ಶಿಕ್ಷಣ ಇಲಾಖೆಗೊಂದು ಆಕ್ಷೇಪಣಾ ಪತ್ರ…

ಸ್ನೇಹಿತರೆ,

ಪ್ರಾಥಮಿಕ ಶಿಕ್ಷಣದ ಕ್ಷೇತ್ರದಲ್ಲಿ ತಮ್ಮ “ಪ್ರೇರಣಾ” ಸಂಸ್ಥೆಯ ಮೂಲಕ ತೊಡಗಿಸಿಕೊಂಡು ಕೆಲಸ ಮಾಡುತ್ತ ಬಂದಿರುವ ರೂಪ ಹಾಸನರವರು ಸರ್ಕಾರಿ ಪ್ರಾಥಮಿಕ ಶಿಕ್ಷಣದ ಬಗ್ಗೆ ತಮ್ಮ ಲೇಖನಗಳ ಮೂಲಕ ಸರ್ಕಾರದ ಮತ್ತು ಪ್ರಜ್ಞಾವಂತರ ಗಮನ ಸೆಳೆಯುತ್ತ ಬಂದಿದ್ದಾರೆ. ಇದು ಅವರು ಕಳುಹಿಸಿರುವ ಮನವಿ ಪತ್ರ. ವರ್ತಮಾನದ ಓದುಗರಲ್ಲಿ ಸರ್ಕಾರಿ ಶಾಲೆಗಳಲ್ಲಿ ಓದಿದವರು ಅನೇಕರಿದ್ದಾರೆ ಮತ್ತು ನಮ್ಮೆಲ್ಲರಿಗೂ ಸಮಾನ, ಉಚಿತ, ಮತ್ತು ಕಡ್ಡಾಯ ಶಿಕ್ಷಣದ ಬಗ್ಗೆ ಸ್ಪಷ್ಟ ನಿಲುವಿದೆ. ಈ ನಿಟ್ಟಿನಲ್ಲಿ ರೂಪ ಹಾಸನರವರು ನಮಗೆ ಕಳುಹಿಸಿರುವ ಈ ಮನವಿ ಪತ್ರವನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ. ಓದುಗರು ಇದರ ಬಗ್ಗೆ ಯೋಚಿಸಿ ನಿಮ್ಮ ಸ್ಪಷ್ಟ ಅಭಿಪ್ರಾಯವನ್ನು (ಅದು ಇಲ್ಲಿರುವುದಕ್ಕೆ ಸಹಮತವೇ ಆಗಿರಬೇಕೆಂದೇನೂ ಇಲ್ಲ) ಈ ಕೆಳಕಂಡ ಇಮೇಲ್ ವಿಳಾಸಕ್ಕೆ ತಲುಪಿಸಲು ಕೋರುತ್ತೇನೆ. ರವಿ ಕೃಷ್ಣಾರೆಡ್ಡಿ…

ಆತ್ಮೀಯರೇ,

ಹತ್ತು ಸಾವಿರದಸ್ಟು  ಸರ್ಕಾರಿ ಶಾಲೆ ಮುಚ್ಚುವಂತೆ ಪ್ರೊ. ಆರ್.ಗೋವಿಂದ ಅವರು ಸರ್ಕಾರಕ್ಕೆ ಸಲ್ಲಿಸಿರುವ ವರದಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಇದೆ ಆಗಸ್ಟ್ 31 ಕೊನೆಯ ದಿನವಾಗಿದೆ. ಮಕ್ಕಳ ಶಿಕ್ಷಣ ಕುರಿತು ಆಸಕ್ತಿ ಇರುವ ನೀವು- ನಿಮ್ಮ ಮಿತ್ರರು ದಯಮಾಡಿ ಇಲ್ಲಿಗೆ ಮೇಲ್ ಮಾಡಿ. ಆಕ್ಷೇಪಣೆ ಸಲ್ಲಿಸಿ. ನಾನು ಕೆಳಕಂಡಂತೆ ಆಕ್ಷೇಪಣೆ ಸಲ್ಲಿಸಿರುವೆ. ನೀವು ಅವಶ್ಯವೆನಿಸಿದರೆ ಹೆಸರು ಬದಲು ಮಾಡಿ ಈ ಪತ್ರವನ್ನೇ ಬಳಸಿಕೊಳ್ಳಬಹುದು. cpi.edu.sgkar@kar.nic.in


ಸದಸ್ಯ ಕಾರ್ಯದರ್ಶಿಗಳು ಮತ್ತು ರಾಜ್ಯ ಯೋಜನಾ ನಿರ್ದೇಶಕರು,
ಸರ್ವ ಶಿಕ್ಷಣ ಅಭಿಯಾನ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ,
ನೃಪತುಂಗ ರಸ್ತೆ, ಕೆ.ಆರ್. ಸರ್ಕಲ್,
ಬೆಂಗಳೂರು,

-ಇವರಿಗೆ,

ಮಾನ್ಯರೆ,

ಶಾಲಾ ಶಿಕ್ಷಣದ ಸಂರಚನೆಯ ಉನ್ನತೀಕರಣ ಹಾಗೂ ಪುನರ್ ಸಂಘಟನೆ ಕುರಿತ ವರದಿಯು ಹಲವು ರೀತಿಯಲ್ಲಿ ಅವೈಜ್ಞಾನಿಕವಾಗಿದ್ದು, ಸರ್ಕಾರಿ ಶಾಲೆಗಳನ್ನು ಈಗಾಗಲೇ ಸಾವಿರ ಸಂಖ್ಯೆಯಲ್ಲಿ ಮುಚ್ಚಿದ್ದರಿಂದ ಶಿಕ್ಷಣ ಇಲಾಖೆಯ ಅಧಿಕೃತ ಶೈಕ್ಷಣಿಕ ವರದಿ 2010-11ರ ಪ್ರಕಾರ, ಶಾಲೆಯ ಹೊರಗಿದ್ದ 39841 ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು. 2011-12ರ ಮೊನ್ನೆಯ ಜೂನ್ ವರದಿಯನ್ವಯ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ದ್ವಿಗುಣವಾಗಿ 68301ರಷ್ಟಾಗಿದೆ! ಇದರ ಜೊತೆಗೆ ಇನ್ನೂ ಅಂದಾಜು 10 ಸಾವಿರ ಶಾಲೆಗಳನ್ನು ಮುಚ್ಚಿದರೆ ಶಾಲೆಗಳಿಂದ ಹೊರಗುಳಿವ ಮಕ್ಕಳ ಸಂಖ್ಯೆ ಅಧಿಕವಾಗಿ ಅವರನ್ನು ಶಿಕ್ಷಣದಿಂದ ವಂಚಿಸಿದಂತಾಗುತ್ತದೆ. ಜೊತೆಗೆ, ಈಗಾಗಲೇ ಮಿತಿಮೀರಿರುವ ಖಾಸಗಿ ಶೈಕ್ಷಣಿಕ ವಲಯಕ್ಕೆ ಮತ್ತಷ್ಟು ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಈ ಪ್ರಮಾಣದಲ್ಲಿ ಮಕ್ಕಳು ಶಾಲೆಯಿಂದ ಹೊರಗುಳಿಯುವುದಾದರೆ ಎಲ್ಲ ಮಕ್ಕಳಿಗೂ ’ಉಚಿತ’ ’ಕಡ್ಡಾಯ’ ಶಿಕ್ಷಣ ಎಂಬ ಮಾತಿಗೆ ಅರ್ಥವಿದೆಯೇ?

ಸರ್ಕಾರಿ ಶಾಲೆಯಲ್ಲಿ ಮಕ್ಕಳ ಪ್ರಮಾಣ ಕಡಿಮೆಯಾಗಲು ಜನನ ಪ್ರಮಾಣದಲ್ಲಿನ ಕುಸಿತವೇ ಕಾರಣವೆಂದು ಒತ್ತಿ ಹೇಳಿರುವ ವರದಿ, ರಾಜ್ಯಾದ್ಯಂತಾ ಲಂಗುಲಗಾಮಿಲ್ಲದಂತೆ ತೆರೆದುಕೊಂಡಿರುವ 3000 ಕ್ಕೂ ಹೆಚ್ಚಿನ ಅನಧಿಕೃತ ಖಾಸಗಿ ಶಾಲೆಗಳ ಬಗೆಗಾಗಲಿ, ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ರಾಜ್ಯದಲ್ಲಿ ಯಾವುದೇ ಸ್ಪಷ್ಟ ನೀತಿ ನಿಯಮಗಳು ಇಲ್ಲದ್ದರಿಂದ ಅರ್ಧದಷ್ಟು ಮಕ್ಕಳು ಖಾಸಗಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವುದನ್ನಾಗಲಿ, ಸರ್ಕಾರಿ ಶಾಲೆಗಳು ಮೂಲ ಸೌಕರ್ಯವೂ ಇಲ್ಲದೇ ಸೊರಗಿರುವುದನ್ನಾಗಲಿ, 8000ಕ್ಕೂ ಅಧಿಕ ಶಿಕ್ಷಕರ ಹುದ್ದೆಗಳು ಭರ್ತಿಗಾಗಿ ಕಾದಿರುವುದನ್ನಾಗಲಿ ವರದಿಯಲ್ಲಿ ಎಲ್ಲಿಯೂ ಪ್ರಸ್ತಾಪಿಸಿಲ್ಲ. ಶಿಕ್ಷಣ ಹಕ್ಕು ಕಾಯ್ದೆಯನ್ನು ರಾಜ್ಯ ಸರ್ಕಾರ ಅಳವಡಿಸಿಕೊಂಡ ಈ ವರ್ಷವೇ ’ಉಚಿತ’ ’ಕಡ್ಡಾಯ’ ಶಿಕ್ಷಣದಿಂದ ಇಷ್ಟೊಂದು ಮಕ್ಕಳನ್ನು ದೂರಮಾಡುತ್ತಿರುವುದು ವಿಪರ್ಯಾಸ. ರಾಜ್ಯದ ಬಡ-ಗ್ರಾಮೀಣ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಈ ವರದಿ ಅವೈಜ್ಞಾನಿಕವೂ, ಮಾರಕವೂ ಆದುದಾಗಿರುವುದರಿಂದ, ಸರ್ಕಾರಿ ಶಾಲೆಗಳನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದೆಂದು ಈ ಮೂಲಕ ವಿನಂತಿಸುತ್ತೇನೆ. ಬದಲಿಗೆ ಸರ್ಕಾರಿ ಶಾಲೆಗಳನ್ನು ಬಲಪಡಿಸಲು, ಅನಧಿಕೃತ ಶಾಲೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು, ಖಾಸಗಿವಲಯದ ಪಾಲುದಾರಿಕೆ ಎಷ್ಟು ಪ್ರಮಾಣದಲ್ಲಿರಬೇಕು? ಯಾವ ಸ್ವರೂಪದಲ್ಲಿರಬೇಕು? ಅದರ ಮೇಲೆ ಸರ್ಕಾರದ ನಿಯಂತ್ರಣ ಹೇಗಿರಬೇಕು? ಈ ಕುರಿತು ತಕ್ಷಣದಲ್ಲಿ ತಜ್ಞರ ಸಮಿತಿಯೊಂದನ್ನು ರಚಿಸಿ ಕಾರ್ಯಪ್ರವರ್ತರಾಗಬೇಕೆಂದು ಕೇಳಿಕೊಳ್ಳುತ್ತೇನೆ.

ವಂದನೆಗಳೊಂದಿಗೆ,
ರೂಪ ಹಾಸನ
ಪ್ರೇರಣಾ
ಉತ್ತರ ಬಡಾವಣೆ,
ಹಾಸನ – 573201

One thought on “ಶಿಕ್ಷಣ ಇಲಾಖೆಗೊಂದು ಆಕ್ಷೇಪಣಾ ಪತ್ರ…

  1. ಎಚ್. ಸುಂದರ ರಾವ್

    ಇಂಥದೊಂದು ಪತ್ರವನ್ನು ಸರಕಾರಕ್ಕೆ ಬರೆದಿರುವುದಕ್ಕಾಗಿ ರೂಪ ಹಾಸನ ಅವರಿಗೆ ಅಭಿನಂದನೆಗಳು. ಇದು ನಿಜವಾಗಿ ಪ್ರಜಾಪ್ರಭುತ್ವ ಕೆಲಸ ಮಾಡಬೇಕಾದ ರೀತಿ. ವರ್ತಮಾನದ ಓದುಗರು ದೊಡ್ಡ ಸಂಖ್ಯೆಯಲ್ಲಿ ಈ ಚಳವಳಿಯಲ್ಲಿ ಭಾಗವಹಿಸುತ್ತಾರೆಂದು ನಿರೀಕ್ಷಿಸುತ್ತೇನೆ. ನಾನು ಸರಕಾರಕ್ಕೆ ಬರೆದ ಪತ್ರ ಹೀಗಿದೆ:

    ಎಚ್. ಸುಂದರ ರಾವ್
    ಮಾಹಿತಿ ಹಕ್ಕು ಕಾರ್ಯಕರ್ತ
    ನೇಸರ, ಕೆರೆಕೋಡಿ, ಅಂ: ಮೊಡಂಕಾಪು
    ಬಿ.ಸಿ.ರೋಡು, ದ.ಕ. ಇವರಿಂದ

    ಸದಸ್ಯ ಕಾರ್ಯದರ್ಶಿಗಳು ಮತ್ತು ರಾಜ್ಯ ಯೋಜನಾ ನಿರ್ದೇಶಕರು,
    ಸರ್ವ ಶಿಕ್ಷಣ ಅಭಿಯಾನ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ,
    ನೃಪತುಂಗ ರಸ್ತೆ, ಕೆ.ಆರ್. ಸರ್ಕಲ್,
    ಬೆಂಗಳೂರು,
    -ಇವರಿಗೆ,

    ಮಾನ್ಯರೆ,
    ವಿಷಯ: ಸರಕಾರಿ ಶಾಲೆಗಳನ್ನು ಮುಚ್ಚುವ ಶಿಫಾರಸಿಗೆ ಪ್ರತಿಭಟನೆ
    ಈ ಪತ್ರದೊಂದಿಗೆ ಹಾಸನದ ಪ್ರೇರಣಾ ಸಂಸ್ಥೆಯ ರೂಪ ಹಾಸನ ಅವರು ನಿಮಗೆ ಬರೆದ ಪತ್ರದ ಪಠ್ಯವನ್ನು ಇರಿಸಿದ್ದೇನೆ. ಸಾವಿರ ಸಾವಿರ ಸಂಖ್ಯೆಯಲ್ಲಿ ಸರಕಾರಿ ಶಾಲೆಗಳನ್ನು ಮುಚ್ಚುವುದಕ್ಕೆ ನನ್ನ ಪ್ರತಿಭಟನೆ ಇದೆ. ಸರಕಾರವು ಒಳಗಿಂದೊಳಗೆ ಶಿಕ್ಷಣವನ್ನು ಖಾಸಗಿಯವರಿಗೆ ಮಾರುವ ಉದ್ದೇಶ ಹೊಂದಿಲ್ಲ ಎಂದು ಹಾರೈಸುತ್ತೇನೆ.
    ಈ ಪತ್ರಕ್ಕೆ ನಿಮ್ಮಿಂದ ಇನ್ನು ಹದಿನೈದು ದಿನಗಳಲ್ಲಿ ಉತ್ತರ ನಿರೀಕ್ಷಿಸುತ್ತೇನೆ.
    ವಂದನೆಗಳೊಂದಿಗೆ
    ನಿಮ್ಮ ವಿಶ್ವಾಸಿ
    ಎಚ್. ಸುಂದರ ರಾವ್
    31-08-2012

    Reply

Leave a Reply

Your email address will not be published. Required fields are marked *