ಕಪ್ಪು ಹಣ – ಅಧಿಕಾರಕ್ಕೇರುವ ಏಣಿ

– ಆನಂದ ಪ್ರಸಾದ್

ಬಾಬಾ ರಾಮದೇವ ಎಂಬ ಯೋಗ ಗುರು ವಿದೇಶಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪು ಹಣ ವಾಪಾಸ್ ತರುವ ಬಗ್ಗೆ, ಲೋಕಪಾಲ್ ವಿಧೇಯಕ ತರುವ ಬಗ್ಗೆ, ಸಿಬಿಐ ಅನ್ನು ಕೇಂದ್ರ ಸರ್ಕಾರದ ನಿಯಂತ್ರಣಮುಕ್ತಗೊಳಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಇಟ್ಟುಕೊಂಡು ಹಮ್ಮಿಕೊಂಡ ಉಪವಾಸ ಸತ್ಯಾಗ್ರಹ ಮುಗಿದಿದೆ. ಸರ್ಕಾರ ಅವರ ಯಾವ ಬೇಡಿಕೆಗಳ ಬಗ್ಗೆಯೂ ಸ್ಪಂದಿಸಿಲ್ಲ. ಆರಂಭದಲ್ಲಿ ತಮ್ಮದು ರಾಜಕೀಯರಹಿತ ಹೋರಾಟ ಎಂದು ಹೇಳಿಕೊಳ್ಳುತ್ತಿದ್ದ ಬಾಬಾ ಅವರು ಉಪವಾಸದ ಮೂರನೆಯ ದಿನ ಎನ್.ಡಿ.ಎ. ಮೈತ್ರಿಕೂಟದ ಪಕ್ಷಗಳನ್ನು ತಮ್ಮ ಜೊತೆ ಸೇರಿಸಿಕೊಂಡು ತಮ್ಮದು ರಾಜಕೀಯ ಹೋರಾಟ ಎಂಬುದನ್ನು ಸಾಬೀತುಪಡಿಸಿದರು. ಒಂದೇ ಸಮನೆ ಕಾಂಗ್ರೆಸ್ ಪಕ್ಷದ ವಿರುದ್ಧ ಚಾಟಿ ಬೀಸುತ್ತಿರುವ ಬಾಬಾ ರಾಮದೇವರ ಹಿಂದೆ ಯಾರೆಲ್ಲ ಇದ್ದಾರೆ ಎಂಬುದು ಈಗ ಜಗಜ್ಜಾಹೀರಾಗಿದೆ. ಈ ರೀತಿ ರಾಜಕೀಯ ಹೋರಾಟಗಳಿಗೆ ಸತ್ಯಾಗ್ರಹವನ್ನು ಬಳಸಿಕೊಳ್ಳಬೇಕಾದ ಅಗತ್ಯವಿರಲಿಲ್ಲ. ನೇರವಾಗಿಯೇ ಎನ್.ಡಿ.ಎ. ಮೈತ್ರಿಕೂಟದ ಮುಖ್ಯ ಘಟಕವಾದ ಬಿಜೆಪಿ ಪಕ್ಷಕ್ಕೆ ಸೇರಿ ರಾಮದೇವ್ ತನ್ನ ಹೋರಾಟವನ್ನು ಕೈಗೊಳ್ಳುವುದು ಉತ್ತಮ.

ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟ ಅಧಿಕಾರದಲ್ಲಿದ್ದಾಗ ಸಿಬಿಐ ಅನ್ನು ಕಾಂಗ್ರೆಸ್ ಪಕ್ಷದಂತೆಯೇ ದುರುಪಯೋಗಪಡಿಸಿಕೊಂಡ ಬಿಜೆಪಿ ಆಗ ಸಿಬಿಐ ಅನ್ನು ಸರ್ಕಾರದ ನಿಯಂತ್ರಣಮುಕ್ತಗೊಳಿಸಲು ಪ್ರಯತ್ನಿಸಲಿಲ್ಲ. ರಾಜ್ಯಪಾಲರ ಹುದ್ಧೆಯನ್ನು ಕಾಂಗ್ರೆಸ್ ದುರುಪಯೋಗಪದಿಸಿಕೊಳ್ಳುತ್ತದೆ ಎಂದು ಹೇಳುವ ಬಿಜೆಪಿ ತಾನು ಅಧಿಕಾರದಲ್ಲಿದ್ದಾಗ ರಾಜ್ಯಪಾಲರ ಹುದ್ಧೆಯನ್ನು ದುರುಪಯೋಗಪಡಿಸಿಕೊಂಡಿದೆ. ಬಿಜೆಪಿ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ಬಿಜೆಪಿಯ ಸರ್ಕಾರದ ಭ್ರಷ್ಟಾಚಾರ ಮುಗಿಲು ಮುಟ್ಟಿರುವಾಗಲೂ ಅದನ್ನು ನಿಯಂತ್ರಿಸಲು ಸಾಧ್ಯವಾಗದ ಬಿಜೆಪಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಲೋಕಪಾಲ್ ವಿಧೇಯಕ ತರುತ್ತದೆ ಎಂದು ಜನ ನಂಬುವ ಸಾಧ್ಯತೆ ಇದೆ ಎನಿಸುವುದಿಲ್ಲ. ಕರ್ನಾಟಕದಲ್ಲಿ ಕಳೆದ ಒಂದು ವರ್ಷದಿಂದ ಲೋಕಾಯುಕ್ತ ಹುದ್ಧೆ ಖಾಲಿಯಾಗಿದ್ದರೂ ಅದನ್ನು ತುಂಬದೆ ಖಾಲಿ ಬಿಟ್ಟಿರುವ ಬಿಜೆಪಿ ಸರ್ಕಾರಕ್ಕೆ ಭ್ರಷ್ಟಾಚಾರ ನಿಯಂತ್ರಿಸುವ ಇಚ್ಛಾಶಕ್ತಿ ಇಲ್ಲ ಎಂದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ. ಗಣಿ ಅಕ್ರಮಗಳ ಬಗ್ಗೆ ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ನೀಡಿದ ವರದಿಯ ಬಗ್ಗೆ ಯಾವ ಕ್ರಮವನ್ನೂ ಕರ್ನಾಟಕದ ಸರ್ಕಾರ ತೆಗೆದುಕೊಳ್ಳದೆ ಭ್ರಷ್ಟರಿಗೆ ರಕ್ಷಣೆ ಒದಗಿಸಿದೆ. ಅದೇ ರೀತಿ ಅಕ್ರಮ ಸರ್ಕಾರೀ ಭೂಮಿ ಒತ್ತುವರಿ ಕುರಿತು ರಾಮಸ್ವಾಮಿ ಕಮಿಟಿ ನೀಡಿದ ವರದಿಯ ಬಗ್ಗೆಯೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ರೆಡ್ಡಿ ಸಹೋದರರ ಅಕ್ರಮ ಗಣಿಗಾರಿಕೆಯನ್ನು ಕಂಡೂ ಕಾಣದಂತೆ ವರ್ತಿಸಿ ಬಿಜೆಪಿ ಹೈಕಮಾಂಡ್ ಪ್ರೋತ್ಸಾಹಿಸಿತು. ಇಂಥ ಹಿನ್ನೆಲೆ ಇರುವ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಲೋಕಪಾಲ್ ವಿಧೇಯಕ ತರುತ್ತದೆ ಎಂದು ಯಾರಾದರೂ ನಂಬಿದರೆ ಅದು ಅವರ ಮುಗ್ಧತೆಯನ್ನು ತೋರಿಸುತ್ತದೆ ಅಷ್ಟೇ.

ದೇಶದ ಮಠ ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ಇರುವ ಕಪ್ಪು ಹಣದ ಕುರಿತು ಬಾಬಾ ರಾಮದೇವ್ ಚಕಾರ ಎತ್ತುವುದಿಲ್ಲ. ಸ್ವತ: ರಾಮದೇವ್ ಮೇಲೆ ತೆರಿಗೆ ವಂಚನೆ ಇತ್ಯಾದಿ ಆರೋಪಗಳೂ ಇವೆ. ಹೀಗಾಗಿ ರಾಜಕೀಯ ಉದ್ಧೇಶದ ಬಾಬಾ ರಾಮದೇವರ ಹೋರಾಟದಿಂದ ದೇಶದಲ್ಲಿ ದೊಡ್ಡ ಸಂಚಲನೆ ಉಂಟಾಗಲಿಲ್ಲ. ಧಾರ್ಮಿಕ ಮುಖವಾಡ ಇರುವ ಕಾರಣ ಅವರ ಅನುಯಾಯಿಗಳು ಮತ್ತು ಸಂಘ ಪರಿವಾರದ ಸಂಘಟನೆಗಳ ಕೆಲವರು ಇಂಥ ಹೋರಾಟದಲ್ಲಿ ಭಾಗವಹಿಸಿದ್ದಾರೆಯೇ ವಿನಃ ದೇಶದ ಎಲ್ಲ ವರ್ಗಗಳ ಜನತೆ ಇದರಲ್ಲಿ ಪಾಲುಗೊಂಡಿಲ್ಲ. ಬಿಜೆಪಿಯಂಥ ಭ್ರಷ್ಟ ಹಾಗೂ ಕೋಮುವಾದಿ ಪಕ್ಷಕ್ಕೆ ಅಧಿಕಾರಕ್ಕೇರಲು ನೆರವಾಗುವ ನಿಟ್ಟಿನಲ್ಲಿ ಹೋರಾಟದ ವೇಷ ತೊಟ್ಟ ರಾಮದೇವರ ಹೋರಾಟ ಯಶಸ್ವಿಯಾಗುವ ಸಾಧ್ಯತೆ ಇಲ್ಲ. ಇಂಥ ಹೋರಾಟಗಳ ಹಿಂದಿನ ಉದ್ಧೇಶ ಬಿಜೆಪಿಯು ಅಧಿಕಾರದಲ್ಲಿರುವಾಗ ವರ್ತಿಸಿದ ರೀತಿ ಮತ್ತು ಅದು ಈಗ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳನ್ನು ನೋಡಿದರೆ ಎಂಥವರಿಗೂ ಅರ್ಥವಾಗುತ್ತದೆ. ಬಾಬಾ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಮುಲಾಯಂ ಸಿಂಗ್, ಮಾಯಾವತಿ, ಚಂದ್ರಬಾಬು ನಾಯ್ಡು ಮೊದಲಾದವರ ಮೇಲೆ ಭ್ರಷ್ಟಾಚಾರದ ಆರೋಪಗಳು ಇವೆ. ಹೀಗಾಗಿ ಇವರು ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರೂ ಇದನ್ನು ಜನ ಗಂಭೀರವಾಗಿ ತೆಗೆದುಕೊಳ್ಳುವ ಪರಿಸ್ಥಿತಿ ಇಲ್ಲ. ಇದು ಅಧಿಕಾರಕ್ಕೆ ಏರಲು ನಡೆಸುವ ಸಾಮಾನ್ಯ ಕಸರತ್ತು ಹೊರತು ಮತ್ತೇನೂ ಅಲ್ಲ ಎಂಬುದನ್ನು ತಿಳಿಯಲು ಹೆಚ್ಚಿನ ಪಾಂಡಿತ್ಯ ಬೇಕಾಗಿಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು. ಇವುಗಳ ನಡುವೆ ಹೆಚ್ಚಿನ ವ್ಯತ್ಯಾಸ ಇಲ್ಲ. ಇವೆರಡರಲ್ಲಿ ಬಿಜೆಪಿ ಹೆಚ್ಚು ಕೋಮುವಾದಿ ಹಾಗೂ ಧಾರ್ಮಿಕ ಮೂಲಭೂತವಾದಿ ಎಂಬುದಷ್ಟೇ ವ್ಯತ್ಯಾಸ. ಭ್ರಷ್ಟಾಚಾರದಲ್ಲಿಯೂ ಬಿಜೆಪಿಯೇ ಮುಂದೆ ಎಂಬುದು ಕರ್ನಾಟದ ಪರಿಸ್ಥಿತಿಯನ್ನು ನೋಡಿದರೆ ಎಂಥ ಮೂರ್ಖನಿಗೂ ಗೊತ್ತಾಗುತ್ತದೆ. ಏಕೆಂದರೆ ಕಾಂಗ್ರೆಸ್ಸಿನ ಪ್ರಥಮ ಸರ್ಕಾರವು ಇಷ್ಟು ಭ್ರಷ್ಟವಾಗಿರಲಿಲ್ಲ. ಬಿಜೆಪಿಯು ಕರ್ನಾಟಕದ ತನ್ನ ಪ್ರಥಮ ಸರ್ಕಾರದಲ್ಲಿಯೇ ಕರ್ನಾಟಕದ ಇತಿಹಾಸದಲ್ಲಿಯೇ ಕಂಡು ಕೇಳರಿಯದ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅಪರೇಷನ್ ಕಮಲ ಎಂಬ ಹೊಸ ಭ್ರಷ್ಟ ವಿಧಾನವನ್ನು ಪರಿಚಯಿಸಿ ಇಡೀ ವ್ಯವಸ್ಥೆಯನ್ನೇ ಕುಲಗೆಡಿಸಿದೆ. ಇಂಥ ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇನೆ ಎಂದರೆ ಅದನ್ನು ತಲೆಯಲ್ಲಿ ಮೆದುಳು ಇರುವ ಯಾರಾದರೂ ನಂಬಲು ಸಾಧ್ಯವೇ? ಶಿಸ್ತು ಹಾಗೂ ದೇಶಪ್ರೇಮಿ ಸಂಘಟನೆ ಎಂದು ಹೇಳಿಕೊಳ್ಳುವ ಆರೆಸ್ಸೆಸ್ ಹಿನ್ನೆಲೆಯಿಂದ ಬಂದಿರುವ ವ್ಯಕ್ತಿಗಳೇ ಇಂಥ ಬ್ರಹ್ಮಾಂಡ ಭ್ರಷ್ಟಾಚಾರ ಮಾಡುತ್ತಿರುವಾಗ ಇಂಥ ಶಿಸ್ತು ಹಾಗೂ ದೇಶಪ್ರೇಮಿ ಸಂಘಟನೆಯ ಹಿನ್ನೆಲೆಯಿಲ್ಲದ ಕಾಂಗ್ರೆಸ್ ಪಕ್ಷದವರು ಮಾಡುವ ಭ್ರಷ್ಟಾಚಾರ ದೊಡ್ಡದು ಎನಿಸುವುದಿಲ್ಲ. ಹೀಗಾಗಿಯೇ ಜನ ಕಾಂಗ್ರೆಸ್ಸಿನ ಭ್ರಷ್ಟತನವನ್ನು ನೋಡಿಯೂ ಕೇಂದ್ರದಲ್ಲಿ ಎರಡನೆಯ ಬಾರಿಗೆ ಅದರ ಮೈತ್ರಿಕೂಟಕ್ಕೆ ಬಹುಮತ ಕೊಟ್ಟಿರುವಂತೆ ಕಾಣುತ್ತದೆ.

ವ್ಯವಸ್ಥೆಯಲ್ಲಿ ಬದಲಾವಣೆ ಮಾಡುವ ಉದ್ಧೇಶ, ತಾಳ್ಮೆ, ಇಚ್ಛಾಶಕ್ತಿ ಇಂಥ ಹೋರಾಟಗಳಲ್ಲಿ ಕಾಣುವುದಿಲ್ಲ. ಅಂಥ ಉದ್ಧೇಶ ಇದ್ದಿದ್ದರೆ ಬಿಜೆಪಿಯಂಥ ಪಕ್ಷಗಳನ್ನು ಅಥವಾ ಭ್ರಷ್ಟಾಚಾರದ ಆರೋಪ ಇರುವ ಕುಟುಂಬ ಕೇಂದ್ರಿತ ಅಥವಾ ವ್ಯಕ್ತಿಕೇಂದ್ರಿತ ಪಕ್ಷಗಳನ್ನು ತಮ್ಮ ವೇದಿಕೆಗೆ ಸೇರಿಸಿಕೊಳ್ಳುತ್ತಿರಲಿಲ್ಲ. ಇಂಥ ಆಂದೋಲನಗಳಿಂದ ವ್ಯವಸ್ಥೆಯಲ್ಲಿ ಯಾವ ಸುಧಾರಣೆಯೂ ಆಗುವ ಲಕ್ಷಣ ಕಾಣುವುದಿಲ್ಲ. ಪರ್ಯಾಯ ರಾಜಕೀಯ ವ್ಯವಸ್ಥೆಯನ್ನು ರೂಪಿಸುವ ನಾಯಕತ್ವ ಯಾರಲ್ಲಿಯೂ ಇಲ್ಲ. ಹೀಗಾಗಿ ದೇಶವು ಇಂದು ಅನಾಥವಾಗಿರುವಂತೆ ಕಾಣುತ್ತದೆ. ಸ್ವಾತಂತ್ರ್ಯಪೂರ್ವದಲ್ಲಿ ಗಾಂಧಿ, ನೆಹರೂ, ಪಟೇಲ್, ಸುಭಾಷಚಂದ್ರ ಬೋಸ್, ಭಗತ್ ಸಿಂಗ್ ಮೊದಲಾದ ಪ್ರಗತಿಪರ ನಿಲುವಿನ ನಾಯಕರಿದ್ದರು. ಇಂದು ದೇಶವ್ಯಾಪಿ ಪ್ರಭಾವ ಬೀರಬಲ್ಲ ಪ್ರಗತಿಪರ ನಾಯಕರೇ ದೇಶದಲ್ಲಿ ಕಾಣಿಸುತ್ತಿಲ್ಲ. ಹೀಗಾಗಿ ಪ್ರತಿಗಾಮಿ ಮೂಲಭೂತವಾದಿಗಳೇ ಮಹಾನ್ ನಾಯಕರಂತೆ ಫೋಸು ಕೊಡುತ್ತಿದ್ದಾರೆ.

16 thoughts on “ಕಪ್ಪು ಹಣ – ಅಧಿಕಾರಕ್ಕೇರುವ ಏಣಿ

 1. Avinash

  ಹಾಗಾದರೆ ನಿಮ್ಮ ಉದ್ದೇಶ ಏನು ? ಕಾಂಗ್ರೆಸ್ಸ್ ಗಂತೂ ಸುಧಾರಣೆ ತರಲು ಇಚ್ಛೆ ಇಲ್ಲ. ನಿಮ್ಮ ಪ್ರಕಾರ ಬಿ ಜೆ ಪಿ ಗು ಇಚ್ಛೆ ಇಲ್ಲ. ಹಾಗಾದರೆ ಇದನ್ನೆಲ್ಲಾ ನೋಡುತ್ತಾ ಸುಮ್ಮನೆ ಇದ್ದು ಬಿಡುವುದೇ ಒಂದೇ ಮಾರ್ಗವೇ ? ಇಲ್ಲವೇ ಯಾರು ಏನು ಮಾಡಿದರು ಅದರಲ್ಲಿ ಒಂದು ಹುಳುಕಿ ಹುಡುಕಿ ನಿಮ್ಮ ಹಾಗೆ ಲೇಖನ ಬರೆದು ಸುಮ್ಮನಿದ್ದು ಬಿಡುವುದೇ ? ನೀವೇ ಹೇಳಿ

  Reply
 2. anand prasad

  ಸತ್ಯಾಗ್ರಹವೆಂಬ ವಿಧಾನವನ್ನು ರಾಜಕೀಯಕ್ಕೆ ಬಳಸುವುದು ಉತ್ತಮವಲ್ಲ. ಹಾಗೆ ಬಳಸಿದರೆ ಅದರ ವಿಶ್ವಾಸಾರ್ಹತೆ ಕಡಿಮೆಯಾಗಿ ಅದು ಜನರ ಮೇಲೆ ಪ್ರಭಾವ ಬೀರಲು ವಿಫಲವಾಗುತ್ತದೆ. ಅಣ್ಣಾ ಹಜಾರೆಯವರು ಸತ್ಯಾಗ್ರಹವನ್ನು ಬಿಜೆಪಿಗೆ ಲಾಭ ಮಾಡಿಕೊಡಲು ಬಳಸಿದರು. ರಾಮದೇವ್ ಕೂಡ ಸತ್ಯಾಗ್ರಹದ ಹೆಸರಿನಲ್ಲಿ ಅದನ್ನೇ ಮಾಡುತ್ತಿದ್ದಾರೆ. ಅನ್ಯಾಯವನ್ನು ನೋಡಿಕೊಂಡು ಸುಮ್ಮನೆ ಕೂರಬೇಕೆಂದು ನನ್ನ ಅಭಿಪ್ರಾಯವಲ್ಲ. ಅನ್ಯಾಯ ನಡೆಸುವವರನ್ನೇ ತಮ್ಮ ಸಹವರ್ತಿ ಎಂದು ಬಿಂಬಿಸಿಕೊಂಡರೆ ಜನ ಅದನ್ನು ನಂಬುತ್ತಾರೆಯೇ? ತಾವು ಅನ್ಯಾಯ ನಡೆಸುವವರ ಜೊತೆ ಇಲ್ಲ ಎಂದು ತೋರಿಸದೆ ಹೋದರೆ ಯಾವುದೇ ಹೋರಾಟಗಳೂ ಜನರ ಮೇಲೆ ಪರಿಣಾಮ ಬೀರಲಾರವು. ಕಾಂಗ್ರೆಸ್ ಮಾಡುವ ಎಲ್ಲ ಅನ್ಯಾಯಗಳನ್ನೂ ಬಿಜೆಪಿಯೂ ಮಾಡುತ್ತಾ ಇರುವುದನ್ನು ನೋಡಿಯೂ ಅದೇ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದರಿಂದ ಏನು ಫಲ? ಪರ್ಯಾಯ ರಾಜಕೀಯ ವ್ಯವಸ್ಥೆ ಬಗ್ಗೆ ಚಿಂತಿಸದೆ ಭ್ರಷ್ಟ ಪಕ್ಷಗಳನ್ನು ಪರೋಕ್ಷವಾಗಿ ಸತ್ಯಾಗ್ರಹದ ಹೆಸರಿನಲ್ಲಿ ಬೆಂಬಲಿಸುವುದರಿಂದ ಏನೂ ಪ್ರಯೋಜನ ಆಗಲಾರದು. ಆಡಳಿತ ನಡೆಸುವ ಪಕ್ಷಗಳು ಮಾತ್ರ ಬದಲಾಗಬಹುದು, ವ್ಯವಸ್ಥೆ ಮಾತ್ರ ಅದೇ ರೀತಿ ಇರುತ್ತದೆ.

  Reply
 3. Avinash

  ಸತ್ಯಾಗ್ರಹ ಎಂಬ ವಿಷಯವನ್ನ ರಾಜಕೀಯಕ್ಕೆ ಬಳಸುತ್ತಿರುವುದು ನೀವು. ಒಂದು ಪಕ್ಷ ಬಿ ಜೆ ಪಿ ಯ ಒತ್ತಡಕ್ಕೂ , ಇನ್ನೊಂದು ವಿಷಯಕ್ಕೋ , ಕಾಂಗ್ರೆಸ್ಸ್ ಸರ್ಕಾರ ಕಪ್ಪು ಹಣ ತರಲು ಒಪ್ಪಿದ್ದಾರೆ , ಇದು ದೇಶದ ಒಳಿತಿಗೆ ತಾನೇ ?. ಗುರಿ ಸಾದಿಸುವುದು ಮುಖ್ಯವಾಗಿರುವಾಗ ಮಡಿವಂತಿಕೆ ಯಾಕೆ.? ಕಾಂಗ್ರೆಸ್ಸ್ ವಿರುದ್ದದ ಎಲ್ಲ ಹೋರಾಟಗಳು ಬಿ ಜೆ ಪಿ ಗೆ ಪೂರಕ ಎಂಬುದು ಹೇಗೆ ? ಇಲ್ಲಿ ನಿಮ್ಮ ಭಯ ಏನೆಂದರೆ ಜನಂದೊಲನ ಯಶಸ್ವೀ ಆಗಿ ಅದು ಬಿ ಜೆ ಪಿ ಗೆ ವರವಾಗಬಹುದು ಎಂಬುದು. ನನ್ನ ಸಲಹೆ ಇಷ್ಟೇ ನೀವೇ ಜನಂದೊಲನ ನಿರೂಪಿಸಿ .ಯಾವ ಪಕ್ಷದ ಸಹಾಯವೂ ಬೇಡ. ಒಂದು ಪಕ್ಷ ಸಶಕ್ತ ಜನ ಲೋಕಪಾಲ್ ಮತ್ತು ಕಪ್ಪು ಹಣ ವಾಪಸಾತಿಗೆ ನಿಮ್ಮಿಂದ ಹೋರಾಟ ಆರಂಭವಾಗಲಿ. ನಮ್ಮ ಬೆಂಬಲ ಇದೆ. ಆಗದೆ ಇದ್ದಾರೆ , ಮಾಡುವವರ ಕಂಡು ಬಿಟ್ಟಿ ಸಲಹೆ ಕೊಡದೆ ಸುಮ್ಮನೆ ಇರುವುದು ಒಳಿತು
  ಅಷ್ಟಕ್ಕೂ ಇದು ಚುನಾವಣೆ ಪ್ರಚಾರ ಅಲ್ಲ ಅನ್ನೋದು ನೆನಪಿರಲಿ. ಕುಡಿಯೋ ನೀರಲ್ಲಿ ಕಡ್ಡಿ ಆಡಿಸುವ ಮುನ್ನ ಯೋಚಿಸಿ

  Reply
  1. anand prasad

   ನಾನು ಯಾವುದೇ ರಾಜಕೀಯ ಪಕ್ಷದ ಕಾರ್ಯಕರ್ತನಲ್ಲ. ಹೀಗಿರುವಾಗ ನಾನು ಸತ್ಯಾಗ್ರಹದ ವಿಷಯವನ್ನು ರಾಜಕೀಯಕ್ಕೆ ಬಳಸುತ್ತಿದ್ದೇನೆ ಎಂಬ ನಿಮ್ಮ ಮಾತು ಒಪ್ಪತಕ್ಕದ್ದಲ್ಲ. ಮೊದಲು ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ಮಾಡಿದಾಗ ವ್ಯಕ್ತವಾದ ಭಾರೀ ಬೆಂಬಲ ನಂತರದಲ್ಲಿ ವ್ಯಕ್ತವಾಗಲಿಲ್ಲ. ಮೊದಲು ಅಲ್ಲಿ ರಾಜಕೀಯ ಒಲವು ಇರಲಿಲ್ಲ. ಚುನಾವಣೆಗಳಲ್ಲಿ ಒಂದು ಪಕ್ಷದ ವಿರುದ್ಧ ಪ್ರಚಾರ ಮತ್ತು ಇನ್ನೊಂದು ಪಕ್ಷದ ಪರವಾಗಿ ಮಾಡಲು ಹೊರಟ ನಂತರ ಅಣ್ಣಾ ಅವರಿಗೆ ಬೆಂಬಲ ಕಡಿಮೆಯಾಯಿತು. ಅವರು ಯಾವ ಪಕ್ಷದ ಪರವಾಗಿ ಪ್ರಚಾರ ಮಾಡಲು ಹೋದರೋ ಆ ಪಕ್ಷವೂ ಭ್ರಷ್ಟಾಚಾರದಲ್ಲಿ ದಾಖಲೆ ಮಾಡಲು ಹೊರಟಿರುವಾಗ ಅಂಥ ಪಕ್ಷದ ಪರವಾಗಿ ಪ್ರಚಾರ ಮಾಡಲು ಹೋದರೆ ಜನಬೆಂಬಲ ಕಡಿಮೆಯಾಗದೇ ಇನ್ನೇನಾಗುತ್ತದೆ? ಅಣ್ಣಾ ಪ್ರಚಾರ ಮಾಡಲು ಹೋದ ಪಕ್ಷಕ್ಕೆ ಭ್ರಷ್ಟಾಚಾರ ನಿಯಂತ್ರಿಸುವ ಮನಸಿದ್ದರೆ ಅದನ್ನು ಅದರ ಅಧಿಕಾರ ಇರುವ ಕರ್ನಾಟಕದಲ್ಲೇ ಸಾಧಿಸಿ ತೋರಿಸಬಹುದಲ್ಲ? ಹಾಗೆ ತೋರಿಸಿದರೆ ಜನರಿಗೆ ನಂಬಿಕೆ ಬಂದೀತು. ಜನರಿಗೆ ಇಂಥ ವಿಷಯಗಳು ಅರ್ಥವಾಗಿರುವ ಕಾರಣವೇ ಸತ್ಯಾಗ್ರಹ ತನ್ನ ಸಾಮರ್ಥ್ಯವನ್ನು ಕಳೆದುಕೊಂಡಿರುವುದು. ಗುರಿ ಮಾತ್ರವಲ್ಲ, ಅದನ್ನು ಸಾಧಿಸುವ ದಾರಿಯೂ ಸರಿಯಾಗಿರಬೇಕು ಎಂದು ಎಂದು ಸತ್ಯಾಗ್ರಹದ ರೂವಾರಿ ಮಹಾತ್ಮಾ ಗಾಂಧಿಯವರು ಸ್ಪಷ್ಟವಾಗಿ ಹೇಳಿದ್ದಾರೆ. ಇದನ್ನು ಅಣ್ಣಾ ಮತ್ತು ತಂಡದವರು ಗಣನೆಗೆ ತೆಗೆದುಕೊಳ್ಳಲಿಲ್ಲ. ಇದರಿಂದ ಆಂದೋಲನ ದುರ್ಬಲವಾಯಿತು. ನಮ್ಮದು ಪ್ರಜಾಪ್ರಭುತ್ವ ದೇಶ. ಇಲ್ಲಿ ನಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಇದೆ. ಅದನ್ನು ಬಿಟ್ಟಿ ಸಲಹೆ ಎಂದು ಹೇಳುವುದು ಸಮಂಜಸವಾಗಲಾರದು. ನಾನು ಹೋರಾಟ ಮಾಡುತ್ತೇನೆ ಎಂದು ಹೇಳಿಲ್ಲ ಮತ್ತು ಉಪವಾಸ ಸತ್ಯಾಗ್ರಹವನ್ನು ರಾಜಕೀಯ ಗುರಿಸಾಧನೆಗೆ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಬಳಸಿಕೊಂಡೂ ಇಲ್ಲ.

   Reply
 4. Avinash

  ಇಲ್ಲಿ ನಿಮ್ಮ ಚಿಂತನೆಯೇ ಕೈ ಕೊಟ್ಟಿದೆ ಅನ್ನಿಸುತ್ತೆ. ಅಣ್ಣ ತಂಡ ಕಾಂಗ್ರೆಸ್ಸ್ ನ ವಿರೋದ ವಾಗಿ ಪ್ರಚಾರ ಮಾಡಿತೆ ವಿನಃ ಬಿ ಜೆ ಪಿ ಯಾ ಪರವಾಗಿ ಅಲ್ಲ. ಹಾಗೇನಾದರು ಇದ್ದಾರೆ ದಯವಿಟ್ಟು ಸಾಬಿತು ಪಡಿಸಿ. ಚಳುವಳಿಗಳು ಕಾವು ಕಳೆದುಕೊಳ್ಳಲು ನೂರಾರು ಕಾರಣಗಳಿರುತ್ತವೆ. ದಲಿತ ಚಳುವಳಿಗಳು, ರೈತ ಚಳುವಳಿಗಳು ಕಾವು ಕಳೆದುಕೊಳ್ಳಲು ಬಿ ಜೆ ಪಿ ಕಾರಣ ಅಂತ ಹೇಳಲು ಸಾಧ್ಯವಾ ?
  ಇನ್ನು ಬ್ರಷ್ಟಚಾರದ ವಿಷಯಕ್ಕೆ ಬಂದರೆ , ಇದನ್ನು ನಿಯಂತ್ರಿಸುವ ಕಾಯಿದೆಗಳು ಎಲ್ಲರಿಗು ಸಮಾನ ಅಲ್ಲವೇ ? ಜನ ಲೋಕಪಾಲ್ ಕಾಯಿದೆ ಇಂದ ಬಿ ಜೆ ಪಿ ಯನ್ನು ಹೊರಗಿಡ ಲಾಗುತ್ತದೆಯೇ ? ಒಂದು ಪಕ್ಷ ಕಪ್ಪು ಹಣ ವಾಪಸಾತಿ ಅಧಿಕಾರಕ್ಕೆ ಏಣಿ ಅಂತ ಆದರೆ ಕಾಂಗ್ರೆಸ್ಸ್ ಇದನ್ನು ಉಪಯೋಯಿಸಿಕೊಂಡು ಮತ್ತೆ ಅಧಿಕಾರಕ್ಕೆ ಯಾಕೆ ಬರಬಾರದು ?
  ಅಣ್ಣಾ ತಂಡದ ಸೋಲಿಗೆ ಬಿ ಜೆ ಪಿ ಕಾರಣ ಆದರೆ ರಾಮದೇವ್ ಹೋರಾಟದ ಸೋಲಿಗೆ ಅದೇ ಕಾರಣ ಆಗಬೇಕಲ್ಲ ? ಅದು ಹೇಗೆ ಅಧಿಕಾರದ ಏಣಿ ಆಗುತ್ತೆ ? ಸ್ಪಷ್ಟತೆ ಕೊಡುವಿರಾ ?
  ಗಾಂಧಿಜಿಯವರ ಹೋರಾಟವು ಸಂಪೂರ್ಣ ರಾಜಕೀಯ ಮುಕ್ತವಾಗಿರಲಿಲ್ಲ ಅವರ ಜೊತೆ ಕಾಂಗ್ರೆಸ್ಸ್ ಮತ್ತು ಮುಸ್ಲಿಂ ಲೀಗ್ ಕೂಡ ಬಾಗಿ ಆಗಿತ್ತು . ಅಂದ ಮೇಲೆ ಗಾಂಧಿಜಿ ಹೋರಾಟದ ಮಾರ್ಗವು ಇದೆ ಆಗಿತ್ತು ಅಲ್ಲವೇ . ನಿಮ್ಮದು ಬಿಟ್ಟಿ ಸಲಹೆ ಎಂದು ಟೀಕಿಸುವ ಹಕ್ಕನೂ ಕೂಡ ಇದೆ ಪ್ರಜಾಪ್ರಭುತ್ವ ನನಗೆ ಕೊಟ್ಟಿದೆ ಹಾಗಾಗಿ ಅಭಿವ್ಯಕ್ತಿ ಸ್ವಾತಂತ್ರದ ಪ್ರಶ್ನೆಯೇ ಬರುವುದಿಲ್ಲ.
  ಇದೆಲ್ಲಕಿಂತ ಹೆಚ್ಚಾಗಿ ನಿಮ್ಮಂತೋರು ಎಸಿ ರೂಮಲ್ಲಿ ಕೂತು ಹೋರಾಟಕ್ಕೆ ಅವರು ಬರಲಿಲ್ಲ, ಇವರು ಬಂದರು, ಜನರ ಮನಸಲ್ಲಿ ಒಳ್ಳೆ ಭಾವನೆ ಇಲ್ಲ ಎಂದು ತೀರ್ಪು ಕೊಡುತಿರಲ್ಲ ನಿಮ್ಮ ಬಳಿ ಏನಾದರು ಅಂಕಿ ಅಂಶಗಳು ಏನಾದರು ಇದೆಯೇ ? ಅಥವಾ ಕಲ್ಪಿಸಿಕೊಂಡು ಬರೆಯುತ್ತಿದ್ದಿರೋ ಹೇಗೆ ?
  ಸಂಪೂರ್ಣ ದ್ವಂದ , ಪೂರ್ವಗ್ರಹ ಪೀಡಿತ , ಮತ್ತು ಚಿಂತನ ಶೀಲತೆಯ ಕೊರತೆ ಇಡಿ ಲೇಖನದಲ್ಲಿ ಎದ್ದು ಕಾಣುತ್ತಿದೆ . ಸತ್ಯಾಗ್ರಹವನ್ನು ರೂಪಿಸುವುದು ಮತ್ತು ಉಪಯೋಗಿಸುವುದಿರಲಿ, ಅದರಲ್ಲಿ ಬಾಗಿಯಾಗುವ ಇಚ್ಛೆ ಕೂಡ ನಿಮ್ಮೊಂಥರಿಗೆ ಇಲ್ಲ. ನೀವೆನಿದ್ದರು ಒಲೆ ಮುಂದಿರುವ ಉತ್ತರ ಕುಮಾರರು ಅಷ್ಟೇ

  Reply
 5. anand prasad

  ಉತ್ತರ ಪ್ರದೇಶ ಚುನಾವಣೆಗಳಲ್ಲಿ ಅಣ್ಣಾ ತಂಡ ಬಿಜೆಪಿ ಹಾಗೂ ಸಂಘ ಪರಿವಾರದ ವೇದಿಕೆಗಳಿಂದ ಚುನಾವಣಾ ಪ್ರಚಾರ ಮಾಡಿದ ವರದಿಗಳು ಪತ್ರಿಕೆಗಳಲ್ಲಿ ಬಂದಿವೆ (ಇಲ್ಲಿ ಅಣ್ಣಾ ತಂಡ ನೇರವಾಗಿ ಬಿಜೆಪಿ ಜೊತೆ ಗುರುತಿಸಿಕೊಂಡಿಲ್ಲವಾದರೂ ವೇದಿಕೆ ಸಿದ್ಧ ಪಡಿಸಿಕೊಟ್ಟಿರುವುದು ಸಂಘ ಹಾಗೂ ಬಿಜೆಪಿ). ಅಣ್ಣಾ ತಂಡ ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ಜಾಣ ಮೌನ ವಹಿಸಿರುವುದು ಚಳುವಳಿಯ ಉದ್ದಕ್ಕೂ ಕಂಡು ಬಂದ ಅಂಶವಾಗಿದೆ. ಒಂದು ಪಕ್ಷದ ಭ್ರಷ್ಟಾಚಾರದ ಬಗ್ಗೆ ಮಾತ್ರ ಉಗ್ರವಾಗಿ ಮಾತನಾಡಿ ಇನ್ನೊಂದು ಪ್ರಮುಖ ಪಕ್ಷದ ಭ್ರಷ್ಟಾಚಾರದ ಬಗ್ಗೆ ಮೌನ ವಹಿಸುವುದರಿಂದ ಜನರಿಗೆ ಹೋಗುವ ಸಂದೇಶ ಏನು? ಜನಲೋಕಪಾಲ್ ಕಾಯಿದೆ ಬರುವುದು ಬಿಜೆಪಿಗೆ ಬೇಕಾಗಿಲ್ಲ ಮತ್ತು ಎಲ್ಲ ರಾಜಕೀಯ ಪಕ್ಷಗಳಿಗೂ ಬೇಕಾಗಿಲ್ಲ. ಆದರೆ ಈ ವಿಷಯವನ್ನು ಬಳಸಿಕೊಂಡು ಅಧಿಕಾರಕ್ಕೆ ಏರುವ ಆಶ್ವಾಸನೆ ಮಾತ್ರ ನೀಡುತ್ತವೆ. ಅಧಿಕಾರಕ್ಕೆ ಬಂದ ನಂತರ ಆ ವಿಷಯವನ್ನು ಎತ್ತುವುದೇ ಇಲ್ಲ. ಕರ್ನಾಟಕದಲ್ಲಿ ಲೋಕಾಯುಕ್ತ ಹುದ್ಧೆಯನ್ನು ತುಂಬದೆ ಒಂದು ವರ್ಷದಿಂದ ಖಾಲಿ ಬಿಟ್ಟಿರುವ ಬಿಜೆಪಿ ಪಕ್ಷದ ಸರ್ಕಾರ ಲೋಕಪಾಲಕ್ಕೆ ಬೆಂಬಲ ನೀಡುತ್ತದೆ ಎಂದು ಯಾರಾದರೂ ನಂಬಿದರೆ ಅದು ಭ್ರಮೆಯಷ್ಟೇ. ಕಪ್ಪು ಹಣದ ವಿಷಯವೂ ಅಷ್ಟೇ. ರಾಮ ಮಂದಿರದ ವಿಷಯವೂ ಅಷ್ಟೇ. ಬಿಜೆಪಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ನಂತರ ರಾಮಮಂದಿರದ ವಿಷಯ ಮೂಲೆ ಸೇರಿತು. ಅಂದರೆ ಈ ವಿಷಯಗಳು ಜನರನ್ನು ಮರುಳು ಮಾಡಿ ಓಟು ಪಡೆಯಲು ಮಾತ್ರ ಹೊರತು ನಿಜವಾಗಿಯೂ ಜಾರಿಗೊಳಿಸಲು ಅಲ್ಲ. ನೇರವಾಗಿ ರಾಜಕೀಯ ಪಕ್ಷಗಳು ಕಪ್ಪು ಹಣವನ್ನು ತರುತ್ತೇವೆ ಎಂಬ ಆಶ್ವಾಸನೆ ಕೊಟ್ಟರೆ ಜನ ನಂಬುವುದಿಲ್ಲ, ಅದಕ್ಕಾಗಿ ರಾಮದೇವರಂಥ ರಾಜಕೀಯೇತರ ವ್ಯಕ್ತಿಗಳಿಂದ ಈ ವಿಷಯ ಎತ್ತಿಸಿದರೆ ಪ್ರಯೋಜನ ಆಗುತ್ತದೆಯೋ ಎಂದು ನೋಡುವ ತಂತ್ರ ಇಲ್ಲಿ ಅಡಗಿದೆ. ಸತ್ಯಗ್ರಹದಂಥ ಹೋರಾಟಗಳಲ್ಲಿ ಪಾಲುಗೊಳ್ಳಲು ನನ್ನನ್ನೂ ಒಳಗೊಂಡು ಜನಸಾಮಾನ್ಯರಿಗೆ ಹೊಟ್ಟೆಪಾಡಿನ, ಸಂಸಾರ ನಿಭಾಯಿಸುವ ಹೊಣೆಗಾರಿಕೆ ಇರುತ್ತದೆ. ಇದನ್ನು ಬಿಟ್ಟು ಹೋರಾಟಗಳಲ್ಲಿ ಭಾಗವಹಿಸುವುದು ಸಾಧ್ಯವಾಗುವುದಿಲ್ಲ. ನನ್ನ ಮನೆಯಲ್ಲಿ ಎ.ಸಿ. ಸೌಲಭ್ಯ ಇಲ್ಲ. ಹೀಗಾಗಿ ನೀವು ಹೇಳಿರುವ ಮಾತು ನನಗೆ ಅನ್ವಯ ಆಗುವುದಿಲ್ಲ. ಗಾಂಧೀಜಿಯವರು ಮುಸ್ಲಿಂ ಲೀಗನ್ನೂ ಹೋರಾಟದಲ್ಲಿ ಒಳಗೊಳಿಸಿದ್ದು ಸರಿಯಾಗಿಯೇ ಇದೆ. ಹೋರಾಟದಲ್ಲಿ ಧಾರ್ಮಿಕ ವಿಷಯದ ವಿಭಜನೆಯಿಂದ ಹೋರಾಟ ಬಲ ಕಳೆದುಕೊಳ್ಳುತ್ತದೆ ಎಂದು ಎಲ್ಲರನ್ನೂ ಒಳಗೊಳಿಸುವ ಮಾರ್ಗ ಅನುಸರಿಸಿದ್ದಾರೆಯೇ ಹೊರತು ಅದರಲ್ಲಿ ರಾಜಕೀಯ ಅಧಿಕಾರದ ಉದ್ಧೇಶ ಇರಲಿಲ್ಲ.

  Reply
 6. Avinash

  ಕೊನೆಗೂ ಆನಂದ್ ಪ್ರಸಾದ್ ನಮ್ಮ ದಾರಿಗೆ ಬಂದರು ಅನ್ನಿಸುತ್ತಿದೆ. ಅಣ್ಣ ತಂಡ ನೇರವಾಗಿ ಭಾಗಿಯಾದರ ಬಗ್ಗೆ ಪುರಾವೆ ಇಲ್ಲದೆ ಇದ್ದರು ಆರೋಪಿಸಿದ್ದು ಒಪ್ಪಿಕೊಂಡಿದ್ದಾರೆ.
  ಈಗ ನಮ್ಮ ಉದ್ದೇಶ ಬಹಳ ಸ್ಪಷ್ಟವಾಗಿ ಹೇಳುತ್ತೇನೆ ಲೋಕಪಾಲ್ ಜಾರಿಯಾಗಬೇಕು ಮತ್ತು ಕಪ್ಪು ಹಣ ವಾಪಸು ಬರಬೇಕು. ಅದನ್ನು ಕಾಂಗ್ರೆಸ್ಸ್ ಸರ್ಕಾರ ಜಾರಿಗೆ ತಂದುಅದರ ಹಿರಿಮೆ ತೆಗೆದು ಕೊಳ್ಳಲ್ಲಿ ಯಾರಿಗೂ ತೊಂದರೆ ಇಲ್ಲ. ಆದರೆ ಒಂದು ಪಕ್ಷ ಆಳುವ ಸರ್ಕಾರ ತರಲು ಮನಸು ಮಾಡದೇ ಇದ್ದಾಗ ವಿರೋದ ಪಕ್ಷದ ಸಹಾಯ ಪಡೆಯುವುದು ತಪ್ಪೇನಿದೆ ? ಈಗ ರಾಜ್ಯದ ವಿಷಯಕ್ಕೆ ಬಂದರೆ ಒಂದು ಪಕ್ಷ ಕಾಂಗ್ರೆಸ್ಸ್ ಲೋಕಾಯುಕ್ತರ ನೇಮಕಕ್ಕೆ ಒತ್ತಾಯ ಪಡಿಸುವಾಗ , ಬಿ ಜೆ ಪಿ ಸರ್ಕಾರ ನೀವು ಲೋಕಪಾಲ್ ನೇಮಕ ಮಾಡಿಲ್ಲ ಅದಕ್ಕೆ ನಾವು ಲೋಕಾಯುಕ್ತ ನೇಮಕ ಮಾಡುವುದಿಲ್ಲ ಎನ್ನುವುದು ಸೂಕ್ತ ಅನ್ನಿಸುತ್ತಿದೆಯೇ ?
  ಗಾಂದಿಜಿಯವರೇ ಧರ್ಮ ವಿಭಜನೆಯಿಂದ ಹೋರಾಟ ಬಲ ಕಳೆದುಕೊಳ್ಳುತ್ತದೆ ಅನ್ನುತ್ತದೆಯಾದರೆ, ಹೋರಾಟ ಬಲಪಡಿಸಲು ದೇಶದ ಎರಡನೇ ದೊಡ್ಡ ಪಕ್ಷ, ಹಲವು ರಾಜ್ಯದಲ್ಲಿ ಸರ್ಕಾರ ನಡೆಸುತ್ತಿರುವ ಬಿಜೆಪಿ ಬೆಂಬಲ ಪಡೆದರೆ ತಪ್ಪೇನಿದೆ ?
  ಇನು ಮನೆಯಲ್ಲಿ ಕುಳಿತು ಮಾತನಾಡುವ ಜನರು ಈ ದೇಶದ ದೊಡ್ಡ ಕಂಟಕ, ದಾರಿದ್ರ್ಯದಲ್ಲಿ ಒಂದು. ಓಲೆ ಬಿಟ್ಟು ಎದ್ದು ಬರಲ್ಲ. ಆ ಕಡೆ ಸುಮ್ಮನೆ ಕೂಡ ಕೂರಲ್ಲ. ತಲೆಯೊಳಗೆ ಇರೋದು ಅರೆ ಬೆಂದ ಸಾಮಾನು, ಇಂತಹ ಜನರ ಮಾತು ಕೇಳಿಯೇ ಅಣ್ಣಾ ಹೋರಾಟ ಹಳ್ಳ ಹಿಡಿದಿದ್ದು . ಯಾವುದೇ ಹೋರಾಟ ಕೂಡ ರಾಜಕೀಯದಿಂದ ಹೊರತಾಗಿಲ್ಲ ಮತ್ತು ಹೊರತಾಗಿರಲಿಲ್ಲ . ದಲಿತರ ಬಲಪಡಿಸಲು ಅಂಬೇಡ್ಕರ್ ರಾಜಕೀಯ ಪಕ್ಷ ಕಟ್ಟಲಿಲ್ಲವೇ ? ರೈತ ಸಂಘ ಚುನಾವಣೆ ಎದುರಿಸಲಿಲ್ಲವೇ ? ಜೆ ಪಿ ಚಳುವಳಿ ಜನತಾ ಪಕ್ಷಕ್ಕೆ ಪೂರಕ ಆಗಿರಲ್ಲಿಲ್ಲವೇ ? ಹಾಗಾದರೆ ಈ ಹೋರಾಟಗಳು ತಪ್ಪು ಎಂದು ಹೇಳುತ್ತಿರಾ ? ಅಂದು ಇಲ್ಲದ ಮಡಿವಂತಿಕೆ ಇಂದ್ಯಾಕೆ ?
  ಇದು ಖಂಡಿತ ಚುನಾವಣೆ ಪ್ರಚಾರ ಅಲ್ಲ. ಉದ್ದೇಶ ಈಡೇರಿಕೆ ಒಂದೇ ಗುರಿ. ರಾಮ್ ದೇವ್ ರ ಗುರಿಯು ಅದೇ ಆಗಿದೆ.
  ಪ್ರಜಾಪ್ರಭುತ್ವ ಆ ಹಕ್ಕು ಕೂಡ ಕೊಟ್ಟಿದೆ ಅವರಿಗೆ ಕೊಟ್ಟಿದೆ
  ನಮ್ಮ ಕಾಂಗ್ರೆಸ್ಸ್ ನ ಪರಮೇಶ್ವರ್ ಬೆಳ್ಳಿಗೆನೆ ರಾಜಭವನಕ್ಕೆ ಹೋಗಿ ಅಸ್ಸಾಂ ಗಲಭೆಯ ಹಿಂದೆ RSS ಕೈವಾಡ ಇದೆ ಎಂದು ರಾಜ್ಯಪಾಲರಿಗೆ ದೂರು ಕೊಟ್ಟು ಬಂದರು. ಮಧ್ಯಾನದ ಹೊತ್ತಿಗೆ ಇದರ ಹಿಂದೆ ಪಾಕಿಸ್ತಾನದ ಕೈವಾಡ ಇದೆ ಎಂದು ಕೇಂದ್ರ ಸರ್ಕಾರ ಪ್ರಕಟಿಸಿತು. ಇನ್ನು ಪರಮೇಶ್ವರ್ ದೂರು ಕೊಟ್ಟಿದ್ದು ಯಾವ ಹಿನ್ನೆಲೆಯಲ್ಲಿ ? ಎಂಬ ಪ್ರಶ್ನೆಗೆ ಸ್ವತಹ ಅವರಿಗೆ ಗೊತ್ತಿಲ್ಲ. ಇನ್ನು ಬಹಳಷ್ಟು ಸೆಕುಲರ್ಗಳೆಂದುಕರೆದು ಕೊಳ್ಳುವವರ ಹಣೆ ಬರಹವು ಅದೇ. ಯಾರಾದರು ನಿಲ್ಲಿಸಿ, ನೀವು ಬರೆದದಕ್ಕೆ ಏನು ಪುರಾವೆ ಅಂದರೆ ಮೇಲೆ ಕೆಳಗೆ ನೋಡುತ್ತಾರೆ .
  .
  ಮೂಗಿನ ನೇರಕ್ಕೆ ಬರೆಯುವುದು ತಪ್ಪಲ್ಲ ಆದರೆ ಮೊದಲು ನಮ್ಮ ಮೂಗು ನೆಟ್ಟಗಿದೆಯ ಎಂದು ನೋಡಿಕೊಳ್ಳುವುದು ಒಳಿತು

  Reply
 7. anand prasad

  ರಾಜಕೀಯಕ್ಕೆ ಬರುವುದು ತಪ್ಪು ಎಂದು ನಾನು ಹೇಳಿಲ್ಲ. ಭ್ರಷ್ಟ ಪಕ್ಷಗಳೊಂದಿಗೆ ಗುರುತಿಸಿಕೊಂಡಿರುವುದು ತಪ್ಪು ಎಂದಷ್ಟೇ ನನ್ನ ಅಭಿಪ್ರಾಯ. ಮನೆಯ, ಕುಟುಂಬದ ಜವಾಬ್ದಾರಿ ತೆಗೆದುಕೊಳ್ಳದೆ ಬೇರೆ ವಿಷಯಗಳ ಬಗೆಗೆ ತೊಡಗಿಕೊಳ್ಳುವವರನ್ನು ನಮ್ಮ ಸಮಾಜವು ‘ಮನೆಗೆ ಮಾರಿ, ಊರಿಗೆ ಉಪಕಾರಿ’ ಎಂದು ಕರೆಯುತ್ತದೆ. ನೂರು ಕೋಟಿಗೂ ಹೆಚ್ಚು ಜನ ಇರುವ ನಮ್ಮ ದೇಶದಲ್ಲಿ ಹೋರಾಟಕ್ಕೆ ಬಂದವರು ಲಕ್ಷಗಳಲ್ಲಿ ಕೂಡ ಇಲ್ಲ. ಹೀಗಾಗಿ ಹೋರಾಟಕ್ಕೆ ಹೋಗದೆ ಇರುವವರನ್ನು ಹೋರಾಟಕ್ಕೆ ಬರಲಿಲ್ಲ ಎಂದು ನಿಂದಿಸಲು ಆಗುವುದಿಲ್ಲ. ಒಂದು ಸ್ಪಷ್ಟ ಸೈದ್ಧಾಂತಿಕ ಧೋರಣೆ ಇಲ್ಲದೆ ತಮ್ಮ ವಿರೋಧಿ ಸಿದ್ಧಾಂತದವರ ಜೊತೆ ಅಧಿಕಾರಕ್ಕಾಗಿ ಒಂದುಗೂಡುವುದು ಸಮಯಸಾಧಕತನ ಎನಿಸಿಕೊಳ್ಳುತ್ತದೆ. ಇಂಥ ಒಂದುಗೂಡುವಿಕೆ ಬಹಳ ಸಮಯ ಬಾಳುವುದಿಲ್ಲ. ಜೆ.ಪಿ. ಯವರು ಜನತಾ ಪಕ್ಷ ರೂಪಿಸಿದ ಪರಿಸ್ಥಿತಿ ಭಿನ್ನವಾಗಿತ್ತು. ಆಗ ದೇಶದಲ್ಲಿ ತುರ್ತು ಪರಿಸ್ಥಿತಿ ಇತ್ತು. ಹೀಗಾಗಿ ಇದರ ವಿರುದ್ಧ ಹೋರಾಡಲು ಪರಸ್ಪರ ವಿರುದ್ಧ ಸಿದ್ಧಾಂತ ಇರುವ ಪಕ್ಷಗಳು ಒಂದುಗೂಡಿದವು. ವಿರುದ್ಧ ಸಿದ್ಧಾಂತದ ಪಕ್ಷಗಳು ಅಧಿಕಾರಕ್ಕೇರಿದ ತರುವಾಯ ತಮ್ಮ ಸೈದ್ಧಾಂತಿಕ ಮೂಲವನ್ನು ಬಿಡಲೊಪ್ಪದೆ ಸರಕಾರದಿಂದ ನಿರ್ಗಮಿಸಿದುದು ಕಂಡುಬರುತ್ತದೆ. ದ್ವಿಸದಸ್ಯತ್ವ ವಿವಾದದಿಂದಾಗಿ ಸರ್ಕಾರದಲ್ಲಿ ಭಾಗಿಯಾಗಿದ್ದ ಜನಸಂಘದ ರಾಜಕಾರಣಿಗಳು ಸರಕಾರದಿಂದ ನಿರ್ಗಮಿಸಿದರು. ಇಂದು ದೇಶದಲ್ಲಿ ತುರ್ತು ಪರಿಸ್ಥಿತಿ ಇಲ್ಲ. ಇಂದು ಅಧಿಕಾರಕ್ಕೆ ಪರಸ್ಪರ ವಿರುದ್ಧ ಸೈದ್ಧಾಂತಿಕ ಧೋರಣೆಯ ಪಕ್ಷಗಳು ಜೊತೆಗೂಡುತ್ತಿವೆ. ಹೀಗಾಗಿ ಇವುಗಳಿಂದ ಹೆಚ್ಚಿನದೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ರಾಜಕೀಯ ಪಕ್ಷ ಸ್ಥಾಪಿಸುವುದು ತಪ್ಪು ಎಂದು ನಾನು ಹೇಳಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷ ಸ್ಥಾಪಿಸಿ ಸಂಸತ್ತಿನ ಮೂಲಕ ಬದಲಾವಣೆ ತರುವುದು ಸರಿಯಾದ ಮಾರ್ಗವೆಂದು ನನ್ನ ಹಿಂದಿನ ಲೇಖನವೊಂದರಲ್ಲಿ ನಾನು ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ಹೀಗೆ ಮಾಡಿದರೆ ಜನರು ಹೋರಾಟಕ್ಕೆ ತಮ್ಮ ಕೆಲಸ, ಜವಾಬ್ದಾರಿಗಳನ್ನು ಬಿಟ್ಟು ಬರಬೇಕಾಗುವುದಿಲ್ಲ. ಜನರಿಗೆ ಮತದಾನದ ಹಕ್ಕೇ ಇಲ್ಲದಿದ್ದರೆ ಅಂಥ ಸಂದರ್ಭದಲ್ಲಿ ಆಂದೋಲನ, ಹೋರಾಟ ಮಾಡಿದರೆ ಹೆಚ್ಚು ಜನ ತೊಡಗಿಸಿಕೊಳ್ಳುತ್ತಿದ್ದರೋ ಏನೋ. ಇಂದು ಆಂದೋಲನಗಳಿಗೆ, ಹೋರಾಟಗಳಿಗೆ ಬಹುಸಂಖ್ಯೆಯ ಜನ ತೊಡಗಿಸಿಕೊಳ್ಳುವ ಪರಿಸ್ಥಿತಿ ಇಲ್ಲ.

  Reply
 8. Avinash

  ಭ್ರಷ್ಟಚಾರ ರಹಿತ ಪಕ್ಷ ಯಾವುದು ? ಕಾಂಗ್ರೆಸ್ಸ್ಗೆ ಹೋಲಿಸಿದರೆ ಬಿಜೆಪಿ ಎಷ್ಟೋ ವಾಸಿ. ಕಲ್ಲಿದ್ದಲು ಹಗರಣ, ೨ಜಿ ಹಗರಣ ದ ಭ್ರಷ್ಟಾಚಾರದ ಹಣದಲ್ಲಿ ೧೦೦೦೦ ಯಡಿಯೂರಪ್ಪ ರನ್ನ ಖರೀದಿಸಬಹುದು. ಅಂತಹ ಸರ್ಕಾರದ ವಿರುದ್ದ ಹೋರಾಟ ಅನಿವಾರ್ಯವಾಗಿದೆ . ತಮಗೆ ಮಾಡಲು ಯೋಗ್ಯತೆ ಇಲ್ಲದೆ ಇದ್ದರು ಯಾರಾದರು ಮಾಡಿದನ್ನು ನೋಡಿ ಅವರು ಹಾಗೆ ಮಾಡಬೇಕಿತ್ತು, ಹೀಗೆ ಮಾಡಬೇಕಿತ್ತು ಅನ್ನುವುದು ಬಾರೆ ಬಾಯಿ ಚಪಲ ತೀರಿಸಿಕೊಳ್ಳಲು ಸೀಮಿತ ವಾಗುವುದೇ ಹೊರತು . ಆ ಮಾತಿಗೆ ಯಾವ ಬೆಲೆಯೂ ಇರುವುದಿಲ್ಲ. ಮನೆಗೆ ಉಪಕಾರಿಯಾಗಿ ಊರಿಗೆ ಮಾರಿಯಾಗಬೇಡಿ ಅನ್ನುವುದು ನಮ್ಮ ಕಳಕಳಿ. ಈಗ ದೇಶ ಹಗರಣಗಳಲ್ಲಿ ತುಂಬಿ ತುಳುಕುತ್ತಿದೆ. ಹಗರಣದ ಹಣಗಳು ಕಪ್ಪು ಹಣಗಳಗಿ ವಿದೇಶದಲ್ಲಿ ಶೇಖರಣೆ ಆಗುತ್ತಿದೆ. ಇದು ಯಾವ ತುರ್ತು ಪರಿಸ್ತಿತಿಗಿಂತಲೂ ಕಡಿಮೆ ಇಲ್ಲದ ಅಪಾಯ ಇದು . ಓಲೈಕೆ ರಾಜಕಾರಣ ಕೋಮು ಗಲಭೆಗೆ ಕಾರಣವಾಗುತ್ತಿದೆ. ಮಂಗಳೂರು ಪ್ರಕರಣವನ್ನು ದೊಡ್ಡದಾಗಿ ಗಮನಿಸುವ ಬುದ್ದಿ ಜೀವಿಗಳಿಗೆ ಮುಂಬೈ, ಹೈದರಾಬಾದ್ ನಲ್ಲಿ ಹಾರಿಸಿದ ಪಾಕಿಸ್ತಾನದ ದ್ವಜ ಕಣ್ಣಿಗೆ ಕಾಣಿಸಿರಲಾರದು. ಕರ್ನಾಟಕ ಹೊರತು ಪಡಿಸಿದರೆ ಬಿಜೆಪಿ ಆಡಳಿತದಲ್ಲಿರುವ ಎಲ್ಲ ರಾಜ್ಯಗಳು ಉತ್ತಮ ಪ್ರಗತಿಯಲ್ಲಿವೆ. ಕೋಮುಗಲಭೆಗಳು ನಿಯಂತ್ರಣದಲ್ಲಿವೆ. ಇದು ನಿಮ್ಮೊಂಥೋರು ಅರಗಿಸಿ ಕೊಳ್ಳಲು ಆಗದಂತಹ ಸತ್ಯ. ಇಂದಿಗೂ ಈ ದೇಶ ಕಂಡ ಅತ್ಯುತ್ತಮ ಪ್ರಧಾನಿಗಳು ಅಂದರೆ ಒಂದು ಲಾಲ್ ಬಹಾದ್ದೂರ್ ಶಾಸ್ತ್ರಿ ಮತ್ತೊಬ್ಬರು ವಾಜಪೇಯಿ ಮಾತ್ರ. ಅಂತಹ ಪ್ರಧಾನಿಯನ್ನು ಕೊಟ್ಟಿದ್ದು ಬಿಜೆಪಿ ಪಕ್ಷವೇ. ನಿಮಗೆ ಬಿಜೆಪಿ ಬಗ್ಗೆ ಅಸಹನೆ ಇರಬಹುದು ಹಾಗೆಂದ ಮಾತ್ರಕ್ಕೆ ಎಲ್ಲ ವಿಷಯಕ್ಕೂ ತಳಕು ಹಾಕುವುದು ಸಮಂಜಸ ಅಲ್ಲ.
  ನಿಮ್ಮ ಮೇಲಿನ ಲೇಖನ ತುಂಬಾ ಅಪ್ರಬದ್ದುವಾಗಿದೆ ಮತ್ತು ಯಾವುದೇ ವಿಷಯವನ್ನು ನಿಖರವಾಗಿ ತಿಳಿಸುವಾಗ ಅದಕ್ಕೆ ಆಧಾರ ಸಹಿತವಾಗಿ ಬರೆಯಬೇಕಾಗುತ್ತದೆ. ಮತ್ತೆ ನಿಮ್ಮ ಪ್ರತಿಕ್ರಿಯೆಗಳು ವಿಷಯಾಅಂತರವಾಗಿದ್ದವು.
  “ಉತ್ತರ ಪ್ರದೇಶ ಚುನಾವಣೆಗಳಲ್ಲಿ ಅಣ್ಣಾ ತಂಡ ಬಿಜೆಪಿ ಹಾಗೂ ಸಂಘ ಪರಿವಾರದ ವೇದಿಕೆಗಳಿಂದ ಚುನಾವಣಾ ಪ್ರಚಾರ ಮಾಡಿದ ವರದಿಗಳು ಪತ್ರಿಕೆಗಳಲ್ಲಿ ಬಂದಿವೆ (ಇಲ್ಲಿ ಅಣ್ಣಾ ತಂಡ ನೇರವಾಗಿ ಬಿಜೆಪಿ ಜೊತೆ ಗುರುತಿಸಿಕೊಂಡಿಲ್ಲವಾದರೂ ವೇದಿಕೆ ಸಿದ್ಧ ಪಡಿಸಿಕೊಟ್ಟಿರುವುದು ಸಂಘ ಹಾಗೂ ಬಿಜೆಪಿ).” ಈ ಸಾಲಿನಲ್ಲಿ ಯಾವ ಪತ್ರಿಕೆಗಳಲ್ಲಿ ಬಂದಿವೆ ಅನ್ನುವುದು ಕೂಡ ನೀವು ನಮೂದಿಸಿಲ್ಲ ಮತ್ತು ವೇದಿಕೆ ಸಿದ್ದಪಡಿಸಿದ್ದು ಬಿಜೆಪಿ ಅನ್ನೋ ಆಧಾರ ರಹಿತ ಮಾತನಾಡಿದ್ದಿರಿ ಅದಕ್ಕೂ ಪುರಾವೆ ಒದಗಿಸಿಲ್ಲ. ಬಹುಶ ಈ ವಿಷಯವನ್ನು ನೀವು ಮನೀಶ್ ತಿವಾರಿ ಮತ್ತು ದಿಗ್ವಿಜಯ್ ಸಿಂಗ್ ರ ಹೇಳಿಕೆ ಇಂದ ಎತ್ತಿಕೊಂಡಿರಬಹುದು. ಅಣ್ಣಾ ಹಜಾರೆ ಯನ್ನು ಅಡಿಯಿಂದ ಮುಡಿಯವರೆಗೂ ಭ್ರಷ್ಟ ಅಂದು ಅದನ್ನು ಅರಗಿಸಿಕೊಳ್ಳಗದೆ ಕ್ಷಮೆ ಯಾಚಿಸಿದ ಮಹಾನುಭಾವ ಆತ. ಇನ್ನು ದಿಗ್ಗಿಯಾ ಹೇಳಿಕೆಯನ್ನು ಆತನ ಪಕ್ಷದವರೇ ನಂಬುವುದಿಲ್ಲ. ಈ ತರಹ ಮಾತಾಡುವುದು ಹಾಳು ಹರಟೆ (ಗಾಸಿಪ್ ) ಅನ್ನಿಸುಕೊಳ್ಳುವುದೇ ಹೊರತು ವಿಚಾರವಂತ ಬರಹ ಅನ್ನಿಸಿಕೊಳ್ಳ ಲಾರದು. ಈ ತರಹದ ಬಾಲಿಶತನ ಕೂಡ ಪ್ರಜಾಪ್ರಭುತ್ವದ ನಿಮ್ಮ ಹಕ್ಕೆ ಆಗಿರಬಹುದು ಆದರೆ ವರ್ತಮಾನ ಕ್ಕೆ ಇದ್ದರ ಅವಶ್ಯಕತೆ ಇದೆಯೇ ಎಂಬುದೇ ಪ್ರಶ್ನೆ .

  Reply
 9. anand prasad

  ಅಣ್ಣಾ ತಂಡದ ಚುನಾವಣಾ ಪ್ರಚಾರಕ್ಕೆ ಉತ್ತರ ಪ್ರದೇಶದಲ್ಲಿ ವೇದಿಕೆ ಒದಗಿಸಿದ್ದು ಬಿಜೆಪಿ ಹಾಗೂ ಸಂಘ ಪರಿವಾರ ಎಂಬ ವರದಿ ವಾರ್ತಾಭಾರತಿ ಕನ್ನಡ ದೈನಿಕದಲ್ಲಿ ಬಂದಿದೆ. ಉತ್ತರ ಪ್ರದೇಶ ಚುನಾವಣಾ ಪ್ರಚಾರದ ಸಮಯದಲ್ಲಿ ಈ ವರದಿ ಬಂದಿತ್ತು. ರಾಜಕೀಯ ಪಕ್ಷದ ವ್ಯಕ್ತಿಗಳ ಹೇಳಿಕೆಗಳಿಂದ ನಾನು ಈ ವಿಷಯವನ್ನು ಎತ್ತಿಕೊಂಡಿಲ್ಲ. ಕಪ್ಪು ಹಣದ ವಿಷಯವನ್ನು ೨೦೦೯ ರ ಲೋಕಸಭಾ ಚುನಾವಣೆಗಳಲ್ಲಿ ಅಡ್ವಾಣಿಯವರು ಬಿಜೆಪಿಯ ಪ್ರಧಾನ ಚುನಾವಣಾ ವಿಷಯವನ್ನಾಗಿ ಮಾಡಿಕೊಂಡು ಪ್ರಚಾರ ಮಾಡಿದ್ದರು. ಬಿಜೆಪಿಯ ಹೋರಾಟದ ಬಗ್ಗೆ ನಂಬಿಕೆ ಇದ್ದಿದ್ದರೆ ಜನ ಆಗಲೇ ಬಿಜೆಪಿಯನ್ನು ಮೂರನೇ ಎರಡು ಬಹುಮತ ಕೊಟ್ಟು ಲೋಕಸಭಾ ಚುನಾವಣೆಗಳಲ್ಲಿ ಗೆಲ್ಲಿಸಬೇಕಾಗಿತ್ತು. ಆದರೆ ಬಿಜೆಪಿ ಪಕ್ಷವನ್ನು ಜನ ಗೆಲ್ಲಿಸದೆ ಇರುವುದು ಏನನ್ನು ಸೂಚಿಸುತ್ತದೆ? ವಾಜಪೇಯಿಯವರು ಭಾರತ ಕಂಡ ಅತ್ಯುತ್ತಮ ಪ್ರಧಾನಮಂತ್ರಿಯಾಗಿರುವುದು ನಿಜವಾಗಿದ್ದರೆ ೨೦೦೪ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಸೋಲಲು ಕಾರಣವೇನು? ಬಿಜೆಪಿ ಕಾಂಗ್ರೆಸ್ಸಿಗಿಂತ ಉತ್ತಮ ಪಕ್ಷವಾಗಿದ್ದರೆ ೨೦೦೯ರ ಲೋಕಸಭಾ ಚುನಾವಣೆಗಳಲ್ಲಾದರೂ ಗೆಲ್ಲಬೇಕಾಗಿತ್ತು.

  Reply
 10. chethan ns

  ಅವಿನಾಷ್ ರವರ ಆಲೋಚನೆಗಳು ಸರಿಯಾಗೆ ಇವೆ…ಇಲ್ಲಿ ನಮ್ಮ ವಿಪರ್ಯಾಸವೆಂದರೆ ಮಂಗಳೂರು ಪ್ರಕರಣವನ್ನ ವಿರೋದಿಸುವ ಜನ ಯಾವಾಗಲು ಬುಧ್ಧಿಜೀವಿಗಳೆನಿಸಿಕೊಳ್ಳುತ್ತಾರೆ ಅದೇ ಮುಂಬೈ, ಹೈದರಾಬಾದ್ ನಲ್ಲಿ ಹಾರಿಸಿದ ಪಾಕಿಸ್ತಾನದ ದ್ವಜದ ಬಗ್ಗೆ ಮತ್ತು ಮುಸ್ಲಿಂ ಮೊಲಭೂತವಾದದ ಬಗ್ಗೆ ಮಾತನಾಡುವ ಪ್ರತಿಯೋಬ್ಬರನ್ನು ಆರ್ ಎಸ್ ಎಸ್ ನ ಪ್ರತಿನಿಧಿಗಳೆಂದು ಹಿಂದು ಮೋಲಭೂತವಾಧಿಗಳೆಂದು ಭಿಂಬಿಸಲಾಗುತ್ತಿದೆ…………ದೇಶದ ಯಾವುದೇ ಮೋಲೆಯಲ್ಲಿ ಕೋಮುಗಲಬೆಗಳಾದರು ಅದನ್ನ ಮುಸ್ಲಿಂ ಸಂಘಟನೆ ನೇರ ಹೊಣೆ ಹೋತ್ತಿಕೊಂಡರು ಇದನ್ನ ದೇಶದ ಯಾವುದೇ ಸಾಮಾನ್ಯ ಪ್ರಜೇ ಖಂಡಿಸುವ ಮೋದಲು ಯೋಚಿಸುವ ಅವಶ್ಯಕತೆ ಇದೆ ಏಕೆಂದರೆ ಇವರಿಗೆ ;;ಹಿಂದೂ ಮೋಲಬೊತವಾದಿಗಳೆಂಬ;; ಹಣೆಪಟ್ಟಿ ಇಂಥ ಬುದ್ದಿಜೀವಿಗಳಿಂದ ಖಂಡಿತ ದೋರೆಯಲಿದೆ……..ಖಂಡಿತವಾಗಿಯೂ ಅವರಿಗೆ ತಾವುಗಳು ಬುದ್ದಿಜೀವಿಗಳೆಂದು ಕರೆಸಿಕೊಳ್ಳುವ ಹಕೀಕತ್ತಿದೆ ವಿಷಯ ಯಾವುದಾದರೇನು.

  Reply
 11. Avinash

  ಅಣ್ಣಾ ತಂಡ ಬಿಜೆಪಿ ಜೊತೆ ಶಾಮಿಲಾಗಿದೆ ಎಂದು ನೀರುಪಿಸಲು ನೀವು ವಾರ್ತಾಭಾರತಿ ಯಂತಹ ಮುಸ್ಲಿಂ ದೋರಣೆ ಉಳ್ಳ ಒಂದು ಪ್ರಾದೇಶಿಕ ಪತ್ರಿಕೆ ಹೆಸರಿಸುತ್ತಿರಿ ಎಂದರೆ. ನಿಮ್ಮ ಆಲೋಚನಾ ವ್ಯಾಪ್ತಿ ದೊಡ್ಡದು ಎಂಬುದು ಅರಿವಾಗುತ್ತಿದೆ. ಆನಂದ್ ನೀವು ಬಾವಿ ಬಿಟ್ಟು ಹೊರಬರಲು ಇದು ಸಕಾಲ ಅನ್ನಿಸುತ್ತಿದೆ

  Reply
 12. anand prasad

  ವಾರ್ತಾಭಾರತಿ ಪತ್ರಿಕೆಯು ಮಂಗಳೂರು ಹಾಗೂ ಬೆಂಗಳೂರು ಎರಡು ಆವೃತ್ತಿಗಳಲ್ಲಿ ಪ್ರಕಟವಾಗುತ್ತಿದೆ. ಹೀಗಾಗಿ ಇದನ್ನು ಪ್ರಾದೇಶಿಕ ಪತ್ರಿಕೆ ಎನ್ನಲಾಗದು. ಇದರ ಒಡೆತನ ಮುಸ್ಲಿಮರದ್ದು ಎಂದಾಕ್ಷಣ ಅದರಲ್ಲಿ ಪ್ರಕಟವಾಗುವ ವಿಷಯಗಳು ಸುಳ್ಳು ಎಂದುಕೊಳ್ಳುವುದು ಸಮರ್ಪಕವೇನೂ ಅಲ್ಲ. ಇದರಲ್ಲಿ ಬರೆಯುವ ಎಷ್ಟೋ ಲೇಖಕರು ಹಿಂದೂಗಳೇ ಆಗಿದ್ದಾರೆ ಮತ್ತು ಕನ್ನಡದ ಪತ್ರಿಕೆಗಳಲ್ಲಿ ಹೆಚ್ಚು ಪ್ರಗತಿಶೀಲ ನಿಲುವಿನ ಪತ್ರಿಕೆ ಇದುವೇ ಆಗಿದೆ. ಇದು ಬಂಡವಾಳಶಾಹಿಗಳ ಒಡೆತನದಲ್ಲಿ ಇರುವ ಪತ್ರಿಕೆ ಅಲ್ಲವಾದ ಕಾರಣ ಜನಪರ ನಿಲುವಿನಲ್ಲಿ ಇದು ಹೆಚ್ಚು ವಿಶ್ವಾಸಾರ್ಹವಾಗಿದೆ. ದಲಿತರ, ಶೋಷಿತರ, ಬಡವರ ಪರವಾಗಿ ಇದು ಹೆಚ್ಚು ಕಾಳಜಿಯಿಂದ ವರದಿ ಮಾಡುತ್ತಿದೆ. ದೊಡ್ಡ ಪತ್ರಿಕೆಗಳು ವರದಿ ಮಾಡದ ಎಷ್ಟೋ ಜನಪರ ವಿಷಯಗಳನ್ನು ಈ ಪತ್ರಿಕೆ ಪ್ರಕಟಿಸಿದೆ.

  Reply
  1. Avinash

   ವಾರ್ತಾಭಾರತಿಯ ಬಗ್ಗೆ ಅದ್ಬುತವಾದ ಪ್ರಚಾರ ಮಾಡಿದ್ದಿರಿ ಇನ್ನಾದರೂ ಅದರ ಓದುಗರ ಸಂಖ್ಯೆ . ಅದರ ಸಂಪಾದಕೀಯ ಮಂಡಳಿಯ ಸದಸ್ಯರ ಸಂಖ್ಯೆ ಗಿಂತ ಜಾಸ್ತಿ ಆಗಲಿ ಅನ್ನುವುದು ನನ್ನ ಹಾರೈಕೆ. ತಾವೇ ಬರೆದಿದ್ದನ್ನ ತಾವೇ ಓದಿಕೊಂಡರೆ ಪ್ರಯೋಜನ ಆದರು ಏನು ಅಲ್ವಾ ?

   Reply
 13. Chethan Ka

  ಸಿನ್ಧಗಿಯಲ್ಲಿ ಪಾಕ್ ಧ್ವಜ ಹಾರಿಸಿ ಸಿಕ್ಕಿ ಬಿದ್ದ ಚೆದ್ದಿಗಳು ಪಾಕಿಸ್ತಾನದ ಹ್ಯ್ದೆರಾಬದನಲ್ಲಿ ನಡೆದ ಸ್ವಾತಂತ್ರ್ಯ ಉತ್ಸವದ ಚಿತ್ರಗಳನ್ನು ತೋರಿಸಿ ನಮ್ಮದೇ ದೇಶದ ಮುಸ್ಲಿಮರಿಗೆ ವಿದೇಶಿಯರಂತೆ ಬಿಂಬಿಸಲು ಹೊರಟಿದ್ದಾರೆ. ..ಇವರ ದೇಶ ಪ್ರೇಮ ಕೇವಲ ಅಧಿಕಾರ ಆಸೆ ಬಿಟ್ಟು ಇನ್ನೇನಲ್ಲ.ಇಂತಹ ನಕಲಿ ಧರ್ಮ ರಕ್ಷಕರು ಮತ್ತು ದೇಶ ಭಕ್ತರು ಮಾಲೆಗಾಒನ್,ಹೈದರಾಬಾದ್ ಸಂಜ್ಹೊತಾ ಗಳಲ್ಲಿ ಬಾಮಬ್ ಸ್ಫೋಟಿಸಿ ಮುಸ್ಲಿಮರ ತಲೆಗೆ ಪಾಪ ಕಟ್ಟಲು ಹೊರತಿದ್ದರಲ್ಲ.

  Reply
 14. Avinash

  ನಿಮ್ಮ ಮೇಲಿನ ಎರಡು ಉಲ್ಲೇಖಗಳಿಗೆ ಉದಾರಣೆ ಸಮೇತ ವಿವರಣೆ ಕೊಡಲು ಬಯುಸುತ್ತೇನೆ.
  ೧. ವಾರ್ತಬಾರತಿಯಲ್ಲಿ ಬಂದಿದೆ ಅಂದ ಕೂಡಲೇ ಸತ್ಯ ಅಂದರೆ ಹೇಗೆ ಸ್ವಾಮಿ ? ಇಡೀ ದೇಶದ ಮಾದ್ಯಮಕ್ಕೆ ಗೊತ್ತಾಗದ ಸಂಗತಿ ವಾರ್ತಾಭಾರತಿ ಗೆ ಗೊತ್ತಾಗಿದ್ದಾದರು ಹೇಗೆ? . ಮಂಗಳೂರಲ್ಲಿ ಕೂತ ಜನ ಅಂಜನ ಹಾಕಿ ನೋಡಬೇಕಷ್ಟೇ. RSS ನ ವಿರುದ್ದ ಬರೆಯುತ್ತಾರೆ ಅನ್ನುವುದು ಒಂದೇ ಅದರ ಹೆಗ್ಗಳಿಕೆ.ಮತ್ತು ಅದೇ ಒಂದು ಕಾರಣಕ್ಕಾಗಿ ನೀವು ಅದನ್ನು ಓದುತ್ತಿರಿ. ಮೊನ್ನೆ ಸಿಕ್ಕಿ ಬಿದ್ದ ಸಿದ್ದಿಕ್ ಎಂಬ ಪತ್ರಕರ್ತ ಕಂ ಉಗ್ರ RSS ಕಾರ್ಯಕರ್ತ ಅನ್ನುವುದು ಅದರ Latest Joke. ಅದನ್ನ ನಿಮ್ಮಂಥವರು ಮಾತ್ರ ನಂಬಬೇಕಷ್ಟೇ.
  ೨೦೧೦ ರಲ್ಲಿ ವಿಶ್ವೇಶ್ವರ ಭಟ್ ರು ರವಿ ಕೃಷ್ಣ ರೆಡ್ಡಿಯವರ ಬಗ್ಗೆ ತುಂಬಾ ಕೇವಲವಾಗಿ ಬರೆದಿದ್ದರು. ಅದು ವಿಜಯ ಕರ್ನಾಟಕ ಎಂಬ ನಂಬರ್ ೧ ಪತ್ರಿಕೆಯಲ್ಲಿ . ಅಂದ ಮಾತ್ರಕ್ಕೆ ರೆಡ್ಡಿಯವರು ಅಂತವರು ಅನ್ನಲು ಸಾಧ್ಯವೇ ? ಯಾವುದೇ ಪತ್ರಿಕೆಯನ್ನು ಆದರಿಸುವಾಗ ಅದರ ಪ್ರಾಮಾಣಿಕತೆ ಮುಖ್ಯವಾಗುತ್ತೆ ಅಲ್ಲವೇ ?
  ೨. ಇನ್ನು ಚುನಾವಣೆಯ ಬಗ್ಗೆ ನಿಮಗೆ ಇರುವ ತಪ್ಪು ಅಭಿಪ್ರಾಯ — ಭ್ರಷ್ಟಚಾರಿಗಳು ಚುನಾವಣೆ ಸೋಲುತ್ತಾರೆ ಅನ್ನೋ ನಿಮ್ಮ ತಿಳುವಳಿಕೆ ಶುದ್ದ ತಪ್ಪು. ಗೆದ್ದ ಎಷ್ಟೋ ಉಧಾರಣೆಗಳು ಇವೆ ಇತ್ತೀಚಿಗೆ ಗೆದ್ದ ರಾಮಚಂದ್ರ ಗೌಡ್ರೆ ಸಾಕ್ಷಿ. ಇನ್ನು ಒಳ್ಳೆಯ ಅಭ್ಯರ್ಥಿಗಳು ಕೂಡ ಸೋಲುತ್ತಾರೆ ಅನ್ನುವುದಕ್ಕೆ ೨೦೦೮ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಹೀನಾಯವಾಗಿ ಸೋತ ರವಿಕೃಷ್ಣ ರೆಡ್ಡಿಯವರೇ ಸಾಕ್ಷಿ.( ಗೆದ್ದ ಅಭ್ಯರ್ಥಿ ರೆಡ್ಡಿ ಅವರಿಗಿಂತ ೧೮೦ ಪಟ್ಟು ಜಾಸ್ತಿ ಮತ ಪಡೆದ್ದಿದ್ದರು. ಇದರ ಅರ್ಥ ರೆಡ್ಡಿಯವರು ಗೆದ್ದ ಅಭ್ಯರ್ಥಿಗಿಂತ ೧೮೦ ಪಟ್ಟು ಭ್ರಷ್ಟರು ಅಂತ ಅಲ್ಲವಲ್ಲ ?)

  ಈ ಎರಡು ಪ್ರಸಂಗದಲ್ಲಿ ರವಿ ಕೃಷ್ಣ ರೆಡ್ಡಿಯವರನ್ನು ಉಲ್ಲೇಖಿಸಿರುವ ಉದ್ದೇಶ ಇಷ್ಟೇ. ಅವರಾದರೂ ನಿಮ್ಮ ತಪ್ಪು ತಿಳುವಳಿಕೆಯನ್ನು ತಿದ್ದಬಹುದು ಎಂದು. ಪ್ರತ್ಯುತ್ತರ ನೀಡುವ ಮುನ್ನ ರೆಡ್ಡಿಯವರನ್ನು ಒಮ್ಮೆ ಸಂಪರ್ಕಿಸಿ. ಯಾಕೆಂದರೆ ನಿಮ್ಮ ಅರೆ ಬೆಂದ ಉತ್ತರ ರೆಡ್ಡಿಯವರ ಇಮೇಜ್ ಹಾಳು ಮಾಡಬಾರದು ಅಲ್ವಾ?
  ಉತ್ತರಿಸಲು ಕಷ್ಟವಾದರೆ ಈ ಕಾಮೆಂಟ್ ಅಳಿಸಲು ನೀವು ಸರ್ವ ಸ್ವತಂತ್ರರು

  Reply

Leave a Reply

Your email address will not be published.