Monthly Archives: August 2012

ಗಾಂಧೀಜಿಯ ಸ್ವಾತಂತ್ರ್ಯ; ಅಂಬೇಡ್ಕರ್ ಸಂವಿಧಾನ.

  – ಡಾ. ಮೊಗಳ್ಳಿ ಗಣೇಶ್

ಆಧುನಿಕ ಭಾರತವನ್ನು ರೂಪಿಸಿದವರಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದವರೆಂದರೆ ಗಾಂಧಿ ಮತ್ತು ಅಂಬೇಡ್ಕರ್. ಕತ್ತಲ ಕೂಪವಾಗಿದ್ದ ಭಾರತಕ್ಕೆ ಇವರಿಬ್ಬರ ಹೋರಾಟ ಮತ್ತು ಚಿಂತನೆಗಳು ಅಪಾರವಾದ ಜೀವ ತುಂಬಿವೆ. ತಿರಸ್ಕೃತ ಸಮಾಜಗಳಿಗೆ ಇವರಿಬ್ಬರು ಅಸ್ತಿತ್ವ ರೂಪಿಸಿದ ನಾಯಕರ ರೀತಿಯಲ್ಲೆ ಕಾಣುತ್ತಾರೆ. ಗಾಂಧಿ ಮತ್ತು ಅಂಬೇಡ್ಕರ್ ಭಾರತ ದೇಶದ ಮಾನವೀಯ ಪ್ರಜ್ಞೆಯ ಸಂಕೇತ. ಬಿಡುಗಡೆಯ ಅಖಂಡ ಪ್ರತಿರೋಧ ಶಕ್ತಿಯ ಚೈತನ್ಯವಾಗಿ ಇವರು ಸಮಾಜಗಳನ್ನು ಮುನ್ನಡೆಸಿದರು. ನೈತಿಕತೆಯ ಪರಮಾದರ್ಶ ಗಾಂಧಿ ಮತ್ತು ಅಂಬೇಡ್ಕರ್. ಎಲ್ಲ ನೊಂದವರ ಹೊರಗಣ್ಣಾಗಿ ಗಾಂಧಿ ಕಂಡರೆ ಅಂತವರ ಒಳಗಣ್ಣಾಗಿ ಅಂಬೇಡ್ಕರ್ ಗೋಚರವಾಗುತ್ತಾರೆ. ಈ ಎರಡೂ ದೃಷ್ಟಿಗಳು ಸದಾ ಒಂದನ್ನೊಂದು ಅಂತರ್ಗತಿಸಿಕೊಂಡು ಬೆಳಕಿನ ಹಾದಿಯಲ್ಲಿ ದೇಶವನ್ನೂ ಸಮೂಹವನ್ನೂ ನಡೆಸಿವೆ. ದೇಶದ ಹೊರ ಮೈಯ ಹೊರಗಣ್ಣಿನಂತೆಯೆ ಗಾಂಧೀಜಿ ಇದ್ದರು. ಒಂದು ದೇಶದ ಅಂತಃಸಾಕ್ಷಿಯನ್ನು ಬಲ್ಲವರಾಗಿದ್ದ ಅವರು ಸದಾ ಸಮಾಜದ ಹಿತಕ್ಕಾಗಿ ತಮ್ಮನ್ನು ತಾವು ದಂಡಿಸಿಕೊಳ್ಳುತ್ತಿದ್ದರು. ವಶಾಹತುಶಾಹಿ ಜಗತ್ತನ್ನು ನಿರಾಕರಿಸಿದ್ದ ಅವರ ಪ್ರತಿರೋಧವು ದೇಶದ ಅಂತಃಸತ್ವದಿಂದಲೆ ಬಂದುದಾಗಿತ್ತು.

ಗಾಂಧೀಜಿಯವರನ್ನೂ ಅಂಬೇಡ್ಕರ್ ಅವರನ್ನೂ ನಾವು ನಮ್ಮ ಅಗತ್ಯಗಳ ಎರಕದಿಂದ ಕಂಡುಕೊಂಡಿರುತ್ತೇವೆ. ನಮ್ಮ ಅನಿವಾರ್ಯತೆಗಳನ್ನು ಮೀರಿದ ವ್ಯಕ್ತಿತ್ವ ಅವರದು. ಒಂದು ಸಮಾಜದ ಅಗತ್ಯದಿಂದ ರೂಪುಗೊಳ್ಳುವ ವ್ಯಕ್ತಿತ್ವಗಳು ಅದರ ಒಟ್ಟು ಮೌಲ್ಯವ್ಯವಸ್ಥೆಯನ್ನೆ ನಿರ್ಮಿಸುತ್ತಿರುತ್ತವೆ. ಗಾಂಧಿ, ಅಂಬೇಡ್ಕರ್ ಹಾಗಾಗಿಯೆ ಭಾರತದ ಅಂತಃಸತ್ವದ ಎರಡು ವಿಶಿಷ್ಟ ವ್ಯಕ್ತಿತ್ವಗಳು. ಅಂತೆಯೆ ಈ ಸಮಾಜಗಳ ಅಂತಃಕರಣಕ್ಕಾಗಿ ಕೊನೆತನಕ ಹೋರಾಡಿದ ಚೈತನ್ಯಗಳು. ಗಾಂಧಿ ಮತ್ತು ಅಂಬೇಡ್ಕರ್ ನಡುವಿನ ವೈರುಧ್ಯಗಳು ನಮ್ಮ ವೈರುಧ್ಯಗಳಾಗಬೇಕಾಗಿಲ್ಲ. ಅವರವರ ಬೌದ್ಧಿಕ ಸಂಘರ್ಷದ ಕಥನಗಳು ಮೇಲು ಪದರಿನಲ್ಲಿ ಭಿನ್ನವಾಗಿದ್ದರೂ ಆ ಭಿನ್ನತೆಯ ನಡುವೆಯೆ ಇಬ್ಬರೂ ದಲಿತ ಸಮಾಜದ ಮುಕ್ತಿಯ ಕಡೆಗೆ ಪ್ರಾಮಾಣಿಕವಾಗಿ ದುಡಿದವರು. ಬುದ್ಧನನ್ನು ಹೊರತು ಪಡಿಸಿದರೆ ದಲಿತರ ಮೇಲೆ ಅಪಾರ ಪ್ರೇಮ, ಅಂತಃಕರಣ ಹಾಗೂ ಘನತೆ ಇದ್ದದ್ದು ಗಾಂಧೀಜಿಗೆ ಮಾತ್ರ. ಅಂಬೇಡ್ಕರ್ ಅವರಿಗೆ ತಂತಾನೆ ಅಗಾಧವಾದ ಹೊಣೆಗಾರಿಕೆ ದಲಿತರ ಪರವಾಗಿ ಇತ್ತು. ಒಂದು ದೇಶವನ್ನು ಪ್ರೀತಿಸಿದಷ್ಟೆ ಸಮನಾಗಿ ಗಾಂಧೀಜಿ ಆ ದೇಶದ ಎಲ್ಲರನ್ನು ಗೌರವಿಸುತ್ತಿದ್ದರು. ಅವರ ನಿಷ್ಠೆಯು ಪ್ರಶ್ನಾತೀತವಾದುದು. ಗಾಂಧೀಜಿಗೆ ದಲಿತರಷ್ಟೇ ಅಂತಿಮವಾಗಿರದೆ ಇಡೀ ಮನುಕುಲವೆ ಸುಖವಾಗಿ ಸರ್ವೊದಯದ ಹಾದಿಯಲ್ಲಿ ಅನಂತತೆಯ ಕಡೆಗೆ ಸಾಗಬೇಕು ಎಂಬ ಮಹಾಶಯವಿತ್ತು. ವಸಾಹತುಶಾಹಿಯ ಮೂಲಕವೇ ಗಾಂಧೀಜಿ ಇಪ್ಪತ್ತನೆ ಶತಮಾನವನ್ನು ಅದರ ಎಲ್ಲ ಸಾಧ್ಯತೆಗಳಿಂದ ಗ್ರಹಿಸಿದ್ದರಿಂದ ಸಾಮ್ರಾಜ್ಯವನ್ನು ನಿರಾಕರಿಸುತ್ತಲೆ ಸಮಾಜದ ಒಳಗಿನ ಜಾತಿಯ ವೈರುಧ್ಯಗಳನ್ನು ಕಳೆದುಕೊಳ್ಳಬೇಕಾಗಿತ್ತು.

ಈ ಪರಿಯ ಸವಾಲು ವರ್ಗದ ಸವಾಲುಗಳನ್ನು ಬಿಡಿಸಿಕೊಂಡಷ್ಟು ಸರಳವಾಗಿರಲಿಲ್ಲ. ವರ್ಗಗಳು ಕಾಣಲ್ಪಡುವ ಶೋಷಣೆಯ ವ್ಯವಸ್ಥೆಯಾದರೆ; ಜಾತಿಯ ಹಿಂಸೆಯು ಧಾರ್ಮಿಕ ಅಧಿಕಾರದಲ್ಲಿ ಪ್ರಶ್ನಾತೀತವಾಗಿ ನಡೆವ ‘ಕರ್ಮ’ವಾಗಿ ಪರಿಣಮಿಸಿದ್ದರಿಂದ ಅದು ಸಮಾಜಕ್ಕೆ ಬೇಕಾದ ವ್ಯವಸ್ಥೆಯೆ ಆಗಿ ಬೆರೆತುಹೋಗಿತ್ತು. ಅದರ ಬೇರುಗಳು ಕಾಣದ ಆಯಕಟ್ಟುಗಳಲ್ಲಿ ಸಮಾಜವನ್ನು ನಿಯಂತ್ರಿಸುತ್ತಿತ್ತು. ಗಾಂಧೀಜಿ ಇಂತಹ ದುರವಸ್ಥೆಯನ್ನು ಸರಿಪಡಿಸಲು ಪ್ರಯತ್ನಿಸಿದಂತೆಲ್ಲ ಅವರ ಹಿಂಬಾಲಕರೇ ಅದನ್ನು ಗುಪ್ತವಾಗಿ ಉಳಿಸಿಕೊಳ್ಳುತ್ತಿದ್ದರು. ಅದರ ಪ್ರಾಯಶ್ಚಿತ್ತಕ್ಕೋ ಎಂಬಂತೆ ಗಾಂಧೀಜಿ ಪ್ರತಿ ಹೋರಾಟದ ಸಂದರ್ಭದಲ್ಲಿ ಮಹಿಳೆಯರು ಹಾಗೂ ಅಸ್ಪೃಶ್ಯರು ಚಳುವಳಿಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದರೆ ಅಷ್ಟರ ಮಟ್ಟಿಗೆ ನಮ್ಮ ಹೋರಾಟ ವಿಫಲವೇ ಎಂದು ಭಾವಿಸುತ್ತಿದ್ದರು. ಗಾಂಧೀಜಿಯವರ ನೈತಿಕತೆಯನ್ನು ತಾಳ್ಮೆಯಿಂದ ಗಮನಿಸಬೇಕು. ದಲಿತರನ್ನು, ಅದರಲ್ಲಿ ಮಲ ಹೊರುವ ಭಂಗಿಗಳನ್ನು ಗಾಂಧೀಜಿ ಕಂಡು ಅಪಾರವಾಗಿ ಅವರ ‘ಸೇವೆ’ಯಲ್ಲಿ ತಾವೂ ಗುರುತಿಸಿಕೊಂಡು ತಮ್ಮ ಆಶ್ರಮದಲ್ಲಿ ಉಳಿಯಲು ಬಂದವರೂ ಕೂಡ ಕಡ್ಡಾಯವಾಗಿ ಮಲ ತೊಳೆವ ಕರ್ಮವನ್ನು ಮಾಡಬೇಕು ಎಂದು ಕೋರುತ್ತಿದ್ದರು. ಈ ಕೆಲಸವನ್ನು ಸ್ವತಃ ತನ್ನ ಮಡದಿಯ ಮೂಲಕವೂ ಗಾಂಧೀಜಿ ಮಾಡಿಸುತ್ತಿದ್ದರು. ಒಂದು ಕಡೆ ವಸಾಹತುಶಾಹಿ ಸಾಮ್ರಾಜ್ಯದ ವಿರುದ್ಧ ಹೋರಾಡುತ್ತಲೇ ಇನ್ನೊಂದೆಡೆ ಸಮಾಜದ ಹೇಯ ಜಾತಿಪದ್ಧತಿಯ ಸುಧಾರಣೆಯ ಬಗೆಗೂ ಗಾಂಧೀಜಿ ಅವಿಶ್ರಾಂತವಾಗಿ ಚಿಂತಿಸುತ್ತಿದ್ದರು. ‘ಹರಿಜನ್’ಎಂಬ ಹೆಸರಿನಲ್ಲಿ ಪತ್ರಿಕೆಯನ್ನು ಆರಂಭಿಸಿದ ಮೊದಲಿಗರು ಅವರು. ಅಸ್ಪೃಶ್ಯತೆಯ ಮಹಾಸಾಮ್ರಾಜ್ಯವು ಇವತ್ತಿಗೂ ಇಷ್ಟೊಂದು ಪ್ರಮಾಣದಲ್ಲಿ ವ್ಯಾಪಿಸಿಕೊಂಡಿರುವಾಗ; ಪತ್ರಿಕೋದ್ಯಮದಲ್ಲಂತೂ ಅದರ ಸಾಮಥ್ರ್ಯ ದ್ವಿಗುಣಿಸಿರುವಾಗ; ಅದರ ವಿರುದ್ಧ ಬರೆಯಲು ಹೋರಾಡಲು ಆಗದಿರುವಾಗ; ಇನ್ನು ಆ ಕಾಲದಲ್ಲಿ ಗಾಂಧೀಜಿ ‘ಹರಿಜನ್’ ಹೆಸರಿನಲ್ಲಿ ಪತ್ರಿಕೆ ಆರಂಭಿಸಿದ್ದು ಸಣ್ಣ ಸಂಗತಿಯಲ್ಲ. ಅಸ್ಪೃಶ್ಯರ ಗುರುತಿನಲ್ಲಿ ಅವರ ಪರವಾಗಿ ಬರೆಯಲು ಒಂದು ಪತ್ರಿಕೆಯನ್ನು ಆರಂಭಿಸಿದ್ದು ಚಾರಿತ್ರಿಕವಾಗಿತ್ತು. ಅಖಂಡವಾಗಿ ಸಮಾಜವನ್ನು ಭಾವಿಸುತ್ತಿದ್ದ ಗಾಂಧೀಜಿಗೆ ಅನಿವಾರ್ಯವಾಗಿ ಸಮಾಜದ ಎಲ್ಲರ ಹಿತದ ಜೊತೆಯೇ ಅಸ್ಪೃಶ್ಯರ ಪರವಾಗಿ ಚಿಂತಿಸಬೇಕಾಗಿತ್ತು. ಇದು ಅತ್ಯಂತ ಕಠಿಣವಾದ ಚಿಂತನೆಯ ದಾರಿ. ಕೊಲ್ಲುವವನನ್ನೂ ಕೊಲ್ಲಿಸಿಕೊಳ್ಳುವವನನ್ನೂ ಇಬ್ಬರನ್ನೂ ಹೆಗಲ ಮೇಲೆ ಕೂರಿಸಿಕೊಂಡು ವಶಾಹತುಶಾಹಿ ಸಾಮ್ರಾಜ್ಯದ ಸಮುದ್ರವನ್ನು ಹಾಯುತ್ತಿದ್ದ ಗಾಂಧೀಜಿಗೆ ವೈರುಧ್ಯಗಳು ಎದುರಾದದ್ದು ಸಾಮಾನ್ಯ. ಗಾಂಧಿ ಇಂತಹ ಪ್ರಬಲ ವೈರುಧ್ಯವನ್ನು ತಾಯ್ತನದ ಅಂತಃಕರಣದಲ್ಲಿ ಹೊತ್ತುಕೊಂಡೇ ಇಬ್ಬರ ನಡುವೆಯು ವಿಶ್ವಾಸವನ್ನು ಅಂತಃಕರಣದ ನೀತಿಯನ್ನು ತರಲು ಯತ್ನಿಸುತ್ತಿದ್ದರು. ಭಾರತದ ಯಾವ ತತ್ವ ಪ್ರವರ್ತಕರಿಗೂ ಇಂತಹ ಧ್ಯಾನವಾಗಲೀ, ಅನಂತವಾದ ಸಮುದಾಯ ಪ್ರೀತಿಯಾಗಲೀ ಇರಲಿಲ್ಲ. ಬುದ್ಧ ಇಂಥದನ್ನು ಸಾಧಿಸಿದ್ದ. ಹಿಂದೂ ಧರ್ಮದ ಯಾವ ಆಚಾರ್ಯರೂ ಇಂತಹ ದಾರಿಯಲ್ಲಿ ಒಂದಿಷ್ಟು ಹೆಜ್ಜೆಯನ್ನೂ ಇಡಲು ಆಗಿರಲಿಲ್ಲ. ಬಸವಣ್ಣ ಒಂದಷ್ಟು ದೂರ ಧೀರತೆಯಲ್ಲಿ ಸಾಗಿದ್ದು ನಿಜ. ಹಿಂದೂ ಧರ್ಮವು ಜಾತಿಯ ತರ್ಕವನ್ನು ಅಡಗಿಸಿಟ್ಟುಕೊಂಡಿದ್ದರಿಂದ ಅದರ ಬಹುಪಾಲು ಪ್ರವರ್ತಕರು ಅಲ್ಲಲ್ಲೇ ನಿಂತು ಹೋದರು.

ಗಾಂಧೀಜಿ ಆಧುನಿಕ ಇಪ್ಪತ್ತನೆ ಶತಮಾನದ ಅಖಂಡ ಸ್ವಾತಂತ್ರ್ಯದ ದಾಹದಲ್ಲಿ ಹೋರಾಡಿದ್ದು ಅಸಾಮಾನ್ಯವಾದುದು. ದಾರ್ಶನಿಕನ ಎಲ್ಲ ಗುಣಗಳು ಗಾಂಧೀಜಿಗೆ ಇದ್ದವು. ಅದರಲ್ಲೂ ತಾಯ್ತನ ಅವರಲ್ಲಿ ಅವಿನಾಭಾವವಾಗಿ ಕೂಡಿಕೊಂಡಿತ್ತು. ಜಗತ್ತಿನ ಎಲ್ಲ ಶ್ರೇಷ್ಠ ಚಿಂತಕರು, ದಾರ್ಶನಿಕರು, ಹೋರಾಟಗಾರರು, ಕವಿಗಳು ಮತ್ತು ವಿಜ್ಞಾನಿಗಳು ತಾಯ್ತನ ಸ್ವಭಾವದವರು. ಇಂತಹ ತಾಯ್ತನದವರು ಸದಾ ಸ್ವಾತಂತ್ರ್ಯದ ಪರಮ ನೆಲೆಯನ್ನೇ ಧ್ಯಾನಿಸುತ್ತಿರುತ್ತಾರೆ. ಟಾಲ್ ಸ್ಟಾಯ್ ಗೆ ಇದ್ದ ಸೌಂದರ್ಯ ಪ್ರಜ್ಞೆ ಗಾಂಧಿಗೂ ಇತ್ತು. ಅಂತೆಯೇ ಐನ್ ಸ್ಟೈನ್ ಗೆ ಇದ್ದ ಸತ್ಯ ಶೋಧನೆಯ ಗುಣವೂ ಗಾಂಧಿಗೆ ಇತ್ತು. ಈ ತರಹದ ಎರಡೂ ಭಾವನೆಗಳು ಗಾಂಧಿಯ ಚಿಂತನೆಯಲ್ಲಿ ಇದ್ದಿದ್ದರಿಂದಲೇ ಅವರ ವ್ಯಕ್ತಿತ್ವದಲ್ಲಿ ಅನೇಕ ವೈರುಧ್ಯಗಳೂ, ವಿಚಿತ್ರ ಸ್ವಭಾವಗಳೂ ಕಾಣುತ್ತವೆ. ಸ್ವಾತಂತ್ರ್ಯದ ಬಗ್ಗೆ ಗಾಂಧೀಜಿ ಹೋರಾಡಿದವರು ಎಂದರೆ ಅದು ಕಡಿಮೆ ಮಾತಾಗುತ್ತದೆ. ಸ್ವಾತಂತ್ರ್ಯದ ಅಪರಿಮಿತ ಧ್ಯಾನದ ಕಡೆಗೆ ಗಾಂಧಿ ನಡೆದವರು. ಸ್ವಾತಂತ್ರ್ಯವೆ ಅವರಿಗೆ ವಿಮುಕ್ತಿ. ಸ್ವಾತಂತ್ರ್ಯವನ್ನು ಗಾಂಧಿ ಎಂದೂ ಬಿಡಿಯಾಗಿ ನೋಡುತ್ತಿರಲಿಲ್ಲ. ಸ್ವಾತಂತ್ರ್ಯದ ಅಂತರ್ಜಲದ ಹಾದಿಯನ್ನು ಗಾಂಧಿ ಬಲ್ಲವರಾಗಿದ್ದರು. ವ್ಯಕ್ತಿಯ ಮುಕ್ತಿಮಾರ್ಗಕ್ಕಿಂತ ದೇಶದ ಮುಕ್ತಿ ಗಾಂಧಿಗೆ ಮುಖ್ಯವಾಗಿದ್ದರಿಂದಲೇ, ಇಡೀ ದೇಶದ ಉದ್ದಕ್ಕೂ ಅವರು ಅಲೆದಾಡಿ ಸಮಾಜದ ಕೊನೆಯವನ ದನಿಗೂ ಸ್ಪಂದಿಸಲು ಸಾಧ್ಯವಾಗಿದ್ದು. ಸ್ವಾತಂತ್ರ್ಯದ ದರ್ಶನ ಗಾಂಧೀಜಿಗೆ ಆಗಿತ್ತು. ಅದರಿಂದಲೆ ಅವರು ದೇಶವನ್ನು ಕಟ್ಟುವ ಕಡೆಗೆ ಯೋಚಿಸಿದ್ದು. ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರೂ ಒಂದೇ ದಾರಿಯ ಪಯಣಿಗರು. ಇಬ್ಬರಲ್ಲೂ ಸ್ವಾತಂತ್ರ್ಯದ ಕಿಡಿ ಇತ್ತಾದರೂ ಅವರಿಬ್ಬರೂ ಸ್ವಾತಂತ್ರ್ಯವನ್ನು ಎರಡು ವಿಭಿನ್ನ ಧಾರೆಗಳಿಂದ ಹುಡುಕಿದರು.

ಗಾಂಧಿಗೆ ಸ್ವಾತಂತ್ರ್ಯದ ತೊಟ್ಟಿಲಲ್ಲಿ ಎಲ್ಲರನ್ನೂ ತೂಗುವ ತಿಳುವಳಿಕೆಯಿತ್ತು. ಆದರೆ ಈ ದೇಶದ ಅಂತಃಸಾಕ್ಷಿಗೆ ಸ್ವಾತಂತ್ರ್ಯ ಇಲ್ಲ ಎಂಬುದನ್ನು ಅರಿತಿದ್ದ ಅಂಬೇಡ್ಕರ್ಗೆ ಹೇಗೆ ಎಲ್ಲರನ್ನೂ ಗಾಂಧೀಜಿ ಒಂದೇ ತೊಟ್ಟಿಲಲ್ಲಿ ತೂಗುವರೋ ಎಂಬ ವಿರೋಧವಿತ್ತು. ಹೀಗಾಗಿ ಗಾಂಧೀಜಿಯ ಗ್ರಾಮ ಸ್ವರಾಜ್ಯದ ಬಗ್ಗೆ ಅಂಬೇಡ್ಕರ್ ಅವರಿಗೆ ಮುಗಿಯದ ತಕರಾರುಗಳಿದ್ದವು. ದೇಶಕ್ಕೆ ಸ್ವಾತಂತ್ರ್ಯ ಬಂದರೂ ಅದು ಸಮಾಜದ ಕೊನೆಯ ತನಕ ತಲುಪುವುದೇ ಎಂಬ ದಟ್ಟ ಹಾಗೂ ವಾಸ್ತವ ಅನುಮಾನ ಅಂಬೇಡ್ಕರ್ ಅವರಿಗೆ ಇದ್ದುದು ಸಹಜವಾಗಿತ್ತು. ಹಾಗೆ ನೋಡಿದರೆ ಹಿಂದೂ ಧರ್ಮ ಯಾರಿಗೂ ಎಂದೂ ಸ್ವಾತಂತ್ರ್ಯವನ್ನು ಕೊಟ್ಟಿಲ್ಲ, ಹಾಗೆಯೇ ಮುಂದೆ ಕೂಡ ಅದು ಸ್ವಾತಂತ್ರ್ಯವನ್ನು ದಲಿತರಿಂದ ಹರಣ ಮಾಡಿ ಅವರನ್ನು ಅಸ್ಪೃಶ್ಯರನ್ನಾಗಿಯೇ ಮಾಡಿ ಆಳ್ವಿಕೆ ಮಾಡುತ್ತದೆ ಎಂದು ವಾದಿಸುತ್ತಿದ್ದರು. ಹಾಗಾಗಿಯೆ ಪೂನಾ ಒಪ್ಪಂದದಲ್ಲಿ ಅಂಬೇಡ್ಕರ್ ಅವರು ದಲಿತರಿಗೆ ವಿಶೇಷ ಹಕ್ಕು ಬಾಧ್ಯತೆಗಳ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದ್ದು. ಇಂತಹ ನಿಲುವಿಗೆ ಗಾಂಧಿಯವರ ಪ್ರತಿಕ್ರಿಯೆ ಹಠವಿಡಿದ ಮಗುವಿನಂತಿತ್ತು. ಈ ಹಠವು ಅಂಬೇಡ್ಕರ್ ಅವರಿಗೆ ಕ್ರೂರವಾಗಿ ಕಂಡಿತ್ತು. ಗಾಂಧಿಗೆ ದಲಿತರು ಪ್ರತ್ಯೇಕ ಅಸ್ತಿತ್ವ ಹೊಂದಿ ದೇಶದ ಒಳಗೆ ಬದುಕುವುದು ಅನೈತಿಕವೆನಿಸಿತ್ತು. ದೇಹದ ಒಳಗಿದ್ದೂ ದೇಹದ ಆಚೆ ಇರುವಂತೆ, ಅಸ್ಪೃಶ್ಯರನ್ನು ಯಾಕೆ ಹೊರಗಿಟ್ಟು ದೇಶವನ್ನು ರೂಪಿಸಬೇಕು ಎಂಬ ಅವರ ಒಳತುಡಿತ ಸುಲಭವಾಗಿ ಅರ್ಥವಾಗುವಂತಿರಲಿಲ್ಲ. ಹಾಗೆ ದಲಿತರನ್ನು ಪ್ರತ್ಯೇಕವಾಗಿ ಇಟ್ಟುಬಿಟ್ಟರೆ ಅವರ ಭವಿಷ್ಯ ಇನ್ನೂ ಭಯಂಕರವಾಗಿರುತ್ತದೆ ಎಂದು ಗಾಂಧಿ ಎಣಿಸಿರಬೇಕು. ಇಂದಿನ ದಲಿತರ ಭಗ್ನಸ್ಥಿತಿಯಲ್ಲಿ ಮೀಸಲಾತಿಯ ವರ್ಗೀಕರಣ  ಹಾಗೂ ದಲಿತರ ಒಳಗೇ ಬೆಳೆಯುತ್ತಿರುವ ವರ್ಗ ಹಾಗೂ ಉಪಜಾತಿಗಳ ಗೋಡೆಗಳು ಭಯ ಹುಟ್ಟಿಸುತ್ತವೆ. ದಲಿತರನ್ನು ಪ್ರತ್ಯೇಕಿಸಿದ ಮಾತ್ರಕ್ಕೆ ಅವರಿಗೆ ಎಲ್ಲ ಬಗೆಯ ಸ್ವಾತಂತ್ರ್ಯ ಮತ್ತು ಸಮಾನತೆ ಸಿಕ್ಕಿಬಿಡುತ್ತದೆ ಎಂಬುದರಲ್ಲಿ ಗಾಂಧೀಜಿಗೆ ವಿಶ್ವಾಸ ಇರಲಿಲ್ಲ. ಅಂಬೇಡ್ಕರ್ಗೆ ಅಪಾರವಾದ ವಿಶ್ವಾಸವಿತ್ತು.’ದಲಿತಸ್ಥಾನ್’ನ ಪ್ರಸ್ತಾಪ ಅವರಿಂದ ಉಂಟಾಗಿತ್ತು. ದೇಶದ ಸ್ವಾತಂತ್ರ್ಯವನ್ನೇ ಮತ್ತೆ ವಿಂಗಡಿಸಿ, ಸಮಾಜವನ್ನೇ ಮತ್ತೆ ಸೀಳುವುದು ಆ ಹೊತ್ತಿಗೆ ಯಾವ ಸ್ವಾತಂತ್ರ್ಯ ಹೋರಾಟಗಾರರಿಗೂ ಇಷ್ಟವಿರಲಿಲ್ಲ. ಹಾಗೆ ಬೇಡಿಕೆ ಮಂಡಿಸುವವರು ಖಳನಾಯಕರಂತೆ ಚಿತ್ರಿಸಲ್ಪಡುತ್ತಿದ್ದರು. ಪಾಕಿಸ್ತಾನದ ರೂವಾರಿ ಜಿನ್ನಾ ಅವರಿಗೆ ರಾಷ್ಟ್ರೀಯ ಕಾಂಗ್ರೆಸ್ ನ ಬಹುಪಾಲು ನಾಯಕರು ಖಳನಾಯಕನ ಸ್ಥಾನವನ್ನೇ ನೀಡಿದ್ದರು.

ಅಂಬೇಡ್ಕರ್ ಅವರ ಬಗೆಗೂ ಇದೇ ನಿಲುವು ಇತ್ತು. ಈಗಲೂ ಅನೇಕರು ಅಂಬೇಡ್ಕರ್ ಅವರನ್ನು ಗಾಂಧಿಯ ಮುಂದೆ ಖಳನಾಯಕನಂತೆಯೋ, ಪ್ರತಿನಾಯಕನಂತೆಯೋ ಚಿತ್ರಿಸುತ್ತಾರೆ. ಅರುಣ್ ಶೌರಿಯಂತಹ ಹಳದಿ ಕಣ್ಣಿನ ಪತ್ರಕರ್ತರು ಅಂಬೇಡ್ಕರ್ ಅವರನ್ನು ಅಪಮಾನಕರವಾಗಿ; ಈ ದೇಶದ ದಲಿತರ ನೈತಿಕ ಸ್ವಾತಂತ್ರ್ಯದ ಹಂಬಲಕ್ಕೆ ಮಸಿ ಬಳಿಯುವಂತೆ ಈಗಲೂ ಬರೆಯುವುದಿದೆ. ಅಂಬೇಡ್ಕರ್ ಸ್ವಾತಂತ್ರ್ಯಕ್ಕಾಗಿ ಯಾವ ಹೋರಾಟವನ್ನೂ ಮಾಡದೆ ಗಾಂಧೀಜಿಯನ್ನು ಅಪಮಾನಿಸುತ್ತಾ ದೇಶದ ದಲಿತರನ್ನು ಅವರ ವಿರುದ್ಧ ಎತ್ತಿಕಟ್ಟುತ್ತಿದ್ದರು ಎಂಬ ಅರ್ಥದಲ್ಲಿ ಅರುಣ್ಶೌರಿ ಬರೆದು ಈ ಹೊತ್ತಿನ ದಲಿತಪ್ರಜ್ಞೆಯ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಾರೆ. ಬಲಪಂಥೀಯ ಮನಸ್ಸು ಒಟ್ಟಿಗೇ ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರನ್ನೂ ಆಳದಲ್ಲಿ ವಿರೋಧಿಸುತ್ತಿರುತ್ತದೆ.

ಅಂಬೇಡ್ಕರ್ ಅವರ ಬಗೆಗಿನ ಗಾಂಧಿಯ ನಿಲುವುಗಳು ಎಲ್ಲೂ ವ್ಯಕ್ತಿಗತವಾದುವಲ್ಲ. ಹಾಗೆಯೇ ಅಂಬೇಡ್ಕರ್ ಅವರು ಕಟುವಾಗಿ ಗಾಂಧಿಗೆ ಪ್ರತಿಕ್ರಿಯಿಸುತ್ತಿದ್ದುದು ಕೂಡ ತನ್ನೊಬ್ಬನ ಅಸ್ತಿತ್ವದ ಕಾರಣಕ್ಕಾಗಿ ಅಲ್ಲ. ದಲಿತ ಸಮುದಾಯದ ಅಖಂಡ ಪ್ರಜ್ಞೆ ಅಂಬೇಡ್ಕರ್ ಅವರಲ್ಲಿತ್ತು. ಅಷ್ಟೇ ಅಲ್ಲದೇ ಇಂತಹ ನರಕ ಸೃಷ್ಟಿಸಿರುವ ಹಿಂದೂ ಧರ್ಮದ ಸಾಮಾಜಿಕ ರಚನೆಯ ಸೆರೆವಾಸದ ಬಗ್ಗೆ ಖಚಿತವಾದ ತಿಳುವಳಿಕೆಯೂ, ವಿಷಾದವೂ ಇತ್ತು. ಜಾತಿಯು ಪ್ರತಿಯೊಬ್ಬರ ಸ್ವಾತಂತ್ರ್ಯವನ್ನು ಕಸಿದುಕೊಂಡಿರುತ್ತದೆ ಎಂಬುದರಲ್ಲಿ ಗಾಂಧಿಗಿಂತಲೂ ಅಂಬೇಡ್ಕರ್ ಗೆ ಹೆಚ್ಚಿನ ಅನುಭವ ಇತ್ತು. ವರ್ಣಶ್ರಮ ಪದ್ಧತಿಯ ಜಾತಿಶ್ರೇಣಿಯಂತೆಯೇ ಸಮಾಜದಲ್ಲಿ ಅಧಿಕಾರ ವಿಂಗಡನೆಯಾಗಿ ಕೊನೆಯ ಅಸ್ಪೃಶ್ಯರಿಗೆ ಯಾವ ಅಸ್ತಿತ್ವವೂ ಇಲ್ಲದಿರುವಾಗ; ಸ್ವಾತಂತ್ರ್ಯದ ಯಾವ ಅವಕಾಶವನ್ನು ನೀಡದೆ ಇರುವಾಗ; ಅವರಿಗೆ ದೇಶವೇ ಇಲ್ಲದಿರುವಾಗ; ದೇಶಕ್ಕೆ ಸ್ವಾತಂತ್ರ್ಯಬೇಕು ಎಂದು ಹೋರಾಡುವುದು ವ್ಯಂಗ್ಯವಾಗಿ ಕಾಣುತ್ತಿತ್ತು. ವಸಾಹತುಶಾಹಿ ವ್ಯವಸ್ಥೆಗಿಂತಲೂ ಕ್ರೂರವಾದದ್ದು ಹಿಂದೂ ವ್ಯವಸ್ಥೆ ಎಂಬುದನ್ನು ಅಂಬೇಡ್ಕರ್ ಮತ್ತೆ ಮತ್ತೆ ಪ್ರತಿಪಾದಿಸುತ್ತಿದ್ದರು. ಪರಿವರ್ತನೆಯಲ್ಲಿ ಗಾಂಧಿ ಆತ್ಯಂತಿಕವಾದ ಕನಸುಗಾರ. ರಾಮರಾಜ್ಯದ ಅವರ ಕನಸು ನ್ಯಾಯದ ಪರಮ ಆದರ್ಶ, ಅಂತೆಯೆ ಸ್ವಾತಂತ್ರ್ಯದ ಸಾಕ್ಷಾತ್ಕಾರ. ಅಂಬೇಡ್ಕರ್ ವಾಸ್ತವವಾದಿ ಚಿಂತಕ. ಸವಿಗನಸೇ ಇಲ್ಲದ ಸಮಾಜದಿಂದ ಬಂದ ಅಂಬೇಡ್ಕರ್ ದುಃಸ್ವಪ್ನಗಳನ್ನು ಮಾತ್ರ ಕಂಡಿದ್ದರು. ಈ ಸಮಾಜದ ಸನಾತನತೆಯ ಹೇಸಿಗೆಯನ್ನು ಕಂಡಿದ್ದ ಅವರಿಗೆ ಇಲ್ಲಿ ಯಾವುದೂ ಬದಲಾಗುವುದಿಲ್ಲ ಎಂಬ ಚಾರಿತ್ರಿಕ ವಿಷಾದ ತುಂಬಿಕೊಂಡಿತ್ತು.

ಬೃಹತ್ ಭಾರತದ ಚರಿತ್ರೆಯನ್ನು ತಿಳಿದಿದ್ದ ಗಾಂಧಿಗೆ ಅದರ ಅಖಂಡ ಛಲವು ಗಾಢವಾಗಿ ಪ್ರಭಾವಿಸಿತ್ತು. ಇದೇ ಅಖಂಡ ಭಾರತವು ಅಂಬೇಡ್ಕರ್ ಅವರಿಗೆ ಹಿಂಸೆಯ ಕೂಪವೆಂದು ತಿಳಿದಿತ್ತು. ಗಾಂಧಿ ಇಂತಹ ನರಕದ ಒಳಗಿಂದಲೇ ಅಹಿಂಸೆಯನ್ನು ಸ್ವಾತಂತ್ರ್ಯಕ್ಕಾಗಿ ಸಾಧಿಸಿದವರು. ಅಂಬೇಡ್ಕರ್ ಈ ನರಕದಲ್ಲಿದ್ದು ಸರ್ವನಾಶವಾಗುವ ಬದಲು ಬೌದ್ಧಧರ್ಮದಲ್ಲಿ ಸಮುದಾಯದ ಸ್ವಾತಂತ್ರ್ಯವನ್ನು ಪಡೆಯಲು ಯತ್ನಿಸಿದರು. ಇಬ್ಬರೂ ಸ್ವಾತಂತ್ರ್ಯದ ದಾಹದಲ್ಲಿ ಬೇರೆ ಬೇರೆ ದಿಕ್ಕಿನಲ್ಲಿ ನಡೆದವರಾದರೂ ಆಧುನಿಕ ಭಾರತದ ಸಂದರ್ಭದಲ್ಲಿ ಅಲಕ್ಷಿತರ ಪರವಾದ ನ್ಯಾಯಕ್ಕಾಗಿ ಶ್ರಮಿಸಿದವರು. ಗಾಂಧಿ ಸರ್ವೋದಯದ  ಪ್ರಜಾತತ್ವಕ್ಕಾಗಿಯೇ ತಮ್ಮ ಆಲೋಚನೆಗಳನ್ನು ಕೇಂದ್ರೀಕರಿಸಿದರು. ಅಂಬೇಡ್ಕರ್ ಜಾತ್ಯತೀತ ಪ್ರಜಾಪ್ರಭುತ್ವಕ್ಕಾಗಿ ವೈಚಾರಿಕ ಆಕ್ರಂದನ ಮಾಡಿದರು. ಇವೆರಡೂ ತುಂಬ ಸಂಕೀರ್ಣವಾದ ತಾತ್ವಿಕ ನೆಲೆಗಳು.

ಗಾಂಧಿ ಬಯಸುವ ಸರ್ವೋದಯ ರಮ್ಯ ಆಧ್ಯಾತ್ಮದ ಭಿತ್ತಿಯಲ್ಲಿ ಬೇರು ಬಿಟ್ಟಿದೆ. ಅಂಬೇಡ್ಕರ್ ವೈಚಾರಿಕ ಆಧ್ಯಾತ್ಮದಲ್ಲಿ ವಿಶ್ವಾಸವಿಟ್ಟವರು. ಅದರಿಂದಾಗಿಯೇ ಅವರು ಬೌದ್ಧಧರ್ಮವನ್ನು ಸ್ವೀಕರಿಸಿದ್ದು. ಬುದ್ಧನ ಕಾಣ್ಕೆಯಲ್ಲಿ ಅಪರಿಮಿತವಾದ ಪ್ರಜಾತತ್ವ ಇದೆ ಎಂಬುದು ಅಂಬೇಡ್ಕರ್ಗೆ ತಿಳಿದಿತ್ತು. ಹೀಗಾಗಿಯೇ ಪ್ರಜಾಪ್ರಭುತ್ವದ ಸರ್ವೋಚ್ಚ ನೀತಿಸಂಹಿತೆಯಾದ ಸಂವಿಧಾನದಲ್ಲಿ ಅಂಬೇಡ್ಕರ್ ಜಾತ್ಯತೀತತೆಯನ್ನು ಮಹಾಮಂತ್ರದಂತೆ ನುಡಿಸುವುದು. ಜಾತಿಯ ನಾಶವಾಗದೇ ದೇಶಕ್ಕೆ ಸ್ವಾತಂತ್ರ್ಯದ ಅರ್ಥ ಕಾಣುವುದಿಲ್ಲ ಎಂಬುದು ಅಂಬೇಡ್ಕರ್ ಚಿಂತನೆಯಲ್ಲಿ ಕಾಣುವ ನೋಟ. ಅದಕ್ಕಾಗಿಯೇ ಅವರು ಬುದ್ಧನ ವೈಚಾರಿಕತೆಯಿಂದ ಸಂವಿಧಾನವನ್ನು ಜಾತ್ಯತೀತವಾಗಿ ರೂಪಿಸಿರುವುದು. ಪ್ರಜಾಪ್ರಭುತ್ವದಲ್ಲಿ ವರ್ಗಗಳಿಗೆ ಯಾವ ಅಪಾಯವೂ ಇರುವುದಿಲ್ಲ. ಇಂಗ್ಲೆಂಡಿನ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಕಾರ್ಮಿಕ ಪಕ್ಷಕ್ಕೂ, ಉದಾರವಾದಿ ಶ್ರೀಮಂತರ ಪಕ್ಷಕ್ಕೂ ಅಧಿಕಾರದ ಹಂಚಿಕೆಯಲ್ಲಿ ಸ್ನೇಹ ಒಪ್ಪಂದ ಸಾಮಾನ್ಯ. ಅಮೆರಿಕದ ಪ್ರಜಾಪ್ರಭುತ್ವ ಎಷ್ಟೇ ಆದರ್ಶವಾಗಿದ್ದರೂ ಅದು ಅಂತಿಮವಾಗಿ ಖಾಸಗೀ ಬಂಡವಾಳಶಾಹಿ ವ್ಯವಸ್ಥೆಯ ಸ್ವರ್ಗಸ್ಥಾನ.

ಭಾರತದ ಸಂವಿಧಾನದಲ್ಲಿ ಇಂತಹ ಅಪಾಯಗಳು ನುಸುಳದಂತೆ ನೋಡಿಕೊಂಡಿದ್ದರೂ, ಇಲ್ಲಿ ಜಾತಿಗಳು ಪಕ್ಷಗಳ ಮೂಲಕ ಪ್ರವೇಶಗೊಂಡು ಜಾತಿ ರಾಜಕಾರಣವನ್ನು ಸಮರ್ಥವಾಗಿ ಮಾಡುತ್ತಿರುತ್ತವೆ. ಅಂಬೇಡ್ಕರ್ಗೆ ಈ ಮುನ್ನೋಟ ಇದ್ದಿದ್ದರಿಂದಲೇ ದ್ವಿಮತದಾನವನ್ನು ದಲಿತರಿಗೆ ನೀಡುವ ಮೂಲಕ ರಾಜಕೀಯ ಸ್ವಾತಂತ್ರ್ಯವನ್ನು ಪಡೆಯಲು ಹೋರಾಡಿದರು. ಆ ಮೂಲಕ ಜಾತ್ಯತೀತ ಪ್ರಜಾಪ್ರಭುತ್ವವನ್ನು ಸ್ಥಾಪಿಸಲು ಯೋಚಿಸಿದರು. ಇಂತಹ ಯತ್ನ ಕೂಡ ಅಪಾಯಕಾರಿಯಾಗಿ ಮುಂದೆ ಜಾತಿಗಳ ಒಳಗೇ ಅಸಮಾನತೆಗಳನ್ನು ನಿರ್ಮಿಸಬಲ್ಲದು ಎಂಬ ಅನುಮಾನ ಅಂಬೇಡ್ಕರ್ ಅವರಿಗೆ ಇರಲಿಲ್ಲ. ಜಾತ್ಯತೀತತೆಯ ಅವರ ಕನಸು ಅವರ ಮುಂದೆಯೇ ಮುರಿದು ಬಿದ್ದಿತ್ತು. ಪ್ರತ್ಯೇಕ ಮತಕ್ಷೇತ್ರಗಳನ್ನು ಒತ್ತಾಯಿಸಲು ಜಾತ್ಯತೀತತೆಯ ಬಗೆಗೆ ಮಾತನಾಡುತ್ತ, ಬೌದ್ಧ ಧರ್ಮಕ್ಕೆ ಮತಾಂತರವಾದ ಅವರ ದಾರಿ ಸಂಕೀರ್ಣ ತಿರುವುಗಳಿಂದ ಕೂಡಿತ್ತು.

ಗಾಂಧಿಗೆ ಎಲ್ಲ ದಾರಿಗಳು ಮುಕ್ತವಾಗಿದ್ದವು. ಅವರ ಆಲೋಚನೆಗೆ ಸಾಮಾಜಿಕ ತಡೆಗೋಡೆಗಳು ಇರಲಿಲ್ಲ. ಅಖಂಡ ಸಮಾಜದ ಜೊತೆ ಮಾತನಾಡುವುದು ಅವರಿಗೆ ಸುಲಭವಾಗಿತ್ತು. ಅಂಬೇಡ್ಕರ್ ಪ್ರಧಾನ ಸಮಾಜದ ಎಲ್ಲ ಅಧಿಕಾರದ ನೆಲೆಗಳನ್ನು ಪ್ರಶ್ನಿಸಬೇಕಿತ್ತು. ಅದರ ಅಪರಾಧಗಳನ್ನು ಬಯಲು ಮಾಡಬೇಕಿತ್ತು. ಗಾಂಧಿಗೆ ದೇಶದ ಮಾನ ಮುಚ್ಚುವುದೇ ದೊಡ್ಡ ಕರ್ತವ್ಯವಾಗುತ್ತಿತ್ತು. ದೇಶದ್ರೋಹಿ ಎಂದು ಅಂಬೇಡ್ಕರ್ ಅವರನ್ನು ಯಾರಾದರೂ ಕರೆಯುವುದು ಸುಲಭವಿತ್ತು. ಅಂತಹ ಯಾವ ಕೇಡನ್ನು ಎಸಗದಿದ್ದರೂ ಅಂತಹ ಪಟ್ಟಗಳು ದಲಿತ ಕೇರಿಯಿಂದ ಬಂದು ಅಖಂಡತೆಯನ್ನು ಪ್ರಶ್ನಿಸುವ ಯಾರಿಗಾದರೂ ಇದ್ದಂಥದೇ.

ಜಾತಿವ್ಯವಸ್ಥೆಯಿಂದ ಬಿಡುಗಡೆ ಪಡೆಯುವುದು ಬಹುದೊಡ್ಡ ಸ್ವಾತಂತ್ರ್ಯ ಚಳುವಳಿಯೇ. ಪರಕೀಯರನ್ನು ಹೊರಗಟ್ಟುವುದು ಗಾಂಧಿಗೆ ಸುಲಭವಿತ್ತು. ದೇಶದ ಒಳಗೇ ಇದ್ದು ದೇಶ ಭ್ರಷ್ಟರನ್ನಾಗಿಸಿದ್ದವರನ್ನು ಅಂಬೇಡ್ಕರ್ ಎಲ್ಲಿಯೂ ಹೊರಕ್ಕೆ ಅಟ್ಟಲು ಸಾಧ್ಯವಿರಲಿಲ್ಲ. ಬಹಿಷ್ಕೃತ ಭಾರತದಲ್ಲಿ ಸ್ವತಃ ದಲಿತರೇ ಹೊರಗೆಸೆಲ್ಪಟ್ಟವರಾಗಿದ್ದರು. ಇಂತವರ ಸ್ವಾತಂತ್ರ್ಯಕ್ಕಾಗಿ ಹೋರಾಡುವಾಗ ಅಂಬೇಡ್ಕರ್ ಏಕಾಂಗಿಯಾಗಿದ್ದರು. ಅವರು ದೊಡ್ಡ ಸಮಾಜಗಳನ್ನು ಎದುರು ಹಾಕಿಕೊಂಡು, ಅವರ ಜೊತೆಯೇ ನ್ಯಾಯದ ಹಕ್ಕೊತ್ತಾಯವನ್ನು ಮಾಡಬೇಕಿತ್ತು. ಗಾಂಧೀಜಿ ಇಂತಹ ಸಂಕಟದಲ್ಲಿ ಮುಳುಗಿ ಸಾಮಾಜಿಕ ಎಚ್ಚರಕ್ಕಾಗಿ ಹೋರಾಡುವ ಅಂಬೇಡ್ಕರ್ ವಿರುದ್ಧ ವೈಯಕ್ತಿಕವಾಗಿ ಟೀಕಿಸಲಿಲ್ಲ. ಅಂಬೇಡ್ಕರ್ ಅವರ ವಿಚಾರಗಳ ಬಗ್ಗೆ ಭಿನ್ನಾಭಿಪ್ರಾಯವಿದ್ದರೂ ಅವರ ವಿಚಾರಗಳಿಂದಲೇ ಪ್ರಭಾವಿತರಾಗಿದ್ದೂ ಉಂಟು. ದೇಶದ ಒಳಗಿನವರ ವಿರುದ್ಧ ಹೋರಾಡಿಯೇ ಅಂಬೇಡ್ಕರ್ ಸ್ವಾತಂತ್ರ್ಯವನ್ನು ಹಂಚಿಕೊಳ್ಳಬೇಕಾಗಿದ್ದರಿಂದ ಅವರ ಸ್ವಾತಂತ್ರ್ಯ ಚಳುವಳಿಯನ್ನು ಬೇರೆಯಾಗಿಯೇ ಭಾವಿಸಬೇಕು.  ವಸಾಹತುಶಾಹಿ ವ್ಯವಸ್ಥೆಯ ಜೊತೆ ಉಗ್ರವಾದ ತಿರಸ್ಕಾರ ಅವರಿಗೆ ಇರಲಿಲ್ಲವಾದರೂ ಆ ವ್ಯವಸ್ಥೆ ದೇಶ ಬಿಟ್ಟು ಹೋಗಬೇಕು ಎಂಬುದನ್ನು ಒಪ್ಪಿಕೊಂಡಿದ್ದರು. ಅವರು ಬ್ರಿಟಿಷರ ಪರವಾಗಿ ಕೆಲಸ ನಿರ್ವಹಿಸಲಿಲ್ಲ. ಕಾಂಗ್ರೆಸ್ ನ ನಾಯಕರ ಬಗ್ಗೆ ಆಪ್ತ ಸಂಬಂಧ ಇರದಿದ್ದರೂ ಒಟ್ಟು ಸ್ವಾತಂತ್ರ್ಯ ಚಳುವಳಿಯ ಬಗೆಗೆ ಗೌರವವನ್ನೇ ಹೊಂದಿದ್ದರು. ಅವರಿಗಿದ್ದ ಬಹುದೊಡ್ಡ ತಡೆ ಎಂದರೆ ಹಿಂದೂ ಸಾಮ್ರಾಜ್ಯ. ಈ ಹಿಂದೂ ಸಾಮ್ರಾಜ್ಯ ವಸಾಹತುಶಾಹಿಗಿಂತಲೂ ಭಯಂಕರವಾಗಿತ್ತು. ಅದನ್ನು ಸದೆಬಡಿದರೆ ಮಾತ್ರ ಬಹುಸಂಖ್ಯಾತ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಜಾತಿಗಳು ಹಾಗೂ ಮಹಿಳೆಯರು ಸ್ವಾತಂತ್ರ್ಯ ಪಡೆಯಲು ಸಾಧ್ಯ ಎಂದು ಒತ್ತಾಯಿಸುತ್ತಿದ್ದರು.

ಸರ್ವೋದಯದ ಪ್ರಜಾಪ್ರಭುತ್ವವು ಒಂದೇ ಹಂತದಲ್ಲಿ ಫಲಿಸುವಂತಹದ್ದಾಗಿರಲಿಲ್ಲ. ಭ್ರಾತೃತ್ವವೂ ಅಷ್ಟೊಂದು ಸಲೀಸಾದ ಆದರ್ಶವಾಗಿರಲಿಲ್ಲ. ಒಬ್ಬರನ್ನೊಬ್ಬರು ಕ್ರೂರವಾಗಿ ಜಾತಿಯ ಕ್ರಮಗಳಿಂದ ಸೀಳಿಕೊಂಡಿರುವಾಗ ಭ್ರಾತೃತ್ವ ಎಂಬುದೇ ಹುಸಿಯಾದುದಾಗಿತ್ತು. ಮಾನವೀಯ ಘನತೆಯನ್ನು ಕಳೆದುಕೊಂಡಿರುವ ಹಿಂದೂ ಧರ್ಮವು ಪ್ರಜಾಪ್ರಭುತ್ವದ ಎಲ್ಲ ಆದರ್ಶಗಳನ್ನು ಕಾಲಕಾಲಕ್ಕೆ ಉಪಾಯವಾಗಿ ನುಂಗಬಲ್ಲದು. ಜಾತಿಯ ಜೊತೆಗೆ ಮತೀಯ ಮೂಲಭೂತವಾದವನ್ನು ಅದು ಸಾಂಗವಾಗಿ ಬೆಳೆಸಬಲ್ಲದು. ಇಂಥಲ್ಲಿ ಏಕತೆಯಾಗಲೀ, ಸಮಾನತೆಯಾಗಲೀ ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಅವರಿಗೆ ಗಾಢವಾಗಿ ಅನಿಸಿದ್ದರಿಂದಲೇ ದಲಿತರಿಗೆ ರಾಜ್ಯಾಧಿಕಾರದಲ್ಲಿ ಪ್ರಮುಖ ಪಾತ್ರ ಇರಬೇಕು ಎಂದು ಒತ್ತಾಯಿಸಿ, ಆ ಹಂತ ತಲುಪಿದಾಗಲೇ ದಲಿತರಿಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಂತೆ ಎಂದು ಸೂಚಿಸಿದ್ದರು. ಗಾಂಧೀಜಿಗೆ ಜಾತ್ಯತೀತವಾದ ಹಂಬಲವಿರಲಿಲ್ಲ ಎಂದೇನಿಲ್ಲ. ಜಾತಿಗಳ ನಡುವೆ ಸಾಮರಸ್ಯ ಸಾಧ್ಯವಾಗಬೇಕಾದರೆ ಮನುಷ್ಯನ ಒಳಗಿರುವ ನಿರಂಕುಶ ಸ್ವಭಾವ ಅಳಿಯಬೇಕೆಂದು ಅಂಬೇಡ್ಕರ್ ಹೇಳುತ್ತಿದ್ದರು.

ಹಿಂದೂ ಮೇಲುಜಾತಿಗಳು ನಿರಂಕುಶಪ್ರಭುತ್ವದ ತತ್ವದಲ್ಲಿ ನಂಬಿಕೆ ಇಟ್ಟುಕೊಂಡೇ ಬೆಳೆದಿದ್ದು ಅಂತಹ ಮೌಲ್ಯಗಳಿಗಾಗಿ ಯಾವುದೇ ಹೇಯ ರಕ್ತಪಾತವನ್ನು ಮಾಡಲು ಹೇಸುವುದಿಲ್ಲ. ಕೆಳಜಾತಿಗಳು ಮಾತ್ರ ದಾಸ್ಯದಲ್ಲಿ ಸದಾ ಕರಗಿ ಹೋಗುತ್ತಿರುತ್ತವೆ. ಜಾತಿಗಳು ಸಾಮ್ರಾಜ್ಯಶಾಹಿ ಸ್ವಭಾವವನ್ನು ಪಡೆದಿರುವುದರಿಂದಲೇ ಹಿಂದೂ ಸಾಮ್ರಾಜ್ಯವು ಬಲಿಷ್ಠವಾಗಿರುವುದು. ಇಂತಹ ಗ್ರಹಿಕೆಗಳಿಂದ ಅಂಬೇಡ್ಕರ್ ಮನುಧರ್ಮ ಶಾಸ್ತ್ರವನ್ನು ಸುಟ್ಟುಹಾಕಿದ್ದು. ಬ್ರಾಹ್ಮಣ್ಯದ ಸಾಮ್ರಾಜ್ಯಶಾಹಿ ಧೋರಣೆಯು ಮನುಧರ್ಮಶಾಸ್ತ್ರದಲ್ಲಿ ನಿರ್ಲಜ್ಜವಾಗಿ ವ್ಯಕ್ತವಾಗಿದೆ. ಅಮಾನವೀಯವಾಗಿ ಇಡೀ ಸಮಾಜದ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಯತ್ನ ಅದರ ತತ್ವದಲ್ಲಿದೆ. ಇಂತಹ ಗ್ರಂಥವು ಗಾಂಧೀಜಿಗೆ ಅಪಮಾನವೆನಿಸಲಿಲ್ಲ. ಅದನ್ನು ಅವರು ಸುಟ್ಟು ಹಾಕುವ ಧೈರ್ಯ ಮಾಡಲಿಲ್ಲ. ಸೌಮ್ಯವಾಗಿಯೇ ಅಂತಹ ಅಮಾನವೀಯ ಮೌಲ್ಯಗಳನ್ನು ಪಕ್ಕಕ್ಕೆ ಸೇರಿಸುತ್ತಿದ್ದ ಗಾಂಧಿಯ ಪ್ರತಿಭಟನೆಯು ಸಾತ್ವಿಕವಾದುದು. ಸಂತ ಶೈಲಿಯ ಗಾಂಧಿಯ ಭಾವನೆಗಳು ಯಾರ ಮನಸ್ಸಿಗೂ ನೋವು ಉಂಟಾಗಬಾರದು ಎಂಬಂತೆ ವ್ಯಕ್ತವಾಗುತ್ತಿದ್ದವು. ಇಂಥಲ್ಲಿ ಗಾಂಧಿಯ ವ್ಯಕ್ತಿತ್ವ ಅನೇಕ ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ. ಸನಾತನ ಮೌಲ್ಯ ವ್ಯವಸ್ಥೆಯ ಬಗ್ಗೆ ಗಾಂಧಿಗೆ ಅನುಕಂಪ ಮಾತ್ರವಲ್ಲ, ಗೌರವವೂ ಇತ್ತು. ಅದರ ಪರಂಪರೆಯನ್ನು ಯಾವತ್ತೂ ಅವರು ಕಡೆಗಣಿಸಿರಲಿಲ್ಲ. ಜಾತಿಯ ಬಗ್ಗೆ ಅವರಿಗೆ ಆರಂಭದಲ್ಲಿ ಹಳೆಯ ಅಭಿಪ್ರಾಯಗಳೇ ಇದ್ದವು. ನಂತರ ಅವರು ಅಂಬೇಡ್ಕರ್ ಅವರ ವೈಚಾರಿಕ ಪ್ರತಿರೋಧದ ಎದುರು ತಿದ್ದಿಕೊಳ್ಳಬೇಕಾದುದಷ್ಟೇ ಅಲ್ಲದೇ, ದಲಿತರ ಬಗ್ಗೆ ಗಾಢವಾಗಿ ಸ್ಪಂದಿಸುವುದನ್ನು ರೂಢಿಮಾಡಿಕೊಂಡರು. ಹಿಂದೂ ಧರ್ಮದ ಲೋಪಗಳನ್ನು ಕೊನೆಯ ಘಟ್ಟದಲ್ಲಿ ಗಾಂಧಿ ಸೂಕ್ಷ್ಮವಾಗಿ ಎತ್ತಿ ಆಡಿದ್ದಿದೆ. ಸ್ವಾತಂತ್ರ್ಯದ ದಾಹದಲ್ಲಿ ಗಾಂಧಿಯೂ, ಅಂಬೇಡ್ಕರ್ ಅವರೂ ನಿರಂತರವಾಗಿ ಒಂದೇ ಆಗಿದ್ದರು. ಸರ್ವೋದಯದ ಪ್ರಜಾ ರಾಜ್ಯವೇ ನಿಜವಾದ ‘‘state’ ಎಂದು ಗಾಂಧಿ ನಂಬಿದ್ದರು. ಅದಕ್ಕೆ ತಕ್ಕುದಾದ ರಾಜ್ಯಾಂಗ ಪದ್ಧತಿ ಇಲ್ಲ ಎಂಬುದು ಅಂಬೇಡ್ಕರ್ರ ತಗಾದೆಯಾಗಿತ್ತು. ಇವರಿಬ್ಬರ ಸ್ವಾತಂತ್ರ್ಯದ ಅಂತರಂಗವನ್ನು ಹಲವು ನೆಲೆಗಳಲ್ಲಿ ಅರ್ಥೈಸಬಹುದು.

ಧರ್ಮರಹಿತ ರಾಜಕಾರಣವನ್ನು ಅಂಬೇಡ್ಕರ್ ಕನಸಿದ್ದರು. ಹಿಂದೂ ಧರ್ಮದ ಮೇಲಿನ ಅವರ ಆಕ್ರೋಶವು ಈ ಬಗೆಯ ಒತ್ತಾಯವನ್ನು ಉಂಟುಮಾಡಿತ್ತು. ಹಾಗಿದ್ದರೂ ಅಂಬೇಡ್ಕರ್ ಎಲ್ಲ ಧರ್ಮಗಳ ಅಸ್ತಿತ್ವವನ್ನು ಮನ್ನಿಸಿಯೇ ಸಂವಿಧಾನದಲ್ಲಿ ಅವಕಾಶ ಕಲ್ಪಿಸಿದ್ದಾರೆ. ಬುದ್ಧನ ತತ್ವವೇ ಸಂವಿಧಾನದಲ್ಲಿ ಅಡಕವಾಗಿರುವುದು. ಗಾಂಧೀಜಿ ಮಾನವ ಧರ್ಮದ ರಾಜಕಾರಣಕ್ಕೆ ಗಮನಹರಿಸಿದ್ದರಿಂದಲೇ ಹಿಂದ್ ಸ್ವರಾಜ್ಯದ ಬಗ್ಗೆ ಸಮರ್ಥಿಸಿದ್ದು. ಈ ಬಗೆಯ ರಾಜಕಾರಣದ ಮೂಲಕವೇ ಅರಿಸ್ಟಾಟಲ್, ಪ್ಲೇಟೋ ಹೇಳಿದ ರಾಜಕೀಯ ಆಧ್ಯಾತ್ಮವನ್ನು ತಲುಪಲು ಸಾಧ್ಯ ಎಂದು ಭಾವಿಸಿದ್ದರು. ಪ್ಲೇಟೋನ ಆದರ್ಶ ರಾಜ್ಯದ ಕಲ್ಪನೆಯು ಸದಾ ಮಾನವ ಕೇಂದ್ರಿತವಾದುದೇ ಆಗಿತ್ತು. ಅದು ಚಾಣಕ್ಯನ ಪ್ರಭುನಿಷ್ಠ ರಾಜಕಾರಣವನ್ನು ಎಂದಿಗೂ ಬೆಂಬಲಿಸುವಂಥದ್ದಲ್ಲ. ಅಂಬೇಡ್ಕರ್ ಕನಸಿನ ಆದರ್ಶ ರಾಜ್ಯದಲ್ಲಿ ಬುದ್ಧನ ಜ್ಞಾನೋದಯವು ಅಖಂಡ ಹಿಂದೂ ಸಮಾಜದ ಜ್ಞಾನೋದಯವಾಗಿ ಮಾರ್ಪಡಬೇಕು ಎಂದಾಗಿತ್ತು. ಅದನ್ನವರು ಸಂವಿಧಾನದ ಮೂಲಕ ಪುನರ್ ಸೃಷ್ಟಿಸಿದರು.

ಇಂತಹ ಆದರ್ಶ ಸ್ವಾತಂತ್ರ್ಯ ಇಂದಿಗೂ ಭಾರತದ ಎಲ್ಲ ಸಮುದಾಯಗಳಿಗೂ ಸಿಕ್ಕಿಲ್ಲ. ಬಹುಪಾಲು ಎಲ್ಲರ ಸ್ವಾತಂತ್ರ್ಯವೂ ಕೃತಕವಾದದ್ದು. ಪ್ರಾಣಿಯ ಕೊರಳಿಗೆ ಕಟ್ಟಿಬಿಟ್ಟ ಹಗ್ಗದ ದೂರದಷ್ಟು ಸ್ವಾತಂತ್ರ್ಯ ಇದ್ದಂತೆ ಆಗಿದೆ. ಹಾಗೆಯೇ ಅದು ಒಬ್ಬರಿಂದ ಇನ್ನೊಬ್ಬರು ಕಸಿದುಕೊಂಡದ್ದು. ಜಾತಿಪದ್ಧತಿಯು ಇಂತಹ ದಾಸ್ಯ ಶ್ರೇಣಿಯನ್ನು ಬಲವಾಗಿ ಬಿತ್ತಿರುವುದರಿಂದ ಇಂದಿಗೂ ಸಮಾಜಗಳಿಗೆ ತಕ್ಕುದಾದ ಸ್ವಾತಂತ್ರ್ಯ ಸಿಕ್ಕಿಲ್ಲ. ಈ ಬಗೆಯ ಸಮಾಜದಲ್ಲಿ ಆರ್ಥಿಕ  ಸ್ವಾತಂತ್ರ್ಯ ಕನಸಿನ ಮಾತು. ಒಂದು ತುಂಡು ಜಮೀನಿಗಾಗಿ ಈಗಲೂ ಬಡ ಕೂಲಿ ಕಾರ್ಮಿಕ ಅಥವಾ ಹಳ್ಳಿಯ ದಲಿತ ತುಂಬ ಕಷ್ಟಪಡಬೇಕಾದ ಸ್ಥಿತಿಯಿದೆ. ಇಪ್ಪತ್ತೊಂದನೆ ಶತಮಾನದಲ್ಲೂ ದಲಿತರ ಭೂಮಿಯ ಕನಸು ಹಾಗೆಯೇ ಉಳಿದಿದೆ. ಮತ್ತೊದೆಡೆ ಭೂಮಿಯ ಯಜಮಾನ್ಯ ಪಡೆದಿದ್ದ ರೈತರು ಭೂಮಿಯ ಸಹವಾಸ ಸಾಕು ಎನ್ನುವಂತಾಗಿ  ಆರ್ಥಿಕ  ದಾರಿಗಳು ಕವಲುರೂಪದಲ್ಲಿ ಸಾಗಿ ಇಕ್ಕಟ್ಟಿನಲ್ಲಿದ್ದಾರೆ. ರಾಜಕಾರಣ ಮಾತ್ರ ಸರ್ವತಂತ್ರ ಸ್ವತಂತ್ರವಾಗಿದೆ. ದಲಿತರಿಗೆ ಸ್ವಾತಂತ್ರ್ಯವಿದ್ದೂ ಅದು ಮತ್ತೊಬ್ಬರ ಮೂಲಕ ಚಲಾಯಿಸುವಂತಾಗಿದೆ.

ಗಾಂಧಿ ಮತ್ತು ಅಂಬೇಡ್ಕರ್ ಬಹಳ ದೂರದ ರೂಪಕಗಳಂತೆ ಮಾಸುತ್ತಿರುವ ದುರಂತವೂ ಇಂತಹ ಸ್ಥಿತಿಯ ಒಳಗೇ ಇದೆ. ಗಾಂಧಿ ಮತ್ತು ಅಂಬೇಡ್ಕರ್ ಅವರನ್ನು ಇಪ್ಪತ್ತೊಂದನೆ ಶತಮಾನದಲ್ಲಿ ಎಚ್ಚರಿಕೆಯಿಂದ ನಮ್ಮ ಸಮಸ್ಯೆಗಳ ಜೊತೆ ಅನುಸಂಧಾನ ಮಾಡಬೇಕೇ ಹೊರತು ತುರ್ತಾದ ರಾಜಕೀಯ ಸ್ಪರ್ಧೆಗಳಲ್ಲಿ ಅವರನ್ನು ಬಳಸುವುದು ಅನೈತಿಕ. ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದರೂ, ಅದನ್ನು ಸಮಾಜಗಳಿಗೆ ತಕ್ಕಂತೆ ಸಂವಿಧಾನ ಬದ್ಧವಾಗಿ ನೀಡಿದ್ದರೂ, ಅವುಗಳ ನಿರ್ವಹಣೆ ಮಾತ್ರ ಅದೇ ನಿರಂಕುಶ ಜಾತಿ ವ್ಯವಸ್ಥೆಯ ಹಿಡಿತದಲ್ಲೇ ಇದೆ. ದಲಿತರ ಮೇಲಿನ ಹಲ್ಲೆ ಆಕ್ರಮಣಗಳ ಸಂದರ್ಭದಲ್ಲಿ ಇಡೀ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನಿತ್ಯವೂ ನೋಡುತ್ತಿದ್ದೇವೆ. ಗಾಂಧೀಜಿ ತಂದುಕೊಟ್ಟ ಸ್ವಾತಂತ್ರ್ಯವನ್ನು ಸಂವಿಧಾನದ ಚೌಕಟ್ಟಿನಲ್ಲಿ ರಾಜಕಾರಣ ಮೀರುತ್ತಲೇ ಅದಕ್ಕೆ ತಿದ್ದುಪಡಿಗಳನ್ನು ಮಾಡಿಕೊಳ್ಳುತ್ತಿರುತ್ತದೆ.

ನವ ವಸಾಹತುಶಾಹಿಯ ಸುಂದರ ರೂಪಗಳು ಆಧುನಿಕೋತ್ತರ ಜಗತ್ತಿನ ಮಾಯೆಯ ಒಳಗೆ ನುಸುಳಿ ಬರುವುದು ಇಂತಹ ಮಾರ್ಗಗಳಿಂದಲೇ. ನಮ್ಮ ದೇಶದ ರಾಜಕಾರಣಿಗಳು ಹಾಗೂ ಉದ್ಯಮಿಗಳೇ ಜಾಗತೀಕರಣವನ್ನು ವಿಕಾರಗೊಳಿಸುತ್ತ ಮಗುಮ್ಮಾಗಿರುವುದು. ದೇಶದ ಒಳಗಿನ ಸ್ವಾತಂತ್ರ್ಯವು ಅಖಂಡವಾಗಿದ್ದಾಗ ಮಾತ್ರ ಹೊರಗಿನ ಆರ್ಥಿಕ ಆಕ್ರಮಣಗಳನ್ನು ತಡೆಯಲು ಸಾಧ್ಯವಾಗುವುದು. ಗಾಂಧೀಜಿ ದೇಶದ ಹೊರಮೈ ಸ್ವಾತಂತ್ರ್ಯವನ್ನು ಗೆದ್ದಿದ್ದರಷ್ಟೆ. ಆಧುನಿಕತೆಯು ಬಳಸಿ ಬಿಸಾಡುವುದರಲ್ಲಿ ನಿಪುಣವಾಗಿದ್ದರೆ, ಆಧುನಿಕೋತ್ತರ ಆರ್ಥಿಕ  ಜಗತ್ತು ರೂಪಿಸುವ ನಿರಾಕರಣೆಯು ಅರಿವಿಗೆ ಬಾರದಂತೆ ಸ್ವತಃ ಆ ಸಮುದಾಯಗಳೇ ತಂತಾನೇ ನಿರಾಕರಿಸಿಕೊಂಡು ಕಳೆದುಹೋಗುವಂತೆ ಮಾಡುವುದರಲ್ಲಿ ನಿಸ್ಸೀಮತೆ ಪಡೆದಿದೆ. ದೇಶದ ಒಳಗಿನ ನೀತಿ ಕುರುಡಾಗಿದ್ದರೆ ಅದು ತನ್ನ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಲಾರದು. ದಾಸ್ಯವೇ ಸುಖ ಎಂದು ಕರ್ಮ ಸಿದ್ಧಾಂತದ ಚಪಲತೆಯಲ್ಲಿ ಬೆಳೆದ ಸಮಾಜ ಅಷ್ಟು ಸಲೀಸಾಗಿ ತನ್ನ ಹಳೆಯ ಗುಣವನ್ನು ಬಿಟ್ಟುಕೊಡಲಾರದು.

ಛಿದ್ರವಾದ ಸಮಾಜ ಒಟ್ಟಾಗಿ ಬಾಳುವಲ್ಲಿಯೂ ಅನೇಕ ಸಮಸ್ಯೆಗಳನ್ನು ಸದಾ ಎದುರಿಸುತ್ತ ಇರಬೇಕಾಗುತ್ತದೆ. ಗಾಂಧೀಜಿಯ ಭಾವದಲ್ಲಿ ಅಖಂಡ ಭಾರತ ಇತ್ತೇ ಹೊರತು ಅದರ ಒಳಗಿದ್ದ ಸಾವಿರಾರು ಬಿರುಕುಗಳು ಕಂಡೇ ಇರಲಿಲ್ಲ. ಛಿದ್ರತೆಯ ವ್ಯಸನದಲ್ಲೇ ಇರುವ ಸಮುದಾಯಗಳು ಸ್ವಾತಂತ್ರ್ಯವನ್ನು ಅನುಭವಿಸಲೂ ದುರ್ಬಲವಾಗಿರುತ್ತವೆ. ಹೀಗಾಗಿಯೇ ಇಂದಿಗೂ ಇಡೀ ಭಾರತದಲ್ಲಿ ಹಕ್ಕುಗಳನ್ನು ರಕ್ಷಿಸಿಕೊಳ್ಳುವುದಕ್ಕೆ ಬರುವುದಿಲ್ಲ. ಆದರೆ ಆ ಹಕ್ಕು ಬಾಧ್ಯತೆಗಳನ್ನು ಕಸಿಯಲು ಚಾಣಾಕ್ಷತೆಯಿರುತ್ತದೆ. ಇಂತಹ ನೀತಿಯಿಂದ ನಮ್ಮ ದೇಶದ ಕಾನೂನುಗಳನ್ನೆಲ್ಲ ತಮಗೆ ಬೇಕಾದಂತೆಲ್ಲ ಅಪಮೌಲ್ಯಗೊಳಿಸಲು ಸಾಧ್ಯವಾಗಿರುವುದು. ಭಾರತದ ಸಂವಿಧಾನವನ್ನೇ ವಕೀಲರು ತಮ್ಮ ಸ್ವರ್ಗವನ್ನಾಗಿಸಿ ಕೊಂಡಿರುವುದು ಇಂತಹ ಅವಕಾಶಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ. ಛಿದ್ರ ಸ್ವಾತಂತ್ರ್ಯದ ಬಯಕೆಯೇ ಜಾತಿ ಸಮಾಜದಲ್ಲಿ ಹೆಚ್ಚು. ಪ್ರತ್ಯೇಕತಾ ಚಳುವಳಿಗಳು ಈಗ ಮತ್ತಷ್ಟು ಬಲಗೊಂಡಿವೆ. ಸ್ವಾತಂತ್ರ್ಯವೂ ಜಾತಿಯ ಶ್ರೇಣಿಯಲ್ಲೇ ಬಳಕೆಯಾಗುತ್ತಿದೆ. ಕೆಳಜಾತಿಗಳಲ್ಲಿ ಉಂಟಾಗುತ್ತಿರುವ ಘರ್ಷಣೆಗೆ ಅಸಮಾನತೆಗಳು ಕಾರಣವಾಗಿದ್ದರೂ, ಛಿದ್ರತೆಯಲ್ಲಿ ಅವು ಸ್ವಾತಂತ್ರ್ಯವನ್ನು ಬಯಸುತ್ತಿವೆ. ಅವುಗಳ ಸಾಂಸ್ಕೃತಿಕ ಅನನ್ಯತೆಯೇ ಇಂತಹ ಪ್ರತ್ಯೇಕ ಸ್ವಾತಂತ್ರ್ಯವನ್ನು ಅಪೇಕ್ಷಿಸುತ್ತಿರುತ್ತದೆ. ಹೀಗೆ ಸ್ವಾತಂತ್ರ್ಯವನ್ನು ವರ್ಗೀಕರಿಸಿಕೊಳ್ಳುವುದು ಅತ್ಯಂತ ಕ್ರೂರವಾದ ಸಂಗತಿ. ಹೀಗೆ ಭಗ್ನ ಸ್ವಾತಂತ್ರ್ಯದಲ್ಲಿ ಸಮಾಜದ ಸಮಾನತೆ ಅಸಾಧ್ಯ. ಅಂತಹ ಸಮಾಜಗಳು ತಮ್ಮ ತಮ್ಮ ವಿರುದ್ಧವಾಗಿಯೇ ಪೈಪೋಟಿಗಿಳಿದು, ಅಸಾಧ್ಯವಾದ ಉದ್ದೇಶವನ್ನು ಕಟ್ಟಿಕೊಳ್ಳಬಲ್ಲವು. ಪಾಕಿಸ್ತಾನ, ಬಾಂಗ್ಲಾ, ಭಾರತಗಳು ಹೀಗೆ ಸೀಳಿಕೊಂಡೇ ಆಧುನಿಕೋತ್ತರ ಜಗತ್ತಿನಲ್ಲಿ ಹಲವಾರು ಸವಾಲುಗಳಿಗೆ ಸಿಲುಕಿ ತನ್ನ ನಾಗರಿಕ ವ್ಯವಸ್ಥೆಯಲ್ಲಿ ವಿಪರೀತವಾದ ಅಪ್ರಮಾಣಿಕತೆಯನ್ನು, ದುರ್ಬಲವಾದ ಆಡಳಿತ ವ್ಯವಸ್ಥೆಯನ್ನು ಹೊಂದಿರುವುದು. ಗಾಂಧೀಜಿಯವರ ಅಖಂಡ ಸ್ವಾತಂತ್ರ್ಯವೇ ಭಗ್ನಗೊಂಡಿರುವಲ್ಲಿ ದೇಶದ ಒಳಗಿನ ಸ್ವಾತಂತ್ರ್ಯವು ಭವಿಷ್ಯದಲ್ಲಿ ಮತ್ತೂ ಕ್ರೂರ ಸ್ಥಿತಿಯನ್ನು ತರಬಲ್ಲದು. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಈ ದೇಶದ ಸ್ವಾತಂತ್ರ್ಯವನ್ನು ರಕ್ಷಿಸಬೇಕಾದ ಅನಿವಾರ್ಯತೆ ಇದೆ. ಯಾರಿಗೆ ನಿಜವಾಗಿ ಸ್ವಾತಂತ್ರ್ಯ ಇಲ್ಲವೋ, ಅವರು ಯಾರ ಸ್ವಾತಂತ್ರ್ಯವನ್ನೂ ಮೊಟಕು ಮಾಡುವುದಿಲ್ಲ. ಸಂವಿಧಾನದ ಮೂಲಕ ಅಂಬೇಡ್ಕರ್ ಅವರು ಗಾಂಧೀಜಿ ಹೋರಾಡಿ ಗೆದ್ದ ಸ್ವಾತಂತ್ರ್ಯವನ್ನು ಹಂಚಿದ್ದಾರೆ. ಸ್ವಾತಂತ್ರ್ಯವನ್ನು ಹೀಗೆ ಪುನರ್ ಸೃಷ್ಟಿಸಿ ಸಮನಾಗಿ ಹಂಚುವುದು ಗಾಂಧೀಜಿ ಮಾಡಿದ ಹೋರಾಟದಷ್ಟೇ ಮುಖ್ಯವಾದದ್ದು. ಗಾಂಧೀಜಿ ಒಬ್ಬರೇ ನಿಜವಾಗಿ ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಗೆದ್ದಿದ್ದರು. ಒಂದು ವೇಳೆ ಆ ಸ್ವಾತಂತ್ರ್ಯವನ್ನು ಕೇವಲ ಪಡೆದಿದ್ದರೆ ಅದನ್ನು ಅವರು ಉಳಿದವರ ಪಾಲಿಗೆ ಬಿಟ್ಟುಕೊಡುತ್ತಿರಲಿಲ್ಲ. ಇದು ಸ್ವಾತಂತ್ರ್ಯದ ದರ್ಶನದ ಪರಿ. ರಾಷ್ಟ್ರೀಯ ಕಾಂಗ್ರೆಸ್ ನ ಮುಂದಾಳುಗಳು ಆ ಸ್ವಾತಂತ್ರ್ಯವನ್ನು ಕೆಂಪು ಕೋಟೆಯಲ್ಲಿ ಕುಳಿತು ಹಂಚಿಕೊಂಡರು. ಹಾಗೆ ಅಂದು ಹಂಚಿಕೊಂಡದ್ದು ರಾಜಕೀಯ ಪಕ್ಷ ಮತ್ತು ಜಾತಿಗಳ ಕೈಯಿಂದ ಅವರವರಿಗೆ ಬೇಕಾದಂತೆ ಅರ್ಥೈಸಲ್ಲಟ್ಟಿತು. ಗಾಂಧೀಜಿಗೆ ಸ್ವಾತಂತ್ರ್ಯ ಮಾತ್ರ ತಿಳಿದಿತ್ತು. ಅದರ ರಾಜಕಾರಣದ ಬಗ್ಗೆ   ಪೂರ್ತಿಯಾಗಿ ಅವರು ಮುಗ್ಧರಾಗಿದ್ದರು. ಅಂಬೇಡ್ಕರ್ ಆ ಸ್ವಾತಂತ್ರ್ಯದ ರಾಜಕಾರಣದ ವಿರೂಪವನ್ನು ಗ್ರಹಿಸಿದ್ದರು. ಸ್ವಾತಂತ್ರ್ಯದ ಮುಗ್ಧ ದರ್ಶನ ಗಾಂಧೀಜಿಗೆ ಅಖಂಡ ಪರ್ಯಾಯವಾಗಿತ್ತೆಂಬುದು ನಿಜವಿದ್ದರೂ, ಆ ಪರ್ಯಾಯವೇ ಅವರ ಮುಂದೆ ಇಂಡೋ ಪಾಕಿಸ್ತಾನದ ಸೀಳುವಿಕೆಯಲ್ಲಿ ದುರಂತದ ಆರಂಭವನ್ನು ಸೂಚಿಸಿತ್ತು.

ಅಂಬೇಡ್ಕರ್ ಈ ಎಲ್ಲ ಬೆಳವಣಿಗೆಗಳನ್ನು ನಿಷ್ಠುರವಾಗಿ ಏಕಾಂಗಿಯಾಗಿ ಧ್ಯಾನಿಸುತ್ತಿದ್ದರು. ಬುದ್ಧನ ಧ್ಯಾನ ಅವರನ್ನು ಕರೆಯುತ್ತಿತ್ತು. ಬುದ್ಧ ನೀಡುವ ಸ್ವಾತಂತ್ರ್ಯದ ಮಹಾ ಬೆಳಗು ಅಂಬೇಡ್ಕರ್ ಅವರಲ್ಲಿ ಭವಿಷ್ಯದ ಭಾರತದ ಬಗ್ಗೆ ಚಿಂತಿಸುವಂತೆ ಮಾಡಿತ್ತು. ಗಾಂಧೀಜಿಯನ್ನು ಸ್ವಾತಂತ್ರ್ಯದ ಉತ್ಸವಕ್ಕೆ ಗೋಡ್ಸೆ ಬಲಿಕೊಟ್ಟಿದ್ದು ಭಾರತೀಯರು ಸ್ವಾತಂತ್ರ್ಯವನ್ನು ಅರ್ಥಮಾಡಿಕೊಂಡಿರುವುದಕ್ಕೂ, ಅದನ್ನು ಭಗ್ನಗೊಳಿಸುವುದಕ್ಕೂ ಬಹುದೊಡ್ಡ ರೂಪಕ. ಗಾಂಧಿಯ ಜೊತೆಯಲ್ಲೆ ಗಾಂಧಿಯ ಸ್ವಾತಂತ್ರ್ಯದ ದರ್ಶನ ನೆತ್ತರಲ್ಲಿ ಲೀನವಾಗಿತ್ತು.

ದೇಶದಲ್ಲಿ ಜಾತಿ, ಮತ, ಧರ್ಮ, ವರ್ಗ, ಪಂಗಡಗಳು ಸ್ವಾತಂತ್ರ್ಯವನ್ನು ಪಡೆದುಕೊಂಡಿದ್ದವು. ಆದರೆ ಮನುಷ್ಯರು ಸ್ವಾತಂತ್ರ್ಯವನ್ನು ಪಡೆಯಲಿಲ್ಲ. ಅವರವರ ಸಂಕೇತಗಳು, ಅಧಿಕಾರದ ವ್ಯವಸ್ಥೆಗಳು, ಸನಾತನ ಮೌಲ್ಯಗಳು ಸ್ವಾತಂತ್ರ್ಯವನ್ನು ಕಸಿದುಕೊಂಡಿದ್ದವು. ಇಂತಹ ದುರಂತದ ನಡುವೆ ಅಂಬೇಡ್ಕರ್ ಸಂವಿಧಾನವನ್ನು ಬುದ್ಧನ ನೀತಿಯಲ್ಲಿ ಮತ್ತೆ ಪುನರ್ ಸೃಷ್ಟಿಸಿದರು. ಮನುಷ್ಯರಿಗೆ ಸಂವಿಧಾನದ ಮೂಲಕ ಸ್ವಾತಂತ್ರ್ಯವನ್ನು ಸಮನಾಗಿ ಹಂಚಿದರು. ಗದ್ದುಗೆಯನ್ನು ನಿರಾಕರಿಸಿ ಆಶ್ರಮ ಸೇರಿಕೊಂಡಿದ್ದ ಗಾಂಧಿಯ ಪ್ರಾರ್ಥನೆಯಲ್ಲಿ ಸ್ವಾತಂತ್ರ್ಯದ ಉಸಿರಾಟವಿತ್ತು. ನೆಹರು ಪಡೆ ಆ ಸ್ವಾತಂತ್ರ್ಯವನ್ನು ಆಧುನಿಕತೆಯ ಆದರ್ಶದಲ್ಲಿ ದೇಶವನ್ನು ಕಟ್ಟುವ ಭರದಲ್ಲಿ ಎಲ್ಲೆಲ್ಲಿಗೋ ಕೊಂಡೊಯ್ದಿತು. ಅಂಬೇಡ್ಕರ್ ರೂಪಿಸಿದ ಸಂವಿಧಾನದಲ್ಲಿ ಮುಕ್ತಿಗೆ ಬೇಕಾದ ಎಲ್ಲ ದಾರಿಗಳನ್ನು ತೆರೆಯಲಾಗಿತ್ತು. ಅಖಂಡ ಸ್ವಾತಂತ್ರ್ಯವನ್ನು ವ್ಯಕ್ತಿ ಸ್ವಾತಂತ್ರ್ಯದಲ್ಲಿ ಅಂಬೇಡ್ಕರ್ ವಿಸ್ತರಿಸಿದರು. ಗಾಂಧೀಜಿಗೆ ವ್ಯಕ್ತಿ ಸ್ವಾತಂತ್ರ್ಯದ ಘನತೆಗಿಂತಲೂ ದೇಶದ ಸ್ವಾತಂತ್ರ್ಯವೇ ಮಿಗಿಲಾಗಿತ್ತು.

ಭಾರತೀಯ ಸಮಾಜ ಎಂದೂ ಯಾವುದನ್ನು ಹಂಚಿಕೊಂಡು ಬದುಕುವಂತಹುದಲ್ಲ. ವಿಷಾದ ಹಾಗೂ ವ್ಯಂಗ್ಯವೆಂದರೆ ಏನೂ ಇಲ್ಲದ ಬರಿಗೈ ಸಮುದಾಯಗಳು ಮಾತ್ರ ತನ್ನಲ್ಲಿರುವುದನ್ನು ಮುಕ್ತವಾಗಿ ಹಂಚಿಕೊಳ್ಳುತ್ತಿರುತ್ತವೆ. ಪಡೆದ ಸಮಾಜಗಳು ಯಾವತ್ತೂ ಮತ್ತಷ್ಟು, ಇನ್ನಷ್ಟು ಎಂದು ಸಂಪತ್ತನ್ನು, ಅಧಿಕಾರವನ್ನು, ಸ್ವಾತಂತ್ರ್ಯವನ್ನು ಪಡೆದುಕೊಳ್ಳಲು ಹೊಸಬಗೆಯ ಉಪಾಯಗಳನ್ನು ಹುಡುಕುತ್ತಲೇ ಇರುತ್ತವೆ. ಅಂಬೇಡ್ಕರ್ ಅವರು ಗಾಂಧೀಜಿಯ ಸ್ವಾತಂತ್ರ್ಯವನ್ನೂ, ಬುದ್ಧನ ತತ್ವವನ್ನೂ ಸಂವಿಧಾನವಾಗಿ ಪರಿರ್ವತಿಸಿ ನ್ಯಾಯಾಂಗ ಕಾಯ್ಯಾಂಗ ಶಾಸಕಾಂಗಗಳ ಮೂಲಕ ಸ್ವಾತಂತ್ರ್ಯವನ್ನು ಗೆದ್ದು ಬಿಟ್ಟರು. ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರು ಮಾತ್ರ ಸ್ವಾತಂತ್ರ್ಯವನ್ನು ಗೆದ್ದದ್ದು. ಇವರಿಬ್ಬರೇ ಅದನ್ನು ಮರಳಿ ಸಮಾಜದ ಹಿತಕ್ಕಾಗಿ ಬಿಟ್ಟುಕೊಟ್ಟವರು. ಇದರಿಂದಲೇ ದಲಿತರಿಗೆ ಸಂವಿಧಾನ ಬದ್ಧವಾದ ಅಸ್ತಿತ್ವ ರೂಪುಗೊಂಡಿದ್ದು.

ಮಹಿಳೆಯರಿಗೆ ಮೊದಲಬಾರಿಗೆ ಅಂಬೇಡ್ಕರ್ ಪ್ರತ್ಯೇಕ ಮೀಸಲಾತಿಯನ್ನು ಏಕಾಂಗಿಯಾಗಿ ಹೋರಾಡಿ ಪ್ರತಿಪಾದಿಸಿದರು. ಸಮಾಜದ ಮುಖ್ಯ ಶಕ್ತಿಯಾದ ಮಹಿಳೆಯರಿಗೆ ಸಂವಿಧಾನದ ಮೂಲಕ ಸ್ವಾತಂತ್ರ್ಯವನ್ನು ನೀಡಿದ್ದು ಅಂಬೇಡ್ಕರ್ ವ್ಯಕ್ತಿತ್ವ ಎಂಥದೆಂಬುದನ್ನು ಸಾರುತ್ತದೆ. ದಲಿತರಿಗಂತೂ ಸಂವಿಧಾನವು ದೊಡ್ಡ ರಕ್ಷಾಕವಚವಾಯಿತು. ಇಂತಹ ರಕ್ಷಾಕವಚ ದೇಶದ ಎಲ್ಲ ಸಮುದಾಯಗಳಿಗೂ ಸಾಧ್ಯವಾಗಿದೆ. ಇಲ್ಲದಿದ್ದರೆ ಎಷ್ಟೋ ಸಮುದಾಯಗಳು ಎಂದೋ ಕಳೆದುಹೋಗುತ್ತಿದ್ದವು. ಈ ರಕ್ಷಾಕವಚ ಎಷ್ಟೊಂದು ಅಗಾಧವಾದುದೆಂದರೆ ಈ ದೇಶದ ಭಿಕ್ಷುಕನಿಗೂ ಅದು ನ್ಯಾಯದ ವಕಾಲತ್ತನ್ನು ವಹಿಸುತ್ತದೆ. ಅನಾಥರ ಹಸಿವಿನ ಬಗ್ಗೆ ಪ್ರಶ್ನಿಸುತ್ತದೆ. ಜಗತ್ತಿನ ಯಾವ ಸಂವಿಧಾನದಲ್ಲೂ ಹಸಿವಿನಿಂದ ಬಳಲುವವರ ಬಗ್ಗೆ ಉಲ್ಲೇಖವಿಲ್ಲ. ಅಂಬೇಡ್ಕರ್ ರೂಪಿಸಿದ ಸಂವಿಧಾನದ ಪ್ರಕಾರ ದೇಶದ ಯಾರಾದರೂ ಹಸಿವಿನಿಂದ ನರಳಿ ಸತ್ತರೆ, ಅದು ಆ ವ್ಯವಸ್ಥೆಯ ತಪ್ಪು, ಸರ್ಕಾರ  ಆ ಹೊಣೆ ಹೊರಬೇಕಾಗುತ್ತದೆ. ಅಂತವರ ಸಾವು ಇಲ್ಲವೆ ದುರ್ಬಲರ ದುರಂತಕ್ಕೆ  ಸರ್ಕಾರ ನೈತಿಕವಾಗಿ ಹೊಣೆಯಾಗಬೇಕಾಗುತ್ತದೆ ಎಂದು ಅವರು ಸೂಚಿಸಿದ್ದಿದೆ.

ಸಮಾಜದ ಕಟ್ಟಕಡೆಯ ಮನುಷ್ಯನಿಗೂ ಪ್ರಶ್ನಿಸುವ ಹಕ್ಕನ್ನು ಅಂಬೇಡ್ಕರ್ ಉದ್ದೇಶ ಪೂರ್ವಕವಾಗಿಯೆ ನೀಡಿದ್ದಾರೆ. ಧ್ವನಿಯೇ ಇಲ್ಲದವರ ಧ್ವನಿಯಾಗಿ ಸಂವಿಧಾನವು ತಂತಾನೇ ನ್ಯಾಯದ ಹೋರಾಟದ ಪ್ರಣಾಳಿಕೆಯಂತೆ ಅವರವರ ಅಸ್ತಿತ್ವಕ್ಕಾಗಿ ಹೋರಾಡುತ್ತದೆ. ಸಂವಿಧಾನದಲ್ಲಿ ಇಂತಹ ಸ್ವಾತಂತ್ರ್ಯದ ಅಂರ್ತಜಲ ಹರಿಯುವುದರಿಂದ ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು ಬದುಕುಳಿಯಲು ಸಾಧ್ಯವಾಗಿರುವುದು. ಹೀಗಾಗಿ ಭಾರತೀಯ ಸಂವಿಧಾನವು ಪರಮ ಸ್ವಾತಂತ್ರ್ಯದ ವ್ಯವಸ್ಥೆ. ಅಂತೆಯೇ ಎಲ್ಲರನ್ನೂ ಸಮಾನವಾಗಿ ಕಾಣುತ್ತ, ಅವರವರ ಘನತೆಗೆ ಅನನ್ಯತೆಗೆ ಭಂಗ ಉಂಟಾಗದಂತೆ ಕಾಯುವ ಶಕ್ತಿ. ಆಳುವ ವ್ಯವಸ್ಥೆಯನ್ನು ಸದಾ ನಿಯಂತ್ರಿಸುವ ಸಂವಿಧಾನದಲ್ಲಿ ಈ ದೇಶದ ನೊಂದ ಎಲ್ಲರ ವಿವೇಕವಿದೆ.

ಛಿದ್ರವಾಗಿದ್ದ ಭಾರತ ಮಾತೆಯ ಸೀರೆಯನ್ನು ಗಾಂಧೀಜಿ ಗತಕಾಲದ ರಮ್ಯ ಸ್ವಾತಂತ್ರ್ಯದ, ಸರ್ವೋದಯದ, ಆಧ್ಯಾತ್ಮದ ಬಲದಿಂದ ಹೊಲೆದು ಕೊಟ್ಟಿದ್ದನ್ನು ಅಂಬೇಡ್ಕರ್ ಆಧುನಿಕ ಜಗತ್ತಿನ ಎಚ್ಚರದಿಂದ, ಬುದ್ಧನ ಧ್ಯಾನದಿಂದ ತೊಳೆದು ಅದನ್ನು ಕೌದಿಯಾಗಿಸಿ ಅನಾಥರಿಗೂ ಹೊದೆಸಿಬಿಟ್ಟರು. ಈ ಹಿನ್ನೆಲೆಯಲ್ಲಿ ಗಾಂಧಿ ಮತ್ತು ಅಂಬೇಡ್ಕರ್ ದೇಹ ಮತ್ತು ಆತ್ಮವಿದ್ದಂತೆ. ಗಾಂಧೀಜಿಯು ಈ ದೇಶದ ದೇಹವಾದರೆ ಆ ದೇಹದ (ದೇಶದ) ಅಂತರಾತ್ಮ ಅಂಬೇಡ್ಕರ್. ಹಾಗೆಯೇ ಭಾರತದ ಸ್ವಾತಂತ್ರ್ಯ ಎಂದರೆ ಅದು ಗಾಂಧಿ. ಅಂತೆಯೆ ದೇಶದ ಸ್ವಾತಂತ್ರ್ಯದ ಆತ್ಮ ಎಂದರೆ ಅದು ಅಂಬೇಡ್ಕರ್. ದೇಹ ಮತ್ತು ಆತ್ಮ ಎರಡೂ ಒಂದನ್ನೊಂದು ಅವಲಂಬಿಸಿದ್ದರೂ ಅವು ಬೇರೆ ನೆಲೆಯ ಏಕಾಂತಗಳಲ್ಲಿ ಲೋಕಾಂತದ ಧಾವಂತಗಳನ್ನು ಹೊತ್ತು ಅಸ್ತಿತ್ವದ ಪಯಣದಲ್ಲಿ ಸಾಗುತ್ತಿರುತ್ತವೆ. ಆತ್ಮವಿಲ್ಲದ ದೇಹ ಅಸಾಧ್ಯ. ಹಾಗೆಯೆ ದೇಹವಿಲ್ಲದ ಆತ್ಮ ಅಸ್ತಿತ್ವರಹಿತವಾದದ್ದು. ಸವರ್ಣೀಯರಿಗೆ ಅಂಬೇಡ್ಕರ್ ಎಂಬ ಆತ್ಮವಿರಬೇಕು. ದಲಿತರಿಗೆ ಗಾಂಧಿ ಎಂಬ ದೇಹವಿರಬೇಕು. ಅದು ನಿಜವಾದ ಸೌಂದರ್ಯ, ಅದೇ ಆತ್ಯಂತಿಕವಾದ ಎಚ್ಚರ. ಅದೇ ನ್ಯಾಯದ ಪರಮ ಸಮಾನತೆಯ ವಾಸ್ತವ ಸ್ಥಿತಿ.

ಇಂತಹ ಧ್ಯಾನವಿಲ್ಲದ ಆಧುನಿಕೋತ್ತರ ಭಾರತವನ್ನು ಕಟ್ಟಲಾಗದು. ಸಂವಿಧಾನವನ್ನು ತಿದ್ದುಪಡಿ ಮಾಡಲು ಹಲವಾರು ಯತ್ನಗಳು ನಿರಂತರವಾಗಿ ಆಗುತ್ತಲೇ ಇವೆ. ಆಡಳಿತದ ಸುಧಾರಣೆಗೆ ಹಾಗೂ ಸಮಾಜದ ಹೊಸ ಬಗೆಯ ಅವಕಾಶಗಳಿಗೆ ತಿದ್ದುಪಡಿಗಳು ಅನಿವಾರ್ಯವಾಗಿ ಆಗಲೇಬೇಕು. ಯಾವ ಸಂವಿಧಾನವೂ ಸಾರ್ವಕಾಲಿಕವಾದುದಲ್ಲ. ತಿದ್ದುಪಡಿಗಳು ಸೀಮಿತ ನೆಲೆಯಿಂದ ಮತ, ಮೌಢ್ಯ, ಜಾತಿಗಳ ಹಿನ್ನೆಲೆಯಲ್ಲಿ ಆಗಬಾರದು. ಉನ್ನತ ನಾಗರೀಕತೆಯ ಕಡೆಗೆ ಚಲಿಸಬೇಕಾದಲ್ಲಿ ಸ್ವಾತಂತ್ರ್ಯ ಮತ್ತು ನೈತಿಕತೆ ಎರಡೂ ಸಾಧ್ಯತೆಗಳು ಇನ್ನಷ್ಟು ಬಲಶಾಲಿಯಾಗುವಂತೆ ಮಾರ್ಪಾಟಾಗಬೇಕು. ಸಂವಿಧಾನದಲ್ಲಿ ಲೋಪ ಇದೆ ಎನ್ನುವುದಕ್ಕಿಂತ ಆಳುವ ಸಮಾಜದಲ್ಲಿ ಯಾವ ಲೋಪ ಇದೆ ಎಂಬುದನ್ನು ಮೊದಲು ಪರಿಶೀಲಿಸಬೇಕು. ಗಾಂಧಿ ಮತ್ತು ಅಂಬೇಡ್ಕರ್ ರೂಪಿಸಿದ ಆಧುನಿಕ ಭಾರತ ಈ ಹೊತ್ತಿಗೆ ಬಹಳ ದೂರದ ಪಯಣಕ್ಕೆ ಸಜ್ಜಾಗುತ್ತಿದೆ. ಇಂಥಲ್ಲಿಯೇ ರೂಪವಿರೂಪ ಎಲ್ಲವೂ ಒಟ್ಟಿಗೆ ಬೆರೆತು ನಾಳೆಯ ವಾಸ್ತವ  ತೀರ್ಮಾನವಾಗುವುದು. ಬಲ ಪಂಥೀಯ ರಾಜಕಾರಣವು ತನ್ನ ಹಿಂದುತ್ವದ ರಕ್ಷಣೆಗಾಗಿ ಸಂವಿಧಾನವನ್ನೆ ವಿರೂಪಗೊಳಿಸಬಲ್ಲದು. ಆಗ ದೇಶದ ‘ಅಹಿಂದ’ ಸಮುದಾಯಗಳ ರಕ್ಷಾಕವಚವೇ ಸಡಿಲವಾಗಿಬಿಡುತ್ತದೆ. ಅಂತಹ ಅಪಾಯದ ನಡುವೆ ಒಳಗೊಳ್ಳಬೇಕಾದ ಸಾಂಘಿಕವಾದ ಪ್ರತಿರೋಧ ಶಕ್ತಿಯು ಒಗ್ಗೂಡಲು ಇದು ಸಕಾಲ.


ಸಂವಿಧಾನ-60 : ಸಾಮಾಜಿಕ ನ್ಯಾಯ ಮತ್ತು ಕರ್ನಾಟಕ” ಪುಸ್ತಕದಿಂದ.
ಕೃಪೆ: ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ, ಬೆಂಗಳೂರು.

(ಚಿತ್ರಕೃಪೆ: ವಿಕಿಪೀಡಿಯ)

ಭೂಮಿ ಹುಟ್ಟಿದ್ದು ಹೇಗೆ – ಲೇಖನ: ಭಾಗ- 3

 


ಕಮಲಾಕರ
© ಹಕ್ಕು: ಮೌಲ್ಯಾಗ್ರಹ ಪ್ರಕಾಶನ


ಮೊದಮೊದಲು ಭೂಮಿಗೆ 1 ಬಿಲಿಯನ್ ಅಂದರೆ 100 ಕೋಟಿ ವರ್ಷಗಳು ಅಂದರು.

ಆಮೇಲೆ 3 ಬಿಲಿಯನ್ ಅಂದರೆ 300 ಕೋಟಿ ವರ್ಷಗಳು ಅಂದರು.

ಕಡೆಗೆ 456 ಕೋಟಿಗಳು ಎಂಬ ತೀರ್ಮಾನಕ್ಕೆ ಬಂದರು. ಇದನ್ನೇ ಭೂಮಿ  ಹುಟ್ಟಿದ ಕಾಲವೆಂದು,  ಈ ಧೀರ್ಘ ಅವಧಿಯನ್ನು ಡೀಪ್ ಟೈಮ್ ಎಂದು ವಿಜ್ಞಾನಿಗಳು ಕರೆದಿದ್ದಾರೆ.

ಇಲ್ಲಿಗೆ ಭೂಮಿಯ ವಯಸ್ಸು ಎಷ್ಟು ಎಂಬ ವಿಚಾರ ಗೊತ್ತಾಯಿತು. ಆದರೆ ಈ 456 ಕೋಟಿ ವರ್ಷಗಳ ಪಯಣ ಹೇಗಿತ್ತು ಅನ್ನೋದನ್ನು ತಿಳಿಯುವ ಅಗತ್ಯವಿತ್ತು. ವಿಜ್ಞಾನಿಗಳು ಶಿಲೆಗಳನ್ನು, ಸಂಶೋಧನೆಗಳನ್ನು ಕ್ರಮವಾಗಿ ಜೋಡಿಸಿ ಭೂಮಿಯ ವಿಕಾಸದ ಹಾದಿಯನ್ನು ಅದರ ತಿರುವುಗಳನ್ನು ತಿಳಿಯಲು ಮುಂದಾದರು.

ಭೂಮಿ ಬಾಲ್ಯಾವಸ್ಥೆಯಲ್ಲಿದ್ದಾಗ ಉಲ್ಕೆಗಳು ಅಪ್ಪಳಿಸುತ್ತಿದ್ದವು. ಅದಾಗಲೇ ಲಾವಾರಸದಿಂದ ತುಂಬಿದ್ದ ಭೂಮಿ ನಿಧಾನವಾಗಿ ತಣಿಯಲು ಆರಂಭಿಸಿತ್ತು. ಈ ಸಂದರ್ಭದಲ್ಲಿ ಬಿದ್ದ ಉಲ್ಕೆಗಳು ಶಿಲೆಗಳ ರೂಪ ಪಡೆದವು ಎನ್ನುತ್ತಾರೆ ವಿಜ್ಞಾನಿಗಳು.

ವಾಸ್ತವವಾಗಿ ವಿಜ್ಞಾನಿಗಳಿಗೆ ಕೋಟ್ಯಂತರ ವರ್ಷಗಳಷ್ಟು ಪುರಾತನವಾದ ಶಿಲೆಗಳು ಸಿಕ್ಕಿದ್ದು ಕಡಿಮೆ. ಆದರೆ ಅಷ್ಟೇ ಪುರಾತನವಾದ ಯುರೇನಿಯಂನಿಂದ ಕೂಡಿದ ಜರ್ಕಾನ್ ಹರಳುಗಳು ದೊರೆತವು.

ಕೋಟ್ಯಾನುಕೋಟಿ ವರ್ಷಗಳಷ್ಟು ಹಿಂದೆ ಇದ್ದ ವಾತಾವರಣದ ಸ್ವರೂಪವನ್ನು ಕಟ್ಟಿಕೊಟ್ಟ ಹರಳುಗಳಿವು. ಆ ಕಾಲದಲ್ಲಿದ್ದ ನೀರಿನ ಕಣದ ಗುರುತುಗಳೂ ಈ ಹರಳುಗಳಿಂದಲೇ ಸಿಕ್ಕವು.

ನೀರು ಎಲ್ಲಿಂದ ಬಂತು?

ಇಷ್ಟಾಗಿಯೂ ನೀರು ಎಲ್ಲಿಂದ ಬಂತು ಎಂಬ ಬಗ್ಗೆ ನಿರ್ದಿಷ್ಟ ನಿಖರ ಮಾಹಿತಿ ಇಲ್ಲ.

ನೀರಿನ ಮೂಲ ಭೂಮಿಯಲ್ಲ ಎಂದು ಒಂದಿಷ್ಟು ವಿಜ್ಞಾನಿಗಳು ಪ್ರತಿಪಾದಿಸುತ್ತಾರೆ. ಅವರ ಪ್ರಕಾರ ಆಕಾಶವೇ ನೀರಿನ ಮೂಲ. ಉಲ್ಕೆಗಳೂ, ಧೂಮಕೇತುಗಳೂ, ನೀರಿನ ಕಣಗಳನ್ನು ಭೂಮಿಗೆ ತಂದವು ಎನ್ನುತ್ತಾರೆ.

ಇದಕ್ಕೆ ವಿರುದ್ಧವಾದ ವಾದವೂ  ಇದೆ. ಭೂಮಿ ತಣ್ಣಗಾಗುವ ಪ್ರಕ್ರಿಯೆಯಲ್ಲಿ ಬಿಡುಗಡೆಯಾದ ಆವಿ, ಇಂಗಾಲದ ಡೈಆಕ್ಸೈಡ್ ಜೊತೆ ಬೆರೆತು ದಟ್ಟ ಮೋಡಗಳು ಆದವು. ಭೂಮಿ ಸುತ್ತ ಹರಡಿಕೊಂಡವು. ಆ ಮೋಡಗಳೇ ಭೂಮಿಗೆ ನೀರು ಹರಿಸಿದವು ಎನ್ನುವುದು ಆ ಇನ್ನೊಂದು ವಾದ.

ನೀರಿನ ಕುರಿತ ಈ ಜಿಜ್ಞಾಸೆ ಇನ್ನೂ ಮುಗಿದಿಲ್ಲ. ನೀರು ಹೇಗೆ ಭೂಮಿಗೆ ಬಂತೋ ಏನೋ ಬಹುದೊಡ್ಡ ಬದಲಾವಣೇಯನ್ನೇ ತಂತು…

ಮಳೆ ಮಳೆ ಮಳೆ..

ಆಗ ಭೂಮಿಗೆ 400 ಕೋಟಿ ವರ್ಷಗಳು. ಭೂಮಿ ಸುತ್ತ ಹರಡಿಕೊಂಡಿದ್ದ ಮೋಡಗಳ ಮೇಲೆ ಗುಡುಗು ಮಿಂಚುಗಳು ಅಪ್ಪಳಿಸಿ ಮಳೆ ಸುರಿಯಲಾರಂಭಿಸಿತು.

ಒಂದಲ್ಲ, ಎರಡಲ್ಲ, ನೂರಲ್ಲ, ಇನ್ನೂರಲ್ಲ. ಲಕ್ಷಾಂತರ ವರ್ಷಗಳ ಕಾಲ ಮಳೆ ಸುರಿದೇ ಸುರಿಯಿತು. ಭೂಮಿ ಒಂದು ಜಲವಿಶ್ವವಾಗಿ ಪರಿವರ್ತನೆಗೊಂಡಿತು. ಭೂಮಿಯ 90 ಭಾಗ ನೀರು ತುಂಬಿಕೊಂಡು ಅಗಾಧ ಸಾಗರವಾಗಿ ಹೋಯಿತು.

ಇಷ್ಟಾಗಿಯೂ ಜ್ವಾಲಾಮುಖಿಗಳು ಕ್ರಿಯಾಶೀಲವಾಗಿದ್ದವು. ಈ ಅಗಾಧ ಸಾಗರದಲ್ಲಿ ಅಲ್ಲಲ್ಲಿ ಇದ್ದ ದ್ವೀಪಗಳಿಂದ ಲಾವಾರಸ ಉಕ್ಕುವುದು ನಿಂತಿರಲಿಲ್ಲ. ಈ ಲಾವಾರಸ ಸಾಗರ ಸೇರಿ ಕಬ್ಬಿಣಾಂಶ ಹೆಚ್ಚಿ ನೀರು ಹಸಿರು ಬಣ್ಣಕ್ಕೆ ತಿರುಗಿತು. ಮತ್ತೊಂದೆಡೆ ಇಂಗಾಲದ ಡೈಆಕ್ಸೈಡ್ ಆಕಾಶವನ್ನು ದಟ್ಟವಾಗಿ ಆವರಿಸಿಕೊಂಡಿದ್ದರಿಂದ ಕೆಂಪಾಗಿ ಕಾಣುತ್ತಿತ್ತು.

ಭೂಮಿಯ ವಾತಾವರಣದಲ್ಲಿ ಅತಿಯಾದ ಒತ್ತಡ ನಿರ್ಮಾಣವಾಗಿತ್ತು. 100 ಡಿಗ್ರಿ ಸೆಲ್ಸಿಯಸ್‍ನಷ್ಟು ಉಷ್ಣಾಂಶವಿತ್ತು. ಲಾವಾರಸ ಬೆರೆತು ಭೂಮಿಯನ್ನು ಆವರಿಸಿದ ನೀರು ಆಸಿಡ್‌ನಷ್ಟು ತೀಕ್ಷ್ಣವಾಗಿತ್ತು. ಸುಮಾರು50 ಕೋಟಿ ವರ್ಷಗಳ ಕಾಲ ಇದೇ ಸ್ಥಿತಿ ಮುಂದುವರೆದಿತ್ತು.

ಈ ವಿಷಮ ವಾತಾವರಣ ಮುಂದಿನ ಬೆಳವಣಿಗೆಗೆ ವೇದಿಕೆ ರೂಪಿಸುತ್ತಿದ್ದವು ಎನ್ನಬಹುದೇನೊ. ಇನ್ನೂ ಕ್ರಿಯಾಶೀಲವಾಗಿದ್ದ ಜ್ವಾಲಾಮುಖಿಗಳು ಹೊಸರೀತಿಯ ಶಿಲಾಪದರವನ್ನು ರೂಪಿಸುತ್ತ, ಭೂಖಂಡಗಳ ಸೃಷ್ಟಿಕಾರ್ಯದಲ್ಲಿ ನಿರತವಾಗಿದ್ದವು. ಭೂಮಿ ಅಗಾಧವಾದ, ಅನನ್ಯವಾದ ಗ್ರಹ ಆಗುವ ಕಾಲ ಹತ್ತಿರವಾಗುತ್ತಿತ್ತು.

ಭೂಮಿ ಹುಟ್ಟಿ 100 ಕೋಟಿ ವರ್ಷಗಳಾಗುವ ಹೊತ್ತಿಗೆ ಎಲ್ಲಿ ನೋಡಿದರೂ ನೀರೆ ತುಂಬಿಕೊಂಡಿತ್ತು. ಜೊತೆಗೆ ಜ್ವಾಲಾಮುಖಿಗಳು ಲಾವಾರಸವನ್ನು ಚಿಮ್ಮುತ್ತಲೇ ಇದ್ದವು ಕೂಡ. ಈ ಪ್ರಕ್ರಿಯೆಯಲ್ಲಿ ಒಂದು ವಿಧದ ಶಿಲೆ ಸೃಷ್ಟಿಯಾಯಿತು. ಅದೇ ಗ್ರಾನೈಟ್ ಶಿಲೆ. ಇದೇ ಭೂಮಿಯ ಪದರವಾಗಿ ವ್ಯಾಪಿಸಿಕೊಳ್ಳಲಾರಂಭಿಸಿತು.

ಭೂಮಿ ಜಲಾವೃತವಾಗಿ, ಸಾಗರದೊಳಗೆ ಜ್ವಾಲಾಮುಖಿಗಳು ಸಿಡಿಯುತ್ತಿದ್ದಾಗ ಶಿಲೆಯೊಂದು ರಚನೆಯಾಗಲಾರಂಭಿಸಿತು. ಕುದಿವ ನೀರು, ಲಾವಾರಸದ ಮಿಶ್ರಣದಿಂದ ಅತ್ಯಂತ ಕಠಿಣವಾದ ಭಾರದ ಶಿಲೆ ರಚನೆಯಾಯಿತು. ಅದೇ ಗ್ರಾನೈಟ್.

ದಕ್ಷಿಣ ಆಫ್ರಿಕಾದ ಸ್ಥಳವೊಂದರಲ್ಲಿ ಪತ್ತೆಯಾದ ಬಂಡೆಗಳು ಗ್ರಾನೈಟ್ ಶಿಲೆಯ ರಹಸ್ಯ ಬಿಚ್ಚಿಟ್ಟವು. ಈ ಬಂಡೆಗಳ ಅಧ್ಯಯನದಿಂದ ಗ್ರಾನೈಟ್ ಭೂಮಿಯ ತೊಗಟೆಯಾಗಿ ವಿಸ್ತರಿಸಿಕೊಂಡಿದ್ದು ವಿಜ್ಞಾನಿಗಳಿಗೆ ತಿಳಿದುಬಂತು.

ಹೀಗೆ ಗ್ರಾನೈಟ್ ಭೂಮಿಯ ಉದ್ದಗಲಕ್ಕೂ ವಿಸ್ತರಿಸಿಕೊಂಡಿತು. ಕಾಲಾನಂತರದಲ್ಲಿ ಅಲ್ಲಲ್ಲಿ ಬಿರುಕುಬಿಟ್ಟು ಸಾಗರದ ನೀರು ಭೂಗರ್ಭ ಸೇರಲಾರಂಭಿಸಿತು.

250 ಕೋಟಿ ವರ್ಷಗಳು

ಈ ಹೊತ್ತಿಗೆ ಸಾಗರಗಳ ಪಾರುಪತ್ಯೆ ಕಡಿಮೆ ಆಯಿತು. ಭೂಮಿಯ ಬಹುಪಾಲು ಮೇಲ್ಮೈ ಘನರಚನೆಗಳಿಂದ ಕೂಡಿತ್ತು. ಭೂಖಂಡಗಳ ಉಗಮವಾಗಿತ್ತು. ಇದೇ ವೇಳೆ ಭೂಮಿಯ ವಾತಾವರಣದಲ್ಲಿ ಆಮ್ಲಜನಕ ಕೂಡ ಕಾಣಿಸಿಕೊಂಡಿತು. ಭೂಮಿಯಲ್ಲಿ ನೀರು ಕಾಣಿಸಿಕೊಂಡ ಕೋಟ್ಯಾಂತರ ವರ್ಷಗಳಲ್ಲಿ ಏಕಕೋಶ ಜೀವಿಗಳು ಕಾಣಿಸಿಕೊಂಡವು. ಅವುಗಳಿಂದ ಆಮ್ಲಜನಕ ಉತ್ಪತ್ತಿಯಾಯಿತು ಎಂದು ವಿಜ್ಞಾನಿಗಳು ಹೇಳಿದರು.

ಅಂತಹ ಜೀವಿಗಳು ಇದ್ದವೆ ಎಂಬ ಸಾಧ್ಯತೆ ಹೊಳೆದದ್ದೆ ಸ್ಟ್ರೊಮೆಟೊಲೈಟ್‌ಗಳನ್ನು ನೋಡಿದ ಮೇಲೆ.

1 ಅಡಿ ಅಗಲ, 2 ಅಡಿ ಎತ್ತರದ ಕಲ್ಲಿನಂತೆ ಕಾಣುವ  ರಚನೆಗಳೇ ಸ್ಟ್ರೊಮೆಟೊಲೈಟ್‌ಗಳು. ಬ್ಯಾಕ್ಟೀರಿಯಲ್ ಆಲ್ಗೇಗಳಿಂದ ಆದ ಇವು ಭೂಮಿಗೆ ಉಸಿರುಕೊಟ್ಟ ಜೀವಿಗಳು.

ಫಿಲಿಫ್ ಫ್ಲೈಫರ್ಡ್ ಎಂಬ ವಿಜ್ಞಾನಿ ಇವುಗಳನ್ನು ಪತ್ತೆ ಮಾಡಿದ್ದು. ನಂತರ ವಿಜ್ಞಾನಿಗಳು ಸ್ಟ್ರೊಮೆಟೊಲೈಟ್‌ಗಳ ಪಳೆಯುಳಿಕೆಗಳನ್ನು ಗುರುತಿಸಿದರು. ಏಕಕೋಶ ಜೀವಿಗಳ ಹಲವು ಪದರಗಳಿಂದಾದ ಈ ಸ್ಟ್ರೊಮೆಟೊಲೈಟ್‍ಗಳು ಭೂಮಿಯ ಬಹುಭಾಗಗಳಲ್ಲಿ ಹರಡಿಕೊಂಡಿದ್ದು ಕಂಡು ಬಂತು.

ದ್ಯುತಿಸಂಶ್ಲೇಷಣೆಯಿಂದ ವಾತಾವರಣಕ್ಕೆ ಆಮ್ಲಜನಕ ಪೂರೈಸಿದ ಮೊದಲ ಜೀವಿಗಳಿವು. ಬರೋಬ್ಬರಿ  200 ಕೋಟಿ ವರ್ಷಗಳು ನಿರಂತರವಾಗಿ ಈ ಪ್ರಕ್ರಿಯೆ ನಡೆಯಿತೆಂದು ವಿಜ್ಞಾನಿಗಳು ಹೇಳುತ್ತಾರೆ.

ಪಶ್ಚಿಮ ಆಸ್ಟ್ರೇಲಿಯಾದ ಶಾರ್ಕ್ ಬೇ ಬೀಚಿನಲ್ಲಿ ಇವತ್ತಿಗೂ ಸ್ಟ್ರೊಮೆಟೊಲೈಟ್‌ಗಳು ನೋಡಲು ಸಿಗುತ್ತವೆ.

220  ಕೋಟಿ ವರ್ಷಗಳಿಂದ 170 ಕೋಟಿ ವರ್ಷಗಳ ವರೆಗೆ ಸಾಗರದಲ್ಲಿ ಕಬ್ಬಿಣಾಂಶ ಕಡಿಮೆಯಾಗಿ, ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್ ಮತ್ತು ಆಮ್ಲಜನಕ ತುಂಬಿತು.

200 ಕೋಟಿ ವರ್ಷಗಳ ಆಮ್ಲಜನಕೀಕರಣದಿಂದ ಭೂಮಿ ನೀಲಿ ಬಣ್ಣಕ್ಕೆ ತಿರುಗಿತು.

ನೀಲಿ ಆಕಾಶ, ನೀಲಿ ಸಾಗರ….

(ಮುಂದುವರೆಯುವುದು…)

ಭೂಮಿ ಹುಟ್ಟಿದ್ದು ಹೇಗೆ? ವಿಡಿಯೊ ಡಾಕ್ಯುಮೆಂಟರಿ:

ಮುಖವಿರದವನು : ಸಣ್ಣಕತೆ


-ಡಾ.ಎಸ್.ಬಿ. ಜೋಗುರ


 

ಸಂಜೀವಿನಿ ಆಸ್ಪತ್ರೆಯ ತೀವ್ರ ನಿಗಾ ಘಟಕದ ಬೆಡ್ ಮೇಲೆ ಆಕೆ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಳು. ಅವಳನ್ನು ಆಸ್ಪತ್ರೆಗೆ ಸೇರಿಸಿದವರು ಅಲ್ಲಿಯೆ ಕುಳಿತಿದ್ದರು. ಆಕೆ ಯಾರು? ಏನು? ಎಂದು ಕೇಳಿದವರಿಗೆಲ್ಲಾ ಅವರದು ಒಂದೇ ಉತ್ತರ. ಪೋಲಿಸರಿಗೂ ಅದೇ ಉತ್ತರ… ‘ಸಾಹೇಬರ, ನಮಗೂ ಗೊತ್ತಿಲ್ಲ. ಅವರು ದಾವಣಗೇರಿಯವರಂತ, ಅವರ ಡ್ರೈವರ್ ಅಕಿ ಯಜಮಾನರನ್ನ ಕರೀಲಿಕ್ಕಂತ ಹೋಗ್ಯಾನ. ಅಂವಾ ಬರೋಮಟ ಅಂತ ನಾವು ಕುಂತೀವಿ ಅಷ್ಟೇ.. ಅದ್ಯಾಕಹೀಂಗ.. ಏನು ಕಾರಣ.. ಅನ್ನೂದು  ನಮಗೂ ತಿಳದಿಲ್ಲ.’ ಅಂತಿದ್ದರು.

***

ಅದು ಪೇಢಾನಗರಿ ಧಾರವಾಡದ ಕುಳಗೇರಿ ಕೆರೆ. ನಡೆಯಲಾಗದ ಕೆರೆಯ ದಂಡೆಯಲಿ, ವೀರಭದ್ರದೇವರ ಗುಗ್ಗಳದ ಪುರವಂತರ ನಡಿಗೆಯ ಮುಂದಾಸುವ ಹಡದಿಯಂತೆ ಟೈಲ್ಸ್‌ಗಳು ಅಚ್ಚುಕಟ್ಟಾಗಿ ಹೊಂದಿಕೊಂಡು ರಸ್ತೆಯಾಗಿವೆ. ಮಕ್ಕಳು ಮುದುಕರಾದಿಯಾಗಿ ಈ ಟೈಲ್ಸ್ ರಸ್ತೆಯ ಮೇಲೆ ಗಮತ್ತಿನ ನಡಿಗೆಗಾಗಿಯೆ ಒಂದು ಸುತ್ತು ಇಲ್ಲಿ ಸುಳಿಯುವುದಿದೆ. ಮೊದಮೊದಲು ರಾತ್ರಿ ಎಂಟು ಗಂಟೆಯವರೆಗೂ ಉಲುವಾಗಿರುತ್ತಿದ್ದ ಈ ಕೆರೆಯ ದಂಡೆ ಈಗ ಏಳರ ಸುಮಾರಿಗಾಗಲೇ ಸ್ತಬ್ಧವಾಗಿರುತ್ತದೆ. ಹೆಂಗಸರ ಕತ್ತಿನ ಚೈನು ಕದಿಯುವ ಪುಂಡ-ಪೋಕರಿಗಳಿಗೆ ಆ ಅಪಶ್ರೇಯಸ್ಸು ಸಲ್ಲಬೇಕು. ಸಾರ್ವಜನಿಕರ ಸಂಜೆಯ ವಿಹಾರಕ್ಕೆ ಹಿತಕರವಾಗಿರಲೆಂದು ಟೈಲ್ಸ್ ಜೋಡಿಸಿದರೆ ಮಕ್ಕಳು, ಮಹಿಳೆಯರು, ಮುದುಕರ ಮಧ್ಯೆಯೇ ಭಂವ್.. ಎಂದು ಬೈಕ್ ಓಡಿಸಿಕೊಂಡು ಧಿಮಾಕು ಮೆರೆಯುವ ಟಪೋರಿ ಪೋರರ ಕಿರಿಕಿರಿಯಂತೂ ವಾಯು ವಿಹಾರಿಗಳಿಗೆ ತಪ್ಪಿಲ್ಲ. ಈ ಕುಳಗೇರಿ ಕೆರೆಯ ಸುತ್ತಲ ಟೈಲ್ಸ್ ರಸ್ತೆಗೆ ಸಂಜೆಯಾಗುತ್ತಿರುವಂತೆ ಏರುವ ರಂಗು ತರಾವರಿ ವಿದ್ಯಮಾನಗಳಿಗೆ ಸಾಕ್ಷಿಯಾಗುವುದಂತೂ ಹೌದು. ಅಮ್ಮನ ಕೈ ಹಿಡಿದು ಅದ್ರವಾಗಿ ಹೆಜ್ಜೆಯೂರುವ ಪುಟ್ಟ ಕಂದಮ್ಮಗಳು, ಹೆಜ್ಜೆ ತಪ್ಪಿದ ವಯಸ್ಸಾದ ಅಜ್ಜ-ಅಜ್ಜಿಯರು, ಮುತ್ತಿಕೊಂಡಿರುವ ರೋಗರುಜಿನುಗಳ ಹಿಡಿತದಲ್ಲಿಡಲು ವಾಯುವಿಹಾರದ ಮನ:ಪೃವೃತ್ತಿಯನ್ನು ಸಹಜಪ್ರವೃತ್ತಿಯಾಗಿಸಿಕೊಂಡವರು, ಮೈಗೆ ಮೈ ತಾಗಿಸಿ ಹರಿವ ನೀರೆಡೆಗೆ ಮುಖ ಮಾಡಿ ಕುಳಿತ ಪ್ರಣಯಿಗಳು, ಹೊಸದಾಗಿ ಮದುವೆಯಾದವರು, ದೈಹಿಕ ಕಸರತ್ತನ್ನು ಮಾಡುವವರು, ಫ್ಯಾಶನ್ ಪರೇಡನಲ್ಲಿ ಹೆಜ್ಜೆ ಹಾಕುವಂತೆ ಸಾಗುವ ಲಲನೆಯರು, ಅದೇ ತಾನೇ ಕೆಲಸ ಮುಗಿಸಿ ಬುತ್ತಿಯ ಚೀಲವನ್ನು ಕೈಯಲ್ಲಿ ಹಿಡಿದು ಮೊಬೈಲ್‌ನಲ್ಲಿ ಹಾಡು ಕೇಳುತ್ತಾ ಸಾಗುವವರು, ಅಲ್ಲಲ್ಲಿ ಬೈಕ್ ನಿಲ್ಲಿಸಿ ನೀರಿಗಿಳಿದು ಮೊಣಕಾಲವರೆಗೆ ಪ್ಯಾಂಟ್ ಏರಿಸಿ ಮೀನು ಹಿಡಿಯುವವರು, ಕೆರೆಯ ದಂಡೆಯಲ್ಲಿ ಮೇಯುತ್ತಿದ್ದ ಎಮ್ಮೆಗಳನ್ನು ತನ್ನದೇ ಆದ ಧ್ವನಿವಿಶೇಷದೊಂದಿಗೆ ಕೂಗಿ ಕರೆಯುವವರು, ಸೂಟಿಗೆ ಬಂದ ಮೊಮ್ಮಕ್ಕಳನ್ನು ಕೆರೆಯ ದಡದಲ್ಲಿ ನಿಲ್ಲಿಸಿ ಕಪ್ಪು ಬಾತುಗೋಳಿಗಳನ್ನು ತೋರಿಸುವ ಅಜ್ಜಂದಿರು, ಲಲನೆಯರನ್ನು ನೋಡಲು ಅಲ್ಲಲ್ಲಿ ಕಣ್ಣು ಹಾಸಿ ಕುಳಿತ ಪಡ್ದೆ ಹುಡುಗರು. ಇಂತಪ್ಪ ಹತ್ತಾರು ಮಜಲುಗಳೊಂದಿಗೆ ಕೈ ಮಿಲಾಯಿಸಿದಂತಿರುವ ಈ ಕುಳಗೇರಿ ಕೆರೆಯ ದಂಡೆ ಸಾಯಂಕಾಲ ಒಂದು ಬಗೆಯ ಸಿರಿ ಸೊಬಗನ್ನೇ ತಳೆದಂತಿರುತ್ತದೆ.

ಒಂದು ಕಾಲದಲ್ಲಿ ಈ ಕೆರೆಯ ದಂಡೆಯ ಮೇಲೆ ಹೆಜ್ಜೆಯೂರುವುದೇ ದುಸ್ತರ. ಅಭಿವೃದ್ಧಿಯ ಸೋಂಕಿಗೆ ಕೆರೆಯ ದಂಡೆ ಒಳಗಾದದ್ದೇ ತಡ ಸುತ್ತಲೂ ಸುತ್ತಿ ಸುಳಿಯುವಂತೆ ಟೈಲ್ಸ್ ರಸ್ತೆಯೊಂದು ತಲೆ ಎತ್ತಿತು. ಅಲ್ಲಿಂದ ಶುರುವಾದ ಜನರ ವಾಯು ವಿಹಾರ ದಿನದಿಂದ ದಿನಕ್ಕೆ ವಿಸ್ತರಿಸುತ್ತಲೇ ಇದೆ. ಮೆಲ್ಲಗೆ ಬರೀಗಾಲಿನಿಂದ ನಡೆಯುವವರಿಂದ ಹಿಡಿದು, ಸ್ಪೋಟ್ಸ್ ಶೂ ಗಳನ್ನು ಧರಿಸಿ ದಾಪುಗಾಲು ಹಾಕುವವರವರೆಗೂ ಇಲ್ಲಿನ ನಡಿಗೆ ಇವೆ. ಇಲ್ಲಿ ವಾಕಿಂಗ್ ಮಾಡುವವರು ಹಾಡು ಹೇಳುತ್ತಲೇ ಅಲೆಯುವವರಂತೆ ತೋರುತ್ತಾರೆ. ಅವರ ಶರೀರದ ಯಾವುದೋ ಒಂದು ಮೂಲೆಯಿಂದ ತರತರದ ಹಾಡುಗಳು ಗುನುಗುತ್ತಿರುತ್ತವೆ. ಅದರಲ್ಲಿಯ ಸಂಗೀತದ ಸ್ವಾದಕ್ಕೆ ಹದವಾಗಿ ಹೆಜ್ಜೆ ಹಾಕುವವರೂ ಇದ್ದಾರೆ. ಅಂತೂ ಒಂದು ಕಾಲದಲ್ಲಿ ಸುತ್ತಲೂ ಹುದುಲು ಹಾಸಿಕೊಂಡಿದ್ದ ಈ ಕುಳಗೇರಿ ಕೆರೆ ಈಗ ಟೈಲ್ಸ್ ರಸ್ತೆಯ ಸಹವಾಸದಲ್ಲಿ ಮೊಬೈಲ್ ಮ್ಯುಜಿಕ್ ಕೇಳುವ ಗಮತ್ತನ್ನು ಅನುಭವಿಸುತ್ತಿದೆ. ಕೆರೆಯ ಮುಖವನ್ನೊಮ್ಮೆ ಆಪ್ತವಾಗಿ ದಿಟ್ಟಿಸಿದರೆ ಅದು ಮಾತ್ರ ಇಲ್ಲಿ ವಾಯು ವಿಹಾರ ಮಾಡುವವರ ಸಹವಾಸದಿಂದ ಸುಖವಾಗಿಲ್ಲ ಎನಿಸುತ್ತದೆ. ದಡದಲ್ಲಿ ಬೀಸಾಡುವ ಪ್ಲಾಸ್ಟಿಕ್ ಪೊಟ್ಟಣ, ಗುಟಕಾ ಚೀಟಿ, ನೀರಿನ ಬಾಟಲ್, ಕಸ ಕಡ್ಡಿ, ದೇವರ ಫೋಟೊ ಮೇಲಿನ ಕೊಳೆತ ಹೂವು, ಕೆಂಪು ವಸ್ತ್ರದಲ್ಲಿ ಬಿಗಿದ ಮನೆಯ ಮೂಲೆಯ ತೆಂಗು, ಅಲ್ಲಲ್ಲಿ ಕುಳಿತು ತಿಂದು ಬೀಸಾಡಿದ ಕಾಗದದ ಪೊಟ್ಟಣಗಳು ಹೊತ್ತುಗೊತ್ತಿಲ್ಲದೇ ಕೆರೆಗಿಳಿದು ಮೀನು ಹಿಡಿಯುತ್ತಾ ನೀರು ಕಲಕುಗೊಳಿಸುವ ರೀತಿ ಇಂಥಾ ಹತ್ತಾರು ಮನುಷ್ಯನ ಅಪವರ್ತನೆಗಳಿಂದ ಕುಳಗೇರಿಯ ಗಂಗಾಮಾತೆ ಸಿಕ್ಕಾಪಟ್ಟೆ ಸಿಟ್ಟಾಗಿರುವುದೂ ಇದೆ. ಆದರೂ ತನ್ನ ಬಳಕೆಯ ಬಗ್ಗೆ ಖುಷಿ ಇದೆ. ನೀನ್ಯಾರಿಗಾದೆಯೋ ಎಲೇ ಮಾನವಾ.? ಎನ್ನುವ ಪ್ರಶ್ನೆಯೂ ಅಲ್ಲಿದೆ.

ಆ ದಿನದ ಸಾಯಂಕಾಲಕ್ಕೆ ಎಂದಿನ ರಂಗಿರಲಿಲ್ಲ. ಮೇ ತಿಂಗಳ ಕೊನೆಯ ದಿನವಾದ್ದರಿಂದ ಮುಗಿಲ ಮಾರಿಯಲ್ಲಿ ಮಬ್ಬು ಕವಿದಿತ್ತು. ಹೀಗಾಗಿ ಕೆರೆಯ ಅಂದ ಕಳೆಗಟ್ಟಿದಂಗಿತ್ತು. ದಿನಾಲು ಸ್ವರ್ಣರೂಪಿಯಾಗಿ ಕಂಗೊಳಿಸುವ ಸೂರ್ಯನೂ ಅಂದು ತುಸು ಡಲ್ ಹೊಡೆದಂಗಿದ್ದ. ಅವನ ಮುಖದಲ್ಲಿಯೂ ಮಬ್ಬು ಮುಸುಕಿತ್ತು. ಸನ್‌ಸೆಟ್ ನೋಡಬೇಕೆನ್ನುವವರ ಪಾಲಿಗೆ ಆ ದಿನ ನಿರಾಶೆಯನ್ನೇ ನಿಗದಿಮಾಡಿದಂತಿತ್ತು. ಸೂರ್ಯ ಯಾವ ಕಳೆಯೂ ಇಲ್ಲದೇ ಕುಳಗೇರಿಯ ಎರಡು ಮೊಬೈಲ್ ಟಾವರ್‌ಗಳ ಮಧ್ಯದಲ್ಲಿ ಮುಖ ಹುದುಗಿಸಿದ್ದ. ಅಲ್ಲಿಂದಲೇ ಕೆಳಗಿಳಿಯುತ್ತಿದ್ದ. ಆತನ ಮುಖ ಅಂದು ನೋಡುವಂತಿರಲಿಲ್ಲ. ಸಾಯಂಕಾಲದ ಆರು ಗಂಟೆಯ ಹೊತ್ತಿಗಾಗಲೇ ಆತ ಅಸ್ತಂಗತನಾಗುವಂತಿದ್ದ. ಎರಡು ಮೂರು ಕಂಪನಿಗಳ ಮೊಬೈಲ್ ಟವರ್‌ಗಳ ನಡುವೆ ಮುಖ ಹುದುಗಿಸಿ ಆತ ಕೆಳಗಿಳಿಯುವುದನ್ನು ನೋಡುವದೇ ಒಂದು ವಿಲಕ್ಷಣವಾಗಿತ್ತು. ಪಕ್ಕಾ ಜೋಲು ಮುಖದವನಾಗಿ ಕಾಣುವ ಸೂರ್ಯ ಆ ಸಾಯಂಕಾಲದ ಯಾವ ಜೀವಜಂತುಗಳಿಗೂ ಉಮೇದನ್ನು ನೀಡಿರಲಿಲ್ಲ. ಅಲ್ಲೊಬ್ಬ ಗೌಳಿ ದಡದಿಂದ ಸ್ವಲ್ಪ ಒಳಗೆ ತನ್ನ ಎಮ್ಮೆಗಳನ್ನು ತೊಳೆಯುತ್ತಿದ್ದ. ಎಮ್ಮೆಗಳ ಹಿಂಡು ಮೈಯಲ್ಲಾ ನೀರಲ್ಲಿ ಮುಳುಗಿಸಿ, ಬರೀ ಮುಖಮಾತ್ರ ಮೇಲೆ ಮಾಡಿ ಸಂಪತ್ತಿಗೆ ಸವಾಲ್ ಚಿತ್ರದ ’ಯಾರೇ ಕೂಗಾಡಲೀ..’ ಎನ್ನುವ ಹಾಡು ಹೇಳುತ್ತಿರುವಂತಿದ್ದವು. ಆ ಗೌಳಿ ಒಂದೊಂದೇ ಎಮ್ಮೆಯನ್ನು ಪಕ್ಕಕ್ಕೆ ಕರೆದು ಹದವಾಗಿ ಉಜ್ಜುತ್ತಿದ್ದ. ಹಾಗೆ ತಿಕ್ಕಿಸಿಕೊಳ್ಳುವ ಎಮ್ಮೆ ತನ್ನ ಬಾಲವನ್ನು ಸ್ವಲ್ಪ ಮೇಲೆತ್ತಿ ಸುಖಪ್ರದರ್ಶನ ಮಾಡುತ್ತಿತ್ತು. ಆತ ನೀರು ಸಿಂಪಡಿಸಿ ಉಜ್ಜುತ್ತಲೇ ಇದ್ದ. ಮಿಕ್ಕ ಎಮ್ಮೆಗಳ ಹಿಂಡು ಆ ಸುಖಕ್ಕಾಗಿ ಹಾತೊರೆಯುತ್ತಿದ್ದವು. ಅಲ್ಲೊಂದು ಸಣ್ಣ ಸೇತುವೆ ಅದರ ಅಡಿಯಲ್ಲಿ ಒಬ್ಬ ಯುವಕ ಅದರ ಗೋಡೆಯನ್ನು ಅಂದಗೇಡಿಯಾಗಿಸುವತ್ತ ತೊಡಗಿದ್ದ. ಅವನದೇ ಇನ್ನೊಬ್ಬ ಕೈಮುರುಕ ಸಂಗಾತಿ ಅಲ್ಲೇ ಹತ್ತಿರದಲ್ಲಿ ಮೀನಿಗೆ ಗಾಳ ಹಾಕಿ ನಿಂತಿದ್ದ. ಅವನ ಒಂದು ಕೈ ಪ್ಲಾಸ್ಟರ್ ಸಹವಾಸದಲ್ಲಿದ್ದರೂ ಆತ ಫಿಶಿಂಗ್ ಮಾಡುತ್ತಿದ್ದ. ಅವನಿಗೆ ಸ್ವಲ್ಪ ದೂರದಲ್ಲಿ.. ಅವನ ಕಣ್ಣಳತೆಯಲ್ಲಿ ಸಣ್ಣ ಸಣ್ಣ ಮೀನುಗಳು ಮೇಲೆ ನೆಗೆದು ಅವನನ್ನು ವ್ಯಂಗ್ಯ ಮಾಡುತ್ತಿದ್ದವು. ಅವನೋ ತನ್ನ ಒಂದೇ ಕೈಯಿಂದ ಮೀನು ಹಿಡಿಯುವ ಕಸರತ್ತನ್ನು ನಡೆಸಿಯೆ ಇದ್ದ. ಗೋಡೆ ಕೆಡಿಸಿದ ಯುವಕ ಈಗ ತನ್ನ ಕೈಮುರುಕ ಗೆಳೆಯನ ಫಿಶಿಂಗ್ ಸ್ಟೈಲನ್ನು ಮೊಬೈಲ್ ಕ್ಯಾಮಾರದಲ್ಲಿ ಕ್ಲಿಕ್ ಮಾಡುತ್ತಿದ್ದ.

ಆ ಸೇತುವೆಯ ಅಂಚಲ್ಲಿ ಒಬ್ಬಾತ ಹೆಗಲಿಗೊಂದು ಹರಕು ಬ್ಯಾಗನ್ನು ನೇತಾಡಿಕೊಂಡು ಬಂದು ಮೆಲ್ಲಗೆ ಕೆರೆಯ ದಂಡೆಯ ಮೇಲಿನ ಕಲ್ಲಿನ ಮೇಲೆ ಕುಳಿತ. ಆತ ಧರಿಸಿದ ಬಿಳಿ ಅಂಗಿ ಕಪ್ಪಾಗಿ ಕಮಟುಗಟ್ಟಿತ್ತು. ಪಾದಗಳು ಹುಟ್ಟು ಬೆತ್ತಲೆ ಸ್ಥಿತಿಯಲ್ಲಿದ್ದವು. ತಲೆಗೂದಲು ಕೆದರಿ ವಿಕಾರವಾಗಿತ್ತು. ಹಣೆಯ ಮೇಲೆ ಉದ್ದನೆಯ ಒಂದು ವಿಕಾರವಾದ ಕಚ್ಚಿತ್ತು. ಆತನನ್ನು ನೋಡಿದ ಯಾರೇ ಆಗಲಿ ಅವನೊಬ್ಬ ರಿಕಾಮಿ.. ಸೋಂಬೇರಿ ಎಂದು ಮೆಲ್ನೋಟದಲ್ಲಿಯೆ ಹೇಳಬಹುದಿತ್ತು. ಆತ ಅತ್ತಿತ್ತ ನೋಡಿ ತನ್ನ ಆಸು ಪಾಸು ಯಾರೂ ಇಲ್ಲದ್ದನ್ನು ಖಾತ್ರಿ ಪಡಿಸಿಕೊಂಡು, ಮೆಲ್ಲನೆ ತನ್ನ ಚೀಲದೊಳಗಿಂದ ಏನೋ ಒಂದನ್ನು ಹೊರತೆಗೆದ. ಅದು ಕೆಂಪು ವಸ್ತ್ರದಲ್ಲಿರುವ ತೆಂಗಿನಕಾಯಿ. ಅದಿನ್ನೂ ಹಸಿಹಸಿಯಾಗಿತ್ತು. ಕೆರೆಯಲ್ಲಿ ಪೂಜೆ ಮಾಡಿ ಎಸೆದದ್ದು ತೇಲುತ್ತಾ ದಡಕ್ಕೆ ಬಂದು ಈ ಸೋಂಬೇರಿಯ ಕೈ ಸೇರಿತ್ತು. ಆ ಮೇಲಿನ ಕೆಂಪು ವಸ್ತ್ರವನ್ನು ಬಲತ್ಕಾರ ಮಾಡುವವನಂತೆ ಆತ ಟರಟರನೇ ಹರಿದೊಗೆದ. ಬಾಯಿಂದ ಬರಬರನೇ ಮೇಲಿನ ಜಿಬ್ಬರವನ್ನು ಸುಲಿದ. ಅದನ್ನು ಕಿವಿಯ ಬಳಿ ಹಿಡಿದು ಅಲುಗಾಡಿಸಿದ. ಇವನ ಕಿವಿಯಲ್ಲಿ ಅದೇನೋ ಹೇಳುತ್ತಿದೆ ಎನ್ನುವವನಂತೆ ಧ್ಯಾನಸ್ಥನಾಗಿ ಆಲಿಸಿದ. ತಾನು ಕುಳಿತ ಕಲ್ಲಿಗೆ ಆ ಕಾಯಿಯಿಂದ ಟಪಾರ್ ಎಂದು ಒಂದೇಟು ಕೊಟ್ಟ. ಒಳಗಿನ ಕೊಬ್ಬರಿಯ ಮುಸುಕು ಗುಡಕ್.. ಅಂತ ಉರುಳಿ ಬಿತ್ತು. ಅದನ್ನೆತ್ತಿ ತನ್ನ ಚೀಲಕ್ಕೆ ಹಾಕಿದ. ಮತ್ತೆ ಅಂತದೇ ಇನ್ನೊಂದು ತೆಂಗಿನ ಕಾಯಿಯನ್ನು ಹೊರತೆಗೆದ. ಅದರ ಸಿಪ್ಪೆ ತುಂಬಾ ಗಟ್ಟಿಯಾಗಿತ್ತು. ಹಲ್ಲಿನಿಂದ ಸುಲಿಯುವಂತಿರಲಿಲ್ಲ. ತಾನು ಕುಳಿತ ಕಲ್ಲಿನ ಮೇಲೆ ಅದನ್ನಿಟ್ಟು ಇನ್ನೊಂದು ಕಲ್ಲಿನಿಂದ ಬಲವಾಗಿ ಅದರ ಮೇಲ್ಬಾಗವನ್ನು ಜಜ್ಜತೊಡಗಿದ. ಇದು ಸುಮಾರು ಹೊತ್ತು ನಡೆಯಿತು ಆದರೂ ಅದು ಒಡೆಯಲಿಲ್ಲ. ಆತ ಮುಖದ ಬೆವರನ್ನು ಒಂದೇ ಸವನೆ ಒರೆಸುತ್ತಲೇ ಅ ಕಾಯಿಯ ನೆತ್ತಿಗೆ ಚಚ್ಚುತ್ತಿದ್ದ. ಎಷ್ಟು ಚಚ್ಚಿದರೂ ಅದು ಬಿಚ್ಚಲಿಲ್ಲ ಆತನಿಗೆ ಸಿಟ್ಟು ಬಂದಿತ್ತು ಅದನ್ನು ಜೋರಾಗಿ ಕೆರೆಯ ಒಳಗೆ ಜ್ಯಾವೆಲಿನ್ ಥ್ರೋ ಎಸೆಯುವಂತೆ ಎಸೆದು ಬಿಟ್ಟ. ಚೀಲವನ್ನು ತನ್ನ ಹೆಗಲಿಗೇರಿಸಿ ಅಲ್ಲಿಂದ ಮೆಲ್ಲಗೆ ಎದ್ದು ನಡೆದ. ಅದಾಗಲೇ ಕೆರೆಯ ಸುತ್ತಲೂ ಮಬ್ಬು ಕವಿದಿತ್ತು. ವಾಯು ವಿಹಾರಕ್ಕೆಂದು ಬಂದವರು ಮರಳಿ ಮನೆಗೆ ನಡೆದಿದ್ದರು. ಹಕ್ಕಿಗಳು ತಮ್ಮ ತಮ್ಮ ಗೂಡಿನ ದಿಕ್ಕಿಗೆ ಮುಖ ಮಾಡಿದ್ದವು. ಆ ವಿಶಾಲವಾದ ಬಯುಲಿನಲ್ಲಿ ಕೆರೆ ನಿಧಾನವಾಗಿ ಕಳೆದುಹೋಗುತ್ತಿತ್ತು. ಕತ್ತಲಾವರಿಸುವ ಮುನ್ನ ಕಾಲ್ಕೀಳಬೇಕು ಎಂದು ಲಗುಬಗೆಯಿಂದ ವಿಹಾರಿಗಳು ಹೆಜ್ಜೆ ಹಾಕುತ್ತಿದ್ದರು. ಅದಾಗಲೇ ತುಸು ಕತ್ತಲಾದಂಗಿತ್ತು. ಕೆರೆಯ ದಂಡೆಯ ಸುತ್ತಲೂ ಮೌನ ಆವರಿಸಿಕೊಳ್ಳುವ ಹೊತ್ತಲ್ಲಿ ದಡಲ್..! ಅನ್ನುವ ಜೋರಾದ ಸದ್ದು… ಸೇತುವೆ ಮೇಲಿಂದ ಯಾರೋ ನೀರಲ್ಲಿ ಬಿದ್ದಂಗಿತ್ತು. ಕೆರೆಯ ದಂಡೆಯ ಪಾವಟಣಿಗೆಯ ಮೇಲೆ ಕುಳಿತ ಒಂದಿಬ್ಬರು ಸೇತುವೆ ಬದಿ ಧಾವಿಸಿ ಓಡಿ ಬಂದಂಗಿತ್ತು…ಸುತ್ತಲೂ ಕತ್ತಲಾವರಿಸಿತ್ತು.

***

ಅದು ಧಾರವಾಡದ ಹೃದಯಭಾಗದಲ್ಲಿರುವ ವಿಚಾರ ರಶ್ಮಿ ಸಭಾಂಗಣ. ಆ ದಿನ ಅದು ಕಿಕ್ಕಿರಿದು ತುಂಬಿತ್ತು. ಕೆಲವರು ಕುಳಿತುಕೊಳ್ಳಲು ಆಸನಕ್ಕಾಗಿ ಪರದಾಡುತ್ತಿದ್ದರು. ದಾವಣಗೇರಿಯ ಪ್ರಸಿದ್ಧ ಕೌಟುಂಬಿಕ ಸಲಹೆಗಾರ ಡಾ.ವಿನಯಕುಮಾರ ಆ ದಿನ ಆಗಮಿಸುವವರಿದ್ದರು. ಅವರು ಇಡೀ ರಾಜ್ಯದಾದ್ಯಂತ ಸುಪರಿಚಿತರು. ಇಲ್ಲಿಯವರೆಗೂ ಒಡೆದು ಹೋಗಲಿರುವ ಸುಮಾರು ಐದುನೂರು ಕುಟುಂಬಗಳನ್ನು ಅವರು ಮತ್ತೆ ಬೆಸೆದಿದ್ದಾರೆ. ಸಂಬಂಧ ಕಡಿದುಕೊಳ್ಳಬೇಕೆನ್ನುವವರು ಕೂಡಿ ಬದುಕುವಂತೆ ಮಾಡಿದವರು. ಅವರ ಮಾತು, ಅವರು ಕೊಡುವ ದೃಷ್ಠಾಂತ, ವಿಚಾರಗಳ ಪ್ರಭಾವಕ್ಕೆ ಒಳಗಾಗದವರಿಲ್ಲ. ಈಗೀಗ ಎಲ್ಲ ಕಡೆಗೂ ವಿಚ್ಚೇದನದ ಹಾವಳಿ ವಿಪರೀತ. ಸಣ್ಣ ಸಣ್ಣ ಕಾರಣಗಳಿಗಾಗಿ ಚಿಕ್ಕ ಮಕ್ಕಳು ಟೂ.. ಬಿಡುವಷ್ಟೇ ಹಗುರಾಗಿ ಪರಿಣಮಿಸಿರುವ ಈ ವಿಚ್ಚೇದನಕ್ಕೆ ಡಾ.ವಿನಯಕುಮಾರರ ಮಾತುಗಳು ರಾಮಬಾಣವಿದ್ದಂತೆ. ಹಾಗೆಂದು ಅವರನ್ನು ಕರೆಯಿಸಿದ ಸಂಘಟಕರು ಧಾರವಾಡ ಶಹರದ ತುಂಬೆಲ್ಲಾ ಬ್ಯಾನರ್ ಬಿಗಿದಿರುವುದಿತ್ತು. ಅತ್ಯಂತ ಸಂದಿಗ್ದವಾದ ಕೌಟುಂಬಿಕ ಸಮಸ್ಯೆಗಳನ್ನೆಲ್ಲಾ ಬೆಣ್ಣೆಯಲ್ಲಿಯ ಕೂದಲು ತೆಗೆದಂತೆ ಅವರು ಸರಿದೂಗಿಸಿದ್ದಾರೆ ಎನ್ನುವುದು ಅವರ ಸಹಾಯಕ ರಮೇಶನ ಮಾತು. ಕೇವಲ ದಾವಣಗೇರಿ ಮಾತ್ರವಲ್ಲ, ರಾಜ್ಯದ ಅನೇಕ ಕಡೆಗಳಿಂದ ಅವರ ಬಳಿ ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಕೇಳಿ ಬರುವವರಿದ್ದಾರೆ. ಎಂದೆಲ್ಲಾ ಹೇಳುವುದನ್ನು ಕೇಳಿಯೆ ಅನೇಕರು ಅವರ ಮಾತುಗಳನ್ನು ನಿಂತಾದರೂ ಕೇಳಬೇಕು ಎಂದು ಕಾದಿದ್ದರು. ಸಂಘಟಕರು ಹೀಗೆ ಸೇರಿದ ಜನಜಂಗುಳಿಯನ್ನು ಕಂಡು ಟಿಕೆಟ್ ಇಡಬಹುದಾಗಿತ್ತು ಎಂದು ಪರಿತಪಿಸುತ್ತಿದ್ದರು. ಈ ಬಾರಿ ಹೀಗೇ ಇರಲಿ ಇನ್ನೊಮ್ಮೆ ಕರೆದಾಗ ಟಿಕೆಟ್ ಇಟ್ಟರಾಯ್ತು ಅಂತ ಸಂಘಟಕರಲ್ಲೇ ಒಬ್ಬಾತ ಸಲಹೆ ಕೊಡುತ್ತಿದ್ದ.

ಸಾಯಂಕಾಲ ಆರು ಘಂಟೆಯ ಸಮಯ. ಸರಿಯಾಗಿ ನಿಗದಿಗೊಳಿಸಿದ ಸಮಯಕ್ಕೆ ವಿನಯಕುಮಾರ ಹಾಜರ್. ಬಿಳಿ ಶರ್ಟ್ ಕಪ್ಪು ಪ್ಯಾಂಟ್, ನೀಲಿ ಬಣ್ಣದ ಟೈ ಧರಿಸಿದ್ದ ವಿನಯಕುಮಾರ ಒಂದು ಲಕ್ಜುರಿ ಕಾರಿಂದ ಮೆಲ್ಲಗೆ ಕೆಳಗಿಳಿದ, ತುಂಬಾ ಸ್ಪುರದ್ರೂಪಿ. ಮೇಲ್ನೋಟಕ್ಕೆ ತಕ್ಷಣವೇ ಸೆಳೆಯಬಹುದಾದ ವ್ಯಕ್ತಿತ್ವ. ಕಾರಿನ ಒಳಗೆ ಅವರ ಧರ್ಮಪತ್ನಿ ಇದ್ದಂಗಿತ್ತು. ಅವರು ಕಾರಿನಿಂದ ಕೆಳಗಿಳಿಯಲಿಲ್ಲ. ಡ್ರೈವರಿಗೆ ವಿನಯಕುಮಾರ ಏನೋ ಹೇಳಿದಂತಿತ್ತು. ಆತ ತಲೆ ಅಲ್ಲಾಡಿಸಿದ. ಕಾರು ಹೊರಟೇ ಬಿಟ್ಟಿತು. ವಿನಯಕುಮಾರ ವಿಚಾರ ರಶ್ಮಿ ಸಭಾಂಗಣದ ಸುತ್ತಲೂ ಒಮ್ಮೆ ಕಣ್ಣು ಹಾಯಿಸಿದ. ಅಪಾರ ಸಂಖ್ಯೆಯ ವಾಹನಗಳು ನಿಂತಿರುವುದನ್ನು ನೋಡಿ ಒಳಗಿರಬಹುದಾದ ಜನಸಮೂಹವನ್ನು ಅಂದಾಜಿಸಿದ. ಆತನ ನಡಿಗೆಯಲ್ಲಿ ಒಂದು ಬಗೆಯ ಗತ್ತಿತ್ತು. ಸಭಾಂಗಣದ ಒಳಗೆ ಬರುತ್ತಿರುವಂತೆ ಜನ ಜೋರಾಗಿ ಚಪ್ಪಾಳೆ ತಟ್ಟತೊಡಗಿದರು ವಿನಯಕುಮಾರ ಒಬ್ಬ ಚಿತ್ರನಟನ ಹಾಗೆ ಕೈ ಬೀಸುತ್ತಾ ನೇರವಾಗಿ ವೇದಿಕೆಗೆ ಬಂದರು. ಹಾಗೆ ಬಂದದ್ದೇ ಅವರಿಗೆ ಮೀಸಲಾಗಿಟ್ಟ ಆಸನದಲ್ಲಿ ಕುಳಿತರು. ಸ್ವಾಗತ, ಪುಷ್ಪಾರ್ಪಣೆ, ಪರಿಚಯದ ನಂತರ ಅವರ ಮಾತು. ಅವರನ್ನು ಪರಿಚಯಿಸುವಾತನೇ ಸುಮಾರು ಅರ್ಧ ಘಂಟೆ ಸಮಯವನ್ನು ತೆಗೆದುಕೊಂಡ. ಡಾ ವಿನಯಕುಮಾರ ಮತ್ತೆ ಮತ್ತೆ ತಮ್ಮ ಕೈಗಡಿಯಾರವನ್ನು ನೋಡಿಕೊಳ್ಳುತ್ತಿದ್ದರು. ಅಂತೂ ಪರಿಚಯ ಮಾಡುವಾತ ತನ್ನ ಮಾತನ್ನು ಮುಗಿಸಿದ. ಪರಿಚಯ ಮಾಡುವಾತ ಎದುರಲ್ಲಿ ಕಿಕ್ಕಿರಿದು ನೆರೆದ ಜನರನ್ನು ಕಂಡು ಅತ್ಯಂತ ಭಾವನಾತ್ಮಕವಾಗಿ ಸಾವಿರಾರು ಒಡೆಯಲಿದ್ದ ಕುಟುಂಬಗಳನ್ನು ಸರಿಪಡಿಸಿದ್ದಾರೆ ಎಂದದ್ದನ್ನು ವೇದಿಕೆಗೆ ಬಂದದ್ದೇ ಡಾ ವಿನಯಕುಮಾರ ’ನನ್ನ ಮೇಲಿನ ಅಭಿಮಾನದಿಂದ ಸಾವಿರಾರು ಕುಟುಂಬಗಳನ್ನು ಬೆಸೆದವರು ಎಂದು ಹೇಳಿದರು. ಆದರೆ ಆ ಸಂಖ್ಯೆಯ ಕಡೆಗೆ ಇನ್ನೂ ನಾನು ನಡೆಯಬೇಕಿದೆ. ಇಲ್ಲಿಯವರೆಗೆ ಐದನೂರಾ ಎಪ್ಪತ್ತು ಕುಟುಂಬಗಳನ್ನು ಕೂಡಿಸಿರುವೆ. ಮೊನ್ನೆ ರಾಣೆಬೆನ್ನೂರಿನ ಒಂದು ಜೋಡಿ ವಿಚ್ಚೇದನಕ್ಕಾಗಿ ತುದಿಗಾಲಲ್ಲಿ ನಿಂತಿದ್ದರು. ಅವರೀಗ ತುಂಬಾ ಅನ್ಯೊನ್ಯವಾಗಿದ್ದಾರೆ. ಅದೇ ನನ್ನ ಇತ್ತೀಚಿನ ಪುನರ್ಬೆಸುಗೆ’ ಅಂದದ್ದೇ ಜನ ಜೊರಾಗಿ ಚಪ್ಪಾಳೆ ತಟ್ಟಿದರು. ಅಷ್ಟಕ್ಕೂ ಈ ಬಗೆಯ ಜನಸಮೂಹ ವಿನಯಕುಮಾರಗೆ ಇದೇ ಮೊದಲಂತೂ ಅಲ್ಲ. ದೊಡ್ಡ ದೊಡ್ಡ ಸ್ಟೇಡಿಯಂಗಳಲ್ಲಿ ಮಾತನಾಡಿದ ಅವರಿಗೆ ಕೇವಲ ಐದಾರು ನೂರು ಇರಬಹುದಾದ ಆ ಸಭಾಂಗಣ ಅವರನ್ನು ಬೆರಗುಗೊಳಿಸಿರಲಿಲ್ಲ. ಅಲ್ಲೇ ಟೇಬಲ್ ಮೆಲಿದ್ದ ನೀರಿನ ಬಾಟಲ್ ಕೈಗೆತ್ತಿಕೊಂಡು ನೀರು ಕುಡಿದು, ಕೈಯಲ್ಲಿಯ ವಾಚನ್ನು ನೋಡಿಕೊಂಡು ಮಾತಿಗೆ ಶುರು ಮಾಡಿದರು. ’ಸ್ನೇಹಿತರೇ ನಮ್ಮ ಸುತ್ತ ಮುತ್ತಲೂ ಮನೆಮುರುಕರೇ ತುಂಬಿಕೊಂಡಿದ್ದಾರೆ. ಜೊತೆಗೆ ಐಹಿಕ ಅಬ್ಯುದಯವೇ ನಿಜವಾದ ಬದುಕು ಎನ್ನುವ ಭ್ರಮೆಗಳು ನಮ್ಮನ್ನು ಸುತ್ತಿಕೊಂಡಿವೆ. ನೋಡಿದ್ದೆಲ್ಲಾ ಬೇಕು ಎನ್ನುವ ವಾಂಛಲ್ಯಗಳು ನಮ್ಮ ಮನ:ಸ್ಥಿತಿಯನ್ನು ಭೃಷ್ಟವಾಗಿಸುತ್ತಿವೆ. ನಮ್ಮ ತಂದೆ-ತಾಯಿಗಳು ಬದುಕಿದ ಕೌಟುಂಬಿಕ ಜೀವನ ನಮಗೆ ಸಾಧ್ಯವಾಗುತ್ತಿಲ್ಲ. ಗಂಡ-ಹೆಂಡತಿ ಎನ್ನುವ ಸಂಬಂಧಗಳು ಕತ್ತಿಯಂಚಿನ ನಡಿಗೆಯಾಗುತ್ತಿವೆ. ದೀರ್ಘಕಾಲದ ದಾಂಪತ್ಯದ ಪರಂಪರೆ ಸೊರಗುತ್ತಿದೆ. ಕೆಲ ಧಾರವಾಹಿಗಳಂತೂ ವಿವಾಹಪೂರ್ವ ಮತ್ತು ನಂತರದ ಸಂಬಂಧಗಳನ್ನು ಸಹ್ಯ ಎನ್ನುವಂತೆ ತೋರಿಸುತ್ತಾ ಕೌಟುಂಬಿಕ ಸಂಬಂಧಗಳಲ್ಲಿ ಬಿರುಕುಗಳನ್ನು ಮೂಡಿಸುತ್ತಿವೆ. ತೀರಾ ಸಣ್ಣ ಸಣ್ಣ ಕಾರಣಗಳಿಗಾಗಿ ದಂಪತಿಗಳು ವಿರಸಕ್ಕಿಳಿಯುತ್ತಾರೆ. ಇದು ಮುಂಚಿನಂತೆ ಉಂಡು ಮಲಗುವತನಕ ಮಾತ್ರ ಉಳಿಯದೇ ಉಂಡು ಮಲಗಿದ ಮೇಲೂ ಮುಂದುವರೆಯುತ್ತಿದೆ. ಅಷ್ಟಕ್ಕೂ ಕೌಟುಂಬಿಕ ಭದ್ರತೆಗೆ ಅತಿ ಮುಖ್ಯವಾದ ಸೂತ್ರ ಪರಸ್ಪರ ತಿಳುವಳಿಕೆ ಮತ್ತು ಒಬ್ಬರನ್ನೊಬ್ಬರು ಗೌರವಿಸುವ ಗುಣ. ನನ್ನ ಬಳಿಗೆ ಬರುವ ಅನೇಕರು ತಮ್ಮ ಗಂಡ, ಹೆಂಡತಿ ತಮಗೆ ತುಂಬಾ ಬೋರ್ ಆಗಿದ್ದಾರೆ ಎನ್ನುವ ಮಾತನ್ನು ಹೇಳುತ್ತಾರೆ ನಾನಾಗ ಮನದಲ್ಲಿಯೆ ನಗುತ್ತೇನೆ. ಇದು ಖಂಡಿತ ತಪ್ಪು. ಈ ಸಂದರ್ಭದಲ್ಲಿ ನಾನು ಸಾಕ್ರೇಟಿಸ್‌ನ ಒಂದು ಉದಾಹರಣೆಯನ್ನು ನೀಡುವುದು ಉಚಿತ. ಒಬ್ಬ ವ್ಯಕ್ತಿ ಮಧ್ಯರಾತ್ರಿಯ ಹೊತ್ತಿಗೆ ಸಾಕ್ರೇಟಿಸ್ ಮನೆಯ ಬಾಗಿಲನ್ನು ಬಡಿದ. ಸಾಕ್ರೇಟೀಸ್ ಕಾರಣ ಕೇಳಿದ. ತಾನು ಒಂದು ಹುಡುಗಿಯನ್ನು ಮದುವೆಯಾದೆ. ಕಾಡಿಸಿ, ಬೆನ್ನಿಗೆ ಬಿದ್ದು ಇಷ್ಟ ಪಟ್ಟು ಮದುವೆಯಾದೆ. ಆದರೆ ಈಗ ಅವಳನ್ನು ಕಂಡರೆ ನನಗಾಗುತ್ತಿಲ್ಲ. ಅವಳ ಜೊತೆಗೆ ಕೂಡಿ ಬಾಳುವುದೇ ಸಾಧ್ಯವಿಲ್ಲ ಎನಿಸುತ್ತಿದೆ ಏನು ಮಾಡಲಿ.? ಎಂದಾಗ ಸಾಕ್ರೆಟಸ್ ತಣ್ಣಗೆ ನಗುತ್ತಾ ಇದು ಸಮಸ್ಯೆಯೆ  ಅಲ್ಲ. ನಿನ್ನ ದಾಂಪತ್ಯ ಜೀವನ ಸರಿಹೋಗಬೇಕೆಂದರೆ ಒಂದು ಸುಲಭ ಉಪಾಯವಿದೆ. ನೀನು ಮೊಟ್ಟ ಮೊದಲ ಬಾರಿಗೆ ಆ ಹುಡುಗಿಯನ್ನು ನೋಡಿದಾಗ ನಿನ್ನ ನೋಟ ಮತ್ತು ಭಾವನೆ ಹೇಗಿತ್ತು ಅದೇ ದೃಷ್ಟಿಯಿಂದ ಮನೆಗೆ ಹೋಗಿ ಅವಳನ್ನು ಕಾಣು ಎಲ್ಲ ಸರಿಹೋಗುತ್ತದೆ ಎಂದನಂತೆ’ ಆಗ ಜನ ತುಂಬಾ ಜೋರಾಗಿ ಚಪ್ಪಾಳೆ ತಟ್ಟಿದರು. ಸುಮಾರು ಒಂದು ಘಂಟೆ ನಿರಂತರವಾಗಿ ಹಾಗೇ ಮಾತನಾಡುತ್ತಾ ಹೋದ. ಅಷ್ಟರಲ್ಲಿ ಯಾರೋ ಒಬ್ಬಾತ ಎದ್ದು ನಿಂತು ’ಸರ್ ನೀವು ಹೇಳುವದೆಲ್ಲಾ ಸರಿ ಕೆಲ ಹೆಂಗಸರು ಲಕ್ಷ್ಮೀಶ ಕವಿಯ ಚಂಡಿಯಂತಿರುತ್ತಾರೆ ಅಂಥವರನ್ನು ಹೇಗೆ ಸರಿ ಮಾಡುವದು.?’ ಎಂದಾಗ ವಿನಯಕುಮಾರ ನಗುತ್ತಾ ’ಮಹನೀಯರೇ ಅದಕ್ಕೆ ಕವಿ ಲಕ್ಷ್ಮೀಶ ರೇ ಪರಿಹಾರ ಕೊಟ್ಟಿರುವುದಿದೆ ಎಂದಾಗ ಇಡೀ ಸಭೆ ಕೊಳ್ಳೆಂದು ನಗೆಗಡಲಲ್ಲಿ ತೇಲಿತು. ಪ್ರಶ್ನೆ ಕೇಳಿದಾತನಿಗೆ ಮಾತ್ರ ಸಮಾಧಾನವಾದಂತಿರಲಿಲ್ಲ. ‘ಕೊನೆಯದಾಗಿ ಒಂದು ಮುಖ್ಯವಾದ ಮಾತು’ ಎನ್ನುತ್ತಿರುವಾಗ ವಿನಯಕುಮಾರನ ಕಾರ್ ಡ್ರೈವರ್ ಆವೇಗದಿಂದ ಓಡಿ ಬಂದು, ಅವರ ಕಿವಿಯಲ್ಲಿ ಏನೋ ಹೇಳಿದ. ತಕ್ಷಣವೇ ಅವರ ಮುಖದಲ್ಲಿಯ ರಕ್ತ ಹೆಪ್ಪು ಗಟ್ಟಿದಂತಾಗಿ ‘ನಾನೀಗ ಹೊರಡಲೆಬೇಕು..ದಯಮಾಡಿ ಕ್ಷಮಿಸಿ’ ಎಂದವನೇ ಅವಸರದಿಂದ ವೇದಿಕೆಯಿಂದ ಕೆಳಗಿಳಿದು ತನ್ನ ಡ್ರೈವರನನ್ನೇ ಹಿಂಬಾಲಿಸಿದ. ಡಾ ವಿನಯಕುಮಾರ ಮುಖದಲ್ಲಿ ಏನೋ ನಡೆಯಬಾರದ್ದು ನಡೆದ ಭಾವವಿತ್ತು. ಅಲ್ಲಿ ನೆರೆದ ಜನರ ನೂರಾರು ಪ್ರಶ್ನೆಗಳು ಹಾಗೇ ಉಳಿದವು. ಅವರು ನಿರುತ್ತರರಾಗಿದ್ದರು.

(ಕಲೆ: ಲೇಖಕರದು)

ಪುಸ್ತಕ ಪರಿಚಯ: ಹಿತ್ತಲ ಗಿಡ ಮುದ್ದಲ್ಲ


-ಬಿ. ಶ್ರೀಪಾದ್ ಭಟ್


ಗೆಳೆಯ ಸಿ.ಜಿ.ಲಕ್ಷ್ಮೀಪತಿ ಅವರು ಬರೆದ  ಬೆತ್ತಲೆ ವೃಕ್ಷ ಪುಸ್ತಕವು 2007ರಲ್ಲಿ ಪ್ರಕಟಣೆಗೊಂಡಿತು. ಲೈಂಗಿಕತೆಯನ್ನು ಅದರ ವಿವಿಧ ಆಯಾಮಗಳಲ್ಲಿ, ನಾಗರೀಕ ಸಮಾಜವು ಈ ಲೈಂಗಿಕತೆಗೆ ಆರೋಗ್ಯಕರವಾದ ಮನಸ್ಥಿತಿಯಲ್ಲಿ ತರೆದುಕೊಳ್ಳುವುದರ ಕುರಿತಾಗಿ, ಗಂಡು ಮತ್ತು ಹೆಣ್ಣಿನ ವಿಭಿನ್ನ ವ್ಯಕ್ತಿತ್ವಗಳು, ಬಹುರೂಪಿ ವರ್ತನೆಗಳ ಕುರಿತಾಗಿ ಸಿ.ಜಿ.ಲಕ್ಷ್ಮೀಪತಿಯವರು ತಮ್ಮ “ಬೆತ್ತಲೆ ವೃಕ್ಷ” ಪುಸ್ತಕದಲ್ಲಿ ಸಮಗ್ರವಾಗಿ ಮತ್ತು ವಿವರವಾಗಿ ಚರ್ಚಿಸಿದ್ದಾರೆ.

2000ರಲ್ಲಿ ‘ಅಗ್ನಿ’ವಾರಪತ್ರಿಕೆಯಲ್ಲಿ ಕೆಲವು ತಿಂಗಳುಗಳ ಕಾಲ ಪ್ರಕಟಗೊಂಡ ಲೇಖನಗಳ ಸಂಗ್ರಹವೇ ಈ ‘ಬೆತ್ತಲೆ ವೃಕ್ಷ’ ಪುಸ್ತಕ. ಲೇಖಕ ಲಕ್ಷ್ಮೀಪತಿ ಯವರು ಈ ಕೃತಿಯಲ್ಲಿ ‘ನಾನು ಸಾಂಪ್ರದಾಯಿಕ ಸಮಾಜಶಾಸ್ತ್ರೀಯ ವಿಧಾನವನ್ನು ಬಳಸಿಲ್ಲ. ಒಂದರರ್ಥದಲ್ಲಿ ಇತರರ ಜೀವನಾನುಭವ, ನನ್ನ ಅನುಭವ, ಲೈಂಗಿಕತೆ ಬಗೆಗಿನ ಗುಟ್ಟಾದ ಕತೆಗಳು, ನಂಬಿಕೆಗಳು ಈ ಕೃತಿಯನ್ನು ರೂಪಿಸುವಲ್ಲಿ ನೆರವಾಗಿವೆ. ಸಾಮಾನ್ಯವಾಗಿ ಲೈಂಗಿಕತೆಯನ್ನು ಕುರಿತು ಬರೆಯುವಾಗ ಅದು ವಲ್ಗರ್ ಆಗದಂತೆ ಹೇಳಬಹುದಾದ್ದನ್ನು ಓದುಗರಿಗೆ ಮುಜುಗರವಾಗದಂತೆ, ಆದರೆ ಮರೆಮಾಚದಂತೆ ಮಂಡಿಸುವುದು ಕಷ್ಟದ ಕೆಲಸ. ಈ ಕೆಲಸದಲ್ಲಿ ನಾನು ಸಾಕಷ್ಟು ಯಶಸ್ವಿಯಾಗಿದ್ದೇನೆ ಅಂದುಕೊಂಡಿದ್ದೇನೆ’ ಎಂದು ತಮ್ಮ ಮುನ್ನುಡಿ ಮಾತಿನಲ್ಲಿ ಬರೆಯುತ್ತಾರೆ.

ಅವರು ಈ ಲೇಖನವನ್ನು ಪ್ರತಿ ವಾರ ಪತ್ರಿಕೆಗೆ ಬರೆಯುತ್ತಿದ್ದಾಗ ಆರಂಭದ ದಿನಗಳಲ್ಲಿ ಕೆಲವು ಮಹಿಳಾ ಸಂಘಟನೆಗಳಿಂದ  ಈ ಲೇಖನಗಳಿಗೆ ವಿರೋಧ ಎದುರಿಸಿದ್ದರು. ಲೇಖಕರು ಮುಕ್ತ ಲೈಂಗಿಕತೆಯ ಕುರಿತಾಗಿ ಬರೆವಾಗ ಅನೇಕ ಕಡೆ ಲೈಂಗಿಕ ಅಂಗಾಂಗಗಳ ಬಳಕೆಗಳ ಕುರಿತಾಗಿ ವಿವರವಾಗಿ ಬರೆದಿರುವುದನ್ನು ತೀವ್ರವಾಗಿ ವಿರೋಧಿಸಿದ್ದರು. ಮಹಿಳೆಗೆ ಲೈಂಗಿಕತೆಯ ಕುರಿತಾಗಿ ನಿಯಂತ್ರಿಸುತ್ತಿರುವುದು ಸಮಾಜವನ್ನು ನಿಯಂತ್ರಿಸುತ್ತಿರುವ ಊಳಿಗಮಾನ್ಯ ಸಂಸ್ಕೃತಿ ಹಾಗೂ ಪುರುಷಾಧಿಪತ್ಯದ ಕುರಿತಾಗಿ ಲೇಖಕರು ಎಲ್ಲಿಯೂ ಬರೆದಿಲ್ಲ ಎಂದು ಮಹಿಳಾ ಸಂಘಟನೆಗಳು ಅರೋಪಿಸಿದ್ದವು. ಮಹಿಳಾ ಜಾಗೃತಿ ಸಂಘಟನೆಯ ಸುಷ್ಮಾ ಅವರು ಪ್ರತಿಭಟನೆ ರೂಪವಾಗಿ ಬರೆದ ಪತ್ರವನ್ನು ಸಹ ಇದೇ ಪುಸ್ತಕದಲ್ಲಿ ಪ್ರಕಟಿಸಲಾಗಿದೆ.

ಇದಕ್ಕೂ ಮುಂಚೆ ಮಹಿಳಾ ಜಾಗೃತಿ ಸಂಘಟನೆಗಳ ಪ್ರತಿಭಟನೆಗೆ ಉತ್ತರಿಸುತ್ತಾ ಲಕ್ಷ್ಮೀಪತಿಯವರು ಸಂಭೋಗಿಸುವುದು ಹೇಗೆಂದು ತಿಳಿಯದ ಕೋಟ್ಯಾಂತರ ಮಹಿಳೆಯರಿದ್ದಾರೆ. ಗಂಡಸಿನ ಲೈಂಗಿಕ ಒತ್ತಡ ತೀರಿದೊಡನೆ ಸಂಭೋಗವೇ ಮುಗಿದು ಹೋಯಿತೆಂದು ಭಾವಿಸುತ್ತಾರೆ. ಸ್ವಲ್ಪ ತಿಳಿವಳಿಕೆ, ಲೈಂಗಿಕ ಶಿಕ್ಷಣ, ನೈಸಿರ್ಗಕವಾಗಿ, ಗಂಡು ಹೆಣ್ಣಿನ ಸಲುಗೆ ಸ್ನೇಹದಿಂದ ಯಾವುದೇ ವೆಚ್ಚವಿಲ್ಲದೆ ಸುಲುಭವಾಗಿ ದೊರೆಯುವ ಈ ಪರಮೋನ್ನತ ಸುಖದಿಂದ ದಂಪತಿಗಳು ವಂಚಿತರಾಗುವುದನ್ನು ಗಮನಿಸಿದರೆ ವಿಷಾದ ಉಂಟಾಗುತ್ತದೆ.

ಬೈಯುವಾಗ, ತೀವ್ರವಾಗಿ ಪ್ರೀತಿಸುವಾಗ, ಹರಟೆ ಕೊಚ್ಚುವಾಗ ಲೈಂಗಿ ಭಾಷೆ ಎಷ್ಟು ಹಾಸು ಹೊಕ್ಕಾಗಿರುತ್ತದೆಂದರೆ ಅದನ್ನು ಹೊರತುಪಡಿಸಿ ಮಾತನಾಡಲೂ ಸಾಧ್ಯವಿಲ್ಲ ಎಂದು ಪ್ರತಿಕ್ರಯಿಸುತ್ತಾರೆ. ಮೇಲಿನ ಮಹಿಳಾ ಜಾಗೃತಿ ಸಂಘಟನೆಯ ಕಳಕಳಿಯ ಮಾತುಗಳು ಎಷ್ಟು ಸತ್ಯವೋ ಅಷ್ಟೇ ಸತ್ಯ ಗೆಳೆಯ ಲಕ್ಷ್ಮೀಪತಿಯವರ ವಿವರಣೆಗಳು. ಏಕೆಂದರೆ ಲೈಂಗಿಕ ಬದುಕಿನ ಕುರಿತಾಗಿ ಹಿಂದಿನ ಕಾಲದಿಂದಲೂ ಹೆಣ್ಣು ಕೌರ್ಯಕ್ಕೆ, ಅತ್ಯಾಚಾರಕ್ಕೆ, ಮೌಢ್ಯಕ್ಕೆ ಬಲಿಯಾಗುತ್ತಳೇ ಇದ್ದಾಳೆ. ಇದಕ್ಕೆ ಮಾನವಶಾಸ್ತ್ರಜ್ಞರೂ, ಸಮಾಜಶಾಸ್ತ್ರಜ್ಞರೂ ವಿಭಿನ್ನ ರೀತಿಯ ವಿಶ್ಲೇಷಣೆಗಳನ್ನ ನೀಡಿದ್ದಾರೆ.

ಇಲ್ಲಿನ ಪುಸ್ತಕದಲ್ಲಿ ಲೇಖಕ ಇದಕ್ಕೆ ಹೆಚ್ಚಾಗಿ ಒತ್ತು ನೀಡಿಲ್ಲ. ಮೌಢ್ಯದ ಕುರಿತಾಗಿ ವಿವರವಾಗಿ ಹಾಗೂ ವೈಚಾರಿಕವಾಗಿ ಬರೆದಿದ್ದಾರೆ ನಿಜ. ಆದರೆ ಈ ಮೌಢ್ಯವನ್ನು ವೈಯುಕ್ತಿಕ ಹಾಗೂ ಕುಟಂಬದ ನೆಲೆಯಲ್ಲಿ ವಿಶ್ಲೇಷಿಸಿದ್ದಾರೆಯೇ ಹೊರತಾಗಿ ಈ ಊಳಿಗಮಾನ್ಯದ ಹಿನ್ನಲೆಯಲ್ಲಿ ಅಲ್ಲ.ಇಲ್ಲಿ ಲೇಖಕರೇ ಕೆಲವರು ಲೈಂಗಿಕ ವಿಚಾರಗಳನ್ನು ರಂಜಕವಾಗಿ ಬರೆಯಬಾರದು ಗಂಭೀರವಾಗಿ ಬರೆಯಬೇಕು ಮುಂತಾದ ಸಲಹೆಗಳನ್ನು ನೀಡುತ್ತಾರೆ.ಸೆಕ್ಸ ಎನ್ನುವುದು ನಮ್ಮ ದೇಹದ ಚೈತನ್ಯದ ಒಂದು ಭಾಗವೇ ಆಗಿರುವುದರಿಂದ ಅದರ ನೆನಪು,ಮಾತೇ ರೋಮಾಂಚನ ಉಂಟು ಮಾಡುತ್ತದೆ.ಅಂಥ ಅದ್ಭುತ ಆನಂದಮಯವಾದ ಕ್ರಿಯೆಯನ್ನು ಜೀವಂತವಾಗಿ ಬರೆದರೆ ಆಗುವ ತಪ್ಪಾದರೂ ಏನು ? ಲೈಂಗಿಕತೆಯನ್ನು ಕುರಿತು ನನಗೂ ಅದಕ್ಕೂ ಸಂಬಂಧವೂ ಇಲ್ಲವೇನೋ ಎಂಬಂತೆ ಬರೆಯುವುದು ಕೃತಕವೂ,ಅಪ್ರಾಮ್ರಾಣಿಕವೂ ಆಗುತ್ತದೆ. ಎಂದು ಹೇಳುತ್ತಾರೆ.ಅವರ ಮಾತು ನಿಜ.ಆದರೆ ಕೇವಲ ಗಂಡುಹೆಣ್ಣಿನ ವೈಯುಕ್ತಿಕ ಲೈಂಗಿಕ ಕ್ರಿಯೆಗಳ ಆಯಾಮದಲ್ಲೇ ಬರೆದರೆ ಅದಕ್ಕೆ ಸೀಮಿತ ಚೌಕಟ್ಟು ಹಾಕಿದಂತಾಗುವುದಿಲ್ಲವೇ?  ಇದು ಈ ಪುಸ್ತಕದಲ್ಲಿ ಕೊರತೆಯಾಗಿ ಕಾಡುತ್ತದೆ.

ಈ ‘ಬೆತ್ತಲೆ ವೃಕ್ಷ’ ಪುಸ್ತಕವನ್ನು ಸ್ಥೂಲವಾಗಿ ನಾಲ್ಕು ಭಾಗಗಳಾಗಿ ಓದಬಹುದು. ಮೊದಲ ಭಾಗದಲ್ಲಿ ವೇದಗಳ ಕಾಲದ ಮುಕ್ತ ಕಾಮದ ಲೈಂಗಿಕತೆ, ತಂತ್ರ, ಮಿಥುನದ ವಿವಿಧ ಕ್ರಿಯೆಗಳ ವಿವರವಾದ ವಿವರಣೆ, ವಾತ್ಸಾಯನನ ಕಾಮಸೂತ್ರ ಕುರಿತಾಗಿ ಅತ್ಯಂತ ವಿವರವಾದ ಅಧ್ಯಯನ. ಈ ಮೊದಲ ಭಾಗದಲ್ಲಿ ಲೈಂಗಿಕ ಕ್ರಿಯೆಗಳ ಕುರಿತಾಗಿ, ಆ ಘಟ್ಟಗಳಲ್ಲಿ ಲೈಂಗಿಕ ಕ್ರಿಯೆಯ ಸಮಯದಲ್ಲಿನ ಅಂಗಾಂಗಳ ಬಳಕೆಗಳ ಕುರಿತಾಗಿ, ಸಾವಿರಾರು ವರ್ಷಗಳ ಹಿಂದಿನ ಕಾಲದ ನಾಗರೀಕತೆಯ ಹಾಗೂ ಆ ಕಾಲಘಟ್ಟದ ಸಮಾಜದ ಅನೇಕ ಕುರುಡು ನಂಬಿಕೆಗಳ, ಅವರ ಲೈಂಗಿಕ ಒರಟುತನದ ಕುರಿತಾಗಿಯೂ ವಿವರವಾಗಿ ಬರೆದಿದ್ದಾರೆ.

ಸೆಕ್ಸ್ ನ ಕುರಿತಾದ ವಿಸ್ತೃತ ವಿವರಣೆಗಳನ್ನು ಸಹ ಒದಗಿಸಿದ್ದಾರೆ. ಈ ವಿವರಗಳು ಅನೇಕ ವೇಳೆ ಪುನರಾವೃತ್ತಿಗೊಳ್ಳುತ್ತವೆ. ಅಲ್ಲದೆ ಈ ಲೇಖನಗಳು ವಾರಪತ್ರಿಕೆಗೆ ಬರೆದಿದ್ದಕ್ಕಾಗಿಯೋ ಏನೋ ಅದಕ್ಕೆ ಸಹಜವಾಗಿಯೇ ಒಂದು ಅಕಡೆಮಿಕ್ ಚೌಕಟ್ಟಾಗಲೀ, ಸಂಶೋಧನೆಯ  ಸ್ವರೂಪವಾಗಲೀ ದಕ್ಕಿದಂತಿಲ್ಲ. ಇಲ್ಲಿ ಒಂದು ಬಗೆಯ ‘ಟ್ಯಾಬ್ಲಾಯ್ಡ್’ ರೋಚಕತೆ ಪ್ರಭಾವಿಸಿದೆ.  ಈ ಭಾಗದಲ್ಲಿ ಲೈಂಗಿಕ ಕ್ರಿಯೆಗಳ ಕುರಿತಾಗಿ ಹಾಗೂ ಆ ಕಾಲಘಟ್ಟದ ಅನಾಗರಿಕ ವರ್ತನೆಗಳು ಮತ್ತು ಲೈಂಗಿಕತೆಯ ಕುರಿತಾದ ಮೂಢನಂಬಿಕೆಗಳನ್ನು ವಿವರಿಸುವಾಗ ಲೇಖಕರು ಎಲ್ಲಿಯೂ ಮಧ್ಯಮ ವರ್ಗ ಬಯಸುವ ಅಕಡೆಮಿಕ್ ಬಾಷೆಯನ್ನು, ಸಿದ್ಧ ಮಾದರಿಯನ್ನು ಬಳಸುವುದಿಲ್ಲ. ಅನೇಕ ವೇಳೆ ಭಾಷೆಯ ರಂಜಕ ಬಳಕೆಯೂ ಸಹ ಈ ಮಧ್ಯಮವರ್ಗದ ಮನಸ್ಥಿತಿಗೆ ಕಸಿವಿಸಿಯನ್ನುಂಟು ಮಾಡುತ್ತದೆ. ಈ ಕಾರಣಕ್ಕಾಗಿಯೇ ಈ ಮೊದಲ ಭಾಗವನ್ನು ಓದುವಾಗ ಅದು ಈ ಭಾಗದಲ್ಲಿ ಅನೇಕ ಕಡೆ  ಲೈಂಗಿಕತೆಯ ಕುರಿತಾಗಿ ಅತ್ಯಂತ ವೈಜ್ಞಾನಿಕವಾಗಿ ವಿಶ್ಲೇಷಣೆಗೆ ಒಳಗಾಗಿದ್ದರೂ ಅದು ಓದುಗರನ್ನು ಆಕರ್ಷಿಸುವತ್ತಲೇ  ಗಿರಿಕಿ ಹೊಡೆಯುತ್ತದೆ ಎನ್ನುವ ಭಾವನೆ ಉಂಟಾದರೆ ಅದು ಓದುಗರ ತಪ್ಪಲ್ಲ. ಇದು ಈ ಭಾಗದ ಮಿತಿಯೂ ಕೂಡ. ಏಕೆಂದರೆ ಈ ಮುಕ್ತ ಲೈಂಗಿಕತೆಯ ಕುರಿತಾಗಿ ಪ್ರಾಮಾಣಿಕವಾಗಿ, ವೈಜ್ಞಾನಿಕವಾಗಿ ಬರೆಯುವಾಗ ಯಾವ ಮಾದರಿಯನ್ನು ಅನುಸರಿಸಬೇಕು, ಬಳಸಬೇಕಾದ ಪರಿಕರಗಳಾವವು ಎನ್ನುವುದರ ಕುರಿತಾಗಿ ಲೇಖಕ ಲಕ್ಷ್ಮೀಪತಿಯವರಲ್ಲಿ ಗೊಂದಲಗಳಿವೆ.

ಆದರೆ ಇಲ್ಲಿ ಲೇಖಕರು ಎಲ್ಲಿಯೂ ವಿಕೃತ ಚಿತ್ರಣವನ್ನು ನೀಡಿಲ್ಲ. ಅನಗತ್ಯವಾಗಿ ತಪ್ಪು ಗ್ರಹಿಕೆಗಳನ್ನು ಕೊಟ್ಟಿಲ್ಲ. ಇಡೀ ಚರ್ಚೆಯು  ಆರೋಗ್ಯಕರ ಮನಸ್ಥಿಯಲ್ಲೇ ನಡೆಯುತ್ತದೆ. ಎರಡನೇ ಭಾಗವಾದ ರತಿ ಸೂತ್ರ ಮತ್ತು ಗಾಂಧೀಜಿಯ ವೈಯುಕ್ತಿಕ ಬದುಕನ್ನು ಒಳಗೊಂಡ ಲೈಂಗಿಕ ವಿಶ್ಲೇಷಣೆಗೆ ಬಂದಾಗ ಈ ಗೊಂದಲಗಳು ಮತ್ತಷ್ಟು ಗೋಜಲುಗೊಂಡು ಕೆಲವು ಕಡೆ ಜಾಳು ಜಾಳಾಗಿ ನಿರೂಪಿತವಾಗಿವೆ. ಗಾಂಧೀಜಿಯವರ ಲೈಂಗಿಕತೆಯ ಪ್ರಯೋಗದ ಕುರಿತಾಗಿ ಈ ಭಾಗದಲ್ಲಿ ಪ್ರಕಟವಾದ ಅಸಹನೆಗೆ ಸಮಜಾಯಿಷಿಯೇ ಇಲ್ಲ. ಗಾಂಧಿಯವರ ವೈಯುಕ್ತಿಕ ಬದುಕನ್ನು ಲೈಂಗಿಕ ವಿಶ್ಲೇಷಣೆಗೆ ಬಳಸಿಕೊಳ್ಳುವಾಗ ಅದು ಕತ್ತಿಯ ಮೇಲಿನ ನಡಿಗೆಯಾಗಿರುತ್ತದೆ ಎನ್ನುವುದು ಬಹಳ ಮುಖ್ಯ.ಸ್ವಲ್ಪ ಎಚ್ಚರ ತಪ್ಪಿದರೂ ಮಹಾತ್ಮ ಗಾಂಧಿಯವರನ್ನು ಅತ್ಯಂತ ಕೆಳಮಟ್ಟದಲ್ಲಿ ಚಿತ್ರಿಸಬಹುದಾದ ಅಪಾಯಗಳಿವೆ.ಈ ಪುಸ್ತಕವೂ ಈ ಅಪಾಯದಿಂದ ಪಾರಾಗಿಲ್ಲ. ಮತ್ತು ಈ ಕುರಿತಾಗಿ ಅದರ ಸಾಮಾನ್ಯವಾದ ವಿಶ್ಲೇಷಣೆ ಹೆಚ್ಚಿನದೇನನ್ನು ಹೇಳದೆ ನಿರಾಶೆಗೊಳಿಸುತ್ತದೆ.

ಆದರೆ ಇಲ್ಲಿನ ಮೂರನೇ ಭಾಗವಾದ ರಜನೀಶ್ರವರ ಲೈಂಗಿಕ ಕ್ರಾಂತಿ ಹಾಗೂ ನಾಲ್ಕನೇ ಭಾಗವಾದ ವಿಹಾರಿ ವಿಕೃತಿ ಕುರಿತಾದ ಲೇಖನಗಳು ನಿಜಕ್ಕೂ ಯಶಸ್ವೀ ಲೇಖನಗಳು. ಈ ಭಾಗದಲ್ಲಿ ಡೊಮೆನಿಕ್ ಮುನ್ನುಡಿಯಲ್ಲಿ ಬರೆದಂತೆ ಲೈಂಗಿಕ ವ್ಯಕ್ತಿತ್ವಕ್ಕೊಂದು ಕನ್ನಡಿ ಯನ್ನು ಲಕ್ಷ್ಮೀಪತಿಯವರು ಸಮರ್ಥವಾಗಿ ಹಿಡಿದುಕೊಡುತ್ತಾರೆ. ಇಲ್ಲಿ ತಮ್ಮ ವೈಚಾರಿಕ ಪ್ರತಿಭೆಯನ್ನು ಸರಾಗವಾಗಿ ಬಳಸಿಕೊಂಡು ಬರೆದಿದ್ದಾರೆ.ಇಲ್ಲಿ ಭಾಷೆಯ ಬಳಕೆ ಲೇಖಕರ ಹಿಡಿತಕ್ಕೆ ದಕ್ಕಿದೆ. ಈ ಭಾಗಗಳಲ್ಲಿ ಲೈಂಗಿಕತೆಯ ಕುರಿತಾದ ಅನೇಕ ಪೂರ್ವಗ್ರಹ ಚಿಂತನೆಗಳನ್ನು ಕೆಡವಿಹಾಕುತ್ತಾರೆ.ಇಲ್ಲಿ ಸಮಾಜಶಾಸ್ತ್ರೀಯ ಹಾಗೂ ಮನೋ ವೈಜ್ನಾನಿಕ ಮಾದರಿಗಳನ್ನು ಲೇಖಕ ಲಕ್ಷ್ಮೀಪತಿ ಸಮರ್ಥವಾಗಿ ಬಳಸಿಕೊಂಡಿದ್ದಾರೆ.

ಒಟ್ಟಾರೆಯಾಗಿ ಇಂದು 21ನೇ ಶತಮಾನದಲ್ಲಿ ನಾಗರೀಕ ಸಮಾಜವು ತನ್ನನ್ನು ತಾನು ಆಧುನಿಕತೆಗೆ ಒಪ್ಪಿಸಿಕೊಂಡಿದ್ದರೂ ಮುಕ್ತ ಲೈಂಗಿಕತೆಯ ಕುರಿತಾದ ಚರ್ಚೆಗೆ ಇನ್ನೂ ಮಡಿವಂತಿಕೆ ತೋರಿಸುತ್ತಿದೆ. ಈಗಲೂ ಶಾಲೆಗಳಲ್ಲಿ ಮಕ್ಕಳಿಗೆ ಲೈಂಗಿಕತೆಯನ್ನು ಒಂದು ವೈಜ್ಞಾನಿಕ ಪಾಠವಾಗಿ ಹೇಳಿಕೊಡಬೇಕೆ ಬೇಡವೇ ಎಂದು ಪರವಿರೋಧ ಚರ್ಚೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಲಕ್ಷ್ಮೀಪತಿಯವರ ಬೆತ್ತಲೆ ವೃಕ್ಷ ಪುಸ್ತಕವು ಈ ಚರ್ಚೆಗೆ  ಒಂದು ವೇದಿಕೆಯನ್ನು ಒದಗಿಸಿಕೊಡುತ್ತದೆ. ಇಲ್ಲಿ ಬರೆಯಲ್ಪಟ್ಟ  ಅನೇಕ ವಿಷಯಗಳ ಕುರಿತಾಗಿ ಒಪ್ಪಿಕೊಳ್ಳಬೇಕೆ ಬೇಡವೇ ಎನ್ನುವುದೂ ಸಹ ಚರ್ಚೆಗೊಳಗಾದಾಗ ಈ ಹೊಸ ಕಿಟಿಕಿಯ ಮೂಲಕ ದೊರಕುವ ಬೆಳಕಿಂಡಿಯ ಸಾಧ್ಯತೆಗಳು ಅಪಾರ.

ಈ ಪುಸ್ತಕ ಪ್ರಕಟವಾಗಿದ್ದು 2007ರಲ್ಲಿ. ಅಂದರೆ ಇದು ಪ್ರಕಟವಾಗಿ 5 ವರ್ಷಗಳ ನಂತರವೂ ಈ ಬೆತ್ತಲೆ ವೃಕ್ಷದ ಕೃತಿಯ ಕುರಿತಾಗಿ ಒಂದು ವಿಮರ್ಶೆಯೂ ಪ್ರಕಟವಾಗಿಲ್ಲ. ಚರ್ಚೆಯಾಗಿಲ್ಲ. ‘ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ’ ತರಹದ  ಕವನಗಳ ಕುರಿತಾಗಿ ಪುಟಗಟ್ಟಲೆ ಬರೆಯುವ ಈ ವಿಮರ್ಶಕರಿಗೆ ಈ ಪ್ರೇಮದ ಪರಿಯ ನಿಗೂಢ ಆಕರ್ಷಣೆಯಾದ ಲೈಂಗಿಕತೆಯನ್ನು ಚರ್ಚಿಸುವ ಈ ಪುಸ್ತಕದ ಕುರಿತು ಅಸಡ್ಡೆ!

ನಮ್ಮ ಕನ್ನಡದ ಘೋಷಿತ ವಿಮರ್ಶಕರಿಗೆ ನವ್ಯದ ಸ್ವಚ್ಛಂದವಾದ, ಲಿಬಿಡೂ ಮಾದರಿಯ ಆತ್ಮವಂಚನೆಯನ್ನೇ ಹಾಸಿ ಹೊದ್ದ ಸಾಧಾರಣ ಕೃತಿಗಳ ಕುರಿತಾಗಿ ಇರುವ ಆಸಕ್ತಿ ಈ ಪ್ರಯೋಗಾತ್ಮಕ ಪುಸ್ತಕವಾದ ‘ಬೆತ್ತಲೆವೃಕ್ಷ’ ಬಗೆಗೆ ಇಲ್ಲವೇ ಇಲ್ಲ! ಇವರ ಅನಾದರದ ಕಾರಣವೂ ಸಹ ನಿಗೂಢ! ಕಡೆಗೆ ಕನ್ನಡ ಓದುಗರಿಗಾಗಿ ಇಂತಹದೊಂದು ಪುಸ್ತಕವಿದೆ ಎಂದು ಪರಿಚಯಿಸಲಿಕ್ಕಾಗಿಯೇ ನನ್ನಂತಹ ಸಾಮಾನ್ಯ ಓದುಗ ಇಂದು ಆತ್ಮೀಯ ಗೆಳೆಯ ಲಕ್ಷ್ಮೀಪತಿಯ ಈ ಕೃತಿಯ ಕುರಿತಾಗಿ ಬರೆಯಬೇಕಾಯಿತು!

“ಬೆತ್ತಲೆ ವೃಕ್ಷ”
ಲೇಖಕ : ಸಿ.ಜಿ.ಲಕ್ಷ್ಮೀಪತಿ
ಪ್ರಕಾಶಕರು : ಸಖಿ ಪ್ರಕಾಶನ
ಏಕಾಂತ ನಿಲಯ
ಎಂ.ಪಿ.ಪ್ರಕಾಶ ನಗರ
ಹೊಸಪೇಟೆ

ಪುಟಗಳು  : 179
ಬೆಲೆ :Rs.120

ತೆಲಂಗಾಣ ನೆಲದ ನೆನಪುಗಳು


– ಡಾ.ಎನ್.ಜಗದೀಶ್ ಕೊಪ್ಪ


ನಕ್ಸಲ್ ಹೋರಾಟದ ಇತಿಹಾಸ ದಾಖಲಿಸುವ ನಿಟ್ಟಿನಲ್ಲಿ ಕಳೆದ ಜನವರಿಯಿಂದ ಹಲವು ರಾಜ್ಯಗಳನ್ನು ಸುತ್ತುತ್ತಿದ್ದೇನೆ. ನಕ್ಸಲ್ ಹೋರಾಟದ ಎರಡನೇ ಹಂತದ ಇತಿಹಾಸದಲ್ಲಿ ಅಂದರೆ, ಆಂಧ್ರದ ತೆಲಂಗಾಣ ಪ್ರಾಂತ್ಯದಲ್ಲಿ 1980ರ ದಶಕದಲ್ಲಿ ಆರಂಭಗೊಂಡ ಪ್ರಜಾಸಮರಂ ಅಥವಾ ಪೀಪಲ್ಸ್ ವಾರ್ ಗ್ರೂಪ್ ಎಂದು ಕರೆಸಿಕೊಳ್ಳುವ ನಕ್ಸಲಿಯ ಹೋರಾಟಕ್ಕೆ ಅತ್ಯಂತ ಮಹತ್ವವಿದೆ. ಇಂದು ದೇಶಾದ್ಯಂತ ನಡೆಯುತ್ತಿರುವ ನಕ್ಸಲಿಯರ ಹೋರಾಟಕ್ಕೆ ಮೂಲ ತಂತ್ರಗಳನ್ನು ಕಲಿಸಿಕೊಟ್ಟಿದ್ದು ಈ ಆಂಧ್ರದ ಕೊಂಡಪಲ್ಲಿ ಸೀತಾರಾಮಯ್ಯ ನೇತೃತ್ವದ ಪ್ರಜಾಸಮರಂ ತಂಡ.

ಇದರ ಇತಿಹಾಸ ಬರೆಯುವ ಮುನ್ನ ಆಂಧ್ರದ ಒಂದು ನೂರುವರ್ಷದ ರಾಜಕೀಯ ಮತ್ತು ಸಾಮಾಜಿಕ ಇತಿಹಾಸವನ್ನು ಕೆದುಕುತ್ತಾ, ತೆಲಂಗಾಣ ಪ್ರಾಂತ್ಯಕ್ಕೆ ಹೋದ ನನಗೆ ಹಲವಾರು ಮಹತ್ವದ ವಿಷಯಗಳು ದೊರೆತವು.

1925ರ ದಶಕದಲ್ಲಿ ಭಾರತಕ್ಕೆ ಬಂದ ಎಡಪಂಥೀಯ ಸಿದ್ಧಾಂತ (ಕಮ್ಯೂನಿಷ್ಟ್) 1926ರಲ್ಲಿ ಆಂಧ್ರದ ತೆಲಂಗಾಣ ಪ್ರಾಂತ್ಯದಲ್ಲಿ ಆಂಧ್ರ ಪತ್ರಿಕೆ ಮತ್ತು ವಿಶಾಲಾಂಧ್ರ ಎಂಬ ಕಮ್ಯೂನಿಷ್ಟ್ ಮುಖವಾಣಿಯಾದ ಪತ್ರಿಕೆಯಿಂದ ಅಲ್ಲಿನ ಜನರಲ್ಲಿ ಬೇರೂರಿದೆ. ಆಂಧ್ರ ಪತ್ರಿಕೆ 1922 ರಿಂದ ಗಾಂಧೀಜಿಯ ಹೋರಾಟಗಳ ಜೊತೆ ಜೊತೆಗೆ ಎಡಪಂಥೀಯ ಚಿಂತನೆಗಳನ್ನು ಜನತೆ ಬಳಿ ಕೊಂಡೊಯ್ದಿದ್ದು ನಿಜಕ್ಕೂ ಗಮನಾರ್ಹ ಸಂಗತಿ. ಗೋದಾವರಿ ಆಚೆಗಿನ ಆ ಪ್ರದೇಶದ ಅಂದಿನ ದಿನಗಳಲ್ಲಿ ಸುಸಂಸ್ಕೃತರು, ವಿದ್ಯಾವಂತರೆಂದರೆ, ಬಹುತೇಕ ಬ್ರಾಹ್ಮಣರು ಮಾತ್ರ. ಅತಿ ಹೆಚ್ಚು ಬುಡಕಟ್ಟು ಜನಾಂಗಗಳನ್ನು ಹೊಂದಿರುವ ಈ ಪ್ರದೇಶದಲ್ಲಿ ಶೂದ್ರರಿಗೆ ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ಶಿಕ್ಷಣ ಸಿಕ್ಕಿತು. ಹಾಗಾಗಿ ಸ್ವಾತಂತ್ರ ಪೂರ್ವದ ಹೋರಾಟಗಾರರು, ಕ್ರಾಂತಿವೀರರು ಎಲ್ಲರೂ ಬಹುತೇಖ ಮೇಲ್ಜಾತಿಯಿಂದ ಬಂದವರಾಗಿದ್ದಾರೆ. ನಿಜಕ್ಕೂ ಆಶ್ಚರ್ಯವಾಗುವುದು, ಜಾತೀಯತೆ, ಶ್ರೇಣಿಕೃತ ಸಮಾಜದ ವ್ಯವಸ್ಥೆ ಇದ್ದ ಆದಿನಗಳಲ್ಲಿ ಅಗ್ರಹಾರ ಎನಿಸಿಕೊಂಡಿದ್ದ, ವಿಜಯವಾಡ ಮತ್ತು ರಾಜಮಂಡ್ರಿ ಪಟ್ಟಣದ ಬ್ರಾಹ್ಮಣರ ವಾಸಸ್ಥಳಗಳು ಎಲ್ಲಾ ಜಾತಿಗೆ ತೆರೆದುಕೊಂಡಿದ್ದವು. ಎಡಪಂಥೀಯ ಸಿದ್ಧಾಂತ ಅವರ ಮನಸ್ಸುಗಳನ್ನು ಎಲ್ಲಾ ವಿಧವಾದ ಕಂದಾಚಾರಗಳಿಂದ ಮುಕ್ತಗೊಳಿಸಿದ್ದವು. ಆ ಕಾಲದಲ್ಲಿ ಬಿಜೆವಾಡ ಎಂದು ಕರೆಸಿಕೊಳ್ಳುತಿದ್ದ ವಿಜಯವಾಡದಲ್ಲಿ ಅಪಾರ ಸಂಖ್ಯೆಯಲ್ಲಿ ಗಾಂಧಿ ಅಭಿಮಾನಿಗಳು ಇದ್ದರು. ಹಾಗಾಗಿ 1936ರಲ್ಲಿ ಗಾಂಧಿ ಇಲ್ಲಿಗೆ ಭೇಟಿ ನೀಡಿದ್ದರು.

ತೆಲಂಗಾಣ ಪ್ರಾಂತ್ಯದ ಬಹುತೇಕ ಹಳ್ಳಿಗಳು ಸಿದ್ಧ ಮಾದರಿಯಲ್ಲಿ ರೂಪುಗೊಂಡಿವೆ. ಅಂದರೆ, ದಕ್ಷಿಣದ ಆಗ್ನೇಯ ದಿಕ್ಕಿಗೆ ಮಾದಿಗರ (ಹರಿಜನ) ಕೇರಿಗಳು, ನಂತರ ಶೂದ್ರರ ಕೇರಿಗಳು, ಆನಂತರ ಉತ್ತರ ದಿಕ್ಕಿನಲ್ಲಿ ಬ್ರಾಹ್ಮಣರ ಅಗ್ರಹಾರಗಳು. ಇದರ ಇತಿಹಾಸ ಕೆದಕಿದಾಗ ತಿಳಿದು ಬಂದ ಅಂಶವೆಂದರೆ, ವಾಸ್ತು ಪ್ರಕಾರ ಆಗ್ನೇಯ  ಮೂಲೆಯಿಂದ ಯಾವುದೇ ಗಾಳಿ ಬೀಸುವುದಿಲ್ಲ. ಆ ಕಾರಣಕ್ಕಾಗಿ ಇವತ್ತಿಗೂ ಮನೆ ನಿರ್ಮಿಸುವಾಗ ವಾಸ್ತು ಶಾಸ್ತ್ರದಲ್ಲಿ ಅಡುಗೆ ಮನೆ ಆಗ್ನೇಯ  ದಿಕ್ಕಿನಲ್ಲಿರುವಂತೆ ಸೂಚಿಸುತ್ತಾರೆ. ಅಡುಗೆ ಒಲೆಗೆ ಬೀಸುವ ಗಾಳಿ ಅಡ್ಡಿಯಾಗಬಾರದೆಂಬುದು ವಾಸ್ತು ಶಾಸ್ತ್ರದ ನಿಯಮ. ಆದರೆ, ಇಲ್ಲಿ ಸತ್ತ ಪ್ರಾಣಿಗಳನ್ನು ತಿನ್ನುವ ಮತ್ತು ಸದಾ ಕೊಳಕಾಗಿರುವ ಹರಿಜನರಿಂದ ಯಾವುದೇ ಸೋಂಕು ಹರಡಬಾರದೆಂದು ಈ ರೀತಿ ಹಳ್ಳಿಗಳು ರಚನೆಯಾಗಿವೆಯಂತೆ.  ಇದಕ್ಕಿಂತ ಇನ್ನೊಂದು ಕುತೂಹಲದ ಸಂಗತಿ ನನ್ನ ಗಮನಕ್ಕೆ ಬಂದಿತು. ಸ್ವಾತಂತ್ರ್ಯ ಪೂರ್ವದಲ್ಲಿ ಅಲ್ಲಿನ ಬ್ರಾಹ್ಮಣರು ಮಧ್ಯಾಹ್ನ ಊಟದ ಸಮಯದಲ್ಲಿ ತಣ್ಣೀರು ಸ್ನಾನ ಮಾಡಿ ಪುಟ್ಟಗೋಚಿ ಎಂಬ, ಅಂದರೆ ಗುಪ್ತಾಂಗವನ್ನು ಮುಚ್ಚುವ ಸಣ್ಣ ಬಟ್ಟೆಯ ತುಂಡೊಂದನ್ನು ತಮ್ಮ ಉಡುದಾರಕ್ಕೆ ಸಿಕ್ಕಿಸಿಕೊಂಡು ಕುಳಿತು ಊಟ ಮಾಡುತ್ತಿದ್ದರಂತೆ. ಇದಕ್ಕೆ ಕಾರಣ ಅಲ್ಲಿನ ಬಿರು ಬಿಸಿಲಿನಲ್ಲಿ ಬಟ್ಟೆ ಧರಿಸಿ ನೆಮ್ಮದಿಯಾಗಿ ಊಟ ಮಾಡಲು ಸಾಧ್ಯವಿಲ್ಲ ಎಂಬ ನಂಬಿಕೆ. ಈ ಪದ್ಧತಿ ಈಗಲೂ ಚಾಲ್ತಿಯಲ್ಲಿದೆ, ಆದರೆ, ಸೊಂಟಕ್ಕೆ ಪಂಚೆ ಧರಿಸಿ ಬರೀ ಮೈಯಲ್ಲಿ ಕುಳಿತು ಊಟ ಮಾಡುತ್ತಾರೆ.

ನನ್ನ ಮಂಡ್ಯ ಜಿಲ್ಲೆಯಲ್ಲಿ ನಾನು ಬಾಲ್ಯದಿಂದಲೂ ಕೇಳಿದ ಒಂದು ಬೈಗುಳಕ್ಕೆ ನನಗೆ ಇಲ್ಲಿ ಆಧಾರ ಸಿಕ್ಕಿತು. ಯಾವುದಾದರು ವ್ಯಕ್ತಿ ತನಗೆ ಸರಿ ಸಮಾನನಲ್ಲ ಎಂದು ಅನಿಸಿದರೆ, ಪುಟಗೋಸಿನನ್ನಮಗ ಎಂಬ ಬೈಗುಳ ಚಾಲ್ತಿಯಲ್ಲಿದೆ. ತೆಲುಗಿನ ಪುಟ್ಟಗೋಚಿ ಕನ್ನಡದಲ್ಲಿ ಪುಟಗೋಸಿಯಾಗಿದೆ.

ಇವೆಲ್ಲಕ್ಕಿಂತ ಹೆಚ್ಚಾಗಿ 1930ರ ದಶಕದಲ್ಲಿ ಮಹಿಳೆಯರ ಶಿಕ್ಷಣ ಕುರಿತಂತೆ ರಾಜಮಂಡ್ರಿಯ ಒಂದು ಕುಟುಂಬದಲ್ಲಿನ ಮಾವ ಮತ್ತು ಸೊಸೆಯ ನಡುವಿನ ಹೋರಾಟ ಐತಿಹಾಸಿಕ ಮಹತ್ವ ಪಡೆದುಕೊಂಡಿದೆ. ಆ ಕಾಲದಲ್ಲಿ ರಾಜಮಂಡ್ರಿ ಪಟ್ಟಣದ ಪ್ರಸಿದ್ಧ ವಕೀಲರಾಗಿದ್ದ ರೊಬ್ಬ ಕಮ್ಮೆಶ್ವರ ರಾವ್ ಎಂಬುವರು ತನ್ನ ಮಗನಿಗೆ ಏಳನೇ ತರಗತಿ ಓದಿದ್ದ ಸೀತಾರಾಮಮ್ಮ ಎಂಬ ಹೆಣ್ಣು ಮಗಳನ್ನು ವಿವಾಹ ಮಾಡಿ ಸೊಸೆಯನ್ನಾಗಿ ಮಾಡಿಕೊಳ್ಳುತ್ತಾರೆ. ಆಕೆ ಮುಂದಿನ ವಿದ್ಯಾಭ್ಯಾಸ ಮುಂದುವರಿಸಲು ಇಚ್ಚಿಸಿದಾಗ ತಡೆಯೊಡ್ಡುತ್ತಾರೆ. ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿ ಆಗಿನ ಬ್ರಿಟಿಷ್ ನ್ಯಾಯಾಧೀಶನೊಬ್ಬನಿಂದ ತೀರ್ಪು ಸೊಸೆಯ ಪರವಾಗಿ ಹೊರಬೀಳುತ್ತದೆ.

ಸೀತಾರಾಮಮ್ಮ ವಿದ್ಯಾಭ್ಯಾಸಕ್ಕಾಗಿ ಪತಿ ಮತ್ತು ಮಾವನನ್ನು ತೊರೆದು, ಆಗಿನ ಮೆಟ್ರಿಕ್‌ವರೆಗೆ ಶಿಕ್ಷಣ ಮುಂದುವರಿಸಿ, ನಂತರ ಶಿಕ್ಷಣ ಇಲಾಖೆಯಲ್ಲಿ ಶಾಲಾ ಇನ್ಸ್‌ಪೆಕ್ಟರ್ ಆಗಿ ನೇಮಕವಾಗುತ್ತಾಳೆ. ತನಗೆ ಬಂದ ಹೋರಾಟದ ದುಃಸ್ಥಿತಿ ಭವಿಷ್ಯದ ಹೆಣ್ಣು ಮಕ್ಕಳಿಗೆ ಬರಬಾರದೆಂದು ತೀರ್ಮಾನಿಸಿ, ತನ್ನ ಆದಾಯವನ್ನೆಲ್ಲಾ ವಿನಿಯೋಗಿಸಿ, ವಿಜಯವಾಡದಲ್ಲಿ ಹೆಣ್ಣು ಮಕ್ಕಳ ಶಾಲೆಯೊಂದನ್ನು ತೆರೆಯುತ್ತಾಳೆ. ಸೀತಾರಾಮಮ್ಮ ತೆರೆದ ಶಾಲೆ ಇಂದು ಬೃಹತ್ ಶಿಕ್ಷಣ ಸಂಸ್ಥೆಯಾಗಿ ಬೆಳೆದು ನಿಂತಿದ್ದು,  ವಿಜಯವಾಡ ನಗರದಲ್ಲಿ ಹೆಣ್ಣು ಮಕ್ಕಳಿಗೆ ಪದವಿಯವರೆಗೂ ಸರ್ಕಾರಿ ಶುಲ್ಕದ ದರದಲ್ಲಿ ಶಿಕ್ಷಣವನ್ನು ಧಾರೆಯೆರೆಯುತ್ತಿದೆ. ಆಂಧ್ರದ ಒಂದು ಶತಮಾನದ ರಾಜಕೀಯ, ಸಾಮಾಜಿಕ, ಮತ್ತು ಸಾಂಸ್ಕೃತಿಕ ಇತಿಹಾಸದಲ್ಲಿ ಇಂತಹ ಅನೇಕ ಅಪರೂಪದ  ಘಟನೆಗಳು ನಮ್ಮ ಗಮನ ಸೆಳೆಯುತ್ತವೆ. ಇವೆಲ್ಲವನ್ನು ನಕ್ಸಲ್ ಹೋರಾಟದ ಇತಿಹಾಸ ಕುರಿತ ಕೃತಿಯಲ್ಲಿ ದಾಖಲಿಸುತ್ತಿದ್ದೇನೆ.