Monthly Archives: August 2012

ಪ್ರಜಾಪ್ರಭುತ್ವಕ್ಕೆ ಅಪಾಯ ತರಬಲ್ಲ ಮೂಲಭೂತವಾದ

– ಆನಂದ ಪ್ರಸಾದ್

ಇತ್ತೀಚೆಗಿನ ವರ್ಷಗಳಲ್ಲಿ ಭಾರತದಲ್ಲಿ ಧಾರ್ಮಿಕ ಮೂಲಭೂತವಾದ ಹೆಚ್ಚುತ್ತಿದೆ.  ಭಾರತದಲ್ಲಿ ಹಿಂದೂ ಮೂಲಭೂತವಾದಿ ಸಂಘಟನೆಗಳು ಹಾಗೂ ಅಂಥ ಸಂಘಟನೆಗಳ ಗರ್ಭದಿಂದ ಜನ್ಮ ತಳೆದ ರಾಜಕೀಯ ಪಕ್ಷವಾದ ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಹಿಡಿದ ನಂತರ ಇಂಥ ಮೂಲಭೂತವಾದ ಬೆಳೆಯಲು ಹೆಚ್ಚು ಪ್ರೋತ್ಸಾಹ ಸಿಕ್ಕಿದಂತೆ ಆಯಿತು. ಮೂಲಭೂತವಾದವನ್ನು ಬೆಳೆಸುವುದು ಸುಲಭವಾದುದರಿಂದ ಇದು ವೇಗವಾಗಿ ಬೆಳೆಯುತ್ತದೆ. ವೈಚಾರಿಕ ಹಾಗೂ ರಾಜಕೀಯ ಪ್ರಜ್ಞೆ ಇಲ್ಲದ ಜನಸಮೂಹವನ್ನು ಧರ್ಮದ ಹೆಸರಿನಲ್ಲಿ ಸುಲಭವಾಗಿ ಪ್ರಚೋದಿಸಬಹುದು ಹಾಗೂ ಅಂಥ ಪ್ರಚೋದನೆಯನ್ನೇ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡು ಅಧಿಕಾರ ಹಿಡಿಯುವ ಹವಣಿಕೆ ಧಾರ್ಮಿಕ ಮೂಲಭೂತವಾದಿ ಸಂಘಟನೆಗಳ ಗುರಿಯೂ ಹೌದು. ಆದರೂ ಭಾರತದ ಸಹಿಷ್ಣು ಜನಸಮುದಾಯ ಇಂಥ ತಂತ್ರವನ್ನು ಅರ್ಥ ಮಾಡಿಕೊಳ್ಳಬಲ್ಲವರಾಗಿದ್ದಾರೆ ಎಂಬುದು 2004 ಹಾಗೂ 2009ರ ಲೋಕಸಭಾ ಚುನಾವಣಾ ಫಲಿತಾಂಶಗಳನ್ನು ನೋಡಿದರೆ ಕಂಡುಬರುತ್ತದೆ.

ಅಯೋಧ್ಯೆಯ ರಾಮಮಂದಿರದ ಬೇಡಿಕೆ ಇಟ್ಟುಕೊಂಡು ಆರಂಭವಾದ ರಥಯಾತ್ರೆಯ ಮೂಲಕ ದೇಶದಲ್ಲಿ ಧಾರ್ಮಿಕ ಮೂಲಭೂತವಾದಿ ಮನೋಭಾವವನ್ನು ಬದಿದೆಬ್ಬಿಸುವಲ್ಲಿ ಯಶಸ್ವಿಯಾದ ಬಿಜೆಪಿ ಹಾಗೂ ಅದರ ಜನ್ಮದಾತ ಸಂಘ ಪರಿವಾರ ನಂತರ ಬಾಬ್ರಿ ಮಸೀದಿಯನ್ನು ನೆಲಸಮ ಮಾಡುವಲ್ಲಿಯೂ ಯಶಸ್ವಿಯಾಯಿತು. ಇದರ ಫಲವಾಗಿ ದೇಶದಲ್ಲಿ ಬಿಜೆಪಿಯು ದೊಡ್ಡ ಪ್ರಮಾಣದಲ್ಲಿ ಬೆಳೆಯಿತು. ನಂತರ ಮೈತ್ರಿಕೂಟ ರಚಿಸಿಕೊಂಡು ಕೇಂದ್ರದಲ್ಲಿಯೂ ಅಧಿಕಾರ ಹಿಡಿಯಿತು. ಇದು ಸಂಘ ಪರಿವಾರದ ಸಂಘಟನೆಗಳಿಗೆ ಆನೆಬಲ ತಂದುಕೊಟ್ಟಿತು. ದೇಶಾದ್ಯಂತ ಪರಿವಾರದ ಸಂಘಟನೆಗಳು ಬಲವಾಗಿ ಬೆಳೆದವು. ಆದರೆ ಇದರ ಸಮಾನಾಂತರವಾಗಿ ದೇಶದಲ್ಲಿ ಮುಸ್ಲಿಂ ಮೂಲಭೂತವಾದಿ ಸಂಘಟನೆಗಳೂ ಬೆಳೆದಿವೆ. ಇದಕ್ಕೆ ಕಾರಣ ಹಿಂದೂ ಮೂಲಭೂತವಾದಿ ಸಂಘಟನೆಗಳು ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಹುಟ್ಟು ಹಾಕಿದ ಅಭದ್ರತೆಯ ಭಾವನೆ. ಇದರಿಂದಾಗಿ ಸೌಹಾರ್ದವಾಗಿ ಬದುಕುತ್ತಿದ್ದ ಹಿಂದೂ ಮುಸ್ಲಿಮರಲ್ಲಿ ಪರಸ್ಪರ ಸಂಶಯದ ವಾತಾವರಣ ರೂಪುಗೊಂಡಿತು.  ಹಿಂದೂ ಮುಸ್ಲಿಂ ಭಾವೈಕ್ಯತೆಯ ಹಲವಾರು ತಾಣಗಳು ಹಿಂದೂ ಮೂಲಭೂತವಾದಿಗಳಿಗೆ ತಮ್ಮ ಬೇಳೆ ಬೇಯಿಸಿಕೊಳ್ಳಲು, ತನ್ಮೂಲಕ ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳಲು ಸಹಾಯಕವಾಯಿತು. ಹಿಂದೂ ಮೂಲಭೂತವಾದಿಗಳು ತಮ್ಮ ಪ್ರಭಾವ ಬೆಳೆಸಿ ಉಳಿಸಿಕೊಳ್ಳಲು ಸತತವಾಗಿ ಹಿಂದೂ ಸಮಾಜೋತ್ಸವ, ಹಿಂದೂ ಜಾಗರಣ ದಿನ, ಅಖಂಡ ಭಾರತ ಸಂಕಲ್ಪ ದಿನ ಇತ್ಯಾದಿಗಳನ್ನು ಆಯೋಜಿಸುತ್ತಾ ಬರುತ್ತಿದ್ದಾರೆ.  ಅಖಂಡ ಭಾರತ ಅಂದರೆ ಸ್ವಾತಂತ್ರ್ಯಪೂರ್ವದ ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳನ್ನೊಳಗೊಂಡ ಭಾರತ ನಿರ್ಮಾಣ ಹೆಸರಿನಲ್ಲಿ ಜನತೆಯಲ್ಲಿ ಮೂಲಭೂತವಾದಿ ಭಾವನೆಗಳನ್ನು ಬಿತ್ತುವುದು ಹಾಗೂ ಅವರನ್ನು ಇನ್ನೊಂದು ಧರ್ಮದ ಜನರನ್ನು ದ್ವೇಷದಿಂದ ಕಾಣುವಂತೆ ಪ್ರಚೋದಿಸುವುದು ದೇಶದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಗಳೇನೂ ಅಲ್ಲ. ಧರ್ಮದ ಆಧಾರದ ಮೇಲೆ ವಿಭಜನೆ ಆಗಿ ಆರು ದಶಕಗಳೇ ಕಳೆದಿರುವಾಗ ಅಖಂಡ ಭಾರತ ನಿರ್ಮಾಣ ಸಾಧ್ಯವೂ ಇಲ್ಲ, ಅಂಥ ಹೋರಾಟದ ಅಗತ್ಯವೂ ಇಲ್ಲ. ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳು ತಮ್ಮ ಆರಂಭದಲ್ಲಿ ಜಾತ್ಯತೀತ ಧೋರಣೆಗಳನ್ನು  ಹೊಂದಿದ್ದರೂ ನಂತರದಲ್ಲಿ ಮೂಲಭೂತವಾದಿಗಳ ಹಿಡಿತಕ್ಕೆ ಸಿಲುಕಿ ರಿಪೇರಿಯಾಗದಷ್ಟು ಕೆಟ್ಟು ಹೋಗಿವೆ.  ಹೀಗಾಗಿ ಅಂಥ ದೇಶಗಳನ್ನು ಮತ್ತೆ ಒಂದುಗೂಡಿಸುವುದು ಸಾಧ್ಯವಾಗದು. ಯುದ್ಧದ ಮೂಲಕ ಅವುಗಳನ್ನು ಸೋಲಿಸಿ ಗೆದ್ದುಕೊಳ್ಳುತ್ತೇವೆ ಎಂದು ಹೋದರೂ ಅದು ಕೂಡ ಸಾಧ್ಯವಾಗದ ಮಾತು. ಏಕೆಂದರೆ ಪಾಕಿಸ್ತಾನದ ಬಳಿ ನಮ್ಮ ಬಳಿ ಇರುವಂತೆಯೇ ಪರಮಾಣು ಅಸ್ತ್ರಗಳಿವೆ ಹಾಗೂ ಅದರ ಬೆಂಬಲಕ್ಕೆ ಚೀನಾ ಹಾಗೂ ಅಮೇರಿಕ ದೇಶಗಳು ಇವೆ.  ಹೀಗಾಗಿ ಅಂಥ ದುಸ್ಸಾಹಸವೂ ಕೂಡ ಸಾಧ್ಯವಿಲ್ಲ.

ಪಾಕಿಸ್ತಾನದಲ್ಲಿ ಸ್ವಾತಂತ್ರ್ಯಾನಂತರ 22% ಹಿಂದೂಗಳ ಜನಸಂಖ್ಯೆ ಇದ್ದದ್ದು ಈಗ 5% ಕ್ಕೆ ಇಳಿದಿದೆ. ಪಾಕಿಸ್ತಾನದಲ್ಲಿ ಧಾರ್ಮಿಕ ಮೂಲಭೂತವಾದಿಗಳು ಹಿಡಿತ ಸಾಧಿಸಿರುವ ಕಾರಣ ಅಲ್ಲಿನ ಹಿಂದೂಗಳ ಮೇಲೆ ತೀವ್ರ ಕಿರುಕುಳ ನಡೆಯುತ್ತಿದೆ ಎಂಬ ವರದಿಗಳಿವೆ. ಇದನ್ನು ನಮ್ಮ ದೇಶವು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಎತ್ತಿ ನೋಡಬಹುದು.  ಆದರೂ ಇದರಿಂದ ಪ್ರಯೋಜನ ಆದೀತು ಎಂದು ಹೇಳಲಾಗದು, ಏಕೆಂದರೆ ಪಾಕಿಸ್ತಾನವು ರಿಪೇರಿಯಾಗದಷ್ಟು ಕೆಟ್ಟು ಹೋಗಿದೆ. ಇದೇ ಪರಿಸ್ಥಿತಿ ಬಾಂಗ್ಲಾ ದೇಶದಲ್ಲಿಯೂ ಇದೆ.  ಬಾಂಗ್ಲಾದಲ್ಲಿ ಸ್ವಾತಂತ್ರ್ಯಾನಂತರ 22% ಇದ್ದ ಹಿಂದೂಗಳ ಸಂಖ್ಯೆ ಈಗ 9% ಕ್ಕೆ ಇಳಿದಿದೆ. ಅಲ್ಲಿಯೂ ಹಿಂದೂಗಳ ಮೇಲೆ ಕಿರುಕುಳ ನಡೆಯುತ್ತಿದೆ ಎಂಬ ವರದಿಗಳಿವೆ. ಇದು ಮೂಲಭೂತವಾದದ ದುಷ್ಪರಿಣಾಮ ಹಾಗೂ ಆಧುನಿಕ ಪ್ರಜಾಪ್ರಭುತ್ವ ಮೌಲ್ಯಗಳನ್ನು, ರಾಜಕೀಯ ಪರಿಕಲ್ಪನೆಗಳನ್ನು ಬೆಳೆಸದೆ ಹೋದುದರಿಂದ ಉಂಟಾಗಿರುವ ಪರಿಸ್ಥಿತಿ. ಇದನ್ನು ಆ ದೇಶಗಳ ಜನರೇ ರಿಪೇರಿ ಮಾಡಬೇಕಷ್ಟೆ ಹೊರತು ಬೇರೆಯವರು ಏನೂ ಮಾಡಲು ಸಾಧ್ಯವಿಲ್ಲ.  ಪಾಕಿಸ್ತಾನದಲ್ಲಿ ಬೇರೆ ಅಲ್ಪಸಂಖ್ಯಾತ ಮುಸ್ಲಿಂ ಪಂಗಡಗಳ ಜನರಿಗೂ ಮೂಲಭೂತವಾದಿಗಳು ಕಿರುಕುಳ ನೀಡುತ್ತಿದ್ದಾರೆ ಎಂಬ ವರದಿಗಳಿವೆ.  ಪಾಕಿಸ್ತಾನದ ಇಂಥ ಬೆಳವಣಿಗೆಗಳಿಂದ ಅದು ಅಂತರರಾಷ್ಟ್ರೀಯ ಮಟ್ಟದಲ್ಲಿ ತಲೆತಗ್ಗಿಸುವ ರೀತಿ ಆಗಿದೆ ಮತ್ತು ಇದು ಇಸ್ಲಾಂ ಧರ್ಮಕ್ಕೂ ಕೆಟ್ಟ ಹೆಸರು ತರಲು ಕಾರಣವಾಗಿದೆ. ಇದನ್ನು ಇಸ್ಲಾಂ ಧರ್ಮಗುರುಗಳೇ ರಿಪೇರಿ ಮಾಡಬೇಕಷ್ಟೆ ಹೊರತು ಬೇರೆಯವರು ಏನೂ ಮಾಡಲಾಗದು. ಇದು ಮೂಲತಹ: ಆಧುನಿಕ ಶಿಕ್ಷಣ, ವೈಚಾರಿಕತೆ, ವೈಜ್ಞಾನಿಕ ಮನೋಭಾವ, ಪ್ರಜಾಪ್ರಭುತ್ವದ ರಾಜಕೀಯ ಪ್ರಜ್ಞೆಯನ್ನು ಬೆಳೆಸದೆ ಇರುವುದರಿಂದ ಉಂಟಾಗಿರುವ ಸಮಸ್ಯೆ.  ಇಂದಿನ ಜಾಗತೀಕರಣಗೊಂಡ ಜಗತ್ತಿನಲ್ಲಿ ಇದು ಇಸ್ಲಾಂ ಧರ್ಮ ತಲೆ ತಗ್ಗಿಸುವಂತೆ ಮಾಡಬಹುದು.  ಹಾಗಾಗಿ ಈ ಕುರಿತು ಜಗತ್ತಿನ ಇಸ್ಲಾಂ ಧರ್ಮಗುರುಗಳು ಚಿಂತಿಸಬೇಕಾಗಿದೆ.

ಬಾಂಗ್ಲಾ ದೇಶೀಯರು ಅಕ್ರಮವಾಗಿ ಭಾರತಕ್ಕೆ ನುಸುಳಿ ದೇಶಾದ್ಯಂತ ಹರಡಿಹೋಗಿ ಸಮಸ್ಯೆಯಾಗುತ್ತಿದ್ದಾರೆ ಎಂದು ಹಿಂದೂ ಮೂಲಭೂತವಾದಿಗಳು ಹಾಗೂ ಅವರ ರಾಜಕೀಯ ಪಕ್ಷವು ಪದೇ ಪದೇ ಹೇಳುತ್ತಿದೆ. ಈ ವಿಷಯದ ಬಗ್ಗೆ ಪಕ್ಷಾತೀತವಾಗಿ ಚಿಂತಿಸಬೇಕಾದ ಅಗತ್ಯ ಇದೆ.  ಅಕ್ರಮ ಬಾಂಗ್ಲಾದೇಶೀಯರ ಸಂಖ್ಯೆ ದೇಶದಲ್ಲಿ ಮೂರು ಕೋಟಿ ಇದೆ ಎಂದು ಹೇಳಲಾಗುತ್ತಿದೆ.  ಇಲ್ಲಿ ಅಂಥ ಅಕ್ರಮ ವಲಸಿಗರಿಗೆ ರೇಶನ್ ಕಾರ್ಡ್, ವೋಟರ್ ಕಾರ್ಡ್ ಇತ್ಯಾದಿಗಳನ್ನು ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಅಕ್ರಮ ವಲಸಿಗರಿಗೆ ನಮ್ಮ ದೇಶದ ಇಂಥ ಕಾರ್ಡುಗಳನ್ನು ನೀಡುವುದು ಸಮಂಜಸವಲ್ಲ.  ಇದನ್ನು ವೋಟು ಬ್ಯಾಂಕಿನ ದೃಷ್ಟಿಯಿಂದ ನೀಡಲಾಗಿದ್ದರೆ ಅದು ಸಮಂಜಸವಾದ ಕ್ರಮವೂ ಅಲ್ಲ. ಇದರಿಂದ ಹಿಂದೂ ಮೂಲಭೂತವಾದಿಗಳ ವಾದಕ್ಕೆ ಮತ್ತಷ್ಟು ಬಲ ಬಂದು ನಮ್ಮ ದೇಶದಲ್ಲಿಯೂ ಮೂಲಭೂತವಾದಿಗಳು ಬೆಳೆಯಲು ಕಾರಣವಾದೀತು. ಹೀಗಾಗಿ ಎಲ್ಲ ಪಕ್ಷಗಳೂ ಇದನ್ನು ರಾಷ್ಟ್ರೀಯ ದೃಷ್ಟಿಕೋನದಿಂದ ನೋಡಬೇಕಾದ ಅಗತ್ಯ ಇದೆ.

ಅಸ್ಸಾಂನಲ್ಲಿಯ ಜನಾಂಗೀಯ ಸಂಘರ್ಷಣೆಗಳು ಖಂಡಿತವಾಗಿಯೂ ಕೋಮುಗಲಭೆಗಳಲ್ಲ

– ಎಸ್.ಜೆ. ಅಂಬ್ರೋಸ್ ಪಿಂಟೋ

[ಇದು ಆಂಬ್ರೋಸ್ ಪಿಂಟೋರವರು ಡೆಕ್ಕನ್ ಹೆರಾಲ್ಡ್‌ನಲ್ಲಿ 18/8/12ರಂದು ಬರೆದಿರುವ ಲೇಖನದ ಕೆಲವು ಭಾಗಗಳು. ಇದನ್ನು ಬಿ. ಶ್ರೀಪಾದ್ ಭಟ್ಟರು ಅನುವಾದಿಸಿದ್ದಾರೆ. ಬೆಂಗಳೂರಿನಿಂದ ಈಶಾನ್ಯ ರಾಜ್ಯಗಳ ಜನತೆ ವಾಪಸಾಗುತ್ತಿರುವ ಹಿನ್ನೆಲೆಯಲ್ಲಿ ಬರೆದಿರುವ ಈ ಲೇಖನ ಅಸ್ಸಾಂ‌ನಲ್ಲಿಯ ಜನಾಂಗೀಯ ಗಲಭೆಗಳ ಬಗ್ಗೆ ಹಲವು ಮಹತ್ವದ ವಿಚಾರಗಳನ್ನು ಹೇಳುತ್ತದೆ.]

ಅಸ್ಸಾಂನಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷಣೆಗಳು ಖಂಡಿತವಾಗಿಯೂ ಕೋಮುಗಲಭೆಗಳಲ್ಲ. ಯಾರೇ ಆಗಲಿ ಈಶಾನ್ಯ ರಾಜ್ಯದ ಜನತೆಯನ್ನು ಅದರಲ್ಲೂ ಮುಖ್ಯವಾಗಿ ಅಸ್ಸಾಂ ರಾಜ್ಯದ ಜನರನ್ನು ಮುಸ್ಲಿಂ ದ್ವೇಷದ ಹಿನ್ನೆಲೆಯನ್ನು ಮುಂದುಮಾಡಿ ಬೆದರಿಸಿದರೆ ಅದು ಶುದ್ಧ ತಪ್ಪು. ಬೋಡೋಗಳು ಮುಖ್ಯವಾಗಿ ಆದಿವಾಸಿಗಳು. ಇವರಲ್ಲಿ ಕೆಲ ಗುಂಪುಗಳು ಮಾತ್ರ ಹಿಂದು ಧರ್ಮದ ಆಚರಣೆಯನ್ನು ಅನುಸರಿಸುತ್ತವೆ. ಅಸ್ಸಾಂನಲ್ಲಿ ಈ ಆದಿವಾಸಿಗಳ ಜೊತೆಗೆ ಘರ್ಷಣೆಗೆ ಇಳಿದಿರುವ ಬಾಂಗ್ಲಾ ದೇಶದ ವಲಸಿಗರಲ್ಲಿ ಮುಸ್ಲಿಂರೂ ಮತ್ತು ಹಿಂದೂಗಳು ಇಬ್ಬರೂ ಇದ್ದಾರೆ. ಈ ವಲಸಿಗರಲ್ಲಿ ಶೇಕಡ 60 ರಷ್ಟು ಜನತೆ ಹಿಂದೂಗಳಾಗಿದ್ದರೆ ಶೇಕಡ 40 ರಷ್ಟು ಜನತೆ ಮುಸ್ಲಿಂರು. ಹೀಗಿದ್ದಾಗ ಈ ಬಾಂಗ್ಲಾ ವಲಸಿಗರು ಮತ್ತು ಆದಿವಾಸಿಗಳ ನಡುವಿನ ಘರ್ಷಣೆ ಹಿಂದೂ ಮತ್ತು ಮುಸ್ಲಿಂರ ನಡುವಿನ ಕೋಮುಗಲಭೆ ಹೇಗಾಗುತ್ತದೆ? ಏತಕ್ಕೆ ಈ ಜನಾಂಗೀಯ ಘರ್ಷಣೆಗೆ ಕೋಮುಗಲಭೆಯ ಸುಳ್ಳಿನ ಮುಖವಾಡ ತೊಡಿಸುತ್ತಿದ್ದಾರೆ?

ಬೋಡೋ ಆದಿವಾಸಿಗಳು ಮತ್ತು ಬಾಂಗ್ಲ ವಲಸಿಗರ ನಡುವಿನ ಸಂಘರ್ಷಕ್ಕೆ ಮೂಲಭೂತ ಕಾರಣವೇನೆಂದರೆ ಅದು ವಿವಾದಾತ್ಮಕ ವಲಯದಲ್ಲಿರುವ ಭೂಮಿ ಹಂಚಿಕೆಯ ಕುರಿತಾದದು. ಇಲ್ಲಿ ಬೋಡೋಗಳ ಬಳಿಯಿರುವ ಜಮೀನು ಸೀಮಿತ ವ್ಯಾಪ್ತಿಯುಳ್ಳದ್ದು. ಈ ಬೋಡೋ ಜನಾಂಗ ಈಶಾನ್ಯ ರಾಜ್ಯದ ಮೂಲನಿವಾಸಿಗಳಾಗಿದ್ದರೂ ಇವರ ತಮ್ಮ ವೈಯಕ್ತಿಕ ಹೆಸರಿನಲ್ಲಿ ಜಮೀನನ್ನು ಹೊಂದಿರಲಿಲ್ಲ. ಅಲ್ಲಿರುವ ಜಮೀನು ಇಡೀ ಆದಿವಾಸಿಗಳ ತಂಡದ ಒಡೆತನಕ್ಕೆ ಒಳಪಡುತ್ತದೆ ಮತ್ತು ಇದಕ್ಕೆಲ್ಲ ಒಬ್ಬ ಮುಖಂಡನಿರುತ್ತಾನೆ. ಇದು ಸಂಸತ್ತಿನಲ್ಲಿ ಅನುಮೋದನೆಗೊಂಡಿರುವ ಬೋಡೋ ಸ್ವಾಯುತ್ತತೆ ಮಸೂದೆಯ ಪ್ರಕಾರ ಮೇಲಿನ ಜಮೀನಿನ ಅಧಿಕಾರ ರೂಪುಗೊಂಡಿದೆ. ಈ ರೀತಿಯಾಗಿ ಯಾವುದೇ ವೈಯುಕ್ತಿಕ ಐಡೆಂಟಿಟಿ ಇಲ್ಲದ ಕೇವಲ ಸೀಮಿತ ವ್ಯಾಪ್ತಿಯ ಜಮೀನನ್ನು ವೈಯಕ್ತಿಕವಾಗಲ್ಲದೆ ಒಂದು ತಂಡವಾಗಿ ಹೊಂದಿರುವ ಈ ಬೋಡೋ ಜನಾಂಗ ಅದು ಹೇಗೆ ತಮ್ಮ ಈ ಸೀಮಿತ ಜಾಗವನ್ನು ವಲಸಿಗರೊಂದಿಗೆ ಹಂಚಿಕೊಳ್ಳುತ್ತಾರೆ? ಈ ಬೋಡೋ ಬುಡಕಟ್ಟಿಗೆ ವೈಯಕ್ತಿಕ ಐಡೆಂಟಿಟಿ ಕೊಡಬೇಕಾಗಿದೆ. ಇವರಿಗೆ  ಸಮಪ್ರಮಾಣದಲ್ಲಿ ಜಮೀನು ಹಂಚಿಕೆಯನ್ನು ಮಾಡಬೇಕಾಗಿದೆ. ವಲಸಿಗರಿಗೆ ಬದಲೀ ವಲಯಗಳಲ್ಲಿ ಜಮೀನನ್ನು ಕೊಡಬೇಕು. ಇಂತಹ ಸಂಕೀರ್ಣವಾದ, ಸೂಕ್ಷ್ಮ ವಿಷಯವನ್ನು ಮರೆಮಾಚಿ ಬದಲಾಗಿ ಇದಕ್ಕೆ ಎರಡು ಮತಗಳ ಘರ್ಷಣೆಯ ಮುಖವಾಡವನ್ನು ತೊಡಿಸಿ ಸಮಾಜದಲ್ಲಿ ಗಲಭೆಗಳನ್ನು ಹುಟ್ಟುಹಾಕುತ್ತಿರುವುದು ಖಂಡನೀಯ.

ಎಲ್ಲ ಬೋಡೋಗಳು ಈ ವಲಸಿಗರೊಂದಿಗೆ ಘರ್ಷಣೆಗೆ ಇಳಿದಿದ್ದಾರೆಂದು ಹೇಗೆ ತೀರ್ಮಾನಿಸುತ್ತೀರಿ? ವಿವಾದವಿರುವುದು ಅತ್ಯಂತ ಸೀಮಿತ ವ್ಯಾಪ್ತಿಯುಳ್ಳ ಜಮೀನಿನ ಕುರಿತಾಗಿ. ಅದೂ ಅಸ್ಸಾಂನ ಮೂಲೆಯೊಂದರ ಸಣ್ಣ ವಲಯದಲ್ಲಿ. ಅದೇ ರೀತಿ ಅಸ್ಸಾಂನ ಕೊಕ್ರಜಾರ್‌ನಲ್ಲಿರುವ ಮುಸ್ಲಿಂರೆಲ್ಲರೂ ವಲಸಿಗರಲ್ಲ. ಇಲ್ಲಿನ ಅನೇಕ ಮುಸ್ಲಿಂರು ಶತಮಾನಗಳಿಂದ ಬದುಕುತ್ತಿದ್ದಾರೆ. ಇವರಿಗೆ ಕೊಕ್ರಜಾರ್‌‍ನಲ್ಲಿ ಬದುಕಲು ಸರ್ವರೀತಿಯಲ್ಲಿ ಹಕ್ಕಿದೆ. ಇಲ್ಲಿರುವ ಎಲ್ಲ ಮುಸ್ಲಿಂರನ್ನು ವಲಸಿಗರು ಎನ್ನುವ ಸರಳ ತೀರ್ಮಾನಕ್ಕೆ ಬರುವುದು ಖಂಡಿತ ತಪ್ಪಾಗುತ್ತದೆ. ಇದು ಪ್ರಜಾಪ್ರಭುತ್ವಕ್ಕೆ ಅಪಚಾರ ಮಾಡಿದಂತೆ. ಈ ರೀತಿ ಸುಳ್ಳು ಸುದ್ದಿಗಳನ್ನು ಅಪಪ್ರಚಾರಗೊಳಿಸಿ ಹಿಂಸೆಯನ್ನು ಹುಟ್ಟುಹಾಕುವುದನ್ನು ಖಂಡಿಸಲೇಬೇಕು. ಈ ರೀತಿಯ ವಿಷವನ್ನು ಹರುಡುತ್ತಿರುವ ಲುಂಪೆನ್ ಗುಂಪುಗಳ ಹಿಂದೆ ಖಂಡಿತವಾಗಿಯೂ ಶಕ್ತಿಯೊಂದು ಕಾರ್ಯನಿರ್ವಹಿಸುತ್ತಿದೆ.

ಇನ್ನೊಂದು ಪ್ರಮುಖ ವಿಷಯವೇನೆಂದರೆ ಬೆಂಗಳೂರಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಬೋಡೋ ಪಂಗಡದವರು ಕಡಿಮೆ ಅಥವಾ ಬಹುಶ ಇಲ್ಲವೇ ಇಲ್ಲ. ಬೆಂಗಳೂರಿನಲ್ಲಿರುವ ವಿದ್ಯಾರ್ಥಿಗಳು ಮಣಿಪುರ, ನಾಗಾಲ್ಯಾಂಡ್, ಮಿಜೋರೋಂ, ಅರುಣಾಚಲ ಪ್ರದೇಶ, ತ್ರಿಪುರ, ಸಿಕ್ಕಿಂ, ಅಸ್ಸಾಂ, ಟಿಬೆಟ್, ನೇಪಾಳ ಹೀಗೆ ವಿಭಿನ್ನ ರಾಜ್ಯಗಳಿಗೆ ಸೇರಿದವರು. ಇವರೆಲ್ಲರೂ ಸಮಾನವಾಗಿ ಮುಂಗೋಲಿಯನ್ ಮುಖಲಕ್ಷಣವನ್ನು ಹೊಂದಿರುವ ಒಂದೇ ಕಾರಣಕ್ಕಾಗಿ ಇವರನ್ನು ಬೋಡೋಗಳೆಂದು ಹಣೆಪಟ್ಟಿ ಹಚ್ಚುವುದು ಮೂರ್ಖತನದ ಪರಮಾವಧಿಯೇ ಸರಿ. ಇವರಿಗೂ ಅಸ್ಸಾಂನಲ್ಲಿ ಜಮೀನಿನ ಹಂಚಿಕೆಯ ಕುರಿತಾಗಿ ನಡೆಯುತ್ತಿರುವ ಜನಾಂಗೀಯ ಘರ್ಷಣೆಗೂ ಯಾವುದೇ ಸಂಬಂಧವಿಲ್ಲ.

(ಕೃಪೆ: ಡೆಕ್ಕನ್ ಹೆರಾಲ್ಡ್)

ಮತಾಂಧತೆಯೇ ಚಳವಳಿಗಳಾಗುತ್ತಿರುವ ವಿಷಮ ಘಳಿಗೆ


– ಡಾ ಅಶೋಕ್. ಕೆ. ಆರ್.


 

ಇತ್ತೀಚೆಗಷ್ಟೇ ಸುಳ್ಯ ಮತ್ತು ಪುತ್ತೂರಿನ ಸುತ್ತಮುತ್ತ ವಾಸಿಸುತ್ತಿರುವ ನಿರಾಶ್ರಿತ ಶ್ರೀಲಂಕಾ ತಮಿಳರು ಪಡಿತರ ಚೀಟಿಯನ್ನು ವಿತರಿಸಬೇಕೆಂದು ಪ್ರತಿಭಟಿಸಿದರು. ಟಿಬೆಟ್ಟಿನಲ್ಲಿ ಚೀನಾ ದೇಶದ ಶೋಷಣೆಯನ್ನು ಖಂಡಿಸಿ ಕೆಲವು ತಿಂಗಳುಗಳ ಹಿಂದೆ ಟಿಬೆಟ್ಟಿಯನ್ನರು ಭಾರತದ ವಿವಿದೆಡೆ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೂ ತಿರುಗಿತ್ತು. ನೇಪಾಳಿಗರ ವಲಸೆ ನಿರಂತರವಾಗಿ ನಡೆಯುತ್ತದೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಮಾನವ ಹಕ್ಕು ಆಯೋಗದ ವರದಿಯಂತೆ ಕಳೆದ ಮೂರು ವರ್ಷದಲ್ಲಿ ಮೂರು ಸಾವಿರಕ್ಕೂ ಅಧಿಕ ಪಾಕಿಸ್ತಾನಿ ಹಿಂದೂಗಳು ಭಾರತಕ್ಕೆ ವಲಸೆ ಬಂದಿದ್ದಾರೆ.

ಈ ವಲಸೆಗಳ ಬಗ್ಗೆ ಇಲ್ಲದ ಆಕ್ರೋಶ ಬಾಂಗ್ಲಾ ವಲಸಿಗರ ಮೇಲೆ ಮಾತ್ರ ಯಾಕೆ? ಬಾಂಗ್ಲಾ ವಲಸಿಗರು ಸ್ಥಳೀಯ ಬೋಡೋ ಆದಿವಾಸಿಗಳ ಮೇಲೆ ನಡೆಸಿರುವ ಕ್ರೌರ್ಯವಷ್ಟೇ ಇದಕ್ಕೆ ಕಾರಣವಾ? ಆಶ್ರಯನೀಡಿದ ದೇಶಕ್ಕೆ ಅವರು ದ್ರೋಹಬಗೆಯುತ್ತಿದ್ದಾರೆಂಬ ಅಸಹನೆಯಾ? ಆಶ್ರಯ ನೀಡಿದ ದೇಶದ ಪ್ರಧಾನಮಂತ್ರಿಯನ್ನೇ ಕೊಂದ ಜನರ ವಿರುದ್ಧ ‘ದೇಶಭಕ್ತಿಯ’ ಹೆಸರಿನಲ್ಲಿ ಕೂಗಾಡದ ಮಂದಿ ಬಾಂಗ್ಲಾ ವಲಸಿಗರ ವಿರುದ್ಧ ಪ್ರತಿಭಟನೆಯ ಅಸ್ತ್ರ ಝಳಪಿಸುತ್ತಿರುವುದ್ಯಾಕೆ? ಬಾಂಗ್ಲಾ ವಲಸಿಗರು ಮುಸಲ್ಮಾನರೆಂಬ ಕಾರಣಕ್ಕೆ ಬಿಜೆಪಿ, ಆರೆಸ್ಸೆಸ್, ಶ್ರೀರಾಮ ಸೇನೆಯಂಥ ಸಂಘಟನೆಗಳು ದೊಡ್ಡ ಮಟ್ಟದಲ್ಲಿ ಗುಲ್ಲೆಬ್ಬಿಸುತ್ತಿದ್ದಾರಾ?

ಅನ್ಯ ದೇಶದಲ್ಲಿ ದೌರ್ಜನ್ಯ ನಡೆದರೆ ಅದನ್ನು ಮಾನವೀಯ ದೃಷ್ಟಿಯಿಂದ ವಿರೋಧಿಸುವ ಹಕ್ಕು ಪ್ರತಿಯೊಬ್ಬನಿಗೂ ಇರುತ್ತದೆ. ನಕ್ಸಲನೆಂಬ ಹಣೆಪಟ್ಟಿ ಕಟ್ಟಿ ಡಾ. ಬಿನಾಯಕ್ ಸೇನರನ್ನು ವರುಷಗಳ ಕಾಲ ಸೆರೆವಾಸದಲ್ಲಿಟ್ಟಾಗ ವಿವಿಧ ದೇಶಗಳ ನೊಬೆಲ್ ಪುರಸ್ಕೃತರು ಪ್ರತಿಭಟನೆ ನಡೆಸಿದ್ದು ಇದೇ ಮನೋಭಾವದಿಂದ. ಇನ್ನೂ ಹಿಂದಿನ ಉದಾಹರಣೆ ತೆಗೆದುಕೊಂಡರೆ ಭಾರತದ ಸ್ವಾತಂತ್ರ್ಯಕ್ಕಾಗಿ ಇಂಡಿಯನ್ ನ್ಯಾಷನಲ್ ಆರ್ಮಿ ಕಟ್ಟಿದ ಸುಭಾಷ್ ಚಂದ್ರ ಬೋಸರಿಗೆ ನೆರವು ನೀಡಿದ್ದು ಜಪಾನ್ ದೇಶ. ತನ್ನದಲ್ಲದ ಕ್ಯೂಬಾ ದೇಶದಲ್ಲಿನ ಶೋಷಣೆಯನ್ನು ಕೊನೆಗಾಣಿಸಲು ಹೋರಾಡಿ ಗೆಲುವಿನಲ್ಲಿ ಭಾಗಿಯಾಗಿ ನಂತರ ತನಗೆ ಸಿಕ್ಕಿದ ಉನ್ನತ ಸ್ಥಾನಮಾನಗಳನ್ನು ತ್ಯಜಿಸಿ ಬೋಲಿವೀಯಾ ಕ್ರಾಂತಿಗಾಗಿ ಹೋರಾಡುತ್ತ ಮಡಿದ ಚೆಗುವಾರನ ವಿಚಾರಗಳನ್ನು ಕಡೆಗಣಿಸಲು ಸಾಧ್ಯವೇ? ಭಾರತದಲ್ಲಿ ವೇದಾಂತ ಸಂಸ್ಥೆ ಆದಿವಾಸಿಗಳ ಹಕ್ಕನ್ನು ಕಸಿದು ಗಣಿಗಾರಿಕೆ ಮಾಡಲನುವಾದಾಗ ಅದನ್ನು ವಿರೋಧಿಸಿ ಬ್ರಿಟನ್ನಿನಲ್ಲಿ ಪ್ರತಿಭಟನೆ ನಡೆಸಿದ್ದನ್ನು ತಪ್ಪೆನ್ನಲಾದೀತೇ?

ಬರ್ಮಾದಲ್ಲಿ ಅಸ್ಸಾಮಿನಲ್ಲಿ ಮುಸಲ್ಮಾನರ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುವುದು ತಪ್ಪಲ್ಲ. ಆದರೆ ರಜಾ ಅಕಾಡೆಮಿಯ ನೇತ್ರತ್ವದಲ್ಲಿ ಮುಂಬೈನ ಆಜಾದ್ ಮೈದಾನದಲ್ಲಿ ನಡೆದಿದ್ದು ಶುದ್ಧ ಹಿಂಸೆಯಷ್ಟೇ. ಹುತಾತ್ಮರ ಸ್ಮಾರಕವನ್ನು ಒಡೆದು ಹಾಕಿ, ಪೋಲೀಸರ ಮೇಲೆ ಹಲ್ಲೆ ನಡೆಸಿದ್ದು ಶಿಕ್ಷಾರ್ಹ ದೇಶದ್ರೋಹದ ಕೆಲಸವೆಂಬುದರಲ್ಲಿ ಸಂಶಯವಿಲ್ಲ. ಕೊನೆಗೆ ಈ ಪ್ರತಿಭಟನೆ ನಡೆಸಿದವರು ಸಾಧಿಸಿದ್ದಾದರೂ ಏನನ್ನು? 18 ಮತ್ತು 22 ವಯಸ್ಸಿನ ಇಬ್ಬರು ಯುವಕರ ಸಾವಷ್ಟೇ ಇವರ ಮಹತ್ತರ ಸಾಧನೆ. ಸತ್ತ ಆ ಈರ್ವರು ಮುಸ್ಲಿಂ ಯುವಕರ ಹೆತ್ತವರನ್ನು ಸಮಾಧಾನಗೊಳಿಸುವ ಶಕ್ತಿ ಇಸ್ಲಾಂ ಧರ್ಮಕ್ಕಿದೆಯೇ? ಪವಿತ್ರವೆಂದೆನ್ನಿಸಿಕೊಳ್ಳುವ ರಂಜಾನ್ ಮಾಸದಲ್ಲಿ ಪಾಕಿಸ್ತಾನಿ ಸೈನಿಕರನ್ನು ಹೊಡೆದುರುಳಿಸುತ್ತದೆ ಅಲ್ಲಿನ ಉಗ್ರ ಸಂಘಟನೆಗಳು. ಮಹಿಳೆಯರನ್ನು ಕ್ಷುಲ್ಲಕ ಕಾರಣಗಳಿಗಾಗಿ ಸಾರ್ವಜನಿಕವಾಗಿ ಕಲ್ಲೊಡೆದು ಸಾಯಿಸಲಾಗುತ್ತದೆ. ಭಾರತದಲ್ಲಿನ ಸಾವಿರಾರು ಮುಸ್ಲಿಂ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಗ್ಯಾರೇಜುಗಳ ಮಸಿಯಲ್ಲಿ ತಮ್ಮ ಬಾಲ್ಯವನ್ನು ಮಸುಕಾಗಿಸಿಕೊಳ್ಳುತ್ತಿದ್ದಾರೆ. ಕೋಮುವಾದಿ ಮುಸ್ಲಿಂ ಸಂಘಟನೆಗಳಿಗೆ ಈ ಘಟನೆಗಳ್ಯಾವೂ ಪ್ರತಿಭಟಿಸಲು ಯೋಗ್ಯವೆನ್ನಿಸುವುದಿಲ್ಲವೇ? ಎಲ್ಲರೂ ಇಸ್ಲಾಂ ಧರ್ಮದವರಾಗಿಬಿಟ್ಟರೆ ಪ್ರಪಂಚ ಶಾಂತವಾಗಿರುವುದೆಂಬ ಭ್ರಮೆಯಾಕೆ ಈ ಸಂಘಟನೆಗಳಿಗೆ? ಶಿಯಾ, ಅಹಮ್ಮದೀಯರನ್ನು ಸುನ್ನಿ ಮುಸ್ಲಿಮರು ಸಾರ್ವಜನಿಕವಾಗಿ ಹತ್ಯೆಗೈಯುವಾಗ, ಸೂಫಿ ಸಂತರ ಸ್ಮಾರಕಗಳನ್ನು ನಾಶಗೊಳಿಸುವಾಗ ಈ ಮುಸ್ಲಿಂ ಸಂಘಟನೆಗಳಿಗೆ ಆಕ್ರೋಶ ಬರುವುದಿಲ್ಲವೇ? ಮುಸ್ಲಿಮರನ್ನು ಮುಸ್ಲಿಮರೇ ಕೊಂದರೆ ಪರವಾಗಿಲ್ಲ, ಅನ್ಯರು ಹಿಂಸಿಸಬಾರದು ಎಂಬ ಕೆಟ್ಟ ಮನಸ್ಥಿತಿಯಾಕೆ?

ಅಸ್ಸಾಮಿನಲ್ಲಿ ನಡೆಯುತ್ತಿರುವ ಸ್ಥಳೀಯ–ವಲಸಿಗ ಕಲಹ, ಮತ್ತದು ದೇಶದ ಹಲವೆಡೆ ಹುಟ್ಟಿಸಿರುವ ಅಶಾಂತ ವಾತಾವರಣ ನಮ್ಮ ನಾಯಕರ, ಜನರ, ಧರ್ಮಾಂದರ, ಭಾಷಾಂಧರ ಮನದ ಕತ್ತಲೆಯನ್ನು ತೋರಿಸುವಲ್ಲಿ ಯಶಸ್ವಿಯಾಗಿದೆ ಎಂದರೆ ಅತಿಶಯೋಕ್ತಿಯೇನಿಲ್ಲ. ನೂರಾರು ಕಾರಣಗಳಿಂದ ಸೃಷ್ಟಿಯಾಗಿರುವ ಅಸ್ಸಾಂ ಗಲಭೆಯನ್ನು ಹಿಂದೂ–ಮುಸ್ಲಿಮರ ನಡುವಿನ ಕಲಹ ಎಂದು ಬಿಂಬಿಸುವಲ್ಲಿ ಬಿಜೆಪಿ ಮತ್ತದರ ಅಂಗ ಸಂಸ್ಥೆಗಳು ಯಶ ಕಂಡಿವೆ. ಆ ಯಶಸ್ಸಿನ ಪತಾಕೆಯನ್ನು ಮತ್ತಷ್ಟು ಮೇಲಕ್ಕೇರಿಸುವಲ್ಲಿ ರಜಾ ಅಕಾಡೆಮಿಯಂಥ ಸಂಸ್ಥೆಗಳು, ಭಯ ಹುಟ್ಟಿಸುವ ವದಂತಿಗಳನ್ನು ಹರಡಿದ ವ್ಯಕ್ತಿಗಳು ಸಫಲರಾಗಿದ್ದಾರೆ. ಬೋಡೋ ಆದಿವಾಸಿಗಳ-ಮುಸ್ಲಿಮರ ವೋಟುಗಳನ್ನು ಕಳೆದುಕೊಳ್ಳಲಿಚ್ಛಿಸದ ಕಾಂಗ್ರೆಸ್ ಯಾವೊಂದು ಧೃಡ ನಿರ್ಧಾರವನ್ನೂ ತಳೆಯದೆ ಎಡಬಿಡಂಗಿತನ ಪ್ರದರ್ಶಿಸುತ್ತಿದೆ. ವದಂತಿಗಳುಟ್ಟಿಸಿದ ಭಯವನ್ನು ನಿವಾರಿಸಲು ವಿಫಲವಾದ ಕರ್ನಾಟಕದಲ್ಲಿ ಆರೆಸ್ಸೆಸ್ ಸಂಘಟನೆಯವರು ಲಾಠಿ ಹಿಡಿದು ಈಶಾನ್ಯ ರಾಜ್ಯದವರಿಗೆ ‘ರಕ್ಷಣೆ’ ಕೊಡುವ ಜವಾಬ್ದಾರಿ ಹೊತ್ತುಕೊಳ್ಳುತ್ತಾರೆ! ತಮ್ಮದೇ ಬಿಜೆಪಿ ಸರಕಾರದ ನಿಷ್ಕ್ರಿಯತೆಯನ್ನು ಎತ್ತಿ ತೋರಿಸುತ್ತಾರೆ. ಇವೆಲ್ಲವುಗಳ ಮಧ್ಯೆ ಅಸ್ಸಾಮಿನಲ್ಲಿ ಮುಸ್ಲಿಮರು ನಡೆಸಿದ ದೌರ್ಜನ್ಯವನ್ನು ಗಟ್ಟಿ ದನಿಯಲ್ಲಿ ಖಂಡಿಸುತ್ತಿದ್ದ ಕೆಲವು ಹಿಂದೂ ಕನ್ನಡಿಗರು ಈಶಾನ್ಯ ರಾಜ್ಯದವರು ಮರಳಿ ತಮ್ಮ ಊರಿಗೆ ಹೋಗುತ್ತಿರುವುದರ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾರೆ! ಕನ್ನಡಿಗರಿಗೆ ಕೆಲಸದ ಅವಕಾಶ ಹೆಚ್ಚುತ್ತದೆಂಬ ಸಂತಸವಿದು! ‘ಧರ್ಮಪ್ರೇಮ’ ಮರೆಯಾಗಿ ‘ಭಾಷಾಪ್ರೇಮ’ ಮೆರೆಸುತ್ತಿರುವ ಜನರಿವರು! ಸ್ವಧರ್ಮ-ಸ್ವಭಾಷೆಯ ಮೇಲಿನ ಈ ‘ಪ್ರೇಮ’ ಮನುಷ್ಯ ಧರ್ಮವನ್ನೇ ಇಲ್ಲವಾಗಿಸುತ್ತಿದೆ.

ವದಂತಿಯ, ನಕಲಿ ಚಿತ್ರಗಳ ತಯಾರಿಕೆಯ ಮೂಲ ಪಾಕಿಸ್ತಾನವಿರಬಹುದು ಅಥವಾ ಮುಸ್ಲಿಂ/ಹಿಂದೂ ಕೋಮು ಸಂಘಟನೆಯದ್ದಿರಬಹುದು. ಆದರೆ ಇಲ್ಲಿ ಗಮನಿಸಬೇಕಾದ್ದೆಂದರೆ ಈ ವದಂತಿಗಳನ್ನು ಹರಡಲು ಕಾರಣವಾಗಿರುವುದು ಆರ್ಥಿಕವಾಗಿ–ಶೈಕ್ಷಣಿಕವಾಗಿ–ತಾಂತ್ರಿಕವಾಗಿ ‘ಉನ್ನತಿ’(?) ಸಾಧಿಸಿದ ಜನತೆ. ಸಂಸ್ಕ್ರತಿಯ ಹೆಸರಿನಲ್ಲಿ ಗೂಂಡಾಗಿರಿ ಪ್ರದರ್ಶಿಸಿದವರ ಚಿತ್ರಗಳನ್ನು, ಹಿಂಸೆ ವಿರೋಧಿಸುವ ನೆಪದಲ್ಲಿ ಹಿಂಸಾಕೃತ್ಯ ನಡೆಸಿದ ಪುಂಡರ ಚಿತ್ರಗಳನ್ನು ಹೆಚ್ಚು ಜನರಿಗೆ ತಲುಪಿಸುವಂತೆ ಮಾಡಿದರೆ ಅದು ತಪ್ಪಿತಸ್ಥರನ್ನು ಬಂಧಿಸುವುದಕ್ಕೆ ನೆರವಾದೀತು. ಆದರೆ ಪಾಕಿಸ್ತಾನದ ಹೈದರಾಬಾದಿನಲ್ಲಿ ನಡೆದ ಅಲ್ಲಿನ ಧ್ವಜಾರೋಹಣವನ್ನು ಆಂಧ್ರದ ಹೈದರಾಬಾದಿನಲ್ಲಿ ನಡೆದಿದ್ದು ಎಂಬಂತೆ ಹರಡುವ ಹಿಂದೂಗಳು, ಬರ್ಮಾದ ನಕಲಿ ಚಿತ್ರಗಳನ್ನು ಹರಡುವ ಮುಸ್ಲಿಮರ ಮನಸ್ಸಿನಲ್ಲಿರುವುದಾದರೂ ಏನು? ಆಜಾದ್ ಮೈದಾನದಲ್ಲಿ ಹುತಾತ್ಮರ ಸ್ಮಾರಕವನ್ನು ಒದೆಯುತ್ತಿದ್ದ ಯುವಕರನ್ನು ಬಂಧಿಸಲು ಒತ್ತಾಯಿಸುವುದು ಸರಿಯಾದ ಕೆಲಸವೇ ಹೌದು. ಆದರೆ ಆ ಚಿತ್ರಗಳನ್ನು ಹಿಡಿದುಕೊಂಡು ‘ಇಂಥದ್ದನ್ನು ನೋಡಿದರೆ ನನ್ನ ರಕ್ತ ಕುದಿಯುತ್ತದೆ’ ಎಂದಬ್ಬರಿಸುತ್ತ ಧರ್ಮಾಂಧತೆ ಬೆಳೆಸುವ ಪ್ರಮೋದ್ ಮುತಾಲಿಕ್ ರಂಥವರ ಮನಸ್ಥಿತಿ ನೋಡಿದಾಗ ನೆನಪಾಗುವುದು ಇಂಥಹುದೇ ಚಿತ್ರಗಳನ್ನು, ವಿಡಿಯೋಗಳನ್ನು ಪ್ರಚುರಪಡಿಸುತ್ತಲೇ ಉಗ್ರಗಾಮಿತ್ವವನ್ನು ಪೋಷಿಸಿದ ತಾಲಿಬಾನಿ ಸಂಸ್ಕ್ರತಿ. ಭಾರತ ಹಿಂದೂ ದೇಶವಾಗಬೇಕು, ಅನ್ಯ ಧರ್ಮದವರು ಎರಡನೇ ದರ್ಜೆಯ ಪ್ರಜೆಗಳಂತೆ ಬದುಕಬೇಕು ಎಂದು ಬಯಸುವ ಇಂಥವರಿಗೆ ಧರ್ಮಕ್ಕೆ ಜೋತು ಬಿದ್ದು ಪಡಿಪಾಟಲು ಪಡುತ್ತಿರುವ ನೆರೆಯ ಪಾಕಿಸ್ತಾನ ಎಚ್ಚರಿಕೆಯ ಪಾಠದಂತೆ ಕಾಣುವುದಿಲ್ಲವೇ?

ಸ್ವಧರ್ಮದೆಡೆಗಿನ ದುರಭಿಮಾನ ಪರಧರ್ಮದೆಡೆಗಿನ ದ್ವೇಷದ ಮಾತುಗಳನ್ನಾಡುವವರೆಡೆಗೆ ಜನತೆ ಆತುಕೊಳ್ಳುತ್ತಿರುವುದು ಇಂದಿನ ದುರಂತ. ಮನುಷ್ಯ ಧರ್ಮ ಮರೆತ, ದೇಶ ಕಟ್ಟುವ ಕೆಲಸ ಮಾಡದ ಧರ್ಮಾಂಧರೆಡೆಗೆ ದಿನೇ ದಿನೇ ಜನರಲ್ಲಿ ಒಲವು ಹೆಚ್ಚುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ. ನಾಡ ಕಟ್ಟುವ, ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವ ತತ್ವಾಧಾರಿತ ಚಳುವಳಿಗಳ ಕೊರತೆಯೇ ಇದ್ದಕ್ಕೆಲ್ಲ ಕಾರಣವೇ?

ಲೇಖನದ ತುಂಬೆಲ್ಲ ಪ್ರಶ್ನೆಗಳೇ ಇದೆಯಲ್ಲವೇ? ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಜವಾಬ್ದಾರಿ?

ಮಮತಾ ದೀದಿಯ ದಾದಾಗಿರಿ


– ಡಾ.ಎನ್.ಜಗದೀಶ್ ಕೊಪ್ಪ


ಇತ್ತೀಚೆಗಿನ ಭಾರತದ ರಾಜಕೀಯದಲ್ಲಿ ಮಮತಾ ಬ್ಯಾನರ್ಜಿ ಸದಾ ಸುದ್ದಿಯಲ್ಲಿರುವ ಹೆಸರು. ಈವರೆಗೆ ತನ್ನ ವಿವೇಚಾನಾ ರಹಿತ ನಡುವಳಿಕೆಗಳಿಂದ ಹೆಸರಾಗಿದ್ದ ಮಮತಾ, ಈಗ ನ್ಯಾಯಾಲಯದ ತೀರ್ಪುಗಳನ್ನು ಖರೀದಿಸಬಹುದು ಎಂಬ ವಿವಾದಾಸ್ಪದ ಹೇಳಿಕೆ ನೀಡಿ ನ್ಯಾಯಾಂಗ ನಿಂದನೆ ಆರೋಪಕ್ಕೆ ಗುರಿಯಾಗಿದ್ದಾರೆ. ಸುಧೀರ್ಘ 28 ವರ್ಷಗಳ ಕಾಲ ರಾಷ್ಟ್ರ ರಾಜಕಾರಣದಲ್ಲಿ ಪಳಗಿದ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತು ನೀಡಿದ ಇಂತಹ ಹೇಳಿಕೆಯನ್ನು ಯಾರೂ ನಿರೀಕ್ಷಿಸಿರಲಿಲ್ಲ.

1984ರಲ್ಲಿ ದಕ್ಷಿಣ ಕೊಲ್ಕತ್ತ ಲೋಕಸಭಾ ಕ್ಷೇತ್ರದಿಂದ ಕಮ್ಯೂನಿಷ್ಟ್ ಪಕ್ಷದ ಹಿರಿಯ ಮುತ್ಸದ್ಧಿ ಸೋಮನಾಥ ಚಟರ್ಜಿಯನ್ನು ಸೋಲಿಸುವುದರ ಮೂಲಕ ರಾಜೀವ್ ಗಾಂಧಿಯವರ ಕಣ್ಮಣಿಯಾಗಿ ರಾಷ್ಟ್ರ ರಾಜಕಾರಣಕ್ಕೆ ಬಂದ ಮಮತಾ 1989ರಲ್ಲಿ ಒಮ್ಮೆ ಸೋಲನ್ನು ಅನುಭವಿಸಿದ್ದನ್ನು ಬಿಟ್ಟರೆ, ಸತತವಾಗಿ ಆರು ಬಾರಿ ಲೋಕಸಭೆಗೆ ಸಂಸದೆಯಾಗಿ ಆರಿಸಿ ಬಂದು ರಾಜಕಾರಣದ ಒಳ-ಹೊರಗು ಮತ್ತು ಪಟ್ಟುಗಳನ್ನು ಕರಗತಮಾಡಿಕೊಂಡವರು.

1991ರ ಮೇ ತಿಂಗಳಿನಲ್ಲಿ ರಾಜೀವ್ ಹತ್ಯೆಯಾದ ನಂತರ ನಡೆದ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್  ಪಕ್ಷದ ಪ್ರಧಾನಿ ನರಸಿಂಹರಾವ್‌ರ ಮಂತ್ರಿಮಂಡಲದಲ್ಲಿ (1991) ಯುವಜನ ಖಾತೆಯ ರಾಜ್ಯ ಸಚಿವೆಯಾಗಿ, ನಂತರ ಅಧಿಕಾರಕ್ಕೆ ಬಂದ ಎನ್.ಡಿ.ಎ. ಮೈತ್ರಿಕೂಟದ ಜೊತೆ ಕೈಜೋಡಿಸಿ ವಾಜಪೇಯಿ ನೇತ್ರತ್ವದ ಸಂಪುಟದಲ್ಲಿ (2000) ರೈಲ್ವೆ ಸಚಿವೆಯಾಗಿ ಮತ್ತು 2004ರಲ್ಲಿ ಕಲ್ಲಿದ್ದಲು ಖಾತೆ ಸಚಿವೆಯಾಗಿ, ಅನುಭವಗಳಿಸಿದ ಮಮತಾ, 2009ರಲ್ಲಿ ನಡೆದ ಚುನಾವಣೆಯಲ್ಲಿ ಎನ್.ಡಿ.ಎ. ತೊರೆದು, ಸೋನಿಯಾ ನೇತೃತ್ವದ ಯು.ಪಿ.ಎ. ಮೈತ್ರಿಕೂಟಕ್ಕೆ ಬಂದು ಮತ್ತೇ ರೈಲ್ವೆ ಸಚಿವೆಯಾಗಿ ಅಧಿಕಾರ ಹಿಡಿದು ರಾಷ್ಟ್ರ ರಾಜಕಾರಣದ ಎಲ್ಲಾ ಮಗ್ಗುಲುಗಳನ್ನು ಅರಿತ ಪ್ರಬುದ್ಧೆ ಎಂಬುದು ಎಲ್ಲರ ಭಾವನೆಯಾಗಿತ್ತು.  ದುರಂತವೆಂದರೆ, 2011ರ ಮೇ ತಿಂಗಳಿನಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾದ ನಂತರದ ಮಮತಾ ಬ್ಯಾನರ್ಜಿಯವರ ಪ್ರತಿಹೆಜ್ಜೆ ಹಾಗೂ ನಿಲುವುಗಳು ಈಕೆಯ ಒಡಕಲು ವ್ಯಕ್ತಿತ್ವವನ್ನು (Split personality) ಪ್ರತಿಬಿಂಬಿಸುತ್ತಿವೆ.

ಕೊಲ್ಕತ್ತ ನಗರದ ಒಂದು ಮಧ್ಯಮ ವರ್ಗದ ಕುಟುಂಬದಿಂದ ಬಂದ ಮಮತಾ, ತನ್ನ ವಿದ್ಯಾರ್ಥಿ ಜೀವನದ ಬೀದಿ ಹೋರಾಟದಿಂದ ಆರಂಭಿಸಿದ ರಾಜಕೀಯ ಪಯಣದಲ್ಲಿ, ಅವಿವಾಹಿತೆಯಾಗಿ ಉಳಿದು ಸಂಸದೆಯಾಗಿ, ಕೇಂದ್ರ ಸಚಿವೆಯಾಗಿ, ಅತಿ ಚಿಕ್ಕ ವಯಸ್ಸಿನಲ್ಲಿ ಜನಸಾಮಾನ್ಯರ ನೋವಿಗೆ ಸ್ಪಂದಿಸುತ್ತಾ  ಬುದ್ಧಿವಂತರ ನೆಲವಾದ ಪಶ್ಚಿಮ ಬಂಗಾಳದಲ್ಲಿ ತನ್ನದೇ ಛಾಪು ಮೂಡಿಸಿದ ಹಾಗೂ ಅಪರೂಪದ ದಿಟ್ಟ ಹೆಣ್ಣು ಮಗಳು. ತನ್ನ ವ್ಯಕ್ತಿತ್ವದ ನ್ಯೂನತೆಗಳ ನಡುವೆ ಸೂರ್ಯ ಮುಳಗದ ನಾಡು ಎಂದು ಇಂಗ್ಲೆಂಡ್‌ಅನ್ನು ಕರೆವ ಹಾಗೆ ಕೆಂಪುಭಾವುಟವನ್ನು ಕೆಳಕ್ಕೆ ಇಳಿಸಲಾಗದ ರಾಜ್ಯ ಎಂಬ ಖ್ಯಾತಿಗೆ ಒಳಗಾಗಿದ್ದ ಪಶ್ಚಿಮ ಬಂಗಾಳಕ್ಕೆ, ಮತ್ತು ಅಲ್ಲಿನ ಎಡಪಂಥೀಯ ಚಿಂತರಿಗೆ ಈ ಶತಮಾನದ ರಾಜಕೀಯದಲ್ಲಿ ಅತಿ ದೊಡ್ಡ ಶಾಕ್ ಕೊಟ್ಟ ಛಲಗಾತಿ ಕೂಡ ಹೌದು.

ಈಕೆಯ ಹೋರಾಟ ಮತ್ತು ಇತಿಹಾಸ ಬಲ್ಲವರಿಗೆ ಇದು ಅನಿರೀಕ್ಷಿತ ಘಟನೆಯೇನಲ್ಲ. ಮಮತಾ ಬ್ಯಾನರ್ಜಿಯ ಆತ್ಮ ಕಥನ ಮರೆಯಲಾಗದ ನೆನಪುಗಳು (My Unforgettable Memories) ಕೃತಿಯನ್ನು ಓದಿದವರಿಗೆ, ಈಕೆಯ ಬಾಲ್ಯ, ಕಾಲೇಜು ದಿನಗಳ ವಿದ್ಯಾರ್ಥಿ ಸಂಘಟನೆಯ ನಾಯಕಿಯಾಗಿ ಹೋರಾಟದ ವೇಳೆ ಕಮ್ಯೂನಿಷ್ಟ್ ಕಾರ್ಯಕರ್ತರಿಂದ ತಿಂದ ಹೊಡೆತಗಳು, ಅನುಭವಿಸಿದ ಹಿಂಸೆ, ಹಾಗೂ ಜೈಲು ವಾಸ ಇವೆಲ್ಲವೂ ಪರೋಕ್ಷವಾಗಿ ಗಟ್ಟಿಗಿತ್ತಿಯನ್ನಾಗಿ ಮಾಡುವುದರ ಮೂಲಕ ಮಮತಾ ಬ್ಯಾನರ್ಜಿಗೆ ಸ್ಟ್ರೀಟ್ ಪೈಟರ್ ಎಂಬ ಬಿರುದನ್ನು ತಂದುಕೊಟ್ಟವು.

ಕಾಂಗ್ರೆಸ್ ಪಕ್ಷದ ಜೊತೆಗಿನ ರಾಜಕೀಯ ಭಿನ್ನಾಭಿಪ್ರಾಯಗಳಿಂದ ಪಕ್ಷ ತೊರೆದು, ತನ್ನದೇ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಕಟ್ಟಿದಾಗ ಮಮತಾರವರ ಯಶಸ್ಸನ್ನು ಯಾರೂ ಊಹಿಸಿರಲಿಲ್ಲ. ಇದೊಂದು ಅತೃಪ್ತ ರಾಜಕೀಯ ಮಹಿಳೆಯೊಬ್ಬಳ ರಾಜಕೀಯ ವರಸೆ ಇರಬಹುದೆಂದು ಎಂದು ಎಲ್ಲರೂ ವಿಶ್ಲೇಷಿಸಿದ್ದರು. ಹಾಗೆ ನೋಡಿದರೆ, ಮಮತಾ ಬ್ಯಾನರ್ಜಿಯ ರಾಜಕೀಯ ಯಶಸ್ಸಿನ ಹಿಂದೆ ಪರೋಕ್ಷವಾಗಿ ಕಮ್ಯೂನಿಷ್ಟ್ ಪಕ್ಷದ ಪಾತ್ರ ಕೂಡ ಇದೆ.

1974ರಲ್ಲಿ ಸಿದ್ಧಾರ್ಥ ಶಂಕರ್ ರಾಯ್ ನೇತೃತ್ವದ ಕಾಂಗ್ರೆಸ್  ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಿ, ಗದ್ದುಗೆ ಏರಿದ ಜ್ಯೋತಿ ಬಸು ನೇತೃತ್ವದ ಕಮ್ಯೂನಿಷ್ಟ್ ಸರ್ಕಾರ ಸುಧೀರ್ಘ ಮೂರುವರೆ ದಶಕಗಳ ಕಾಲ ಪಶ್ಚಿಮ ಬಂಗಾಳವನ್ನು ಆಳಿತು. ವೈಯಕ್ತಿಕ ನೆಲೆಯಲ್ಲಿ, ಹಾಗೂ ಸಾಮಾಜಿಕ ಮತ್ತು ರಾಜಕೀಯವಾಗಿ ಶುದ್ಧ ಚಾರಿತ್ರ್ಯದ ವ್ಯಕ್ತಿತ್ವ ಹೊಂದಿದ್ದ ಜ್ಯೋತಿ ಬಸುರವರು ಪಶ್ಚಿಮ ಬಂಗಾಳ ಮಾತ್ರವಲ್ಲ, ಇಡೀ ಭಾರತದಲ್ಲಿ ಒಬ್ಬ ಶ್ರೇಷ್ಠ ರಾಜಕೀಯ ಮುತ್ಸದಿ ಎಂಬ ಕೀರ್ತಿಗೆ ಪಾತ್ರರಾಗಿದ್ದರು. ಇದು ಪಕ್ಷದ ನಿರಂತರ ಗೆಲುವಿಗೆ ಸಹಕಾರಿಯಾಯಿತು.

ಕಮ್ಯೂನಿಷ್ಟ್ ಪಕ್ಷದ ವರ್ತಮಾನದ ದುರಂತವೆಂದರೆ, ಕಾಲ ಕಾಲಕ್ಕೆ ಬದಲಾಗುತ್ತಿರುವ ರಾಜಕೀಯ ಚಿಂತನೆಗಳನ್ನ ಪಕ್ಷದ ಆಶಯ ಮತ್ತು ಗುರಿಗಳಿಗೆ ಧಕ್ಕೆಯಾಗದಂತೆ ಅಳವಡಿಸಿಕೊಳ್ಳವಲ್ಲಿ ದಯನೀಯವಾಗಿ ಸೋತಿತು. ಇದು ಕಮ್ಯೂನಿಷ್ಟ್ ಪಕ್ಷದಲ್ಲಿ ಹೊಸ ತಲೆಮಾರಿನ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಭ್ರಮನಿರಸನವನ್ನುಂಟು ಮಾಡಿತು. ಜ್ಯೋತಿ ಬಸು ನೆರಳಲ್ಲಿ ಬೆಳೆದು ಬಂದ ಬುದ್ಧದೇಬ್ ಭಟ್ಟಾಚಾರ್ಯ ಮುಖ್ಯಮಂತ್ರಿ ಸ್ಥಾನಕ್ಕೆ ಬರುವುದರೊಳಗೆ ಪಶ್ಚಿಮ ಬಂಗಾಳದಲ್ಲಿ ಕಮ್ಯೂನಿಷ್ಟ್ ಪಕ್ಷ ಒಡೆದ ಮನೆಯಂತಾಗಿತ್ತು.

ಒಂದು ಕಡೆ ಕಾರ್ಮಿಕರು ಹಾಗೂ ರೈತರು ಮತ್ತು ಕೃಷಿ ಕೂಲಿ ಕಾರ್ಮಿಕರ ಪರ ಧ್ವನಿ ಎತ್ತುತ್ತಾ, ಮತ್ತೊಂದು ಕಡೆ ಜಾಗತೀಕರಣವನ್ನು ವಿರೋಧಿಸುತ್ತಲೇ, ಬಂದ ಪಶ್ಚಿಮ ಬಂಗಾಳದ ಕಮ್ಯೂನಿಷ್ಟ್ ಸರ್ಕಾರ 2007ರಲ್ಲಿ ನಂದಿ ಗ್ರಾಮದಲ್ಲಿ ಇಂಡೋನೇಷಿಯಾದ ಸಲೀಮ್ ಗ್ರೂಪ್ಸ್ ಕಂಪನಿಗೆ ಫಲವತ್ತಾದ 10 ಸಾವಿರ ಎಕರೆ ಭೂಮಿಯನ್ನ ಕೊಡುಗೆಯಾಗಿ ನೀಡಲು ಮುಂದೆ ಬರುವ ಮೂಲಕ ತನ್ನ ದ್ವಂದ್ವ ನೀತಿಯನ್ನು ಪ್ರದರ್ಶಿಸಿತು. ಇದನ್ನು ಪ್ರತಿಭಟಿಸಿದ ರೈತರ ಮೇಲೆ ತನ್ನ ಪಕ್ಷದ ಕಾರ್ಯಕರ್ತರನ್ನು ಛೂ ಬಿಟ್ಟಿದ್ದಲ್ಲದೆ, ಪೋಲಿಸರ ಗೋಲಿಬಾರ್ ಮೂಲಕ 14 ಮಂದಿ ರೈತರ ಹತ್ಯೆಗೆ ಕಾರಣವಾಯಿತು.

ಇದೊಂದು ಘಟನೆ ಮಮತಾ ಬ್ಯಾನರ್ಜಿಗೆ ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕಾರಣಕ್ಕೆ ಮರಳಲು ಪ್ರೇರಣೆಯಾಯಿತು. ನಂತರ ಮುಖ್ಯಮಂತ್ರಿ ಬುದ್ಧದೇಬ್ ಭಟ್ಟಾಚಾರ್ಯ 2008ರಲ್ಲಿ ಟಾಟಾ ಕಂಪನಿಯ ನ್ಯಾನೊ ಕಾರು ತಯಾರಿಕೆಗೆ ಸಿಂಗೂರು ಬಳಿ 997 ಎಕರೆ ಪ್ರದೇಶವನ್ನು ರೈತರಿಂದ ಬಲವಂತವಾಗಿ 115 ಕೋಟಿ ರೂ.ಗಳಿಗೆ ಖರೀದಿಸಿ ಕೇವಲ 20 ಕೋಟಿ ರೂಪಾಯಿಗೆ ಟಾಟಾ ಕಂಪನಿಗೆ ನೀಡಿದಾಗಲೇ ಪಶ್ಚಿಮ ಬಂಗಾಳದ ಮತದಾರರು ಕಮ್ಯೂನಿಷ್ಟ್ ಸರ್ಕಾರದ ಮರಣ ಶಾಸನವನ್ನು ಬರೆದಿಟ್ಟರು.

ಈ ಎಲ್ಲಾ ಘಟನೆಗಳನ್ನು ಪರಾಮರ್ಶಿಸಿದಾಗ ಮಮತಾರವರ ತೃಣಮೂಲ ಕಾಂಗ್ರೇಸ್ ಪಕ್ಷದ ಯಶಸ್ಸಿನ ಹಿಂದೆ ಕಮ್ಯೂನಿಷ್ಟ್ ಪಕ್ಷದ ಕೊಡುಗೆಯೂ ಇದೆ ಎಂದು ತೀರ್ಮಾನಿಸಬಹುದು. ಹೀಗೆ ಪಶ್ಚಿಮ ಬಂಗಾಳದಲ್ಲಿ ಅನೀರಿಕ್ಷಿತವಾಗಿ ಮಮತಾ ಬ್ಯಾನರ್ಜಿ ಅಧಿಕಾರದ ಗದ್ದುಗೆಗೆ ಏರಿದಾಗ ಅಲ್ಲಿನ ಜನತೆ ಈಕೆಯ ಬಗ್ಗೆ ಭಾರಿ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಕೇವಲ 15 ತಿಂಗಳ ಅವಧಿಯಲ್ಲಿ ಅವರ ಕನಸುಗಳು ಛಿದ್ರಗೊಂಡಿವೆ.

ಮುಖ್ಯಮಂತ್ರಿಯಾದ  ಕೇವಲ 40 ದಿನಗಳಲ್ಲಿ ತನ್ನ ಸಹೋದರ ಸಂಬಧಿಯೊಬ್ಬನನ್ನು ಪೋಲಿಸರು ಬಂಧಿಸಿದರು ಎಂಬ ಏಕೈಕ ಕಾರಣಕ್ಕೆ ತಾನು ಒಂದು ರಾಜ್ಯದ ಮುಖ್ಯಮಂತ್ರಿ ಎಂಬುದನ್ನು ಮರೆತು, ತನ್ನ ಸ್ಥಾನದ ಘನತೆಯನ್ನೂ ಲೆಕ್ಕಿಸದೆ, ಠಾಣೆಗೆ ನುಗ್ಗಿ ಪೊಲೀಸರ ಮೇಲೆ ದಮಕಿ ಹಾಕಿದಾಗಲೇ ಮಮತಾ ಒಬ್ಬ ಅಪ್ರಭುದ್ಧ ಮಹಿಳೆ ಎಂದು ಪಶ್ಚಿಮ ಬಂಗಾಳದ ಜನತೆ ನಿರ್ಧರಿಸಿದ್ದರು. ಸೋಜಿಗದ ಸಂಗತಿಯೆಂದರೆ, ಇಂತಹ ಅವಿವೇಕದ ನಡುವಳಿಕೆಗಳು ಮಮತಾ ಬ್ಯಾನರ್ಜಿಯಿಂದ ಮುಂದುವರಿಯುತ್ತಲೇ ಹೋದವು. ತನ್ನ ವ್ಯಂಗ್ಯ ಚಿತ್ರವನ್ನು ವಿಶ್ವ ವಿದ್ಯಾಲಯದ ಪ್ರಾಧ್ಯಾಪಕನೊಬ್ಬ (ಅಖಿಲೇಶ್ ಮಹಾಪಾತ್ರ) ಅಂತರ್ಜಾಲದಲ್ಲಿ ಗೆಳೆಯರೊಂದಿಗೆ ಹಂಚಿಕೊಂಡ ಎಂಬ ಕಾರಣಕ್ಕಾಗಿ ಆತನ್ನು ಜೈಲಿಗೆ ಅಟ್ಟಿದ ಮಮತಾ ಅಷ್ಟಕ್ಕೂ ಸುಮ್ಮನಾಗದೆ, ಬಂಧನದ ವಿರುದ್ಧ ಪ್ರತಿಭಟಿಸಿದವರ ಜೊತೆ ಮತ್ತೊಬ್ಬ ಪ್ರಾಧ್ಯಾಪಕ (ಸುಬ್ರತೊ ಸೇನ್ ಗುಪ್ತಾ) ಪಾಲ್ಗೊಂಡಿದ್ದಕ್ಕೆ ಆತನನ್ನೂ ಜೈಲಿಗೆ ಕಳಿಸಿ ತಾನು ಸರ್ವಾಧಿಕಾರಿಯ ಮುಂದುವರಿದ ಸಂತತಿ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟರು.

ಸಾರ್ವಜನಿಕ ರಂಗದಲ್ಲಿ ತೊಡಗಿಸಿಕೊಂಡ ಒಬ್ಬ ವ್ಯಕ್ತಿಗೆ ಅವಶ್ಯಕವಾಗಿ ಇರಬೇಕಾದ ಮುಖ್ಯ ಅರ್ಹತೆಗಳೆಂದರೆ, ತಾಳ್ಮೆ ಮತ್ತು ವಿವೇಚನೆ. ಇವೆರೆಡು ಅಂಶಗಳು ಮಮತಾ ಎಂಬ ಹೋರಾಟಗಾರ್ತಿಯ ಬದುಕಿನಲ್ಲಿ ಅಪರಿಚಿತ ಶಬ್ಧಗಳಾಗಿವೆ. ತನ್ನನ್ನು ಪ್ರಶ್ನಿಸಿದವರೆಲ್ಲಾ ಕಮ್ಯೂನಿಷ್ಟರು ಎಂಬ ಭ್ರಮೆ ಅವರನ್ನು ಆವರಿಸಿಕೊಂಡಿದೆ. ಇಂಗ್ಲಿಷ್ ಸುದ್ಧಿ ಚಾನಲ್ ಒಂದು ಏರ್ಪಡಿಸಿದ್ದ ಚರ್ಚೆ ಹಾಗೂ ಸಂದರ್ಶನದ ವೇಳೆಯಲ್ಲಿ ಪ್ರಶ್ನೆ ಕೇಳಿದ ವಿದ್ಯಾರ್ಥಿಗಳನ್ನು ಕಮ್ಯೂನಿಷ್ಟರು ಎಂದು ಜರಿದು, ನೇರಪ್ರಸಾರದ ಕಾರ್ಯಕ್ರಮದಿಂದ ಎದ್ದು ಹೋದ ಇದೇ ಮಮತಾ ಕಳೆದ ವಾರ ಸಾರ್ವಜನಿಕ ಸಭೆಯಲ್ಲಿ ಪ್ರಶ್ನೆ ಕೇಳಿದ ರೈತನನ್ನೂ ಜೈಲಿಗೆ ದೂಡಿದ್ದಾರೆ.

ಇದು ಸಾಲದಂಬಂತೆ ಈಗ ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ದೂರುವುದರ ಮೂಲಕ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ಮಮತಾ ಬ್ಯಾನರ್ಜಿಯವರ ಈ ಮಾತಿಗೆ ಕಾರಣವಾದದ್ದು ಎರಡು ಪ್ರಮುಖ ಘಟನೆಗಳು. ಒಂದು, ಟಾಟಾ ಕಂಪನಿಯ ಒಡೆತನದಲ್ಲಿರುವ ಸಿಂಗೂರು ಭೂಮಿಯನ್ನು ರೈತರಿಗೆ ವಾಪಸ್ ನೀಡಲು ನಿರ್ಧರಿಸಿ 2011ರಲ್ಲಿ ಪಶ್ಚಿಮ ಬಂಗಾಳ ವಿಧಾನ ಸಭೆಯಲ್ಲಿ ಸಿಂಗೂರು ಮಸೂದೆಯೊದನ್ನು ಜಾರಿಗೆ ತಂದರು. ಇದನ್ನು ಟಾಟಾ ಕಂಪನಿ ಕೊಲ್ಕತ್ತ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಕಳೆದ ಜೂನ್ 22ರಂದು ತೀರ್ಪು ನೀಡಿದ ಅಲ್ಲಿನ ಉಚ್ಛ ನ್ಯಾಯಾಲಯ ಸರ್ಕಾರದ ಮಸೂದೆಯನ್ನು ರದ್ದುಗೊಳಿಸಿ, ಟಾಟಾ ಕಂಪನಿ ಪರವಾಗಿ ತೀರ್ಪು ನೀಡಿತು. ಇದರ ಜೊತೆಗೆ ಗಾಯದ ಮೇಲೆ ಬರೆ ಎಳೆದಂತೆ, ಇದೇ ಆಗಸ್ಟ್ 13ರಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಪ್ರಾಧ್ಯಾಪಕರನ್ನು ಬಂಧಿಸಿದ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಗೊಳಿಸಿ, ಅವರಿಬ್ಬರಿಗೂ ಪರಿಹಾರ ನೀಡುವಂತೆ ಮಮತಾ ಸರ್ಕಾರಕ್ಕೆ ಆದೇಶಿಸಿದೆ. ಈ ಘಟನೆಗಳು ಮಮತಾ ಬ್ಯಾನರ್ಜಿಯನ್ನು  ಅಕ್ಷರಶಃ ಬಂಗಾಳದ ಕಾಳಿಯನ್ನಾಗಿ ಪರಿವರ್ತಿಸಿದೆ.

ತಾನು ಇಟ್ಟ ತಪ್ಪು ಹೆಜ್ಜೆಗಳನ್ನು ಸರಿಪಡಿಸಿಕೊಳ್ಳುವ ತಾಳ್ಮೆಯಾಗಲಿ, ವಿವೇಚನೆಗಳನ್ನು ಮಮತಾ ಬ್ಯಾನರ್ಜಿ ಮೈಗೂಡಿಸಕೊಳ್ಳದಿದ್ದರೆ, ಮುಂದಿನ ಚುನಾವಣೆಯಲ್ಲಿ ಈಕೆ ಇತಿಹಾಸದ ಕಸದ ಬುಟ್ಟಿಗೆ ಸೇರುವುದು ಖಚಿತ.  ಆದರೆ, ಸುಧಾರಣೆಯಾಗುವ ಯಾವ ಲಕ್ಷಣಗಳು ಮಮತಾ ಬ್ಯಾನರ್ಜಿಯ ವರ್ತನೆಯಲ್ಲಿ ಕಂಡು ಬರುತ್ತಿಲ್ಲ. ಅದೇ ಪಶ್ಚಿಮ ಬಂಗಾಳದ ಜನತೆಯ  ದುರಂತ.

ಈ ದುಷ್ಕೃತ್ಯವು ಈ ಮಟ್ಟದಲ್ಲಿ ನಮ್ಮನ್ನು ಘಾಸಿಗೊಳಿಸುವುದೆಂದು ನಾವೆಂದೂ ಧ್ಯಾನಿಸಿರಲಿಲ್ಲ


-ಬಿ. ಶ್ರೀಪಾದ್ ಭಟ್


ದ್ವೀದೆನ್ ಬ್ರಹ್ಮ ಶಾಲಾ ದಿನಗಳಿಂದಲೂ ನನ್ನ ಆತ್ಮೀಯ ಸ್ನೇಹಿತನಾಗಿದ್ದ. ನಾಲ್ಕನೇ ತರಗತಿಯಲ್ಲೇ ನಮಗೆಲ್ಲ ತನ್ನ ಪುಟ್ಟ ಪುಸ್ತಕದಿಂದ ಜಾತಕಗಳನ್ನು ಕುರಿತು ಓದಿ ವಿವರಿಸುತ್ತಿದ್ದ. ಈತನಿಗೆ ಬ್ಲಾಕ್ ಮ್ಯಾಜಿಕ್ ಬಗೆಗೆ ಮೋಹವಿತ್ತು. ಎಂಟನೇ ತರಗತಿಯಲ್ಲಿದ್ದಾಗ ನನಗೆ ಮೇರಿ ಶೆಲ್ಲಿಯ ಪುಸ್ತಕವನ್ನು ಕಾಣಿಕೆಯಾಗಿ ನೀಡಿದ್ದ. ಭವಿಷ್ಯದಲ್ಲಿ ಇಂಜಿನಿಯರ್ ಆಗುವುದನ್ನು ತಿರಸ್ಕರಿಸಿ ಬದಲಾಗಿ ಫ್ಯಾಷನ್ ಡಿಸೈನರ್ ಆಗುವ ಬಯಕೆಯನ್ನು ಹೊಂದಿದ್ದ. ಅಂದಿನ ಶಾಲಾ ದಿನಗಳಿಂದ ಹಿಡಿದು ಇಂದಿನ ಕಾಲೇಜಿನ ವರ್ಷಗಳವರೆಗೂ ನಾವಿಬ್ಬರು ಪ್ರಾಣ ಸ್ನೇಹಿತರಾಗಿದ್ದೇವೆ. ಬ್ರಹ್ಮನಿಗೆ ಜನಪದ ಹಾಡುಗಳ ಬಗೆಗೆ ತೀವ್ರವಾದ ಹುಚ್ಚಿತ್ತು. ನಾವಿಬ್ಬರೂ ಫೋನಿನಲ್ಲಿ ಮಾತನಾಡುವಾಗ ಈ ಜನಪದ ಹಾಡುಗಳನ್ನು ಕುರಿತಾಗಿ  ಮಾತಾಡಿಕೊಳ್ಳುತ್ತಿದ್ದೆವು. ಇದಕ್ಕೆ ಸಂಬಂಧಪಟ್ಟ ಅನೇಕ ವಿಡಿಯೋ ದೃಶ್ಯಗಳನ್ನು ಈ ಮೇಲ್ ಮೂಲಕ ವಿನಿಮಯ ಮಾಡಿಕೊಳ್ಳುತ್ತಿದ್ದೆವು. ಈ ಸಂಗೀತದ ಮೇಲಿನ ನಮ್ಮಿಬ್ಬರ ಸಮಾನ ಪ್ರೇಮವೇ ನಮ್ಮ ನಡುವಿನ ವಿಭಿನ್ನ ಧರ್ಮಗಳ ಕಂದಕವನ್ನು ಅಳಿಸಿಹಾಕಿತ್ತು. ನಾವಿಬ್ಬರೂ ಬೇರೆ ಬೇರೆ ಧರ್ಮಗಳಿಗೆ ಸೇರಿದ್ದೆವೆಂದೂ ನಮಗೆಂದೂ ಅನಿಸಿರಲೇ ಇಲ್ಲ. ನಮ್ಮಿಬ್ಬರಿಗೂ ನಮ್ಮ ಧರ್ಮದ ಐಡೆಂಟಿಟಿ ಇರಲೇ ಇಲ್ಲ. ಅಂದಿಗೂ ಮತ್ತು ಇಂದಿಗೂ ಸಹ.

ಬೋಡೋಲ್ಯಾಂಡಿನ ಧುಬ್ರಿಯಲ್ಲಿರುವ ಆತನ ಮನೆಗೆ ಹೋದಾಗಲೆಲ್ಲ ‘ಬ್ರಹ್ಮ’ನ ತಾಯಿಯು ನನ್ನನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಿದ್ದರು ಅಲ್ಲದೆ ನಮಗೆ ರುಚಿರುಚಿಯಾದ ಮಟನ್ ಊಟವನ್ನು ಬಡಿಸುತ್ತಿದ್ದರು. ನಾನು ಮತ್ತು ಬ್ರಹ್ಮ ದೆಹಲಿಯಲ್ಲಿದ್ದಾಗಲೆಲ್ಲ ದಕ್ಷಿಣ ದೆಹಲಿಯಲ್ಲಿರುವ ಅವರ ಚಿಕ್ಕಮ್ಮನ ಮನೆಗೆ ಹೋಗುತ್ತಿದ್ದೆವು. ಅವರು ಸಹ ನನ್ನನ್ನು ಅತ್ಯಂತ ಆತ್ಮೀಯತೆಯಿಂದ ತಮ್ಮ ಮನೆಮಗನಂತೆ ಕಾಣುತ್ತಿದ್ದರು. ಆ ಸಂದರ್ಭಗಳಲ್ಲಿ ಬ್ರಹ್ಮನ ಚಿಕ್ಕಮ್ಮನವರು ತಮ್ಮ ಕಾಲೇಜಿನ ದಿನಗಳಲ್ಲಿ ಪ್ರತಿಮಾ ಪಾಂಡೆ ಬರೂವ ಅವರ ಹಾಡುಗಳನ್ನು ತಾವೆಲ್ಲ ರೇಡಿಯೋದಲ್ಲಿ ಮೈಮರೆತು ಕೇಳುತ್ತಿದ್ದದ್ದನ್ನು ಭಾವುಕತೆಯಿಂದ ನೆನೆಸಿಕೊಳ್ಳುತ್ತಿದ್ದರು. ಈ ಪದ್ಮಶ್ರೀ ಅವಾರ್ಡ್ ಪಡೆದ ಅಸ್ಸಾಮೀ ಪ್ರತಿಮಾ ಪಾಂಡೆಯ ಬಗೆಗೆ ಭಾವುಕತೆಯಿಂದ ವಿವರಿಸುತ್ತಿದ್ದರು. ಆಗ ನಾವೆಲ್ಲ ಮನುಷ್ಯನ ದೇಹದ ಅಸ್ಥಿರತೆಯ ಬಗೆಗೆ ಚರ್ಚಿಸುತ್ತಿದ್ದೆವು. ಆದರೆ ಆಗ ನಮಗೆಲ್ಲ ಒಂದು ಕ್ಷಣವೂ ಮುಂಬರುವ ಭಯೋತ್ಪಾದನೆಯ ಕರಿನೆರಳಿನ ಸುಳಿವು ದೊರೆತಿರಲಿಲ್ಲ ಹಾಗೂ ಅದರ ಚಿಂತನೆಗಳೂ ನಮ್ಮ ಮನಸ್ಸಿನಲ್ಲಿ ಬಂದಿರಲೇ ಇಲ್ಲ.

ಆದರೆ ಮೊನ್ನೆ ಅಸ್ಸಾಮಿನ ಬೋಡೋಲ್ಯಾಂಡಿನಲ್ಲಿ ಜನಾಂಗೀಯ ಗಲಭೆಗಳು ಸ್ಪೋಟಗೊಂಡಾಗ ಈ ನನ್ನ ಆತ್ಮೀಯ ಜೀವದ ಗೆಳೆಯ ದ್ವೀದೆನ್ ಬ್ರಹ್ಮನ ಸಂಸಾರವು ಧುಬ್ರಿಯಲ್ಲಿರುವ ತಮ್ಮ ಮನೆಯನ್ನು ತೊರೆದು ಓಡಿಹೋಗಬೇಕಾದಂತಹ ದುಸ್ಥಿತಿ ಉಂಟಾಯಿತು. ಈ ಬಂದರು ಪಟ್ಟಣದೊಂದಿಗಿನ ಕಳೆದ ಇಪ್ಪತ್ತು ವರ್ಷಗಳ ಸಂಬಂಧವನ್ನು ಅನಾಮತ್ತಾಗಿ ಕಡೆದುಕೊಳ್ಳಬೇಕಾದಂತಹ ದುರಂತವು ನಮಗೆಲ್ಲ ಅಪಾರ ನೋವನ್ನುಂಟು ಮಾಡಿತ್ತು. ಇದೇ ರೀತಿಯಾಗಿ ಬಾಂಗ್ಲ ಭಾಷೆ ಮಾತನಾಡುವ ಮುಸ್ಲಿಂ ಸಂಸಾರಗಳು ಈ ದುಷ್ರೃತ್ಯದಿಂದಾಗಿ  ತಮ್ಮ ಜೀವದ ಊರಾದ ಕೊಕ್ರಾಜಾರ್ ಪಟ್ಟಣದಿಂದ ಓಡಿಹೋಗಬೇಕಾಯಿತು. ಈ ಕೊಕ್ರಜಾರ್ ಪಟ್ಟಣದದೊಂದಿನ ಭಾವನಾತ್ಮಕವಾದ ಸಂಬಂಧವನ್ನು ಕಡೆದುಕೊಂಡು ಸದಾ ಅನುಮಾನಾಸ್ಪದವಾಗಿ ತಿರುಗುತ್ತ ತಮ್ಮ ನೆಲದಲ್ಲೆ ನಿರಾಶ್ರಿರಾಗುವ ಅಲ್ಲಿನ ಮುಸ್ಲಿಂರ ದುಸ್ಥಿತಿ ಮನಕಲಕುವಂತಹದ್ದು. ಅದೇ ರೀತಿಯ ಪರಿಸ್ಥಿತಿ ನನ್ನ ಸ್ನೇಹಿತ ದ್ವಿದಿಯ ಕುಟುಂಬದ್ದೂ ಸಹ. ನಾನು ದ್ವಿಯನ್ನು ಫೋನಿನಲ್ಲಿ ಮಾತನಾಡಿಸಿದಾಗ ಆತ ಅತ್ಯಂತ ಗದ್ಗದಿತನಾಗಿ ದುಃಖಿಸಿದ್ದು ನನ್ನನ್ನು ತಲ್ಲಣಗೊಳಿಸಿತು.

ಅಸ್ಸಾಮಿನ ಬೋಡೋ ಜಿಲ್ಲೆಯಲ್ಲಿನ ಜನಾಂಗೀಯ ಘರ್ಷಣೆಯಿಂದ 57 ಜನರು ತಮ್ಮ ಪ್ರಾಣ ಕಳೆದುಕೊಂಡರು. ಸುಮಾರು 4 ಲಕ್ಷ ಜನರು ನಿರಾಶ್ರಿತರಾಗಬೇಕಾಯಿತು. ಈ ಪ್ರತಿಯೊಬ್ಬ ನಿರಾಶ್ರಿತನಿಗೂ ತಾನು ಬಿಟ್ಟುಬಂದ ಊರಿನ ಕುರಿತಾಗಿ, ಅಲ್ಲಿನ ಸ್ನೇಹಿತರ ಕುರಿತಾಗಿ, ನೆರೆಹೊರೆಯವರ ಕುರಿತಾಗಿ, ದಿನನಿತ್ಯದ ಜಂಜಡದ ಕುರಿತಾಗಿ ನೆನಪುಗಳು ಆ ನಿರಾಶ್ರಿತರ ಶಿಬಿರದಲ್ಲಿ ಬಂದು ಅಪ್ಪಳಿಸುತ್ತಿದ್ದವು. ಆದರೆ ಹಿಂದೂ ಬಲಪಂಥೀಯರು ಈ ಜನಾಂಗೀಯ ಘರ್ಷಣೆಗೆ ಅನಗತ್ಯವಾಗಿ ಕೋಮು ಗಲಭೆಯ ಬಣ್ಣ ಹಚ್ಚಿದರು ಮತ್ತು ಅಸ್ಸಾಮಿ ಅಂಧಾಭಿಮಾನಿಗಳು ಈ ಗಲಭೆಗಳಿಗೆ ಬಾಂಗ್ಲಾ ದೇಶವಾಸಿಗಳ ಭಾರತ ದೇಶಕ್ಕೆ ಅಕ್ರಮ ವಲಸೆಯೇ ಕಾರಣವೆಂದು ಅಪಪ್ರಚಾರ ಹರಡಿದರು. ಇನ್ನು ಇಂಟರ್ನೆಟ್ ಹಿಂದೂಗಳು ಈ ಅಸ್ಸಾಮಿ ಅಂಧಾಭಿಮಾನಿಗಳೊಂದಿಗೆ ಸೇರಿಕೊಂಡು ಈ ಬಾಂಗ್ಲಾದೇಶದ ವಲಸೆಗಾರರನ್ನು ಗಡೀಪಾರು ಮಾಡಬೇಕು ಇಲ್ಲವೇ ಶಿಕ್ಷಿಸಬೇಕೆಂದು ಕಿರುಚಿತ್ತಿದ್ದರು. ಮನಮೋಹನ್ ಸಿಂಗ್ ಅವರು ಈ ಗಲಭೆಗಳು ದೇಶಕ್ಕೆ ಅಂಟಿದ ಕಳಂಕವೆಂದು ದುಖಿಸಿದರು. ಆದರೆ ಈ ಗಲಭೆಗಳಿಗೆ ತುತ್ತಾದ ಮುಸ್ಲಿಮರು ಬಾಂಗ್ಲಾದೇಶದ ಮುಸ್ಲಿಮರಲ್ಲವೆಂದು ನನಗೆ ಮತ್ತು ದ್ವಿದೇನ್ ಬ್ರಹ್ಮಗೆ ಸಂಪೂರ್ಣ ಮನವರಿಕೆಯಾಗಿತ್ತು. ಈ ಅಸ್ಸಾಮೀ ಮುಸ್ಲಿಮರಿಗೂ ಸಹ ತಮ್ಮ ಬೋಡೋ ಜನರಂತೆ ಈ ಜನಾಂಗೀಯ ಘರ್ಷಣೆಯ ಮೂಲಸೆಲೆ ಗೊತ್ತಾಗಲೇ ಇಲ್ಲ.

ಈ ಗಲಭೆಯ ಕೆಲವು ದಿನಗಳ ನಂತರ ನಾನು ಗೆಳೆಯ ದ್ವಿಯನ್ನು ಫೋನ್ ಮೂಲಕ ಮಾತನಾಡುತ್ತಿದ್ದಾಗ ಆತ ‘ತನ್ನ ಧುಬ್ರಿ ಹಳ್ಳಿಯಲ್ಲಿನ ಗ್ರಾಮಸ್ಥರು ಈ ಬೋಡೋ ಭಯೋತ್ಪಾದಕರು ಅಲ್ಲಿನ ಮುಸ್ಲಿಮರ ಮನೆಗಳನ್ನು ಸುಡುವುದನ್ನು ತಡೆದು ಈ ಗಲಭೆಕೋರರನ್ನು ಅಲ್ಲಿಂದ ಓಡಿಸಿದರೆಂದು’ ಹೇಳಿದ. ದ್ವಿ ದುಃಖಿಸುತ್ತ ಹೇಳಿದ್ದು  ಈ ವಿಷಯ ಅಲ್ಲಿನ ಜನರಿಗೆ ಮುಂಚಿತವಾಗಿಯೇ ಗೊತ್ತಾಗಿದ್ದರೆ ಯಾವುದೇ ರೀತಿಯ ಗಲಭೆಗಳು ಜರುಗುತ್ತಲೇ ಇರಲಿಲ್ಲ.

– ಇದು ದೆಹಲಿಯ ಜಾಕೀರ್ ಹುಸೇನ್ ಕಾಲೇಜಿನಲ್ಲಿ ಇಂಗ್ಲಿಷ್ ಭಾಷೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ 21ರ ವಯಸ್ಸಿನ ‘ರೈಫುಲ್ ಅಲೋಮ್ ರಹಮಾನ್’ ಎನ್ನುವ ಅಸ್ಸಾಮೀ ತರುಣ ಕಳೆದ ವಾರದ ‘ತೆಹಲ್ಕ’ ವಾರಪತ್ರಿಕೆಯಲ್ಲಿ ಬರೆದ ಲೇಖನವೊಂದರ ಭಾವಾನುವಾದ.

ಮೇಲಿನ ಮನಕಲುಕುವ ಮಾತುಗಳು 21 ವರ್ಷದ ತರುಣನಿಂದ ಬಂದಿದ್ದು. ಅ ಅಸ್ಸಾಮಿ ಮುಸ್ಲಿಂ ಯುವಕನಿಂದ. ಈ 21ರ ಯುವಕನಿಗೆ ಸಾಧ್ಯವಾದ ಕಾಮನ್‌ಸೆನ್ಸ್ ಮತ್ತು ಮಾನವೀಯ ದೃಷ್ಟಿಕೋನಗಳು ಈ ಫ್ಯಾಸಿಸ್ಟ್ ಸಂಘಪರಿವಾರಕ್ಕೆ ದಕ್ಕಲೇ ಇಲ್ಲ. 84ರ ಇಳಿ ವಯಸ್ಸಿನಲ್ಲಿರುವ ಹಿರಿಯ ರಾಜಕಾರಣಿ ‘ಅಡ್ವಾನಿ’ಯವರು ಮೇಲಿನ 21ರ ತರುಣ ರಹಮಾನನ ಜೀವಪರ ಮನಸ್ಥಿತಿಯನ್ನು ಮೈಗೂಡಿಸಿಕೊಂಡಿದ್ದರೆ ಕಳೆದ 25 ವರ್ಷಗಳಲ್ಲಿ ಇಂಡಿಯಾ ದೇಶದಲ್ಲಿನ ಕೋಮುಗಲಭೆಗಳ ತೀವ್ರತೆಯ ನೆಲೆಗಳು ಹುಟ್ಟಿಕೊಳ್ಳುತ್ತಲೇ ಇರಲಿಲ್ಲ!! ಆದರೆ ಆರ್.ಎಸ್.ಎಸ್. ಮೂಲವಾಸಿಗಳಾದ ’ಅಡ್ವಾನಿ’ಯವರಿಂದ ಈ ಭಿನ್ನ ಮಾನವೀಯ ಗುಣಗಳನ್ನು ನಿರೀಕ್ಷಿಸುವುದು ತಪ್ಪಾಗುತ್ತದೆ. ಇಂದಿಗೂ ಯಾವುದೇ ವಿವೇಚನೆ ಮತ್ತು ಆಳವಾದ ಗ್ರಹಿಕೆ ಇಲ್ಲದೆ ಈ ಸಂಘ ಪರಿವಾರದ ಸ್ವಯಂಸೇವಕರಾದ ‘ಅಡ್ವಾನಿ’ಯವರು ಸಾವಿರದ ಸಲ ಈ ಬಾಂಗ್ಲಾ ದೇಶದ ವಲಸೆಗರ ವಿರುದ್ಧವಾಗಿ ಗುಡುಗಿದರು. ಯಾವುದೇ ಪ್ರಜಾಪ್ರಭುತ್ವದ ದೇಶದಲ್ಲಿ 50 ವರ್ಷಗಳ ರಾಜಕೀಯ ಅನುಭವಿರುವ ರಾಜಕಾರಣಿಯೊಬ್ಬರು ಈ ಮಟ್ಟದಲ್ಲಿ ತಬ್ಬಲಿ ಮತ್ತು ಅನುಭವಿಯಾಗಿರುವ ಉದಾಹರಣೆ ನನಗಂತೂ ಕಾಣಿಸುತ್ತಿಲ್ಲ. ದಿಲ್ಲಿ ಮಾಯಾವಿಯ ಗದ್ದುಗೆಯ ಮೇಲೆ ಕಣ್ಣಿಟ್ಟಿರುವ ಈ ಅನನುಭವಿ, ಇಳಿವಯಸ್ಸಿನ ದಿಕ್ಕೆಟ್ಟ ರಾಜಕಾರಣಿ ಅಡ್ವಾನಿ ಮತ್ತು ಇದೇ ಮಾಯಾವಿ ದಿಲ್ಲಿಯ ಗದ್ದುಗೆಯನ್ನೇರುವ ಕನಸು ಕಾಣುತ್ತಿರುವ ಫ್ಯಾಸಿಸ್ಟ್, ಕೋಮುವಾದಿ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು 2014ರಲ್ಲಿ ಕೇಂದ್ರದಲ್ಲಿ ಅಧಿಕಾರವು ಇನ್ನೇದು ಕೈಗೆಟುಕಿದಂತೆಯೇ ಎಂದು ಜೊಲ್ಲು ಸುರಿಸುತ್ತಿರುವ ಮತೀಯವಾದಿ ಬಿಜೆಪಿ ಪಕ್ಷ ಇವರೆಲ್ಲರ ಈ ಸಂಗಮದ ಒಂದೇ ಸಮಾನ ಅಂಶ; ಅದು ದಿಲ್ಲಿ ಗದ್ದುಗೆ.

ಕಳೆದ 8 ವರ್ಷಗಳಲ್ಲಿ ಅನೇಕ ಕಾರಣಗಳಿಗಾಗಿ ಇಂಡಿಯಾ ದೇಶ ಕೋಮುಗಲಭೆಗಳಿಂದ ಮುಕ್ತವಾಗಿದೆ. ಇಂದಿನ ತಲೆಮಾರು ಕನಿಷ್ಟ ಈ ಕೋಮುವಾದದ ದಳ್ಳುರಿಯ ಬೆಂಕಿಯಿಂದ ದೂರ ಉಳಿದಿದೆ. ಆದರೆ ಈ ಸಂಘಪರಿವಾರದ ಕೋಮುವಾದಿಗಳ ಅಧಿಕಾರದ ದುರಾಸೆ ಮುಂದಿನ ದಿನಗಳಲ್ಲಿ ಭಾರತವನ್ನು ಮರಳಿ 90ರ ದಶಕದ ಕೋಮುಗಲಭೆಗಳ ದಿನಗಳಿಗೆ ತಂದು ಬಿಸಾಕಿದರೆ ಅದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಇಂದು ಈ ಅಸ್ಸಾಮಿನ ಜನತೆ ದಾಳಿಗೊಳಗಾಗುವ ಭೀತಿಯ ಗುಲ್ಲುಗಳಿಂದ ಭಯಭೀತರಾಗಿ ಕರ್ನಾಟಕದಿಂದಲೇ ಕಾಲ್ತೆಗೆಯುತ್ತಿರುವುದು ನಮಗಂತೂ ದಿಗ್ಭ್ರಮೆಗೊಳಿಸುತ್ತಿದೆ. ಇದರ ಪೂರ್ವಪರದ ಸತ್ಯಾಸತ್ಯತೆಗಳು ಬಯಲುಗೊಳ್ಳಬೇಕಾಗಿದೆ. ಇಸ್ಲಾಮ್ ಮೂಲಭೂತವಾದಿಗಳು ಭಾಗಿಯಾಗಿದ್ದಾರೆಂದು ಹೇಳಲಾಗುತ್ತಿರುವ ಈ ಇಡೀ ಅಸಂಗತ ದುರಂತ ದೃಶ್ಯದಲ್ಲಿ ಇಲ್ಲಿನ ಆರ್.ಎಸ್.ಎಸ್. ಮತ್ತು ಅವರ ಅಂಗ ಪಕ್ಷಗಳಾದ ಶ್ರೀರಾಮಸೇನೆಯ ನಡವಳಿಕೆಗಳು ಅತ್ಯಂತ ಅನುಮಾನಾಸ್ಪದವಾಗಿದೆ. ಇದು ಇನ್ನೊಂದು ಸಿಂಧಗಿ ಬಾವುಟ ಪ್ರಕರಣದ ಮರುಕಳಿಕೆಯೇ? ಇವರ ಮೊಸಳೆ ಕಣ್ಣೀರು ಇಂದು ನಗೆಪಾಟಲಿಗೀಡಾಗಿದೆ. ಈ ಮತೀಯವಾದಿಗಳು ಇನ್ನೂ ಎಷ್ಟು ವರ್ಷಗಳ ಕಾಲ ಈ ರೀತಿಯ ಸಂಚುಗಳನ್ನು, ಕುಟಿಲ ನೀತಿಗಳನ್ನು ಮುಂದುವರೆಸುತ್ತಾರೆ? ಎಲ್ಲಿಯವರೆಗೆ ಈ ನಾಡಿನ ಪ್ರಜ್ಞಾವಂತರು ತಮ್ಮ ಮರೆಮೋಸದ, ಆತ್ಮವಂಚನೆಯ ನಿದ್ರೆಯಿಂದ ಎಚ್ಚೆತ್ತುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ. ಎಲ್ಲಿಯವರೆಗೆ ನಮ್ಮ ಬುದ್ಧಿಜೀವಿಗಳು ತಮ್ಮ ಕಂಫರ್ಟ್ ಗುಹೆಗಳಿಂದ ಹೊರಬಂದು ಜನಸಾಮಾನ್ಯರನ್ನು ಬುದ್ಧಿಜೀವಿಗಳನ್ನಾಗಿ ರೂಪಿಸುವುದಿಲ್ಲವೋ ಅಲ್ಲಿಯವರೆಗೆ. ಎಲ್ಲಿಯವರೆಗೆ ನಾವೆಲ್ಲ ಜನಪರ, ಮಾನವೀಯ, ಪ್ರತಿರೋಧದ ನೆಲೆಯ ಸಾಂಸ್ಕೃತಿಕ ಯಜಮಾನ್ಯವನ್ನು ಸ್ಥಾಪಿಸುವುದಿಲ್ಲವೋ ಅಲ್ಲಿಯವರೆಗೆ.

(ಚಿತ್ರಕೃಪೆ: ndtv.com)