ಭೂಮಿ ಹುಟ್ಟಿದ್ದು ಹೇಗೆ? : ಭಾಗ -1

 


ಕಮಲಾಕರ
© ಹಕ್ಕು: ಮೌಲ್ಯಾಗ್ರಹ ಪ್ರಕಾಶನ


ಭೂಮಿಗೆ 450 ಕೋಟಿ ವರ್ಷಗಳ ಇತಿಹಾಸವಿದೆ. ಅನಂತವಾದ ವಿಶ್ವದಲ್ಲಿ ಭೂಮಿಯ ಹೊರತಾಗಿ ಮತ್ತೊಂದು  ಹಸಿರು, ಉಸಿರು, ನೀರು ಕಾಣುವ ಮತ್ತು ಜೀವಿಗಳು ವಾಸಿಸುತ್ತಿರುವ ನೆಲ ಕಾಣಿಸುವುದಿಲ್ಲ. ಆದರೆ ಹಲವು ಗೆಲಾಕ್ಸಿಗಳು, ಅಸಂಖ್ಯ ನಕ್ಷತ್ರಗಳು, ಕೋಟ್ಯಂತರ ಆಕಾಶ ಕಾಯಗಳಿವೆ. ಇಂಥ ವಿಶ್ವದಲ್ಲಿ ಭೂಮಿ ಸಣ್ಣ ಕಣವಷ್ಟೆ. ಆದರೆ ಅದರ ವೈಶಿಷ್ಟ್ಯಗಳಿಂದಾಗಿ ಭೂಮಿ ಅಸಾಮಾನ್ಯ ಗ್ರಹವಾಗಿ ನಿಲ್ಲುತ್ತದೆ. ವಿಶ್ವದಲ್ಲಿ ಹೋಲಿಕೆಗೆ ಮತ್ತೊಂದು ಗ್ರಹ ಇದುವರೆಗೂ ಸಿಕ್ಕಿಲ್ಲ. ಇಂಥ ಅನನ್ಯವಾದ ಗ್ರಹದ ಹುಟ್ಟಿನ ಮೂಲವನ್ನು ಪರಿಚಯಿಸುವ ಒಂದು ಸಣ್ಣ ಪ್ರಯತ್ನವಿದು.

ಭೂಮಿ ಇಡೀ ವಿಶ್ವದಲ್ಲಿ ಒಂದು ಸಣ್ಣ ಕಣವಷ್ಟೆ. ಭೂಮಿಯಂತೆ ವಿಶಿಷ್ಟವಾಗಿಲ್ಲದಿದ್ದರೂ, ಅಸಂಖ್ಯವೂ, ಅಗಾಧವೂ ಆದ ಕಾಯಗಳನ್ನು ವಿಶ್ವವು ಹೊಂದಿದೆ. ಒಂದು ಕಾಲಕ್ಕೆ ಈ ವಿಶ್ವ ಎನ್ನುವುದೇ ಇರಲಿಲ್ಲ ಎನ್ನುತ್ತಾರೆ ವಿಜ್ಞಾನಿಗಳು. ನಿಮಗೆ ಅಚ್ಚರಿಯಾಗಬಹುದು. ಸೌರವ್ಯೂಹ, ಕ್ಷೀರಪಥದಂತಹ ಗೆಲಾಕ್ಸಿಗಳು, ನಕ್ಷತ್ರಗಳು, ನಕ್ಷತ್ರಪುಂಜಗಳು, ಕ್ಷುದ್ರಗ್ರಹಗಳು, ಕಪ್ಪು ಕುಳಿಗಳು, ಧೂಮಕೇತುಗಳು.. ಹೀಗೆ ಏನನ್ನೋ ಒಳಗೊಂಡಿರುವ ವಿಶ್ವ ಕೂಡ ಇರಲೇ ಇಲ್ಲ ಎನ್ನುತ್ತಾರೆ.. ಭೂಮಿ ಹುಟ್ಟುವ ಮುನ್ನ ಭೂಮಿಯ ತಾಯಿಯಂತೆ ಇರುವ ವಿಶ್ವ ಹೇಗೆ ಹುಟ್ಟಿತು?

ವಿಶ್ವದ ಉಗಮ:

ಮೊದಲಿಗೆ ಏನೂ, ಏನೇನೂ ಇರಲಿಲ್ಲ. ಒಂದು ರೀತಿಯಲ್ಲಿ ಏಕಮೇವ ಶೂನ್ಯತೆ. ಆ ಏಕಶೂನ್ಯದ ಸುತ್ತಲೂ ಏನೂ ಇರಲಿಲ್ಲ. ಅಲ್ಲಿ ಅಂತರಿಕ್ಷವಾಗಲಿ, ಖಾಲಿ ಜಾಗವಾಗಲಿ… ಕೊನೆಗೆ ಕತ್ತಲಾಗಲಿ, ಏನೂ ಇರಲಿಲ್ಲ. ಅದು ಅಂತಹ ಸ್ಥಿತಿಯಲ್ಲಿ ಹೇಗೆ ಎಷ್ಟು ದಿನ ಇತ್ತು ಅಂತಲೂ ಗೊತ್ತಿಲ್ಲ. ಏಕೆಂದರೆ ಆಗ ಕಾಲವೂ ಇರಲಿಲ್ಲ. ಹಾಗಾಗಿ ಅದಕ್ಕೆ ಭೂತಕಾಲವಾಗಲಿ, ಇತಿಹಾಸವಾಗಲಿ ಇರಲಿಲ್ಲ…

ಇಂಥ ಏನೂ ಇಲ್ಲದ ಸ್ಥಿತಿಯಲ್ಲಿ ನಮ್ಮ ಈ ಬ್ರಹ್ಮಾಂಡ ಉದಯಿಸಿತು. ಯಾವಾಗ ಎಂದು ಕೇಳಬಹುದು.  ಬ್ರಹ್ಮಾಂಡ ವಿಜ್ಞಾನಿಗಳು (ಖಗೋಳ ವಿಜ್ಞಾನಿಗಳು) ಹೇಳುವ ಪ್ರಕಾರ ಸುಮಾರು 1370 ಕೋಟಿ ವರ್ಷಗಳ ಹಿಂದೆ..

ಅದು ಆಗಿದ್ದಾದರೂ ಹೇಗೆ? ಅಂತಹ ಒಂದು ಏಕಶೂನ್ಯತೆಯಿಂದ, ಪದಗಳಲ್ಲಿ ವರ್ಣಿಸಲಾಗದ ಅಗಾಧತೆಯಲ್ಲಿ, ಅನಂತ ಆಯಾಮಗಳಲ್ಲಿ, ಕಲ್ಪಿಸಿಕೊಳ್ಳಲಾಗದಷ್ಟು ವಿಸ್ತಾರ ವ್ಯೋಮಾಕಾಶದಲ್ಲಿ ಈ ಬ್ರಹ್ಮಾಂಡ ಕ್ಷಣಾರ್ಧದಲ್ಲಿ ಅಸ್ತಿತ್ವಕ್ಕೆ ಬಂದುಬಿಟ್ಟಿತು.

ಆ ಮೊದಲ ಸೆಕೆಂಡಿನಲ್ಲಿ ಗುರುತ್ವಾಕರ್ಷಣೆ ಮತ್ತು ಇತರ ಭೌತಶಾಸ್ತ್ರದ ಪ್ರಮುಖ ಬಲಗಳು ಉದಯಿಸಿದವು. ಒಂದು ನಿಮಿಷಕ್ಕಿಂತ ಕಮ್ಮಿ ಅವಧಿಯಲ್ಲಿ ಈ ಬ್ರಹ್ಮಾಂಡ ಲಕ್ಷಾಂತರ ಕೋಟಿ ಮೈಲುಗಳ ಅಗಲದಲ್ಲಿ ಬೆಳೆದು, ವಿಸ್ತಾರವಾಗಿ ಚಾಚಿಕೊಂಡಿತು. ಅದರ ಜೊತೆಗೆ ಸಹಸ್ರ ಕೋಟಿ ಡಿಗ್ರಿಗಳ ಶಾಖವೂ ಇತ್ತು. ಅದು ಪರಮಾಣು ಪ್ರಕ್ರಿಯೆಗಳನ್ನು ಸಾಧ್ಯವಾಗಿಸುವ ಶಾಖ. ಆ ಸಮಯದ ಪರಮಾಣು ಪ್ರಕ್ರಿಯೆಗಳು ಹಗುರ ಮೂಲಧಾತುಗಳಾದ ಜಲಜನಕ ಮತ್ತು ಹೀಲಿಯಂ ಅನ್ನು ಸೃಷ್ಟಿಸಿದವು. ಹೀಗೆ ಸಾಗುವ ಸೃಷ್ಟಿಕ್ರಿಯೆ ಮುಂದಕ್ಕೆ ವಿಶ್ವದಲ್ಲಿ ಇದ್ದಿರಬಹುದಾದ ಎಲ್ಲಾ ಭೌತವಸ್ತುಗಳಲ್ಲಿ ಶೇ. 98ನ್ನು ಕೇವಲ ಮೂರೇ ನಿಮಿಷಗಳಲ್ಲಿ ಉತ್ಪನ್ನ ಮಾಡಿತು.

ಕೇವಲ ಎರಡು-ಮೂರು ನಿಮಿಷಗಳಲ್ಲಿ ಏನೂ ಇಲ್ಲದ ಸ್ಥಿತಿಯಿಂದ ಅಗಾಧ, ಅನಂತ, ಸುಂದರ, ಅಪರಿಮಿತ ಸಾಧ್ಯತೆಗಳ ಬ್ರಹ್ಮಾಂಡ ಆಸ್ತಿತ್ವಕ್ಕೆ ಬಂದಿದ್ದು. ಇದನ್ನೆ (ಖಗೋಳ) ಬ್ರಹ್ಮಾಂಡವಿಜ್ಞಾನದ ವಿಜ್ಞಾನಿಗಳು ಬಿಗ್-ಬ್ಯಾಂಗ್, ಮಹಾ ಸ್ಫೋಟ ಎಂದು ಕರೆಯುವುದು. ಅದು ಸ್ಫೋಟಕ್ಕಿಂತ ಹೆಚ್ಚಾಗಿ ಇದ್ದಕ್ಕಿದ್ದಂತೆ ಬೃಹತ್ ಪ್ರಮಾಣದಲ್ಲಿ ಘಟಿಸಿದ ಮಹಾವಿಸ್ತರಣೆ.

ಭೂಮಿ ಎಂಬ ಬೆರಗು

ಹೀಗೆ ಉದ್ಭವವಾದ ಅಗಾಧ ವಿಶ್ವದಲ್ಲಿ ಭೂಮಿಯೇನು ಏಕಾಏಕಿ ಪ್ರತ್ಯಕ್ಷವಾಗಲಿಲ್ಲ. ವಿಶ್ವವು ಕೋಟಿ ವರ್ಷಗಳ ಕಾಲ ವಿಸ್ತರಿಸಿಕೊಳ್ಳುತ್ತಾ ಇರುವಾಗಲೇ ಭೂಮಿ ನಿಧಾನವಾಗಿ ತನ್ನನ್ನು ರೂಪಿಸಿಕೊಳ್ಳುತ್ತಿತ್ತು.. ಕಲ್ಪನಾತೀತವಾದ ವಿಸ್ತಾರವಾದ ವಿಶ್ವದಲ್ಲಿ ಭೂಮಿ ಹುಟ್ಟಿದ್ದು ಒಂದು ಬೆರಗೇ…

1370 ಕೋಟಿ ವರ್ಷಗಳಷ್ಟು ಹಳೆಯದಾದ ಬ್ರಹ್ಮಾಂಡದಲ್ಲಿ ಸುಮಾರು 460 ಕೋಟಿ ವರ್ಷಗಳ ಹಿಂದೆ ನಮ್ಮ ಸೌರಮಂಡಲ ರೂಪಗೊಂಡಿತು. ಸುಮಾರು 2400 ಕೋಟಿ ಕಿಲೋಮೀಟರ್ ಗಳ ಉದ್ದಗಲದ ಅಂತರಿಕ್ಷದಲ್ಲಿ ಅನಿಲ ಮತ್ತು ಧೂಳು ಗುಂಪಾಗುತ್ತ ಬಂದು ಒಂದಾಗಿ ಸೇರಲು ಆರಂಭವಾಯಿತು.

ಅದರಲ್ಲಿ ಬಹುಪಾಲು ಎಲ್ಲವೂ ಅಂದರೆ ಶೇ. 99.9 ರಷ್ಟು ಸೂರ್ಯನ ಸೃಷ್ಟಿಗೇ ಬಳಕೆಯಾಯಿತು. ಇನ್ನೂ ತೇಲುತ್ತಿದ್ದ ಅಳಿದುಳಿದ ವಸ್ತುಗಳಲ್ಲಿ ಒಂದು ಕಣ ತನ್ನ ಹತ್ತಿರ ತೇಲುತ್ತಿದ್ದ ಇನ್ನೊಂದು ಕಣದೊಂದಿಗೆ ಎಲೆಕ್ಟ್ರೊಸ್ಟಾಟಿಕ್ ಬಲದಿಂದಾಗಿ ಕೂಡಿಕೊಳ್ಳಲು ಆರಂಭಿಸಿದವು. ಹಾಗೆ ಕೂಡಿಕೊಳ್ಳುತ್ತ ಅವೇ ಗ್ರಹಗಳಾಗಿ, ಉಪಗ್ರಹಗಳಾಗಿ ಆಕಾಶಕಾಯಗಳಾಗಿ ಬದಲಾಗುತ್ತ ಹೋದವು.

ಸೌರಮಂಡಲದ ಉದ್ದಗಲಕ್ಕೂ ಈ ವಿದ್ಯಮಾನ ದೀರ್ಘ ಕಾಲ ನಡೆಯಿತು. ಒಂದಕ್ಕೊಂದು ಡಿಕ್ಕಿಹೊಡೆದ ಧೂಳಿನ ಕಣಗಳು ಕ್ರಮೇಣ ಇನ್ನೊಂದಕ್ಕೆ ಡಿಕ್ಕಿ ಹೊಡೆದು, ಒಂದಕ್ಕೊಂದು ಅಂಟಿಕೊಳ್ಳುತ್ತ ದೊಡ್ಡವಾಗುತ್ತ ಹೋದವು. ಅವೇ ಕ್ರಮೇಣ ತಟ್ಟೆಯಾಕಾರದಲ್ಲಿ ಹರಡಿ ಕೊಂಡ ಗ್ರಹಾರಿಕೆ ಅಥವಾ ಪ್ಲಾನೆಟೆಸಿಮಲ್ಸ್ ಎಂದು ಕರೆಯಲ್ಪಡಬಲ್ಲಷ್ಟು ದೊಡ್ಡದಾದ ಧೂಳಿನ ಕಾಯಗಳಾದವು. ಇದು ಅದೇ ಗತಿಯಲ್ಲಿ ಅನಿಶ್ಚಿತ ಕ್ರಮದಲ್ಲಿ ನಿರಂತರವಾಗಿ ನಡೆಯುತ್ತಿತ್ತು. ಬಹಳ ಡಿಕ್ಕಿಗಳನ್ನು ಕಂಡ ಆಕಾಶಕಾಯಗಳು ಕ್ರಮೇಣ ಎಷ್ಟು ದೊಡ್ಡವಾದವೆಂದರೆ ತಾವು ಚಲಿಸುತ್ತಿದ್ದ ಕಕ್ಷೆಯೊಳಗೆ ಕ್ರಮೇಣ ಅವೇ ಮೇಲುಗೈ ಸಾಧಿಸಿದವು.

ಇದೆಲ್ಲವೂ ಆಗಲು ಯುಗಗಳೇನೂ ಹಿಡಿಯಲಿಲ್ಲ. ವಿಜ್ಞಾನಿಗಳ ಪ್ರಕಾರ, ಸಣ್ಣ ಕಣಗಳ ಗುಂಪೊಂದು ನೂರಾರು ಮೈಲು ಅಗಲದ ಪುಟ್ಟದೊಂದು ಗ್ರಹವಾಗಿ ಬದಲಾಗಲು ಹಿಡಿದ ಅವಧಿ ಕೇವಲ ಹತ್ತಾರು ಸಾವಿರ ವರ್ಷಗಳು ಮಾತ್ರ. ನಮ್ಮ ಭೂಮಿ ಹೀಗೆ ಸುಮಾರು 20 ಕೋಟಿ ವರ್ಷಗಳಲ್ಲಿ ನಿರ್ಮಾಣವಾಯಿತು.

ಆಗಲೂ ಅದು ಬೆಂಕಿಯ ಲಾವಾರಸದಿಂದ ತುಂಬಿ ತುಳುಕುತ್ತಿತ್ತು ಮತ್ತು ಇನ್ನೂ ಸೌರಮಂಡಲದ ಅಂತರಿಕ್ಷದಲ್ಲಿ ತೇಲುತ್ತಿದ್ದ ಧೂಳು ಮತ್ತಿತರ ಆಕಾಶಕಾಯಗಳು ಅದಕ್ಕೆ ಬಂದು ಡಿಕ್ಕಿ ಹೊಡೆಯುತ್ತಲೇ ಇದ್ದವು. ಈ ಅವಧಿಯಲ್ಲಿಯೇ, ಅಂದರೆ ಸುಮಾರು 440 ಕೋಟಿ ವರ್ಷಗಳ ಹಿಂದೆ, ಈಗಿನ ಮಂಗಳ ಗ್ರಹದಷ್ಟು ದೊಡ್ಡದಾಗಿದ್ದ ಆಕಾಶಕಾಯವೊಂದು ಭೂಮಿಗೆ ಬಂದು ಡಿಕ್ಕಿ ಹೊಡೆಯಿತು. ಆ ಡಿಕ್ಕಿ ಎಷ್ಟು ಬಲವಾಗಿತ್ತೆಂದರೆ ಭೂಭಾಗದ ಮೇಲ್ಪದರ ಸಾಕಷ್ಟು ಛಿದ್ರವಾಗಿ ಅಂತರಿಕ್ಷಕ್ಕೆ ಚೆಲ್ಲಿತು.

ಅದಾದ ಕೆಲವೇ ವಾರಗಳ ಅವಧಿಯಲ್ಲಿ ಭೂಮಿಯಿಂದ ಚಿಮ್ಮಿ ಹೋದ ಭಾಗಗಳೆಲ್ಲ ಆಕಾಶದಲ್ಲಿ ಒಂದಾಗಿ ಕೂಡಿಕೊಂಡವು. ಮತ್ತು ಭೂಮಿಯ ಗುರುತ್ವಾಕರ್ಷಣಾ ಬಲದಿಂದಾಗಿ ಅದು ಭೂಮಿಯನ್ನು ಸುತ್ತುಹಾಕಲು ಆರಂಭಿಸಿತು.

ಒಂದೇ ವರ್ಷದ ಅವಧಿಯಲ್ಲಿ ಅದು ಗೋಳದ ರೂಪ ಪಡೆದುಕೊಂಡಿತು. ಆ ಗೋಳವೇ ಇವತ್ತಿಗೂ ಭೂಮಿಯನ್ನು ಸುತ್ತುತ್ತ ನಮ್ಮ ಜೊತೆಗಿರುವ ಚಂದ್ರ.

(ಮುಂದುವರೆಯುವುದು…)

ಭೂಮಿ ಹುಟ್ಟಿದ್ದು ಹೇಗೆ? ವಿಡಿಯೊ ಡಾಕ್ಯುಮೆಂಟರಿ:

One thought on “ಭೂಮಿ ಹುಟ್ಟಿದ್ದು ಹೇಗೆ? : ಭಾಗ -1

Leave a Reply to uma Cancel reply

Your email address will not be published. Required fields are marked *