ಭೂಮಿ ಹುಟ್ಟಿದ್ದು ಹೇಗೆ – ಲೇಖನ : ಭಾಗ – 2

 


ಕಮಲಾಕರ
© ಹಕ್ಕು: ಮೌಲ್ಯಾಗ್ರಹ ಪ್ರಕಾಶನ


456 ಕೋಟಿ ವರ್ಷಗಳ ಹಿಂದೆ ಹುಟ್ಟಿದ ಭೂಮಿ ಬೆಂಕಿ ಉಂಡೆಯಾಗಿ, ಹಿಮದ ಉಂಡೆಯಾಗಿ, ಹಾಗೇ ವಿಷಮ ವಾತಾವರಣವನ್ನು, ಉಕ್ಕುವ ಕಡಲನ್ನು ತುಂಬಿಕೊಂಡು ವಿಶಿಷ್ಟ ಗ್ರಹವಾಗಿ ರೂಪಾಂತರವಾಯಿತು.

ಸೂರ್ಯನನ್ನು ಸುತ್ತುತ್ತಿರುವ ಎಂಟು ಗ್ರಹಗಳಲ್ಲಿ ಭೂಮಿ ದೂರದ ದೃಷ್ಟಿಯಿಂದ ಮೂರನೆಯದು. ಸುಮಾರು 150 ದಶಲಕ್ಷ ಕಿ.ಮೀ. ದೂರದಲ್ಲಿ ತನ್ನ ಪಥದಲ್ಲಿ ಸುತ್ತುತ್ತಾ ಇರುವ ಈ ಗ್ರಹ ಜೀವಿಗಳಿಗೆ ನೆಲೆನೀಡಿರುವ ಸೌರಮಂಡಲದ ಏಕೈಕ ಸದಸ್ಯ.

ಕೋಟ್ಯಂತರ ವರ್ಷಗಳ ಹಿಂದೆ ನಿಹಾರಿಕೆಯಿಂದ ಸಿಡಿದ ಕಣಗಳು ಕಾಲಾನಂತರ ಧೂಳು, ಶಿಲೆ, ಅನಿಲಗಳಿಂದ ಕೂಡಿ ಆದ ಗ್ರಹಗಳಲ್ಲಿ ಭೂಮಿಯೂ ಒಂದು. ಇದು ಭೂಮಿಯ ಭ್ರೂಣಾವಸ್ಥೆಯಷ್ಟೆ.

ಇಷ್ಟನ್ನು ತಿಳಿಯುವುದಕ್ಕೂ ವಿಜ್ಞಾನಿಗಳಿಗೆ ಸಾಕಷ್ಟು ಸಮಯವೇ ಬೇಕಾಯಿತು. ಇಷ್ಟಕ್ಕೂ ಭೂಮಿ ಕುರಿತ ಅಧ್ಯಯನ ಸಂಶೋಧನೆಗಳ ಆರಂಭವಾಗಿದ್ದು ಕೇವಲ 2000 ವರ್ಷಗಳ ಹಿಂದೆ. ಈ  ಹುಡುಕಾಟಕ್ಕೆ ಸರಿಯಾದ ದಾರಿ ಸಿಕ್ಕಿದ್ದು ಸ್ಕಾಟ್‍ಲ್ಯಾಂಡಿನಲ್ಲಿ…

ಗುಟ್ಟು ಬಿಟ್ಟು ಕೊಟ್ಟ ಬಂಡೆ

1778 ರಲ್ಲಿ ಸ್ಕಾಟ್ಲೆಂಡ್ ದೇಶದ ಎಡಿನ್‍ಬರೊ ಕರಾವಳಿ ಪ್ರದೇಶದಲ್ಲಿ ಒಂದು ಬಂಡೆ ಪತ್ತೆಯಾಯಿತು. ಇದು ಭೂಮಿಯ ಜನ್ಮರಹಸ್ಯದ ಹುಡುಕಾಟಕೆ ಹೊಸತಿರುವು ನೀಡಿತು.

ಶಿಲೆಗಳು ಹೇಗಾದವು ಎಂದು ಅಧ್ಯಯನ ನಡೆಸುತ್ತಿದ್ದ ಜೇಮ್ಸ್ ಹಟ್ಟನ್ ಈ ಬಂಡೆಯನ್ನು ಪತ್ತೆ ಮಾಡಿದರು. ಆಧುನಿಕ ಭೂಗರ್ಭ ಶಾಸ್ತ್ರದ ಪಿತಾಮಹ ಎನಿಸಿಕೊಂಡ ಜೇಮ್ಸ್ ಕಲ್ಲುಗಳ ಅಧ್ಯಯನ ಮಾಡುತ್ತ ಎಡಿನ್‍ಬರೊ ಕರಾವಳಿ ಪ್ರದೇಶಕ್ಕೆ ಬಂದಾಗ ಈ ಬಂಡೆ ಅವರಲ್ಲಿ ಬೆರಗು ಹುಟ್ಟಿಸಿತು.

ಕೆಲವು ಪದರಗಳಲ್ಲಿದ್ದ ಈ ಶಿಲೆಯನ್ನು ನೋಡಿದ ಅವರು ಇದರ ರಚನೆಗೆ ಧೀರ್ಘಕಾಲ ತೆಗೆದುಕೊಂಡಿದೆ ಎಂದು ಊಹಿಸಿದರು. ತೀವ್ರ ಪರಿಶೀಲನೆ, ಅಧ್ಯಯನದ ಬಳಿಕ, ’ಶಿಲಾರಚನೆ ಅತಿ ನಿಧಾನ ಕ್ರಿಯೆ. ಈ ಬಂಡೆ ರಚನೆಗೆ ಸಾವಿರಾರು ವರ್ಷಗಳೇ ಆಗಿರಬಹುದು’ ಎಂದು ಅಂದಾಜು ಮಾಡಿದರು. ಹಾಗಾದರೆ ಈ ಭೂಮಿ ಕೂಡ ಕೆಲವೇ ವರ್ಷಗಳಲ್ಲಿ ಆಗಿಲ್ಲ ಎಂಬುದು ಅವರಿಗೆ ಸ್ಪಷ್ಟವಾಯಿತು. ಈ ವಿಚಾರ ಅಲ್ಲಿಯವರೆಗೆ ಚರ್ಚ್‌ಗಳು ಹೇಳುತ್ತಿದ್ದ ನಂಬಿಕೆಗೆ ವಿರುದ್ಧವಾಗಿತ್ತು.

ಬೆಂಕಿಯುಂಡೆಯಾಗಿದ್ದ ಭೂಮಿ

ಜೇಮ್ಸ್ ಹಟ್ಟನ್

ಹಲವು ಶತಮಾನಗಳ ಕಾಲ ಕ್ರೈಸ್ತ ಧರ್ಮೀಯರ ಗ್ರಂಥ ಬುಕ್ ಆಫ್ ಜೆನೆಸಿಸ್ ಜನರಲ್ಲಿ ಸೂರ್ಯ, ಚಂದ್ರ, ನಕ್ಷತ್ರ, ಭೂಮಿಗಳ ಬಗ್ಗೆ, ಮನುಷ್ಯನ ಹುಟ್ಟಿನ ಬಗ್ಗೆ, ಹಲವು ಅವೈಜ್ಞಾನಿಕ ವಿಚಾರಗಳನ್ನು ಬಿತ್ತಿತ್ತು. ಆ ಗ್ರಂಥದ ಪ್ರಕಾರ ಭೂಮಿಯು ಆರು ಸಾವಿರ ವರ್ಷಗಳ ಹಿಂದೆ ಹುಟ್ಟಿತ್ತು. ಕ್ರೈಸ್ತ ಗುರುಗಳು ಇದನ್ನೇ ಪ್ರಚಾರ ಮಾಡುತ್ತಿದ್ದರು. ಜೇಮ್ಸ್ ಹಟ್ಟನ್‍ನ ಸಂಶೋಧನೆ ಎತ್ತಿದ ಪ್ರಶ್ನೆ ಆ ನಂಬಿಕೆಯ ಬುಡವನ್ನೆ ಅಲ್ಲಾಡಿಸಿತು.

ಶಿಲೆಗಳನ್ನು ಅಧ್ಯಯನ ಮಾಡುತ್ತ ಭೂಮಿಯು ಆರು ಸಾವಿರ ವರ್ಷಗಳಿಗಿಂತ ಪುರಾತನವೆಂದು ಅನುಮಾನಿಸುತ್ತಿದ್ದ ಹಟ್ಟನ್‌ಗೆ ಪುರಾವೆಯಾಗಿ ಸಿಕ್ಕ ಈ ಬಂಡೆ ಭೂಮಿಯ ರಚನೆ ಹೇಗಾಗಿರಬಹುದು ಎಂಬ ಸುಳಿವನ್ನು ಬಿಟ್ಟುಕೊಟ್ಟಿತು.

ಎರಡು ಪದರಗಳಲ್ಲಿ ರಚನೆಯಾಗಿದ್ದ ಈ ಬಂಡೆ ಲಂಬವಾಗಿತ್ತು. ಸಾವಿರಾರು ವರ್ಷಗಳ ಹಿಂದೆ ಇದು ಭೂಮಿಗೆ ಸಮಾನಾಂತರವಾಗಿಯೇ ಇದ್ದು, ಭೂಚಲನೆಯ ಪರಿಣಾಮ ಲಂಬವಾಗಿ ನಿಂತಿದ್ದವು.

ಸಾವಿರಾರು ವರ್ಷಗಳ ಅವಧಿಯಲ್ಲಿ ಇಂತಹ ಸಾಕಷ್ಟು ಬದಲಾವಣೆಗಳನ್ನು ಕಂಡಿದ್ದ ಈ ಬಂಡೆಯ ಅಧ್ಯಯನದ ಬಳಿಕ ಭೂಮಿಯ ಇತಿಹಾಸ ಲಕ್ಷಾಂತರ ವರ್ಷಗಳದ್ದಿರಬಹುದು ಇಲ್ಲವೇ ಅದರಾಚೆಗೂ ಇರಬಹುದು ಎಂಬ ನಿಲುವಿಗೆ ಬಂದರು ಹಟ್ಟನ್. ಇದು ಭೂಮಿಯ ಜನ್ಮರಹಸ್ಯ ಅರಿಯುವ ನಿಟ್ಟಿನಲ್ಲಿ ಇಟ್ಟ ಮೊದಲ ಹೆಜ್ಜೆಯಾಯಿತು. ಇಲ್ಲಿಂದ ಮುಂದೆ ಭೂಮಿಯ ಇತಿಹಾಸ ಅರಿಯಲು ಕಲ್ಲುಗಳತ್ತ ಮುಖ ಮಾಡಿದರು.

ಹಟ್ಟನ್ ಸಂಶೋಧನೆಯ ನಂತರದ 200 ವರ್ಷಗಳಲ್ಲಿ ಶಿಲಾರಚನೆ ಹಾಗೂ ವಿವಿಧ ರೀತಿಯ ಬಂಡೆಗಳ ಬಗ್ಗೆ ಅಧ್ಯಯನ ನಡೆದವು. ಈ ಮೂಲಕ ಭೂಮಿಯ ಹುಟ್ಟು ಅದರ ರಚನೆ ಕುರಿತ ಹಲವು ಅಚ್ಚರಿಯ ಅಂಶಗಳು ಹೊರಬಂದವು.

ಭಯಾನಕವಾಗಿತ್ತು ಭೂಮಿ!

ಅಕ್ಷರಶಃ ಕಲ್ಪನೆಗೂ ಮೀರಿದ ವಿದ್ಯಮಾನಗಳು ಭೂಮಿಯ ಆರಂಭಿಕ ದಿನಗಳಲ್ಲಿ ನಡೆದವು. ಇಂದು ಸುಂದರ ನೀಲಿಗ್ರಹ ಎಂದು ಕರೆಸಿಕೊಳ್ಳುವ ಈ ಭೂಮಿ ಒಂದು ಕಾಲದಲ್ಲಿ ಬೆಂಕಿಯುಂಡೆಯಾಗಿತ್ತು.

ಭೂಗ್ರಹದ ಮೇಲ್ಮೈ ಲಾವಾರಸದಿಂದ ತುಂಬಿ ತುಳುಕುತ್ತಿತ್ತು. ಮೈಲುಗಟ್ಟಲೆ ಆಳದವರೆಗೆ, ಸಾವಿರಾರು ಮೈಲು ವಿಸ್ತಾರವಾಗಿ, ವ್ಯಾಪಿಸಿಕೊಂಡಿತ್ತು. 4500 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಭೂಮಿ ಬೆಂಕಿಯ ಚೆಂಡಾಗಿತ್ತು. ಅಂತರಿಕ್ಷದಿಂದ ಅಪ್ಪಳಿಸುತ್ತಿದ್ದ ಉಲ್ಕೆಗಳ ಮಳೆ ಈ ಬೆಂಕಿಯನ್ನು ಹೆಚ್ಚಿಸುತ್ತಲೇ ಇದ್ದವು.

ಭೂಮಿ ಇಂತಹ ಸ್ಥಿತಿಯಲ್ಲಿತ್ತು ಅನ್ನೋ ಸಿದ್ಧಾಂತವನ್ನು ನಮ್ಮ ಮುಂದೆ ಇಟ್ಟಿದ್ದು ಇಂಗ್ಲೆಂಡಿನ ವಿಜ್ಞಾನಿ ಲಾರ್ಡ್ ಕೆಲ್ವಿನ್.

ಹೀಗೆ ಬೆಂಕಿಯ ಉಂಡೆಯಂತೆ ಇದ್ದ ಭೂಮಿ ನಿಧಾನವಾಗಿ ತಣ್ಣಗಾಗುತ್ತ ಬಂತು. 2 ಕೋಟಿ ವರ್ಷಗಳಲ್ಲಿ ಭೂಮಿ ತಣ್ಣಗಾಯಿತು ಎಂಬ ಲೆಕ್ಕಾಚಾರವನ್ನು ಕೆಲ್ವಿನ್ ಮುಂದಿಟ್ಟರು.

ಲಾರ್ಡ್ ಕೆಲ್ವಿನ್

ಕೆಲ್ವಿನ್ ಪ್ರತಿಪಾದಿಸಿದ ವಿಚಾರಗಳಲ್ಲಿ ಎಲ್ಲವೂ ಸರಿ ಇರಲಿಲ್ಲ. ಅವರು ಹೇಳಿದಂತೆ ಭೂಮಿ ಲಾವಾರಸದಿಂದ ತುಂಬಿ ಬೆಂಕಿ ಚೆಂಡಾಗಿತ್ತು, ನಿಜ. ಆದರೆ ಅದು ತಣ್ಣಗಾಗಲು ತೆಗೆದುಕೊಂಡ ಅವಧಿ 2 ಕೋಟಿ ವರ್ಷಗಳಷ್ಟೇ ಆಗಿರಲಿಲ್ಲ.

ಕೆಲ್ವಿನ್ ಭೂಮಿಯ ಒಡಲೊಳಗೆ ಹುಟ್ಟಿದ್ದ ಶಾಖದ ಮೂಲವನ್ನು ತಿಳಿಯುವಲ್ಲಿ ಸೋತಿದ್ದರು. ಇದೇ ಅವರ ಲೆಕ್ಕಾಚಾರವನ್ನು ಸುಳ್ಳು ಮಾಡಿತ್ತು. ಭೂಮಿಯೊಳಗಿದ್ದ ಯುರೇನಿಯಂ, ಥೋರಿಯಂ, ರಾಸಾಯನಿಕಗಳಿಂದ ಹೊರಬೀಳುತ್ತಿದ್ದ ವಿಕಿರಣ ಭೂಮಿ ತಣ್ಣಗಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸಿದ್ದವು. ಹಾಗಾಗಿ ಭೂಮಿಯ ಗರ್ಭ ಬಹುಕಾಲ ಬೆಂಕಿ ಕುಂಡದಂತೇ ಇತ್ತು.

ಭೂಮಿ ಕಾವು ಹೆಚ್ಚಿಸುತ್ತಲೇ ಇದ್ದ ಯುರೇನಿಯಂ 20ನೇ ಶತಮಾನದ ಯುದ್ಧದಲ್ಲಿ ದೊಡ್ಡ ಅಸ್ತ್ರವಾಗಿ ನಮ್ಮೆಲ್ಲರಿಗೂ ಗೊತ್ತು. ಅದು ವಿಜ್ಞಾನಿಗಳ ಭೂಮಿಯ ಇತಿಹಾಸ ಪತ್ತೆಗೆ ಸಾಧನವೂ ಆಯಿತು.

1911 ರಲ್ಲಿ 21 ವರ್ಷದ ವಿಜ್ಞಾನಿ ಆರ್ಥರ್ ಹೋಮ್ಸ್ ವಿಕಿರಣ ಬಳಸಿ ಭೂಮಿಯ ಅಧ್ಯಯನ ಮಾಡಿದರು. ಈ ಅಧ್ಯಯನದ ಬಳಿಕ ಭೂಮಿಯ ಇತಿಹಾಸವನ್ನು ಸಾವಿರ, ಲಕ್ಷ ವರ್ಷಗಳ ಲೆಕ್ಕ ಬಿಟ್ಟು ಕೋಟಿಗಳಲ್ಲಿ ಮಾತನಾಡಲಾರಂಭಿಸಿದರು.

(ಮುಂದುವರೆಯುವುದು…)

ಭೂಮಿ ಹುಟ್ಟಿದ್ದು ಹೇಗೆ? ವಿಡಿಯೊ ಡಾಕ್ಯುಮೆಂಟರಿ:

Leave a Reply

Your email address will not be published. Required fields are marked *