ಮಂಗಳೂರು ಹೋಂ ಸ್ಟೇ ದಾಳಿ ಪ್ರಕರಣದ ಪ್ರಶ್ನೆಗಳು ಮತ್ತು ಉತ್ತರಗಳು


-ನವೀನ್ ಸೂರಿಂಜೆ


ಅದು ಕೇವಲ ನಾಲ್ಕು ನಿಮಿಷ ಐವತ್ತೊಂಬತ್ತು ಸೆಕೆಂಡು ನಡೆದ ಘಟನೆ. ಕಣ್ಮುಚ್ಚಿ ತೆರೆಯುವಷ್ಟರಲ್ಲಿ ನಡೆದ ಈ ಘಟನೆ ಮಂಗಳೂರಿನ ಕೋಮುವಾದಿಗಳ ಬಣ್ಣವನ್ನು ಬಯಲು ಮಾಡಿತ್ತು. ಆದರೆ ರಾಜ್ಯದ ಆಡಳಿತ ವ್ಯವಸ್ಥೆ ಈ ಕೋಮುವಾದಿಗಳ ಜೊತೆ ಸೇರಿಕೊಂಡು ಮಾಡುವ ಕಿರಾತಕ ಕಾರ್ಯಚಟುವಟಿಕೆಗಳನ್ನು ಈ ಘಟನೆ ಬಯಲಿಗೆ ತರಲೇ ಇಲ್ಲ. ಪೊಲೀಸರು ಮಾಧ್ಯಮದ ಪ್ರತಿನಿಧಿಗಳ ಮೇಲೆ ಕೇಸು ದಾಖಲಿಸಿ ಪ್ರಕರಣವನ್ನು ವಿಷಯಾಂತರ ಮಾಡಲು ಯತ್ನಿಸಿದ್ದರು. ಮಂಗಳೂರಿನ ಕೆಲವೊಂದು ಚೆಡ್ಡಿ ಪತ್ರಕರ್ತರ ಕೃಪೆಯಿಂದ ಅದರಲ್ಲಿ ಸ್ವಲ್ಪಮಟ್ಟಿಗೆ ಯಶಸ್ವಿಯೂ ಆದರು. ಆದರೆ ಸತ್ಯ ನಮ್ಮ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ದಿನಾಂಕ, ಸಮಯ ಸಹಿತ ಪೊಲೀಸರೂ ಈ ಪ್ರಕರಣದಲ್ಲಿ ಭಾಗಿಯಾದ ಬಗ್ಗೆ ಕ್ಯಾಮರ ಕ್ಯಾಸೆಟ್ಟು ಸಾಕ್ಷಿ ನುಡಿಯುತ್ತದೆ.

ಮಂಗಳೂರಿನ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೆಯಲ್ಲಿ ಹಿಂದೂ ಯುವತಿಯರ ಜೊತೆ ಮುಸ್ಲಿಂ ಯುವಕರು ಪಾರ್ಟಿ ಮಾಡುತ್ತಿದ್ದಾರೆ ಎಂಬ ಮಾಹಿತಿಯ ಮೇಲೆ ಹಿಂದೂ ಜಾರಣ ವೇದಿಕೆಯ ಕಾರ್ಯಕರ್ತರು ಮಾರ್ನಿಂಗ್ ಮಿಸ್ಟ್ ಪ್ರವೇಶ ಮಾಡಿದ್ದರು. ಮಾರ್ನಿಂಗ್ ಮಿಸ್ಟ್ ಹೋಂ ಸ್ಟೆಯ ಕಂಪೌಂಡ್ ಗೇಟ್‌ನಿಂದ 40 ಮೀಟರ್ ದೂರದಲ್ಲಿ ಗೆಸ್ಟ್ ಹೌಸ್ ಇದೆ. ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಸರಿಯಾಗಿ ಸಂಜೆ 7.12 ಕ್ಕೆ ಗೇಟ್ ಬಳಿ ಜಮಾವಣೆಗೊಂಡಿದ್ದಾರೆ. 7.13ಕ್ಕೆ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೆಯ ಬಾಗಿಲು ದೂಡಿ ಒಳ ಪ್ರವೇಶಿಸಿದ್ದಾರೆ. 7.15ಕ್ಕೆ ನಾನು ಪೊಲೀಸ್ ಇನ್ಸ್‌ಪೆಕ್ಟರ್ ರವೀಶ್ ನಾಯಕ್ ರ ದೂರವಾಣಿ ಸಂಖ್ಯೆ 9480805330 ಗೆ ಕರೆ ಮಾಡಿದ್ದೇನೆ. ಅವರು ಕರೆ ಸ್ವೀಕರಿಸಿಲ್ಲ. ಅಷ್ಟರಲ್ಲಿ ನನ್ನ ಫೋನ್‌ಗೆ ನನ್ನ ವರದಿಗಾರ ಮಿತ್ರನೊಬ್ಬ ಕರೆ ಮಾಡಿದ್ದಾನೆ. ನಾನು ಆತಂಕದಿಂದಲೇ ದಾಳಿ ವಿಷಯವನ್ನು ಅವನಿಗೆ ತಿಳಿಸಿದೆ. ಅವನು ಸ್ವಲ್ಪ ಹೊತ್ತಿನಲ್ಲಿ ಮತ್ತೆ ನನಗೆ ಕರೆ ಮಾಡಿ ಅವನೂ ಪೊಲೀಸರಿಗೆ ಕರೆ ಮಾಡಿದ್ದು, ಅವರು ಕರೆ ಸ್ವೀಕರಿಸದಿರುವ ಬಗ್ಗೆ ತಿಳಿಸಿದ್ದಾನೆ. ಸರಿಯಾಗಿ 7.18 ಕ್ಕೆ ದಾಳಿ ನಡೆಯುತ್ತಿರುವ ಸ್ಥಳಕ್ಕೆ ಪೊಲೀಸರು ಬಂದಿದ್ದಾರೆ. 7.20ಕ್ಕೆ ದಾಳಿ ಮುಕ್ತಾಯವಾಗಿದೆ.

ನಮ್ಮ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೆಯ ಜುಲೈ 28 ರ ಘಟನೆಯ ಬಗ್ಗೆ ಒಟ್ಟು ಒಂಬತ್ತು ನಿಮಿಷ ಹದಿನೈದು ಸೆಕೆಂಡಿನ ದೃಶ್ಯಾವಳಿಗಳಿವೆ. ಒಟ್ಟು ನಾಲ್ಕು ನಿಮಿಷ ಐವತ್ತೊಂಬತ್ತು ಸೆಕೆಂಡು ಹಲ್ಲೆ ನಡೆದಿದೆ. ನಾಲ್ಕು ನಿಮಿಷದಲ್ಲಿ ಒಬ್ಬ ವ್ಯಕ್ತಿ ಏನೆಲ್ಲಾ ಮಾಡಬಹುದೋ ಅದನ್ನೆಲ್ಲಾ ಪತ್ರಕರ್ತರಾಗಿಯೇ ನಮ್ಮ ಜವಾಬ್ದಾರಿಗಳನ್ನು ಮಾಡಿದ್ದೇವೆ. ಇನ್ಸ್‌ಪೆಕ್ಟರ್ ರವೀಶ್ ನಾಯಕ್‌‌ರ ಫೋನ್ ಪೂರ್ತಿ ರಿಂಗ್ ಆಗುವವರೆಗೆ ಕಾದಿದ್ದೇನೆ. ಅವರು ಕರೆ ಸ್ವೀಕರಿಸಿಲ್ಲ. ಬೇರೆ ಯಾರಿಗಾದರೂ ಫೋನ್ ಮಾಡಬೇಕು ಎಂದುಕೊಳ್ಳುವಷ್ಟರಲ್ಲಿ ನನ್ನ ಫೋನ್‌ಗೆ ನನ್ನ ವರದಿಗಾರ ಮಿತ್ರನೊಬ್ಬನ ಕರೆ ಬಂದಿದೆ. ಅವರಿಗೆ ಗಲಭೆಯ ಬಗ್ಗೆ ಪೂರಾ ವಿವರ ನೀಡಿದ್ದೇನೆ. ಆ ವರದಿಗಾರರು ತಕ್ಷಣ ಮರಳಿ ನನಗೇ ಫೋನ್ ಮಾಡಿದರು. “ನಾನು ರವೀಶ್ ನಾಯಕ್‌ರ ಫೋನ್‌ಗೆ ಕರೆ ಮಾಡುತ್ತಿದ್ದು, ಅವರು ರಿಸೀವ್ ಮಾಡುತ್ತಿಲ್ಲ” ಎಂದರು. ಇವೆಲ್ಲದರ ಮಧ್ಯೆ ಯುವತಿಯರ ಚೀರಾಟ ಕೇಳುತ್ತಿತ್ತು. ಮನುಷ್ಯ ಸಹಜವಾಗಿ ನನ್ನ ಮೆದುಳು, ಹೃದಯಗಳು ಅತ್ತ ಹೋಗುತ್ತಿದ್ದವು. ಅಷ್ಟರಲ್ಲಿ ರವೀಶ್ ನಾಯಕ್ ದಾಳಿಕೋರರ ಮಧ್ಯೆ ಇರುವುದು ಮತ್ತು ದಾಳಿಕೋರರ ಜೊತೆ ಸೇರಿಕೊಂಡು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುತ್ತಿರುವುದು ಕಂಡು ಬಂತು.

ನಾಲ್ಕು ನಿಮಿಷ ಐವತ್ತೊಂಬತ್ತು ಸೆಕೆಂಡಿನಲ್ಲಿ ಕೆಲವು ನಿಮಿಷಗಳು ಒಬ್ಬ ಇನ್ಸ್‌ಪೆಕ್ಟರ್‌ನ ಫೋನ್ ಪೂರ್ತಿ ರಿಂಗ್ ಆಗುವವರೆಗಿನ ಸಮಯವಾಗಿ ವ್ಯರ್ಥ ಆಗಿದೆ. ನಂತರ ನನ್ನ ವರದಿಗಾರ ಮಿತ್ರದ ಕರೆ ಸ್ವೀಕರಿಸಿ ಆತನಿಗೆ ವಿವರ ತಿಳಿಸಿದ್ದೇನೆ. ಅದರ ಮಧ್ಯೆ ನನ್ನ ಮನಸ್ಸು, ಮೆದುಳು ಎರಡೂ ಕೂಡಾ ದಾಳಿಯತ್ತಾ ನೆಟ್ಟಿತ್ತು. ನನ್ನ ಕಣ್ಣೆದುರೇ ಹುಡುಗಿಯರ ಸೂಕ್ಷ್ಮ ಭಾಗಗಳ ಮೇಲೆ ಹಲ್ಲೆಯಾಗುತ್ತಿರುವುದನ್ನು ಕಂಡೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿಗೆ ನಾನು ತಲುಪಿದ್ದರ ಗೊಂದಲದಲ್ಲಿದ್ದೆ. ಅಷ್ಟರಲ್ಲಿ ನನ್ನ ವರದಿಗಾರ ಮಿತ್ರ ಮತ್ತೆ ಕರೆ ಮಾಡಿ ರವೀಶ್ ನಾಯಕ್ ಫೋನ್ ರಿಸೀವ್ ಮಾಡುತ್ತಿಲ್ಲ ಎಂದ. ನಾಲ್ಕು ನಿಮಿಷ ಐವತ್ತೊಂಬತ್ತು ಸೆಕೆಂಡಿನಲ್ಲಿ ಇನ್ನೇನು ಮಾಡಬಹುದಿತ್ತು ನಾನು? ಅಷ್ಟರಲ್ಲಿ ರವೀಶ್ ನಾಯಕ್ ಮತ್ತು ದಾಳಿಕೋರರು ಒಟ್ಟಾಗಿ ವಿದ್ಯಾರ್ಥಿಗಳ ಕೋಣೆಗೆ ತೆರಳಿ ಹಲ್ಲೆ ನಡೆಸಿದರು. ಆಗಲೂ ನಾನು ಪೊಲೀಸರಿಗೆ ಕರೆ ಮಾಡಬೇಕಿತ್ತೆ?

100 ಗೆ ಯಾಕೆ ಕರೆ ಮಾಡಿಲ್ಲ?
ತುಂಬಾ ಜನ ಕೇಳುತ್ತಾರೆ. ನೀವು 100 ಗೆ ಯಾಕೆ ಕರೆ ಮಾಡಿಲ್ಲ ಎಂದು. ಪೊಲೀಸರು ಕೂಡಾ ವಿಚಾರಣೆ ವೇಳೆ ಇದನ್ನೇ ಕೇಳಿದರು. ನಾನು ನನ್ನ ಕೈಯ್ಯಲ್ಲಿ ಲ್ಯಾಂಡ್ ಫೋನ್ ಇಟ್ಟುಕೊಂಡಿಲ್ಲ. ನನ್ನ ಮೊಬೈಲ್ ಫೋನ್‌ನಿಂದ ಮಂಗಳೂರಿನಲ್ಲಿ 100 ಗೆ ಕರೆ ಮಾಡಿದರೆ “ಪ್ಲೀಸ್ ಚೆಕ್ ದ ನಂಬರ್” ಎಂದು ವಾಯ್ಸ್ ಬರುತ್ತದೆ. ಅದರರ್ಥ ಮೋಬೈಲ್‌ನಿಂದ 100 ಗೆ ಕರೆ ಕನೆಕ್ಟ್ ಆಗುವುದೇ ಇಲ್ಲ. ಬೇಕಿದ್ರೆ ಇಲ್ಲಿ ಟ್ರೈ ಮಾಡಿ. ಇಷ್ಟಕ್ಕೂ ನಾನೀಗಲೂ 100 ಗೆ ಕರೆ ಮಾಡುತ್ತಾ ಕೂರಲು ನಾನೇನು 90ರ ದಶಕದಲ್ಲಿ ಇಲ್ಲ. ನನ್ನ ಬಳಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಪೊಲೀಸ್ ಇನ್ಸ್‌ಪೆಕ್ಟರ್‌ಗಳ ಇಲಾಖಾ ಮೊಬೈಲ್ ನಂಬರ್ ಇದೆ. ಯಾವ ಯಾವ ಸ್ಥಳ ಯಾವ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುತ್ತೆ ಎಂಬುದೂ ನನಗೆ ಸ್ಪಷ್ಟವಾಗಿ ತಿಳಿದಿದೆ. ಆದುದರಿಂದ ಘಟನೆ ಆದ ತಕ್ಷಣ ನನ್ನ ನೆನಪಿಗೆ ಬಂದಿದ್ದು ಸ್ಥಳಿಯ ಇನ್ಸ್‌ಪೆಕ್ಟರ್‌. ಅವರು ಫೋನ್ ಕರೆ ಸ್ವೀಕರಿಸಿಲ್ಲ ಮತ್ತು ಕೆಲವೇ ಸೆಕೆಂಡುಗಳಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ದಾಳಿಕೋರರ ಮಧ್ಯೆ ಕಂಡು ಬರುತ್ತಾರೆ. ಪೊಲೀಸ್ ಇನ್ಸ್‌ಪೆಕ್ಟರ್ ಸೇರಿ ನಾಲ್ಕು ಮಂದಿ ಪೊಲೀಸರು ಘಟನಾ ಸ್ಥಳದಲ್ಲಿ ಇರುವುದನ್ನು ಗಮನಿಸಿಯೂ ನಾನು ಬೇರೆ ಪೊಲೀಸ್ ಅಧಿಕಾರಿಗಳಿಗೆ ಅಥವಾ 100 ಗೆ ಕರೆ ಮಾಡಲು ಪ್ರಯತ್ನಿಸಬೇಕು ಎನ್ನುವವರಿಗೆ ನಾನೇನೂ ಉತ್ತರಿಸಲಾರೆ.

ನಿಮ್ಮ ತಂಗಿ ಮೇಲೆ ಹಲ್ಲೆಯಾಗುತ್ತಿದ್ದರೆ ನೀವು ಶೂಟಿಂಗ್ ಮಾಡುತ್ತಿದ್ರಾ ?
ಇಂತಹ ಪ್ರಶ್ನೆಯನ್ನು ಹಲವಾರು ಪ್ರಗತಿಪರ ಲೇಖಕರೂ, ಕೇಸರಿ ಬರಹಗಾರರೂ, ಸಾಮಾನ್ಯ ಜನರೆಲ್ಲರೂ ಕೇಳಿದ್ದಾರೆ. ಪೊಲೀಸರೂ ಇದೇ ಪ್ರಶ್ನೆಯನ್ನು ಕೇಳಿದ್ದರು. ಪೊಲೀಸರಿಗೆ ನಾನು ಲಿಖಿತವಾಗಿ ನೀಡಿದ ಉತ್ತರ ಹೀಗಿದೆ: “ಈ ಪ್ರಶ್ನೆಯೇ ಪತ್ರಕರ್ತನಾದ ನನಗೆ ಅಪ್ರಸ್ತುತ. ನಾನು ನನ್ನ ವೃತ್ತಿ ಜೀವನದಲ್ಲಿ ಹಲವಾರು ಆಕ್ಸಿಡೆಂಟ್‌ಗಳನ್ನು ಶೂಟಿಂಗ್ ಮಾಡಿಸಿ ಸುದ್ದಿ ಮಾಡಿದ್ದೇನೆ. ವಿಮಾನ ದುರಂತದಲ್ಲಿ 158 ಮಂದಿ ಜೀವಂತ ಸುಟ್ಟು ಕರಕಲಾಗುವ ದೃಶ್ಯ ನನ್ನ ಬಳಿ ಇದೆ. ಅವರೆಲ್ಲರೂ ನನ್ನ ಅಣ್ಣಂದಿರಾಗಿದ್ದರೆ…… ನಾನು ಶೂಟಿಂಗ್ ಮಾಡಿ ಸುದ್ದಿ ಮಾಡುತ್ತಿದ್ದೆನಾ? ನಾನು ಎಷ್ಟೋ ಕೊಲೆ ಪ್ರಕರಣಗಳನ್ನು ವರದಿ ಮಾಡಿದ್ದೇನೆ. ನಿಮ್ಮ ತಂದೆಯೇ ಕೊಲೆಯಾಗಿದ್ದರೆ ನೀವು ವರದಿ ಮಾಡುತ್ತಿದ್ರಾ ಎಂದು ನನ್ನನ್ನು ಕೇಳಿದರೆ ಹೇಗೆ? ಅತ್ಯಾಚಾರಕ್ಕೆ ಒಳಗಾದ ಎಷ್ಟೋ ಹುಡುಗಿಯರ ಹಕ್ಕು, ಬದುಕಿನ ಬಗ್ಗೆ ಸುದ್ದಿ ಮಾಡಿದ್ದೇವೆ. ನಿಮ್ಮ ತಂಗಿಯನ್ನು ಯಾರಾದರೂ ಅತ್ಯಾಚಾರ ಮಾಡಿದ್ದರೆ ಸುದ್ದಿ ಮಾಡುತ್ತಿದ್ದಿರಾ ಎಂದು ಯಾರಾದರೂ ಕೇಳಿದರೆ ಏನನ್ನಬೇಕು? ಪತ್ರಕರ್ತರಿಗೆ ಮಾತ್ರವಲ್ಲ, ಪೊಲೀಸರು ಮತ್ತು ನ್ಯಾಯಾಧೀಶರಿಗೂ ಈ ಪ್ರಶ್ನೆ ಅಪ್ರಸ್ತುತ.

ಹಲ್ಲೆಯನ್ನು ನೀವು ಯಾಕೆ ತಡೆಯಲು ಹೋಗಿಲ್ಲ?
ಅಷ್ಟೊಂದು ಮಂದಿ ಯುವತಿಯರನ್ನು ಹಿಡಿದು ಅಮಾನವೀಯವಾಗಿ ಹಲ್ಲೆ ಮಾಡುತ್ತಿರಬೇಕಾದರೆ ನೀವ್ಯಾಕೆ ತಡೆಯಲು ಹೋಗಿಲ್ಲ ಎಂಬ ಪ್ರಶ್ನೆಯನ್ನು ಹಲವರು ಕೇಳಿದ್ದಾರೆ. ನಾನು ಮೊದಲಿನಿಂದಲೂ ಈ ಬಗ್ಗೆ ಹೇಳುತ್ತಲೇ ಬಂದರೂ ಉತ್ತರ ಕೆಲವರಿಗೆ ಸಮಾಧಾನ ತಂದಿಲ್ಲ. ದಾಳಿಕೋರರು ಅಂದಾಜು ಮೂವತ್ತರಿಂದ ನಲ್ವತ್ತು ಮಂದಿ ಇದ್ದಿರಬಹುದು. ಅವರೆಲ್ಲರೂ ಮದ್ಯಪಾನ ಮಾಡಿದ್ದರು. ಅವರು ಗೆಸ್ಟ್ ಹೌಸ್ ಒಳ ಪ್ರವೇಶಿಸಿದ ನಂತರ ಅವರ ಗಬ್ಬು ವಾಸನೆ ಸ್ಪಷ್ಟವಾಗಿ ಅರಿವಿಗೆ ಬರುತ್ತಿತ್ತು. ಅವರು ಎಷ್ಟೊಂದು ಕುಡಿದ ಮತ್ತಿನಲ್ಲಿದ್ದರೆಂದರೆ ಅವರು ಹುಡುಗಿಯರ ಮೇಲೆ ನಡೆಸಿದ ಅಮಾನವೀಯ ಹಲ್ಲೆಯಿಂದಲೇ ಗೊತ್ತಾಗುತ್ತದೆ. ನನ್ನ ಮುಖ ಪರಿಚಯ ಅಲ್ಲಿದ್ದ ಯಾವಾನಿಗೂ ಇರಲಿಲ್ಲ. ಮೊದಲೇ ಕುಡಿದಿದ್ದ ಅವರು ನಾನು ಹೇಳಿದ್ದನ್ನು ಕೇಳೋ ಸಾಧ್ಯತೆಗಳೇ ಇಲ್ಲ. ಒಂದು ವೇಳೆ ಅವರು ಹೊಡೆಯುತ್ತಿದ್ದ ಸಂಧರ್ಭ ನಾನು ಮಧ್ಯೆ ಹೋಗಿ ತಡೆದಿದ್ದರೆ ನನ್ನ ಮೇಲೆ ಹಲ್ಲೆಗಳಾಗುತ್ತಿತ್ತು. ಆದುದರಿಂದ ನಲ್ವತ್ತು ಮಂದಿ ಪೈಶಾಚಿಕ ಜೀವಿಗಳ ಎದುರು ನಾನು ನಿಸ್ಸಾಹಾಯಕನಾಗಿದ್ದೆ. ಇಷ್ಟಕ್ಕೂ ದಾಳಿಯ ಮಧ್ಯೆ ಇನ್ಸ್‌ಪೆಕ್ಟರ್ ರವೀಶ್ ನಾಯಕ್ ಕಂಡು ಬಂದಿದ್ದಾರೆ. ಅವರೇನೂ ನನ್ನಂತೆ ನಿಸ್ಸಾಹಾಯಕರಲ್ಲ. ಅವರ ಸೊಂಟದಲ್ಲಿ ರಿವಾಲ್ವರ್ ನೇತಾಡುತ್ತಿತ್ತು. ಆದರೆ ಅವರು ದಾಳಿಕೋರರ ಜೊತೆ ಸೇರಿ ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿದ್ದಾರೆ. ಹೀಗಿರುವಾಗ ನಾನು ಯಾರನ್ನು ಹೇಗೆ ತಡೆಯಬೇಕಿತ್ತು ?

ಪೊಲೀಸರಿಗೆ ನನ್ನ ಪ್ರಶ್ನೆಗಳು:
ಈ ಪ್ರಕರಣದ ಸಂಬಂಧ ಪೊಲೀಸರು ನನ್ನ ಬಳಿ 47 ಲಿಖಿತ ಪ್ರಶ್ನೆಗಳನ್ನು ಕೇಳಿದ್ದಾರೆ. ಅವೆಲ್ಲಕ್ಕೂ ಅಂಕಿ ಅಂಶಗಳ ಸಹಿತ ದಾಖಲೆಗಳನ್ನು ನೀಡಿ ಸಮರ್ಪಕ ಉತ್ತರ ನೀಡಿದ್ದೇನೆ. 47 ಪ್ರಶ್ನೆ ಕೇಳಿದ ಪೋಲೀಸರಿಗೆ ನನ್ನಿಂದಲೂ ಕೆಲವು ಪ್ರಶ್ನೆಗಳಿವೆ.

  • ಪತ್ರಕರ್ತರ ದೂರವಾಣಿ ಕರೆಯನ್ನು ಇನ್ಸ್‌ಪೆಕ್ಟರ್ ಯಾಕೆ ರಿಸೀವ್ ಮಾಡಿಲ್ಲ?
  • ಪತ್ರಕರ್ತರು ದೂರವಾಣಿ ಕರೆ ಮಾಡಿಲ್ಲ ಎನ್ನುವ ನೀವು ಪೊಲೀಸ್ ಇನ್ಸ್‌ಪೆಕ್ಟರ್  ರವೀಶ್ ನಾಯಕ್‌ರ ಫೋನ್ ಡಾಟಾ ತೆಗೆದಿದ್ದೀರಾ ? ಮಿಸ್ಡ್ ಕಾಲ್‌ಗಳು ಕಾಲರ್ ಲಿಸ್ಟ್‌ನಲ್ಲಿ ಬರುವುದಿಲ್ಲ. ಫೋನ್ ಡಾಟಾ ತೆಗೆಯಬೇಕು. ತೆಗೆದಿದ್ದರೆ ಮಾಧ್ಯಮದವರು ಕರೆ ಮಾಡಿರುವ ಬಗ್ಗೆ ಸತ್ಯಾಸತ್ಯತೆ ಏನು?
  • ಪೊಲೀಸರಿಗೆ ದಾಳಿಯ ಬಗ್ಗೆ ಮಾಹಿತಿ ನೀಡಿದವರು ಯಾರು?
  • ಹಲ್ಲೆಗೊಳಗಾದ ವಿದ್ಯಾರ್ಥಿಗಳು ಹೇಳುವಂತೆ ಪೊಲೀಸರು ದಾಳಿಕೋರರ ಜೊತೆ ಬಂದಿದ್ದರು. ಪೊಲೀಸರು ಯಾಕೆ ದಾಳಿಕೋರರ ಜೊತೆ ಬಂದರು?
  • ವಿದ್ಯಾರ್ಥಿಗಳ ಹೇಳಿಕೆಗೆ ಪೂರಕವಾಗಿ ಪೊಲೀಸರು ದಾಳಿಕೋರರ ಜೊತೆ ಹರಟುವ ವಿಝುವಲ್ಸ್ ನಮ್ಮ ಬಳಿ ಇದೆ. ನಾವು ವಿಝುವಲ್ಸ್‌ಗಳ ದಾಖಲೆಗಳನ್ನು ನಿಮಗೆ ಒದಗಿಸಿದ್ದೇವೆ. ಅಂತಹ ಪೊಲೀಸರ ಮೇಲೆ ಏನು ಕ್ರಮ ಕೈಗೊಂಡಿದ್ದೀರಿ?
  • ಪೊಲೀಸರು ಘಟನಾ ಸ್ಥಳದಲ್ಲಿ ಇದ್ದರೂ ಪತ್ರಕರ್ತರು ಪೊಲೀಸರಿಗೆ ಮಾಹಿತಿ ನೀಡಬೇಕೆ?
  • ದಾಳಿಕೋರರ ಜೊತೆ ಇನ್ಸ್‌ಪೆಕ್ಟರ್ ರವೀಶ್ ನಾಯಕ್ ವಿದ್ಯಾರ್ಥಿಗಳಿಗೆ ಹಲ್ಲೆ ಮಾಡುವ ವಿಝುವಲ್ಸ್ ನಾವು ಸಹಾಯಕ ಪೊಲೀಸ್ ಆಯುಕ್ತರಿಗೆ ದಾಖಲೆಯಾಗಿ ನೀಡಿದ್ದೇವೆ. ಆದರೂ ರವೀಶ್ ನಾಯಕರನ್ನು ಯಾಕೆ ಬಂಧಿಸಿಲ್ಲ?
  • ಕಾರ್ಪೊರೇಟರ್ ಮತ್ತು ಪೊಲೀಸರು ಈ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೆಯ ಮಾಲಕರಿಂದ ಹಫ್ತಾ ಕೇಳಿದ್ದರು ಎಂಬ ಆರೋಪ ಇದೆ. ಹಫ್ತಾ ನೀಡದ ಹಿನ್ನಲೆಯಲ್ಲಿ ಹೋಂಸ್ಟೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಆರೋಪಿಸಿ ಪಾರ್ಟಿ ಮಾಡುತ್ತಿದ್ದ ಮಕ್ಕಳ ಮೇಲೆ ಕೇಸು ದಾಖಲಿಸುವ ಹುನ್ನಾರ ನಿಮ್ಮದಾಗಿತ್ತು. ಅದಕ್ಕಾಗಿ ದಾಳಿಕೋರರು, ಕಾರ್ಪೊರೇಟರ್ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ಮಾಡಿದ್ದರು. ಮಾಧ್ಯಮಕ್ಕೆ ಪ್ರಾರಂಭದಲ್ಲೇ ಮಾಹಿತಿ ಸಿಕ್ಕಿದ್ದೇ ಆಗಿರೋ ಎಡವಟ್ಟು ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು?
  • ದಾಳಿಕೋರರು ದಾಳಿ ನಡೆಸುವ ಸಂದರ್ಭ ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಘಟನಾ ಸ್ಥಳದಲ್ಲಿದ್ದರು. ಆಗಿನ್ನೂ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಆಗಿಲ್ಲ. ಆದರೂ ಕಾರ್ಪೊರೇಟರ್‌ಗೆ ಸುದ್ದಿ ತಿಳಿದಿದ್ದು ಹೇಗೆ? ದಾಳಿ ಮೊದಲೇ ಅವರಿಗೆ ಗೊತ್ತಿತ್ತೆ? ಗೊತ್ತಿದ್ದರೆ ಹೇಗೆ ಎಂಬುದನ್ನು ತನಿಖೆ ಮಾಡಿದ್ದೀರಾ? ತನಿಖೆಯ ವಿವರ ಏನು?
  • ಪತ್ರಕರ್ತರು ಮಾಹಿತಿ ನೀಡಬೇಕಿತ್ತು ಎನ್ನುವ ನೀವು ಕಾರ್ಪೊರೇಟರ್ ನೀಡಿದ ಮಾಹಿತಿಯ ವಿವರ ನೀಡಬಲ್ಲಿರಾ? ಕಾರ್ಪೊರೇಟರ್ ಎಷ್ಟು ಗಂಟೆಗೆ ಯಾವ ಪೊಲೀಸ್ ಅಧಿಕಾರಿಗೆ ಮಾಹಿತಿ ನೀಡಿದ್ದರು?
  • ದಾಳಿಯಲ್ಲಿ ಕಾರ್ಪೊರೇಟರ್ ಮೋಹನ್ ಪಡೀಲ್ ಭಾಗಿಯಾಗಿದ್ದಾರೆ ಎಂದು 9 ಗಂಟೆಗೆ ಅವರನ್ನು ಬಂಧಿಸಿದ್ದೀರಿ. ಬಂಧಿಸೋ ಭಯಾನಕ ದೃಶ್ಯದ ವೀಝುವಲ್ಸ್ ನಮ್ಮ ಬಳಿ ಇದೆ. ಬಂಧಿಸಿರೋ ಕಾರ್ಪೊರೇಟರ್‌ರನ್ನು 9.30ಗೆ ಬಿಡುಗಡೆ ಮಾಡಿದ್ದೀರಿ. ಯಾವ ಆಧಾರದಲ್ಲಿ ಬಂಧಿಸಿದ್ದೀರಿ ಮತ್ತು ಯಾವ ರೀತಿಯ ತನಿಖೆ ನಡೆಸಿ ಬಿಡುಗಡೆ ಮಾಡಿದ್ದೀರಿ?
  • ಪತ್ರಕರ್ತರೊಬ್ಬರಿಗೆ ರಾತ್ರಿ ಒಂದು ಗಂಟೆಗೆ ದೂರವಾಣಿ ಕರೆ ಮಾಡಿದ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ , “ನವೀನ್ ಯಾಕೆ ಸುದ್ದಿ ಮಾಡಬೇಕಿತ್ತು. ಮನೆಯಲ್ಲಿ ತಂಗಿಯರಿಗೆ ಹೊಡೆದರೆ ಸುದ್ದಿ ಮಾಡ್ತಾರಾ? ನಾನು ಬಿಡುವುದಿಲ್ಲ. ಅವನನ್ನು ಈ ಕೇಸ್‌ನಲ್ಲಿ ಫಿಕ್ಸ್ ಮಾಡುತ್ತೇನೆ” ಎಂದಿದ್ದಾರೆ. ಇದಕ್ಕೆ ದಾಖಲೆಯಾಗಿ ಮಾತಾಡಿರೋ ರೆಕಾರ್ಡ್ ಅನ್ನು ಏರ್‌ಟೇಲ್ ಕಚೇರಿಯಿಂದ ತೆಗೆಯಬಹುದು. ಈ ರೀತಿ ಫಿಕ್ಸ್ ಮಾಡುತ್ತೇನೆ ಎನ್ನುವುದು ಯಾವ ಕಾನೂನಿನಲ್ಲಿ ಬರುತ್ತದೆ.
  • ನಾನು ಪೊಲೀಸರಿಗೆ ಮಾಹಿತಿ ನೀಡಿಲ್ಲ ಎನ್ನುವುದಾದರೆ ಸ್ಥಳೀಯ ಇನ್ಸ್‌ಪೆಕ್ಟರ್  ನನ್ನ ವಿರುದ್ಧ ದೂರು ನೀಡಬೇಕಿತ್ತು. ಯಾವ ಪೊಲೀಸ್ ಅಧಿಕಾರಿಯೂ ನನ್ನ ವಿರುದ್ಧ ಯಾಕೆ ದೂರು ನೀಡಿಲ್ಲ.
  • ಹಲ್ಲೆಗೊಳಗಾದ ವಿಜಯ್‌ನಿಂದ ದೂರು ಪಡೆಯಲಾಗಿದೆ. ವಿಜಯ್ ಮೇಲೆ 7.15 ರ ವೇಳೆಗೆ ಹಲ್ಲೆಯಾಗಿದ್ದು 10 ಗಂಟೆಯ ವೇಳೆಗೆ ದೂರು ಸ್ವೀಕರಿಸಲಾಗಿದೆ. ಆತನಿಗೆ ನನ್ನ ಪರಿಚಯವೇ ಇರಲಿಲ್ಲ. ನನ್ನ ಹೆಸರನ್ನು ಆತ ನೀಡಲು ಹೇಗೆ ಸಾಧ್ಯವಾಯಿತು ?
  • ವಿಜಯ್ ಹೇಳುವ ಪ್ರಕಾರ ಆತ ನೀಡಿದ ಆತನ ಹಸ್ತಾಕ್ಷರ ಉಳ್ಳ ದೂರನ್ನು ಪೊಲೀಸರು ಸ್ವೀಕರಿಸದೆ ಖಾಲಿ ಕಾಗದಕ್ಕೆ ಸಹಿ ಪಡೆದುಕೊಂಡು, ಪತ್ರಕರ್ತರ ಹೆಸರು ಹಾಕಿದ್ದಾರೆ. ಆತನ ಹಸ್ತಾಕ್ಷರ ಉಳ್ಳ ದೂರಿನ ಪ್ರತಿ ನಮ್ಮ ಬಳಿ ಇದೆ. ಅಗತ್ಯ ಬಿದ್ದರೆ ಲ್ಯಾಬ್‌ಗೆ ಕಳುಹಿಸಿ ಆ ಪ್ರತಿಯ ದಿನಾಂಕ ದೃಡೀಕರಿಸಬಹುದು. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?
  • ಪೊಲೀಸರು ಯಾಕೆ ವಿಜಯ್‌ನಿಂದ ಮಾತ್ರ ದೂರು ಪಡೆದುಕೊಂಡರು. ಹಲ್ಲೆಗೆ ಒಳಗಾದ ಹುಡುಗಿಯರಿಂದ ದೂರು ಯಾಕೆ ಪಡೆದಿಲ್ಲ? ಅವರು ದೂರು ನೀಡಲು ನಿರಾಕರಿಸಿದರೇ? ದೌರ್ಜನ್ಯಕ್ಕೊಳಗಾದ ಮಹಿಳೆ ದೂರು ನೀಡಲು ನಿರಾಕರಿಸಿದರೆ ಮಹಿಳಾ ಪೊಲೀಸರು ಆಕೆಯನ್ನು ದೂರು ನೀಡುವಂತೆ ಉತ್ತೇಜಿಸಬೇಕು ಎಂಬ ಹಿನ್ನಲೆಯಲ್ಲಿ ಮಹಿಳಾ ಪೊಲೀಸ್ ವಿಭಾಗವನ್ನು ಸ್ಥಾಪಿಸಲಾಗಿದೆ. ಮಹಿಳಾ ಪೊಲೀಸರು ದೂರು ನೀಡುವಂತೆ ದೌರ್ಜನ್ಯಕ್ಕೊಳಗಾದ ಹುಡುಗಿಯರಿಗೆ ಕೌನ್ಸೆಲಿಂಗ್ ಮಾಡಿದ್ದಾರೆಯೇ? ಮಹಿಳಾ ಪೊಲೀಸರ ಕೌನ್ಸೆಲಿಂಗ್ ವಿಫಲವಾದಾಗ ಸರಕಾರಿ ಅನುದಾನಿತ ಎನ್‌ಜಿಓಗಳಲ್ಲಿ ಕೌನ್ಸೆಲಿಂಗ್ ಮಾಡಬೇಕಾಗುತ್ತದೆ. (ಉದಾ: ಪ್ರಜ್ಞಾ) ಯಾವ ಎನ್‌ಜಿಓದಲ್ಲಿ ದೌರ್ಜನ್ಯಕ್ಕೊಳಗಾದ ಹುಡುಗಿಯರ ಕೌನ್ಸೆಲಿಂಗ್ ನಡೆಸಿ ದೂರು ಪಡೆದುಕೊಳ್ಳಲು ಪ್ರಯತ್ನ ಮಾಡಿದ್ದೀರಿ ?
  • ಪಬ್  ಅಟ್ಯಾಕ್‌ನಲ್ಲೂ ಹುಡುಗಿಯರ ದೂರು ಇಲ್ಲದೇ ಇರುವುದರಿಂದ ದಾಳಿಕೋರರಿಗೆ ಲಾಭವಾಯಿತು ಎಂಬುದರ ಬಗ್ಗೆ ತಮಗೆ ತಿಳಿದಿರಲಿಲ್ಲವೇ? ಹುಡುಗಿಯ ದೂರು ದಾಳಿಕೋರರ ವಿರುದ್ಧ ಎಫ್ಐಆರ್ ಮತ್ತು ಚಾರ್ಜ್‌ಶೀಟನ್ನು ಬಲಗೊಳಿಸುತ್ತದೆ ಎಂಬುದು ಪೊಲೀಸ್ ಆಯುಕ್ತರಾದ ನಿಮಗೆ ಗೊತ್ತಿರಲಿಲ್ಲವೇ? ಅಥವಾ ದಾಳಿಕೋರರಿಗೆ ಲಾಭವಾಗುವ ರೀತಿಯೇ ಎಫ್ಐಆರ್ ಹಾಕಿದ್ದೀರಿ ಎಂದುಕೊಳ್ಳಬೇಕೆ?
  • ನನ್ನನ್ನೂ ಸೇರಿ ಮಾದ್ಯಮದವರ ಮೇಲೆ ಜುಲೈ 28 ರ ರಾತ್ರಿಯೇ ಕೇಸು ದಾಖಲಿಸಿದ್ದೀರಿ. ಆದರೆ ಬಂಧಿಸಿಲ್ಲ. ತನಿಖೆಯನ್ನಷ್ಟೇ ಮಾಡುತ್ತೇವೆ ಎಂದಿದ್ದೀರಿ. ತನಿಖೆ ಮಾಡಿದ್ದೀರಿ. ದಾಳಿಯಲ್ಲಿ ನಮ್ಮ ಪಾತ್ರವೇನು? ನಮ್ಮನ್ನು ಯಾಕೆ ಬಂಧಿಸಿಲ್ಲ?
  • ನಾವು ನಿಮ್ಮ ಪ್ರಕಾರ ಇನ್ನೂ ತಪ್ಪಿತಸ್ಥರಾಗಿದ್ದರೂ ನಮ್ಮನ್ನು ಬಂಧಿಸದೇ ಇರುವಂತೆ ಯಾರಾದರೂ ಒತ್ತಡ ಹಾಕಿದ್ದಾರೆಯೇ? ಹಾಗೆ ಒತ್ತಡ ಹಾಕಿದವರು ಯಾರು? ನಿಮಗೂ, ಒತ್ತಡ ಹಾಕಿದವರಿಗೂ ಇರುವ ಮುಲಾಜುಗಳು ಏನು?
  • ಇಷ್ಟಕ್ಕೂ ಪಡೀಲ್ ಹೋಂ ಸ್ಟೆಯಲ್ಲಿ ನಡೆದ ದಾಳಿ ಮಂಗಳೂರಿನಲ್ಲಿ ನಡೆದ ಮೊದಲ ದಾಳಿಯಲ್ಲ. ಈ ದಾಳಿ ವಿಝುವಲ್ ಆಗಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ್ದರಿಂದ ಕ್ರಮ ಕೈಗೊಂಡಿದ್ದೀರಿ. ಜಪ್ಪಿನ ಮೊಗರು ಮೋರ್ಗನ್ ಗೇಟ್ ಬಳಿಯ ಎಂಫಾಸಿಸ್ ಉದ್ಯೋಗಿ ಮುಸ್ಲಿಂ ಯುವಕ ಮತ್ತು ಹಿಂದೂ ಯುವತಿಗೆ ಎರಡು ತಿಂಗಳ ಹಿಂದೆ ಹಿಂದೂ ಯುವ ಸೇನೆಯ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಮುಖ ಮೂತಿಯಲ್ಲಿ ರಕ್ತ ಬರುವಂತೆ ಹಲ್ಲೆ ನಡೆಸಿದ್ದೇ ಅಲ್ಲದೆ ದಾಳಿಕೋರರೇ ಹಲ್ಲೆಗೊಳಗಾದ ಜೋಡಿಯನ್ನು ಪಾಂಡೇಶ್ವರ ಪೊಲೀಸರಿಗೆ ಒಪ್ಪಿಸಿದ್ದರು. ಪಾಂಡೇಶ್ವರ ಪೊಲೀಸರು ಹಲ್ಲೆಗೊಳಗಾದ ಪ್ರೇಮಿಗಳ ಮನೆಯವರನ್ನು ಕರೆಸಿ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಇದೂ ಕೂಡಾ ನಾವು ಮಾಹಿತಿ ನೀಡದೇ ಇರುವುದರಿಂದ ನಡೆದ ಘಟನೆ ಎನ್ನುತ್ತೀರಾ? ಆಗ ಯಾಕೆ ದಾಳಿಕೋರರು ಠಾಣೆಗೆ ಬಂದರೂ ಕೇಸು ದಾಖಲಿಸಿಲ್ಲ. ದಾಖಲಿಸಿದ್ದರೆ ಕೇಸ್ ನಂಬರ್ ಏನು? ಯಾವ ಸೆಕ್ಷನ್ನಿನಲ್ಲಿ ಹಿಂದೂ ಯುವ ಸೇನೆಯ ಕಾರ್ಯಕರ್ತರ ಮೇಲೆ ಕೇಸು ದಾಖಲಿಸಿದ್ದೀರಿ? ಎಷ್ಟು ಆರೋಪಿಗಳು ಜೈಲಿನಲ್ಲಿದ್ದಾರೆ?
  • ಒಂದು ತಿಂಗಳ ಹಿಂದೆ ಮೇರಿಹಿಲ್ ಹೆಲಿಪ್ಯಾಡಿನ ವಿಹಂಗಮ ನೋಟ ಸವಿಯಲು ಬಂದ ವಿದ್ಯಾರ್ಥಿಗಳು ಕಾರಿನಲ್ಲಿ ಕುಳಿತು ಚಿಪ್ಸ್ ತಿನ್ನುತ್ತಿದ್ದರು. ಕಾರಿನ ನಾಲ್ಕೂ ಡೋರ್ ಓಪನ್ ಮಾಡಿ ವಿದ್ಯಾರ್ಥಿಗಳು ಹರಟುತ್ತಿದ್ದರು. ಈ ಸಂಧರ್ಭ ದಾಳಿ ಮಾಡಿದ ಶ್ರೀರಾಮ ಸೇನೆ ಕಾರ್ಯಕರ್ತರು ವಿದ್ಯಾರ್ಥಿಗಳಿಗೆ ಹಲ್ಲೆ ಮಾಡಿ ವಿದ್ಯಾರ್ಥಿಗಳನ್ನು ದಾಳಿಕೋರರೇ ಕಾವೂರು ಪೊಲೀಸರಿಗೆ ಒಪ್ಪಿಸಿದ್ದರು. ಇದೂ ಕೂಡಾ ನಾವು ಮಾಹಿತಿ ನೀಡದೇ ಇರುವುದರಿಂದ ನಡೆದ ಘಟನೆ ಎನ್ನುತ್ತೀರಾ? ಆಗ ಯಾಕೆ ದಾಳಿಕೋರರು ಠಾಣೆಗೆ ಬಂದರೂ ಕೇಸು ದಾಖಲಿಸಿಲ್ಲ. ದಾಖಲಿಸಿದ್ದರೆ ಕೇಸ್ ನಂಬರ್ ಏನು? ಯಾವ ಸೆಕ್ಷನ್ನಿನಲ್ಲಿ ಶ್ರೀರಾಮ ಸೇನೆಯ ಕಾರ್ಯಕರ್ತರ ಮೇಲೆ ಕೇಸು ದಾಖಲಿಸಿದ್ದೀರಿ? ಎಷ್ಟು ಆರೋಪಿಗಳು ಜೈಲಿನಲ್ಲಿದ್ದಾರೆ ?
  • ಅದೆಲ್ಲಾ ಬಿಟ್ಟು ಬಿಡಿ. ಹೋಂ ಸ್ಟೇ ದಾಳಿಯ ಮರುದಿನ ಮಂಗಳೂರು ನಗರದ ಸರ್ವಿಸ್ ಬಸ್ ನಿಲ್ದಾಣದಲ್ಲೇ ಯುವಕ ಯುವತಿಯ ಮೇಲೆ ದಾಳಿಯಾಗಿತ್ತು. ಕೆಲಸದ ಸಂದರ್ಶನಕ್ಕೆ ವಿಟ್ಲದಿಂದ ಮಂಗಳೂರಿಗೆ ಬಂದಿಳಿದ ಯುವತಿಗೆ ಆಕೆಯ ಸಹಪಾಠಿ ಎದುರಿಗೆ ಸಿಕ್ಕಾಗ ಮಾತನಾಡಿದ್ದಳು. ಅದೂ ಜನನಿಬಿಡ ಬಸ್ ನಿಲ್ದಾಣದಲ್ಲಿ. ಅಷ್ಟಕ್ಕೇ ಆಕೆ ಮತ್ತು ಆತನ ಮೇಲೆ ಸಂಘಟನೆಯೊಂದು ಮುಗಿ ಬಿದ್ದು ಹಲ್ಲೆ ಮಾಡಿ ಪೊಲೀಸರಿಗೆ ಒಪ್ಪಿಸಿತ್ತು. ಯಥಾ ಪ್ರಕಾರ ಪೊಲೀಸರು ಗೆಳೆಯರಿಗೆ ಎಚ್ಚರಿಕೆ ಕೊಟ್ಟು ಕಳುಹಿಸಿದ್ದರು. ಇದೂ ಕೂಡಾ ನಾವು ಮಾಹಿತಿ ನೀಡದೇ ಇರುವುದರಿಂದ ನಡೆದ ಘಟನೆ ಎನ್ನುತ್ತೀರಾ? ಆಗ ಯಾಕೆ ದಾಳಿಕೋರರು ಠಾಣೆಗೆ ಬಂದರೂ ಕೇಸು ದಾಖಲಿಸಿಲ್ಲ? ದಾಖಲಿಸಿದ್ದರೆ ಕೇಸ್ ನಂಬರ್ ಏನು? ಯಾವ ಸೆಕ್ಷನ್ನಿನಲ್ಲಿ  ಕಾರ್ಯಕರ್ತರ ಮೇಲೆ ಕೇಸು ದಾಖಲಿಸಿದ್ದೀರಿ? ಎಷ್ಟು ಆರೋಪಿಗಳು ಜೈಲಿನಲ್ಲಿದ್ದಾರೆ?
  • ಮೇಲೆ ಹೇಳಿದ ಮೂರು ಘಟನೆಗಳಂತೆ ವಾರಕ್ಕೆ ಎರಡು ಘಟನೆಗಳು ನಗರ ವ್ಯಾಪ್ತಿಯಲ್ಲಿ ನಡೆಯುತ್ತಿದ್ದು ಈ ಎಲ್ಲಾ ಸಂದರ್ಭಗಳಲ್ಲಿ ನೀವು ಅಂದರೆ ಪೊಲೀಸರು ನಿಮ್ಮ ಇಲಾಖೆಯನ್ನು ಆರೆಸ್ಸೆಸ್ಸಿನ ಘಟಕದಂತೆ ಕಾರ್ಯನಿರ್ವಹಿಸಿದ್ದರಿಂದಲೇ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೆ ಘಟನೆ ನಡೆಯಿತು ಎಂಬುದು ನನ್ನ ಅಭಿಪ್ರಾಯ. ಪೊಲೀಸ್ ಆಯುಕ್ತರಾಗಿ ನೀವು ಏನನ್ನುತ್ತೀರಿ?

ನನ್ನ ಮೇಲೆ ಪೊಲೀಸರು ಕೇಸು ದಾಖಲಿಸಿದ್ದಾರೆ ಎಂಬ ಕಾರಣಕ್ಕಾಗಿ ನಾನು ಈ ಪ್ರಶ್ನೆಗಳನ್ನೆತ್ತಿಲ್ಲ ಮತ್ತು ಉತ್ತರಗಳನ್ನು ನೀಡಿಲ್ಲ. ನಾನು ಪೊಲೀಸರಿಗೆ ಮಾಹಿತಿ ನೀಡಲಿಲ್ಲ ಮತ್ತು ನಾನು ಮನಸ್ಸು ಮಾಡಿದ್ದರೆ ದಾಳಿ ತಪ್ಪಿಸಬಹುದಿತ್ತು ಮತ್ತು ಹುಡುಗಿಯರ ಮೇಲಿನ ಹಲ್ಲೆಯನ್ನು ಚಿತ್ರೀಕರಿಸಬಾರದಿತ್ತು ಎಂಬ ಮಾತುಗಳು ವೆಬ್‌ಸೈಟುಗಲಲ್ಲಿ, ಬ್ಲಾಗ್, ಫೇಸ್‌ಬುಕ್‌ನಲ್ಲಿ ಕಂಡು ಬಂದಿದ್ದರಿಂದ ನನ್ನ ದಾಖಲೆಗಳಲ್ಲಿ ಇರುವ ಮಾಹಿತಿಯನ್ನು ನೀಡಬೇಕಾಯಿತು. ನಾನು ಇಲ್ಲಿ ಹೇಳಿರುವ ಎಲ್ಲಾ ಅಂಶಗಳಿಗೂ ನಮ್ಮಲ್ಲಿ ದಾಖಲೆ ಇವೆ. ಸಮಯದ ದೃಡೀಕರಣ ಮತ್ತು ಪೊಲೀಸರು ದಾಳಿಕೋರರ ಜೊತೆ ಸೇರಿ ಹಲ್ಲೆ ಮಾಡಿದ್ದಕ್ಕೆ ವಿಝುವಲ್ಸ್‌ಗಳು ಇವೆ. ಆಸಕ್ತರು ಬೇಕಿದ್ದರೆ ಮುಕ್ತವಾಗಿ ಪಡೆದುಕೊಳ್ಳಬಹುದು ಎಂದು ಹೇಳಲು ಇಷ್ಟೆಲ್ಲಾ ಹೇಳಬೇಕಾಯಿತು.

ಇಷ್ಟಕ್ಕೂ ಪೊಲೀಸರು ಕೇಸು ದಾಖಲಿಸಿರುವುದನ್ನು ನಾನು ತುಂಬಾನೇ ಎಂಜಾಯ್ ಮಾಡುತ್ತಿದ್ದೇನೆ. 2008 ರಲ್ಲಿ ನಡೆದ ಚರ್ಚ್ ದಾಳಿಯಲ್ಲೂ ನಾನು ಪ್ರತ್ಯಕ್ಷದರ್ಶಿಯಾಗಿದ್ದೆ. ಪೊಲೀಸರು ಮತ್ತು ಕೇಸರಿ ಪಡೆ ಯಾವ ರೀತಿ ಕ್ರಿಶ್ಚಿಯನ್ ಧಾರ್ಮಿಕ ಕೇಂದ್ರಗಳು ಮತ್ತು ಕ್ರಿಶ್ಚಿಯನ್ನರ ಮೇಲೆ ದಾಳಿ ನಡೆಸಿತು ಎಂಬುದನ್ನು ನಾನು ನೋಡಿದ್ದೆ. ಜಸ್ಟಿಸ್ ಸೋಮಶೇಖರ ಆಯೋಗದ ಮುಂದೆ ನಾನು ಕಂಡಿದ್ದೆಲ್ಲವನ್ನೂ ಹೇಳಲು ಅಫಿದಾವಿತ್ ಹಾಕಬೇಕು ಎಂದುಕೊಂಡಿದ್ದೆ. ಹಾಗೆ ಅಫಿದಾವಿತ್ ಹಾಕಬೇಕಾದರೆ ನಾನು ಕೆಲಸ ಮಾಡೋ ಸಂಸ್ಥೆಯಿಂದ ಒಪ್ಪಿಗೆ ಪಡೆಯಬೇಕು ಮತ್ತು ಆ ಸಂಧರ್ಭ ನಾನು ಪತ್ರಕರ್ತನ ಇತಿಮಿತಿಗಳನ್ನು ದಾಟುತ್ತಿದ್ದೇನೆ ಎನಿಸಿತು. ಅದಕ್ಕಾಗಿ ಆಯೋಗಕ್ಕೆ ಅಫಿದಾವಿತ್ ಹಾಕಿಲ್ಲ. ಈ ಬಾರಿ ಪೊಲೀಸರೇ ಅವಕಾಶ ನೀಡಿದ್ದಾರೆ. ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ ದಾಳಿ ವಿಚಾರದಲ್ಲಿ ನನ್ನ ಮೇಲೆ ಕೇಸು ಹಾಕಿದ್ದಾರೆ. ಅದಕ್ಕಾಗಿ ನಾನು ಈ ಪ್ರಕರಣದ ಬಗ್ಗೆ ಪ್ರತ್ಯಕ್ಷ ಕಂಡಿದ್ದನ್ನು ನನಗೆ ಸಾಧ್ಯವಾದ ಮಾಧ್ಯಮಗಳಲ್ಲಿ ಬರೆದುಕೊಂಡಿದ್ದೇನೆ. ನ್ಯಾಯಾಲಯಕ್ಕೂ ಸತ್ಯವನ್ನು ದಾಖಲೆ ಸಮೇತ ಹೇಳುತ್ತೇನೆ.

16 thoughts on “ಮಂಗಳೂರು ಹೋಂ ಸ್ಟೇ ದಾಳಿ ಪ್ರಕರಣದ ಪ್ರಶ್ನೆಗಳು ಮತ್ತು ಉತ್ತರಗಳು

  1. ಆನಂದ್

    ಹಾಂ… ೨೦೦೮ರ ದಾಳಿಗೂ ಪ್ರತ್ಯಕ್ಷದರ್ಶಿ ನೀವಾಗಿದ್ರಾ? ಹಾಗಾದ್ರೆ ನೀವೆ ಈ ಎಲ್ಲಾ ದಾಳಿಗಳ ಹಿಂದಿನ ರೂವಾರಿ… ಸುಮ್ಮನೆ ಪಾಪಾ ನಮ್ಮ ಸಂಘದವರ ಮೇಲೆ ಗೂಬೆ ಕೂರಿಸುತ್ತಿದ್ದೀರಾ… ಹ ಹ್ಹಾ ಹ್ಹಾ.

    Reply
  2. ಜಿ.ಎಸ್.ಶ್ರೀನಾಥ

    ನವೀನ್ ಒಳ್ಳೇ ನಿರ್ಧಾರ, ಉಚ್ಛ ನ್ಯಾಯಾಲಯಕ್ಕೆ ಎಲ್ಲಾ ದಾಖಲೆಗಳನ್ನು ಕೊಟ್ಟು ‘ಪೊಲೀಸರು ನ್ಯಾಯಲಯಕ್ಕೆ ಸುಳ್ಳು ವರದಿಯನ್ನು ಕೊಟ್ಟಿರುವುದನ್ನು ತಿಳಿಸಿ’ .

    Reply
  3. anand prasad

    ಘಟನೆಯ ಆಳವಾದ ತನಿಖೆಗೆ ಹೋದಂತೆಲ್ಲ ಪೊಲೀಸರು ಹೆಚ್ಚು ಹೆಚ್ಚು ಬೆತ್ತಲಾಗುತ್ತಿದ್ದಾರೆ. ಪೊಲೀಸರು ಮತ್ತು ದಾಳಿಕೋರರು ಶಾಮೀಲಾಗಿರುವುದು ನೀವು ಪೊಲೀಸರಿಗೆ ಕೇಳಿದ ಪ್ರಶ್ನೆಗಳಿಂದ ತಿಳಿದುಬರುತ್ತದೆ. ಬಿಜೆಪಿ ಸರ್ಕಾರ ನೇಮಿಸಿದ ಎಲ್ಲಾ ತನಿಖಾ ಆಯೋಗಗಳೂ ವಿಶ್ವಾಸಾರ್ಹತೆ ಕಳೆದುಕೊಂಡಿವೆ. ಬಿಜೆಪಿ ಧರ್ಮದ ಹಾಗೂ ದೇವರ ಹೆಸರು ಹೇಳಿಕೊಂಡು ಜನರಿಗೆ ಮಂಕುಬೂದಿ ಎರಚಿರುವ ಕಾರಣ ಅದರ ಬಗ್ಗೆ ಸಹಾನುಭೂತಿ ಹಾಗೂ ವ್ಯಾಮೋಹ ಇರುವ ಜನರು ಅದರ ಸರ್ಕಾರವನ್ನು ಸಮರ್ಥಿಸಲು, ವಿತಂಡವಾದ ಮಾಡಲು ದೊಡ್ಡ ಸಂಖ್ಯೆಯಲ್ಲಿ ಮುಂದೆ ಬರುತ್ತಾರೆ.

    Reply
  4. Avinash

    ೧. ರವೀಶ್ ನಾಯಕ್ ದಾಳಿಯಲ್ಲಿ ಪಾಲ್ಗೊಂಡ ವಿಶುಯಲ್ ನಿಮ್ಮದೇ ಚಾನೆಲ್ ನಲ್ಲಿ ಕೂಡ ಪ್ರಸಾರ ಆಗಲಿಲ್ಲ ಯಾಕೆ ? ಮತ್ತು ಈ ವಿಷಯ ಎಲ್ಲಿಯೂ ಕೂಡ ಪ್ರಸ್ತಾಪವಾಗಿರಲಿಲ್ಲ. ನಿಮ್ಮ ಮೊದಲಿನ ಲೇಖನದಲ್ಲಿ ಕೂಡ.
    ೨. ಅವರು ದಾಳಿಯಲ್ಲಿ ಪಾಲ್ಗೊಂಡಿದ್ದಾರೆ ಅನ್ನುವುದು ಗೊತ್ತಾದ ಮೇಲು ಅವರಿಗೆ ಕರೆ ಮಾಡಿದ್ದು ಯಾಕೆ ?
    ೩. ರವೀಶ್ ನಾಯಕ್ ದಾಳಿಯಲ್ಲಿ ಪಾಲ್ಗೊಂಡಿದ್ದಾರೆ ಅಂದ ಮೇಲೆ , ಅವರ ಮೆಲಾದಿಕಾರಿಗಳಿಗೆ ಕರೆ ಮಾಡಬಹುದಿತ್ತಲ್ಲ ?
    ೪. ನಿಮ್ಮೊಂದಿಗೆ ಇದ್ದ ಉಳಿದ ಪತ್ರಕರ್ತರು ಯಾರು ? ಅವರಿಗೆ ವಿಷಯ ತಿಳಿಸಿದ್ದು ಯಾರು ?
    ೫. ಇಷ್ಟೆಲ್ಲಾ ದಾಳಿ ಮಾಡಿದವರು ನಿಮ್ಮ ಮೇಲೆ ಯಾಕೆ ದಾಳಿ ಮಾಡಿಲ್ಲ ? ( ಸಿಟಿ ಸಿವಿಲ್ ಕೋರ್ಟ್ನಲ್ಲಿ ನಿಮ್ಮ ಅತಿರೇಕಕ್ಕೆ ಶಾಸ್ತಿ ಮಾಡಿದಂತೆ )
    ೬. ಒಬ್ಬನೇ ಒಬ್ಬ ಹೆಣ್ಣು ಮಕ್ಕಳ ಅಪ್ಪ ತನ್ನ ಮಗಳು ಮಾಡಿದ್ದು ಸರಿ ಎಂದು ಸಮರ್ಥಿಸಿ ಕೊಳ್ಳಲಿಲ್ಲ ಯಾಕೆ ?
    ೭. ಕುಮುದ ಕಾಮತ್ ವೇಶ್ಯಾವಾಟಿಕೆಯ ಕೇಸ್ ಎದುರಿಸುತ್ತಿರುವುದು ಸುಳ್ಳು ಎಂಬುದು ನಿಮ್ಮಿಂದ ಸಾಬಿತು ಮಾಡಲು ಯಾಕೆ ಸಾಧ್ಯವಾಗುತ್ತಿಲ್ಲ ?
    ೮. ಆಕೆಯನ್ನು ಹೊರತು ಬೇರೆ ಯಾವ ಪೋಷಕರು ದೂರನ್ನು ಕೊಟ್ಟಿಲ್ಲ ಮತ್ತು ಇಲ್ಲಿಯವರೆಗೆ ಹೇಳಿಕೆಯನ್ನು ಕೊಟ್ಟಿಲ್ಲ ಯಾಕೆ ?
    ವೇದಿಕೆಯ ಹುಡುಗರಿಗೆ ಪ್ರಚಾರ ಬೇಕಿತ್ತು ಹಾಗಾಗಿ ನಿಮ್ಮ ಜೊತೆ ಕೈ ಜೋಡಿಸಿದ್ದಾರೆ. ಈಗ ನಿಮ್ಮ ಬುಡಕ್ಕೆ ಬಂದ ಕಾರಣಕ್ಕೆ ಪೊಲೀಸರ ಮೇಲೆ ಗೂಬೆ ಕೂರಿಸುತ್ತಿದ್ದಿರಿ ಅಷ್ಟೇ.
    ಉತ್ತರವನ್ನು ನಿರೀಕ್ಷಿಸಬಹುದ ನವೀನರೆ ?

    Reply
    1. NAVEEN SOORINJE

      ಧನ್ಯವಾದಗಳು ಅವಿನಾಶ್ …. ನಿಮ್ಮ ಪ್ರಶ್ನೆಗಳನ್ನು ಇಷ್ಟಪಟ್ಟಿದ್ದೇನೆ. ಉತ್ತರ ನೀಡುತ್ತಿದ್ದೇನೆ. ಈ ಉತ್ತರಗಳಿಗೂ ಬೇಕಾದ ದಾಖಲೆಗಳನ್ನು ಕೂಡಾ ನೀವು ನನ್ನಿಂದ ಪಡೆದುಕೊಳ್ಳಬಹುದು.

      1. ರವೀಶ್ ನಾಯಕ್ ಪಾಲ್ಗೊಂಡ ವಿಝುವಲ್ಸ್ ನಮ್ಮ ಚಾನೆಲ್ ನಲ್ಲಿ ಪ್ರಸಾರ ಆಗಿಲ್ಲ ಎಂದರೆ ಅದು ಸುಳ್ಳು. ರವೀಶ್ ನಾಯಕ್ ಆರೋಪಿಗಳ ಜೊತೆ ಸೇರಿ ವಿದ್ಯಾಥರ್ಿಗಳ ಮೇಲೆ ಹಲ್ಲೆ ಮಾಡುವ ವಿಝುವಲ್ಸ್ ಪ್ರಸಾರ ಆಗಿದೆ. ನನ್ನ ಮೊದಲಿನ ಲೇಖನ ಬರೆದಿರುವುದು ಘಟನೆ ನಡೆದ ಮರುದಿನ ಬಿಡುವಿಲ್ಲದ ಸಮಯದ ಮಧ್ಯೆ. ಅದೂ ಮಧ್ಯರಾತ್ರಿ ಅಥವಾ ನಡು ಬೆಳಗು 1 ಗಂಟೆಗೆ. ಬರೆಯಲು ಸಮಯದ ಅಭಾವ ಇರುವುದರಿಂದ ಎಲ್ಲವನ್ನೂ ಬರೆಯಲಾಗಿಲ್ಲ, ಇನ್ನೂ ಬರೆಯಲು ಬಾಕಿ ಇದೆ ಎಂದು ಲೇಖನದ ಕೊನೆಗೆ ಬರೆದಿದ್ದೆ

      2. ಎರಡನೇ ಪ್ರಶ್ನೆಗೆ ನನ್ನ ಉತ್ತರ ಇಲ್ಲ. ಯಾವುದೋ ಬಬ್ಬ ಅಧಿಕಾರಿ ಭಾಗಿಯಾಗಿದ್ದಾನೆ ಎಂದು ಘಟನಾ ಸ್ಥಳದಿಂದಲೇ ನಾನು ಮೇಲಾಧಿಕಾರಿಗೆ ತಿಳಿಸುವ ಅಗತ್ಯ ಇಲ್ಲ. ನಾನು ಘಟನೆಗೆ ಕಾರಣರಾದವರ ಬಗ್ಗೆ ಬರೆದಿದ್ದೇನೆ. ಮತ್ತು ರವೀಶ್ ನಾಯಕ್ ಭಾಗಿಯಾಗಿರೋ ಬಗ್ಗೆ ಪೊಲೀಸ್ ವಿಚಾರಣೆ ವೇಳೆ ಲಿಖಿತವಾಗಿ ಹೇಳಿದ್ದೇನೆ.

      3. ನನ್ನ ಮಾಹಿತಿ ಮೂಲ ಯಾವುದು ಎಂಬುದನ್ನು ಪತ್ರಕರ್ತನಾಗಿ ನಾನು ಸಾರ್ವಜನಿಕರಿಗೆ ಹೇಳುವಂತಿಲ್ಲ. ಆದರೆ ನನ್ನ ಕಾಲ್ ಲೀಸ್ಟ್ ಅನ್ನು ಪೊಲೀಸರು ತೆಗೆದಿದ್ದಾರೆ. ಅದರಲ್ಲಿ ನನ್ನ ಸುದ್ಧಿ ಮೂಲದ ನಂಬರ್ ಇದೆ. ಆದರೆ ಅದು ಯಾವುದೇ ಸಂಘಟನೆಗೆ ಸೇರಿದ ವ್ಯಕ್ತಿಯ ನಂಬರ್ಗಳು ನನ್ನ ಕಾಲ್ ಲೀಸ್ಟ್ನಲ್ಲಿ ಇಲ್ಲ ಎಂದು ಪೊಲೀಸರೇ ಖಚಿತಪಡಿಸಿದ್ದಾರೆ. ಬೇಕಿದ್ದರೆ ನೀವು ಚೆಕ್ ಮಾಡಬಹುದು. ಉಳಿದ ಪತ್ರಕರ್ತರು ಯಾರು ಅಂತ ಕೇಳಿದ್ದೀರಿ. ಒಬ್ಬ ನಮ್ಮ ಕ್ಯಾಮರ ಮ್ಯಾನ್. ಇನ್ನೊಬ್ಬರು ಸಹಾಯ ಅನ್ನುವ ಸ್ಥಳೀಯ ಟಿವಿಯ ಕ್ಯಾಮರಮ್ಯಾನ್, ಮತ್ತೊಬ್ಬರು ಜಯ ಕಿರಣ ಪತ್ರಿಕೆಯ ಫೋಟೋಗ್ರಾಫರ್. ನಮ್ಮ ಕ್ಯಾಮರಾ ಮ್ಯಾನ್ನನ್ನು ನಾನೇ ಕರೆದುಕೊಂಡು ಹೋಗಿದ್ದೇನೆ. ಉಳಿದವರು ಹೇಗೆ ಬಂದರು ಎಂದು ಅವರಲ್ಲೇ ಕೇಳಬೇಕು. ಮತ್ತು ಪೊಲೀಸರು ಕೇಳಿದ್ದಾರೆ ಕೂಡಾ.

      4. ಇಷ್ಟೆಲ್ಲಾ ದಾಳಿ ಮಾಡಿದವರು ನನ್ನ ಮೇಲೆ ದಾಳಿ ಯಾಕೆ ಮಾಡಿಲ್ಲ ಎಂದು ಒಂದೋ ದಾಳಿಕೋರರೇ ಹೇಳಬೇಕು. ಇಲ್ಲವಾದರೆ ದಾಳಿಕೋರರು ನಂಬುವ ದೇವರು ಹೇಳಬೇಕು.

      5. ಒಬ್ಬನೇ ಬಬ್ಬ ಹೆಣ್ಣು ಮಗಳ ಅಪ್ಪ ತನ್ನ ಮಗಳು ಮಾಡಿದ್ದು ಸರಿ ಎಂದು ಸಮಥರ್ಿಸಿಕೊಳ್ಳಲಿಲ್ಲ ಯಾಕೆ ? ಎಂದು ಪ್ರಶ್ನಿಸಿದ್ದೀರಿ. ಇದೊಂದು ಉತ್ತಮ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ನೀಡಲೆಂದೇ ನಾನು ನಿಮ್ಮ ಕಮೆಂಟಿಗೆ ರಿಪ್ಲೈ ಮಾಡುತ್ತಿದ್ದೇನೆ. ನನ್ನ ಉತ್ತರ ಹೀಗಿದೆ. — ದಕ್ಷಿಣ ಕನ್ನಡ ಜಿಲ್ಲೆಯ ಜನಪರ ಮಹಿಳಾ ಸಂಘಟನೆಗಳು ಸೇರಿಕೊಂಡು ಈ ಘಟನೆಯ ಬಗ್ಗೆ ಸತ್ಯಶೋಧನಾ ವರದಿಯನ್ನು ತಯಾಸಿದ್ದಾರೆ. ಆ ವರದಿಯಲ್ಲಿ ಪ್ರತಿಯೊಂದು ಹೆಣ್ಣು ಮಕ್ಕಳ ತಂದೆ ಮತ್ತು ತಾಯಿಯ ಸಂಪೂರ್ಣ ವಿಳಾಸ ಮತ್ತು ಹೇಳಿಕೆಗಳು ಇವೆ. 5.30 ಗೆ ಪಾಟರ್ಿ ಮುಗಿಸಿರುವ ಹುಡುಗಿಯರನ್ನು ಕರೆದುಕೊಂಡು ಹೋಗಲು ಹೆತ್ತವರು ದಾರಿಯಲ್ಲಿ ಬರುತ್ತಿದ್ದರು. ಇಬ್ಬರು ಹೆತ್ತವರು ಅದಾಗಲೇ 5.30 ಕ್ಕೆ ಇಬ್ಬರು ಹುಡುಗಿಯರನ್ನು ಕರೆದುಕೊಂಡು ಹೋಗಿದ್ದರು. ಇನ್ನು ಇನ್ಸ್ಸ್ಪೆಕ್ಟರ್ ಒಬ್ಬರು ಪಾಟರ್ಿಗೆ ಹೋಗಿದ್ದ ತನ್ನ ಮಗಳ ಕರೆಗಾಗಿ ಕಾಯುತ್ತಿದ್ದರು ಎಂದು ಹೇಳಿಕೆ ನೀಡಿದ್ದಾರೆ. ಎಲ್ಲಾ ಹೆಎತ್ತವರು ಕೂಡಾ ತಮ್ಮ ಹುಡುಗಿಯರನ್ನು ತಮ್ಮದೇ ವಾಹನದಲ್ಲಿ ಪಾಟರ್ಿ ನಡೆಯುವ ಸ್ಥಳಕ್ಕೆ ಬಿಟ್ಟಿದ್ದು, ಸಂಜೆ 7.30ಯ ಒಳಗೆ ಎಲ್ಲರನ್ನೂ ಮನೆಯವರು ಬಂದು ಕರೆದುಕೊಂಡು ಹೋಗಲಿಕ್ಕೆ ಇತ್ತು. ಅಷ್ಟರಲ್ಲಿ ದಾಳಿಯಾಗಿದೆ. ಹೆಚ್ಚಿನ ಮಾಹಿತಿಯನ್ನು ನೀವು ಮಹಿಳಾ ಸಂಘಟನೆಗಳು ಸರಕಾರಕ್ಕೆ ನೀಡಿದ ವರದಿಯಿಂದ ಪಡೆದುಕೊಳ್ಳಬಹುದು. ಇಷ್ಟೇ ಅಲ್ಲದೆ ಕೇಂದ್ರದ ಮಹಿಳಾ ಆಯೋಗ ಎಲ್ಲಾ ಹುಡುಗಿಯರ ಮನೆಯವರನ್ನು ಬೇಟಿಯಾಗಿ ಹೇಳಿಕೆ ಪಡೆದುಕೊಂಡಿದೆ. ಕೇಂದ್ರ ಆಯೋಗದ ವರದಿ ಇನ್ನಷ್ಟೇ ಸಿದ್ದಗೊಳ್ಳಬೇಕು. ಅದರಲ್ಲೂ ಹುಡುಗಿಯರ ಮನೆಯವರ ಹೇಳಿಕೆಗಳು ಇರಬಹುದು.

      6. ಕುಮುದಾ ಕಾಮತ್ ವಿಚಾರ ಇಲ್ಲಿ ಅಪ್ರಸ್ತುತ. ದಾಳಿಯಾಗಿರುವುದು ಯುವಕ ಯುವತಿಯರ ಮೇಲೆ. ಅದರ ಬಗ್ಗೆ ಮಾತ್ರ ನಾವು ಮಾತನಾಡುತ್ತಿದ್ದೇವೆ. ಆದರೂ ನೀವು ಕೇಳಿದ್ದರಿಂದ ಹೇಳುತ್ತಿದ್ದೇನೆ. ಕುಮುದಾ ಕಾಮತ್ ವೇಶ್ಯಾವಾಟಿಕೆಯ ಕೇಸ್ ಎದುರಿಸುತ್ತಿಲ್ಲ. ಅವರ ಮೇಲೆ ವೇಶ್ಯಾವಾಟಿಕೆಯ ಕೇಸು ಇತ್ತು. ಅದು ನ್ಯಾಯಾಲಯದಲ್ಲಿ ಖುಲಾಸೆಗೊಂಡಿದೆ. ಅಂದರೆ ನ್ಯಾಯಾಲಯ ಕಕುಮುದಾ ಕಾಮತ್ರನ್ನು ನಿರಪರಾಧಿ ಎಂದು ಘೋಷಿಸಿದೆ. ಇಷ್ಟಕ್ಕೂ ಯಾರ್ಯಾರದ್ದೋ ವಿಷಯ ನಮಗ್ಯಾಕೆ ಸರ್

      7. ಕುಮುದಾ ಕಾಮತ್ ರನ್ನು ಹೊರತು ಪಡಿಸಿ ಬೇರೆ ಯಾರೂ ಹೇಳಿಕೆ ಯಾಕೆ ಕೊಟ್ಟಿಲ್ಲ ಎಂದು ಕೇಳಿದ್ದೀರಿ. ಯಾರೂ ಯಾರ ಎದುರೂ ಹೇಳಿಕೆ ಕೊಡಬೇಕೆಂದೇನೂ ಇಲ್ಲ. ಎಲ್ಲಾ ಹುಡುಗ ಹುಡುಗಿಯರ ಹೆತ್ತವರು ಕೇಂದ್ರ ಆಯೋಗದ ಎದುರು ಹೇಳಿಕೆ ನೀಡಿದ್ದಾರೆ. ಅದನ್ನೇ ದೂರು ಎಂದು ಆಯೋಗ ಪರಿಗಣಿಸುತ್ತದೆ.

      8. ವೇದಿಕೆಯ ಹುಡುಗರಿಗೆ ಪ್ರಚಾರ ಬೇಕಿತ್ತು ಅದಕ್ಕಾಗಿ ನಿಮ್ಮ ಜೊತೆ ಕೈಜೋಡಿಸಿದ್ದಾರೆ ಎಂದಿದ್ದೀರಿ. ಇದು ನಿಮ್ಮ ತೀಮರ್ಾನಕ್ಕೆ ಬಿಟ್ಟ ವಿಚಾರ. ಹಿಂದೂ ಜಾಗರಣ ವೇದಿಕೆಗೆ ಪ್ರಚಾರ ಬೇಕೆಂದಿದ್ದರೆ ಅವರಿಗೆ ಬೇಕಾದ ಚೆಡ್ಡಿ ಪತ್ರಕರ್ತರು ಬೇಕಾದಷ್ಟಿದ್ದಾರೆ. ನನ್ನ ಜೊತೆ ಕೈಜೋಡಿಸಬೇಕಿಲ್ಲ.

      9. ನಿಮ್ಮ ಬುಡಕ್ಕೆ ಬಂದ ಕಾರಣ ಪೊಲೀಸರ ಮೇಲೆ ಗೂಬೆ ಕೂರಿಸುತ್ತಿದ್ದೀರಿ ಎಂದಿದ್ದೀರಿ. ಬುಡಕ್ಕೆ ಬಂದಿರುವುದು ನನ್ನದಲ್ಲ. ಪೊಲೀಸರದ್ದು. ನನ್ನ ಮೇಲೆ ಕೇಸಿದ್ದರೂ ನಾನು ಆಡಳಿತ ವಿರುದ್ಧ ಈ ಪ್ರಕರಣದ ಬಗ್ಗೆ ಬೇಕಾದಷ್ಟು ಲೇಖನ ಬರೆದಿದ್ದೇನೆ. ಇಷ್ಟಕ್ಕೂ ಕೇಸು ದಾಖಲಾಗಿ 20 ದಿನ ಕಳೆದರೂ ನಾನು ನಿರೀಕ್ಷಣಾ ಜಾಮೀನು ಕೂಡಾ ಪಡೆದುಕೊಂಡಿಲ್ಲ. ಮತ್ತು ಪಡೆದುಕೊಳ್ಳುವುದಿಲ್ಲ. ಪೊಲೀಸರು ತನಿಖೆ ನಡೆಸಿದ್ದಾರೆ. ನನ್ನ ಕಾಲ್ ಲೀಸ್ಟ್ ತೆಗೆದಿದ್ದಾರೆ ಮತ್ತು ನನ್ನನ್ನು ಪ್ರಶ್ನಿಸಿದ್ದಾರೆ. ನನ್ನ ಪಾತ್ರ ಇದ್ದರೆ ಇಷ್ಟರವರೆಗೆ ನನ್ನನ್ನು ಯಾಕೆ ಬಂಧಿಸಿಲ್ಲ ಎಂದು ಹಲವಾರು ಬಾರಿ ಕೇಳಿದ್ದೇನೆ. ನಿಮ್ಮ ಮೂಲಕ ಇನ್ನೊಮ್ಮೆ ಕೇಳುತ್ತಿದ್ದೇನೆ. ನಾನು ನನ್ನ ಮೇಲೆ ಹಾಕಿರೋ ಕೇಸನ್ನು ಸ್ವಾಗತಿಸುತ್ತೇನೆ. ಯಾಕೆಂದರೆ ನನ್ನ ಮೇಲೆ ಕೇಸು ಇದ್ದರೆ ನ್ಯಾಯಾಲಯಕ್ಕೆ ನನ್ನ ಹೇಳಿಕೆಗಳು ಪ್ರಮುಖವಾಗಿರುತ್ತದೆ.

      ಧನ್ಯವಾದಗಳು.

      ನವೀನ್ ಸೂರಿಂಜೆ..

      Reply
      1. Avinash

        ೧. ರವೀಶ್ ನಾಯಕ್ ಪಾಲ್ಗೊಂಡ ಬಗ್ಗೆ ನಿಮ್ಮ ಚಾನೆಲ್ ನಲ್ಲಿ ಕೂಡ ವರದಿಯಾಗಿಲ್ಲ. ಅವರ ಬಗ್ಗೆ ಇಂದಿಗೂ ಕೂಡ ಪ್ರಸ್ತಾಪವಾಗಿಲ್ಲ. ಹಾಗೇನಾದರೂ ಇದ್ದಾರೆ ವಿಶುಅಲ್ಸ್ ತೋರಿಸಿ ಸಾರ್ವಜನಿಕವಾಗಿ ಕ್ಷಮೆ ಕೋರುತ್ತೇನೆ.
        ೨.ಯಾವೊಬ್ಬ ಅಧಿಕಾರಿ ಪಾಲ್ಗೊಂಡಿದ್ದಾನೆ ಎಂದು ಮೇಲಧಿಕಾರಿಗೆ ತಿಳಿಸುವ ಅಗತ್ಯ ಇಲ್ಲ ಅಂದ ಮೇಲೆ ಈಗ ಅವರನ್ನು ಎಳೆದು ತರುವ ಅಗತ್ಯ ಏನಿದೆ ?
        ೩. ನಿಮ್ಮ ಮಾಹಿತಿ ಮೂಲ ಅಲ್ಲಿ ದಾಳಿ ಮಾಡಿದ ಯುವಕರೇ ಮತ್ಯಾರು ಅಲ್ಲ ಎಂಬುದು ನನ್ನ ಆರೋಪ.
        ೪. ನಿಮ್ಮ ಮೇಲೆ ದಾಳಿ ಮಾಡಿದರೆ ಉಳಿದದನ್ನು ಶೂಟ್ ಮಾಡುವವರು ಯಾರು ಅದಕ್ಕೆ ಮಾಡಿಲ್ಲ
        ೫. ಯಾಕೆ ಮಾದ್ಯಮದ ಮುಂದೆ ಯಾವ ಪೋಷಕರು ಹೇಳಿಕೆ ಕೊಡುತ್ತಿಲ್ಲ ಅಂದರೆ ಯಾವ ಮುಖ ಇಟ್ಟುಕೊಂಡು ಕೊಡುತ್ತಾರೆ ? ನೈತಿಕತೆಯಾದರು ಬೇಕಲ್ಲ ?
        ೬. ಕುಮದ ಕಾಮತ ಳ ಮಗ ಇವರನ್ನು ಬೇರೆ ಉದ್ದೇಶಕ್ಕಾಗಿ ಇಲ್ಲಿಗೆ ಕರೆಸಿಕೊಂಡಿದ್ದ ಅನ್ನುವುದು ದಾಳಿ ಮಾಡಿದವರ ಆರೋಪ.ಆ ಕಾರಣ ದಿಂದಲೇ ದಾಳಿ ನಡೆದಿದ್ದು ಹಾಗಾಗಿ ಇಲ್ಲಿ ಆಕೆ ಪ್ರಸ್ತುತವೆ .
        ೭. ನಾಳೆ ದಾಳಿ ಮಾಡಿದವರೆಲ್ಲ ನಿರಪರಾದಿಗಳು ಎಂದು ಬಿಡುಗಡೆ ಆಗಬಹುದು ಆಗಲು ನಮಗ್ಯಾಕೆ ಎಂದು ಸುಮ್ಮನಿರುತ್ತಿರ? ತಾನೇ ತನ್ನ ಮಗನನ್ನು ಇಂತಹ ಪಾರ್ಟಿಗೆ ಬಿಟ್ಟು ಬಂದೆ ಎಂದು ಹೇಳಿದ ಆಕೆಯ ಮತ್ತು ಆಕೆಯ ಮಗನ ಚಾರಿತ್ರ್ಯ ಚರ್ಚೆಗೆ ಒಳಪಟ್ಟಿದ್ದು ಸಹಜ ಅಷ್ಟೇ.
        ೮. ಟಿ ಅರ್ ಪಿ ಗಾಗಿ ಚೆಡ್ಡಿ ಪತ್ರಕರ್ತರೆನು, ಚಡ್ಡಿ ಹಾಕದ ಪತ್ರಕರ್ತರು ಕೂಡ ರೆಡಿ ಇರುತ್ತಾರೆ. ನೀವು ಯಾವ ಕೆಟೆಗೆರಿ ಅನ್ನೋದು ಅಷ್ಟೇನೂ ಪ್ರಾಮುಖ್ಯ ಅಲ್ಲ ಬಿಡಿ.
        ೯. ನೀವು ಬಂಧಿತರಾಗಿ ದುರಂತ ನಾಯಕರಾಗುವ ಪ್ರಯತ್ನದಲ್ಲಿದ್ದಿರಿ. ಆಗ ನಿಮ್ಮನ್ನು ಸಮರ್ಥಿಸ್ಕೊಳ್ಳಲು ದೇಶಾದ್ಯಂತ ಇರುವ ಬುದ್ದಿ ಜೀವಿಗಳು ನಿಮ್ಮ ಪರ ಬೊಬ್ಬೆ ಹಾಕಿ. ಒಂದೇ ವರ್ಷದಲ್ಲಿ ಪದ್ಮಶ್ರಿ ಪ್ರಶಸ್ತಿಯವರೆಗೂ ನಿಮ್ಮನ್ನು ತಲುಪಿಸುತ್ತಾರೆ ಅನ್ನೋ ನಿರೀಕ್ಷೆ ನಿಮ್ಮದು.
        ನಿಮ್ಮ ಬಯಕೆ ಈಡೇರಲಿ ಹೇಗಿದ್ದರೂ ಜನಾರ್ಧನ ಪೂಜಾರಿ ಮತ್ತು ಆಸ್ಕರ್ ಅಣ್ಣನ ಕೈ ನಿಮ್ಮ ಹೆಗಲ ಮೇಲೆ ಬಿದ್ದಾಗಿದೆ .
        ಪೆಟ್ಟು ತಿಂದವರು ಯಾರೋ ? ಮರ್ಯಾದೆ ಹೋಗಿದ್ದು ಯಾರದೋ? ಜೈಲ್ ಸೇರಿದವರು ಯಾರೋ ? ಪರಿಸ್ತಿತಿಯ ಲಾಭ ಪಡೆಯುತ್ತಿರುವರು ಯಾರೋ ?

        Reply
  5. Prasad

    Avinash I totally agree with you. ನವೀನ್ ತನ್ನ ಮೊದಲಿನ ಲೇಖನದಲ್ಲಿ ಹೇಳಿದ್ದಕ್ಕೂ ಈಗ ಹೇಳಿದ್ದಕ್ಕೂ ತುಂಬ ವ್ಯತ್ಯಾಸವಿದೆ. ಮೊದಲಿನ ಲೇಖನದಲ್ಲಿ ಪೊಲೀಸರು ಘಟನೆ ನಡೆದ ನಂತರ ಬಂದದ್ದು ಎಂದಿತ್ತು. ಈ ಲೇಖನದಲ್ಲಿ ಪೊಲೀಸರೂ ಹಲ್ಲೆಯಲ್ಲಿ ಪಾಲ್ಗೊಂಡಿದ್ದರು ಎಂದಿದೆ. ಯಾವುದನ್ನು ನಂಬೋಣ.

    Reply
  6. Paarvathi cheeranahally

    ನಿಮ್ಮ ತಂಗಿ ಮೇಲೆ ಹಲ್ಲೆ ನಡೆದಿದ್ದರೆ, ಶೂಟಿಂಗ್ ಮಾಡುತ್ತಿದ್ದೀರಾ ಎಂಬ ಪ್ರಶ್ನೆಗೆ ನೀವು ನೀಡಿರುವ ಸಮರ್ಥನೆ ಸರಿಯಲ್ಲ. ಸುಟ್ಟು ಕರಕಲಾಗಿದ್ದು, ಕೊಲೆಯಾಗಿದ್ದು, ಅತ್ಯಾಚಾರ ನಡೆದಿದ್ದು… ಎಲ್ಲವೂ ಮುಗಿದ ಹೋದ ಮೇಲೆ ಪತ್ರಕರ್ತನೊಬ್ಬ ವರದಿ ಮಾಡುವುದು, ಕ್ಯಾಮೆರಾ ಮೆನ್ ಶೂಟ್ ಮಾಡುವುದು, ವೈದ್ಯನೊಬ್ಬ ಪೋಸ್ಟ್ ಮಾರ್ಟಮಂ ಮಾಡುವುದು ವೃತ್ತಿ ಧರ್ಮವೇ ಇರಬಹುದು. ಸಂತ್ರಸ್ತರು ನಮ್ಮ ಸಮೀಪದ ಬಂಧುಗಳೇ ಆಗಿದ್ದರೆ, ಸಾಮಾನ್ಯರಿಗೆ ವೃತ್ತಿ ಧರ್ಮ ಪಾಲನೆ ಅದು ಸ್ವಲ್ಪ ಕಷ್ಟವೂ ಆಗುತ್ತದೆ. ಆದೇನೆ ಇರಲಿ, ನೀವು ಶೂಟ್ ಮಾಡಿದ್ದು, ಮುಗಿದು ಹೋದ ದುರಂತವನ್ನಲ್ಲ. ಪ್ರಗತಿಯಲ್ಲಿದ್ದ ದುರಂತವನ್ನು. ಅತ್ಯಾಚಾರ, ಕೊಲೆ ನಡೆಯುವುದನ್ನು ಶೂಟ್ ಮಾಡುವುದು ವೃತ್ತಿ ಧರ್ಮವಾದರೂ(ನಿಮ್ಮ ಪ್ರಕಾರ), ಅದೊಂದು ಅಮಾನವೀಯ ನಡವಳಿಕೆ.
    ಎರಡನೆಯದು ನನ್ನ ಮೊಬೈಲ್ ನಿಂದ 100ಕ್ಕೆ ಕರೆ ಮಾಡಲು ಸಾಧ್ಯವಾಗಲಿಲ್ಲ ಎಂಬ ನಿಮ್ಮ ವಾದದ ಕುರಿತು: ನೀವು ನಿಜವಾಗಿಯೂ ಆ ಹೊತ್ತು ಕರೆ ಮಾಡಬೇಕಿದ್ದು ಆರು ಡಿಜಿಟ್ ಫೋನ್ ನಂಬರ್ ಹೊಂದಿರುವ ಪೊಲೀಸ್ ಕಂಟ್ರೋಲ್ ರೂಂಗೆ. ಇಂತಹ ಕಂಟ್ರೋಲ್ ರೂಂಗಳು ಎಲ್ಲ ಕಡೆಯೂ ಇರುತ್ತವೆ. ಇನ್ನೊಂದು ವಿಷಯ- ಇನ್ಸ್ ಪೆಕ್ಟರ್ ಸೆಲ್ ಎತ್ತದೇ ಇದ್ದದ್ದು ದೊಡ್ಡ ಅಪರಾಧ ಎಂಬಂತೆ ಬಿಂಬಿಸುತ್ತಿದ್ದೀರಿ. ಪೊಲೀಸರು, ಅಷ್ಟೇ ಏಕೆ ಪತ್ರಕರ್ತರು, ರಾಜಕಾರಣಿಗಳು, ವೈದ್ಯರು ಸೇರಿದಂತೆ ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಎಲ್ಲರೂ, ದಿನದ 24 ಗಂಟೆಯೂ ಬಂದ ಕರೆಗಳನ್ನು ಸ್ವೀಕರಿಸಬೇಕು ಎಂದು ಭಾವಿಸಿಕೊಂಡು ಕರೆ ಮಾಡುವುದು ಸರಿಯಲ್ಲ, ಅವರಿಗೂ ಖಾಸಗಿ ಜೀವನ ಇರುತ್ತೆ.
    ಇದೆಲ್ಲದರ ಹೊರತಾಗಿಯೂ, ನಾನು ನಿಮ್ಮ ಪ್ರಾಮಾಣಿಕತೆಯನ್ನು ಶಂಕಿಸುತ್ತಿಲ್ಲ. ನೀವು ಒಳ್ಳೆಯ ಕೆಲಸವನ್ನೇ ಮಾಡುತ್ತಿರಬಹುದು. ಆದರೆ, ಒಬ್ಬ ತನಿಖಾ ಪತ್ರಕರ್ತನಾಗಿ ಘಟನೆಯನ್ನು ವಿವರಿಸಿ, ಅದಕ್ಕೆ ಸಾಕ್ಷಿ-ಪುರಾವೆಗಳನ್ನು ಜನ ನಂಬುವಂತೆ ಮುಂದಿಡಿ. ಅದನ್ನು ಬಿಟ್ಟು ರಾಜಕೀಯ ಅಥವಾ ಸಿದ್ಧಾಂತದ ಕಾರ್ಯಕರ್ತನಂತೆ ವಾದಿಸಲು ನಿಲ್ಲಬೇಡಿ. ಕಂಡಿದ್ದಷ್ಟೇ ಪೂರ್ಣ ಸತ್ಯವಲ್ಲ.
    – ಪಾರ್ವತಿ ಚೀರನಹಳ್ಳಿ. ಮೈಸೂರು

    Reply
    1. NAVEEN SOORINJE

      ಪಾರ್ವತಿ ಚೀರನಹಳ್ಳಿಯವರೇ…
      ಪ್ರಗತಿಯಲ್ಲಿದ್ದ ದುರಂತವನ್ನು ಶೂಟಿಂಗ್ ಮಾಡುವುದು ಅಮಾನವೀಯ ಘಟನೆ ಎಂದಾಗಿದ್ದಲ್ಲಿ ನಾವು ಏನು ಮಾಡಬೇಕಿತ್ತು ಎಂಬುದನ್ನು ಪಾರ್ವತಿಯವರು ಹೇಳಬೇಕು. ಹಲ್ಲೆ ನಡೆಯುವ ಮುನ್ನವೇ ಪೊಲೀಸ್ ಇನ್ಸ್ಸ್ಪೆಕ್ಟರ್ ಗೆ ಫೋನ್ ಮಾಡಿದ್ದೇವೆ. ಅವರು ಫೋನ್ ಕರೆ ಸ್ವೀಕರಿಸದೇ ಇದ್ದಾಗ ನಾವು ಪ್ರಕರಣವನ್ನು ಶೂಟಿಂಗ್ ಮಾಡಬಾರದಿತ್ತು ಎಂಬುದು ನಿಮ್ಮ ವಾದ. ಅಂತೂ ನೀವು ಹೇಳುತ್ತಿರುವುದು ದಾಳಿ ಕೋರ ಆರೋಪಿಗಳನ್ನು ಕಾನೂನಿನ ಕುಣಿಕೆಯಿಂದಲೂ ತಪ್ಪಿಸಬೇಕಿತ್ತು.
      ಎರಡನೆಯದ್ದು ನೀವು ಹೇಳುತ್ತಿರುವುದು ಏಳು ಡಿಜಿಟ್ ನ ಕಂಟ್ರೋಲ್ ರೂಂ ನಂಬರ್ ಗೆ ಫೋನ್ ಮಾಡಬೇಕಿತ್ತು ಎನ್ನುವುದು. ನೀವೇನು ಜೋಕ್ ಮಶಾಡುತ್ತಿದ್ದೀರಾ ? ಎಲ್ಲರದ್ದೂ ಪ್ರಥಮ ಪ್ರಶ್ನೆ ಇದ್ದಿದ್ದು ಪತ್ರಕರ್ತರು ಪೊಲೀಸರಿಗೇಕೆ ಮಾಹಿತಿ ನೀಡಿಲ್ಲ ಎನ್ನುವುದು. ಪೊಲೀಸ್ ಇನ್ಸ್ಸ್ಪೆಕ್ಟರ್ ಗೆ ಮಾಹಿತಿ ನೀಡಿದ್ದೇವೆ ಎಂದು ಖಚಿತವಾದ ನಂತರ ಈಗ ಕೇಳುತ್ತಿರುವುದು 100 ಗೆ ಯಾಕೆ ಕರೆ ಮಾಡಿಲ್ಲ ಎಂದು. 100 ಗೆ ಕರೆ ಮಾಡಿದರೆ ಫೋನ್ ಕನೆಕ್ಟ್ ಆಗುವುದಿಲ್ಲ ಎಂದು ಹೇಳಿದರೆ ಏಳು ಡಿಜಿಟ್ ನ ನಂಬರ್ಗೆ ಕರೆ ಮಾಡಬೇಕಿತ್ತು ಎನ್ನುತ್ತಿದ್ದೀರಿ. ಇನ್ನೂ ಮುಂದುವರಿದರೆ, ಪೊಲೀಸ್ ಕಮಿಷನರ್, ಡಿಜಿಪಿ ಮತ್ತು ಕೇಂದ್ರ ಗೃಹ ಸಚಿವಾಲಯಕ್ಕೆ ಮಾಹಿತಿ ನೀಡಬೇಕಿತ್ತು ಎನ್ನುತ್ತೀರಿ. ನಾನು ಮೊದಲೇ ಹೇಳಿದಂತೆ ಘಟನೆ ನಡೆದಿದ್ದು ನಾಲ್ಕು ನಿಮಿಷ ಐವತ್ತೊಂಬತ್ತು ಸೆಕೆಂಡು. ಆ ನಾಲ್ಕು ನಿಮಿಷದಲ್ಲಿ 2 ಕರೆ ಮಾಡಿದ್ದೇನೆ. ಒಂದು ಕರೆ ಸ್ವೀಕರಿಸಿದ್ದೇನೆ. ಉಳಿದ ನಿಮಿಷದಲ್ಲಿ ನನಗೆ ಪೊಲೀಸ್ ಇನ್ಸ್ಸ್ಪೆಕ್ಟರ್ ದಾಳಿಕೋರರ ಮಧ್ಯೆ ಕಂಡು ಬಂದಿದ್ದಾರೆ. ಮತ್ತೆ ಫೋನ್ ಮಾಡುವ ಅಗತ್ಯ ಇಲ್ಲ.
      ಮೂರನೆಯದ್ದು 24 ಗಂಟೆಯೂ ಪೊಲೀಸರು ಫೋನ್ ಕರೆ ಸ್ವೀಕರಿಸಬೇಕಿಲ್ಲ ಎಂದಿದ್ದೀರಿ. ಅಂದರೆ ನೀವು ಒಟ್ಟಾರೆ ದಾಳಿಯನ್ನು ಸಮಥರ್ಿಸುತ್ತಿದ್ದೀರಿ ಎಂದು ನನಗೆ ಖಚಿತವಾಗುತ್ತಿದೆ. ಪೊಲೀಸರು 24 ಗಂಟೆ ಕರೆ ಸ್ವೀಕರಿಸಬೇಕು ಎಂದೇ ಅವರಿಗೆ ಸರಕಾರ ಮೊಬೈಲ್ ಗಳನ್ನು ನೀಡಿದೆ. ನೀವು ನನ್ನನ್ನು ರಾಜಕೀಯ ಕಾರ್ಯಕರ್ತನಂತೆ ವತರ್ಿಸುತ್ತಿರುವ ಪತ್ರಕರ್ತ ಎಂದು ಹೇಳಿದರೂ ನಿಮಗೊಂದು ಎಕ್ಸ್ ಕ್ಲೂಸಿವ್ ಮಾಹಿತಿಯನ್ನು ನೀಡುತ್ತೇನೆ. ಆ ದಿನ ಪೊಲೀಸ್ ಇನ್ಸ್ಸ್ಪೆಕ್ಟರ್ ಖಾಸಗಿಯಾಗಿ ಎಲ್ಲೂ ಇರಲಿಲ್ಲ. ಪೊಲೀಸ್ ಇನ್ಸ್ಸ್ಪೆಕ್ಟರ್ಗೆ ನನ್ನ ಕಾಲ್ ಹೋಗುವುದಕ್ಕಿಂತಲೂ ಮೊದಲು ದಾಳಿಯ ಪ್ರಮುಖ ಆರೋಪಿಯೊಬ್ಬನ ಕರೆ ಬಂದಿದೆ. ಅಂದರೆ ದಾಳಿಯಾಗುವುದಕ್ಕಿಂತಲೂ ಮುಂಚೆ ಪೊಲೀಸ್ ಇನ್ಸ್ಸ್ಪೆಕ್ಟರ್ ಗೆ ದಾಳಿಯ ಮಾಹಿತಿ ಇದೆ. ಇಷ್ಟಕ್ಕೂ ಇನ್ಸ್ಸ್ಪೆಕ್ಟರ್ ಖಾಸಗಿಯಾಗಿ ಎಲ್ಲೂ ಇರಲಿಲ್ಲ. ಇನ್ಸ್ಸ್ಪೆಕ್ಟರ್ ಮೊಬೈಲ್ ಪಡೀಲ್ ಟವರ್ ನಲ್ಲಿ ಕಾರ್ಯಾಚರಿಸುತ್ತಿತ್ತು. ಇದೆಲ್ಲದಕ್ಕೆ ಕೆಲವೇ ದಿನಗಳಲ್ಲಿ ದಾಖಲೆ ದೊರೆಯುತ್ತದೆ. ಇವೆಲ್ಲವನ್ನು ನಾನು ನೀವು ಹೇಳಿದಂತೆ ತನಿಖಾ ವರದಿಗಾರನಾಗಿಯೇ ಮಾಡಿದ್ದೇನೆಯೇ ಹೊರತು ರಾಜಕೀಯ ಕಾರ್ಯಕರ್ತನಂತೆ ಅಲ್ಲ. ನೀವೇ ಹೇಳಿದಂತೆ ನಿಮಗೆ ಕಂಡಿದ್ದಷ್ಟೇ ಸತ್ಯ ಅಲ್ಲ.

      ಧನ್ಯವಾದಗಳೊಂದಿಗೆ,

      ನವೀನ್ ಸೂರಿಂಜೆ .

      Reply
  7. Mar Thomas

    ನಿಮ್ಮ ಕಾರ್ಯಾ ಮಾಡುವಲ್ಲಿ ನೀವು ಸಪಲರಾಗಿದ್ದೀರಿ, ಇಷ್ಟೊಂದು ಜನರಿರುವಾಗ ನೀವು ಒಬ್ಬಂಟಿಗರಾಗಿ ಏನೂ ಮಾಡುಲು ಸಾಧ್ಯವಿಲ್ಲ..ಅದರಲ್ಲೂ ಕುಡಿದು ಬಂದವರೆದುರು ಮಾತನಾಡುವುದು ಹಂದಿಯ ಮೂಗಿಗೆ ಬಂಗಾರದ ಮೂಕುತ್ತಿ ಇಟ್ಟಂತೆ.

    Reply
  8. Paarvathi cheeranahally

    ನವೀನ್, ನಾನು ಈ ಮೊದಲೆ ತಿಳಿಸಿದಂತೆ ನಿಮ್ಮ ಕೆಲಸದ ಪ್ರಾಮಾಣಿಕತೆಯನ್ನು ಸಂಶಯಿಸುತ್ತಿಲ್ಲ. ದಯವಿಟ್ಟು ಆ ರೀತಿ ಭಾವಿಸಬೇಡಿ. ಆದರೆ, ಅವಸರದಲ್ಲಿ ಎದುರಾಗುವ ಸವಾಲುಗಳನ್ನು ನಿರ್ವಹಿಸುವ ಸಂದರ್ಭದಲ್ಲಿ ಒಂದಿಷ್ಟು ಲೋಪ-ದೋಷಗಳು ಆಗುತ್ತವೆ. ಅದನ್ನು ಒಪ್ಪಿಕೊಳ್ಳಬೇಕಷ್ಟೆ. ನಿಮಗೂ ಅದೇ ರೀತಿ ಆಗಿರಬಹುದು.ಆದರೆ, ನೀವು ಮುಂದಿಡುತ್ತಿರುವ ವಾದ ಸರಣಿ ಹೇಗಿದೆ ಅದುಅಂದ್ರೆ, ನಾನು ತುರ್ತು ಸಂದರ್ಭದಲ್ಲೂ ಎಲ್ಲವನ್ನೂ ಸರಿಯಾಗಿ ಮಾಡಿದ್ದೇನೆ ಎಂಬ ದಾಟಿಯಲ್ಲಿ ಇದೆ. ನೈತಿಕ ಅಹಂ ಸರಿಯಲ್ಲ ಎಂಬುದಷ್ಟೆ ನನ್ನ ಕಳಕಳಿ. ಆದರೂ ನೀವು ಎತ್ತಿರುವ ಪ್ರಶ್ನೆಗಳಿಗೆ ನಾನು ಪ್ರತಿಕ್ರಿಯಿಸುವೆ. ಇದು ವಾದಕ್ಕೋಸ್ಕರ ವಾದ ಎಂದು ಭಾವಿಸಬೇಡಿ.
    ಘಟಿಸುತ್ತಿರುವ ಅಮಾನವೀಯ ಅತ್ಯಾಚಾರ ಕ್ರಿಯೆಯಲ್ಲಿ ನನ್ನ ತಂಗಿಯೇ ಸಂತ್ರಸ್ತಳಾಗಿದ್ದರೆ, ಖಂಡಿತ ನಾನು ಅದನ್ನು ಚಿತ್ರೀಕರಿಸುತ್ತಿರಲಿಲ್ಲ. ದಾಳಿಯನ್ನು ತಡೆಯಲು ಕೈಲಾದ ಮಟ್ಟಿಗೆ ಪ್ರಯತ್ನಿಸುತ್ತಿದ್ದೆ. ದಾಳಿಕೋರರ ನೂರು ಏಟಿಗೆ ಪ್ರತಿಯಾಗಿ ಒಂದು ಏಟನ್ನಾದರೂ ನೀಡುತ್ತಿದ್ದೆ. ಆಕೆ ಬೇರೆಯವಳಾಗಿದ್ದರೆ…. ನನಗೂ ಗೊತ್ತಿಲ್ಲ. ಆದರೂ ನಿಮ್ಮಷ್ಟು ವೃತ್ತಿಪರತೆ, ವೃತ್ತಿ ಧರ್ಮ ಪ್ರದರ್ಶಿಸಲು ನನ್ನಿಂದ ಆಗುತ್ತಿರಲಿಲ್ಲ.
    ಎರಡನೆಯದು 100ರ ಕರೆ ಬಗ್ಗೆ: ನನಗೂ ಪತ್ರಿಕಾ ಕೆಲಸದ ಒಳ ಹೊರಗು ಸ್ವಲ್ಪ ಮಟ್ಟಿಗೆ ತಿಳಿದಿದೆ. ಸಾಮಾನ್ಯವಾಗಿ ಎಲ್ಲ ಕ್ರೈಂ ರಿಪೋರ್ಟರಗಳು ಸಂಬಂಧಿಸಿದ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಸಿಗದಿದ್ದರೆ, ಮೊರೆ ಹೋಗುವುದು 7 ಸಂಖ್ಯೆಯ ನಂಬರ್ ಹೊಂದಿರುವ ಕಂಟ್ರೋಲ್ ರೂಂಗೆ ಹೊರತು, 100ಕ್ಕಲ್ಲ. ಅವಸರದಲ್ಲಿ ನೀವು ಆ ಸಂಖ್ಯೆಗೆ ಕರೆ ಮಾಡಲು ಮರೆತಿರಬಹುದು. ಇನ್ನೂ ಪೊಲೀಸರು ನಿಮ್ಮ ಕರೆ ಸ್ವೀಕರಿಸಿಲ್ಲ ಎಂಬುದರ ತಾತ್ಪರ್ಯ, ನಾನು ಅವರನ್ನು ಸಮರ್ಥಿಸಿದ್ದೇನೆ ಎಂದಲ್ಲ. ಸಾಮಾನ್ಯವಾಗಿ ಹೀಗೆ ಆಗುತ್ತಿರುತ್ತದೆ. ಒಮ್ಮೊಮ್ಮೆ ಪರ್ತಕರ್ತರಿಗೂ ಎಲ್ಲ ಕರೆಗಳನ್ನು ಆ ಕ್ಷಣಕ್ಕೆ(ಕೆಲಸ ಮಾಡುವ ಸಂಸ್ಥೆ 24 ಗಂಟೆ ಚಾಲೂ ಇಟ್ಟುಕೊಂಡಿರಲಿ ಎಂದು ನೀಡಿದ್ದರೂ) ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ಇದು ಹೇಳಿಕೊಳ್ಳುವಂತಹ ಅಪರಾಧ ಎಂಬುದಷ್ಟೇ ನನ್ನ ಗ್ರಹಿಕೆ.
    ಉಳಿದಂತೆ- ವೈಯಕ್ತಿಕವಾಗಿ ಎಲ್ಲ ರೀತಿಯ ಹಲ್ಲೆಗಳೂ ಖಂಡನೀಯ. ಕೆಲ ವಾಹಿನಿಗಳು ಹಸಿ ಹಸಿಯಾಗಿ ಕಳ್ಳನೊಬ್ಬನಿಗೆ ಜನ ಹಲ್ಲೆ ಮಾಡುವುದನ್ನು ತೋರಿಸುತ್ತಾ, ಅದಕ್ಕೆ ಧರ್ಮದೇಟು ಎನ್ನುವುದೇ ಅನೈತಿಕತೆ ಎಂದು ನಂಬಿರುವವನು ನಾನು. ಹಾಗಾಗಿ ದಾಳಿಕೋರರಿಗೆ, ಅದನ್ನು ಬೆಂಬಲಿಸಿದವರಿಗೆ ಕಾನೂನು ಪ್ರಕಾರ ಗರಿಷ್ಠ ಶಿಕ್ಷೆ ಆಗಲಿ ಎಂದು ಬಯಸುವೆ.
    ಕಡೆಯದಾಗಿ ನೀವು ಸೂಕ್ಷ್ಮ ಸಂವೇದನೆಯ ವ್ಯಕ್ತಿ ಎಂದು ಭಾವಿಸಿ ಇತಿಹಾಸವನ್ನು ನೆನಪಿಸುತ್ತಿದ್ದೇನೆ. ಸೂಡನ್ ನ ಭೀಕರ ಬರಗಾಲ(ಮಗು ತಿನ್ನಲು ಕಾಯುತ್ತಿರುವ ಹದ್ದು)ದ ಫೋಟೊ ತೆಗೆದ ಪತ್ರಿಕಾ ಛಾಯಾಗ್ರಾಹಕ ಕೆವಿನ್ ಕಾರ್ಟರ್ಗೆ ತಡವಾಗಿ ಕಾಡಿದ ಪ್ರಜ್ಞೆ ಸ್ವಲ್ಪವಾದರೂ ನಮ್ಮೆಲ್ಲರನ್ನೂ ಕಾಡಲಿ !
    – ಪಾರ್ವತಿ ಚೀರನಹಳ್ಳಿ

    Reply
    1. NAVEEN SOORINJE

      ಪಾರ್ವತಿ ಚೀರನಹಳ್ಳಿಯವರೇ…
      ನೀವು ನನ್ನನ್ನು ತಪ್ಪಿತಸ್ಥ ಎಂದು ನಿರ್ಧರಿಸಿಯೇ ಪ್ರತಿಕ್ರಿಯಿಸುವಂತಿದೆ. ಮೊದಲ ಕಮೆಂಟಿನಲ್ಲಿ ನಿಮಗೆ ಮಂಗಳೂರು ಘಟನೆಯ ಬಗ್ಗೆ ಅರಿವಿಲ್ಲದೆ ಹೇಳುತ್ತಿದ್ದೀರಿ ಎಂದುಕೊಂಡು ಎಲ್ಲಾ ವಿವರಗಳನ್ನು ರಿಪ್ಲೈ ಮಾಡಿದ್ದೇನೆ. ಆದರೆ ಅಷ್ಟೊಂದು ವಿವರ ನೀಡಿದರೂ ನೀವು ಪೊಲೀಸರನ್ನು ಬೆಂಬಲಿಸುತ್ತಿದ್ದೀರಿ ಮತ್ತು ನನ್ನದೇ ತಪ್ಪು ಎನ್ನುತ್ತಿದ್ದೀರಿ. ದಿನದ 24 ಘಂಟೆಯೂ ಎಲ್ಲರಿಗೂ ಫೋನ್ ಕರೆ ಸ್ವೀಕರಿಸಲು ಸಾಧ್ಯವಾಗದೇ ಇದ್ದರೆ ಅದು ಅಪರಾಧ ಅಲ್ಲ. ಆದರೆ ದಾಳಿಯ ಪ್ರಮುಖ ಆರೋಪಿಯ ಫೋನ್ ಕರೆ ಸ್ವೀಕರಿಸಲು ಆಗುತ್ತದೆ ಎಂದರೆ ಪತ್ರಕರ್ತನ ಫೋನ್ ಕರೆ ಸ್ವೀಕರಿಸಲು ಯಾಕೆ ಆಗುವುದಿಲ್ಲ. ಅದಲ್ಲದೆ ಆರೋಪಿಯ ಫೋನ್ ಬಂದ ನಂತರ ಪೊಲೀಸ್ ಅಧಿಕಾರಿ ಹೋಂ ಸ್ಟೆ ಇರುವ ಪಡೀಲ್ ನ ಟವರ್ ವ್ಯಾಪ್ತಿಯಲ್ಲೇ ಇದ್ದರು ಎನ್ನುವುದು ಏನನ್ನು ಹೇಳುತ್ತದೆ.
      ನಾನು 7 ಡಿಜಿಟ್ನ ಕಂಟ್ರೋಲ್ ರೂಂಗೆ ಫೋನ್ ಮಾಡಬೇಕಿತ್ತು ಯಾವಾಗ ಅಂದರೆ ನಾನು ಗೊಂದಲದಲ್ಲಿ ಇರದೇ ಇರುವಾಗ. ಆದರೆ ನಾನು ಇದ್ದಿದ್ದು ಒಂದು ಭಯಾನಕ ಘಟನೆಯನ್ನು ನೋಡುತ್ತಿರುವ ಸಂಧರ್ಭದಲ್ಲಿ. ನನಗೆ ಆ ಸಂಧರ್ಭ ತಕ್ಷಣ ನೆನಪಾಗಿದ್ದು ಪೊಲೀಸ್ ಇನ್ಸ್ ಸ್ಪೆಕ್ಟರ್ ನಂಬರ್. ತಕ್ಷಣ ಅವರ ನಂಬರ್ ಗೆ ಫೋನ್ ಮಾಡಿದ್ದೇನೆ. ಅವರು ತೆಗೆಯಲಿಲ್ಲ. ಅಷ್ಟರಲ್ಲಿ ನನ್ನ ವರದಿಗಾರ ಮಿತ್ರನೊಬ್ಬ ಫೋನ್ ಮಾಡಿದ್ದಾನೆ. ಅವನಿಗೆ ನಾನು ಉದ್ವೇಗಭರಿತ ದ್ವನಿಯಲ್ಲಿ ಎಲ್ಲವನ್ನೂ ವಿವರಿಸಿದ್ದೇನೆ. ಅವನೂ ತಕ್ಷಣ ಪೊಲೀಸರಿಗೆ ಪೋನ್ ಮಾಡಿದ್ದಾನೆ. ಅಷ್ಟರಲ್ಲಿ ನನಗೆ ಪೊಲೀಸ್ ಇನ್ಸ್ ಸ್ಪೆಕ್ಟರ್ ಕಂಡು ಬಂದಿದ್ದಾರೆ. ಮತ್ತೆ ನಾನು ಯಾರಿಗೆ ಯಾಕೆ ಫೋನ್ ಮಾಡಬೇಕು ? ಮತ್ತೊಮ್ಮೆ ಕೇಳುತ್ತಿದ್ದೇನೆ ಒಬ್ಬ ಪೊಲೀಸ್ ಅಧಿಕಾರಿಗೆ ದಾಳಿಯ ಪ್ರಮುಖ ಆರೋಪಿಯ ಫೋನ್ ಕರೆ ಸ್ವೀಕರಿಸಲು ಆಗುತ್ತದೆ ಎಂದರೆ ಪತ್ರಕರ್ತನ ಫೋನ್ ಕರೆ ಸ್ವೀಕರಿಸಲು ಯಾಕೆ ಆಗುವುದಿಲ್ಲ. ಅದಲ್ಲದೆ ಆರೋಪಿಯ ಫೋನ್ ಬಂದ ನಂತರ ಪೊಲೀಸ್ ಅಧಿಕಾರಿ ಹೋಂ ಸ್ಟೆ ಇರುವ ಪಡೀಲ್ ನ ಟವರ್ ವ್ಯಾಪ್ತಿಯಲ್ಲೇ ಇದ್ದರು ಎನ್ನುವುದು ಏನನ್ನು ಹೇಳುತ್ತದೆ.
      ಇಷ್ಟೆಲ್ಲಾ ಹೇಳಿದರೂ ನಿಮಗೆ ಇದ್ಯಾವುದೂ ಅರ್ಥ ಆಗುವುದಿಲ್ಲ. ಯಾಕೆಂದರೆ ನಿಮ್ಮಲ್ಲಿ ಯಾರ ಮಾತನ್ನು ವಿಶಾಲವಾಗಿ ಅರ್ಥ ಮಾಡಿಕೊಳ್ಳುವ ಮನಸ್ಸು ಇಲ್ಲ ಎಂದು ಕಾಣುತ್ತದೆ. ಇಲ್ಲದೇ ಇದ್ದರೆ ವ್ಯಕ್ತಿಯೊಬ್ಬ ನಾಲ್ಕು ನಿಮಿಷದ ಅವದಿಯಲ್ಲಿ ಎಷ್ಟು ಫೋನ್ ಮಾಡಬಹುದು. ಒಂದು ಫೋನ್ ಕಂಪ್ಲೀಟ್ ರಿಂಗ್ ಆಗಬೇಕಾದರೆ ಎಷ್ಟು ಅವದಿ ತೆಗೆದುಕೊಳ್ಳುತ್ತದೆ ಎಂಬ ಕನಿಷ್ಠ ಜ್ಞಾನ ಇದ್ದರೂ ಒಪ್ಪಿಕೊಳ್ಳಲು ಸಿದ್ಧರಿಲ್ಲ. ಆಯಿತು. ನಾನೇ ತಪ್ಪಿತಸ್ಥ ಎಂದೇ ಅಂದುಕೊಳ್ಳೋಣ. ನನ್ನ ಕಾಲ್ ಲೀಸ್ಟ್, ಮಾತುಗಳ ರೆಕಾಡರ್್ ಗಳನ್ನು ಏರ್ ಟೆಲ್ ಆಫೀಸಿನಿಂದ ಪೊಲೀಸರು ಪಡೆದುಕೊಂಡಿದ್ದಾರೆ. ದಾಖಲೆಗಳ ಪರಿಶೀಲನೆ ಮಾಡಿದ್ದಾರೆ. ಆದರೆ ನನ್ನನ್ನು ಇನ್ನೂ ಬಂಧಿಸಿಲ್ಲ. ಕೇಸು ದಾಖಲಿಸಿ ಇಷ್ಟು ಸಮಯವಾದರೂ ಬಂಧಿಸದೇ ಇರುವ ಔಚಿತ್ಯ ಏನು ? ಆದಷ್ಟು ಬೇಗ ಬಂಧಿಸಲಿ. ದಾಖಲೆಗಳನ್ನು ಕೋಟರ್ಿಗೆ ಹಾಜರುಪಡಿಸಲಿ. ಅಷ್ಟೆ…

      Reply
  9. ganesh

    nivu yAke sir pArvati chiranhalli gella vivarane kodtiri sir. avrella manushyatva illade irovru. avrige hodedirodu vishyane alla. nivu shooting madi suddi madidrinda avra sangha da wing ge tondre agirodu bejaru avrige. nimmindagi innastu moral policing agodu kadime agide. nivu madiddu sari ide. parvati chiranahalli yantavarige nimma uttara beda. avarige chiradodaste mukya. chiradtare bidi sir

    Reply
  10. Paarvathi cheeranahally

    ಪ್ರಿಯ ನವೀನ್,
    ನಿಮ್ಮನ್ನು ತಪ್ಪಿತಸ್ಥ ಎಂದು ಖಂಡಿತ ಭಾವಿಸಿಲ್ಲ. ನಿಮ್ಮ ಅನಿಸಿಕೆಯಲ್ಲಿ ಪ್ರಾಮಾಣಿಕತೆ ಇದೆ ಎಂಬುದನ್ನು ಮೊದಲ ಪ್ರತಿಕ್ರಿಯೆಯಲ್ಲಿಯೇ ಹೇಳಿದ್ದೆ. ಇರಲಿ, ನೀವೆ ಹೇಳಿದಂತೆ ನನಗೆ ಮಂಗಳೂರು ಘಟನೆ ಬಗ್ಗೆ ಅಷ್ಟೊಂದು ಅರಿವಿಲ್ಲ. ಪೊಲೀಸರು ಮತ್ತು ಪ್ರಭುತ್ವವನ್ನು ನಾನೂ ಅನುಮಾನದಿಂದಲೇ ನೋಡುವೆ. ನಿಮ್ಮ ವಾದವನ್ನು ಒಪ್ಪುವೆ. ನಿಮಗೆ ಒಳ್ಳೆಯದಾಗಲಿ.
    ಎಲ್ಲ ಮತ ಧರ್ಮಗಳ ಕೋಮುವಾದಿಗಳು ಹಾಗೂ ಆ ಕೋಮುವಾದಿಗಳನ್ನು ದ್ವೇಷಿಸುವ ಭರದಲ್ಲಿ ತಾವೇ, ಮತ್ತೊಂದು ರೀತಿಯ ಮೂಲಭೂತವಾದಿಗಳಾಗಿ ಪರಿವರ್ತನೆಗೊಂಡಿರುವ ವ್ಯಾಧಿಗಳಿಂದ ಮಂಗಳೂರನ್ನು ರಕ್ಷಿಸಿ. ಮಾನವ ಪ್ರೇಮಿಗಳು, ಮನುಷ್ಯವಾದಿಗಳ ಸಂತಾನ ಅಲ್ಲಿ ಹೆಚ್ಚಲಿ. ನಿಮ್ಮೊಂದಿಗಿನ ಆರೋಗ್ಯಕರ ಚರ್ಚೆ ತುಸು ಸಮಾಧಾನ ತಂದಿದೆ. ಅದಕ್ಕಾಗಿ ಧನ್ಯವಾದಗಳು.
    ಪುತಿನ ಅವರದೊಂದು ಮಾತು – ಕವಿ/ಲೇಖಕನಾದವನಿಗೆ ಯಾವುದೇ ವಿಷಯದ ಕುರಿತು ನಂಟು ಮತ್ತು ನಿರಾಕರಣೆ- ಎರಡೂ ಇರಬಾರದು. ಪತ್ರಕರ್ತನಿಗೂ ಇದು ಅನ್ವಯಿಸಿದರೆ ಚೆಂದ.
    – ಪಾರ್ವತಿ ಚೀರನಹಳ್ಳಿ

    Reply
  11. sahana

    Paarvathi cheeranahally, She got wrong information on ಕೆವಿನ್ ಕಾರ್ಟರ್…
    ಸೂಡನ್ ನ ಭೀಕರ ಬರಗಾಲ(ಮಗು ತಿನ್ನಲು ಕಾಯುತ್ತಿರುವ ಹದ್ದು)ದ ಫೋಟೊ ತೆಗೆದ ಪತ್ರಿಕಾ ಛಾಯಾಗ್ರಾಹಕ ಕೆವಿನ್ ಕಾರ್ಟರ್ಗೆ ತಡವಾಗಿ ಕಾಡಿದ ಪ್ರಜ್ಞೆ ಸ್ವಲ್ಪವಾದರೂ ನಮ್ಮೆಲ್ಲರನ್ನೂ ಕಾಡಲಿ ! Please read more about ಕೆವಿನ್ ಕಾರ್ಟರ್…dont spread false information

    Reply

Leave a Reply to Paarvathi cheeranahally Cancel reply

Your email address will not be published. Required fields are marked *