Daily Archives: August 16, 2012

ವರ್ತಮಾನ.ಕಾಮ್‌ಗೆ ಇಂಟರ್ನ್ಸ್ ಬೇಕಾಗಿದ್ದಾರೆ…

ಸ್ನೇಹಿತರೇ,

ವರ್ತಮಾನದ ಕೆಲಸ ಹೆಚ್ಚುತ್ತಲೇ ಇದೆ. ನಮಗೆ ಬರುವ ಲೇಖನಗಳು, ಇಮೇಲ್‌ಗಳು, ಮತ್ತಿತರ ಒತ್ತಡಗಳನ್ನು ಇತರೆ ಆದ್ಯತೆಗಳ ಮಧ್ಯೆ ಒಮ್ಮೊಮ್ಮೆ ನಿಭಾಯಿಸುವುದು ಕಷ್ಟವೆ. ಅದರ ಜೊತೆಗೆ ವರ್ತಮಾನ.ಕಾಮ್ ಅನ್ನು ಬೇರೆಬೇರೆ ರೀತಿಯಲ್ಲಿ ಪರಿಚಯಿಸುತ್ತ, ವಿಸ್ತರಿಸುತ್ತ. ಮತ್ತಷ್ಟು ಪ್ರಸ್ತುತಗೊಳಿಸುತ್ತ ಹೋಗುವ ಸವಾಲು ಇದ್ದೇ ಇದೆ. ಈ ನಿಟ್ಟಿನಲ್ಲಿ ನಮ್ಮ ವೆಬ್‌‍ಸೈಟ್‌ಗೆ ಪತ್ರಿಕೋದ್ಯಮದ ಒಂದಿಬ್ಬರು ವಿದ್ಯಾರ್ಥಿಗಳನ್ನು ಇಂಟರ್ನ್ಸ್ ಆಗಿ ತೆಗೆದುಕೊಳ್ಳುವುದು ಉತ್ತಮ ಎನ್ನಿಸಿದೆ.

ಹಾಗಾಗಿ, ನೀವು ಪತ್ರಿಕೋದ್ಯಮದ ಅಂತಿಮ ವರ್ಷದ ವಿದ್ಯಾರ್ಥಿ ಆಗಿದ್ದಲ್ಲಿ (ಅಥವ ನಿಮಗೆ ಯಾರಾದರೂ ಗೊತ್ತಿದ್ದಲ್ಲಿ) ಮತ್ತು ವರ್ತಮಾನದಲ್ಲಿ ಇಂಟರ್ನ್ ಆಗಿ ಕೆಲಸ ಮಾಡಲು ಇಚ್ಚೆಪಟ್ಟಲ್ಲಿ, ದಯವಿಟ್ಟು ಸಂಪರ್ಕಿಸಿ. ನಿಮಗೆ ಖಂಡಿತವಾಗಿ ಕನ್ನಡ ಅಥವ ಇಂಗ್ಲಿಷ್‌ನಲ್ಲಿ ವರದಿ ಮಾಡುವುದು ಇಲ್ಲವೇ ಲೇಖನ ಬರೆಯುವುದು ಗೊತ್ತಿರಬೇಕು. ಕನ್ನಡದಲ್ಲಿ ಬರಹ/ನುಡಿ/ಯೂನಿಕೋಡ್‌ನಲ್ಲಿ ಟೈಪಿಂಗ್ ಗೊತ್ತಿರುವುದು ಕಡ್ಡಾಯ. ಇದರ ಜೊತೆಗೆ ನಿಮಗೆ ವಿಡಿಯೋ ಶೂಟಿಂಗ್ ಮತ್ತು ಎಡಿಟಿಂಗ್ ಅಷ್ಟಿಷ್ಟು ಗೊತ್ತಿದ್ದರೆ ಮತ್ತೂ ಉತ್ತಮ. ವಿಡಿಯೊ ಎಡಿಟಿಂಗ್ ಮತ್ತು ಗ್ರಾಫಿಕ್ಸ್ ಡಿಸೈನಿಂಗ್ ಗೊತ್ತಿರುವ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಅಥವ ಈಗ ತಾನೆ ಮುಗಿಸಿರುವವರಿಗೆ ಆದ್ಯತೆ.

ನೀವು ಕೆಲಸ ಮಾಡುವ ಸ್ಥಳ ಬೆಂಗಳೂರು ಆಗಿರುತ್ತದೆ. ಹೊರಗಿನ ಅಸೈನ್‌ಮೆಂಟ್‌ಗಳ ಖರ್ಚು-ವೆಚ್ಚಗಳನ್ನು ಭರಿಸಲಾಗುತ್ತದೆ. ಜೊತೆಗೆ ಸ್ಟೈಪೆಂಡ್ ಎಂದು ನಾಮಿನಲ್ ಆದ ಮೊತ್ತವನ್ನು ನೀಡಲಾಗುತ್ತದೆ. ಇಂಟರ್ನ್‌ಶಿಪ್‌ನ ಅವಧಿ ಕನಿಷ್ಟ ಮೂರು ತಿಂಗಳು.

ನಿಮ್ಮ ಸ್ವವಿವರ ಮತ್ತು ನೀವು ಬರೆದ ಲೇಖನಗಳ ಅಥವ ಅನುಭವದ ವಿವರಗಳೊಂದಿಗೆ ದಯವಿಟ್ಟು editor@vartamaana.com ಗೆ ಇಮೇಲ್ ಕಳುಹಿಸಿ. ಅಥವ ಈ ಕೆಳಗಿನ ಫಾರ್ಮ್ ಅನ್ನು ತುಂಬಿ. ಆದಷ್ಟು ಬೇಗ ಸಂಪರ್ಕಿಸಲಾಗುವುದು.
[contact-form subject=”interested in internship” to=”ravikreddy@yahoo.com”] [contact-field label=”Name” type=”name” required=”true” /] [contact-field label=”Email” type=”email” required=”true” /] [contact-field label=”Your Resume” type=”textarea” required=”true” /] [/contact-form]

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

ಕಪ್ಪು ಹಣ – ಅಧಿಕಾರಕ್ಕೇರುವ ಏಣಿ

– ಆನಂದ ಪ್ರಸಾದ್

ಬಾಬಾ ರಾಮದೇವ ಎಂಬ ಯೋಗ ಗುರು ವಿದೇಶಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪು ಹಣ ವಾಪಾಸ್ ತರುವ ಬಗ್ಗೆ, ಲೋಕಪಾಲ್ ವಿಧೇಯಕ ತರುವ ಬಗ್ಗೆ, ಸಿಬಿಐ ಅನ್ನು ಕೇಂದ್ರ ಸರ್ಕಾರದ ನಿಯಂತ್ರಣಮುಕ್ತಗೊಳಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಇಟ್ಟುಕೊಂಡು ಹಮ್ಮಿಕೊಂಡ ಉಪವಾಸ ಸತ್ಯಾಗ್ರಹ ಮುಗಿದಿದೆ. ಸರ್ಕಾರ ಅವರ ಯಾವ ಬೇಡಿಕೆಗಳ ಬಗ್ಗೆಯೂ ಸ್ಪಂದಿಸಿಲ್ಲ. ಆರಂಭದಲ್ಲಿ ತಮ್ಮದು ರಾಜಕೀಯರಹಿತ ಹೋರಾಟ ಎಂದು ಹೇಳಿಕೊಳ್ಳುತ್ತಿದ್ದ ಬಾಬಾ ಅವರು ಉಪವಾಸದ ಮೂರನೆಯ ದಿನ ಎನ್.ಡಿ.ಎ. ಮೈತ್ರಿಕೂಟದ ಪಕ್ಷಗಳನ್ನು ತಮ್ಮ ಜೊತೆ ಸೇರಿಸಿಕೊಂಡು ತಮ್ಮದು ರಾಜಕೀಯ ಹೋರಾಟ ಎಂಬುದನ್ನು ಸಾಬೀತುಪಡಿಸಿದರು. ಒಂದೇ ಸಮನೆ ಕಾಂಗ್ರೆಸ್ ಪಕ್ಷದ ವಿರುದ್ಧ ಚಾಟಿ ಬೀಸುತ್ತಿರುವ ಬಾಬಾ ರಾಮದೇವರ ಹಿಂದೆ ಯಾರೆಲ್ಲ ಇದ್ದಾರೆ ಎಂಬುದು ಈಗ ಜಗಜ್ಜಾಹೀರಾಗಿದೆ. ಈ ರೀತಿ ರಾಜಕೀಯ ಹೋರಾಟಗಳಿಗೆ ಸತ್ಯಾಗ್ರಹವನ್ನು ಬಳಸಿಕೊಳ್ಳಬೇಕಾದ ಅಗತ್ಯವಿರಲಿಲ್ಲ. ನೇರವಾಗಿಯೇ ಎನ್.ಡಿ.ಎ. ಮೈತ್ರಿಕೂಟದ ಮುಖ್ಯ ಘಟಕವಾದ ಬಿಜೆಪಿ ಪಕ್ಷಕ್ಕೆ ಸೇರಿ ರಾಮದೇವ್ ತನ್ನ ಹೋರಾಟವನ್ನು ಕೈಗೊಳ್ಳುವುದು ಉತ್ತಮ.

ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟ ಅಧಿಕಾರದಲ್ಲಿದ್ದಾಗ ಸಿಬಿಐ ಅನ್ನು ಕಾಂಗ್ರೆಸ್ ಪಕ್ಷದಂತೆಯೇ ದುರುಪಯೋಗಪಡಿಸಿಕೊಂಡ ಬಿಜೆಪಿ ಆಗ ಸಿಬಿಐ ಅನ್ನು ಸರ್ಕಾರದ ನಿಯಂತ್ರಣಮುಕ್ತಗೊಳಿಸಲು ಪ್ರಯತ್ನಿಸಲಿಲ್ಲ. ರಾಜ್ಯಪಾಲರ ಹುದ್ಧೆಯನ್ನು ಕಾಂಗ್ರೆಸ್ ದುರುಪಯೋಗಪದಿಸಿಕೊಳ್ಳುತ್ತದೆ ಎಂದು ಹೇಳುವ ಬಿಜೆಪಿ ತಾನು ಅಧಿಕಾರದಲ್ಲಿದ್ದಾಗ ರಾಜ್ಯಪಾಲರ ಹುದ್ಧೆಯನ್ನು ದುರುಪಯೋಗಪಡಿಸಿಕೊಂಡಿದೆ. ಬಿಜೆಪಿ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ಬಿಜೆಪಿಯ ಸರ್ಕಾರದ ಭ್ರಷ್ಟಾಚಾರ ಮುಗಿಲು ಮುಟ್ಟಿರುವಾಗಲೂ ಅದನ್ನು ನಿಯಂತ್ರಿಸಲು ಸಾಧ್ಯವಾಗದ ಬಿಜೆಪಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಲೋಕಪಾಲ್ ವಿಧೇಯಕ ತರುತ್ತದೆ ಎಂದು ಜನ ನಂಬುವ ಸಾಧ್ಯತೆ ಇದೆ ಎನಿಸುವುದಿಲ್ಲ. ಕರ್ನಾಟಕದಲ್ಲಿ ಕಳೆದ ಒಂದು ವರ್ಷದಿಂದ ಲೋಕಾಯುಕ್ತ ಹುದ್ಧೆ ಖಾಲಿಯಾಗಿದ್ದರೂ ಅದನ್ನು ತುಂಬದೆ ಖಾಲಿ ಬಿಟ್ಟಿರುವ ಬಿಜೆಪಿ ಸರ್ಕಾರಕ್ಕೆ ಭ್ರಷ್ಟಾಚಾರ ನಿಯಂತ್ರಿಸುವ ಇಚ್ಛಾಶಕ್ತಿ ಇಲ್ಲ ಎಂದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ. ಗಣಿ ಅಕ್ರಮಗಳ ಬಗ್ಗೆ ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ನೀಡಿದ ವರದಿಯ ಬಗ್ಗೆ ಯಾವ ಕ್ರಮವನ್ನೂ ಕರ್ನಾಟಕದ ಸರ್ಕಾರ ತೆಗೆದುಕೊಳ್ಳದೆ ಭ್ರಷ್ಟರಿಗೆ ರಕ್ಷಣೆ ಒದಗಿಸಿದೆ. ಅದೇ ರೀತಿ ಅಕ್ರಮ ಸರ್ಕಾರೀ ಭೂಮಿ ಒತ್ತುವರಿ ಕುರಿತು ರಾಮಸ್ವಾಮಿ ಕಮಿಟಿ ನೀಡಿದ ವರದಿಯ ಬಗ್ಗೆಯೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ರೆಡ್ಡಿ ಸಹೋದರರ ಅಕ್ರಮ ಗಣಿಗಾರಿಕೆಯನ್ನು ಕಂಡೂ ಕಾಣದಂತೆ ವರ್ತಿಸಿ ಬಿಜೆಪಿ ಹೈಕಮಾಂಡ್ ಪ್ರೋತ್ಸಾಹಿಸಿತು. ಇಂಥ ಹಿನ್ನೆಲೆ ಇರುವ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಲೋಕಪಾಲ್ ವಿಧೇಯಕ ತರುತ್ತದೆ ಎಂದು ಯಾರಾದರೂ ನಂಬಿದರೆ ಅದು ಅವರ ಮುಗ್ಧತೆಯನ್ನು ತೋರಿಸುತ್ತದೆ ಅಷ್ಟೇ.

ದೇಶದ ಮಠ ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ಇರುವ ಕಪ್ಪು ಹಣದ ಕುರಿತು ಬಾಬಾ ರಾಮದೇವ್ ಚಕಾರ ಎತ್ತುವುದಿಲ್ಲ. ಸ್ವತ: ರಾಮದೇವ್ ಮೇಲೆ ತೆರಿಗೆ ವಂಚನೆ ಇತ್ಯಾದಿ ಆರೋಪಗಳೂ ಇವೆ. ಹೀಗಾಗಿ ರಾಜಕೀಯ ಉದ್ಧೇಶದ ಬಾಬಾ ರಾಮದೇವರ ಹೋರಾಟದಿಂದ ದೇಶದಲ್ಲಿ ದೊಡ್ಡ ಸಂಚಲನೆ ಉಂಟಾಗಲಿಲ್ಲ. ಧಾರ್ಮಿಕ ಮುಖವಾಡ ಇರುವ ಕಾರಣ ಅವರ ಅನುಯಾಯಿಗಳು ಮತ್ತು ಸಂಘ ಪರಿವಾರದ ಸಂಘಟನೆಗಳ ಕೆಲವರು ಇಂಥ ಹೋರಾಟದಲ್ಲಿ ಭಾಗವಹಿಸಿದ್ದಾರೆಯೇ ವಿನಃ ದೇಶದ ಎಲ್ಲ ವರ್ಗಗಳ ಜನತೆ ಇದರಲ್ಲಿ ಪಾಲುಗೊಂಡಿಲ್ಲ. ಬಿಜೆಪಿಯಂಥ ಭ್ರಷ್ಟ ಹಾಗೂ ಕೋಮುವಾದಿ ಪಕ್ಷಕ್ಕೆ ಅಧಿಕಾರಕ್ಕೇರಲು ನೆರವಾಗುವ ನಿಟ್ಟಿನಲ್ಲಿ ಹೋರಾಟದ ವೇಷ ತೊಟ್ಟ ರಾಮದೇವರ ಹೋರಾಟ ಯಶಸ್ವಿಯಾಗುವ ಸಾಧ್ಯತೆ ಇಲ್ಲ. ಇಂಥ ಹೋರಾಟಗಳ ಹಿಂದಿನ ಉದ್ಧೇಶ ಬಿಜೆಪಿಯು ಅಧಿಕಾರದಲ್ಲಿರುವಾಗ ವರ್ತಿಸಿದ ರೀತಿ ಮತ್ತು ಅದು ಈಗ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳನ್ನು ನೋಡಿದರೆ ಎಂಥವರಿಗೂ ಅರ್ಥವಾಗುತ್ತದೆ. ಬಾಬಾ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಮುಲಾಯಂ ಸಿಂಗ್, ಮಾಯಾವತಿ, ಚಂದ್ರಬಾಬು ನಾಯ್ಡು ಮೊದಲಾದವರ ಮೇಲೆ ಭ್ರಷ್ಟಾಚಾರದ ಆರೋಪಗಳು ಇವೆ. ಹೀಗಾಗಿ ಇವರು ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರೂ ಇದನ್ನು ಜನ ಗಂಭೀರವಾಗಿ ತೆಗೆದುಕೊಳ್ಳುವ ಪರಿಸ್ಥಿತಿ ಇಲ್ಲ. ಇದು ಅಧಿಕಾರಕ್ಕೆ ಏರಲು ನಡೆಸುವ ಸಾಮಾನ್ಯ ಕಸರತ್ತು ಹೊರತು ಮತ್ತೇನೂ ಅಲ್ಲ ಎಂಬುದನ್ನು ತಿಳಿಯಲು ಹೆಚ್ಚಿನ ಪಾಂಡಿತ್ಯ ಬೇಕಾಗಿಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು. ಇವುಗಳ ನಡುವೆ ಹೆಚ್ಚಿನ ವ್ಯತ್ಯಾಸ ಇಲ್ಲ. ಇವೆರಡರಲ್ಲಿ ಬಿಜೆಪಿ ಹೆಚ್ಚು ಕೋಮುವಾದಿ ಹಾಗೂ ಧಾರ್ಮಿಕ ಮೂಲಭೂತವಾದಿ ಎಂಬುದಷ್ಟೇ ವ್ಯತ್ಯಾಸ. ಭ್ರಷ್ಟಾಚಾರದಲ್ಲಿಯೂ ಬಿಜೆಪಿಯೇ ಮುಂದೆ ಎಂಬುದು ಕರ್ನಾಟದ ಪರಿಸ್ಥಿತಿಯನ್ನು ನೋಡಿದರೆ ಎಂಥ ಮೂರ್ಖನಿಗೂ ಗೊತ್ತಾಗುತ್ತದೆ. ಏಕೆಂದರೆ ಕಾಂಗ್ರೆಸ್ಸಿನ ಪ್ರಥಮ ಸರ್ಕಾರವು ಇಷ್ಟು ಭ್ರಷ್ಟವಾಗಿರಲಿಲ್ಲ. ಬಿಜೆಪಿಯು ಕರ್ನಾಟಕದ ತನ್ನ ಪ್ರಥಮ ಸರ್ಕಾರದಲ್ಲಿಯೇ ಕರ್ನಾಟಕದ ಇತಿಹಾಸದಲ್ಲಿಯೇ ಕಂಡು ಕೇಳರಿಯದ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅಪರೇಷನ್ ಕಮಲ ಎಂಬ ಹೊಸ ಭ್ರಷ್ಟ ವಿಧಾನವನ್ನು ಪರಿಚಯಿಸಿ ಇಡೀ ವ್ಯವಸ್ಥೆಯನ್ನೇ ಕುಲಗೆಡಿಸಿದೆ. ಇಂಥ ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇನೆ ಎಂದರೆ ಅದನ್ನು ತಲೆಯಲ್ಲಿ ಮೆದುಳು ಇರುವ ಯಾರಾದರೂ ನಂಬಲು ಸಾಧ್ಯವೇ? ಶಿಸ್ತು ಹಾಗೂ ದೇಶಪ್ರೇಮಿ ಸಂಘಟನೆ ಎಂದು ಹೇಳಿಕೊಳ್ಳುವ ಆರೆಸ್ಸೆಸ್ ಹಿನ್ನೆಲೆಯಿಂದ ಬಂದಿರುವ ವ್ಯಕ್ತಿಗಳೇ ಇಂಥ ಬ್ರಹ್ಮಾಂಡ ಭ್ರಷ್ಟಾಚಾರ ಮಾಡುತ್ತಿರುವಾಗ ಇಂಥ ಶಿಸ್ತು ಹಾಗೂ ದೇಶಪ್ರೇಮಿ ಸಂಘಟನೆಯ ಹಿನ್ನೆಲೆಯಿಲ್ಲದ ಕಾಂಗ್ರೆಸ್ ಪಕ್ಷದವರು ಮಾಡುವ ಭ್ರಷ್ಟಾಚಾರ ದೊಡ್ಡದು ಎನಿಸುವುದಿಲ್ಲ. ಹೀಗಾಗಿಯೇ ಜನ ಕಾಂಗ್ರೆಸ್ಸಿನ ಭ್ರಷ್ಟತನವನ್ನು ನೋಡಿಯೂ ಕೇಂದ್ರದಲ್ಲಿ ಎರಡನೆಯ ಬಾರಿಗೆ ಅದರ ಮೈತ್ರಿಕೂಟಕ್ಕೆ ಬಹುಮತ ಕೊಟ್ಟಿರುವಂತೆ ಕಾಣುತ್ತದೆ.

ವ್ಯವಸ್ಥೆಯಲ್ಲಿ ಬದಲಾವಣೆ ಮಾಡುವ ಉದ್ಧೇಶ, ತಾಳ್ಮೆ, ಇಚ್ಛಾಶಕ್ತಿ ಇಂಥ ಹೋರಾಟಗಳಲ್ಲಿ ಕಾಣುವುದಿಲ್ಲ. ಅಂಥ ಉದ್ಧೇಶ ಇದ್ದಿದ್ದರೆ ಬಿಜೆಪಿಯಂಥ ಪಕ್ಷಗಳನ್ನು ಅಥವಾ ಭ್ರಷ್ಟಾಚಾರದ ಆರೋಪ ಇರುವ ಕುಟುಂಬ ಕೇಂದ್ರಿತ ಅಥವಾ ವ್ಯಕ್ತಿಕೇಂದ್ರಿತ ಪಕ್ಷಗಳನ್ನು ತಮ್ಮ ವೇದಿಕೆಗೆ ಸೇರಿಸಿಕೊಳ್ಳುತ್ತಿರಲಿಲ್ಲ. ಇಂಥ ಆಂದೋಲನಗಳಿಂದ ವ್ಯವಸ್ಥೆಯಲ್ಲಿ ಯಾವ ಸುಧಾರಣೆಯೂ ಆಗುವ ಲಕ್ಷಣ ಕಾಣುವುದಿಲ್ಲ. ಪರ್ಯಾಯ ರಾಜಕೀಯ ವ್ಯವಸ್ಥೆಯನ್ನು ರೂಪಿಸುವ ನಾಯಕತ್ವ ಯಾರಲ್ಲಿಯೂ ಇಲ್ಲ. ಹೀಗಾಗಿ ದೇಶವು ಇಂದು ಅನಾಥವಾಗಿರುವಂತೆ ಕಾಣುತ್ತದೆ. ಸ್ವಾತಂತ್ರ್ಯಪೂರ್ವದಲ್ಲಿ ಗಾಂಧಿ, ನೆಹರೂ, ಪಟೇಲ್, ಸುಭಾಷಚಂದ್ರ ಬೋಸ್, ಭಗತ್ ಸಿಂಗ್ ಮೊದಲಾದ ಪ್ರಗತಿಪರ ನಿಲುವಿನ ನಾಯಕರಿದ್ದರು. ಇಂದು ದೇಶವ್ಯಾಪಿ ಪ್ರಭಾವ ಬೀರಬಲ್ಲ ಪ್ರಗತಿಪರ ನಾಯಕರೇ ದೇಶದಲ್ಲಿ ಕಾಣಿಸುತ್ತಿಲ್ಲ. ಹೀಗಾಗಿ ಪ್ರತಿಗಾಮಿ ಮೂಲಭೂತವಾದಿಗಳೇ ಮಹಾನ್ ನಾಯಕರಂತೆ ಫೋಸು ಕೊಡುತ್ತಿದ್ದಾರೆ.