ಮತಾಂಧತೆಯೇ ಚಳವಳಿಗಳಾಗುತ್ತಿರುವ ವಿಷಮ ಘಳಿಗೆ


– ಡಾ ಅಶೋಕ್. ಕೆ. ಆರ್.


 

ಇತ್ತೀಚೆಗಷ್ಟೇ ಸುಳ್ಯ ಮತ್ತು ಪುತ್ತೂರಿನ ಸುತ್ತಮುತ್ತ ವಾಸಿಸುತ್ತಿರುವ ನಿರಾಶ್ರಿತ ಶ್ರೀಲಂಕಾ ತಮಿಳರು ಪಡಿತರ ಚೀಟಿಯನ್ನು ವಿತರಿಸಬೇಕೆಂದು ಪ್ರತಿಭಟಿಸಿದರು. ಟಿಬೆಟ್ಟಿನಲ್ಲಿ ಚೀನಾ ದೇಶದ ಶೋಷಣೆಯನ್ನು ಖಂಡಿಸಿ ಕೆಲವು ತಿಂಗಳುಗಳ ಹಿಂದೆ ಟಿಬೆಟ್ಟಿಯನ್ನರು ಭಾರತದ ವಿವಿದೆಡೆ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೂ ತಿರುಗಿತ್ತು. ನೇಪಾಳಿಗರ ವಲಸೆ ನಿರಂತರವಾಗಿ ನಡೆಯುತ್ತದೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಮಾನವ ಹಕ್ಕು ಆಯೋಗದ ವರದಿಯಂತೆ ಕಳೆದ ಮೂರು ವರ್ಷದಲ್ಲಿ ಮೂರು ಸಾವಿರಕ್ಕೂ ಅಧಿಕ ಪಾಕಿಸ್ತಾನಿ ಹಿಂದೂಗಳು ಭಾರತಕ್ಕೆ ವಲಸೆ ಬಂದಿದ್ದಾರೆ.

ಈ ವಲಸೆಗಳ ಬಗ್ಗೆ ಇಲ್ಲದ ಆಕ್ರೋಶ ಬಾಂಗ್ಲಾ ವಲಸಿಗರ ಮೇಲೆ ಮಾತ್ರ ಯಾಕೆ? ಬಾಂಗ್ಲಾ ವಲಸಿಗರು ಸ್ಥಳೀಯ ಬೋಡೋ ಆದಿವಾಸಿಗಳ ಮೇಲೆ ನಡೆಸಿರುವ ಕ್ರೌರ್ಯವಷ್ಟೇ ಇದಕ್ಕೆ ಕಾರಣವಾ? ಆಶ್ರಯನೀಡಿದ ದೇಶಕ್ಕೆ ಅವರು ದ್ರೋಹಬಗೆಯುತ್ತಿದ್ದಾರೆಂಬ ಅಸಹನೆಯಾ? ಆಶ್ರಯ ನೀಡಿದ ದೇಶದ ಪ್ರಧಾನಮಂತ್ರಿಯನ್ನೇ ಕೊಂದ ಜನರ ವಿರುದ್ಧ ‘ದೇಶಭಕ್ತಿಯ’ ಹೆಸರಿನಲ್ಲಿ ಕೂಗಾಡದ ಮಂದಿ ಬಾಂಗ್ಲಾ ವಲಸಿಗರ ವಿರುದ್ಧ ಪ್ರತಿಭಟನೆಯ ಅಸ್ತ್ರ ಝಳಪಿಸುತ್ತಿರುವುದ್ಯಾಕೆ? ಬಾಂಗ್ಲಾ ವಲಸಿಗರು ಮುಸಲ್ಮಾನರೆಂಬ ಕಾರಣಕ್ಕೆ ಬಿಜೆಪಿ, ಆರೆಸ್ಸೆಸ್, ಶ್ರೀರಾಮ ಸೇನೆಯಂಥ ಸಂಘಟನೆಗಳು ದೊಡ್ಡ ಮಟ್ಟದಲ್ಲಿ ಗುಲ್ಲೆಬ್ಬಿಸುತ್ತಿದ್ದಾರಾ?

ಅನ್ಯ ದೇಶದಲ್ಲಿ ದೌರ್ಜನ್ಯ ನಡೆದರೆ ಅದನ್ನು ಮಾನವೀಯ ದೃಷ್ಟಿಯಿಂದ ವಿರೋಧಿಸುವ ಹಕ್ಕು ಪ್ರತಿಯೊಬ್ಬನಿಗೂ ಇರುತ್ತದೆ. ನಕ್ಸಲನೆಂಬ ಹಣೆಪಟ್ಟಿ ಕಟ್ಟಿ ಡಾ. ಬಿನಾಯಕ್ ಸೇನರನ್ನು ವರುಷಗಳ ಕಾಲ ಸೆರೆವಾಸದಲ್ಲಿಟ್ಟಾಗ ವಿವಿಧ ದೇಶಗಳ ನೊಬೆಲ್ ಪುರಸ್ಕೃತರು ಪ್ರತಿಭಟನೆ ನಡೆಸಿದ್ದು ಇದೇ ಮನೋಭಾವದಿಂದ. ಇನ್ನೂ ಹಿಂದಿನ ಉದಾಹರಣೆ ತೆಗೆದುಕೊಂಡರೆ ಭಾರತದ ಸ್ವಾತಂತ್ರ್ಯಕ್ಕಾಗಿ ಇಂಡಿಯನ್ ನ್ಯಾಷನಲ್ ಆರ್ಮಿ ಕಟ್ಟಿದ ಸುಭಾಷ್ ಚಂದ್ರ ಬೋಸರಿಗೆ ನೆರವು ನೀಡಿದ್ದು ಜಪಾನ್ ದೇಶ. ತನ್ನದಲ್ಲದ ಕ್ಯೂಬಾ ದೇಶದಲ್ಲಿನ ಶೋಷಣೆಯನ್ನು ಕೊನೆಗಾಣಿಸಲು ಹೋರಾಡಿ ಗೆಲುವಿನಲ್ಲಿ ಭಾಗಿಯಾಗಿ ನಂತರ ತನಗೆ ಸಿಕ್ಕಿದ ಉನ್ನತ ಸ್ಥಾನಮಾನಗಳನ್ನು ತ್ಯಜಿಸಿ ಬೋಲಿವೀಯಾ ಕ್ರಾಂತಿಗಾಗಿ ಹೋರಾಡುತ್ತ ಮಡಿದ ಚೆಗುವಾರನ ವಿಚಾರಗಳನ್ನು ಕಡೆಗಣಿಸಲು ಸಾಧ್ಯವೇ? ಭಾರತದಲ್ಲಿ ವೇದಾಂತ ಸಂಸ್ಥೆ ಆದಿವಾಸಿಗಳ ಹಕ್ಕನ್ನು ಕಸಿದು ಗಣಿಗಾರಿಕೆ ಮಾಡಲನುವಾದಾಗ ಅದನ್ನು ವಿರೋಧಿಸಿ ಬ್ರಿಟನ್ನಿನಲ್ಲಿ ಪ್ರತಿಭಟನೆ ನಡೆಸಿದ್ದನ್ನು ತಪ್ಪೆನ್ನಲಾದೀತೇ?

ಬರ್ಮಾದಲ್ಲಿ ಅಸ್ಸಾಮಿನಲ್ಲಿ ಮುಸಲ್ಮಾನರ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುವುದು ತಪ್ಪಲ್ಲ. ಆದರೆ ರಜಾ ಅಕಾಡೆಮಿಯ ನೇತ್ರತ್ವದಲ್ಲಿ ಮುಂಬೈನ ಆಜಾದ್ ಮೈದಾನದಲ್ಲಿ ನಡೆದಿದ್ದು ಶುದ್ಧ ಹಿಂಸೆಯಷ್ಟೇ. ಹುತಾತ್ಮರ ಸ್ಮಾರಕವನ್ನು ಒಡೆದು ಹಾಕಿ, ಪೋಲೀಸರ ಮೇಲೆ ಹಲ್ಲೆ ನಡೆಸಿದ್ದು ಶಿಕ್ಷಾರ್ಹ ದೇಶದ್ರೋಹದ ಕೆಲಸವೆಂಬುದರಲ್ಲಿ ಸಂಶಯವಿಲ್ಲ. ಕೊನೆಗೆ ಈ ಪ್ರತಿಭಟನೆ ನಡೆಸಿದವರು ಸಾಧಿಸಿದ್ದಾದರೂ ಏನನ್ನು? 18 ಮತ್ತು 22 ವಯಸ್ಸಿನ ಇಬ್ಬರು ಯುವಕರ ಸಾವಷ್ಟೇ ಇವರ ಮಹತ್ತರ ಸಾಧನೆ. ಸತ್ತ ಆ ಈರ್ವರು ಮುಸ್ಲಿಂ ಯುವಕರ ಹೆತ್ತವರನ್ನು ಸಮಾಧಾನಗೊಳಿಸುವ ಶಕ್ತಿ ಇಸ್ಲಾಂ ಧರ್ಮಕ್ಕಿದೆಯೇ? ಪವಿತ್ರವೆಂದೆನ್ನಿಸಿಕೊಳ್ಳುವ ರಂಜಾನ್ ಮಾಸದಲ್ಲಿ ಪಾಕಿಸ್ತಾನಿ ಸೈನಿಕರನ್ನು ಹೊಡೆದುರುಳಿಸುತ್ತದೆ ಅಲ್ಲಿನ ಉಗ್ರ ಸಂಘಟನೆಗಳು. ಮಹಿಳೆಯರನ್ನು ಕ್ಷುಲ್ಲಕ ಕಾರಣಗಳಿಗಾಗಿ ಸಾರ್ವಜನಿಕವಾಗಿ ಕಲ್ಲೊಡೆದು ಸಾಯಿಸಲಾಗುತ್ತದೆ. ಭಾರತದಲ್ಲಿನ ಸಾವಿರಾರು ಮುಸ್ಲಿಂ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಗ್ಯಾರೇಜುಗಳ ಮಸಿಯಲ್ಲಿ ತಮ್ಮ ಬಾಲ್ಯವನ್ನು ಮಸುಕಾಗಿಸಿಕೊಳ್ಳುತ್ತಿದ್ದಾರೆ. ಕೋಮುವಾದಿ ಮುಸ್ಲಿಂ ಸಂಘಟನೆಗಳಿಗೆ ಈ ಘಟನೆಗಳ್ಯಾವೂ ಪ್ರತಿಭಟಿಸಲು ಯೋಗ್ಯವೆನ್ನಿಸುವುದಿಲ್ಲವೇ? ಎಲ್ಲರೂ ಇಸ್ಲಾಂ ಧರ್ಮದವರಾಗಿಬಿಟ್ಟರೆ ಪ್ರಪಂಚ ಶಾಂತವಾಗಿರುವುದೆಂಬ ಭ್ರಮೆಯಾಕೆ ಈ ಸಂಘಟನೆಗಳಿಗೆ? ಶಿಯಾ, ಅಹಮ್ಮದೀಯರನ್ನು ಸುನ್ನಿ ಮುಸ್ಲಿಮರು ಸಾರ್ವಜನಿಕವಾಗಿ ಹತ್ಯೆಗೈಯುವಾಗ, ಸೂಫಿ ಸಂತರ ಸ್ಮಾರಕಗಳನ್ನು ನಾಶಗೊಳಿಸುವಾಗ ಈ ಮುಸ್ಲಿಂ ಸಂಘಟನೆಗಳಿಗೆ ಆಕ್ರೋಶ ಬರುವುದಿಲ್ಲವೇ? ಮುಸ್ಲಿಮರನ್ನು ಮುಸ್ಲಿಮರೇ ಕೊಂದರೆ ಪರವಾಗಿಲ್ಲ, ಅನ್ಯರು ಹಿಂಸಿಸಬಾರದು ಎಂಬ ಕೆಟ್ಟ ಮನಸ್ಥಿತಿಯಾಕೆ?

ಅಸ್ಸಾಮಿನಲ್ಲಿ ನಡೆಯುತ್ತಿರುವ ಸ್ಥಳೀಯ–ವಲಸಿಗ ಕಲಹ, ಮತ್ತದು ದೇಶದ ಹಲವೆಡೆ ಹುಟ್ಟಿಸಿರುವ ಅಶಾಂತ ವಾತಾವರಣ ನಮ್ಮ ನಾಯಕರ, ಜನರ, ಧರ್ಮಾಂದರ, ಭಾಷಾಂಧರ ಮನದ ಕತ್ತಲೆಯನ್ನು ತೋರಿಸುವಲ್ಲಿ ಯಶಸ್ವಿಯಾಗಿದೆ ಎಂದರೆ ಅತಿಶಯೋಕ್ತಿಯೇನಿಲ್ಲ. ನೂರಾರು ಕಾರಣಗಳಿಂದ ಸೃಷ್ಟಿಯಾಗಿರುವ ಅಸ್ಸಾಂ ಗಲಭೆಯನ್ನು ಹಿಂದೂ–ಮುಸ್ಲಿಮರ ನಡುವಿನ ಕಲಹ ಎಂದು ಬಿಂಬಿಸುವಲ್ಲಿ ಬಿಜೆಪಿ ಮತ್ತದರ ಅಂಗ ಸಂಸ್ಥೆಗಳು ಯಶ ಕಂಡಿವೆ. ಆ ಯಶಸ್ಸಿನ ಪತಾಕೆಯನ್ನು ಮತ್ತಷ್ಟು ಮೇಲಕ್ಕೇರಿಸುವಲ್ಲಿ ರಜಾ ಅಕಾಡೆಮಿಯಂಥ ಸಂಸ್ಥೆಗಳು, ಭಯ ಹುಟ್ಟಿಸುವ ವದಂತಿಗಳನ್ನು ಹರಡಿದ ವ್ಯಕ್ತಿಗಳು ಸಫಲರಾಗಿದ್ದಾರೆ. ಬೋಡೋ ಆದಿವಾಸಿಗಳ-ಮುಸ್ಲಿಮರ ವೋಟುಗಳನ್ನು ಕಳೆದುಕೊಳ್ಳಲಿಚ್ಛಿಸದ ಕಾಂಗ್ರೆಸ್ ಯಾವೊಂದು ಧೃಡ ನಿರ್ಧಾರವನ್ನೂ ತಳೆಯದೆ ಎಡಬಿಡಂಗಿತನ ಪ್ರದರ್ಶಿಸುತ್ತಿದೆ. ವದಂತಿಗಳುಟ್ಟಿಸಿದ ಭಯವನ್ನು ನಿವಾರಿಸಲು ವಿಫಲವಾದ ಕರ್ನಾಟಕದಲ್ಲಿ ಆರೆಸ್ಸೆಸ್ ಸಂಘಟನೆಯವರು ಲಾಠಿ ಹಿಡಿದು ಈಶಾನ್ಯ ರಾಜ್ಯದವರಿಗೆ ‘ರಕ್ಷಣೆ’ ಕೊಡುವ ಜವಾಬ್ದಾರಿ ಹೊತ್ತುಕೊಳ್ಳುತ್ತಾರೆ! ತಮ್ಮದೇ ಬಿಜೆಪಿ ಸರಕಾರದ ನಿಷ್ಕ್ರಿಯತೆಯನ್ನು ಎತ್ತಿ ತೋರಿಸುತ್ತಾರೆ. ಇವೆಲ್ಲವುಗಳ ಮಧ್ಯೆ ಅಸ್ಸಾಮಿನಲ್ಲಿ ಮುಸ್ಲಿಮರು ನಡೆಸಿದ ದೌರ್ಜನ್ಯವನ್ನು ಗಟ್ಟಿ ದನಿಯಲ್ಲಿ ಖಂಡಿಸುತ್ತಿದ್ದ ಕೆಲವು ಹಿಂದೂ ಕನ್ನಡಿಗರು ಈಶಾನ್ಯ ರಾಜ್ಯದವರು ಮರಳಿ ತಮ್ಮ ಊರಿಗೆ ಹೋಗುತ್ತಿರುವುದರ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾರೆ! ಕನ್ನಡಿಗರಿಗೆ ಕೆಲಸದ ಅವಕಾಶ ಹೆಚ್ಚುತ್ತದೆಂಬ ಸಂತಸವಿದು! ‘ಧರ್ಮಪ್ರೇಮ’ ಮರೆಯಾಗಿ ‘ಭಾಷಾಪ್ರೇಮ’ ಮೆರೆಸುತ್ತಿರುವ ಜನರಿವರು! ಸ್ವಧರ್ಮ-ಸ್ವಭಾಷೆಯ ಮೇಲಿನ ಈ ‘ಪ್ರೇಮ’ ಮನುಷ್ಯ ಧರ್ಮವನ್ನೇ ಇಲ್ಲವಾಗಿಸುತ್ತಿದೆ.

ವದಂತಿಯ, ನಕಲಿ ಚಿತ್ರಗಳ ತಯಾರಿಕೆಯ ಮೂಲ ಪಾಕಿಸ್ತಾನವಿರಬಹುದು ಅಥವಾ ಮುಸ್ಲಿಂ/ಹಿಂದೂ ಕೋಮು ಸಂಘಟನೆಯದ್ದಿರಬಹುದು. ಆದರೆ ಇಲ್ಲಿ ಗಮನಿಸಬೇಕಾದ್ದೆಂದರೆ ಈ ವದಂತಿಗಳನ್ನು ಹರಡಲು ಕಾರಣವಾಗಿರುವುದು ಆರ್ಥಿಕವಾಗಿ–ಶೈಕ್ಷಣಿಕವಾಗಿ–ತಾಂತ್ರಿಕವಾಗಿ ‘ಉನ್ನತಿ’(?) ಸಾಧಿಸಿದ ಜನತೆ. ಸಂಸ್ಕ್ರತಿಯ ಹೆಸರಿನಲ್ಲಿ ಗೂಂಡಾಗಿರಿ ಪ್ರದರ್ಶಿಸಿದವರ ಚಿತ್ರಗಳನ್ನು, ಹಿಂಸೆ ವಿರೋಧಿಸುವ ನೆಪದಲ್ಲಿ ಹಿಂಸಾಕೃತ್ಯ ನಡೆಸಿದ ಪುಂಡರ ಚಿತ್ರಗಳನ್ನು ಹೆಚ್ಚು ಜನರಿಗೆ ತಲುಪಿಸುವಂತೆ ಮಾಡಿದರೆ ಅದು ತಪ್ಪಿತಸ್ಥರನ್ನು ಬಂಧಿಸುವುದಕ್ಕೆ ನೆರವಾದೀತು. ಆದರೆ ಪಾಕಿಸ್ತಾನದ ಹೈದರಾಬಾದಿನಲ್ಲಿ ನಡೆದ ಅಲ್ಲಿನ ಧ್ವಜಾರೋಹಣವನ್ನು ಆಂಧ್ರದ ಹೈದರಾಬಾದಿನಲ್ಲಿ ನಡೆದಿದ್ದು ಎಂಬಂತೆ ಹರಡುವ ಹಿಂದೂಗಳು, ಬರ್ಮಾದ ನಕಲಿ ಚಿತ್ರಗಳನ್ನು ಹರಡುವ ಮುಸ್ಲಿಮರ ಮನಸ್ಸಿನಲ್ಲಿರುವುದಾದರೂ ಏನು? ಆಜಾದ್ ಮೈದಾನದಲ್ಲಿ ಹುತಾತ್ಮರ ಸ್ಮಾರಕವನ್ನು ಒದೆಯುತ್ತಿದ್ದ ಯುವಕರನ್ನು ಬಂಧಿಸಲು ಒತ್ತಾಯಿಸುವುದು ಸರಿಯಾದ ಕೆಲಸವೇ ಹೌದು. ಆದರೆ ಆ ಚಿತ್ರಗಳನ್ನು ಹಿಡಿದುಕೊಂಡು ‘ಇಂಥದ್ದನ್ನು ನೋಡಿದರೆ ನನ್ನ ರಕ್ತ ಕುದಿಯುತ್ತದೆ’ ಎಂದಬ್ಬರಿಸುತ್ತ ಧರ್ಮಾಂಧತೆ ಬೆಳೆಸುವ ಪ್ರಮೋದ್ ಮುತಾಲಿಕ್ ರಂಥವರ ಮನಸ್ಥಿತಿ ನೋಡಿದಾಗ ನೆನಪಾಗುವುದು ಇಂಥಹುದೇ ಚಿತ್ರಗಳನ್ನು, ವಿಡಿಯೋಗಳನ್ನು ಪ್ರಚುರಪಡಿಸುತ್ತಲೇ ಉಗ್ರಗಾಮಿತ್ವವನ್ನು ಪೋಷಿಸಿದ ತಾಲಿಬಾನಿ ಸಂಸ್ಕ್ರತಿ. ಭಾರತ ಹಿಂದೂ ದೇಶವಾಗಬೇಕು, ಅನ್ಯ ಧರ್ಮದವರು ಎರಡನೇ ದರ್ಜೆಯ ಪ್ರಜೆಗಳಂತೆ ಬದುಕಬೇಕು ಎಂದು ಬಯಸುವ ಇಂಥವರಿಗೆ ಧರ್ಮಕ್ಕೆ ಜೋತು ಬಿದ್ದು ಪಡಿಪಾಟಲು ಪಡುತ್ತಿರುವ ನೆರೆಯ ಪಾಕಿಸ್ತಾನ ಎಚ್ಚರಿಕೆಯ ಪಾಠದಂತೆ ಕಾಣುವುದಿಲ್ಲವೇ?

ಸ್ವಧರ್ಮದೆಡೆಗಿನ ದುರಭಿಮಾನ ಪರಧರ್ಮದೆಡೆಗಿನ ದ್ವೇಷದ ಮಾತುಗಳನ್ನಾಡುವವರೆಡೆಗೆ ಜನತೆ ಆತುಕೊಳ್ಳುತ್ತಿರುವುದು ಇಂದಿನ ದುರಂತ. ಮನುಷ್ಯ ಧರ್ಮ ಮರೆತ, ದೇಶ ಕಟ್ಟುವ ಕೆಲಸ ಮಾಡದ ಧರ್ಮಾಂಧರೆಡೆಗೆ ದಿನೇ ದಿನೇ ಜನರಲ್ಲಿ ಒಲವು ಹೆಚ್ಚುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ. ನಾಡ ಕಟ್ಟುವ, ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವ ತತ್ವಾಧಾರಿತ ಚಳುವಳಿಗಳ ಕೊರತೆಯೇ ಇದ್ದಕ್ಕೆಲ್ಲ ಕಾರಣವೇ?

ಲೇಖನದ ತುಂಬೆಲ್ಲ ಪ್ರಶ್ನೆಗಳೇ ಇದೆಯಲ್ಲವೇ? ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಜವಾಬ್ದಾರಿ?

2 thoughts on “ಮತಾಂಧತೆಯೇ ಚಳವಳಿಗಳಾಗುತ್ತಿರುವ ವಿಷಮ ಘಳಿಗೆ

  1. anand prasad

    ಲೇಖನ ಮಹತ್ವದ ಒಳನೋಟಗಳನ್ನು ಒಳಗೊಂಡಿದೆ. ಧಾರ್ಮಿಕ ಮೂಲಭೂತವಾದವನ್ನೇ ಉಸಿರಾಗಿ ಇಟ್ಟುಕೊಂಡಿರುವ ಸಂಘಟನೆಯ ಗರ್ಭದಿಂದ ಹುಟ್ಟಿಬಂದ ರಾಜಕೀಯ ಪಕ್ಷದ ಜೊತೆ ತತ್ವ ಸಿದ್ಧಾಂತವನ್ನು ಮರೆತು ಅಧಿಕಾರದ ಆಸೆಗಾಗಿ ಉಳಿದ ಪಕ್ಷಗಳು ಸೇರಿದ ಕಾರಣ ಮೂಲಭೂತವಾದದ ಹಿನ್ನೆಲೆಯಿಂದ ಬಂದ ಪಕ್ಷ ಹಾಗೂ ಅದರ ಮೂಲ ಸಂಘಟನೆಗಳು ಬಲಿಷ್ಠವಾಗಿ ಬೆಳೆಯಲು ಕಾರಣವಾಯಿತು. ಅಧಿಕಾರದ ಬಲದಿಂದ ಹಣ, ಭೂಮಿ ಹಾಗೂ ಇನ್ನಿತರ ಸೌಲಭ್ಯಗಳನ್ನು ಹಾಗೂ ರಾಜಕೀಯ ರಕ್ಷಣೆಯನ್ನು ದಕ್ಕಿಸಿಕೊಂಡ ಮೂಲಭೂತವಾದಿ ಸಂಘಟನೆಗಳು ಬಲಯುತವಾಗಿ ಬೆಳೆದವು. ಕ್ಷಣಿಕ ಅಧಿಕಾರದ ಆಸೆಗೆ ಬಲಿಯಾದ ಪ್ರಗತಿಪರ ನಿಲುವಿನ ರಾಜಕೀಯ ಪಕ್ಷಗಳು ಮಾಡಿದ ಈ ತಪ್ಪಿನಿಂದ ಈಗ ಮೂಲಭೂತವಾದಿ ಸಂಘಟನೆಗಳು ಬಲಯುತವಾಗಿ ಬೆಳೆದಿವೆ. ಈ ಮೂಲಭೂತವಾದಿ ಸಂಘಟನೆಗಳು ಕೆಲವು ದೇಶಭಕ್ತಿಯ, ದೇಶಸೇವೆಯ ಕೆಲಸವನ್ನೂ ಮಾಡುತ್ತಿರುವುದರಿಂದ ಇದನ್ನು ಹೇಳಿ ತಮ್ಮನ್ನು ವಿರೋಧಿಸುವವರ ಮೇಲೆ ಮುಗಿಬೀಳುತ್ತವೆ. ಮೂಲಭೂತವಾದಿ ಸಂಘಟನೆಯ ಗರ್ಭದಿಂದ ಜನಿಸಿದ ರಾಜಕೀಯ ಪಕ್ಷವು ತನ್ನ ಬೆಳವಣಿಗೆಯ ದೃಷ್ಟಿಯಿಂದ ಉದಾರವಾದಿ ಮುಖವಾಡ ಹಾಕಿಕೊಂಡರೂ ಅದರ ಮೂಲ ನಿಷ್ಠೆ ತನ್ನ ಜನ್ಮದಾತನಿಗೆ ಯಾವಾಗಲೂ ಇರುತ್ತದೆ. ಹೀಗಾಗಿಯೇ ಜೆಪಿಯವರ ಚಳುವಳಿಯ ನಂತರ ಹುಟ್ಟಿದ ಜನತಾ ಪಕ್ಷದಲ್ಲಿ ತನ್ನ ಜನ್ಮದತನಿಂದ ಸಂಬಂಧ ಕಡಿದುಕೊಳ್ಳುತ್ತೇನೆ ಎಂದು ವಾಗ್ದಾನ ನೀಡಿ ಸರ್ಕಾರದಲ್ಲಿ ಭಾಗಿಯಾಗಿ ನಂತರ ತನ್ನ ವಾಗ್ದಾನದಂತೆ ನಡೆದುಕೊಳ್ಳದೆ ವಿಶ್ವಾಸಘಾತ ಮಾಡಿ ನಂತರ ಪ್ರಗತಿಶೀಲರ ವಿರೋಧದಿಂದಾಗಿ ತನ್ನ ಜನ್ಮದಾತನಿಗೆ ನಿಷ್ಠೆ ತೋರಿದ್ದು ಆ ಪಕ್ಷದ ಹಿದ್ದೆನ್ ಅಜೆಂಡಾ ಬೇರೆ ಇದೆ ಮತ್ತು ಅದು ನಂಬಲು ಅರ್ಹ ಪಕ್ಷವಲ್ಲ ಎಂಬುದನ್ನು ತೋರಿಸುತ್ತದೆ. ಹೀಗಿದ್ದರೂ ಅಧಿಕಾರದ ಆಸೆಗಾಗಿ ಅದರ ಜೊತೆ ಸೇರುವ ಎಡಬಿಡಂಗಿ ಪ್ರಗತಿಶೀಲ ಪಕ್ಷಗಳಿಗೆ ಕೊರತೆ ಇಲ್ಲ. ಧರ್ಮದ ವಿಷಯ ಜನರನ್ನು ಬಡಿದೆಬ್ಬಿಸಲು ಸುಲಭ ಸಾಧನ ಎಂದು ಕಂಡುಕೊಂಡ ಆ ಪಕ್ಷವು ಅದನ್ನೇ ಸತತವಾಗಿ ಅಧಿಕಾರ ಗಳಿಕೆಯ ಸಾಧನವಾಗಿ ಮಾಡಿಕೊಳ್ಳುತ್ತ ಬಂದಿದೆ. ಒಮ್ಮೆ ನರಮಾಂಸದ ರುಚಿ ಕಂಡ ಹುಲಿಯು ಮುಂದೆ ನರಭಕ್ಷಕನಾಗಿಯೇ ಮುಂದುವರಿಯುವಂತೆ ಧಾರ್ಮಿಕ ಮೂಲಭೂತವಾದಿ ವಿಷಯಗಳು ಅಧಿಕಾರ ಗಳಿಕೆಯ ಸುಲಭ ಸಾಧನ ಎಂದು ಕಂಡುಕೊಂಡ ಆ ಪಕ್ಷವು ಅಂಥ ವಿಷಯಗಳನ್ನು ಸದಾ ಎತ್ತುತ್ತಾ ಜನಬೆಂಬಲ ಹೆಚ್ಚಿಸಿಕೊಳ್ಳುತ್ತ ಇರುತ್ತದೆ. ಇಂಥವರೇ ದೇಶದ ಮಹಾನ್ ನಾಯಕರು ಎಂದು ಬಿಂಬಿಸಿಕೊಳ್ಳುತ್ತಿರುವುದು ಇಂದಿನ ದುರಂತ. ಮೂಲಭೂತವಾದ ಹುಲಿಯ ಮೇಲಿನ ಸವಾರಿ ಇದ್ದಂತೆ, ಒಮ್ಮೆ ಹತ್ತಿದ ನಂತರ ಸುರಕ್ಷಿತವಾಗಿ ಇಳಿಯುವುದು ಸಾಧ್ಯವಿಲ್ಲ ಎಂಬುದನ್ನು ಪಾಕಿಸ್ತಾನದ ಅವಸ್ಥೆಯನ್ನು ನೋಡಿ ನಮ್ಮ ದೇಶದ ಜನ ತಿಳಿದುಕೊಳ್ಳದೆ ಹೋದರೆ ಅಪಾಯ ತಪ್ಪಿದ್ದಲ್ಲ.

    Reply

Leave a Reply

Your email address will not be published.