ವರ್ತಮಾನದ ಓದುಗ ಮಿತ್ರರೇ,

ನಾನು ಇಲ್ಲಿ ಪ್ರಸ್ತಾಪಿಸಲಿರುವ ವಿಚಾರ ಇಲ್ಲಿಯವರೆಗೆ ನಾನು ಬರೆಯದಿದ್ದರೂ ನಿಮ್ಮಲ್ಲಿಯ ಬಹಳಷ್ಟು ಸೂಕ್ಷ್ಮ ಓದುಗರ ಅರಿವಿಗೆ ಈಗಾಗಲೆ ಬಂದಿರುತ್ತದೆ. ಆದರೂ ಎಲ್ಲರಿಗೂ ಮತ್ತು ಹೊಸದಾಗಿ ನಮ್ಮ ವರ್ತಮಾನ.ಕಾಮ್‌ನ ಓದುಗರಾಗುತ್ತಿರುವವರ ಅರಿವಿಗೂ ಬರಲಿ ಎಂದು ಕೆಲವೊಂದು ಸ್ಪಷ್ಟನೆ ಮತ್ತು ಒಂದೆರಡು ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸುತ್ತೇನೆ.

ವರ್ತಮಾನ.ಕಾಮ್‌ಗೆ ಒಂದು ವರ್ಷ ತುಂಬಿದ ಬಗ್ಗೆ ಇತ್ತೀಚೆಗೆ ತಾನೆ ಬರೆದಿದ್ದೆ. ಈ ಒಂದು ವರ್ಷದಲ್ಲಿ 460 ಕ್ಕೂ ಹೆಚ್ಚು ಲೇಖನಗಳು ನಮ್ಮಲ್ಲಿ ಪ್ರಕಟವಾಗಿವೆ. (ಇಂದಿನವರೆಗೆ 479.) ನಮ್ಮ ಲೇಖಕರ ಬಳಗದಲ್ಲಿರುವ ಯಾರಿಗೂ ನಾವು ಸಂಭಾವನೆ ನೀಡಿಲ್ಲ. ಹಾಗೆ ನೀಡುವ ಸಂಭಾವ್ಯವೂ ಇಲ್ಲ. ವರ್ತಮಾನ ಆರಂಭಿಸಿದಾಗ ಬರೆದ ಪೀಠಿಕೆಯಂತೆ ಮುಖ್ಯವಾಹಿನಿ ಮಾಧ್ಯಮದಲ್ಲಿ ಪ್ರಸ್ತಾಪವಾಗದ ಮತ್ತು ಪ್ರಾಮುಖ್ಯ ಪಡೆಯದ ವಿಷಯಗಳ ಬಗ್ಗೆ ಮತ್ತು ಅಂತರ್ಜಾಲ ಮಾಧ್ಯಮವನ್ನು ಬಳಸಿಕೊಂಡು ಜನಪರ, ಪ್ರಗತಿಪರ, ಪ್ರಜಾಪ್ರಭುತ್ವಪರವಾದ ಪರ್ಯಾಯ ಮಾಧ್ಯಮವೊಂದರ ಸಾಧ್ಯತೆಯನ್ನು ಹುಡುಕುವುದು ನಮ್ಮ ಆಶಯ. ಆ ಆಶಯಕ್ಕೆ ಪೂರಕವಾಗಿ ನಮ್ಮ ಅನೇಕ ಸಮಾನಮನಸ್ಕ ಸ್ನೇಹಿತರು ಮತ್ತು ಹಿರಿಯರು ವರ್ತಮಾನಕ್ಕೆ ಬರೆಯುತ್ತಾ ಬರುತ್ತಿದ್ದಾರೆ. ನಿಮಗೆ ಗೊತ್ತಿರುವ ಹಾಗೆ ಅವರೆಲ್ಲ ವರ್ತಮಾನ.ಕಾಮ್‌ಗೆಂದೇ ಬರೆಯುವ ಬರಹಗಳು ಇವು. ಇದನ್ನು ಸಶಕ್ತವಾದ ಮಾಧ್ಯಮವಾಗಿ ಮತ್ತು ವೇದಿಕೆಯಾಗಿ ಬೆಳೆಸಬೇಕೆನ್ನುವ ತುಡಿತ ಮತ್ತು ಬದ್ಧತೆ ಇವರೆಲ್ಲರಲ್ಲಿ ಇದೆ. ಹಾಗಾಗಿಯೆ ನನ್ನೆಲ್ಲ ಧನ್ಯವಾದಗಳು ಮತ್ತು ಕೃತಜ್ಞತೆಗಳು ಅವರಿಗೆ ಸಲ್ಲುತ್ತವೆ ಸಹ. (ಕೆಲವು ಪತ್ರಿಕೆಗಳಲ್ಲಿ ಪ್ರಕಟವಾದ ಬರಹಗಳು ಆಗಾಗ ಇಲ್ಲಿಯೂ ಪ್ರಕಟವಾಗಿವೆ. ವಿಶೇಷ ಸಂದರ್ಭದಲ್ಲಿ ಬಿಟ್ಟು ಇನ್ನು ಮೇಲೆ ಹಾಗಾಗುವ ಸಾಧ್ಯತೆಗಳು ಕಮ್ಮಿ.)

ಮತ್ತು, ನಮ್ಮಲ್ಲಿ ಪ್ರಕಟವಾದ ಅನೇಕ ಬರಹಗಳು ನಾಡಿನ ಅನೇಕ ಕಡೆ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುತ್ತವೆ.  ಇದರ ಬಗ್ಗೆ ನಮ್ಮ ಅನೇಕ ಓದುಗರು ಆಗಾಗ ತಿಳಿಸುತ್ತಿರುತ್ತಾರೆ ಸಹ. ಆದರೆ ಕೆಲವು ಓದುಗರು ತಿಳಿಸಿದಂತೆ ಇಂತಹ ಹಲವು ಕಡೆ ಲೇಖಕರ ಹೆಸರೂ ಇಲ್ಲದೆ ಈ ಲೇಖನಗಳು ಪ್ರಕಟಗೊಂಡಿರುತ್ತವೆ. ಮತ್ತು ಬಹಳಷ್ಟು ಕಡೆ ವರ್ತಮಾನ.ಕಾಮ್‌ನ ಹೆಸರೂ ಪ್ರಸ್ತಾಪವಾಗಿರುವುದಿಲ್ಲ. ಇದು ಒಂದು ರೀತಿಯಲ್ಲಿ ಸರಿಯಲ್ಲಾ ಎಂದೇ ಇತ್ತೀಚೆಗೆ ನಾವು ಪಕ್ಕದಲ್ಲಿರುವ ಈ ಸೂಚನೆಯನ್ನು ಪ್ರಕಟಿಸಬೇಕಾಯಿತು. ನಮ್ಮಲ್ಲಿಯ ಅನೇಕ ಲೇಖಕರಿಗೆ ವರ್ತಮಾನ.ಕಾಮ್‌ನಲ್ಲಿ ಬರುವ ಲೇಖನಗಳು ಬೇರೆಡೆಯ ಸ್ಥಳೀಯ ಪತ್ರಿಕೆಗಳಲ್ಲಿ ಬಂದರೆ ಸಮಸ್ಯೆಯೇನೂ ಇಲ್ಲ. ಪ್ರಕಟಿಸಿ. ನಮಗೂ ಒಂದು ಸಾಲು ಬರೆದು ತಿಳಿಸಿ. ಆದರೆ ಲೇಖಕರ ಹೆಸರು ಇಲ್ಲದೆ ಪ್ರಕಟಿಸಬೇಡಿ. ಮತ್ತು ನೀವು ಲೇಖಕರಿಂದ ವಿಶೇಷ ಅನುಮತಿ ಪಡೆಯದೆ ಇದ್ದ ಪಕ್ಷದಲ್ಲಿ ವರ್ತಮಾನ.ಕಾಮ್ ಅನ್ನು ಹೆಸರಿಸಲು ಮರೆಯಬೇಡಿ. ಮೊದಲೇ ಹೇಳಿದಂತೆ ಇವರೆಲ್ಲ ಇಲ್ಲಿಗೆಂದೇ ಬರೆಯುವವರು. ನೀವು ವರ್ತಮಾನ.ಕಾಮ್ ಅನ್ನು ಉಲ್ಲೇಖಿಸಿದಷ್ಟೂ ಈ ವೇದಿಕೆಗೆ ಬಲವೂ ಮೌಲ್ಯವೂ ಹೆಚ್ಚುತ್ತಾ ಹೋಗುತ್ತದೆ.  ಪ್ರಕಾಶಕ ಮತ್ತು ಪತ್ರಕರ್ತ ಮಿತ್ರರು ದಯವಿಟ್ಟು ಸಹಕರಿಸಿ.

ಇನ್ನು ನಮ್ಮಲ್ಲಿಯ ಲೇಖನಗಳಿಗೆ ಸ್ಪಂದಿಸಿ ಕಾಮೆಂಟು ಹಾಕುವವರ ಬಗ್ಗೆ. ಕಳೆದ ವರ್ಷದಲ್ಲಿ ಸುಮಾರು ಸಾವಿರ+ ಕಾಮೆಂಟುಗಳು ಪ್ರಕಟವಾಗಿವೆ. ನಮ್ಮಲ್ಲಿ ಬಂದ ಹಲವಾರು ಸೂಕ್ಷ್ಮ ಮತ್ತು ವಿವಾದಾತ್ಮಕ ವಿಷಯಗಳಿಗೆ ಕಾಮೆಂಟು ಹಾಕುವಾಗಲೂ ನಮ್ಮ ಓದುಗರು ಅತೀವ ಗಾಂಭೀರ್ಯ ಮತ್ತು ಘನತೆಯಿಂದ ಪ್ರತಿಕ್ರಿಯಿಸಿದ್ದಾರೆ. ಆ ಇಡೀ ವರ್ಷದಲ್ಲಿ ಕೇವಲ ಇಪ್ಪತ್ತು ಚಿಲ್ಲರೆ ಅಭಿಪ್ರಾಯಗಳನ್ನು ಮಾತ್ರ ತಡೆ ಹಿಡಿಯಲಾಯಿತು ಎಂದರೆ ಅದು ವರ್ತಮಾನದ ಓದುಗರ ಅಭಿರುಚಿ ಮತ್ತು ಘನತೆಯನ್ನು ತೋರಿಸುತ್ತದೆ. ಅನೇಕ ವೆಬ್‌ಸೈಟ್‌ಗಳನ್ನು ಮತ್ತು ಅವುಗಳಲ್ಲಿಯ ವಿವಾದಾತ್ಮಕ ಲೇಖನಗಳಿಗೆ ಬರುವ ಅನಾಗರೀಕ ಕಾಮೆಂಟುಗಳನ್ನು ಕಂಡಿರುವ ನನಗೆ ವರ್ತಮಾನದ ಓದುಗರ ಮತ್ತು ಕಾಮೆಂಟುದಾರರ ಬಗ್ಗೆ ವಿಶೇಷ ಅಭಿಮಾನ ಮೂಡುತ್ತದೆ. ಇಲ್ಲಿ ಅನಾಮಿಕವಾಗಿ ಮತ್ತು ಕೆಟ್ಟದಾಗಿ ಪ್ರತಿಕ್ರಿಯಿಸಬೇಕು ಎಂದುಕೊಂಡವರಿಗೂ ಇಲ್ಲಿ ಎದ್ದು ಕಾಣುವ ಘನತೆ ಸೂಕ್ಷ್ಮವಾಗಿ ಎಚ್ಚರಿಸುತ್ತದೆ ಎನ್ನಿಸುತ್ತದೆ.

ಆದರೆ, ವಾರದಿಂದ ಈಚೆಗೆ ಇದು ಬದಲಾಗುತ್ತಿದೆ. ವಿಶೇಷವಾಗಿ ಮಂಗಳೂರಿನ ಹೋಮ್‌ಸ್ಟೇ ಘಟನೆ ನಮ್ಮ ವರ್ತಮಾನ.ಕಾಮ್‌ನಲ್ಲಿ ಹೆಚ್ಚುಹೆಚ್ಚು ಪ್ರಸ್ತಾಪವಾದಷ್ಟೂ. ಇದು ಒಂದು ವರ್ಗದ ಓದುಗರಿಗೆ ಸಹಿಸಿಕೊಳ್ಳಲಾಗದಷ್ಟು ಕಿರಿಕಿರಿ ನೀಡುತ್ತಿದೆ ಎನ್ನಿಸುತ್ತಿದೆ. ಹಾಗಾಗಿ ತಮ್ಮ ಪ್ರತಿಕ್ರಿಯೆಗಳಲ್ಲಿ ತೂಕ ತಪ್ಪುವಂತಹ ಪದಗಳನ್ನು ಉಪಯೋಗಿಸುತ್ತಿದ್ದಾರೆ. ಮತ್ತು ವಿರೋಧಿಸಲೇಬೇಕು ಎನ್ನುವ ಕಾರಣದಿಂದಾಗಿ ಎಚ್ಚರ ತಪ್ಪಿ ಪ್ರತಿಕ್ರಿಯಿಸುತ್ತಿದ್ದಾರೆ. ವಿರೋಧ ಮತ್ತು ಅಭಿಪ್ರಾಯಗಳು ಎಲ್ಲಿಯವರೆಗೆ ನಾಗರೀಕ ಭಾಷೆಯಲ್ಲಿ ಮತ್ತು ಅವೈಯಕ್ತಿಕ ನೆಲೆಯಲ್ಲಿ ಇರುತ್ತದೊ ಅಲ್ಲಿಯವರೆಗೂ ಅವನ್ನು ತಡೆಹಿಡಿಯಬಾರದು ಎನ್ನುವುದು ನನ್ನ ನಿಲುವು. ಹಾಗಾಗಿಯೆ ಇತ್ತೀಚಿನ ಕೆಲವು ಕೆಟ್ಟ ಭಾಷೆಯ ಮತ್ತು ವೈಯಕ್ತಿಕ ದಾಳಿಯ ಕಾಮೆಂಟುಗಳನ್ನು ತಡೆಹಿಡಿಯಲಾಗಿದೆ. ದಯವಿಟ್ಟು ಇಂತಹ ಕಾಮೆಂಟು ಹಾಕಿರುವ ಮತ್ತು ಹಾಕಲಿರುವ ಓದುಗರು ಗಮನಿಸಬೇಕು: ವ್ಯರ್ಥವಾಗುವ ಸಮಯ ಮತ್ತು ಶ್ರಮ ನಿಮ್ಮದೇ.

ನೆನ್ನೆ ತಡೆಹಿಡಿಯಲಾದ ಕಾಮೆಂಟ್‌ನ ಒಂದು ಭಾಗ ಹೀಗಿದೆ:  “ಮಂಗಳೂರಿನಲ್ಲಿ ಕೆಲವೇ ಪುಂಡರು ನಡೆಸಿದ ಘಟನೆಯ ಬಗ್ಗೆ ದಿನಗಟ್ಟಲೆ ಚರ್ಚೆಮಾಡುವ, ಪುಟಗಟ್ಟಲೆ ಬರಿಯುವ “ವರ್ತಮಾನ” ಪತ್ರಿಕೆಗೆ ಅಸ್ಸಾಂ, ಮುಂಬೈ ಘಟನೆ ಕಾಣಿಸುದಿಲ್ಲವೆ? ಇದೆನಾ ಜಾತ್ಯತೀತತೆ? ಇದೆನಾ ಸಮಾನತೆ? ಇದೆನಾ ಪತ್ರಿಕಾಧರ್ಮ?” ಇದಕ್ಕೆ ಉತ್ತರಿಸುವ ಮೂಲಕ ನಮ್ಮ ಎಲ್ಲಾ ಓದುಗರಿಗೂ ಒಂದು ವಿಷಯ ಹೇಳಿದಂತಾಗುತ್ತದೆ ಎನ್ನುವ ಕಾರಣಕ್ಕೆ ಇದಕ್ಕೆ ಇಲ್ಲಿ ಉತ್ತರಿಸುತ್ತಿದ್ದೇನೆ. ಈ ಲೇಖನದ ಆರಂಭದಲ್ಲಿಯೇ ಹೇಳಿದಂತೆ ನಮ್ಮ ಬಳಗದ ಲೇಖಕರ ಸಮಯ, ಸಂದರ್ಭ, ಕಾಳಜಿ, ಅಭಿರುಚಿ, ಆಶಯಗಳ ಒಟ್ಟು ಆಧಾರದ ಮೇಲೆ ಇಲ್ಲಿ ಲೇಖನಗಳು ಪ್ರಕಟವಾಗುತ್ತವೆ. ಇಂತಹ ವಿಷಯದ ಬಗ್ಗೆ ಬರೆಯಿರಿ ಎಂದು ನಾವು ಸೂಚಿಸುವುದು ಬಹುತೇಕ ಇಲ್ಲವೇ ಇಲ್ಲ ಅಥವ ಅಪರೂಪ. ಮಂಗಳೂರಿನ ಘಟನೆ ಬಗ್ಗೆ ನಮ್ಮಲ್ಲಿ ಹೆಚ್ಚಿಗೆ ಬರೆಯುತ್ತಿರುವವರು ನವೀನ್ ಸೂರಿಂಜೆ. ಅವರು ಕಳೆದ ಆರು ತಿಂಗಳಿನಿಂದಲೂ ನಮ್ಮಲ್ಲಿ ಬರೆಯುತ್ತಿದ್ದಾರೆ. ಈ ಹೋಮ್‍ಸ್ಟೇ ಘಟನೆಯಲ್ಲಿ ಅವರು ಪ್ರತ್ಯಕ್ಷದರ್ಶಿಯೂ ಆಗಿರುವ ಕಾರಣ ಮತ್ತು ದಕ್ಷಿಣ ಕನ್ನಡದಲ್ಲಿ ಹೇಗೆ ಸರ್ಕಾರ ಮತ್ತು ಆಡಳಿತಾಂಗ ಕೋಮುವಾದಿಗಳೊಂದಿಗೆ ಶಾಮೀಲಾಗಿ ಪರ್ಯಾಯ ಆಡಳಿತ ಮತ್ತು ಅನಾರೋಗ್ಯಕರ ಸಾಮಾಜಿಕ ಸಂದರ್ಭವನ್ನು ಸೃಷ್ಟಿಸುತ್ತಿದೆ ಎನ್ನುವ ಕಾರಣಕ್ಕೆ ಹೋಮ್‌ಸ್ಟೇ ದಾಳಿಯ ಬಗ್ಗೆ ಬರೆಯುತ್ತಿದ್ದಾರೆ. ಮತ್ತು ಒಂದು ಬರಹದಿಂದ ಹುಟ್ಟುವ ಮತ್ತಷ್ಟು ಪ್ರಶ್ನೆಗಳಿಗೆ ಉತ್ತರ ಮತ್ತು ವಿವರಣೆ ನೀಡುವ ಕೆಲಸ ಮಾಡುತ್ತಿದ್ದಾರೆ. ಅಸ್ಸಾಂ ಮತ್ತು ಮುಂಬೈ ಘಟನೆಗಳ ಬಗ್ಗೆ ಬರೆಯಲು ನಮ್ಮ ಬಳಗದ ಲೇಖಕರಿಗೆ ಬಹುಶಃ ಅದು ಕನ್ನಡ ಮತ್ತು ಕರ್ನಾಟಕದ ನಮ್ಮ ಸಂದರ್ಭಕ್ಕೆ ಪ್ರಸ್ತುತ ಅನ್ನಿಸಿಲ್ಲ,  ಅಥವ ಅದರ ಬಗ್ಗೆ ಬರೆಯಲು ಅವರಿಗೆ ಆ ವಿಷಯದ ಬೇರೆಬೇರೆ ಆಯಾಮಗಳು ತಿಳಿದಿಲ್ಲ, ಅಥವ ಮುಖ್ಯವಾಗಿ ಸಮಯ ಆಗುತ್ತಿಲ್ಲ. ಯಾರಾದರೂ ಬರೆದು ಕಳುಹಿಸಿದ ಸಂದರ್ಭದಲ್ಲಿ ಮತ್ತು ಅದು ವರ್ತಮಾನ.ಕಾಮ್‌ನ ಆಶಯಕ್ಕೆ ಪೂರಕವಾಗಿದ್ದಲ್ಲಿ ಅದನ್ನು ಪ್ರಕಟಿಸದೇ ಇರಲು ಯಾವುದೇ ಕಾರಣಗಳಿಲ್ಲ. ಮೊದಲೇ ಹೇಳಿದಂತೆ ನಮ್ಮ ಬಳಗದ ಲೇಖಕರು ನಮ್ಮ ರಾಜಕೀಯ-ಸಾಮಾಜಿಕ-ಆರ್ಥಿಕ ವಿದ್ಯಮಾನಗಳಿಗೆ ಪ್ರಸ್ತುತ ಎನ್ನಿಸಿದ ವಿಷಯಗಳ ಬಗ್ಗೆ ತಮ್ಮ ಬಿಡುವಿನ ಸಮಯದಲ್ಲಿ ಬರೆಯುತ್ತಾರೆ. ನಮ್ಮ ಲೇಖಕರ ಬಳಗ ಹೆಚ್ಚುಹೆಚ್ಚು ದೊಡ್ಡದಾದಷ್ಟೂ ಎಲ್ಲಾ ಪ್ರಸ್ತುತ ವಿಷಯಗಳ ಬಗ್ಗೆ ವರ್ತಮಾನ.ಕಾಮ್‌ನಲ್ಲಿ ಲೇಖನಗಳು ಪ್ರಕಟವಾಗುತ್ತವೆ. ಆ ದಿನಗಳನ್ನು ಹತ್ತಿರ ಮಾಡಿಕೊಳ್ಳುವ ಸವಾಲು ನಮ್ಮ ಬಳಗದ ಮೇಲಿದೆ.

ಈ  ನಿಟ್ಟಿನಲ್ಲಿ ಎಲ್ಲರ (ಓದುಗರ, ಕಾಮೆಂಟುದಾರರ, ಬರಹಗಾರರ, ಪ್ರಕಾಶಕರ) ಸಹಕಾರ ಬಯಸುತ್ತಾ…

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

8 Comments for this entry

 • anand prasad says:

  ಧಾರ್ಮಿಕ ಮೂಲಭೂತವಾದವನ್ನು ವಿರೋಧಿಸುವವರನ್ನು ವಿರೋಧಿಸಲು ಅದರ ಅಮಲಿಗೆ ಸಿಲುಕಿರುವವರು ವೈಯಕ್ತಿಕ ನಿಂದನೆಗೆ ಇಳಿಯುತ್ತಾರೆ, ವಿತಂಡವಾದವನ್ನು ಮಾಡುತ್ತಾರೆ. ಸೈದ್ಧಾಂತಿಕವಾಗಿ, ವಿಷಯಾಧಾರಿತವಾಗಿ ಎದುರಿಸಲು ಆಗದೆ ಇರುವಾಗ ವೈಯಕ್ತಿಕ, ಕೀಳು ಮಟ್ಟದ ನಿಂದನೆಗೆ ಇಳಿಯುತ್ತಾರೆ ಮತ್ತು ಕೆಲವು ಸಲ ದೈಹಿಕ ಹಲ್ಲೆಗೂ ಮುಂದಾಗುತ್ತಾರೆ. ಧರ್ಮ, ದೇವರು, ಸಂಪ್ರದಾಯಗಳ ವಿಷಯ ಬಂದಾಗ ಇದು ತೀವ್ರವಾಗುತ್ತದೆ. ಧರ್ಮದ ಅಮಲು ಎಷ್ಟು ತೀವ್ರವಾದದ್ದೆಂದರೆ ಭಾರತದ ವಿಭಜನೆ ಆದಾಗ ಧರ್ಮದ ಹೆಸರಿನಲ್ಲಿ ಆದ ಸಾವಿನ ಸಂಖ್ಯೆ ಐದರಿಂದ ಹತ್ತು ಲಕ್ಷ ಎಂದು ಅಂದಾಜಿಸಲಾಗಿದೆ. ಈ ಹತ್ಯೆಗಳನ್ನು ಪ್ರಚೋದಿಸಿದ್ದು ಧಾರ್ಮಿಕ ಮೂಲಭೂತವಾದಿ ಸಂಘಟನೆಗಳು. ಒಟ್ಟಿಗೆ ಬಾಳುತ್ತಿದ್ದ ಜನರು ಪರಸ್ಪರ ಹೊಡೆದಾಡಿ ಸಾಯುತ್ತಾರೆ ಎಂದರೆ ಮೂಲಭೂತವಾದದ ಅಮಲು ಎಷ್ಟು ತೀವ್ರವಾಗಿರುತ್ತದೆ ಮತ್ತು ಮನುಷ್ಯನ ಆಲೋಚನಶಕ್ತಿಯನ್ನೇ ಹೇಗೆ ನಾಶ ಮಾಡುತ್ತದೆ ಎಂದು ತಿಳಿಯಬಹುದು.

  • Avinash says:

   ಭಾರತದ ವಿಭಜನೆ ಆಗಿದ್ದೆ ಧರ್ಮ ಆಧಾರಿತವಾಗಿ ಅಂದ ಮೇಲೆ ಗಲಭೆ ಆಗದೆ ಇರುತ್ತದೆಯೇ ? ಅಲ್ಲಿಗೆ ವಿಭಜನೆ ಮಾಡಿದವರೇ ಅದಕ್ಕೆ ಹೊಣೆ ಎಂದು ಆಯಿತಲ್ಲವೇ?

   • anand prasad says:

    ದೇಶ ವಿಭಜನೆಗೆ ಕಾರಣ ಧಾರ್ಮಿಕ ಮೂಲಭೂತವಾದ. ಇದು ಎರಡೂ ಧರ್ಮದ ಮೂಲಭೂತವಾದಿಗಳಿಗೂ ಅನ್ವಯವಾಗುತ್ತದೆ. ಮೂಲಭೂತವಾದದಿಂದ ವಿದ್ಯಾವಂತರು ಹೊರಬರಬೇಕು ಆಗ ಮಾತ್ರ ಇಂಥ ಕ್ರೌರ್ಯಗಳಿಂದ ದೇಶಕ್ಕೆ ಮುಕ್ತಿ ಸಿಕ್ಕೀತು.

 • shreepadu says:

  ರವಿಕೃಷ್ಣ ರೆಡ್ಡಿಯವರೇ ,

  ಇಲ್ಲಿ ಓದುಗರ ಮತ್ತು ಕಮೆಂಟಿಗರ ಜೊತೆ ಜೊತೆಗೆ ಬರಹಗಾರನಿಗೂ ಕೂಡ ಒಂದಿಷ್ಟು ಬದ್ದತೆಗಳು ಇರಬೇಕಾಗುತ್ತದಲ್ಲವೇ ??. ಯಾವುದೆಲ್ಲಾ ಪ್ರಗತಿಪರ ಮತ್ತು ಯಾವುದೆಲ್ಲ ಪ್ರಗತಿ ವಿರೋಧಿ ಹೇಳಿ ಕೇವಲ ಮೂರು ಮತ್ತೊಂದು ಜನ ಕುಳಿತು ತೀರ್ಮಾನಿಸುವ ವಿಷಯವಲ್ಲ. ಅದು ಸಾಪೇಕ್ಷ.
  ಹಾಗೆಯೇ ಗುಜರಾತ್ ಕೊಮುಗಲಭೆಯನ್ನ ಹತ್ತು ವರುಷ ಉಸಿರುಕಟ್ಟಿಕೊಂಡು ಮರ್ಧಿಸಿದ ಪತ್ರಕರ್ತರು , ಅಸ್ಸಾಂ ಬಗ್ಗೆ ಏನು ಹೇಳುತ್ತಾರೆ ಎಂದು ಕೇಳುವ ಅಪೇಕ್ಷೆ ಓದುಗ ವರ್ಗದಲ್ಲಿ ಸಹಜ. ಅದರಲ್ಲಿ ತಪ್ಪೇನು?? ಅವಾಗ ಪುರುಸೊತ್ತಾದ ಪತ್ರಕರ್ತರು ಈ ವಿಷಯ ಬಂದಾಗ ಸಡನ್ ಆಗಿ ಬ್ಯುಸಿ ಅಗಿಬಿಡುತ್ತಾರೆಂದರೆ , ನಿಮ್ಮ ಪತ್ರಿಕಾಧರ್ಮವನ್ನು ಸಂಶಯಿಸಬೇಕಾದ್ದೆ.ಪೊಲೀಸರು ಬಂದಾಗ ಪಕ್ಕನೆ ಕಾಣೆಯಾಗಿಬಿಡುವ ಮೆಜೆಸ್ಟಿಕ್ ವೈಶ್ಯೆಯರಂತಗಬಾರದು ಬರಹಗಾರನ ನಿಲುವುಗಳು.

  ಮತ್ತೊಂದು , ಹೇಗೆ ಕಮೆಂಟಿಗನ ಅಕ್ಷರಗಳ ಮತಿ ತಪ್ಪಬಾರದೋ, ಹಾಗೆ ಬರಹಗಾರನದ್ದೂ ಕೂಡ , ನಿಮಗೆ ಒಂದು ಸಿದ್ದಾಂತದ ಜೊತೆಗೆ ವಿರೋಧವಿದ್ದರೆ , ತಾತ್ವಿಕ ತಳಹದಿಯಲ್ಲಿ ಎದುರಿಸಿ. ವೈಯುಕ್ತಿಕ ನಿಂದನೆಗೆ ನೀವೇಕೆ ಎಳೆಸುತ್ತೀರಿ. ಉದಾಹರಣೆಗೆ. ನೀವು ಅವರಿಗೆ ಚಡ್ಡಿಗಳು ಎಂದರೆ ಅವರಿಗೆ , ಅವರು ನಿಮ್ಮನ್ನ ಕಾಚಗಳು ಅನ್ನುತ್ತಾರೆ ಅಷ್ಟೇ.for every action there is equal and opposite reaction.

  ಎಂದಿಗೂ ಬರಹಗಾರನಗುವ ಅಪೇಕ್ಷ ಇಲ್ಲದ ಓದುಗವರ್ಗವಿದೆ. ಪತ್ರಕರ್ತರು ಸ್ವತಂತ್ರ ನೆಲೆಯಲ್ಲಿ ತಾವು ತಮ್ಮನ್ನ ನ್ಯಾಯಾಂಗ , ನಾವು ಬರದದ್ದೇ ಪರಮಾನ್ನ ಎಂದುಕೊಳ್ಳುವ ಭ್ರಮೆ ಕೂಡ ಕಡಿಮೆಯಾಗಬೇಕಾಗಿರುವುದು ಸಮಾನಾಂತರ ಅಗತ್ಯತೆ

 • rajses says:

  ಶ್ರೀಪಾದೂ… ಅಸ್ಸಾಂ ಬಗ್ಗೆ ಚೆಡ್ಡಿಗಳು ಹೇಳಿದ್ದನ್ನೇ ನಂಬೋವಷ್ಟು ಮುಠ್ಠಾಳರಲ್ಲ ಕಣಪ್ಪ ಜನ.. ಅಸ್ಸಾಂನಲ್ಲಿನ ವಲಸೆ ಸಮಸ್ಯೆಯನ್ನು ಕೇವಲ ಹಿಂದೂ-ಮುಸ್ಲಿಂ ಅಂತ ಪ್ರಚಾರ ಮಾಡುವುದು ಮತಭ್ರಾಂತ ಚೆಡ್ಡಿಗಳೆಗೇ ಪ್ರೀತಿ. ವಾಸ್ತವದಲ್ಲಿ ಅಸ್ಸಾಂನ ಭೂಸಮಸ್ಯೆಯೇ ಬೇರೆಯೇ ಆಯಾಮ ಹೊಂದಿರುವಂತದ್ದು. ಇದನ್ನು ಮೊನ್ನೆ ಜನಶ್ರೀ ಟೀವಿಯ ಪ್ಯಾನೆಲ್ ಚರ್ಚೆಯಲ್ಲಿ ಅಸ್ಸಾಂನ ವಿಶ್ಲೇಷಕ ಸಂಜಯ್ ಹಜಾರಿಕಾ ಅನ್ನೋರು ಮನಮುಟ್ಟುವಂತೆ ಹೇಳೀದರು. ಅಸ್ಸಾಂನಲ್ಲಿ ಅಸ್ಸಾಮಿಗರಾಗಿರುವ ಗೋರಿಯಾ ಎಂದು ಕರೆಯಲ್ಪಡುವ ಅಸ್ಸಾಮಿ ಮುಸ್ಲಿಮರಿದ್ದಾರೆ. ಹೊರಗಿನಿಂದ ಬಂದ ಬಂಗಾಳಿಗರಿದ್ದಾರೆ. ಇವರಲ್ಲಿ ಮುಸ್ಲಿಮರೂ ಉಂಟು ಹಿಂದೂಗಳೂ ಉಂಟು. ಬೋಡೋಗಳಿಗೆ ಸಮಸ್ಯೆ ಇರುವುದು ಕೇವಲ ಮುಸ್ಲಿಮರ ಜೊತೆಗಲ್ಲ, ಇನ್ನಿತರ ಆದಿವಾಸಿ ಗುಂಪುಗಳು, ಮತ್ತು ಬಂಗಾಳಿ ನುಸುಳುಕೋರರ ಜೊತೆ ಅವರ ಸಂಘರ್ಷವಿದೆ. ಇದು ಬೂಮಿ ಸಮಸ್ಯೆಯೇ ವಿನಃ ಮತಧರ್ಮದ ಸಮಸ್ಯೆಯಲ್ಲ. ಆದರೆ ಚೆಡ್ಡಿಗಳಿಗೆ ಇದ್ಯಾವುದೂ ಬೇಕಿಲ್ಲ. ವಿಕೃತರು. ಅಂದಹಾಗೆ ಈ ಲೊಳಗಾ ಬಳಗಾ ಚೆಡ್ಡಿಗಿಂತ stiff ಆಗಿರೋ ಕಾಚಾ ಉತ್ತಮ ಅಲ್ಲವಾ ಶ್ರೀಪಾದೂ..?

 • shreepadu says:

  ಹ ಹ .. ಆಯಿತು ರಜೆಸ್ಹೂ …;)

  ಜಿ ಕ್ಯಟಗರಿಗಾಗಿ ತಮ್ಮನ್ನ ತಾವು ಮಾರಿಕೊಂಡ ಕರ್ನಾಟಕದ ಪತ್ರಿಕೋದ್ಯಮಿಗಳು ಮತ್ತು ಪತ್ರಕರ್ತರ ಹಣೆಬರಹ , ಹಾಗು ರಾಷ್ಟ್ರಮಟ್ಟದಲ್ಲಿ ಮಾಧ್ಯಮ ಮತ್ತು ರಾಜಕಾರಣಿಗಳ ಸಂಬಂಧ ಗೊತ್ತಿದ್ದದ್ದೇ. ಪತ್ರಕರ್ತರು ಹೇಳಿದ್ದೆಲ್ಲ ತೀರ್ಥ ಎಂದು ತಿಳಿದುಕೊಳ್ಳುವ ಕಾಲ ಎಂದೋ ಹೋಯಿತು. ಟಿ ಆರ್ ಪಿ ಸಿಗತ್ತೆ ಅಂದ್ರೆ ಬ್ಲೂ ಫಿಲಂ ಬೇಕಾದರೂ ಪ್ರಸಾರ ಮಾಡುವ ಜನ , ಅಸ್ಸಾಮ್ನ ವಿಷಯವನ್ನ ತಮಗೆ ಬೇಕಾದ ಹಾಗೆ ತಿರುಚುವುದಿಲ್ಲವೇನು??

  ನನ್ನ ಸಮಸ್ಯೆ ಆರ್ ಎಸ್ ಎಸ್ ಅನ್ನ ಬಯ್ಯುತ್ತಾರೆ ಅಂತ ಅಲ್ಲ. ಯಾರ ಮೇಲಿನ ಸಿಟ್ಟನ್ನ ವ್ಯಕ್ತಪಡಿಸುವಾಗಲೂ ಅದಕ್ಕೊಂದು ರೀತಿ ರಿವಾಜುಗಳಿರುತ್ತವೆ. ಊರಿಗೆಲ್ಲ ಪಾಠ ಹೇಳುವ ಜನ , ಎದುರಾಳಿಯನ್ನು ಗೌರವಿಸುವ ಮತ್ತು ತಾತ್ವಿಕ ನೆಲೆಯಲ್ಲಿ ವಿರೋಧಿಸುವ ಗುಣ ಬೆಳೆಸಿಕೊಳ್ಳದೆ ಹೋದಲ್ಲಿ ಯಾರೋ ಕೈ ಆಡಿಸಿ ಬಿಟ್ಟ ಕಾಚವಾದೀತು ಪತ್ರಿಕೋದ್ಯಮದ ನೈತಿಕತೆ ಹೇಳುವುದು ನನ್ನ ಆಶಯ.

 • Pavan says:

  RAJESS avare, RSS navaru bandu nimma hattrira kelilla nambi anta.. RSS bagge vikruthi tumbikondu bereyavarige vikruthi tumbide anta helbardu anta aste… Ellarigu avarade ada bhavanegalirutthave adannu kacha adu idu anta ella heli asaya madbedi inta ondu uttama platform alli…

  @Ravi, as u told above I am still thinking why you have not removed Rajess comment if he has used worst words kacha and others…

 • Prasad says:

  ಕಾಮೆಂಟ್ ಮಾಡುವವರಿಗೆ ಬುದ್ದಿ ಹೇಳುವ ಮೊದಲು ನಿಮ್ಮ ಲೇಖಕರಿಗೆ ಅದನ್ನು ಅನುಸರಿಸಲು ಪಾಠ ಹೇಳಿ. ನಿಮ್ಮ ವರ್ತಮಾನದವರ ನಿಲುವೆನೆಂದರೆ ಇಲ್ಲಿ ಟೀಕಿಸುವ ಅಧಿಕಾರವಿರುವುದು ಲೇಖಕರಿಗೆ ಮಾತ್ರ.
  ಇತ್ತೀಚಿನ ಟಿಪ್ಪು ಕುರಿತಾದ ಲೇಖನದಲ್ಲಿ, ಪೇಜಾವರ ಸ್ವಾಮಿಗಳ ಧ್ವನಿಯನ್ನು ಕುಹಕವಾಡಿರುವ ತಮ್ಮ ಲೇಖಕರ ಸಂಸ್ಕೃತಿಗೆ ಎತ್ತಿ ಹಿಡಿದ ಕನ್ನಡಿ. ಪೇಜಾವರ ಸ್ವಾಮಿಗಳ ನಿಲುವು ಏನೇ ಇರಬಹುದು, ಅವರ ಆದರ್ಶಗಳೂ ತಮಗೆ ಒಪ್ಪದೇ ಇರಬಹುದು, ಆದರೆ ಅವರ ಧ್ವನಿಯನ್ನು ‘ಕೀರಲು’ ಎಂದು ಕುಹಕ ಮಾಡಿ, ಅವರ ಅಭಿಮಾನಿಗಳಿಗೆ ಕಾಮೆಂಟ್ ಹಾಕಲು ಅಡ್ಡಿ ಮಾಡುವುದು ಯಾವ ನ್ಯಾಯ? ಇವರಿಗೆ ಪೇಜಾವರರನ್ನು ಕುಹಕವಾಡುವ ಅಧಿಕಾರ ಕೊಟ್ಟವರು ಯಾರು? ಇದೇನ ತಮ್ಮ ಪ್ರಜಾಪ್ರಭುತ್ವ?
  ಲೇಖಕರ ಮನಸ್ಥಿತಿಗೆ ನಿಲುಕಿದ ಪದಪುಂಜಗಳು
  “ಮಾಸಿದವರ ತಳಮಳಗಳು”
  “ಈ ಇಬ್ಬರೂ ಪುರುಷೋತ್ತಮರಿಗೆ ಉತ್ತರ ಕೊಡಿ ಎಂದು ಕೀರಲು ಧ್ವನಿಯಲ್ಲಿ ಕೂಗುತ್ತಿರುವ, ನಮ್ಮ ಪೇಜಾವರ ಸ್ವಾಮಿಗೆ”
  “ನೀವು ಹೊಟ್ಟೆಗೆ ಏನು ತಿನ್ನುತ್ತೀರಿ?”

Leave a Reply

ವರ್ತಮಾನ – Vartamaana ©ಹಕ್ಕುಗಳು: ಆಯಾ ಲೇಖಕರದು. ಕಾಯ್ದಿರಿಸಲಾಗಿದೆ.