Daily Archives: September 5, 2012

ವೈಚಾರಿಕ ಪೀಳಿಗೆ ರೂಪಿಸುವುದರಲ್ಲಿ ಮಹಿಳೆಯರ ಪಾತ್ರ

– ಆನಂದ ಪ್ರಸಾದ್

ವೈಚಾರಿಕತೆ, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವಲ್ಲಿ ನಮ್ಮ ಸಮಾಜದ ಅರ್ಧ ಭಾಗದಷ್ಟಿರುವ ಹೆಂಗಸರು ಹಿಂದಿರುವುದು ಕಂಡುಬರುತ್ತದೆ. ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುವ ಜ್ಯೋತಿಷ್ಯ, ವಾಸ್ತು, ನಿಸರ್ಗಾತೀತ ಶಕ್ತಿಗಳ ಅತಿರಂಜಿತ ಪ್ರಚಾರಕ್ಕೆ ಹೆಂಗಸರೇ ಹೆಚ್ಚಿನ ವೀಕ್ಷಕರಾಗಿರುವುದನ್ನು ನಾವು ಗುರುತಿಸಬಹುದು. ಅದೇ ರೀತಿ ಸಮಕಾಲೀನ ಜಗತ್ತಿನ, ದೇಶದ, ರಾಜ್ಯದ ಆಗುಹೋಗುಗಳ ಬಗ್ಗೆ ಹೆಂಗಸರಲ್ಲಿ ಬಹಳ ಕಡಿಮೆ ಆಸಕ್ತಿ ಇರುವುದು ಕಂಡುಬರುತ್ತದೆ. ಟಿವಿ ವಾಹಿನಿಗಳಲ್ಲಿ ಹೆಂಗಸರು ಹೆಚ್ಚಾಗಿ ವೀಕ್ಷಿಸುವುದು ಧಾರಾವಾಹಿಗಳು ಅಥವಾ ಸಿನೆಮಾಗಳನ್ನು ಮಾತ್ರ.  ಹೀಗಾಗಿ ಹೆಂಗಸರಲ್ಲಿ ಸಮಕಾಲೀನ ದೇಶದ ರಾಜಕೀಯ ಆಗುಹೋಗುಗಳ ಬಗ್ಗೆ ತಿಳುವಳಿಕೆ ಕಡಿಮೆ. ಇಂಥ ಪ್ರವೃತ್ತಿ ಕೂಡ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಸಮರ್ಪಕವಾಗಿ ಬೆಳೆಯದಿರಲು ಕಾರಣವಾಗಿದೆ. ಹೆಂಗಸರು ಸಮಾರಂಭಗಳಲ್ಲೋ ಅಥವಾ ಇನ್ನೆಲ್ಲೋ ಸೇರಿದರೆ ಚರ್ಚಿಸುವುದು ಉಡುಪು, ಚಿನ್ನ, ಒಡವೆ, ಕಾರು, ಬಂಗಲೆ ಇತ್ಯಾದಿ ವಿಷಯಗಳ ಬಗ್ಗೆಯೇ ಹೊರತು ದೇಶದ ಸಮಕಾಲೀನ ರಾಜಕೀಯ, ಸಾಮಾಜಿಕ, ಆರ್ಥಿಕ ವಿಷಯಗಳ ಬಗ್ಗೆ ಚರ್ಚಿಸುವುದು ಕಡಿಮೆ ಅಥವಾ ಇಲ್ಲವೆಂದರೂ ಸರಿಯೇ. ದೇವರು, ಸಂಪ್ರದಾಯ, ಕಂದಾಚಾರಗಳ ಬಗ್ಗೆಯೂ ಹೆಂಗಸರಿಗೆ ಹೆಚ್ಚಿನ ಒಲವು ಇರುವುದು ಕಂಡು ಬರುತ್ತದೆ.

ಹೆಂಗಸರು ಮುಂದಿನ ಪೀಳಿಗೆಯನ್ನು ರೂಪಿಸುವುದರಲ್ಲಿ ಹೆಚ್ಚಿನ ಪ್ರಭಾವ ಹೊಂದಿರುವ ಕಾರಣ ಹೆಂಗಸರು ವೈಚಾರಿಕವಾಗಿ ಬೆಳೆಯಬೇಕಾದ ಅಗತ್ಯ ಇದೆ. ಮಕ್ಕಳನ್ನು ಬೆಳೆಸುವುದರಲ್ಲಿ ತಾಯಿಯಾಗಿ ಹೆಂಗಸರ ಪಾತ್ರ ಹಾಗೂ ಪ್ರಭಾವ ಮಕ್ಕಳ ಮೇಲೆ ಹೆಚ್ಚಾಗಿ ಬೀಳುತ್ತದೆ. ಹೀಗಾಗಿ ತಾಯಂದಿರು ವೈಚಾರಿಕವಾಗಿ ಬೆಳೆದರೆ, ವೈಚಾರಿಕ ಮನೋಭಾವ ಹೊಂದಿದ್ದರೆ ಮಕ್ಕಳೂ ವೈಚಾರಿಕತೆಯನ್ನು ಬೆಳೆಸಿಕೊಳ್ಳುವ ಸಂಭವ ಅಧಿಕ. ದುರದೃಷ್ಟವಶಾತ್ ನಮ್ಮ ದೇಶದ ಹೆಂಗಸರು ವೈಚಾರಿಕವಾಗಿ ಹಿಂದೆ ಇರುವ ಕಾರಣ ಗಂಡಸರು ವೈಚಾರಿಕತೆಯಲ್ಲಿ ಮುಂದೆ ಇದ್ದರೂ ತಂದೆಯಾಗಿ ಅವರು ಮಕ್ಕಳ ಮೇಲೆ ವೈಚಾರಿಕ ಪ್ರಭಾವ ಬೀರಲು ಸಾಧ್ಯವಾಗದಿರುವುದು ಕಂಡುಬರುತ್ತದೆ. ಮಕ್ಕಳ ಜೊತೆ ತಾಯಿಯ ಸಂಬಂಧ ಹೆಚ್ಚು ಗಾಢವಾಗಿರುವ ಕಾರಣ ಮಕ್ಕಳು ತಾಯಿಯ ಒಲವು ನಿಲುವುಗಳನ್ನು ದೇವರು, ಸಂಪ್ರದಾಯ, ಕಂದಾಚಾರಗಳ ವಿಚಾರದಲ್ಲಿ ಬೆಳೆಸಿಕೊಳ್ಳುತ್ತಾರೆ. ಈ ಕಾರಣದಿಂದಾಗಿ ನಮ್ಮ ಸಮಾಜದಲ್ಲಿ ವೈಚಾರಿಕತೆ ಬಹಳ ಕೆಳಮಟ್ಟದಲ್ಲಿದೆ. ಶಾಲಾ ಶಿಕ್ಷಣದಲ್ಲೂ ವೈಚಾರಿಕತೆ ಬೆಳೆಸಿಕೊಳ್ಳಲು ನೆರವಾಗಬಲ್ಲ ಪಠೄ ಕಂಡುಬರುವುದಿಲ್ಲ.  ಜನತೆಯಲ್ಲಿ ವೈಚಾರಿಕತೆ ಬೆಳೆಯದೆ ಪ್ರಜಾಪ್ರಭುತ್ವ ವ್ಯವಸ್ಥೆಯೂ ಬೆಳೆಯಲಾರದು. ವೈಚಾರಿಕತೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ನಡುವೆ ಸಂಬಂಧವಿದೆ. ವೈಚಾರಿಕ ಪ್ರಜ್ಞೆ ಉಳ್ಳ ಜನ ಇದ್ದರೆ ಉತ್ತಮ ರಾಜಕೀಯ ವ್ಯವಸ್ಥೆಯನ್ನು ಮತದಾನದ ಮೂಲಕವೇ ರೂಪಿಸಲು ಸಾಧ್ಯ. ವೈಚಾರಿಕ ಪ್ರಜ್ಞೆ ಇಲ್ಲದ ಕಾರಣವೇ ನಮ್ಮ ದೇಶದಲ್ಲಿ ಎಷ್ಟೇ ಚುನಾವಣೆಗಳು ನಡೆದರೂ ವ್ಯವಸ್ಥೆಯಲ್ಲಿ ಮಾತ್ರ ಸುಧಾರಣೆ ಆಗುವುದಿಲ್ಲ, ಬದಲಿಗೆ ಅಧಃಪತನವೇ ಕಂಡುಬರುತ್ತಿದೆ. ವೈಚಾರಿಕತೆಯನ್ನು ದೇಶದಲ್ಲಿ ಬೆಳೆಸಲು ಹೆಚ್ಚಿನ ಗಮನ ಕೊಡದಿರುವುದರ ಕಾರಣ ನಾವು ಕಳೆದುಕೊಂಡಿರುವುದು ಪ್ರಜಾಪ್ರಭುತ್ವದ ಅಗಾಧ ಸಾಧ್ಯತೆಗಳನ್ನು. ಎಲ್ಲವನ್ನೂ ಕುರಿಗಳಂತೆ ಒಪ್ಪಿಕೊಳ್ಳುವ, ಪ್ರಶ್ನಿಸುವ ಮನೋಭಾವವಿಲ್ಲದ ಜನಸಮೂಹ ಇದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆ ಇದ್ದರೂ ಇನ್ನೂ ಶತಮಾನಗಳೇ ಉರುಳಿದರೂ ನಮ್ಮ ವ್ಯವಸ್ಥೆಯಲ್ಲಿ ಸುಧಾರಣೆ ಆಗಲಾರದು.

ಹೀಗಾಗಿ ಒಂದು ಪ್ರಜ್ಞಾವಂತ ಹಾಗೂ ವೈಚಾರಿಕ ಜನಸಮುದಾಯವನ್ನು ರೂಪಿಸಬೇಕಾದರೆ ಹೆಂಗಸರ ಪಾತ್ರ ಮಹತ್ವಪೂರ್ಣವಾದುದು. ಮಹಿಳಾ ಸಂಘಟನೆಗಳು ಮಹಿಳಾ ಸಮೂಹದಲ್ಲಿ ವೈಚಾರಿಕತೆಯನ್ನು ಬೆಳೆಸಲು ಆದ್ಯ ಗಮನ ನೀಡಬೇಕಾದ ಅಗತ್ಯ ಇದೆ. ಹೆಣ್ಣೊಬ್ಬಳು ವೈಚಾರಿಕತೆಯನ್ನು ಬೆಳೆಸಿಕೊಂಡರೆ ಒಂದು ಪೀಳಿಗೆಯೂ ವೈಚಾರಿಕತೆಯನ್ನು ಬೆಳೆಸಿಕೊಳ್ಳಲು ಸಹಾಯಕವಾಗಬಲ್ಲದು. ಹೆಂಗಸರು ಧಾರಾವಾಹಿಗಳು ಮತ್ತು ಸಿನೆಮಾಗಳಲ್ಲಿ ಮಾತ್ರವೇ ಕಳೆದು ಹೋಗದೆ ಸಮಕಾಲೀನ ವೈಚಾರಿಕ, ರಾಜಕೀಯ, ಸಾಮಾಜಿಕ, ಆರ್ಥಿಕ ಬೆಳವಣಿಗೆಗಳ ಬಗ್ಗೆಯೂ ಆಸಕ್ತಿ  ಬೆಳೆಸಿಕೊಳ್ಳುತ್ತ ಹೋದರೆ ಪ್ರಜಾಪ್ರಭುತ್ವ ವ್ಯವಸ್ಥೆ ಬೆಳವಣಿಗೆ ಹೊಂದಲು ಸಹಾಯಕ. ಮಹಿಳೆಯರು ವೈಚಾರಿಕವಾಗಿ ಮುಂದುವರಿದರೆ ನಮ್ಮ ಟಿವಿ ವಾಹಿನಿಗಳ ಕಾರ್ಯಕ್ರಮ ಪ್ರಸಾರದಲ್ಲೂ ಸುಧಾರಣೆಯನ್ನು ನಿರೀಕ್ಷಿಸಬಹುದು. ಮೌಢೄ, ಕಂದಾಚಾರ ಬಿತ್ತುವ ಕಾರ್ಯಕ್ರಮಗಳನ್ನು, ಜ್ಯೋತಿಷ್ಯ, ವಾಸ್ತು, ಪ್ರಳಯದಂಥ ಕಾರ್ಯಕ್ರಮಗಳನ್ನು ಮಹಿಳೆಯರು ವಿರೋಧಿಸಿದರೆ ಹಾಗೂ ನೋಡುವುದನ್ನು ಕಡಿಮೆ ಮಾಡಿದರೆ ಇವುಗಳ ಟಿ.ಆರ್.ಪಿ. ರೇಟಿಂಗ್ ಕುಸಿದು ಇಂಥ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದನ್ನು ಟಿವಿ ವಾಹಿನಿಗಳು ಕಡಿಮೆ ಮಾಡಬಹುದು. ಮಕ್ಕಳಲ್ಲಿ ವೈಚಾರಿಕತೆಯನ್ನು ಬಿತ್ತಿ ಬೆಳೆಯುವುದರಲ್ಲಿ ಮಹಿಳೆಯರ ಪಾತ್ರ ಮುಖ್ಯವಾದುದು. ಸದೃಢ ಕರ್ನಾಟಕದ ನಿರ್ಮಾಣವಾಗಬೇಕಾದರೆ ಮುಂದಿನ ಪೀಳಿಗೆಯನ್ನು ವೈಚಾರಿಕ ನೆಲೆಗಟ್ಟಿನಲ್ಲಿ ರೂಪಿಸಬೇಕು. ಇದನ್ನು ಎಳೆಯ ವಯಸ್ಸಿನಿಂದಲೇ ರೂಪಿಸಿ ಬೆಳೆಸುವ ಹಾಗೂ ಮಕ್ಕಳ ಬೆಳೆವಣಿಗೆಯ ಹಂತದಲ್ಲಿ ವೈಚಾರಿಕತೆಯನ್ನು ಜಾಗೃತಗೊಳಿಸಿ ಪ್ರಶ್ನಿಸುವ ಮನೋಭಾವವನ್ನು ಪ್ರೋತ್ಸಾಹಿಸುವ ಹಾಗೂ ಪ್ರಭಾವಿಸುವ ಸಾಮರ್ಥ್ಯ ತಾಯಿಯಾಗಿ ಮಹಿಳೆಯರಲ್ಲಿ ನೈಸರ್ಗಿಕವಾಗಿ ಹೆಚ್ಚಾಗಿರುವುದರಿಂದ ವೈಚಾರಿಕ ಪೀಳಿಗೆಯನ್ನು ರೂಪಿಸುವ ಜವಾಬ್ದಾರಿಯನ್ನು ಮಹಿಳೆಯರು ವಹಿಸಬೇಕಾಗಿದೆ.