆಗಳ ಸಾಮೂಹಿಕ ಶ್ರಮವನ್ನು ಈ ಒಂದು ವರ್ಷದಲ್ಲಿ ಈ ಪ್ರಯತ್ನ ಪಡೆದುಕೊಂಡಿದೆ. ಯಾವ ರೀತಿಯಿಂದಲೂ ಈ ಸಮಯ ಮತ್ತು ಶ್ರಮ ಕಮ್ಮಿಯಾದದ್ದಲ್ಲ. ಮತ್ತು ತಮ್ಮ ಸಮಯವನ್ನು ಕೊಟ್ಟ ಪ್ರತಿಯೊಬ್ಬರಿಗೂ ಧನ್ಯವಾದ ಮತ್ತು ಕೃತಜ್ಞತೆ ಅರ್ಪಿಸುವ ಕರ್ತವ್ಯ ನನ್ನದು.

ಅಂದ ಹಾಗೆ, ಈ ವೆಬ್‌ಸೈಟ್ ನಿರ್ವಹಣೆಗೆ ಈ ಒಂದು ವರ್ಷದಲ್ಲಿ ವ್ಯಯಿಸಿರುವ ಹಣದ ಬಗ್ಗೆ ಒಂದು ಮಾತು. ರಿಜಿಸ್ಟ್ರೇಷನ್ ಮತ್ತು ಹೋಸ್ಟಿಂಗ್‌ಗೆಂದು ಸುಮಾರು ಐದು ಸಾವಿರ ವೆಚ್ಚವಾಗಿದೆ. ಮತ್ತು ನಮ್ಮಲ್ಲಿ ಅರೆಕಾಲಿಕವಾಗಿ ಕೆಲಸ ಮಾಡುತ್ತಿರುವ ನಮ್ಮ ಸಹೋದ್ಯೋಗಿಯೊಬ್ಬರಿಗೆ ಇಲ್ಲಿಯವರೆಗೆ ಕೊಟ್ಟಿರುವುದನ್ನು ಲೆಕ್ಕ ಹಾಕಿದರೆ ಬಹುಶಃ ಈ ಒಂದು ವರ್ಷದಲ್ಲಿ ಸುಮಾರು ಐವತ್ತು ಸಾವಿರ ಖರ್ಚಾಗಿದೆ. ಇನ್ನೂ ಹೆಚ್ಚು ಮಾಡಬೇಕಾಗಿತ್ತೊ ಅಥವ ಕಮ್ಮಿ ಮಾಡಬಹುದಿತ್ತೊ ಎನ್ನುವ ಬಗ್ಗೆ ಸಂದೇಹಗಳಿವೆ. ಆದರೆ ನಮಗೆ ಸರಿಯಾದ ಸಂದರ್ಭದಲ್ಲಿ ನಮ್ಮ ಜೊತೆ ಕೈಜೋಡಿಸುವ ಇಚ್ಚೆಯುಳ್ಳ, ದಿನಕ್ಕೆ ಒಂದೆರಡು ಗಂಟೆಗಳನ್ನು ಕಡ್ಡಾಯವಾಗಿ ವರ್ತಮಾನ.ಕಾಮ್‌ಗೆ ನೀಡುವ ಕಾರ್ಯಕರ್ತರ ರೀತಿಯ ಸ್ನೇಹಿತರು ಸಿಕ್ಕಿದ್ದರೆ, ಖಂಡಿತ ಹತ್ತು-ಹದಿನೈದು ಸಾವಿರದ ಒಳಗೆ ನಮ್ಮ ಖರ್ಚುಗಳು ಮುಗಿದುಹೋಗುತ್ತಿದ್ದವು. ಉಳಿಕೆ ದುಡ್ಡನ್ನು ನಾವು ಬೇರೆಯೇ ಕಾರ್ಯಕ್ಕೆ ವಿನಿಯೋಗಿಸಬಹುದಿತ್ತು. ಅಂತಹ ಸ್ನೇಹಿತರ ತಲಾಷೆ ನಡೆಯುತ್ತಲೇ ಇದೆ.

ವರ್ತಮಾನ.ಕಾಮ್‌ಗೆ ತನ್ನದೇ ಆದ ಯಾವೊಂದು ಆದಾಯ ಮೂಲವೂ ಇಲ್ಲದ, ಸದ್ಯದ ಸಂದರ್ಭದಲ್ಲಿ ಹಾಗೆ ಸಾಧ್ಯವೂ ಆಗದ ಸ್ಥಿತಿಯಲ್ಲಿ, ಕೇವಲ ನನ್ನ ವೈಯಕ್ತಿಕ ಹಣದಲ್ಲಿ ಖರ್ಚುಗಳನ್ನು ನಿಭಾಯಿಸುವುದು ವೆಬ್‌ಸೈಟ್‌ನ ದೀರ್ಘಕಾಲೀನ ದೃಷ್ಟಿಯಿಂದ ಒಳ್ಳೆಯದಲ್ಲ. ಅದನ್ನು ಸಾವಯಿಕವಾಗಿ ಬೆಳೆಸಬೇಕು, ಮತ್ತು ಅದೇ ರೀತಿ ಅದು ತನ್ನ ಕಾಲ ಮೇಲೆ ತಾನು ನಿಲ್ಲುವಂತಹ ಒಂದು ಫೈನಾನ್ಷಿಯಲ್ ಮಾಡೆಲ್ ಒಂದನ್ನು ನಿರ್ಮಿಸಿಕೊಳ್ಳಬೇಕು. ಆದರೆ, ಈ ಒಂದು ವರ್ಷ ಅದರ ಕಡೆ ಹೆಚ್ಚು ಗಮನ ಕೊಡದೆ ವರ್ತಮಾನ.ಕಾಮ್‌ ಅನ್ನು ಇನ್ನೂ ಹೆಚ್ಚಿಗೆ ಪ್ರಸ್ತುತ ಮಾಡುವ ಮತ್ತು ಅದರ ವಲಯವನ್ನು ವಿಸ್ತಾರ ಮಾಡುವ ಕಡೆಗಷ್ಟೇ ಗಮನ ಕೊಡೋಣ ಎಂದುಕೊಳ್ಳುತ್ತಿದ್ದೇನೆ.

ಹಾಗೆಂದು, ಯಾರಾದರೂ ವರ್ತಮಾನ.ಕಾಮ್‌ನ ಒಂದಷ್ಟು ಖರ್ಚುಗಳನ್ನು ನಿಭಾಯಿಸಲು ಮುಂದೆ ಬಂದರೆ ಅದಕ್ಕೆ ಕೃತಜ್ಞತಾಪೂರ್ವಕವಾದ ಸ್ವಾಗತವಿದೆ. ಅಷ್ಟೇ ಅಲ್ಲ, ಯಾವುದಾದರೂ ಅಧ್ಯಯನ/ಕಾರ್ಯಕ್ಷೇತ್ರ/ಅಸೈನ್‌ಮೆಂಟ್ ರೀತಿಯ ಯೋಜನೆಗಳಿಗೆ ಹಣಸಹಾಯ ಅಥವ ಪ್ರಾಯೋಜಕತ್ವದ ಮೂಲಕ ವರ್ತಮಾನದ ಜೊತೆಗೆ ತೊಡಗಿಸಿಕೊಂಡು ಕೆಲಸ ಮಾಡಬೇಕು ಎಂದು ಬಯಸಿದರೆ ಅಂತಹದೂ ಸಾಧ್ಯವಿದೆ. ಇದನ್ನು ನಾವು ಉತ್ತೇಜಿಸುತ್ತೇವೆ ಸಹ. ಒಂದಿಬ್ಬರು ಸ್ನೇಹಿತರು ಈ ಮೊದಲೆ ಈ ಬಗ್ಗೆ ಪ್ರಸ್ತಾಪಿಸಿದ್ದರು. ಬಹುಶಃ ಈ ವರ್ಷ ಅಂತಹುದೊಂದು ಸಾಧ್ಯವಾಗಬಹುದೇನೊ. ವರ್ತಮಾನದ ಓದುಗರಲ್ಲಿರಬಹುದಾದ ಆಸಕ್ತ ಜನ ಅಥವ ಸಂಸ್ಥೆಗಳು ಆ ನಿಟ್ಟಿನಲ್ಲಿ ಯೋಚಿಸಲು ವಿನಂತಿಸುತ್ತೇನೆ. ಅಂದ ಹಾಗೆ, ಗಾಂಧಿ ಜಯಂತಿ ಕಥಾಸ್ಪರ್ಧೆಯನ್ನು ವರ್ತಮಾನ.ಕಾಮ್‌ನ ಮೂಲಕ ಆಯೋಜಿಸಿರುವುದನ್ನು ನೀವು ಗಮನಿಸಿರಬಹುದು. ಅಂತಹುದೇ ಯಾವುದಾದರೂ ಕತೆ-ಕವಿತೆ-ಲೇಖನ ಸ್ಪರ್ಧೆಗಳಿಗೆ (ವರ್ತಮಾನ.ಕಾಮ್‌ನ ಆಶಯಗಳಿಗೆ ಪೂರಕವಾಗಿರುವಂತಹ ವಿಷಯಗಳ ಮೇಲೆ) ಪ್ರಾಯೋಜಕರಾಗಲು ಮುಂದೆ ಬಂದರೆ ನಾವೆಲ್ಲ ಖುಷಿ ಪಡುತ್ತೇವೆ. ಅದು ಈ ಪ್ರಯತ್ನದಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ತೊಡಗಿಸಿಕೊಂಡಿರುವ ಎಲರಿಗೂ ಸ್ಫೂರ್ತಿ ಮತ್ತು ಖುಷಿ ಕೊಡುತ್ತದೆ.

ಇನ್ನು ಬರಲಿರುವ ದಿನಗಳಲ್ಲಿ ವರ್ತಮಾನ.ಕಾಮ್ ತನ್ನ ದಿಕ್ಕುದೆಸೆಗಳನ್ನು ಹೇಗೆ ವಿಸ್ತರಿಸಿಕೊಳ್ಳಬೇಕು ಎಂದು ಚರ್ಚೆಗಳಾಗುತ್ತಿವೆ. ಈ ವರ್ಷವೂ ಸಹ ಹಲವು ಕಡೆ ಇದೇ ವಿಷಯಕ್ಕಾಗಿ ಪ್ರವಾಸಗಳನ್ನೂ ಮಾಡಿ, ಹಲವರನ್ನು ಭೇಟಿ ಮಾಡುವ ಕೆಲಸವೂ ನಡೆಯಲಿದೆ. ವಿಡಿಯೊ ಕಾರ್ಯಕ್ರಮಗಳನ್ನು ಮಾಡುವ ಯೋಚನೆ ಇದೆ. ಇಲ್ಲಿ ಪ್ರಸ್ತಾಪಿಸುವುದಕ್ಕಿಂತ ಆ ಯೋಚನೆಗಳು ಕಾರ್ಯರೂಪಕ್ಕೆ ಬಂದು ಪ್ರತ್ಯಕ್ಷವಾದರೇನೆ ಚೆನ್ನ. ಮೇಲೆ ಹೇಳಿದ ರೀತಿಗಳಲ್ಲಿ ಅಥವ ಇನ್ಯಾವುದೇ ರೀತಿಯಲ್ಲಿ ನಿಮ್ಮ ಸಹಾಯ ಮತ್ತು ಸಹಕಾರ ಹೆಚ್ಚೆಚ್ಚು ದೊರೆಯುತ್ತ ಹೋದರೆ ನಮ್ಮ ಆಶಯಗಳಲ್ಲಿ ಒಂದಾದ ಸಕಾರಣಗಳಿಗಾಗಿ ಪರ್ಯಾಯ ಮಾಧ್ಯಮವೊಂದನ್ನು ಕರ್ನಾಟಕದಲ್ಲಿ ಕಟ್ಟಿಕೊಳ್ಳುವ ಹಂಬಲ ಕಾರ್ಯಸಾಧ್ಯವಾಗುತ್ತದೆ. ಆ ನಂಬಿಕೆಯಲ್ಲಿ ಎರಡನೇ ವರ್ಷಕ್ಕೆ ಅಡಿಯಿಡುತ್ತಿದ್ದೇವೆ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

6 thoughts on “ವರ್ಷ ತುಂಬಿದ ಸಂದರ್ಭದಲ್ಲಿ ವರ್ತಮಾನದ ಪ್ರಸ್ತುತತೆ….

  1. ರಾಕೇಶ್ ಶೆಟ್ಟಿ

    ಶುರು ಮಾಡುವುದು ಸುಲಭ ಅದನ್ನು ನಿಭಾಯಿಸುವುದು ಮತ್ತು continuity maintain ಮಾಡುವುದು ಎಷ್ಟು ಕಷ್ಟ ಅನ್ನುವುದರ ಅರಿವಿದೆ ನನಗೆ ‘ನಿಲುಮೆ’ಯ ಮೂಲಕ.ಆ ದಿಸೆಯಲ್ಲಿ ವರ್ತಮಾನ ಸರಿಯಾಗೇ ಸಾಗುತ್ತಿದೆ.
    ಮುಖ್ಯವಾಹಿನಿ ಮಾಧ್ಯಮಗಳನ್ನ ನಂಬಿ ಕೂರದೆ ನಮ್ಮದೇ ಇತಿ-ಮಿತಿಯಲ್ಲಿ ನಾವು ನಂಬಿರುವ ತತ್ವ-ಸಿದ್ಧಾಂತಕ್ಕೆ ಬದ್ಧರಾಗಿ ನಡೆಯುತ್ತಿರೋಣ.
    ವರ್ತಮಾನಕ್ಕೆ ಆಗಾಗ ಬರುವಂತೆ ಮಾಡುವುದು ಜಗದೀಶ್ ಸರ್ ಅವರ ಲೇಖನಗಳು ಅವರಿಗೂ ಧನ್ಯವಾದಗಳು 🙂

    ವರ್ಷಾಚರಣೆಗೆ ಅಭಿನಂದನೆಗಳು ರವಿ.ಶುಭವಾಗಲಿ 🙂

    Reply
  2. Mallikarjuna Hosapalya

    ಒಂದು ವರ್ಷದಲ್ಲಿ ಸಾಕಷ್ಟು ಹಲವಾರು ಸಾಧನೆ ಮಾಡಿದ್ದೀರಿ. ಅದರಲ್ಲಿ ’ಭೂಮಿ ಹುಟ್ಟಿದ್ದು ಹೇಗೆ’ ಸಾಕ್ಷ್ಯಚಿತ್ರ ತಯಾರಿಕೆ ಅತ್ಯಂತ ಮೌಲ್ಯಯುತವಾದದ್ದು. ಅಭಿನಂದನೆಗಳು.
    -ಮಲ್ಲಿಕಾರ್ಜುನ ಹೊಸಪಾಳ್ಯ

    Reply
  3. ಸುಧಾ ಚಿದಾನಂದಗೌಡ

    ಎರಡನೆಯ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದ ಶುಭಾಶಯಗಳು. ನಿಮ್ಮ ಕನಸುಗಳೆಲ್ಲ ನನಸಾಗಲಿ.ವರ್ತಮಾನ ಹೆಚ್ಚು ಜನರನ್ನು ತಲುಪಲಿ ಎಂಬ ಹಾರೈಕೆ.

    Reply
  4. sushrutha

    Varthamaana da sangathi gala visheshane, varthamaana kke spandiso guna dindaagi Varthaamana kke prasthutha aagiro Varthamaana 2 ne varusha da harusha dalliruvudu namagoo harusha thandide. Varthamaana Bhavishyathinalloo heege josh nondige munduvariyali

    Reply
  5. Manjunatha dasanapura

    ಶುಭಾಶಯಗಳು, ಇತ್ತೀಚಿಗಷ್ಟೇ ‘ವರ್ತಮಾನ’ವನ್ನು ಓದಲು ಪ್ರಾರಂಭಿಸಿದ್ದೇನೆ. ಇಲ್ಲಿ ದಾಖಲಾಗಿರುವ ವಿಷಯಗಳು ನಮ್ಮನ್ನು ಭಿನ್ನವಾಗಿ ಆಲೋಚಿಸುವುದಕ್ಕೆ ದಾರಿ ಮಾಡಿಕೊಡುತ್ತವೆ….

    Reply

Leave a Reply to ರಾಕೇಶ್ ಶೆಟ್ಟಿ Cancel reply

Your email address will not be published. Required fields are marked *