ಗುಜರಾತ್ ಹತ್ಯಾಕಾಂಡ (ಮೋದಿ ಮತ್ತು ಮುಖವಾಡ)


– ಡಾ.ಎನ್.ಜಗದೀಶ್ ಕೊಪ್ಪ


                                         
ಗುಜರಾತ್‌ನಲ್ಲಿ 2002 ರಲ್ಲಿ ಗೋದ್ರಾ ರೈಲು ನಿಲ್ದಾಣದ ಬಳಿ ಸಂಭವಿಸಿದ ಕರಸೇವಕರ ಹತ್ಯೆಗೆ ಪ್ರತಿಯಾಗಿ ಇಡೀ ರಾಜ್ಯಾದಂತ್ಯ ಹಿಂದೂ ಸಂಘಟನೆಗಳು ನಡೆಸಿದ ಹಿಂಸಾಚಾರ, ಕೊಲೆ, ಸುಲಿಗೆ, ನರಮೇಧ ಇಡೀ ಭಾರತ ಮಾತ್ರವಲ್ಲ, ಜಗತ್ತನ್ನೇ ಬೆಚ್ಚಿ ಬೀಳಿಸಿತ್ತು. ಆಗ ನರೇಂದ್ರಮೋದಿ ಎಂಬ ಗೋವಿನ ಮುಖವಾಡದ ವ್ಯಾಘ್ರ ಮುಖ್ಯಮಂತ್ರಿಯಾಗಿದ್ದುಕೊಂಡು ಇಂತಹ ಅಮಾನವೀಯ ನರಹತ್ಯೆಯನ್ನು ಬಹಿರಂಗವಾಗಿ ಪ್ರಾಯೋಜಿಸಿದ್ದು ರಹಸ್ಯದ ಸಂಗತಿಯಾಗಿ ಉಳಿದಿರಲಿಲ್ಲ.

ಜಗತ್ತಿನ ಶ್ರೇಷ್ಟ ಸುದ್ಧಿ ಮಾಧ್ಯಮ ಸಂಸ್ಥೆಗಳಾದ ರಾಯಿಟರ್ ಮತ್ತು ಅಸೋಷಿಯೇಟೆಡ್ ಪ್ರೆಸ್‌ನ ವರದಿಗಾರರು ಮತ್ತು ಛಾಯಾಚಿತ್ರ ಗ್ರಾಹಕರು ಅಹಮದಾಬಾದ್ ಸೇರಿದಂತೆ ಗುಜರಾತ್‌ನ ವಿವಿಧ ನಗರಗಳಲ್ಲಿ ವಿ.ಹೆಚ್.ಪಿ. ಮತ್ತು ಭಜರಂಗದಳ ಕಾರ್ಯಕರ್ತರು ನಡೆಸಿದ ಹತ್ಯಾಕಾಂಡವನ್ನು ಪರಿಣಾಮಕಾರಿಯಾಗಿ ದಾಖಲಿಸಿ ಜಗತ್ತಿನ ಮುಂದೆ ಇಟ್ಟರು.  ಭಾರತದ ಇತಿಹಾಸದಲ್ಲಿ ಕಂಡರಿಯದ ಸರಣಿ ಮಾನವ ಹತ್ಯೆಯ ಮನಕಲಕುವ ಇಂತಹ ಅಮಾನವೀಯ ಕೃತ್ಯಕ್ಕೆ ಗುಜರಾತ್‌ನ ಪೊಲೀಸರು ಮತ್ತು ಅಲ್ಲಿನ ರಾಜಕಾರಣಿಗಳು ಕೈ ಜೋಡಿಸಿದ್ದು ಕೂಡ ರಹಸ್ಯವಾಗಿ ಉಳಿದಿರಲಿಲ್ಲ. ಇದೆಲ್ಲವನ್ನೂ ಭಾರತದ ಮಾಧ್ಯಮ ಸೇರಿದಂತೆ ಜಗತ್ತಿನ ಮಾಧ್ಯಗಳು ಸಹ ಪ್ರತಿಬಿಂಬಿಸಿದ್ದವು.

ಅಧಿಕಾರದ ಗದ್ದುಗೆಗಾಗಿ ಧರ್ಮವನ್ನು ಆಯುಧವಾಗಿ ಬಳಸಿಕೊಳ್ಳುವ ಕೆಟ್ಟ ಇತಿಹಾಸವಿರುವ ಬಿ.ಜೆ.ಪಿ. ಪಕ್ಷವು ಈ ಸಂದರ್ಭದಲ್ಲಿ ರಣಹದ್ದಿನಂತೆ ಅಲ್ಪ ಸಂಖ್ಯಾತರ ಮೇಲೆ ಎರಗಿ ಬಿದ್ದಿತು. ಒಂದು ರಾಜ್ಯದ ಮುಖ್ಯ ಮಂತ್ರಿಯಾಗಿ ಎಲ್ಲಾ ಕೋಮುಗಳ ಜೀವ ರಕ್ಷಿಸಬೇಕಾಗಿದ್ದ ನರೇಂದ್ರ ಮೋದಿ, ರಕ್ಕಸ ಪಡೆಯ ನಾಯಕನಂತೆ ಹಿಂಸಾಚಾರದ ಹಿಂದೆ ನಿಂತಿದ್ದು ರಾಜಕೀಯ ಇತಿಹಾಸದ ಕಪ್ಪುಚುಕ್ಕೆಗಳಲ್ಲಿ ಒಂದು. ಇದು ಇವತ್ತಿಗೂ ಪ್ರತಿಯೊಬ್ಬ ಪ್ರಜ್ಞಾವಂತ ಭಾರತೀಯನಿಗೆ ಕಾಡುವ ನೋವು.

ಈ ಘಟನೆಯ ನಂತರ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಮೋದಿ ನಡೆಸಿದ ತಂತ್ರ, ಹಾಕಿದ ವೇಷ, ತೊಟ್ಟ ಮುಖವಾಡಗಳು ಲೆಕ್ಕಕ್ಕಿಲ್ಲ. ಆದರೆ, ಮೋದಿಯ ಎಲ್ಲಾ ತಂತ್ರಗಾರಿಕೆಯ ವಿರುದ್ಧ ನಿರಂತರವಾಗಿ ಸಂತ್ರಸ್ತರ ಪರ ಹೋರಾಟ ನಡೆಸಿದ ಒಬ್ಬ ಮಹಿಳೆ (ತೀಸ್ತಾ ಸೆತಲ್ವಾಡ್) ಮತ್ತು ಪ್ರಸಿದ್ಧ ಪತ್ರಕರ್ತ ತೇಜ್ ಪಾಲ್ ನೇತೃತ್ವದ ತೆಹಲ್ಕಾ ಎಂಬ ಇಂಗ್ಲಿಷ್ ನಿಯತಕಾಲಿಕೆಯ ಹೋರಾಟದ ಫಲವಾಗಿ ಗುಜರಾತ್ ನರಮೇಧದ ಸಂತ್ರಸ್ತರಿಗೆ ಅಂತಿಮವಾಗಿ ನ್ಯಾಯ ದೊರೆತಿದೆ. ಗುಜರಾತ್ ಮುಖ್ಯಮಂತ್ರಿ ನರೆಂದ್ರ ಮೋದಿಯ ಮುಖವಾಡ ಕಳಚಿಬಿದ್ದಿದೆ.

ಶುಕ್ರವಾರ ಗುಜರಾತ್‌ನ ಅಹಮದಾಬಾದ್‌ನಲ್ಲಿ ಗೋಧ್ರಾ ಘಟನೆಯ ನಂತರ ನಡೆದ ಹಿಂಸೆ ಮತ್ತು ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಸ್ಥಾಪಿತವಾಗಿದ್ದ ವಿಶೇಷ ನ್ಯಾಯಾಲಯ 2002ರಲ್ಲಿ ನರೋಡ ಪಟಿಯಾ ಎಂಬ ಸ್ಥಳದಲ್ಲಿ ನಡೆದ 97 ಮಂದಿಯ ಹತ್ಯೆಗೆ ಸಂಬಂಧಿಸಿದಂತೆ 31 ಮಂದಿಗೆ ವಿವಿಧ ರೂಪದ ಶಿಕ್ಷೆಯನ್ನು ಪ್ರಕಟಿಸಿದೆ. ಘಟನೆಗೆ ಸಂಚು ರೂಪಿಸಿದ ಆರೋಪದ ಮೇಲೆ ಮೋದಿಯ ಆಪ್ತರಲ್ಲಿ ಒಬ್ಬಳಾಗಿದ್ದ, ಮಾಜಿ ಸಚಿವೆ ಹಾಗೂ ಹಾಲಿ ನರೋಡ ಪಟಿಯಾ ಶಾಸಕಿಯಾದ ಮಾಯಾಬೆನ್ ಎಂಬಾಕೆಗೆ 28 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಹತ್ಯೆಯ ನಾಯಕತ್ವ ವಹಿಸಿದ್ದ ಭಜರಂಗ ದಳದ ಮುಖಂಡ ಬಾಬು ಬಜರಂಗಿ ಎಂಬಾತನಿಗೆ ಜೀವನ ಪೂರ್ತಿ ಜೈಲು ಶಿಕ್ಷೆ ಪ್ರಕಟಿಸಲಾಗಿದೆ. ಉಳಿದ 29 ಮಂದಿ ನರ ಹಂತಕರಿಗೆ 14 ರಿಂದ 21 ವರ್ಷದವರೆಗೆ  ಶಿಕ್ಷೆ ನೀಡಲಾಗಿದೆ.

ಭಾರತದ ನ್ಯಾಯಾಲಯದ ಇತಿಹಾಸದಲ್ಲಿ ಇದೊಂದು ಮಹತ್ವದ ತೀರ್ಪು ಎಂದರೆ, ಅತಿಶಯೋಕ್ತಿ ಅಲ್ಲ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಮಾಜದಲ್ಲಿ ಕಾನೂನು ಕೈಗೆತ್ತಿಕೊಳ್ಳುವ ರಾಜಕಾರಣಿಗಳಿಗೆ ಇದು ಎಚ್ಚರಿಕೆಯ ಗಂಟೆಯಂತಿದೆ.

ಗುಜರಾತ್‌ನ ಹಿಂಸೆಯ ರೂವಾರಿಯೆಂದು ಕರೆಯಲ್ಪಡುವ ನರೇಂದ್ರ ಮೋದಿ ಇಷ್ಟೆಲ್ಲಾ ಕಪ್ಪು ಚುಕ್ಕೆಯ ನಡುವೆ ಮತ್ತೇ ಬಿ.ಜೆ.ಪಿ. ಪಕ್ಷವನ್ನು ಅಧಿಕಾರಕ್ಕೆ ತಂದಿದ್ದು, ತಾನೇ ಮುಖ್ಯ ಮಂತ್ರಿ ಪದವಿಗೆ ಏರಿದ್ದು ಇವೆಲ್ಲಾ ಈಗ ಇತಿಹಾಸ. ಭಾರತದ ರಾಜಕಾರಣವನ್ನು ಮತ್ತು ಇಲ್ಲಿನ ಬಡತನ, ಅನಕ್ಷರತೆ, ಜಾತೀಯತೆ, ಹಾಗೂ ಧರ್ಮದ ಪ್ರಭಾವ ಕುರಿತು ಒಳನೋಟವುಳ್ಳವರಿಗೆ ಇದು ಅಚ್ಚರಿಯ ಸಂಗತಿಯೇನಲ್ಲ.

ತನಗೆ ಅಂಟಿದ ಹತ್ಯಾಕಾಂಡದ ಕಳಂಕವನ್ನು ತೊಳೆದು ಕೊಳ್ಳುವ ನಿಟ್ಟಿನಲ್ಲಿ ಮೋದಿ ಕಳೆದ ಎಂಟು ವರ್ಷಗಳ ಅವಧಿಯಲ್ಲಿ ಗುಜರಾತ್ ರಾಜ್ಯದ ಅಭಿವೃದ್ಧಿಗೆ ಶ್ರಮ ಪಟ್ಟಿರುವುದು ನಿಜ. ವ್ಯಯಕ್ತಿಕ ನೆಲೆಯಲ್ಲಿ ಒಂದಿಷ್ಟೂ ಭ್ರಷ್ಟಾಚಾರದ ಕಳಂಕವನ್ನು ಹೊಂದಿರದ ನರೇಂದ್ರ ಮೋದಿ ಬ್ರಹ್ಮಚಾರಿಯಾಗಿದ್ದು ಕೊಂಡು ಗುಜರಾತ್ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ರೂಪಿಸಿದ್ದಾರೆ. ಇದರಲ್ಲಿ ಎರಡು ಮಾತಿಲ್ಲ. ಅಲ್ಲಿನ ರಸ್ತೆಗಳು, ರೈತರಿಗೆ ಸಿಗುತ್ತಿರುವ ನಿರಂತರ 24 ಗಂಟೆಗಳ ವಿದ್ಯುತ್, ಕುಡಿಯುವ ನೀರು, ಆರೋಗ್ಯ ಸೇವೆ, ಕೃಷಿ ಮತ್ತು ಶಿಕ್ಷಣಕ್ಕೆ ನೀಡಿರುವ ಆದ್ಯತೆ, ಕೈಗಾರಿಕೆಗಳ ಬೆಳವಣಿಗೆ ಇವೆಲ್ಲವೂ ಭಾರತದಲ್ಲಿ ಗುಜರಾತ್ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಪರಿವರ್ತಿಸಿವೆ. ಆದರೆ, ಈ ಶ್ರಮ ಮೋದಿಯ ಕಳಂಕವನ್ನು ತೊಡೆದುಹಾಕಲಾರವು. ಮೋದಿಯ ಇಂದಿನ ಸ್ಥಿತಿ ಮೈಯೆಲ್ಲಾ ಬಂಗಾರ ಅಂಡು ಮಾತ್ರ ಹಿತ್ತಾಳೆ ಎಂಬಂತಾಗಿದೆ.

ಇತ್ತೀಚೆಗಿನ ದಿನಗಳಲ್ಲಿ ಬಿ.ಜೆ.ಪಿ. ಪಕ್ಷದಲ್ಲಿ ರಾಷ್ಟೀಯ ನಾಯಕನಾಗಿ ಗುರುತಿಸಿಕೊಂಡು ಮುಂದಿನ ಪ್ರದಾನಿ ಕುರ್ಚಿಯ ಮೇಲೆ ಕಣ್ಣಿಟ್ಟಿದ್ದ ಮೋದಿಗೆ ನ್ಯಾಯಾಲಯದ ತೀರ್ಪು ಅಡ್ಡಗಾಲು ಹಾಕಿದೆ. ಮೋದಿಯ ಅಭಿವೃದ್ಧಿಯ ಸಾಧನೆಗೆ ಹೋಲಿಸಿದರೆ, ಬಿ.ಜೆ.ಪಿ. ಪಕ್ಷದ ಜೊತೆ ಮೈತ್ರಿ ಹೊಂದಿರುವ ಬಿಹಾರದ ಜೆ.ಡಿ.ಯು. ಪಕ್ಷದ ನಿತೀಶ್ ಕುಮಾರ್ ಅಲ್ಲಿನ ಮುಖ್ಯಮಂತ್ರಿಯಾಗಿ ಮಾಡಿರುವ ಸಾಧನೆ ಭಾರತೀಯ ರಾಜಕೀಯ ಇತಿಹಾಸದಲ್ಲಿ ಒಂದು ಅನನ್ಯ ಸಾಧನೆ ಎಂದು ಬಣ್ಣಿಸಬಹುದು.

ಸ್ವಾತಂತ್ರ್ಯಾನಂತರದ ದಿನಗಳಿಂದಲೂ ಅನಕ್ಷರಸ್ತರ, ದೀನ ದಲಿತರ, ನಾಡಾಗಿ ಉಳ್ಳವರ ದಬ್ಬಾಳಿಕೆಯಲ್ಲಿ ನಲುಗಿ ಹೋಗಿದ್ದ, ಜಂಗಲ್ ರಾಜ್ ಎಂದು ಅಡ್ಡ ಹೆಸರಿನಲ್ಲಿ ಕರೆಸಿಕೊಳ್ಳುತ್ತಿದ್ದ ಬಿಹಾರ್ ರಾಜ್ಯವನ್ನು ನಿತೀಶ್ ಕುಮಾರ್ ತಮ್ಮು ಶುದ್ದ ಚಾರಿತ್ಯ ಮತ್ತು ಬದ್ಧತೆಯಿಂದ ಇಡೀ ಭಾರತವೇ ಬೆರಗಾಗುವಂತೆ ಪುನರ್ ರೂಪಿಸಿದ್ದಾರೆ. ಬಿ.ಜೆ.ಪಿ. ಯಂತಹ ಕೋಮುವಾದಿಯ ಪಕ್ಷದ ಮೈತ್ರಿಯನ್ನು ಉಳಿಸಿಕೊಂಡು, ತಮ್ಮ ಜಾತ್ಯಾತೀತ ಮತ್ತು ಧರ್ಮಾತೀತ ನಿಲುವುಗಳನ್ನು ಎತ್ತಿ ಹಿಡಿದಿದ್ದಾರೆ. ಹಾಗಾಗಿ ಇವತ್ತು ಆರ. ಎಸ್.ಎಸ್. ನ ಮುಖಂಡ ಬಾಗವತ್ ನಿತೀಶ್‌ರವನ್ನು ಹೊಗಳಿ ಮುಂದಿನ ಎನ್.ಡಿ.ಎ. ಮೈತ್ರಿಕೂಟದ ಭಾವಿ ಪ್ರಧಾನಿ ಎಂಬ ಸಂದೇಶವನ್ನು ಹೊರ ಹಾಕಿದ್ದಾರೆ.

ಮುಂದುವರಿದ ರಾಜ್ಯವಾಗಿದ್ದ ಗುಜರಾತ್ ಅನ್ನು ಅಭಿವೃದ್ಧಿ ಮಾಡಿದ ನರೇಂದ್ರ ಮೋದಿಯವರ ಸಾಧನೆಗಳು ಈಗ ನಿತೀಶ್ ಕುಮಾರ್ ಸಾಧನೆಗಳ ಮುಂದೆ ನಗಣ್ಯವಾಗಿವೆ. ಇತ್ತೀಚಿನ ದಿನಗಳಲ್ಲಿ ಪ್ರಧಾನಿ ಪಟ್ಟದ ಮೇಲೆ ಕಣ್ಣಿಟ್ಟಿದ್ದ ನರೇಂದ್ರ ಮೋದಿ ಸದ್ಭಾವನಾ ಹೆಸರಿನಲ್ಲಿ ಪಶ್ಚಾತಾಪದ ಉಪವಾಸ ಮಾಡಿ ಮುಸ್ಲಿಂ ಸಮುದಾಯವನ್ನು ಓಲೈಸಿಕೊಳ್ಳಲು ಮುಂದಾಗಿದ್ದರು. ಆದರೆ, ನರಮೇಧ ಕುರಿತಂತೆ ಒಂದೊಂದಾಗಿ ಹೊರ ಬೀಳುತ್ತಿರುವ ನ್ಯಾಯಾಲಯದ ತೀರ್ಪುಗಳು ಮೋದಿ ತೊಟ್ಟಿದ್ದ ಮುಖವಾಡಗಳನ್ನು ಕಳಚಿ ಹಾಕುತ್ತಿವೆ.

ನರೇಂದ್ರ ಮೋದಿ ಮಾತ್ರವಲ್ಲ ಇವರನ್ನು ಹಾಡಿ ಹೊಗಳಿ ಅಟ್ಟಕ್ಕೇರಿಸಿ, ತಲೆಯ ಮೇಲೆ ಹೊತ್ತು ಮೆರೆಯುತ್ತಿರುವ ಜನ (ಇವರಲ್ಲಿ ಕರ್ನಾಟಕದ ಪತ್ರಕರ್ತರ ಪಡೆಯೂ ಇದೆ.) ಇವರೆಲ್ಲಾ ಅರಿಯ ಬೇಕಾದ ಸತ್ಯ ಒಂದಿದೆ. ಅದೇನೆಂದರೆ, ಮೋದಿ ತಮ್ಮ ಮುಖ ಮತ್ತು ಮೈಗೆ ಅಂಟಿದ ಮಸಿಯನ್ನು ಮಾತ್ರ ತೊಳೆದುಕೊಳ್ಳ ಬಲ್ಲರು, ಆದರೆ, ಅವರ ಆತ್ಮಕ್ಕೆ, ಮತ್ತು ವ್ಯಕ್ತಿ ಚಾರಿತ್ಯಕ್ಕೆ ಅಂಟಿದ ಮಸಿಯನ್ನು ಶತ ಶತಮಾನ ಕಳೆದರೂ ತೊಳೆದುಕೊಳ್ಳಲು. ಸಾಧ್ಯವಿಲ್ಲ. ಈ ಕಟು ವಾಸ್ತವ ಸತ್ಯವನ್ನು ಮೋದಿಯ ಹೊಗಳು ಭಟ್ಟರು ಈಗಲಾದರೂ ಅರ್ಥ ಮಾಡಿಕೊಳ್ಳಬೇಕು.

 

8 comments

 1. ಹಿಂದಿ ಸುದ್ದಿವಾಹಿನಿ ಹಾಗೂ ನೀಲ್ಸನ್ ಸಂಸ್ಥೆ ಇತ್ತೀಚೆಗೆ ದೇಶದ 28 ನಗರಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ 42% ಮಂದಿ ಮೋದಿಯನ್ನು ಪ್ರಧಾನಿ ಉಮೇದುವಾರಿಕೆಗೆ ಬೆಂಬಲಿಸಿದ್ದಾರೆ ಮತ್ತು ರಾಹುಲ್ ಗಾಂಧಿಗೆ 29% ಜನ ಬೆಂಬಲಿಸಿದ್ದಾರೆ ಹಾಗೂ ನಿತೀಶ್ ಕುಮಾರರಿಗೆ 12% ಬೆಂಬಲ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ನಗರಗಳ ಮಧ್ಯಮ ವರ್ಗ ಅಭಿವೃದ್ಧಿಯ ಧಾವಂತದಲ್ಲಿ ಮೂಲಭೂತವಾದದ ಅಪಾಯದ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಇದರಿಂದ ತಿಳಿಯುತ್ತದೆ. ಮೂಲಭೂತವಾದ ಪಾಕಿಸ್ತಾನವನ್ನು ಬಿಡಿಸಿಕೊಳ್ಳಲಾಗದ ಮಟ್ಟಕ್ಕೆ ಕಬಳಿಸಿದೆ. ಇದನ್ನು ನೋಡಿಯಾದರೂ ಭಾರತದ ಜನ ಎಚ್ಚತ್ತುಕೊಳ್ಳದಿದ್ದರೆ, ಮುಖವಾಡ ಧರಿಸಿರುವ ಕಠೋರ ಮೂಲಭೂತವಾದಿಗಳನ್ನು ಗುರುತಿಸದೆ ಹೋದರೆ ಅಪಾಯ ತಪ್ಪಿದ್ದಲ್ಲ. ಜಾತ್ಯಾತೀತ ಹಾಗೂ ಪ್ರಗತಿಪರ ನಿಲುವಿನ ದಿಟ್ಟ ರಾಷ್ಟ್ರೀಯ ನಾಯಕರು ಇಂದು ಭಾರತದಲ್ಲಿ ಇಲ್ಲದೆ ಹೋಗಿರುವ ಕಾರಣ ಧಾರ್ಮಿಕ ಮೂಲಭೂತವಾದಿಗಳೇ ಮಹಾನ್ ನಾಯಕರೆಂದು ಬಿಂಬಿಸಲ್ಪಡುತ್ತಿರುವುದು ದೇಶದ ದುರದೃಷ್ಟ. ಇದರಲ್ಲಿ ಕಾರ್ಪೋರೆಟ್ ಮಾಧ್ಯಮಗಳ ಹಾಗೂ ಬಂಡವಾಳಶಾಹಿಗಳ ಪಾತ್ರ ಬಹಳ ದೊಡ್ಡದು. ನಗರಗಳ ಬೂರ್ಜ್ವಾ ಮಧ್ಯಮ ವರ್ಗ, ಬಂಡವಾಳಶಾಹಿಗಳು ಹಾಗೂ ನಿರ್ದಿಷ್ಟ ದೃಷ್ಟಿಕೋನವೇ ಇಲ್ಲದ ಮಾಧ್ಯಮಗಳ ಅಗಾಧ ಪ್ರಚಾರದ ಹೊರತಾಗಿಯೂ ಮೋದಿ ಪ್ರಧಾನಿಯಾಗುವ ಸಂಭವ ಬಹಳ ಕಡಿಮೆ. ಅದೃಷ್ಟವಶಾತ್ ಗುಜರಾತಿನ ಜನರ ಮನೋಭಾವಕ್ಕಿಂತ ದೇಶದ ಸಾಮಾನ್ಯ ಜನರ ಮನೋಭಾವ ಭಿನ್ನವಾಗಿದೆ ಹಾಗೂ ಸಹಿಷ್ಣುತೆಯನ್ನು ಎತ್ತಿ ಹಿಡಿಯುವ ವೈಶಾಲ್ಯವನ್ನು ಹೊಂದಿದೆ. ಇಂಥ ಮನೋಭಾವವೇ ದೇಶವನ್ನು ಅಪಾಯದಿಂದ ಪಾರು ಮಾಡಬಲ್ಲದು. ಮಾಧ್ಯಮಗಳ ಅಬ್ಬರದ ಪ್ರಚಾರವನ್ನು ದೇಶದ ಜನ ಅಷ್ಟಾಗಿ ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂಬುದು 2004 ಮತ್ತು 2009 ಲೋಕಸಭಾ ಚುನಾವಣೆಗಳಲ್ಲಿ ಸ್ಪಷ್ಟವಾಗಿ ಬಿಂಬಿತವಾಗಿದೆ. ಮಾಧ್ಯಮಗಳ ಅಬ್ಬರದ ಪ್ರಚಾರ ನೋಡಿದರೆ 2004 ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ 2/3 ಬಹುಮತ ಪಡೆಯುತ್ತದೆಯೇನೋ ಎಂಬ ಭ್ರಮೆಯನ್ನು ಬಿತ್ತಲಾಗಿತ್ತು.

 2. ಮೋದಿ ಮುಖವಾಡ ಕಳಚಿದ ಲೇಖನ . ಕರ್ನಾಟಕದಲ್ಲಿನ ಮೋದಿ ಬೆಂಬಲಿಗರಿಗೆ ಈಗಲಾದರು ನಾಚಿಕೆಯಾಗಬೇಕು . ನಿನ್ನೆ ೨೪ ಗಂಟೆ ಸುದ್ದಿ ಬಿತ್ತರಿಸುವ ಟಿವಿ ವಾಹಿನಿಯೊಂದರ ಎಚ್ಚರಿಕೆ ನಿರೂಪಕ ಕರ್ನಾಟಕದ ಶಂಕಿತ ಉಗ್ರರನ್ನ ಟೀಕಿಸುವ ಭರದಲ್ಲಿ ಒದ್ದಾಡಿದ್ದು ಮಾತ್ರ ತಮಾಷೆಯಾಗಿತ್ತು. ಗುಜರಾತ್ ನಲ್ಲಿ ಮನುಷ್ಯರನ್ನ ಕೊಲ್ಲಿಸಿದದ್ದಕ್ಕೆ ಮಾಜಿ ಸಚಿವೆಯೊಬ್ಬಳಿಗೆ ೨೮ ವರ್ಷ ಶಿಕ್ಷೆ ಆದದ್ದನ್ನು ಕೊನೆಯ ಪಕ್ಷ ಉದಾಹರಣೆಗಾಗಿಯು ಆತ ಪ್ರಾಸ್ತಪಿಸಲಿಲ್ಲ . ಪಾಪ ಟಿವಿ ಮಾಲಿಕರ ಅಪ್ಪಣೆ ಬೀಕಗಿತ್ತೋ ಏನೋ ಆತನಿಗೆ.

 3. Sir,
  Well written, Our media is lull about some of the muslim youngsters who have arrested in Bangalore and Hubli on the other hand they are silent about the Gujarat riots and conviction to the perpetrators.
  MP Ananthkumar wants death penalty for Afzal Guru and Kasab why not for Modi and those who involved in 2002 Gujarat riots.

 4. 1984ರ ಸಿಖ್ ವಿರೋಧಿ ದಂಗೆಯ ಸಂದರ್ಭದಲ್ಲಿ ದಿಲ್ಲಿ ಕಂಟೋನ್ಮೆಂಟ್ ಪ್ರದೇಶ ದಲ್ಲಿ ನಡೆದ ಹತ್ಯಾಕಾಂಡ ಪ್ರಕರಣಕ್ಕೆ ಕೋರ್ಟಿಗೆ ಸಿಬಿಐ ಹೇಳಿಕೆ ನೀಡಿದೆ. ಈ ಹಿಂಸಾಚಾರವು ವ್ಯವಸ್ಥಿತವಾಗಿ ರೂಪಿಸಿದ್ದು ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್ ಎಂದು ದೆಹಲಿ ಕೋರ್ಟಿಗೆ ಹೇಳಿದೆ.
  ಈ ಘಟನೆ ನಿರ್ದಿಷ್ಟ ಜನಾಂಗವೊಂದನ್ನು ಮಾತ್ರ ಗುರಿ ಇರಿಸಲಾಗಿತ್ತು. ಇದು ಆಕಸ್ಮಿಕ ಘಟನೆಯಲ್ಲ. ಪೊಲೀಸ್ ಹಾಗೂ ವ್ಯವಸ್ಥೆಯ ಬೆಂಬಲದ ಕಾರ್ಯಾಚರಣೆಯಾಗಿತ್ತು ಎಂದು ಸಿಬಿಐ ಹೇಳಿದೆ.
  ಪೊಲೀಸರು ಕೂಡ ಪ್ರಕರಣ ದಾಖಲಿಸದಿರುವ ಹಾಗೂ ಬೀದಿಗಳಿಂದ ಮೃತದೇಹಗಳನ್ನು ತೆರವುಗೊಳಿಸದಿದ್ದ ಕಾರಣ ಅವರು ಸಹ ಆರೋಪಿಗಳಾಗಿದ್ದಾರೆಂದು ಸಿಬಿಐ ಆರೋಪಿಸಿದೆ.
  ದಿಲ್ಲಿಯ ರಾಜ್‌ನಗರದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಸಜ್ಜನಕುಮಾರ್ ಮಾಡಿದ್ದ ಭಾಷಣವೊಂದನ್ನು ಉಲ್ಲೇಖಿಸಿದ ತನಿಖೆ ಸಂಸ್ಥೆ, ಅವರು ದಂಗೆಕೋರರಿಗೆ ಪ್ರಚೋದನೆ ನೀಡಿದ್ದರು. ಒಬ್ಬನೇ ಒಬ್ಬ ಸಿಖ್ಖನೂ ಉಳಿಯಬಾರದು. ಸಿಖ್ಖರಿಗೆ ಆಶ್ರಯ ನೀಡಿದವರಿಗೆ ಬೆಂಕಿ ಹಚ್ಚಬೇಕೆಂದು ಅವರು ಪ್ರಚೋದಿಸಿದ್ದರೆಂದು ಆಪಾದಿಸಿದೆ.[ ಹೆಚ್ಚಿನ ಓದಿಗೆ ಕ್ಲಿಕ್ ಮಾಡಿ]
  ಪೊಲೀಸರು ರಾಜ್‌ನಗರ ಗುರುದ್ವಾರದ ನಿವಾಸಿಗಳಿಗೆ ತಮ್ಮ ಆಯುಧಗಳನ್ನು ಒಪ್ಪಿಸುವಂತೆ ಆದೇಶಿಸಿದ್ದರು. ದಂಗೆಯ ವೇಳೆ ಸಜ್ಜನ ಕುಮಾರ್ ಬೀದಿ ಬೀದಿ ತಿರುಗಿ ಉದ್ರಿಕ್ತರಿಗೆ ಪ್ರಚೋದನೆ ನೀಡುತ್ತಿದ್ದರೆಂಬುದು ಪ್ರತ್ಯಕ್ಷ ಸಾಕ್ಷಿಗಳಿಂದ ದೃಢಪಟ್ಟಿದೆ. 1984ರ ಸಿಖ್ ವಿರೋಧಿ ದಂಗೆಯ ವೇಳೆ ಪೊಲೀಸರು ಪೂರ್ವಯೋಜಿತ ರೀತಿಯಲ್ಲಿ ವರ್ತಿಸಿದ್ದರು.
  ಎಂದು ಸಿಬಿಐ ಪರ ವಕೀಲ ಆರ್ ಎಸ್ ಚೀಮಾ ಹೆಚ್ಚುವರಿ ಸತ್ರ ನ್ಯಾ. ಜೆ ಆರ್ ಆರ್ಯನ್‌ರ ಮುಂದೆ ವಾದಿಸಿದರು. ದಂಗೆಯ ಕುರಿತಾಗಿ ಸುಮಾರು 150 ದೂರುಗಳನ್ನು ನೀಡಲಾಗಿತ್ತು. ಆದರೆ, ಪೊಲೀಸರು ಕೇವಲ 5 ಎಫ್‌ಐಆರ್‌ ಮಾತ್ರ ದಾಖಲಾಗಿದೆ.

   1. ಕರ ಸೇವಕರ ಸಜೀವ ದಹನ ದಿಂದಾಗಿ ಉದ್ಭವಿಸಿದ ಗೋದ್ರೋತ್ತರ ಹಿಂಸಾಚಾರಕ್ಕೆ ಸಂಬಂದಿಸಿದಂತೆ ಮಾಯಾ ಕೊಡ್ನನಿ ಮತ್ತು ಬಾಬು ಬಜರಂಗಿ ಅವರಿಗೆ ಜೀವಾವದಿ ಶಿಕ್ಷೆ ವಿದಿಸಿರುವ ನ್ಯಾಯಾಲಯ ೧೯೮೪ ರ ಸಿಕ್ಖ್ ವಿರೋದಿ ದಂಗೆಗೆ ಕಾರಣ ರಾಗಿರುವ ಕಾಂಗ್ರೆಸ್ ನ ಸಜ್ಜನ ಕುಮಾರ್ ಮತ್ತು ಜಗದೀಶ್ ಟೈಟ್ಲರ್ ಮೇಲೆ ಕ್ರಮ ತೆಗೆದು ಕೊಳ್ಳಲು ವಿಫಲ ವಾಗಿದ್ದು ಯಾಕೆ ? ಇವರುಗಳು ಆರಾಮಾಗಿ ಓಡಾಡಿ ಕೊಳ್ಳುತ್ತಾ ಐಶರಮಿ ಜೀವನ ಸಾಗಿಸುತಿದ್ದರೆ ಸಾಮಾನ್ಯ ಜನರಿಗೆ ನಮ್ಮ ಕಾನೂನಿನ ಮೇಲೆ ನಂಬಿಕೆ ಬರುವದೇ?. ನೆಹರು ಕುಟುಂಬ ನಿಷ್ಠ ರಿಗೊಂದು ನ್ಯಾಯ ಉಳಿದವರಿಗೆ ಇನ್ನೊಂದು ಕಾನೂನೇ? ವಿನಃ ಕಾರಣ ಮೋದಿ ಯವರನ್ನು ಸಾವಿನ ವ್ಯಾಪಾರೀ ಅಂತ ಕರೆಯುವ ಕೀಳು ಅಭಿರುಚಿಯ ಇಟಲಿ ಬಾರ್ ಗರ್ಲ್ ಗೆ ಸಜ್ಜನ ಕುಮಾರ್ ಮತ್ತು ಜಗದೀಶ್ ಟೈಟ್ಲರ್ ಏನಾಗಿ ಕಾಣುತ್ತಾರೆ ? ಸಿ ಬಿ ಐ ಸಾಕ್ಷ್ಯ ದಾರ ಕೊರತೆ ಅನ್ನುದರಲ್ಲಿ ಅರ್ಥ ಇದೆಯಾ ? ಗುಜರಾತ್ ನಲ್ಲಿ ಸಿಕ್ಕ ಸಾಕ್ಷಿ ದೆಹಲಿಯಲ್ಲಿ ಸೀಕಿಲ್ಲವೇ ? ಸಿಕ್ಕಿದರು ಮರೆ ಮಾಚುವ ಕೆಲಸ ವೇಕೆ ? ಈ ರೀತಿ ಘಟನೆಗಳು ನಡೆಯುತಿದ್ದರೆ ಶಾಂತಿಪ್ರಿಯ ಹಿಂದೂ ಕೂಡ ಸಿಡಿದೆಳುವದಿಲ್ಲವೇ?

 5. ಕರಸೇವಕರ ಹತ್ಯೆಗೆ ಯಾವ ರೀತಿಯ ಕಾನೂನು ಕ್ರಮ ತೇಗೇದುಕೋಂಡಿದ್ದಿರಿ .ತಿಳಿಸಲೇ ಇಲ್ವಾ .ಹಿಂದೂಗಳ ಜೀವಕ್ಕೆ ಬೆಲೆ ಇಲ್ವಾ .ಲೇಖಕರೇ ನಿಮಗೋಂದ್ದು ಮಾತು ನೆನಪಿರಲಿ .ಹಿಂದೂಗಳೇ ಮೊದಲು ಕಾಲು ಕೆದರಿ ಎಂದು ಕೋಮುಗಲಭೆ ನಡೆಸಲು ಮುಂದಾಗಿಲ್ಲ .

Leave a Reply

Your email address will not be published.