ಗಾಂಧೀಜಿಯ ಸ್ವಾತಂತ್ರ್ಯ; ಅಂಬೇಡ್ಕರ್ ಸಂವಿಧಾನ.

  – ಡಾ. ಮೊಗಳ್ಳಿ ಗಣೇಶ್

ಆಧುನಿಕ ಭಾರತವನ್ನು ರೂಪಿಸಿದವರಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದವರೆಂದರೆ ಗಾಂಧಿ ಮತ್ತು ಅಂಬೇಡ್ಕರ್. ಕತ್ತಲ ಕೂಪವಾಗಿದ್ದ ಭಾರತಕ್ಕೆ ಇವರಿಬ್ಬರ ಹೋರಾಟ ಮತ್ತು ಚಿಂತನೆಗಳು ಅಪಾರವಾದ ಜೀವ ತುಂಬಿವೆ. ತಿರಸ್ಕೃತ ಸಮಾಜಗಳಿಗೆ ಇವರಿಬ್ಬರು ಅಸ್ತಿತ್ವ ರೂಪಿಸಿದ ನಾಯಕರ ರೀತಿಯಲ್ಲೆ ಕಾಣುತ್ತಾರೆ. ಗಾಂಧಿ ಮತ್ತು ಅಂಬೇಡ್ಕರ್ ಭಾರತ ದೇಶದ ಮಾನವೀಯ ಪ್ರಜ್ಞೆಯ ಸಂಕೇತ. ಬಿಡುಗಡೆಯ ಅಖಂಡ ಪ್ರತಿರೋಧ ಶಕ್ತಿಯ ಚೈತನ್ಯವಾಗಿ ಇವರು ಸಮಾಜಗಳನ್ನು ಮುನ್ನಡೆಸಿದರು. ನೈತಿಕತೆಯ ಪರಮಾದರ್ಶ ಗಾಂಧಿ ಮತ್ತು ಅಂಬೇಡ್ಕರ್. ಎಲ್ಲ ನೊಂದವರ ಹೊರಗಣ್ಣಾಗಿ ಗಾಂಧಿ ಕಂಡರೆ ಅಂತವರ ಒಳಗಣ್ಣಾಗಿ ಅಂಬೇಡ್ಕರ್ ಗೋಚರವಾಗುತ್ತಾರೆ. ಈ ಎರಡೂ ದೃಷ್ಟಿಗಳು ಸದಾ ಒಂದನ್ನೊಂದು ಅಂತರ್ಗತಿಸಿಕೊಂಡು ಬೆಳಕಿನ ಹಾದಿಯಲ್ಲಿ ದೇಶವನ್ನೂ ಸಮೂಹವನ್ನೂ ನಡೆಸಿವೆ. ದೇಶದ ಹೊರ ಮೈಯ ಹೊರಗಣ್ಣಿನಂತೆಯೆ ಗಾಂಧೀಜಿ ಇದ್ದರು. ಒಂದು ದೇಶದ ಅಂತಃಸಾಕ್ಷಿಯನ್ನು ಬಲ್ಲವರಾಗಿದ್ದ ಅವರು ಸದಾ ಸಮಾಜದ ಹಿತಕ್ಕಾಗಿ ತಮ್ಮನ್ನು ತಾವು ದಂಡಿಸಿಕೊಳ್ಳುತ್ತಿದ್ದರು. ವಶಾಹತುಶಾಹಿ ಜಗತ್ತನ್ನು ನಿರಾಕರಿಸಿದ್ದ ಅವರ ಪ್ರತಿರೋಧವು ದೇಶದ ಅಂತಃಸತ್ವದಿಂದಲೆ ಬಂದುದಾಗಿತ್ತು.

ಗಾಂಧೀಜಿಯವರನ್ನೂ ಅಂಬೇಡ್ಕರ್ ಅವರನ್ನೂ ನಾವು ನಮ್ಮ ಅಗತ್ಯಗಳ ಎರಕದಿಂದ ಕಂಡುಕೊಂಡಿರುತ್ತೇವೆ. ನಮ್ಮ ಅನಿವಾರ್ಯತೆಗಳನ್ನು ಮೀರಿದ ವ್ಯಕ್ತಿತ್ವ ಅವರದು. ಒಂದು ಸಮಾಜದ ಅಗತ್ಯದಿಂದ ರೂಪುಗೊಳ್ಳುವ ವ್ಯಕ್ತಿತ್ವಗಳು ಅದರ ಒಟ್ಟು ಮೌಲ್ಯವ್ಯವಸ್ಥೆಯನ್ನೆ ನಿರ್ಮಿಸುತ್ತಿರುತ್ತವೆ. ಗಾಂಧಿ, ಅಂಬೇಡ್ಕರ್ ಹಾಗಾಗಿಯೆ ಭಾರತದ ಅಂತಃಸತ್ವದ ಎರಡು ವಿಶಿಷ್ಟ ವ್ಯಕ್ತಿತ್ವಗಳು. ಅಂತೆಯೆ ಈ ಸಮಾಜಗಳ ಅಂತಃಕರಣಕ್ಕಾಗಿ ಕೊನೆತನಕ ಹೋರಾಡಿದ ಚೈತನ್ಯಗಳು. ಗಾಂಧಿ ಮತ್ತು ಅಂಬೇಡ್ಕರ್ ನಡುವಿನ ವೈರುಧ್ಯಗಳು ನಮ್ಮ ವೈರುಧ್ಯಗಳಾಗಬೇಕಾಗಿಲ್ಲ. ಅವರವರ ಬೌದ್ಧಿಕ ಸಂಘರ್ಷದ ಕಥನಗಳು ಮೇಲು ಪದರಿನಲ್ಲಿ ಭಿನ್ನವಾಗಿದ್ದರೂ ಆ ಭಿನ್ನತೆಯ ನಡುವೆಯೆ ಇಬ್ಬರೂ ದಲಿತ ಸಮಾಜದ ಮುಕ್ತಿಯ ಕಡೆಗೆ ಪ್ರಾಮಾಣಿಕವಾಗಿ ದುಡಿದವರು. ಬುದ್ಧನನ್ನು ಹೊರತು ಪಡಿಸಿದರೆ ದಲಿತರ ಮೇಲೆ ಅಪಾರ ಪ್ರೇಮ, ಅಂತಃಕರಣ ಹಾಗೂ ಘನತೆ ಇದ್ದದ್ದು ಗಾಂಧೀಜಿಗೆ ಮಾತ್ರ. ಅಂಬೇಡ್ಕರ್ ಅವರಿಗೆ ತಂತಾನೆ ಅಗಾಧವಾದ ಹೊಣೆಗಾರಿಕೆ ದಲಿತರ ಪರವಾಗಿ ಇತ್ತು. ಒಂದು ದೇಶವನ್ನು ಪ್ರೀತಿಸಿದಷ್ಟೆ ಸಮನಾಗಿ ಗಾಂಧೀಜಿ ಆ ದೇಶದ ಎಲ್ಲರನ್ನು ಗೌರವಿಸುತ್ತಿದ್ದರು. ಅವರ ನಿಷ್ಠೆಯು ಪ್ರಶ್ನಾತೀತವಾದುದು. ಗಾಂಧೀಜಿಗೆ ದಲಿತರಷ್ಟೇ ಅಂತಿಮವಾಗಿರದೆ ಇಡೀ ಮನುಕುಲವೆ ಸುಖವಾಗಿ ಸರ್ವೊದಯದ ಹಾದಿಯಲ್ಲಿ ಅನಂತತೆಯ ಕಡೆಗೆ ಸಾಗಬೇಕು ಎಂಬ ಮಹಾಶಯವಿತ್ತು. ವಸಾಹತುಶಾಹಿಯ ಮೂಲಕವೇ ಗಾಂಧೀಜಿ ಇಪ್ಪತ್ತನೆ ಶತಮಾನವನ್ನು ಅದರ ಎಲ್ಲ ಸಾಧ್ಯತೆಗಳಿಂದ ಗ್ರಹಿಸಿದ್ದರಿಂದ ಸಾಮ್ರಾಜ್ಯವನ್ನು ನಿರಾಕರಿಸುತ್ತಲೆ ಸಮಾಜದ ಒಳಗಿನ ಜಾತಿಯ ವೈರುಧ್ಯಗಳನ್ನು ಕಳೆದುಕೊಳ್ಳಬೇಕಾಗಿತ್ತು.

ಈ ಪರಿಯ ಸವಾಲು ವರ್ಗದ ಸವಾಲುಗಳನ್ನು ಬಿಡಿಸಿಕೊಂಡಷ್ಟು ಸರಳವಾಗಿರಲಿಲ್ಲ. ವರ್ಗಗಳು ಕಾಣಲ್ಪಡುವ ಶೋಷಣೆಯ ವ್ಯವಸ್ಥೆಯಾದರೆ; ಜಾತಿಯ ಹಿಂಸೆಯು ಧಾರ್ಮಿಕ ಅಧಿಕಾರದಲ್ಲಿ ಪ್ರಶ್ನಾತೀತವಾಗಿ ನಡೆವ ‘ಕರ್ಮ’ವಾಗಿ ಪರಿಣಮಿಸಿದ್ದರಿಂದ ಅದು ಸಮಾಜಕ್ಕೆ ಬೇಕಾದ ವ್ಯವಸ್ಥೆಯೆ ಆಗಿ ಬೆರೆತುಹೋಗಿತ್ತು. ಅದರ ಬೇರುಗಳು ಕಾಣದ ಆಯಕಟ್ಟುಗಳಲ್ಲಿ ಸಮಾಜವನ್ನು ನಿಯಂತ್ರಿಸುತ್ತಿತ್ತು. ಗಾಂಧೀಜಿ ಇಂತಹ ದುರವಸ್ಥೆಯನ್ನು ಸರಿಪಡಿಸಲು ಪ್ರಯತ್ನಿಸಿದಂತೆಲ್ಲ ಅವರ ಹಿಂಬಾಲಕರೇ ಅದನ್ನು ಗುಪ್ತವಾಗಿ ಉಳಿಸಿಕೊಳ್ಳುತ್ತಿದ್ದರು. ಅದರ ಪ್ರಾಯಶ್ಚಿತ್ತಕ್ಕೋ ಎಂಬಂತೆ ಗಾಂಧೀಜಿ ಪ್ರತಿ ಹೋರಾಟದ ಸಂದರ್ಭದಲ್ಲಿ ಮಹಿಳೆಯರು ಹಾಗೂ ಅಸ್ಪೃಶ್ಯರು ಚಳುವಳಿಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದರೆ ಅಷ್ಟರ ಮಟ್ಟಿಗೆ ನಮ್ಮ ಹೋರಾಟ ವಿಫಲವೇ ಎಂದು ಭಾವಿಸುತ್ತಿದ್ದರು. ಗಾಂಧೀಜಿಯವರ ನೈತಿಕತೆಯನ್ನು ತಾಳ್ಮೆಯಿಂದ ಗಮನಿಸಬೇಕು. ದಲಿತರನ್ನು, ಅದರಲ್ಲಿ ಮಲ ಹೊರುವ ಭಂಗಿಗಳನ್ನು ಗಾಂಧೀಜಿ ಕಂಡು ಅಪಾರವಾಗಿ ಅವರ ‘ಸೇವೆ’ಯಲ್ಲಿ ತಾವೂ ಗುರುತಿಸಿಕೊಂಡು ತಮ್ಮ ಆಶ್ರಮದಲ್ಲಿ ಉಳಿಯಲು ಬಂದವರೂ ಕೂಡ ಕಡ್ಡಾಯವಾಗಿ ಮಲ ತೊಳೆವ ಕರ್ಮವನ್ನು ಮಾಡಬೇಕು ಎಂದು ಕೋರುತ್ತಿದ್ದರು. ಈ ಕೆಲಸವನ್ನು ಸ್ವತಃ ತನ್ನ ಮಡದಿಯ ಮೂಲಕವೂ ಗಾಂಧೀಜಿ ಮಾಡಿಸುತ್ತಿದ್ದರು. ಒಂದು ಕಡೆ ವಸಾಹತುಶಾಹಿ ಸಾಮ್ರಾಜ್ಯದ ವಿರುದ್ಧ ಹೋರಾಡುತ್ತಲೇ ಇನ್ನೊಂದೆಡೆ ಸಮಾಜದ ಹೇಯ ಜಾತಿಪದ್ಧತಿಯ ಸುಧಾರಣೆಯ ಬಗೆಗೂ ಗಾಂಧೀಜಿ ಅವಿಶ್ರಾಂತವಾಗಿ ಚಿಂತಿಸುತ್ತಿದ್ದರು. ‘ಹರಿಜನ್’ಎಂಬ ಹೆಸರಿನಲ್ಲಿ ಪತ್ರಿಕೆಯನ್ನು ಆರಂಭಿಸಿದ ಮೊದಲಿಗರು ಅವರು. ಅಸ್ಪೃಶ್ಯತೆಯ ಮಹಾಸಾಮ್ರಾಜ್ಯವು ಇವತ್ತಿಗೂ ಇಷ್ಟೊಂದು ಪ್ರಮಾಣದಲ್ಲಿ ವ್ಯಾಪಿಸಿಕೊಂಡಿರುವಾಗ; ಪತ್ರಿಕೋದ್ಯಮದಲ್ಲಂತೂ ಅದರ ಸಾಮಥ್ರ್ಯ ದ್ವಿಗುಣಿಸಿರುವಾಗ; ಅದರ ವಿರುದ್ಧ ಬರೆಯಲು ಹೋರಾಡಲು ಆಗದಿರುವಾಗ; ಇನ್ನು ಆ ಕಾಲದಲ್ಲಿ ಗಾಂಧೀಜಿ ‘ಹರಿಜನ್’ ಹೆಸರಿನಲ್ಲಿ ಪತ್ರಿಕೆ ಆರಂಭಿಸಿದ್ದು ಸಣ್ಣ ಸಂಗತಿಯಲ್ಲ. ಅಸ್ಪೃಶ್ಯರ ಗುರುತಿನಲ್ಲಿ ಅವರ ಪರವಾಗಿ ಬರೆಯಲು ಒಂದು ಪತ್ರಿಕೆಯನ್ನು ಆರಂಭಿಸಿದ್ದು ಚಾರಿತ್ರಿಕವಾಗಿತ್ತು. ಅಖಂಡವಾಗಿ ಸಮಾಜವನ್ನು ಭಾವಿಸುತ್ತಿದ್ದ ಗಾಂಧೀಜಿಗೆ ಅನಿವಾರ್ಯವಾಗಿ ಸಮಾಜದ ಎಲ್ಲರ ಹಿತದ ಜೊತೆಯೇ ಅಸ್ಪೃಶ್ಯರ ಪರವಾಗಿ ಚಿಂತಿಸಬೇಕಾಗಿತ್ತು. ಇದು ಅತ್ಯಂತ ಕಠಿಣವಾದ ಚಿಂತನೆಯ ದಾರಿ. ಕೊಲ್ಲುವವನನ್ನೂ ಕೊಲ್ಲಿಸಿಕೊಳ್ಳುವವನನ್ನೂ ಇಬ್ಬರನ್ನೂ ಹೆಗಲ ಮೇಲೆ ಕೂರಿಸಿಕೊಂಡು ವಶಾಹತುಶಾಹಿ ಸಾಮ್ರಾಜ್ಯದ ಸಮುದ್ರವನ್ನು ಹಾಯುತ್ತಿದ್ದ ಗಾಂಧೀಜಿಗೆ ವೈರುಧ್ಯಗಳು ಎದುರಾದದ್ದು ಸಾಮಾನ್ಯ. ಗಾಂಧಿ ಇಂತಹ ಪ್ರಬಲ ವೈರುಧ್ಯವನ್ನು ತಾಯ್ತನದ ಅಂತಃಕರಣದಲ್ಲಿ ಹೊತ್ತುಕೊಂಡೇ ಇಬ್ಬರ ನಡುವೆಯು ವಿಶ್ವಾಸವನ್ನು ಅಂತಃಕರಣದ ನೀತಿಯನ್ನು ತರಲು ಯತ್ನಿಸುತ್ತಿದ್ದರು. ಭಾರತದ ಯಾವ ತತ್ವ ಪ್ರವರ್ತಕರಿಗೂ ಇಂತಹ ಧ್ಯಾನವಾಗಲೀ, ಅನಂತವಾದ ಸಮುದಾಯ ಪ್ರೀತಿಯಾಗಲೀ ಇರಲಿಲ್ಲ. ಬುದ್ಧ ಇಂಥದನ್ನು ಸಾಧಿಸಿದ್ದ. ಹಿಂದೂ ಧರ್ಮದ ಯಾವ ಆಚಾರ್ಯರೂ ಇಂತಹ ದಾರಿಯಲ್ಲಿ ಒಂದಿಷ್ಟು ಹೆಜ್ಜೆಯನ್ನೂ ಇಡಲು ಆಗಿರಲಿಲ್ಲ. ಬಸವಣ್ಣ ಒಂದಷ್ಟು ದೂರ ಧೀರತೆಯಲ್ಲಿ ಸಾಗಿದ್ದು ನಿಜ. ಹಿಂದೂ ಧರ್ಮವು ಜಾತಿಯ ತರ್ಕವನ್ನು ಅಡಗಿಸಿಟ್ಟುಕೊಂಡಿದ್ದರಿಂದ ಅದರ ಬಹುಪಾಲು ಪ್ರವರ್ತಕರು ಅಲ್ಲಲ್ಲೇ ನಿಂತು ಹೋದರು.

ಗಾಂಧೀಜಿ ಆಧುನಿಕ ಇಪ್ಪತ್ತನೆ ಶತಮಾನದ ಅಖಂಡ ಸ್ವಾತಂತ್ರ್ಯದ ದಾಹದಲ್ಲಿ ಹೋರಾಡಿದ್ದು ಅಸಾಮಾನ್ಯವಾದುದು. ದಾರ್ಶನಿಕನ ಎಲ್ಲ ಗುಣಗಳು ಗಾಂಧೀಜಿಗೆ ಇದ್ದವು. ಅದರಲ್ಲೂ ತಾಯ್ತನ ಅವರಲ್ಲಿ ಅವಿನಾಭಾವವಾಗಿ ಕೂಡಿಕೊಂಡಿತ್ತು. ಜಗತ್ತಿನ ಎಲ್ಲ ಶ್ರೇಷ್ಠ ಚಿಂತಕರು, ದಾರ್ಶನಿಕರು, ಹೋರಾಟಗಾರರು, ಕವಿಗಳು ಮತ್ತು ವಿಜ್ಞಾನಿಗಳು ತಾಯ್ತನ ಸ್ವಭಾವದವರು. ಇಂತಹ ತಾಯ್ತನದವರು ಸದಾ ಸ್ವಾತಂತ್ರ್ಯದ ಪರಮ ನೆಲೆಯನ್ನೇ ಧ್ಯಾನಿಸುತ್ತಿರುತ್ತಾರೆ. ಟಾಲ್ ಸ್ಟಾಯ್ ಗೆ ಇದ್ದ ಸೌಂದರ್ಯ ಪ್ರಜ್ಞೆ ಗಾಂಧಿಗೂ ಇತ್ತು. ಅಂತೆಯೇ ಐನ್ ಸ್ಟೈನ್ ಗೆ ಇದ್ದ ಸತ್ಯ ಶೋಧನೆಯ ಗುಣವೂ ಗಾಂಧಿಗೆ ಇತ್ತು. ಈ ತರಹದ ಎರಡೂ ಭಾವನೆಗಳು ಗಾಂಧಿಯ ಚಿಂತನೆಯಲ್ಲಿ ಇದ್ದಿದ್ದರಿಂದಲೇ ಅವರ ವ್ಯಕ್ತಿತ್ವದಲ್ಲಿ ಅನೇಕ ವೈರುಧ್ಯಗಳೂ, ವಿಚಿತ್ರ ಸ್ವಭಾವಗಳೂ ಕಾಣುತ್ತವೆ. ಸ್ವಾತಂತ್ರ್ಯದ ಬಗ್ಗೆ ಗಾಂಧೀಜಿ ಹೋರಾಡಿದವರು ಎಂದರೆ ಅದು ಕಡಿಮೆ ಮಾತಾಗುತ್ತದೆ. ಸ್ವಾತಂತ್ರ್ಯದ ಅಪರಿಮಿತ ಧ್ಯಾನದ ಕಡೆಗೆ ಗಾಂಧಿ ನಡೆದವರು. ಸ್ವಾತಂತ್ರ್ಯವೆ ಅವರಿಗೆ ವಿಮುಕ್ತಿ. ಸ್ವಾತಂತ್ರ್ಯವನ್ನು ಗಾಂಧಿ ಎಂದೂ ಬಿಡಿಯಾಗಿ ನೋಡುತ್ತಿರಲಿಲ್ಲ. ಸ್ವಾತಂತ್ರ್ಯದ ಅಂತರ್ಜಲದ ಹಾದಿಯನ್ನು ಗಾಂಧಿ ಬಲ್ಲವರಾಗಿದ್ದರು. ವ್ಯಕ್ತಿಯ ಮುಕ್ತಿಮಾರ್ಗಕ್ಕಿಂತ ದೇಶದ ಮುಕ್ತಿ ಗಾಂಧಿಗೆ ಮುಖ್ಯವಾಗಿದ್ದರಿಂದಲೇ, ಇಡೀ ದೇಶದ ಉದ್ದಕ್ಕೂ ಅವರು ಅಲೆದಾಡಿ ಸಮಾಜದ ಕೊನೆಯವನ ದನಿಗೂ ಸ್ಪಂದಿಸಲು ಸಾಧ್ಯವಾಗಿದ್ದು. ಸ್ವಾತಂತ್ರ್ಯದ ದರ್ಶನ ಗಾಂಧೀಜಿಗೆ ಆಗಿತ್ತು. ಅದರಿಂದಲೆ ಅವರು ದೇಶವನ್ನು ಕಟ್ಟುವ ಕಡೆಗೆ ಯೋಚಿಸಿದ್ದು. ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರೂ ಒಂದೇ ದಾರಿಯ ಪಯಣಿಗರು. ಇಬ್ಬರಲ್ಲೂ ಸ್ವಾತಂತ್ರ್ಯದ ಕಿಡಿ ಇತ್ತಾದರೂ ಅವರಿಬ್ಬರೂ ಸ್ವಾತಂತ್ರ್ಯವನ್ನು ಎರಡು ವಿಭಿನ್ನ ಧಾರೆಗಳಿಂದ ಹುಡುಕಿದರು.

ಗಾಂಧಿಗೆ ಸ್ವಾತಂತ್ರ್ಯದ ತೊಟ್ಟಿಲಲ್ಲಿ ಎಲ್ಲರನ್ನೂ ತೂಗುವ ತಿಳುವಳಿಕೆಯಿತ್ತು. ಆದರೆ ಈ ದೇಶದ ಅಂತಃಸಾಕ್ಷಿಗೆ ಸ್ವಾತಂತ್ರ್ಯ ಇಲ್ಲ ಎಂಬುದನ್ನು ಅರಿತಿದ್ದ ಅಂಬೇಡ್ಕರ್ಗೆ ಹೇಗೆ ಎಲ್ಲರನ್ನೂ ಗಾಂಧೀಜಿ ಒಂದೇ ತೊಟ್ಟಿಲಲ್ಲಿ ತೂಗುವರೋ ಎಂಬ ವಿರೋಧವಿತ್ತು. ಹೀಗಾಗಿ ಗಾಂಧೀಜಿಯ ಗ್ರಾಮ ಸ್ವರಾಜ್ಯದ ಬಗ್ಗೆ ಅಂಬೇಡ್ಕರ್ ಅವರಿಗೆ ಮುಗಿಯದ ತಕರಾರುಗಳಿದ್ದವು. ದೇಶಕ್ಕೆ ಸ್ವಾತಂತ್ರ್ಯ ಬಂದರೂ ಅದು ಸಮಾಜದ ಕೊನೆಯ ತನಕ ತಲುಪುವುದೇ ಎಂಬ ದಟ್ಟ ಹಾಗೂ ವಾಸ್ತವ ಅನುಮಾನ ಅಂಬೇಡ್ಕರ್ ಅವರಿಗೆ ಇದ್ದುದು ಸಹಜವಾಗಿತ್ತು. ಹಾಗೆ ನೋಡಿದರೆ ಹಿಂದೂ ಧರ್ಮ ಯಾರಿಗೂ ಎಂದೂ ಸ್ವಾತಂತ್ರ್ಯವನ್ನು ಕೊಟ್ಟಿಲ್ಲ, ಹಾಗೆಯೇ ಮುಂದೆ ಕೂಡ ಅದು ಸ್ವಾತಂತ್ರ್ಯವನ್ನು ದಲಿತರಿಂದ ಹರಣ ಮಾಡಿ ಅವರನ್ನು ಅಸ್ಪೃಶ್ಯರನ್ನಾಗಿಯೇ ಮಾಡಿ ಆಳ್ವಿಕೆ ಮಾಡುತ್ತದೆ ಎಂದು ವಾದಿಸುತ್ತಿದ್ದರು. ಹಾಗಾಗಿಯೆ ಪೂನಾ ಒಪ್ಪಂದದಲ್ಲಿ ಅಂಬೇಡ್ಕರ್ ಅವರು ದಲಿತರಿಗೆ ವಿಶೇಷ ಹಕ್ಕು ಬಾಧ್ಯತೆಗಳ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದ್ದು. ಇಂತಹ ನಿಲುವಿಗೆ ಗಾಂಧಿಯವರ ಪ್ರತಿಕ್ರಿಯೆ ಹಠವಿಡಿದ ಮಗುವಿನಂತಿತ್ತು. ಈ ಹಠವು ಅಂಬೇಡ್ಕರ್ ಅವರಿಗೆ ಕ್ರೂರವಾಗಿ ಕಂಡಿತ್ತು. ಗಾಂಧಿಗೆ ದಲಿತರು ಪ್ರತ್ಯೇಕ ಅಸ್ತಿತ್ವ ಹೊಂದಿ ದೇಶದ ಒಳಗೆ ಬದುಕುವುದು ಅನೈತಿಕವೆನಿಸಿತ್ತು. ದೇಹದ ಒಳಗಿದ್ದೂ ದೇಹದ ಆಚೆ ಇರುವಂತೆ, ಅಸ್ಪೃಶ್ಯರನ್ನು ಯಾಕೆ ಹೊರಗಿಟ್ಟು ದೇಶವನ್ನು ರೂಪಿಸಬೇಕು ಎಂಬ ಅವರ ಒಳತುಡಿತ ಸುಲಭವಾಗಿ ಅರ್ಥವಾಗುವಂತಿರಲಿಲ್ಲ. ಹಾಗೆ ದಲಿತರನ್ನು ಪ್ರತ್ಯೇಕವಾಗಿ ಇಟ್ಟುಬಿಟ್ಟರೆ ಅವರ ಭವಿಷ್ಯ ಇನ್ನೂ ಭಯಂಕರವಾಗಿರುತ್ತದೆ ಎಂದು ಗಾಂಧಿ ಎಣಿಸಿರಬೇಕು. ಇಂದಿನ ದಲಿತರ ಭಗ್ನಸ್ಥಿತಿಯಲ್ಲಿ ಮೀಸಲಾತಿಯ ವರ್ಗೀಕರಣ  ಹಾಗೂ ದಲಿತರ ಒಳಗೇ ಬೆಳೆಯುತ್ತಿರುವ ವರ್ಗ ಹಾಗೂ ಉಪಜಾತಿಗಳ ಗೋಡೆಗಳು ಭಯ ಹುಟ್ಟಿಸುತ್ತವೆ. ದಲಿತರನ್ನು ಪ್ರತ್ಯೇಕಿಸಿದ ಮಾತ್ರಕ್ಕೆ ಅವರಿಗೆ ಎಲ್ಲ ಬಗೆಯ ಸ್ವಾತಂತ್ರ್ಯ ಮತ್ತು ಸಮಾನತೆ ಸಿಕ್ಕಿಬಿಡುತ್ತದೆ ಎಂಬುದರಲ್ಲಿ ಗಾಂಧೀಜಿಗೆ ವಿಶ್ವಾಸ ಇರಲಿಲ್ಲ. ಅಂಬೇಡ್ಕರ್ಗೆ ಅಪಾರವಾದ ವಿಶ್ವಾಸವಿತ್ತು.’ದಲಿತಸ್ಥಾನ್’ನ ಪ್ರಸ್ತಾಪ ಅವರಿಂದ ಉಂಟಾಗಿತ್ತು. ದೇಶದ ಸ್ವಾತಂತ್ರ್ಯವನ್ನೇ ಮತ್ತೆ ವಿಂಗಡಿಸಿ, ಸಮಾಜವನ್ನೇ ಮತ್ತೆ ಸೀಳುವುದು ಆ ಹೊತ್ತಿಗೆ ಯಾವ ಸ್ವಾತಂತ್ರ್ಯ ಹೋರಾಟಗಾರರಿಗೂ ಇಷ್ಟವಿರಲಿಲ್ಲ. ಹಾಗೆ ಬೇಡಿಕೆ ಮಂಡಿಸುವವರು ಖಳನಾಯಕರಂತೆ ಚಿತ್ರಿಸಲ್ಪಡುತ್ತಿದ್ದರು. ಪಾಕಿಸ್ತಾನದ ರೂವಾರಿ ಜಿನ್ನಾ ಅವರಿಗೆ ರಾಷ್ಟ್ರೀಯ ಕಾಂಗ್ರೆಸ್ ನ ಬಹುಪಾಲು ನಾಯಕರು ಖಳನಾಯಕನ ಸ್ಥಾನವನ್ನೇ ನೀಡಿದ್ದರು.

ಅಂಬೇಡ್ಕರ್ ಅವರ ಬಗೆಗೂ ಇದೇ ನಿಲುವು ಇತ್ತು. ಈಗಲೂ ಅನೇಕರು ಅಂಬೇಡ್ಕರ್ ಅವರನ್ನು ಗಾಂಧಿಯ ಮುಂದೆ ಖಳನಾಯಕನಂತೆಯೋ, ಪ್ರತಿನಾಯಕನಂತೆಯೋ ಚಿತ್ರಿಸುತ್ತಾರೆ. ಅರುಣ್ ಶೌರಿಯಂತಹ ಹಳದಿ ಕಣ್ಣಿನ ಪತ್ರಕರ್ತರು ಅಂಬೇಡ್ಕರ್ ಅವರನ್ನು ಅಪಮಾನಕರವಾಗಿ; ಈ ದೇಶದ ದಲಿತರ ನೈತಿಕ ಸ್ವಾತಂತ್ರ್ಯದ ಹಂಬಲಕ್ಕೆ ಮಸಿ ಬಳಿಯುವಂತೆ ಈಗಲೂ ಬರೆಯುವುದಿದೆ. ಅಂಬೇಡ್ಕರ್ ಸ್ವಾತಂತ್ರ್ಯಕ್ಕಾಗಿ ಯಾವ ಹೋರಾಟವನ್ನೂ ಮಾಡದೆ ಗಾಂಧೀಜಿಯನ್ನು ಅಪಮಾನಿಸುತ್ತಾ ದೇಶದ ದಲಿತರನ್ನು ಅವರ ವಿರುದ್ಧ ಎತ್ತಿಕಟ್ಟುತ್ತಿದ್ದರು ಎಂಬ ಅರ್ಥದಲ್ಲಿ ಅರುಣ್ಶೌರಿ ಬರೆದು ಈ ಹೊತ್ತಿನ ದಲಿತಪ್ರಜ್ಞೆಯ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಾರೆ. ಬಲಪಂಥೀಯ ಮನಸ್ಸು ಒಟ್ಟಿಗೇ ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರನ್ನೂ ಆಳದಲ್ಲಿ ವಿರೋಧಿಸುತ್ತಿರುತ್ತದೆ.

ಅಂಬೇಡ್ಕರ್ ಅವರ ಬಗೆಗಿನ ಗಾಂಧಿಯ ನಿಲುವುಗಳು ಎಲ್ಲೂ ವ್ಯಕ್ತಿಗತವಾದುವಲ್ಲ. ಹಾಗೆಯೇ ಅಂಬೇಡ್ಕರ್ ಅವರು ಕಟುವಾಗಿ ಗಾಂಧಿಗೆ ಪ್ರತಿಕ್ರಿಯಿಸುತ್ತಿದ್ದುದು ಕೂಡ ತನ್ನೊಬ್ಬನ ಅಸ್ತಿತ್ವದ ಕಾರಣಕ್ಕಾಗಿ ಅಲ್ಲ. ದಲಿತ ಸಮುದಾಯದ ಅಖಂಡ ಪ್ರಜ್ಞೆ ಅಂಬೇಡ್ಕರ್ ಅವರಲ್ಲಿತ್ತು. ಅಷ್ಟೇ ಅಲ್ಲದೇ ಇಂತಹ ನರಕ ಸೃಷ್ಟಿಸಿರುವ ಹಿಂದೂ ಧರ್ಮದ ಸಾಮಾಜಿಕ ರಚನೆಯ ಸೆರೆವಾಸದ ಬಗ್ಗೆ ಖಚಿತವಾದ ತಿಳುವಳಿಕೆಯೂ, ವಿಷಾದವೂ ಇತ್ತು. ಜಾತಿಯು ಪ್ರತಿಯೊಬ್ಬರ ಸ್ವಾತಂತ್ರ್ಯವನ್ನು ಕಸಿದುಕೊಂಡಿರುತ್ತದೆ ಎಂಬುದರಲ್ಲಿ ಗಾಂಧಿಗಿಂತಲೂ ಅಂಬೇಡ್ಕರ್ ಗೆ ಹೆಚ್ಚಿನ ಅನುಭವ ಇತ್ತು. ವರ್ಣಶ್ರಮ ಪದ್ಧತಿಯ ಜಾತಿಶ್ರೇಣಿಯಂತೆಯೇ ಸಮಾಜದಲ್ಲಿ ಅಧಿಕಾರ ವಿಂಗಡನೆಯಾಗಿ ಕೊನೆಯ ಅಸ್ಪೃಶ್ಯರಿಗೆ ಯಾವ ಅಸ್ತಿತ್ವವೂ ಇಲ್ಲದಿರುವಾಗ; ಸ್ವಾತಂತ್ರ್ಯದ ಯಾವ ಅವಕಾಶವನ್ನು ನೀಡದೆ ಇರುವಾಗ; ಅವರಿಗೆ ದೇಶವೇ ಇಲ್ಲದಿರುವಾಗ; ದೇಶಕ್ಕೆ ಸ್ವಾತಂತ್ರ್ಯಬೇಕು ಎಂದು ಹೋರಾಡುವುದು ವ್ಯಂಗ್ಯವಾಗಿ ಕಾಣುತ್ತಿತ್ತು. ವಸಾಹತುಶಾಹಿ ವ್ಯವಸ್ಥೆಗಿಂತಲೂ ಕ್ರೂರವಾದದ್ದು ಹಿಂದೂ ವ್ಯವಸ್ಥೆ ಎಂಬುದನ್ನು ಅಂಬೇಡ್ಕರ್ ಮತ್ತೆ ಮತ್ತೆ ಪ್ರತಿಪಾದಿಸುತ್ತಿದ್ದರು. ಪರಿವರ್ತನೆಯಲ್ಲಿ ಗಾಂಧಿ ಆತ್ಯಂತಿಕವಾದ ಕನಸುಗಾರ. ರಾಮರಾಜ್ಯದ ಅವರ ಕನಸು ನ್ಯಾಯದ ಪರಮ ಆದರ್ಶ, ಅಂತೆಯೆ ಸ್ವಾತಂತ್ರ್ಯದ ಸಾಕ್ಷಾತ್ಕಾರ. ಅಂಬೇಡ್ಕರ್ ವಾಸ್ತವವಾದಿ ಚಿಂತಕ. ಸವಿಗನಸೇ ಇಲ್ಲದ ಸಮಾಜದಿಂದ ಬಂದ ಅಂಬೇಡ್ಕರ್ ದುಃಸ್ವಪ್ನಗಳನ್ನು ಮಾತ್ರ ಕಂಡಿದ್ದರು. ಈ ಸಮಾಜದ ಸನಾತನತೆಯ ಹೇಸಿಗೆಯನ್ನು ಕಂಡಿದ್ದ ಅವರಿಗೆ ಇಲ್ಲಿ ಯಾವುದೂ ಬದಲಾಗುವುದಿಲ್ಲ ಎಂಬ ಚಾರಿತ್ರಿಕ ವಿಷಾದ ತುಂಬಿಕೊಂಡಿತ್ತು.

ಬೃಹತ್ ಭಾರತದ ಚರಿತ್ರೆಯನ್ನು ತಿಳಿದಿದ್ದ ಗಾಂಧಿಗೆ ಅದರ ಅಖಂಡ ಛಲವು ಗಾಢವಾಗಿ ಪ್ರಭಾವಿಸಿತ್ತು. ಇದೇ ಅಖಂಡ ಭಾರತವು ಅಂಬೇಡ್ಕರ್ ಅವರಿಗೆ ಹಿಂಸೆಯ ಕೂಪವೆಂದು ತಿಳಿದಿತ್ತು. ಗಾಂಧಿ ಇಂತಹ ನರಕದ ಒಳಗಿಂದಲೇ ಅಹಿಂಸೆಯನ್ನು ಸ್ವಾತಂತ್ರ್ಯಕ್ಕಾಗಿ ಸಾಧಿಸಿದವರು. ಅಂಬೇಡ್ಕರ್ ಈ ನರಕದಲ್ಲಿದ್ದು ಸರ್ವನಾಶವಾಗುವ ಬದಲು ಬೌದ್ಧಧರ್ಮದಲ್ಲಿ ಸಮುದಾಯದ ಸ್ವಾತಂತ್ರ್ಯವನ್ನು ಪಡೆಯಲು ಯತ್ನಿಸಿದರು. ಇಬ್ಬರೂ ಸ್ವಾತಂತ್ರ್ಯದ ದಾಹದಲ್ಲಿ ಬೇರೆ ಬೇರೆ ದಿಕ್ಕಿನಲ್ಲಿ ನಡೆದವರಾದರೂ ಆಧುನಿಕ ಭಾರತದ ಸಂದರ್ಭದಲ್ಲಿ ಅಲಕ್ಷಿತರ ಪರವಾದ ನ್ಯಾಯಕ್ಕಾಗಿ ಶ್ರಮಿಸಿದವರು. ಗಾಂಧಿ ಸರ್ವೋದಯದ  ಪ್ರಜಾತತ್ವಕ್ಕಾಗಿಯೇ ತಮ್ಮ ಆಲೋಚನೆಗಳನ್ನು ಕೇಂದ್ರೀಕರಿಸಿದರು. ಅಂಬೇಡ್ಕರ್ ಜಾತ್ಯತೀತ ಪ್ರಜಾಪ್ರಭುತ್ವಕ್ಕಾಗಿ ವೈಚಾರಿಕ ಆಕ್ರಂದನ ಮಾಡಿದರು. ಇವೆರಡೂ ತುಂಬ ಸಂಕೀರ್ಣವಾದ ತಾತ್ವಿಕ ನೆಲೆಗಳು.

ಗಾಂಧಿ ಬಯಸುವ ಸರ್ವೋದಯ ರಮ್ಯ ಆಧ್ಯಾತ್ಮದ ಭಿತ್ತಿಯಲ್ಲಿ ಬೇರು ಬಿಟ್ಟಿದೆ. ಅಂಬೇಡ್ಕರ್ ವೈಚಾರಿಕ ಆಧ್ಯಾತ್ಮದಲ್ಲಿ ವಿಶ್ವಾಸವಿಟ್ಟವರು. ಅದರಿಂದಾಗಿಯೇ ಅವರು ಬೌದ್ಧಧರ್ಮವನ್ನು ಸ್ವೀಕರಿಸಿದ್ದು. ಬುದ್ಧನ ಕಾಣ್ಕೆಯಲ್ಲಿ ಅಪರಿಮಿತವಾದ ಪ್ರಜಾತತ್ವ ಇದೆ ಎಂಬುದು ಅಂಬೇಡ್ಕರ್ಗೆ ತಿಳಿದಿತ್ತು. ಹೀಗಾಗಿಯೇ ಪ್ರಜಾಪ್ರಭುತ್ವದ ಸರ್ವೋಚ್ಚ ನೀತಿಸಂಹಿತೆಯಾದ ಸಂವಿಧಾನದಲ್ಲಿ ಅಂಬೇಡ್ಕರ್ ಜಾತ್ಯತೀತತೆಯನ್ನು ಮಹಾಮಂತ್ರದಂತೆ ನುಡಿಸುವುದು. ಜಾತಿಯ ನಾಶವಾಗದೇ ದೇಶಕ್ಕೆ ಸ್ವಾತಂತ್ರ್ಯದ ಅರ್ಥ ಕಾಣುವುದಿಲ್ಲ ಎಂಬುದು ಅಂಬೇಡ್ಕರ್ ಚಿಂತನೆಯಲ್ಲಿ ಕಾಣುವ ನೋಟ. ಅದಕ್ಕಾಗಿಯೇ ಅವರು ಬುದ್ಧನ ವೈಚಾರಿಕತೆಯಿಂದ ಸಂವಿಧಾನವನ್ನು ಜಾತ್ಯತೀತವಾಗಿ ರೂಪಿಸಿರುವುದು. ಪ್ರಜಾಪ್ರಭುತ್ವದಲ್ಲಿ ವರ್ಗಗಳಿಗೆ ಯಾವ ಅಪಾಯವೂ ಇರುವುದಿಲ್ಲ. ಇಂಗ್ಲೆಂಡಿನ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಕಾರ್ಮಿಕ ಪಕ್ಷಕ್ಕೂ, ಉದಾರವಾದಿ ಶ್ರೀಮಂತರ ಪಕ್ಷಕ್ಕೂ ಅಧಿಕಾರದ ಹಂಚಿಕೆಯಲ್ಲಿ ಸ್ನೇಹ ಒಪ್ಪಂದ ಸಾಮಾನ್ಯ. ಅಮೆರಿಕದ ಪ್ರಜಾಪ್ರಭುತ್ವ ಎಷ್ಟೇ ಆದರ್ಶವಾಗಿದ್ದರೂ ಅದು ಅಂತಿಮವಾಗಿ ಖಾಸಗೀ ಬಂಡವಾಳಶಾಹಿ ವ್ಯವಸ್ಥೆಯ ಸ್ವರ್ಗಸ್ಥಾನ.

ಭಾರತದ ಸಂವಿಧಾನದಲ್ಲಿ ಇಂತಹ ಅಪಾಯಗಳು ನುಸುಳದಂತೆ ನೋಡಿಕೊಂಡಿದ್ದರೂ, ಇಲ್ಲಿ ಜಾತಿಗಳು ಪಕ್ಷಗಳ ಮೂಲಕ ಪ್ರವೇಶಗೊಂಡು ಜಾತಿ ರಾಜಕಾರಣವನ್ನು ಸಮರ್ಥವಾಗಿ ಮಾಡುತ್ತಿರುತ್ತವೆ. ಅಂಬೇಡ್ಕರ್ಗೆ ಈ ಮುನ್ನೋಟ ಇದ್ದಿದ್ದರಿಂದಲೇ ದ್ವಿಮತದಾನವನ್ನು ದಲಿತರಿಗೆ ನೀಡುವ ಮೂಲಕ ರಾಜಕೀಯ ಸ್ವಾತಂತ್ರ್ಯವನ್ನು ಪಡೆಯಲು ಹೋರಾಡಿದರು. ಆ ಮೂಲಕ ಜಾತ್ಯತೀತ ಪ್ರಜಾಪ್ರಭುತ್ವವನ್ನು ಸ್ಥಾಪಿಸಲು ಯೋಚಿಸಿದರು. ಇಂತಹ ಯತ್ನ ಕೂಡ ಅಪಾಯಕಾರಿಯಾಗಿ ಮುಂದೆ ಜಾತಿಗಳ ಒಳಗೇ ಅಸಮಾನತೆಗಳನ್ನು ನಿರ್ಮಿಸಬಲ್ಲದು ಎಂಬ ಅನುಮಾನ ಅಂಬೇಡ್ಕರ್ ಅವರಿಗೆ ಇರಲಿಲ್ಲ. ಜಾತ್ಯತೀತತೆಯ ಅವರ ಕನಸು ಅವರ ಮುಂದೆಯೇ ಮುರಿದು ಬಿದ್ದಿತ್ತು. ಪ್ರತ್ಯೇಕ ಮತಕ್ಷೇತ್ರಗಳನ್ನು ಒತ್ತಾಯಿಸಲು ಜಾತ್ಯತೀತತೆಯ ಬಗೆಗೆ ಮಾತನಾಡುತ್ತ, ಬೌದ್ಧ ಧರ್ಮಕ್ಕೆ ಮತಾಂತರವಾದ ಅವರ ದಾರಿ ಸಂಕೀರ್ಣ ತಿರುವುಗಳಿಂದ ಕೂಡಿತ್ತು.

ಗಾಂಧಿಗೆ ಎಲ್ಲ ದಾರಿಗಳು ಮುಕ್ತವಾಗಿದ್ದವು. ಅವರ ಆಲೋಚನೆಗೆ ಸಾಮಾಜಿಕ ತಡೆಗೋಡೆಗಳು ಇರಲಿಲ್ಲ. ಅಖಂಡ ಸಮಾಜದ ಜೊತೆ ಮಾತನಾಡುವುದು ಅವರಿಗೆ ಸುಲಭವಾಗಿತ್ತು. ಅಂಬೇಡ್ಕರ್ ಪ್ರಧಾನ ಸಮಾಜದ ಎಲ್ಲ ಅಧಿಕಾರದ ನೆಲೆಗಳನ್ನು ಪ್ರಶ್ನಿಸಬೇಕಿತ್ತು. ಅದರ ಅಪರಾಧಗಳನ್ನು ಬಯಲು ಮಾಡಬೇಕಿತ್ತು. ಗಾಂಧಿಗೆ ದೇಶದ ಮಾನ ಮುಚ್ಚುವುದೇ ದೊಡ್ಡ ಕರ್ತವ್ಯವಾಗುತ್ತಿತ್ತು. ದೇಶದ್ರೋಹಿ ಎಂದು ಅಂಬೇಡ್ಕರ್ ಅವರನ್ನು ಯಾರಾದರೂ ಕರೆಯುವುದು ಸುಲಭವಿತ್ತು. ಅಂತಹ ಯಾವ ಕೇಡನ್ನು ಎಸಗದಿದ್ದರೂ ಅಂತಹ ಪಟ್ಟಗಳು ದಲಿತ ಕೇರಿಯಿಂದ ಬಂದು ಅಖಂಡತೆಯನ್ನು ಪ್ರಶ್ನಿಸುವ ಯಾರಿಗಾದರೂ ಇದ್ದಂಥದೇ.

ಜಾತಿವ್ಯವಸ್ಥೆಯಿಂದ ಬಿಡುಗಡೆ ಪಡೆಯುವುದು ಬಹುದೊಡ್ಡ ಸ್ವಾತಂತ್ರ್ಯ ಚಳುವಳಿಯೇ. ಪರಕೀಯರನ್ನು ಹೊರಗಟ್ಟುವುದು ಗಾಂಧಿಗೆ ಸುಲಭವಿತ್ತು. ದೇಶದ ಒಳಗೇ ಇದ್ದು ದೇಶ ಭ್ರಷ್ಟರನ್ನಾಗಿಸಿದ್ದವರನ್ನು ಅಂಬೇಡ್ಕರ್ ಎಲ್ಲಿಯೂ ಹೊರಕ್ಕೆ ಅಟ್ಟಲು ಸಾಧ್ಯವಿರಲಿಲ್ಲ. ಬಹಿಷ್ಕೃತ ಭಾರತದಲ್ಲಿ ಸ್ವತಃ ದಲಿತರೇ ಹೊರಗೆಸೆಲ್ಪಟ್ಟವರಾಗಿದ್ದರು. ಇಂತವರ ಸ್ವಾತಂತ್ರ್ಯಕ್ಕಾಗಿ ಹೋರಾಡುವಾಗ ಅಂಬೇಡ್ಕರ್ ಏಕಾಂಗಿಯಾಗಿದ್ದರು. ಅವರು ದೊಡ್ಡ ಸಮಾಜಗಳನ್ನು ಎದುರು ಹಾಕಿಕೊಂಡು, ಅವರ ಜೊತೆಯೇ ನ್ಯಾಯದ ಹಕ್ಕೊತ್ತಾಯವನ್ನು ಮಾಡಬೇಕಿತ್ತು. ಗಾಂಧೀಜಿ ಇಂತಹ ಸಂಕಟದಲ್ಲಿ ಮುಳುಗಿ ಸಾಮಾಜಿಕ ಎಚ್ಚರಕ್ಕಾಗಿ ಹೋರಾಡುವ ಅಂಬೇಡ್ಕರ್ ವಿರುದ್ಧ ವೈಯಕ್ತಿಕವಾಗಿ ಟೀಕಿಸಲಿಲ್ಲ. ಅಂಬೇಡ್ಕರ್ ಅವರ ವಿಚಾರಗಳ ಬಗ್ಗೆ ಭಿನ್ನಾಭಿಪ್ರಾಯವಿದ್ದರೂ ಅವರ ವಿಚಾರಗಳಿಂದಲೇ ಪ್ರಭಾವಿತರಾಗಿದ್ದೂ ಉಂಟು. ದೇಶದ ಒಳಗಿನವರ ವಿರುದ್ಧ ಹೋರಾಡಿಯೇ ಅಂಬೇಡ್ಕರ್ ಸ್ವಾತಂತ್ರ್ಯವನ್ನು ಹಂಚಿಕೊಳ್ಳಬೇಕಾಗಿದ್ದರಿಂದ ಅವರ ಸ್ವಾತಂತ್ರ್ಯ ಚಳುವಳಿಯನ್ನು ಬೇರೆಯಾಗಿಯೇ ಭಾವಿಸಬೇಕು.  ವಸಾಹತುಶಾಹಿ ವ್ಯವಸ್ಥೆಯ ಜೊತೆ ಉಗ್ರವಾದ ತಿರಸ್ಕಾರ ಅವರಿಗೆ ಇರಲಿಲ್ಲವಾದರೂ ಆ ವ್ಯವಸ್ಥೆ ದೇಶ ಬಿಟ್ಟು ಹೋಗಬೇಕು ಎಂಬುದನ್ನು ಒಪ್ಪಿಕೊಂಡಿದ್ದರು. ಅವರು ಬ್ರಿಟಿಷರ ಪರವಾಗಿ ಕೆಲಸ ನಿರ್ವಹಿಸಲಿಲ್ಲ. ಕಾಂಗ್ರೆಸ್ ನ ನಾಯಕರ ಬಗ್ಗೆ ಆಪ್ತ ಸಂಬಂಧ ಇರದಿದ್ದರೂ ಒಟ್ಟು ಸ್ವಾತಂತ್ರ್ಯ ಚಳುವಳಿಯ ಬಗೆಗೆ ಗೌರವವನ್ನೇ ಹೊಂದಿದ್ದರು. ಅವರಿಗಿದ್ದ ಬಹುದೊಡ್ಡ ತಡೆ ಎಂದರೆ ಹಿಂದೂ ಸಾಮ್ರಾಜ್ಯ. ಈ ಹಿಂದೂ ಸಾಮ್ರಾಜ್ಯ ವಸಾಹತುಶಾಹಿಗಿಂತಲೂ ಭಯಂಕರವಾಗಿತ್ತು. ಅದನ್ನು ಸದೆಬಡಿದರೆ ಮಾತ್ರ ಬಹುಸಂಖ್ಯಾತ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಜಾತಿಗಳು ಹಾಗೂ ಮಹಿಳೆಯರು ಸ್ವಾತಂತ್ರ್ಯ ಪಡೆಯಲು ಸಾಧ್ಯ ಎಂದು ಒತ್ತಾಯಿಸುತ್ತಿದ್ದರು.

ಸರ್ವೋದಯದ ಪ್ರಜಾಪ್ರಭುತ್ವವು ಒಂದೇ ಹಂತದಲ್ಲಿ ಫಲಿಸುವಂತಹದ್ದಾಗಿರಲಿಲ್ಲ. ಭ್ರಾತೃತ್ವವೂ ಅಷ್ಟೊಂದು ಸಲೀಸಾದ ಆದರ್ಶವಾಗಿರಲಿಲ್ಲ. ಒಬ್ಬರನ್ನೊಬ್ಬರು ಕ್ರೂರವಾಗಿ ಜಾತಿಯ ಕ್ರಮಗಳಿಂದ ಸೀಳಿಕೊಂಡಿರುವಾಗ ಭ್ರಾತೃತ್ವ ಎಂಬುದೇ ಹುಸಿಯಾದುದಾಗಿತ್ತು. ಮಾನವೀಯ ಘನತೆಯನ್ನು ಕಳೆದುಕೊಂಡಿರುವ ಹಿಂದೂ ಧರ್ಮವು ಪ್ರಜಾಪ್ರಭುತ್ವದ ಎಲ್ಲ ಆದರ್ಶಗಳನ್ನು ಕಾಲಕಾಲಕ್ಕೆ ಉಪಾಯವಾಗಿ ನುಂಗಬಲ್ಲದು. ಜಾತಿಯ ಜೊತೆಗೆ ಮತೀಯ ಮೂಲಭೂತವಾದವನ್ನು ಅದು ಸಾಂಗವಾಗಿ ಬೆಳೆಸಬಲ್ಲದು. ಇಂಥಲ್ಲಿ ಏಕತೆಯಾಗಲೀ, ಸಮಾನತೆಯಾಗಲೀ ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಅವರಿಗೆ ಗಾಢವಾಗಿ ಅನಿಸಿದ್ದರಿಂದಲೇ ದಲಿತರಿಗೆ ರಾಜ್ಯಾಧಿಕಾರದಲ್ಲಿ ಪ್ರಮುಖ ಪಾತ್ರ ಇರಬೇಕು ಎಂದು ಒತ್ತಾಯಿಸಿ, ಆ ಹಂತ ತಲುಪಿದಾಗಲೇ ದಲಿತರಿಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಂತೆ ಎಂದು ಸೂಚಿಸಿದ್ದರು. ಗಾಂಧೀಜಿಗೆ ಜಾತ್ಯತೀತವಾದ ಹಂಬಲವಿರಲಿಲ್ಲ ಎಂದೇನಿಲ್ಲ. ಜಾತಿಗಳ ನಡುವೆ ಸಾಮರಸ್ಯ ಸಾಧ್ಯವಾಗಬೇಕಾದರೆ ಮನುಷ್ಯನ ಒಳಗಿರುವ ನಿರಂಕುಶ ಸ್ವಭಾವ ಅಳಿಯಬೇಕೆಂದು ಅಂಬೇಡ್ಕರ್ ಹೇಳುತ್ತಿದ್ದರು.

ಹಿಂದೂ ಮೇಲುಜಾತಿಗಳು ನಿರಂಕುಶಪ್ರಭುತ್ವದ ತತ್ವದಲ್ಲಿ ನಂಬಿಕೆ ಇಟ್ಟುಕೊಂಡೇ ಬೆಳೆದಿದ್ದು ಅಂತಹ ಮೌಲ್ಯಗಳಿಗಾಗಿ ಯಾವುದೇ ಹೇಯ ರಕ್ತಪಾತವನ್ನು ಮಾಡಲು ಹೇಸುವುದಿಲ್ಲ. ಕೆಳಜಾತಿಗಳು ಮಾತ್ರ ದಾಸ್ಯದಲ್ಲಿ ಸದಾ ಕರಗಿ ಹೋಗುತ್ತಿರುತ್ತವೆ. ಜಾತಿಗಳು ಸಾಮ್ರಾಜ್ಯಶಾಹಿ ಸ್ವಭಾವವನ್ನು ಪಡೆದಿರುವುದರಿಂದಲೇ ಹಿಂದೂ ಸಾಮ್ರಾಜ್ಯವು ಬಲಿಷ್ಠವಾಗಿರುವುದು. ಇಂತಹ ಗ್ರಹಿಕೆಗಳಿಂದ ಅಂಬೇಡ್ಕರ್ ಮನುಧರ್ಮ ಶಾಸ್ತ್ರವನ್ನು ಸುಟ್ಟುಹಾಕಿದ್ದು. ಬ್ರಾಹ್ಮಣ್ಯದ ಸಾಮ್ರಾಜ್ಯಶಾಹಿ ಧೋರಣೆಯು ಮನುಧರ್ಮಶಾಸ್ತ್ರದಲ್ಲಿ ನಿರ್ಲಜ್ಜವಾಗಿ ವ್ಯಕ್ತವಾಗಿದೆ. ಅಮಾನವೀಯವಾಗಿ ಇಡೀ ಸಮಾಜದ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಯತ್ನ ಅದರ ತತ್ವದಲ್ಲಿದೆ. ಇಂತಹ ಗ್ರಂಥವು ಗಾಂಧೀಜಿಗೆ ಅಪಮಾನವೆನಿಸಲಿಲ್ಲ. ಅದನ್ನು ಅವರು ಸುಟ್ಟು ಹಾಕುವ ಧೈರ್ಯ ಮಾಡಲಿಲ್ಲ. ಸೌಮ್ಯವಾಗಿಯೇ ಅಂತಹ ಅಮಾನವೀಯ ಮೌಲ್ಯಗಳನ್ನು ಪಕ್ಕಕ್ಕೆ ಸೇರಿಸುತ್ತಿದ್ದ ಗಾಂಧಿಯ ಪ್ರತಿಭಟನೆಯು ಸಾತ್ವಿಕವಾದುದು. ಸಂತ ಶೈಲಿಯ ಗಾಂಧಿಯ ಭಾವನೆಗಳು ಯಾರ ಮನಸ್ಸಿಗೂ ನೋವು ಉಂಟಾಗಬಾರದು ಎಂಬಂತೆ ವ್ಯಕ್ತವಾಗುತ್ತಿದ್ದವು. ಇಂಥಲ್ಲಿ ಗಾಂಧಿಯ ವ್ಯಕ್ತಿತ್ವ ಅನೇಕ ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ. ಸನಾತನ ಮೌಲ್ಯ ವ್ಯವಸ್ಥೆಯ ಬಗ್ಗೆ ಗಾಂಧಿಗೆ ಅನುಕಂಪ ಮಾತ್ರವಲ್ಲ, ಗೌರವವೂ ಇತ್ತು. ಅದರ ಪರಂಪರೆಯನ್ನು ಯಾವತ್ತೂ ಅವರು ಕಡೆಗಣಿಸಿರಲಿಲ್ಲ. ಜಾತಿಯ ಬಗ್ಗೆ ಅವರಿಗೆ ಆರಂಭದಲ್ಲಿ ಹಳೆಯ ಅಭಿಪ್ರಾಯಗಳೇ ಇದ್ದವು. ನಂತರ ಅವರು ಅಂಬೇಡ್ಕರ್ ಅವರ ವೈಚಾರಿಕ ಪ್ರತಿರೋಧದ ಎದುರು ತಿದ್ದಿಕೊಳ್ಳಬೇಕಾದುದಷ್ಟೇ ಅಲ್ಲದೇ, ದಲಿತರ ಬಗ್ಗೆ ಗಾಢವಾಗಿ ಸ್ಪಂದಿಸುವುದನ್ನು ರೂಢಿಮಾಡಿಕೊಂಡರು. ಹಿಂದೂ ಧರ್ಮದ ಲೋಪಗಳನ್ನು ಕೊನೆಯ ಘಟ್ಟದಲ್ಲಿ ಗಾಂಧಿ ಸೂಕ್ಷ್ಮವಾಗಿ ಎತ್ತಿ ಆಡಿದ್ದಿದೆ. ಸ್ವಾತಂತ್ರ್ಯದ ದಾಹದಲ್ಲಿ ಗಾಂಧಿಯೂ, ಅಂಬೇಡ್ಕರ್ ಅವರೂ ನಿರಂತರವಾಗಿ ಒಂದೇ ಆಗಿದ್ದರು. ಸರ್ವೋದಯದ ಪ್ರಜಾ ರಾಜ್ಯವೇ ನಿಜವಾದ ‘‘state’ ಎಂದು ಗಾಂಧಿ ನಂಬಿದ್ದರು. ಅದಕ್ಕೆ ತಕ್ಕುದಾದ ರಾಜ್ಯಾಂಗ ಪದ್ಧತಿ ಇಲ್ಲ ಎಂಬುದು ಅಂಬೇಡ್ಕರ್ರ ತಗಾದೆಯಾಗಿತ್ತು. ಇವರಿಬ್ಬರ ಸ್ವಾತಂತ್ರ್ಯದ ಅಂತರಂಗವನ್ನು ಹಲವು ನೆಲೆಗಳಲ್ಲಿ ಅರ್ಥೈಸಬಹುದು.

ಧರ್ಮರಹಿತ ರಾಜಕಾರಣವನ್ನು ಅಂಬೇಡ್ಕರ್ ಕನಸಿದ್ದರು. ಹಿಂದೂ ಧರ್ಮದ ಮೇಲಿನ ಅವರ ಆಕ್ರೋಶವು ಈ ಬಗೆಯ ಒತ್ತಾಯವನ್ನು ಉಂಟುಮಾಡಿತ್ತು. ಹಾಗಿದ್ದರೂ ಅಂಬೇಡ್ಕರ್ ಎಲ್ಲ ಧರ್ಮಗಳ ಅಸ್ತಿತ್ವವನ್ನು ಮನ್ನಿಸಿಯೇ ಸಂವಿಧಾನದಲ್ಲಿ ಅವಕಾಶ ಕಲ್ಪಿಸಿದ್ದಾರೆ. ಬುದ್ಧನ ತತ್ವವೇ ಸಂವಿಧಾನದಲ್ಲಿ ಅಡಕವಾಗಿರುವುದು. ಗಾಂಧೀಜಿ ಮಾನವ ಧರ್ಮದ ರಾಜಕಾರಣಕ್ಕೆ ಗಮನಹರಿಸಿದ್ದರಿಂದಲೇ ಹಿಂದ್ ಸ್ವರಾಜ್ಯದ ಬಗ್ಗೆ ಸಮರ್ಥಿಸಿದ್ದು. ಈ ಬಗೆಯ ರಾಜಕಾರಣದ ಮೂಲಕವೇ ಅರಿಸ್ಟಾಟಲ್, ಪ್ಲೇಟೋ ಹೇಳಿದ ರಾಜಕೀಯ ಆಧ್ಯಾತ್ಮವನ್ನು ತಲುಪಲು ಸಾಧ್ಯ ಎಂದು ಭಾವಿಸಿದ್ದರು. ಪ್ಲೇಟೋನ ಆದರ್ಶ ರಾಜ್ಯದ ಕಲ್ಪನೆಯು ಸದಾ ಮಾನವ ಕೇಂದ್ರಿತವಾದುದೇ ಆಗಿತ್ತು. ಅದು ಚಾಣಕ್ಯನ ಪ್ರಭುನಿಷ್ಠ ರಾಜಕಾರಣವನ್ನು ಎಂದಿಗೂ ಬೆಂಬಲಿಸುವಂಥದ್ದಲ್ಲ. ಅಂಬೇಡ್ಕರ್ ಕನಸಿನ ಆದರ್ಶ ರಾಜ್ಯದಲ್ಲಿ ಬುದ್ಧನ ಜ್ಞಾನೋದಯವು ಅಖಂಡ ಹಿಂದೂ ಸಮಾಜದ ಜ್ಞಾನೋದಯವಾಗಿ ಮಾರ್ಪಡಬೇಕು ಎಂದಾಗಿತ್ತು. ಅದನ್ನವರು ಸಂವಿಧಾನದ ಮೂಲಕ ಪುನರ್ ಸೃಷ್ಟಿಸಿದರು.

ಇಂತಹ ಆದರ್ಶ ಸ್ವಾತಂತ್ರ್ಯ ಇಂದಿಗೂ ಭಾರತದ ಎಲ್ಲ ಸಮುದಾಯಗಳಿಗೂ ಸಿಕ್ಕಿಲ್ಲ. ಬಹುಪಾಲು ಎಲ್ಲರ ಸ್ವಾತಂತ್ರ್ಯವೂ ಕೃತಕವಾದದ್ದು. ಪ್ರಾಣಿಯ ಕೊರಳಿಗೆ ಕಟ್ಟಿಬಿಟ್ಟ ಹಗ್ಗದ ದೂರದಷ್ಟು ಸ್ವಾತಂತ್ರ್ಯ ಇದ್ದಂತೆ ಆಗಿದೆ. ಹಾಗೆಯೇ ಅದು ಒಬ್ಬರಿಂದ ಇನ್ನೊಬ್ಬರು ಕಸಿದುಕೊಂಡದ್ದು. ಜಾತಿಪದ್ಧತಿಯು ಇಂತಹ ದಾಸ್ಯ ಶ್ರೇಣಿಯನ್ನು ಬಲವಾಗಿ ಬಿತ್ತಿರುವುದರಿಂದ ಇಂದಿಗೂ ಸಮಾಜಗಳಿಗೆ ತಕ್ಕುದಾದ ಸ್ವಾತಂತ್ರ್ಯ ಸಿಕ್ಕಿಲ್ಲ. ಈ ಬಗೆಯ ಸಮಾಜದಲ್ಲಿ ಆರ್ಥಿಕ  ಸ್ವಾತಂತ್ರ್ಯ ಕನಸಿನ ಮಾತು. ಒಂದು ತುಂಡು ಜಮೀನಿಗಾಗಿ ಈಗಲೂ ಬಡ ಕೂಲಿ ಕಾರ್ಮಿಕ ಅಥವಾ ಹಳ್ಳಿಯ ದಲಿತ ತುಂಬ ಕಷ್ಟಪಡಬೇಕಾದ ಸ್ಥಿತಿಯಿದೆ. ಇಪ್ಪತ್ತೊಂದನೆ ಶತಮಾನದಲ್ಲೂ ದಲಿತರ ಭೂಮಿಯ ಕನಸು ಹಾಗೆಯೇ ಉಳಿದಿದೆ. ಮತ್ತೊದೆಡೆ ಭೂಮಿಯ ಯಜಮಾನ್ಯ ಪಡೆದಿದ್ದ ರೈತರು ಭೂಮಿಯ ಸಹವಾಸ ಸಾಕು ಎನ್ನುವಂತಾಗಿ  ಆರ್ಥಿಕ  ದಾರಿಗಳು ಕವಲುರೂಪದಲ್ಲಿ ಸಾಗಿ ಇಕ್ಕಟ್ಟಿನಲ್ಲಿದ್ದಾರೆ. ರಾಜಕಾರಣ ಮಾತ್ರ ಸರ್ವತಂತ್ರ ಸ್ವತಂತ್ರವಾಗಿದೆ. ದಲಿತರಿಗೆ ಸ್ವಾತಂತ್ರ್ಯವಿದ್ದೂ ಅದು ಮತ್ತೊಬ್ಬರ ಮೂಲಕ ಚಲಾಯಿಸುವಂತಾಗಿದೆ.

ಗಾಂಧಿ ಮತ್ತು ಅಂಬೇಡ್ಕರ್ ಬಹಳ ದೂರದ ರೂಪಕಗಳಂತೆ ಮಾಸುತ್ತಿರುವ ದುರಂತವೂ ಇಂತಹ ಸ್ಥಿತಿಯ ಒಳಗೇ ಇದೆ. ಗಾಂಧಿ ಮತ್ತು ಅಂಬೇಡ್ಕರ್ ಅವರನ್ನು ಇಪ್ಪತ್ತೊಂದನೆ ಶತಮಾನದಲ್ಲಿ ಎಚ್ಚರಿಕೆಯಿಂದ ನಮ್ಮ ಸಮಸ್ಯೆಗಳ ಜೊತೆ ಅನುಸಂಧಾನ ಮಾಡಬೇಕೇ ಹೊರತು ತುರ್ತಾದ ರಾಜಕೀಯ ಸ್ಪರ್ಧೆಗಳಲ್ಲಿ ಅವರನ್ನು ಬಳಸುವುದು ಅನೈತಿಕ. ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದರೂ, ಅದನ್ನು ಸಮಾಜಗಳಿಗೆ ತಕ್ಕಂತೆ ಸಂವಿಧಾನ ಬದ್ಧವಾಗಿ ನೀಡಿದ್ದರೂ, ಅವುಗಳ ನಿರ್ವಹಣೆ ಮಾತ್ರ ಅದೇ ನಿರಂಕುಶ ಜಾತಿ ವ್ಯವಸ್ಥೆಯ ಹಿಡಿತದಲ್ಲೇ ಇದೆ. ದಲಿತರ ಮೇಲಿನ ಹಲ್ಲೆ ಆಕ್ರಮಣಗಳ ಸಂದರ್ಭದಲ್ಲಿ ಇಡೀ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನಿತ್ಯವೂ ನೋಡುತ್ತಿದ್ದೇವೆ. ಗಾಂಧೀಜಿ ತಂದುಕೊಟ್ಟ ಸ್ವಾತಂತ್ರ್ಯವನ್ನು ಸಂವಿಧಾನದ ಚೌಕಟ್ಟಿನಲ್ಲಿ ರಾಜಕಾರಣ ಮೀರುತ್ತಲೇ ಅದಕ್ಕೆ ತಿದ್ದುಪಡಿಗಳನ್ನು ಮಾಡಿಕೊಳ್ಳುತ್ತಿರುತ್ತದೆ.

ನವ ವಸಾಹತುಶಾಹಿಯ ಸುಂದರ ರೂಪಗಳು ಆಧುನಿಕೋತ್ತರ ಜಗತ್ತಿನ ಮಾಯೆಯ ಒಳಗೆ ನುಸುಳಿ ಬರುವುದು ಇಂತಹ ಮಾರ್ಗಗಳಿಂದಲೇ. ನಮ್ಮ ದೇಶದ ರಾಜಕಾರಣಿಗಳು ಹಾಗೂ ಉದ್ಯಮಿಗಳೇ ಜಾಗತೀಕರಣವನ್ನು ವಿಕಾರಗೊಳಿಸುತ್ತ ಮಗುಮ್ಮಾಗಿರುವುದು. ದೇಶದ ಒಳಗಿನ ಸ್ವಾತಂತ್ರ್ಯವು ಅಖಂಡವಾಗಿದ್ದಾಗ ಮಾತ್ರ ಹೊರಗಿನ ಆರ್ಥಿಕ ಆಕ್ರಮಣಗಳನ್ನು ತಡೆಯಲು ಸಾಧ್ಯವಾಗುವುದು. ಗಾಂಧೀಜಿ ದೇಶದ ಹೊರಮೈ ಸ್ವಾತಂತ್ರ್ಯವನ್ನು ಗೆದ್ದಿದ್ದರಷ್ಟೆ. ಆಧುನಿಕತೆಯು ಬಳಸಿ ಬಿಸಾಡುವುದರಲ್ಲಿ ನಿಪುಣವಾಗಿದ್ದರೆ, ಆಧುನಿಕೋತ್ತರ ಆರ್ಥಿಕ  ಜಗತ್ತು ರೂಪಿಸುವ ನಿರಾಕರಣೆಯು ಅರಿವಿಗೆ ಬಾರದಂತೆ ಸ್ವತಃ ಆ ಸಮುದಾಯಗಳೇ ತಂತಾನೇ ನಿರಾಕರಿಸಿಕೊಂಡು ಕಳೆದುಹೋಗುವಂತೆ ಮಾಡುವುದರಲ್ಲಿ ನಿಸ್ಸೀಮತೆ ಪಡೆದಿದೆ. ದೇಶದ ಒಳಗಿನ ನೀತಿ ಕುರುಡಾಗಿದ್ದರೆ ಅದು ತನ್ನ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಲಾರದು. ದಾಸ್ಯವೇ ಸುಖ ಎಂದು ಕರ್ಮ ಸಿದ್ಧಾಂತದ ಚಪಲತೆಯಲ್ಲಿ ಬೆಳೆದ ಸಮಾಜ ಅಷ್ಟು ಸಲೀಸಾಗಿ ತನ್ನ ಹಳೆಯ ಗುಣವನ್ನು ಬಿಟ್ಟುಕೊಡಲಾರದು.

ಛಿದ್ರವಾದ ಸಮಾಜ ಒಟ್ಟಾಗಿ ಬಾಳುವಲ್ಲಿಯೂ ಅನೇಕ ಸಮಸ್ಯೆಗಳನ್ನು ಸದಾ ಎದುರಿಸುತ್ತ ಇರಬೇಕಾಗುತ್ತದೆ. ಗಾಂಧೀಜಿಯ ಭಾವದಲ್ಲಿ ಅಖಂಡ ಭಾರತ ಇತ್ತೇ ಹೊರತು ಅದರ ಒಳಗಿದ್ದ ಸಾವಿರಾರು ಬಿರುಕುಗಳು ಕಂಡೇ ಇರಲಿಲ್ಲ. ಛಿದ್ರತೆಯ ವ್ಯಸನದಲ್ಲೇ ಇರುವ ಸಮುದಾಯಗಳು ಸ್ವಾತಂತ್ರ್ಯವನ್ನು ಅನುಭವಿಸಲೂ ದುರ್ಬಲವಾಗಿರುತ್ತವೆ. ಹೀಗಾಗಿಯೇ ಇಂದಿಗೂ ಇಡೀ ಭಾರತದಲ್ಲಿ ಹಕ್ಕುಗಳನ್ನು ರಕ್ಷಿಸಿಕೊಳ್ಳುವುದಕ್ಕೆ ಬರುವುದಿಲ್ಲ. ಆದರೆ ಆ ಹಕ್ಕು ಬಾಧ್ಯತೆಗಳನ್ನು ಕಸಿಯಲು ಚಾಣಾಕ್ಷತೆಯಿರುತ್ತದೆ. ಇಂತಹ ನೀತಿಯಿಂದ ನಮ್ಮ ದೇಶದ ಕಾನೂನುಗಳನ್ನೆಲ್ಲ ತಮಗೆ ಬೇಕಾದಂತೆಲ್ಲ ಅಪಮೌಲ್ಯಗೊಳಿಸಲು ಸಾಧ್ಯವಾಗಿರುವುದು. ಭಾರತದ ಸಂವಿಧಾನವನ್ನೇ ವಕೀಲರು ತಮ್ಮ ಸ್ವರ್ಗವನ್ನಾಗಿಸಿ ಕೊಂಡಿರುವುದು ಇಂತಹ ಅವಕಾಶಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ. ಛಿದ್ರ ಸ್ವಾತಂತ್ರ್ಯದ ಬಯಕೆಯೇ ಜಾತಿ ಸಮಾಜದಲ್ಲಿ ಹೆಚ್ಚು. ಪ್ರತ್ಯೇಕತಾ ಚಳುವಳಿಗಳು ಈಗ ಮತ್ತಷ್ಟು ಬಲಗೊಂಡಿವೆ. ಸ್ವಾತಂತ್ರ್ಯವೂ ಜಾತಿಯ ಶ್ರೇಣಿಯಲ್ಲೇ ಬಳಕೆಯಾಗುತ್ತಿದೆ. ಕೆಳಜಾತಿಗಳಲ್ಲಿ ಉಂಟಾಗುತ್ತಿರುವ ಘರ್ಷಣೆಗೆ ಅಸಮಾನತೆಗಳು ಕಾರಣವಾಗಿದ್ದರೂ, ಛಿದ್ರತೆಯಲ್ಲಿ ಅವು ಸ್ವಾತಂತ್ರ್ಯವನ್ನು ಬಯಸುತ್ತಿವೆ. ಅವುಗಳ ಸಾಂಸ್ಕೃತಿಕ ಅನನ್ಯತೆಯೇ ಇಂತಹ ಪ್ರತ್ಯೇಕ ಸ್ವಾತಂತ್ರ್ಯವನ್ನು ಅಪೇಕ್ಷಿಸುತ್ತಿರುತ್ತದೆ. ಹೀಗೆ ಸ್ವಾತಂತ್ರ್ಯವನ್ನು ವರ್ಗೀಕರಿಸಿಕೊಳ್ಳುವುದು ಅತ್ಯಂತ ಕ್ರೂರವಾದ ಸಂಗತಿ. ಹೀಗೆ ಭಗ್ನ ಸ್ವಾತಂತ್ರ್ಯದಲ್ಲಿ ಸಮಾಜದ ಸಮಾನತೆ ಅಸಾಧ್ಯ. ಅಂತಹ ಸಮಾಜಗಳು ತಮ್ಮ ತಮ್ಮ ವಿರುದ್ಧವಾಗಿಯೇ ಪೈಪೋಟಿಗಿಳಿದು, ಅಸಾಧ್ಯವಾದ ಉದ್ದೇಶವನ್ನು ಕಟ್ಟಿಕೊಳ್ಳಬಲ್ಲವು. ಪಾಕಿಸ್ತಾನ, ಬಾಂಗ್ಲಾ, ಭಾರತಗಳು ಹೀಗೆ ಸೀಳಿಕೊಂಡೇ ಆಧುನಿಕೋತ್ತರ ಜಗತ್ತಿನಲ್ಲಿ ಹಲವಾರು ಸವಾಲುಗಳಿಗೆ ಸಿಲುಕಿ ತನ್ನ ನಾಗರಿಕ ವ್ಯವಸ್ಥೆಯಲ್ಲಿ ವಿಪರೀತವಾದ ಅಪ್ರಮಾಣಿಕತೆಯನ್ನು, ದುರ್ಬಲವಾದ ಆಡಳಿತ ವ್ಯವಸ್ಥೆಯನ್ನು ಹೊಂದಿರುವುದು. ಗಾಂಧೀಜಿಯವರ ಅಖಂಡ ಸ್ವಾತಂತ್ರ್ಯವೇ ಭಗ್ನಗೊಂಡಿರುವಲ್ಲಿ ದೇಶದ ಒಳಗಿನ ಸ್ವಾತಂತ್ರ್ಯವು ಭವಿಷ್ಯದಲ್ಲಿ ಮತ್ತೂ ಕ್ರೂರ ಸ್ಥಿತಿಯನ್ನು ತರಬಲ್ಲದು. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಈ ದೇಶದ ಸ್ವಾತಂತ್ರ್ಯವನ್ನು ರಕ್ಷಿಸಬೇಕಾದ ಅನಿವಾರ್ಯತೆ ಇದೆ. ಯಾರಿಗೆ ನಿಜವಾಗಿ ಸ್ವಾತಂತ್ರ್ಯ ಇಲ್ಲವೋ, ಅವರು ಯಾರ ಸ್ವಾತಂತ್ರ್ಯವನ್ನೂ ಮೊಟಕು ಮಾಡುವುದಿಲ್ಲ. ಸಂವಿಧಾನದ ಮೂಲಕ ಅಂಬೇಡ್ಕರ್ ಅವರು ಗಾಂಧೀಜಿ ಹೋರಾಡಿ ಗೆದ್ದ ಸ್ವಾತಂತ್ರ್ಯವನ್ನು ಹಂಚಿದ್ದಾರೆ. ಸ್ವಾತಂತ್ರ್ಯವನ್ನು ಹೀಗೆ ಪುನರ್ ಸೃಷ್ಟಿಸಿ ಸಮನಾಗಿ ಹಂಚುವುದು ಗಾಂಧೀಜಿ ಮಾಡಿದ ಹೋರಾಟದಷ್ಟೇ ಮುಖ್ಯವಾದದ್ದು. ಗಾಂಧೀಜಿ ಒಬ್ಬರೇ ನಿಜವಾಗಿ ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಗೆದ್ದಿದ್ದರು. ಒಂದು ವೇಳೆ ಆ ಸ್ವಾತಂತ್ರ್ಯವನ್ನು ಕೇವಲ ಪಡೆದಿದ್ದರೆ ಅದನ್ನು ಅವರು ಉಳಿದವರ ಪಾಲಿಗೆ ಬಿಟ್ಟುಕೊಡುತ್ತಿರಲಿಲ್ಲ. ಇದು ಸ್ವಾತಂತ್ರ್ಯದ ದರ್ಶನದ ಪರಿ. ರಾಷ್ಟ್ರೀಯ ಕಾಂಗ್ರೆಸ್ ನ ಮುಂದಾಳುಗಳು ಆ ಸ್ವಾತಂತ್ರ್ಯವನ್ನು ಕೆಂಪು ಕೋಟೆಯಲ್ಲಿ ಕುಳಿತು ಹಂಚಿಕೊಂಡರು. ಹಾಗೆ ಅಂದು ಹಂಚಿಕೊಂಡದ್ದು ರಾಜಕೀಯ ಪಕ್ಷ ಮತ್ತು ಜಾತಿಗಳ ಕೈಯಿಂದ ಅವರವರಿಗೆ ಬೇಕಾದಂತೆ ಅರ್ಥೈಸಲ್ಲಟ್ಟಿತು. ಗಾಂಧೀಜಿಗೆ ಸ್ವಾತಂತ್ರ್ಯ ಮಾತ್ರ ತಿಳಿದಿತ್ತು. ಅದರ ರಾಜಕಾರಣದ ಬಗ್ಗೆ   ಪೂರ್ತಿಯಾಗಿ ಅವರು ಮುಗ್ಧರಾಗಿದ್ದರು. ಅಂಬೇಡ್ಕರ್ ಆ ಸ್ವಾತಂತ್ರ್ಯದ ರಾಜಕಾರಣದ ವಿರೂಪವನ್ನು ಗ್ರಹಿಸಿದ್ದರು. ಸ್ವಾತಂತ್ರ್ಯದ ಮುಗ್ಧ ದರ್ಶನ ಗಾಂಧೀಜಿಗೆ ಅಖಂಡ ಪರ್ಯಾಯವಾಗಿತ್ತೆಂಬುದು ನಿಜವಿದ್ದರೂ, ಆ ಪರ್ಯಾಯವೇ ಅವರ ಮುಂದೆ ಇಂಡೋ ಪಾಕಿಸ್ತಾನದ ಸೀಳುವಿಕೆಯಲ್ಲಿ ದುರಂತದ ಆರಂಭವನ್ನು ಸೂಚಿಸಿತ್ತು.

ಅಂಬೇಡ್ಕರ್ ಈ ಎಲ್ಲ ಬೆಳವಣಿಗೆಗಳನ್ನು ನಿಷ್ಠುರವಾಗಿ ಏಕಾಂಗಿಯಾಗಿ ಧ್ಯಾನಿಸುತ್ತಿದ್ದರು. ಬುದ್ಧನ ಧ್ಯಾನ ಅವರನ್ನು ಕರೆಯುತ್ತಿತ್ತು. ಬುದ್ಧ ನೀಡುವ ಸ್ವಾತಂತ್ರ್ಯದ ಮಹಾ ಬೆಳಗು ಅಂಬೇಡ್ಕರ್ ಅವರಲ್ಲಿ ಭವಿಷ್ಯದ ಭಾರತದ ಬಗ್ಗೆ ಚಿಂತಿಸುವಂತೆ ಮಾಡಿತ್ತು. ಗಾಂಧೀಜಿಯನ್ನು ಸ್ವಾತಂತ್ರ್ಯದ ಉತ್ಸವಕ್ಕೆ ಗೋಡ್ಸೆ ಬಲಿಕೊಟ್ಟಿದ್ದು ಭಾರತೀಯರು ಸ್ವಾತಂತ್ರ್ಯವನ್ನು ಅರ್ಥಮಾಡಿಕೊಂಡಿರುವುದಕ್ಕೂ, ಅದನ್ನು ಭಗ್ನಗೊಳಿಸುವುದಕ್ಕೂ ಬಹುದೊಡ್ಡ ರೂಪಕ. ಗಾಂಧಿಯ ಜೊತೆಯಲ್ಲೆ ಗಾಂಧಿಯ ಸ್ವಾತಂತ್ರ್ಯದ ದರ್ಶನ ನೆತ್ತರಲ್ಲಿ ಲೀನವಾಗಿತ್ತು.

ದೇಶದಲ್ಲಿ ಜಾತಿ, ಮತ, ಧರ್ಮ, ವರ್ಗ, ಪಂಗಡಗಳು ಸ್ವಾತಂತ್ರ್ಯವನ್ನು ಪಡೆದುಕೊಂಡಿದ್ದವು. ಆದರೆ ಮನುಷ್ಯರು ಸ್ವಾತಂತ್ರ್ಯವನ್ನು ಪಡೆಯಲಿಲ್ಲ. ಅವರವರ ಸಂಕೇತಗಳು, ಅಧಿಕಾರದ ವ್ಯವಸ್ಥೆಗಳು, ಸನಾತನ ಮೌಲ್ಯಗಳು ಸ್ವಾತಂತ್ರ್ಯವನ್ನು ಕಸಿದುಕೊಂಡಿದ್ದವು. ಇಂತಹ ದುರಂತದ ನಡುವೆ ಅಂಬೇಡ್ಕರ್ ಸಂವಿಧಾನವನ್ನು ಬುದ್ಧನ ನೀತಿಯಲ್ಲಿ ಮತ್ತೆ ಪುನರ್ ಸೃಷ್ಟಿಸಿದರು. ಮನುಷ್ಯರಿಗೆ ಸಂವಿಧಾನದ ಮೂಲಕ ಸ್ವಾತಂತ್ರ್ಯವನ್ನು ಸಮನಾಗಿ ಹಂಚಿದರು. ಗದ್ದುಗೆಯನ್ನು ನಿರಾಕರಿಸಿ ಆಶ್ರಮ ಸೇರಿಕೊಂಡಿದ್ದ ಗಾಂಧಿಯ ಪ್ರಾರ್ಥನೆಯಲ್ಲಿ ಸ್ವಾತಂತ್ರ್ಯದ ಉಸಿರಾಟವಿತ್ತು. ನೆಹರು ಪಡೆ ಆ ಸ್ವಾತಂತ್ರ್ಯವನ್ನು ಆಧುನಿಕತೆಯ ಆದರ್ಶದಲ್ಲಿ ದೇಶವನ್ನು ಕಟ್ಟುವ ಭರದಲ್ಲಿ ಎಲ್ಲೆಲ್ಲಿಗೋ ಕೊಂಡೊಯ್ದಿತು. ಅಂಬೇಡ್ಕರ್ ರೂಪಿಸಿದ ಸಂವಿಧಾನದಲ್ಲಿ ಮುಕ್ತಿಗೆ ಬೇಕಾದ ಎಲ್ಲ ದಾರಿಗಳನ್ನು ತೆರೆಯಲಾಗಿತ್ತು. ಅಖಂಡ ಸ್ವಾತಂತ್ರ್ಯವನ್ನು ವ್ಯಕ್ತಿ ಸ್ವಾತಂತ್ರ್ಯದಲ್ಲಿ ಅಂಬೇಡ್ಕರ್ ವಿಸ್ತರಿಸಿದರು. ಗಾಂಧೀಜಿಗೆ ವ್ಯಕ್ತಿ ಸ್ವಾತಂತ್ರ್ಯದ ಘನತೆಗಿಂತಲೂ ದೇಶದ ಸ್ವಾತಂತ್ರ್ಯವೇ ಮಿಗಿಲಾಗಿತ್ತು.

ಭಾರತೀಯ ಸಮಾಜ ಎಂದೂ ಯಾವುದನ್ನು ಹಂಚಿಕೊಂಡು ಬದುಕುವಂತಹುದಲ್ಲ. ವಿಷಾದ ಹಾಗೂ ವ್ಯಂಗ್ಯವೆಂದರೆ ಏನೂ ಇಲ್ಲದ ಬರಿಗೈ ಸಮುದಾಯಗಳು ಮಾತ್ರ ತನ್ನಲ್ಲಿರುವುದನ್ನು ಮುಕ್ತವಾಗಿ ಹಂಚಿಕೊಳ್ಳುತ್ತಿರುತ್ತವೆ. ಪಡೆದ ಸಮಾಜಗಳು ಯಾವತ್ತೂ ಮತ್ತಷ್ಟು, ಇನ್ನಷ್ಟು ಎಂದು ಸಂಪತ್ತನ್ನು, ಅಧಿಕಾರವನ್ನು, ಸ್ವಾತಂತ್ರ್ಯವನ್ನು ಪಡೆದುಕೊಳ್ಳಲು ಹೊಸಬಗೆಯ ಉಪಾಯಗಳನ್ನು ಹುಡುಕುತ್ತಲೇ ಇರುತ್ತವೆ. ಅಂಬೇಡ್ಕರ್ ಅವರು ಗಾಂಧೀಜಿಯ ಸ್ವಾತಂತ್ರ್ಯವನ್ನೂ, ಬುದ್ಧನ ತತ್ವವನ್ನೂ ಸಂವಿಧಾನವಾಗಿ ಪರಿರ್ವತಿಸಿ ನ್ಯಾಯಾಂಗ ಕಾಯ್ಯಾಂಗ ಶಾಸಕಾಂಗಗಳ ಮೂಲಕ ಸ್ವಾತಂತ್ರ್ಯವನ್ನು ಗೆದ್ದು ಬಿಟ್ಟರು. ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರು ಮಾತ್ರ ಸ್ವಾತಂತ್ರ್ಯವನ್ನು ಗೆದ್ದದ್ದು. ಇವರಿಬ್ಬರೇ ಅದನ್ನು ಮರಳಿ ಸಮಾಜದ ಹಿತಕ್ಕಾಗಿ ಬಿಟ್ಟುಕೊಟ್ಟವರು. ಇದರಿಂದಲೇ ದಲಿತರಿಗೆ ಸಂವಿಧಾನ ಬದ್ಧವಾದ ಅಸ್ತಿತ್ವ ರೂಪುಗೊಂಡಿದ್ದು.

ಮಹಿಳೆಯರಿಗೆ ಮೊದಲಬಾರಿಗೆ ಅಂಬೇಡ್ಕರ್ ಪ್ರತ್ಯೇಕ ಮೀಸಲಾತಿಯನ್ನು ಏಕಾಂಗಿಯಾಗಿ ಹೋರಾಡಿ ಪ್ರತಿಪಾದಿಸಿದರು. ಸಮಾಜದ ಮುಖ್ಯ ಶಕ್ತಿಯಾದ ಮಹಿಳೆಯರಿಗೆ ಸಂವಿಧಾನದ ಮೂಲಕ ಸ್ವಾತಂತ್ರ್ಯವನ್ನು ನೀಡಿದ್ದು ಅಂಬೇಡ್ಕರ್ ವ್ಯಕ್ತಿತ್ವ ಎಂಥದೆಂಬುದನ್ನು ಸಾರುತ್ತದೆ. ದಲಿತರಿಗಂತೂ ಸಂವಿಧಾನವು ದೊಡ್ಡ ರಕ್ಷಾಕವಚವಾಯಿತು. ಇಂತಹ ರಕ್ಷಾಕವಚ ದೇಶದ ಎಲ್ಲ ಸಮುದಾಯಗಳಿಗೂ ಸಾಧ್ಯವಾಗಿದೆ. ಇಲ್ಲದಿದ್ದರೆ ಎಷ್ಟೋ ಸಮುದಾಯಗಳು ಎಂದೋ ಕಳೆದುಹೋಗುತ್ತಿದ್ದವು. ಈ ರಕ್ಷಾಕವಚ ಎಷ್ಟೊಂದು ಅಗಾಧವಾದುದೆಂದರೆ ಈ ದೇಶದ ಭಿಕ್ಷುಕನಿಗೂ ಅದು ನ್ಯಾಯದ ವಕಾಲತ್ತನ್ನು ವಹಿಸುತ್ತದೆ. ಅನಾಥರ ಹಸಿವಿನ ಬಗ್ಗೆ ಪ್ರಶ್ನಿಸುತ್ತದೆ. ಜಗತ್ತಿನ ಯಾವ ಸಂವಿಧಾನದಲ್ಲೂ ಹಸಿವಿನಿಂದ ಬಳಲುವವರ ಬಗ್ಗೆ ಉಲ್ಲೇಖವಿಲ್ಲ. ಅಂಬೇಡ್ಕರ್ ರೂಪಿಸಿದ ಸಂವಿಧಾನದ ಪ್ರಕಾರ ದೇಶದ ಯಾರಾದರೂ ಹಸಿವಿನಿಂದ ನರಳಿ ಸತ್ತರೆ, ಅದು ಆ ವ್ಯವಸ್ಥೆಯ ತಪ್ಪು, ಸರ್ಕಾರ  ಆ ಹೊಣೆ ಹೊರಬೇಕಾಗುತ್ತದೆ. ಅಂತವರ ಸಾವು ಇಲ್ಲವೆ ದುರ್ಬಲರ ದುರಂತಕ್ಕೆ  ಸರ್ಕಾರ ನೈತಿಕವಾಗಿ ಹೊಣೆಯಾಗಬೇಕಾಗುತ್ತದೆ ಎಂದು ಅವರು ಸೂಚಿಸಿದ್ದಿದೆ.

ಸಮಾಜದ ಕಟ್ಟಕಡೆಯ ಮನುಷ್ಯನಿಗೂ ಪ್ರಶ್ನಿಸುವ ಹಕ್ಕನ್ನು ಅಂಬೇಡ್ಕರ್ ಉದ್ದೇಶ ಪೂರ್ವಕವಾಗಿಯೆ ನೀಡಿದ್ದಾರೆ. ಧ್ವನಿಯೇ ಇಲ್ಲದವರ ಧ್ವನಿಯಾಗಿ ಸಂವಿಧಾನವು ತಂತಾನೇ ನ್ಯಾಯದ ಹೋರಾಟದ ಪ್ರಣಾಳಿಕೆಯಂತೆ ಅವರವರ ಅಸ್ತಿತ್ವಕ್ಕಾಗಿ ಹೋರಾಡುತ್ತದೆ. ಸಂವಿಧಾನದಲ್ಲಿ ಇಂತಹ ಸ್ವಾತಂತ್ರ್ಯದ ಅಂರ್ತಜಲ ಹರಿಯುವುದರಿಂದ ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು ಬದುಕುಳಿಯಲು ಸಾಧ್ಯವಾಗಿರುವುದು. ಹೀಗಾಗಿ ಭಾರತೀಯ ಸಂವಿಧಾನವು ಪರಮ ಸ್ವಾತಂತ್ರ್ಯದ ವ್ಯವಸ್ಥೆ. ಅಂತೆಯೇ ಎಲ್ಲರನ್ನೂ ಸಮಾನವಾಗಿ ಕಾಣುತ್ತ, ಅವರವರ ಘನತೆಗೆ ಅನನ್ಯತೆಗೆ ಭಂಗ ಉಂಟಾಗದಂತೆ ಕಾಯುವ ಶಕ್ತಿ. ಆಳುವ ವ್ಯವಸ್ಥೆಯನ್ನು ಸದಾ ನಿಯಂತ್ರಿಸುವ ಸಂವಿಧಾನದಲ್ಲಿ ಈ ದೇಶದ ನೊಂದ ಎಲ್ಲರ ವಿವೇಕವಿದೆ.

ಛಿದ್ರವಾಗಿದ್ದ ಭಾರತ ಮಾತೆಯ ಸೀರೆಯನ್ನು ಗಾಂಧೀಜಿ ಗತಕಾಲದ ರಮ್ಯ ಸ್ವಾತಂತ್ರ್ಯದ, ಸರ್ವೋದಯದ, ಆಧ್ಯಾತ್ಮದ ಬಲದಿಂದ ಹೊಲೆದು ಕೊಟ್ಟಿದ್ದನ್ನು ಅಂಬೇಡ್ಕರ್ ಆಧುನಿಕ ಜಗತ್ತಿನ ಎಚ್ಚರದಿಂದ, ಬುದ್ಧನ ಧ್ಯಾನದಿಂದ ತೊಳೆದು ಅದನ್ನು ಕೌದಿಯಾಗಿಸಿ ಅನಾಥರಿಗೂ ಹೊದೆಸಿಬಿಟ್ಟರು. ಈ ಹಿನ್ನೆಲೆಯಲ್ಲಿ ಗಾಂಧಿ ಮತ್ತು ಅಂಬೇಡ್ಕರ್ ದೇಹ ಮತ್ತು ಆತ್ಮವಿದ್ದಂತೆ. ಗಾಂಧೀಜಿಯು ಈ ದೇಶದ ದೇಹವಾದರೆ ಆ ದೇಹದ (ದೇಶದ) ಅಂತರಾತ್ಮ ಅಂಬೇಡ್ಕರ್. ಹಾಗೆಯೇ ಭಾರತದ ಸ್ವಾತಂತ್ರ್ಯ ಎಂದರೆ ಅದು ಗಾಂಧಿ. ಅಂತೆಯೆ ದೇಶದ ಸ್ವಾತಂತ್ರ್ಯದ ಆತ್ಮ ಎಂದರೆ ಅದು ಅಂಬೇಡ್ಕರ್. ದೇಹ ಮತ್ತು ಆತ್ಮ ಎರಡೂ ಒಂದನ್ನೊಂದು ಅವಲಂಬಿಸಿದ್ದರೂ ಅವು ಬೇರೆ ನೆಲೆಯ ಏಕಾಂತಗಳಲ್ಲಿ ಲೋಕಾಂತದ ಧಾವಂತಗಳನ್ನು ಹೊತ್ತು ಅಸ್ತಿತ್ವದ ಪಯಣದಲ್ಲಿ ಸಾಗುತ್ತಿರುತ್ತವೆ. ಆತ್ಮವಿಲ್ಲದ ದೇಹ ಅಸಾಧ್ಯ. ಹಾಗೆಯೆ ದೇಹವಿಲ್ಲದ ಆತ್ಮ ಅಸ್ತಿತ್ವರಹಿತವಾದದ್ದು. ಸವರ್ಣೀಯರಿಗೆ ಅಂಬೇಡ್ಕರ್ ಎಂಬ ಆತ್ಮವಿರಬೇಕು. ದಲಿತರಿಗೆ ಗಾಂಧಿ ಎಂಬ ದೇಹವಿರಬೇಕು. ಅದು ನಿಜವಾದ ಸೌಂದರ್ಯ, ಅದೇ ಆತ್ಯಂತಿಕವಾದ ಎಚ್ಚರ. ಅದೇ ನ್ಯಾಯದ ಪರಮ ಸಮಾನತೆಯ ವಾಸ್ತವ ಸ್ಥಿತಿ.

ಇಂತಹ ಧ್ಯಾನವಿಲ್ಲದ ಆಧುನಿಕೋತ್ತರ ಭಾರತವನ್ನು ಕಟ್ಟಲಾಗದು. ಸಂವಿಧಾನವನ್ನು ತಿದ್ದುಪಡಿ ಮಾಡಲು ಹಲವಾರು ಯತ್ನಗಳು ನಿರಂತರವಾಗಿ ಆಗುತ್ತಲೇ ಇವೆ. ಆಡಳಿತದ ಸುಧಾರಣೆಗೆ ಹಾಗೂ ಸಮಾಜದ ಹೊಸ ಬಗೆಯ ಅವಕಾಶಗಳಿಗೆ ತಿದ್ದುಪಡಿಗಳು ಅನಿವಾರ್ಯವಾಗಿ ಆಗಲೇಬೇಕು. ಯಾವ ಸಂವಿಧಾನವೂ ಸಾರ್ವಕಾಲಿಕವಾದುದಲ್ಲ. ತಿದ್ದುಪಡಿಗಳು ಸೀಮಿತ ನೆಲೆಯಿಂದ ಮತ, ಮೌಢ್ಯ, ಜಾತಿಗಳ ಹಿನ್ನೆಲೆಯಲ್ಲಿ ಆಗಬಾರದು. ಉನ್ನತ ನಾಗರೀಕತೆಯ ಕಡೆಗೆ ಚಲಿಸಬೇಕಾದಲ್ಲಿ ಸ್ವಾತಂತ್ರ್ಯ ಮತ್ತು ನೈತಿಕತೆ ಎರಡೂ ಸಾಧ್ಯತೆಗಳು ಇನ್ನಷ್ಟು ಬಲಶಾಲಿಯಾಗುವಂತೆ ಮಾರ್ಪಾಟಾಗಬೇಕು. ಸಂವಿಧಾನದಲ್ಲಿ ಲೋಪ ಇದೆ ಎನ್ನುವುದಕ್ಕಿಂತ ಆಳುವ ಸಮಾಜದಲ್ಲಿ ಯಾವ ಲೋಪ ಇದೆ ಎಂಬುದನ್ನು ಮೊದಲು ಪರಿಶೀಲಿಸಬೇಕು. ಗಾಂಧಿ ಮತ್ತು ಅಂಬೇಡ್ಕರ್ ರೂಪಿಸಿದ ಆಧುನಿಕ ಭಾರತ ಈ ಹೊತ್ತಿಗೆ ಬಹಳ ದೂರದ ಪಯಣಕ್ಕೆ ಸಜ್ಜಾಗುತ್ತಿದೆ. ಇಂಥಲ್ಲಿಯೇ ರೂಪವಿರೂಪ ಎಲ್ಲವೂ ಒಟ್ಟಿಗೆ ಬೆರೆತು ನಾಳೆಯ ವಾಸ್ತವ  ತೀರ್ಮಾನವಾಗುವುದು. ಬಲ ಪಂಥೀಯ ರಾಜಕಾರಣವು ತನ್ನ ಹಿಂದುತ್ವದ ರಕ್ಷಣೆಗಾಗಿ ಸಂವಿಧಾನವನ್ನೆ ವಿರೂಪಗೊಳಿಸಬಲ್ಲದು. ಆಗ ದೇಶದ ‘ಅಹಿಂದ’ ಸಮುದಾಯಗಳ ರಕ್ಷಾಕವಚವೇ ಸಡಿಲವಾಗಿಬಿಡುತ್ತದೆ. ಅಂತಹ ಅಪಾಯದ ನಡುವೆ ಒಳಗೊಳ್ಳಬೇಕಾದ ಸಾಂಘಿಕವಾದ ಪ್ರತಿರೋಧ ಶಕ್ತಿಯು ಒಗ್ಗೂಡಲು ಇದು ಸಕಾಲ.


ಸಂವಿಧಾನ-60 : ಸಾಮಾಜಿಕ ನ್ಯಾಯ ಮತ್ತು ಕರ್ನಾಟಕ” ಪುಸ್ತಕದಿಂದ.
ಕೃಪೆ: ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ, ಬೆಂಗಳೂರು.

(ಚಿತ್ರಕೃಪೆ: ವಿಕಿಪೀಡಿಯ)

3 thoughts on “ಗಾಂಧೀಜಿಯ ಸ್ವಾತಂತ್ರ್ಯ; ಅಂಬೇಡ್ಕರ್ ಸಂವಿಧಾನ.

  1. prasad raxidi

    ” ಸವರ್ಣೀಯರಿಗೆ ಅಂಬೇಡ್ಕರ್ ಎಂಬ ಆತ್ಮವಿರಬೇಕು. ದಲಿತರಿಗೆ ಗಾಂಧಿ ಎಂಬ ದೇಹವಿರಬೇಕು. ಅದು ನಿಜವಾದ ಸೌಂದರ್ಯ, ಅದೇ ಆತ್ಯಂತಿಕವಾದ ಎಚ್ಚರ. ಅದೇ ನ್ಯಾಯದ ಪರಮ ಸಮಾನತೆಯ ವಾಸ್ತವ ಸ್ಥಿತಿ”…ಹ್ಯಾಟ್ಸ್ ಆಫ್… ಗಣೇಶ್..

    Reply
  2. appagere somashekar

    ಗಾಂಧಿ ಮತ್ತು ಅಂಬೇಡ್ಕರ್ ಅವರನ್ನು ಕುರಿತ ಈ ನಿಮ್ಮ ಲೇಖನ ಮಹತ್ವಪೂಣ೵ವಾದದ್ದಾಗಿದೆ.ಜಾತಿಯ ಅಹಂಕಾರದಿಂದ ಮತ್ತು ಜಾತಿಯ ಕೀಳರಿಮೆಯಿಂದ ನರಳುತ್ತಿರುವ ಪ್ರತಿಯೊಬ್ಬ ಭಾರತೀಯನೂ ಓದಲೇಬೇಕಾದ ಲೇಖನ. ಈ ಎರಡೂ ರೂಪಕ ವ್ಯಕ್ತಿತ್ವಗಳನ್ನು ಸಮಥ೵ವಾಗಿ ಕಟ್ಟಿಕೊಟ್ಟಿದ್ದೀರಿ. ಜೊತೆಗೆ ಇವರ ಬಗೆಗೆ ಧ್ಯಾನಸ್ಥ ನೆಲೆಯಲ್ಲಿನಿಂತು ಪರಿಭಾವಿಸಬೇಕಾದ ವಿವೇಕದ ಬಗೆಗೆ ಸ್ಪಷ್ಟಪಡಿಸಿದ್ದೀರಿ.
    ಧನ್ಯವಾದಗಳು ಮೊಗಳ್ಳಿ ಗಣೇಶ್ ಸಾರ್.

    ಅಪ್ಪಗೆರೆ ಸೋಮಶೇಖರ್

    Reply

Leave a Reply to prasad raxidi Cancel reply

Your email address will not be published. Required fields are marked *