imrana

ಹಂಪಿಯಲ್ಲಿ ಬಂಧಿತನಾದ “ಭಯೋತ್ಪಾದಕ” ಇಮ್ರಾನ್ ಏನಾದ?


– ಪರಶುರಾಮ ಕಲಾಲ್


 

‘ಭಯೋತ್ಪಾದಕ’ ಅಂತಹ ಪೊಲೀಸರು ಸಂದೇಹ ಪಡುವುದಕ್ಕೆ ಅರ್ಹತೆ ಏನು ಅಂದರೆ ನೀವು ಮುಸ್ಲಿಂ ಆಗಿರಬೇಕು ಹಾಗೂ ನಮಾಜು ಮಾಡುವುದಕ್ಕೆ ಮಸೀದಿಗೆ ಹೋಗುತ್ತಿರಬೇಕು. ನಿಮ್ಮನ್ನು ಸಂದೇಹದ ಮೇಲೆ ಬಂಧಿಸಿದರೆ ಉಳಿದಿದ್ದನ್ನು ಪೊಲೀಸರು ಹಾಗೂ ಮಾಧ್ಯಮದವರು ಭಯೋತ್ಪಾದಕ ಸಂಘಟನೆಗಳನ್ನು ತಲೆಗೆ ಕಟ್ಟಿ ವದಂತಿಗಳನ್ನು ಅವರೇ ಹಬ್ಬಿಸುತ್ತಾರೆ. ಬೆಂಗಳೂರಿನ ಅಪರಾಧ ವಿಭಾಗದ ಪೊಲೀಸರ ಕಾರ್ಯಾಚರಣೆ ಹಾಗೂ ಈ ಬಗ್ಗೆ ಪತ್ರಿಕೆಗಳಲ್ಲಿ ಬರುವ ಪುಂಖಾನುಪುಂಖ ಸುದ್ದಿಗಳನ್ನು ನೋಡಿದ ಮೇಲೆ ನನಗೆ ಅನ್ನಿಸಿದ್ದು ಇಷ್ಟು.

ಹಾಗಾದರೆ ಈಗ ಬಂಧಿಸಿರುವವರು ಸಾಚಾನಾ, ಅವರು ಭಯೋತ್ಪಾದಕರಲ್ಲವಾ ಎಂದು ಕೇಳಿದರೆ ಅದು ಮುಗ್ಧ ಪ್ರಶ್ನೆಯಾಗುತ್ತದೆ. ತನಿಖೆ ನಡೆಸಿ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಪೊಲೀಸರು ನ್ಯಾಯಾಲಯಕ್ಕೆ ದೂರು ಸಲ್ಲಿಸಿದ ಮೇಲೆ ನ್ಯಾಯಾಲಯ ಅದನ್ನು ಒಪ್ಪಿಕೊಂಡು ಶಿಕ್ಷೆ ವಿಧಿಸಿದಾಗ ಮಾತ್ರ ಗೊತ್ತಾಗುವ ಸಂಗತಿಯಾಗಿದೆ. ಇಷ್ಟು ಹೇಳುವುದಕ್ಕೆ ಕಾರಣವಿದೆ. 5 ವರ್ಷದ ಹಿಂದೆ ಹಂಪಿಯಲ್ಲಿ ಶಂಕಿತ ಉಗ್ರ ಇಮ್ರಾನ್ ಎಂಬುವವನ ಬಂಧನವನ್ನು ಇದೇ ಸಿಸಿಬಿ ಪೊಲೀಸರು ನಡೆಸಿದರು. ಆಗ ಕೂಡಾ ಮಾಧ್ಯಮಗಳಲ್ಲಿ ಶಂಕಿತ ಉಗ್ರನ ಕುರಿತು ಪುಂಖಾನುಪುಂಖ ವರದಿಗಳು ಬಂದವು.

ಅದರಲ್ಲಿ ಆತ ಲಕ್ಸರಿ ತೋಯಿಬಾ ಸಂಘಟನೆಯ ದಕ್ಷಿಣ ಭಾರತದ ಕಮಾಂಡರ್ ಆಗಿದ್ದ. ಕರ್ನಾಟಕ ಸೇರಿದಂತೆ ವಿವಿಧ ಕಡೆ ಉಗ್ರರಿಗೆ ತರಬೇತಿ ನೀಡುತ್ತಿದ್ದನು. ಪೊಲೀಸರು ಆತನ ಬಳಿ ಎಕೆ47 ಹಾಗೂ ಇತರ ಮಾರಕಾಸ್ತ್ರಗಳನ್ನು ವಶ ಪಡಿಸಿಕೊಂಡಿದ್ದಾರೆ. ಇದಾಗಿ ಇಷ್ಟು ವರ್ಷಗಳ ನಂತರ ಈ ಇಮ್ರಾನ್ ಏನಾದ ಆತನ ಬಗ್ಗೆ ತನಿಖೆ ಎಲ್ಲಿಗೆ ಬಂತು ಅಂತಾ ನಮ್ಮ ಮಾಧ್ಯಮಗಳು ಕೇಳಿಲ್ಲ. ಸಿಸಿಬಿ ಪೊಲೀಸರು ಈ ಬಗ್ಗೆ ಏನೂ ಹೇಳುತ್ತಿಲ್ಲ.

imranaಇಮ್ರಾನ್ ಮೂಲತಃ ಜಮ್ಮು-ಕಾಶ್ಮೀರಕ್ಕೆ ಸೇರಿದ ವ್ಯಕ್ತಿಯಾಗಿದ್ದನು. ಈತ ಹಂಪಿಗೆ ವ್ಯಾಪಾರಿಯಾಗಿ ಬಂದು ಹಂಪಿ ವಿರೂಪಾಕ್ಷ ಬಜಾರ್‌ನಲ್ಲಿ ಒಂದು ಕೊಠಡಿ ಬಾಡಿಗೆ ಹಿಡಿದು ಅಲ್ಲಿ ಮುತ್ತು ರತ್ನ ಮತ್ತಿತರ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಯೊಂದನ್ನು ತೆರೆದಿದ್ದನು. ಹೊಸಪೇಟೆಯ ರಾಣಿಪೇಟೆಯಲ್ಲಿ ಒಂದು ಗಲ್ಲಿಯಲ್ಲಿ ಮಹಡಿ ಮನೆಯೊಂದನ್ನು ಬಾಡಿಗೆ ಪಡೆದು ವಾಸ್ತವ್ಯದಲ್ಲಿದ್ದನು.  ಹಂಪಿಯಲ್ಲಿ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಜಮ್ಮು-ಕಾಶ್ಮೀರಕ್ಕೆ ಸೇರಿದ 40ಕ್ಕೂ ಹೆಚ್ಚು ಯುವಕರ ಅಲಂಕಾರಿಕ ವಸ್ತುಗಳು ಹಾಗೂ ಇತರೆ ಅಂಗಡಿಗಳನ್ನು ತೆರೆದಿದ್ದರು. ಇವರ ನಡುವೆ ಜಗಳ ಉದ್ಭವಿಸಿದರೆ ಇಮ್ರಾನ್ ಅದನ್ನು ಬಗೆಹರಿಸುತ್ತಾ ಅವರ ನಾಯಕನಂತಿದ್ದನು.

ಹಂಪೆಯಲ್ಲಿ ಜಮ್ಮು-ಕಾಶ್ಮೀರದ ಯುವಕರು ವಿದ್ವಂಸಕ ಕೃತ್ಯ ನಡೆಸಲು ಯೋಜಿಸಿದ್ದಾರೆ ಎಂದು ಸಂಘ ಪರಿವಾರದ ಸಂಘಟನೆಗಳು ದೂರುತ್ತಲೇ ಇದ್ದವು. ಒಂದು ದಿನ ರಾತ್ರಿ 11 ಗಂಟೆಯ ಸುಮಾರಿಗೆ ಇಮ್ರಾನ್ ಬಾಡಿಗೆ ಮನೆಗೆ ಬಂದ ಸಿಸಿಬಿ ಪೊಲೀಸರು ಆತನನ್ನು ಕರೆದುಕೊಂಡು ಹೋದರು. ಸ್ಥಳೀಯ ಪೊಲೀಸರಿಗೆ ಯಾವುದೇ ಮಾಹಿತಿ ನೀಡಲಿಲ್ಲ.

ಎರಡು-ಮೂರು ದಿನದ ನಂತರ ಬೆಂಗಳೂರಿಗೆ ಹೋಗುವ ಮಾರ್ಗ ಮಧ್ಯೆದಲ್ಲಿ ಬಸ್‌ನಲ್ಲಿ ಹೊರಟಿದ್ದ ಇಮ್ರಾನ್‌ನನ್ನು ಬಂಧಿಸಿರುವುದಾಗಿ ಸಂಜೆಯ ವೇಳೆ ಪ್ರಕಟಿಸಿದರು.   ಈ ಸುದ್ದಿಯು ಮರುದಿನ ಪ್ರಕಟವಾಗಿ ಕಮಲಾಪುರ ಪೊಲೀಸರು ಹಂಪಿಯಲ್ಲಿರುವ ಅವನ ಅಂಗಡಿಯನ್ನು ಶೋಧನೆ ನಡೆಸಿ ಅದನ್ನು ಬೀಗ ಹಾಕಿ ಸುಪರ್ದಿಗೆ ತೆಗೆದುಕೊಂಡರು. ಅಲ್ಲಿ ಕುರಾನ್ ಬಿಟ್ಟರೆ ಮತ್ತೇನೂ ಸಿಗಲಿಲ್ಲ. ಮರುದಿನ ಸಿಸಿಬಿ ಪೊಲೀಸರು ನಸುಕಿನಲ್ಲಿಯೇ ಇಮ್ರಾನ್ ಬಾಡಿಗೆ ಮನೆಗೆ ಬಂದರು. ಇಮ್ರಾನ್ ದಿನಚರಿ ಹೇಗಿತ್ತು ಅಂದರೆ ಬೆಳಿಗ್ಗೆ ತಿಂಡಿ ತಿಂದು ತನ್ನ ಬೈಕ್ ಏರಿ ಹಂಪಿಗೆ ಹೊರಟನೆಂದರೆ ಸಂಜೆಯೇ ಮನೆಗೆ ಮರಳುವುದು. ಬೀಗವನ್ನು ಕೆಳಗಿನ ಮನೆಯ ಓನರ್‌ಗೆ ಕೊಟ್ಟು ಹೋಗುತ್ತಿದ್ದನು.  ಈತ ವಾಸಿಸುತ್ತಿದ್ದ ಮನೆ ಎಷ್ಟು ಚಿಕ್ಕದು ಎಂದರೆ ಜೋರಾಗಿ ಓಡಾಡಿದರೆ ಕೆಳಗಿನ ಮನೆಯವರು ಸ್ವಲ್ಪ ಮೆಲ್ಲಗೆ ಓಡಾಡಿ ಎಂದು ಹೇಳುವಂತೆ ಇತ್ತು. ಇತನ ಮನೆಯನ್ನು ಜಾಲಾಡಿದ ಪೊಲೀಸರಿಗೆ ಅಲ್ಲಿಯೇ ಎಕೆ-47 ಮತ್ತಿತರ ಅಯುಧಗಳು ದೊರಕಿದವು ಎಂದು ನಂತರ ಹೇಳಿಕೆ ನೀಡಿದ್ದಾರೆ. ವಾಸ್ತವವಾಗಿ ಅಲ್ಲಿ ಏನೂ ಸಿಕ್ಕಿರಲಿಲ್ಲ.

ಸಿಸಿಬಿ ಪೊಲೀಸ್ ಅಧಿಕಾರಿ ರವಿಕಾಂತೇ ಗೌಡ (ಇವರು ಕನ್ನಡದ ಸೂಕ್ಷ್ಮ ಕಥೆಗಾರ ಡಾ. ಬೆಸಗರಹಳ್ಳಿ ರಾಮಣ್ಣರ ಮಗ) ಬೆಳಿಗ್ಗೆ ಜೀಪಿನಲ್ಲಿ ಬಂದಾಗ ಜೊತೆಯಲ್ಲಿ ಸಂಘ ಪರಿವಾರಕ್ಕೆ ಸೇರಿದ ಯುವಕನೊಬ್ಬ ಜೊತೆಯಲ್ಲಿದ್ದನು. ಇತನ ಮೇಲೆ ಆಗ ಎಷ್ಟು ಪ್ರಕರಣಗಳು ಇದ್ದವು ಎಂದರೆ ಪೊಲೀಸರು ಆತನನ್ನು ಗಡಿಪಾರು ಮಾಡಲು ಆಲೋಚಿಸಿದ್ದರು. ಫೈಲ್ ಕೂಡಾ ರೆಡಿ ಮಾಡಿದ್ದರು. ಈಗ ಆತ ಎಲ್ಲರಿಗೂ ಹಿರೋ ತರಹ ಕಾಣಿಸಿಕೊಂಡು ಬಿಟ್ಟ.

ಡಾ. ಬೆಸಗರಹಳ್ಳಿ ರಾಮಣ್ಣ ಅವರ ಬಗ್ಗೆ ಇರುವ ಪ್ರೀತಿಯಿಂದ ನಾನು ತುಂಬಾ ಇಷ್ಟ ಪಡುತ್ತಿದ್ದ ರವಿಕಾಂತೇ ಗೌಡರನ್ನು ಈ ಸ್ಥಿತಿಯಲ್ಲಿ ನೋಡಿದ ಮೇಲೆ ನನಗಿದ್ದ ಪ್ರೀತಿ ಹೊರಟು ಹೋಯಿತು.

ಬಿಜೆಪಿ ಸರ್ಕಾರ ಬಂದ ಮೇಲೆ ಅದೇ ಪೊಲೀಸ್ ಅಧಿಕಾರಿಗಳು ಸಾರ್ ಅನ್ನುತ್ತಾ ಆತನ ಮುಂದೆ ಕೈಕಟ್ಟಿಕೊಂಡು ಟ್ರಾನ್ಸ್‌ಫರ್‌ಗೆ ಕೇಳಿಕೊಳ್ಳುತ್ತಿರುವ ದಯನೀಯ ಸ್ಥಿತಿ ಬಂತು.

ಇದಾದ ಮೇಲೆ ಇಮ್ರಾನ್ ಸುದ್ದಿಯೇ ಇಲ್ಲ. ಇಮ್ರಾನ್ ಬಂಧನ ನಂತರ ಹಂಪಿಯಲ್ಲಿದ್ದ ಉಳಿದ ಜಮ್ಮು-ಕಾಶ್ಮೀರ ಯುವಕರ ಸ್ಥಿತಿ ನಾಯಿಪಾಡಾಯಿತು. ಬಾಡಿಗೆ ನೀಡಿದವರು ಅಂಗಡಿ ಖಾಲಿ ಮಾಡಲು ಒತ್ತಡ ನೀಡಲಾರಂಭಿಸಿದರು. ಪೊಲೀಸರು ಎಲ್ಲರನ್ನು ದಿನಾ ಪೊಲೀಸ್ ಠಾಣೆಗೆ ಬಂದು ಹಾಜುರಾಗಬೇಕು, ಸಹಿ ಮಾಡಿ ಹೋಗಬೇಕು, ಎಂದರು. ಹಂಪಿ ಗ್ರಾಮ ಪಂಚಾಯ್ತಿ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಒಂದು ಠರಾವು ಪಾಸು ಮಾಡಿತು. ಜಮ್ಮು-ಕಾಶ್ಮೀರದ ಯುವಕರಿಗೆ ಅಂಗಡಿ, ಮನೆ ಬಾಡಿಗೆ ನೀಡಿದವರು ಅವರನ್ನು ಬಿಡಿಸಬೇಕು ಅವರು ಹಂಪಿಯಲ್ಲಿ ಇರಬಾರದು ಎನ್ನುವುದೇ ಈ ತೀರ್ಮಾನ. ಅವರು ಎಲ್ಲರೂ ಹಂಪಿಯನ್ನು ತೊರೆದು ಜಮ್ಮು- ಕಾಶ್ಮೀರಕ್ಕೆ ಹೋದರು. ಹೋಗಿ ಅಲ್ಲಿ ಏನು ಮಾಡುತ್ತಾರೆ ಗೊತ್ತಿಲ್ಲ.

ಭಾರತದ ನೆಲದಲ್ಲಿ ಅವರಿಗೆ ಜಾಗ ಇಲ್ಲ ಎನ್ನುವುದು ಮಾತ್ರ ಅವರಿಗೆ ಮನವರಿಕೆ ಮಾಡಿಕೊಡಲಾಯಿತು.

ಇಮ್ರಾನ್ ಏನಾದ? ಆತನ ಮೇಲೆನ ಆರೋಪಗಳು ಏನಾದವು? ಸಾಕ್ಷ್ಯಾಧಾರಗಳು ಸಿಕ್ಕವೇ? ಅತನ ಮೇಲೆ ಚಾರ್ಜ್‌ಶೀಟ್ ಹಾಕಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತಾ ಅಥವಾ ತನಿಖೆ ಈಗಲೂ ಮುಂದುವರೆದಿದೆಯಾ? ಬೆಂಗಳೂರಿನ ಸಿಸಿಬಿ ಪೊಲೀಸರೇ ಹೇಳಬೇಕು.

13 thoughts on “ಹಂಪಿಯಲ್ಲಿ ಬಂಧಿತನಾದ “ಭಯೋತ್ಪಾದಕ” ಇಮ್ರಾನ್ ಏನಾದ?

  1. vasanth

    ಸಾರ್,
    ತುಂಬಾ ಉತ್ತಮ ಲೇಖನ. ಪ್ರಶ್ನೆಯಂದರೆ ಕೇವಲ ಅಲ್ ಕೈದಾ ಸಂಘಟನೆಗೆ ಸಂಬಂಧಿಸಿದ ಆನ್ ಲೈನ್ ಮ್ಯಾಗಜೀನ್ ಗಳನ್ನು ಓದಲು ಡೋನ್ ಲೋಡ್ ಮಾಡಿಕೊಂಡಿದ್ದ ತಕ್ಷಣ ಅವರು ಉಗ್ರಗಾಮಿಗಳೇ?

    ಬಂಧಿಸಲ್ಪಟ್ಟ ಬಹುತೇಕರು ವಿದ್ಯಾವಂತ ಯುವಕರು ಅವರಿಗೆ ನಿಷೇಧಿತ ಸಂಘಟನೆಗೆ ಸಂಬಂಧಿಸಿದ ಬರಹಗಳನ್ನು ಓದುವ ಹಕ್ಕು ಇಲ್ಲವೇ?
    ಗುಜರಾತಿನ ಕೋಮುಗಲಭೆಗೆ ಸಂಬಂಧಿಸಿದಂತೆ ಹೈದರಬಾದ್ ನ ಕೆಲ ಯುವಕರನ್ನು ಆರೆಸ್ಟ್ ಮಾಡಿದ ಪೋಲೀಸರು ಅವರನ್ನು 5 ವಷ೵ಗಳ ಕಾಲ ಜೈಲಿನಲ್ಲಿ ಕೊಳೆಯುವಂತೆ ಮಾಡಿ ಅವರ ಬದುಕನ್ನು ನಾಶಮಾಡಿದ ಉದಾಹರಣೆ ಇದೆ. ಇದು ಅಂತದೇ ಮತೊಂದು ಘಟನೆಯಂತೆ ಗೋಚರಿಸುತ್ತಿದೆ.

    Reply
  2. Mohan Talakalukoppa

    I agree with all your points. But same is true about Kashmiri pandiths! Why don’t you rise your voice for that also? This kind of articles during the arrest of traitors, seems like a sympathy seeking write up.

    Reply
    1. K.P.SURESHA

      true, but kashmiri pandits are not harassed or hounded by the state, that’s the difference. are we arresting the traitors or arresting and then branding..?? I heard stories of how tribals were hunted and then declared as ultras in odisha..

      Reply
      1. Mohan Talakalukoppa

        Dear Suresh sir, They are thrown out mercilessly from their own land. what else you want? You might have read that our own Sulya brahmins are trying to get brides from refugee Kashmiri pandith community, who are in lakhs in Delhi. I am sure you are aware of this. I also request you to read the reply of Mr. Avinash below as an answer to your question.

        Reply
  3. anand prasad

    ವಿನಾಯಕ್ ಸೇನ್ ಅವರಂಥ ಮಾನವ ಹಕ್ಕುಗಳ ಹೋರಾಟಗಾರ ಹಾಗೂ ವೈದ್ಯ ನಕ್ಸಲ್ ಬೆಂಬಲಿಗರೆಂದು ಜೈಲಿಗೆ ತಳ್ಳಲ್ಪಡುತ್ತಾರೆ. ಅದೇ ರೀತಿ ಭಗತ್ ಸಿಂಗ್ ಕುರಿತ ಪುಸ್ತಕ ಹೊಂದಿದ್ದ ಆರೋಪದಲ್ಲಿ ನಕ್ಸಲ್ ಬೆಂಬಲಿಗ ಎಂದು ವಿಠಲನಂಥ ಅಮಾಯಕರು ಜೈಲಿಗೆ ತಳ್ಳಲ್ಪಡುವ ಈ ದೇಶದಲ್ಲಿ ಭಯೋತ್ಪಾದಕ ಹಾಗೂ ಅದರ ಬೆಂಬಲಿಗರೆಂದು ಅಮಾಯಕರನ್ನು ಜೈಲಿಗೆ ತಳ್ಳಲ್ಪಡುವುದೂ ನಡೆಯುತ್ತಿರುತ್ತದೆ. ಮುಸ್ಲಿಂ ಭಯೋತ್ಪಾದನೆ ದೇಶಕ್ಕೆ ಒದಗಿದ ಅತ್ಯಂತ ದೊಡ್ಡ ಗಂಡಾಂತರ ಹಾಗೂ ಇದರ ವಿರುದ್ಧ ಬಹುಸಂಖ್ಯಾತರೆಲ್ಲರೂ ಜಾತಿ ಭೇದ ಮರೆತು ಒಟ್ಟಾಗಬೇಕೆಂದು ಹಿಂದೂ ಮೂಲಭೂತವಾದಿಗಳು ಹುಯಿಲೆಬ್ಬಿಸುವುದರಿಂದ ರಾಜಕೀಯ ಲಾಭವೂ ಇದೆ. ಇದಕ್ಕೆ ಪೂರಕವಾಗಿ ದೇಶದಲ್ಲಿ ಕೆಲವು ಮುಸ್ಲಿಂ ಸಂಘಟನೆಗಳು ಮುಸ್ಲಿಂ ಮೂಲಭೂತವಾದವನ್ನು ಬೆಳೆಸಲು ಪ್ರಯತ್ನಿಸುವುದು ಬೆಂಕಿಗೆ ತುಪ್ಪ ಸುರಿದಂತೆ ಕೆಲಸ ಮಾಡುತ್ತದೆ. ಮುಸ್ಲಿಮರು ಒಂದು ಪ್ರದೇಶದಲ್ಲಿ ಬಹುಸಂಖ್ಯಾತರಾದಾಗ ಅವರು ಅಲ್ಲಿನ ಅಲ್ಪಸಂಖ್ಯಾತ ಧರ್ಮಾನುಯಾಯಿಗಳ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಸಿ ಅಲ್ಲಿಂದ ಓಡಿಸುವ ಉದಾಹರಣೆಗಳು ಇದ್ದು ಇದನ್ನೇ ಹಿಂದೂ ಮೂಲಭೂತವಾದಿಗಳು ಹಿಂದೂಗಳಲ್ಲಿ ಅಭದ್ರತೆಯನ್ನು ಬಿತ್ತಿ ಅವರಲ್ಲಿ ಒಗ್ಗಟ್ಟನ್ನು ತರಲು ಬಳಸುತ್ತಾರೆ ಹಾಗೂ ಅನ್ಯ ಧರ್ಮೀಯರ ಮೇಲೆ ಸೇಡು ತೀರಿಸಿಕೊಳ್ಳಲು ಹುರಿದುಂಬಿಸುತ್ತಾರೆ. ಇಸ್ಲಾಂ ಧರ್ಮಾನುಯಾಯಿಗಳು ಬಹುಸಂಖ್ಯಾತರಾಗಿರುವ ದೇಶ/ಪ್ರದೇಶಗಳಲ್ಲಿ ಅನ್ಯ ಧರ್ಮಾನುಯಾಯಿಗಳು ಭೀತಿಯಿಲ್ಲದೆ ಬದುಕುವ ವಾತಾವರಣ ರೂಪಿಸಿದರೆ ಹಿಂದೂ ಮೂಲಭೂತವಾದ ಬೆಳೆಯುವುದನ್ನು ತಡೆಗಟ್ಟಲು ಸಾಧ್ಯ. ಈ ಬಗ್ಗೆ ವಿಶ್ವದ ಇಸ್ಲಾಂ ಧರ್ಮಗುರುಗಳು ಯೋಚಿಸಬೇಕಾಗಿದೆ.

    Reply
  4. Pavan

    First go and check what is the situation of Kashmiri pandit`s. No one open there mouth for them , because they are Hindus. so called buddi jeevigale… ondu kannige sunna ondu kannige benne… nimagella dikkaravirali….

    Reply
  5. Avinash

    ಮೊಟ್ಟ ಮೊದಲನೆಯದಾಗಿ ಮುಸ್ಲಿಂರು ಎಂಬ ಕಾರಣಕ್ಕೆ ಇವರೆಲ್ಲ ಬಂದಿತರಾದರು ಅನ್ನೋ ನಿಮ್ಮ ಹೇಳಿಕೆಗೆ ನನ್ನ ವಿರೋಧವಿದೆ. ಈ ದೇಶದಲ್ಲಿ ೧೩.೪% ರಷ್ಟು ಇರುವ ಮುಸ್ಲಿಮರಲ್ಲಿ ಒಬ್ಬ ಇಮ್ರನ್ ಧರ್ಮದ ಕಾರಣದಿಂದ ಟಾರ್ಗೆಟ್ ಆಗುತ್ತಾನೆ ಅನ್ನುವುದು ನಂಬುವುದು ಕಷ್ಟ. ಸಿಂದಗಿಯಲ್ಲಿ ಪಾಕ್ ದ್ವಜ ಹಾರಿಸಿದ್ದು ಹಿಂದೂ ಸಂಘಟನೆಯ ಕಿಡಿಗೇಡಿಗಳು ಎನ್ನುವ ಸತ್ಯ ಬಹಿರಂಗ ಪಡಿಸಿದ್ದು ಕೂಡ ಇದೆ ನಾಡಿನ ಪೋಲಿಸ್ ರು ಅನ್ನುವುದು ಮರೆಯಬೇಡಿ. ಮುಸ್ಲಿಂ ಧರ್ಮದ ದ್ವೇಷ ವಿದ್ದಿದ್ದರೆ ಅದನ್ನು ಯಾರೋ ಅಮಾಯಕ ಮುಸ್ಲಿಂ ರ ತಲೆ ಮೇಲೆ ಕಟ್ಟಬಹುದಿತ್ತಲ್ಲ ? ಇನ್ನು ಇಮ್ರಾನ್ ಏನಾದ ಅನ್ನುವುದು ದೊಡ್ಡ ರಹಸ್ಯದ ಸಂಗತಿಯೇನಲ್ಲ. ಇಚ್ಛೆ ಇದ್ದವರು ಹೈ ಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಹಾಕಿ ಮಾಹಿತಿ ಪಡೆಯಬಹುದು.
    ಮೊನ್ನೆ ಸಿಕ್ಕಿ ಬಿದ್ದ ಶಂಕಿತ ಉಗ್ರಗಾಮಿಗಳು ಅಮಾಯಕರು ಹೌದೋ ಅಲ್ಲವೋ ಅನ್ನುವುದು ವಿಚಾರಣೆಯ ಹಂತದಲ್ಲಿದೆ. ಈ ವಿಷಯದ ಹಿಂದೆ ಕರ್ನಾಟಕ ಪೋಲಿಸ್ ಜೊತೆಗೆ ಆಂದ್ರದ ಭಯೋತ್ಪದನ ನಿಗ್ರಹ ದಳ ಮತ್ತು ಮಹಾರಾಷ್ಟ್ರದ ATS ಕೂಡ ಬಾಗಿಯಾಗಿದೆ. ಅಂದರೆ ವಿಷಯದ ಸೂಕ್ಷ್ಮತೆಯನ್ನು ನೀವು ಅರಿಯಬೇಕಾಗುತ್ತದೆ. ಬೆಂಗಳೂರಲ್ಲಿ ನಡೆದ ಸರಣಿ ಬಾಂಬ್ ಸ್ಪೋಟ, IISc ಮೇಲೆ ನಡೆದ ದಾಳಿ, ಚಿನ್ನಸ್ವಾಮೀ ಕ್ರೀಡಾಂಗಣ ಬಾಂಬ್ ಸ್ಪೋಟ ಈ ಎಲ್ಲ ಪ್ರಕರಣಗಳಲ್ಲಿ ಪೋಲಿಸ್ ವೈಪಲ್ಯ ಎಂದು ಟೀಕಿಸುವ ನಾವು. ಇಂತಹ ಮುಂಜಾಗ್ರತ ಕ್ರಮಗಳನ್ನು ಯಾಕೆ ವಿರೋದಿಸಬೇಕು ?
    ಇನ್ನು ಮುಸ್ಲಿಮರು, ಭಾರತ ಮಾತ್ರವಲ್ಲ ಇಡಿ ವಿಶ್ವದ ಕಣ್ಣಿಗೆ ಶಂಕಿತರು. ಅಮೇರಿಕಾದಲ್ಲಿ ಶಾರುಖ್ ಖಾನ್ , ಅಬ್ದುಲ್ ಕಲಾಂ ರನ್ನೇ ಬಿಡದೆ ಬಟ್ಟೆ ಬಿಚ್ಚಿಸುವಂತಹ ಪರಿಸ್ತಿತಿ ನಿರ್ಮಾಣ ಆಗಿದೆ. ಮುಸ್ಲಿಮರೆಂದು ತಿಳಿದು ಸಿಖ್ ರ ಮೇಲೆ ದಾಳಿಗಳಗಿವೆ. ಎಷ್ಟೋ ಬಹು ರಾಷ್ಟ್ರೀಯ ಕಂಪನಿಗಳು ಇಲ್ಲದ ಸಬೂಬು ಹೇಳಿ ಮುಸ್ಲಿಂ ಅಭ್ಯರ್ಥಿಗಳನ್ನು ನಿರಾಕರಿಸುತ್ತಿವೆ ಈ ಎಲ್ಲ ಪರಿಸ್ತಿತಿಗಳಿಗೆ RSS ಕಾರಣ ಅನ್ನುವಿರ ? BJP ಕಾರಣ ಅನ್ನುವಿರ ? ಮುಸ್ಲಿಂ ಧರ್ಮ ಮತಂದತೆಯಲ್ಲಿ ಬಳಲುತ್ತಿದೆ. ಇಂದಿಗೂ ಪಾಕಿಸ್ತಾನದ ಮುಸ್ಲಿಂ ರಲ್ಲಿ ಏಕತೆ ಇಲ್ಲ. ಶಿಯಾ ಮುಸ್ಲಿಮರು ಸುನ್ನಿ ಮುಸ್ಲಿಂ ರನ್ನು ಸಾಯಿಸುವಷ್ಟು ದ್ವೇಷಿಸುತ್ತಾರೆ ಎಂದರೆ ಇನ್ನು ಪರ ಧರ್ಮಿಯರನ್ನು ಪ್ರೀತಿಸುತ್ತಾರೆಯೇ ?
    ಈ ದೇಶದ ಪ್ರಗತಿಪರರು ಹಿಂದೂ ಬಲ ಪಂಥಿಯರನ್ನು ದ್ವೇಷಿಸುತ್ತಾರೆ. ಆದರೆ ಆ ಕಾರಣಕ್ಕಾಗಿ ದೇಶದ್ರೋಹಿ ಗಳನ್ನೂ ಸಮರ್ಥಿಸಿಕೊಳ್ಳುವುದು ಎಷ್ಟು ಸರಿ ?. ಅಮೆರಿಕ ತನ್ನ ಮುಸ್ಲಿಂ ಕುರಿತ ತನ್ನ ದೋರಣೆಯನ್ನು ನೀವು ಖಂಡಿಸಬಹುದು ಆದರೆ ಇಂದಿಗೂ ತನ್ನ ನೆಲದಲ್ಲಿ ಮತ್ತೊಂದು ಭಯೋತ್ಪಾದನೆ ನಡೆಯಲು ಬಿಡದ ಅದರ ಕಾರ್ಯ ಮೆಚ್ಚಲೇ ಬೇಕಲ್ಲವೇ ?

    ಭಾರತ ಮತ್ತು ಪಾಕಿಸ್ತಾನ ಒಟ್ಟಿಗೆ ಸ್ವಾತಂತ್ರ ಪಡೆದುಕೊಂಡ ದೇಶಗಳು, ಪಾಕಿಸ್ತಾನ ಆ ಅದೊಗತಿಗೆ ತಲುಪಿದ್ದು ಯಾಕೆ ಅನ್ನುವುದು ನಾನೇನು ಬಿಡಿಸಿ ಹೇಳಬೇಕಿಲ್ಲ . ಭಾರತ ಪಾಕ್ ಗಿಂತ ಸಾವಿರ ಪಾಲು ಮೇಲು ಅನ್ನುವುದಕ್ಕೆ ಕಾರಣ ಬಹು ಸಂಖೆಯಲ್ಲಿ ಇರುವ ಹಿಂದೂಗಳೇ ಕಾರಣ . ಮೂಲತ ಹಿಂದೂ ಗಳು ಧರ್ಮ ಸಹಿಷ್ಣರು ಎಂಬುದನ್ನು ಮರೆಯಬೇಡಿ. ಒಂದು ಬಾಬ್ರಿ ಮಸಿದಿ ದ್ವಂಸವನ್ನು ಇಪ್ಪತ್ತು ವರ್ಷದಿಂದ ಹೇಳುವ ನೀವು ಪಾಕ್ ನೆಲದಲ್ಲಿ ನಾಶವಾದ ೪೦೨ ದೇವಸ್ತಾನ ಗಳ ಬಗ್ಗೆ ಯಾರಾದರು ಮಾತನಾಡಿದ್ದಿರ?
    ಮುಸ್ಲಿಂ ಭಯೋತ್ಪಾದನೆ ಬಾಬ್ರಿ ಮಸಿದಿ ದ್ವಂಸದ ಪ್ರತಿಕಾರವಾದರೆ, ೪೦೨ ದೇವಸ್ತಾನದ ಪ್ರತಿಕಾರ ಹಿಂದೂಗಳು ತೆಗೆದುಕೊಳ್ಳಲು ಹೊರಟರೆ ಈ ಬಾರತದಲ್ಲಿ ಏನಾಗಬಹುದು ಹೇಳಿ ?
    ನಮ್ಮ ಬುದ್ದಿ ಜೀವಿಗಳ ದಡ್ಡ ತನವನ್ನ ಉಗ್ರಗಾಮಿಗಳು ಹೇಗೆಲ್ಲ ಬಳಸಿಕೊಂಡರು ಎಂದರೆ. ಮುಸ್ಲಿಂ ದಾಳಿ ಮಾಡಿದ ಎಲ್ಲ ಉಗ್ರರ ಕೈಯಲ್ಲೂ ಕೇಸರಿ ದಾರವಿತ್ತು. ಒಂದೊಮ್ಮೆ ಕಸಬ್ ಸಿಕ್ಕಿ ಬೀಳದೆ ಇದ್ದರೆ, ಇದು RSS ನ ಕೃತ್ಯವೆಂದು ಇವರೆಲ್ಲ ಸಾದಿಸುತ್ತಿದ್ದರು ಮತ್ತು ಹಾಗೆ ನಿರೂಪಿಸುವುದು ಉಗ್ರರ ಉದ್ದೇಶ ಕೂಡ ಆಗಿತ್ತು ( ಪಾಪ ದಿಗ್ವಿಜಯ್ ಸಿಂಗ್ ಅದನ್ನು ಹೇಳಿ ಅವಲಕ್ಷಣ ಅನ್ನಿಸಿಕೊಂಡರು ಬಿಡಿ ).
    ಸಾವಿಗಾಗಲಿ, ಭಯೋತ್ಪದನೆಗಾಗಲಿ ಧರ್ಮ ಬೇದದ ಅಗತ್ಯ ಬೇಡ. ಸಿಕ್ಕಿಬಿದ್ದವರು ಮುಸ್ಲಿಮರೋ ಹಿಂದುಗಲೋ ಅನ್ನುವುದಕ್ಕಿಂತ ಅವರು ಉಗ್ರರೋ ಅಲ್ಲವೋ ಅನ್ನುವುದು ಮುಖ್ಯವಾಗಲಿ. ಮನೆಯಿಂದ ಹೊರಬಂದವರು ಜೀವ ಸಹಿತ ಮನೆ ಸೇರಲಿ. ಇನ್ನೆಂದು ಮುಂಬೈ ಮೇಲೆ ನಡೆದ ದಾಳಿಯಂತಹ ದಾಳಿ ಮತ್ತೆಂದು ನಡೆಯದಿರಲಿ ಹಾಗೆಯೇ
    ಧರ್ಮ ಧರ್ಮದ ಮಧ್ಯೆ ಕಂದಕ ಬೆಳೆಸುವ ನಿಮ್ಮ ಈ ಲೇಖನಕ್ಕೆ ನನ್ನದೊಂದು ದಿಕ್ಕಾರವಿರಲಿ

    Reply
    1. Mohan Talakalukoppa

      Dear Mr. Avinash, I completely agree with your views. They will not have any answer to this very good convincing reply.

      Reply
  6. venkanagoud

    ಡಿಯರ್ ಸರ್. ಉತ್ತಮ ಲೇಖನ ಬರೆದಿದ್ದೀರಿ. ಸಾಮಾಜಿಕ ಚಳುವಳಿಗಳು ನಿಂತು ಹೋಗಿರವುದರಿಂದ, ಇಂತ ಘಟನೆಗಳು ಹೆಚ್ಚುತ್ತಿವೆ ಎಂಬುದು ನನ್ನ ಅಭಿಪ್ರಾಯ. ವಿಚಾರಣೆಗೂ ಮುನ್ನ ಉಗ್ರ ಎಂದು ಹಣೆಪಟ್ಟಿ ಕಟ್ಟಿ ತೀರ್ಪು ನೀಡುವ ಮಾದ್ಯಮಗಳು. ಮುಸ್ಲಿಂ ವಿರೋಧಿ ಭಾವನೆ ಹೊಂದಿರುವ ಕೆಲ ಪತ್ರಕರ್ತರು. ಈ ಬೆಳವಣಿಗೆಯಲ್ಲಿ ಹಿಂದೂ ಮತಬ್ಯಾಂಕ ಸೃಷ್ಠಿಸಿಕೊಳ್ಳಲು ಹವಣಿಸುವ ಕೋಮುವಾದಿ ಪಕ್ಷ. ಅಲ್ಪಸಂಖ್ಯಾತರ ಮೇಲೆ ಏನೆ ದಬ್ಬಾಳಿ ನಡೆದರೂ ಬಾಯಿ ಬಿಡದೇ, ಮುಸ್ಲಿಂರು ನಮ್ಮನ್ನು ಬಿಟ್ಟು ಹೋದರೆ ಅವರಿಗೆ ರಕ್ಷಣೆ ಇಲ್ಲ ಎಂದು ವಾದಿಸುತ್ತಲೇ 50 ವರ್ಷಗಳ ಮತಬ್ಯಾಂಕ ರಾಜಕೀಯ ಮಾಡುತ್ತಿರುವ ರಾಷ್ಠ್ರೀಯ ಪಕ್ಷ. ಒಟ್ಟಾರೆ ಸಂವಿಧಾನದ ಆಶಯಗಳು ಇಲ್ಲಿ ನಿತ್ಯವೂ ಸಾಯುತ್ತಿವೆ. ಇಂತ ಸಂದರ್ಭದಲ್ಲಿ ಮುಸ್ಲಿಂ ಸಮುದಾಯವಾಗಲಿ, ಹಿಂದೂ ಸಮುದಾಯವಾಗಲಿ ಅಥವಾ ಉಳಿದ ಯಾವುದೇ ಸಮುದಾಯವಾಗಲಿ ಸಮಾನತೆಯ ಸಮಾಜವನ್ನು ಕಾಣಬೇಕಿದ್ದರೆ, ವೃತಾ ಆರೋಪ ಪ್ರತ್ಯಾರೋಪದಲ್ಲಿ ತೊಡಗಿಕೊಳ್ಳದೆ, ಇಂದು ನಮ್ಮ ದೇಶವನ್ನು ಕಿತ್ತು ತಿನ್ನುತ್ತಿರುವ ಹಸಿವು, ನಿರುದ್ಯೋಗ, ಭೂಕಬಳಿಕೆ, ಸಾಂಸ್ಕೃತಿಕ ಅಂಧಪತನದ ವಿರುದ್ಧ ಪ್ರಜಾತಾಂತ್ರಿ ನೆಲೆಗಟ್ಟಿನಲ್ಲಿ ಪ್ರಬಲ ಚಳುವಳಿಗಳಲ್ಲಿ ಪಾಲ್ಗೊಳ್ಳಬೇಕಾಗಿದೆ. ಹಾಗೆ ಮಾಡಿದ್ದಲ್ಲಿ ಪ್ರಬಲ ಜನತಾಂತ್ರಿಕ ಚಳುವಳಿಗಳು ಇಂತ ಕೋಮುವಾದಿ ಅಜೆಂಡಾಗಳನ್ನು ಸೋಲಿಸಲು ಸಾಧ್ಯ. ಇದೊಂದೆ ಶೋಷಿತರು, ದಲಿತರು, ಅಲ್ಪಸಂಖ್ಯಾತರ ಮುಂದಿರುವ ದಾರಿ ಎಂದು ನನ್ನ ಭಾವನೆ. ಈಗಲೂ ನಮ್ಮ ಸಮಾಜದಲ್ಲಿ ಜಾತ್ಯಾತೀತ ಮೌಲ್ಯಗಳನ್ನು ಪ್ರೀತಿಸುವವರ ಸಂಖ್ಯೆ, ಪುಡಿಯಷ್ಠಿರುವ ಕೋಮುವಾದಿಗಳಿಗಿಂತ ಹೆಚ್ಚಾಗಿದೆ. ಆದರೆ ಅವರನ್ನು ಸಮರ್ಥವಾಗಿ ಮುಖ್ಯವಾಹಿನಿಗೆ ತರುವ ಅಗತ್ಯ ಈಗ ಹೆಚ್ಚಾಗಿದೆ.

    Reply
  7. Avinash Hegde

    ಮೇಲಿನ ವೆಂಕಣ್ಣ ಗೌಡರ ಪ್ರತಿಕ್ರಿಯೆ ನನ್ನ ಪ್ರತಿಕ್ರಿಯೆಗೆ ಪೂರಕವಾಗಿದೆ ಅನ್ನುವ ಕಾರಣದಿಂದ ನನ್ನ ಅಭಿಪ್ರಾಯ ತಿಳಿಸುತ್ತೆದೇನೆ. ಗೌಡರ ಪ್ರತಿಕ್ರಿಯೆಯೇ ಸಾಕು ಹೇಗೆಲ್ಲ ವಿಷಯಗಳು ದಾರಿ ತಪ್ಪುತ್ತವೆ ಎಂಬುದಕ್ಕೆ ಉದಾರಣೆಯಾಗಿ. ಬಂದಿತ ಯಾವ ಧರ್ಮಕ್ಕೆ ಸೇರಿದವನು ಅನ್ನುವುದರ ಮೇಲೆ ಪ್ರಗತಿಪರರ ನಿಲುವು ಅವಲಂಬಿಸಿರುತ್ತದೆ.
    ಉದಾರಣೆಗೆ ಸಿಂದಗಿಯಲ್ಲಿ ಪಾಕ್ ದ್ವಜ ಹಾರಿಸಿದ್ದು ಹಿಂದೂಗಳು ಅಂದ ಕೂಡಲೇ ಅವರು ದೇಶ ದ್ರೋಹಿಗಳು ಎಂದು ಸಾರುವ ಇವರು. ಮುಸ್ಲಿಂ ಭಯೋತ್ಪಾದಕರು ಬಂಧನವಾಗಿದೆ ಅಂದ ಕೂಡಲೇ ಇದು ಷಡ್ಯಂತ್ರ ಅನ್ನುತ್ತಾರಲ್ಲ ಯಾಕೆ? ಇದಕ್ಕೆಲ್ಲ ಉತ್ತರ ಒಂದೇ ಅದು RSS ಎಂಬ ಬಲಿಷ್ಠ ಹಿಂದೂ ಸಂಘಟನೆ.
    ಇಡಿ ಸಮಾಜವನ್ನ ನಿಯಂತ್ರಿಸುತ್ತಿರುವುದು RSS ಎಂಬ ಸಂಘಟನೆ. ಈ ಸಮಾಜವನ್ನು ಸುಲಭವಾಗಿ ಎರಡು ವಿಭಾಗ ಮಾಡಬಹುದು ಒಂದು RSS ಬೆಂಬಲಿಸುವವರು ಮತ್ತೊಂದು RSS ವಿರೋದಿಸುವವರು. RSS ವಿರೋದಿಗಳು ಎಂದರೆ ಅದರಲ್ಲಿ ಪ್ರಗತಿಪರರು, ಮುಸ್ಲಿಮರು, ದಲಿತ ಸಂಘಟನೆಗಳು, ಕಮ್ಮುನಿಷ್ಟರು, ನಕ್ಸಲರು, ಜ್ಯಾತ್ಯತಿತವಾದಿಗಳು, ಕ್ರಿಸ್ತಿಯನ್ನರು ಇವರೆಲ್ಲರೂ ಸೇರುತ್ತಾರೆ.
    ಈ RSS ವಿರೋದಿಗಳ ಗುಂಪಿನದು ಬಹಳ ಸರಳ ಕೆಲಸ RSS ಯಾವುದನ್ನು ಬೆಂಬಲಿಸುತ್ತದೆಯೋ ಅದನ್ನ ಇವರು ವಿರೋದಿಸುತ್ತಾರೆ. RSS ಯಾವುದನ್ನು ವಿರೋದಿಸುತ್ತೆಯೋ ಅದನ್ನು ಇವರು ಬೆಂಬಲಿಸುತ್ತಾರೆ.ಇದಕ್ಕೆ ಒಂದು ಸೂಕ್ತ ಉದಾರಣೆ ಮಲ್ಪೆ ಯಲ್ಲಿ ನಡೆದ ರೇವ್ ಪಾರ್ಟಿ ಮತ್ತು ಮಂಗಳೂರು ಹೋಂ ಸ್ಟೇಯ್ ಪ್ರಕರಣ.
    ಮಲ್ಪೆ ರೇವ್ ಪಾರ್ಟಿ ನಡೆದಿದ್ದು ಸರ್ಕಾರದ ವತಿಯಿಂದ ಅನ್ನೋ ಕಾರಣಕ್ಕೆ ಅದನ್ನ ವಿರೋದಿಸಿದರು. ಮತ್ತು ಹೋಂ ಸ್ಟೇಯ್ ಮೇಲೆ ದಾಳಿ ಮಾಡಿದ್ದು ಹಿಂದೂ ಸಂಘಟನೆಯ ಹುಡುಗರು ಅನ್ನೋ ಕಾರಣ ಕ್ಕೆ ಪಾರ್ಟಿ ಯನ್ನ ಸಮರ್ತಿಸಿಕೊಂಡರು ಅನ್ನೋದು ಸ್ಪಷ್ಟ.
    ಈ RSS ವಿರೋದಿಗಳ ಬಲು ದೊಡ್ಡ ಶಕ್ತಿಗಳಲ್ಲಿ ಒಂದು ಮುಸ್ಲಿಂ ಧರ್ಮ. ಇಡಿ ವಿಶ್ವವೇ ಮುಸ್ಲಿಂ ರನ್ನು ಶಂಕಿತ ರಂತೆ ನೋಡುತ್ತಿದ್ದರು, ಇವರೆಲ್ಲರ ಕಣ್ಣಿಗೆ ಅವರು ಮುಗ್ದರು, ಇನ್ನು ದಬ್ಬಾಳಿಕೆ ಅನುಭವಿಸುತ್ತಿರುವರು. ಅಲ್ಪಸಂಖ್ಯತರೊಂದಿಗೆ ದಲಿತರನ್ನು ಸಮೀಕರಿಸಿ ತಮ್ಮ ಶಕ್ತಿ ವ್ರುದ್ದಿಸಿಕೊಳ್ಳಬೇಕು ಎಂಬುದು RSS ವಿರೋದಿಗಳ ಅವರ ಅಜೆಂಡಾ. ಇದರ ಹಿಂದಿರುವುದು ಶತ್ರುವಿನ ಶತ್ರು ನಮಗೆ ಮಿತ್ರ ಅನ್ನೋ ಕಾನ್ಸೆಪ್ಟ್. ಮುಸ್ಲಿಂ ರಿಂದ ದಲಿತರಿಗೆ ಏನು ಸಹಾಯವಾಗಿದೆ ಅನ್ನುವುದು ಇಂದಿಗೂ ತಿಳಿಯದ ವಿಷಯ. ಇಂದಿನವರೆಗೂ ಯಾವುದೇ ದಲಿತ ಸಂಘಟನೆಯ ಬಿತ್ತಿ ಪತ್ರದದಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ನಾಯಕನ ಫೋಟೋ ನೋಡಿಲ್ಲ. ದಲಿತರಿಗಾಗಿ ಮುಸ್ಲಿಂ ರು ಮಾಡಿದ ಒಂದೇ ಒಂದು ಹೋರಾಟ ಕೂಡ ನನಗೆ ನೆನಪಿಲ್ಲ. ಇನ್ನು ಯಾವ ಘನ ಉದ್ದೇಶಕ್ಕಾಗಿ ದಲಿತರು ಮುಸ್ಲಿಮರೊಡನೆ ಒಂದು ಗೂಡಬೇಕು?. ಇದೆಲ್ಲ ಪ್ರಗತಿಪರರಿಗೆ ಗೊತ್ತಿಲ್ಲ ಅಂತ ಅಲ್ಲ. ಎಲ್ಲಿ ದಲಿತರು RSS ಜೊತೆ ಸೇರಿ ಬಿಡುತ್ತಾರೋ ಅನ್ನೋ ಭಯಕ್ಕಾಗಿ ದಲಿತರು ಅಲ್ಪ ಸಂಖ್ಯಾತರು ಸಮಾನ ದುಖಿಗಳು ಅನ್ನೋ ಭಾಷಣ ಬಿಡುತ್ತಾರೆ. ಮುಸ್ಲಿಂ ಸಂಘಟನೆಗಳ ಬಲ ಕಳೆದುಕೊಳ್ಳುವುದರಿಂದ RSS ಬಲ ಜಾಸ್ತಿಯಾಗುವುದೋ ಅನ್ನೋ ಭಯ ಇನ್ನೊಂದು ಕಡೆ ಅವರನ್ನ ಕಾಡುತ್ತಿದೆ ಆ ಕಾರಣಗಳಿಂದ ಅವರು ಮುಸ್ಲಿಂ ಸಂಘಟನೆಗಳ ಅತಿರೇಕಗಳನ್ನು ಸಹಿಸಿಕೊಳ್ಳುತ್ತಾರೆ ಮತ್ತು ಸಮರ್ತಿಸಿಕೊಳ್ಳುತ್ತಾರೆ. ಮುಂಬೈಯಲ್ಲಿ ನಡೆದ ಅಮರ್ ಜವಾನ್ ದಾಳಿಯ ಹಿಂದೆ ದಾವುದ್ ಕೈವಾಡ ಇದೆ ಅನ್ನೋ ಮಾಹಿತಿ ಇದು ಗೃಹ ಸಚಿವಾಲಯ ಬಹಿರಂಗ ಪಡಿಸಿದೆ ಅದಕ್ಕೆ ನಮ್ಮ ಬುದ್ದಿಜೀವಿಗಳು ಹೇಗೆ ಪ್ರತಿಕ್ರಿಯಿಸುತ್ತರೋ ನೋಡಬೇಕು ( ಕೆಲವೊಮ್ಮೆ ಪ್ರತಿಕ್ರಿಯಿಸುವದೆ ಇಲ್ಲ ಬಿಡಿ. ಇಷ್ಟಕ್ಕೂ ಯಾವ ಮುಖ ಇತ್ತು ಕೊಂಡು ಪ್ರತಿಕ್ರಿಯುಸುತ್ತಾರೆ ಹೇಳಿ ) .

    ಈ ಸಮಾಜದಲ್ಲಿ RSS ಗೆ ತುಂಬಾ ಪ್ರಾಮುಖ್ಯತೆ ಕೊಟ್ಟವರು ಇವರೇ ಅನ್ನಬಹುದೇನೋ. RSS ನ ವಿರೋದಿಸುವುದನ್ನ ಹೊರತು ಇವರಿಗೆ ಬೇರೆ ಯಾವ ಘನ ಉದ್ದೆಶನು ಇಲ್ಲ. ಘನ ಕಾರ್ಯನು ಇಲ್ಲ. ಪ್ರಗತಿಪರರು ಎಲ್ಲದಕ್ಕೂ RSS ಕಾರಣ ಅನ್ನೋ ಹಳೆಯ ಸಂಭಾಷಣೆ ಬದಲಾಯಿಸಬೇಕಾದ ಅಗತ್ಯತೆ ಇದೆ . RSS ನ ಪ್ರಭಾವಳಿ ಯಿಂದ ಹೊರಗೆ ಬರದೆ ಇಲ್ಲದೆ ಇದ್ದರೆ ಬಹಳ ಬೇಗ ಮೂಲೆ ಗುಂಪಗುವ ಸಂಭವವೇ ಜಾಸ್ತಿ.
    RSS ನ ವಿರೋದಿಸಬೇಕು ಅನ್ನೋ ಉದ್ದೇಶದಿಂದ ಉಗ್ರರನ್ನು ಬೆಂಬಲಿಸುವ ನಿಮ್ಮ ನಡೆ ಕೊನೆಗೆ ನಿಮ್ಮನ್ನು ಸೇರಿಸಿ ಇಡಿ ದೇಶಕ್ಕೆ ಮಾರಕವಾಗಬಹುದು. ಯಾಕೆಂದರೆ ಸಿಡಿಯುವ ಬಾಂಬ್ ಗೆ ತಾನು ತೆಗೆಯುತ್ತಿರುವ ಜೀವ ಪ್ರಗತಿಪರನದೋ, ದಲಿತನದೋ , RSS ನದೋ ತಿಳಿದಿರುವುದಿಲ್ಲ.

    ದೇಶದ ಹಿತಾಸಕ್ತಿ ಬಲಿ ಕೊಟ್ಟಾದರೂ RSS ಹಣಿಯಬೇಕು ಎಂದು ಹೊರಟಿರುವವರ ಮೇಲೆ ನಿಜಕ್ಕೂ ನನಗೆ ಅನುಕಂಪ ಇದೆ. ತಾನೇ ತೋಡಿದ ಹಳ್ಳಕ್ಕೆ ತಾನೇ ಬಿದ್ದ ಇಂದಿರಾ ಗಾಂದಿ ನಮಗೆಲ್ಲ ಮಾದರಿಯಾಗಿರಲಿ

    Reply

Leave a Reply to Mohan Talakalukoppa Cancel reply

Your email address will not be published. Required fields are marked *