ಬಾಲಸುಬ್ರಹ್ಮಣ್ಯಂರವರೇ, ಲಂಚ ಕೊಡುವವನದೇ ತಪ್ಪು ಯಾಕೆ?

– ರವಿ ಕೃಷ್ಣಾರೆಡ್ಡಿ

ಪ್ರಜಾವಾಣಿಯಲ್ಲಿ ಪ್ರಕಟವಾಗುವ “ಹೊಸ ಕನಸು”ವಿನ ಈ ವಾರದ ಅಂಕಣದಲ್ಲಿ ಡಾ.ಆರ್.ಬಾಲಸುಬ್ರಹ್ಮಣ್ಯಂರವರು ಒಂದು ಮಾತು ಹೇಳುತ್ತಾರೆ: “ಭ್ರಷ್ಟಾಚಾರ ಸರ್ವವ್ಯಾಪಿ ಆಗಿರುವುದರಿಂದ ನಮ್ಮ ಹೋರಾಟ ಏನಿದ್ದರೂ ಲಂಚ ಕೊಡುವವರತ್ತ ಮತ್ತು ಕೊಡುವ ಮನಸ್ಸು ಹೊಂದಿ ವ್ಯವಸ್ಥೆಯನ್ನು ಹಾಳುಗೆಡವುತ್ತಾ ಇರುವವರತ್ತ ಕೇಂದ್ರೀಕೃತವಾಗಬೇಕು. ನಾವು ಪ್ರತಿಯೊಬ್ಬರೂ ಪ್ರಾಮಾಣಿಕರಾಗಿದ್ದು ಯಾರೊಬ್ಬರಿಗೂ ಲಂಚ ಕೊಡುವುದಿಲ್ಲ ಎಂದು ಸ್ವಯಂ ಶಪಥ ಮಾಡಿಕೊಂಡರೆ ಆಗ ಸಹಜವಾಗಿಯೇ ಲಂಚ ಪಡೆಯುವವರೂ ಇರುವುದಿಲ್ಲ.” ಈ ಮಾತುಗಳನ್ನು ಅವರು ವಿದ್ಯಾವಂತರಾದ ಮತ್ತು ಬಡವರಲ್ಲದ ವರ್ಗಕ್ಕೆ ಹೇಳಿದ್ದರೆ, ಒಪ್ಪಬಹುದು. ಆದರೆ, ಇದನ್ನು ಅವರು ಹೇಳಿರುವುದು ಎಲ್ಲರನ್ನೂ ದೃಷ್ಟಿಯಲ್ಲಿಟ್ಟುಕೊಂಡು. ಆ ಹಿನ್ನೆಲೆಯಲ್ಲಿ ನೋಡಿದರೆ ಇದು ಕೇವಲ ಬಾಲಿಶ ಮತ್ತು ಅಪ್ರಬುದ್ಧ ನಿಲುವು ಮಾತ್ರವಲ್ಲ, ಭ್ರಷ್ಟರನ್ನು ರಕ್ಷಿಸುವ ಬೇಜವಾಬ್ದಾರಿ ಹೇಳಿಕೆಯೂ ಹೌದು. ಇಂದಿನ ಸಂದರ್ಭದಲ್ಲಿ ನೈತಿಕ ಮೌಲ್ಯಗಳು ನಾಶವಾಗುತ್ತಿವೆ ಮತ್ತು ಜನ ಕೆಡುತ್ತಿದ್ದಾರೆ ಎನ್ನುವುದು ವಾಸ್ತವವೆ. ಆದರೆ ಲಂಚ ಕೊಡುವವರು ಇಲ್ಲದಿದ್ದರೆ ತೆಗೆದುಕೊಳ್ಳುವವರು ಎಲ್ಲಿರುತ್ತಾರೆ ಎಂದು ಪ್ರಶ್ನೆ ಹಾಕುವ ಜನಕ್ಕೆ ನಮ್ಮ ಇಂದಿನ ಸಮಾಜದ ಸಂರಚನೆಯಾಗಲಿ ಮತ್ತು ಇಲ್ಲಿ ವ್ಯವಸ್ಥೆಯೇ ಹೇಗೆ ಭ್ರಷ್ಟಾಚಾರವನ್ನು ಪ್ರೋತ್ಸಾಹಿಸುತ್ತಿದೆ ಎನ್ನುವ ವಾಸ್ತವವಾಗಲಿ ಗೊತ್ತಿಲ್ಲ ಎಂದು ಹೇಳಬೇಕು. ಇಷ್ಟಕ್ಕೂ, ನ್ಯಾಯವಾಗಿ, ಕಾನೂನುಬದ್ಧವಾಗಿ ಆಗಲೇಬೇಕಾದ ಸರ್ಕಾರಿ ಕೆಲಸಕ್ಕೆ ಒಳ್ಳೆಯ ಜನ ಲಂಚ ಕೊಡುವ ಸ್ಥಿತಿಗಾದರೂ ಹೇಗೆ ಮುಟ್ಟುತ್ತಾರೆ? ಮತ್ತು ಭ್ರಷ್ಟ ಮೌಲ್ಯಗಳ ಜನ ಲಂಚ ಕೊಟ್ಟಾಕ್ಷಣ ಅವರ ಅಕ್ರಮಗಳು ಸಕ್ರಮವಾಗುತ್ತಾದರೂ ಹೇಗೆ?

ಇಂದು ಒಬ್ಬ ಮನುಷ್ಯ, ಅದರಲ್ಲೂ ಬಡವ ಮತ್ತು ಮಧ್ಯಮವರ್ಗದ ನಡುವೆ ಬರುವವನು ಒಂದು ಮೋಟಾರ್ ಸೈಕಲ್ ಓಡಿಸಲು ಸರ್ಕಾರದಿಂದ ಚಾಲನಾ ಪರವಾನಗಿ ಪತ್ರ ಬೇಕೆಂದರೆ ಕನಿಷ್ಟ  ನಾಲ್ಕೈದು ದಿನ ಕೆಲಸ ಬಿಟ್ಟು ಆರ್‍ಟಿಓ ಕಛೇರಿಗೆ ಅಲೆಯಬೇಕು. ಎಲ್‍ಎಲ್ ಮಾಡಿಸಲು, ಆದಾದ ನಂತರ ಡ್ರೈವಿಂಗ್ ಟೆಸ್ಟ್‌ಗೆ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಲು, ನಂತರ ಗಾಡಿ ಓಡಿಸಿ ತೋರಿಸಲು, ಇತ್ಯಾದಿ. ಡ್ರೈವಿಂಗ್ ಟೆಸ್ಟ್‌ನಲ್ಲಿ ಆತ ಅದೃಷ್ಟವಷಾತ್ ಪಾಸಾದರೆ ಸಾಕಷ್ಟು ಅಂಚೆಚೀಟಿ ಅಂಟಿಸಿರುವ ಸ್ವವಿಳಾಸದ ಅಂಚೆಪತ್ರದಲ್ಲಿ ಡಿಎಲ್ ಮನೆಗೇ ಬರುತ್ತದೆ ಎನ್ನುವ ಖಾತ್ರಿಯಿಲ್ಲ. ಹತ್ತು ದಿನದಲ್ಲಿ ಬರಬೇಕಾಗಿರುವುದು ತಿಂಗಳು ಕಳೆದರೂ ಬರದಿದ್ದಾಗ ಮತ್ತೆ ಒಂದು ದಿನ ಅದನ್ನು ತೆಗೆದುಕೊಂಡು ಬರಲು ವ್ಯಯವಾಗುತ್ತದೆ. ದಿನವೂ ದುಡಿದು ಬದುಕಬೇಕಾದ ಬಡವನಿಗೆ ಮತ್ತು ನಾನಾ ತರಲೆ ತಾಪತ್ರಯಗಳಲ್ಲಿ ಸಿಲುಕಿರುವ ಮಧ್ಯಮವರ್ಗದವನಿಗೆ ಇಷ್ಟೆಲ್ಲ ದಿನಗಳನ್ನು ಒಂದು ಚಾಲನಾ ಪತ್ರ ಪಡೆಯಲು ವ್ಯಯಿಸುವ ಸಮಯವಾದರೂ ಎಲ್ಲಿರುತ್ತದೆ? ಕಾನೂನುಬದ್ಧವಾಗಿ ನಡೆದುಕೊಳ್ಳುವುದು ಯಾಕೆ ಇಷ್ಟು ಕಠಿಣವಾಗಿವೆ?

ಕಾನೂನುಬದ್ಧವಾಗಿ ಡಿಎಲ್ ಪಡೆಯುವ ವಿಷಯ ಮೇಲೆ ಹೇಳಿದಷ್ಟು ಮಾತ್ರವೇ ಅಲ್ಲ. ನೀವು ಆರ್‌ಟಿಓ ಕಚೇರಿಗೆ ನೀವಾಗಿಯೇ ಹೋದಿರಾದರೆ ಮತ್ತು ಇತರೆ ಜನಸಾಮಾನ್ಯರಂತೆ ನೀವೂ ಸಹ ಸಾಮಾನ್ಯರಲ್ಲಿ ಸಾಮಾನ್ಯರಾದರೆ, ಮೇಲೆ ಹೇಳಿದ ಒಂದೊಂದು ದಿನದ ಕೆಲಸ ಒಂದೇ ದಿನದಲ್ಲಿ ಪೂರೈಸುವುದಿಲ್ಲ. ಕಚೇರಿಯಲ್ಲಿ ಯಾರೂ ನಿಮಗೆ ಸರಿಯಾದ ಮಾಹಿತಿ ಕೊಡುವುದಿಲ್ಲ. ನಾಲ್ಕಾರು ಕಡೆ ಹೋಗಿ ಎನ್ನುತ್ತಾರೆ. ಪ್ರತಿ ಹಂತದಲ್ಲೂ ಇನ್ನೊಂದು ದಾಖಲೆ ಅಥವ ಫಾರ್ಮ್ ಬೇಕು ಎನ್ನುತ್ತಾರೆ. ಸೌಜನ್ಯದಿಂದ ಮಾತನಾಡಿಸುವುದಂತೂ ಅಪರೂಪ. ಎಲ್ಲಾ ಇದ್ದರೂ ಏನೋ ಒಂದು ಕೊಕ್ಕೆ. ಯಾಕೆ? ಅನಧಿಕೃತ ಏಜೆಂಟರ ಮೂಲಕ ಬರದ ಯಾವೊಬ್ಬ ಸ್ವತಂತ್ರ ವ್ಯಕ್ತಿಗೂ ಅಲ್ಲಿ ಬೆಲೆ ಇರುವುದಿಲ್ಲ. ಸುಲಭವಾಗಿ ಎಲ್‌ಎಲ್ ಪಾಸಾಗುವುದಿಲ್ಲ.  ಏಜಂಟ್‌ನ ಮೂಲಕ ಹೋಗದವರಲ್ಲಿ ಅಥವ ಮೊದಲೇ ಲಂಚ ಮಾತನಾಡಿಕೊಳ್ಳದವರಲ್ಲಿ ಬಹುಶಃ ಶೇ.5 ರಷ್ಟು  ಜನವೂ ಡ್ರೈವಿಂಗ್ ಟೆಸ್ಟ್ ಪಾಸಾಗುವುದಿಲ್ಲ. ಏಜೆಂಟನಿಗೆ ಅವನ ಫೀಸ್ ಕೊಟ್ಟು ಅವನು ಅದನ್ನು ಕೊಡಬೇಕಾದವರಿಗೆ ಅವರವರ ಲಂಚದ ಪಾಲು ಕೊಟ್ಟರೆ ಎಲ್ಲವೂ ಸರಳ, ಸುಲಲಿತ. ಒಮ್ಮೊಮ್ಮೆ ನೀವು ಹೋಗುವುದೂ ಬೇಕಾಗಿಲ್ಲ. ಕೇಳಿದಷ್ಟು ಫೋಟೋ, ಒಂದೆರಡು ದಾಖಲೆ ಪತ್ರಗಳನ್ನು ಕೊಟ್ಟುಬಿಟ್ಟರೆ, ನೇರವಾಗಿ ಡಿಎಲ್‌ಗೆ ಪೋಟೋ ತೆಗೆಸಲು ಹೋದರೆ ಸಾಕು. ಮಿಕ್ಕ ಎಲ್ಲವೂ ಕಾಟಾಚಾರದ ಪರೀಕ್ಷೆಗಳು.ಈಗ ಹೇಳಿ, ಕಾನೂನು ಪಾಲಿಸುವವನಿಗೆ ಆತ ಪಟ್ಟು ಬಿಡದೆ, ಲಂಚ ಕೊಡದೆ ಕಾನೂನು ಪ್ರಕಾರ ನಡೆಯಲು ಯಾವ ಇನ್ಸೆಂಟಿವ್ ಇದೆ? ಇಲ್ಲಿ ನೀವು ಯಾರನ್ನು ಬದಲಾಯಿಸಬೇಕೆಂದು ಹೇಳುತ್ತಿದ್ದೀರಾ? ಲಕ್ಷಾಂತರ ಸಂಖ್ಯೆಯಲ್ಲಿರುವ ಜನರನ್ನೇ, ಅಥವ, ಬೆರಳೆಣಿಕೆಯಷ್ಟಿರುವ ಆರ್‍ಟಿಓ ಸಿಬ್ಬಂದಿಯನ್ನೇ? ತಮ್ಮ ಕಷ್ಟಕೋಟಲೆಗಳ ನಿವಾರಣೆಗಾಗಿ ಜನ ಲಂಚ ಕೊಡಬೇಕಾದ ಸ್ಥಿತಿಗೆ ತಳ್ಳಲ್ಪಟ್ಟಿದ್ದಾರೆಯೇ ಹೊರತು, ಅವರು ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳಬೇಕಾದ ಅಕ್ರಮಗಳನ್ನು ಎಸಗಿಲ್ಲ. ಬಡವನಿಗೆ ಅಂದಿನ ದಿನದ ದುಡಿಮೆಯ ಮತ್ತು ಸಂಸಾರ ನಿರ್ವಹಣೆಯ ಕರ್ತವ್ಯ ಇದೆ. ಆದರೆ ಲಂಚ ತೆಗೆದುಕೊಳ್ಳುವವನಿಗೆ ಅದನ್ನು ತೆಗೆದುಕೊಳ್ಳಲೇಬೇಕಾದ ಅನಿವಾರ್ಯತೆ ಇರಬೇಕಾಗಿಲ್ಲ. ಮತ್ತು ಅದು ಅವನ ಕರ್ತವ್ಯಕ್ಕೂ ವಿರುದ್ದ. ಈ ವ್ಯವಸ್ಥೆಯನ್ನು ಸರಿಪಡಿಸುತ್ತೀರೋ ಅಥವ ಜನರ ಮನ:ಪರಿವರ್ತನೆಗಾಗಿ ಕಾಯುತ್ತೀರೋ? ಪ್ರಾಮಾಣಿಕನೊಬ್ಬ ತನ್ನ ಸಕ್ರಮ ಕೆಲಸಕ್ಕಾಗಿ ಲಂಚ ಕೊಡಲೇಬೇಕಾದಂತಹ, ಇಲ್ಲದಿದ್ದರೆ ಸಾವುನೋವುನಷ್ಟಕ್ಕೆ ಈಡಾಗಬಹುದಾದಂತಹ ವಿಷಮ ಪರಿಸ್ಥಿತಿ ಬಂದಾಗ, ನೀನು ಲಂಚ ಕೊಟ್ಟಿದ್ದು ತಪ್ಪು ಮತ್ತು ಭ್ರಷ್ಟಾಚಾರ ನಿನ್ನಿಂದಲೇ ಇರುವುದು ಎನ್ನುವುದು ಅಮಾನವೀಯ ಮಾತ್ರವಲ್ಲ, ಅದು ನಾವು ನಮ್ಮ ಪ್ರಜಾಸತ್ತಾತ್ಮಕ ಜವಾಬ್ದಾರಿಗಳಿಂದ ನುಣುಚಿಕೊಂಡು ಬೋಧನೆಯಲ್ಲಿ ತೊಡಗಿದ್ದೇವೆ ಎನ್ನುವುದರ ಸೂಚನೆಯೂ ಹೌದು.

ಮೇಲೆ ಹೇಳಿದ್ದು ನನ್ನದೇ ಅನುಭವದ ಉದಾಹರಣೆ.  ಈ ವರ್ಷ ಮತ್ತು ಕಳೆದ ವರ್ಷ ಲಂಚ ಕೊಡದೆ ಡಿಎಲ್‌ಗಳನ್ನು ‍ಮಾಡಿಸಲು ನಾನು ಏನೆಲ್ಲಾ ಅವತಾರವೆತ್ತಿದೆ, ಎಲ್ಲೆಲ್ಲಿ ಜಗಳವಾಡಿದೆ, ನನ್ನ ಬಾಡಿಲ್ಯಾಂಗ್ವೇಜ್ ಅನ್ನು ಯಾವ ಸಂದರ್ಭದಲ್ಲಿ ಆಕ್ರಮಣಕಾರಿಯಾಗಿ ತೋರಿಸಿದೆ ಮತ್ತು ಯಾವ ಸಂದರ್ಭದಲ್ಲಿ ಸೌಜನ್ಯದಿಂದ ನಡೆದುಕೊಂಡೆ ಎನ್ನುವ ನನ್ನ ಅನುಭದಿಂದ ಹೇಳುತ್ತಿದ್ದೇನೆ. ಪ್ರಭಾವ ಮತ್ತು ವಶೀಲಿಬಾಜಿ ಇಲ್ಲದೆ, ಅಥವ ಲಂಚ ಕೊಡದೆ ಇಲ್ಲಿ ಸರ್ಕಾರಿ ಕೆಲಸಗಳು ಅಸಾಧ್ಯ ಎಂದಾಗಿದೆ. ಲಂಚ ಕೊಡಬಾರದೆನ್ನುವ ನನ್ನ ಆದರ್ಶ ಉಳಿಸಿಕೊಳ್ಳಲು ನನ್ನ ನಾಲ್ಕೈದು ದಿನಗಳ ದುಡಿಮೆಯ ತ್ಯಾಗಕ್ಕೆ, ಒಂದಷ್ಟು ನಿರ್ಲಕ್ಷ್ಯ ಮತ್ತು ಅವಮಾನಗಳಿಗೆ, ಅಪರಿಚಿತರಿಂದಾಗಬಹುದಾದ ನಗೆಪಾಟಲಿಗೆ ನಾನು ಸಿದ್ಧನಾಗಿದ್ದೆ. ಎಷ್ಟು ಜನಕ್ಕೆ ಇದೆಲ್ಲ ಸಾಧ್ಯ? ನನ್ನ ಒಂದೆರಡು ಗಂಟೆಯ ದುಡಿಮೆಯ ಹಣವನ್ನು ಏಜಂಟನೊಬ್ಬನಿಗೆ ಕೊಟ್ಟಿದ್ದರೆ ಈ ಎಲ್ಲಾ ಕೆಟ್ಟ ಅನುಭವಗಳಿಂದ ಬಚಾವಾಗಲು ಸಾಧ್ಯವಿತ್ತು. ಯಾಕಾಗಿ ಈ ಕಷ್ಟ? ಮೌಲ್ಯಗಳನ್ನು ನಂಬಿದ್ದಕ್ಕೆ. ನನ್ನಂತಹವರಿಗೆ ಅಥವ ಡಾ. ಬಾಲಸುಬ್ರಹ್ಮಣ್ಯಂರಂತಹವರಿಗೆ ಇರುವ ನಮ್ಮ ಪ್ರಾಮಾಣಿಕತೆ  ಮತ್ತು ಆದರ್ಶಗಳನ್ನು ಕಾಪಾಡಿಕೊಳ್ಳಬಹುದಾದ ಲಕ್ಷುರಿ ಕುಟುಂಬದ ಒಪ್ಪತ್ತಿನ ಊಟದ ಜವಾಬ್ದಾರಿ ಹೊತ್ತಿರುವ ಮತ್ತು ನಾನಾ ಕೆಲಸಗಳಿಗೆ ಸರ್ಕಾರಿ ಕಛೇರಿ ಮತ್ತು ಆಸ್ಪತ್ರೆಯನ್ನು ಸುತ್ತಬೇಕಾದ ಎಷ್ಟು ಜನರಿಗೆ ಇದೆ?

ಹಾಗಾಗಿಯೇ, ಸಮಾಜದ ಪ್ರತಿಷ್ಟಿತ ಮತ್ತು ಪ್ರಾಮಾಣಿಕ ಜನ, ಜನಸಾಮಾನ್ಯರಲ್ಲಿ ಪ್ರಾಮಾಣಿಕತೆ ಉದ್ದೀಪಿಸುವುದರ ಜೊತೆಗೆ ಅಥವ ಅದಕ್ಕಿಂತ ಮೊದಲು ಅಂತಹ ಪ್ರಾಮಾಣಿಕತೆಯನ್ನು ಪ್ರೋತ್ಸಾಹಿಸುವ ವಾತಾವರಣವನ್ನು, ವ್ಯವಸ್ಥೆಯನ್ನು ಸೃಷ್ಟಿಸಬೇಕು. ಅದು ರಕ್ತಕ್ರಾಂತಿಯಿಂದಲೇ ಆಗುವುದಕ್ಕೆ ಮೊದಲು ಎಚ್ಚತ್ತುಕೊಂಡು ಪ್ರಜಾಪ್ರಭುತ್ವವನ್ನು ಮತ್ತದರ ಅಂಗಸಂಸ್ಥೆಗಳನ್ನು ಬಲಪಡಿಸುವ ಮೂಲಕ ಮತ್ತು ಅಲ್ಲಿ ಭ್ರಷ್ಟರಿಗೆ ಆಸ್ಪದವಿಲ್ಲ ಎನ್ನುವ ರೀತಿಯಲ್ಲಿ ಕಟ್ಟಬೇಕು. ಚುನಾವಣಾ ಪ್ರಕ್ರಿಯೆಯಲ್ಲಿ ನೇರವಾಗಿ ಪಾಲ್ಗೊಂಡು ಅರ್ಹರು ಆಯ್ಕೆಯಾಗುವಂತೆ ಪ್ರಯತ್ನಿಸಬೇಕು. ನಮ್ಮದೇ ಸಂದರ್ಭದಲ್ಲಿ ಹೇಳುವುದಾದರೆ, ಬಾಲಸುಬ್ರಹ್ಮಣ್ಯಂ ಮತ್ತು ಅವರಂತೆ ಯೋಚಿಸುವ ಜನ ಮೊದಲು ಲೋಕಾಯುಕ್ತ ನೇಮಕಕ್ಕೆ ಹೋರಾಡಬೇಕು;  ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳು ಸ್ವಾಯತ್ತವಾಗುವಂತೆ, ಭ್ರಷ್ಟಾಚಾರ ಸಂಬಂಧಿ ಮೊಕದ್ದಮೆಗಳು ತ್ವರಿತ ವಿಲೇವಾರಿಯಾಗುವಂತೆ ಆಗ್ರಹಿಸಬೇಕು. ಭ್ರಷ್ಟ ರಾಜಕಾರಣಿಗಳನ್ನು, ಭ್ರಷ್ಟ ಸರ್ಕಾರಿ ಅಧಿಕಾರಿಗಳನ್ನು, ನೇರಾನೇರ ಹೆಸರಿಸಿ ಅವರನ್ನು ಖಂಡಿಸಬೇಕು. ಭ್ರಷ್ಟಾಚಾರಕ್ಕೆ ಆಸ್ಪದ ನೀಡುವ ಅವೈಚಾರಿಕ ಮತ್ತು ಅಪ್ರಬುದ್ಧ ಕಾನೂನುಗಳ ವಿರುದ್ಧ ಚರ್ಚಿಸಬೇಕು. ನಮ್ಮದೇ ಈ ಸರ್ಕಾರ ನಮ್ಮನ್ನು ಭ್ರಷ್ಟರನ್ನಾಗಿಸುವ ಎಲ್ಲಾ ಕ್ರಮಗಳನ್ನು ವಿರೋಧಿಸಬೇಕು.  ಅದು ಬಿಟ್ಟು ಜನ ಬದಲಾಗಬೇಕು, ಗಾಂಧಿ ಹೇಳಿದಂತೆ ಬದಲಾವಣೆ ನಮ್ಮಿಂದಲೇ ಆರಂಭವಾಗಬೇಕು ಎಂದರೆ… ಈ ವಾದ ಇಡೀ ದೇಶದ ಜನರೆಲ್ಲ ವಿದ್ಯಾವಂತರೂ, ಮಧ್ಯಮವರ್ಗಿಗಳೂ, ಜವಾಬ್ದಾರಿಯುತ ಪ್ರಜೆಗಳೂ, ನಿಮ್ಮ ಮಾತುಗಳನ್ನು ಕೇಳಬಲ್ಲವರೂ ಆದಾಗ ಅನ್ವಯಿಸಬಹುದೇನೊ. ಆದರೆ ಗಾಂಧಿ ಗೊತ್ತಿಲ್ಲದ, ಲಂಚ ಕೊಡದಿರುವುದೂ ಒಂದು ಜೀವನಮೌಲ್ಯ ಎಂದು ಪ್ರಾಮಾಣಿಕವಾಗಿ ಗೊತ್ತಿಲ್ಲದ ಕೋಟ್ಯಾಂತರ ಬಡ ದೇಶವಾಸಿಗಳು ಈ ದೇಶದಲ್ಲಿದ್ದಾರೆ. ಅವರಿಗೆ ಉಪದೇಶ ಬೇಕಿಲ್ಲ. ಬೇಕಿರುವುದು ಊಟ, ವಸತಿ, ಕುಟುಂಬ ನಿರ್ವಹಣೆ, ಮೇಲ್ಮುಖ ಚಲನೆಯ ಜೀವನ, ಮತ್ತು ಬದುಕಿನ ಬಗ್ಗೆ ಒಂದು ಆಶಾವಾದ. ಅದನ್ನು ಸಾಧ್ಯವಾಗಿಸದ ವ್ಯವಸ್ಥೆ ಮತ್ತು ಕಾನೂನಿನ ಕೈಗೆ ಸಿಗದ ಭ್ರಷ್ಟರನ್ನಿಟ್ಟುಕೊಂಡು ಮತ್ತು ಅವರೇ ಸಮಾಜದ ಗಣ್ಯರೂ, ಜನರ ಹಣೆಬರಹ ತಿದ್ದುವವರೂ ಆಗಿರುವಾಗ, ನಾವು ಜನಸಾಮಾನ್ಯರ ಪ್ರಾಮಾಣಿಕತೆ ಬಗ್ಗೆ ಮಾತನಾಡಲು–ಅದರಲ್ಲೂ ಮೇಲುಮಧ್ಯಮವರ್ಗದ ಮತ್ತು ಶ್ರೀಮಂತ ಜನ–ಆ ನೈತಿಕ ಹಕ್ಕು ಪಡೆದಿಲ್ಲ.

ಡಾ. ಬಾಲಸುಬ್ರಹ್ಮಣ್ಯಂರವರು ತಮ್ಮ ವೈಯಕ್ತಿಕ ಬದುಕನ್ನು ತ್ಯಾಗ ಮಾಡಿ ಕಳೆದ ಮೂರು ದಶಕಗಳಿಂದ ಜನಸೇವೆ ಮಾಡುತ್ತಾ ಬಂದಿದ್ದಾರೆ. ಈಗಲೂ ಆಶಾವಾದಿಯಾಗಿದ್ದಾರೆ. ಸಕ್ರಿಯರಾಗಿದ್ದಾರೆ. ಈಗಾಗಲೆ ಅವರಿಗೆ ಸಮಾಜದಲ್ಲಿ ಹೆಸರಿದೆ, ಗುರುತಿದೆ. ಆದರೆ, ಈಗ ಪರಿಸ್ಥಿತಿ ಹೇಗಾಗಿದೆ ಎಂದರೆ, ಅವರಂತೆ ಕೆಲಸ ಮಾಡಲು ಜನರ ಮಧ್ಯೆ ತೊಡಗಿಕೊಳ್ಳುವ ಯುವಕರಿಗೆ ಪೂರಕವಾದಂತಹ ವಾತಾವರಣವೇ ಇಲ್ಲ. ಅವರಂತೆ ಸಮಾಜ ಸೇವೆ ಮಾಡುವುದೂ ಒಂದು ಕಾಯಿಲೆ ಎನ್ನುವ ಹಂತಕ್ಕೆ ಇಂದಿನ ಸಮಾಜ ಬಂದು ನಿಂತಿದೆ. ಇಲ್ಲಿ ಜೀವನಮೌಲ್ಯಗಳೇ ನಾಶವಾಗುತ್ತಿವೆ. ಮತ್ತೊಬ್ಬ ಗಾಂಧಿ ಹೊರಬರಲಾಗದ, ಇನ್ನೊಬ್ಬ ಅಣ್ಣಾ ಹಜಾರೆ, ಇನ್ನೊಬ್ಬ ಬಾಲಸುಬ್ರಹ್ಮಣ್ಯಂ ನಾಲ್ಕು ಜನಕ್ಕೆ ತನ್ನ ಸೇವೆ ಮತ್ತು ಆದರ್ಶಕ್ಕಾಗಿ ಪ್ರಶಂಸನೀಯನಾಗಲಾರದ ವರ್ತಮಾನ ಈ ಸಮಾಜದ್ದು. ಬದಲಾಗಬೇಕಾದದ್ದು ಅದು. ಬದಲಾಯಿಸಬೇಕು ಎಂದುಕೊಳ್ಳುವವರು ಬದಲಾಯಿಸಬೇಕಾದದ್ದು ಬೇಕಾದಷ್ಟಿದೆ ಮತ್ತು ಈಗ ಮಾಡುತ್ತಿರುವುದಕ್ಕಿಂತ ಬೇರೆಯದೇ ಕ್ರಮಗಳಲ್ಲಿ ಮಾಡಬೇಕಿದೆ. ಆದರೆ ಬಾಲಸುಬ್ರಹ್ಮಣ್ಯಂರಂತಹವರು ಈಗೀಗ ಅವಾಸ್ತವಿಕ ನೆಲೆಗಟ್ಟಿನಲ್ಲಿಯೇ ಮಾತನಾಡುತ್ತಿದ್ದಾರೆ ಅಥವ ಮುಖ್ಯವಾದದ್ದನ್ನು ಮರೆಯುತ್ತಿದ್ದಾರೆ. ಪ್ರಶ್ನೆ ಇರುವುದು ಅವರ ಕಳಕಳಿಯ ಮೇಲಲ್ಲ. ಅವರು ಇದೇ ಪರಿಹಾರ ಎಂದು ಹೇಳುತ್ತಿರುವುದರ ಮೇಲೆ.

(ಚಿತ್ರಕೃಪೆ: ಪ್ರಜಾವಾಣಿ)

5 thoughts on “ಬಾಲಸುಬ್ರಹ್ಮಣ್ಯಂರವರೇ, ಲಂಚ ಕೊಡುವವನದೇ ತಪ್ಪು ಯಾಕೆ?

  1. ಪುಳಕ

    neevu shreemantike kanasu kaanuttiddeeraa, sukhvada prayaana bayasutteera, urgent kelas mugisalu bayasutteera- lancha kodutteeri emba niluvinalliye badukuv madhyamavargad maatirali, gandhi heluva paraspar avalambaney halliylliyu shramad lancha koduttaare. dinavidi bitti chaakari maduvavaru nammondige iddaare embudu yava patrikey yaava ankanadalli vivarisiddaare?

    Reply
  2. anand prasad

    ಜನಸಾಮಾನ್ಯರ ಶೋಷಣೆಗೆ ಆಸ್ಪದ ನೀಡುವ ಅಸಂಬದ್ಧ ಕಾನೂನುಗಳನ್ನು ಬದಲಿಸಬೇಕಾದ ಅಗತ್ಯ ಇದೆ. ಉದಾಹರಣೆಗೆ ವಾಹನ ಚಾಲನಾ ಪರವಾನಗಿಯ ಬಗ್ಗೆ ಹೇಳುವುದಾದರೆ ಆರ್.ಟಿ. ಓ. ಆಫೀಸಿಗೆ ಒಂದೇ ಭೇಟಿಯಲ್ಲಿ ಚಾಲನಾ ಪರವಾನಗಿ ನೀಡುವ ವ್ಯವಸ್ಥೆ ಆಗಬೇಕು. ವಾಹನ ಚಾಲನೆ ತರಬೇತಿ ಡ್ರೈವಿಂಗ್ ಸ್ಕೂಲಿನಲ್ಲಿ ಪಡೆದ ನಂತರ ಸಂಬಂಧಪಟ್ಟ ದಾಖಲೆಗಳನ್ನು ತೆಗೆದುಕೊಂಡು ಹೋದಾಗ ಡ್ರೈವಿಂಗ್ ಟೆಸ್ಟಿನಲ್ಲಿ ಪಾಸಾದರೆ ಆ ಕೂಡಲೇ ಪರವಾನಗಿ ಕೊಡುವ ವ್ಯವಸ್ಥೆ ಮಾಡಲು ಇಂದಿನ ತಂತ್ರಜ್ಞಾನದ ದಿನಗಳಲ್ಲಿ ಯಾವ ತೊಂದರೆಯೂ ಆಗಲಿಕ್ಕಿಲ್ಲ. ಎಲ್. ಎಲ್. ಎಂಬ ವ್ಯವಸ್ಥೆ ಅನಗತ್ಯ. ಎಲ್. ಎಲ್. ಪಡೆಯಲು ಕೇಳುವ ಪ್ರಶ್ನೆಗಳು ಕಾಟಾಚಾರದ್ದಾಗಿದ್ದು ಇದಕ್ಕಾಗಿ ಆಫೀಸಿಗೆ ಹೋಗಲು ಒಂದು ದಿನ ವ್ಯಯಿಸಬೇಕಾಗುವುದನ್ನು ತಪ್ಪಿಸಬಹುದು. ಡ್ರೈವಿಂಗ್ ಸ್ಕೂಲಿನಲ್ಲಿಯೋ ಅಥವಾ ಸ್ನೇಹಿತರ, ಬಂಧುಗಳ ಮೂಲಕವೋ ವಾಹನ ಚಾಲನೆ ಕಲಿಯಲು ಎಲ್. ಎಲ್. ಅಗತ್ಯವೇ ಇಲ್ಲ. ಕಾನೂನಿನಲ್ಲಿ ಸರಳೀಕರಣ ತರುವುದು, ಜನಪರ ಕಾನೂನುಗಳನ್ನು ತರಬೇಕಾಗಿರುವುದು ಶಾಸನಸಭೆಗಳು. ಇದಕ್ಕಾಗಿ ಯೋಗ್ಯ ಜನಪ್ರತಿನಿಧಿಗಳನ್ನು ಆರಿಸಿ ಕಳುಹಿಸುವ ವ್ಯವಸ್ಥೆ ಆಗಬೇಕು. ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು ಕೊಡುವ ಆಶ್ವಾಸನೆಗಳನ್ನು ಸಬ್ ರಿಜಿಸ್ಟ್ರಾರ್ ಆಫೀಸಿನಲ್ಲಿ ರಿಜಿಸ್ಟ್ರೇಶನ್ ಮಾಡಿಸಿ ಮತದಾರಿಗೆ ಕೊಡುವ ವ್ಯವಸ್ಥೆ ಆದರೆ ಉತ್ತಮ. ಕೊಟ್ಟ ಆಶ್ವಾಸನೆಯಂತೆ ಕಾಲಮಿತಿಯೊಳಗೆ ನಡೆದುಕೊಳ್ಳದಿದ್ದರೆ ರಾಜಕೀಯ ಪಕ್ಷದ ಮಾನ್ಯತೆಯನ್ನು ರದ್ದುಪಡಿಸುವ ವ್ಯವಸ್ಥೆ ಆಗಬೇಕಾಗಿದೆ. ಹೀಗೆ ಮಾಡಿದಲ್ಲಿ ಪೊಳ್ಳು ಆಶ್ವಾಸನೆ ನೀಡಿ ಚುನಾವಣೆಗಳಲ್ಲಿ ಗೆಲ್ಲುವ ರಾಜಕೀಯ ಪಕ್ಷಗಳ ಕುಟಿಲ ನೀತಿಯನ್ನು ನಿಯಂತ್ರಿಸಬಹುದು.
    ಸರಕಾರಿ ನೌಕರರಿಗೆ ಕೊಟ್ಟಿರುವ ಅತಿಯಾದ ನೌಕರಿಯ ಭದ್ರತೆಯನ್ನು ತೆಗೆದುಹಾಕಬೇಕಾದ ಅಗತ್ಯ ಇದೆ. ಭ್ರಷ್ಟರನ್ನು ಶೀಘ್ರವಾಗಿ ವಿಚಾರಣೆಗೆ ಒಳಪಡಿಸಿ ತಪ್ಪಿತಸ್ಥರೆಂದು ಕಂಡು ಬಂದಲ್ಲಿ ಕೆಲಸದಿಂದ ತೆಗೆದುಹಾಕುವ ವ್ಯವಸ್ಥೆ ರೂಪಿಸದೆ ಹೋದರೆ ಜನಪರ ವ್ಯವಸ್ಥೆಯನ್ನು ರೂಪಿಸಲು ಸಾಧ್ಯವಿಲ್ಲ.

    Reply
  3. prasad raxidi

    ಹಳ್ಳಿಗೆ ಬಂದು ರೈತನೋ ಕಾರ್ಮಿಕನೋ ಆಗಿ ಒಂದು ವರ್ಷ ಜೀವಿಸಿ ನಂತರವೂ (ಯಾರೇ ಆಗಲಿ) ಲಂಚ ಕೊಡುವುದು ಮತ್ತು ತೆಗೆದುಕೊಳ್ಳುವದು ಎರಡನ್ನೂ ಒಂದೇ ರೀತಿ ನೋಡಬೇಕೆಂದು ಹೇಳಿದರೆ ಮಾತ್ರ ನಾನು ಒಪ್ಪುತ್ತೇನೆ…

    Reply
  4. vasanth

    You are right. Dr. Balasubramaniam was part of the Anna movement. He was leading this movement in Mysore. His issues are similar to that of Anna and his teams. His NGO gets huge funds from government. How he utlizes that is a different matter. Without much work these people have ammassed huge amount of money.

    Reply

Leave a Reply

Your email address will not be published. Required fields are marked *