ಕರಾವಳಿಯಲ್ಲಿ ಗೋಸಂರಕ್ಷಣೆ ಮತ್ತು ದೇಶಸೇವೆ

 -ಪ್ರಸಾದ್ ರಕ್ಷಿದಿ

*ಒಂದು*

ದಕ್ಷಿಣ ಕನ್ನಡ ಜಿಲ್ಲೆಯ ಮಲೆನಾಡಿನ ಒಂದು ಹಳ್ಳಿ. ಮುಖ್ಯರಸ್ತೆಯ ಬದಿಯಲ್ಲಿ ಒಂದು ಬಸ್ ಸ್ಟಾಪ್. ಕತ್ತಲಾವರಿಸುವ ಹೊತ್ತು. ತಾಲೂಕು ಕೇಂದ್ರದಿಂದ ಆ ಮಾರ್ಗವಾಗಿ ಸಾಗುವ ಆ ದಿನದ ಕೊನೆಯ ಬಸ್ ಬಂದು ನಿಲ್ಲುತ್ತದೆ. ಸುಮಾರು ಇಪ್ಪತ್ತು ವಯಸ್ಸಿನ ಕುರುಚಲು ಗಡ್ಡದ ತರುಣನೊಬ್ಬ ಕಪ್ಪು ಬಣ್ಣದ ಬ್ಯಾಗೊಂದನ್ನು ಹೆಗಲಿಗೆ ನೇತುಹಾಕಿಕೊಂಡು ಬಸ್ಸಿನಿಂದ ಇಳಿಯತ್ತಾನೆ. ಆ ಊರಿಗೆ ಅಪರಿಚಿತನಂತೆ ಕಾಣುವ ಆತ ಯಾರನ್ನೋ ಹುಡುಕುವವನಂತೆ ಅತ್ತಿತ್ತ ನೋಡುತ್ತ ಬಸ್ಸ್‌ಸ್ಟಾಪ್‌ನಲ್ಲಿ ನಿಲ್ಲುತ್ತಾನೆ. ಒಂದೆರಡು ಕ್ಷಣಗಳಲ್ಲಿ ನಾಲ್ಕಾರು ಜನರ ಗುಂಪೊಂದು ಅವನತ್ತ ಬರುತ್ತದೆ. ಅವರಲ್ಲೊಬ್ಬ ದಾಂಡಿಗನಿದ್ದಾನೆ. ಎಲ್ಲರೂ ಆಗಂತುಕ ತರುಣನನ್ನು ಸುತ್ತುವರಿದು ನಿಲ್ಲುತ್ತಾರೆ.

ದಾಂಡಿಗ: ಏಯ್ ..ಯಾರು ನೀನು..?

ತರುಣ: ನಾನು… ಇಲ್ಲಿ ..ಫ್ರೆಂಡ್ ಮನೆಗೆ ಬಂದಿದ್ದೇನೆ.

ದಾಂಡಿಗ: ಯಾರವನು ನಿನ್ನ ಗೆಳೆಯ..

ತರುಣ: ಅದು.. ಅವರು ನನ್ನ ಫ್ರೆಂಡಿನ ಫ್ರೆಂಡು. ನನ್ನನ್ನು ಕರೆದೊಯ್ಯಲು ಇಲ್ಲಿಗೆ ಈಗ ಬರ್ಬೇಕಿತ್ತು, ನಾನು ಕಾಯ್ತಿದ್ದೇನೆ.

ದಾಂಡಿಗ: ಇಲ್ಲಿ ಎಲ್ಲರೂ ಹಾಗೇ ಬರುವುದು, ನಿನ್ನ ಹೆಸರೇನು? ಯಾರವನು ನಿನ್ನ ಫ್ರೆಂಡು ಅವ್ನ ಹೆಸರೇನು?

ತರುಣ: (ಗಾಬರಿಯಾಗಿದ್ದಾನೆ) ಅವ್ನ ಹೆಸರು ಕೃಷ್ಣ ಅಲ್ಲ ಹಾಗೇನೋ ಹೆಸರು..ಸರೀ ಗೊತ್ತಿಲ್ಲ,,

ಇನ್ನೊಬ್ಬ: (ದಾಂಡಿಗನನ್ನುದ್ದೇಶಿಸಿ) ಅಣ್ಣ ..ಪಾಪ ಇವನಿಗೆ ಫ್ರೆಂಡಿನ ಹೆಸರೂ ಗೊತ್ತಿಲ್ಲ… ಪಾಪ ತೊಟ್ಟಿಲ ಮಗು…!

ತರುಣ: ಸ್ವಲ್ಪ ನಿಲ್ಲಿ ಅವರೇ ಬರಬಹುದು ಈಗ, ನಾನು ರೀಸರ್ಚ್ ಸ್ಟೂಡೆಂಟು..

ದಾಂಡಿಗ: ಅವರು ಅಂದ್ರೆ ಯಾರೂ .. ನಿನ್ನ ತಂಡದವರೋ.. ಎಲ್ಲ ಕಳ್ಳರು, ದೇಶದ್ರೋಹಿಗಳು. ಎಲ್ಲಿ ನಿನ್ನ ಚೀಲ ತೆಗಿ.. ಯಾರವ ನಿನ್ನ ಫ್ರೆಂಡು ಬೇಗ ಬೊಗಳು..

ತರುಣ: (ಇನ್ನೂ ಗಾಬರಿಯಿಂದ) ನಿಲ್ಲಿ ಫೋನ್ ಮಾಡ್ತೇನೆ.. ಅಯ್ಯೊ ಇಲ್ಲಿ ರೇಂಜಿಲ್ಲ… (ಅಷ್ಟರಲ್ಲಿ ಒಬ್ಬ ಮೊಬೈಲ್ ಕಿತ್ತುಕೊಳ್ಳುತ್ತಾನೆ, ತರುಣ ಪ್ರತಿಭಟಿಸುತ್ತಿದ್ದಂತೆ ಎಲ್ಲರೂ ಸೇರಿ ಅವನಿಗೆ ಹೊಡೆಯತ್ತಾರೆ. ತರುಣ ಕುಸಿದು ಬಸ್ಟಾಪಿನಲ್ಲಿ ಕೂರುತ್ತಾನೆ, ಕತ್ತಲಾಗಿದೆ. ಅಷ್ಟರಲ್ಲಿ ಸ್ಕೂಟರೊಂದು ಬರುತ್ತದೆ. ಅದರಲ್ಲಿ ಬಂದ ವ್ಯಕ್ತಿ ಯಾರನ್ನೋ ಹುಡುಕುತ್ತಾನೆ.)

ಗುಂಪಿನವನೊಬ್ಬ: (ಸ್ಕೂಟರಿನವನ ಗುರುತು ಹಿಡಿದು) ಏನು ಕೇಶವಣ್ಣ?

ಕೇಶವ: ನನ್ನ ಫ್ರೆಂಡೊಬ್ಬರು ಅವರ ಕಡೆಯ ಸ್ಟೂಡೆಂಟ್ ಒಬ್ಬರನ್ನು ಕಳಿಸ್ತೇನೆ ಅಂತ ಹೇಳಿದ್ರು ,ಬಸ್ ಹೋಗಿರ್ಬೇಕು. ನಾನು ಬರುವಾಗ ಸ್ವಲ್ಪ ತಡವಾಯ್ತು..

ಮತ್ತೊಬ್ಬ: ಇಲ್ಲಿ ಒಬ್ಬ ಇದ್ದಾನೆ ಇವನೋ ನೋಡಿ.

ಕೇಶವ:  (ಕೇಶವ ತರುಣನನ್ನು ನೋಡುತ್ತಾನೆ, ಅವನ ಬಟ್ಟೆ ಹರಿದಿದೆ ಮುಖಕ್ಕೆಲ್ಲ ಪೆಟ್ಟಾಗಿದೆ.) ಅಯ್ಯಯ್ಯೋ ಹೌದು ಇವರೇ… ಇದೆಲ್ಲ ಏನು..

ದಾಂಡಿಗ: ಏನಿಲ್ಲ ಕೇಶವಣ್ಣ, ಅವ ಕೇಳಿದ್ದಕ್ಕೆ ಒಂದಕ್ಕೂ ಸರಿಯಾಗಿ ಉತ್ತರ ಕೊಡ್ಲಿಲ್ಲ.. ಕಳ್ಳ ಕಳ್ಳನ ಹಾಗೆ ಆಡಿದ, ಹುಡುಗ್ರು ಒಂದೆರಡು ಏಟು ಕೊಟ್ಟರು ಅಷ್ಟೆ.. ನಮಗೇನುಗೊತ್ತು? ಅವನಿಗೆ ಬಾಯಿರಲಿಲ್ಲವೋ..

ತರುಣ: ನೋಡಿ ನನಗೆ ಸರಿಯಾಗಿ ಮಾತಾಡೋಕೆ ಇವರು..

ದಾಂಡಿಗ: ಹ್ಞೂಂ  ಸಾಕು.. ಇನ್ನೀಗ ಹೊರಡಿ..

ಕೇಶವ: (ತರುಣನಿಗೆ ಸುಮ್ಮನಿರುವಂತೆ ಕಣ್ಣಲ್ಲೇ ಸೂಚಿಸುತ್ತಾನೆ). ತಪ್ಪೆಲ್ಲಾ ನನ್ನದೇ. ನಾನು ಸರಿಯಾದ ಸಮಯಕ್ಕೆ ಬರ್ಬೇಕಿತ್ತು.. ಆದರೂ ನೀವು.. ಹೀಗೆ..

ದಾಂಡಿಗ : ಕೇಶವಣ್ಣ ನೀವು ಬೇಸರ ಮಾಡುವುದು ಬೇಡ..ನಿಮ್ಮ ಫ್ರೆಂಡಿಗೆ ಹೇಳಿ. ಅಂದ ಹಾಗೆ ಎಚ್ಚರ….. ಹ್ಞಾಂ.  ಇದನ್ನೇ ಒಂದು ದೊಡ್ಡ ವಿಷಯ ಅಂತ ಸುದ್ದಿ ಮಾಡ್ಬೇಡಿ. ದೇಶರಕ್ಷಣೆ ಅಂದರೆ ಸುಲಭದ ಮಾತಲ್ಲ…  ಹ್ಞೂಂ.. ಎಲ್ಲ ಹೊರಡಿ….

***

*ಎರಡು*

ರೈತರೊಬ್ಬರ ಮನೆ ಹಸುವೊಂದನ್ನು ಕೊಳ್ಳಲು ಗಿರಾಕಿಯೊಬ್ಬ ಬಂದಿದ್ದಾನೆ. ಹಸುವನ್ನು ನೋಡಿ ಮಾತಾಡಿ ವ್ಯಾಪಾರ ಕುದುರಿದೆ. ರೈತರು ಹಸುವನ್ನು ಎಂಟು ಸಾವಿರಕ್ಕಿಂತ ಕಡಿಮೆಗೆ ಕೊಡಲು ಒಪ್ಪುತ್ತಿಲ್ಲ.

ಗಿರಾಕಿ: ನೀವು ಸ್ವಲ್ಪ ಕಡಿಮೆ ಮಾಡಿಕೊಳ್ಳಬೇಕು. ನನಗೆ ಮನೆ ತಲಪುವಾಗ ಅದಕ್ಕೆ ಹತ್ತು ಸಾವಿರ ಬೀಳುತ್ತೆ.

ರೈತ:  ನೋಡಿ ನನಗೆ ಮಾರಬೇಕೆಂದೇನೂ ಇರಲಿಲ್ಲ. ನೋಡಿಕೊಳ್ಳಲು ಜನ ಇಲ್ಲ ಕೊಟ್ಟಿಗೆಯಲ್ಲಿ ಜಾಗ ಇಲ್ಲ.  ಅದಕ್ಕೆ ಕೊಡ್ತಾ ಇದ್ದೇನೆ. ಇಲ್ಲದಿದ್ದರೆ ಇಂಥಾ ಹಸುವನ್ನು ಹತ್ತು ಸಾವಿರಕ್ಕೆ ಕಮ್ಮಿ ನಾನು ಬಿಡುವವನೇ ಅಲ್ಲ.. ನಿಮಗೆ ಇಲ್ಲಿಂದ ಹದಿನೈದು ಕಿ.ಮೀ. ದೂರ ಇರವುದು. ಅದಕ್ಕೆಷ್ಟು ಖರ್ಚು ಬಂದೀತು?

ಗಿರಾಕಿ: ಸ್ವಾಮಿ ನಿಮಗೆ ಗೊತ್ತಿದ್ದೂ ಕೇಳುತ್ತೀರಿ ಈಗ ಹಸು ಸಾಗಣೆಗೆ ಕಷ್ಟ ಎಷ್ಟುಂಟು, ಪಂಚಾಯಿತಿಯಿಂದ ಒಪ್ಪಿಗೆ ಪತ್ರಬೇಕು, ಗೋಸಂರಕ್ಷಣೆಯವರನ್ನು ಕಾಣಬೇಕು, ಅವರು ಒಪ್ಪಬೇಕು. ಆಮೇಲೆ ವಾಹನದವರು, ಅವರಂತೂ ದನ ಸಾಗಿಸುವುದು ಅಂದರೆ ಸುಲಭದಲ್ಲಿ ಬರುವುದೇ ಇಲ್ಲ. ಇನ್ನು ಹೆಚ್ಚಿನ ಬಾಡಿಗೆ ವಾಹನಗಳೆಲ್ಲ ಇರುವುದು ಬ್ಯಾರಿಗಳದ್ದು, ಅವರಂತೂ ನಮಗ್ಯಾಕೆ ಇಲ್ಲದ ಉಸಾಬರಿ ಎಂದು ಹೆಚ್ಚಿಗೆ ಬಾಡಿಗೆ ಕೊಡುತ್ತೇನೆಂದರೂ ಹಸು ಸಾಗಿಸಲು ಬರುವುದಿಲ್ಲ. ಹಾಗಾಗಿ ಬಹಳ ಕಷ್ಟ.. ಸ್ವಾಮಿ

ರೈತ: ಅದಕ್ಕೆಲ್ಲ ನೀವು ಹೆದರ ಬೇಕಾಗಿಲ್ಲ, ನಿಮ್ಮ ಮನೆವರೆಗೆ ನಾನೇ ಬರುತ್ತೇನೆ, ಯಾರು ಏನು ಮಾಡ್ತಾರೆ?

ಗಿರಾಕಿ: ನೀವು ದೊಡ್ಡವರು, ನಿಮ್ಮನ್ನು ಹೇಗೆ ನಾನು ಕರೆಯಲಿ? ಆದರೆ ನೀವೇ ಜೊತೆಯಲ್ಲಿ ಬಂದರೆ ಒಳ್ಳೆಯದೇ ಆಯ್ತ..

ರೈತ: ಸರಿ ಹಾಗಾದರೆ ಹಸುವಿಗೆ ಹತ್ತು ಸಾವಿರ ಕೊಡ್ತೀರೋ?

ಗಿರಾಕಿ: ಸ್ವಾಮೀ ನೀವೇ ಮನೆವರೆಗೆ ಸಾಗಿಸಿಕೊಟ್ಟರೆ ಐನೂರು ಹೆಚ್ಚಿಗೆ ಸೇರಿಸಿ ಕೊಡ್ತೇನೆ. ಹೇಗೂ ಅವರಿವರಿಗೆ ಕೊಡುವ ಹಣ..

(ಪಂಚಾಯತ್ ಪರವಾನಿಗೆಯನ್ನು ಪಡೆದು ರೈತರು ಬಾಡಿಗೆ ವಾಹನ ಮಾತಾಡಿ ಸ್ವತಃ ಹಸುವಿನೊಂದಿಗೆ ಪ್ರಯಾಣಮಾಡಿ ಹದಿನೈದು ಕಿ.ಮೀ. ದೂರದ ಗಿರಾಕಿಯ ಮನೆಗೆ ತಲಪಿಸಿ ಬಂದರು.)

***

 *ಮೂರು*

(ಸಂಜೆ ರೈತರ ಮನೆಯ ಲ್ಯಾಂಡ್ ಫೋನು ರಿಂಗಾಯಿತು..ರೈತರು ಫೋನೆತ್ತಿದರು..)

ಹಲೋ.. ನಮಸ್ಕಾರ ನಾನು ಗೋರಕ್ಷಕದಳದ ಅಧ್ಯಕ್ಷ ಮಾತಾಡ್ತಾ ಇರೋದು…

ರೈತ: ನಮಸ್ಕಾರ…

ಗೋರಕ್ಷಕ : ಏನಿಲ್ಲಾ ಹೀಗೇ.. ನೀವು ನಿನ್ನೆ ಒಂದು ಹಸು ಮಾರಾಟ ಮಾಡಿದ್ರಂತೆ..

ರೈತ: ಮಾರಾಟ ಹೌದು ಅದು ನಿಜವಾದ ಅರ್ಥದಲ್ಲಿ ಮಾರಾಟ ಅಲ್ಲ.. ತುಂಬಾ ಕಡಿಮೆಗೆ ಕೊಟ್ಟೆ.. ಸಾಕುವುದಕ್ಕೆ ಕಷ್ಟ ಆಗ್ತಿತ್ತು. ಹಾಲು ಸ್ವಲ್ಪ ಕಡಿಮೆ ಆಗ್ತಾ ಇತ್ತು.

ಗೋರಕ್ಷಕ: ನೀವು ಕಡಿಮೆಗೆ ಕೊಡುವುದಾಗಿದ್ರೆ ಅದರ ಬದಲಿಗೆ ಮಠಕ್ಕೋ ಗೋಶಾಲೆಗೋ ಕೊಡಬಹುದಾಗಿತ್ತು. ನಿಮಗೇನು ಅದು ದೊಡ್ಡ ಹಣ ಅಲ್ಲ, ಅಲ್ಲದೇ ಪುಣ್ಯದ ಕೆಲಸ, ನೀವೇ ಹೋಗಿ ಗಿರಾಕಿಯ ಮನೆಗೆ ತಲುಪಿಸಿ ಬಂದಿರಂತೆ?

ರೈತ:  ಹೌದು  ಅವರಿಗೆ ಸಾಗಿಸಲು ಧೈರ್ಯವೇ ಇಲ್ಲ. ಹಾಗಾಗಿ ನಾನೇ ಹೋಗಬೇಕಾಯ್ತು.

ಗೋಕರಕ್ಷಕ: ನಿಮ್ಮ ಮುನ್ನೆಚ್ಚರಿಕೆ ಮೆಚ್ಚುವಂಥಾದ್ದೇ.. ಇರಲಿ … ಅಲ್ಲ ಕೆಲವುಸಾರಿ ಹೆಸರು ಸುಳ್ಳುಹೇಳಿಕೊಂಡು ಬ್ಯಾರಿಗಳು ವ್ಯಾಪಾರಕ್ಕೆ ಬರ್ತಾರೆ. ಅಲ್ಲ ನೀವು ಅಂತವರಿಗೆಲ್ಲ ಕೊಡುವವರಲ್ಲ ನಮಗೆ ಗೊತ್ತು. ಆದರೂ ಎಚ್ಚರಿಕೆಗೆ ಹೇಳಿದ್ದು.

ರೈತ: ಅದು ಹಾಗಲ್ಲ, ಈಗ ವಾಹನದವರೂ ಸಾಗಿಸಲು ಒಪ್ಪುತ್ತಿಲ್ಲ.

ಗೋರಕ್ಷಕ: ಹೌದು ಈಗ ನಾವು ಎಚ್ಚರಗೊಂಡಿದ್ದೇವೆ. ನಮ್ಮ ಕಣ್ಣು ತಪ್ಪಿಸುವುದು ಸುಲಭವಲ್ಲ. ಈಗ ನೀವೇ ಹೋದಿರಲ್ಲ ಆ ವ್ಯಾನಿನವನೂ ನನಗೆ ಮುಂಚಿತವಾಗಿ ಫೋನ್ ಮಾಡಿ ಒಪ್ಪಿಗೆ ಪಡೆದಿದ್ದ, ನೀವು ಎಂಟು ಸಾವಿರದ ಐನೂರಕ್ಕೆ ಕೊಟ್ಟದ್ದಲ್ಲವೋ ಹಸುವನ್ನು ..ಹ..ಹಹ್ಹ…ಹ್ಹಾ…

ರೈತ: ನಿಮಗೆ ಎಲ್ಲ ವಿವರ ಗೊತ್ತುಂಟು…

ಗೋರಕ್ಷಕ: ನಾವು ಹಾಗೇ ಸ್ವಾಮಿ, ರಕ್ಷಣೆ ಅಂದರೆ ಸುಲಭದ ಮಾತೇ..? ಅದಿರಲಿ, ನಾನೀಗ ಫೋನ್ ಮಾಡಿದ್ದು ಯಾಕಂದ್ರೆ ನಿಮ್ಮಲ್ಲಿ ಇನ್ನೂ ಒಂದೆರಡು ಮುದಿ ಹಸುಗಳು ಇದೆಯಲ್ಲ, ನಾವೀಗ ನಮ್ಮ ತಾಲೂಕಿನಿಂದ ಎಲ್ಲ ಮುದಿ ಜಾನುವಾರನ್ನೂ ಗೋಶಾಲೆಗಳಿಗೆ ಕಳಿಸುತ್ತಿದ್ದೇವೆ. ಈಗಾಗಲೇ ನಮ್ಮ ಕರಾವಳಿಯ ಗೋಶಾಲೆಗಳೆಲ್ಲ ಭರ್ತಿಯಾಗಿವೆ, ಹಾಗಾಗಿ ನಾವೀಗ ಘಟ್ಟದ ಮೇಲಿನ ಗೋಶಾಲೆಗಳಿಗೆ ಕಳಿಸುತ್ತಿದ್ದೇವೆ. ನೋಡಿ ರಾಮಣ್ಣ ಗೌಡ್ರಲ್ಲಿ ಎರಡು ಉಂಟು, ಪಟೇಲ್ರು ಒಂದು ಹೋರಿ ಕೊಡುತ್ತಿದ್ದಾರೆ, ಸೀನಪ್ಪಣ್ಣನಲ್ಲಿಂದ ಮೂರು ಹೀಗೆ.. ನೀವೇ ವಿಚಾರಿಸಿಕೊಳ್ಳಿ.. ಘಟ್ಟದ ಗೋಶಾಲೆ ಆದ್ರಿಂದ ಸ್ವಲ್ಪ ಸಾಗಾಣಿಕೆ ಖರ್ಚು ನೀವೂ ಕೊಡ್ಬೇಕು. ಒಂದು ಜಾನುವಾರಿಗೆ ಐನೂರು ಕೊಡಿ ಸಾಕು. ಇಲ್ಲೇ ಆಗಿದ್ರೆ ನಾವೇ ಕೈಯಿಂದ ಹಾಕ್ತಿದ್ದೆವು. ಮುಂದಿನ ವಾರ ಲಾರಿ ಬರುವ ಮುಂಚೆ ಫೋನ್ ಮಾಡ್ತೇನೆ. ಇನ್ನು ಯಾವುದನ್ನೂ ಮಾರುವ ಯೋಚನೆ ಇಲ್ವಲ್ಲ ನಿಮಗೆ.. ಹಾಗೆ  ..ಮಾರಿದರೂ ನಮ್ಮ ಹುಡುಗರೇ ಸಾಗಿಸಬೇಕಲ್ಲಾ… ಹಹ್ಹಹ್ಹಾ…… ನಿಮ್ಮಲ್ಲಿಂದ ಎರಡು ಹಸು ಅಂತ ಬರ್ಕೊಂಡಿದ್ದೇನೆ…

ನಮಸ್ಕಾರ…

***

*ನಾಲ್ಕು*

ಮುಂದಿನ ಒಂದು ವಾರದಲ್ಲಿ ರೈತರ ಮನೆಯಂಗಳದಲ್ಲಿ ಗೋರಕ್ಷಕದಳದವರ ಲಾರಿಬಂದು ನಿಂತಿತು. ರೈತರು ಎರಡು ಮುದಿಹಸುಗಳನ್ನೂ ಲಾರಿಗೆ ಹತ್ತಿಸಿ ಒಂದುಸಾವಿರ ರೂಪಾಯಿ ಸಾಗಾಣಿಕೆ ಖರ್ಚು ನೀಡಿದರು. ಲಾರಿ ಡ್ರೈವರ್ ಹದಿನೈದು ವರ್ಷಗಳ ಹಿಂದೆ ಅವರದೇ ಊರಿನಲ್ಲಿ ಕೂಲಿ ಮಾಡುತ್ತಿದ್ದ ತನಿಯಪ್ಪನ ಮಗ ಸುಂದರ. ಅವನೇ ಗುರುತು ಹಿಡಿದು ರೈತರನ್ನು ಮಾತಾಡಿಸಿದ. ಲಾರಿಯಲ್ಲಿ ಆಗಲೇ ನಾಲ್ಕೈದು ಜಾನುವಾರುಗಳಿದ್ದವು. ಎಲ್ಲವನ್ನೂ ತುಂಬಿಕೊಂಡು ಲಾರಿ ಮುಖ್ಯ ರಸ್ತೆಯನ್ನು ಹಾದು ಹೈವೇಯತ್ತ ಚಲಿಸಿತು. ನಾಲ್ಕಾರು ಜನ ರೈತರು ಪುಣ್ಯ ಕಟ್ಟಿಕೊಂಡೆವೆಂದೋ ಮುದಿ ಹಸುಗಳನ್ನು ವಿಲೇವಾರಿಯಾದವೆಂದೋ ಹಗುರಾದರು.

ತಿಂಗಳ ನಂತರ ಪೇಟೆಯ ಹೋಟೆಲಿನಲ್ಲಿ ಕಾಫಿ ಕುಡಿಯುವಾಗ ರೈತರಿಗೆ ಲಾರಿ ಚಾಲಕ ಸುಂದರ ಕಾಣಸಿಕ್ಕಿದ. ತಮ್ಮೂರ ಹುಡುಗನೆಂಬ ಪ್ರೀತಿಯಿಂದ ರೈತರು ಮಾತಾಡಿಸಿದರು. ಅವತ್ತು ಯಾವ ಗೋಶಾಲೆಗೆ ಹಸುಗಳನ್ನು ಬಿಟ್ಟಿರಿ ಎಂದು ವಿಚಾರಿಸಿದರು. ಅದಕ್ಕೆ ಸುಂದರ ಕೊಟ್ಟ ಉತ್ತರ ಹೀಗಿತ್ತು. “ಅದು ನಾನು ಖಾಯಂ ಓಡಿಸುವ ಲಾರಿ ಅಲ್ಲಣ್ಣ.. ನಾನು ಅವತ್ತು ಟೆಂಪರರಿ, ಕೇರಳ ಗಡಿವರೆಗೆ ಮಾತ್ರ ನಾನು ಓಡಿಸಿದೆ. ನಂತರ ಡ್ರೈವರ್ ಬದಲಾದರು.ನನಗೆ ಒಂದು ಸಾವಿರ ಕೊಟ್ಟರು. ನಾನು ಬಸ್ಸಿನಲ್ಲಿ ವಾಪಸ್ ಬಂದೆ. ಯಾರಿಗೂ ಹೇಳ್ಬೇಡಿ.. ಬಡವ ಬದುಕ್ಬೇಕು…”

*** 

[ಇದು ಕತೆಯಲ್ಲ, ನಾಟಕದ ದೃಶ್ಯಗಳೂ. ಅಲ್ಲ ನಮ್ಮ ಕರಾವಳಿ ಜಿಲ್ಲೆಗಳಲ್ಲಿ ನಡೆಯತ್ತಿರುವ ನಿಜ ಘಟನೆಗಳನ್ನು ಆಧರಿಸಿದ ಸಂಗತಿಗಳು.]

19 thoughts on “ಕರಾವಳಿಯಲ್ಲಿ ಗೋಸಂರಕ್ಷಣೆ ಮತ್ತು ದೇಶಸೇವೆ

  1. anand prasad

    ಲೇಖನ ಮೂಲಭೂತವಾದದ ಕೆಲವು ಉದಾಹರಣೆಗಳನ್ನು ನಾಟಕೀಯವಾಗಿ ಅನಾವರಣಗೊಳಿಸಿದೆ. ಹಿಂದೂ ರಾಷ್ಟ್ರ ನಿರ್ಮಾಣವಾದರೆ ಯಾವ ರೀತಿ ಭಾರತದ ತಾಲಿಬಾನೀಕರಣ ಆಗಬಹುದು ಎಂಬುದರ ಮುನ್ಸೂಚನೆಯಂತೆ ಇದು ಕಂಡುಬರುತ್ತದೆ. ಹಿಂದೂ ರಾಷ್ಟ್ರ ನಿರ್ಮಾಣವಾಗುವುದೆಂದರೆ ಪ್ರಜಾಪ್ರಭುತ್ವ ವ್ಯವಸ್ಥೆ ಹೋಗಿ ಬ್ರಿಟಿಷರು ಬರುವುದಕ್ಕಿಂತಲೂ ಮೊದಲು ಇದ್ದ ಊಳಿಗಮಾನ್ಯ ವ್ಯವಸ್ಥೆಯ ಪುನರ್ನಿರ್ಮಾಣ ಎಂಬುದು ಕಂಡುಬರುತ್ತದೆ. ಯಾರು ಧರ್ಮದ, ದೇವರ ರಕ್ಷಣೆಯ ಹೆಸರಿನಲ್ಲಿ ಹೆಚ್ಚು ಜನ ಪುಂಡರ ಗುಂಪನ್ನು ಕಟ್ಟುತ್ತಾನೋ ಅವನೇ ಊರಿನ ಪಾಳೆಯಗಾರ ಎಂಬುದು ಇದರಿಂದ ತಿಳಿದುಬರುತ್ತದೆ. ಇಂಥ ಮೂಲಭೂತವಾದ ಬೆಳೆಸುವುದು ಪ್ರಜಾಪ್ರಭುತ್ವ ವ್ಯವಸ್ಥೆ ನಾಶಕ್ಕೆ ಕಾರಣವಾದೀತು ಎಂಬ ಎಚ್ಚರ ನಮ್ಮಲ್ಲಿ ಮೂಡಬೇಕಾದ ಅಗತ್ಯ ಇದೆ.

    Reply
  2. ashok

    ಇದು ಕಥೆಯೋ ನಾಟಕವೋ ಹಾಗಿದ್ದರೆ ಚೆಂದಿತ್ತು! ಕರಾವಳಿಯ ದುರ್ದಿನಗಳ ಸಂಕೇತವಾಗಿರುವುದು ಇಂದಿನ ಮತ್ತು ಮುಂದಿನ ದುರದೃಷ್ಟ.

    Reply
  3. jagadishkoppa

    ಪ್ರಸಾದ್ ನಿಮ್ಮ ಲೇಖನ ಪ್ರಭಾವಶಾಲಿಯಾಗಿದೆ. ಮತ್ತಷ್ಟು ವಿಸ್ತರಿಸಿ ನಾಟಕದ
    ರೂಪಕ್ಕೆ ತನ್ನಿ. ನಾಟಕದ ಮೂಲಕ ಅನಕ್ಷರಸ್ತ ಅಮಾಯಕರಿಗೂ ನಿಮ್ಮ ಆಶಯಗಳನ್ನು ತಲುಪಿಸಬಹುದು.

    Reply
  4. NAVEEN SOORINJE

    ಕರಾವಳಿಯ ನಿಜ ರೂಪವನ್ನು ಲೇಖನಕ್ಕಿಳಿಸಿದ್ದೀರಿ… ಧನ್ಯವಾದಗಳು …. ದನ ಸಾಗಾಟ ನಡೆಸೋ ಮುಸ್ಲೀಮರನ್ನು ನಿಲ್ಲಿಸುವುದು ಮತ್ತು ಗೋ ರಕ್ಷಣೆ ಎನ್ನುವುದು ದನ ಸಾಗಾಟಗಾರರ ಮಧ್ಯೆ ನಡೆಯುವ ವ್ಯವಹಾರಿಕ ಸಂಘರ್ಷವೇ ಹೊರತು ಬೇರೇನೂ ಅಲ್ಲ. ಮುಸ್ಲೀಮರು ಕಷ್ಟಪಟ್ಟು ದನ ಸಾಗಾಟದ ವ್ಯವಹಾರ ಮಾಡುತ್ತಾರೆ ಎಂಬುದನ್ನು ಸಹಿಸಲಾಗದ ಒಂದಷ್ಟು ಮಂದಿ ಹಿಂದೂ ಸಂಘಟನೆಗಳ ಹೆಸರಲ್ಲಿ ಗೋ ರಕ್ಷಣೆಯ ಬ್ಯಾನರ್ ಅಡಿಯಲ್ಲಿ ನಡೆಸುವ ಪುಕ್ಕಟೆ ವ್ಯವಹಾರವೇ ಗೋ ಮಾತೆಯ ರಕ್ಷಣೆ ,
    — NAVEEN SOORINJE

    Reply
  5. ಅಜಯ್

    ಕರಾವಳಿಯಲ್ಲಿ ನಡೆಯುತ್ತಿರುವುದೆಲ್ಲಾ ಇದೇ ಅಲ್ಲ. ಇದು ಕೆಲ ಸಮಾಜಘಾತುಕರು ಗೋರಕ್ಷಣೆಯ ಹೆಸರಲ್ಲಿ ಮಾಡುತ್ತಿರುವ ಅಪರಾಧ. ಇದರಿಂದ ನಿಜವಾದ ಗೋಪ್ರೇಮಿಗಳಿಗೆ, ರಕ್ಷಕರಿಗೆ ಕೆಟ್ಟ ಹೆಸರು. ಗೋರಕ್ಷಣೆ ಮಾಡುವವರೆಲ್ಲರೂ ಇದೇ ರೀತಿ ಮಾಡುತ್ತಾರೆ ಎಂಬ ಅರ್ಥ ಕಲ್ಪಿಸುವುದು ಸರಿಯಲ್ಲ.

    Reply
    1. prasad raxidi

      ಹೌದು, ದನ ಸಾಕುವವರಲ್ಲಿ ಹಿಂದೂಗಳು, ಮಸ್ಲಿಮರು ಹಾಗೇ ಕ್ರಿಶ್ಚಿಯನ್ನರು ಎಲ್ಲರೂ ಇದ್ದಾರೆ. ಹಿಂದೂಗಳಲ್ಲಿ ಗೋಮಾಂಸ ಸೇವಿಸುವವರು ಇದ್ದಂತೆ, ಮುಸ್ಲಿಮ್ ಕ್ರಿಶ್ಚಿಯನ್ನರಲ್ಲೂ, ಹಾಗೇ ದಲಿತರಲ್ಲೂ ಗೋಮಾಂಸ ಸೇವಿಸದವರೂ ಇದ್ದಾರೆ, ನಮ್ಮ ನೆರೆಯವರಾಗಿ ಮಾಮುಬ್ಯಾರಿ ಎಂಬವರು ಇದ್ದರು, ಸ್ವತಃ ಗದ್ದೆ ಉಳುತ್ತಿದ್ದ ಅಪ್ಪಟ ರೈತ, ಅವರ ಕುಟುಂಬದವರು ಎಂದೂ ಗೋಮಾಂಸವನ್ನು ಸೇವಿಸುತ್ತಿರಲಿಲ್ಲ, ನನಗೆ ತಿಳಿದಂತೆ ಅವರು ಹಸುಗಳನ್ನು ಮಾರುತ್ತಲೇ ಇರಲಿಲ್ಲ, ಹಾಗೇ ನನ್ನ ಗೆಳೆಯ ಹಮೀದ್ ರಕ್ಷಿದಿ ಗಂಜಲದ ಬಗ್ಗೆ, ಸಾವಯವ ಕೃಷಿಯ ಬಗ್ಗೆ ತುಂಬ ಪ್ರಯೋಗ ಮಾಡಿದವರು, ನಾಟಿಹಸುಗಳ ಬಗ್ಗೆ ಗಂಟೆಗಟ್ಟಲೆ ಮಾತಾಡ ಬಲ್ಲರು… ನಮ್ಮಂತವರ ತಕರಾರು ಕೇವಲ ತಾಲಿಬಾನ್ ಸಂಸ್ಕೃತಿಯನ್ನು ಹೇರುವವರ ಬಗ್ಗೆ ಮಾತ್ರ.. ಹಾಗೇ ಆಹಾರ ಮತ್ತು ಧರ್ಮ ಪ್ತತಿಯೊಬ್ಬನ ವೈಯಕ್ತಿಕ ಆಯ್ಕೆಯ ವಿಷಯವಾಗಿರಬೇಕೆಂದಷ್ಠೇ ನನ್ನ ನಿಲುವು..

      Reply
  6. ಶ್ರೀಪತಿ ಗೋಗಡಿಗೆ

    ವಾಸ್ತವ ಸಂಗತಿಗಳನ್ನು ಸರಿಯಾಗಿ ವಿವರಿಸಿದ್ದೀರಿ.
    ಸಾಬರು ದನ ತಿನ್ನುತ್ತಾರೆನ್ನುವುದೇನೋ ನಿಜ. ( ಹಿಂದುಗಳೂ ತಿನ್ನುತ್ತಾರೆನ್ನುವುದು ಈ ಚೆಡ್ಡಿಗಳಿಗೆ ಗೊತ್ತಿಲ್ಲದಿರುವ ವಿಷಯವಲ್ಲ.) ಆದರೆ ಸಾಬರು ದನಗಳನ್ನು ಸಾಕುವುದನ್ನು ನಾನು ಎಲ್ಲಿಯೂ ನೋಡಿಲ್ಲ. ಎಲ್ಲಾದರೂ ಇದ್ದರೂ ಅದು ತುಮಬಾ ವಿರಳ. ಹಾಗಿದ್ದರೆ ಸಾಬರಿಗೆ ತಿನ್ನಲಿಕ್ಕೆ ದನಗಳು ಎಲ್ಲಿಂದ ಸಿಗುತ್ತವೆ ಎಂದು ಚೆಡ್ಡಿಗಳು, ಭಜರಂಗಿಗಳು ಉತ್ತರ ನೀಡುತ್ತಾರೆಯೇ ?
    ಅದಕ್ಕೆ ಉತ್ತರ – ಸಾಬರಿಗೆ ಹಸುಗಳನ್ನು ಮಾರುವುದು ಅಪ್ಪಟ ಹಿಂದುಗಳೇ.

    Reply
  7. ದಿನೇಶ್ ಕುಕ್ಕುಜಡ್ಕ

    ಹಿಂದೆಲ್ಲಾ ನಮ್ಮೂರಿನ ಬಹುತೇಕ ಶೂದ್ರ ಸಮುದಾಯದ ಮನೆಯ ಕೊಟ್ಟಿಗೆಗಳಲ್ಲೂ ಕನಿಷ್ಠ ಒಂದೊಂದು ‘ನಡೆ’ಯಾದರೂ ಹಸುಗಳಿರುತ್ತಿದ್ದವು. ಮದುವೆಯಾಗಿ ಗಂಡನ ಮನೆ ಸೇರುವ ಹೆಣ್ಣಿಗೆ ತವರು ಮನೆಯಿಂದ ಕೊಡಲ್ಪಡುವ ಉಡುಗೊರೆಯೆಂದರೆ, ಹಸು ಮತ್ತು ಕರು. ನೆಂಟರಿಷ್ಟರ ನಡುವೆ ಬೆಸೆಯಲ್ಪಡುವ ಪರಸ್ಪರ ಸಂಬಂಧಗಳು – ವ್ಯಾವಹಾರಿಕತೆಗೂ ಮೀರಿದ ಒಂದು ಕೊಡು ಕೊಳ್ಳುವಿಕೆ ಹಸು-ಕರು-ಎತ್ತು-ಕೋಣಗಳ ಮೂಲಕ ಹೆಚ್ಚಾಗಿ ನಡೆಯುತ್ತಿತ್ತು. ತೇಜಸ್ವಿಯವರ ‘ಅವನತಿ’ ಕತೆಯ ಸೂರಾಚಾರಿಯಂಥ ಹಳ್ಳಿಯ ನಿಜಪ್ರತಿನಿಧಿಗಳಂತೂ ಊರ ಉಸಿರಾಗಿದ್ದರು! ಹಸು- ಹಬ್ಬಕ್ಕೊಮ್ಮೆ ದೇವರಾಗುತ್ತಿತ್ತು. ವರ್ಷಪೂರ್ತಿ ನಿಷ್ಠೆಯ ಕೆಲಸದಾಳಾಗುತ್ತಿತ್ತು. ಮನುಷ್ಯ- ಮನುಷ್ಯರ ಉಸಿರು ಬೆಸೆಯುವ ಜೀವಂತ ಕೊಂಡಿಯಾಗುತ್ತಿತ್ತು; ವ್ಯವಹಾರಕ್ಕೆ ವಸ್ತುವಾಗುತ್ತಿತ್ತು. ನಿಜಾರ್ಥದಲ್ಲಿ ಬದುಕಿಗೆ ಕಾಮಧೇನೇ ಆಗಿರುತ್ತಿತ್ತು!
    ಇವತ್ತು ಖೇದವಾಗುತ್ತಿದೆ. ಯಾವುದೋ ರಾಜಕೀಯ ಹಿತ ರಕ್ಷಣೆಯ ಒಳದಾರಿಯಲ್ಲಷ್ಟೇ ಹಸು ಸಾಗಾಟವಾಗುತ್ತಿದೆಯಷ್ಟೇ ಹೊರತು, ‘ಅಪ್ಪ ಕೊಟ್ಟೆಮ್ಮೆ ಹೊಡಕೊಂಡು’ ಹೋಗುವ ಯಾವ ತವರ ವಾತ್ಸಲ್ಯದ ಹಾದಿಯಲ್ಲೂ ಈ ಹಸು ಸಾಗುತ್ತಿಲ್ಲ. ಹಸು ಸಾಕುವುದೆಂದರೆ, ಉಡಿಯ ಕೆಂಡವ ಊದುತ್ತ ಉರಿಗೆ ಆಸ್ಪದ ಕೊಡುವುದಷ್ಟೇ ಎಂಬಲ್ಲಿಗೆ ತಲುಪಿಬಿಟ್ಟಿದೆ ಸ್ಥಿತಿ! ‘ರಕ್ಷಣೆ’-‘ಸಂರಕ್ಷಣೆ’ ಇತ್ಯಾದಿ ಪದಗಳ ರಾಜಕೀಯ ವ್ಯಾಖ್ಯಾನಗಳು ನಿಜ ಬದುಕಿನ ಉಸಿರು ಹೀರಿಬಿಟ್ಟಿರುವುದನ್ನು ನೆನೆದು ಸಂಕಟವಾಗುತ್ತಿದೆ.

    ಯಾವುದು ‘ಸಂಸ್ಕೃತಿ’ಯ ರಕ್ಷಣೆ?!

    Reply
  8. vasanth

    ಸಾರ್,

    ಹಿಂದೂತ್ವ ವಾದಿಗಳ ನಿಜಬಣ್ಣವನ್ನು ಬಯಲುಮಾಡಿದ್ದಿರಿ. ಸುಳ್ಳ ಹೇಳುವುದರಲ್ಲಿ ಈ ಜನ ಬಿಟ್ಟರೆ ಇಲ್ಲ.

    Reply
  9. RAGHAVENDRA NAVADA

    ಮೆಲಿನ ಲೆಖನ ತಮಾಷೆಯಾಗಿ ಕ0ಡರು ಇದರಲ್ಲಿ ನಿಜವೂ ಅಡಗಿದೆ,ಆದರೆ ಹಸುವನ್ನು ವ್ಯಾಪಾರ ಅಥವ ಮಾ0ಸ ಮಾರಾಟಕ್ಕಾಗಿ ಮುಸ್ಲಿಮರು ಉಪಯೊಗಿಸುವವರು ಎ0ಬುದಕ್ಕಿ0ತ ಹಿ0ದುಗಳು ತಮ್ಮ ಹಸುವನ್ನು ಮಾರಾಟ ಮಾಡುವವರದ್ದು ಮೊದಲ ತಪ್ಪು

    Reply
    1. anand prasad

      ಹಸುಗಳನ್ನು ಮಾರಾಟ ಮಾಡುವುದು ತಪ್ಪು ಎಂಬುದು ಸಮಂಜಸವಲ್ಲ. ಒಂದು ಹಸು ವರ್ಷಕ್ಕೊಂದು ಕರು ಹಾಕಿದರೆ ಕೆಲವು ವರ್ಷಗಳಲ್ಲಿ ಇವುಗಳ ಸಂಖ್ಯೆ ಬೆಳೆಯುತ್ತದೆ. ಇದನ್ನು ರೈತರು ಮಾರಾಟ ಮಾಡದೆ ಸಾಕಲು ಸಾಧ್ಯವೇ? ಗಂಡು ಕರುಗಳನ್ನು (ಹೋರಿಗಳನ್ನು) ಸಾಕುವುದು ರೈತರಿಗೆ ಹೊರೆಯಾಗುತ್ತದೆ. ಬಹುತೇಕ ಇಂದು ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ಗದ್ದೆಗಳು ತೋಟಗಳಾಗಿ ಪರಿವರ್ತನೆ ಹೊಂದಿವೆ. ಹೀಗಾಗಿ ಹೋರಿಗಳನ್ನು ಗದ್ದೆ ಉಳುಮೆಗೆ ಬಳಸುವುದಿಲ್ಲ. ಅನುತ್ಪಾದಕ ಹೋರಿಗಳನ್ನು ಸಾಕುವುದು ಎಂಥ ಶ್ರೀಮಂತನಿಗೆ ಆದರೂ ಹೊರೆಯೇ. ಹೀಗಿರುವಾಗ ಸಾಮಾನ್ಯ ರೈತರ ಪಾಡೇನು?

      Reply
  10. ಅರುಣ್ ಕುಮರ್

    ನಮ್ಮ ಮನೆಗೆ ಹಾಲು ಸರಬರಾಜುಮಾಡುವವ ಮುಸ್ಲಿಮನಾಗಿದ್ದು ೫ ಹಸುಗಳನ್ನು ಸಾಕಿದ್ದಾನೆ, ನಮ್ಮ ಮನೆ ಮುಂದೆಯೇ ಹಸುವಿನ ಹಾಲನ್ನು ಕರೆದು ಅಳತೆಮಾಡಿಕೊಟ್ಟು ಹೋಗುತ್ತಾನೆ

    Reply
  11. ಗೋವಿಂದ ನೇಲ್ಯಾರು

    ದಕ್ಷಿಣ ಕನ್ನಡದ ಹಳ್ಳಿಯೊಂದರಲ್ಲಿ ವಾಸಿಸುವ ನನಗೆ ಬರಹದಲ್ಲಿ ಈ ಘಟನೆಗಳ ಮೂಲ ಕಾರಣ ಬಿಟ್ಟಿರುವಂತೆ ಅನ್ನಿಸುತ್ತದೆ. ನಮ್ಮ ನಾಡನ್ನು ಕಾಂಗ್ರೇಸ್ ಎನ್ನುವ ಪಕ್ಷ ಬಹು ದೀರ್ಘ ಕಾಲ ಆಳಿತು ಅನ್ನುವುದೇ ಈ ಸಮಸ್ಯೆಗಳ ಮೂಲ. ಉದ್ದೇಶ ಪೂರ್ವಕ ಪುಂಡುಪೋಕರಿಗಳ ಬೆಳವಣೆಗೆಗೆ ಅನುಕೂಲವಾಗುವ ರೀತಿ ಹಲವು ನಿರ್ಬಂದಗಳು ಜಾರಿಯಲ್ಲಿದ್ದವು. ಊರ ಕಾಂಗ್ರೇಸ್ ಪುಡಾರಿಗಳ ವರ್ತನೆಯೂ ಪೂರಕವಾಗಿತ್ತು. ಹಾಗೆ ಇವರಿಗೆ ಸುಲಭದ ಹಣ ಓಡಾಡಲು ಪ್ರಾರಂಬವಾಯಿತು. ಕ್ರಮೇಣ ಕಾಂಗ್ರೇಸ್ ಬಡವಾಯಿತು. ಈ ಪುಂಡರ ಕೂಟ ಕೇಸರಿ ಪತಾಕೆ ಹಿಡಿದುಕೊಂಡಿತು. ಅಂದು ಕಾಂಗ್ರೇಸು ಪಕ್ಷ ಇವರ ಪುಂಡುತನ ವಿರೋದಿಸುತ್ತಿರಲಿಲ್ಲ. ಇಂದು ಬಿಜಿಪಿ ಇವರಿಗೆ ಪರೋಕ್ಷ ಬೆಂಬಲ ಕೊಡುತ್ತಿದೆ. ನಾಳೆ ಲೀಗ್ ಆಡಳಿತಕ್ಕೆ ಬಂದರೆ ಇವರು ಹಸಿರು ಪತಾಕೆ ಧರಿಸುತ್ತಾರೆ. ಇವರು ಯಾವುದೇ ತತ್ವಕ್ಕೂ ನಿಷ್ಟರಲ್ಲ. ನಾನು ಹೇಳಲು ಇಚ್ಚಿಸುವುದೇನಂದರೆ ಮೂಲತ ಇದು ಕಾಂಗ್ರೇಸಿನ ಶಿಶು ಹೊರತು ಚಡ್ಡಿ ಗರಡಿಯಿಂದ ಬಂದುದಲ್ಲ. ಇಲ್ಲಿ ವಿನಾ ಕಾರಣ ಹಿಂದುತ್ವವಾದಿಗಳ ಎಳೆದು ತರುವುದು ತಪ್ಪು ಅನಿಸುತ್ತದೆ. ಇವರಲ್ಲಿ ಓಡಾಡುವ ಹಣ ಕಡಿಮೆಯಾದರೆ ಚಟುವಟಿಕೆಗಳೂ ಕಮ್ಮಿಯಾಗುತ್ತದೆ. ಆದರೆ ಪುಡಾರಿಗಳು ಪಕ್ಷಾತೀತವಾಗಿ ತಮ್ಮ ಸ್ವಾರ್ಥಸಾದನೆಗೆ ತೊಡಗುತ್ತಾರೆ.

    Reply
    1. prasad raxidi

      ನೀವು ಹೇಳುವುದು ನಿಜ ಈಬಗ್ಗೆ ನಾನೂಕೂಡಾ ಬೇರೆ ಸಂದರ್ಭದಲ್ಲಿ ಬರೆದಿದ್ದೇನೆ. ದ.ಕ ಜಿಲ್ಲೆಯಲ್ಲಿ ಾರಂಭದ ದಿನಗಳಲ್ಲಿ ಶ್ರೀರಾಮ ಸೇನೆಯನ್ನು ಬೆಳಸಿದವರು ಕಾಂಗ್ರೆಸಿಗರೇ ಎಂದು ಎಲ್ಲರಿಗೂ ತಿಳಿದಿರುವ ವಿಷಯವೇ. ದೇಶದಲ್ಲಿ ಕೋಮುವಾದಿ -ಹಣ- ಮತ್ತು ಅಧಿಕಾರದ ರಾಜಕಾರಣ ಈ ಮಟ್ಟಕ್ಕೆ ಬೇಳೆದು ನಿಲ್ಲಲು ದೀರ್ಘ ಕಾಲ ದೇಶವನ್ನಾಳಿದ ಕಾಂಗ್ರೆಸಿನ ದುರಾಡಳಿತ ಮತ್ತು ಪ್ರಾದೇಶಿಕ ಪಕ್ಷಗಳ ಅವಕಾಶವಾದಿ ರಾಜಕಾರಣ ,ಕಾರಣವಾಗಿದೆ.

      Reply
  12. Chethan

    go rakshaneya hesaralli yee munche adeshto muslim yuvakarannu maaranantikavagi halle maadallaagide.aadi udupiyalli maanava samudayave tale taggisuvantaha bettale prakarana nadedide.tathaa katita go rakshakaru nadu beediyalli tande maganannu bettale maadi yaavude sankochavillade nagara sabheya sadasyaraagi tirugaaduttiddare,

    Reply

Leave a Reply to ದಿನೇಶ್ ಕುಕ್ಕುಜಡ್ಕ Cancel reply

Your email address will not be published. Required fields are marked *